ಖ್ಯಾತ ತಬಲಾ ವಾದಕರಾಗಿ, ನಾಟಕ ರಂಗದಲ್ಲಿ ನಾದೋಪಾಸನೆಗೈದು ಬೆಂಗಳೂರಿನಲ್ಲಿ ನೆಲೆಸಿ ಹಿಂದೂಸ್ಥಾನಿ ಸಂಗೀತವನ್ನು ಅಭಿವೃದ್ಧಿಗೊಳಿಸುವಲ್ಲಿ ಶ್ರಮವಹಿಸಿದ ಕರ್ನಾಟಕದ ಹಿರಿಯ ತಲೆಮಾರಿನ ತಬಲಾ ವಾದಕರು ಶ್ರೀ ದತ್ತಾತ್ರೇಯ ಸದಾಶಿವರಾವ ಗರೂಡ ಅವರು. ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧನೆಯಿಂದ ಮೇಲೆ ಬಂದ ಛಲದಂಕರು ಅವರು.

ಶ್ರೀ ದತ್ತಾತ್ರೇಯ ಅವರು ಜನಿಸಿದ್ದು ಹೈದ್ರಾಬಾದ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಕವಲೂರಿನಲ್ಲಿ: ೧೯೧೪ರಲ್ಲಿ ಅವರ ತಂದೆ ಗರೂಡ ಸದಾಶಿವರಾವರದು ಕರ್ನಾಟಕ ರಂಗಭೂಮಿಯ ಬಹು ಎತ್ತರದ ಹೆಸರು. ನಾಟಕ ಕಂಪನಿ ಕಟ್ಟೆ, ಕನ್ನಡ ನಾಡು-ನುಡಿ ಸೇವೆಗೈದ ಕನ್ನಡದ ಕಲಾ ಪುತ್ರರವರು. ‘ಅಭಿನವಕೇಸರಿ’ ಬಿರುದಾಂಕಿತರು. ರಂಗಭೂಮಿ ಪರಿಸರದಲ್ಲಿ ಜನಿಸಿದ ದತ್ತಾತ್ರೇಯರಿಗೆ ಬಾಲ್ಯದಿಂದಲೇ ಸಂಗೀತ-ನಟನೆಯತ್ತ ಒಲವು ಬೆಳೆಯಿತು. ತಂದೆಯವರ ದತ್ತಾತ್ರೇಯ ನಾಟಕ ಮಂಡಳಿಯಲ್ಲಿದ್ದ ಖ್ಯಾತ ಸಂಗೀತಗಾರ ಘನಶ್ಯಾಂ ಬಾಡಕರ್ ಹಾಗೂ ಸಂಜೀವರಾವ್‌ ಬಸರೂರ್ ಅವರಿಂದ ಸಂಗೀತ ದೀಕ್ಷೆ ಪಡೆದರು. ಪಂ. ರಾಮಭಟ್‌ ಹಾಗೂ ನೀಲಕಂಠ ಬುವಾ ಗಾಡಗೋಳಿ ಅವರಿಂದ ಸಂಗೀತದ ಉನ್ನತ ಶಿಕ್ಷಣ ಪಡೆದರು. ಹೈದ್ರಾಬಾದ್‌ – ಸಿಂಕದರಾಬಾದಿನ ನಾನಾ ಪಾನಸೆ ತಬಲಾ ಘರಾಣೆಯ ಖ್ಯಾತ ತಬಲಾ ವಾದಕರಾದ ಪಂ. ರಘುನಾಥರಾವ್ ಅವರಿಂದ ತಬಲಾ ಪಾಲೀಮು ಪಡೆದ ದತ್ತಾತ್ರೇಯ ತಮ್ಮ ಅಭಿನಯ, ನಾಟಕಗಳಿಗೆ ಸಂಗೀತ ನಿರ್ದೇಶನದ ಜೊತೆಗೆ ತಬಲಾ ವಾದನದಲ್ಲಿ ವಿಶೇಷ ಸಾಧನೆಗೈದು ಸಿದ್ಧಿ-ಪ್ರಸಿದ್ಧಿ ಪಡೆದರು. ನಾರಾಯಣರಾವ್‌, ಜಿ.ವ್ಹಿ. ಭಾವೆ ಹಾಗೂ ರಾಮರಾವ್‌ ನಾಯಕರಲ್ಲಿ ಗಾಯನದಲ್ಲೂ ತರಬೇತಿ ಪಡೆದರು.

ದ.ಕೃ. ಭಾರದ್ವಾಜರ ಪ್ರೇರಣೆಯಿಂದ ಬೆಂಗಳೂರಿಗೆ ಬಂದು ನೆಲೆಸಿದ ಅವರು ೧೯೫೦ರಲ್ಲಿ ‘ಸಂಗೀತ ಕಲಾಭವನ’ ಸ್ಥಾಪಿಸಿದರು. ‘ಬೆಂಗಳೂರು ಸಂಗೀತ ಸಭಾ’ ಸ್ಥಾಪನೆಯಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ. ಬೆಂಗಳೂರಿನ ‘ಹಿಂದೂಸ್ಥಾನಿ ಸಂಗೀತ ಕಲಾಕಾರ ಮಂಡಳಿಯ ಸ್ಥಾಪಕ ಸದಸ್ಯರಾಗಿ, ಅನೇಕರಿಗೆ ಸಂಗೀತ ಶಿಕ್ಷಣ ನೀಡುತ್ತ ಹಿಂದುಸ್ಥಾನಿ ಸಂಗೀತದ ಬೆಳವಣಿಗೆಗೆ ಪರಿಶ್ರಮಿಸುತ್ತಿದ್ದಾರೆ. ತಬಲಾ ಸ್ವತಂತ್ರವಾದನ ಹಾಗೂ ಸಾಧಸಂಗತ ಎರಡರಲ್ಲೂ ಸೈ ಎನಿಸಿಕೊಂಡಿರುವ ಅವರು ಪಂ. ಮಲ್ಲಿಕಾರ್ಜುನ ಮನಸೂರ ಹಾಗೂ ಪಂ. ಭೀಮಸೇನ ಜೋಶಿ ಮುಂತಾದ ಸಂಗೀತ ದಿಗ್ಗಜರಿಗೆ ತಬಲಾ ಸಾಥ್ ನೀಡಿದ್ದಾರೆ. ಅಷ್ಟಾಂಗ ಯೋಗದ ಪ್ರಕಾರಗಳನ್ನು ಸಂಗೀತದಲ್ಲಿ ಪರಿಚಯಿಸಿದ ಪ್ರಯೋಗಶೀಲರು. ಪಂ. ಭಾತಖಂಡೆಯವರ ಲಕ್ಷ್ಯ ಸಂಗೀತಕ್ಕೆ ಹೊಸ ತಂತ್ರಗಳನ್ನು ಅಳವಡಿಸಿದವರು. ತಮ್ಮ ಅಂಗವೈಕಲ್ಯವನ್ನು ಮೆಟ್ಟಿನಿಂತು ಛಲದಂಕಮಲ್ಲನಂತೆ ಸಾಧನೆ ಗೈದಿ ಅದರಲ್ಲಿ ಸಿದ್ಧಿ ಪಡೆದವರರು. ಅವರ ಆತ್ಮಕಥೆ ‘ಸಂಘರ್ಷ ಜೀವನ’ ಅವರ ಬದುಕಿನ ತೆರೆದ ಪುಟ.

ಏಳು ದಶಕಗಳ ಕಾಲ ಸಂಗೀತ-ನಾಟಕ-ತಬಲಾ ವಾದನಗಳ ತ್ರಿವೇಣಿ ಸಂಗಮದಲ್ಲಿ ಮಿಂದು-ಬೆಂದು ನಾಡವರಿಗೆ ಕಲೆಯ ಪರಿಮಳವನ್ನು ಹಂಚಿದ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (೧೯೭೯-೮೦), ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರಶಸ್ತಿ (೨೦೦೨). ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ (೨೦೦೫-೦೬) ಬಂದಿವೆ.