ನಂದೀಶ್ವರ: ಹೇ ತಂದೆ ಮಹದಾಜ್ಞೆ.

ಭಾಮಿನಿ

ಇತ್ತಲಾ ಸತಿದೇವಿ ದಕ್ಷಾದ್ವರಕೆ ತೆರಳುವ ಮಾರ್ಗದೊಳ್
ಆಗುವ ಶಕುನವನು ನೋಡಿ, ದುಃಖಿಸಿದಳಾ ಸತಿದೇವಿ

ಪದ

ಪ್ರಾಣಕಾಂತರ ಮೀರಿ ಬಂದುದಕೆ ಇದಾವ ಶಕುನವಾ
ಕಾಣುತೇ ನಾ ಬಂದನೂ  ನಿಗಮಗೋಚರನು  ಅಲ್ಲಿಗೆ ಪೋಗಬೇಡೆಂದು
ಬಗೆ ಬಗೆಯಿಂದ ಪೇಳ್ದರು ॥ಪ್ರಾಣಕಾಂತರು॥

ಸತಿದೇವಿ: ಮೃಘದರನ ಮಾತು ಮೀರಿ ಬಂದಾ ನನ್ನ ಮುಗ್ಧಭಾವವನ್ನು ಏನೆಂದು ಹೇಳಲಿ, ಅಪ್ಪಾ ನಂದೀಶ್ವರ, ಹಗಲು ನಕ್ಷತ್ರಗಳು ಕಾಣುವವು. ಕಾಗೆಯು ಅಡ್ಡಲಾಯಿತು. ಸರ್ಪವು ಅಡ್ಡಗಟ್ಟಿತು. ಮುಂದೇನು ಪ್ರಾಪ್ತವಾಗುತ್ತದೊ ಕಾಣೆನೋ ನಂದೀಶ್ವರ ವೃಷಭೇಶ್ವರಾ.

ನಂದೀಶ್ವರ: ಅಮ್ಮಾ ತ್ರಿಲೋಕ ಜನನಿ, ಸಕಲದೇವತೆಗಳಿಗೆ ಶಕ್ತಿ ನೀನು. ಸಕಲ ನಿಗಮಾಗಮ ಪುರಾಣ ಪಾರಂಗತೆ ನೀನು. ಸಮಸ್ತ ಲೋಕ ಭುವನ ಬ್ರಹ್ಮಾಂಡವನ್ನು ರಕ್ಷಿಸುವುದು, ಕೊಲ್ಲುವುದು ನಿನ್ನ ಸ್ವತಂತ್ರ, ನವದುರ್ಗಿಯರು ನಿನ್ನ ದಾಸಿಯರು, ಮೃತ್ಯು ದೇವತೆಗೆ ಹೆತ್ತ ಮಾತೆ ನೀವಲ್ಲವೇ. ತ್ರಿಮೂರ್ತಿಗಳಂ ಹಡೆದು, ಅವರುಗಳ ಕರ್ತೃಗಳಂ ಮಾಡಿ ನಿಜಶಕ್ತಿಗೆ ಆಧಾರಳಾಗಿ, ಬ್ರಹ್ಮ, ವಿಷ್ಣು ರುದ್ರಾದಿಗಳಿಗೆ ಕಂಡೂ ಕಾಣದಂತೆ ಇರುವೆ. ಬ್ರಹ್ಮಗೆ ಬ್ರಹ್ಮ ರೂಪಿಣಿಯಾಗಿ, ರುದ್ರನಿಗೆ ಶಿವರೂಪಳಾಗಿ, ವಿಷ್ಣುವಿಗೆ ನಾರಾಯಣಿಯಾಗಿ, ದೇವತೆಗಳಿಗೆ ಮಹಾದೇವಿ ಎನಿಸಿ, ಯತಿಗಳಿಗೆ ಜ್ಞಾನಶಕ್ತಿ ಎಂದೆನಿಸಿ ಸಕಲಾಧಾರಕ್ಕೆ ಭೂದೇವಿ ಎನಿಸಿರುವೆ. ನಿನ್ನ ರೂಪವನ್ನು ವರ್ಣಿಸಲು, ಅಷ್ಟು ಜ್ಞಾನ ನನ್ನಲಿಲ್ಲ, ಹೇ ತಾಯಿ, ಈ ಅಪಶಕುನಗಳು ನಿನ್ನನ್ನೇನು ಮಾಡುತ್ತವೆ. ಮುಂದಕ್ಕೆ ಪ್ರಯಾಣ ಮಾಡುವರಾಗಿರಿ ದೇವಿ ಮಹಾನುಭಾವಿ.

ಸತಿದೇವಿ: ಅಪ್ಪಾ ವೃಷಭೇಶ್ವರಾ, ನೀನು ಹೇಳುವ ಮಾತು ನಿಜ, ಮುಂದಾಗುವ ದುರ್ನಿಮಿತ್ಯಂಗಳು ಬ್ರಹ್ಮ ಬರೆದ ಪ್ರಾರಬ್ದಂಗಳು, ಅನುಭವಿಸದೇ ತೀರುವುದಿಲ್ಲ, ಬಲಗಣ್ಣು ಬಲಭುಜವು ಹಾರಿದರೆ ಸ್ತ್ರೀಯರಿಗೆ ಹಾನಿ ಎಂದು ಹೇಳುವರು. ಯನ್ನ ಯತ್ನವೇನಿದೆ ಮುಂದೆ ಹೋಗೋಣ ನಡಿಯಪ್ಪಾ ನಂದೀಶ್ವರಾ.

(ದಕ್ಷ ಬ್ರಹ್ಮನ ಸಭೆ)

ನಂದೀಶ್ವರ: ನಮೋ ನಮೋ ದಕ್ಷ ಪ್ರಜೇಶ್ವರಾ, ನಿಮ್ಮ ತನಯೆ ಜಗದಾಂಬ ಸತಿದೇವಿ ಬಂದಿರುವರು ಮಹದಾಜ್ಞೆ ಏನೈ ದಕ್ಷ ಪ್ರಜೇಶ್ವರಾ.

ದಕ್ಷ: ಎಲೈ ಸಾರಥಿ, ಆಜ್ಞೆ ಇಲ್ಲದೆ ಈ ನಂದೀಶ್ವರ ಇಲ್ಲಿಗೆ ಬರಲು ಕಾರಣವೇನು. ಎಲಾ ನಂದೀಶ್ವರ ಇಲ್ಲಿಗೆ ಬರುವುದಕ್ಕೆ ನೀನು ಯೋಗ್ಯನಲ್ಲ. ನನ್ನ ಮಗಳು ಸತಿದೇವಿಯನ್ನು ಇಲ್ಲಿಗೆ ಬಾ ಎಂದು ನಾನೇನು ಕರೆಸಿದೆನೇ. ಬರುವುದಕ್ಕೆ ಸ್ವಲ್ಪವಾದರೂ ನಾಚಿಕೆ ಇಲ್ಲವೇ, ಮೊದಲು ಆಚೆಗೆ ಹೊರಡೋ ಅತಿ ಮೂರ್ಖನೇ.

ಪದ

ಏನಾ ಹೇಳಲಿ ಯನ್ನಾ, ಹೀನಾ ಕರ್ಮದ ಸುದ್ಧಿ.
ದೀನ ವತ್ಸಲ ಸಾಂಬನೇ, ನಿಗಮ ಗೋಚರನೂ,
ಇಲ್ಲಿಗೆ ಪೋಗಬೇಡೆಂದು ಬಗೆ ಬಗೆ
ಇಂದ ಪೇಳ್ದನೂ ॥ನಂದೀಶಾ

ಸತಿದೇವಿ: ಅಯ್ಯೋ ಸಾಂಬ ಶಿವಾ, ನಿನ್ನ ಮಾತು ಮೀರಿ ಬಂದುದಕ್ಕೆ ನನಗೆ ಪೂರ್ಣ ಅನುಭವ ತೋರಿತು. ಗಂಡನ ಮಾತು ಮೀರಿ ಬಂದ ಸತಿಯರ ಅವಸ್ಥೆ ಕಡೆಗೆ ಇದೇ ಗತಿಯಾಗುವುದೈ ನಂದೀಶ್ವರಾ ॥

ಪದ

ಭೂ ಕಾಂತ ಗುಣವಂತ ದಯವಂತ ಇಂಥ ಪಂಥ ಬೇಡವೊ
ಸಾರತರದ ಸುಖವೂ, ಹೆಣ್ಣಿಗೆ ತವರು ಮನೆಯು ವರವೂ,
ನಾರೀಮಣಿ ಸತಿ ಆರೈಸೆನ್ನನು,
ಧೀರ ಶಂಭುವನು ಮೀರಿ ಬಂದಿಹಳು ॥ಭೂ ಕಾಂತ ॥

ಪ್ರಸೂತಿ: ಹೇ ಕಾಂತ, ನಮ್ಮ ಮಗಳಾದ ಸತಿದೇವಿಯು ದೂರದಲ್ಲಿ ನಿಂತಿರುವಳು. ಜ್ಯೇಷ್ಠ ಪುತ್ರಿ ಇದರ ಮೇಲೆ ಶಿವನ ಕಾಂತೆ. ಜಗದಾಂಬೆ. ಹೆಣ್ಣು ಮಕ್ಕಳಿಗೆ ತಮ್ಮ ಗಂಡಂದಿರು ಎಷ್ಟು ಪ್ರೀತಿ ಇದ್ದರೂ, ತಂದೆ ತಾಯಿಗಳ ಮೇಲಿಟ್ಟ ಮಮತೆ ಹೋಗುವುದಿಲ್ಲ. ನಮ್ಮ ಮನೆಗೆ ಬಂದಂತೆ ಇನ್ನೊಬ್ಬರ ಮನೆಗೆ ಹೋದಳೇತಕ್ಕೆ, ಅಮ್ಮಾ ಎಂದು ಹಂಬಲಿಸಿ ಬಂದ ಮಗಳನ್ನು ಮನ್ನಿಸಿ ಕರೆದು ಯಜ್ಞವಂ ಮಾಡೈ ಸುಜ್ಞಾನವಂತ ॥

ದಕ್ಷ: ಹೇ ಕಾಂತೆ, ಪುನಃ ಪುನಃ ಆ ಸತಿದೇವಿಯ ಮೇಲೆ ಅಂತಃಕರಣವಿಟ್ಟು ಕರೆ ಯೆಂದರೆ ಕರೆಯುತ್ತೇನೆಯೇ. ಈ ಸತಿ ನನ್ನ ಮರ‌್ಯಾದೆಗೆ ಕುಂದು ತಂದವಳು. ಈ ಮಗಳು ಸತ್ತರೆ ನನಗೆ ದುಃಖವೇ ಇಲ್ಲ. ಈ ಮಗಳ ಮುಖವಂ ನೋಡಲಾರೆ ಕಂಡೆಯಾ. ಸತಿದೇವಿ ಎಂದು ಸುದ್ದಿ ಎತ್ತಿದವರನ್ನು ಕರಕರನೆ ತಿಂದು ನವಲಿ ನುಂಗುವನೆಂಬ ಕೋಪಾಗ್ನಿ ಭುಗಿಲ್ ಭುಗಿಲ್ ಎಂದು ಪಾದದಿಂದ ಮಸ್ತಕದವರೆವಿಗೂ ಬೆಂಕಿ ಹತ್ತಿ ಬಾಧಿಸುತ್ತದೆ. ಇನ್ನೊಮ್ಮೆ ಆ ಸುದ್ದಿ ಎತ್ತ ಬೇಡವೇ ಪ್ರಾಣದೊಲ್ಲಭೆ.

ಪದ

ಈಶನು ಬರದಿರಲೂ  ಈ ಸತಿ ಬೇಗನೆ ಬಂದಿಹಳೂ
ರೋಷ ಪಂಥವ ಬಿಟ್ಟು ಈ ಸತಿ ಮನ್ನಿಸು
ಈಶ ನೀಲಕಂಠೇಶನು ಮೆಚ್ಚುವ ಭೂ ಕಾಂತ ॥

ಪ್ರಸೂತಿ: ಹೇ ರಮಣ, ಶಿವ ಬಾರದಿದ್ದರು ಶಿವನ ಅರ್ಧಾಂಗಿನಿ ಬಂದ ಮೇಲೆ ಅರ್ಧನಾರೀಶ್ವರ ಬಂದಂತಾಗಲಿಲ್ಲವೆ. ಕರೆಯದೆ ಯಜ್ಞನಿಲಯಕ್ಕೆ ಬಂದಂಥ ಮಗಳನ್ನು ಅಡವಿಪಾಲು ಮಾಡುವುದು ಯಾವ ಧರ್ಮ. ಕರೆದು ಮನ್ನಿಸೈ ಪ್ರಾಣದೊಲ್ಲಭ ॥

ದಕ್ಷ: ಹೇ ಅರ್ಧಾಂಗಿನಿ, ನಿನಗಿನ್ನು ಬುದ್ಧಿ ಬಾರದೆ ಬುದ್ಧಿ ಹೀನಳೆ. ಶಿವನರಸಿ ಬಂದಿಹಳು ಶಡೃಷ ವಚನದಿಂದ ಕರೆದು ಮನ್ನಿಸೆಂದು ಬುದ್ಧಿಯನ್ನು ಹೇಳುವುದಕ್ಕೆ ಬರುತ್ತೀಯ. ಹೇ ಜಡ ಮೂರ್ಖಳೆ ಹಡೆದಿಹನೆಂಬ ಕಡು ದಯವಿದ್ದರೆ ನಡೆ ಯನ್ನರಮನೆಯನ್ನು ಬಿಟ್ಟು.

ಪದ

ಇನ್ನೇನಿದೆಯಮ್ಮ  ಎರವಾದೇ ಮಗಳೇ
ಸನ್ನುತ ಗುಣಮಣಿ  ಸಂಪಾದ ಯುಗಳೇ
ಮತಿಮೋರೆ ಇಲ್ಲದೆ  ಪತಿಯೊಂದೇ ಹಟದಿಂದ
ಸಂಕೆ ನಿನ್ನ ಕರೆಯಲಿಲ್ಲ ॥

ಪ್ರಸೂತಿ: ಅಮ್ಮಾ ಮಗಳೇ, ನಿಮ್ಮ ತಂದೆಯು ಒಂದೇ ರೀತಿಯಿಂದ ಹಟ ಮಾಡುತ್ತಿದ್ದಾರೆ. ನೀನು ನಮ್ಮ ಹೊಟ್ಟೆಯಲ್ಲಿ ಹುಟ್ಟಿ ಬಂದು ಇಂತಹ ಕಷ್ಟಕ್ಕೆ ಗುರಿಯಾದೆಯಾ. ಇಲ್ಲಿಗೆ ಏತಕ್ಕೆ ಬಂದೆಯಮ್ಮ ಮಗಳೇ.

ಸತಿದೇವಿ: ಹೇ ಜನನಿಯಾದ ಪ್ರಸೂತಿಯೇ ಕೇಳು. ತಂದೆಯ ಸಿಟ್ಟು ಬೇಕಾದಷ್ಟು ಇರಲಿ. ಇಲ್ಲಿನ ತನಕ ಬಂದ ಮೇಲೆ ಹಿಂದಕ್ಕೆ ಹೋದರೆ ಸರಿ ಜನರು ನಗುವರು. ಪತಿಯ ಮಾತು ಮೀರಿಬಂದು ಪಿತನು ನನ್ನನ್ನು ಸೇರಿಸದಿದ್ದ ಮೇಲೆ ನನ್ನ ತಪ್ಪು ಬಹಳವಾಯಿತು. ಬಂದು ಮಾತನಾಡಿಸುತ್ತೇನೆ. ಅಂತಃಕರಣ ಬಂದರಂತೂ ಸರಿ, ಇಲ್ಲವಾದರೆ ಸಾಂಬಶಿವನ ದಯವಿದ್ದಂತಾಗಲಿ ಹೋಗೋಣ ನಡಿಯಮ್ಮ ಜನನಿ.ತಂದೆಯವರ ಪಾದಕ್ಕೆ ವಂದಿಸುವೆನು.

ಪದ

ಸೆರಗೊಡ್ಡಿ ಬೇಡಿಕೊಂಬೆ  ಕೇಳೆನ್ನ ಜನಕಾ ಸೆರಗೊಡ್ಡಿ ಬೇಡಿಕೊಂಬೆ
ಮೃಡನು ನಿಮ್ಮನ್ನು ಕಂಡು ನುಡಿಸಲಿಲ್ಲವು ಎಂದು
ಹಿಡಿದಾ ಕೋಪವನ್ನು ಬಿಡು  ಕೇಳು ಜನಕಾ ಸೆರಗೊಡ್ಡಿ ॥

ಸತಿದೇವಿ: ಹೇ ತಂದೆಯಾದ ದಕ್ಷ ಪ್ರಜೇಶ್ವರನೆ, ನೀನು ಬಂದ ವೇಳೆಯಲ್ಲಿ ನನ್ನ ಪತಿ ಮಾತನಾಡಿಸಲಿಲ್ಲವೆಂಬ ಸಿಟ್ಟನ್ನು ಬಿಟ್ಟುಬಿಡೈ ಜನಕಾ ಜಗದ ವಿಖ್ಯಾತಿ ಕನಕ.

ದಕ್ಷಬ್ರಹ್ಮ: ಎಲೈ ಸಾರಥಿ, ಈ ಸತಿದೇವಿಯು ಈ ಸಭಾಮಧ್ಯದ ಯಜ್ಞಶಾಲೆಯ ಮುಂದೆ ಬಂದು ಹೋಗಲಿಕ್ಕೆ ಯೋಗ್ಯಳಲ್ಲ. ಹೇ ಸತಿದೇವಿ, ನಿನ್ನ ಗಂಡ ನನ್ನ ಕೂಡ ಮಾತನಾಡಿದರೇನು ಆಡದಿದ್ದರೇನು. ಸುಮ್ಮನೆ ನಿನ್ನ ಸ್ಥಳಾಂತರಕ್ಕೆ ಹೊರಟುಹೋಗೆ ಸತಿದೇವಿ.

ಪದ

ಕೋಪವ ಮಾಡುವರೇ ಕೇಳೆನ್ನ ಜನಕಾ  ಕೋಪಾವ ಮಾಡುವರೆ
ಆಲಿಸೊ ಜನಕ ಭೂಪಾಲ ಯನ್ನಯ ಮಾತ ಲಾಲಿಸೋ ॥

ಸತಿದೇವಿ: ಹೇ ತಂದೆ, ಯನ್ನ ಮೇಲೆ ಇಷ್ಟೊಂದು ಕೋಪವೇಕೆ. ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳು ಪ್ರಾಣವಂ ಕಳೆದುಕೊಂಡರೆ ನಿನ್ನ ವಡಲು ಉರಿಯುವುದಿಲ್ಲವೆ. ಜಟಾಜೂಟನ ಮೇಲೆ ಕ್ರೋಧ ಮಾಡಬೇಡ. ಇಂದುರವಿ ಅನಿಲ, ತ್ರಿನೇತ್ರಗಳುಳ್ಳಾತನು ಮುಖ್ಯವೇ ಹೊರ್ತು ಬೇರೆ ದೇವತೆಗಳುಂಟೆ ಜನಕಾ ವಿಖ್ಯಾತಿ ಕನಕ.

ದಕ್ಷ: ಹೋ ಹೋ ಹೋ ಕಷ್ಠವ ಮಾಡದೆ ಕೈಲಾಗದೆ ಹೊಟ್ಟೆಗನ್ನವಂ ಕಾಣದೆ, ಭಿಕ್ಷವಂ ಬೇಡಿ ದಿಕ್ಕು ದಿಕ್ಕು ತಿರುಗಿದರೂ ತುತ್ತನ್ನವಾದರೂ ಸಿಕ್ಕದೆ, ಬಾಣಾಸುರನ ಬಾಗಿಲಂ ಕಾಯ್ದು ಹೊಟ್ಟೆ ಹೊರೆಯುವ ಶಿವನ ಗುಣಾರವಿಂದಗಳಂ ಈ ಸತಿ ನನ್ನ ಮುಂದೆ ಮಹಾದೇವನೇ ಮಹಾಮಹಿಮನೆಂದು ಹೇಳಲು ಬರುತ್ತಾಳೆ. ಹೇ ಸತಿದೇವಿ, ನಿನ್ನ ಗಂಡ ದೊಡ್ಡವನಾದರೆ ಬೆತ್ತಲೆ ತಿರುಗುವನೇತಕ್ಕೆ, ಹೊದಿಯಲಿಕ್ಕೆ ಗತಿಯಿಲ್ಲದೆ ಆನೆಯ ತೊಗಲಿನ ಕಡಾಸಂ ಹೊದ್ದು ತಿರುಗುವನ್ಯಾತಕ್ಕೆ, ಥೂ ನಿನ್ನ ಗಂಡನ ಬಾಳನ್ನು ಸುಡು. ಅಂಥಾ ಕುಲಗೇಡಿಯಂ ಬ್ರಹ್ಮ ಮುಖ್ಯವಾದ ಇಕೋ ಈ ನನ್ನ ಯಜ್ಞದೋಳ್ ಮೊದಲ ಭಾಗವನ್ನು ದೇವತೆಗಳಿಗೆ ಕೊಟ್ಟು ಅವಮಾನಪಡಿಸಲೇ ಹೇಗೆ ಆಚೆಗೆ ಹೋಗೆ ಅತಿಮೂರ್ಖಳೇ.

ಪದ

ಮನ್ನಿಸದೋದರು ಜನಕಾ ಇನ್ನಾರಿಗೇಳಲಿ ಮುಂದೆ
ಹಡೆದ ದಕ್ಷನ ಯಜ್ಞ  ಕೊಡದ ಶಿವನ ಭಾಗ  ಕೇಡು ಮಾಡುದನು ಮನ್ನಿಸು ॥

ಸತಿದೇವಿ: ಹೇ ನಾರಾಯಣ ಹೇ ಬ್ರಹ್ಮದೇವ ಹೇ ಭೃಗು ಋಷಿಗಳೆ ಹೇ ನಾರದರೆ, ನನ್ನ ಪತಿಯು ಮಾಡಿದ ಅನ್ಯಾಯವೇನು. ಈ ಮೂಢ ಬೈಯುವುದು ಸರಿಯಾದ ನೀತಿಯೆ.

ದಕ್ಷ: ಹೇ ಭವಾನಿ, ಅನೇಕ ಋಷಿಗಳ ಮುಂದೆ ಪಿನಾಕಿಯಂ ಬೈಯ್ಯುವ ದುರ‌್ನೀತಿವಂತನೆಂದು ಹೇಳುತ್ತೀಯಲ್ಲ. ನಿನ್ನ ಬಾಯನ್ನು ಹೊಡೆಸುವೆನು. ಎಲೈ ಸಾರಥಿ ಈ ಸತಿದೇವಿಯನ್ನು ಯಜ್ಞಶಾಲೆಯನ್ನು ಬಿಟ್ಟು ಆಚೆಗೆ ದಬ್ಬುವಂಥವನಾಗು ಕಂಡೆಯಾ ಸಾರಥಿ.

ಹೇ ಭೃಗು ಮಹಾಮುನಿಗಳೇ, ಈ ಮೂರ್ಖನಂದನೆಯ ಗೊಡವೆ ನಮಗೇತಕ್ಕೆ. ಈ ಮಹಾಯಜ್ಞದೋಳ್ ಮೊದಲ ಹವಿರ್ಭಾಗವನ್ನು ನನ್ನ ಮನಸ್ಸಿಗೆ ಬಂದವರಿಗೆ ಕೊಡುತ್ತೇನೆ. ಅಧಮ ಶಿವನಂ ಬಿಟ್ಟು ಸರ್ವರಿಗೆ ಸಮರ್ಪಣೆ ಮಾಡುವ ಮಂತ್ರವಂ ಹೇಳೈ ಋಷಿವರ‌್ಯ.

ಪದ

ಹರಗೆ ಪೂರ್ವದ ಭಾಗ  ಸ್ಥಿರವಾಗಿ ಕೊಡದೇ
ಭರಿತ ವೇದದ ಭಾಷೆ ಅರಿಯಾ  ಕೇಳೈ ॥

ಭೃಗುರುಷಿ: ಅಯ್ಯ ದಕ್ಷ ಪ್ರಜೇಶ್ವರ, ಮೊದಲ ಭಾಗಕ್ಕೆ ಕರ್ತೃ ಪಿನಾಕಿ. ಇಲ್ಲಿರುವ ಋಷಿ ಸಮೂಹವನ್ನು  ಕೇಳಿ ನೋಡು. ಈ ಭ್ರಷ್ಟ ನುಡಿಯಂ ಬಿಟ್ಟು ಅಷ್ಟಮೂರ್ತಿಯನ್ನು ತಟ್ಟನೆ ಕರೆಸಯ್ಯ ದಕ್ಷ ಪ್ರಜೇಶ್ವರ.

ದಕ್ಷಬ್ರಹ್ಮ: ಇಕೋ ಅಖಂಡ ಶಿವನುದ್ದಂಡನ ಸುದ್ಧಿ ಈ ಭೂಮಂಡಲದಲ್ಲಿ ಇರದ ಹಾಗೆ ಮಾಡುತ್ತೇನೆ. ನಿನ್ನ ಮಂತ್ರವೆಷ್ಟು ನೀನೆಷ್ಟು. ಮನೆಯ ಪುರೋಹಿತನಾದ ಮೇಲೆ ವಿನಯವಾಗಿರಬೇಕು. ಮತ್ತೊಂದಾವರ್ತಿ ಹಸಗೆಟ್ಟು ಶಶಿಧರನ ಹೆಸರೆತ್ತಿ ನುಡಿದರೆ ನಿನ್ನಂ ದೆಶೆಗೆಡಿಸಿ ಬಿಡುವೆನೂ ಕಂಡೆಯಾ ಋಷಿವರ‌್ಯ.

ಭೃಗುರುಷಿ: ಹರಹರಾ ಇದು ನನಗೇನು ಬೇಕು. ನೀನೇ ಮಂತ್ರೋಚ್ಛಾರಣೆಯನ್ನು ಮಾಡು. ನಿನಗೆ ಬೇಕಾದವರಿಗೆ ಕೊಡು. ನಿನಗೆಲ್ಲೋ ಕಡೆಗಾಲ ಕಂಡೆಯಾ ರಾಜೇಂದ್ರ.

ಪದ

ಸ್ತವನದೊಳೊಪ್ಪುವ ಪೂರ್ವ  ಹವಿರ್ಭಾಗವನ್ನು
ಪದ್ಮ  ಧವಳಗರ್ಪಿಸಿ ಬಿಡುವೆ ತರ‌್ಪಣವ ದೇವ ಕೇಳ್ ದೇವ ॥

ದಕ್ಷ: ಎಲೈ ನಾರಾಯಣ, ಮೊದಲ ಯಜ್ಞ ಭಾಗಮಂ ನಿನಗೆ ಕೊಡುವೆ. ಮನ್ನಿಸಿ ತೆಗೆದುಕೋ ಇಕೋ ಕೃಷ್ಣಾರ್ಪಣ ಪೂರ್ವಕ ತರ್ಪಣವಂ ಬಿಡುವೆ ತೆಗೆದುಕೊಳ್ಳೈ ನಾರಾಯಣ.

ವಿಷ್ಣು: ಅಯ್ಯ ದಕ್ಷಪ್ರಜೇಶ್ವರ, ಮೊದಲು ಶಿವನಿಗೆ ಕೊಡಬೇಕು. ಅದು ಬಿಟ್ಟು ಮೊದಲು ನನ್ನನ್ನು ತೆಗೆದುಕೊ ಎಂದು ಹೇಳುವೆಯಲ್ಲ. ಈ ಮಹಾ ಮುನಿಗಳನ್ನೆಲ್ಲಾ ಕೇಳಿ ನೋಡು. ಅವರು ಹೇಳುವ ಮಂತ್ರಕ್ಕೆಲ್ಲಾ ನಾನು ಅಧಿನನಾಗಿರುತ್ತೇನೆ ಕೋಪ ಮಾತ್ರ ಬೇಡೈ ದಕ್ಷ ಪ್ರಜೇಶ್ವರ.

ದಕ್ಷ: ಹೇ ಸರಸ್ವತಿನಾಥ ಸರಸ ಸಂಜಾತ ಮೊದಲ ಭಾಗಮಂ ನಿನಗೆ ಕೊಡುವೆ. ಸೃಷ್ಠಿಕರ್ತ ನಮ್ಮ ಕುಲಾಭಿಮಾನಿ ದೇವತೆ ಎಂದು ಕೊಡುತ್ತೇನೆ. ನೀನಾದರೂ ತೆಗೆದುಕೊಳ್ಳೈ ವಿಷ್ಣುನಂದನ.

ಬ್ರಹ್ಮ: ಹೇ ದಕ್ಷ ಪ್ರಜೇಶ್ವರ, ನಾನು ಶಿವನ ಕೂಡೆ ಸೆಣಸಿದ್ಧಕ್ಕೆ ಒಂದು ಶಿರವೇ ಹೋಯಿತು. ಅಂಥಾ ಮಹಾದೇವನ ಕೂಡೆ ವೈರತ್ವ ಬೆಳೆಸಲಿಕ್ಕೆ ನಿನ್ನಂಥ ಮೂರ್ಖ ನಾನಲ್ಲ. ವಿಷ್ಣುವಿಗೆ ಕೊಟ್ಟ ತರುವಾಯ ನನಗೆ ಕೊಡಬಹುದೈ ದಕ್ಷ ಪ್ರಜೇಶ್ವರ.

ಪದ

ಸಕಲಾ ಲೋಕದ ವಾರ್ತೆ ಪ್ರಕಟಿಸುವ  ಯತಿರಾಯ
ಮೊದಲ ಭಾಗವ ನಿನಗೆ ಕೊಡುವೆ ॥

ದಕ್ಷ: ಬ್ರಹ್ಮ ಮಾನಸ ಪುತ್ರರಾದ ನಾರದರೆ, ಸನುಮತದಿಂದ ಮೊದಲ ಭಾಗವಂ ನಿಮಗೆ ಕೊಡುವೆ. ನೀವಾದರೂ ತೆಗೆದುಕೊಳ್ಳೈ ಬ್ರಹ್ಮನಂದನ.

ನಾರದ: ಹೇ ದಕ್ಷ ಪ್ರಜೇಶ್ವರ, ಸಕಲದೇವತೆಗಳು ಬಿಟ್ಟ ಶಿವ ನೈವೇದ್ಯ ನಮ್ಮಂಥ ಬಡ ಬ್ರಾಹ್ಮಣರಿಗೇತಕ್ಕೆ. ಇದಕ್ಕೆ ಅನೇಕರನ್ನು ಕೇಳುವುದೇತಕ್ಕೆ. ಅವರವರ ಹೊಟ್ಟೆ ಹಸಿವಾದರೆ ಅವರೇ ಬಂದು ಊಟ ಮಾಡುತ್ತಾರೆ. ಹೊಟ್ಟೆ ತುಂಬಿದವರಿಗೆ ನಿನ್ನ ಕಷ್ಟ ತಿಳಿದೀತೆ ಹೇಗೆ. ಅಷ್ಟಮೂರ್ತಿ ನೀನು ಕೊಟ್ಟರಂತು ಸರಿ ಕೊಡದೆ ಇದ್ದರೆ ಯಾರನ್ನು ಕೇಳುವುದೇತಕ್ಕೆ. ಈ ವಿಷ್ಣುವನ್ನು ನಂಬತಕ್ಕದಲ್ಲ. ಬ್ರಂಹ್ಮನು ಪೂಜೆಗೆ ಯೋಗ್ಯನಲ್ಲ. ದಿಕ್ಪಾಲಕರೆಲ್ಲಾ ನಿನ್ನ ಅಧೀನರು. ಎಲ್ಲರೂ ಅಂಜುತ್ತಾರೆ. ನಡೆಕೊಂಡರಂತೂ ವೇದ ಇಲ್ಲವಾದರೆ ಭೇದವೇ ಸರಿ. ಇದಕ್ಕೆ ನಾನೇ ಸಾಕ್ಷಿಯಾಗಿರುತ್ತೇನೆ. ಮನೋ ನಿಶ್ಚಲನಾಗಿ ಯಾರೊಬ್ಬರಿಗೂ ಅಂಜದೆ ದಕ್ಷ ಬ್ರಹ್ಮ ಸ್ವಾಹಾ ಎಂದು ನೀನೇ ಗ್ರಹಣ ಮಾಡು. ಅಂತಃಕರಣವಿದ್ದವರು ಊಟ ಮಾಡಲಿ ಇಲ್ಲದವರು ಎದ್ದು ಹೋಗಲಿ. ನಿನ್ನಿಂದಲೇ ಸಕಲ ಜಗತ್ತು ಜೀವರಾಶಿಗಳ ತೃಪ್ತಿ. ನಿನಗಿಂತಲೂ ಹಿರಿಯರು ಈ ಯಜ್ಞಶಾಲೆಯಲ್ಲಿ ಯಾರಿರುವರು ನಿನ್ನಷ್ಟಕ್ಕೆ ನೀನೇ ಉಂಡುಬಿಡೈ ದಕ್ಷ ಪ್ರಜೇಶ್ವರ.

ದಕ್ಷಬ್ರಹ್ಮ: ಭಲೈ ನಾರದರೇ, ನನ್ನ ಮನೋಚಿಂತೆ ನೀವೇ ತೀರಿಸಿದಿರಿ. ನನ್ನ ಮನಸ್ಸಿನೊಳಗೆ ನಿಮ್ಮ ಅಭಿಪ್ರಾಯವನ್ನೇ ಸಾಧಿಸಿದ್ದೆ. ಇದು ಒಳ್ಳೆಯ ಮಾತು. ದುರ್ಮಾರ್ಗ ದುರ್ಭಾಗ್ಯ ಅಧಮಾಧಮ ಮಹಾದೇವನ ಮರ್ಯಾದೆ ನಾನೇ ತೆಗೆದುಕೊಂಬುವೆನು.

ಸತಿದೇವಿ: ಅಯ್ಯ ದಕ್ಷ ಪ್ರಜೇಶ್ವರ, ನಿನ್ನ ಸ್ವಪ್ರಕಾಶವೇ ಸಿದ್ಧಿಯಾಗಲಿ. ಹಿಡಿದ ಪಂಥವನ್ನು ಬಿಡಬೇಡ. ಅಂದ ನುಡಿಯನ್ನು ಮರೆಯಬೇಡ. ನೀಲಕಂಠನ ತ್ರಿಶೂಲಕ್ಕೆ ತುತ್ತಾಗದೆ ಇರಬೇಡ. ಸಕಲ ದೇವತೆಗಳೇ ನೀವೇ ಸಾಕ್ಷಿ. ಹೇ ಅಗ್ನಿ ಪುರುಷ ಈಶನ ಹವಿರ್ಭಾಗ ನನ್ನ ಜೀವನ. ಈಶನ ಪಾದಕ್ಕೆ ಗತಿ ಹೊಂದಿಸು. ಚಂದ್ರಧರ ಆನಂದವನ್ನು ಕೊಡು. ಅಮೃತ ಶೇಖರ ಬೆಳದಿಂಗಳಲ್ಲಿ ನಿಲ್ಲಿಸು.

(ಸತಿದೇವಿಯ ಅಗ್ನಿಪ್ರವೇಶ)

ನಂದೀಶ್ವರ: ಎಲಾ ದ್ರೋಹಿಯಾದ ದಕ್ಷಬ್ರಹ್ಮ, ನಿನ್ನ ಮಗಳ ಮುಖವಂ ನೋಡಲಿಲ್ಲವೇ, ಮಹದೇವಿಯು ಅನ್ಯಾಯವಾಗಿ ಪ್ರಾಣವನ್ನು ನೀಗಿದಳಲ್ಲ. ಹರಹರಾ ಎಲಾ ಭಂಡ, ಗಂಡುಗಲಿಯಾದ ಯನಗೆ ಪರಶಿವನ ಆಜ್ಞೆಯಾಯಿತ್ತೆಂದರೆ ನಿನ್ನ ಶಿರವಂ ಕಡಿದು ಅಂಧಕಾಸುರನಿಗೆ ರುಂಡಮಾಲೆಯನ್ನು ಇಡುತ್ತಲಿದ್ದೆ. ಆಜ್ಞೆಯಂ ನಾನು ಪಡೆಯಲಿಲ್ಲ. ಇಕೋ ನಿನ್ನಯ ಯಜ್ಞ ಶಾಲೆಯಂ ಕೆಡಿಸಿ ಈಗಲೇ ಈಶನಿಗೆ ಈ ವಾರ್ತೆಯಂ ಮುಟ್ಟಿಸುವೆ. ಎಲೈ ಚಂಡ ಚಂಡಾಕ್ಷಿ ಚಂಡಿಕಾದ್ಯಖಿಳ ಯಕ್ಷರಾಕ್ಷಸ ಭೂತ ಭೇತಾಳ ರುದ್ರಗಣಾದಿಗಳೇ ಕೇಳಿದಿರಾ, ಈ ಭಂಡನ ಯಜ್ಞ ಕುಂಡದಲ್ಲಿ ಮಲಮೂತ್ರಾದಿಗಳನ್ನು ಹಾಕಿ ಕೆಡಿಸಿಬಿಡಿ. ನಾನು ಈಗಲೇ ಕೈಲಾಸಕ್ಕೆ ಹೋಗುತ್ತೇನೆ.

ನಂದೀಶ: ಹೇ ಮಹದೇವ, ನಿನ್ನ ವೈರಿ ದಕ್ಷಬ್ರಹ್ಮನು ನಿಮ್ಮನ್ನು ನಾನಾ ಪರಿಯಲ್ಲಿ ನಿಂದನೆಯನ್ನು ಮಾಡಿ ಮಹಾದೇವಿಯನ್ನು ಯಜ್ಞಶಾಲೆಯಿಂದ ದಬ್ಬಿ ಎಲ್ಲ ದೇವತೆಗಳ ಮಧ್ಯ ಮೊದಲ ಕಬಳವನ್ನು ತಾನೇ ತಿಂದನು. ಇದನ್ನು ಅಮ್ಮನವರು ನೋಡಿ ಸಹಿಸಲಾರದೆ ಅದೇ ಅಗ್ನಿಕೊಂಡದಲ್ಲಿ ಬಿದ್ದು ಹರಣವಂ ನೀಗಿದರು ದೇವಾ ಕರುಣ ಪ್ರಭಾವ.

ಈಶ್ವರ: ಅಲಲಲೈ ಸಾರಥಿ, ನನ್ನ ಮನೋ ನಾಯಕಿ ಅಗ್ನಿ ಪ್ರವೇಶವಾದಳೇ, ಸತಿದೇವಿ ನಾನು ಎಷ್ಟು ಹೇಳಿದರೂ ಕೇಳದೇ ಅಧಮ ದಕ್ಷನ ಯಜ್ಞದೋಳ್ ಬಿದ್ದು ಧ್ವಂಸವಾದೆಯಾ. ಎಲಾ ಸಾರಥಿ ಇಕೋ ಕೇಳ್ ನಿಟಿಲಾಕ್ಷನ ಸತಿ, ಹಠದಿಂದ ತಂದೆಯೋಳ್ ಛಟ, ಛಟ, ಕ್ರೋಧಮಂ ಬೆಳಸಿ ನಟನ ವೈಶ್ಸಾನರನೋಳ್ ಅಗ್ನಿ ಪ್ರವೇಶವಾದ ಸುದ್ಧಿಯನ್ನು ಕೇಳಿ ನಟನಟಿಸುವ ದಕ್ಷನ ಪಟುತರ ಕ್ರೋಧ, ಘಟಿತಾರ್ಧದೋಳ್ ಛಟಛಟನೆ ಮುರಿದು ಛಟ ಛಟಾ ಜಟಾರ್ಜೂಟದಲಿಂದ ಪಟುತರ ಪರಾಕ್ರಮಾಟೋಪ ಕ್ರೋಧ, ರುದ್ರ ಭದ್ರತರ ಛಿದ್ರ ರುದ್ರಾವತಾರವ ಪ್ರತ್ಯೇಕ ತೆಗೆದು ವೀರಭದ್ರನಂ ಉದ್ಭವಿಸಿ ಅವನ ಶಿರವಂ ತರಿಸುವೆ. ಅರ್ಧ್ವರುದ್ಘಾತ್ರ ಕಳೆದವರ ಖಂಡಮಂ ಹಿಂಡು ಭೂತಗಳಿಗೆ ಪಿಂಡಮಂ ಮಾಡಿ ಹಾಕಿಸುವೆ. ಮಹಾಶಕ್ತಿಯಂ ಹಣೆಗಣ್ಣಿನ ಬೆವರಿಂದುದ್ಭವ ಮಾಡುವೆ. ನೋಡಲೈ ಸಾರಥಿ, ಆಕಾಶಕ್ಕೆ ಮುಟ್ಟುವ ಯನ್ನ ಜಡೆಯಂ ನೆಲಕ್ಕಪ್ಪಳಿಸುವೆನು ಅಲಲಲೈ ಭಲಾ ಭಲಾ.

ವೀರಭದ್ರ: ನಮೋ ನಮೋ ಜನಕ ಜಗದ್ವಿಖ್ಯಾತಿ ಕನಕ. ಹೇ ತಂದೆ ಹಿಮಬಿಂಬವಂ, ವಿಮಲ ಸುರತರಂಗಿಣಿಯಂ, ಜಡೆಯೊಳಗಿಟ್ಟು, ಸಡಗರದಿಂದೆಮ್ಮ ಪಡೆದ ಮೃಡರಾಯರೇ, ಇಂದಿನ ದಿನ ಭೂಮಂಡಲ ಖಂಡತುಂಡಾಗಿ, ಗಂಡುಗಲಿ ಶೇಷನ ಪಣಾಪಣಿಗಳಂ ಕಿತ್ತು, ಭಂಡಕರ ರತ್ನಮಂ ನಿನ್ನ ಪಾದ ಪುಂಡರೀಕದಲ್ಲಿಡಲೇ ಹೇಗೆ, ಮೃತ್ಯು ದೇವತೆಯು ನಿನ್ನಾಗ್ನೆಯಲ್ಲಿ ಇರುವಳೋ ಇಲ್ಲವೋ ಹೇಗೆ, ವಿಷ್ಣು ಬ್ರಂಹೇಂದ್ರ ಮುನಿ ಮನು ವಸು ರುದ್ರಾದಿಗಳು ತ್ರಿಕಾಲದೋಳ್ ಬಂದು ನಿನ್ನ ದರ್ಶನಾರ್ಥದಲ್ಲಿ ಹಿಮ್ಮನಸ್ಸು ಮಾಡಿದರೆ ಹೇಗೆ. ನಿನಗೆ ಬಂದಿರುವ ಹಾನಿ ದಾವುದೈ. ಧೂರ್ಜಟಿ. ಥಟ್ಟನೆ ಯನ್ನೋಳ್ ಉಸಿರು, ಕೊಡು ಒಂದಾಗ್ನೆಯಂ ಜಡ ದೇಹಿಗಳ ನಡು ನೆತ್ತಿಯಂ ಕಡಿದು ಪುಡಿಮಾಡಿ ಬಂದು ನಿನ್ನ ಪಾದಸ್ಕಂದ ಇಂದೀವರಂಗಳಿಗೆ ವಂದಿಸುತ್ತೇನೆ ತ್ರಿಪುರಾಂತಕ ಅಂಧಕಾಂತಕ.

ಈಶ್ವರ: ಹೇ ಕಂದಾ, ಅಧಮ ದಕ್ಷಬ್ರಹ್ಮನು ಮಹಾಯಗ್ನವಂ ಮಾಡಿ ಪ್ರಥಮ ಹವಿರ್ಭಾಗವಂ ತಾನೇ ತಿಂದನಾದ ಕಾರಣ, ಅದೇ ಅಗ್ನಿ ಕೊಂಡದಲ್ಲಿ ಸತಿದೇವಿಯು ಅಗ್ನಿಪ್ರವೇಶಳಾದ ಕಾರಣ, ಮಡದಿಗೆ ಮೃತ್ಯುವಾದ ದಕ್ಷನ ಶಿರವಂ ತರಿದು ಬಾರೈ ವೀರಭದ್ರ, ಹಿಡಿ ವೀಳ್ಯವಂ ಕೊಡುತ್ತೇನೆ. ಅತಿ ಜಾಗ್ರತೆಯಿಂ ದಕ್ಷಾದ್ವರಕ್ಕೆ ತೆರಳೈ ವೀರಭದ್ರ ಮರಾಟರುದ್ರ.

ವೀರಭದ್ರ: ತಮ್ಮ ಅಪ್ಪಣೆಯಂತೆ ಆಗಲೈ ಜನಕ ಜಗದ್ವಿಖ್ಯಾತಿ ಕನಕ.

ಪದ

ಕಿಡಿಯನುಗುಳುತ ವೀರಭದ್ರನು  ನೆಗೆದು ಆಕಾಶಕ್ಕೆ ಅಡರುತೆ
ಕಡಿವೆ ದಕ್ಷನ ಶಿರವನೆನುತಾ ಬಂದನಾಗಾ ॥

ವೀರಭದ್ರ: ಎಲಲಲೈ ಭಂಡ ದಕ್ಷಬ್ರಹ್ಮ, ಜಗಜೀವಜಾಲಂಗಳಿಗೆಲ್ಲಾ ಆಧಾರ ಸೂತ್ರನಾದ ಶಿವನೋಳ್ ವೈರವಂ ಬೆಳೆಸಿ, ಯಜ್ಞವಂ ಮಾಡಿ ಮಗಳಂ ನೂಕಿ ನಿನ್ನ ಹೊಟ್ಟೆಗೆ ತಿಂದಿರುವ ಯಜ್ಞ ಭಾಗದ ರುದ್ರ ಕಬಳಂ ತಿಂದ ಉದರಮಂ ಸೀಳಿ ಕಡೆಗೆ ತೆಗೆದಿಡುವೆ, ಇದಕ್ಕೆ ಏನು ಹೇಳುವೆ ಅಧಮಾಧಾಮ.

ಪದ

ಕೇಳೆಲೋ ಶಿವಕುಮಾರ ಕಾಳಗಕೆ ಬಂದಿಹೆ ಏನೋ
ಸೀಳುವೆನು ನಿನ್ನ ಈ ಕ್ಷಣದೀ  ಈ ಕ್ಷಣ ॥

ದಕ್ಷ: ಎಲೈ ಶಿವನ ಕುಮಾರ ಭಲಿರೇ ಭಾಪುರೇ, ಹದಿನಾಲ್ಕು ಲೋಕಕ್ಕೆ ಕರ್ತ ಶಿವನಂ ಶಿಕ್ಷಿಪ ದಕ್ಷ ಪ್ರಜೇಶ್ವರನ ಪ್ರಭಾವದ ಖಡ್ಗಕ್ಕೆ ಗುರಿಯಾಗು ಹೋಗೆಂದು ಅಧಮ ಶಿವ ನಿಮ್ಮ ತಂದೆ ಕಳುಹಿಸಿದನೇ. ನಿನ್ನನ್ನು ಈ ಸಭಾ ಮಧ್ಯದಲ್ಲಿ ಹಿಡಿದು, ಸೀಳಿ ಗಗನಕ್ಕೆ ಒಗೆದು ಬಿಡುವೆನು ಕಂಡ್ಯಾ ವೀರಭದ್ರ.

ವೀರಭದ್ರ: ಯಲವೋ ದಕ್ಷ ಹಾಗಾದರೆ ಯುದ್ಧಕ್ಕೆ ಸಿದ್ಧನಾಗು.

(ಯುದ್ಧದಕ್ಷ ಸಂಹಾರ)

ಅಲಲಲೈ ಸಾರಥಿ ಈ ವಾರ್ತೆಯಂ ಈಗಲೇ ಈಶನಿಗೆ ಮುಟ್ಟಿಸುತ್ತೇನೆ.

ಭಾಮಿನಿ

ಇಂತೂ ಶಿವನ ಕುಮಾರ ವೀರಭದ್ರನ ಪ್ರಭಾವಕ್ಕೆ
ದಕ್ಷನ ಮಾರ್ಬಲವೆಲ್ಲಾ ಪಲಾಯನವಾಗಲು
ಆ ಸಮಯದೋಳ ದಕ್ಷನ ಸತಿ ಪ್ರಸೂತಿಯು ದುಃಖಿಸುತ್ತಿದ್ದಳು ॥

ಪದ

ಅಯ್ಯೋ ಪ್ರಾಣದರಸೇ, ನೀ ಮೈಯ ಮರೆದೆ ಶಿವಗೇ
ಹರನೊಳು ವೈರವು ಬೇಡವೆಂದೇಳಿದೆ
ಭವನು ನಿಮ್ಮನು ಕೊಂದನೇ ॥

ಪ್ರಸೂತಿ: ಅಯ್ಯೋ ರಮಣ, ನಾನು ಎಷ್ಟು ವಿಧವಾಗಿ ಹೇಳಿದರೂ ಕೇಳದೆ ಅಖಂಡ ಮೂರ್ತಿಯಲ್ಲಿ ವೈರಮಂ ಬೆಳಸಿ ಪ್ರಾಣವಂ ನೀಗಿದೆಯಾ, ಅಯ್ಯೋ ಶಿವಶಿವಾ ಮುಂದೆ ನಾನೆಂತು ಜೀವಿಸಲಿ ಶಂಕರ ಗಂಗಾಧರಾ.

ವೀರಭದ್ರ: ನಮೋ ನಮೋ ಜನಕಾ ಈಶಾ ರಜತಾದ್ರಿ ವಾಸ, ಶಿವದ್ರೋಹಿಯಾದ ದಕ್ಷನ ಶಿರವಂ ಖಂಡ್ರಿಸಿರುವೆನು, ನೋಡೈ ಜನಕಾ ಜಗದ್ವಿಖ್ಯಾತಿ ಕನಕ.

ಪ್ರಸೂತಿ: ನಮೋ ನಮೋ ಈಶ ರಜತಾದ್ರಿವಾಸ, ನಿಮ್ಮ ಕುಮಾರನಾದ ವೀರಭದ್ರ ದೇವರು ನನ್ನ ಪತಿಯ ಶಿರವಂ ಕತ್ತರಿಸಿರುವನು. ನನ್ನ ಓಲೆ ಭಾಗ್ಯ ಕಾಪಾಡಬೇಕೈ ಈಶ ಗಂಗಾಧರೇಶ ॥

ಈಶ್ವರ: ಕಂದಾ ವೀರಭದ್ರ, ದಕ್ಷ ಪ್ರಜೇಶ್ವರನ ಪ್ರಾಣ ನಾಯಕಿಯಾದ ಪ್ರಸೂತಿಯು ಬಹಳ ದೈನ್ಯದಿಂದ ಬೇಡುತ್ತಿರುವಳು, ಆದ ಪ್ರಯುಕ್ತ ದಕ್ಷನ ಬಿಂಬಕ್ಕೆ ಹವ್ಯದ ಶಿರವಂ ಜೋಡಿಸಿ ಪ್ರಾಣದಾನವಂ ಮಾಡೈ ಕಂದಾ ವೀರಭದ್ರ.

ಸಂಪೂರ್ಣ

 

ಮಂಗಳ

ಎತ್ತೀರಾರತಿ ಗಿರಿಜಾ ವರಗೇ ಮತ್ತೆ ಗಜಗಾಮಿನಿಯರೆಲ್ಲಾ
ಹರಗೇ  ಸಾಂಬ ಶಿವಗೇ  ಮೃತ್ಯುಂಜಯಗೇ  ಮುರಹರಗೇ
ಸತ್ಯ ಸಮರಸ ಉಳ್ಳ ಬಾಲೆಯರೆಲ್ಲ ಅರ್ತಿ ಇಂದಲಿ
ಚಿತ್ರಗೆಲಸದೊಳೊಪ್ಪುತಿಹ ನವರತ್ನದಾರತಿ ಎತ್ತಿರೇ ॥