ದಕ್ಷಬ್ರಹ್ಮನ ಕಥೆ

ಗಣಸ್ತುತಿ

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ
ಅನೇಕ ದಂತಂ ಭಕ್ತಾನಾಂ ಏಕದಂತ ಮುಪಾಸ್ಮಯೇ॥

ತ್ರಿವುಡೆ

ಶ್ರೀ ಉಮಾಪತಿ ಪಾದ ಪಂಕಜ ಶ್ರೀ ವಿನಾಯಕ ರೂಢ ಲಕ್ಷ್ಮಿಯ
ದೇವಗಂಗಾದರನೆ ಪಾಲಿಸು ಮತಿ ಮಂಗಳವಾ

ಭೂವಿನುತ ದಕ್ಷ ಪ್ರಜೇಶ್ವರ  ಸಾವುಧಾನದಿ ಸ್ತವನ ಮಾಡಲಿ
ಭಾವಮನ ಸಂತೋಷದಿಂದಲಿ ಬೇಕು ಎಂದೆನುತಾ

ಭೂವರಾತ್ಮಕ ತಾನೆ ಯೋಚಿಸಿ  ಭೂಮಿ ಬುಧ ಸುರಯತಿವರಾಧ್ಯರ
ಪಾವನಕ ಎನಿಸುವೆನು ಯಜ್ಞವ  ಗೈದು ನಿಜವೆನುತಾ ॥

ದಕ್ಷಬ್ರಹ್ಮ: ಎಲೈ ಸಾರಥಿ, ನಾವು ದಾರೆಂದರೆ ಭರತ ಭದ್ರಸ್ಯ ಕಿನ್ನರ ಕಿಂಪುರುಷ ವರುಣಾದ್ಯಖಿಳ ದ್ವೀಪಂಗಳಿಗೆ ಏಕಚಕದ್ರಾಧೀಶ್ವರ ಬಲೋದ್ಭದ್ಧನಿಲಂಪು ಕಲಾಬ್ಧಿ ಹಿಮಾಂಶುವೆಂದೆನಿಸಿದ ಇಂದ್ರಾದೈಖಿಳ ದೇವತಾದಿ ನಿಕರಕ್ಕೆ ಕನ್ನ ಪ್ರಧಾನಂಗಳಂ ಮಾಡಿ ತ್ರಿಮೂರ್ತಿಗಳ ಮನಕ್ಕೆ ಆನಂದಮಂ ತೋರಿಸಿ ಮಹಾಭೀಕರದಿಂದ ತ್ರಿಜಗವಂ ಪಾಲಿಸುವ ದಕ್ಷ ಪ್ರಜೇಶ್ವರನೆಂದು ತಿಳಿ.

ಎಲೈ ಸಾರಥಿ, ಈ ಸಭಾ ಓಲಗಕ್ಕೆ ಬಂದ ಕಾರಣವೇನೆಂದರೆ ರುದ್ರನೇ ಮೊದಲಾಗಿ ಸಕಲ ದೇವತೆಗಳೆಲ್ಲಾ ಎನ್ನ ಅಳಿಯಂದಿರಾದರು. ಅವರನ್ನು ಒಮ್ಮೆಯಾದರೂ ಹಬ್ಬದೂಟಕ್ಕೆ ಕರೆಸಲಿಲ್ಲ. ಆದುದರಿಂದ ಸಕಲರನ್ನೂ ಕರೆಯಿಸಿ ಸಮಾರಂಭವನ್ನು ಮಾಡಬೇಕೆಂದಿರುತ್ತೇನೆ.

ಹೇ ಕಾಂತ, ಸಕಲ ದೇವತೆಗಳೂ ಯನ್ನಳಿಯಂದಿರಾದರು ಅವರನ್ನ ಒಮ್ಮೆಯಾದರೂ ಕರೆಸಲಿಲ್ಲ. ಈಗ ಯಾಗವಂ ಪ್ರಾರಂಭ ಮಾಡಿ ಸಕಲರನ್ನೂ ಕರೆತರಬೇಕೆಂದಿರುತ್ತೇನೆ. ಮೊದಲು ಧಾರನ್ನು ಕರೆಯಲು ಹೋಗಲಿ ನಿನ್ನ ಮನಸ್ಸಿನ ಅಭಿಪ್ರಾಯವನ್ನು ತಿಳಿಸುವನಾಗು.

ಪದ

ಸತಿದೇವಿಯ ರಮಣನ  ಕರಿ ಬೇಗನೆ  ಹಿರಿಯ ಮಗಳ ಪತಿ
ಹರನ ನೀ ಸವನಕ್ಕೆ  ತ್ವರಿತದಿಂದಲಿ ಪೋಗಿ ಕರಿ ಬೇಗನೆ ॥

ಪ್ರಸೂತಿ: ಹೇ ಕಾಂತ ಸದಾಶಿವಗೆ ಹಿರಿಯ ಮಗಳನ್ನು ಕೊಟ್ಟ ಮೇಲೆ ಹಿರೇ ಅಳಿಯನಲ್ಲವೆ. ಆದುದರಿಂದ ಹರಿ ಬ್ರಹ್ಮಾದಿ ದೇವತೆಗಳಿಗೆ ಪತ್ರ ಮುಖಾಂತರದಿಂದ ತಿಳಿಸಿ, ಹಿರೇ ಅಳಿಯನಾದ ಮಹದೇವನನ್ನು ಹಿರೇಮಗಳಾದ ಗೌರಿಯನ್ನು ನೀವೇ ಸ್ವಯಂ ಹೋಗಿ ಕರೆದುಕೊಂಡು ಬಂದು ಯಜ್ಞವಂ ಸಾಗಿಸಿದರೆ ಒಳ್ಳೆಯದಲ್ಲವೇ ರಮಣಾ ಸದ್ಗುಣಾಭರಣ.

ದಕ್ಷಬ್ರಹ್ಮ: ನಿನ್ನ ಇಷ್ಟದಂತಾಗಲಿ, ಎಲೈ ಸಾರಥಿ ಹರಿ ಬ್ರಹ್ಮ ಇಂದ್ರಾಗ್ನಿ ಯಮ ನೈರುತ್ಯ ವರುಣ ವಾಯುವ್ಯ ಕುಬೇರ ಈಶಾನ್ಯ ಸೋಮರ್ಕಾದಿ ನವಗ್ರಹಾದಿ, ಕಶ್ಯಪ ಅತ್ರಿ ಭಾರಧ್ವಜ ವಿಶ್ವಾಮಿತ್ರಾದಿ ದೇವಋಷಿ ಯಕ್ಷ ಕಿನ್ನರ ಕಿಂಪುರುಷಾದಿಗಳಿಗೆ ಪತ್ರಮಂ ಕೊಟ್ಟು, ದಕ್ಷ ಪ್ರಜೇಶ್ವರ ಸೋಮಯಜ ಮಹಾ ಯಜ್ಞವಂ ಸಾಗಿಸುವ ಜಾಗ್ರತೆ ಬನ್ನಿರೆಂದು ತಿಳಿಸು. ಅಲ್ಲದೆ ಕೈಲಾಸಕ್ಕೆ ಹೋಗೋಣ. ರಥವನ್ನು ಹೊಡೆಯುವಂಥವನಾಗು.

ತ್ರಿವುಡೆ

ಶ್ರೀ ಮಹಾಕೈಲಾಸನಗರಿಗೆ ಪ್ರೇಮದಲಿ
ದಕ್ಷ ಪ್ರಜೇಶ್ವರ ಸಾವುಧಾನದಿ
ನಡೆದು ಬಂದನು ಹರುಷದಿಂದಾ ॥

ಸೋಮಸೂರ‌್ಯ ಕೋಟಿ ಕಾಂತಿಯು
ಹೇಮಮಣಿ ಮಯಮಧ್ಯ ರಂಗದಿ
ಸ್ವಾಮಿ ದಾಕ್ಷಾಯಣಿ ಸಮೇತದಿ  ಶಿವನು ಕುಳಿತಿರ್ದಾ ॥

ಭಾಮಿನಿ

ಇಂತು ದಕ್ಷ ಪ್ರಜೇಶ್ವರ ಸಂತಸದಿ  ಶಿವನ ಸಿಂಹಾಸನ
ಪರಿಯಂಕರಂ ಬರಲು ಸರ‌್ವ ದೇವಗುಣ ಋಷಿಗಣ
ಸಾಧ್ಯರೆಲ್ಲರು ಶಿವಯೋಗದೊಳಿರಲ್ಕೆ ಈಶ್ವರನು ಮಾವ ಬಂದಿಹನೆಂದು
ಯಚ್ಚರ ಮರೆತು ಕುಳಿತಿರಲು ದಕ್ಷಬ್ರಹ್ಮ
ಕೋಪವೆಗ್ಗಳಿಸಿ ಮೆರೆದನಾ ಸಭಾದೋಳ್ ನಿಂತು ಯೇನೆನುತ್ತಿರ್ದನೂ.

ಪದ

ನೋಡೆಲೊ ಸಾರಥಿ  ಇಂಥ ಮೂಢ ದೇವರುಂಟೆ
ಗಾಡಾದಿ ನಾ ಬಂದು ನಿಂತಿರಲು  ನೋಡದಲೆ
ಮೌನದಲಿ  ಮಾತಾಡದೆ ಕುಳಿತಿರುವ ಕಾಡಿನಲಿ
ಕಾಲ ಕಳೆಯುವನ  ಕಡೆ ನೋಡೋ ॥

ದಕ್ಷ: ಯಲೈ ಸಾರಥಿ, ಇಂಥಾತ ಮೋಕ್ಷ ಗುಣ ದೇವರು ಈ ಲೋಕದಲ್ಲಿ ಉಂಟೆ. ಹೆಣ್ಣು ಕೊಟ್ಟು ಕಣ್ಣಿನಲ್ಲಿ ನೋಡಿ ಆನಂದಪಡುವ ಧನ್ಯ ಘನ ಪರಾಕ್ರಮಿ ದಕ್ಷಬ್ರಹ್ಮ ಜಗದೀಶ್ವರ ನಾನು ಬಂದು ನಿಂತರೆ, ಮಾವ ಬಂದಾನೆಂಬ ಭಾವಾರ್ಥ ಇವಗೆ ಸ್ವಲ್ಪವಾದರೂ ಹುಟ್ಟಲಿಲ್ಲ. ನನ್ನ ಕಡೆಗೆ ಮುಖವೆತ್ತಿ ನೋಡದೆ ಮಾತನ್ನಾಡದೆ ಮೂಕಗ್ರಹದಂತಿರ್ಪನು. ಕೆಟ್ಟ ಗುಣ ಮಾಡಿಕೊಂಡು ಹೆಂಡತಿಯಂ ಎಡ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮೌನಭಾವದಿಂದಿರುವ ಇವನ ಮನೆಯಲ್ಲಿ ನಾನೇನು ಇರಲಿಕ್ಕೆ ಬಂದಿಲ್ಲ. ಇವನ ಭಿಕ್ಷದ ಕೂಳಿಗೆ ನಾನೇನಾದರು ಕೈಯೊಡ್ಡಿ ಬಂದೆನೇ ಹೇಗೆ ? ಹೆಂಡತಿಯ ಮಾತನ್ನು ಕೇಳಿ ಹಿರೇ ಅಳಿಯನೆಂದು ಕರೆಯಲಿಕ್ಕೆ ಬಂದರೆ ಸಭಾದಲ್ಲಿ ಎರಡು ಮುಹೂರ್ತ ಪರಿಯಂತರ ನಿಂತರೆ, ಬಂದಿರಿ ಯಾತಕ್ಕೆಂದು ಕೇಳಲಿಲ್ಲ ಕುಳ್ಳಿರಿ ಅನ್ನುವುದಕ್ಕೆ ಎಲ್ಲರ ಬಾಯಿಗೂ ಮುಳ್ಳು ಮುರಿದಿತ್ತೇನೊ. ಇಂಥಾ ಮೂಢನಾಗಿರಲಿಕ್ಕೆ ಸ್ಮಶಾನದಲ್ಲಿ ಶವದ ಕುಣಿಯಂ ಕೆದರಿ ಕುಣಿಲುದ್ದ್ರಷ್ಟನಾಗಿ ಮಲಗುವನೆ ಅಳಿಯರ ಸಮೂಹದಲ್ಲಿ ಇವನು ಅಧಮನು. ಗಂಧವನೊಲ್ಲದೆ ಹೆಣಮಂ ಸುಟ್ಟ ಬೂದಿಯಂ ಮೈಗೆ ಲೇಪಿಸಿಕೊಂಡು ರತ್ನಮಯ ಹಾರಗಳಿಲ್ಲದೆ ರುಂಡಮಾಲೆಯ ಸರವಂ ಹಾಕಿಕೊಂಡು ತಿರುಗುವ ಈ ಅಧಮ ಶಿವನಿಗೆ ಅನ್ಯಾಯವಾಗಿ ನಿಮಗಳಂ ಕೊಟ್ಟು ಕಣ್ಣಿನಲ್ಲಿ ನೋಡಿ ಕುದಿಯುವಂಾಯಿತು. ನನ್ನ ಸತಿ ಪ್ರಸೂತಿ ಇಟ್ಟ ಕಿಚ್ಚಿನ ದುಃಖ ದಾರಿಗೆ ಪೇಳಲಿ. ನಾನು ಬಂದದ್ದೇ ಅಲ್ಲ, ಮರ‌್ಯಾದೆ ಕಳೆದುಕೊಂಡು ತಿರುಗಿ ಏನೆಂದು ಹೋಗಲಿ. ಎಲಾ ಸಾರಥಿ ಇನ್ನು ಮೇಲೆ ಈ ಶಿವನನ್ನು ಶಿವನರ್ಧಾಂಗಿನಿ ಸತಿದೇವಿಯನ್ನು ಪ್ರಾಣಹೋಗುವವರೆಗೂ ಮಾತನಾಡಿಸುವುದಿಲ್ಲ. ಶ್ರೀವರ ಭೀಮೇಶ ಮಿಕ್ಕಾದ ದೇವತೆಗಳಂ ಕರೆಯಿಸಿ ಯಾಗಮಂ ಸಾಗಿಸುತ್ತೇನೆ. ಪಟ್ಟಣಕ್ಕೆ ಹೋಗೋಣ ನಡಿ ನಡಿಯೋ ಸಾರಥಿ.

ಭಾಮಿನಿ

ಇಂತೂ ದಕ್ಷ ಬ್ರಹ್ಮ ತನ್ನ ಪುರಕ್ಕೆ ರಥಿಕನೊಡನೆ ತಿರುಗುವನಿತರೋಳ್
ಇತ್ತಲಾ ಸತಿದೇವಿ ಈಶ್ವರನ ಮುಂದೆ ಏನೆನ್ನುತ್ತಿರ್ದಳು ॥

ಯಾತಕೆ ನೀವು ಮನ್ನೀಸಿ ಕರೆಯಾಲಿಲ್ಲ  ತಾತನು
ಬಂದು ಕೋಪಿಸಿ ಪೋದಾನಲ್ಲ  ಬಂದು ಸಭಾದಲ್ಲಿ
ನಿಂದೂ ನೋಡಿದ ನಿಮ್ಮ  ಕುಂದಿಟ್ಟು ಜರಿದಾನಲ್ಲ  ಯಾತಕೆ ॥

ಸತಿದೇವಿ: ಹೇ ಪ್ರಾಣದೊಲ್ಲಭ, ಎನ್ನ ಜನಕನಾದ ದಕ್ಷಪ್ರಜೇಶ್ವರನು ರಥಾರೂಢನಾಗಿ ಬಂದು ಮಹದ್ವಾರದಲ್ಲಿಳಿದು ನಿಮ್ಮ ಸಭಾ ಸನ್ನಿದಿಗೈತಂದು, ಎರಡು ಮುಹೂರ್ತ ಪರಿಯಂತರ ನಿಂತು ಎಲ್ಲಾ ದೇವತೆಗಳ ಮಧ್ಯ ನಿಮ್ಮನ್ನು ಕುಂದಿಟ್ಟು ಜರಿದ ಭಾವಾರ್ಥವೇನು. ನೀನು ಕಾರಣ ನಮ್ಮ ತಂದೆಯನ್ನು ಕಂಡು ಮಾತನಾಡಿಸಲಿಲ್ಲ, ಮನ್ನಿಸಿ ಇತ್ತ ಬಾ ಯೆಂದು ಕರೆಯದಂಥ ತಪ್ಪು ನಮ್ಮಪ್ಪ ಏನು ಮಾಡಿದ್ದನು ಸಾಂಭ ಜಗದಾಂಭ.

ಪದ

ಕೇಳೆ ದಾಕ್ಷಾಯಿಣಿ ಕಾಳುರುಘ ನಿಭವೇಣಿ
ಪೇಳುವೆ ಕೇಳ್ ಸುಖವಾಣಿ ಜನನಾಥ ನಿನ್ನಯ
ಪಿತನ ಕಾರ್ಯವೇನಿತ್ತೋ ತಿಳಿಸದೆ ಪೋದ ನಮ್ಮೊಡನೇ
ಮಹಾ ಘರ್ವಿಷ್ಠನಾಗಿರುವನು ಗರ್ವಿಷ್ಠನಾದರೆ
ತಾವೇ ಕೆಡುವರಲ್ಲದೆ ನಮಗೇನು ಕುಂದು
ಹೇಳೆ ರಾಣಿ ಕಾಳುರುಘ ನಿಭವೇಣಿ.

ಶಿವ: ಹೇ ಕಾಂತೆ, ಯಲ್ಲಾ ದೇವಗಣ ಸಿದ್ಧಗಣ ಸಾಧ್ಯಗಣ ಮುನಿಸಂಕುಲವೆಲ್ಲಾ ಯೋಗ ಮಾರ್ಗದೋಳ್ ಸನ್ಮನಸ್ಕರಾಗಿರ್ದ ಕಾಲದಲ್ಲಿ, ಅವರ ಹೃದಯ ಕಮಲ ಮದ್ಯದೋಳ್ ಸಂಚಾರ ಮಾಡುವ ಕಾಲದಲ್ಲಿ ನನಗೆ ಇನ್ನೊಂದು ಯೋಚನೆ ದಾವದಿರುತ್ತದೆ. ಸಭಾ ಮಧ್ಯ ದೇವ ಶ್ರಿಷ್ಠಿ ಸಿಂಹಾಸನರೂಢನಾಗಿ ಕುಳಿತ ಸಮಯದೋಳ್, ಮಾವ ಬಂದ ಮರ‌್ಯಾದೆ ಮಾಡಬೇಕೆಂದು ಎದ್ದದ್ದೇ ಸಹಜವಾದರೆ ದೇವತ್ವಕ್ಕೆ ಹಾನಿಯಲ್ಲವೆ. ದೇವತೆಗಳೊಡನೆ ಬಂದು ಸಮಾನ ಸಿಂಹಪೀಠದಲ್ಲಿ ಮಂಡಿಸುತ್ತಾನೆಂಬುದೇ ನನಗೆ ತಿಳಿದಿತ್ತು. ಬಾಯೆಂದು ಕರೆಯಲಿಕ್ಕೆ ದೇವರುಗಳಿಗೆ ಮರ‌್ಯಾದೆಯಲ್ಲ. ಆದಕಾರಣ ತಿರುಗಿ ಹೋಗಿದ್ದಿರಬಹುದು ಇದಕ್ಕೆ ಯೋಚನೆಯೇಕೆ ಕಾಂತೆ ಗುಣವಂತೆ.

ಸತಿದೇವಿ: ಹೇ ಕಾಂತ ಹೇಗಾದರೂ ನಿಮ್ಮ ಬಳಗದ ಮೇಲೆ ಇದ್ದ ಅಂತಃಕರಣ ನಮ್ಮ ಬಳಗದ ಮೇಲೆ ಏನು ಕಾರಣ ಇದ್ದೀತು ರಮಣಾ ಸದ್ಗುಣಾಭರಣ.

ಶಿವ: ಹೇ ಕಾಂತೆ, ಹೆಣ್ಣು ಕೊಟ್ಟರೂ ನನಗಿಂತ ಭಾಗ್ಯವಂತರಿಗೆ ಕೊಡಬೇಕು. ತರಬೇಕಾದರೆ ತನಗಿಂತ ಕೇವಲ ಬಡವರ ಮನೆಯಲ್ಲಿ ಹೆಣ್ಣು ತರಬೇಕು. ನಿಮ್ಮ ತಂದೆ ತ್ರಿಜಗಾದೀಶ್ವರ ನಮ್ಮಂಥವರ ಮೇಲೆ ಅಂತಃಕರುಣ ಇಟ್ಟಾನೆಯೇ, ಇದಲ್ಲದೆ ನಾನೊಬ್ಬ ಅಳಿಯನೆ. ದೇವಾನುದೇವತೆಗಳು ಮಹಾರಾಜರೆಲ್ಲ ಅಳಿಯಂದಿರಾಗಿರುವರು ಒಬ್ಬರಾದರೆ ಅಂತಃಕರುಣವಿರುವುದು. ನಿಮ್ಮ ಜನಕನು ಮಹಾ ಗರ್ವಿಷ್ಠನಾಗಿರುವನು. ಗರ್ವಿಷ್ಠನಾದರೆ ತಾವೇ ಕೆಡುವರಲ್ಲದೆ ನಮಗೇನು ಕುಂದು ಹೇಳೆ ರಾಣಿ ಕಾಳೋರುಗ ನಿಭವೇಣಿ ಅಂತಃಪುರಕ್ಕೆ ನಡೆ.

ಭಾಮಿನಿ

ಇತ್ತಲಾ ದಕ್ಷ ಸ್ವಯಂಭು ಶಂಭು ಮೂರ್ತಿಯಂ ನಿರಾಕರಿಸಿ
ತನ್ನಯ ನಿಜ ಸ್ವರ್ಗ ಮಂದಿರಕೆಬಂದು ಕಕ್ಕಸಮಾನವಾಗಿ
ವಾಮಕರಮಂ  ಕದಪಿಗಿಟ್ಟು  ಶಿವದ್ರೋಹಿ ಚಿಂತಿಸುತ್ತಿರಲು
ಆ ಸಮಯದಿ  ಸತಿಯಾದ ಪ್ರಸೂತಿಯು ಬಂದು ಮಾತನಾಡಿಸುತ್ತಿರ್ದಳು ॥

ಪದ

ನೀ ಪೋದರೇನೆಂದ ॥ನಿಮ್ಮ ಶುಭ ಕಾರಣ ॥
ಭೂಪಾಲ ಶಿವ ಬಾರಲಿಲ್ಲೇನು ಆರಣ
ಪರಿಣಾಮವನ್ನೆ ನಿನ್ನ ಮನ ದುಗುಡವದೇನು ಪೇಳೈ
ವಿನಯದಿಂದಲಿ ನಮ್ಮೊಳೂ ಮನಸಿಜಾರಿಯು ಬಾರದಿರಲು
ಅನುಮಾನ ತೋರ್ಪುದು ಯಮ್ಮೊಳೀಗ
ನೀ ಪೋದರೇನಂದ  ಮರ‌್ಯಾದೆಗಳ ಜರಿದು  ಕುಂದು ಹೊರಿಸಿದನೇ ॥

ಪ್ರಸೂತಿ: ಹೇ ರಮಣ, ದಕ್ಷ ಪ್ರಜೇಶ್ವರ ಕರೆಯುವುದಕ್ಕೆ ಶಂಭು ಮೂರ್ತಿಯಲ್ಲಿಗೆ ಸಂಭ್ರಮದಿಂದ ಹೋದಕಾರ್ಯ ಕ್ಷೇಮ ಹೇಗೆ? ಕರೆಯಲಿಕ್ಕೆ ಹೋದರೆ ನಿಮ್ಮನ್ನೇನಾದರೂ ಆದರಿಸಲಿಲ್ಲವೇ ಹೇಗೆ? ವಾಮಕರ ಕಮಲಂ ಕದಪಿಗಿಟ್ಟು ಚಿಂತಿಸುವ ದುಗುಡ ಭಾವವೇನೈ ಚಿತ್ತದೊಲ್ಲಭ. ಆ ಸದಾಶಿವ ಮೂರ್ತಿಯು ನಿಮ್ಮನ್ನು ಮಾತನಾಡಿಸಿದನೇ ಇಲ್ಲವೇ ಹೇಳೈ ಪ್ರಾಣದೊಲ್ಲಭ.

ದಕ್ಷ: ಹೇ ಕಾಂತೆ, ಎಷ್ಟು ಕಾರ್ಯವಿದ್ದರೂ ತನ್ನ ಹೆಂಡತಿಯ ಮುಂದೆ ಆ ಕಾರ್ಯಭಾಗ ಸುಳ್ಳು ಹೇಳಬೇಕೆಂಬ ಲೋಕಗಾದೆಯ ನುಡಿ ಸುಳ್ಳಲ್ಲ. ಯಜ್ಞ ಮಾಡಬೇಕೆಂಬ ಮನಸ್ಸಿನಿಂದ ಇಲ್ಲಿಂದಲೇ ಸಕಲರಿಗೂ ಗಾಂಭೀರ‌್ಯವಾಗಿ ಪತ್ರವಂ ಬರೆದು ಕಳುಹಿಸಿದ್ದರೆ ಯಲ್ಲರೂ ಬರುತ್ತಲಿದ್ದರು. ನಿನ್ನ ಮಾತಿಗೆ ಮರುಳಾಗಿ ಮೂರ್ಖ ಅಧಮಾಧಮ ಕಾಡಿಗೆ ಬಂದ ಕುಲಭ್ರಷ್ಟ ಮಹದೇವನೆಂಬುವನಂ ಕರೆಯಲಿಕ್ಕೆ ಹೋಗಿ, ಸಭಾದಲ್ಲಿ ಎರಡು ಮುಹೂರ್ತದವರೆವಿಗೂ ನಿಂತರೆ, ಬಂದಿರಿ ಯಾತಕ್ಕೆಂದು ಮಾತನ್ನಾಡಿಸಲಿಲ್ಲ. ಕುಳ್ಳಿರಿ ಅನ್ನುವುದಕ್ಕೆ ಎಲ್ಲರ ಬಾಯಿಗೂ ಮುಳ್ಳು ಮುರಿದಿತ್ತೊ ಏನೋ. ಅಯ್ಯೋ ನಿನ್ನ ಮುಂದೆ ಏನು ಹೇಳಲಿ ಆಚೆಗೆ ಹೋಗೆ. ಅತಿ ಮೂರ್ಖಳೆ ಇಕೋ ಕೇಳು. ಶಿವನೆಂಬುವನ ಕರೆಸದೇ ಶ್ರೀಹರಿ ಬ್ರಹ್ಮಾದ್ಯಖಿಳರಂ ಕರೆಯಿಸಿ ಯಜ್ಞವಂ ಸಾಗಿಸುತ್ತೇನಲ್ಲದೆ ಮಹದೇವನೆಂಬುವನಂ ಕರೆಸಲಿಕ್ಕಿಲ್ಲ. ಅವನ ಹೆಸರಂ ನನ್ನ ಮುಂದೆ ಎತ್ತತಕ್ಕ ಅವಶ್ಯಕವಿಲ್ಲ ಕಂಡೆಯಾ ಸತಿ.

ದಕ್ಷ: ಎಲೈ ಸಾರಥಿ, ಹರಿಬ್ರಹ್ಮ ಇಂದ್ರ ಅಗ್ನಿ ಯಮ ನೈರುತ್ಯ ವರುಣ ವಾಯುವ್ಯ ಕುಭೇರ ಈಶಾನ್ಯ ಸೋಮರ್ಕಾದಿ ನವಗ್ರಹಾದಿ ಕಶ್ಯಪ ಅತ್ರಿ ಭಾರಧ್ವಜ ಸಪ್ತ ಋಷಿ ನಾರದಾದಿ ದೇವರುಷಿ ಚರನ ವೈತಾಳಿಕ ಯಕ್ಷ ಕಿನ್ನರ ಕಿಂಪುರುಷಾದಿಗಳು ಬಂದರೆ ಯಾಗ ಮಂಟಪದಲ್ಲಿ ಅವರವರ ತಾರತಮ್ಯಾನುಸಾರವಾಗಿ ಋಷಿಕೇತು ಎಂಬ ಪ್ರಧಾನಿಯು ಉಪಚರಿಸಿದನೆ, ಯಾಗ ಮಂಟಪವು ಶೃಂಗಾರವಾಯಿತೇನೋ ಸೂತ ವಿಖ್ಯಾತ. ಜಾಗ್ರತೆಯಾಗಿ ಭುೃಗು ರುಷಿಗಳನ್ನು ಬರಮಾಡು.

ದಕ್ಷ: ನಮೋ ನಮೊ ಸ್ವಾಮಿ ಭೃಗು ಋಷಿಗಳೆ.

ಭೃಗು: ನಿನಗೆ ಮಂಗಳವಾಗಲಿ. ಮೇಲಕ್ಕೆ ಏಳೈ ದಕ್ಷ ಪ್ರಜೇಶ್ವರ.

ದಕ್ಷ: ಸ್ವಾಮಿ ಭೃಗು ಋಷಿಗಳೆ, ಈಶ್ವರನಂ ಬಿಟ್ಟು ಸಕಲ ದೇವತೆಗಳನ್ನು ಸರ್ವರುಷ್ಯಾದಿಗಳನ್ನು ಕರೆಸಿರುವೆನು. ಈ ಮಹಾಸವನವಂ ಸಾಂಗೋಪಾಂಗವಾಗಿ ನಡೆಸಿ ನಿಮ್ಮ ಪಾಲಿಗೆ ಕೀರ್ತಿ ಕಟ್ಟಿಕೊಳ್ಳುವರಾಗಿ ಮುನಿವರ್ಯ ಸದ್ಗುಣ ಗಾಂಭೀರ‌್ಯ.

ಭೃಗು: ಅಯ್ಯ ರಾಜೇಂದ್ರ ಹೇಳುತ್ತೇನೆ ಕೇಳು. ಈಶ್ವರನಿಲ್ಲದ ಅಧ್ವರವನ್ನು ಯಾರಿಗೆ ಮಾಡುವೆ. ಮೊದಲ ಭಾಗವನ್ನು ತೆಗೆದುಕೊಳ್ಳುವರ‌್ಯಾರು. ಇಂಥಾ ರವಿಕಸಿಯ ಮಾತನ್ನು ಬಿಟ್ಟು ತಟ್ಟನೆ ಈಶ್ವರನನ್ನು ಕರೆ.

ಪದ

ಅಷ್ಟ ಮೂರ್ತಿಯ ನೀನು  ತಟ್ಟನೆ ಕರೆಸದಿರೆ
ನೆಟ್ಟಗಾಗದು ಯಜ್ಞ ಕೇಳೈ  ಮಹರಾಜನೆ ಕೇಳೈ
ದಿಟ್ಟ ಶ್ರೀ ವಿರೂಪಾಕ್ಷ  ಶ್ರೇಷ್ಟನ ಸವನಕ್ಕೆ  ಪತ್ರ ಕೊಟ್ಟು ಕರೆಸೈ
ಮಹಾರಾಜ ಕೇಳೈ ಮಹಾರಾಜಾ ॥

ಭೃಗು: ಅಯ್ಯ ದಕ್ಷ ಪ್ರಜೇಶ್ವರ, ಯಜ್ಞಕ್ಕೆ ಕರ್ತನೇ ಈಶ್ವರನು. ಆ ಮಹಾಮಹಿಮನಂ ಬಿಟ್ಟು ಈ ಮಹಾಯಜ್ಞವಂ ನಡೆಸೆಂದರೆ ನಾ ಏನ ಹೇಳಲಿ. ನೀನು ಕರೆಯಲಿಕ್ಕೆ ಹೋಗದೆ ಇದ್ದರೂ ಸರಿ ಪತ್ರ ಮುಖಾಂತರದಿಂದಲಾದರೂ ಪರಮೇಶ್ವರನನ್ನು, ಪಡೆದ ಪುತ್ರಿಯನ್ನು ಕರೆಯಿಸಿ ಯಾಗಮಂ ಮಾಡಿ ಮೊದಲ ಹವಿರ್ಭಾಗಮಂ ಕೊಟ್ಟು ಕೈ ಮುಗಿದರೆ ಸಕಲರಿಗೂ ಸಂತೋಷವಲ್ಲವೆ. ಆದುದರಿಂದ ಯಜ್ಞಕ್ಕೆ ಮೊದಲ ಕರ್ತನಾದ ಶಂಕರನನ್ನು ಕರೆಸುವಂಥವನಾಗೈ ದಕ್ಷ ಪ್ರಜೇಶ್ವರ.

ದಕ್ಷ: ಹೇ ಋಷಿಗಳೇ, ಶಂಭು ಎಂಬ ನಾಮ ಎನ್ನೆದುರಿಗೆ ನುಡಿದರೆ ಹೃತ್ಕಮಲ ಮಧ್ಯದೋಳ್ ಹೃತ್ಕರಿಸಿ ದೃಷ್ಟ ಕಷ್ಟತರವಾಗ್ನಿಯಂ ಬೇಡಿರಿ. ಮೃಡನೆಂದರೆ ವಡಲೋಳ್ ಕಡುಕಿಚ್ಚು ತಡೆಯದೆ ನಿಡುನಿಟ್ಟುಸಿರಿನಿಂದ ಕಡೆಗಣ್ಣಿನೋಳ್ ಕಾರ್ಭೊಗೆ ಸೂಸುತ್ತಿಹುದು. ಮೃಡನೆನ್ನ ಮರ‌್ಯಾದೆ ಹೀನ ಮಾಡಿದ್ದಕ್ಕೆ ಕಡುಕೋಪದಿಂದವನ ಕಡೆಗಿಟ್ಟು, ಜಡಜಾಕ್ಷಿ ಜಡಜಾಸನರ ನಡುಮಧ್ಯದೋಳ್ ಸಡಗರಿಸಿ ಯಜ್ಞದೋಳ್ ಪೊಡವಿ ಧರಾಭರಣಗೆ ಕೊಡುವ ಭಾಗ ಕಡೆಗೊಬ್ಬ ಬ್ರಾಹ್ಮಣಗಾದರೂ ಕೊಟ್ಟೇನಲ್ಲದೆ, ಈಗಿನ ಭಾಗ ಅಷ್ಟಮೂರ್ತಿಗೆ ಮುಟ್ಟಿ ಕೊಟ್ಟು ಕಣ್ಣಿನಲ್ಲಿ ನೋಡಲಾರೆ ಕಂಡೆಯ ಮುನಿವರ‌್ಯ. ಈಶ್ವರನನ್ನು ಕರೆತಂದು ಮನ್ನಿಸಬೇಕೆಂದು ಕರೆಯಲಿಕ್ಕೆ ಹೋದ ಸಭಾದಲ್ಲಿ ನನ್ನ ಮರ್ಯಾದೆ ಹೀನ ಮಾಡಿದ ಅಂಥವನ ಮುಖವಂ ನೋಡಬಹುದೇನೈ ಮುನೀಶ್ವರ.

ಎಲೈ ಸಾರಥಿ ನೀನು ವೈಕುಂಠಕ್ಕೆ ಹೋಗಿ ಲಕ್ಷ್ಮೀಪತಿಯಾದ ಶ್ರೀಹರಿಯನ್ನು ದಕ್ಷ ಪ್ರಜೇಶ್ವರನು ಮಹಾಯಜ್ಞವಂ ಸಾಗಿಸಿರುವನು. ಮಹದೇವನಂ ಬಿಟ್ಟು ಮೊದಲ ಭಾಗಮಂ ನಿಮಗೆ ಕೊಡುತ್ತಾರೆಂದು ತಿಳಿಸಿ ಜಾಗ್ರತೆಯಿಂದ ಯಾಗ ಮಂಟಪಕ್ಕೆ ಕರೆದುಕೊಂಡು ಬರುವಂಥವನಾಗು !

ತ್ರಿವುಡೆ

ನಮೋ ನಮೋ ಶ್ರೀ ಹರಿ ದಾನವಾರಿ

ಸಾರಥಿ: ಹೇ ವೈಕುಂಠವಾಸ, ಇಂದಿನ ದಿನದೋಳ್ ದಕ್ಷ ಪ್ರಜೇಶ್ವರನು ಯಾಗವನ್ನು ಮಾಡುತ್ತಿರುವನು. ಮೊದಲ ಭಾಗವನ್ನು ನಿಮಗೆ ಕೊಡುವರಂತೆ, ಅತಿ ಜಾಗ್ರತೆ ಇಂದ ಕರೆತಾರೆಂದು ಕಳುಹಿಸಿರುವರು ಸ್ವಾಮಿ ಭಕ್ತ ಜನ ಪ್ರೇಮಿ.

ವಿಷ್ಣು: ಎಲೈ ಚಾರನೇ ನೀನಿನ್ನು ತೆರಳು ನಾನು ಬರುತ್ತೇನೆ.

ಪದ

ಸುಂದರ ಗಾತ್ರನೇ ಸರಸಿಜ ನೇತ್ರನೇ
ಬಂದಿಹ ದೂತನ ಮಾತನು ಲಾಲಿಸು ॥
ಸುಂದರ ರುದ್ರನು ಇಲ್ಲದ ಅಧ್ವರ ಧಾರಿಗೆ
ಶಭವು ಮೂಢನು ದಕ್ಷ ಪ್ರಜೇಶ್ವರ ॥ಸುಂದರ ॥

ಲಕ್ಷ್ಮೀ: ಹೇ ರಮಣ, ಈ ದೂತನು ಹೇಳಿದ ಮಾತನ್ನು ಕೇಳಿದಿರಾ. ಮೊದಲ ಭಾಗಕ್ಕೆ ಈಶನೇ ಕರ್ತ. ಆ ಮಹದೇವನನ್ನು ಬಿಟ್ಟು, ಮೊದಲ ಭಾಗವಂ ನಿಮಗೆ ಕೊಡುತ್ತೇನೆಂದು ಹೇಳಿದರೆ ನೀವು ತೆಗೆದುಕೊಳ್ಳಲು ಸಾಧ್ಯವೇ. ಅಲ್ಲದೆ ಈ ವೇಳೆಯಲ್ಲಿ ಪರಮಾತ್ಮನನ್ನು ಬಿಡಲು ಕಾರಣವೇನು ಮಾರಜನಕ ಕ್ಷೀರಾಭ್ದಿ ಕನಕ.

ವಿಷ್ಣು: ಯಲಾ ಪ್ರಿಯಳೇ, ಸರ್ಪ ಕಂಕಣಗೆ ಸಮರ್ಪಿಸುವ ದರ್ಪಣದ ಸೋಮ ಪಾನವನ್ನು ನನಗೆ ಕೊಟ್ಟರೆ ನಾನು ಎಂದಿಗೆ ತೆಗೆದುಕೊಂಡೇನು. ಆತನ ಭಾಗವನ್ನುಂಡು ಜೀವಿಸುವ ಮಹಾತ್ಮರು ಧಾರು. ಆದರೆ ಯಜ್ಞಕ್ಕೆ ಬಾರೆಂದು ಕರೆಸಿದರೆ ಯಜ್ಞ ಭಾಗಿಗಳು ಹೋಗಿ ಸಿದ್ಧವಾಗಿದ್ದರೆ, ಅದು ದೈವತ್ವಕ್ಕೆ  ಶ್ರೇಷ್ಠತನ. ಶಿವನಿಲ್ಲದ ಯಜ್ಞವು ಸಾಗುವುದಿಲ್ಲವೆಂದು ದಕ್ಷ ಪ್ರಜಾವರ್ಧನನಿಗೆ ತಿಳಿಯುವುದಿಲ್ಲವೇ ಹೇಗೆ? ನಾವೇತಕ್ಕೆ ಬಾಯಲ್ಲಾಡಿ ನಿಷ್ಠುರರಾಗಬೇಕು. ಸುಮ್ಮನೆ ಯಜ್ಞ ಶಾಲೆಗೆ ಹೋಗೋಣ ಬಾರೆ ಕಾಂತೇ ಗುಣವಂತೆ.

ಲಕ್ಷ್ಮಿ: ಹೇ ಪ್ರಿಯ, ಈ ಕಾಲದಲ್ಲಿ ನಾವು ಹಾಗೆಯೇ ಹೋದರೆ ನಿಷ್ಠುರ ಬರುವುದು. ನಾನಾದರೂ ಕೈಲಾಸಕ್ಕೆ ಹೋಗಿ ಅಕ್ಕಯ್ಯನವರಾದ ಸತಿದೇವಿಗೆ ತಿಳುಹಿಸಿ ಬರುತ್ತೇನೆ.

ನಮೋ ನಮೋ ಅಕ್ಕಯ್ಯನವರೇ

ಸತಿ: ನಿನಗೆ ಮಂಗಳವಾಗಲಿ ಮೇಲಕ್ಕೆ ಏಳಮ್ಮ ತಂಗಿ ಶುಭಾಂಗಿ. ಹೇ ತಂಗಿ ನೀನು ಬಂದ ಕಾರಣವೇನು ತಿಳಿಸುವಳಾಗು.

ಲಕ್ಷ್ಮಿ: ಅಕ್ಕಯ್ಯ, ನಿಮ್ಮ ತಂದೆಯು ಯಾಗವನ್ನು ಮಾಡುವರಂತೆ. ನಮ್ಮನ್ನು ಕರೆಯಲಿಕ್ಕೆ ದೂತನನ್ನು ಕಳುಹಿಸಿದ್ದರು. ನಾವು ಅಲ್ಲಿಗೆ ಹೋಗಬೇಕೆಂದು ಹೊರಟಿರುತ್ತೇವೆ. ನಿಮಗೆ ಈ ವಿಚಾರವು ಗೊತ್ತಿಲ್ಲವೇ ಹೇಗೆ. ನಿಮಗೆ ತಿಳಿಸಿ ಹೋಗಬೇಕೆಂದು ಬಂದಿರುತ್ತೇನೆ. ನೀವೂ ಸಹ ಹೋಗೋಣ ಬನ್ನಿರಿ ಅಕ್ಕಯ್ಯನವರೇ.

ಪದ

ಯನಗೆ ತಿಳಿಸದೆ ಕಾರ್ಯ ಜನಕ ಮಾಡುವನೇನೆ
ತ್ರಿಣಯನ ಕೇಳಿಬರುವೆ. ತಾಳಮ್ಮ ತಂಗೀ
ತ್ರಿಣಯನ ಕೇಳಿ ಬರುವೇ ॥

ಸತಿದೇವಿ: ಅಮ್ಮ ಶ್ರೀಲತಾಂಗಿಯೇ ಕೇಳು, ಆ ಕಾರ್ಯ ನನಗೆ ತಿಳಿಯದು. ನೀವುಗಳೆಲ್ಲಾ ತೆರಳಿದ ಮೇಲೆ ನನ್ನ ಮನಸ್ಸು ನಿಲ್ಲದು. ಭವರಹಿತನಾದ ನೀಲಕಂಠನಂ ಕೇಳಿ ಆಜ್ಞೆಯಂ ಪಡೆದು ನಾನು ಬರುತ್ತೇನೆ. ನೀನು ಮುಂದೆ ತೆರಳುವಳಾಗಮ್ಮ ತಂಗಿ ॥

ಪಾರ್ವತಿ: ನಮೋ ನಮೋ ಕಾಂತ ಗುಣವಂತ॥

ಪದ

ಶಂಕರ ಪೋಗುವೆ ಈಗಲೇ ಪೋಗುವೇ
ಬೇಗದಿ ಜನಕನ ಯಾಗಕೆ ತ್ವರಿತದೀ ॥
ಜನಕನ ಹೋಮವ  ವಿನಯದಿಂ ನೋಡಲು
ಮನಸ್ಸು ಬಯಸುವುದು, ಗುರು ಮಹಂತೇಶನೇ ॥ಶಂಕರ ॥

ಸತಿದೇವಿ: ಹೇ ರಮಣ ಜಗದೀಶ್ವರ, ಯನ್ನಯ ಜನಕನು ಯಜ್ಞವಂ ಮಾಡುವನಂತೆ. ರಮಾ ಬ್ರಹ್ಮಾದಿಗಳೂ ಸಹಿತ ಶ್ರೀಹರಿಯೂ ತೆರಳಿದರಂತೆ. ನಮ್ಮ ತಂದೆಯು ನಮ್ಮನ್ನು ಕರೆಸದೆ ಬಿಡಲು ಕಾರಣವೇನು. ಸರ್ವರೂ ಹೋದ ಮೇಲೆ ನನ್ನ ಮನಸ್ಸು ನಿಲ್ಲದು, ನಮ್ಮ ತಂದೆ ಮಾಡುವ ಶುಭಯಜ್ಞ ನಿಲಯಕ್ಕೆ ಅಪ್ಪಣೆಯನ್ನು ಕೊಟ್ಟು ಕಳುಹಿಸೈ ಮಹೇಶ್ವರ.

ಈಶ್ವರ: ಹೇ ಸಖಿ ಶುಭ್ರಾಂಶಮುಖಿ, ಮತ್ತೇಕೆ ನಿನಗಪ್ಪಣೆ, ಸತ್ಯದಿಂದ ನಿನ್ನ ಜನಕ ಅತ್ಯಂತ ಹರುಷದಿಂದ ಬಂದದ್ದು ಸಹಜ. ನಾವುಗಳೆಲ್ಲಾ ಯೋಗಮಾರ್ಗದೊಳಿದ್ದ ಸಮಯಕ್ಕೆ ಬಂದು ನನ್ನನ್ನು ಮಾತನಾಡಿಸದೆ ಮರ್ಯಾದೆ ಹೀನ ಮಾಡಿದನೆಂದು ಆತುರ ಮುಖನಾಗಿ ವಿಮುಖತ್ವದಿಂದ ನಮ್ಮನ್ನು ನಿಂದಿಸಿ, ಕೋಪಗೊಂಡು ಸಿಡುಕಿನಿಂದ ಗಡಗಡನೆ ತಿರುಗಿದ. ನಿಮ್ಮ ತಂದೆ ದಕ್ಷಬ್ರಹ್ಮನ ಯಾಗಮಂ ಪುಃನರೇವ ಬಯಸಿ ಬಡವಾಗುವುದೇತಕ್ಕೆ. ಅಲ್ಲದೆ, ನಮ್ಮನ್ನು ಕಂಡರೆ ಅವನಿಗಾಗದು. ನಿನಗಾಜ್ಞೆಯಂ ಕೊಟ್ಟರೆ ಪುನಃ ಕೈಲಾಸ ಪುರವಂ ಸೇರುತ್ತೀಯೋ ಇಲ್ಲವೊ, ಖಂಡಿತವಾಗಿಯೂ ಹೋಗಬೇಡವೇ ಸಖೀ ಶುಭ್ರಾಂಶುಮುಖಿ.

ಪದ

ನೀಲಕಂಠೇಶ ನಿನ್ನ ಲೀಲಾ ಒಂದಿರಲಿನ್ನು ಕೋಮಲೆಯರ ಗತಿಗೆ ॥
ಲೋಲಾ ಯನ್ನ ಕಳುಹದಿರಲು ನಿಮಗೇಳದೇ ಪೋಪೆ
ಪಾರೀಜಾಕ್ಷ ಪರ ವಿರುಪಾಕ್ಷ ಭೂರಿ ದಯದಿ ನೇಮ ಪಾಲಿಸೋ ॥

ಸತಿದೇವಿ: ಹೇ ಈಶ ನೀಲಕಂಠೇಶ, ಇಂದಿನ ದಿನ ನಮ್ಮ ತಂದೆಯು ಮಾಡುವ ಸಮನ ಶುಭ (ಯಜ್ಞ) ಲಗ್ನಕ್ಕೆ ನೀವು ಕಳುಹಿಸಿಕೊಟ್ಟರೆ ಸರಿ. ಇಲ್ಲವಾದರೆ ನಿಮಗೆ ಹೇಳದೆ ನಿಮ್ಮ ನುಡಿಯಂ ಲಾಲಿಸದೆ ಹೋಗಿಬರುತ್ತೇನೆ. ನಿಮ್ಮ ಪಾದದ ಅಂತಃಕರಣ ವಂದಿದ್ದರೆ ಸಾಕು ರುದ್ರ ಭದ್ರ ಅಘಂ ಕೋಟಿಛಿದ್ರ.

ಈಶ್ವರ: ಹೇ ಕಾಂತೆ, ನಿನ್ನ ಮನಸ್ಸಿಗೆ ಬಂದ ಪರಿ ಮಾಡಲ್ಲದೆ ನನ್ನ ಮಾತನ್ನು ಕೇಳಿಯೇ ಸಖಿ ಶುಭ್ರಾಂಶಮುಖಿ. ಅಯ್ಯ ನಂದೀಶ್ವರ, ಇಕೋ ನಮ್ಮ ಸತಿದೇವಿ ದಕ್ಷಾದ್ವರಕ್ಕೆ ತೆರಳುತ್ತಾಳಂತೆ. ಅನೇಕ ಸೇನಾ ಮಂಡಲ ಸಮೇತ ಕರೆದೊಯ್ದು ಈ ಸತಿ ಅಲ್ಲಿರ್ಧ ಪರಿಯಂತರವಿದ್ದು ಆದ್ಯಂತ ವರ್ತಮಾನವಂ ತಿಳಿಸುವುದಲ್ಲದೆ ಹೆಚ್ಚಿನ ಕಾರ್ಯಕ್ಕೆ ಕೈ ಮಾಡದೆ ನಿಶ್ಚಿತಾರ್ಥ ಹೃದಯದಿಂದ ಹೋಗಿ ಬಾರೈ ನಂದೀಶನ ಸದ್ಭಕ್ತ ಹರುಷ.