“ನಾವು ಕಷ್ಟದಲ್ಲಿದ್ದೇವೆ. ನಾವು ಉಳಿಯಬೇಕಾದರೆ ನಿಮ್ಮ ಬೆನ್ನುಮೂಳೆ ಬೇಕು. ಇಂತಹ ತ್ಯಾಗಕ್ಕೆ ನೀವು ಮನಸ್ಸು ಮಾಡಬೇಕು.”

“ಸರಿ. ಎಂದಾದರೂ ಮನುಷ್ಯ ಸಾಯಲೇಬೇಕಲ್ಲವೆ? ಇತರರಿಗೆ ಉಪಕಾರ ಮಾಡಲು ಸಾಯುವುದು ಒಳ್ಳೆಯ ಸಾವು. ಇನ್ನು ಸ್ವಲ್ಪ ಹೊತ್ತಿನಲ್ಲಿ ಪ್ರಾಣ ಬಿಡುತ್ತೇನೆ. ನನ್ನ ಬೆನ್ನುಮೂಳೆ ತೆಗೆದುಕೊಳ್ಳಿ.”

ಎಷ್ಟು ವಿಚಿತ್ರವಾಗಿ ಕಾಣುತ್ತದೆ ಈ ಸಂಭಾಷಣೆ, ಅಲ್ಲವೆ?

“ನಿಮ್ಮ ಮೂಳೆ ಬೇಕು” ಎಂದವನು ದೇವೇಂದ್ರ. “ಆಗಬಹುದು” ಎಂದವನು ಮಹರ್ಷಿ ದಧೀಚಿ.

ನಮ್ಮ ಒಂದು ಪುರಾಣದ ಕಥೆ ಈ ಸ್ವಾರಸ್ಯವಾದ ಪ್ರಸಂಗವನ್ನು ಚಿತ್ರಿಸುತ್ತದೆ.

ಮನುಷ್ಯರು ದೇವತೆಗಳಿಗೆ, “ನಮಗೆ ಸಹಾಯ ಮಾಡಿ, ನೀವಿಲ್ಲದೆ ನಮಗೆ ಗತಿ ಯಾರು?” ಎಂದು ಪ್ರಾರ್ಥನೆ ಮಾಡುವುದನ್ನು ಅನೇಕ ಪುರಾಣಗಳ ಕಥೆಗಳಲ್ಲಿ ಕೇಳಿದ್ದೇವೆ.

ಈ ಕಥೆಯಲ್ಲಿ ದೇವತೆಗಳು ಮನುಷ್ಯನಾದ ದಧೀಚಿಗೆ, “ನಮಗೆ ಸಹಾಯ ಮಾಡಿ, ನೀವಿಲ್ಲದೆ ನಮಗೆ ಗತಿ ಯಾರು?” ಎಂದು ಪ್ರಾರ್ಥನೆ ಮಾಡುತ್ತಾರೆ.

ದೇವತೆಗಳನ್ನು ಉಳಿಸುತ್ತಾನೆ ಈ ಶ್ರೇಷ್ಠಮಾನವ.

ಬಹು ಸ್ವಾರಸ್ಯವಾದ ಕಥೆ ಇದು.

ನಿನಗೆ ಮಾತ್ರ ವಿದ್ಯೆ

ಬಹು ಹಿಂದಿನ ಕಾಲದಲ್ಲಿ ಅರ್ಥರ್ವಣನೆಂಬ ಮಹರ್ಷಿ ಇದ್ದ. ಅವನು ಬಹು ಜ್ಞಾನಿ. ಅವನದೊಂದು ಆಶ್ರಮ ಅಲ್ಲಿ ಅನೇಕ ಮಂದಿ ಶಿಷ್ಯರು. ಅವರಿಗೆ ವೇದ, ಉಪನಿಷತ್ತು ಮುಂತಾದುವನ್ನು ಕಲಿಸುತ್ತಾ, ಬ್ರಹ್ಮ ಜ್ಞಾನವನ್ನು ಪಡೆಯುವ ಬಗೆಯನ್ನು ಅರ್ಥರ್ವಣ ಹೇಳಿಕೊಡುತ್ತಿದ್ದ. ಆಶ್ರಮ ನಡೆಸುವುದರಲ್ಲಿ, ಶಿಷ್ಯರನ್ನು ನೋಡಿಕೊಳ್ಳುವುದರಲ್ಲಿ, ಬಂದವರ ಸತ್ಕಾರದಲ್ಲಿ ಅವನಿಗೆ ಸಹಾಯಕಳು ಅವನ ಹೆಂಡತಿ ಶಾಂತಿ.

ಆ ದಂಪತಿಗಳಿಗೆ ಕಾಲಕ್ರಮದಲ್ಲಿ ಧೃತವ್ರತ, ದಧೀಚಿ, ಅಥರ್ವಶಿರ ಎಂಬ ಮೂವರು ಗಂಡುಮಕ್ಕಳಾದರು. ಆ ಬಾಲಕರು ಬೆಳೆದು ದೊಡ್ಡವರಾದಾಗ ಅವರಿಗೆ ಉಪನಯನವನ್ನು ಮಾಡಿ, ಅವರನ್ನೆಲ್ಲ ಅಥರ್ವಣನು ಗುರುಕುಲವಾಸಕ್ಕಾಗಿ ಕಳುಹಿಸಿಕೊಟ್ಟನು.

ಆ ಕಾಲದಲ್ಲಿ ಹುಡುಗರು ವಿದ್ಯಾಭ್ಯಾಸಕ್ಕೆ ಈಗಿನ ಹಾಗೆ ಶಾಲೆಗೆ ಹೋಗುತ್ತಿರಲಿಲ್ಲ. ಈಗಿನ ಕಾಲದಲ್ಲಿರುವಂತಹ ಶಾಲೆಗಳೂ ಆಗ ಇರಲಿಲ್ಲ. ಉಪನಯನವಾದ ಮೇಲೆ ಹುಡುಗನನ್ನು ಗುರುವಿನ ಮನೆಗೆ ಕಳುಹಿಸುತ್ತಿದ್ದರು. ಅಲ್ಲಿಯೇ ಅವನ ವಾಸ, ಪಾಠ ಎಲ್ಲ. ಇದು ಗುರುಕುಲವಾಸ. ಶಿಷ್ಯರು ಭಿಕ್ಷೆ ಮಾಡಿ ತಾವು ತಂದ ಆಹಾರವನ್ನು ಗುರುಗಳಿಗೆ ಸಮರ್ಪಿಸಿ ಅವರು ಕೊಟ್ಟದ್ದನ್ನು ತಿಂದು ತೃಪ್ತರಾಗುತ್ತಿದ್ದರು. ಸೇವೆ ಮಾಡಿ ಸಂತೋಷಪಡಿಸಿ ವಿನೀತನಾಗಿರುತ್ತಿದ್ದ ಶಿಷ್ಯನಿಗೇ ಗುರು ವಿದ್ಯೆಯನ್ನು ಕಲಿಸುತ್ತಿದ್ದನು. ಗುರುವಿನ ಶುಶ್ರೂಷೆಗಾಗಿ ಕಾಡಿನಲ್ಲಿ ಅಲೆದು ಸೌದೆ, ಸಮಿತ್ತುಗಳನ್ನು ತರುವುದು, ನದಿಗೆ ಹೋಗಿ ಬಟ್ಟೆಗಳನ್ನು ಒಗೆದು ಒಣಗಿಸಿ ತರುವುದು ಇಂತಹ ಕೆಲಸಗಳನ್ನು ಶಿಷ್ಯರು ಮಾಡುತ್ತಿದ್ದರು. ಈ ಕೆಲಸಗಳನ್ನು ಮಾಡುವಾಗ ಪ್ರಕೃತಿಯ ಪರಿಚಯವೂ ಆಗುತ್ತಿತ್ತು. ಗುರುಕುಲದಲ್ಲಿ ಇತರ ಶಿಷ್ಯರು ಕಲಿಯುತ್ತಿದ್ದ ಪಾಠಗಳನ್ನು ಕೇಳಿಯೇ ಅನೇಕ ವಿಷಯಗಳನ್ನು ಅವರು ಅರಿತುಕೊಳ್ಳುತ್ತಿದ್ದರು. ತಂದೆತಾಯಿಯರ ಪ್ರೀತಿಯ ನೆರಳಿನಲ್ಲಿ ಬೆಳೆಯಲಾರದ ಆ ಬಾಲಕರು ಪ್ರಕೃತಿಯ ಮಡಿಲಲ್ಲಿ ಸಂತೋಷವಾಗಿ ಬೆಳೆಯುತ್ತಿದ್ದರು. ಗುರುಗಳು ಒಮ್ಮೆ ಉಪದೇಶಿಸಿದುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಲ್ಲ ಬುದ್ಧಿವಂತರಾಗುತ್ತಿದ್ದರು.

ದಧೀಚಿಯೂ ಗುರುಕುಲವಾಸ ಮಾಡಿದ. ಭಕ್ತಿಯಿಂದ ಗುರುಗಳ ಸೇವೆ ಮಾಡಿ ಅವರ ಪ್ರೀತಿಯನ್ನು ಸಂಪಾದಿಸಿದ. ಅನೇಕ ವಿಷಯಗಳನ್ನು ಕಲಿತ. ಅನಂತರ ಇಂದ್ರನನ್ನು ಕುರಿತು ಕಠಿಣ ತಪಸ್ಸನ್ನು ಮಾಡಿದನು. ಇಂದ್ರ ಅವನಿಗೆ ಪ್ರತ್ಯಕ್ಷನಾಗಿ ತನ್ನಿಂದ ಏನಾಗಬೇಕೆಂದು ಕೇಳಿದನು.

“ನನಗೆ ಬ್ರಹ್ಮ ವಿದ್ಯೆ ಬೇಕಲು” ಎಂದು ಬೇಡಿದ ಯುವಕ ದಧೀಚಿ.

ಸಂತೋಷದಿಂದ ಅವನಿಗೆ ಬ್ರಹ್ಮವಿದ್ಯೆಯ ಎಲ್ಲ ರಹಸ್ಯಗಳನ್ನು ವಿವರವಾಗಿ ಇಂದ್ರನು ತಿಳಿಸಿದನು.

ಆದರೆ ಇಂದ್ರನಿಗೆ ತುಂಬ ಅಸೂಯೆ. ತನ್ನಂತೆ ಇತರರೂ ಬಹು ದೊಡ್ಡವರಾಗುವುದನ್ನು ಅವನು ಸಹಿಸುತ್ತಲೇ ಇರಲಿಲ್ಲ. ಉಗ್ರವಾದ ತಪಸ್ಸನ್ನು ಆಚರಿಸಿ ಅತ್ಯುತ್ತಮ ಪದವಿಯನ್ನು ಪಡೆಯಬೇಕೆಂದಿದ್ದ ಸಾಧಕರಿಗೆ ಪದೇ ಪದೇ ಅವನು ಅಡ್ಡಿ ಆತಂಕಗಳನ್ನು ಒಡ್ಡುತ್ತಿದ್ದನು; ಬೆದರಿಕೆಗಳನ್ನು ಹಾಕುತ್ತಿದ್ದನು; ಕೆಲವೊಮ್ಮೆ ತನ್ನ ಆಸ್ಥಾನದ ಅಪ್ಸರೆಯರಾದ ರಂಭೆ, ಊರ್ವಶಿ , ಮೇನಕೆ ಮುಂತಾದ ಸುಂದರಿಯರನ್ನು ಕಳುಹಿಸಿ ತಪಸ್ಸು ಮಾಡುತ್ತಿದ್ದವರ ಮನಸ್ಸನ್ನು ಕದಲಿಸುತ್ತಿದ್ದ. ಅವರ ಪ್ರಯತ್ನಗಳನ್ನು ಹಾಳು ಮಾಡುತ್ತಿದ್ದ.

ಆದುದರಿಂದ ಇಂದ್ರನು ದಧೀಚಿಗೆ ರಹಸ್ಯ ವಿಷಯಗಳನ್ನು ತಿಳಿಸಿದ ಮೇಲೆ, “ಇದನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡೇ ಇರು; ಈ ವಿದ್ಯೆಯನ್ನು ನೀನು ಪುನಃ ಯಾರಿಗೂ ಉಪದೇಶಿಸಬಾರದು; ಎಂದಾದರೂ ಹಾಗೆ ಮಾಡಿದೆಯಾದರೆ ನಿನ್ನ ತಲೆ ಉರುಳಿಬಿದ್ದೀತು!” ಎಂದು ಎಚ್ಚರಿಕೆ ಕೊಟ್ಟನು. ತನ್ನ ಜ್ಞಾನ ಇತರರಿಗೆ ಉಪಯೋಗಕ್ಕೆ ಬಾರದಲ್ಲ ಎಂದು ದಧೀಚಿ ವ್ಯಥೆಪಟ್ಟನು; ತನಗೆ ಸಾಕ್ಷಾತ್ತಾಗಿ ಗುರುವಾಗಿ ರಹಸ್ಯವನ್ನು ತಿಳಿಸಿದ ಇಂದ್ರನ ಮಾತನ್ನು ಅವನು ಮೀರುವಂತಿರಲಿಲ್ಲ; ಆದರೂ ತನ್ನ ಶಿಷ್ಯರಿಗೆ ಬೋಧಿಸಬಹುದಾದ ಅನೇಕ ಇತರ ವಿಷಯಗಳಿದ್ದುವಲ್ಲ ಎಂದು ಅವನು ಸಮಾಧಾನಪಟ್ಟುಕೊಂಡನು.

ವಿದ್ಯೆಗಳಲ್ಲಿ ಪಾರಂಗತನಾದ ದಧೀಚಿ ಸರಸ್ವತೀ ನದಿಯ ತೀರದ ಒಂದು ರಮ್ಯವಾದ ಪ್ರದೇಶದಲ್ಲಿ ತನ್ನ ವಾಸಕ್ಕಾಗಿ ಸ್ಥಳವನ್ನು ಆರಿಸಿಕೊಂಡನು. ಅಲ್ಲಿ ಅವನ ತಪಸ್ಸಿಗೆ ಭಂಗತರುವ ಜನರ ಸಂಚಾರವಿರಲಿಲ್ಲ. ಬಟ್ಟೆ ಒಗೆಯುವುದು, ಸ್ನಾನ ಮಾಡುವುದು, ಅಡುಗೆಯ ಕೆಲಸ ಮುಂತಾದವುಗಳಿಗೆ ಸಮೀಪದಲ್ಲಿಯೇ ಹರಿಯುತ್ತಿದ್ದ ಸರಸ್ವತಿ ತುಂಬ ಅನುಕೂಲವಾಗಿತ್ತು. ದಧೀಚಿಯ ಆಶ್ರಮದಲ್ಲಿ ಮುಗಿಲನ್ನು ಮುಟ್ಟುವಂತೆ ಬೆಳೆದಿದ್ದ ಅನೇಕ ಹೆಮ್ಮರಗಳು ಫಲಪುಷ್ಪಗಳಿಂದ ಬಾಗಿ ಬಳುಕುತ್ತಿದ್ದವು. ಅವನ್ನು ಆಶ್ರಯಿಸಿ ಧ್ವನಿಗೈಯುತ್ತಿದ್ದ ಕೋಗಿಲೆಯಂತಹ ಅನೇಕ ಪಕ್ಷಿಗಳು ಅಲ್ಲಿದ್ದವು. ಆಶ್ರಮ ತುಂಬ ಚೆಲುವಾಗಿತ್ತು, ಅಲ್ಲಿ ಇರುವುದೆಂದರೇ ಒಂದು ಸಂತೋಷ.

ಪ್ರಾತಿಥ್ಯೇಯ ಈ ಎಂಬ ಕನ್ನೆಯನ್ನು ಮದುವೆಯಾಗಿ ದಧೀಚಿ ಬಹು ಧರ್ಮದಿಂದ ಬಾಳುತ್ತಿದ್ದ. ಅವನಿಂದ ವಿದ್ಯೆ ಕಲಿಯಲು ಅನೇಕ ಮಂದಿ ಶಿಷ್ಯರು ಬರುತ್ತಿದ್ದರು. ದಿನದಿನಕ್ಕೆ ಅವನ ಕೀರ್ತಿ ಹೆಚ್ಚುತ್ತಾ ಹೋಯಿತು.

ನಮಗೆ ವಿದ್ಯೆಯೂ ಬರಲಿಇಂದ್ರನ ಮಾತೂ ಉಳಿಯಲಿ

ಒಮ್ಮೆ ಒಂದೇ ಆಕಾರ ರೂಪಗಳನ್ನು ತಾಳಿದ್ದ ಇಬ್ಬರು ದಧೀಚಿಯ ಬಳಿಗೆ ಬಂದು ನಮಸ್ಕರಿಸಿದರು. ಆದರದಿಂದ ಅವರನ್ನು ಬರಮಾಡಿಕೊಂಡು ಋಷಿಯು ಅವರು ಬಂದುದಕ್ಕೆ ಕಾರಣವನ್ನು ಕೇಳಿದನು. “ಸ್ವಾಮೀ, ನಿಮ್ಮಿಂದ ಬ್ರಹ್ಮವಿದ್ಯೆಯನ್ನು ಕಲಿಯಬೇಕೆಂದು ನಮಗೆ ಬಹಳ ಆಸೆ. ಅದಕ್ಕಾಗಿಯೇ ಬಹುದೂರದಿಂದ ಬಂದಿದ್ದೇವೆ” ಎಂದು ಅವರು ನುಡಿದರು.

ದಧೀಚಿಗೆ ಸಂಕಟವಾಯಿತು. ತಾನು ಅವರ ಇಷ್ಟಾರ್ಥವನ್ನು ನೆರವೇರಿಸುವಂತಿರಲಿಲ್ಲ. ಬ್ರಹ್ಮವಿದ್ಯೆ ತನಗೆ ತಿಳಿದಿದೆ, ಆದರೆ ಇಂದ್ರನ ಆಜ್ಞೆಯಿಂದ ಇತರರಿಗೆ ಹೇಳಿಕೊಡುವಂತಿಲ್ಲ. ಸ್ವಭಾವತಃ ಪರೋಪಕಾರಿಯಾಗಿದ್ದ ಅವನಿಗೆ ಅದು ಸರಿಯೆಂದು ತೋರಲಿಲ್ಲ . ಆದರೆ ತನ್ನ ಗುರುವಾಗಿದ್ದ ಇಂದ್ರನ ಎಚ್ಚರಿಕೆಯನ್ನು ಮರೆಯುವುದಾಗಲಿ, ಮೀರುವುದಾಗಲಿ ಸಾಧ್ಯವೇ ಇಲ್ಲ.

ಸಂಕೋಚದಿಂದ ದಧೀಚಿ. “ಬ್ರಹ್ಮವಿದ್ಯೆ ತಿಳಿಸಿ ಕೊಡಲು ನನಗೆ ಸಾಧ್ಯವೆಂದು ನಿಮಗೆ ಹೇಗೆ ಗೊತ್ತಾಯಿತು?” ಎಂದು ಕೇಳಿದನು.

“ಸ್ವಾಮೀ, ತಾವು ಮಹೇಂದ್ರನನ್ನು ಒಲಿಸಿಕೊಂಡು ಆತನಿಂದಲೇ ಬ್ರಹ್ಮವಿದ್ಯೆಯನ್ನು ಪಡೆದಿರಿ ಎಂಬುದನ್ನು ತಿಳಿದೇ ನಾವು ಇಲ್ಲಿಗೆ ಬಂದಿದ್ದೇವೆ” ಎಂದು ಅವರು ಹೇಳಿದರು.

ದಧೀಚಿ ಉಪಾಯವಿಲ್ಲದೆ, “ನೀವು ಹೇಳಿದುದು ನಿಜ. ಆದರೆ  ಆ ವಿದ್ಯೆಯನ್ನು ನಾನು ರಹಸ್ಯವಾಗಿಯೇ ಇಟ್ಟಕೊಳ್ಳಬೇಕಾಗಿದೆ. ಇತರರಿಗೆ ಅದನ್ನು ನಾನು ತಿಳಿಸುವುದು ನನ್ನ ಗುರುವಿಗೆ ಸಮ್ಮತವಲ್ಲ, ಹಾಗೂ ಆತನ ಮಾತನ್ನು ಮೀರಿ ನಾನು ಯಾರಿಗಾದರೂ ಬ್ರಹ್ಮ ವಿದ್ಯೆಯನ್ನು ಉಪದೇಶ ಮಾಡಿದಲ್ಲಿ ನನ್ನ ತಲೆ ಹಾರಿಹೋಗುವುದೆಂದು ಆತನೇ ನನಗೆ ಎಚ್ಚರಿಕೆ ಇತ್ತಿದ್ದಾನೆ.  ಆದುದರಿಂದ ದಯವಿಟ್ಟು ನನ್ನನ್ನು ಕ್ಷಮಿಸಿ;  ಈ ಕೆಲಸಕ್ಕಾಗಿ ಮತ್ತೆ ಯಾರಲ್ಲಿಯಾದರೂ ಹೋಗಿ” ಎಂದು ಅವರಿಗೆ ಹೇಳಿದನು.

ಕಾರ್ಯಸಾಧನೆಗಾಗಿ ಬಂದಿದ್ದ ಅವರು ಅಷ್ಟು ಮಾತನ್ನು ಒಪ್ಪಿ ಹಿಂದಿರುಗುವಂತಿರಲಿಲ್ಲ. ಮುಗುಳ್ನಗೆ ತೋರಿ, ಋಷಿಯನ್ನು ಕುರಿತು ಅವರು ಹೀಗೆ ಹೇಳಿದರು: “ಸ್ವಾಮಿ ಈ ನಿಮ್ಮ ಪರಿಸ್ಥಿತಿ ನಮಗೆ ಅರ್ಥವಾಯಿತು. ಆದರೂ ಕೃತಾರ್ಥರಾಗದೆ ಹಿಂದಿರುಗುವ ಯೋಚನೆ ನಮಗಿಲ್ಲ. ನಿಮ್ಮಿಂದ ಉಪದೇಶ ಪಡೆಯಬೇಕೆಂದೇ ನಾವು ಬಂದಿದ್ದೇವೆ. ನಿಮ್ಮ ಗುರುಗಳು ಹಾಕಿದ ಬೆದರಿಕೆಯನ್ನು ನಮ್ಮ ಮುಂದೆ ಇಟ್ಟು ನಮ್ಮನ್ನು ಅಟ್ಟಬೇಡಿ. ಶ್ರದ್ಧೆ, ಭಕ್ತಿಗಳಿಲ್ಲದ ಯಾರು ಯಾರಿಗಾದರೂ ಆ ಉತ್ತಮ ವಿದ್ಯೆಯನ್ನು ಕಲಿಸಬಾರದೆಂದು ಗುರುಗಳ ಅಭಿಪ್ರಾಯವಿರಬಹುದು. ಬೇಕಾದರೆ ನಮ್ಮನ್ನು ಕೆಲವು ಕಾಲ ಪರೀಕ್ಷಿಸಿ, ಆಮೇಲೆಯೇ ಶಿಷ್ಯರನ್ನಾಗಿ ಸ್ವೀಕರಿಸಿ” ಎಂದು ವಿನಯಪೂರ್ವಕವಾಗಿ ಕೇಳಿಕೊಂಡರು.

ದಧೀಚಿಯ ಮನಸ್ಸು ಕರಗಿದರೂ ಅವನಿಗೆ ಗುರುದ್ರೋಹದ ಭಯ ಹೋಗಲಿಲ್ಲ. “ಅಯ್ಯ, ನಿಮಗೆ ದೇವೇಂದ್ರನ ಮಾತಿನಲ್ಲಿ ನಂಬಿಕೆ ಇಲ್ಲವೆ? ಆ ಗುರುವಿನ ಅಪ್ಪಣೆಯನ್ನು ಮೀರಿ ನಡೆಯಲು ಪ್ರಯತ್ನಿಸಿದ ಕೂಡಲೇ ನನ್ನ ತಲೆ ಉರುಳಿಹೋಗುತ್ತದೆ; ಅದರಿಂದ ನಿಮಗೂ ಪ್ರಯೋಜನವಾಗದು. ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಬೇಡಿ.” ಎಂದು ಋಷಿ ನುಡಿದನು.

ಬಂದಿದ್ದವರು ಬೇಸರಪಡದೆ ನಿರ್ಭಯವಾಗಿ, “ಹಾಗೋ, ಹಾಗಿದ್ದರೆ ನೋಡಿಯೇ ಬಿಡೋಣ. ನೀವು ಉಪದೇಶ ಮಾಡಿ. ನಿಮ್ಮ ತಲೆ ಉರುಳಿಬಿದ್ದರೆ ನಿಮ್ಮ ಸಾಮರ್ಥ್ಯದಿಂದ ಅದನ್ನು ನಾವು ಪುನಃ ಕೂಡಿಸಿ ನಿಮ್ಮ ಜೀವವನ್ನು ಉಳಿಸುತ್ತೇವೆ” ಎಂದು ಸ್ಥೈರ್ಯದಿಂದ ಹೇಳಿದರು.

ಅಶ್ವಿನೀಕುಮಾರರು, ‘ದಯಮಾಡಿ ನಮಗೆ ಬ್ರಹ್ಮವಿದ್ಯೆಯನ್ನು ಅನುಗ್ರಹಿಸಿ’ ಎಂದು ಬೇಡಿದರು.

ದಧೀಚಿಗೆ ಆಶ್ಚರ್ಯವಾಯಿತು. “ಹಾಗಾಗುವ ಪಕ್ಷಕ್ಕೆ ನೀವಂತೂ ಮನುಷ್ಯರಲ್ಲ ಎನ್ನಬೇಕು. ನೀವು ಯಾರೆಂದು ಮೊದಲು ತಿಳಿಸಿ” ಎಂದನು.

ಆಗ ಅವರು ತಮ್ಮ ನಿಜ ಸ್ವರೂಪವನ್ನು ತೋರಿಸಿದರು. ಅವರು ದೇವತೆಗಳು! “ನಾವು ಸ್ವರ್ಗಲೋಕದ ವೈದ್ಯರಾದ ಅಶ್ವಿನೀಕುಮಾರರು. ನಿಮಗೆ ಯಾವ ಅಪಾಯವಾಗದಂತೆ ನಾವು ನೋಡಿಕೊಳ್ಳುವೆವು. ದಯೆಮಾಡಿ ನಮಗೆ ಬ್ರಹ್ಮವಿದ್ಯೆಯನ್ನು ಅನುಗ್ರಹಿಸಿ” ಎಂದು ಪ್ರಾರ್ಥನೆ ಮಾಡಿದರು.

ಮರುಮಾತನಾಡಲು ಅವಕಾಶವಿಲ್ಲದೆ ದಧೀಚಿ ಅವರಿಗೆ ತನ್ನ ಒಪ್ಪಿಗೆ ಇತ್ತನು.

ಅಶ್ವಿನೀ ದೇವತೆಗಳು ಮೊದಲು ದಧೀಚಿಯ ತಲೆಯನ್ನು ತೆಗೆದಿಟ್ಟು ಆ ದೇಹಕ್ಕೆ ಒಂದು ಕುದುರೆಯ ತಲೆಯನ್ನು ಸೇರಿಸಿದರು; ಆ ತಲೆಯನ್ನು ಹೊತ್ತು ದಧೀಚಿ ಮಾತನಾಡುವಂತೆ ಅನುಗ್ರಹಿಸಿದರು. ಸಂತೋಷದಿಂದ ಆ ಋಷಿಯು ತಾನು ಕೇಳಿ ತಿಳಿದಿದ್ದ ಬ್ರಹ್ಮವಿದ್ಯೆಯನ್ನೆಲ್ಲ ಆ ದೇವತೆಗಳಿಗೆ ತಿಳಿಸಿಕೊಟ್ಟನು. ಆ ವಿಷಯವನ್ನು ದಿವ್ಯ ದೃಷ್ಟಿಯಿಂದ ತಿಳಿದ ಮಹೇಂದ್ರನು ಕೋಪಗೊಂದು ದಧೀಚಿಯ ಕುದುರೆ ತಲೆಯನ್ನು ಕತ್ತಿಯಿಂದ ಸವರಿ ತರಿದನು. ಕೂಡಲೇ ತಮ್ಮ ಅದ್ಭುತ ಶಕ್ತಿಯಿಂದ ಅಶ್ವಿನೀ ದೇವತೆಗಳು ತಾವು ಮೊದಲೇ ತೆಗೆದಿಟ್ಟಿದ್ದ ತಲೆಯನ್ನು ಋಷಿಯ ದೇಹಕ್ಕೆ ಸೇರಿಸಿ ಅವನನ್ನು ಬದುಕಿಸಿಬಿಟ್ಟರು.

ಇಂದ್ರನ ಬೆದರಿಕೆ ವ್ಯರ್ಥವಾಗಲಿಲ್ಲ, ದಧೀಚಿ ಕಲಿತಿದ್ದ ವಿದ್ಯೆ ಮುಂದುವರಿಯಿತು, ಅಶ್ವಿನಿದೇವತೆಗಳು ಕೃತಾರ್ಥರಾದರು!

ಈ ಸುದ್ದಿ ಹರಡಿದ ಮೇಲೆ ಎಲ್ಲ ಋಷಿಗಳಿಗೂ ದಧೀಚಿಯ ವಿಷಯದಲ್ಲಿ ಗೌರವ ಹೆಚ್ಚಿತು, ಅವನ ಕೀರ್ತಿ ದೇವಲೋಕದಲ್ಲಿಯೂ ಹಬ್ಬಿತು! ಲೋಕಕ್ಕೆ ಹಿತವಾಗುವುದಾದರೆ ಅವನು ತನ್ನ ಯಾವ ಅಪಾಯವನ್ನೂ ಲಕ್ಷಿಸುವವನಲ್ಲ ಎಂದು ಎಲ್ಲರಿಗೂ ಮನವರಿಕೆಯಾಯಿತು.

ನಮ್ಮ ಆಯುಧಗಳನ್ನು ಹಿಂದಕ್ಕೆ ಕೊಡುತ್ತೀರಾ?’

ಆಗಿಂದಾಗ ದೇವ-ದಾನವರಲ್ಲಿ ಐಶ್ವರ್ಯ ಅಧಿಕಾರಗಳಿಗಾಗಿ ಯುದ್ಧಗಳು ಆಗುತ್ತಲೇ ಇದ್ದವು. ಕ್ರೂರಿಗಳಾಗಿದ್ದ ರಾಕ್ಷಸರ ದೆಸೆಯಿಂದ ದೇವತೆಗಳು ನಾನಾ ಬಗೆಯಲ್ಲಿ ಪಾಡುಪಟ್ಟು ಕೊನೆಗೆ ಮಹಾವಿಷ್ಣುವನ್ನು ಮೊರೆಹೊಕ್ಕು ಅವನ ದಯೆಯಿಂದ ತಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕಾಗುತ್ತಿತ್ತು.

ಒಮ್ಮೆ ಯುದ್ಧ ಮುಗಿದ ಕೂಡಲೇ ಕಂಗೆಟ್ಟಿದ್ದ ದೇವತೆಗಳು ದಧೀಚಿಯ ಬಳಿಗೆ ಬಂದು “ಮಹರ್ಷಿಗಳೇ, ನಮ್ಮ ಈ ವಿವಿಧ ಅಸ್ತ್ರಗಳನ್ನೆಲ್ಲ ನಿಮ್ಮಲ್ಲಿ ನ್ಯಾಸವಾಗಿ ಇಡುತ್ತೇವೆ, ಸ್ವೀಕರಿಸಿ. ಇವು ನಿಮ್ಮಲ್ಲಿದ್ದೆರೆ ನಾವು ನಿರಾತಂಕವಾಗಿ ಇರಬಲ್ಲೆವು. ಪುನಃ ಯುದ್ಧದ ಸಮಯ ಒದಗಿ ಬಂದು ನಮಗೆ ಈ ಅಸ್ತ್ರಗಳು ಬೇಕಾದಾಗ ನಾವೇ ಬಂದು ಇವನ್ನು ಕೊಂಡೊಯ್ಯುವೆವು. ಅದುವರೆಗೆ ಇವು ಇಲ್ಲಿಯೇ ಇರಲಿ”’ ಎಂದು ಹೇಳಿದರು. ದಧೀಚಿಯೂ ಒಪ್ಪಿದ. ದೇವತೆಗಳು ಅಸ್ತ್ರಗಳನ್ನು ಇಟ್ಟುಹೋದರು.

ಹಲವಾರು ವರ್ಷಗಳೇ ಕಳೆದುಹೋದವು. ತಮ್ಮ ಅಸ್ತ್ರಗಳಿಗಾಗಿ ದೇವತೆಗಳು ದಧೀಚಿಯ ಬಳಿಗೆ ಬರಲೇ ಇಲ್ಲ.

ಬಳಕೆಯಲ್ಲಿಲ್ಲದೆ ದೇವತೆಗಳ ಆಯುಧಗಳು ತುಕ್ಕು ಹಿಡಿಯಹತ್ತಿದವು. ಋಷಿಗೆ ಚಿಂತೆಯಾಯಿತು. ಕೊನೆಗೆ ಅವನ್ನೂ ಉಳಿಸಿಕೊಳ್ಳುವುದಕ್ಕಾಗಿ ದಧೀಚಿ ಅವನ್ನೆಲ್ಲ ನೀರಿನಲ್ಲಿ ಅಭಿಮಂತ್ರಿಸಿ ಅದನ್ನು ಕುಡಿದುಬಿಟ್ಟನು! ಅವು ಅವನ ದೇಹದೊಳಗೆ ಅಡಗಿಹೋದವು.

ಮತ್ತೆ ಎಷ್ಟೋ ವರ್ಷಗಳೇ ಕಳೆದುಹೋದವು.

ಒಂದು ದಿನ ದೇವತೆಗಳು ದಧೀಚಿಯ ಬಳಿಗೆ ಬಂದರು.

“ಮಹರ್ಷಿಗಳೇ, ಮತ್ತೆ ನಾವು ಯುದ್ಧ ಮಾಡಬೇಕಾಗಿದೆ. ದಯೆಮಾಡಿ ನಮ್ಮ ಆಯುಧಗಳನ್ನು ಹಿಂದಕ್ಕೆ ಕೊಡಿ”  ಎಂದು ಪ್ರಾರ್ಥಿಸಿದರು.

ದಧೀಚಿ-ನೀವು ಒಳ್ಳೆಯ ಬುದ್ಧಿವಂತರಪ್ಪ! ನನ್ನಲ್ಲಿ ಇಟ್ಟ ಅಸ್ತ್ರಗಳನ್ನು ಎಷ್ಟು ದಿನಗಳಾದ ಮೇಲೆ ನೀವು ಕಳುತ್ತಿರುವುದು? ಅವನ್ನು ನಾನು ಎಷ್ಟು ಕಾಲ ಜೋಪಾನವಾಗಿ ಇಟ್ಟುಕೊಂಡಿರಬಹುದು?

ದೇವೇಂದ್ರ – ಮಹರ್ಷಿಗಳೇ, ನಮಗೆ ಇದುವರೆಗೆ ಯುದ್ಧದ ಭಯವಿರದಿದ್ದುದರಿಂದ ಆ ಅಸ್ತ್ರಗಳ ಅವಶ್ಯಕತೆ ತೋರಿರಲಿಲ್ಲ. ಈಗ ನಮಗೆ ಅವು ಬೇಕಾಗುವ ಸಂಭವವಿದೆ. ತಡಮಾಡಿ ಬಂದುದಕ್ಕೆ ನಮ್ಮನ್ನು ಕ್ಷಮಿಸಿ; ನಮ್ಮ ಅಸ್ತ್ರಗಳನ್ನು ದಯೆಮಾಡಿ ನಮಗೆ ಕೊಡಿ.

ದಧೀಚಿ – ಈಗ ನಿಮ್ಮ ಆಯುಧಗಳನ್ನು ಹೇಗೆ ಕೊಡಲಿ? ಅವು ತುಕ್ಕು ಹಿಡಿದು ಹಾಳಾಗುತ್ತಿದ್ದುದನ್ನು ನೋಡಲಾರದೆ ನಾನು ಅವನ್ನು ಮಂತ್ರಶಕ್ತಿಯಿಂದ ನೀರಿನಲ್ಲಿ ಕೂಡಿಸಿ ಕುಡಿದುಬಿಟ್ಟೆ. ನಾನೇನು ಮಾಡಲಿ?

ದೇವೇಂದ್ರ – ನೀವು ಏನು ಮಾಡಬೇಕೆಂದು ನಾವು ಹೇಗೆ ಹೇಳಬಹುದು? ನಮಗಂತೂ ಈಗ ಶಸ್ತ್ರಾಸ್ತ್ರಗಳು ಬೇಕೇಬೇಕು; ಇಲ್ಲದಿದ್ದರೆ ಖಂಡಿತವಾಗಿ ನಾವು ಉಳಿಯಲಾರೆವು. ಏನಾದರೂ ಮಾಡಿ ನೀವು ನಮಗೆ ಅವನ್ನು ಕೊಡಿ. ಹಿಂದಕ್ಕೆ ಕೊಂಡೊಯ್ಯುವೆವು ಎಂದು ಹೇಳಿಯಲ್ಲವೇ, ನಾವು ಅವನ್ನು ನಿಮ್ಮಲ್ಲಿ ನ್ಯಾಸವಾಗಿ ಇಟ್ಟದ್ದು?

ದೇವತೆಗಳು ಕೇಳಿದುದು ನ್ಯಾಯವಾಗಿಯೇ ಇದ್ದಿತು. ದಧೀಚಿಯ ಬಳಿಯಲ್ಲಿ ಒತ್ತೆಯಾಗಿ ಇಟ್ಟುದುದನ್ನು ಅವರು ಯಾವಾಗಲಾದರೂ ಪಡೆಯಬಹುದಾಗಿದ್ದಿತು. “ಇಷ್ಟು ದಿನಗಳೊಳಗೇ ಬಂದು ತೆಗೆದುಕೊಂಡು ಹೋಗಬೇಕು, ಇಲ್ಲವಾದರೆ ನಿಮ್ಮ ವಸ್ತುವನ್ನು ನಾನು ಏನಾದರೂ ಮಾಡಿಬಿಡುವೆ” ಎಂದು ಋಷಿ ಮೊದಲೇ ಹೇಳಿರಲಿಲ್ಲ. ಆದರೆ ಅಸ್ತ್ರಗಳನ್ನು ನೀರಿನಲ್ಲಿ ಅಭಿಮಂತ್ರಿಸಿಕೊಂಡು ಕುಡಿದು ತನ್ನ ದೇಹದಲ್ಲಿ ಅರಗಿಸಿಕೊಂಡುಬಿಟ್ಟಿದ್ದ. ಈಗ ಅವನು ಅವನ್ನು ಹಿಂದಿರುಗಿಸುವ ಬಗೆ ಯಾವುದು?

ಮಹರ್ಷಿ ತುಂಬ ಕಷ್ಟದ ಸನ್ನಿವೇಶದಲ್ಲಿ ಸಿಕ್ಕಿಕೊಂಡನು. ಅವನು ಸತ್ಯಸಂಧ. ತನ್ನನ್ನು ನೆಚ್ಚಿ ಆಯುಧಗಳನ್ನು ಇಟ್ಟು ಹೋದ ದೇವತೆಗಳು ಈಗ ಸಂಕಟದಲ್ಲಿರುವಾಗ, ಆಯುಧಗಳಿಲ್ಲ ಎಂದುಬಿಡುವುದು ಹೇಗೆ?

ಕಡೆಗೆ ದಧೀಚಿಯು, “ದೇವತೆಗಳೇ, ನಿಮ್ಮ ಅಸ್ತ್ರಗಳೆಲ್ಲ ಕರಗಿ ಹೋಗಿ ಈಗ ನನ್ನ ದೇಹದ ಬೆನ್ನುಮೂಳೆಯಲ್ಲಿ ಬೆರೆತುಹೋಗಿವೆ. ಆ ಅಸ್ತ್ರಗಳನ್ನು ಬೇರ್ಪಡಿಸಿ ನಿಮಗೆ ಕೊಡಲು ನಾನು ಅಸಮರ್ಥನಾಗಿದ್ದೇನೆ. ಆದರೆ ನಿಮಗೆ ದ್ರೋಹ ಮಾಡುವುದಿಲ್ಲ. ಯೋಗ ಬಲದಿಂದ ಈಗಲೇ ನನ್ನ ಪ್ರಾಣಗಳನ್ನು ನಿರೋಧಿಸಿ ಈ ದೇಹವನ್ನು ಕಳೆದುಕೊಳ್ಳುತ್ತೇನೆ. ನನ್ನ ದೇಹದಿಂದ ನೀವು ಆ ಮೂಳೆಗಳನ್ನು ಬೇರ್ಪಡಿಸಿ ತೆಗೆದುಕೊಂಡು ಅವುಗಳಿಂದ ನಿಮಗೆ ಬೇಕಾಗುವ ಅಸ್ತ್ರಗಳನ್ನು ಮಾಡಿಸಿಕೊಳ್ಳಿ. ಅವು ನಿಮ್ಮ ಮೊದಲಿನ ಅಸ್ತ್ರಗಳಂತೆಯೇ ಕೆಲಸ ಮಾಡಿ ಶತ್ರುಗಳನ್ನು ಸಂಹರಿಸಲು ಸಮರ್ಥವಾಗುವುವು” ಎಂದು ಹೇಳುತ್ತಾ ಯೋಗಸಮಾಧಿಗೆ ಸಿದ್ಧನಾದನು.

“ಎಂತಹ ನ್ಯಾಯವಂತ ಇವನು, ಎಷ್ಟು ಗಟ್ಟಿ ಇವನ ಮನಸ್ಸು!” ಎಂದು ಬೆರಗಾದರು ದೇವತೆಗಳು.

“ಸ್ವಾಮಿ ತಡೆಯಿರಿ. ನಮಗಿನ್ನೂ ಈಗಲೇ ಯುದ್ಧ ಒದಗಿಬಂದಿಲ್ಲ. ಅದು ಬಂದಾಗ ಬೇರೆ ಉಪಾಯವಿಲ್ಲದಿದ್ದರೆ ನೀವು ಹೇಳಿದಂತೆ ಮಾಡಿದರಾಯಿತು. ಅದುವರೆಗೆ, ಲೋಕೋಪಚಾರ ನಿರತವಾದ ನಿಮ್ಮ ಈ ದೇಹವನ್ನು ನಾಶಮಾಡಲು ನಾವು ಮುಂದಾಗಲಾರೆವು. ನಿಮ್ಮ ಪಾಠ ಪ್ರವಚನ, ಯಜ್ಞ ತಪಸ್ಸುಗಳನ್ನು ನಿರಾತಂಕವಾಗಿ ನಡೆಸಿಕೊಳ್ಳಿ” ಎಂದು ಹೇಳಿ ನಮಸ್ಕಾರ ಮಾಡಿ ದೇವತೆಗಳು ಹೊರಟುಹೋದರು. ದಧೀಚಿಯ ಜೀವನ ಎಂದಿನಂತೆಯೇ ಶಾಂತಿ, ಉತ್ಸಾಹಗಳೊಡನೆ ಸಾಗಿತು.

ನಮಗೆ ಯಾರು ದಿಕ್ಕು?

ದೇವತೆಗಳಲ್ಲಿ ಬಡಗಿಯಾಗಿದ್ದ ತ್ವಷ್ಟೃ ಎಂಬವನಿಗೆ ಒಬ್ಬ ಮಗ ಹುಟ್ಟಿದ. ಅವನಿಗೆ ವಿಶ್ವರೂಪ ಎಂದು ಹೆಸರಿಟ್ಟರು. ವೇದಗಳನ್ನೆಲ್ಲ ಚೆನ್ನಾಗಿ ಕಲಿತು ವ್ಯವಹಾರದಲ್ಲಿ ಅವನು ಕುಶಲನಾದ. ದೇವತೆಗಳು ಅವನನ್ನು ತಮ್ಮ ಪುರೋಹಿತನನ್ನಾಗಿ ಮಾಡಿಕೊಂಡರು. ಬೇಗೆನ ಅವನು ಅವರಿಗೆ ಅಚ್ಚುಮೆಚ್ಚಾದ ಗುರುವಾದನು. ಕೆಲವು ಸಂದರ್ಭಗಳಲ್ಲಿ ಇಂದ್ರನಿಗೂ ಸೂಕ್ತ ಸಲಹೆಗಳನ್ನು ಕೊಡಬಲ್ಲ ಪ್ರಭಾವಶಾಲಿಯಾದನು.

ವಿಶ್ವರೂಪನ ತಾಯಿ ರಾಕ್ಷಸಿ. ಅಲ್ಲಲ್ಲಿ ಯಜ್ಞಗಳನ್ನು ಮಾಡಿಸುತ್ತಾ ಅಗ್ನಿಯ ಮೂಲಕ ದೇವತೆಗಳಿಗೆ ಹವಿಸ್ಸನ್ನು ತಲುಪಿಸುತ್ತಿದ್ದ ವಿಶ್ವರೂಪನಿಗೆ ತನ್ನ ತಾಯಿಯ ಬಂಧುಗಳ ಮೇಲೆ ಅಭಿಮಾನವಿತ್ತು. ದಾನವರಿಗೂ ಯುಜ್ಞಗಳಲ್ಲಿ ಹವಿಸ್ಸನ್ನು ಸಮರ್ಪಿಸುವ ಹಂಬಲ ಹುಟ್ಟಿತು. ಕಂಡಹಾಗೆ ದೇವತೆಗಳ ಹೆಸರುಗಳನ್ನು ಉಚ್ಚರಿಸಿ ಅವರಿಗೆ ಹವಿಸ್ಸನ್ನು ಕೊಡಿಸುತ್ತಿದ್ದನು; ಇತರರಿಗೆ ತಿಳಿಯದಂತೆ ದಾನವರ ಹೆಸರುಗಳನ್ನೂ ಹೇಳಿ ಅವರಿಗೂ ತೃಪ್ತಿಯಾಗುವಂತೆ ಮಾಡುತ್ತಿದ್ದನು. ಆದರೆ ಆ ಕೆಲಸ ಬಹುಕಾಲ ಗುಟ್ಟಾಗಿರಲಿಲ್ಲ. ದೇವತೆಗಳಿಗೆ ಸಂಶಯ ಹುಟ್ಟಿ ಅವರು ಪರೀಕ್ಷಿಸಿದಾಗ ವಿಷಯ ಗೊತ್ತಾಯಿತು. ಆ ಪುರೋಹಿತನ ದ್ರೋಹವನ್ನು ಅವರು ತಮ್ಮ ಪ್ರಭುವಾದ ಇಂದ್ರನಿಗೆ ತಿಳಿಸಿಬಿಟ್ಟರು. ದೇವೇಂದ್ರನಿಗೆ ಕೋಪ ಉಕ್ಕಿಬಂದಿತು. ಹಿಂದುಮುಂದು ನೋಡದೆ, ಅವನು ವಿಶ್ವರೂಪಾಚಾರ್ಯನ ತಲೆಯನ್ನು ತರಿದುಹಾಕಿದನು.

ದಧೀಚಿಯು ಹೊರ ಜಗತ್ತನ್ನು ಮರೆತು ಪರಮಾತ್ಮನ ಧ್ಯಾನ ಮಾಡತೊಡಗಿದನು.

ತನ್ನ ಮಗನನ್ನು ಇಂದ್ರನು ಕೊಂದುದರಿಂದ ಬಡಗಿಯಾದ ತ್ವಷ್ಟೃರವಿಗೆ ತುಂಬ ದುಃಖವಾಯಿತು. ಇಂದ್ರನ ಮೇಲೆ ಸೇಡು ತೀರಿಸಿಕೊಳ್ಳುವ ಮನಸ್ಸು ಅವನಿಗೆ ಹುಟ್ಟಿತು. ಇಂದ್ರನಿಗೆ ಪರಮ ಶತ್ರುವಾಗುವ ಮಗನನ್ನು ಕರುಣಿಸೆಂದು ದೇವರನ್ನು ಪ್ರಾರ್ಥಿಸಿ ವರವನ್ನು ಅವನು ಪಡೆದನು. ಅವನಿಗೆ ಒಬ್ಬ ಮಗನಾದ. ಅವನಿಗೆ ವೃತ್ರನೆಂದು ತಂದೆ ಹೆಸರಿಟ್ಟನು. ಮಹಾಬಲಶಾಲಿಯಾಗಿಯೂ ಭಯಂಕರ ರೂಪವುಳ್ಳವನಾಗಿಯೂ ಅತ್ಯಂತ ಕ್ರೂರನಾಗಿಯೂ ಅವನು ಬೆಳೆದನು. ತಾಯಿ ತಂದೆ, ಇಂದ್ರನು ಅವನ ಅಣ್ಣನನ್ನು ಕೊಂದ ಕಥೆಯನ್ನು ಚಿಕ್ಕವನಾಗಿದ್ದಾಗಿನಿಂದ ಅವನಿಗೆ ಪುನಃ ಪುನಃ ಹೇಳಿದರು. ಹೀಗೆ ಅವನಲ್ಲಿ ದ್ವೇಷದ ಮನೋಭಾವವನ್ನು ಬೆಳೆಸಿದರು. ದೇವತೆಗಳನ್ನು ಕಂಡ ಕೂಡಲೆ ಅವನ ಹೊಟ್ಟೆಯಲ್ಲಿ ಬೆಂಕಿಬಿದ್ದಂತಾಗುತ್ತಿದ್ದಿತು.

ಬಾಲ್ಯ ಕಳೆದು ಯೌವನದಲ್ಲಿ ಕಾಲಿಡುವ ವೇಳೆಗೆ ಎಲ್ಲ ಶಸ್ತ್ರಾಸ್ತ್ರಗಳ ಬಳಕೆಯನ್ನೂ ಅವನು ಅರಿತಿದ್ದನು. ಅವನಿಗೆ ಇದಿರಾದ ಯಾವ ದೇವತೆಗೂ ಮೈ, ಕೈ, ಕಾಲುಗಳಿಗೆ ಗಾಯವಾಗದೆ ಹಿಂದಿರುಗಲು ಸಾಧ್ಯವಿರಲಿಲ್ಲ. ರಾಕ್ಷಸರಿಗೆಲ್ಲ ಅವನೆಂದರೆ ಬಹು ಸಂತೋಷ.  ವೃತ್ರನು ದೊಡ್ಡವನಾಗಿ ಸಾಕಷ್ಟು ಬಲಶಾಲಿಯಾದ ಮೇಲೆ ಅವನ ನೇತೃತ್ವದಲ್ಲಿ ದೇವತೆಗಳನ್ನು ಎದುರಿಸಿದರೆ ಪುನಃ ಅವರು ತಲೆ ಎತ್ತಿ ತಿರುಗದಂತೆ ಮಾಡಿಬಿಡಬಹುದೆಂಬ ಆಸೆ ದೈತ್ಯರಿಗೆ ಬಲಿಯಿತು. ಅವರು ಸಮಯಕ್ಕಾಗಿ ಕಾಯುತ್ತಿದ್ದರು.

ಕೊನೆಗೊಂದು ದಿನ ದೇವ-ದಾನವರ ಯುದ್ಧ ಪ್ರಾರಂಭವಾಯಿತು. ರಾಕ್ಷಸರಿಗೆ ವೃತ್ರ ನಾಯಕ; ಆದುದರಿಂದ ಅವರಿಗೆ ಬಹು ಧೈರ್ಯ. ಅವರ ಹೊಡೆತವನ್ನು ದೇವತೆಗಳು ತಡೆಯದಾದರು. ಇಂದ್ರಾದಿಗಳು ಕಂಗೆಟ್ಟರು. ಅವರೆಲ್ಲ ಬ್ರಹ್ಮನ ಬಳಿ ಹೋಗಿ ಮೊರೆ ಇಟ್ಟರು. ಬ್ರಹ್ಮನು ಅವರನ್ನು ಮಹಾವಿಷ್ಣುವಿನ ಬಳಿಗೆ ಕರೆದುಕೊಂಡು ಹೋದನು. ಆ ದೇವದೇವನ ಸನ್ನಿಧಿಯಲ್ಲಿ ಎಲ್ಲರೂ ತಲೆಬಾಗಿ, ದುಃಖದಿಂದ ಕಣ್ಣೀರು ಸುರಿಸುತ್ತಾ, ಮಾತನಾಡದೆ ಮೂಕರಾಗಿ ನಿಂತರು. ಕರುಣಾಳುವೂ ಭಕ್ತಪರಾಧೀನನೂ ಆದ ವಿಷ್ಣು ಅವರನ್ನು ಸಂತೈಸಿ, ಬಂದ ಕಾರಣವೇನೆಂದು ವಿಚಾರಿಸಿದನು.

ಆಗ ಇಂದ್ರನು ಭಿನ್ನವಿಸಿಕೊಂಡನು: ‘ದೇವದೇವ! ಸಮಸ್ತ ಲೋಕಗಳ ಸೃಷ್ಟಿ, ಸ್ಥಿತಿ, ಪ್ರಳಯಗಳಿಗೆ ಮುಖ್ಯ ಕಾರಣನಾಗಿರುವ ನಿನಗೆ ನಮ್ಮ ಪರಿಸ್ಥಿತಿ ಗೊತ್ತಾಗಿಲ್ಲವೆ? ನಾವು ತಾನೆ ನಿನಗೆ ಬಣ್ಣಿಸಿ ತಿಳಿಸಬೇಕಾದ ವಿಷಯ ಯಾವುದು ಇದೆ? ಕಾಲಕಾಲಕ್ಕೆ ನಮಗೂ ದೈತ್ಯ-ದಾನವರಿಗೂ ಮನಸ್ತಾಪ ಉಕ್ಕೇರಿ ಕೈಕೈ ಸೇರುವ ಪ್ರಸಂಗಗಳಾಗುವುವು. ಹಿಂದೆ ನಮಗೆ ಕಷ್ಟ ಬಂದಾಗಲೆಲ್ಲ ನೀನೇ ಅವತಾರಮಾಡಿ ಆ ದಾನವರನ್ನು ಸದೆಬಡಿದು ನಮ್ಮ ಸಂಕಟವನ್ನು ಪರಿಹಾರಮಾಡಿದೆ. ಆದರೆ ಆ ಕಷ್ಟವೆಲ್ಲ ಈಗ ಮರೆತುಹೋಗಿದೆ. ತ್ವಷ್ಟೃವಿನ ಮಗನಾದ ವೃತ್ರನು ಹಿಂದಿನ ತಲೆಮಾರಿನ ರಾಕ್ಷಸರನ್ನು ನಾಚಿಸುವಷ್ಟು ಕ್ರೂರನಾಗಿದ್ದಾನೆ. ಈಗ ಅವನ ನಾಯಕತ್ವದಲ್ಲಿ ಅನೇಕ ರಾಕ್ಷಸರು ಒಂದಾಗಿ ನಮ್ಮ ಮೇಲೆ ಬೀಳುತ್ತಿದ್ದಾರೆ. ಒಂದೆರಡು ಕದನಗಳಲ್ಲಿ ಪೆಟ್ಟು ತಿಂದ ನಾವು ದಿಕ್ಕು ಕೆಟ್ಟು ಓಡುತ್ತಾ ಬಂದು ನನ್ನನ್ನು ಮೊರೆಹೊಕ್ಕಿದ್ದೇವೆ. ನಮ್ಮ ಕಷ್ಟದ ನಿವಾರಣೆಗಾಗಿ ನೀನೇ ಯಾವುದಾದರೊಂದು ಉಪಾಯವನ್ನು ಸೂಚಿಸಬೇಕು.

ಜಗತ್ತಿನ ರಕ್ಷಣೆಯ ಹೊಣೆ ಹೊತ್ತ ಶ್ರೀಹರಿಯು ಇಂದ್ರನನ್ನು ಸಮಾಧಾನಪಡಿಸುತ್ತಾ, “ಎಲೈ ದೇವತೆಗಳೇ, ಹೆದರಬೇಡಿ; ಪುನಃ ರಣರಂಗಕ್ಕೆ ಕಾಲಿಟ್ಟು ಯುದ್ಧಮಾಡಿ . ಆದರೆ ವೃತ್ರಾಸುರನನ್ನು ಕೊಲ್ಲುವುದು ಸುಲಭವಲ್ಲ. ಆದರೂ ಇದಕ್ಕೊಂದು ಉಪಾಯವಿದೆ. ಭೂಲೋಕದ ಸರಸ್ವತೀ ನದಿಯ ತೀರದಲ್ಲಿ ತನ್ನ ಆಶ್ರಮವನ್ನು ಕಟ್ಟಿಕೊಂಡು ದಧೀಚಿ ಮಹರ್ಷಿ ತಪಸ್ಸು ಮಾಡುತ್ತಿದ್ದಾನೆ. ಆತನ ಬಳಿಗೆ ನೀವು ಹೋಗಿ ಆತನನ್ನು ಸನ್ಮಾನಿಸಿ ನಿಮ್ಮ ವಿಪತ್ತನ್ನು ಬಣ್ಣಿಸಿ ತಿಳಿಸಿ; ಆತನ ಸಹಾಯವನ್ನು ಕೋರಿ ಪ್ರಾರ್ಥನೆ ಮಾಡಿಕೊಳ್ಳಿ. ಆತನ ಶರೀರದ ಮೂಳೆಗಳಲ್ಲಿ ವೃತ್ರನನ್ನು ಸಂಹರಿಸುವ ಸಾಮರ್ಥ್ಯವುಳ್ಳ ಶಸ್ತ್ರಾಸ್ತ್ರಗಳು ಹುದುಗಿ ಹೋಗಿವೆ. ಅವನು ಕಲಿತ ಮಂತ್ರಗಳಿಂದ ಅವುಗಳ ಶಕ್ತಿ ಹೆಚ್ಚಾಗಿದೆ. ದಧೀಚಿ ನಿಮಗೆ ತನ್ನ ಮೂಳೆಗಳನ್ನು ಸಮರ್ಪಿಸಿದರೆ ಅವನ್ನು ವಿಶ್ವಕರ್ಮನಿಗೆ ಕೊಟ್ಟು ನಿಮಗೆ ಬೇಕಾಗುವ ಶಸ್ತ್ರಾಸ್ತ್ರಗಳನ್ನು ಮಾಡಿಸಿಕೊಳ್ಳಿ. ಅವುಗಳಿಂದ ಮಾತ್ರವೇ ವೃತ್ರನನ್ನು ಕೊಂದು ನೀವು ಜಯವನ್ನು ಗಳಿಸಬಹುದು. ಆದರೆ ದಧೀಚಿಯು ತನ್ನ ದೇಹವನ್ನೇ ನಿಮ್ಮ ಹಿತಕ್ಕಾಗಿ ನಾಶಪಡಿಸಿಕೊಂಡು ಮೂಳೆಗಳನ್ನು ದಾನಮಾಡಬೇಕಾಗುತ್ತದೆ. ಆತನು ಒಪ್ಪುವಂತೆ ಮಾಡುವುದು ನಿಮ್ಮ ಕೆಲಸ. ನೀವಿನ್ನು ಹೋಗಿ, ನಿಮಗೆ ಶುಭವಾಗಲಿ” ಎಂದು ನುಡಿದು ಹರಸಿದನು.

ಮಹಾವಿಷ್ಣುವಿನ ಮಾತಿನಿಂದ ದೇವತೆಗಳಿಗೆ ಮನಸ್ಸು ಸ್ವಲ್ಪ ಸಮಾಧಾನವಾಯಿತು. ಸರಸ್ವತೀ ನದಿಯ ಬಳಿಗೆ ಬಂದರು. ದಧೀಚಿಯಿದ್ದ ಆಶ್ರಮವನ್ನು ತಲುಪಿದರು. ಭಯಭಕ್ತಿಗಳಿಂದ ಇಂದ್ರನು ಹಿಂಬಾಲಕರೊಡನೆ ದಧೀಚಿಯಿದ್ದ ಗುಡಿಸಿಲಿನೊಳಗೆ ಬಂದು ಆ ಮಹರ್ಷಿಗೆ ಪ್ರಣಾಮ ಮಾಡಿದನು.

ನಿಮ್ಮ ಪ್ರಾಣ ಕೊಟ್ಟು, ನಮ್ಮನ್ನು ಉಳಿಸಿ

ಬಂದವರನ್ನು ಆದರದಿಂದ ಸತ್ಕರಿಸಿ ಮಹರ್ಷಿಯು ಕುಶಲ ಪ್ರಶ್ನೆಗಳನ್ನು ಕೇಳಿದನು. ಅವರ ಮುಖದಲ್ಲಿ ಉತ್ಸಾಹವೇ ಇಲ್ಲ; ಅದನ್ನು ಕಂಡು ದಧೀಚಿಯು ಅವರಿಗೆ ಧೈರ್ಯಹೇಳಿ, ತನ್ನಿಂದ ಏನು ಬೇಕಾದರೂ ಕೇಳಬಹುದೆಂದು ಹೇಳಿದನು. ಆಗ ಮಹೇಂದ್ರನೇ ಋಷಿಯೊಂದಿಗೆ ಮಾತನಾಡಿದನು.

ಇಂದ್ರ-ಮಹರ್ಷಿಗಳೇ, ನಿಮ್ಮಿಂದ ನಮಗೆ ಬಹಳ ದೊಡ್ಡ ಉಪಕಾರವಾಗಬೇಕಾಗಿದೆ. ನಾವೀಗ ಪ್ರಾಣ ಸಂಕಟವನ್ನು ಎದುರಿಸುತ್ತಿದ್ದೇವೆ.

ದಧೀಚಿ – ದೇವೇಂದ್ರ, ಅಂತಹ ನಿಮ್ಮ ಸಂಕಟ ಏನು? ಪುನಃ ದಾನವರೊಡನೆ ಯುದ್ಧ ಆರಂಭವಾಗಿದೆಯೆ?

ಇಂದ್ರ – ಹೌದು, ಈ ಯುದ್ಧ ಹಿಂದಿನ ಯುದ್ಧಗಳ ಹಾಗಿಲ್ಲ. ಮಾಯಾವಿಗಳಾದ ಶಂಬರನೇ ಮುಂತಾದವರನ್ನೂ ಶೂರರಾದ ವೃಷಪರ್ವ ಮುಂತಾದವರನ್ನೂ ಮಹಾವಿಷ್ಣುವಿನ ಕೃಪೆಯಿಂದ ನಾವು ಅನೇಕ ಬಾರಿ ಸೋಲಿಸಿ ಓಡಿಸಿದ್ದೇವೆ.

ದಧೀಚಿ – ಹಾಗಿದ್ದರೆ ಈಗೇಕೆ ಭಯ, ಸಂಕಟ? ಮಹಾವಿಷ್ಣು ನಿಮಗೆ ಈಗಲೂ ಸಹಾಯಕನಾಗಿಯೇ ಇದ್ದಾನೆ, ಅಲ್ಲವೇ?

ಇಂದ್ರ – ವಿಷ್ಣುವಿನ ಕೃಪೆ ನಮಗಿದೆ. ಆದರೆ ಈಗ ರಾಕ್ಷಸರ ನಾಯಕ ವೃತ್ರ. ನನ್ನನ್ನು ಕೊಲ್ಲಬಲ್ಲ ಮಗ ಬೇಕೆಂದೇ ತಪಸ್ಸು ಮಾಡಿ ತ್ವಷ್ಟೃ ಅವನನ್ನು ಪಡೆದಿರುವನು. ಅವನು ಮಹಾ ಪರಾಕ್ರಮಿ, ಶತ್ರುಗಳಿಗೆ ಭಯಂಕರ. ಅವನಿಗೆ ಸೋಲು ಇಲ್ಲ. ಅವನಷ್ಟು ಕ್ರೂರಿಗಳೇ ಇಲ್ಲ. ದೇವತೆಗಳನ್ನು ನಿರ್ಮೂಲ ಮಾಡಿಬಿಡುವೆನೆಂದೇ ಪಣ ತೊಟ್ಟಿದ್ದಾನೆ. ಅವನು ನಮಗೆ ಕೊಡುತ್ತಿರುವ ಹಿಂಸೆಯನ್ನು ತಾಳುವುದು ಸಾಧ್ಯವಿಲ್ಲ.

ದಧೀಚಿ – ಶಿವಶಿವ! ವರದಾನದಿಂದ ಹುಟ್ಟಿದ ಅವನು ಇಷ್ಟು ಉನ್ಮತ್ತನಾಗಿದ್ದಾನೆಯೆ? ದೇವತೆಗಳಿಗೆ ಅಧಿನಾಯಕನಾದ ನೀನೇ ಹೀಗೆ ಕಂಗೆಡುವಂತಾಗಿದ್ದರೆ ಇತರರ ಪಾಡೇನು? ಆದರೆ ಈಗ ನನ್ನ ಹತ್ತಿರ ಏಕೆ ಬಂದಿರಿ? ನನ್ನಿಂದ ನಿಮಗೆ ಆಗಬಹುದಾದ ಉಪಕಾರವೇನು? ಬ್ರಾಹ್ಮಣನಾದ ನಾನು ನಿಮ್ಮೊಡನೆ ಸೇರಿಕೊಂಡು ಯುದ್ಧಮಾಡಬಲ್ಲನೆ?

ಇಂದ್ರ – ಮಹರ್ಷಿಗಳೇ, ನಮ್ಮ ಪ್ರಾರ್ಥನೆಯನ್ನು ನಿಮ್ಮ ಮುಂದೆ ಹೇಳಲು ನಮಗೇ ಸಂಕೋಚವಾಗುತ್ತಿದೆ. ನಮ್ಮ ಸಂಕಟದ ಪರಿಹಾರ ಆಗಬೇಕಾಗಿದೆ. ಅದಕ್ಕಾಗಿ ನೀವು ಬಹಳ ದೊಡ್ಡ ತ್ಯಾಗ ಮಾಡಬೇಕು ಎಂದು ಬೇಡಲು ಬಂದಿದ್ದೇವೆ. ದೇವತೆಗಳನ್ನು ಉಳಿಸುವುದು ನಿಮ್ಮ ಕೈಯಲ್ಲಿದೆ. ನಾವು ನಿಮಗೆ ಶರಣಾಗತರಾಗಿದ್ದೇವೆ.

ದಧೀಚಿ – ದೇವೇಂದ್ರ, ಮನುಷ್ಯನಾದ ನಾನು ದೇವತೆಗಳಾದ ನಿಮಗೆ ಏನು ಸಹಾಯ ಮಾಡಬಲ್ಲೆ? ಸಂಕೋಚವಿಲ್ಲದೆ ಹೇಳು.

ಇಂದ್ರ – ಮಹರ್ಷಿಗಳೇ! ಅಪೂರ್ವವಾದ ದಾನವೊಂದನ್ನು ನಿಮ್ಮಿಂದ ಬೇಡಲು ನಾವು ಬಂದಿದ್ದೇವೆ. ನಮ್ಮ ಸಂಕಟವನ್ನು ಮಹಾವಿಷ್ಣುವಿನಲ್ಲಿ ಮೊರೆಯಿಟ್ಟು ಹೇಳಿಕೊಂಡೆವು. ದಯಾಮಯನಾದ ದೇವದೇವನು ನಮ್ಮ ಹಿತಸಾಧನೆಗಾಗಿ ಒಂದು ಉಪಾಯವನ್ನು ಹೇಳಿದನು. ಅದಕ್ಕಾಗಿ ನಿಮ್ಮ ನೆರವು ನಮಗೆ ಅಗತ್ಯ.

ದಧೀಚಿ – ಹೀಗೋ, ಸರಿ. ನನ್ನಿಂದ ಆಗುವುದಾದರೆ ನಿಮಗಾಗಿ ಏನನ್ನು ಮಾಡಲೂ ನಾನು ಸಿದ್ಧ. ಹೇಳಿ, ಏನಾಗಬೇಕು?

ಇಂದ್ರ – ನಿಮ್ಮಿಂದ ನಾವು ಬೇಡುವುದು ನಿಮ್ಮ ಬೆನ್ನುಮೂಳೆಗಳನ್ನು. ಅವನ್ನು ವಿಶ್ವಕರ್ಮನಿಗೆ ಕೊಟ್ಟು ಅವನಿಂದ ಆಯುಧಗಳನ್ನು ಮಾಡಿಸಿಕೊಂಡರೆ ಅವುಗಳಿಂದ ನಾವು ವೃತ್ರನನ್ನು ಸುಲಭವಾಗಿ ಸಂಹರಿಸಬಹುದಂತೆ. ಹಾಗಲ್ಲದೆ ಮತ್ತಾವ ರೀತಿಯಲ್ಲಿಯೂ ಆತನನ್ನು ಕೊಲ್ಲಲು ಸಾಧ್ಯವೇ ಇಲ್ಲವಂತೆ!

ಸಾರ್ಥಕ ದಾನ

ಇಂದ್ರನ ಮಾತುಗಳನ್ನು ಕೇಳಿ ದಧೀಚಿಯು ಬೆರಗಾದನು. ದೇವತೆಗಳನ್ನು ಉಳಿಸಬೇಕಾದರೆ ತನ್ನ ಬೆನ್ನುಮೂಳೆಯನ್ನು ಕೊಡಬೇಕು, ಎಂದರೆ ತನ್ನ ಪ್ರಾಣವನ್ನೆ ಕೊಡಬೇಕು!

ಮಹರ್ಷಿ ಇಂದ್ರನಿಗೂ ದೇವತೆಗಳಿಗೂ ಹೇಳಿದ: “ಎಂದಾದರೂ ಒಂದು ದಿನ ಸಾಯಲೇಬೇಕು, ಅಲ್ಲವೆ? ಇತರರಿಗಾಗಿ ಪ್ರಾಣ ಕೊಡುವುದಕ್ಕಿಂತ ಒಳ್ಳೆಯ ಸಾವು ಯಾವುದು? ಮಹಾವಿಷ್ಣುವೇ ನಿಮ್ಮನ್ನು ಕಳುಹಿಸಿರುವಾಗ ನಾನು ಯೋಚನೆ ಮಾಡುವುದೇನಿದೆ? ಇಗೋ, ನನ್ನ ಪ್ರಾಣವು ಇನ್ನು ಸ್ವಲ್ಪ ಹೊತ್ತಿನಲ್ಲಿ ದೇಹದಿಂದ ಹೋಗುತ್ತದೆ. ನನ್ನ  ಬೆನ್ನುಮೂಳೆಯನ್ನು ತೆಗೆದುಕೊಳ್ಳಿ. ನಿಮಗೆ ಜಯವಾಗಲಿ!”

ಹೀಗೆ ಹೇಳಿ, ಆತ್ಮಾರ್ಪಣಕ್ಕಾಗಿ ದಧೀಚಿ ಸಿದ್ಧನಾದನು. ದೇವತೆಗಳೆಲ್ಲ ಮೂಕರಾಗಿ ಆಶ್ಚರ್ಯದಿಂದ ಆ ಮಹಾತ್ಮನ ಕಡೆಗೇ ನೋಡುತ್ತಿದ್ದರು. ಮಹರ್ಷಿಯು ಶುದ್ಧವಾದ ಸ್ಥಳದಲ್ಲಿ ಶುಚಿರ್ಭೂತನಾಗಿ ಕುಳಿತ, ಪ್ರಾಣಾಯಾಮ ಮಾಡಿ ಕಣ್ಣು ಮುಚ್ಚಿದ. ಹೊರ ಜಗತ್ತನ್ನು ಮರೆತು ಪರಮಾತ್ಮನ ಧ್ಯಾನ ಮಾಡತೊಡಗಿದನು. ಅವನ ದೇಹದ ಹೊರಗಿನ ಮತ್ತು ಒಳಗಿನ ವ್ಯಾಪಾರಗಳು ಕ್ರಮಕ್ರಮವಾಗಿ ನಿಂತುಹೋದವು. ಕಣ್ಣುಗಳು ಮುಚ್ಚಿಯೇ ಇದ್ದವು, ಕಿವಿಗಳಲ್ಲಿ ಯಾವ ಶಬ್ದವೂ ಪ್ರವೇಶ ಮಾಡುತ್ತಿರಲಿಲ್ಲ; ಮೈಮೇಲೆ ನೊಣ, ಸೊಳ್ಳೆ, ಇರುವೆಗಳು ಹರಿದರೂ ಅವನ ದೇಹ ನಿಶ್ಚಲವಾಗಿ ಸ್ಥಿರವಾಗಿದ್ದಿತು. ಸ್ವಲ್ಪ ಕಾಲ ಕಳೆಯುವುದರಲ್ಲಿಯೇ ತನ್ನ ಯೋಗ ಸಿದ್ಧಿಯಿಂದ ದಧೀಚಿ ದೇಹವನ್ನು ಜಡಮಾಡಿ ಪ್ರಾಣವನ್ನು ಪರಿತ್ಯಜಿಸಿದನು! ಆ ಅದ್ಭುತವನ್ನು ನೋಡುತ್ತಿದ್ದ ಇತರ ಋಷಿಗಳೂ, ಅವರ ಪತ್ನಿಯರೂ, ಶಿಷ್ಯರೂ, ದೇವತೆಗಳೂ ಆಶ್ಚರ್ಯದಿಂದ ಮೂಕರಾದರು. ಆನಂದದಿಂದ ಕಣ್ಣೀರು ಸುರಿಸಿದರು. ತನ್ನ ಪ್ರಾಣವನ್ನು ಸಂತೋಷದಿಂದಲೇ ಪರಿತ್ಯಜಿಸಿ ದಧೀಚಿ ಅಮರತ್ವನ್ನು ಪಡೆದು ಕೀರ್ತಿಶೇಷನಾದನು!

ಇಂದ್ರನು ‘ನಿಮ್ಮಿಂದ ಬೇಡುವುದು ಬೆನ್ನುಮೂಳೆಗಳನ್ನು’ ಎಂದನು.

ಯುದ್ಧಕ್ಕೆ ಸಿದ್ಧತೆ

 

ತನ್ನ ಕಾರ್ಯವನ್ನು ಸಾಧಿಸಿಕೊಂಡ ಇಂದ್ರನು ಮಹರ್ಷಿಯ ಬೆನ್ನು ಮೂಳೆಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿ ಅವನ್ನು ವಿಶ್ವಕರ್ಮನ ಮುಂದಿಟ್ಟನು. ಅವನ್ನೆಲ್ಲ ಸಾಣೆ ಹಿಡಿದು ಅಭಿಮಂತ್ರಿಸಿ ಶತ್ರುನಿಗ್ರಹ ಮಾಡಬಲ್ಲ ತೀಕ್ಷ್ಣವಾದ ಆಯುಧಗಳನ್ನೂ ಮಹಾಸ್ತ್ರಗಳನ್ನೂ ಮಾಡಿಕೊಡಬೇಕೆಂದು ಬೇಡಿಕೊಂಡನು. ಮಹಾವಿಷ್ಣುವಿನ ಅಪ್ಪಣೆಯೇ ಹಾಗಿದ್ದುದನ್ನು ತಿಳಿದು ವಿಶ್ವಕರ್ಮನು ಕೂಡಲೆ ಆ ಕೆಲಸಕ್ಕೆ ಕೈಹಾಕಿದನು. ಅರಿಭಯಂಕರ ಅಸ್ತ್ರಗಳು ದೇವತೆಗಳಿಗೆಲ್ಲ ದೊರೆತವು. ಮುಖ್ಯವಾಗಿ ನೂರು ಗಂಟುಗಳಿದ್ದ ವಜ್ರವೆಂಬ ಮಹಾಯುಧ ಮಹೇಂದ್ರನಿಗೆ ಸಿಕ್ಕಿತು. ಆ ವಜ್ರಾಯುಧದಲ್ಲಿ ವಿಷ್ಣುವಿನ ತೇಜಸ್ಸೂ ಮಹರ್ಷಿಯ ತಪಸ್ಸಿನ ಫಲವೂ ಅಡಗಿದ್ದುವು. ಅದನ್ನು ಎದುರಿಸಿ ಜಯಶೀಲರಾಗಬಲ್ಲವರು ಯಾರು?

ದೇವೇಂದ್ರನಿಗೆ ಈಗ ಗೆಲ್ಲಬಲ್ಲೆ ಎಂಬ ಧೈರ್ಯ ಮೂಡಿತು. ವಜ್ರಾಯುಧವನ್ನು ಕೈಯಲ್ಲಿ ಹಿಡಿದು, ತನ್ನ ವಾಹನವಾದ ಐರಾವತವೆಂಬ ಆನೆಯ ಮೇಲೆ ಕುಳಿತು ಸಮಸ್ತ ವೃಂದಾರಕವರ್ಗದಿಂದ ಹಿಂಬಾಲಿಸಲ್ಪಟ್ಟು ಮೆರವಣಿಗೆಯಲ್ಲಿ ಹೊರಟನು.

ಯುದ್ಧಕ್ಕೆ ಸಿದ್ಧನಾದ ಇಂದ್ರನು ವೃತ್ರನಿದ್ದಲ್ಲಿಗೆ ಧಾವಿಸಿ ನಡೆದನು. ದಾನವರ ಸೈನ್ಯವನ್ನೆಲ್ಲ ನುಚ್ಚುನೂರು ಮಾಡಿ, ಅವರು ಪುನಃ ಎಂದಿಗೂ ಯುದ್ಧದ ಮಾತನ್ನೇ ಎತ್ತದಂತೆ ಮಾಡಬೇಕೆಂದು ಅವನು ಸಂಕಲ್ಪಿಸಿದ್ದನು. ಆಗ ಮೊದಲನೆಯದಾದ ಕೃತಯುಗ ಮುಗಿಯುವ ಸಮಯವಾಗಿದ್ದಿತು, ಇನ್ನೇನು ತ್ರೇತಾಯುಗ ಬರಲಿದ್ದಿತು. ಕೋಪಗೊಂಡ ಮಹಾರುದ್ರನಂತೆ ದೇವೇಂದ್ರನು ದಾನವರಿದ್ದ ದಿಕ್ಕಿನಲ್ಲಿ ಮುನ್ನುಗ್ಗುತ್ತಿದ್ದನು.

ಆ ಸುದ್ದಿ ಅಸುರರಿಗೆ ತಿಳಿಯಿತು. ತಮ್ಮ ಹೊಡೆತಗಳಿಂದ ಗಾಸಿಗೊಂಡು ವ್ಯಥೆಪಟ್ಟು ರಣಾಂಗಣದಿಂದ ಓಡಿ ಹೋದ ಇಂದ್ರನು ಮತ್ತೆ ಯುದ್ಧಕ್ಕಾಗಿ ಬರುತ್ತಿದ್ದುದು ಅವರಿಗೆ ಸೋಜಿಗವಾಗಿ ತೋರಿತು. ಏನೋ ಹೊಸ ಹುಮ್ಮಸ್ಸಿನಿಂದ ಹೊಸದೊಂದು ಶಕ್ತಿಯನ್ನು ಪಡೆದುಕೊಂಡು ಅವನು ಬರುತ್ತಿರಬಹುದೆಂದು ದಾನವರು ಸಮಾಲೋಚಿಸಿದರು. ತಮಗೆ ಸರ್ವದಾ ಪರಮ ದ್ವೇಷಿಯಾಗಿದ್ದ ಮಹಾವಿಷ್ಣು ಇಂದ್ರನ ಪಕ್ಷಪಾತಿಯಾಗಿರುತ್ತಿದ್ದುದರಿಂದ ಅವನು ಯಾವುದೋ ಒಂದು ಹೊಸ ತಂತ್ರವನ್ನು ಹೂಡಿ ದೇವತೆಗಳನ್ನು ಹುರಿದುಂಬಿಸಿ ಕಳುಹಿಸಿರಬೇಕೆಂದು ಅವರು ಊಹಿಸಿದರು. ದೈವಬಲವನ್ನೇ ಅವರು ನೆಚ್ಚಿರಲಿಲ್ಲ; ತಮ್ಮ ಬಾಹುಬಲವನ್ನೇ ನಂಬಿ ಮತ್ತೆ ಮತ್ತೆ ದೇವತೆಗಳಿಗೆ ಪೀಡೆಯನ್ನುಂಟುಮಾಡುವ ಭರವಸೆಯನ್ನು ಅವರು ಹೊಂದಿದರು. ಅವರೂ ಯುದ್ಧಕ್ಕೆ ಸಿದ್ಧರಾಗಿ ಮುಂದಾದರು.

ಅನೇಕ ಶೂರರನ್ನು ಕೂಡಿಸಿಕೊಂಡು ಥಳಥಳಿಸುತ್ತಿದ್ದ ವಜ್ರವೆಂಬ ಹೊಸ ಆಯುಧವನ್ನು ಝಳಪಿಸುತ್ತಾ ತೇಜೋಮಯನಾಗಿ ವಿರಾಜಮಾನನಾಗಿದ್ದ ಮಹೇಂದ್ರನನ್ನು ಅಸುರರು ನೋಡಿದರು. ಅವರಿಗೆ ಕೋಪ ತಡೆಯಲಾಗಲಿಲ್ಲ. ತಮ್ಮನ್ನು ತಾವೇ ಮರೆತು, ಶತ್ರುನಿಗ್ರಹಕ್ಕಾಗಿ ತೀಕ್ಷ್ಣವಾದ ಆಯುಧಗಳನ್ನು ಹಿರಿದು ಮುಂದಾದರು. ಆ ದೇವದಾನವರ ಮಹಾ ಯುದ್ಧದಲ್ಲಿ ಇಂದ್ರನನ್ನು ವ್ಯಥೆಗೊಳಿಸಲು ಬದ್ಧಕಂಕಣನಾಗಿದ್ದ ವ್ರತನೇ ದಾನವರಿಗೆ ನಾಯಕನಾದನು. ಹಿಂದಿನ ಸಾವಿರಾರು ಯುದ್ಧಗಳಲ್ಲಿ ವೀರರಂತೆ ಕಾದಿ ಶತ್ರುಗಳಿಗೆ ಸಂಕಟವನ್ನು ಒದಗಿಸಿದ್ದ ಹಿರಿಯ ನಾಯಕರಿದ್ದರು ರಾಕ್ಷಸರಿಗೆ.

ಅಸುರರು ನಾನಾ ಬಗೆಯ ಹೂಗಳನ್ನು ಕಿತ್ತಿ ಹಾರಮಾಡಿಸಿ ಅಲಂಕಾರ ಮಾಡಿಕೊಂಡಿದ್ದರು. ಅವರ ಮೈಮೇಲಿದ್ದ ರಕ್ಷಾ ಕವಚಗಳು ಸುವರ್ಣಮಯವಾಗಿದ್ದವು. ಹೆಜ್ಜೆಹೆಜ್ಜೆಗೂ ಅವರು ಮಾಡುತ್ತಿದ್ದ ಸಿಂಹನಾದವನ್ನು ಕೇಳಿಯೇ ಶತ್ರುಗಳು ಮೂರ್ಛೆ ಹೋಗುವಂತಿದ್ದಿತು.

ಯುದ್ಧ ಪ್ರಾರಂಭವಾಯಿತು

ಘೋರ ಯುದ್ಧ ಪ್ರಾರಂಭವಾಯಿತು. ದೇವಸೇನೆಯತ್ತ ವೇಗದಿಂದ ನುಗ್ಗಿ ಅದರ ಯೋಧರ ಮೇಲೆ ಗದೆ, ಬಾಣ, ಪ್ರಾಸ, ಮುದ್ಗರ, ತೋಮರ, ಶೂಲ, ಕೊಡಲಿ, ಕತ್ತಿ, ಶತಘ್ನೀ ಎಂಬ ನಾನಾ ಬಗೆಯ ಆಯುಧಗಳಿಂದ ರಾಕ್ಷಸರು ಅವರನ್ನು ಗಾಯಗೊಳಿಸಿದರು. ಒಂದು ಬಾಣದ ಹಿಂದೆಯೇ ಮತ್ತೊಂದು ಸುಳಿದು ಹೋಗಿ ಆಕಾಶವೆಲ್ಲ ಬಾಣಮಯವಾಗಿ ಸೈನಿಕರನ್ನು ಗುರುತಿಸುವುದೇ ಸಾಧ್ಯವಿಲ್ಲದಂತಾಯಿತು.

ತಾವೇ ಗೆಲ್ಲುವೆವೆಂಬ ಭರವಸೆಯಿಂದ ದೇವತೆಗಳೂ ಯುದ್ಧಮಾಡಿ ತಮ್ಮ ಚಳಕವನ್ನು ತೋರಿಸುತ್ತಿದ್ದರು. ಅವರೂ ಅಸುರರ ಸೈನ್ಯದಲ್ಲಿ ಅನೇಕರನ್ನು ಕೊಚ್ಚಿಹಾಕಿದರು. ರೊಚ್ಚಿಗೆದ್ದ ದಾನವರು ಪರ್ವತಾಗ್ರಗಳಿಂದ ಕಿತ್ತುತಂದ ಬಂಡೆಗಳಿಂದಲೂ ಬುಡಮೇಲು ಮಾಡಿ ಎಳೆದು ತಂದ ಹೆಮ್ಮರಗಳಿಂದಲೂ ದೇವತೆಗಳನ್ನು ಸದೆಬಡಿದರು. ಆದರೆ ದೇವತೆಗಳ ಉತ್ಸಾಹ ಕುಗ್ಗದೆ ಅವರು ಯುದ್ಧ ಮಾಡುತ್ತಲೇ ಇದ್ದರು. ಪುನಃ ಪುನಃ ಕಲ್ಲುಬಂಡೆಗಳನ್ನೂ ಮರದ ರೆಂಬೆಗಳನ್ನೂ ನಾನಾ ಬಗೆಯ ಶಸ್ತ್ರಾಸ್ತ್ರಗಳನ್ನೂ ಎಸೆದು ಎಸೆದು ದಾನವರು ಆಯಾಸಗೊಂಡರೂ ಅವರು ಜಯವನ್ನು ಪಡೆಯಲಾಗಲಿಲ್ಲ. ದೇವತೆಗಳಿಗೆ ವಿಷ್ಣುವಿನ ಅನುಗ್ರಹವಾಗಿತ್ತು. ರಾಕ್ಷಸರ ಪ್ರಯತ್ನಗಳೆಲ್ಲ ವ್ಯರ್ಥ. ಅನೇಕ ದಾನವರು ಹತರಾದ ಮೇಲೆ ಉಳಿದ ಸೈನಿಕರು ರಣರಂಗದಿಂದ ಪಲಾಯನ ಮಾಡತೊಡಗಿದ್ದರು.

ಧೀರ ವೃತ್ರ

ತನ್ನ ಸೇನೆ ಒಡೆದು ಯೋಧರು ಓಡತೊಡಗಿದಾಗ ವೃತ್ರನು ಅವರಲ್ಲಿ ಧೈರ್ಯ ತುಂಬುವುದಕ್ಕೆ ಪ್ರಯತ್ನಪಟ್ಟ. ಅವರಿಗೆ ಹೀಗೆ ಹೇಳಿದ: “ಎಲೈ ವೀರಯೋಧರೇ! ನಿಲ್ಲಿ, ನನ್ನ ಮಾತನ್ನು ಸ್ವಲ್ಪಮಟ್ಟಿಗೆ ಕೇಳಿ. ಹುಟ್ಟಿದವನು ಸಾಯಲೇಬೇಕಲ್ಲವೆ? ಈ ಲೋಕದಲ್ಲಿ ಕೀರ್ತಿಯನ್ನು ಪಡೆಯಲು ಸಂತೋಷದಿಂದಲೇ ಮೃತ್ಯುವನ್ನು ಏಕೆ ಎದುರಿಸಬಾರದು?”

ರಾಕ್ಷಸರು ತಮ್ಮ ನಾಯಕನ ಮಾತನ್ನು ಕೇಳಲೇ ಇಲ್ಲ. ಓಡುತ್ತಿದ್ದರು. ತನ್ನ ಸೇನೆ ನಷ್ಟವಾಗುತ್ತಿದ್ದುದನ್ನು ನೋಡುತ್ತಾ ಕೈಕಟ್ಟಿ ಕೂಡಲು ವೃತ್ರನೂ ಸಿದ್ಧವಾಗಿರಲಿಲ್ಲ. ಕೋಪದಿಂದ ಸಿಡಿದೆದ್ದು ಆರ್ಭಟಿಸುತ್ತಾ ದೇವತೆಗಳತ್ತ ತಿರುಗಿ, “ಓಹೋ, ಬನ್ನಿ, ಬನ್ನಿ! ನನಗೆ ಎದುರಾಗಿ ನಿಲ್ಲಿ! ಇದೋ, ನನ್ನ ಯುದ್ಧದ ಬೇಗೆಯನ್ನು ತಾಳಿಕೊಳ್ಳಿ” ಎಂದು ಅರಚುತ್ತಾ ಅವನು ಮುನ್ನುಗ್ಗಿದನು. ಅವನು ಮಾಡಿದ ಶಬ್ದವನ್ನು ಕೇಳಿಯೇ ದೇವತೆಗಳಲ್ಲಿ ಕೆಲವರು ಬೆಚ್ಚಿ ಮೂರ್ಛೆ ಹೊಂದಿದರು.

ವೃತ್ರನ ಅಬ್ಬರವನ್ನೂ ತನ್ನವರು ಗಾಬರಿಗೊಂಡುದನ್ನೂ ಕಂಡು ಇಂದ್ರನು ಕೋಪದಿಂದ ಕುದಿದನು. ತನ್ನ ಕಡೆಗೇ ನುಗ್ಗಿ ಬರುತ್ತಿದ್ದ ಶತ್ರುವಿನ ಮೇಲೆ ಅತಿದಾರುಣವಾದ ತನ್ನ ಮಹಾಗದೆಯನ್ನು ಅವನು ಬೀಸಿ ಎಸೆದನು. ತಡೆಯಲು ಅಸಾಧ್ಯವಾಗಿದ್ದ ಆ ಗದೆಯನ್ನು ವೃತ್ರನು ನಗುನಗುತ್ತಲೇ ಎಡಗೈಯಲ್ಲಿ ಹಿಡಿದು ಎತ್ತಿ ತೋರಿದನು. ಅವನಿಗೂ ರೋಷ ಉಕ್ಕಿ ಬಂದಿತ್ತು; ತನ್ನ ಗದೆಯನ್ನು ತಿರುಗಿಸಿ ಮಹೇಂದ್ರನ ವಾಹನವಾಗಿದ್ದ ಐರಾವತಕ್ಕೆ ಅವನು ಬೀಸಿ ಹೊಡೆದು ಹೂಂಕಾರ ಮಾಡಿದನು. ಐರಾವತವು ವೃತ್ರನ ಗದೆಯ ಪೆಟ್ಟನ್ನು ತಾಳಲಾರದೆ ತತ್ತರಿಸಿ, ರಕ್ತವನ್ನು ಸುರಿಸುತ್ತಾ, ನೋವಿನಿಂದ ನರಳುತ್ತಾ ಇಂದ್ರನನ್ನು ಹೊತ್ತು ಹಿಂದಿರುಗಿ ಹೊರಟಿತು.

ಆನೆ ಗಾಯಗೊಂಡುದರಿಂದ ಕಷ್ಟದಲ್ಲಿದ್ದ ಇಂದ್ರನ ಮೇಲೆ ವೃತ್ರನು ಪುನಃ ಗದೆಯನ್ನು ಪ್ರಯೋಗಿಸಲಿಲ್ಲ; ಅಸುರನಾಗಿದ್ದರೂ ಅವನು ಧರ್ಮಯುದ್ಧವನ್ನೇ ಮಾಡುತ್ತಿದ್ದನು. ಮಹೇಂದ್ರನು ತನ್ನ ಅಮೃತ ಸ್ಪರ್ಶದಿಂದ ಮೈಸವರಿ ಆನೆಯ ನೋವನ್ನು ದೂರಮಾಡಿ ಸುಮ್ಮನೆ ನಿಂತನು.

ಚುಚ್ಚುಮಾತುಗಳಿಂದ ವೃತ್ರನು ಇಂದ್ರನನ್ನು ಹೀಯಾಳಿಸುತ್ತಾ “ನೀನು ನನಗೆ ಒಳ್ಳೆಯ ಶತ್ರುವಾದೆಯಪ್ಪ! ನಿನಗೆ ಧರ್ಮಕರ್ಮಗಳೇ ಇಲ್ಲ; ನನ್ನ ಅಣ್ಣನನ್ನು ಕೊಂದು ಬ್ರಹ್ಮಹತ್ಯೆ, ಗುರುಹತ್ಯೆಗಳ ಫಲವನ್ನು ಸಂಪಾದಿಸಿದೆ! ನಿನಗೆ ತಕ್ಕ ಪ್ರತೀಕಾರವನ್ನು ಮಾಡಿ ನಾನು ಋಣಮುಕ್ತನಾದೆ. ನಾನೀಗ ನಿನ್ನ ಮುಂದೆಯೇ ನಿಂತಿದ್ದೇನಲ್ಲ! ನಿನ್ನಲ್ಲಿರುವ ಅಮೋಘವಾದ ವಜ್ರಾಯುಧವನ್ನು ನನ್ನ ಮೇಲೆ ಏಕೆ ನೀನೀಗ ಬಿಡಬಾರದು? ವಿಷ್ಣುವಿನ ತೇಜಸ್ಸು, ದಧೀಚಿಯ ತಪಸ್ಸುಗಳಿಂದ ವೀರ್ಯವತ್ತರವಾಗಿರುವ ಆ ಅಸ್ತ್ರ ನಿನ್ನ ಗದೆಯಂತೆ ವ್ಯರ್ಥವಾಗದಲ್ಲವೆ? ಎಂದು ಮೂದಲಿಸಿದನು.

ಹೀಗೆ ಹೇಳುತ್ತಾ ಶೂಲವನ್ನು ಮುಂದುಮಾಡಿಕೊಂಡು ವೃತ್ರನು ದೇವೇಂದ್ರನ ಮೇಲೇರಿ ಹೋದನು. ಪ್ರಳಯ ಕಾಲದ ಬೆಂಕಿಯಂತೆ ತನ್ನ ವಿನಾಶಕ್ಕಾಗಿ ಮುನ್ನುಗ್ಗುತ್ತಿರುವ ಆ ದೈತ್ಯನ ಶೂಲವನ್ನು ನೋಡಿ ಆತ್ಮರಕ್ಷಣೆಗಾಗಿ ಇಂದ್ರನು ತನ್ನ ವಜ್ರಾಯುಧವನ್ನು ಪ್ರಯೋಗಿಸಿ ವೃತ್ರನ ವಿಶಾಲವಾದ ಬಲಭುಜವನ್ನೇ ಕತ್ತರಿಸಿಬಿಟ್ಟನು. ಬಲಗೈ ನಿರುಪಯೋಗವಾದುದರಿಂದ ರೋಷಭೀಷಣನಾದ ವೃತ್ರನು ಹಾಗೆಯೇ ನುಗ್ಗಿ ವಜ್ರವನ್ನು ಹಿಡಿದಿದ್ದ ಇಂದ್ರನ ಕೆನ್ನೆಗೆ ತನ್ನ ಎಡಗೈ ಬೀಸಿ ಹೊಡೆದನು. ಪೆಟ್ಟಿನಿಂದ ಇಂದ್ರನಿಗೆ ಬವಳಿ ಬಂದಂತಾಯಿತು. ಸ್ತಬ್ದನಾಗಿ ನಿಂತ ಅವನ ಕೈಯಿಂದ ಜಾರಿ ವಜ್ರಾಯುಧ ನೆಲದ ಮೇಲೆ ಬಿದ್ದಿತು. ಅದ್ಭುತವಾದ ಆ ವೃತ್ರನ ಕಾಳಗವನ್ನು ಕಂಡು ಅಸುರರೇ ಏಕೆ, ದೇವತೆಗಳೇ ಮೆಚ್ಚಿಕೊಂಡರು; ಹಾಗೂ ಇಂದ್ರನ ದುರವಸ್ಥೆಯನ್ನು ಕಂಡು “ಅಯ್ಯಯ್ಯೋ, ಇನ್ನೇನು ಗತಿ?” ಎಂದು ಮರುಗಿದರು.

ದೈತ್ಯನ ಹೊಡೆತಕ್ಕೆ ಆಯುಧವನ್ನು ಬೀಳಿಸಿಕೊಂಡ ಇಂದ್ರನಿಗೆ ಶತ್ರುವಿನ ಮುಂದೆ ಎಲೆ ಎತ್ತಿ ನಿಲ್ಲುವುದಕ್ಕೇ ನಾಚಿಕೆಯಾಯಿತು. ವೃತ್ರನು ಮಾತ್ರ ನಿರ್ವಿಕಾರನಾಗಿ, “ದೇವೇಂದ್ರ! ಸುಮ್ಮನೆ ನಿಂತೆ ಏಕೆ? ಬಿದ್ದಿರುವ ವಜ್ರವನ್ನು ಎತ್ತಿಕೋ, ಶತ್ರುವನ್ನು ಹೊಡೆದುಹಾಕು; ವಿಷಾದಕ್ಕೆ ಇದು ಸಮಯವಲ್ಲ. ನನ್ನನ್ನು ನೋಡು; ಆಯುಧದ ಪೆಟ್ಟಿನಿಂದ ಬಲಭುಜವನ್ನು ಕಳೆದುಕೊಂಡು ಸೋತಿದ್ದೇನೆ, ಆದರೂ ನಿನ್ನ ಪ್ರಾಣಗಳನ್ನು ಹೀರಲು ಪ್ರಯತ್ನಮಾಡುತ್ತಲೇ ಇದ್ದೇನೆ! ಯುದ್ಧದಲ್ಲಿ ಇವನಿಗೆ ಜಯ, ಅವನಿಗೆ ಸೋಲು ಎಂದು ಮೊದಲೇ ನಿಶ್ಚಿತವಾಗಿ ಹೇಳಲಾಗುವುದಿಲ್ಲವಷ್ಟೆ ?” ಎಂದ.

ವೃತ್ರನು ಧರ್ಮಕ್ಕೆ ಅನುಸಾರವಾಗಿಯೇ ಯುದ್ಧ ಮಾಡುತ್ತಿದ್ದುದನ್ನು ನೋಡಿ ಇಂದ್ರನು ಮೆಚ್ಚುಗೆಯನ್ನು ವ್ಯಕ್ತಪಡಿಸಿದನು. “ದಾನವನಾದರೂ ನಿನಗೆ ಧರ್ಮ ಬುದ್ಧಿ ಇದೆಯಲ್ಲ!” ಎಂದು ಹೇಳುತ್ತಾ ಪುನಃ ವೃತ್ರನೊಡನೆ ಘೋರವಾದ ಕಾಳಗದಲ್ಲಿ ಅವನು ತೊಡಗಿದನು. ವೃತ್ರನ ಎಡಬುಜವೂ ಹೋಯಿತು. ಕಡಿದುಹೋದ ಎರಡೂ ಭುಜಗಳ ಮೂಲಸ್ಥಾನಗಳಿಂದ ರಕ್ತಸುರಿದು ಹೋಗುತ್ತಿದ್ದರೂ ದಾನವೇಂದ್ರನು ಗಜೇಂದ್ರನಂತೆ ಧೀರ ಗಂಭೀರನಾಗಿಯೇ ನಿಂತಿದ್ದನು.

ಕ್ಷಣಕಾಲ ಯೋಚಿಸಿ ವೃತ್ರನು ನೆಲದ ಮೇಲೆ ಬಗ್ಗಿದನು. ಅವನ ಕೆಳತುಟಿ ಭೂಮಿಗೆ ತಗುಲಿತು, ಮೇಲಿನದು ಮುಗಿಲಿನತ್ತ ಎದ್ದಿತು. ಗುಹೆಯಂತೆ ವಿಶಾಲವಾಗಿ ಬಾಯಿ ತೆರೆದು ಒಂದು ದೊಡ್ಡ ಬಂಡೆಯನ್ನು ಹಲ್ಲಿನಿಂದ ಕಚ್ಚಿ, ವೇಗದಿಂದ ಇಂದ್ರನ ಕಡೆಗೆ ನುಗ್ಗಿ ಅವನು ಆ ಕಲ್ಲನ್ನು ಎಸೆದನು! ಮಹಾವೀರನ ಆ ಸಾಹಸವನ್ನು ಮೆಚ್ಚದವರೇ ಇರಲಿಲ್ಲ. ಹಾಗೆಯೇ ಮುಂದೆ ನುಗ್ಗಿ ವೃತ್ರನು ಮಹಾ ಸರ್ಪದಂತೆ ಇಂದ್ರನನ್ನು ನುಂಗಿ ತನ್ನ ಹೊಟ್ಟೆಯೊಳಗೆ ಸೇರಿಸಿಕೊಂಡುಬಿಟ್ಟನು! ದೇವತೆಗಳು, ಋಷಿಗಳು ಮತ್ತು ಇತರ ಪ್ರೇಕ್ಷಕರು ಯುದ್ಧ ಮುಗಿದೇಹೋಯಿತೆಂದು ಹಾಹಾಕಾರ ಮಾಡಿದರು.

ದಧೀಚಿಯ ದಾನ ಸಾರ್ಥಕ

ದೇವೇಂದ್ರನು ದೈತ್ಯನ ಹೊಟ್ಟೆಯೊಳಗೇ ತನ್ನ ಬಲವನ್ನೆಲ್ಲ ಪ್ರಯೋಗಿಸಿ ವಜ್ರದಿಂದ ವೃತ್ರನ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬಂದು ಅದೇ ಆಯುಧದಿಂದ ಅವನ ತಲೆಯನ್ನು ತರಿದುಬಿಟ್ಟನು. ಯುದ್ಧ ಮುಗಿದೇ ಹೋಯಿತು. ಇತರ ದಾನವರು ಪಲಾಯನ ಮಾಡಿದರು. ದೇವತೆಗಳು ಹರ್ಷೋದ್ಗಾರ ಮಾಡಿದರು.

ದಧೀಚಿ ತನ್ನ ಪ್ರಾಣವನ್ನೆ ಕೊಟ್ಟು ದೇವತೆಗಳನ್ನು ಉಳಿಸಿದ ಎಂದು ದೇವತೆಗಳೂ ಋಷಿಗಳೂ ಹೊಗಳಿದರು.

ಇತರರನ್ನು ಬೇಡುವುದಕ್ಕಿಂತ ಇತರರಿಗೆ ದಾನ ಮಾಡುವುದು, ಸಹಾಯ ಮಾಡುವುದು ಮನುಷ್ಯನಿಗೆ ಭೂಷಣ, ದಧೀಚಿ ತನ್ನ ಪ್ರಾಣವನ್ನೂ ದೇಹವನ್ನೂ ದಾನ ಮಾಡಿದ. ಅವನ ಕಥೆ ಕೇಳಿದವರ ಮನಸ್ಸಿನಲ್ಲಿ ಉಳಿಯುತ್ತದೆ, ತ್ಯಾಗದ ಮೂರ್ತಿಯಾಗಿ ಅವನು ಕೇಳಿದವರ ಹೃದಯದಲ್ಲಿ ನಿಲ್ಲುತ್ತಾನೆ.

* * *