ಹರಕೆಗಳು ಹರಕೆ ಎಂಬ ಪದಕ್ಕೆ ಆಶೀವರ್ಚನ, ಮೀಸಲು, ಮುಡಿಪು, ತನ್ನ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಮಾಡಕೊಳ್ಳುವ ಸೇವೆಯ ನಿರ್ಧಾರ ಎಂಬ ನಾನಾರ್ಥಗಳಿವೆ. ಸಾಮಾನ್ಯವಾಗಿ ಈ ಎಲ್ಲ ಅರ್ಥಗಳಲ್ಲೂ ಹರಕೆ ಎಂಬ ಪದ ಬಳಕೆಯಾಗುತ್ತಿದೆ. ಆದರೆ ಒಂದೊಂದು ಅರ್ಥವೂ ಒಂದೊಂದು ಪ್ರತ್ಯೇಕ ಕ್ಷೇತ್ರ, ಸಂದರ್ಭ, ಸನ್ನಿವೇಶಗಳಿಗೆ ಅನುಗುಣವಾಗಿ ನಿರ್ಧರಿತವಾಗುತ್ತದೆ.

ಹರಕೆ ಎಂಬುದು ‘ತನ್ನ ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಮಾಡಿಕೊಳ್ಳುವ ಸೇವೆಯ ನಿರ್ಧಾರ ಇಲ್ಲವೆ ಸಂಕಲ್ಪ’ ಎಂಬ ಅರ್ಥ ಹೆಚ್ಚು ಬಳಕೆಯಲ್ಲಿದೆ. ಈ ಅರ್ಥ ದೈವಾರಾಧನೆಯ ಪರಂಪರೆಯಲ್ಲಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಹರಕೆ ಜನಪದ ಆಚರಣೆಯ ಒಂದು ಭಾಗವಾಗುತ್ತದೆ. ಆದರೆ ಆಚರಣೆಗೂ ಹರಕೆಗೂ ಸಣ್ಣ ವ್ಯತ್ಯಾಸವಿದೆ. ಆಚರಣೆ ಕಡ್ಡಾಯ ಹಾಗೂ ಸಾಮೂಹಿಕವಾದುದು ಆಗಿದ್ದರೆ; ಹರಕೆ ವೈಯಕ್ತಿಕ ಸ್ವರೂಪದ್ದು, ಹರಸಿ ಕೊಂಡವರಿಗೆ ಮಾತ್ರ ಸಂಬಂಧಿಸಿದುದು ಆಗಿದೆ. ಆದಾಗ್ಯೂ ಅನೇಕ ಸಲ ಹರಕೆಯಲ್ಲಿ ವ್ಯಕ್ತಿ ಸಂಬಂಧದ ಜೊತೆ ಜೊತೆಗೇ ಸಾಮೂಹಿಕ ಇಲ್ಲವೇ ಕೌಟುಂಬಿಕ ಹಿತವೂ ಮುಖ್ಯವಾಗಿರುತ್ತದೆ. ಇದೇ ಸಂಧರ್ಭದಲ್ಲಿ ಗಮನಿಸಬೇಕಾದ ಅಂಶವೆಂದರೆ ವ್ಯಕ್ತಿಯೊಬ್ಬ ತನ್ನ ಒಳ್ಳೆಯದಕ್ಕಾಗಿ, ಇಷ್ಟಾರ್ಥಸಿದ್ಧಿಗಾಗಿ ಅಥವಾ ಸಂಕಷ್ಟದಿಂದ ಪಾರಾಗಲಿಕ್ಕಾಗಿ ತಾನು ನಂಬಿದ ದೈವಕ್ಕೆ ತಾನೇ ಹರಕೆ ಮಾಡಿಕೊಳ್ಳಬಹುದು; ಇಲ್ಲವೇ ಆತನ ಪರವಾಗಿ ಆತನ ಸಂಬಂಧಿಗಳೊ ಇಲ್ಲವೇ ಹಿತೈಷಿಗಳೊ ಹರಕೆ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಹರಕೆ ಮಾಡಿಕೊಳ್ಳುವುದೂ ಹಾಗೂ ಮಾಡಿಕೊಂಡ ಹರಕೆಯನ್ನು ತೀರಿಸುವುದು ಅಥವಾ ಈಡೇರಿಸುವುದು ಮುಖ್ಯ. ‘ಹರಕೆ ಹನ್ನೆರಡು ವರ್ಷ’ ಎಂಬುದು ಗಾದೆ ಮಾತು. ಈ ಗಾದೆಯ ಪ್ರಕಾರ ಹರಕೆ ತೀರಿಸುವುದು ಕಡ್ಡಾಯ. ಇಲ್ಲದೇ ಹೋದಲ್ಲಿ ದೈವ ಏನಾದರೂ ಕಷ್ಟಕಾರ್ಪಣ್ಯಗಳನ್ನು ಕೊಟ್ಟು, ಹರಕೆಯನ್ನು ನೆನಪಿಸುತ್ತದೆ, ಹರಕೆಯನ್ನು ತೀರಿಸಲು ಒತ್ತಾಯಸುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ.

ಹರಕೆಗಳು ಬಹುತೇಕ ಆಚರಣೆಗಳ ರೂಪದಲ್ಲೇ ನಡೆಯುತ್ತವೆ. ಸಾಮಾನ್ಯವಾಗಿ ಕಂಡುಬರುವ ಹರಕೆಗಳೆಂದರೆ: ಕೊಂಡ ಹಾಯುವುದು, ಕೊಂಡಕ್ಕೆ ಹರಳು ಹಾಕುವುದು, ಧೂಪ ಹಾಕುವುದು, ಸಿಡಿಯಾಡುವುದು, ದೇವರಿಗೆ ಆಭರಣಗಳನ್ನು ಅರ್ಪಿಸುವುದು, ಗುಡಿಕಟ್ಟಿಸುವುದು, ತುಲಾಭಾರದ ಹರಕೆ, ಬಾಯಿಬೀಗ, ಮುಡಿ ಕೊಡುವುದು, ಬೆತ್ತಲೆ ಸೇವೆ, ಬೇವಿನುಡುಗೆ, ಹಾಲುಮೀಸಲು ಅರ್ಪಣೆ, ಬಲಿ ನೆಡೆವುದು ಮೊದಲಾದವು.

ಬಸವಣ್ಣನವರ ವಚನವಾದ ‘ಹಬ್ಬಕ್ಕೆ ತಂದ ಹರಕೆಯ ಕುರಿ ತಳಿರಿಗೆ ತಂದ ತೋರಣವ ಮೇಯಿತ್ತು’ ಎಂಬುದನ್ನು ಗಮನಿಸಿದಾಗ ಹರಕೆಯ ಇತಿಹಾಸ ಹಾಗೂ ಅದರ ಸ್ವರೂಪದ ಬಗೆಗೆ ತಿಳಿಯುತ್ತದೆ. ಜನ್ನನ ‘ಯಶೋಧರ ಚರಿತೆ’ ರಾಜಪುರದ ಜನ ತಮ್ಮ ರಾಜನಾದ ಮಾರಿದತ್ತನ ನೇತೃತ್ವದಲ್ಲಿ ಮಾರಿದೇವತೆ ಕೋಪಗೊಂಡಾಳು ಅವಳಿಗೆ ಜಾತ್ರೆ ನೆರವೇರಿಸಿ ಬಲಿ ನೀಡಬೇಕೆಂದು ಹವಣಿಸುವ ಪ್ರಸ್ತಾಪವಿದೆ. ಜನಪದ ಜೀವನ ಹಾಗೂ ಸಾಹಿತ್ಯದಲ್ಲೂ ಹರಕೆಯ ಕುರಿತು ಅನೇಕ ಪ್ರಸಂಗಗಳಿವೆ.

ಹಾಗಾಗಿ ಹರಕೆ ಕಟ್ಟಿ ಕೊಂಡವರು ತಮ್ಮ ಕಷ್ಟಗಳು ಬಯಲಾಗಿ, ಇಷ್ಟಗಳು ನೆರವೇರಿದಾಗ ತಾವು ಹರಸಿಕೊಂಡ ದೈವದ ಉತ್ಸವಗಳ ಸಂದರ್ಭದಲ್ಲಿ ಕೆಲವೊಮ್ಮೆ ತಮಗೆ ಶಕ್ತವಾದ ಸಂದರ್ಭದಲ್ಲಿಯೂ ಹರಕೆ ತೀರಿಸುತ್ತಾರೆ. ಹರಕೆಗಳಲ್ಲಿ ಪ್ರಮುಖವಾಗಿ ಮೂರು ವಿಧಗಳನ್ನು ಕಾಣಬಹುದು. ೧. ವೈಯಕ್ತಿಕ ಹರಕೆ, ೨. ಕೌಟುಂಬಿಕ ಹರಕೆ, ೩. ಊರ ಹರಕೆ ಇಲ್ಲವೆ ಸಾಮೂಹಿಕ ಹರಕೆಗಳು.

ವೈಯಕ್ತಿಕ ಹರಕೆ : ವ್ಯಕ್ತಿಯೊಬ್ಬರು ತಮಗೆ ಕಷ್ಟ ನಷ್ಟಗಳಾದಾಗ, ಇಲ್ಲವೆ ರೋಗ – ರುಜಿನಗಳಾದಾಗ ಅದರಿಂದ ಪಾರು ಮಾಡಿದರೆ ಇಂತಹ ಸೇವೆಯನ್ನು ಮಾಡುತ್ತೇನೆಂದು ತಮ್ಮ ಇಷ್ಟದೈವ, ಕುಲದೈವ ಅಥವಾ ಮನೆದೇವರಿಗೆ ಸಂಕಲ್ಪ ಮಾಡಿಕೊಳ್ಳುವುದಕ್ಕೆ ವೈಯಕ್ತಿಕ ಹರಕೆಯೆನ್ನಬಹುದು. ಇಂತಹ ಸಂದರ್ಭದಲ್ಲಿ ಮಾಡಿಕೊಳ್ಳುವ ಹರಕೆಗಳೆಂದರೆ ಸಾಮಾನ್ಯವಾಗಿ ಬಾಯಿ ಬೀಗ, ಕೊಂಡ ಹಾಯುವುದು, ಇಡುಗಾಯಿ ಒಡೆಯುವುದು, ಉರುಳುಸೇವೆ, ಸಿಡಿ ಆಡುವುದು, ಬೇವಿನುಡುಗೆ ಮುಂತಾದುವು. ಇವು ವೈಯಕ್ತಿ ಹರಕೆಗಳಾದ್ದರಿಂದ ವ್ಯಕ್ತಿ ಅಂದರೆ ಹರಿಸಿಕೊಂಡ ವ್ಯಕ್ತಿ ಯುಕ್ತ ಸಂದರ್ಭದಲ್ಲಿ ತಾನೇ ತೀರಿಸುತ್ತಾನೆ.

ಕೌಟುಂಬಿಕ ಹರಕೆಗಳು : ಕುಟುಂಬವೊಂದರ ಸಾಮೂಹಿಕ ಕಷ್ಟ – ನಷ್ಟಗಳ ಸಂದರ್ಭದಲ್ಲಿ ಕುಟುಂಬದ ಹಿರಿಯರು ಇಡೀ ಕುಟುಂಬದ ಪರವಾಗಿ ಮಾಡಿಕೊಳ್ಳುವ ಹರಕೆಯೇ ಕೌಟುಂಬಿಕ ಹರಕೆ. ಇಂತಹ ಹರಕೆಯನ್ನು ತೀರಿಸುವಲ್ಲಿ ಇಡೀ ಕುಟುಂಬದ ಪಾಲ್ಗೊಳ್ಳುವಿಕೆ ಸಾಮಾನ್ಯವಾಗಿ ಕಂಡುಬರುತ್ತದೆ.

ಸಾಮಾನ್ಯವಾಗಿ ಬಲಿ ಅರ್ಪಣೆ, ತುಲಾಭಾರ ಕೊಡುವುದು, ಕುಟುಂಬ ಸಮೇತ ಉತ್ಸವಕ್ಕೆ ಬರುವುದು, ಹಾಲು ಮೀಸಲು ಅರ್ಪಿಸುವುದು ಮೊದಲಾದುವು ಈ ಸ್ವರೂಪದ ಹರಕೆಗಳು.

ಊರ ಹರಕೆಗಳು : ಇಡೀ ಊರಿಗೆ ಸಮಸ್ಯೆ ಎದುರಾದ ಸಂದರ್ಭದಲ್ಲಿ ಊರ ಪ್ರಮುಖರು ಒಟ್ಟಾಗಿ ಸೇರಿ ಗ್ರಾಮ ರಕ್ಷಕ ದೇವತೆಗೆ ಸಲ್ಲಿಸುವ ಹರಕೆಗಳೇ ಊರ ಹರಕೆಗಳು. ಇಂತಹ ಹರಕೆಗಳನ್ನು ಸಲ್ಲಿಸುವಾಗ ಸಣ್ಣ ಪ್ರಮಾಣದ ಉತ್ಸವ ಇಲ್ಲವೆ ಹಬ್ಬಗಳು ನಡೆಯುತ್ತವೆ. ಇದರಲ್ಲಿ ಇಡೀ ಊರು ಒಟ್ಟಾಗಿ ಪಾಲ್ಗೊಳ್ಳುತ್ತದೆ. ಸಾಮಾನ್ಯವಾಗಿ ಆರತಿ ಮಾಡಿಸುವುದು, ಬಲಿ ನೀಡುವುದು ಮೊದಲಾದವು ಈ ಸ್ವರೂಪದ ಹರಕೆಗಳು.

ಒಟ್ಟಾರೆ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೈವಕ್ಕೆ ಸೇವೆ ಸಲ್ಲಿಸುವುದಾಗಿ ಮಾಡಿಕೊಂಡ ಸಂಕಲ್ಪವೇ ಹರಕೆ. ಇಂತಹ ಸಂಕಲ್ಪವನ್ನು ಮಾಡಿಕೊಂಡಾಗ ಸಂಕಲ್ಪಕ್ಕೆ ಪ್ರಮಾಣ ಇಲ್ಲವೇ ಕುರುಹು ಎಂಬಂತೆ ಮುಡಿಪು ಅಥವಾ ಮೀಸಲು ಕಟ್ಟುವುದೂ ಇದೆ. ಒಂದು ಶುಚಿಯಾದ ಬಿಳಿ ಬಟ್ಟೆಯನ್ನೂ ಮೀಸಲು ನೀರಿನಲ್ಲಿ ತೊಳೆದು ಅದಕ್ಕೆ ಅರಿಶಿನ ಮಾಡಿ ಅದರೊಳಕ್ಕೆ ಒಂದು ಹಣವನ್ನು ಕಟ್ಟಿ ಭಕ್ತಿಯಿಂದ ತಮ್ಮ ದೈವ ನೆಲೆಗೊಂಡ ದಿಕ್ಕಿಗೆ ಮುಖಮಾಡಿ ನಿಂತು ಕೈ ಮುಗಿದು ಆ ಮೀಸಲನ್ನು ನೆಲಕ್ಕೆ ತಾಗದಂತೆ ದೇವರ ಪಟಗಳ ಮುಂದೆ, ಇಲ್ಲವೆ ನೆಲವಿನ ಕಾಲಿಗೆ ಕಟ್ಟಿಡುತ್ತಾರೆ. ಈ ಪದ್ಧತಿಗೆ ಕೆಲವು ಕಡೆ ಹನ್ನೆಸಳು ಕಟ್ಟುವುದು ಎಂದೂ ಕರೆಯುವುದುಂಟು. ಅದನ್ನು ಹರಕೆ ತೀರಿಸುವ ದಿನ ದೇವರ ಗುಡಿಗೆ ಕೊಡುತ್ತಾರೆ. ಇಲ್ಲವೆ ಹುಂಡಿಗೆ ಅಥವಾ ಕೊಳಗಕ್ಕೆ ಹಾಕುತ್ತಾರೆ.

ಹರಕೆಯನ್ನು ಮಾಡಿಕೊಳ್ಳುವವರ ಉದ್ದೇಶಾನುಸಾರ ಹರಕೆಗಳನ್ನು ಎರಡು ವಿಧವಾಗಿ ನೋಡಬಹುದು. ಹರಸಿಕೊಳ್ಳುವವರು ಒಳಿತಿಗಾಗಿ ಹರಸಿಕೊಂಡರೆ ಒಳಿತಿನ ಹರಕೆಗಳೆಂದೂ ಯಾರಿಗಾದರೂ ಕೆಡುಕು ಮಾಡುವ ಉದ್ದೇಶದಿಂದಲ್ಲದೇ ಯಾರಿಂದಾದರೂ ತಮಗೆ ಅನ್ಯಾವಾಗಿದ್ದು ಅವರಿಗೆ ತಕ್ಕ ಪಾಠ ಕಲಿಸಲು ಬಯಸಿ ಹರಕೆ ಮಾಡಿಕೊಂಡರೆ ಅಂತಹ ಹರಕೆಗಳನ್ನು ಕೆಡುಕಿನ ಹರಕೆಗಳೆಂದೂ ಕರೆಯುಬಹುದು.

ಕೆ. ಟಿ.

 

ಹರಿಶ್ಚಂದ್ರನ್‌ ಹರಿಶ್ಚಂದ್ರನ ಕತೆ ಜನಜನಿತವಾದುದು. ಇದು ಮಹಾಭಾರತದಲ್ಲಿರುವ ಒಂದು ಉಪಕಥೆ. ಭಾರತದ ಎಲ್ಲ ಭಾಷೆಗಳಲ್ಲೂ ಈ ಕಥೆ ಪ್ರಚಾರದಲ್ಲಿದೆ. ಜನಪದ ಸಾಹಿತ್ಯದಲ್ಲೂ ಈ ಕಥೆ ಜನಪ್ರಿಯವಾಗಿದೆ. ಸುಳ್ಳನ್ನೇ ಆಡದೆ ಬದುಕಿದರೆ ದೇವಲೋಕ ಲಭ್ಯವಾಗುತ್ತದೆ ಎಂಬ ಗಟ್ಟಿಯಾದ ನಂಬಿಕೆಯ ಆಧಾರದಲ್ಲಿ ಈ ಕಥೆಯಿದೆ ಅಯೋಧ್ಯಾನಗರದಲ್ಲಿ ಹರಿಶ್ಚಂದ್ರನೆಂಬ ಅರಸನು ರಾಜ್ಯವನ್ನಾಳುತ್ತಿದ್ದ. ಆತನ ಹೆಂಡತಿ ಚಂದ್ರಮತಿ. ಅವರಿಗೆ ದೇವದಾಸನೆಂಬೊಬ್ಬ ಮಗ. ಹರಿಶ್ಚಂದ್ರನು ಒಂದೂ ಸುಳ್ಳನ್ನೂ ಆಡದೆ ಬಾಳಬೇಕೆಂಬ ವ್ರತವನ್ನು ತೊಟ್ಟವನು. ಇದನ್ನು ದೇವಲೋಕದವರು ಕಂಡು ತುಂಬ ಹರ್ಷಿತರಾಗಿದ್ದರು. ದೇವಲೋಕದ ಒಬ್ಬ ಋಷಿ ಹರಿಶ್ಚಂದ್ರನನ್ನು ಶೋಧಿಸುವ ಸಲುವಾಗಿ, ಆತನನ್ನು ಸುಳ್ಳನ್ನಾಡಿಸುವಂತೆ ಮಾಡಲು ಸಮಯ ಕಾಯುತ್ತಾನೆ. ಅದುವೇ ಲೋಕನೀತಿ ಎಂದು ಹೇಳಿಕೊಂಡು, ಸವಾಲನ್ನು ಹಾಕಿ ಭೂಲೋಕದಲ್ಲಿರುವ ಹರಿಶ್ಚಂದ್ರನಿಗೆ ಹಲವಾರು ಪರೀಕ್ಷೆಗಳನ್ನು ಕೊಡುತ್ತಾನೆ.

ರಾಜ್ಯವನ್ನು, ನಗರವನ್ನು, ಕೊನೆಗೆ ಮಡದಿಯನ್ನು ಹಾಗೂ ಮಗನನ್ನೂ ಕಳೆದುಕೊಂಡು ಸಾವನ್ನೇ ಎದುರುಗೊಳ್ಳುವ ಕ್ಷಣದಲ್ಲೂ ಸುಳ್ಳನ್ನಾಡದೆ ಸತ್ಯಧರ್ಮವನ್ನು ರಕ್ಷಿಸಿಕೊಳ್ಳುತ್ತಾನೆ, ಸವಾಲನ್ನೆಸೆದ ಋಷಿಮುನಿಗಳನ್ನು ಸೋಲಿಸುತ್ತಾನೆ. ಕೊನೆಗೆ ದೇವೆತೆಗಳು ಹೂಮಳೆಗರೆದು ಹರಿಶ್ಚಂದ್ರನನ್ನು ಹಾಡಿ ಹೊಗಳಿ ಹರಸುತ್ತಾರೆಂಬುದು ಹರಿಶ್ಚಂದ್ರ ಕಥೆಯ ಹೂರಣವಾಗಿದೆ. ಜನರಲ್ಲಿ ಸತ್ಯ – ಧರ್ಮ ನ್ಯಾಯ ನೀತಿಯನ್ನು ಎತ್ತಿಹಿಡಿಯುವ ಸಲುವಾಗಿ ಬಲ್ಲವರು ಇಂಥ ಹಲವಾರು ನೀತಿ ಕತೆಗಳನ್ನು ಹೇಳಿದ್ಧಾರೆ. ಅವುಗಳಲ್ಲಿ ಕೆಲವು ಉತ್ತಮ ಆದರ್ಶ ಕತೆಗಳನ್ನು ಜನರಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ನಾಟುವಂತೆ ಮಾಡಲು ನಾಟಕ ಪ್ರದರ್ಶನದ ಮೂಲಕ ರಂಗಕಲೆಯಾಗಿ ನಿರೂಪಸಿದ್ದಾರೆ.

ಇಂಥ ತತ್ತ್ವ ಸಂದೇಶಗಳನ್ನು ವಿದ್ವಾಂಸರು ಕತೆಗಳನ್ನಾಗಿಸಿ, ಕಲಾಮಾಧ್ಯಮಗಳ ಪ್ರದರ್ಶನಗಳಾಗಿ, ಜನರಿಗಾಗಿ ಶಾಸ್ತ್ರಿಯವಾಗಿ ರಚಿಸಲ್ಪಟ್ಟ ನಾಟಕಗಳಲ್ಲಿ ಹರಿಶ್ಚಂದ್ರನ ಕತೆಯೂ ಒಂದು. ಇಂಥ ಶಾಸ್ತ್ರೀಯ ರೂಪಗಳು, ನಾಟಕಗಳಾಗಿ ರಂಗದಲ್ಲಿ ಕಲಾತ್ಮಕವಾಗಿ ಜನಸಾಮಾನ್ಯರನ್ನು ತಲುಪಿತು.

೧) ಹರಿಶ್ಚಂದ್ರ – ಅಯೋಧ್ಯೆಯ ಅರಸ
೨) ಚಂದ್ರಮತಿ (ಚಂದ್ರವತಿ) – ಹರಿಶ್ಚಂದ್ರನ ಹೆಂಡತಿ
೩) ದೇವದಾಸ – ಇವರ ಮಗ
೪) ಸತ್ಯಕೀರ್ತಿ – ಹರಿಶ್ಚಂದ್ರನ ಮಂತ್ರಿ
೫) ಕಾಶಿರಾಜ – ಕಾಶಿನಗರದ ಅರಸ
೬) ವೀರವಾಹು (ವೀರಬಾಹು) – ಕಾಶಿನಗರದ ಒಬ್ಬ ದಲಿತ ಉಪಪಾತ್ರ

ವಿಶ್ವಾಮಿತ್ರ, ಇಂದ್ರ, ನಾರದ, ಕಾವಲುಗಾರ, ಮೊದಲಾದವರು ಇಲ್ಲಿ ಬರುವ ಪಾತ್ರಗಳು, ಸನ್ನಿವೇಶ – ಕಾಶಿನಗರ.

ಜನಪದ ಕಥನಗೀತೆಗಳಲ್ಲಿ ಈ ಕಥೆ ಮತ್ತು ಪಾತ್ರಗಳು ಅನೇಕ ವ್ಯತ್ಯಾಸಗಳೊಂದಿಗೆ ಮೂಡಿ ಬಂದಿವೆ. ತಮಿಳುನಾಡಿನ ಹಲವು ಭಾಗಗಳಲ್ಲಿ ಈ ಗೀತೆಗಳು ಪ್ರಚಾರದಲ್ಲಿವೆ.

ಕೆ. ಎ. ಜಿ. ಅನುವಾದ ಎಚ್‌. ಬಿ.

 

ಹವ್ಯಕ ಸಂಸ್ಕೃತಿ : ಕರ್ನಾಟಕದ ಪ್ರಮುಖ ಸಾಮಾಜಿಕ ಪಂಗಡಗಳಲ್ಲಿ ‘ಹವ್ಯಕ’ ಒಂದು. ಹವ್ಯಕರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರವಲ್ಲದೆ. ದಕ್ಷಿಣ ಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿಯೂ ಕೇರಳದ ಕಾಸರಗೋಡು ತಾಲ್ಲೂಕಿನಲ್ಲಿಯೂ ವಾಸವಾಗಿದ್ದಾರೆ. ವೃತ್ತಿಯನ್ನು ಅರಸಿ ವಿದೇಶಗಳಿಗೆ ಹೋದವರಲ್ಲಿ ಕೆಲವರು ಅಲ್ಲಿಯೇ ನೆಲಸಿದ್ದಾರೆ. ಹವ್ಯಕರ ಮೂಲದ ಬಗ್ಗೆ ಕೆಲವು ಐತಿಹ್ಯಗಳಿವೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಕದಂಬ ಮಯೂರವರ್ಮನ ಕಾಲದಲ್ಲಿ ಯಜ್ಞ ಯಾಗಗಳನ್ನು ನಡೆಸುವ ಸಲುವಾಗಿ ಈ ಬ್ರಾಹ್ಮಣರು ಉತ್ತರ ಭಾರತದ ಅಹಿಚ್ಛತ್ರದಿಂದ ಕರೆತರಲ್ಪಟ್ಟವರು. ಆದರೆ ಹವ್ಯಕರ ಕೆಲವು ಮಂತ್ರ ತಂತ್ರಗಳ ಗ್ರಂಥಗಳು ತಿಗಳಾರಿ ಲಿಪಿಯಲ್ಲಿರುವುದು, ಬುಕೆನನ್‌ ತನ್ನ ಪ್ರವಾಸ ಗ್ರಂಥದಲ್ಲಿ ‘ಉತ್ತರ ಕನ್ನಡವನ್ನಾಳುತ್ತಿದ್ದ ನಂದರಾಜ ತೆಲಂಗಾಣದಿಂದ ಬ್ರಾಹ್ಮಣರನ್ನು ಕರೆತಂದ’ ಎಂದು ಉಲ್ಲೇಖಸಿರುವುದು, ಕೇರಳದ ಯಮರಾಂದ್ರಿ, ಬ್ರಾಹ್ಮಣರಿಗೂ ಹವ್ಯಕರಿಗೂ ಸಾಂಸ್ಕೃತಿಕವಾಗಿ ಬಹಳಷ್ಟು ಸಾಮ್ಯಗಳಿರುವುದು ಈ ಎಲ್ಲ ಅಂಶಗಳೂ ದಕ್ಷಿಣದ ಮೂಲವನ್ನು ಸೂಚಿಸುತ್ತವೆ. ದಕ್ಷಿಣದ ಬ್ರಾಹ್ಮಣರೆಲ್ಲ ಮತ್ತೊಂದು ಮೂಲದಿಂದ (ಉತ್ತರ ಮೂಲ) ಬಂದಿರುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ‘ಹವ್ಯಕ’ ಎನ್ನುವ ಹೆಸರು ಈ ಬ್ರಾಹ್ಮಣರಿಗೆ ಬಂದದ್ದು ‘ಹೈವೆ’ಗೆ ಅಥವಾ ‘ಹೈಗೆ’ ನಾಡಿಗೆ ಅವರು ಬಂದ ಮೇಲೆಯೇ ಎಂದು ಭಾವಿಸಬಹುದಾಗಿದೆ. ಇವರು ವಿಶೇಷವಾಗಿ ಹವ್ಯ-ಕವ್ಯಗಳನ್ನು ಮಾಡಿ ಹವ್ಯಕರೆನ್ನಿಸಿಕೊಂಡರು ಎಂದು ಪುರಾಣದಲ್ಲಿ ಹೇಳಿರುವರಾದರೂ ಎಲ್ಲ ಬ್ರಾಹ್ಮಣ ವರ್ಗದಲ್ಲೂ ‘ಶಿವಳ್ಳಿ’ ಹಾಗೂ ‘ಕೋಟ’ ಹೆಸರುಗಳು ಆಯಾ ಸಮುದಾಯಕ್ಕೆ ಬಂದಿರುವುದು ಅವರು ವಾಸವಾದ ಸ್ಥಳದಿಂದಲೇ ಆಗಿದ್ದು, ಹೈಗರೂ ಹಾಗೆಯೇ ಎಂದು ಭಾವಿಸಬಹುದು. ಈ ‘ಹೈಗ’ ಶಬ್ದವೇ ಸಂಸ್ಕೃತೀಕರಣಗೊಂಡು ‘ಹವ್ಯಕ’ ಎಂದಾಗಿದೆ. ಹೊನ್ನಾವರಕ್ಕೆ ಹತ್ತಿರದಲ್ಲಿ ನಡುಗಡ್ಡೆಯ ರೂಪದಲ್ಲಿರುವ ಹೈಗುಂದದಲ್ಲಿ ಯಜ್ಞ ಕುಂಡಗಳಿದ್ದು, ಹಿಂದೆ ಯಜ್ಞ-ಯಾಗಗಳನ್ನು ಮಾಡಿರುವ ಕುರುಹನ್ನು ಈಗಲೂ ಕಾಣಬಹುದು. ಈ ಹೈಗುಂದದಿಂದ ಕ್ರಮೇಣ ಉತ್ತರ ಕನ್ನಡ ಜಿಲ್ಲೆಯ ಇತರ ಭಾಗಗಳಿಗೆ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆ ಮುಂತಾದ ಕಡೆಗಳಿಗೆ ಇವರು ಪಸರಿಸಿದ್ದಾರೆ. ಹೀಗೆ ಹರಡಿಕೊಳ್ಳುತ್ತಲೇ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿ ‘ಕೃಷಿ ವೈದಿಕ’ರಾಗಿ ರೂಪುಗೊಂಡಿರುತ್ತಾರೆ. ಹೀಗಾಗಿ ಇವರ ಸಂಸ್ಕೃತಿಯಲ್ಲಿ ವೈದಿಕ ಅಂಶಗಳ ಜೊತೆಗೆ ಅವೈದಿಕ ಅಂಶಗಳೂ ಸಾಕಷ್ಟು ಸೇರಿಕೊಂಡು ಅವರನ್ನು ವಿಶಿಷ್ಟ ಬ್ರಾಹ್ಮಣರನ್ನಾಗಿಸಿವೆ.

ಹವ್ಯಕರ ಧಾರ್ಮಿಕ ವಿಧಿ-ವಿಧಾನಗಳಿಗೆ ವೇದಶಾಸ್ತ್ರಗಳೇ ಪ್ರಮುಖ ಆಧಾರವಾದರೂ ಅವೈದಿಕವಾದ ಅನೇಕ ವಿಚಾರಗಳು, ಸಂಪ್ರದಾಯಗಳು ಅವರ ಆಚರಣೆಗಳಲ್ಲಿ ಸೇರಿಕೊಂಡಿವೆ. ಷೋಡಶ ಸಂಸ್ಕಾರಗಳು ಮೂಲದಲ್ಲಿವೆ. ಮಗು ಹುಟ್ಟಿದಾಗ ಹನ್ನೊಂದನೆಯ ದಿನ ನಾಮಕರಣ ಪುಣ್ಯಾವರ್ತನೆಗಳನ್ನು ಮಾಡುವುದು, ಸಾಮಾನ್ಯವಾಗಿ ಅಜ್ಜ-ಅಜ್ಜಿಯರ ಹೆಸರನ್ನು ಮೊಮ್ಮಗ, ಮೊಮ್ಮಗಳಿಗೆ ಇಡುವುದು ರೂಢಿ. ಗಂಡು ಮಗುವಿಗೆ ಚೌಲ, ಉಪನಯನಾದಿಗಳನ್ನೆಲ್ಲ ಶಾಸ್ತ್ರಬದ್ಧವಾಗಿ ಮಾಡಿಸುತ್ತಾರೆ. ಹೆಣ್ಣು ಮೈನೆರೆದಾಗ ಒಸಗೆಯ ಶಾಸ್ತ್ರವನ್ನೂ ಮಾಡಲಾಗುತ್ತದೆ. ಬಾಲ್ಯವಿವಾಹ ಹಿಂದೆ ಪ್ರಚಲಿತವಿದ್ದು, ಈಗ ಮೈನೆರೆದ ಮೇಲೆಯೇ ಮದುವೆ ನಡೆಯುತ್ತದೆ. ಮದುವೆಯನ್ನು ನಿಶ್ಚಯಿಸಲು ಮುಖ್ಯವಾಗಿ ಗಂಡು ಹೆಣ್ಣಿನ ಜಾತಕ ಕೂಡಿರಬೇಕು. ಅನಿವಾರ್ಯವಾದ ಪ್ರಸಂಗದಲ್ಲಿ ‘ಪ್ರಸಾದ’ ನೋಡಲಾಗುವುದು. ಸೋದರ ಮಾವನ ಮಗಳನ್ನು ಮದುವೆಯಾಗುವ ಪದ್ಧತಿ ಈ ಸಮಾಜದಲ್ಲಿದೆ. ಹವ್ಯಕರಲ್ಲಿ ಕಾಶ್ಯಪ, ವಾಸಿಷ್ಠ, ವಿಶ್ವಾಮಿತ್ರ, ಆಂಗೀರಸ, ಭಾರದ್ವಾಜ, ಗೌತಮ, ಜಮದಗ್ನಿ ಎಂಬ ಸಪ್ತಗೋತ್ರಗಳಿದ್ದು, ಸಗ್ರೋತಿ ವಿವಾಹ ನಿಷಿದ್ಧವಾಗಿದೆ. ಮೊದಲು ಹೆಣ್ಣಿಗೆ ತೆರೆಕೊಡುವ ಪದ್ಧತಿ ಇದ್ದು, ಈಗ ವರದಕ್ಷಿಣೆ ಕೊಡುವ ಪದ್ಧತಿ ಅಲ್ಲಲ್ಲಿ ಪ್ರಾರಂಭವಾಗಿದೆ. ಬಹುಪತಿತ್ವ ಅಥವಾ ಬಹುಪತ್ನಿತ್ವ ಅವರಲ್ಲಿ ರೂಢಿಯಲ್ಲಿಲ್ಲ. ಮಕ್ಕಳಾಗದೆ ಅಥವಾ ಹೆಂಡತಿ ಮರಣ ಹೊಂದಿದ ಸಂದರ್ಭಗಳೇನಾದರೂ ಇದ್ದಲ್ಲಿ ಪುರ್ನವಿವಾಹಕ್ಕೆ ಸಮ್ಮತಿ ದೊರೆಯುತ್ತಿತ್ತು. ಆದರೆ ಮಹಿಳೆಗೆ ಇಂತಹ ಅವಕಾಶಗಳಿರಲಿಲ್ಲ. ವಿವಾಹಪೂರ್ವ ಸಂಬಂಧಗಳು ಈ ಸಮಾಜದಲ್ಲಿ ನಿಷಿದ್ಧ.

ಶುಭಕಾರ್ಯಗಳನ್ನು ನಡೆಸುವ ಪೂರ್ವದಲ್ಲಿ ಅಂದರೆ ಅಕ್ಷತೆ ಕಲಸುವಾಗಲೇ ಸೀಮೆಯ ಮುಖ್ಯಸ್ಥನಿಗೆ, ಗುರುಮಠಕ್ಕೆ ಕಾಣಿಕೆಗಳನ್ನು ತೆಗೆದಿಡಲಾಗುತ್ತದೆ. ಮಂಗಲ ಕಾರ್ಯಗಳೆಲ್ಲ ಸೋದರಮಾವನಿಗೆ ಪ್ರಾಶಸ್ತ್ಯ, ಮದುವೆಗೆ ಗಂಡು-ಹೆಣ್ಣುಮಗಳನ್ನು ನೋಡುವುದರಿಂದ ಹಿಡಿದು, ಚಪ್ಪರ ಹಾಕಿಸುವುದು, ದಿಬ್ಬಣ ಹೊರಡಿಸುವುದು, ಮದುವೆ ಹೆಣ್ಣನ್ನು ಚಪ್ಪರಕ್ಕೆ ಕರೆತಂದು ಧಾರೆ ಎರೆಸುವುದು ಇತ್ಯಾದಿ ಮದುವೆ ಮುಗಿಯುವವರೆಗೂ ಅವನ ಕಾರ್ಯ ಹಿರಿದು. ಮೊದಲು ಎಂಟು ದಿನಗಳ ಮದುವೆ ನಡೆಯುತ್ತಿತ್ತು. ಕೊನೆಗೆ ಅದು ನಾಲ್ಕು ದಿನಗಳಿಗೆ ಇಳಿಯಿತೆನ್ನುತ್ತಾರೆ; ಕೆಲವೆಡೆ ಅದು ಒಂದು ದಿನಕ್ಕೂ ಇಳಿದಿದೆ. ಎಂಟು ದಿನಗಳ ಮದುವೆಯಲ್ಲಿ ಎಲ್ಲ ವಿಧಿಗಳನ್ನು ವಿವರಪೂರ್ಣವಾಗಿ ಮಾಡಿಸಲಾಗುತ್ತಿತ್ತು. ಅಕ್ಷತೆ ಕಲಸುವುದು, ನಾಂದಿ ಇಟ್ಟುಕೊಳ್ಳುವುದು, ಸಮಾವರ್ತನ, ದಿಬ್ಬಣ ಹೊರಡಿಸುವುದು, ಹೆಣ್ಣಿನ ಮನೆಯಲ್ಲಿ ದಿಬ್ಬಣ ಎದುರ್ಗೊಳ್ಳುವುದು, ಸಭಾಪೂಜೆ, ವರಪೂಜೆ, ಮಂತ್ರ ಬಿನ್ನಪ, ವಾಗ್ದಾನ, ಮಧುಪರ್ಕ, ವರೋಪಚಾರ, ಹೆಣ್ಣನ್ನು ಮಂಟಪಕ್ಕೆ ಕರೆತರುವುದು, ಮಾಲೆ ಹಾಕಿಸುವುದು, ಧಾರೆ ಎರೆಯುವುದು, ಮಾಂಗಲ್ಯಧಾರಣೆ, ಸಪ್ತಪದಿ, ಚಿನ್ನ ಇಡಿಸುವುದು, ಕನ್ಯಾದಾನ, ಲಾಜಹೋಮ, ಗಂಡನ ಮನೆಯಲ್ಲಿ ಹೊಸ್ತಿಲು ಪೂಜೆ, ಹೆಣ್ಣೊಪ್ಪಿಸುವುದು – ಇತ್ಯಾದಿ ಕಾರ್ಯಕ್ರಮಗಳೆಲ್ಲ ಶಾಸ್ತ್ರೋಕ್ತವಾಗೆಯೇ ನಡೆಯುತ್ತವೆ. ಹೆಂಗಸರೇ ಕೂಡಿ ಮಾಡಿಸುವ ಅರಿಶಿನ ಎಣ್ಣೆಶಾಸ್ತ್ರ, ಓಕುಳಿ ಆಟ, ನಾಗೋಲೆಶಾಸ್ತ್ರ, ಚಟ್ಟು, ಹೋಯಿಸುವುದು, ಹಿಟ್ಟಿನ ಮೀನು ಹಿದಿಸುವುದು, ಔದುಂಬರ ಪೂಜೆ ಇತ್ಯಾದಿಗಳೂ ನಡೆಯುತ್ತವೆ.

ಚಿಕ್ಕ ಮಗುವಿನ ಹೊರತಾಗಿ ಉಳಿದ ಹೆಣಗಳನ್ನು ಹವ್ಯಕರು ದಹನ ಮಾಡುತ್ತಾರೆ. ಹಿರಿಯ ಮತ್ತು ಕಿರಿಯಮಗ ಉತ್ತರಕ್ರಿಯೆಯಲ್ಲಿ ಪ್ರಧಾನಪಾತ್ರ ವಹಿಸುತ್ತಾನೆ. ಸತ್ತಾಗ ಬಂಧುಗಳಿಗೆಲ್ಲ ಸುದ್ದಿ ತಿಳಿಸಿ, ಹತ್ತು ದಿನಗಳ ಸೂತಕವನ್ನು ಆಚರಿಸುತ್ತಾರೆ. ೧೧ -೧೨ ನೆಯ ದಿನ ಅಪರಕರ್ಮಗಳನ್ನು ಬ್ರಾಹ್ಮಣರಿಂದ ಮಾಡಿಸಿ ೧೨ನೆಯ ದಿನ ಶ್ರವಣಾರಾಧನೆ ಜರುಗಿಸುತ್ತಾರೆ. ಈ ಸಂದರ್ಭದಲ್ಲಿ ದಾನ – ಧರ್ಮಗಳನ್ನು ಮಾಡಿ ತೃಪ್ತಿಪಡುತ್ತಾರೆ. ಎಳೆ ವಯಸ್ಸಿನಲ್ಲಿ ತೀರಿಕೊಂಡವರ ಮತ್ತು ಅಪಮೃತ್ಯುವಿಗೀಡಾದವರ ಹೊರತಾಗಿ ಉಳಿದವರ ಶ್ರಾದ್ಧವನ್ನು ಪ್ರತಿ ವರ್ಷ ಮಾಡುತ್ತಾರೆ. ಬಂಜೆಯನ್ನು ಅನಾದರದಿಂದ ಕಾಣುವ, ವಿಧವೆಯನ್ನು ಅಮಂಗಳಕಾರಿಯಾಗಿ ಪರಿಗಣಿಸುವ ವಾಡಿಕೆ ಈ ಸಮಾಜದಲ್ಲಿಯೂ ಇದೆ. ಎಷ್ಟೆ ಚಿಕ್ಕ ವಯಸ್ಸಿನವಳಾಗಿದ್ದರೂ ವಿಧವೆಯಾದರೆ ತಲೆಕೂದಲು ತೆಗೆಯಿಸಿ ವಿಕೃತಗೊಳಿಸುವ ಪದ್ಧತಿ ಇತ್ತು. ಆದರೆ ಇತ್ತೀಚೆಗೆ ಸುಧಾರಣೆಗಳಿಂದ ಬಾಲ್ಯವಿವಾಹ, ವಿಧವೆಯರ ಕೇಶಮುಂಡನ ಮುಂತಾದ ದುಷ್ಟ ಪದ್ಧತಿಗಳು ಕಡಿಮೆಯಾಗುತ್ತಿವೆ.

ಸೂರ್ಯ, ವಿನಾಯಕ, ದುರ್ಗೆ, ಶಿವ, ವಿಷ್ಣು, ಯಜ್ಞನಾರಾಯಣ, ಷಣ್ಮುಖ – ಹವ್ಯಕರ ಸಪ್ತದೇವತೆಗಳು, ಪಂಚಾಯತನಪೂಜೆ ಇವರಲ್ಲಿ ವಿಶಿಷ್ಟ. ಆನೇಕರಿಗೆ ತಿರುಪತಿಯ ವೆಂಕಟರಮಣನೇ ಕುಲದೇವತೆಯಾಗಿದ್ದಾನೆ. ಸ್ಥಳೀಯ ಶಿಷ್ಟ ದೇವರುಗಳ ಪೂಜೆಯನ್ನೂ ಅವರು ಮಾಡುತ್ತಾರೆ. ಜೊತೆಗೆ ತುಳಸಿ, ಆಶ್ವಸ್ಥ ಮುಂತಾದ ವೃಕ್ಷಗಳನ್ನೂ, ಗೋವು, ನಾಗಗಳನ್ನೂ ಭೂತ, ಮಾರಿ, ಚೌಟಿ ಜಟಗ ಮುಂತಾದ ಗ್ರಾಮದೇವತೆಗಳನ್ನೂ ಪೂಜಿಸುತ್ತಾರೆ. ಶಿರಸಿಯ ಮಾರಮ್ಮನಿಗೂ ಹವ್ಯಕರ ಪೂಜೆ ಕಾಣಿಕೆಗಳು ಸಲ್ಲುತ್ತವೆ.

ಹವ್ಯಕರು ಕೃಷಿಯನ್ನು ವೃತ್ತಿಯಾಗಿ ಹೊಂದಿರುವುದರಿಂದ ಅವರ ಹಬ್ಬಗಳಲ್ಲಿ ಅನೇಕವು ಕೃಷಿಗೆ ಸಂಬಂಧಿಸಿದವೇ ಆಗಿವೆ. ಕೊಡೆ ಅಮಾಸೆ, ಬಸವನ ಅಮಾಸೆ, ಎಳ್ಳಮಾಸೆ, ದೀಪಾವಳಿ, ಯುಗಾದಿ , ಚೌತಿ, ನಾಗರಪಂಚಮಿ, ಎಳೆ, ಅಷ್ಟಮಿ, ತುಳಸಿ ದ್ವಾದಶಿ, ಅನಂತನ ಚರುರ್ದಶಿ, ಶ್ರಾವಣ ಸೋಮವಾರ, ಮಕರ ಸಂಕ್ರಾತಿ, ನವರಾತ್ರಿ, ಶಿವರಾತ್ರಿ, ಬೂರೆ ಹಬ್ಬ ಜಟಿಗನ ಹಬ್ಬ , ಹುಲಿದೇವರ ಹಬ್ಬ, ಕಣದ ಹಬ್ಬ, ಗೆಡೆಹಬ್ಬ ಮುಂತಾದವನ್ನು ಇಲ್ಲಿ ಮುಖ್ಯವಾಗಿ ಹೆಸರಿಸಬಹುದು. ದೀಪಾವಳಿ ಇವರಿಗೆ ವಿಶೇಷವಾದ ಹಬ್ಬ, ಅದನು ದೊಡ್ಡಬ್ಬವೆಂದೇ ಕರೆಯುತ್ತಾರೆ. ಯುಗಾದಿಗೆ ಹೊಸವರ್ಷ ಪ್ರಾರಂಭವಾಗುವುದರಿಂದ ಅದನ್ನು ‘ವರ್ಷ ತೊಡಕಿನ ಹಬ್ಬ’ ಎಂದು ಕೆರೆಯುತ್ತಾರೆ. ನವಫಲಾಸ್ವಾದ, ನವ್ಯ ವಸ್ತ್ರಧಾರಣಗಳು ಈ ಹಬ್ಬದ ವೈಶಿಷ್ಟ, ದೀಪಾವಳಿಯಲ್ಲಿ ದನಕರುಗಳನ್ನು ಶೃಂಗರಿಸಿ, ಗೋಪೂಜೆ, ಗಳಿಮೆಟ್ಲುಗಳನ್ನು ಪೂಜಿಸಿ, ‘ಕಡುಬತ್ತಿ’ ಹಚ್ಚಿಕೊಂಡು ಹಾನ ಬಟ್ಟಲೊಂದಿಗೆ ಗೋವುಗಳಿಗೆ ಆರತಿ ಎತ್ತುತ್ತಾರೆ. ಅನಂತರ ಅವನ್ನು ‘ಬೆಚ್ಚೋಡಿಸುತ್ತಾರೆ’. ಅಂದು ಸಂಜೆ ಊರಿನಲ್ಲಿ ಚೆರಿ ತುಂಬಿದ ಕೋವಿ ಹಾರಿಸಿವುದು, ಗುರಿಕಾಯಿ ಒಡೆಯುವುದು ಮುಂತಾದ ವಿನೋದಾತ್ಮಕ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮಗಳಿರುತ್ತವೆ. ಅಂದು ರಾತ್ರಿ ಎರಡು ದಿನಗಳ ಹಿಂದೆ (೪೫ ತಾಸು) ಭೂಮಿಗೆ ಕರೆತಂದ ಬಲೀಂದ್ರನನ್ನು ಹಿಂತಿರುಗಿ ಕಳಿಸುತ್ತಾರೆ. ಅದಕ್ಕೆ ‘ಹಬ್ಬ ಕಳಿಸುವುದು’ ಎನ್ನುತ್ತಾರೆ. ಬಲೀಂದ್ರ ಕೃಷಿ ಸಂಪತ್ತನ್ನು ಆಯುರಾರೋಗ್ಯವನ್ನು ಹೆಚ್ಚಿಸುತ್ತಾನೆ ಎಂಬ ನಂಬಿಕೆ ಹವ್ಯಕರದು.

ಉಡುಗೆ – ತೊಡಿಗೆಗಳಲ್ಲಿ, ತಿಂಡಿ – ತೀರ್ಥಗಳಲ್ಲಿ , ಅಚಾರ – ವಿಚಾರಗಳಲ್ಲಿ ಹವ್ಯಕರು ತಮ್ಮದೇ ಆದ ವೈಶಿಷ್ಟ್ಯವುಳ್ಳವರು. ಸಂಪ್ರದಾಯಸ್ಥ ಹವ್ಯಕ, ತಲೆಯಲ್ಲಿ ಜುಟ್ಟು ಬಿಟ್ಟು, ಹಣೆಯ ಮೇಲೆ ಅರ್ಧಚಂದ್ರಾಕೃತಿಯ ಅಥವಾ ಆಡ್ದಗೆರೆಯ ಮಧ್ಯೆ ಒಂದು ಚುಕ್ಕೆ ಆಕಾರದ ಗಂಧಾಕ್ಷತೆಯನ್ನು ಹಚ್ಚಿಕೊಂಡಿರುತ್ತಾನೆ. ಕಚ್ಚೆ, ಪಾಣಿಪಂಚೆ, ಹೆಗಲ ಮೆಲೊಂದು ವಸ್ತ್ರ, ತಲೆಯ ಮೇಲೊಂದು ಚಿಕ್ಕಮುಂಡಾಸ – ಇವು ಅವರು ತೋಟ – ಗದ್ದೆಗಳಲ್ಲಿ ಕೆಲಸ ಮಾಡುವ ಸಂದರ್ಭದ ಉಡುಪು ತಿರುಗಾಟದ ಸಮಯದಲ್ಲಿ ಕಿಸೆ ಅಂಗಿಧರಿಸಿ, ಕವಳದ ಸಂಚಿ, ಹಸುಬೆ ಚೀಲಗಳನ್ನು ಜೊತೆಯಾಗಿರಿಸಿಕೊಂಡು ತಲೆಗೊಂದು ದೊಡ್ಡ ಮುಂಡಾಸು ಸುತ್ತಿರುತ್ತಾರೆ. ಮೊದಲು ಲಂಗೋಟಿ ಅಥವಾ ಪಾಣಿಪಂಚೆ ಧರಿಸುತ್ತಿದ್ದ ಹವ್ಯಕ ಹುಡಗರೀಗ ಉಳಿದ ಸಮುದಾಯದ ಮಕ್ಕಳಂತೆ ಅಂಗಿ – ಚಡ್ಡಿ ಧರಿಸುತ್ತಾರೆ. ಸೇಲಂಪಂಚೆ, ಪಟ್ಟೆಕಂಭಿಧೋತ್ರ, ಒಂಭತ್ತು ಮೊಳದ ಪಂಚೆ, ಕಂಬಾಯತನ, ಧಾವಳಿ, ಪೈರನ್ನು , ಕಂಬಳಿಜಾಕೀಟು, ಗಂಜಿಪರಾಕು ಮುಂತಾದ ಹೆಸರುಗಳೂ ಗಂಡಸರ ಉಡುಪುಗಳಾಗಿದ್ದು, ಆ ಹೆಸರುಗಳೇ ಅವುಗಳ ಸ್ವರೂಪ ರಚನೆಗಳನ್ನು ತಿಳಿಸುತ್ತವೆ. ಹಳೆಯ ತಲೆಮಾರಿನ ಹೆಂಗಸರು ಒಂದು ವಿಶಿಷ್ಟ ರೀತಿಯಲ್ಲಿ ಹದಿನೆಂಟು ಮೊಳದ ಸೀರೆಯನ್ನು ಸುತ್ತುಡುತ್ತಾರೆ. ಮೊದಲು ಹೊದೆಯಲು ಬರುವಂತೆ ಸೆರಗಿನ ಭಾಗಗಳನ್ನು ಬಿಟ್ಟು ಉಳಿದ ಭಾಗವನ್ನು ಬಲಗಡೆ ಹಿಂಬದಿಯಿಂದ – ಎಡಗಡೆಗೆ ತಂದು ನೆರಿ ಹಿಡಿಯುತ್ತಾರೆ. ನೆರಿ ಹಿಡಿಯುವಾಗ ಸೀರೆಯ ಮತ್ತೊಂದು ತುದಿಯಲ್ಲೂ ಸಾಕಷ್ಟು ಉದ್ದದ ಭಾಗವನ್ನು ಬಿಟ್ಟಿರುತ್ತಾರೆ. ಅನಂತರ ಉಳಿದ ಭಾಗವನ್ನು ಮತ್ತೆ ಬಲಗಡೆ ಹಿಂಬದಿಯಿಂದ ಎಡಗಡೆಗೆ ತಂದು ನೆರಿಗಳಿಗೆ ಮತ್ತು ಸೊಂಟಕ್ಕೆ ಒಂದು ಕಟ್ಟಿನಂತೆ ಬಿಗಿದು ಬಲಸೊಂಟಕಿರುವ ಸೀರೆಯ ಬಿಗಿಯೊಳಗೆ ಸಿಕ್ಕಿಸುತ್ತಾರೆ. ಉಟ್ಟಿರುವ ಸೀರೆಯ ಉದ್ದ ಮೊಳಕಾಲವರೆಗೆ ಅಥವಾ ಮೊಳಕಾಲಿಗಿಂದ ಸ್ವಲ್ಪ ಕೆಳಗೆ ಬಂದಿರುತದೆ ಅಷ್ಟೆ. ಹೀಗೆ ಉಡುವ ಪದ್ಧತಿಯನ್ನು ‘ಸುತ್ತುಡುವುದು’ ಎನ್ನುತ್ತಾರೆ. ಸೆರಗನ್ನು ‘ಬಂದಿ’ ಅಥವಾ ‘ಸರಿಗೆ’ ಗೆ (ಕುತ್ತಿಗೆ ಆಭರಣ) ವಿಶಿಷ್ಟವಾದ ರೀತಿಯಲ್ಲಿ ಸಿಕ್ಕಿಸಿ ತುದಿಯ ಭಾಗಗಳನ್ನು ಎಡಗಡೆ – ಬಲಗಡೆ ಹರಡಿ ಸೊಂಟಕೆ ಸಿಕ್ಕಿಸುತ್ತಿದ್ದಂತೆ ತಿಳಿದುಬರುತ್ತದೆ. ಮೇಲಿನ ನೆರಿಯ ತುದಿಭಾಗ ಹೊರಗೆ ಕಾಣುತ್ತಿರುತ್ತದೆ. ಆದರೆ ಇತ್ತೀಚಿನವರು ಇತರ ಹಿಂದೂ ಸ್ತ್ರೀಯರಂತೆ ಸೀರೆ ಉಟ್ಟು, ಕಸೆಯ ಅಥವಾ ಗುಂಡಿಯ ಕುಪ್ಪಸ ತೊಡುತ್ತಾರೆ.

ಹವ್ಯಕ ಹೆಂಗಸರು ತಲೆಕೂದಲನು ಎಣ್ಣೆ ಹಾಕಿ ಚೆನ್ನಾಗಿ ಬಾಚಿ, ಜಡೆ ಹೆಣೆದು, ಅದನ್ನೇ ಹಿಂದೆ ಗಂಟುಕಟ್ಟಿ ಹೂ ಮುಡಿಯುತ್ತಾರೆ. ಗಂಟು ಮುಡಿಯಲ್ಲಿ ಚಕ್ರದುರುಬು, ಅಂಬಡೆಗಂಟು, ಯಿಡಿಕೆಗಂಟು, ಜೋಡುಶಮೆಗಂಟು, ಸಾದಾಮುಡಿಶೆಕ್ಕು ಮುಂತಾದ ಬಗೆಗಳಿವೆ. ಹುಡುಗಿಯರು ಸಾಮಾನ್ಯವಾಗಿ ಒಂದು ಅಥವಾ ಎರಡು ಜಡೆ ಹಾಕಿಕೊಳ್ಳುತ್ತಾರೆ. ಕೈಮೇಲೆ, ಹಣೆಯ ಮೇಲೆ ಹಚ್ಚೆ ಬೊಟ್ಟು ಇರುತ್ತಿತ್ತು. ಸಂಪ್ರದಾಯಸ್ಥ ಹೆಂಗಸರಲ್ಲಿ ಕೆಲವರು ಈಗಲೂ ಅಡ್ದ ಕುಂಕುಮವನ್ನು ಹಚ್ಚಿಕೊಳ್ಳುವುದುಂಟು. ಇವುಗಳ ಹಿಂದೆ ಸಂಪ್ರದಾಯನಿಷ್ಠೆಯೊಂದಿಗೆ ಆರೋಗ್ಯ ದೃಷ್ಟಿಯೂ ಮಿಳಿತವಾಗಿರುವುದು ಗಮನಾರ್ಹ. ಚಿಕ್ಕ ಮಕ್ಕಳ ಉಡುಪಿಗೆ ಸಂಬಂಧಿಸಿದಂತೆ ಕುಂಚಗೆ, ಮಂಗನಟೊಪ್ಪಿ , ಕಸೆಅಂಗಿ, ಗೊಬ್ಬೆ, ಇಡೀತೋಳಂಗಿ, ಗಿಡ್ಡತೋಳಂಗಿ, ಕಡಗೋಲಂಗಿ, ದಟ್ಟಿ ಮುಂತಾದವನ್ನು ಹೆಸರಿಸಬಹುದು. ಬಳಕೆ ಕಡಿಮೆಯಾಗುತ್ತಿದ್ದಂತೆ ಈ ಹೆಸರುಗಳೂ ಮಾಯವಾಗತೊಡಗಿದೆ. ಹವ್ಯಕ ಗಂಡಸರು ಕಿವಿಗೆ ದೊಡ್ಡ ಹರಳಿನ ಒಂಟಿಯನು ಧರಿಸುತ್ತಿದ್ದರು. ಎಡಗೈಯಲ್ಲಿ ಬೆಳ್ಳಿಯ ಕಡಗ, ಕೈಬೆರಳುಗಳಲ್ಲಿ ಉಂಗುರಗಳು ಶೋಭೀಸುತ್ತಿದ್ದವು. ಹವ್ಯಕ ಹೆಂಗಸರ ಆಭರಣಗಳು ವಿಶಿಷ್ಟವೂ ವೈವಿಧ್ಯಪೂರ್ಣವೂ ಆಗಿದ್ದವು.

ಹವ್ಯಕರು ಸಸ್ಯಹಾರಿಗಳು. ಅಕ್ಕಿಯೇ ಮುಖ್ಯ ಆಹಾರ. ಊಟದಲಿ ಅನ್ನ ಪ್ರಮುಖವಾದ ವಸ್ತು. ಅಕ್ಕಿಯಿಂದ ಸಿಹಿ, ಸಪ್ಪೆಮತ್ತು ಖಾರದ ತಿಂಡಿಗಳನ್ನು ಮಾಡಿ ಸೇವಿಸುತ್ತಾರೆ. ಅವರ ಆಡುಗೆಯ ವೈವಿಧ್ಯತೆ ಬೆರಗುಗೊಳಿಸುತ್ತದೆ. ಲಡ್ಡಿಗೆ, ಚಿಗುಳಿ, ತಂಬಿಟ್ಟು, ತೊಡೆದೇವ್ರು, ಸುಕ್ಕಿನುಂಡೆ, ಅತ್ರಸ, ಸೊಳೆ ಉಂಡ್ಲೆಕಾಳು, ಜಾನಸಕ್ರೆ, ಸಂಜೀವ್ನಿ, ಕರಜೀಕಾಯಿ, ಬ್ಯಾಳೆಬುಡ್ಲ, ಮೋದಕ, ಪಂಚಕಜ್ಜಾಯ, ಶಾವ್ಗೆ, ಗೆಣಸಲೆ, ಬೂದಗಡ್ಬು, ಪಾಯ್ಸ, ಚಕ್ಲಿಪಾಯ್ಸ, ಅಪ್ಪಹಾಲು, ಬುಂದ್ಯ, ಜೇನಕೋಲು, ಸೂಳಗಡ್ಬು, ಮುದ್ದೆ, ಒಬ್ಬಟ್ಟು, ಹಾಲಬಾಯಿ, ಜಾನರಿ, ಪೀಸರಿ, ಬಾಳೆಕಿಳ್ಗೆಹೋಳ್ಗೆ, ಹಲಸ್ನಹಣ್ಣಿನ ಕಡ್ಬು ಮುಂತಾಗಿ ಸ್ಥಳೀಯವಾಗಿ ತಯಾರಿಸುವ ಬೆಲ್ಲಬಳಸಿ ಅವರು ತಯಾರು ಮಾಡುವ ಸಿಹಿ ಇಂಡಿಗಳ ರುಚಿಯನ್ನು ಸವಿದೇನೋಡಬೇಕು. ಅದರಂತೆ ಆಂಬಡೆ, ಪರ್ತೊಡೆ, ತೆಳ್ಳೇವು, ಜಗ್ಗುರಿ, ಸಂಡಿಗೆ, ಬುರ್ ಬುರಿ, ತಾಳಿಪಿಟ್ಟು, ಕೋಡ್ಬಳೆ, ಬಾಳಕ, ನೀರೊಡೆ, ಚಕ್ಲಿ, ಶಾರದ, ಆಡ್ಗಡ್ಯ, ಕಾಯ್ ಮುಳ್ಕ, ಸೆಕೆಮುದ್ದೆ, ಚಪ್ಪೆಹೋಳ್ಗೆ ಮುಂತಾದವು ಅವರು ವಿಶೇಷವಾಗಿ ಮಾಡುವ ಖಾರದ ತಿಂಡಿಗಳು. ತಮ್ಮ ಪರಿಸರದಲ್ಲಿ ದೊರೆಯುವ ಸೊಪ್ಪು – ಸದೆಗಳನ್ನು , ತರಕಾರಿ – ಹಣ್ಣುಗಳನ್ನೂ ಬಳಸಿ ಅವರು ಮತ್ತು ಋತುಮಾನಕ್ಕುನುಸರಿಸಿ ಮಾಡುವ ಆಡುಗೆ, ರುಚಿಯಾಗಿರುವುದಲ್ಲದೆ ವಿಶೇಷ ಔಷಧೀಯ ಗುಣಗಳಿಂದ ಕೂಡಿರುತ್ತದೆ. ಹೀಗೆ ಹವ್ಯಕರು ತಮ್ಮ ನಿತ್ಯದ ಆಹಾರದಲ್ಲಿಯೇ ರೋಗಪ್ರತಿಬಂಧಕ ಹಾಗೂ ರೋಗ ನಿವಾರಕ ಅಂಶಗಳನ್ನು ಮೈಗೂಡಿಸಿಕೊಂಡಿರುವುದು ಗಮನಾರ್ಹ. ಹಲಸಿನಕಾಯಿ, ಬಾಳೇಕಾಯಿ ಮತ್ತು ಮಗೆಕಾಯಿಗಳಿಂದ ವಿವಿಧ ರೀತಿಯ ಆಡುಗೆಗಳನ್ನು ಅವರು ಮಾಡಿ ಉಣ್ಣುತ್ತಾರೆ. ಹಲಸಿನ ಕಾಯಿಯ ಮುಳ್ಕ, ದಡ್ಕ, ಸೀಚಕ್ಕೆ, ತಾಳ್ಯಗಳು ಬಹುಜನಪ್ರಿಯ. ಮಗೇಕಾಯಿ ತೆಳ್ಳವ್ವು ಕೂಡ ಬಹಳ ಪ್ರಸಿದ್ಧ. ಒಂದು ಕಾಲದಲ್ಲಿ ಹವ್ಯಕರ ನಿತ್ಯದ ಬೆಳಗಿನ ಉಪಾಹಾರ. ಮಗೇಕಾಯಿ ತೆಳ್ಳೇವ್ವು ಆಗಿತ್ತು. ಅನ್ನದೊಂದಿಗೆ ಉಣ್ಣುವ ಪದಾರ್ಥಗಳಲ್ಲಿ ಮ್ಲಾಯಾರ, ಗೊಜ್ಜು, ಸಾಸ್ಮೆ, ತಂಬಳಿ, ಬಜ್ಜಿ, ಕಲ್ಲಜ್ಜಿ, ತಾಳ್ಯ , ಕರಕಲಿ, ಹಿಂಡಿಚೆಟ್ನಿ, ಕೊಚ್ಚೂಳು, ಹಸಿಗೇರಿ, ಹುಳಿಲು, ದುಪ್ಪಿ, ಅಪ್ಪೆಹುಳಿ, ಅಮಟೆ, ಸುಮೇರಿ, ಮರಡಿಗೊಜ್ಜು, ಪಳಿದ್ಯ, ಮಜ್ಜಿಗೆಕಡಿ, ಕಟ್ನೆ, ಬೂತಗೊಜ್ಜು ಮುಂತಾದವನ್ನು ಇಲ್ಲಿ ಹೆಸರಿಸಬಹುದು. ಹವ್ಯಕರ ಆಡುಗೆಯಲ್ಲಿ ಸಿಹಿ ಪ್ರಮಾಣ ಹೆಚ್ಚು. ಹಾಲು, ಮೊಸರು, ಮಜ್ಜಿಗೆಗಳನ್ನು ಸಾಕಷ್ಟು ಬಳಸುತ್ತಾರೆ. ಬಾಯಾರಿ ಬಂದವರಿಗೆ ಮಜ್ಜಿಗೆ, ಬೆಲ್ಲ, ಮಗೆಕಾಯಿ ಪಾನಕ, ಶುಂಠಿ ಮಜ್ಜಿಗೆ ,ಹೆಸರ್ಹಣಿಗಳಲ್ಲಿ ಯಾವುದನ್ನಾದರೂ ಕೊಡುತ್ತಾರೆ. ಚಹಾ, ಕಾಫಿಗಳ ಸೇವನೆ ಇತ್ತೀಚಿನದು. ಅದ್ದಕ್ಕಿಂತಲೂ ಮೊದಲು ಬಿಸ್ನೀರು, ಹಾಲುನೀರು, ಜೀರ್ಗೆ ಬಿಸ್ನೀರು, ಕಷಾಯ ಕುಡಿಯುವ ಪದ್ಧತಿ ಇತ್ತು. ಬೆಳಿಗ್ಗೆ ತಿಂಡಿ ತಿನ್ನುವುದೂ ಇತ್ತೀಚೆಗೆ ಬೆಳೆದುಬಂದ ಪದ್ಧತಿ. ಮಕ್ಕಳು, ಹೆಂಗಸ್ರು ಬೆಳ್ಳಿಗೆ ಗಂಜಿ ಊಟ ಮಾಡಿದರೆ, ಗಂಡಸರು ಹೆಸ್ರಹಣಿ ಕುಡಿಯುತಿದ್ದರು.

ಹವ್ಯಕರು ಸಾಮಾನ್ಯವಾಗಿ ಹಳ್ಳಿಗಳಲ್ಲಿ, ಕೇರಿಗಳಲ್ಲಿ ವಾಸಿಸುತ್ತಾರೆ. ಗುಡ್ಡದ ಪಕ್ಕದಲ್ಲಿ ಸಾಲಾಗಿ ಮನೆಗಳು, ಮುಂದೆ ಕೇರಿಯ ದಾರಿ, ಅದರಾಚೆ ತಗ್ಗಿನಲ್ಲಿ ಉದ್ದಕ್ಕೂ ಆಡಿಕೆ, ಬಾಳೆಗಳ ತೋಟ ಊರ ಕೊನೆಯಲ್ಲಿ ಒಂದು ಕೆರೆ, ದೇವಸ್ಥಾನ – ಇದು ಹವ್ಯಕರಿರುವ ಹಳ್ಳಿಗಳ ಸಾಮಾನ್ಯ ಸ್ವರೂಪ. ಹವ್ಯಕರು ತಮ್ಮ ಮನೆಗಳಿಗಾಗಿ ಕಲ್ಲು, ಮಣ್ಣು, ಹೊದಿಕೆಗಾಗಿ, ಸೋಗೆ, ಬಣ್ಣಾಕ್ಕಾಗಿ ಸುಲಭದಲಿ ಸಿಗುವ ಬಣ್ಣದಕಲ್ಲು ಹಾಗೂ ಸಸ್ಯಗಳನ್ನು ಬಳಸಿಕೊಂಡಿದ್ದಾರೆ. ಮನೆ ಬಳಕೆಯ ವಸ್ತುಗಳು ಬಹಳಷ್ಟು ಸ್ಥಳೀಯವಾಗಿದ್ದು, ಅದರಿಂದ ಕಲಾತ್ಮಕ ವಸ್ತುಗಳನ್ನು ಅವರೇ ತಯಾರಿಸಿಕೊಂಡಿದ್ದಾರೆ. ಮನೆ, ಬಚ್ಚಲುಮನೆ, ದನಕರುಗಳ ಕೊಟ್ಟಿಗೆ ಪ್ರತ್ಯೇಕವಾಗಿಯೆ ಇರುತ್ತವೆ. ಮೊದಲಿದ್ದ ಅವಿಭಕ್ತ ಕುಟುಂಬಗಳು ಈಗ ಮಾಯವಾಗುತ್ತಿರುವುದರಿಂದ ಹಳ್ಳಿಗಳಲ್ಲಿ ೨೦ -೩೦ ಅಂಕಣಗಳ ತೊಟ್ಟಿ ಅಂಗಳದ ಮನೆಗಳನ್ನು ಈಗ ಕಾಣುವುದು ದುರ್ಲಭವಾಗುತ್ತಿದೆ.

ಅಡಿಕೆ, ಬಾಳೆ, ಭತ್ತ, ತೆಂಗು, ಕಬ್ಬು, ವೀಳ್ಯದೆಲೆ, ಕಾಳುಮೆಣಸು, ಯಾಲಕ್ಕಿ ಇವು ಹವ್ಯಕರು ಬೆಳೆಯುವ ಮುಖ್ಯಬೇಳೆಗಳಾಗಿವೆ. ಇವರು ಹೆಚ್ಚಾಗಿ ಪಾರಂಪರಿಕ ಕೃಷಿ ಪದ್ಧತಿಯನ್ನೇ ಅನುಸರಿಸುತ್ತ ಬಂದಿದ್ದಾರೆ. ಅನುಭವದಿಂದ ಅನೇಕ ಕೃಷಿ ತಂತ್ರಗಳನ್ನು ಕಂಡುಕೊಂಡಿದ್ದಾರೆ. ವರುಷವಿಡೀ ತೋಟ- ಗದ್ದೆಗಳಲ್ಲಿ ಹವ್ಯಕ ಗಂಡಸರಿಗೆ ಒಂದಲ್ಲ ಒಂದು ಬಗೆಯ ಕೆಲಸವಿದ್ದೇ ಇರುತ್ತದೆ. ಇವಲ್ಲದೇ ಹಂಗಾಮಿನಲ್ಲಿ ಅಡಿಕೆ ಗೊನೆಗಳಿಗೆ ಕೊಟ್ಟೆ ಕಟ್ಟುವುದು, ಅಡಿಕೆ ಕೊಯ್ಲಿ, ಸುಲಿಸಿ ಬೇಯಿಸಿ ಒಣಗಿಸುವುದು ಇತ್ಯಾದಿ ಕೆಲಸ ಗಳಿರುತ್ತವೆ. ಕೊಟ್ಟಿಗೆ ಕೆಲಸ, ದನಕರುಗಳ ಕೆಲಸವೂ ಸಾಮಾನ್ಯವಾಗಿ ಗಂಡಸರದ್ದೇ. ಇವುಗಳ ಜೊತೆಗೆ ಕೆಲವರಿಗೆ ಊರಿನ ಪೌರೋಹಿತ್ಯವೂ ಇರುತ್ತದೆ. ಹಿರಿಯರು ಕಿರಿಯರಿಗೆ ಮೌಖಿಕವಾಗಿಯೇ ಎಲ್ಲ ರೀತಿಯ ತಿಳುವಳಿಕೆಯನ್ನೂ ನೀಡುವರು.

ಮನೆಗೆಲಸ ಮಕ್ಕಳ ಆರೈಕೆ ಮತ್ತು ಅತಿಥಿ ಅಭ್ಯಗತರ, ರೋಗಿಗಳ ಸೇವೆ ಹೆಂಗಸರದ್ದು, ಇದರೊಂದಿಗೆ ತೋಟ – ಗದ್ದೆಗಳಲ್ಲಿಯ ಕೆಲಸಕ್ಕೂ ಹೆಂಗಸರು ಬಿಡುವು ಮಾಡಿಕೊಂಡು ಗಂಡಸರಿಗೆ ನೆರವಾಗುತ್ತಾರೆ. ಅಡಿಕೆ ಕೊಯ್ಲಿನ ಸಮಯದಲ್ಲಿ ರಾತ್ರಿಯ ವೇಳೆ ಮನೆಯ ಗಂಡಸರು, ಹೆಂಗಸರು ಮಕ್ಕಳೂ ಸೇರಿ ಅಂಗಳದಲ್ಲಿ ಮೆಟ್ಟುಗತ್ತಿ ಇಟ್ಟುಕೊಂಡು ಅಡಿಕೆ ಸುಲಿಯುತ್ತಾರೆ. ಮೊದಲು ಕೃಷಿ ಹಾಗೂ ಇನ್ನಿತರ ಕೆಲಸಗಳಲ್ಲಿ ಒಂದು ಮನೆಯವರು ಇನ್ನೊಂದು ಮನೆಯವರಿಗೆ ಮುಯ್ಯಾಳಿನ ರೂಪದಲ್ಲಿ ಸಹಾಯ ಮಾಡುತ್ತಿದ್ದರು.

ಬಿಡುವಿನ ವೇಳೆಯಲ್ಲಿ ಹವ್ಯಕ ಗಂಡಸರು ಗಂಜೀಪು, ಇಸ್ಪೀಟು, ಚದುರಂಗ, ಅಡುವರು, ಗಂಡು ಮಕ್ಕಳು ಸರಗೋಲು ದೊಣ್ಣೆ, ಹಾಣಿಗೆಂಡ, ಲಗೋರಿ, ಹುಡ್ಡಿ, ಗಿಡುಗನ ಆಟ, ಚಂಡಾಟ, ಡಬ್ಬಾಡುಬ್ಬಿ, ಕುದ್ರಗುಪ್ಪೆ, ಬೂರೆ, ಆಟ, ಚಿನ್ನಿದಾಂಡು ಮುಂತಾದವರನ್ನು ಆಡುತ್ತಾರೆ. ಹೆಣ್ಣು ಮಕ್ಕಳು ಪಗಡೆ, ಕುಂಟಾಟ, ಕಣ್ಣೇಕಟ್ಟಿ, ಗಜ್ಜಗ, ಕಲ್ಲಾಟ, ಹಲಪೆ ಆಟ, ಕಂಬ ಕಮ್ಭಾತ, ಅಡ್ಗೆ ಆಟ, ದೇವಾರಾಟ, ಮದುವೇ ಆಟ, ಎತ್ತಿಕಲ್ಲು, ಕವ್ವೆ, ಗುಳುಗುಳು ಪಾಂಡ್ಯ, ಬ್ಯಾಳೆ ಆಟ ಮುಂತಾದವುಗಳನ್ನು ಆಡುವರು. ಹುಲಿಮನೆ ಆಟ, ಚನ್ನೆಮಣೆ, ಕಸೆಕುರ್ಡಿ ಆಟ, ಕಡ್ಡಿ ಆಟ, ಆಡೆಮಣ್ಣಿ ಆಟಗಳನ್ನು ಇಬ್ಬರೂ ಕೂಡಿ ಆಡುವರು. ತೋಟ ಗದ್ದೆಗಳಲ್ಲಿ ಕಳೆ ಕೀಳುವುದು, ತೋಟದಲ್ಲಿ ಬಿದ್ದ ಅಡಿಕೆಗಳನ್ನು ಆಯುವುದು, ಜೊತೆಗೆ ವರ್ಷವಿಡೀ ಮನೆಗೆ ಬೇಕಾದ ಹಾಳೆಕಡಿ, ಮಸಿಉಂಡೆ, ಶೀಗೆಪುಡಿ, ಆರಿಶಿನಪುಡಿ ,ಕೆಮ್ಮಣ್ಣು, ಶೇಡಿ ಉಂಡೆ, ಹೊದ್ಲು, ಹಪ್ಪಳ ಸಂಡಿಗೆ, ಚಟ್ಟುಪ್ಪಿನಕಾಯಿ, ಹುಣಸೇಮುದ್ದೆ, ಹಿತ್ತಂಡೆ ಹಿಡಿ ಇತ್ಯಾದಿ ತಯಾರಿಸಿ ಇಟ್ಟುಕೊಳ್ಳುತ್ತಾರೆ. ಕಸೂತಿ ಮಣಿಆರತಿ ಮುಂತಾದವನ್ನು ಹೆಣೆಯುವುದು, ಹಿರಿಯರಿಂದ ಹಾಡು ಹೇಳಿಸಿ ಕಲಿತುಕೊಳ್ಳುವುದು ಇತ್ಯಾದಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳ ಚಟುವಟಿಕೆಗಳು. ಗಂಡುಮಕ್ಕಳು ಯಕ್ಷಗಾನದ ಕುಣಿತ, ಹಾಡುಗಳನ್ನು ಕಲಿತುಕೊಳ್ಳುವುದುಂಟು. ಹವ್ಯಕರು ವಿಶೇಷವಾಗಿ ಯಕ್ಷಗಾನ ಪ್ರಿಯರಾಗಿದ್ದು, ಕೆಲವರು ಮೇಳ ಕಟ್ಟಿಕೊಂಡು ಊರೂರು ತಿರುಗುತ್ತಾರೆ.

ಹವ್ಯಕರಲ್ಲಿ ಜನಪದ ವೈದ್ಯ ಅಥವಾ ಮನೆ ಮದ್ದು ಹೆಚ್ಚು ಪ್ರಚಲಿತವಿದೆ. ಪ್ರತಿಯೊಂದು ಕುಟುಂಬದಲ್ಲಿಯೂ ಒಬ್ಬರಿಗಾದರೂ ಔಷಧಿ ಸಸ್ಯಗಳ ಪರಿಚಯ ಮತ್ತು ಅದರ ಉಪಯೋಗ ತಿಳಿದಿರುತ್ತಿತ್ತು. ಸಾಮಾನ್ಯ ಕಾಹಿಲೆಗಳಲಿ ಮನೆಯಲ್ಲಿಯೇ ಔಷಧಿ – ಪಥ್ಯ ನಡೆಯುತ್ತಿತ್ತು. ಸಾಮಾನ್ಯವಾಗಿ ಮಹಿಳೆಯರು ಜನಪದ ವೈದ್ಯೆಯರೂ ಮತ್ತು ಹೆರಿಗೆ ಅರಿತವರೂ ಆಗಿರುತ್ತಿದ್ದರು.

ಹವ್ಯಕರ ಮನೆ ಮಾತಿನಲ್ಲಿ ಹಳಗನ್ನಡ ಮತ್ತು ನಡುಗನ್ನಡ ರೂಪಗಳು ವಿಶೇಷವಾಗಿದೆ. ವೈದಿಕ ಸಂಸ್ಕೃತಿಯ ಪ್ರಭಾವದಿಂದ ಅನೇಕ ಸಂಸ್ಕೃತ ಶಬ್ಧಗಳು ಇವರ ಭಾಷೆಯನ್ನು ಪ್ರವೇಶಿಸಿವೆ. ಆದರೂ ಸಾಮಾನ್ಯವಾಗಿ ನಿತ್ಯದ ಮಾತಿನಲ್ಲಿ ಅಚ್ಚ ಕನ್ನಡ ಶಬ್ಧಗಳೇ ಹೇರಳವಾಗಿವೆ. ಮಹಾಪ್ರಾಣ ಅಕ್ಷರವನ್ನು ಕಲಿತವರ ಹೊರತಾಗಿ ಉಳಿದವರು ಸ್ಪಷ್ಟವಾಗಿ ಉಚ್ಚರಿಸಲಾರರು. ಅನುನಾಸೀಕರಣ ಹವ್ಯಕ ಭಾಷೆಯ ವೈಶಿಷ್ಟ್ಯ. ತಾ (ಕೊಡು), ತಾ (ತಾನು) ಎಂಬಲ್ಲಿ ಆ ವ್ಯತ್ಯಾಸವನ್ನು ಸ್ಪಷ್ಟವಾಗಿ ಹುರುತಿಸಬಹುದು. ಮೂಲದ್ರಾವಿಡ ಸಮಾವೇಶಕ ಮತ್ತು ಅಸಮಾವೇಶಕ ಸರ್ವನಾಮಗಳು ಹವ್ಯಕ ಭಾಷೆಯಲ್ಲಿ ಉಳಿದುಕೊಂಡು ಬಂದಿದೆ. ಯಜ್ಗ್ – ಅಸಮಾವೇಶಕದ ಸರ್ವನಾಮ (ಅದುರಿಗಿರುವವರನ್ನು ಬಿಟ್ಟು). ನಜ್ಗ / ನಾವು ಸಮಾವೇಶಕ ಸರ್ವನಾಮ (ಎಲ್ಲರೂ)ದಲ್ಲಿ ಲಿಂಗವ್ಯವಸ್ಥೆಯಲ್ಲಿ ಬಹುವಚನದಲ್ಲಿ ಮಹತ್, ಅಮಹತ್ ಭೇದ ಕಂಡುಬರುತ್ತದಾದರೂ ಏಕವಚನದಲ್ಲಿ ಮಾತ್ರ ಪುಲಿಂಗ, ಪುಲ್ಲಿಂಗೇತರ ಭೇದವಿದೆ. ಅಪ್ಪಯ್ಯ , ಅಮ್ಮ, ಆಯೀ, ಅಬ್ಬೆ, ಬಪ್ಪ, ದೊಡ್ಡಪ್ಪ, ಅಪ್ಪಜ್ಜಿ, ಸಣ್ಣಪ್ಪಯ್ಯ, ಚಿಕ್ಕಿ, ಹಿರಿಯವ್ವ, ದೊಡ್ಡಾಯಿ ಮುಂತಾದ ಸಂಬಂಧವಾಚಿ ಶಬ್ಧಗಳು ಅವರ ಭಾಷೆಯಲ್ಲಿವೆ. ಹವ್ಯಕರ ಹಿರಿಯ ಮಗನನ್ನು ಮಾಣಿ ಎಂದೂ ಹಿರಿಯ ಮಗಳನ್ನು ‘ಕೂಸು’ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಆ ಮಕ್ಕಳಿಗೆ ತಮ್ಮ ತಂದೆ ತಾಯಿಯರ ಹೆಸರನ್ನು ಇಡುತ್ತಿದ್ದುದು. ಹವ್ಯಕ ಭಾಷೆಯ ಇನ್ನೊಂದು ವೈಶಿಷ್ಟ್ಯವೆಂದರೆ ಏಕವಚನ ಸಂಬೋಧನೆ. ಸಂಬಂಧಿಗಳನ್ನು ಪರಿಚಿತರನ್ನು ಸಾಮಾನ್ಯವಾಗಿ ಏಕವಚನದಲ್ಲಿಯೇ ಮಾತನಾಡಿಸಲಾಗುತ್ತದೆ. ಇದಕ್ಕೆ ಅಪವಾದವೆಂದರೆ ಹೆಣ್ಣು ಕೊಟ್ಟ ಅತ್ತೆ – ಮಾವರನ್ನು ಅಳಿಯ ಬಹುವಚನದಲ್ಲಿ ಸಂಬೋಧಿಸುತ್ತಾನೆ. ಅದರಂತೆ ಸೊಸೆಯಾದವಳು ಅತ್ತೆ, ಮಾವ, ಗಂಡ ಹಾಗೂ ಗಂಡನಿಗಿಂತ ಹಿರಿಯರಾದ ಮನೆ ಮಂದಿಯನ್ನು ಬಹುವಚನದಲ್ಲಿ ಮಾತನಾಡಿಸುತ್ತಾಳೆ. ಹವ್ಯಕರಲ್ಲಿ ಕಂಡುಬರುವ ಅಂಕಿತಾನಾಮಗಳು ಸಾಮಾನ್ಯವಾಗಿ ಸುಬ್ಬಯ್ಯ, ಗಣಪಯ್ಯ, ತಿಮ್ಮಪ್ಪ, ಇಗ್ಗಪ್ಪ(ವಿಘ್ನೇಶ್ವರ), ಪರಂಭಟ್ಟ, ವೆಂಕಪ್ಪ, ನಾಣಪ್ಪ ಮುಂತಾಗಿ ಅಪ್ಪ, ಅಯ್ಯ, ಅಂತ್ಯ ಪ್ರಯತ್ಯಗಳನ್ನು ಅಥವಾ ಅಡ್ಡಹೆಸರನ್ನು ಸೇರಿಸಿಕೊಂಡು ಸಂಬೋಧಿಸಲ್ಪಡುತ್ತವೆ. ಹೆಂಗಸರಿಗೆ ಸುಬ್ಬಿ, ವೆಂಕಿ, ಭವಾನಿ ಮಂಜಿ, ಕಾಸಿ, ದುಗ್ಗಿ, ತಿಪಿ, ಮಂತಾಳಿ, ಬಾಗಿ ತಿಮಿ ಮಾದೇವಿ ಇತ್ಯಾದಿಹೆಅಸ್ರುಗಳಿರುತ್ತವೆ.

ಹವ್ಯಕರಲ್ಲಿ ಜನಪದ ಸಾಹಿತ್ಯವೂ ಸಾಕಷ್ಟು ಪ್ರಮಾಣದಲ್ಲಿದೆ. ಅಡಿಕೆ ಸುಲಿಯುವಾಗ, ಚಳಿಯಲ್ಲಿ ಹೊಡಚಲು ಬೆಂಕಿ ಕಾಯಿಸುವಾಗ ಮುಂತಾದ ಸಂದರ್ಭಗಳಲಿ ಜನಪದ ಕತೆಗಳನ್ನು ಹೇಳಲಾಗುತ್ತದೆ. ಜನಪದ ಗೀತೆಗಳಲ್ಲಿ ಬಹಳಷ್ಟು ಸಂಪ್ರದಾಯದ ಹಾಡುಗಳಾಗಿವೆ. ಕಥೆ, ಗಾದೆ, ಒಗಟುಗಳೂ ಹೇರಳವಾಗಿದ್ದು, ಅನೌಪಚಾರಿಕ ಶಿಕ್ಷಣದ ಮಾದ್ಯಮಗಳಾಗಿಯೂ ಬಳಕೆಯಾಗಿವೆ. ಮಾತಿಗೆ ಮೊದಲು ಗಾದೆ ಹೇಳುವ ಜನರಿದ್ದಾರೆ. ನುಡಿಗಟ್ಟುಗಳನ್ನು ಮಾತಿನ ಮಧ್ಯೆ ಬಳಸುವುದು ವಿಶೇಷ. ಇವರಲ್ಲಿ ಬೈಗುಳಗಳೂ ಸಾಕಷ್ಟಿವೆ.

ಹೀಗೆ ಹವ್ಯಕ ಸಂಸ್ಕೃತಿ ಕರ್ನಾಟಕದ ಸಮುದಾಯವೊಂದರ ಜನಪದ ಸಂಸ್ಕೃತಿಯಾಗಿದ್ದು, ಇದು ಅವರ ವಿಶಿಷ್ಟ ಭಾಷೆ, ಆಚರಣೆ, ಕಲೆ, ವೈದ್ಯ, ಕ್ರೀಡೆ ಮುಂತಾದವುಗಳಲ್ಲಿ ಉಳಿದುಬಂದಿದೆ. ಕೃಷಿ ಆಧಾರಿತ ಜೀವನ ಕ್ರಮವನ್ನು ನಡೆಸುತ್ತ ಬಂದಿರುವುದರಿಂದ ಇತರ ಬ್ರಾಹ್ಮಣರಿಂತ ಇವರು ಭಿನ್ನರೆನ್ನಿಸುತ್ತಾರೆ. ಈ ಕಾರಣದಿಂದಲೇ ವೈದಿಕ ಹಾಗೂ ಅವೈದಿಕ (ಮಾರ್ಗ ಹಾಗೂ ದೇಶಿ) ಸಂಸ್ಕೃತಿಯ ಸುಂದರ ಸಮನ್ವಯವನ್ನು ಇವರ ಸಂಸ್ಕೃತಿಯಲ್ಲಿ ಗುರುತಿಸಬಹುದಾಗಿದೆ.

ಎಸ್. ಆರ್. ಎನ್.