ಪುನಂ ಕೃಷಿ ಕುಮರಿ ಬೇಸಾಯವು ಬುಡಕಟ್ಟು ಜನ ವರ್ಗದವರ ವಿಶೇಷವಾದ ಒಂದು ಬೇಸಾಯ ಪದ್ಧತಿಯಾಗಿದೆ. ಕೇರಳ ಬುಡಕಟಟಿನವರಲ್ಲಿ ಇದು ಕೊತ್ತುಕಾಡ್ (ಕಾಡು ಕಡಿತ), ಕರಿಕಾಡು (ಕಾಡು ಸುಡುವಿಕೆ) ಕಾಲೇವಾರಿ ಚುಡಲ್, ಪಂಜಕ್ಕಾಡ್, ವಿರಿಪ್ಪುಕೃಷಿ ಮುಂತಾದ ಬೇರೆ ಬೇರೆ ಹೆಸರುಗಳಲ್ಲಿ ಪ್ರಚಾರದಲ್ಲಿದೆ. ಒಂದೇ ಜಗದಲ್ಲಿ ಮತ್ತೆ ಮತ್ತೆ ಕೃಷಿ ಮಾಡುವುದಿಲ್ಲ ಎನ್ನುವುದು ಕುಮರಿ ಬೇಸಾಯದ ಪ್ರತ್ಯೇಕತೆ. ಒಮ್ಮೆ ಕೃಷಿ ಮಾಡಿದ ಬಳಿಕ ಆ ಪ್ರದೇಶವನ್ನು ಉಪೇಕ್ಷಿಸಲಾಗುತ್ತದೆ. ಮತ್ತೆ ಆ ಜಾಗಕ್ಕೆ ಮರಳಿ ಬರುವುದು ಹಲವು ವರ್ಷಗಳ ಬಳಿಕ. ಅಷ್ಟು ಹೊತ್ತಿಗೆ ಅಲ್ಲಿ ಕಾಡು ಚಿಗಿತುಕೊಂಡು ಬೆಳೆದಿರುತ್ತದೆ. ಬೇರೆ ಬೇರೆ ಬುಡಕಟ್ಟುಗಳಲ್ಲಿ ಒಮ್ಮೆ ತಾವು ಕೃಷಿ ಮಾಡಿದ ಜಾಗಕ್ಕೆ ಮರಳಿ ಬರುವ ಕಾಲಾವಧಿಯಲ್ಲಿ ವ್ಯತ್ಯಾಸವಿದೆ. ಅಟ್ಟಪ್ಪಾಡಿಯ ಬುಡಕಟ್ಟುಗಳು ಮೂರು-ಐದು ವರ್ಷಗಳ ಕಾಲಾವಧಿಯಲ್ಲ, ಕಣ್ಣವಂ ಕುರುಚ್ಯರು ಏಳು ವರ್ಷಗಳ ಬಳಿಕ ಒಮ್ಮೆ ಕೃಷಿ ಮಾಡಿದಲ್ಲಿಗೆ ಮರಳುತ್ತಾರೆ. ಇನ್ನೊಮ್ಮೆ ಬೇಸಾಯ ಮಾಡಲು ಅಗತ್ಯವಾದ ಸಾರ ಮಣ್ಣಿಗೆ ಲಭ್ಯವಾಗುವುದು ಇಷ್ಟು ಕಾಲಾವಧಿಯ ಬಳಿಕ ಎನ್ನುವುದು ಬುಡಕಟ್ಟು ಜನರ ನಂಬುಗೆ. ಕಾಡುಸುಟಟು ಸಿಗುವ ಬೂದಿಯನ್ನಲ್ಲದೆ ಬೇರಾವುದೇ ಗೊಬ್ಬರವನ್ನು ಈ ಕೃಷಿ ಪದ್ಧತಿಯಲ್ಲಿ ಬಳಸುವುದಿಲ್ಲ.

ಒಂದೇ ಭೂಮಿಯಲ್ಲಿ ಎರಡು ಬೆಳೆಗಳಲ್ಲಿನ ಪರಸ್ಪರ ಕಾಲಾವಧಿಯ ದೀರ್ಘತೆ ಆದಷ್ಟು ಹೆಚ್ಚು ಲಭ್ಯವಾಗಬೇಕೆನ್ನುವುದೇ ಕುಮರಿ ಬೇಸಾಯಕ್ಕೆ ಸಂಬಂಧಿಸಿದಂತೆ ತುಂಬ ಅಗತ್ಯವಾದ ಸಂಗತಿಯಾಗಿದೆ. ಎರಡು ಬೆಳೆಗಳ ನಡುವಿನ ಕಾಲಾವಧಿಯು ಕಾಡಿನ ಪುನರುಜ್ಜೀವನಕ್ಕೂ ಮಣ್ಣಿಗೆ ನಷ್ಟವಾಗಿರುವ ಸಾರವನ್ನು ಮರಳಿ ಒದಗಿಸಿ ಕೊಡಲೂ ಸಹಾಯವಾಗುತ್ತದೆ. ಕೃಷಿ ಕಾಲಗಳ ಮಧ್ಯದ ಯೋಗ್ಯಕಾಲಾವಧಿ ಕುಮರಿ ಬೇಸಾಯದ ಸಾಂಪತ್ತಿಕ ಕ್ಷಮತೆಯನ್ನು ನಿರ್ಧರಿಸುವ ಘಟಕವಾಗಿದೆ. ಕಾಲಾವಧಿ ಕಡಿಮೆಯಾದಲ್ಲಿ ಬೆಳೆಯೂ ಕಡಿಮೆಯಾಗುವುದು ಅನುಭವ ಸಿದ್ಧ ವಿಚಾರ.

ಹಿಂದಿನ ಕಾಲದಲ್ಲಿ ಆದಿವಾಸಿ ಜನ ಕಾಡುಗಳಲ್ಲಿದ್ದ ಯೋಗ್ಯವಾದ ಸ್ಥಳಗಳನ್ನಾಯ್ಡು ಕುಮರಿ ಬೇಸಾಯ ಮಾಡುತ್ತಿದ್ದರು. ಕಾಸರಗೋಡು ಜಿಲ್ಲೆಯ ಮಾವಿಲರು, ಮಲೆಬೇಟ್ಟುವರು ಮುಂತಾದವರು ಭೂಮಾಲೀಕರ ಖಾಸಗಿ ಆಸ್ತಿಯಲ್ಲಿ ಅವರಿಗಾಗಿ ಕುಮರಿ ಬೇಸಾಯ ಮಾಡಿಕೊಡುತ್ತಿದ್ದರು. ಧನುತಿಂಗಳ ಹತ್ತರಂದು ಕಾಡು ಕಡಿಯಲು ಆರಂಭಿಸಿ, ಬಳಿಕ ಒಣಗಿದ ಕಾಡನ್ನು ಕುಂಭ ತಿಂಗಳ ಮೊದಲವಾರ ಉರಿಸಿಬಿಡುತ್ತಿದ್ದರು. ಮೀನ ತಿಂಗಳಲ್ಲಿ ಬೀಜ ಹಾಕುವುದಕ್ಕೆ ಒಳ್ಳೆಯ ದಿನ ನೋಡುವ ಪದ್ಧತಿಯಿತ್ತು. ಮುಹೂರ್ತ ನೋಡುವ ಕಾರ್ಯಕ್ರಮವನ್ನು ‘ಪೊದು ಕೊಳ್ಳಲ್’ ಎಂದು ಕರೆಯುತ್ತಿದ್ದರು. ಕುಮರಿ ಬೇಸಾಯದ ಇನ್ನೊಂದು ವೈಶಿಷ್ಟ್ಯವೆಂದರೆ ಬೀಜ ವೈವಿಧ್ಯ. ಭತ್ತ, ಸಾಮೆ, ತಿನ (ಮ.) (ಸಾಮೆಯಂಥ ಒಂದು ಧಾನ್ಯ) ರಾಗಿ, ಎಳ್ಳು, ತೊಗರಿ, ಸಾಸಿವೆ, ಸೌತೆಯ ಪ್ರಭೇದಗಳು, ಹೆಸರು ಪ್ರಭೇದಗಳು ಮುಂತಾದವುಗಳ ಸಮ್ಮಿಶ್ರ ಕೃಷಿ ನಡೆಸುತ್ತಿದ್ದರು. ಅಲ್ಪಕಾಲಾವಧಿಯ ಭತ್ತದ ಬೀಜಗಳನ್ನು (ತಚ್ಚ, ಚೆಮ್ಮೋಳ್, ತಡಿಚ್ಚಿಲ್ ಮುಂತಾದುವು) ತೊಗರಿಬೀಜದೊಂದಿಗೆ ಮಿಶ್ರಮಾಡಿ ಕುಮರಿಯ ಮಧ್ಯಭಾಗದಲ್ಲಿ ಮೀನ ಮಾಸದಲ್ಲೆ ಬಿತ್ತಿ ಬಿಡುತ್ತಿದ್ದರು. ರಾಗಿಯನ್ನೂ ಭತ್ತದ ಜತೆಗೇನೇ ಬಿತ್ತುತ್ತಿದ್ದರು. ಸಾಮೆ ಮತ್ತು ತಿನಗಳನ್ನು ಕುಮರಿಯ ಅಂಚಿನಲ್ಲಿ ಬಿತ್ತುತ್ತಿದ್ದರು. ಎಳ್ಳು, ಸಾಸಿವೆಗಳನ್ನು ಕಸಕಡ್ಡಿಗಳನ್ನು ರಾಶಿಹಾಕಿ ಉರಿಸಿದ ಜಾಗದಲ್ಲಿ ಎರಚುತ್ತಿದ್ದರು. ಕಾಡು ಉರಿಸಿದ ಜಾಗದಲ್ಲಿ ತಿನವೂ ಎಳ್ಳೂ ಹುಲುಸಾಗಿ ಬೆಳೆಯುತ್ತವೆ. ಕುಮರಿಯಲ್ಲಿ ಕಳೆ ತೆಗೆಯುವುದನ್ನು ‘ಕತ್ತಿರಿಪಾಯದಾಕ್ಕುಗ’ ಎಂದು ಮಾವಿಲರು ಕರೆಯುತ್ತಾರೆ. ಇವರು ಕಳೆಗಳನ್ನೂ ಕಾಡುಗಳನ್ನೂ ಕಿತ್ತು ತೆಗೆದು ಕೃಷಿ ಜಾಗದಲ್ಲಿಯೇ ಹೂಳುತ್ತಾರೆ. ಮೊದಲ ಕುಮರಿಯ ಬೆಳೆಕೊಯ್ಯುವುದನ್ನು ‘ನಾತ್ತಂಡರುಕ್ಕಲ್’ ಎಂದು ಕರೆಯುತ್ತಾರೆ. ಇದು ಕಳೆದರೆ ಮತ್ತೆ ಯಾವಾಗ ಬೇಕಾದರೂ ಕೊಯ್ಲು ಪ್ರಾರಂಭವಾಗುತ್ತದೆ.

ತಿರುವನಂತನಪುರಂ, ಕೊಲ್ಲಂ ಜಿಲ್ಲೆಗಳ ಕಾಣಿಕ್ಕಾರರು ಕುಮರಿ ಬೇಸಾಯದಲ್ಲಿ ಮರಗೆಣಸನ್ನು ಸೇರಿಸಿಕೊಳ್ಳುತ್ತಿದ್ದರು. ಕುಂಭ, ಮೀನ, ಮೇಷ ತಿಂಗಳುಗಳಲ್ಲಿ ಇವರು ಮರಗೆಣಸು ನೆಟ್ಟು ಬಿಡುತ್ತಿದ್ದರು. ‘ಪರಂಗಿಮಾಂಙಕಪ್ಪ’ (ಗೇರುಹಣ್ಣು ಮರಗೆಣಸು) ಎಂಬ ಹೆಸರಿನ ಒಂದು ವಿಶಿಷ್ಟ ತಳಿಯ ಮರಗೆಣಸನ್ನು ಕಾಣಿಕ್ಕಾರರು ಕೃಷಿ ಮಾಡುತ್ತಿದ್ದರು.

ಕೇರಳದ ಇತರ ಕುಮರಿ ಬೇಸಾಯ ವಲಯಗಳಿಂದ ಭಿನ್ನವಾಗಿ ಅಟ್ಟಪ್ಪಾಡಿಯಲ್ಲಿ ಒರಟು ಧಾನ್ಯಗಳನ್ನೂ ಹೆಸರು ಪ್ರಭೇದದ ಕಾಳುಗಳನ್ನೂ ಹೆಚ್ಚಾಗಿ ಕಾಣಬಹುದು. ರಾಗಿ, ಸಾಮೆ, ತಿನ, ಹೆಸರು ಪ್ರಭೇದಗಳು ಮುಂತಾದುವನ್ನು ಬಿಟ್ಟರೆ ಇವರ ಕೃಷಿ ಪದ್ಧತಿಯಲ್ಲಿ ಭತ್ತಕ್ಕೆ ಮತ್ತಿನ ಸ್ಥಾನವಷ್ಟೆ ಇದೆ. ಅಟ್ಟಪ್ಪಾಡಿಯ ಬುಡಕಟ್ಟು ಜನರ ಮುಖ್ಯ ಆಹಾರ ರಾಗಿ. ಅಟ್ಟಪ್ಪಾಡಿ ಬುಡಕಟ್ಟಿನವರು ಪಂಜಕಾಟ್ಟ್ (ಕುಮರಿ ಬೇಸಾಯದ ಜಾಗ)ನಲ್ಲಿ ಮೊದಲು ಬೀಜ ಬಿತ್ತುವುದು ತೊಗರಿಯನ್ನು, ಬಳಿಕ ಅವರೆ, ಆಮೇಲೆ ರಾಗಿ, ಸಾಮೆ, ಸಾಸಿವೆ, ಹರಿವೆ – ಹೀಗೆ. ತೊಗರಿ ಮತ್ತು ಅವರೆಗಳನ್ನು ಬಿತ್ತುವ ಬದಲು ಕೊತ್ತ್ (ಮ.) ಎಂಬ ಉಪಕರಣದಿಂದ ನೆಲವನ್ನು ಕಡಿದು ಮಣ್ಣನ್ನು ಅಗೆದ ಬಳಿಕ ಬಿತ್ತುವುದು ಕ್ರಮ. ಎರಡನ್ನೂ ಬೇರೆ ಬೇರೆ ಜಾಗಗಳಲ್ಲಿ ಬೇರೆ ಬೇರೆಯಾಗಿಯೇ ಬಿತ್ತಲಾಗುತ್ತದೆ. ಬಾಳೆ, ಅರಸಿನ, ಸೌತೆ, ಸೂರೆಕಾಯಿ, ಮುಳ್ಳುಸೌತೆ, ಕುಂಬಳಕಾಯಿ ಮುಂತಾದ ತರಕಾರಿಗಳನ್ನು ಮೇಷ ಮಾಸದಲ್ಲೆ ಬಿತ್ತುತ್ತಾರೆ. ತಿನವನ್ನು (ಪಾಂಡಿ ಮ.) ಪ್ರತ್ಯೇಕವಾಗಿಯೇ ಬಿತ್ತಲಾಗುತ್ತದೆ. ಮಳೆ ಚೆನ್ನಾಗಿ ಹೊಡೆದ ಮೇಲೆ ಮಿಥುನ ಮಾಸದಲ್ಲಿ ಭತ್ತವನ್ನು ಬಿತ್ತುತ್ತಾರೆ. ಪಾಂಡಿ (ತಿನ. ಮ.) ಯನ್ನು ಮೊದಲು ಕೊಯ್ಯುತ್ತಾರೆ.

ಉಳಿದೆಡೆಗಳಲ್ಲಿ ಕೃಷಿ ಮಾಡುವ ಹರಿವೆಯ ಪ್ರಭೇದಗಳಿಗಿಂತ ಬೇರೆ ಹರಿವೆಗಳನ್ನು ಅಟ್ಟಪ್ಪಾಡಿಯಲ್ಲಿ ಬೆಳೆಯುತ್ತಾರೆ. ಬಿಳಿಹರಿವೆ, ತೂಂಗಕೀರ (ಮ.) ಎಂಬ ಎರಡು ತಳಿಯ ಹರಿವೆಗಳಿಗೆ ಉಳಿದೆಡೆಗಳಲ್ಲಿ ಕಾಣಸಿಗುವ ಹರಿವೆಗಳಿಗಿಂತ ಹೆಚ್ಚಿನ ಎತ್ತರವೂ ದಪ್ಪವೂ ಕಂಡುಬರುತ್ತದೆ. ತೆನೆಗಳು ಕೂಡ ತುಂಬ ದೊಡ್ಡದಿರುತ್ತದೆ. ಹರಿವೆಗಳನ್ನು ಕೃಷಿ ಮಾಡುವಾಗ ಇವರು ಅವುಗಳ ಬೀಜಗಳನ್ನೆ ಕೃಷಿಗಾಗಿ ಹೆಚ್ಚು ಅವಲಂಬಿಸುತ್ತಾರೆ. ಬೀಜ ತೆಗೆದುಜ ಹುರಿದು ಅರಳನ್ನಾಗಿಸಿ ತಿನ್ನಲು ಉಪಯೋಗಿಸುತ್ತಾರೆ. ತೆನೆಗಳಲ್ಲಿ ಸಾಕಷ್ಟು ಬೀಜಗಳಿರುತ್ತವೆ. ಆದುದರಿಂದಲೇ ಇವರು ಹರಿವೆ ಬೀಜಗಳನ್ನು ಹುಡಿಮಾಡಿ ಹಿಟ್ಟು ತಯಾರಿಸುತ್ತಾರೆ. ಹರಿವೆ ಬೀಜಗಳನ್ನು ಹುರಿದು ಜೇನು ಮಿಶ್ರಮಾಡಿ ತಿನಿಸು ತಯಾರಿಸುವುದು ಇವರಿಗೆ ಪ್ರಿಯವಾದುದು. ಇಡುಕ್ಕಿ ಜಿಲ್ಲೆಯ ಮುದುವನ್ನರು ಮೂರು ರೀತಿಯ ರಾಗಿ ತಳಿಗಳನ್ನೂ ಅಟ್ಟಪ್ಪಾಡಿಯಲ್ಲಿನ ಜನ ಎಂಟು ತೆರನ ರಾಗಿ ತಳಿಗಳನ್ನು ಕೃಷಿ ಮಾಡುತ್ತಾರೆ.

ಮಣ್ಣನ್ನೂ ಪ್ರಕೃತಿಯನ್ನೂ ಆದರಿಸುವ ಬುಡಕಟ್ಟು ಜನರ ಪರಂಪರಾಗತ ಕೃಷಿ ಶೈಲಿ – ಕುಮರಿ ಬೇಸಾಯ. ಬುಡಕಟ್ಟು ಜನರ ವಿಶಿಷ್ಟ ಬದುಕನ್ನು ರೂಪಿಸುವಲ್ಲಿ ಕುಮರಿ ಬೇಸಾಯಕ್ಕೆ ದೊಡ್ಡ ಪಾತ್ರವಿದೆ. ಇವರ ಹಾಡುಗಳಲ್ಲೂ ಕುಣಿತಗಳಲ್ಲೂ ಕುಮರಿ ಬೇಸಾಯದೊಂದಿಗಿನ ಇವರ ಸಂಬಂಧವು ಕಂಡುಬರುತ್ತದೆ. ಒಳ್ಳೆಯ ಮುಹೂರ್ತವನ್ನು ನೋಡಿದ ಬಳಿಕವಷ್ಟೆ ಇವರು ಬೀಜ ಹಾಕುವುದನ್ನಾಗಲಿ, ಕೊಯ್ಲು ನಡೆಸುವುದನ್ನಾಗಲಿ ಮಾಡುತ್ತಾರೆ. ಈ ಎರಡು ಸಂದರ್ಭಗಳಲ್ಲೂ ಅವರು ಪ್ರತ್ಯೇಕ ಪೂಜೆಯನ್ನು ಮಾಡುತ್ತಾರೆ. ಅಟ್ಟಪ್ಪಾಡಿಯ ಬುಡಕಟ್ಟು ಜನರಲ್ಲಿ ಕೃಷಿ ಕೆಲಸಗಳನ್ನು ನಿರ್ವಹಿಸುವ ವ್ಯಕ್ತಿಯನ್ನು ‘ಮಣ್ಣ್‌ಕಾರನ್’ ಎಂದು ಕರೆಯುತ್ತಾರೆ. ಈ ಮಣ್ಣ್‌ಕಾರನೇ ಕೃಷಿಯೋಗ್ಯ ಮಣ್ಣು ಕಂಡುಹಿಡಿಯುವುದು, ಮೊದಲು ಕಾಡು ಕುಡಿಯುವುದು, ಮೊದಲು ಬೀಜ ಬಿತ್ತುವುದು, ಕುಯ್ಯುವುದು. ಕಾಣಿಕ್ಕಾರರಲ್ಲಿ ಈ ಕೆಲಸಗಳನ್ನು ಮಾಡುವಾತ ಮುಟ್ಟುಕ್ಕಾಣಿ ಅಥವಾ ಪೂಜಾರಿಯಾಗಿರುವ ಪ್ಲಾತ್ತಿಯೋ ಆಗಿರುತ್ತಾನೆ. ಯಾವುದೇ ಧಾನ್ಯವನ್ನಾದರೂ ಕೊಯ್ಲು ಮಾಡಿದಾಗ ಮೊದಲು ದೈವಗಳಿಗೆ ಕೊಟ್ಟ ಬಳಿಕವಷ್ಟೆ ಆದಿವಾಸಿಗಳು ತಿನ್ನುತ್ತಾರೆ. ಒಳ್ಳೆಯ ಬೆಳೆಕೊಟ್ಟು ಅನುಗ್ರಹಿಸುವ ಮಣ್ಣುಕಾರನ ನೇತೃತ್ವದಲ್ಲಿ ಮಲೆದೈವಗಳಿಗೆ ಔತಣನೀಡುವ ಕಾರ್ಯಕ್ರಮವು ‘ತೋಡು ತಿನ್ನಲ್’ ಎಂಬ ಹೆಸರಲ್ಲಿ ಆಚರಿಸಲ್ಪಡುತ್ತದೆ. ಕೊಯ್ಲು ಮುಗಿದ ಬಳಿಕ ಮಲ್ಲೇಶ್ವರನ್ ಮುಡಿಯಲ್ಲಿ ಧಾನ್ಯಗಳನ್ನು ಕಾಣಿಕೆಗಳಾಗಿ ಅರ್ಪಿಸುತ್ತಾರೆ. ಪ್ರತಿ ಬುಡಕಟ್ಟಿನವರಿಗೂ ಪ್ರಾದೇಶಿಕವಾಗಿ ಪ್ರತ್ಯೇಕ ಪ್ರತ್ಯೇಕವಾದ ನಂಬುಗೆಗಳು ಕುಮರಿ ಬೇಸಾಯಕ್ಕೆ ಸಂಬಂಧಿಸಿದಂತೆ ಬೆಳೆದು ಬಂದಿದ್ದುವು.

ಹಿಂದಿನ ಕಾಲದಲ್ಲಿ ಕಾಡುಗಳನ್ನು ಯಥೇಷ್ಟವಾಗಿ ಕಡಿದು ಸುಟ್ಟು ಹಾಕಿ ಕೃಷಿ ಮಾಡಬಹುದಾದ ಸ್ವಾತಂತ್ರ‍್ಯವು ಆದಿವಾಸಿಗಳಿಗಿತ್ತು. ವನ ನಿಯಮಗಳು ಜಾರಿಗೆ ಬಂದ ಮೇಲೆ ಕಾಡು ಸುಟ್ಟು ಕೃಷಿ ಮಾಡುವ ಸಂಪ್ರದಾಯಕ್ಕೆ ನಿಯಂತ್ರಣ ಏರ್ಪಟ್ಟಿತು. ಇತರ ಜನರೊಂದಿಗಿನ ಸಂಪರ್ಕ ಕಾರಣವಾಗಿ ಹಲವಾರು ಜಾಗಗಳಲ್ಲಿ ತಮ್ಮದೇ ಕೃಷಿ ಪದ್ಧತಿಯನ್ನು ಬಿಟ್ಟುಕೊಟ್ಟು ನೆಲವನ್ನು ತಮ್ಮದಾಗಿಸಿಕೊಂಡ ಭೂಮಾಲಿಕರ ಕೃಷಿ ವಿಧಾನವನ್ನು ಒಪ್ಪಿಕೊಂಡರು. ಹಿಂದಿನ ಕಾಲದಲ್ಲಿ ಕೃಷಿಮಾಡುತ್ತಿದ್ದ ಅನೇಕ ಧಾನ್ಯ ಪ್ರಭೇದಗಳು ಮರೆಯಾಗಿ ಹೋದುವು. ಈಗ ಅಪೂರ್ವವಾಗಿ ವನ ಪ್ರದೇಶಗಳ ಅಂತರಾಳಗಳಲ್ಲಿ ಬದುಕುವ ಬುಡಕಟ್ಟಿನವರಲ್ಲಷ್ಟೆ ಕುಮರಿ ಬೇಸಾಯ ಚಾಲ್ತಿಯಲ್ಲಿದೆ.

ಪಿ.ವಿ.ಎಂ. ಅನುವಾದ ಕೆ.ಕೆ.

 

ಪುಲಯಡಿಯಂದಿರ ಚಡುಂಙುಗಳ್‌ ಕೇರಳದ ಕೆಳಗಿನ ಜಾತಿಗಳಿಗೆ ಸೇರಿದ, ಅದರಲ್ಲೂ ಪರಯ, ಪುಲಯ, ಕಣಕ್ಕ, ಪಾಣನ್, ಮಣ್ಣಾನ್, ನಾಯಾಡಿ ಮುಂತಾದವರ ಮರಣಾನಂತರ ಆಚರಣೆಗಳು ಹೆಚ್ಚು ಕಡಿಮೆ ಒಂದೇ ತೆರನಾಗಿವೆ.

ಈ ಜಾತಿಗೆ ಸೇರಿದ ಯಾರಾದರೂ ತೀರಿಕೊಂಡರೆ ಅವರ ಕುಟುಂಬದವರಿಗೂ ಬಂಧುಗಳಿಗೂ ಸೂತಕವಿರುತ್ತದೆ. ಅದು ಮುಗಿಯುವ ದಿನ ಎಲ್ಲರೂ ತುಂಬ ಸಮೃದ್ಧವಾದ ಔತಣವನ್ನು ಉಂಡು ಸೂತಕವನ್ನು ಮುಗಿಸುತ್ತಾರೆ. ಸೂತಕ ಎನ್ನುವುದು ಹತ್ತು ದಿನದ ವ್ರತ. ಪಾಲ್ಫಾಟು, ಮಲಪ್ಪುರಂ ಜಿಲ್ಲೆಗಳ ಆಚರಣೆಗಳ ತಳಹದಿಯಲ್ಲಿ ಮುಂದಿನ ವಿವರಗಳನ್ನು ನೀಡಲಾಗಿದೆ.

ಹಿಂದಿನಕಾಲದಲ್ಲಿ ಕುಟುಂಬದ ಹಿರಿಯನು ತೀರಿಕೊಂಡರೆ ಆತನ ಶವವನ್ನು ತೆಂಕು ಬಡಗು ದಿಸೆಯಲ್ಲಿ ಮಲಗಿಸುತ್ತಿದ್ದರು. ತಲೆಯ ಭಾಗ ತೆಂಕಿಗೆ, ಕಾಲಿನಭಾಗ ಬಡಗುದ್ದಿಕ್ಕಿಗೆ. ಬಳಿಕ ಅಗತ್ಯವಾದವರಿಗೆ ‘ಸಾವು ಸುದ್ದಿ’ಯನ್ನು ತಿಳಿಸಲಾಗುತ್ತಿತ್ತು. ಸತ್ಯ ವ್ಯಕ್ತಿಯು ಪುಲಯ ಸಮುದಾಯಕ್ಕೆ ಸೇರಿದವನಾದರೆ ಸಾವಿನ ಸುದ್ದಿ ತಿಳಿಸಲು ಪುಲಯನೇ ಆಗಬೇಕೆಂಬ ನಿಯಮವಿತ್ತು. ಸತ್ತ ವ್ಯಕ್ತಿಯನ್ನು ದೊಡ್ಡ ಇಡೀ ಬಾಳೆಯೆಲೆಯಲ್ಲಿ ತೆಂಕು ಬಡಗಾಗಿ ಮಲಗಿಸಿ ಕುಟುಂಬದ ಹಿರಿಯ ಮಗನು ಮೊದಲ ಕ್ರಿಯೆಗಳನ್ನು ನಡೆಸುತ್ತಾನೆ. ಸತ್ತವನನ್ನು ಮೀಯಿಸಿ ಅಂಗಳಕ್ಕೆ ತಂದು ಮಲಗಿಸಿದ ಬಳಿಕವೇ ಈ ಕ್ರಿಯೆಗಳು ನಡೆಯುತ್ತವೆ. ಒರಳಿನ ಮೇಲೆ ಕುಳಿತು ಕೊಂಡು ‘ಅಮ್ಮಿಕಲ್ಲ’ (ಒರಳ ಗುಂಡು)ನ್ನು ಇಟ್ಟು ಒನಕೆಯನ್ನು ಹಿಂಗೈಯ ಮೂಲಕ ಒರೆಸಿಕೊಂಡು ತೆಗೆಯಬೇಕು. ಹೀಗೆ ಏಳು ಬಾರಿ ಮಾಡಬೇಕು.

ಮೊರದಲ್ಲಿ ನಾನಾ ವಿಧದ ಧಾನ್ಯಗಳನ್ನು ಹಾಕಿ ದೀಪ ಉರಿಸಿ ಕ್ರಿಯೆಗಳು ನಡೆಯುತ್ತವೆ. ಬಂದು ಸೇರಿದ ಹಿರಿಯರಲ್ಲಿ ಮರಣಾನಂತರ ಕ್ರಿಯೆಗಳನ್ನು ತಿಳಿದಿರುವ ಯಾರಾದರೂ ಒಬ್ಬಾತನ ಮುಂದಾಳುತನದಲ್ಲಿ ಇವು ನಡೆಯುತ್ತದೆ. ಸತ್ತ ಬಳಿಕೆ ಕೆಲವರು ಹತ್ತು ದಿನಗಳವರೆಗೂ ಕೆಲವರು ಹದಿನೈದು ದಿನಗಳ ತನಕವೂ ಸೂತಕವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಸತ್ತಮನೆಯ ಇಬ್ಬರು ಸ್ತ್ರೀಯರು ಮುಂಡಗೆಯ ಚಾಪೆಯಲ್ಲಿ ಕುಳಿತುಕೊಳ್ಳುತ್ತಾರೆ. ಮನೆಯಲ್ಲಿ ಸತ್ತ ವ್ಯಕ್ತಿಯು ತಂದೆಯಾಗಿದ್ದರೆ ಮುಂಡಗೆ ಚಾಪೆಯಲ್ಲಿ ಕುಳಿತುಕೊಳ್ಳುವುದು ಹಿರಿಯ ಮಗಳು, ತಂಗಿ ಮತ್ತು ತಂಗಿಯ ಮಗಳು. ಮುಂಡಗೆಯ ಚಾಪೆಯಲ್ಲಿ ಕುಳಿತುಕೊಳ್ಳುವ ಯಾರೂ ಮನೆಯ ಅಡುಗೆ ಕೆಲಸಗಳನ್ನು ಹತ್ತೋ ಹದಿನೈದೋ ದಿನಗಳ ತನಕ ಮಾಡುವುದಿಲ್ಲ. ಊಟ ತಯಾರಿಸಿ ಅವರಿಗೆ ಬಡಿಸುವುದು ರೂಢಿ. ಈ ದಿನಗಳಲ್ಲಿ ಸಸ್ಯಾಹಾರವು ಪದ್ಧತಿ. ‘ಹತ್ತರ ಹೊಲೆ’ಯನ್ನು ಒಂದು ವ್ರತವಾಗಿಯೇ ಆಚರಿಸಲಾಗುತ್ತದೆ. ಸತ್ತ ವ್ಯಕ್ತಿಯ ಶವವನ್ನು ಸಂಸ್ಕರಿಸಿದ ಮೇಲೆ ಸೂತಕ ಆರಂಭ. ಹೆಣವನ್ನು ಸಂಸ್ಕರಿಸಿದ ಬಳಿಕ ಮನೆಮಂದಿಗಳೂ ಬಂಧುಗಳೂ ಯಾವುದಾದರೂ ಕೊಳದಲ್ಲೋ ತೋಡಿನಲ್ಲೋ ಸ್ನಾನ ಮಾಡುತ್ತಾರೆ. ಇದನ್ನೆಲ್ಲ ಸರಿಯಾಗಿಯೂ ಶೌಚದಿಂದಲೂ ಮಾಡಿಸುವಾತ ‘ಇಣಂಙನ್‌’ ಎಂಬ ವ್ಯಕ್ತಿ (ಇಣಂಙ್ ಎಂದರೆ ಈ ಜಾತಿಯಲ್ಲಿದ್ದು ಸಂಬಂಧವಿಲ್ಲದ ವ್ಯಕ್ತಿ ಎಂದರ್ಥ. ಅಂಥವರನ್ನು ಇಣಂಙನ್ ಆಗಲು ಆಮಂತ್ರಿಸಲಾಗುತ್ತದೆ.) ಮನೆಯ ಹಿರಿಯ ವ್ಯಕ್ತಿಯಾಗಿದ್ದು ‘ಮಾನ್ಯ’ ಕಟ್ಟಿದ ವ್ಯಕ್ತಿಯು ಇಣಂಙನ ನಿರ್ದೇಶಾನುಸಾವಾಗಿ ಕ್ರಿಯೆಗಳನ್ನು ನಡೆಸುತ್ತಾರೆ. (ಮಾನ್ಯ ಎಂದರೆ ಸತ್ತ ವ್ಯಕ್ತಿಯು ಧರಿಸಿದ್ದ ವಸ್ತ್ರದ ಒಂದು ತುಂಡು). ಮಾನ್ಯವನ್ನು ಸೊಂಟಕ್ಕೆ ಕಟ್ಟಿಕೊಂಡು ಏಳು ಬಾರಿ ಮುಳುಗಿ ಮೀಯಬೇಕು. ಇದರ ಬಳಿಕ ಗರಿಕೆ ಹುಲ್ಲನ್ನು ತಂದು ಹಿರಿಯಮಗ ಅಕ್ಕಿ, ಎಳ್ಳು, ಹೂಗಳಿಂದ ಕ್ರಿಯೆಯನ್ನು ಮಾಡಿ ಅಂದೇ ‘ಮಾಸತ್ತರ’ ನಿರ್ಮಿಸುತ್ತಾನೆ. (ಮಾಸತ್ತರ ಎಂದರೆ ಪೂರ್ವಾಭಿಮುಖವಾಗಿ ನಿರ್ಮಿಸಿ ಸೆಗಣಿಸಾರಿಸಿದ ಒಂದು ಪುಟ್ಟ ದಿನ್ನೆ). ಬಳಿಕ ಮಾಸತ್ತರವನ್ನು ಮುಟ್ಟಿ ವಂದಿಸಿ ವಲ್ಲಾಯ್ಮ ಕಂಞ್ (ದುಃಖದ ಗಂಜಿ) ಉಣ್ಣುತ್ತಾರೆ. ಇದನ್ನು ತೃಶ್ಶೂರು ಜಿಲ್ಲೆಯಲ್ಲಿ ‘ಪಟ್ಟಿಣಿಚೋರ್’ ಎಂದು ಕರೆಯುತ್ತಾರೆ. ಸತ್ತ ವ್ಯಕ್ತಿಯನ್ನು ನೆನೆಯುತ್ತ ಒಂದು ರಾತ್ರಿಯಿಡೀ ಉಪವಾಸವಿದ್ದು ಮರುದಿನ ಉಣ್ಣುವ ಕಾರಣ ಇದಕ್ಕೆ ಪಟ್ಟಿಣಿಚ್ಚೋರ್ ಎಂದು ಹೆಸರು (ಪಟ್ಟಿಣಿ=ಪಟ್ಣಿ=ಉಪವಾಸ). ಇದರ ಜತೆ ಪಲ್ಯ ಮತ್ತು ಪದಾರ್ಥ ಇರುತ್ತದೆ. ಕೆಲವು ಕಡೆ ಇದನ್ನು ‘ಚಾವಿಂಡೆ ಚೋರ್’ (ಸಾವಿನ ಊಟ/ ಅನ್ನ) ಎಂದೂ ಕರೆಯುತ್ತಾರೆ. ಇಣಂಙನಿಗೆ ದಕ್ಷಿಣೆಯಾಗಿ ಭತ್ತ, ಅಕ್ಕಿ, ಹಣ, ತಾಂಬೂಲಗಳನ್ನು ಕೊಟ್ಟು ಕಳುಹಿಸಲಾಗುತ್ತದೆ.

ಮರುದಿನ ಮುಂಜಾನೆ ಐದು ಗಂಟೆಯ ಹೊತ್ತಿಗೆಲ್ಲ ಎದ್ದು ಹಿಂದಿನ ದಿನ ಮಿಂದ ಕೊಳ /ತೋಡಿಗೆ ಹೋಗಿ ಮುಳುಗಿ ಮೀಯುತ್ತಾರೆ. ಹಿರಿಯ (ಹಿರಿಮಗ) ಮಾನ್ಯವನ್ನು (ತುಂಬ ಶುದ್ಧವಾದ ಜಾಗದಲ್ಲಿ ತೆಗೆದಿರಿಸಿದ್ದನ್ನು) ತೆಗೆದು ಸೊಂಟಕ್ಕೆ ಕಟ್ಟಿಕೊಂಡು ಕೊಳಕ್ಕೆ ಹೋಗುತ್ತಾನೆ. ಸೂತಕ ಇರುವವರು ಮಾತ್ರ ಹೀಗೆ ಸ್ನಾನಕ್ಕೆ ತೆರಳುತ್ತಾರೆ. ಸ್ನಾನ ಮಾಡಿ ಮರಳಿ ಬಂದು ಅಕ್ಕಿ, ಹೂ, ನೀರುಗಳಿಂದ ಕ್ರಿಯೆಯನ್ನು ನಡೆಸಿ ಇಡೀ ಬಾಳೆಯೆಲೆಯಲ್ಲಿ ಬೆಳ್ತಿಗೆ ಅಕ್ಕಿ ಹಾಕಿ ನೆನೆಸಿ ಬಲಿಕಾಗೆಗಳನ್ನು ಕೈತಟ್ಟಿ ಕರೆಯುತ್ತಾನೆ. ಒದ್ದೆ ಮಾಡಿಕೊಂಡ ಕೈಗಳನ್ನು ತಟ್ಟುತ್ತಾನೆ. ಆಗ ಕಾಗೆಗಳು ಈ ಶಬ್ದ ಕೇಳಿ ಅಕ್ಕಿ ತಿನ್ನಲು ಬರುತ್ತವೆ. ಕಾಗೆ ಬರುವವರೆಗೂ ಕೈ ತಟ್ಟುತ್ತಾರೆ. ಕಾಗೆಗಳು ಅಕ್ಕಿಯನ್ನು ತಿಂದಾಗ ಸತ್ತ ವ್ಯಕ್ತಿಯು ಊಟ ಮಾಡಿದ/ಳು ಎಂದೂ ಸಂಕಲ್ಪಿಸಲಾಗುತ್ತದೆ. ಅದರ ಬಳಿಕ ಎಲ್ಲರೂ ಕಾಫಿ ಮತ್ತು ಯಾವುದಾದರೂ ತಿಂಡಿಯನ್ನೇ ಇಲ್ಲವೇ ಗಂಜಿಯನ್ನೋ ಮತ್ತು ಚಟ್ನಿಯನ್ನು ಉಣ್ಣುತ್ತಾರೆ.

ಬಲಿಕರ್ಮವು ಕಳೆದು ಒಂಬತ್ತು ದಿನಗಳು ಕಳೆದರೆ ಹತ್ತನೆಯ ದಿನ ಸೂತಕದ ಭೋಜನ. ಊರಿನ ಎಲ್ಲರಿಗೂ ವಿಷಯವನ್ನು ತಿಳಿಸಿ ಭೂರಿಯಾದ ಔತಣವನ್ನು ಸಿದ್ಧಪಡಿಸುತ್ತಾರೆ. ಇದಕ್ಕೆ ‘ಅಡ್ಡಿಯಂದಿರಂ’ ಎಂದು ಹೆಸರು. ಇದರ ಮೊದಲು ಒಂಬತ್ತನೆಯ ದಿನ ಸೂತಕ ಸಮಾಪ್ತಿಯ ಕಾರ್ಯಕ್ರಮವಿದೆ. ಬೆಳಗ್ಗೆ ಮಿಂದು ಬಂದು ಬಲಿಕರ್ಮಗಳನ್ನು ನಡೆಸುವವರಿಗೆ ಒಣ ಮೀನು (ಮುಳ್ಳನ್, ಮಾದಳ್‌ಗಳು) ಸುಟ್ಟು ಹುಡಿ ಮಾಡಿ ಎಲ್ಲರಿಗೂ ಕೊಟ್ಟು, ಹಿರಿಮಗನ ಕೂದಲು ತೆಗೆಸಿ ಸೂತಕ ಕಳೆಯುತ್ತಾರೆ. ಇದಕ್ಕೆ ‘ಪುಲವಿಡಲ್’ (ಹೊಲೆ ಬಿಡುವುದು) ಎಂದೂ ಹೆಸರಿದೆ. ಹತ್ತನೆಯ ದಿನ ಭೂರಿಭೋಜನ.

ಹತ್ತನೆಯ ದಿನದ ಸೂತಕಾಚರಣೆಯ ಊಟಕ್ಕೆ ವೈಶಿಷ್ಟ್ಯವಿದೆ. ಸತ್ತ ವ್ಯಕ್ತಿಯು ಪ್ರಾಯ ಸಂದವರಾದರೆ ಊಟದಲ್ಲಿ ದೊಡ್ಡ ಹಪ್ಪಳ, ಅಡೆಪಾಯಸ ಕಡ್ಡಾಯವಾಗಿರುತ್ತದೆ. ಅಂತೆಯೇ ‘ಆರನೆಯ ಮಾನ್ಯ’ ಕೊಡುವುದು ಎಂದು ಒಂದು ಕಾರ್ಯಕ್ರಮವಿದೆ. ಅಂದಿನ ದಿನದ ಊಟಕ್ಕೆ ಐದು ಜನ ಬಂಧುಗಳಲ್ಲದ ಜಾತಿಯವರನ್ನು ಕರೆದುಕೊಂಡು ಬರಬೇಕು. ಆ ಯದು ಜನರಲ್ಲದೆ ಇಣಂಙನಿಗೂ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡಬೇಕು. ಈ ಆರನೆಯ ಮಾನ್ಯದಲ್ಲಿ ಆಮಂತ್ರಿತರಾದ ಎಲ್ಲ ಆರು ಜನರಿಗೂ ಸಾದ್ಯಂತ ಪರಿಕರಗಳನ್ನು (ಉಪ್ಪ್‌ತೊಟ್ಟ್‌ಕರ್ಪೂರಂ ಏರೆ (ಮ) = ಉಪ್ಪಿನಿಂದ ತೊಡಗಿ ಕರ್ಪೂರದವರೆಗೆ) ಬಡಿಸಬೇಕು. ಹೊಸಪಂಚೆ, ಎರಡು ದೊಡ್ಡ ನೇಂದ್ರ ಬಾಳೇಹಣ್ಣುಗಳು, ಬೇಯಿಸಿದ ಅಡೆ (ಉಪ್ಪಿಲ್ಲದೆ ಬೇಯಿಸಿದ್ದು), ಹಣ, ತಲೆಗೆ ಹಚ್ಚಿಕೊಳ್ಳಲು ಎಣ್ಣೆ – ಇವನ್ನು ದಕ್ಷಿಣೆಯಾಗಿ ಕೊಡಬೇಕು.

ಆರನೆಯ ಮಾನ್ಯದವರು ಊಟಕ್ಕೆ ಮುನ್ನ ಶುಚಿಯಾಗಿ ಮಿಂದು ಬರಬೇಕು. ಬಳಿಕ ಭೋಜನ. ಊಟ ಮುಗಿದರೆ ಉಳಿದ ಅತಿಥಿಗಳಿಗೆ ಊಟ ಬಡಿಸುತ್ತಾರೆ. ಎಲ್ಲರ ಊಟ ಮುಗಿದರೆ ಆ ಬಳಿಕಿನ ಕಾರ್ಯಕ್ರಮವೆಂದರೆ ಮುಂಡಗೆಯ ಚಾಪೆಯಲ್ಲಿ ಕುಳಿತ ಕೊಂಡ ಮಗಳು, ಹೆಂಡತಿ ಮುಂತಾದವರನ್ನು ಅವರ ಮನೆಗೆ ಕಳುಹಿಸುವುದು. ಮನೆಯ ಬಾಗಿಲು/ಮೆಟ್ಟಿಲ ದಾಟಿಸಬೇಕೆಂಬುದು ಆಚಾರ. ಅಂತೆಯೇ ಇನ್ನೊಂದು ಆಚಾರವೂ ಇದೆ, ಅದು ಇಂದೂ ಜಾರಿಯಲ್ಲಿದೆ – ಮದುವೆಯಾಗಿ ಮನೆ ಇಳಿಸಿ ಕಳುಹಿಸಿಕೊಟ್ಟ ಹೆಣ್ಣು ಮಕ್ಕಳ ಮನೆಗೆ ಒಂದು ಕೊಡದಲ್ಲಿ ಪಾಯಸ, ಒಂದು ಕಟ್ಟು ಹಪ್ಪಳ, ಒಂದು ಗೊನೆ ಬಾಳೆಹಣ್ಣು, ಕಂಚಿನ ಪಾತ್ರೆಗಳು – ಇವನ್ನು ಕೊಡುಗೆಯಾಗಿ ಕೊಡುವುದು. ಔತಣಕ್ಕೆ ಸಂಬಂಧಿಸಿದಂತೆ ತಮ್ಮಿಂದಾದ ಸಹಾಯವನ್ನು ಮಾಡುವುದಕ್ಕಾಗಿ ಬಂಧು ಮಿತ್ರಾದಿಗಳು ಹಲವು ರೀತಿಯ ಜೀನಸು-ತರಕಾರಿಗಳನ್ನು ತಂದು ಕೊಡುತ್ತಾರೆ.

ಸೂತಕದ ಆಚರಣೆಗೆ ಸಂಬಂಧಿಸಿದ ಈಗ ಅನೇಕ ಬದಲಾವಣೆಗಳಾಗಿವೆ. ಸತ್ತ ಮನೆಯಲ್ಲಿ, ಸತ್ತದಿನ ಕ್ರಿಯೆಗಳನ್ನು ಪೂಜಾರಿಗಳು ನಡೆಸುತ್ತಾರೆ. ಅಂತೆಯೇ ನಾಲ್ಕೋ ಐದೋ ದಿನಗಳ ವರೆಗೆ ಮಾತ್ರ ಸೂತಕವನ್ನು ಆಚರಿಸಲಾಗುತ್ತದೆ. ಈಗಲೂ ಸಮೃದ್ಧ ಭೋನವನ್ನು ಏರ್ಪಡಿಸಿ ಜನರನ್ನು ಆಮಂತ್ರಿಸಾಗುತ್ತದೆ. ಏನೇ ಇದ್ದರೂ ಭೋಜನದ ಗುಣಮಟ್ಟವು ಆಯಾ ಜನರ ಆರ್ಥಿಕ ತಾಕತ್ತಿಗೆ ಅನುಸರವಾಗಿದೆ. ಇಣಂಙನ್ ಎಂಬ ಸಂಕಲ್ಪವೇ ಮರೆಯಾಗಿ ಬಿಟ್ಟಿದೆ. ಸುಡುಗಾಡು, ಮರಣಾನಂತರ ಕರ್ಮಗಳು- ಎಲ್ಲ ಕಾಣೆಯಾಗಿವೆ. ಈಗ ಯಾಂತ್ರೀಕೃತ ಶವಾಗಾರದಲ್ಲಿ ಶವಸಂಸ್ಕಾರ ನಡೆಯುತ್ತದೆ.

ಕೆ.ಯು.ಎಚ್. ಅನುವಾದ ಕೆ.ಕೆ.

 

ಪುಲಿಕ್ಕಳಿ ಕೇರಳದ ತ್ರಿಶೂರ್ ನಗರದಲ್ಲೂ ಪರಿಸರ ಪ್ರದೇಶಗಳಲ್ಲೂ ಹೆಚ್ಚು ಜೀವಂತವಾಗಿರುವ ಜನಪದ ಕಲೆ ಎಂದರೆ ಹುಲಿ ಕುಣಿತ. ಹುಲಿ ಕುಣಿತದ ಸಂದರ್ಭದ ಪ್ರಾಧಾನ್ಯ ಮತ್ತು ಕಲೆಯ ನಯನ ಮನೋಹರತೆಯ ಕಾರಣದಿಂದ ಎಲ್ಲರೂ ಇದನ್ನು ತಿಳಿದಿದ್ದಾರೆ. ಪ್ರವಾಸೋದ್ಯಮ ಬೆಳೆದಿದ್ದರಿಂದ ಕೇರಳಕ್ಕೆ ಹೊರರಾಜ್ಯ, ರಾಷ್ಟ್ರಗಳಿಂದ ಬರುವ ಪ್ರವಾಸಿಗಳು ಹೆಚ್ಚು. ಆದುದರಿಂದ ಎಲ್ಲರೂ ಈ ಕಲೆಯ ಬಗೆಗೆ ತಿಳಿದುಕೊಂಡಿದ್ದಾರೆ.

ಓಣಂ ಹಬ್ಬದ ಸಂದರ್ಭದಲ್ಲಿ ಹುಲಿಕ್ಕಳಿಯ ವಿಶೇಷತೆ ಹೆಚ್ಚುತ್ತದೆ. ಪುರುಷರು ಹುಲಿಯ ವೇಷವನ್ನು ಧರಿಸಿ ಗುಂಪು ಗುಂಪಾಗಿ ಚೆಂಡೆ ವಾದ್ಯಗಳ ಜೊತೆಗೆ ವಿನೋದ ಪೂರ್ಣವಾಗಿ ಕುಣಿಯುತ್ತಾ ಹೆಜ್ಜೆ ಹಾಕುತ್ತಾ ಮುಂದುವರಿಯುವುದು ಇದರ ರೀತಿ. ಹುಲಿಯ ದೇಹದಲ್ಲಿರುವಂತ ಗೆರೆಗಳನ್ನು, ಚುಕ್ಕೆಗಳನ್ನು ದೇಹದ ಮೇಲೆ ಬರೆದುಕೊಳ್ಳುವುದು ಕ್ರಮ. ಹುಲಿಯ ಹಾಗೆಯೇ ಮುಖವಾಡವನ್ನು, ಮುಖವರ್ಣಿಕೆಯನ್ನೂ ಬಳಸುತ್ತಾರೆ. ಒಳ್ಳೆ ದೇಹದಾರ್ಢ್ಯ ಉಳ್ಳವರಿಗೆ ಮಾತ್ರವೇ ಹುಲಿಕುಣಿತಕ್ಕೆ ವೇಷ ಹಾಕಲು ಸಾಧ್ಯ. ಇದರಿಂದಾಗಿ ಚೆನ್ನಾಗಿ ಅಭ್ಯಾಸ ಉಳ್ಳ ಪುರುಷರು ಮಾತ್ರ ಹೆಚ್ಚಾಗಿ ಈ ವೇಷವನ್ನು ಹಾಕಿಕೊಳ್ಳುತ್ತಾರೆ. ಕೈ, ಕಾಲು, ಸೊಂಟ, ಎದೆ, ಹೊಟ್ಟೆ, ತಲೆ ಮೊದಲಾದ ಅವಯವಗಳನ್ನು ತಾಳಕ್ಕೆ ತಕ್ಕಂತೆ ಕುಣಿಸುತ್ತಾ, ಅಂಗಿಕಾಭಿನಯದಿಂದಲೂ, ಭಾವಾಭಿನಯದಿಂದಲೂ ಹುಲಿವೇಷ ನೋಡುಗರನ್ನು ಆಕರ್ಷಿಸಿ ಸಂತೋಷಗೊಳಿಸುತ್ತದೆ. ಪನೆಕೊಡೆಗಳಿಗೆ (ಪನೆಮರದ ಗರಿಗಳಿಂದ ಮಾಡಿದ ಕೊಡೆ) ಅಂಟಿಸಿದ ಬಣ್ಣದ ಕಾಗದಗಳನ್ನು ಕೈಗಳಿಂದ ಎಳೆಯ ಹರಿಯುತ್ತಾ, ಹಲ್ಲುಗಳಿಂದ ಕಡಿಯುತ್ತಾ ವನ್ಯ ಮೃಗಗಳನ್ನು ತಿನ್ನುವಂತೆ ಅಭಿನಯಿಸುವುದು ಇದೆ. ಹಿಂದಿನ ಕಾಲದಲ್ಲಿ ಜೀವವುಳ್ಳ ಆಡಿನ ಮರಿಗಳನ್ನು ಕಚ್ಚಿ ಮಾಂಸವನ್ನು ತೆಗೆದು ರಕ್ತವನ್ನು ಕುಡಿಯುತ್ತಿದ್ದರಂತೆ. ಪೆಟ್ರೋಲ್, ಸೀಮೆ ಎಣ್ಣೆ ಮೊದಲಾದವುಗಳನ್ನು ಬಾಯಿಗೆ ಸುರಿದು, ಉರಿಯುವ ದೀವಟಿಗೆಗಳನ್ನು ಊದಿ ಬೆಂಕಿಯ ಜ್ವಾಲೆಯನ್ನು ಹೊಮ್ಮಿಸುವುದೂ ಇದೆ. ಹಿಂದಿನ ಕಾಲದಲ್ಲಿ ನಾಲ್ಕು ಜನ ಸೇರಿ ಮಾಡಿದ ಬಿದಿರಿನ ಅಟ್ಟಳಿಗೆ (ತಟ್ಟು)ಯ ಮೇಲೆ ಹುಲಿ ಕುಣಿತ ನಡೆಸುತ್ತಿದ್ದರು, ಅನಂತರ ಕೈಗಾಡಿ, ಲಾರಿ ಮೊದಲಾದ ವಾಹನಗಳನ್ನು ಏರಿ ನಾಡು, ನಗರವನ್ನು ಸುತ್ತುವ ಪದ್ಧತಿ ಬಂತು. ಜನರು ಗುಂಪುಗೂಡಿ ಘೋಷಣೆ ಕೂಗುತ್ತಾ ಘೋಷ ಯಾತ್ರೆಯಂತೆ ವಿಜೃಂಭಣೆಯಿಂದ ಹೋಗುವ ರೀತಿಯಲ್ಲಿ ಇಂದು ಹುಲಿ ಕುಣಿತ ನಡೆಯುತ್ತದೆ. ಒಂದು ಪ್ರದೇಶದಲ್ಲಿ ಮತ್ತು ಅದರ ಪ್ರಧಾನ ದಾರಿಗಳಲ್ಲಿ ಮಾತ್ರವೇ ಹುಲಿ ವೇಷ ಕುಣಿಯುತ್ತಾ ಹೋಗುವುದು. ಈ ವೇಷಗಳ ಮುಂಭಾಗದಲ್ಲಿ ಓಣಂ ಬಿಲ್ಲು ಹಿಡಿದುಕೊಂಡು ಒಬ್ಬ ಹಾಸ್ಯಗಾರ ನಿರುತ್ತಾನೆ (ಬೇಟೆಗಾರ). ಸುತ್ತಮುತ್ತ ಸೇರಿದ ಜನರು ಕೇಕೆ ಹಾಕಿ, ಸೀಟಿ ಹೊಡೆದು, ಚಪ್ಪಾಳೆ ತಟ್ಟಿ ಹುಲಿ ವೇಷದ ಜೊತೆಗೆ ತಾವೂ ಹೆಜ್ಜೆಹಾಕಿ ಕುಣಿದು ವೇಷಗಾರರಿಗೆ ಪ್ರೋತ್ಸಾಹ ನೀಡುತ್ತಾರೆ. ಆಗ ಹುಲಿ ವೇಷ ಹಾಕಿದವರು ಗುಂಪನ್ನು ಬಿಟ್ಟು ಜನಸಮೂಹದ ಒಳಗೋಡಿ ಕೂಗಾಡುತ್ತಾ ಅಂಗಾಂಗಗಳನ್ನು ತಿರುಗಿಸುತ್ತಾ, ದೇಹವನ್ನು ಒಳುರೆಸುತ್ತಾ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುತ್ತಾರೆ. ತಿರುವಂಬಾಡಿ, ಪರಮೇಕಾವು, ಪಟ್ಟಾಳಂ, ಶಂಕರಯ್ಯ ರೋಡ್, ಚಿರೈಕಲ್, ಕಿಯಕ್ಕೇಕೋಟ್ಟ, ಪಡಿಞರೆಕೋಟ್ಟ ಮೊದಲಾದ ಪ್ರದೇಶಗಳಿಂದ ಹುಲಿ ಕುಣಿತದ ಗುಂಪುಗಳು ತ್ರಿಶೂರಿನ ಸ್ವರಾಜ್ ಮೈದಾನದಲ್ಲಿ ಸಾಯಂಕಾಲ ಪ್ರದರ್ಶನಕ್ಕಾಗಿ ಒಟ್ಟು ಸೇರುತ್ತವೆ. ಪ್ರದರ್ಶನ ಪ್ರಾರಂಭಿಸುವ ಮೊದಲ ಗಣಪತಿಗೆ ತೆಂಗಿನಕಾಯಿ ಒಡೆಯುತ್ತಾರೆ. ತ್ರಿಶೂರ್ ನಗರದ ವಿವಿಧ ಬೀದಿಗಳಲ್ಲಿ ಉತ್ಸಾಹದಿಂದ ಕೂಗುತ್ತಾ, ಕುಣಿಯುತ್ತಾ ಹೋಗುವ ಹುಲಿ ಕುಣಿತದ ಸಂಘಗಳಿವೆ. ಇದು ಕೇರಳದ ಓಣಂ ಹಬ್ಬದ ಆಕರ್ಷಣೀಯವಾದ ಒಂದು ನೋಟ ಮಾತ್ರವಲ್ಲದೆ ಹೆಚ್ಚು ವ್ಯವಸ್ಥಿತವಾಗಿ ನಡೆಯುವ, ಅತೀ ಹೆಚ್ಚು ಹಣ ವೆಚ್ಚಗೊಳ್ಳುವ ಕಲಾರೂಪವೂ ಇದೆ.

ಓಣಂನ ನಾಲ್ಕನೇ ದಿನ ಹುಲಿವೇಷಗಳು ಹಳ್ಳಿಗಳಲ್ಲೂ ನಗರಗಳಲ್ಲೂ ಬರುತ್ತದೆ. ಬೆಳಗ್ಗೆ ಕುಣಿಯಲು ಬರುವ ವೇಷಗಾರರು ಹಿಂದಿನ ದಿನ ರಾತ್ರಿಯೂ, ಸಾಯಂಕಾಲ ಕುಣಿಯಲು ಬರುವವರು ಅದೇ ದಿನ ಬೆಳಗ್ಗೆಯೂ ವೇಷ ಹಾಕಿಕೊಳ್ಳುತ್ತಾರೆ. ವೇಷಗಾರರು ತಲೆಗೂದಲನ್ನು ಬಿಟ್ಟು ದೇಹದ ಉಳಿದ ಭಾಗಗಳ ಕೂದಲನ್ನು ತೆಗೆಯಬೇಕು. ವೇಷ ಹಾಕುವಾಗ ಕೈ, ಕಾಲುಗಳನ್ನು ಹತ್ತಿರ ಇಟ್ಟು ನಿಲ್ಲಬೇಕು. ಆಗ ಚಿತ್ರಗಾರನು ಬಿಳಿ ಬಣ್ಣವನ್ನು ಮೊದಲಿಗೆ ಮೈ ಮೇಲೆ ಹಚ್ಚುತ್ತಾನೆ. ಅದು ಒಣಗಿದ ನಂತರ ಹುಲಿಗಳ ಮೈ ಮೇಲಿರುವಂತೆ ರೂಪು ರೇಖೆಗಳನ್ನು ಬಿಡಿಸುತ್ತಾನೆ. ಚುಕ್ಕೆ ಹುಲಿ, ಪಟ್ಟೆ ಹುಲಿಯ ವೇಷವನ್ನು ಸುಂದರವಾಗಿ ಬರೆಯುವ ಒಳ್ಳೆ ನುರಿತ ಚಿತ್ರಗಾರರು ತ್ರಿಶೂರಿನಲ್ಲಿದ್ದಾರೆ. ಹಿಂದಿನ ಕಾಲದಲ್ಲಿ ಪ್ರಾಕೃತಿಕ ಬಣ್ಣಗಳನ್ನು ಬಳಸುತ್ತಿದ್ದರಾದರೂ ಇಂದು ಇನಾಮಲ್ ಮೊದಲಾದ ಪೆಯಿಂಟ್‌ಗಳನ್ನು ಉಪಯೋಗಿಸುವುದಿದೆ. ತಲೆಗೆ ಬಟ್ಟೆಯ ಟೋಪಿ, ದೇಹಕ್ಕೆ ಹಚ್ಚಿದ ಬಣ್ಣಕ್ಕೆ ಹೊಂದುವ ಚಡ್ಡಿ ಇದೇ ಇವರು ಧರಿಸುವ ಉಡುಪು. ಶರೀರದಲ್ಲಿ ಬರೆದ ಚಿತ್ರಗಳನ್ನೇ ಬಟ್ಟೆಯಲ್ಲೂ ಬರೆಯುತ್ತಾರೆ. ಹುಲಿ ಕುಣಿತ ನಡೆದ ನಂತರ ಟರ್‌ಪೆಂಟೈನ್ ಬಳಸಿ ವೇಷವನ್ನು ತೆಗೆಯಲಾಗುತ್ತದೆ. ಚಿತ್ರ ಬರೆದ ಚಿತ್ರಗಾರನಿಗೆ ವೇಷಗಾರರು ದಕ್ಷಿಣೆಯನ್ನು ಕೊಡುತ್ತಾರೆ.

ಸಾಂಪ್ರದಾಯಿಕವಾಗಿ ಚೆಂಡೆ ಹೊಡೆಯುವುದನ್ನು ಕಂಡು, ಕೇಳಿ ಅದನ್ನು ಕಲಿತವರೇ ಹುಲಿಕುಣಿತಕ್ಕೆ ಚೆಂಡೆ ಹೊಡೆಯುವವರು. ಹುಲಿಕುಣಿತದ ಒಂದು ಗುಂಪಿನಲ್ಲಿ ಕಡಿಮೆ ಪಕ್ಷ ಒಬ್ಬ ಅನುಭವಸ್ತ ಹಳಬನೂ, ಒಬ್ಬ ಹೊಸಬನೂ ಚೆಂಡೆ ಹೊಡೆಯುತ್ತಾರೆ. ಚೆಂಡೆ ಹೊಡೆಯುವವರ ಸಂಖ್ಯೆ ಹೆಚ್ಚಿದಷ್ಟು ಪ್ರದರ್ಶನದ ಶಕ್ತಿ ಹೆಚ್ಚುತ್ತದೆ. ಕೀಳುಜಾತಿಯವರೇ ಹೆಚ್ಚಾಗಿ ಚೆಂಡೆ ಬಾರಿಸುವವರಾಗಿರುತ್ತಾರೆ.

ಮಾನವರಿಗೆ, ವನ್ಯ ಮೃಗಗಳಿಗೂ ನಡೆಯುವ ಹೋರಾಟ ಮತ್ತು ಬೇಟೆಯನ್ನು ಕಲಾರೂಪವೇ ಹುಲಿಕುಣಿತ. ಕಾಡುಹುಲಿಗಳ ಚಲನವಲನಗಳನ್ನಾಗಿ, ರೋಷಾವೇಶಗಳನ್ನೂ ಇದರಲ್ಲಿ ವ್ಯಕ್ತಪಡಿಸುವುದಿದೆ. ಹುಲಿವೇಷದವರ ಜೊತೆಗೆ ಕೋವಿ ಹಿಡಿದವರು ಇರುತ್ತಾರೆ. ಇದು ಬೇಟೆಯನ್ನು ನೆನಪಿಸುತ್ತದೆ. ಎಲ್ಲಾ ಜಾತಿಯ, ಮತದ ಜನರು ಹುಲಿಕುಣಿತದಲ್ಲಿ ಭಾಗವಹಿಸುವುದಿದೆ. ಮೊಹರಂ ಸಂದರ್ಭದಲ್ಲಿ “ಮುಹರಂ ಟೈಗರ್” ಎಂಬ ಹೆಸರಿನಲ್ಲಿ ಹುಲಿಯ ರೂಪವನ್ನು ದೇಹದಲ್ಲಿ ಬರೆದು ಕುಣಿಯುವ ಪದ್ಧತಿ ಹಿಂದಿನ ಕಾಲದಲ್ಲಿ ಮುಸಲ್ಮಾನರಲ್ಲೂ ಇತ್ತು.

ಕೆ.ಎಂ.ಬಿ. ಅನುವಾದ ಕೆ.ಕೆ.ಎಸ್.

 

ಪುಲಿಜೂದಂ ಪ್ರಾಚೀನ ಕಾಲದಿಂದಲೂ ಆಂಧ್ರದಲ್ಲಿ ಜನಪ್ರಿಯವಾಗಿರುವ ಜನಪದ ಕ್ರೀಡೆಗಳಲ್ಲಿ ಒಂದು. ಇದನ್ನೇ ವುಲಿಮೇಕ (ಹುಲಿಮೇಕೆ) ಎಂದು ಕೂಡ ಹೇಳುತ್ತಾರೆ. ಹಳ್ಳಿಗಳಲ್ಲಿ ಜಗುಲಿಯ ಮೇಲೆ ಕುಳಿತು ಪುಲಿಜೂದಂ (ಹುಲಿಜೂಜು) ಆಡುವುದನ್ನು ಈಗಲೂ ನೋಡಬಹುದು. ಇದು ಸುಮಾರು ನಾನೂರು ಐನೂರು ವರ್ಷಗಳಿಂದಲೂ ಇದ್ದಂತೆ ಕಾಣುತ್ತದೆ. ಊರ ಹೊರಗಿನ ದೇವಸ್ಥಾನಗಳಲ್ಲಿ ಅರಳಿಕಟ್ಟೆಗಳ ಮೇಲೆ ಮನೆಯ ಜಗುಲಿಯ ಮೇಲೆ ಇದನ್ನು ಆಡಲು ತ್ರಿಕೋನಾಕಾರದ ರೇಖಾಚಿತ್ರವನ್ನು ಹಾಕಿ ಸಿದ್ಧವಾಗಿಟ್ಟುಕೊಳ್ಳುವ ಅಭ್ಯಾಸವಿದೆ. ಇದರಲ್ಲಿ ಮೂರು ತರಹದ ಜೂಜುಗಳು ಇರುವುದಾಗಿ ಹೇಳಲಾಗಿದೆ. ಇದನ್ನು ಒಂದು ಹುಲಿ ಮೂರು ಮೇಕೆಗಳಿಂದ ಇಬ್ಬರು ಆಡುತ್ತಾರೆ. ಹುಲಿಗೆ ಸ್ವಲ್ಪ ದೊಡ್ಡದಾದ ಗುಂಡನೆಯ ಕಲ್ಲು, ಮೇಕೆಗಳಿಗೆ ಚಿಕ್ಕ ಕಲ್ಲುಗಳನ್ನು ಬಳಸುತ್ತಾರೆ. ಮೂರು ಮೇಕೆಗಳಿಂದ ಹುಲಿಯನ್ನು ಕದಲದಂತೆ ಮಾಡಿದರೆ ಮೇಕೆಗಳು ಗೆದ್ದ ಹಾಗೆ. ಹುಲಿ ಮೇಕೆಗಳಲ್ಲಿ ಒಂದನ್ನು ಸಾಯಿಸಿದರೂ ಹುಲಿಗೆದ್ದ ಹಾಗೆ. ಎರಡನೆಯ ತರಹದ ಆಟದಲ್ಲಿ ನಾಲ್ಕು ಹುಲಿಗಳು ಹದಿನಾರು ಮೇಕೆಗಳು ಇರುತ್ತವೆ. ಮೂರನೆಯ ತರಹದ ಆಟದಲ್ಲಿ ಮೂರು ಹುಲಿಗಳು ಹದಿನೈದು ಮೇಕೆಗಳು ಇರುತ್ತವೆ.

20_70A_DBJK-KUH

ಪುಲಿಜೂದಂ ಆಟದ ಬಗ್ಗೆ ಪ್ರಾಚೀನ ತೆಲುಗು ಸಾಹಿತ್ಯದಲ್ಲೂ ಉಲ್ಲೇಖಗಳಿವೆ. ಈ ರೀತಿಯ ಆಟಗಳು ತಮಿಳುನಾಡು, ಕರ್ನಾಟಕ, ಅಸ್ಸಾಂ, ಬಂಗಾಳ ಮುಂತಾದ ಪ್ರದೇಶಗಳಲ್ಲೂ ಕಂಡುಬರುತ್ತವೆ. ಈ ಆಟದಲ್ಲಿ ವಿನೋಧದ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಮತ್ತು ಬುದ್ಧಿ ಕೌಶಲ್ಯ ಕಂಡುಬರುತ್ತದೆ.

ವಿ.ಎಸ್. ಅನುವಾದ ಎ.ಎಂ.ಡಿ.

 

ಪುಲಿ-ಮೇಕ ಆಟ ತೆಲುಗರ ಜನಪ್ರಿಯ ಆಟ (ಹುಲಿ ಮೇಕೆ ಆಟ). ಕಷ್ಟ ಸುಖ ತಿಳಿಯದವರೂ ಆನಂದವನ್ನು ಕೊಡುವ ಆಶಾದೀಪಗಳು ಮಕ್ಕಳು. ಅವರ ಎಲ್ಲ ಚಲನವಲನಗಳಲ್ಲೂ ಆಟ ಕಂಡುಬರುತ್ತದೆ. ಊಟ ಮಾಡುವಾಗ, ಸ್ನಾನ ಮಾಡುವಾಗ, ನಡೆಯುವಾಗ, ಕೈಯೋ ಕಾಲೋ ಯಾವುದೋ ಒಂದು ಲಯಕ್ಕನುಗುಣವಾಗಿ ಚಲನೆಯನ್ನು ಹೊಂದಿರುತ್ತದೆ. ಅದರ ಬಗ್ಗೆ ಸ್ವಲ್ಪ ಪರಿಶೀಲಿಸಿ ನೋಡಿದರೆ ಎಷ್ಟೋ ವಿಷಯಗಳು ತಿಳಿದುಬರುತ್ತದೆ.

ಮಕ್ಕಳದು ತುಂಟ ಮನಸ್ಸು. ಸದಾ ಆಡುವುದೇ ಮಕ್ಕಳಿಗೆ ಇಷ್ಟ. ಇವುಗಳಲ್ಲಿ ಗಂಡು ಮಕ್ಕಳು, ಹೆಣ್ಣು ಮಕ್ಕಳು ಬೇರೆ ಬೇರೆಯಾಗಿ ಆಡುವ ಆಟಗಳಿವೆ. ಇಬ್ಬರೂ ಕಲೆತು ಆಡುವ ಆಟಗಳಲ್ಲಿ ಹುಲಿ-ಮೇಕೆ ಆಟವೂ ಒಂದು.

ಎಲ್ಲ ಆಟಗಳೂ ಸಮಾಜದಲ್ಲಿರುವ ಯಾವುದೋ ಒಂದು ವಿಷಯವನ್ನು ಅನುಕರಿಸಿಯೇ ಇರುತ್ತವೆ. ಹುಲಿ ಮೇಕೆ ಆಟದಲ್ಲಿ ಕುರಿ, ಮೇಕೆ ಮೊದಲಾದ ಪ್ರಾಣಿಗಳನ್ನು ಅವುಗಳನ್ನು ಕಾಯುವವರಿಗೆ ಅದರಲ್ಲಿ ಉಂಟಾಗುವ ತೊಂದರೆಗಳನ್ನು ಅವರ ಪ್ರವರ್ತನೆಯ ಪದ್ಧತಿಗಳನ್ನು ಅನುಕರಿಸುವುದು ನಡೆಯುತ್ತದೆ. ಈ ಆಟದಲ್ಲಿ ೧೦ ರಿಂದ ೧೮ ಮಕ್ಕಳು ಪಾಲ್ಗೊಳ್ಳಬಹುದು. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಸಂಭ್ರಮದಿಂದ ಇರುತ್ತದೆ. ಹೆಚ್ಚಿನ ಸಮಯ ಆಡಬಹುದು. ಪಾಲ್ಗೊಂಡ ಸದಸ್ಯರ ಸಂಖ್ಯೆಯನ್ನು ಅನುಸರಿಸಿ ಧ್ವನಿ ಪರಿಣಾಮವಿರುತ್ತದೆ.

ಒಬ್ಬರು ಹುಲಿಯಾಗಿ, ಮತ್ತೊಬ್ಬರು ಮೇಕೆ ಮೇಯಿಸುವವರಾಗಿ, ಇಬ್ಬರು ನಾಯಿಗಳಾಗಿ ಇರುತ್ತಾರೆ. ಉಳಿದವರು ಮೇಕೆಗಳಂತೆ ಇರುತ್ತಾರೆ. ಮೊದಲು ಮೇಕೆಯನ್ನು ಕಾಯುವವ, ಅನಂತರ ಕ್ರಮವಾಗಿ ಒಬ್ಬರ ಅನಂತರ ಮತ್ತೊಬ್ಬರಂತೆ ಮುಂದಿನವರ ಭುಜಗಳನ್ನು ಹಿಡಿದುಕೊಂಡು ಮೇಕೆಗಳಂತೆ ನಿಂತುಕೊಳ್ಳುತ್ತಾರೆ. ನಾಯಿಗಳು ಮೇಕೆಗಳನ್ನು ಕಾಯಲು ಇಬ್ಬದಿಯಲ್ಲೂ ನಿಂತಿರುತ್ತವೆ. ಮೇಕೆಗಳನ್ನು ಕಾಯುವವನಿಗೆ ಅಭಿಮುಖವಾಗಿ ನಿಂತಿರುತ್ತದೆ.

ಹುಲಿಯ ಮಾತಿನಿಂದ ಆಟ ಆರಂಭವಾಗುತ್ತದೆ. ಹಾಡು ಸಂವಾದ ರೂಪದಲ್ಲಿ ಇರುತ್ತದೆ. ಒಂದು ಮಾತನ್ನು ಹುಲಿ ಎರಡನೇ ಮಾತನ್ನು ಮೇಕೆ ಕಾಯುವವ + ನಾಯಿಗಳು ಕಲೆತು ಮಾತನಾಡುವುದರಿಂದ ಸ್ವಲ್ಪ ಸಂಭ್ರಮ ಉಕ್ಕುತ್ತದೆ. ಸ್ವಲ್ಪ ಪಕ್ಕಕ್ಕೆ ಸರಿದು ಇಂತಹ ಮೇಕೆಯನ್ನು ತೆಗೆದುಕೊಂಡು ಹೋಗುವೆನೆಂದು ಹುಲಿ ಪ್ರಕಟಿಸಿದಾಗ ಮೇಕೆ, ಮೇಕೆ ಕಾಯುವವ ಮೇಕೆಗಳನ್ನು ರಕ್ಷಿಸುತ್ತಾ ಹುಲಿ ಪ್ರಶ್ನಿಸಿದ ಮೇಕೆಯ ಅಸ್ತಿತ್ವದ ಮೇಲೆ ಸಂಬಂಧವನ್ನು ಪ್ರಶ್ನಿಸುತ್ತಿರುತ್ತಾನೆ. ಹುಲಿಗೆ ಎದುರಾಗಿ ತಿರುಗುತ್ತಿರುತ್ತಾನೆ. ಮೇಕೆ ಕಾಯುವವನನ್ನು ಅನುಸರಿಸಿ ಮೇಕೆಗಳು ಸದಾ ಹುಲಿಗೆ ಕಾಣಿಸದೆ ತಿರುಗುತ್ತಾ ಮೇಕೆ ಕಾಯುವವನೊಂದಿಗೆ ಕಲೆತು ಹುಲಿಯನ್ನು ಪ್ರಶ್ನಿಸುತ್ತಲಿರುತ್ತಾನೆ. ಆ ಆಟದಲ್ಲಿ ಕಾಡು ಹೀಗಿರುತ್ತದೆ.

ಹುಲಿ : ಅದೋ ಅದೋ ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನಿನ್ನ ಮೇಕೆ

ಹುಲಿ : ಕೆಂಪು ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಕುಳ್ಳ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಪುಟ್ಟ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಅದೋ ಅದೋ ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನನ್ನ ಮೇಕೆ.

ಹುಲಿ : ಬಿಳಿಯ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಅವಳಿ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಮಚ್ಚೆ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಅದೋ ಅದೋ ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನಿನ್ನ ಮೇಕೆ

ಹುಲಿ : ಬೋಳು ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಗರ್ಭವತಿ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಹಡೆದ ಮೇಕೆ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಅದೋ ಅದೋ ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನನ್ನ ಮೇಕೆ?

ಹುಲಿ : ಬಂಜೆ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ದಡ್ಡ ಮೇಕೆ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಕೆಂಪು ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಅದೋ ಅದೋ ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನಿನ್ನ ಮೇಕೆ

ಹುಲಿ : ಪಟ್ಟೆ ಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಕರಿಯಮೇಕೆಯ ಕರೆದೊಯ್ದರೆ

ಎಲ್ಲರೂ : ಯಾರಪ್ಪನಾಸ್ತಿ?

ಹುಲಿ : ಅದೋ ಅದೋ ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನಿನ್ನ ಮೇಕೆ?

ಹುಲಿ : ಅಲ್ಲಿಹುದು ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನಿನ್ನ ಮೇಕೆ?

ಹುಲಿ : ಇಲ್ಲಿಹುದು ನನ್ನ ಮೇಕೆ

ಎಲ್ಲರೂ : ಎಲ್ಲೆಲ್ಲಿ ನಿನ್ನ ಮೇಕೆ?

ಹುಲಿ : ಇಲ್ಲಿದೆಯೇ ನನ್ನ ಮೇಕೆ?

ಎಲ್ಲರೂ : ಎಲ್ಲೆಲ್ಲಿ ನಿನ್ನ ಮೇಕೆ?

ಕೊನೆಗೆ ಹುಲಿ ಬೇಗ ಬೇಗ – ಎಂದು ಅತ್ತ ಇತ್ತ ತೋರುತ್ತಾ ಹಾಡುತ್ತಿರುತ್ತದೆ. ಇಷ್ಟರಲ್ಲಿ ಮೇಕೆಯನ್ನು ಕಾಯುವವ ಸಿಗರೇಟು ಸೇದುವ ನೆಪದಲ್ಲಿ ಪಕ್ಕಕ್ಕೆ ಬಂದು ಸಿಗರೇಟು ಸೇದುವಂತೆ ನಟಿಸುತ್ತಿರುತ್ತಾನೆ. ಆಗ ಹುಲಿ “ಅದೋ ಅದೋ ನನ್ನ ಮೇಕೆ” ಎಂದು ಒಂದು ಮೇಕೆಯನ್ನು ಹಿಡಿದುಕೊಂಡು ಓಡಿಹೋಗುತ್ತದೆ. ಆಗಮೇಕೆ ಮೇಯಿಸುವವ, ನಾಯಿ, ಮೇಕೆಗಳು ಕಲೆತು ಹುಲಿಯ ಹಿಂದೆ ಬೀಳುತ್ತವೆ. ಹುಲಿ ಬೇಗ ಬೇಗ ಓಡಿ ಕಾಣಿಸದೇ ಹೋಗುತ್ತದೆ. ಸ್ವಲ್ಪ ಹೊತ್ತಿನ ಬಳಿಕ ಹುಲಿ ಮತ್ತೆ ಬರುತ್ತದೆ. (ಹುಲಿ ಮೇಕೆಯನ್ನು ತಿಂದಂತೆ ಭಾವಿಸಬೇಕು. ಹುಲಿ ಮತ್ತೆ ಆಟವಾಡಿ ಮತ್ತೊಂದು ಮೇಕೆಯನ್ನು ಹಿಡಿದು ಬಿಡುತ್ತದೆ. ಹೀಗೆ ಪ್ರತಿಬಾರಿ ಬರುವುದು ಒಂದು ಮೇಎಯನ್ನು ಹಿಡಿದು ಹೋಗುವುದು – ಕೊನೆಗೆ ಎಲ್ಲವನ್ನೂ ತೆಗೆದುಕೊಂಡು ಹೋಗುವುದು – ಹೀಗೆ ಕೊನೆಗೇ ಎಲ್ಲವನ್ನೂ ತೆಗೆದುಕೊಂಡು ಹೋಗುವವರೆಗೆ ಆಟವಾಡುತ್ತದೆ, ಆಟ ಮುಗಿಯುತ್ತದೆ. ಮಕ್ಕಳ ಧ್ವನಿ, ಚಲನವಲನಗಳು ಪ್ರಾರಂಭದಲ್ಲಿ ಸಾಮಾನ್ಯವಾಗಿ ಇದ್ದು ಹಾಡು-ಆಟ ಹೆಚ್ಚುತ್ತಿರುವಂತೆ ಕ್ರಮವಾಗಿ ಅವು ಹೆಚ್ಚುತ್ತಾ ಕೊನೆಗೆ ಉಚ್ಚಸ್ಥಾಯಿಯನ್ನು ಸೇರುತ್ತದೆ.

ಈ ಹಾಡಿನಲ್ಲಿ ಮೇಕೆಗಳಿಗೆ ಇರುವ ಹೆಸರನ್ನು ಪರಿಶೀಲಿಸಿದರೆ ಬಣ್ಣವನ್ನು ದೇಹ ಸ್ಥಿತಿಯನ್ನು ಅನುಸರಿಸಿ ಅವುಗಳ ಹೆಸರು ಇವೆ. ಕೆಂಪು ಮೇಕೆ, ಬಿಳಿಮೇಕೆ, ಕಪ್ಪು ಮೇಕೆ, ಕೆಂಪುಮೇಕೆ, ಮಚ್ಚೆಮೇಕೆ, ಸಣ್ಣಮೇಕೆ, ಪಟ್ಟೆಮೇಕೆ ಇವು ಬಣ್ಣಗಳನ್ನು ತಿಳಿಸಿದರೆ, ಕುಳ್ಳಮೇಕೆ, ಬಡಕಲು ಮೇಕೆ, ದೊಡ್ಡ ಮೇಕೆ ಎನ್ನುವ ಹೆಸರು ಅವುಗಳ ದೇಹ ಪರಿಣಾಮವನ್ನು ತಿಳಿಸುತ್ತವೆ. ಇಲ್ಲಿ ಅವಳಿ ಎಂಬ ಶಬ್ದ ಎರಡು ಮಕ್ಕಳು ಒಟ್ಟಿಗೇ ಹುಟ್ಟಿದ ಮಕ್ಕಳಿಗೆ ಸೂಚಕವಾಗಿದೆ. ಅವಳಿ ಮೇಕೆ, ಅವಳಿ ಮಕ್ಕಳು ಎಂದು ಉದಾಹರಿಸಬೇಕು ಬಂಜೆ ಮೇಕೆ ಮಕ್ಕಳನ್ನು ಒಂದು ಮರಿಯನ್ನೂ ಹಡೆಯದ ಮೇಕೆ, ಗರ್ಭವತಿ ಮೇಕೆ, ಹಡೆದ ಮೇಕೆ ಎಂದರೆ ಹಡೆದ ನಂತರ ಸ್ವಲ್ಪ ಕಾಲದಲ್ಲಿ ಮಗುವೇ ಇಲ್ಲದೆ ಹಾಲು ನೀಡುವ ಮೇಕೆ, ಇಂತಹ ಸ್ಥಿತಿಗತಿಗಳು ಪೂರ್ತಿಯಾಗಿ ತಿಳಿಸುತ್ತದೆ ಈ ಆಟ.

ಬಿ.ವಿ. ಅನುವಾದ ಎಸ್.ಎಲ್.ಡಿ.