ಪಶ್ಚಿಮ ಘಟ್ಟದ ಗುಡ್ಡಗಾಡು ಅಭಿವೃದ್ಧಿಗೆ ಸಂಬಂಧಿಸಿದಂತೆ ಖ್ಯಾತ ವಿಜ್ಞಾನಿ ಡಾ| ಮಾಧವ ಗಾಡ್ಗೀಳ್ ನೇತ್ರತ್ವದಲ್ಲಿ  ಕ್ರಿ.ಶ ೧೯೮೭ರಲ್ಲಿ ನಡೆದ ಅಧ್ಯಯನ ಮಲೆನಾಡಿನ ಜಾನುವಾರು ಮೇವಿನ ಪರಿಸ್ಥಿತಿ ಬಗೆಗೆ  ಬೆಳಕು ಚಲ್ಲುತ್ತದೆ. ಪ್ರತಿಶತ ೮೦ರಷ್ಟು ಅರಣ್ಯ ಭೂಮಿ ಇರುವ  ಉತ್ತರ ಕನ್ನಡ ಜಿಲ್ಲೆಯಲ್ಲಿ  ೫ ಲಕ್ಷ ಜಾನುವಾರುಗಳಿವೆ, ಇಲ್ಲಿನ ಕೃಷಿಯಿಂದ ಉತ್ನನ್ನವಾಗುವ ಮೇವು  ಜಾನುವಾರುಗಳಿಗೆ ಕೇವಲ ಎರಡು ತಿಂಗಳು ಸಾಕು. ಆದರೆ ಕೃಷಿಕರು ಈ ಮೇವನ್ನು ಸ್ವಲ್ಪ ಸ್ವಲ್ಪ ಬಳಸಿ ಏಳು ತಿಂಗಳ ಕಾಲ ಜಾನುವಾರು ಸಾಕುತ್ತಾರೆ. ಮಳೆಗಾಲದಲ್ಲಿ ದನಕುಗಳನ್ನು ಕಾಡಿಗೆ ಬಿಡುತ್ತಾರೆ. ಇಲ್ಲಿನ ಒಂದು ಹೆಕ್ಟೇರ್ ಕಾಡಿನಲ್ಲಿ ಸರಾಸರಿ ೨-೬ಟನ್ ನೈಸರ್ಗಿಕ ಹುಲ್ಲು ಬೆಳೆಯುತ್ತದೆ. ಮಳೆ, ಮಣ್ಣುಗುಣ, ಮರದ ದಟ್ಟಣೆ ಅವಲಂಬಿಸಿ ಹುಲ್ಲಿನ ಉತ್ಪಾದನೆ ಸ್ಥಳದಿಂದ ಸ್ಥಳಕ್ಕೆ  ಏರುಪೇರಾಗುತ್ತದೆ. ಏಳು ಲಕ್ಷ ಹೆಕ್ಟೇರ್ ಅರಣ್ಯ ವರ್ಷಕ್ಕೆ ೭.೭೪ ಲಕ್ಷ ಟನ್ ಮೇವು ಒದಗಿಸಬೇಕಾಗಿದೆ !. ೫ ಜನರ ಒಂದು ಕೃಷಿ ಕುಟುಂಬ ಎಮ್ಮೆ, ಎತ್ತು, ಕರುಗಳೆಲ್ಲ ಸೇರಿ ೪-೫ ದನಕರು ಸಾಕುತ್ತದೆಂದು ಅಂದಾಜಿಸಿದರೂ ವರ್ಷಕ್ಕೆ ಕನಿಷ್ಟ ೭ ಟನ್ ಮೇವು ಬೇಕು. ಸಾಕಿದ ದನಕರುವನ್ನು ಉಪವಾಸ ಕೆಡವಲು ಸಾಧ್ಯವಿಲ್ಲಕಣ್ಣುಚ್ಚಿ ಪಕ್ಕದ ಕಾಡಿಗೆ ಅಟ್ಟಿದರೆ ಹುಲ್ಲು, ಸೊಪ್ಪು ತಿಂದು ಬದುಕುತ್ತವೆ. ಭತ್ತದ ಹುಲ್ಲು, ಜೋಳ, ದ್ವಿದಳ ಧಾನ್ಯದ ಗಿಡಗಳಿಂದ ಸ್ವಲ್ಪ ಪ್ರಮಾಣದ ಮೇವು ಕೃಷಿ ಭೂಮಿಯಲ್ಲಿ ದೊರೆಯುತ್ತದೆ. ಹಾಲು ಬೇಕು, ಭೂಮಿ ಉಳುಮೆಗೆ ಎತ್ತು, ಕೃಷಿಗೆ ದೊಡ್ಡಿ ಗೊಬ್ಬರ ಬೇಕು  ಹೀಗಾಗಿ ದನಕರು ಅನಿವಾರ್ಯ. ಹಳ್ಳಿಪಕ್ಕದ ಕಾಡಲ್ಲಿ  ಜಾನುವಾರು ಮೇಯಿಸುವ  ಅವಕಾಶ ಸಾಕಣೆಯನ್ನು ಸುಲಭವಾಗಿಸಿದ್ದನ್ನು  ಎಲ್ಲೆಡೆ ಗಮನಿಸಬಹುದು. ಹೀಗಾಗಿ ಇಂದಿಗೂ ಮಲೆನಾಡಿನ ಜಾನುವಾರು ಸಂಖ್ಯೆ ಇಲ್ಲಿನ ಜನಸಂಖ್ಯೆಗೆ ಸಮವಾಗಿದೆ.

ವಿರಳ ಜನಸಂಖ್ಯೆ,ಹೇರಳ ಕಾಡು ಇದ್ದ ಕಾಲಕ್ಕೆ  ಕಾಡು ಮೇವು ಎಲ್ಲರ ಆಯ್ಕೆಯಾಗಿತ್ತು. ಈಗ ೨೦-೨೫ ವರ್ಷಗಳ ಹಿಂದೆ  ನಮ್ಮ  ಹಳ್ಳಿಗಳಲ್ಲಿ ಕೂಡುಕೊಟ್ಟಿಗೆಗಳಿದ್ದವು. ಸಾಕಿದ ಜಾನುವಾರುಗಳನ್ನು ಒಂದು ದೊಡ್ಡಿಯಲ್ಲಿ ಕೂಡಿ ಹಾಕುವ ವಿಧಾನ ಅದು. ಪ್ರತ್ಯೇಕವಾಗಿ ದನಕರುವನ್ನು ಹಗ್ಗದಲ್ಲಿ ಕಟ್ಟಿ ನಿಲ್ಲಿಸುವ ಬದಲು  ಎಲ್ಲವನ್ನೂ  ಒಂದೆಡೆ ಕೂಡಿ ಹಾಕಲಾಗುತ್ತಿತ್ತು. ಪ್ರತಿ ಮನೆಯಲ್ಲೂ  ೨೫-೩೦ ದನಕರು ಇದ್ದುದರಿಂದ  ಎಲ್ಲವನ್ನು ಕಟ್ಟಿ ಹಾಕುವದು ಸಾಧ್ಯವಿಲ್ಲದ ಸ್ಥಿತಿ !.ಬೆಳಿಗ್ಗೆ ಕಾಡಿಗೆ ಹೊಡೆದೊಯ್ದು ಮೇಯಿುಸುವದು, ನದಿ ನೀರು ಕುಡಿಸುವ ಸರಳ ಕೆಲಸಗಳಿದ್ದವು. ಬೇಸಿಗೆಯಲ್ಲಿ ಹುಲ್ಲು  ದೊರೆಯದಿದ್ದಾಗ  ಹೊನ್ನೆ, ಕಣಗಿಲು, ದಡಸಲು ಸೊಪ್ಪು ಕಡಿದು  ಹಾಕುತ್ತಿದ್ದರು. ಮರದ ಸೊಪ್ಪು ಕಡಿದಿದ್ದಕ್ಕಾಗಲಿ, ಕಾಡಲ್ಲಿ ಮೇಯಿಸಿದ್ದಕ್ಕಾಗಲಿ  ಅರಣ್ಯ ಇಲಾಖೆ ಚಕಾರವೆತ್ತುತ್ತಿರಲಿಲ್ಲ. ರೈತರಿಗೂ ಕಾಡಿನ ಬಗೆಗೆ  ಕಳಕಳಿಯಿುರಲಿಲ್ಲ. ಬೇಸಿಗೆಯ ಏಪ್ರಿಲ್ ಉರಿಯಲ್ಲಿ   ಕಾಡಿಗೆ ಬೆಂಕಿ ಹಾಕುವ ಪದ್ದತಿಗಳಿದ್ದವು. ಅರಣ್ಯಕ್ಕೆ ಬೆಂಕಿ ಹಾಕಿದರೆ ಮುಂದಿನ ಮಳೆಗಾಲಕ್ಕೆ ಹುಲ್ಲು ಚೆನ್ನಾಗಿ ಬೆಳೆಯುತ್ತದೆ ಎಂಬುದು ಲೆಕ್ಕಾಚಾರ. ಜಾನುವಾರು ಮೇವಿಗೆಂದು ಬಿಟ್ಟ ಗೋಮಾಳವಷ್ಟೇ  ಅಲ್ಲ  ಮೈನರ್ ಜಂಗಲ್, ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ  ಮೇವು ಅರಸುವ ಕೆಲಸ ಸಾಗಿತ್ತು. ಪ್ರತಿ ಊರಲ್ಲಿ  ನೂರಾರು ದನಕರುಗಳು ಬೆಳಿಗ್ಗೆ ಕಾಡಿನತ್ತ  ಹೋಗುವದು, ಸಂಜೆ ಅವು ಮರಳುವ ಗೋಧೂಳಿ ದೃಶ್ಯನೋಡಬಹುದಿತ್ತು. ದನಗಾಹಿಗಳು  ಕಾಡಲ್ಲಿ  ದನಮೇಯಿಸುತ್ತ  ಕಟ್ಟಿಗೆ ಕಡಿಯುವದು, ಬಿದಿರಿನ ಏಣಿ ತಯಾರಿಸುವದು, ಗೊಬ್ಬರಕ್ಕೆಂದು ಸಗಣಿ ಸಂಗ್ರಹಿಸುವದು, ಸೊಪ್ಪು, ಹುಲ್ಲು ಕಡಿಯುವದು, ಕಾಡು ಬಳ್ಳಿಗಳಿಂದ ಬುಟ್ಟಿ ತಯಾರಿಸುವ ಪಾರ್ಟ ಟೈಂ ಕೆಲಸ ಮಾಡುತ್ತಿದ್ದರು. ಕೈಯಲ್ಲಿ ಸದಾ ಇರುತ್ತಿದ್ದ ಕತ್ತಿಯಿುಂದ  ಮರದ ತೊಗಟೆ ಕೆತ್ತುವದು, ಗಿಡ ಕಡಿಯುವದು  ಹವ್ಯಾಸವಾಗಿತ್ತು. ಕಾಡು ಕಡಿಯುವದು, ಸುಡುವದು  ಎಲ್ಲರಿಗೂ ಅಕ್ಕರೆಯ ಕೆಲಸಗಳಾಗಿದ್ದವು.

೧೯೯೨ರಲ್ಲಿ ಸಾಗರೋತ್ತರ ಅಭಿವೃದ್ಧಿ ಸಂಸ್ಥೆ ನಡೆಸಿದ ಸಮೀುಕ್ಷೆ ಮಲೆನಾಡಿನ ಕೃಷಿಕರು ಜಾನುವಾರು ಮೇವಿನ ಶೇಕಡಾ ೮೯ರಷ್ಟನ್ನು ಅರಣ್ಯದಿಂದಲೇ ಪಡೆಯುತ್ತಾರೆ  ಎನ್ನುತ್ತದೆ. ಹೈನುಗಾರಿಕೆ ಅರಣ್ಯ ಮೇವಿನ ಜತೆ ಹೇಗೆ ಅವಲಂಬಿತವಾಗಿದೆ ಎಂಬುದು  ಈಗಲೂ ಢಾಳಾಗಿ ಕಾಣುತ್ತಿದೆ. ಕಾಡಲ್ಲಿ ನೆಡುತೋಪು ನಿರ್ಮಾಣದಿಂದ ಹುಲ್ಲಿನ ಕೊರತೆಯಾದ ಪರಿಣಾಮ ಇತ್ತೀಚಿನ ವರ್ಷಗಳಲ್ಲಿ ಜಾನುವಾರುವನ್ನು  ದೊಡ್ಡಿಯಲ್ಲಿ ಕಟ್ಟಿ ಸಾಕುವ ಪದ್ದತಿ ಬಹುತೇಕ ಕಡೆ ರೂಢಿಗೆ ಬಂದಿದೆ. ಆದರೂ ದಿನಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ  ಕಾಡಿಗೆ ನುಗ್ಗುವ ದನಕರುಗಳನ್ನು ಈಗಲೂ ಮಲೆನಾಡಿನಲ್ಲಿ ಕಾಣಬಹುದು. ಅವು ಹುಲ್ಲು, ಗಿಡಗಂಟಿಗಳ ಸೊಪ್ಪು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ನಿರಂತರ ಮೇವಿನ ಪ್ರಹಾರಕ್ಕೆ ನೈಸರ್ಗಿಕ ಸಸ್ಯ ಅಭಿವೃದ್ಧಿ ಕ್ಷೀಣಿಸುತ್ತದೆ. ಅರಣ್ಯ ಇಲಾಖೆ ಬೆಳೆಸಿದ ನೆಡುತೋಪುಗಳು ನೆಲಕಚ್ಚುತ್ತವೆ. ಜಾನುವಾರು ತಿನ್ನದ ಅಕೇಸಿಯಾ, ನೀಲಗಿರಿ, ಕ್ಯಾಸುರಿನಾ, ತೇಗದಂತಹ ಗಿಡಗಳು ಉಳಿಯುತ್ತವೆ.  ಜಾನುವಾರುಗಳ  ನಿರಂತರ ಓಡಾಟದಿಂದ ಕಾಲ್ಗೊರಸಿನ ಭಾರಕ್ಕೆ ಗುಡ್ಡದ ಮಣ್ಣು ಕಾಂಕ್ರೀಟ್ ಹಾಸಿನಂತೆ ಗಟ್ಟಿಯಾಗುತ್ತದೆ. ಮರ ಬೆಳೆಯುತ್ತಿದ್ದ ಮಣ್ಣಲ್ಲಿ  ಹುಲ್ಲು ಬೆಳೆಯದಷ್ಟು  ನೆಲ ಬಡವಾಗುವದನ್ನು  ನೋಡಬಹುದು.

ಕಾಡಿನಲ್ಲಿ ಮೇವಿದೆ ಎಂಬ ಹುಂಬು ಧೈರ್ಯ ಎಲ್ಲರದು. ಮೇವಿಗೆ ಬಿಡುವ ಜಾನುವಾರುಗಳಿಗೆ ಒಂದು ರೂಪಾಯಿಯಂತೆ ಹುಲ್ಲುಬನ್ನಿ ಕೊಡಬೇಕು ಎಂದು ಇದೇ ಮಲೆನಾಡಿನಲ್ಲಿ ಬ್ರಿಟಿಶ್ ಸರಕಾರ ೧೯೩೨ರ ಸುಮಾರಿಗೆ ನಿಯಮ ಮಾಡಿತ್ತು. ಹಣ ನೀಡದ ಕೃಷಿಕರ ದನಕರುಗಳನ್ನು ಹರಾಜು ಹಾಕುವ ಪದ್ದತಿಯಿತ್ತು. ಸ್ವಾತಂತ್ರ್ಯ ಹೋರಾಟದ ಆ ಕಾಲಕ್ಕೆ  ಹುಲ್ಲುಬನ್ನಿ  ವಿರುದ್ಧ ಬೃಹತ್ ಚಳವಳಿಗಳು ನಡೆದಿದ್ದವು. ಕಾಡಿನ ಮೇವು ಅವಲಂಬಿಸಿದ ದನಕುಗಳ ಮೇಲೆ ಆಂಗ್ಲರ  ದಬ್ಬಾಳಿಕೆ  ಎದುರಿಸಲು ರೈತರು ಒಗ್ಗಟ್ಟಿನಿಂದ ಹೋರಾಡಿದರು. ಭೇಷ್ !  ಆಗ ಬ್ರಿಟಿಶರ ವಿರುದ್ದ ನಡೆಸಿದ ಹೋರಾಟ ಮೆಚ್ಚೋಣ, ನೆನೆಯೋಣ.  ಆಗ ನೂರಾರು ದನಕರು ಊರಿನ ಸಾವಿರಾರು ಎಕರೆಯಲ್ಲಿ ಮೇಯುವ ಅವಕಾಶ”ತ್ತು, ಈಗ ೪೦-೫೦ ಎಕರೆಯಲ್ಲಿ ನೂರಾರು ನಿಂತಾಗ ಪರಿಣಾಮ  ತೀರ ಕೆಟ್ಟದ್ದು. ಇಂದು ಯಾವ ಕಾಡೂ ಅಕ್ಷಯ ಪಾತ್ರೆಯಲ್ಲ, ಬಳಕೆ ಪ್ರಹಾರಕ್ಕೆ ತತ್ತರಿಸಿದ ಸ್ವರೂಪದಲ್ಲಿದೆ. ಹೀಗಿರುವಾಗ ಈಗಲೂ ನಮ್ಮ ದನಕರುಗಳನ್ನು ಕಣ್ಣುಚ್ಚಿ ವನವಾಸಕ್ಕೆ ಕಳಿಸಬಹುದೇ? ನೈಸರ್ಗಿಕ  ಸಂಪತ್ತನ್ನು ವಿವೇಚನೆಯಿಲ್ಲದೇ  ಹಾಳು ಮಾಡುವದು ಸರಿಯೇ? ಕಾಡು ಅಪಾಯದಲ್ಲಿರುವ ಹೊತ್ತು  ಈ ಪ್ರಶ್ನೆ  ಎದುರಾಗಿದೆ.

ಜಾನುವಾರು ಮೇಯಿಸುವದು ನಮ್ಮ ಹಕ್ಕು, ದನಕರು ಮೇಯಿಸಿದರೆ ಕಾಡು ಹಾಳಾಗುತ್ತದೆಯೇ? ನಿತ್ಯ ಕಳ್ಳ ಸಾಗಣೆ ತಡೆಯುವದು ಬಿಟ್ಟು ಬಡ ಕೃಷಿಕರ ಮೇಲೆ ಕ್ರಮ ಕೈಗೊಳ್ಳುವದು ತಪ್ಪು ಎನ್ನಬಹುದು. ವಾದಕ್ಕೆ ಇಳಿಯುವ ಮುನ್ನ ಅರಣ್ಯ ಸಂರಕ್ಷಣೆ ಕರ್ತವ್ಯ ಮರೆಯಬಾರದು. ಕೃಷಿಗೆ ಗೊಬ್ಬರ ಬೇಕು, ಉರುವಲು ಬೇಕು, ನಾಟಾ ಬೇಕು, ಕಾಡಿನ ನೀರು ಬೇಕು ಎಲ್ಲಕ್ಕಿಂತ ಮುಖ್ಯವಾಗಿ ಮುಂಗಾರು ಮಳೆ ಸರಿಯಾಗಿ ಸುರಿಯಬೇಕು, ಬಿದ್ದ ಹನಿ ನೆಲದಲ್ಲಿ ಇಂಗಬೇಕು. ನಮ್ಮ ಜಾನುವಾರು ನಿಯಂತ್ರಣದ ಒಂದು ಹೆಜ್ಜೆ ನಮ್ಮ ಊರಿನ ಹಸುರು ದೃಶ್ಯಗಳನ್ನು  ಎರಡೇ ಎರಡು ವರ್ಷಕ್ಕೆ ಬದಲಿಸುತ್ತದೆ. ಇದಕ್ಕೆ  ಪ್ರಥಮ ಕೆಲಸ   ಜಾನುವಾರು ನಿಯಂತ್ರಣ, ಕಾಡು ಮೇವು ನಂಬಿ ಹತ್ತಾರು ದನಕರು ಸಾಕುವ ಬದಲು ಸಾಕುವ ಒಂದೆರಡನ್ನು ಚೆನ್ನಾಗಿ ಸಾಕುವ ದೃಷ್ಟಿ ಬೇಕು. ನಮ್ಮ  ದನಕರುಗಳಿಗಾಗಿ ನಮ್ಮ ಭೂಮಿಯಲ್ಲಿ  ಹಸಿರು ಹುಲ್ಲು, ಮೇವು ಬೆಳೆಸುವ ಕೆಲಸಗಳು  ಕೃಷಿ ಸುಸ್ಥಿರತೆ ನೆಲೆಯಲ್ಲಿ  ಅನುಕೂಲ. ಮನೆಯಲ್ಲಿ ಮೇವು ಹಾಕಿ ಕಾಡಿಗೆ ಅಟ್ಟಿದರೆ ದನಕರುಗಳ ಸಗಣಿ, ಮೂತ್ರಗಳು  ಊರ ರಸ್ತೆಗೆ  ವ್ಯರ್ಥವಾಗಿ ಸುರಿಯುತ್ತವೆ.  ಇಂತಹ ಅಮೂಲ್ಯ ಸಂಪತ್ತನ್ನು  ದೊಡ್ಡಿಯಲ್ಲಿ  ಸಂಗ್ರಹಿಸಿ ಉತ್ತಮ ಗೊಬ್ಬರ ಮಾಡಿದರೆ  ಕೃಷಿ ಉನ್ನತಿ ಸಾಧ್ಯವಾಗುತ್ತದೆ. ಜಾನುವಾರು ರೋಗ ನಿಯಂತ್ರಣವೂ  ಆಗುತ್ತದೆ. ಅರಣ್ಯದ ಆರೋಗ್ಯ ಸುಧಾರಿಸುತ್ತದೆ.