ಗಂಜೀಫ  ಇಸ್ಪೀಟು ಆಟದ ಸಾಂಪ್ರದಾಯಿಕ ರೂಪ. ಇದನ್ನು ದೇವರಾಟ, ವಿವಿಧ ಆಕಾರಗಳ ಚಿತ್ರಕಟ್ಟು, ಕ್ರೀಡಾಪತ್ರ ಮುಂತಾದ ಹೆಸರುಗಳಿಂದ ಕರೆಯುವುದಿದೆ. ಗಂಜೀಫ ಆಟವನ್ನು ರಾಜಮಹಾರಾಜರು ಮನೋರಂಜನೆಗಾಗಿ ಆಡುತ್ತಿದ್ದರೆಂದು ತಿಳಿದು ಬಂದರೂ ಗಣ್ಯಮನೆತನದವರು ಈ ಆಟದಿಂದ ದೂರ ಉಳಿದಿರಲಿಲ್ಲ. ಮನೋರಂಜನೆಯ ಸಾಧನವಾದ ಗಂಜೀಫ ಆಟ ಭಾರತಕ್ಕೆ ಸೀಮಿತವಾಗಿದೆ, ಯೂರೋಪ್, ಅಮೆರಿಕ, ಕೆನಡ, ಚೀನ ಮುಂತಾದ ದೇಶಗಳಲ್ಲೂ ಇದ್ದುದರ ಬಗ್ಗೆ ಉಲ್ಲೇಖಗಳಿವೆ. ಭಾರತದಲ್ಲಿ ಕ್ರಿ.ಶ. ೮ನೆಯ ಶತಮಾನದಲ್ಲಿ ಈ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದರು. ಅದರಲ್ಲೂ ಮುಮ್ಮಡಿ ಕೃಷ್ಣರಾಜ ಒಡೆಯರು ಗಂಜೀಫ ಕಲೆಯಲ್ಲಿ ನಿಪುಣರಾಗಿದ್ದರು. ಇವರ ಬೃಹತ್ ಕೊಡುಗೆಯೆನಿಸಿದ ‘ಶ್ರೀ ತತ್ವನಿಧಿ’ಯಲ್ಲಿ ಗಂಜೀಫ ಆಟದ ಗತ್ತು ಗಮ್ಮತ್ತುಗಳನ್ನು ತಿಳಿಸಲಾಗಿದೆ.

ಗಂಜೀಫ ಎಲೆಗಳನ್ನು ಆಟಕ್ಕನುಸಾರವಾಗಿ ೯೬ ರಿಂದ ೩೬೦ ಎಲೆಗಳವರೆಗೂ ಬಳಸುವುದಿದೆ. ೧೨೦ ಎಲೆಗಳುಳ್ಳ ‘ದಶಾವತಾರ’ ಆಟ ಭಾರತಾದ್ಯಂತ ಪ್ರಚಲಿತದಲ್ಲಿದೆ. ಪ್ರತಿಯೊಂದು ಅವತಾರಕ್ಕೂ ಪ್ರತ್ಯೇಕ ಚಿತ್ರಗಳನ್ನು ಎಲೆಗಳ ಮೇಲೆ ಚಿತ್ರಿಸಲಾಗಿದೆ. ಇಲ್ಲಿಯ ಕಲಾಕೃತಿಗಳು ಅರಸರ – ಅವರ ಪರಿವಾರದವರ ಭಾವಚಿತ್ರಗಳ ಜೊತೆಗೆ ಸಮಕಾಲೀನ ಸಾಮಾಜಿಕ ಸನ್ನಿವೇಶ ಚಿತ್ರಗಳು ಕಾಣಸಿಗುತ್ತವೆ. ಪ್ರತಿ ಗಂಜೀಫ ಎಲೆಯನ್ನು ಸುಂದರವಾಗಿ ಅಚ್ಚುಕಟ್ಟಾಗಿ ಅಂದಗೊಳಿಸಿರುವುದು ವಿಶೇಷ. ಗಂಜೀಫ ಎಲೆಗಳಲ್ಲಿ ದಶಾವತಾರ, ನವಗ್ರಹ, ಮೈಸೂರಿನ ಚಾಮುಂಡಿದೇವಿ ಮುಖ್ಯವಾಗಿ ಕಾಣಸಿಗುತ್ತವೆ. ಹೆಚ್ಚಾಗಿ ಉನ್ನತ ವರ್ಗದ ಜನ ಮನೋರಂಜನೆಗಾಗಿ ಆಡುತ್ತಿದ್ದ ಗಂಜೀಫ ಎಲೆಗಳು ಸುಂದರವಾಗಿರಬೇಕೆಂದು ಬಯಸುತ್ತಿದ್ದ ಕಾರಣಕ್ಕಾಗಿಯೇ ಆ ಗಂಜೀಫಾ ಕಲಾಕೃತಿಗಳ ರಚನೆಯಾಯಿತೆಂದು ಹೇಳಲಾಗಿದೆ.

ಜನಪದ ಬದುಕಿನ ಕಲಾಕೃತಿಗಳನ್ನು ಸಿದ್ದಪಡಿಸುವ ಗಂಜೀಫ ಎಲೆಗಳನ್ನು ಕಾಗದ ಅಥವಾ ರಟ್ಟುಗಳನ್ನು ವೃತ್ತಾಕಾರ, ಚೌಕಾಕಾರ, ಆಯಾತಾಕಾರವಾಗಿ ಕತ್ತರಿಸಿಕೊಂಡು ಅಕ್ಕಿಹಿಟ್ಟಿನಿಂದ ಸಿದ್ಧಪಡಿಸಿದ ಗಂಜಿಯಿಂದ ಒಂದರ ಮೇಲೊಂದು ಅಂಟಿಸಿ ತಮಗೆ ಬೇಕೆನಿಸಿದ ಆಕಾರದಲ್ಲಿ ಎಲೆಗಳನ್ನು ಸಿದ್ಧಪಡಿಸುತ್ತಿದ್ದುದುಂಟು. ಸಾಮಾನ್ಯವಾಗಿ ಈ ಎಲೆಗಳು ಎರಡು ಇಂಚಿನಿಂದ ನಾಲ್ಕು ಇಂಚಿನ ಅಳತೆಯಲ್ಲಿರುತ್ತದೆ. ಇವುಗಳನ್ನು ಚರ್ಮ ಹಾಗೂ ತೆಳ್ಳನೆಯ ಕಟ್ಟಿಗೆಯ ಹಾಳೆಗಳಿಂದಲೂ ಸಿದ್ಧಪಡಿಸುವುದಿದೆ. ಗಂಜೀಫ ಎಲೆಯ ಚಿತ್ರಕಲಾಕೃತಿಗಳು ಹೆಚ್ಚಾಗಿ ಕಿರುವರ್ಣದ ಚಿತ್ರಗಳಾಗಿರುತ್ತವೆ. ಇಲ್ಲಿಯ ಚಿತ್ರರಚನೆಗೆ ಬೇಕಾದ ವರ್ಣದ್ರವ್ಯಗಳನ್ನು ಪ್ರಾದೇಶಿಕವಾಗಿ ದೊರೆಯುವ ವಿವಿಧ ಬಗೆಯ ಹೂಗಳು, ಸಸ್ಯಗಳು, ಹಣ್ಣುಗಳು, ಗಿಡ-ಮರ, ಅಂಟುವಾಳಕಾಯಿರಸ, ದಾಳಿಂಬೆ ಹಣ್ಣಿನ ರಸ, ಹುಣಸೆಬೀಜ, ಅರಿಶಿನ, ಶ್ರೀಗಂಧ, ಎಲೆಗಳು, ತೊಗಟೆಗಳು, ಒಂದೆಡೆಯಾದರೆ, ಇನ್ನೊಂದೆಡೆ ಬೇರುಗಳಿಂದ ಸಿದ್ಧಪಡಿಸಿದ ಬಣ್ಣ ನೂರಾರು ವರ್ಷಗಳವರೆಗೂ ಜೀವಂತಿಕೆ ಪಡೆದಿರುತ್ತದೆ. ಈ ನೈಸರ್ಗಿಕ ವಸ್ತುಗಳನ್ನು ಸಂಗ್ರಹಿಸಿ ಕಪ್ಪು, ಬಿಳಿ, ಹಳದಿ, ಹಸಿರು, ನೇರಳೆ, ಬಂಗಾರ, ಬೆಳ್ಳಿ ಬಣ್ಣ, ಹುರಿಮಂಜಿನ ಬಣ್ಣಗಳನ್ನು ಕಲಾವಿದರು ಸ್ವತಃ ಸಿದ್ಧಪಡಿಸುತ್ತಿದ್ದರು. ಕಲಾವಿದರು ವಿಷ್ಣುವಿನ ದಶಾವತಾರ ಪ್ರಸಂಗ, ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಧಾರ್ಮಿಕ ಗ್ರಂಥಗಳಲ್ಲಿರುವ ಕಥಾ ಪ್ರಸಂಗಗಳನ್ನೇ ಆರಿಸಿ, ನವಗ್ರಹ, ದಶಾವತಾರ, ಚಾಮುಂಡೇಶ್ವರಿ, ರಾಶಿಕೂಟ, ಪಂಚಪಾಂಡಜವರು, ಜಗನ್ಮೋಹಿನಿ, ನವೀನ ದಶಾವತಾರ, ಕೃಷ್ಣರಾಜ, ಸದ್ಯೋಜಾತ, ನವೀನರಾಮ, ನವರತ್ನ, ದೇವಿದಶಾವತಾರ, ಸರ್ವಮಂಗಳ ಮುಂತಾದ ಗಂಜೀಫ ಆಟಗಳನ್ನು ಮೈಸೂರಿನ ಮುಮ್ಮಡಿ ಕೃಷ್ಣರಾಜ ಒಡೆಯರು ರಚಿಸಿದರೆಂದು ತಿಳಿದುಬಂದಿದೆ. ಈ ಗಂಜೀಫ ಚಿತ್ರಗಳು ಕೇವಲ ಧಾರ್ಮಿಕ ವಸ್ತುಗಳಿಗೆ ಸೀಮಿತಗೊಳ್ಳದೆ, ಗಿಡ, ಮರ, ಬಳ್ಳಿ, ಪಶು, ಪಕ್ಷಿ, ಬಿಲ್ಲು-ಬಾಣಗಳು, ಕೊಡಲಿ, ಧ್ವಜ, ಕತ್ತರಿ, ಮೀನು, ಸಿಂಹ ಮುಂತಾದ ಚಿತ್ರಗಳನ್ನು ಜಾನಪದ ಶೈಲಿಯನ್ನು ಚಿತ್ರಿಸಿರುವುದು ಕಲಾವಿದರ ವೈಶಿಷ್ಟ್ಯವೆನಿಸಿದೆ. ಅದರಲ್ಲೂ  ಮೈಸೂರಿನ ರಘಪತಿಭಟ್ಟ ಹಾಗೂ ಎನ್.ಸಿ.ದೇಸಾಯಿ ಅವರು ಈ ಕಲೆಯನ್ನು ಸಂರಕ್ಷಿಸುವಲ್ಲಿ ತಮ್ಮದೇ ಛಾಪು ಮೂಡಿಸಿ ಜವಾಬ್ದಾರಿ ಹೊತ್ತಿರುವುದು ಈ ಕಲೆಯ ವಿಶೇಷವೆನಿಸಿದೆ.

ಪಿ.ಜಿ.

ಗಣೆಯವರು ಕರ್ನಾಟಕದ ಧಾರ್ಮಿಕ ವೃತ್ತಿಗಾಯಕರಲ್ಲಿ ಗಣೆಯವರದು ಒಂದು ಪ್ರಮುಖವಾದ ಪರಂಪರೆ. ಮಲೆಯ ಮಾದೇಶ್ವರನ ಭಕ್ತರಾದ ದೇವರಗುಡ್ಡರು ಹಾಗೂ ಮಂಟೇಸ್ವಾಮಿ ಭಕ್ತರಾದ ನೀಲಗಾರರಂತೆ, ಗಣೆಯವರು ಕಾಡುಗೊಲ್ಲರ ಜುಂಜಪ್ಪನ ದೀಕ್ಷೆಪಡೆದು ಗಣೆ ಎಂಬ ವಾದ್ಯವನ್ನು ನುಡಿಸುವ, ಪೂಜಿಸುವ ಭಕ್ತರು. ನಾಲ್ಕು ಅಡಿ ಉದ್ದವಿರುವ ಬಿದಿರಿನ ಕೋಲಿಗೆ ಕೆಲವು ತೂತುಗಳನ್ನು ಮಾಡಿ ಕೊಳಲಿನಂತೆ ಊದುವ ವಾದ್ಯವನ್ನು ಗಣೆಯೆಂದು ಕರೆಯುತ್ತಾರೆ. “ಈ ಕೋಲಿನ ಮಧ್ಯೆ ಎರಡು ಅಥವಾ ಮೂರು ಗೆಣ್ಣುಗಳು ಇರುತ್ತವೆ. ಕೋಲಿನ ಒಂದು ತುದಿಯಿಂದ ಮಧ್ಯದಲ್ಲಿರುವ ಗೆಣ್ಣುಗಳ ಕಾಂಡವನ್ನು ಕೊರೆದು ಅಥವಾ ಕಾದ ಸಲಾಕೆಯನ್ನು ತೂರಿಸಿ ಸುಟ್ಟು ತೆಗೆದಿರುತ್ತಾರೆ. ಸಲಾಕೆ ತೂರಿಸಿದ ತುದಿಯನ್ನು ನಂತರ ಮೇಣದಿಂದ ಮುಚ್ಚುತ್ತಾರೆ. ಬಿದಿರುಕೋಲಿನ ಇನ್ನೊಂದು ತುದಿಯ ಕಾಂಡವನ್ನು ಕೊರೆಯದೆ ಹಾಗೇ ಬಿಡುತ್ತಾರೆ. ಖಾಲಿ ಇರುವ ಗೆಣ್ಣುಗಳ ಮಧ್ಯದ ಒಂದು ತುದಿಯಲ್ಲಿ ತುಟಿ ಇಟ್ಟು ಗಾಳಿ ಊದಲು ಒಂದೇ ಒಂದು ರಂಧ್ರವನ್ನು ಕೊರೆದಿರುತ್ತಾರೆ. ಮತ್ತೊಂದು ತುದಿಯ ಮಧ್ಯಭಾಗದಲ್ಲಿ  ಬೆರಳು ತುದಿಗಳಿಂದ ಮುಚ್ಚಿ ನುಡಿಸಲು ಅನುಕೂಲವಾಗುವಂತೆ ನಾಲ್ಕು ರಂಧ್ರಗಳನ್ನು ಕೊರೆದಿರುತ್ತಾರೆ. ಇದರಿಂದ ಇಂಪಾದ ನಾದ ಹೊರಹೊಮ್ಮುತ್ತದೆ”. (ಮೀರಾ ಸಾಬಿಹಳ್ಳಿ ಶಿವಣ್ಣ, ೨೦೦೫, ಪುಟ ೫೩೪) ಕಾಡುಗೊಲ್ಲರು ನೂರಾರು ದನಗಳನ್ನು ಸಾಕುತ್ತಿದ್ದ ಕಾಲದಲ್ಲಿ ದನಗಳನ್ನು ಮೇಯಿಸುತ್ತಿದ್ದಾಗ ಕಾಲ ಕಳೆಯಲು ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾ ಗಣೆಯನ್ನು ಊದುತ್ತಿದ್ದರು. ಆದರೆ ಈ ಪದ್ಧತಿ ಈಗ ಕಡಿಮೆಯಾಗಿದೆ. ಆದರೆ ಧಾರ್ಮಿಕ ವಲಯದಲ್ಲಿ ಗಣೆಗೆ ಇಂದಿಗೂ ಮಹತ್ವವಿದೆ.

ತಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಮತ್ತು ಸಿರಾ ತಾಲ್ಲೂಕಿನ ಕಳುವಾರಹಳ್ಳಿ ಜುಂಜಪ್ಪ ದೇವರ ಪ್ರಮುಖ ಧಾರ್ಮಿಕ ಕೇಂದ್ರಗಳು. ಈ ಕೇಂದ್ರಗಳಿಂದ ಹೊರಟು ಊರೂರುಗಳಲ್ಲಿ ಮನೆ ಮನೆಗೆ ಹೋಗಿ ಕಾಣಿಕೆ ಸಂಗ್ರಹಿಸುವುದರಿಂದ ಗಣೆಯವರನ್ನು ‘ಕಾಣಿಕೆಯವರು’ ಎಂದೂ ಕರೆಯುತ್ತಾರೆ. “ಗಣೆಯವರ ಬಳಿ ಶಂಖ ಜಾಗಟೆಗಳೂ ಇರುತ್ತವೆ. ನಾಗಬೆತ್ತ ಇರುತ್ತದೆ. ಗೊಂಡೇವುಗಳಿಂದ, ಲೋಹದ ನಾಗರ ಹೆಡೆಯಿಂದ, ನವಿಲುಗರಿಗಳಿಂದ ಅಲಂಖರಿಸಿದ ದೊಡ್ಡ ಬಿದಿರುಕೋಲೇ ಗಣೆ. ಇದರ ತುದಿಯಲ್ಲೊಂದು ಗಂಟೆ. ಗಣೆಯವನ ಕೊರಳಲ್ಲಿ ಒಂಟಿ ರುದ್ರಾಕ್ಷಿ – ಹಣೆಯಲ್ಲಿ ನಾಮ. ಊರೂರು ಮೇಲೆ ಇವನು ಹೋಗುತ್ತಾನೆ. ಹಾವು ಚೇಳು ತಮ್ಮ ಮಕ್ಕಳು ಮರಿಗಳಿಗೆ ಕಾಣಿಸಿಕೊಳ್ಳದಂತೆ ಜನ ಹರಕೆ ಕಟ್ಟಿಕೊಂಡು ಎಣ್ಣೆಯ ಗಡಿಗೆಗೆ ಕಾಸನ್ನು ಹಾಕಿರುತ್ತಾರೆ. ಗಣೆಯವನು ಬೀದಿಯಲ್ಲಿ ಬಂದಾಗ ಜುಂಜಪ್ಪನ ಕಾಣಿಕೇ….. ಎಂದು ಸಾರುತ್ತಾನೆ….. ಹಾಗಲವಾಡಿಯ ಜುಂಜಪ್ಪನ ಪಾದಕ್ಕೆ ಸಲ್ಲಲೆಂದು ಎಲ್ಲ ಜನಾಂಗದವರೂ ಈ ಕಾಣಿಕೆಯನ್ನು ಆಗ ಅರ್ಪಿಸುತ್ತಾರೆ”. (ಜೀ.ಶಂ. ಪರಮಶಿವಯ್ಯ, ೧೯೭೯, ಪು. ೨೦೧ -೨೦೨). ದೀಪಾವಳಿಯ ಸಂದರ್ಭದಲ್ಲಿ ಜುಂಜಪ್ಪದೇವರ ಜಾತ್ರೆ ಹಾಗಲವಾಡಿ ಹಾಗೂ ಕಳುವಾರಹಳ್ಳಿಗಳಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಜುಂಜಪ್ಪದೇವರ ಮುಂದೆ ಒಂದು ಬೃಹತ್ ಪ್ರಮಾಣದ ದೀಪದ ಕಂಬವನ್ನು ಇಟ್ಟಿರುತ್ತಾರೆ. ಇದಕ್ಕೆ ಭಕ್ತರು ತುಪ್ಪ-ಎಣ್ಣೆಗಳನ್ನು ಕಾನಿಕೆಯಾಗಿ ಹಾಕುತ್ತಾರೆ. ಹಾಗೆಯೇ ತಮಗೆ ಹಾವು, ಚೇಳು, ಮಂಡರಗಪ್ಪೆ ಕಚ್ಚದೆ ಇದ್ದರೆ ಹರಕೆ ಒಪ್ಪಿಸುವುದಾಗಿ ಹರಸಿಕೊಂಡ ಭಕ್ತರು ಇವುಗಳ ಆಕೃತಿಯನ್ನು ಹಿತ್ತಾಳೆ, ಬೆಳ್ಳಿ ಅಥವಾ ಚಿನ್ನದಲ್ಲಿ ಮಾಡಿಸಿ ಹರಕೆಯಾಗಿ ಒಪ್ಪಿಸುತ್ತಾರೆ.

ಕಾಡುಗೊಲ್ಲರ ಎಲ್ಲ ದೇವ ಸ್ಥಾನಗಳಲ್ಲಿ ದೇವರೊಡನೆ ಗಣೆಯನ್ನೂ ಇಟ್ಟು ಪೂಜಿಸುತ್ತಾರೆ. ಗಣೆಗಳಲ್ಲಿ ಊದುವ ಗಣೆ ಮತ್ತು ಊರಾಡುವ ಗಣೆ ಎಂಬ ಎರಡು ಬಗೆಯ ಗಣೆಗಳಿವೆ. ಕಾಣಿಕೆಯವರು ಊರಿಂದ ಊರಿಗೆ ಹೋಗುವಾಗ ದೇವರ ಒಡವೆಗಳನ್ನು ಹಾಕಿ ಅಲಂಕರಿಸಿದ ಗಣೆಯನ್ನು ಕೈಯಲ್ಲಿ ಹಿಡಿದು ಹೆಗಲ ಮೇಲಿಟ್ಟುಕೊಂಡು ಓಡಾಡುತ್ತಾರೆ. ಇದನ್ನು ತಮ್ಮ ಆರಾಧ್ಯದೈವರಾದ ಜುಂಜಪ್ಪನೆಂದೇ ಭಾವಿಸುತ್ತಾರೆ. ಈ ಗಣೆಯನ್ನು ಊದುವುದಕ್ಕೆ ಬಳಸುವುದಿಲ್ಲ.

ಗಣೆಯ ಮಧುರವಾದ ನಾದದ ಹಿನ್ನೆಲೆಯಲ್ಲಿ ಜುಂಜಪ್ಪನ ಕಾವ್ಯವನ್ನು ಅನೇಕ ರಾತ್ರಿಗಳ ಕಾಲ ಹಾಡುವ ಅನೇಕ ಕಲಾವಿದರಿದ್ದಾರೆ. ಜುಂಜಪ್ಪನ ಕಾವ್ಯದಷ್ಟು ದೀರ್ಘವಲ್ಲದಿದ್ದರೂ ಎತ್ತಪ್ಪ, ಕಾಟಮದೇವರು, ಚಿತ್ರದೇವರು, ಪಾತೇದೇವರು, ಕೇತೇದೇವರು ಮೊದಲಾದ ದೇವರ ಕಾವ್ಯಗಳನ್ನು ಹಾಡುವ ಕಲಾವಿದರೂ ಇದ್ದಾರೆ. ಗಣೆಯ ನಾದ ಇಂಪಾಗಿದ್ದರೂ ದೀರ್ಘಕಾಲ ನುಡಿಸಿದಾಗ ಕೇಳುಗನಿಗೆ ಏಕತಾನತೆಯ ಅನುಭವವಾಗಬಹುದು. ಆದರೆ ಕಲಾವಿದ ಗದ್ಯಪದ್ಯಗಳ ಮಿಶ್ರಣ ಮಾಡಿ ಏಕತಾನತೆಯನ್ನು ಹೋಗಲಾಡಿಸಿ ಆಕರ್ಷಕವಾಗಿ ಮಾಡುತ್ತಾನೆ.

ಜುಂಜಪ್ಪನ ಹಾಡನ್ನು ಹಾಡುವಾಗ ಒಬ್ಬ ಗಣೆಯನ್ನು ಊದುತ್ತಾನೆ. ಇನ್ನೊಬ್ಬ ಜುಂಜಪ್ಪನ ಹಾಡನ್ನು ಹಾಡುತ್ತಾನೆ. ದೇವಸ್ಥಾನದಲ್ಲಿ ಐದಾರು ಅಡಿ ಉದ್ದದ ಬೆಳ್ಳಿಯ ಕಟ್ಟು ಹಾಕಿರುವ ಗಣೆಯನ್ನು ಕೈಯಲ್ಲಿ ಹಿಡಿದು, ಕರಿಯ ಕಂಬಳಿ ಗದ್ದಿಗೆಯ ಮೇಲೆ ಕುಳಿತು, ಪೂಜಾರಿ ಊದಲು ತೊಡಗಿದಂತೆ ಆತನಿಗೆ ದೈವಾವೇಶ ಬರುತ್ತದೆ. ಜುಂಜಪ್ಪನೇ ಈ ಪೂಜಾರಿಯ ಮೈಮೇಲೆ ಬಂದಿದ್ದಾನೆಂದು ಭಕ್ತರು ನಂಬುತ್ತಾರೆ. ಪೂಜಾರಿ ಈ ಸ್ಥಿತಿಯಲ್ಲಿ ಭವಿಷ್ಯ ಹೇಳುತ್ತಾನೆ. ಇದನ್ನು ‘ಶಾಸ್ತ್ರ ಹೇಳುವುದು’ ‘ಗಣೆ ಹೇಳಿಕೆ’ ಹೇಳುವುದು ಎಂದೂ ಕರೆಯುತ್ತಾರೆ. ಕಾಡುಗೊಲ್ಲರ ಅನೇಕ ದೇವಸ್ಥಾನಗಳಲ್ಲಿ ಶಾಸ್ತ್ರ  ಹೇಳಿದರೂ ಹಿರಿಯೂರು ತಾಲ್ಲೂಕಿನ ಇಕ್ಕನೂರಿನ ಕಾಟಮದೇವರ ಗುಡಿಯಲ್ಲಿ ಶಾಸ್ತ್ರ ಹೇಳುವುದು ತುಂಬಾ ಪ್ರಸಿದ್ಧವಾಗಿದೆ. ಹೀಗೆ ಕಾಡುಗೊಲ್ಲರಲ್ಲಿ ಗಣೆಯವರು ಹವ್ಯಾಸಿ  ಕಲಾವಿದರಾಗಿಯೂ ಧಾರ್ಮಿಕ ಕಲಾವಿದರಾಗಿಯೂ ಪ್ರಸಿದ್ಧರಾಗಿದ್ದಾರೆ.

ಟಿ.ಎನ್.ಎಸ್.

ಗದಬ ಆದಿಮ ಬುಡಕಟ್ಟು ಸಮುದಾಯಗಳಲ್ಲಿ ‘ಗದಬ’ವೂ ಒಂದು. ಆಂಧ್ರದ ಶ್ರೀಕಾಕುಳ, ವಿಜಯನಗರಂ, ವಿಶಾಖ ಜಿಲ್ಲೆಗಳಲ್ಲಿ ಇವರು ವಾಸಿಸುತ್ತಾರೆ. ಒಣ ಬೇಸಾಯವನ್ನು ಮಾಡುತ್ತಾರೆ. ಬೇಸಾಯದಲ್ಲಿ ಕೂಲಿ ಆಳುಗಳಾಗಿದ್ದು ಜೊತೆಗೆ ಕಾಡಿನ ಉತ್ಪನ್ನಗಳನ್ನು ಶೇಖರಿಸಿ ಸಂತೆಯಲ್ಲಿ ಮಾರುತ್ತಾರೆ. ‘ಗದಬ’ದಲ್ಲಿ ಬೋಡೋ, ಗುತೋಬ್, ಕತೇರಿ, ಕೊಲ್ಲಾರಿಯಂತಹ ಉಪಶಾಖೆಗಳಿವೆ. ಮಾತುಕತೆ, ಪ್ರೇಮ ಪ್ರಕರಣ, ಓಡಿಹೋಗಿ ಜೀವನ ಸಾಗಿಸುವುದು, ಪ್ರಾಣಿ ಗ್ರಹಣ, ಸೇವೆ ಮಾಡುವುದು ಮುಂತಾದ ಪದ್ಧತಿಗಳಲ್ಲಿ ಮದುವೆಗಳಾಗಿರುತ್ತವೆ. ಗದಬ ಕುಟುಂಬಗಳು ತುಂಬಾ ಚಿಕ್ಕವು. ವಿಧವಾ ವಿವಾಹ, ವಿವಾಹ ವಿಚ್ಛೇದನ ಮುಂತಾದವುಗಳಿಗೆ ಒಪ್ಪಿಗೆಯಿದೆ. ರಾಗಿ, ತೊಗರಿ ಬೇಳೆ, ಎಳ್ಳು ಮುಂತಾದವುಗಳನ್ನು ಬೆಳೆಯುತ್ತಾರೆ. ಗದಬ ಸಮುದಾಯ ತಮ್ಮ ಸಾಂಪ್ರದಾಯಿಕ ಕುಲ ಸಂಗವನ್ನು ಹೊಂದಿದ್ದು ಅದಕ್ಕೆ ‘ನಾಯಕೊ’ ಎಂಬ ಹೆಸರಿನಲ್ಲಿ ಗ್ರಾಮದ ಮುಖಂಡನಿರುತ್ತಾನೆ. ‘ನಾಯಕ್’ ಅಧಿಕಾರ ವಂಶಪಾರಂಪರ್ಯವಾಗಿ ಬಂದುದಾಗಿರುತ್ತದೆ. ಆತನಿಗೆ ‘ಚಲ್ಲಾನ್’ (ಸೇವಕ), ಬಾರಿಕ (ಗ್ರಾಮ ಸೇವಕ) ಎಂಬುವವರು ಸಹಚರರಾಗಿರುತ್ತಾರೆ. ಶಂಕದೇವ, ಮಾದಕೊಂಡಮ್ಮ, ಜಕರಿ ದೇವತೆ, ಇಪ್ಪ ಪೊಲ್ಲಮ್ಮರನ್ನು ಪೂಜಿಸುತ್ತಾರೆ. ಈಟಿಗಳ ಹಬ್ಬ, ಆಷಾಡದ ಹಬ್ಬ, ಮರಿಡಮ್ಮ ಹಬ್ಬಗಳನ್ನು ಆಚರಿಸುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೩೬,೦೭೮. ಅಂದರೆ ಶೇಕಡಾ ೦.೭೨.

ಬಿ.ಕೆ.ಆರ್. ಅನುವಾದ ಕೆ.ಎಸ್.

ಗದ್ದಿಕ ರೋಗ ಶಮನಕ್ಕಾಗಿ ಕೇರಳದ ವಯನಾಡು ಜಿಲ್ಲೆಯ ಅಡಿಯನ್ ವರ್ಗದ ಜನರು ನಡೆಸುವ ಒಂದು ಮಾಂತ್ರಿಕ ಕಲಾರೂಪ. ವಯನಾಡಿನ ಮಾನಂತವಾಡಿ, ತ್ರಿಶ್ಶಿಲೇರಿ, ತಿರುನೆಲ್ಲಿ, ಎಡಪ್ಪೋಡಿ, ಚೇಲೂರು, ಬೇಗೂರ್, ಮೊಟ್ಟಂಕರ, ಪನಮರಂ, ವೇಮಂ, ಬಾವಲಿ, ಮುದಿರಮಲ, ಕುಪ್ಲತ್ತೋಡ್ ಮುಂತಾದೆಡೆ ಅಡಿಯನ್ನರು ವಾಸವಾಗಿದ್ದಾರೆ.

ಹಿಂದಿನ ಕಾಲದಿಂದಲೇ ಅಡಿಯರ ಬದುಕಿನ ಪ್ರಧಾನವಾದ ಒಂದು ಧಾರ್ಮಿಕ ಕ್ರಿಯೆ ಈ ಗದ್ದಿಕ. ಪ್ರತಿ ಆದಿವಾಸಿ ಜನರಲ್ಲಿಯೂ ಮಂತ್ರವಾದದ ಕೆಲಸಗಳನ್ನು ನಡೆಸುವುದಕ್ಕೆ ಒಬ್ಬನು ನಿಗದಿಯಾಗಿರುತ್ತಾನೆ. ಅಡಿಯನ್ನರಲ್ಲಿ ‘ತಮ್ಮಾಡಿ’ ಈ ಕೆಲಸವನ್ನು ನಡೆಸುತ್ತಾನೆ. ಅಡಿಯನ್ನರ ಅತಿದೊಡ್ಡ ಮಾಂತ್ರಿಕ ಕ್ರಿಯೆಯಾದ ಗದ್ದಿಕವನ್ನು ನಡೆಸಿಕೊಡಲು ತಮ್ಮಾಡಿಗೆ ಮಾತ್ರ ಸಾಧ್ಯ.

ಗದ್ದಿಕವನ್ನು ಮೂರು ತೆರನಾಗಿ ನಡೆಸಲಾಗುತ್ತದೆ : ಸಾಮಾನ್ಯ ಗದ್ದಿಕ, ಪೂಜಾಗದ್ದಿಕ, ನಾಡುಗದ್ದಿಕ. ರೋಗದ ಕಾರಣವನ್ನು ತಿಳಿಯುವುದಕ್ಕೂ ಅದನ್ನು ನಿವಾರಿಸುವುದಕ್ಕೂ ಸಾಮಾನ್ಯಗದ್ದಿಕ ಕ್ರಿಯೆಯನ್ನು ನಡೆಸಲಾಗುತ್ತದೆ. ಅದು ಶಿವಸ್ತುತಿಯಿಂದ ಪ್ರಾರಂಭವಾಗುತ್ತದೆ. ದೇವ-ದೇವಿಯರ ಕೋಪದಿಂದ ರೋಗ ಪ್ರಾಪ್ತವಾಯಿತೆಂದು ಕಂಡುಬಂದರೆ ತಮ್ಮಾಡಿಗೆ ರೋಗಿಯು ‘ತಪ್ಪ್‌ವಳ’ (ತಪ್ಪು ದಂಡ?) ಕೊಡಬೇಕು. ರೋಗ ವಾಸಿಯಾಗಲು ತಮ್ಮಾಡಿಯು ಪ್ರಾರ್ಥನೆಗಳನ್ನು ಹೇಳುತ್ತಾನೆ. ರೋಗವನ್ನು ನಿವಾರಿಸಿಕೊಟ್ಟುದಕ್ಕೆ ಕೃತಜ್ಞತಾ ಸೂಚಕವಾಗಿ ‘ಪೂಜಗದ್ದಿಕ’ ನಡೆಯುತ್ತದೆ. ಬೇರೆ ಬೇರೆ ದೇವ-ದೇವಿಯರ ಬೇರೆ ಬೇರೆ ಹರಕೆಗಳನ್ನು ಒಪ್ಪಿಸುತ್ತಾರೆ. ಕೋಳಿ ಕುರುದಿ (ರಕ್ತ) ನೀಡುವುದರೊಂದಿಗೆ ಈ ಕಾರ್ಯಕ್ರಮವು ಮುಕ್ತಾಯವಾಗುತ್ತದೆ.

ಊರನ್ನು ವರ್ಷವಿಡೀ ಬಾಧಿಸಿದ ಎಲ್ಲ ರೋಗಗಳನ್ನು ನಿವಾರಿಸುವುದಕ್ಕೂ ಸಮೃದ್ಧಿಗೂ ಹರಕೆಯ ರೂಪದಲ್ಲಿ ನಾಡಿ ಗದ್ದಿಕವನ್ನು ಏರ್ಪಡಿಸಲಾಗುತ್ತದೆ. ನಾಡು ನೀಕ್ಕಲ್ ಎಂಬ ಹೆಸರಲ್ಲೂ ನಾಡುಗದ್ದಿಕ ಕರೆಯಲ್ಪಡುತ್ತದೆ. ಇದನ್ನು ಏಳು ದಿವಸಗಳ ಕಾಲ ನಡೆಯುವ ಕೊಟ್ಟಿರುವ ಜಾತ್ರೆ ಮೇಲಿನ ಮಂಗಳ, ಶುಕ್ರವಾರಗಳಲ್ಲಿ ನಡೆಸಲಾಗುವುದು. ಗದ್ದಿಕ ನಡೆಸುವ ದಿನವನ್ನು ಮುಖ್ಯಸ್ತರೆಲ್ಲರೂ ಸೇರಿ ತೀರ್ಮಾನಿಸುತ್ತಾರೆ. ಪೂಜೆಗೆ ಅಗತ್ಯವಾದ ಮುಖ್ಯ ವಸ್ತುಗಳೆಂದರೆ : ತೆಂಗಿನಕಾಯಿ, ತುಳಸಿಯ ಎಲೆ, ಊದುಬತ್ತಿ, ರಾಗಿ. ರೋಗಗಳಿಂದ ಕಾಪಾಡುವ ಮುಖ್ಯದೇವತೆಯಾದ ಮಾರಿ ಕರ್ನಾಟಕದಿಂದ ಬಂದುದು. ಮಾರಿಯ ನಾಡಿನ ಪ್ರಧಾನ ಬೆಳೆ ರಾಗಿ. ಗದ್ದಿಕ ನಡೆಸಲು ಆರಂಭದಲ್ಲಿ ಶಿವನ ಅಪ್ಪಣೆ ಪಡೆಯಬೇಕು. ಶಿವನ ಸಮ್ಮತಿಯೊಂದಿಗೆ ಎಲ್ಲ ದೇವತೆಗಳಲ್ಲೂ ಅನುಜ್ಞೆ ಕೇಳುತ್ತಾರೆ. ಮೊದಲು ಸುಬ್ರಹ್ಮಣ್ಯ, ಮಲಂಕರಿ, ಕರಿಚ್ಚಾತ್ತನ್, ಮಲ್ಲಪ್ಪನ್, ಮಾದಪ್ಪನ್, ನಂಜಪ್ಪನ್ – ಇವರನ್ನು ತಮ್ಮಾಡಿ ಆಹ್ವಾನಿಸುವ ಹಾಡು ಹಾಡುತ್ತಾನೆ. ಜತೆಗಿದ್ದವರು ಸಾಲುಗಳನ್ನು ಪುನರಾವರ್ತಿಸಿ ಹಾಡುತ್ತಾರೆ. ಆ ದೇವತೆಗಳನ್ನು ಆಹ್ವಾನಿಸಿ ಹಾಡುತ್ತಾರೆ. ಚೀಂಡವಾಡಿ ಮಾಡಿ, ಕಿಟ್ಟುಣಗಿರಿ ಮಾರಿ, ದಂಡಿನ ಮಾರಿ, ಕಣ್ಣಂಬಾಡಿ ಮಾರಿ, ಬಾತ್ತಿಮಾರಿ, ರೋಗದ ಮಾರಿ, ಮುಂಡಕುಟ್ಟಿ ಭಗವತಿ, ಮಶ್ತಿಕೂಟತ್ತ್‌ಕಾಳಿ, ಕಂಬಳೋಡು ಭಗವತಿ, ಶಿಕ್ಕಮ್ಮೆ ಎಂಬೀ ಭಗವತಿಯನ್ನು ಕುರಿತು ಹಾಡಲಾಗುತ್ತದೆ. ಈ ದೇವದೇವಿಯರನ್ನು ಸಂತುಷ್ಟಿಗೊಳಿಸಿ, ಹರಕೆಗೊಂಡು ಮುಂದಿನ ದಿನ ನಾಡುನೀಗಲು (= ಬಾಧೆ ಕಳೆಯಲು) ಹೋಗುವೆವೆನ್ನುತ್ತಾರೆ.

62

ಸ್ತ್ರೀಯರು ಗದ್ದಿಕದಲ್ಲಿ ಭಾಗವಹಿಸುವುದಿಲ್ಲ. ತಮ್ಮಾಡಿಯು ಓರಣವಾಗಿ ರೇಶ್ಮೆಬಟ್ಟೆಯುಟ್ಟು ಆಭರಣಗಳನ್ನು ಧರಿಸುತ್ತಾರೆ. ಕಪ್ಪುಬಣ್ಣದಿಂದ ಮುಖಬರೆದು ರೌದ್ರಭಾವ ಮೂಡಿಸುತ್ತಾನೆ. ಕೋರೆಹಲ್ಲನ್ನು ಬರೆಯುತ್ತಾನೆ. ಸ್ತ್ರೀವೇಷ ಹಾಕುವವರು ಹಿರಿಯ ಮುಖ್ಯಸ್ಥನ, ಇತರ ಮುಖ್ಯಸ್ಥರ ಪಾದಗಳಿಗೆ ನಮಸ್ಕರಿಸಿ ಸಾಲಾಗಿ ನಿಲ್ಲುತ್ತಾರೆ. ಅವರಲ್ಲಿ ತನಗಿಂತ ಹಿರಿಯರಿದ್ದರೆ ಮುಖ್ಯಸ್ಥನು ಅವರ ಕಾಲುಗಳಿಗೆ ನಮಸ್ಕರಿಸಿ ವಂದಿಸುತ್ತಾನೆ. ಸ್ತ್ರೀವೇಷಧಾರಿಗಳು ಸೀರೆಯುಟ್ಟು, ಕಣ್ಣಿಗೆ ಕಾಡಿಗೆ ಹಾಕಿ, ಕುಂಕುಮದ ದೊಡ್ಡ ಬೊಟ್ಟಿಡುತ್ತಾರೆ. ತುಟಿಗೆ ಕೆಂಪುರಂಗು ಹಚ್ಚಿ ಕೈತುಂಬ ಬಳೆ, ಕೊರಳತುಂಬ ಹರಳಸರ, ಕಾಲಿಗೆ ಗೆಜ್ಜೆ ಧರಿಸುತ್ತಾರೆ. ಇವರೆಲ್ಲ ವಿಭಿನ್ನ ಮಾರಿಯರೆಂದು ಸಂಕಲ್ಪ. ಸೀರೆಯುಟ್ಟು ನಿಂತ ಮಾರಿಯರೆಲ್ಲರ ಕೈಯಲ್ಲಿ ಒಂದು ಬೆತ್ತದ ಕೋಲು ಇರುತ್ತದೆ. ಚಿಕ್ಕ ರೆಂಬೆಗಳಿಂದ ನಿರ್ಮಿಸಿದ ‘ಗುಡಿ’ ಎಂದು ಕರೆಯುವ ಮಾರಿಯಮ್ಮನ ದೇವಾಲಯವನ್ನು ಬಾಳೆಯ ದಿಂಡಿನ ಸುಲಿಗಳಿಂದಲೂ ಹೂಗಳಿಂದಲೂ ಅಲಂಕರಿಸುತ್ತಾರೆ. ಗುಡಿಯನ್ನು ಎತ್ತಿಕೊಂಡೇ ಪ್ರತಿ ಮನೆಗೂ ನಾಡುನೀಗಲು ಹೋಗುತ್ತಾರೆ. ಆ ಮನೆಯ ಸಮಸ್ಯೆಗಳನ್ನೂ ರೋಗಗಳನ್ನೂ ಪ್ರತ್ಯೇಕ ಕ್ರಿಯೆಗಳ ಮೂಲಕ ಆವಾಹಿಸಿ ಗುಡಿಗೆ ಸೇರಿಸಲಾಗುತ್ತದೆ. ಏಳು ದಿನ ಕಾಲದ ನಾಡುನೀಗುವಿಕೆಯ ಬಳಿಕ ತಾವು ಸಂಗ್ರಹಿಸಿದ ರೋಗಗಳನ್ನು ಪೂಜಿಸಿ ಬಿಟ್ಟುಕೊಟ್ಟು ಮಾರಿಯನ್ನು ಮೈಸೂರಿಗೆ ಕಳುಹಿಸಿಕೊಡುತ್ತಾರೆ. ಈ ಏಳು ದಿನಗಳಲ್ಲಿ ಅಡಿಯನ್‌ರ ಮನೆಗಳಲ್ಲಿ ದುಡಿ ಬಾರಿಸುವುದಾಗಲಿ, ಹಣತೆ ಹಚ್ಚುವುದಾಗಲಿ ಸಲ್ಲದು.

ಕರ್ನಾಟಕದೊಂದಿಗಿನ ಅಡಿಯನರ ಬಂಧನ ಅವರ ಪ್ರಧಾನ ದೈವಗಳ ಗದ್ದಿಕ ಹಾಡುಗಳಲ್ಲಿ ವ್ಯಕ್ತವಾಗುತ್ತದೆ. ಬುಡಕಟ್ಟುಗಳಲ್ಲಿ ಪ್ರೇತಬಾಧೆಯನ್ನು ತಡೆಯುವುದಕ್ಕಾಗಿಯೂ ಸ್ವಜನ ಕ್ಷೇಮಕ್ಕಾಗಿಯೂ ಮಾಂತ್ರಿಕ ಕರ್ಮಗಳನ್ನು ನಡೆಸುತ್ತಿದ್ದರು. ಆಧುನಿಕ ಕಾಲದಲ್ಲಿ ಗದ್ದಿಕವು ಅದರ ಧಾರ್ಮಿಕ ಮಹತ್ತ್ವವನ್ನು ಬಿಟ್ಟುಕೊಟ್ಟು ಕಲಾರೂಪವಾಗಿ ಬದಲಾಗುತ್ತದೆ. ಒಂದು ಕಾಲದಲ್ಲಿ ಅಡಿಯನರಲ್ಲಿ ಮಾತ್ರ ಪ್ರಚಲಿತವಿದ್ದ ಈ ಕಲಾರೂಪವನ್ನು ಪ್ರಚುರಗೊಳಿಸಿದವರು ಫೋಕ್‌ಲೋರ್ ಅಕಾಡೆಮಿಯ ಮಾಜಿ ಅಧ್ಯಕ್ಷ ಕೂಡ ಆಗಿದ್ದ ಶ್ರೀ ಪಿ.ಕೆ. ಕಾಳನ್ ಅವರು. ಗದ್ದಿಕವನ್ನು ಹೊರಗೆ ಪ್ರದರ್ಶಿಸುವ ಸಂದರ್ಭಗಳಲ್ಲಿ ಅದರ ಧಾರ್ಮಿಕ ವಿಧಿಗಳಲ್ಲಿ ಬದಲಾವಣೆಯನ್ನು ಮಾಡಿಕೊಂಡು ವೇದಿಕೆಗೆ ಏರಿಸುತ್ತಾರೆ. ಒಂದು ಪ್ರದೇಶದಲ್ಲಿ ಬಾಧಿಸುತ್ತಿದ್ದ ರೋಗಗಳನ್ನೆಲ್ಲ ನೀಗಿಸಿ ಮನೆಗೂ ಊರಿಗೂ ಸಮೃದ್ಧಿಯನ್ನು ಸಂಪತ್ತನ್ನೂ  ದಯಪಾಲಿಸುವ ಧಾರ್ಮಿಕ ಕ್ರಿಯೆ ಎಂಬ ನೆಲೆಯಲ್ಲಿ ಗದ್ದಿಕ ತುಂಬ ಗಮನಾರ್ಹವಾಗಿದೆ.

ಪಿ.ವಿ.ಎಂ. ಅನುವಾದ ಕೆ.ಕೆ.

ಗರಗ ನೃತ್ಯಂ ಇದು ಭಕ್ತಿ ಪ್ರಧಾನವಾದ ಪ್ರದರ್ಶನ ಕಲೆ. ಪ್ರಾಚೀನ ಕಲೆಗಳಲ್ಲಿ ಒಂದು. ಕರಗವನ್ನು ತಲೆಯ ಮೇಲೆ ಇಟ್ಟುಕೊಂಡು ತಾಳ, ತಮಟೆಗೆ ಅನುಗುಣವಾಗಿ ಭಕ್ತಿಪರವಶನಾಗಿ ಮಾಡುವ  ನೃತ್ಯವನ್ನು ಕರಗನೃತ್ಯ ಎಂದು ಕರೆಯುತ್ತಾರೆ. ಇದನ್ನೆ ‘ಘಟ ನೃತ್ಯ’ ವೆಂದೂ ಕರೆಯುತ್ತಾರೆ. ಗರಗ ಎಂದರೆ ಮಡಕೆ ಎಂದು ಅರ್ಥ. ಇದನ್ನೇ ಕರಗ, ಕರ್ಗ, ಗಂಗೆ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯುವುದು ರೂಢಿ. ಆಂಧ್ರಪ್ರದೇಶದ ಉಭಯ ಗೋದಾವರಿ ಜಿಲ್ಲೆಗಳಲ್ಲಿ ಹಾಗೂ ಕೃಷ್ಣ ಜಿಲ್ಲೆಯಲ್ಲಿ ಇದನ್ನು ಗರಗ, ಗರ್ಗ, ಕರಿಗ ನೃತ್ಯಗಳೆಂದು, ತೆಲಂಗಾಣ, ರಾಯಲಸೀಮೆ ಪ್ರಾಂತ್ಯಗಳಲ್ಲಿ ಕವಗ ನೃತ್ಯವೆಂದು ಕರ್ನಾಟಕದಲ್ಲಿ ಕರಗ ಎಂದೂ ತಮಿಳುನಾಡಿನಲ್ಲಿ ಕರಗಂ ಎಂಬ ಹೆಸರುಗಳಿಂದ ಕರೆಯುತ್ತಾರೆ.

63

ಕರಗ ಹಿತ್ತಾಳೆಯ ಬಿಂದಿಗೆಯ ಮೇಲೆ, ಕೆಂಪು, ಅರಿಸಿನ, ಬಿಳಿ, ಕುಂಕುಮ ಬಣ್ಣಗಳಲ್ಲಿ ಶಕ್ತಿ ದೇವತೆಯ ಸೂಚಕವಾದ ಚಿತ್ರಗಳನ್ನು ಬರೆದು ಅಂದವಾಗಿ ಅಲಂಕರಿಸುತ್ತಾರೆ. ಅದರ ಮೇಲೆ ಐದೆಳೆ ನಾಗಪ್ರತಿಮೆಯನ್ನು ಎಲ್ಲರಿಗೂ ಕಾಣಿಸುವಂತೆ ಸಿಕ್ಕಿಸಿ, ಸೀರೆಯನ್ನು ಕುಚ್ಚಿನಂತೆ ಕಟ್ಟಿ ಸುಂದರವಾಗಿ ಅಲಂಕರಿಸಿ ಬೇವಿನ ರೆಂಬೆಗಳನ್ನು ಸಿಕ್ಕಿಸಿ ಕರಗವನ್ನು ತಲೆಯ ಮೇಲೆ ಹೊತ್ತುಕೊಂಡು ನರ್ತಿಸುತ್ತಾರೆ. ಈ ನೃತ್ಯ ಮಾಡುವವರನ್ನು ಆಸಾದಿಗಳು ಇಲ್ಲವೆ ಗಣಾಚಾರರು ಎನ್ನುವರು. ಇದು ಇವರ ಕುಲವೃತ್ತಿ. ಈ ಪ್ರದರ್ಶನದಲ್ಲಿ, ಉಭಯ ಗೋದಾವರಿ ಜಿಲ್ಲೆಗಳಲ್ಲಿ ಕರಗ ನೃತ್ಯ ಇಲ್ಲದೆ ಯಾವುದೇ ಉತ್ಸವ ಮೆರವಣಿಗೆ ನಡೆಯದು. ಕರಗ ನೃತ್ಯ ಮಾಡುವ ಆಸಾದಿ ಕಲಾವಿದರು ಬಿಗಿಯಾಗಿರುವ ಪಂಚೆ ಇಲ್ಲವೆ ಪ್ಯಾಂಟಿನ ಮೇಲೆ ತುಂಬುತೋಳಿನ ಅಂಗಿ ಅದರ ಮೇಲೊಂದು ಗೌನು ಧರಿಸಿ, ಟವಲುವಿಲ್ಲವೆ ಶಾಲುವನ್ನು  ಎದೆಯ ಮೇಲೆ  x ಆಕಾರದಲ್ಲಿ ಬರುವಂತೆ, ಅಚ್ಚುಕಟ್ಟಾಗಿ ಧರಿಸಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನೃತ್ಯ ಮಾಡುತ್ತಾರೆ. ತಲೆಯ ಮೇಲಿನ ಕರಗ ಅಲುಗಾಡದಂತೆ, ತುಂಬಾ ಜಾಗರೂಕತೆಯನ್ನು ವಹಿಸುತ್ತಾರೆ. ಅಮ್ಮನವರಿಗೆ ನಮಸ್ಕರಿಸಿ ಅನಂತರ ವಿವಿಧ ರೀತಿಯ ನೃತ್ಯಗಳ ಮೂಲಕ ಭಕ್ತಿಪ್ರದರ್ಶಿಸುತ್ತಾರೆ. ಈ ಪ್ರದರ್ಶನಕ್ಕೆ ತಮಟೆಗಳು ಇರಲೇಬೇಕು. ಇವಿಲ್ಲದೆ  ನೃತ್ಯ ನಡೆಯುವುದಿಲ್ಲ. ಈ ಪ್ರದರ್ಶನದಲ್ಲಿ ೪-೨೦ ಮಂದಿ ಭಾಗವಹಿಸುತ್ತಾರೆ. ಈ ನೃತ್ಯ ಪ್ರದರ್ಶನಕ್ಕೆ ಸಂಖ್ಯಾ ನಿಯಮವೇನಿಲ್ಲ.

ತಾಷವಾದ್ಯದ ಮೇಲೆ ತ್ರಿಶ್ರ, ಚತುರಶ್ರ, ಮಿಶ್ರಂ, ಖಂಡಂ, ಗತಿಗಳಿಂದ ಕೂಡಿದ ರಾಗಗಳನ್ನು ನುಡಿಸುತ್ತಾರೆ. ಅವುಗಳಿಗನುಗಣವಾಗಿ ನರ್ತಿಸುತ್ತಾ ಅನೇಕ ವಿನ್ಯಾಸಗಳನ್ನು ಸಹ ಮಾಡುತ್ತಾರೆ. ಕರಗ ವಿನ್ಯಾಸಗಳು ೩ ರೀತಿಯಲ್ಲಿ ಇರುತ್ತವೆ. ೧. ಕರಗವನ್ನು ತಲೆ ಮೇಲಿಟ್ಟುಕೊಂಡು ಮಾಡುವ ವಿನ್ಯಾಸ, ೨. ಕರಗ ಇಲ್ಲದೆ  ಮಾಡುವ ವಿನ್ಯಾಸ, ೩. ಶಕ್ತಿಮಾತೆಯ ವೇಷ ಧರಿಸಿಕೊಂಡು ಮಾಡುವ ವಿನ್ಯಾಸ. ಮುಖ್ಯವಾಗಿ ಹೆಸರಿಸತಕ್ಕುವೆಂದರೆ ಕರಗವನ್ನು ತಲೆಯ ಮೇಲಿಟ್ಟುಕೊಂಡು ಎರಡೂ ಕೈಗಳಲ್ಲಿ ಆರತಿ ಕರ್ಪೂರದ ಬಿಲ್ಲೆಯನ್ನು ಬೆಳಗಿಸಿ ನೃತ್ಯಮಾಡುವುದು, ಕರಗದ ಮೂಲಕ ಅಗ್ನಿಕುಂಡವನ್ನು ತುಳಿಯುವುದು, ಕರಗ ಇಲ್ಲದೆ ಮಾಡುವ ವಿನ್ಯಾಗಳಲ್ಲಿ ತಲೆಯ ಮೇಲೆ ಮೂರು ಸೀಸೆಗಳನ್ನು ಒಂದರ ಮೇಲೆ ಒಂದರಂತೆ ಇಟ್ಟು ಎರಡೂ ಕೈಗಳಲ್ಲಿ ಎರಡು ತಟ್ಟೆಗಳನ್ನು ಹಿಡಿದುಕೊಂಡು ಹತ್ತಿಯ ಬತ್ತಿಗಳನ್ನು ಬೆಳಗಿಸಿ ಅವು ಆರದಂತೆ ಬೀಳದಂತೆ ನೃತ್ಯಮಾಡುವುದು, ಮೂರು ಸೀಸೆಗಳನ್ನು ಒಂದರ ಮೇಲೆ ಒಂದಂರಂತೆ ನಿಲ್ಲಿಸಿ ಅದರಲ್ಲಿ ಸಣ್ಣ ತಂತಿಗೆ ಸುತ್ತಿದ ಬಟ್ಟೆಯನ್ನು ಬೆಳಗಿಸಿ ಪಂಜಿನ ನೃತ್ಯ ಮಾಡುವುದು, ಹೆಸರಿಸುವಂಥವು. ಹಾಗೆಯೇ ಆಸಾದಿ ಹರಕೆಯ ಕೋಳಿಯನ್ನು ಮಾತಂಗ ಅಮ್ಮನವರು ಆವಾಹನೆಗೊಂಡಂತೆ ಉಗ್ರರೂಪದಿಂದ ನೋಡುತ್ತ ಆ ಹರಕೆಯ ಕೋಳಿಯನ್ನು ಹಲ್ಲಿನಿಂದ ಕಡಿದು ಬೀಸಿ ಒಗೆಯುತ್ತಾರೆ. ಇವರು ಹಾಕುವ ಹೆಜ್ಜೆಗಳಲ್ಲಿ ಅನೇಕ ವರಸೆಗಳಿವೆ. ಅವು-ಕಳಾಸು. ವರಸೆ, ದಾಟುವರಸೆ, ಮೊರಾಲುವರಸೆ ಮೊದಲಾದವು. ಆಂಧ್ರಪ್ರದೇಶದಲ್ಲಿ ಕರಗ ನೃತ್ಯ ಭಕ್ತಿ ಭಾವಗಳಿಗೆ ಪ್ರತೀಕವಾಗಿ, ಸಾಂಸ್ಕೃತಿಕ ಪ್ರತೀಕವೂ ಆಗಿದೆ.

ಟಿ.ಎಸ್.ಎನ್.ಅನುವಾದ ವಿ.ಆರ್.