ಸುಮಾರು ೧೫೦ ವರ್ಷಗಳ ಹಿಂದಿನ ಮಾತು. ಇಂದಿನ ಗುಜರಾತ ರಾಜ್ಯದ ಸೌರಾಷ್ಟ್ರದಲ್ಲಿ ಅಂದು ಚಿಕ್ಕ ಚಿಕ್ಕರಾಜ್ಯಗಳಿದ್ದವು. ಅವುಗಳಲ್ಲೊಂದು ಮೋರವಿ ರಾಜ್ಯ. ಈ ಮೋರವಿ ರಾಜ್ಯದಲ್ಲಿ ಟಂಕಾರಾ ಎಂಬುದೊಂದು ನಗರ. ಈ ನಗರದಲ್ಲಿ ಕರ್ಷನಜೀ ಲಾಲಜಿ ತಿವಾರಿ ಎಂಬೊಬ್ಬ ಬ್ರಾಹ್ಮಣನಿದ್ದನು. ಇವನು ಬಹು ಶ್ರೀಮಂತ, ಜೊತೆಗೆ ಟಂಕಾರಾ ನಗರದ ತಹಸೀಲ್ದಾರ. ಗೌರವಕ್ಕೆ ಹಾಗೂ ಆತ್ಮರಕ್ಷಣೆಗಾಗಿ ಮೋರವಿ ರಾಜ್ಯದ ರಾಜನಿಂದ ಒಂದು ಸಣ್ಣ ಕುದುರೆಯ ಪಡೆಯೂ ಈತನಿಗೆ ಲಭಿಸಿದ್ದಿತ್ತು.

ಕರ್ಷನಜೀ ಧರ್ಮ ಬುದ್ಧಿಯುಳ್ಳವನು, ವ್ಯವಹಾರದಲ್ಲಿಯೂ ಉದಾರ. ಆದರೆ ಹಿಂದಿನಿಂದ ಬಂದ ಆಚಾರಗಳಲ್ಲಿ ಬಹಳ ನಂಬಿಕೆ. ಈತನ  ಪತ್ನಿ ಅಮೃತಬಾಯಿ ಸುಂದರಿ,ಸದಾಚಾರ ಸಂಪನ್ನೆ, ಊರಿನವರೆಲ್ಲರಿಗೂ  ತಾಯಿಯಂತಿದ್ದಳೂ. ಇವರಿಗೆ ೧೮೨೪ರಲ್ಲಿ ಒಬ್ಬ ಮಗ ಹುಟ್ಟಿದ. ಮಗುವಿಗೆ ಮೂಲಶಂಕರ ಎಂದು ಹೆಸರಿಟ್ಟರು. ಅಲ್ಲಿನ ಪದ್ಧತಿಯಂತೆ ದಯಾರಾಮ ಎಂದು ಹೆಸರಿಟ್ಟರು. ಈ ಮಗುವೆ ಮುಂದೇ ಮಹರ್ಷಿ ದಯಾನಂದ ಎಂದು ಕೀರ್ತಿ ಪಡೆದದ್ದು.

ಐದು ವರ್ಷ ತುಂಬುತ್ತಲೇ ಬಾಲಕ ಮೂಲನಿಗೆ ಅಕ್ಷರಾಭ್ಯಾಸ ಪ್ರಾರಂಭವಾಯಿತು. ಎಂಟನೇ ವಯಸ್ಸಿಗೆ ಆತನಿಗೆ ಉಪನಯನ ಸಂಸ್ಕಾರವೂ ಆಯಿತು. ಹುಡುಗ ಶ್ರದ್ದೇಯಿಂದ ಸಂಧ್ಯಾವಂದನೆಯನ್ನೂ ಇತರೆ ಉಪಾಸನೆಗಳನ್ನೂ ಮಾಡುತ್ತಿದ್ದ.  ಅವನ ಜ್ಞಾಪಕ ಶಕ್ತಿ ಅದ್ಭುತವಾದದುದ. ಅವನ ಹದಿನಾಲ್ಕನೇ ವಯಸ್ಸಿನಾಗಲೇ ಸಂಪೂರ್ಣ ಯಜುರ್ವೇದ, ಶಾಸ್ತ್ರಗಳು, ಉಪನಿಷತ್ತುಗಳು, ಎಲ್ಲಾ ಬಾಯಿಗೆ ಬರುತ್ತಿದ್ದವು.

ಕರ್ಷನಜೀಯು ತನ್ನಂತೆ ತನ್ನ ಮಗನೂ ಶಿವಭಕ್ತನಾಗಬೇಕೆಂದು ಬಯಸುತ್ತಿದ್ದನು. ಅದಕ್ಕಾಗಿ ಅವರು ಮೂಲನಿಗೆ ಆಗಾಗ ಶಿವನ ಮಹಿಮೆಯನ್ನು ಸಾರುವ ಕಥೆಗಳನ್ನು ಹೇಳುತ್ತಿದ್ದ. ಹಬ್ಬ ಹರಿದಿನಗಳಲ್ಲಿ ಉಪವಾಸ ಮಾಡಿ ಶಿವಲಿಂಗವನ್ನು ಪೂಜಿಸುವಂತೆ ಬೋಧಿಸುತ್ತಿದ್ದ.

ಮೂಲಶಂಕರನಿಗೆ ತನ್ನ ಚಿಕ್ಕಪ್ಪನದೆಂದರೆ ಬಹು ಪ್ರೀತಿ. ಈತನ ಚಿಕ್ಕಪ್ಪ ಸ್ವತಃ ವಿದ್ವಾಂಸ ಹಾಗೂ ಅದ್ಯಾತ್ಮಿಕ ವೃತ್ತಿಯ ತೀರ ಸರಳ ವ್ಯಕ್ತಿಯಾಗಿದ್ದ. ಮೂಲಶಂಖರನ ಮೇಲೆ ಅವನದು ಹೆಚ್ಚಿನ ಪ್ರಭಾವ. ಮೂಲಶಂಕರನ ತೀಕ್ಷ್ಣ ಬುದ್ಧಿ ಹಾಗೂ ಅಸಾಧಾರಣ ಜ್ಞಾಪಕ ಶಕ್ತಿಯನ್ನು ಕಂಡು ಈತನು ಎಂದಾದರೊಂದು ದಿನದ ಮಹಾತ್ಮ ಎನಿಸಿಕೊಳ್ಳುತ್ತಾನೆ ಎಂದು ಚಿಕ್ಕಪ್ಪನಿಗೂ ತೋರುತ್ತಿತ್ತು.

ಘಟನೆಗಳು :

ಅಂದು ಶಿವರಾತ್ರಿ. ರಾತ್ರಿ ಎಲ್ಲ ಎಚ್ಚರವಿದ್ದು, ಶಿವನನ್ನು ಪೂಜಿಸಲು ಎಲ್ಲ ಶಿವಭಕ್ತರು ದೇವಾಲಯದಲ್ಲಿ ಸೇರಿದ್ದರು. ಬಾಲಕ ಮೂಲನೂ ತನ್ನ ತಂದೆಯ ಸಂಗಡ ಅಲ್ಲಿಗೆ ಬಂದಿದ್ದನು. ಮಧ್ಯರಾತ್ರಿ ಮೀರುವ ವೇಳೆಗೆ ಒಬ್ಬೊಬ್ಬರಾಗಿ ಎಲ್ಲರೂ ಮಲಗಿಕೊಂಡರು. ಆಧರೆ ಬಾಲಕ ಮೂಲನು  ಮಾತ್ರ ವ್ರತವನ್ನು ಮುರಿಯಬಾರದು ಎಂದು, ನಿದ್ರಿಸದೇ ನೆಟ್ಟ ನೋಟದಿಂದ ಶಿವಲಿಂಗವನ್ನು ನೋಡುತ್ತ ಕುಳಿತಿದ್ದನು.

ಮಧ್ಯರಾತ್ರಿಯ ಸಮಯ. ಶಿವಲಿಂಗದ ಸಮೀಪದಲ್ಲಿ ನಂದಾದೀಪವೊಂದು ಮಂದ ಮಂದವಾಗಿ ಉರಿಯುತ್ತಿದೆ. ಅಷ್ಟರಲ್ಲಿಯೇ ಎಲ್ಲಿಂದಲೋ  ನಾಲ್ಕಾರು ಇಲಿಗಳು ಬಂದವು. ಎದುರಿನಲ್ಲಿಟ್ಟಿದ್ದ ನೈವೇದ್ಯವನ್ನು ತಿಂದು ನಿರ್ಭಯವಾಗಿ ಶಿವಲಿಂಗದ ಮೇಲೆ ಓಡಾಡತೊಡಗಿದವು.

ಮೂಲನು ಇದನ್ನೆಲ್ಲ ಆಶ್ಚರ್ಯಚಕಿತನಾಗಿ ನೋಡಿದ. ಆತನಲ್ಲಿ ವಿಚಾರ ಚಕ್ರವು ತಿರುಗಲು  ಪ್ರಾರಂಭವಾಯಿತು. ಏನಿದು? ತಂದೆಯು ಶಿವನ ಚೈತನ್ಯಸ್ವರೂಪ, ಸರ್ವಶಕ್ತ ಎಂದು ಹೇಳುತ್ತಿದ್ದನಲ್ಲ? ಆದರೆ ಇಲಿಗಳೂ ಹರಿದಾಡಿದರೂ ಶಿವಲಿಂಗ ಸುಮ್ಮನಿದೆಯಲ್ಲ? ಹುಡುಗನ ಮನಸ್ಸಿಗೆ ಗೊಂದಲವಾಯಿತು. ಏನೋ ತೋರದೆ ಕೊನೆಗೆ ತನ್ನ ತಂದೆಯನ್ನು ಮೃದುವಾಗಿ ತಟ್ಟಿ ಎಬ್ಬಿಸಿ, “ಅಪ್ಪಾ, ನೀವು ಹೇಳೀದ ಮಹಾದೇವನು ಇವನೋ?” ಅಥವಾ ಈ ಲಿಂಗ ಬೇರೇನಾದರೂ ಪದಾರ್ಥವೋ?” ಎಂದು ಕೇಳೀದನು.

ತಂದೆ ಕೋಪದಿಂದ, “ಏನಿದು ? ಹೀಗೆಲ್ಲ ನಾಸ್ತಿಕನಂತೆ ಹೇಳೀದರೆ ನಿನ್ನ  ನಾಲಿಗೆಯೇ ಸೇದಿತು? ನಿಶ್ಚಿತವಾಗಿಯೂ ಈ ಶಿವಲಿಂಗ ಸಾಕ್ಷಾತ ಪರಶಿವ” ಎಂದ.

ಮಗನು ವಿನಯದಿಂದ, “ಖಂಡಿತವಾಗಿಯೂ ಅಲ್ಲ ಅಪ್ಪ, ನೀವು ಹೇಳೂವ ಪರಶಿವನು ಚೇತನ ಸ್ವರೂಪನಾಗಿದ್ದಾನೆ. ಆದರೆ ಈ ಶಿವಲಿಂಗವು ಜಡಪದಾರ್ಥವಾಗಿದೆ” ಎಂದ.

ಈ ಉತ್ತರದಿಂದ ಕರ್ಷನಜೀಯ ಕೋಪ ಮತ್ತಷ್ಟು ಕೆರಳಿತು. ಆದರೆ ಮಗ ಹೇಳಿದ್ದು ತರ್ಕಬದ್ಧವಾಗಿತ್ತು. ಸಂಭಾಷಣೆ ಮುಂದುವರೆಯಿತು.

ತಂದೆ : ಮಗು, ನೀನು ಹೇಳೂವುದು ನಿಜ. ಇದು ವಿಗ್ರಹವೇ ಹೊರತು ಶಿವನಲ್ಲ.

ಮೂಲ ಶಂಕರ : ಹಾಗಾದರೆ ಶಿವನನ್ನು ಬಿಟ್ಟು ಈ ವಿಗ್ರಹವನ್ನೇಕೆ ಪೂಜಿಸಬೇಕು ?

ತಂದೆ : ಮಗು, ಕಲಿಯುಗದಲ್ಲಿ ಶಿವನು ತನ್ನ ನಿಜ ರೂಪದಲ್ಲಿ ಯಾರಿಗೂ ದರ್ಶನ ಕೊಡುವುದಿಲ್ಲ. ವಿಗ್ರಹದಲ್ಲಿಯೇ ಶಿವಭಾವನೆ ಮಾಡಿಕೊಂಡು ಪೂಜಿಸಿದರೆ ಶಿವನು ಪ್ರಸನ್ನನ್ನಾಗಿ ಮುಕ್ತಿ ಕೊಡುತ್ತಾನೆ.

ಮೂಲ ಶಂಕರ : ಹಾಗಾದರೆ ಭಾವಿಸುವುದಾದರೆ ಪೂಜೆ ಮಾಡಿದವೆಂದೇ ಭಾವಿಸಬಹುದಲ್ಲ. ಪೂಜೆ ಏಕೆ ?

ಈ ಪ್ರಶ್ನೆಯಿಂದ ಕರ್ಷನ್ ಜೀ ನಿರುತ್ತರನಾದ.

ಆದರೆ ಬಾಲಕನ ಮನಸ್ಸಿನಲ್ಲಿ ವೈಚಾರಿಕ ಗೊಂದಲವೇ ಎದ್ದಿತು.

ಒಮ್ಮೆ ಕಾಲರಾ ರೋಗವು ಟಂಕಾರಾ ನಗರಕ್ಕೆ ಕಾಲಿಟ್ಟಿತ್ತು. ಮೂಲನ ಹದಿನಾಲ್ಕು ವರ್ಷದ ತಂಗಿಯು ಕಾಲರಾ ರೋಗಕ್ಕೆ ತುತ್ತಾದಳೂ. ತಂದೆ, ತಾಯಿ, ಬಂಧು, ಬಳಗ ಎಲ್ಲವೂ ಕಲ್ಲು ಕರಗುವಂತೆ ಅತ್ತರು. ಮೂಲ ಶಂಕರನು ಮಾತ್ರ ಸ್ವಲ್ಪವೂ ಅಳಲಿಲ್ಲ. ತಂಗಿಯ ಶರೀರವನ್ನು ನೆಟ್ಟ ನೋಟದಿಂದ ನೋಡುತ್ತ ಸಮೀಪದಲ್ಲಿಯೇ ಕುಳಿತ್ತಿದ್ದನು. ಆದರೆ ಆತನ ಮನಸ್ಸು ಥಟ್ಟನೆ ಬಂದೆರಗಿದ ಸಾವಿನ ಬಗ್ಗೆಯೇ ಚಿಂತಿಸುತ್ತಿತ್ತು. ಬಂದವರೆಷ್ಟೊ ಮಂದಿ, “ಎಂಥ ಕಲ್ಲೆದೆಯ ಕಟುಕನಿವ” ಎಂದರು.

ದಿನಗಳುರುಳಿದವು. ಎಲ್ಲರೂ ಆ ಬಾಲಕಿಯ ಸಾವನ್ನು ಮರೆತರು. ಆದರೆ ಎಲ್ಲರಿಂದಲೂ ಕಟುಕನೆಂದೆನಿಸಿಕೊಂಡಿದ್ದ ಮೂಲನು ಮಾತ್ರ ಮರೆತಿರಲಿಲ್ಲ. ಸಾವು ಅವನ ಪಾಲಿಗೊಂದು ಒಗಟಾಗಿ ಉಳಿಯಿತು.

ಇದಾದ ಮೂರು ವರ್ಷಗಳಲ್ಲಿ ಮೂಲಶಂಕರನ ಪ್ರೀತಿಯ ಚಿಕ್ಕಪ್ಪ ಕಾಲರಾ ರೋಗಕ್ಕೆ ತುತ್ತಾಗಿ ಮೃತ್ಯುವಶವಾದ. ಇದೊಂದು ಮೂಲನಿಗೆ ಸಹಿಸಲಾಗದ ಅಘಾತವಾಗಿತ್ತು. ಅವನಿಗೆ ತನ್ನ ಜೀವನ ಸರ್ವಸ್ವವನ್ನೇ ಕಳೆದುಕೊಂಡಂತಾಗಿತ್ತು. ಈ ಸಲ ಮೂಲನು ಅಧೀರನಾಗಿ ಅತ್ತ. ಕಲ್ಲು ಕರಗುವಂತೆ ಅತ್ತ.

ತಂಗಿಯ ಮರಣದಿಂದ ಮೂಲನ ಹೃದಯದಲ್ಲಿ ಮೂಡಿದ್ದ ವೈರಾಗ್ಯ ಚಿಕ್ಕಪ್ಪನ ಸಾವಿನಿಂದ ಇನ್ನಷ್ಟು ಬಲವಾಯಿತು. ಕ್ಷಣಿಕವಾದ ಈ ಸಂಸಾರ ಸುಖಕ್ಕೆ ಬಲಿಯಾಗದೇ ಶಾಶ್ವತ ಪದ ಗಳಿಸುವ ಹಂಬಲ ಆತನಲ್ಲಿ ಅದಮ್ಯವಾಗಿ ಬೆಳೆದು ನಿಂತಿತ್ತು.

ಗೃಹತ್ಯಾಗ :

ಸಂಸಾರ ಬೇಡ ಎಂಬ ಭಾವನೆ ಮೂಲಶಂಕರನಲ್ಲಿ ಬೆಳೆಯತೊಡಗಿತ್ತು. ಜೀವನ ಎಂದರೇನು, ಸಾವು ಎಂದರೇನು ಎಂದು ಯಾರಾದರೊಬ್ಬ ಪೂರ್ಣಸಿದ್ಧ ಯೋಗಿಯಿಂದಲೇ ತಿಳಿಯಬೇಕು ಎನ್ನಿಸಿತು. ಆದ್ದರಿಂದ ಮೂಲಶಂಕರನು ಮನೆಯನ್ನುಬಿಟ್ಟು ಯೋಗ್ಯ ಗುರುವನ್ನು ಹುಡುಕುತ್ತ ಹೋಗಬೇಕೆಂದು ನಿರ್ಧರಿಸಿದ್ದನು.

ಮಗನಲ್ಲಿ ಬೆಳೆಯುತ್ತಿರುವ ವೈರಾಗ್ಯವನ್ನು ಕಂಡು ಎಲ್ಲಿ ಈತನು ಸಂನ್ಯಾಸಿಯಾಗಿ ಮನೆ ಬಿಟ್ಟು ಹೋಗುವನೋ ಎಂದು ತಂದೆ ತಾಯಿಗಳು ಹೆದರಿದರು. ಶೀಘ್ರವೇ ಈತನ ಮದುವೆ ಮಾಡಲು ನಿರ್ಧರಿಸಿದರು. ಕನ್ಯಯೂ ಗೊತ್ತಾಯಿತು. ಮದುವೆಯ ಸಿದ್ಧತೆಗಳು ಭರದಿಂದ ಸಾಗತೊಡಗಿದವು. ಮೂಲಶಂಕರನು ಮಾತ್ರ ಯಾವುದನ್ನೂ ವಿರೊಧಿಸಲಿಲ್ಲ. ಇದರಿಂದ ಮಗನಿಗೆ ಮದುವೆಯಾಗುವ ಇಚ್ಛೆ ಇದೆ ಎಂದುಕೊಂಡು ತಂದೆತಾಯಿಗಳು ಸಂತೋಷದಿಂದಿದ್ದರು.  ಆದರೆ ಸಂಸಾರ ತ್ಯಾಗದ ನಿರ್ಧಾರ ಮೂಲಶಂಕರನಲ್ಲಿ ಮಾತ್ರ ಅಚಲವಾಗಿತ್ತು.

ಅಂದು ಸಂಜೆ ಗತ್ತಲು ಕವಿಯುತ್ತಿತ್ತು. ಮೂಲ ಶಂಕರನು ತನ್ನ ಕೊಣೆಯಿಂದ ಹೊರ ಬಂದನು. ವಿಶಾಲವಾದ ಪ್ರಾರಂಗಣದಲ್ಲಿ ನಿಂತು ಸಂಪದ್ಭರಿತವಾದ ತನ್ನ ಮನೆಯನ್ನು ಸ್ವಲ್ಪ ಹೊತ್ತು ದಿಟ್ಟಿಸಿ  ನೋಡಿದನು.  ತಂದೆ ತಾಯಿ ಉಳಿದೆಲ್ಲ ಮನೆಯವರಿಗೆ ಅಲ್ಲಿಂದಲೇ ಕೊನೆಯ ವಂದನೆಯನ್ನು ಸಲ್ಲಿಸಿದನು. ಎದೆಯು ಭಾರವಾಗಿತ್ತು. ಕಣ್ಣುಗಳು ಒದ್ದೆಯಾಗಿದ್ದವು. ಇನ್ನೂ ಈ ಜನ್ಮದಲ್ಲಿ ಮತ್ತೇ ಈ ಮನೆಯಲ್ಲಿ ಕಾಲಿಡುವುದಿಲ್ಲವೆಂದು ನಿರ್ಧರಿಸಿ ಸರನೆ ಹೊರಗೆ ನಡೆದು ಬಿಟ್ಟನು.

ಆಗ ಮೂಲಶಂಕರನಿಗೆ ಕೇವಲ ಇಪ್ಪತ್ತೊಂದು ವರ್ಷ.

ಈತನನ್ನು ಪುನಃ ಮನೆಗೆ ಬರುವಂತೆ ಮಾಡಲು ಕರ್ಷನಜೀ ಮಾಡುವ ಎಲ್ಲ ಪ್ರಯತ್ನಗಳೂ ನಿಷ್ಪಲವಾದವು.

 

ತಂದೆ-ತಾಯಿ- ಎಲ್ಲರಿಗೂ ಕೊನೆಯ ವಂದನೆಯನ್ನು ಸಲ್ಲಿಸಿದನು.

ಗುರುವಿಗಾಗಿ ಅಲೆದಾಟ :

ಮನೆಯಿಂದ ಹೊರ ಬಿದ್ದ ಮೂಲಶಂಕರನು ಗುರುವನ್ನು ಹುಡುಕುತ್ತಾ ಅಹಮದಾಬಾದ್, ಬರೋಡಾ, ಹರಿದ್ವಾರ, ಕಾನಪೂರ, ಕಾಶಿ ಮುಂತಾದ ನಗರಗಳನ್ನು ಸುತ್ತಿದನು. ಪರ್ವತ ಪ್ರದೇಶದ ಕಾಡು ಮೇಡುಗಳಲ್ಲಿ ಗುರುವಿಗಾಗಿ ಅಲೆದಾಡಿದನು.ಎಲ್ಲಿಯೂ ಆತನಿಗೆ ಯೋಗ್ಯ ಗುರುವಿನ ದರ್ಶನವಾಗಲಿಲ್ಲ.

ಇದೇ ಅವಧಿಯಲ್ಲಿ ಮೂಲ ಶಂಕರನು ಪೂರ್ಣಾನಂದನೆಂಬ ಘನ ವಿದ್ವಾಂಸನಾದ ಸಂನ್ಯಾಸಿಯಿಂದ ಸಂನ್ಯಾಸ ಧೀಕ್ಷೆ ಪಡೆದು ಸ್ವಾಮಿದಯಾನಂದ ಸರಸ್ವತಿಯಾದ.

ಹಿಮಪರ್ವತದ ಉನ್ನತ ಪ್ರಾಂತದಲ್ಲಿ ಯೋಗಿಗಳಿಗಾಗಿ ಅಲೆದಾಡುವಾಗ ದಯಾನಂದರು ತಮ್ಮ ಜೀವನವನ್ನು ಅನೇಕ ಸಲ ಗಂಡಾಂತರಕ್ಕೊಡ್ಡಬೇಕಾಯಿತು. ಹಿಂಸ್ರಪಶುಗಳಿಂದ ತುಂಬಿದ ಭೀಷಣ ಕಾಡುಗಳಲ್ಲಿ ರಾತ್ರಿ ಹಗಲೆನ್ನದೇ ಸಂಚರಿಸಬೇಕಾಯಿತು.

ಒಮ್ಮೆ ದಯಾನಂದರು ಓಖಿ ಮಠದಲ್ಲಿ ತಂಗಿದಾಗ ಆ ಮಠದ ಮಹಂತನು ಇವರ ಅಪೂರ್ವ ತೇಜಸ್ಸನ್ನು ಕಂಡು, “ನೀವೇ  ಈ ಮಠದ  ಉತ್ತರಾಧಿಕಾರಿಯಾಗಿ ಇಲ್ಲೇ ಇದ್ದು ಬಿಡಿ. ಈ ಮಠದ ಸಕಲ ಐಶ್ವರ್ಯವೂ ನಿಮ್ಮದಾಗುವುದು” ಎಂದನು. ಅದಕ್ಕೆ ವೈರಾಗ್ಯನಿಧಿಯಾದ ದಯಾನಂದರು ವಿನಯದಿಂದ , “ಮಹಂತರೇ ! ನನಗೆ ಐಶ್ವರ್ಯವೇ ಬೇಕಾಗಿದ್ದರೆ ಸಂಪದ್ಭರಿತರಾದ ತಂದೆಯ ಮನೆಯನ್ನುಬಿಟ್ಟು ಬರುತ್ತಿರಲಿಲ್ಲ.  ನನಗೆ ಬೇಕಾದುದು ಸಂಪತ್ತಲ್ಲ. ಯೋಗ್ಯ ವಿದ್ಯೆ” ಎಂದು ಹೇಳಿ ಅಲ್ಲಿಂದ ನಡೆದು ಬಿಟ್ಟರು.

ಹತ್ತು ವರ್ಷ ಅಲೆದಾಡಿದರೂ ದಯಾನಂದರಿಗೆ ಯೋಗ್ಯ ಗುರುವಿನ ದರ್ಶನವಾಗಲಿಲ್ಲ. ಇದರಿಂದ ಅವರಿಗೆ ತುಂಬಾ ನಿರಾಶೆಯಾಯಿತು.  ಹಾರಿ ಪ್ರಾಣ ಕಳೆದುಕೊಳ್ಳಲು ಪರ್ವತ ಶಿಖರದ ಕೊಡುಗಲ್ಲೊಂದನ್ನು ಏರಿ  ನಿಂತರು. ಇನ್ನೇನು ಹಾರಿಕೊಳ್ಳಬೇಕು. ಅಷ್ಟರಲ್ಲಿ ಅವರ ಮನಸ್ಸು, “ನೀನು ಮನೆಯನ್ನು ಬಿಟ್ಟು ಬಂದುದು ಈ ರೀತಿಯಾಗಿ ಹೇಡಿಯಂತೆ ಸಾಯುವುದಕ್ಕಾಗಿಯೇ? ಸಾವನ್ನು ಮೆಟ್ಟಿ ನಿಲ್ಲುವುದದಕ್ಕೆ, ಜ್ಞಾನಿಯಾಗುವುದಕ್ಕೆ” ಎಂದು ನುಡಿಯಿತು. ಇದರಿಂದ ದಯಾನಂದರಿಗೆ ಹೊಸ ಶಕ್ತಿ ಬಂದಂತಾಗಿ ಯೋಗ್ಯ ಗುರುವನ್ನು ಹುಡುಕಿಯೇ ತಿರುವ ದೃಢ ನಿರ್ಧಾರದಿಂದ ಕೋಡುಗಲ್ಲನು ಇಳಿದು ಬಂದರು.

ನರ್ಮದಾ ನದಿಯ ಉಗಮಸ್ಥಾನದ ದಟ್ಟವಾದ ಅಡವಿಗಳಲ್ಲಿ ಪೂರ್ಣಸಿದ್ಧರಾದ ಯೋಗಿ ಜನರಿದ್ದಾರೆಂದು ತಿಳಿದುಬಂದು. ದಯಾನಂದರು ನೂರಾರು ಮೈಲಿಯ ದೂರವನ್ನು ಲೆಕ್ಕಿಸದೇ ದಕ್ಷಿಣಾಭಿಮುಖವಾಗಿ ನಡೆದೇ ಬಿಟ್ಟರು.

ನರ್ಮದಾ ನದಿಯನ್ನು ಸಮೀಪಿಸುತ್ತಿರುವಾಗ ಅಲ್ಲೊಂದು ವನದಲ್ಲಿ ದಯಾನಂದರಿಗೆ ಪೂರ್ಣಾಶ್ರಮ ಸ್ವಾಮಿ ಎಂಬ ಸಾಧುವಿನ ದರ್ಶನವಾಯಿತು.  ಅವರು ದಯಾನಂದರ ಅಲೆದಾಟದ ಕಥೆಯನ್ನು ಕೇಳಿ ಸಂತೋಷಗೊಂಡು, ಕೊನೆಗೆ, ದಯಾನಂದಜೀ, ನಿಮ್ಮ ಬಯಕೆಯನ್ನು ಈಡೇರಿಸುವ ಯೋಗ್ಯತೆ ಈ ಲೋಕದಲ್ಲಿ ವಿರಜಾನಂದ ದಂಡೀಶರಿಗೆ ಮಾತ್ರ ಇದೆ. ಅವರು ಮಥುರಾ ನಗರದಲ್ಲಿದ್ದಾರೆ ” ಎಂದರು.

ದಯಾನಂದರಿಗೆ ಆಶಾಕಿರಣವೊಂದು ಮಿನುಗಿತು. ತಡಮಾಡದೇ ಮಥುರಾ ನಗರಿಯತ್ತ ಹೊರಟರು. ೧೮೬೦ ನೇ ಇಸವಿಯ ನವೆಂವರ್‌ ಹದಿನಾಲ್ಕರಂದು ಮಥುರಾ ನಗರವನ್ನು ತಲುಪಿದರು.

ಗುರು ಶಿಷ್ಯ ಸಮಾಗಮ :

ಮಥುರಾ ನಗರಿಯ ವಿಶ್ರಾಂತಿ ಘಾಟಿಗೆ ಹೋಗುವ ಮಾರ್ಗದಲ್ಲಿ ಸ್ವಾಮಿ ವಿರಜಾನಂದ ಮುಚ್ಚಿದ ಪಾಠ ಶಾಲೆಯ ಬಾಗಿಲುಗಳನ್ನು ೩೬  ವರ್ಷದ ತೇಜಸ್ವಿ ಸಂನ್ಯಾಸಿ ದಯಾನಂದರು ತಟ್ಟಿದರು. ಒಳಗಿನಿಂದಲೇ ಗಂಭೀರ ಧ್ವನಿಯೊಂದು ಕೇಳಿಬಂತು.

ವಿರಜಾನಂದ : ಏನು ನಿನ್ನ ಹೆಸರು ?

ದಯಾನಂದ : ಗುರುದೇವಾ, ದಯಾನಂದ ಸರಸ್ವತಿ ಎಂದು ಕರೆಯುತ್ತಾರೆ ಈ ಸೇವಕನನ್ನು.

ವಿರಜಾನಂದ : ಏನಾಗಬೇಕಿತ್ತು ?

ದಯಾನಂದ : ಜ್ಞಾನ ಭಿಕ್ಷೆಗಾಗಿ ತಮ್ಮನ್ನು ಹುಡುಕಿಕೊಂಡು ಬಂದಿದ್ದೇನೆ.

ವಿರಜಾನಂದ: ವ್ಯಾಕರಣವೇನಾದರೂ ಬರುತ್ತದೆಯೋ ?

ದಯಾನಂದ : ಕೌಮುದಿ, ಸಾರಸ್ವತ ಓದಿಕೊಂಡಿದ್ದೇನೆ.

ವಿರಜಾನಂದ ; ಏನು ? ಕೌಮುದಿ , ಸಾರಸ್ವತವೇ?  ಹೋಗು ಹೋಗು, ಆ ಪ್ರಯೋಜಕ ಗ್ರಂಥಗಳನ್ನು  ಮೊದಲು ಯಮುನೆಗೆ ಹಾಕಿ ಬಾ. ಆ ಮೇಲೆ ಬಾಗಿಲನ್ನು ತೆರೆಯೋಣ.

ಗುರುವಿನ ಆಜ್ಞೆಯಂತೆ ದಯಾನಂದರು ಯಮುನೆಗೆ ಹೋದರು. ನೂರಾರು ಮೈಲಿಗಳಿಂದ ತಲೆಯ ಮೇಲೆ ಹೊತ್ತು ತಂದಿದ್ದ ಆ ಗ್ರಂಥಗಳನ್ನು ನಿರ್ಮೊಹವಾಗಿ ಯಮುನೆಗೆ ಎಸೆದು ಬಂದು, “ಗುರುದೇವಾ, ತಮ್ಮ ಆಜ್ಞೆಯನ್ನು ಪಾಲಿಸಿದ್ದೇನೆ” ಎಂದರು. ಬಾಗಿಲುಗಳೂ ತೆರೆಯಲ್ಪಟ್ಟವು.

ದಯಾನಂದರೂ ಒಳಗೆ ಬಂದರು. ಎದುರಿನಿಲ್ಲಿ ಕೃಷ್ಣಾಜಿನದ ಮೇಲೆ ಪದ್ಮಾಸನಸ್ಥರಾಗಿದ್ದ ವಿರಜಾನಂದರನ್ನು ಕಂಡರು. ಎಲುಬಿನ ಗೂಡಾಗಿದ್ದರೂ ಅಪೂರ್ವ ತೇಜಸ್ಸಿನಿಂದ ಕಂಗೊಳಿಸುವ ಆ ವೈರಾಗ್ಯ ಮೂರ್ತಿಗೆ ವಿನಮ್ರವಾಗಿ ದೀರ್ಘ ದಂಡ ಪ್ರಮಾಣವನ್ನು ಸಲ್ಲಿಸಿದರು. ವಿರಜಾನಂದ ದಂಡೀಶರು ದಯಾನಂದರ ನೆತ್ತಿಯನ್ನು ಸವರುತ್ತ ಪ್ರೇಮಪೂರ್ವಕವಾಗಿ ಆಶಿರ್ವದಿಸಿದರು.

ದಯಾನಂದರು ಆಶ್ಚರ್ಯ ಚಕಿತರಾಗಿ ನೋಡಿದರು. ಕಣ್ಣುಗಳೀಲ್ಲ, ಒಂದಕ್ಷರ ಓದಲು ಬರುವಂತಿಲ್ಲ.ಆದರೆ ಜ್ಞಾನದ ಜೀವಂತ ಮೂರ್ತಿಯಾಗಿದ್ದುಕೊಂಡು ತನ್ನ ವಿದ್ಯಾರ್ಥಿಗಳ ಎಲ್ಲ ಸಂಶಯಗಳನ್ನು ಸಮಸ್ತ ಶಾಸ್ತ್ರಗಳ ಪ್ರಮಾಣ ಸಹಿತ ನಿವಾರಿಸುವ ವಿರಜಾನಂದರ ಆ ದಿವ್ಯ ಪ್ರತಿಭೆಯನ್ನು ಕಂಡು ತಮ್ಮ ಹದಿನೈದು ವರ್ಷಗಳ ಪರಿಶ್ರಮ ಇಂದು ಸಾರ್ಥಕವಾಯಿತು  ಎಂದು ಅತ್ಯಂತ ಆನಂದಪರವಶರಾಗಿ ಆ ಗುರುದೇವರ ಚರಣಗಳೀಗೆ ತಮ್ಮನ್ನು ಅರ್ಪಿಸಿಕೊಂಡರು.

ದಯಾನಂದರ ಗುರುಭಕ್ತಿ :

ದಯಾನಂದರು ತಮ್ಮ ಅಸಾಧಾರಣ ಸೇವಾ ಭಾವನೆಯಿಂದಾಗಿ ಶೀಘ್ರವೇ ಅಚ್ಚುಮೆಚ್ಚಿನ ಶಿಷ್ಯರಾದರು. ದಿನವೂ ಗುರುವಿನ ಸ್ನಾನ ಹಾಗೂ ಇತರ ಉಪಯೋಗಕ್ಕೆ ಬೇಕಾದಷ್ಟು ನೀರನ್ನು  ಮಳೆ, ಛಳೀ ಎನ್ನದೇ ದಯಾನಂದರೇ ಯಮುನೆಯಿಂದ ಹೊತ್ತು ತರುತ್ತಿದ್ದರು. ಕಸ ಗುಡಿಸಿ ಸ್ವಚ್ಛಗೊಳಿಸುವ ಕೆಲಸವೂ ಇವರದೇ. ಈ ಯಾವ ಕೆಲಸವನ್ನೂ ದಯಾನಂದರು ಸಂಕೋಚವಿಲ್ಲದೆ ಮಾಡುತ್ತಿದ್ದರು. ದಯಾನಂದ ಅಪ್ರತಿಮ ಗುರುಭಕ್ತಿಯನ್ನು ಎತ್ತಿ ತೋರಿಸುವ ಅನೇಕ ಘಟನೆಗಳಿವೆ.

ಒಮ್ಮೆ ಪಾಠ ಹೇಳಿ ಕೊಡುತ್ತಿದ್ದಾಗ ವಿರಜಾನಂದರು ಅದೇಕೋ ದಯಾನಂದರ ಮೇಲೆ ಕೋಪಿಸಿಕೊಂಡು ತಮ್ಮ ಕೃಶವಾದ ಕೈಗಳಿಂದ ಬಲವಾಗಿ ಅವರ ಬೆನ್ನಿನ ಮೇಲೆ ಹೊಡೆದರು. ಇದರಿಂದ ವಿರಜಾನಂದರ ಕೈಗಳಿಗೆ ನೋವಾಯಿತು. ಸ್ವಲ್ಪ ಸಮಯದ ನಂತರ ದಯಾನಂದರು ಮೆಲ್ಲನೆ ಗುರುವಿನ ಬಳಿಗೆ ಬಂದು ವಿನಯದಿಂದ “ಗುರುದೇವಾ, ಈ ರೀತಿ ಹೊಡೆಯುವುದರಿಂದ ಕಲ್ಲನಂತಿರುವ ಈ ದೇಹಕ್ಕೆ ಏನಾಗುತ್ತದೆ ? ಇದರಿಂದ ನಿಮ್ಮ ಕೈಗಳೀಗೆ ನೋವು. ಕಾರಣ, ಇನ್ನು ಮುಂದೆ ದಂಡಿಸುವಾಗ ಕೈಯಿಂದ  ಹೊಡೆಯದೇ ಕೋಲನ್ನು  ಉಪಯೋಗಿಸಿ ” ಎಂದರು.

ದಯಾನಂದರ ಪ್ರಾರ್ಥನೆ ವ್ಯರ್ಥವಾಗಲಿಲ್ಲ.  ಇನ್ನೊಂದು  ಸಲ ವಿರಜಾನಂದರು ಅದೇಕೋ ದಯಾನಂದರ ಮೇಲೆ ಬಹುವಾಗಿ ಕೋಪಿಸಿಕೊಂಡು ತಮ್ಮ ಕೈ ಕೋಲಿನಿಂದ ಚೆನ್ನಾಗಿ ಥಳಿಸಿದರು. ಇದನ್ನು ಕಂಡ ಸಹಪಾಠಿಯಾದ ನಯನಸುಖನು “ಗುರುದೇವಾ !  ಶ್ರೇಷ್ಠ ಸಂನ್ಯಾಸಿಯಾದ ದಯಾನಂದರನ್ನು ಈ ರೀತಿಯಾಗಿ ಶಿಕ್ಷಿಸುವುದು ಸರಿಯಲ್ಲ. ಅವರನ್ನು ಗೌರವದಿಂದಲೇ ಕಾಣಬೇಕು” ಎಂದು ಹೇಳಿದ. ಪಾಠ ಮುಗಿದ ಮೇಲೆ ದಯಾನಂದರು ಆತನ ಅವಿನಯವನ್ನು ಆಕ್ಷೇಪಿಸುತ್ತ” ಗುರುದೇವರು ನನ್ನ ಮೇಲಿನ ದ್ವೇಷದಿಂದಲೇನಾದರೂ ಹೊಡೆಯುತ್ತಾರೆಯೋ? ಕುಂಬಾರನ ಮಣ್ಣಿನ ಮುದ್ದೆಯನ್ನು ಕುಟ್ಟಿ, ತಟ್ಟಿ, ಅದಕ್ಕೊಂದು ರೂಪ ಕೊಡುವಂತೆ , ಗುರುದೇವರೂ ಶಿಷ್ಯರನ್ನು ತಿದ್ದಿ, ತೀಡಿ, ಅವರ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ನೀನು ಹಾಗೆ ಮಾತನಾಡಬಾರದಾಗಿತ್ತು” ಎಂದರು.

ಮುಂದೆ ದಯಾನಂದರು ಮಹರ್ಷಿ  ಪದವಿಗೇರಿ ಜನತೆಗೆ ಗುರುವಾಗಿ ಬೋಧಿಸುವಾಗಲೂ ತಮ್ಮ ಭುಜದ ಮೇಲೆ ವಿರಜಾನಂದರ ದಂಡಪ್ರಯೋಗದಿಂದ ಉಂಟಾದ ಗಾಯದ ಕಲೆಯನ್ನು ತೋರಿಸುತ್ತ, “ಇದು ಸದಾ ನನಗೆ  ನನ್ನ ಗುರುದೇವರ ಉಪಕಾರ ಸ್ಮರಣೆ ಮಾಡಲು ಸಾಧನವಾಗಿದೆ” ಎಂದು ಹೇಳುತ್ತಿದ್ದರು.

ಕಾಶಿ ವಿಜಯ :

ವಿದ್ಯಾಭ್ಯಾಸ ಮುಗಿದ ಮೇಲೆ ಸ್ವಾಮಿ ದಯಾನಂದರು ತಮ್ಮ ಗುರುವಿನ ಆಜ್ಞೆಯಂತೆ ವೈದಿಕ ಜ್ಞಾನದ ಪ್ರಚಾರಕ್ಕಾಗಿ ದೇಶ ಸಂಚಾರವನ್ನು ಕೈಗೊಂಡರು. ಆಗ್ರಾ, ಆಜ್ಮೀರ್‌, ಜಯಪುರ, ಗ್ವಾಲಿಯರ್‌, ಮೀರತ್, ಹರಿದ್ವಾರ, ಕಾನ್ಪುರ, ಮುಂತಾದ ಕಡೆಗಳಲೆಲ್ಲಾ ಸುತ್ತಾಡಿ, ಅಲ್ಲಿನ ಎಲ್ಲ ಪಂಡಿತರನ್ನು ಶಾಸ್ತ್ರಾರ್ಥದಲ್ಲಿ ಸೋಲಿಸಿ ಜಯಶಾಲಿಯಾದರು.  ಹೋದಲ್ಲೆಲ್ಲಾ, “ಮೂರ್ತಿ ಪೂಜೆಯನ್ನು ವೇದಗಳಲ್ಲಿ ಹೇಳೀಲ್ಲ. ಮೂರ್ತಿಪೂಜೆಯನ್ನು ಮನುಷ್ಯ ಬುದ್ಧಿ ಒಪ್ಪುವುದಿಲ್ಲ. ದೇವರು ಎಲ್ಲಾ ಕಡೆ ಇದ್ದಾನೆ. ಅವನಿಗೆ ಇಂತಹುದೇ ಎಂದು ರೂಪವಿಲ್ಲ” ಎಂದರು. ಯಾವ ಮತದ ಬಗ್ಗೆಯೂ ಪಕ್ಷಪಾತವನ್ನೂ ತೋರಿಸದೇ ಎಲ್ಲ ಮತಗಳಲ್ಲಿಯೂ ಇರುವ ದೋಷಗಳನ್ನು ಎತ್ತಿ ತೋರಿಸಿದರು. ಶತಶತಮಾನಗಲಿಂದ ನಡೆದು ಬಂದಿರುವ ಅನೇಕ ಕ್ರೂರ ರೂಢಿಗಳನ್ನು ಅತ್ಯಂತ ಕಟುವಾಗಿ ಖಂಡಿಸಿದರು. ವೇದದಲ್ಲಿ ಹೇಳಿರುವ ಧರ್ಮ ಎಷ್ಟು ಹಿರಿದಾದದ್ದು ಎಂದು ವಿವರಿಸಿ, ಎಲ್ಲರೂ ಆ ಶ್ರೇಷ್ಠ ಧರ್ಮದ ಅಡಿಯಲ್ಲಿ ಒಂದುಗೂಡುವಂತೆ ಕರೆ ಇತ್ತರು.

ಎದ್ದೇಳೀ ! ನಿಮ್ಮ ಚರಿತ್ರೆಯ ಬಗೆಗೆ ಅಭಿಮಾನವನ್ನು ತಾಳಿ !"

ಹೀಗೆ ದಯಾನಂದರು ಜನತೆಯಲ್ಲಿ ಜಾಗೃತಿ ಯನ್ನುಂಟು ಮಾಡುತ್ತ ೧೮೬೯ನೇ ಇಸವಿ ಅಕ್ಟೋಬರ್‌ ೨೩ಕ್ಕೆ ಕಾಶಿನಗರಕ್ಕೆ ಬಂದರು. ಕಾಶಿಯ ಮಹಾ ವಿದ್ವಾಂಸರ ಜೊತೆಗೆ ವಾದ ನಡೆಯಿತು. ಐವತ್ತು- ಅರವತ್ತು ಸಹಸ್ರ ಜನರಿಂದ ಸಭೆಯು ಕಿಕ್ಕಿರಿದು ತುಂಬಿತ್ತು. ನಿಶ್ಚಿತ ಸಮಯಕ್ಕೆ ಸಭಾಧ್ಯಕ್ಷರಾದ ಕಾಶಿಯ ಮಹಾರಾಜ ಈಶ್ವರೀ ನಾರಾಯಣ ಸಿಂಹನು ಬಂದು ತನ್ನ ಆಸನದಲ್ಲಿ ಕುಳಿತನು. ಸ್ವಾಮಿ ದಯಾನಂದರೊಬ್ಬರೇ ಒಂದು ಕಡೆ. ಕಾಶೀಯ ಇಪ್ಪತ್ತೇಳು ಜನ ಉದ್ದಾಮ ಪಂಡಿತರು ಅವರಿಗೆ ಪ್ರತಿಯಾಗಿ ಮತ್ತೊಂದು ಕಡೆ.

ಶಾಸ್ತ್ರಾರ್ಥವು ಪ್ರಾರಂಭವಾಯಿತು. ವೇದಗಳು ಮೂರ್ತಿಪೂಜೆಯನ್ನು ಒಪ್ಪಿವೆಯೇ ಎಮದು ವಾದ  ನಡೆಯಿತು.  ಸ್ವಾಮಿ ದಯಾನಂದರ ವಾದದೆದುರು ಪಂಡಿತರು ಸೋಲನ್ನು ಒಪ್ಪಬೇಕಾಯಿತು. ಅಷ್ಟರಲ್ಲಿ ಮಾಧವಾಚಾರ್ಯ ಎಂಬುವರು ಎರಡು ಹಾಳೆಗಳನ್ನು ತೆಗೆದು ಒಂದು ಪ್ರಶ್ನೆಯನ್ನು ಕೇಲಿದರು.  ಸ್ವಾಮಿ ದಯಾನಂದರು ಆ ಹಾಳೆಗಳನ್ನು ಎತ್ತಿ ಓದಲು ಪ್ರಾರಂಭಿಸಿದರು. ಓದುವುದರಲ್ಲಿ ನಾಲ್ಕಾರು ನಿಮಿಷಗಳೂ ಕಳೆದಿರಬಹುದು. ಅಷ್ಟರಲ್ಲಿಯೇ ಕಾಶಿಯ ಮಹಾರಾಜನು, “ದಯಾನಂದರಿಗೆ ಪಂಡಿತರ ಪ್ರಶ್ನೆಗಳಿಗೆ ಉತ್ತರಿಸಲಾಗಲಿಲ್ಲ” ಎನ್ನುತ್ತಾ ಚಪ್ಪಾಳೆ ತಟ್ಟಿದನು. ಕಾಶೀ  ಪಂಡೀತರು :”ದಯಾನಂದರಿಗೆ ಉತ್ತರ ಕೊಡಲಾಗಲಿಲ್ಲ, ಕಾಶೀ ಪಂಡಿತರಿಗೆ ಅದ್ಬೂತ ವಿಜಯ, ದಯಾನಂದನಿಗೆ ಪರಾಜಯ” ಎಂದು ಕೂಗುತ್ತ ಎದ್ದರು.  ಪುಂಡುಪೋಕರಿಗಳು ಸ್ವಾಮಿ ದಯಾನಂದರ ಕಡೆಗೆ ಗುರಿಯಿಟ್ಟು ಕಲ್ಲು, ಚಪ್ಪಲಿ, ಸೆಗಣಿ ಮುಂತಾದವುಗಳನ್ನು ಎಸೆಯಲಾರಂಭಿಸಿದರು. ದಯಾನಂದರಿಗೆ ಅವು ತಗುಲಿ ಅನೇಕ ಗಾಯಗಳು ಆದವು. ಅಲ್ಲಲ್ಲಿ ರಕ್ತವೂ ತೊಟಕ್ಕಿತ್ತು. ಸ್ಥಿತ ಪ್ರಜ್ಞರಾದ ದಯಾನಂದರು ಎಲ್ಲವನ್ನೂ ಸಹಿಸಿಕೊಂಡು ಏನು ನಡೆದೇ ಇರಲಿಲ್ಲವೆಂಬಂತೆ ಇದ್ದು ಬಿಟ್ಟರು.  ಆದರೆ ಕಾಶೀಯ ಪ್ರಮುಖ ಪಂಡಿತರಾದ ತಾರಾಚರಣ ತರ್ಕರತ್ನ, ಬಾಲಶಾಸ್ತ್ರಿ ಮೊದಲಾದವು, “ನಿಜವಾಗಿಯೂ ಸ್ವಾಮಿ ದಯಾನಂದರ ಪಕ್ಷಪೂರ್ಣ ಸತ್ಯವಾದುದು. ಆದರೆ ಲೋಕಚಾರಕ್ಕೆ ವಿರುದ್ಧವಾಗಿ ಹೋಗುವ ನೈತಿಕ ಬಲ ನಮಗಿಲ್ಲದುದರಿಂದ ನಾವು ಅವರನ್ನು ವಿರೋಧಿಸುತ್ತೇವೆ” ಎಂದು ಬಿಚ್ಚು ಮನಸ್ಸಿನಿಂದ ಜನರೆದುರಿಗೆ ಹೇಳಿಯೇ ಬಿಟ್ಟರು.

ಕಾಶಿಯ ಮಹಾರಾಜನಿಗೆ ಶಾಸ್ತ್ರಾರ್ಥದಲ್ಲಿ ತಾನು ಮಾಡಿದ ಪಕ್ಷಪಾತದಿಂದಾಗಿ ಬಹಳ ಪಶ್ಚಾತಾಪವಾಗಿತ್ತು. ಆತನು ದಯಾನಂದರನ್ನು ಅತ್ಯಂತ ಆದರದಿಂದ ತನ್ನ ಅರಮನೆಗೆ ಬರಮಾಡಿಕೊಂಡು ತನ್ನಿಂದಾದ  ಅಪಚಾರಕ್ಕಾಗಿ ಕ್ಷಮೆ ಬೇಡಿದನು.

ಈ ರೀತಿ ನಿಜವಾದ ಅರ್ಥದಲ್ಲಿ, ಕಾಶಿಯ ಶಾಸ್ತ್ರಾರ್ಥದಲ್ಲಿ, ಪಾಂಡಿತ್ಯ ಹಾಗೂ ನೈತಿಕ ಎರಡೂ ದೃಷ್ಟಿಯಿಂದಲೂ ಸ್ವಾಮಿ ದಯಾನಂದರಿಗೇ ಅಮೋಘ ಜಯ ಲಭಿಸಿತು.

ಎಲ್ಲರನ್ನೂ ಒಂದೇ ಧರ್ಮದ ಅಡಿಯಲ್ಲಿ ಒಂದುಗೂಡಿಸುವುದು ಸ್ವಾಮಿ ದಯಾನಂದರ ಹೆಬ್ಬಯಕೆ. ಅದಕ್ಕಾಗಿ ಅವರು ಸತತವಾಗಿ ಪ್ರಯತ್ನಿಸಿದರು.

ರಾಷ್ಟ್ರಭಾಷೆಯ ಆದ್ಯ ಪ್ರವರ್ತಕ:

ಭಾಷೆಯ ಸಮಾಜವನ್ನು ಒಂದು ಗೂಡಿಸುವ ಒಳ್ಳೆಯ ಸಾಧನೆವೆಂಬುವುದು ಸ್ವಾಮಿ ದಯಾನಂದರ ಖಚಿತ ಅಭಿಪ್ರಾಯವಾಗಿತ್ತು. ಅದಕ್ಕಾಗಿ ಅವರು ಹಿಂದಿಗೆ ರಾಷ್ಟ್ರ ಭಾಷೆಯ ಸ್ಥಾನವನ್ನು ಕೊಡಬೇಕು ಎಂದು ಅಭಿಪ್ರಾಯಪಟ್ಟರು.

ದಯಾನಂದರು ಗುಜರಾತ್ ಪ್ರಾಂತದಲ್ಲಿ ಜನಿಸಿದ್ದರು. ಗುಜರಾತಿ ಭಾಷೆಯಲ್ಲಿ ಅವರಿಗೆ ಒಳ್ಳೆಯ ಪಾಂಡಿತ್ಯವೂ ಇತ್ತು. ಆದರೂ ಅವರು ಗುಜರಾತಿನಲ್ಲಿಯೂ ಕೂಡ ಹಿಂದಿಯಲ್ಲಿಯೇ ಉಪನ್ಯಾಸವನ್ನು ಕೊಡುತ್ತಿದ್ದರು.  ತಮ್ಮ ಎಲ್ಲ ಗ್ರಂಥಗಳನ್ನು ಹಿಂದಿಯಲ್ಲಿಯೇ ರಚಿಸಿದರು.

ದೇಶಭಕ್ತ :

ಮಹರ್ಷಿ ದಯಾನಂದರು ಸಮಸ್ತ ಮಾನವ ಜನಾಂಗದ ಕಲ್ಯಾಣವನ್ನು ಸಾಧಿಸಬಯಸಿದ್ದರೂ ಅವರ ಹೃದಯದಲ್ಲಿ ತಮ್ಮ ಮಾತೃಭೂಮಿಯಾದ ಭಾರತದ ಬಗ್ಗೆ ಅಪಾರ ಭಕ್ತಿ ಇತ್ತು. ಒಮ್ಮೆ ದಯಾನಂದರ ಉಪನ್ಯಾಸದಿಂದ ಪ್ರಭಾವಿತರಾದ ಆಂಗ್ಲ  ಅಧಿಕಾರಿಯೂ ದಯಾನಂದರಿಗೆ, “ನೀವು ಇಂಗ್ಲೇಂಡಿಗೆ ಧರ್ಮೊಪದೇಶವನ್ನು ಮಾಡಿ, ಅದರ ಎಲ್ಲಾ ಖರ್ಚಿನ ಭಾರವನ್ನು ನಾನೇ ವಹಿಸಿಕೊಳ್ಳುತ್ತೇನೆ” ಎಂದ. ದಯಾನಂದರು, “ಇನ್ನುಳೀದ ನನ್ನ ಅಲ್ಪ ಆಯುಷ್ಯದಲ್ಲಿ ನನ್ನ  ದೇಶಧ ಜನತೆಯಲ್ಲಿಯೇ ವೇದ ಜ್ಞಾನದ ಅರಿವನ್ನುಂಟು ಮಾಡಲು  ಪ್ರಯತ್ನಿಸುತ್ತೇನೆ. ಒಮ್ಮೆ ಇಲ್ಲಿ ಜ್ಞಾನದ ಜ್ಯೋತಿ  ಹೊತ್ತಿಕೊಂಡಿತೆಂದರೆ, ಅದರ ಪ್ರಕಾಶವು ಪಶ್ಚಿಮಕ್ಕೂ ಹರಿದುಕೊಂಡು ಬರುವುದು ನಿಶ್ಚಯ ಎಂದು ಹೇಳಿದರು.

ಪರದೇಶದಲ್ಲಿ ದೊರೆಯುವ ಅಗ್ಗದ ಕೀರ್ತಿಗೆ ಮನಸೋಲದೇ, ತಮ್ಮ ದೇಶದಲ್ಲಿಯೇ ಇದ್ದುಕೊಂಡು ದೇಶ ಬಾಂಧವರನ್ನು ಉದ್ಧರಿಸುವ ಅವರು ನಿಲುವಿನಲ್ಲಿ ಅವರ ಅಪಾರ ದೇಶಪ್ರೇಮ ವ್ಯಕ್ತವಾಗುತ್ತದೆ.

ಒಮ್ಮೆ ದಯಾನಂದರು ಪ್ರಚಂಡ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ನಿಮ್ಮ ಪೂರ್ವಜರು ಅನಾಗರಿಕ ಕಾಡು ಜನರಾಗಿರಲಿಲ್ಲ. ಇಡೀ ಪ್ರಪಂಚವನ್ನೇ ಜ್ಞಾನಜ್ಯೋತಿಯಿಂದ ಬೆಳಗಿದ ಮಹಾಪುರುಷರಾಗಿದ್ದರು. ನಿಮ್ಮ ಇತಿಹಾಸ ಸೊಲಿನ ಕಂತೆಯಲ್ಲ. ವಿಶ್ವಿಜಯೀ ವೀರರ ಯಶೋಗಾನವಾಗಿದೆ.  ನಿಮ್ಮ ವೇದೋಪನಿಷತ್ತುಗಳು ದನಕಾಯುವ ಗೊಲ್ಲರ ಹಾಡುಗಳಲ್ಲ, ಶ್ರೀರಾಮ, ಶ್ರೀ ಕೃಷ್ಣರಂತಹ ಮಹಾಪುರುಷರನ್ನು ರೂಪಿಸಿದ ಅಮರ ತತ್ವಗಳಾಗಿವೆ, ಏಳಿ! ಎದ್ದೇಳಿ ! ನಿಮ್ಮ ಚರಿತ್ರೆಯ ಬಗೆಗೆ ಅಭಿಮಾನವನ್ನು ತಾಳಿ ವರ್ತಮಾನ ನಿರ್ಮಾಣಕ್ಕೆ ಸ್ಪೂರ್ತಿಯನ್ನು ಪಡೆಯಿರಿ. ನಿಮ್ಮ ಪೂರ್ವಜರ ಬಗ್ಗೆ ನಿಮ್ಮಲ್ಲಿ ತಿರಸ್ಕಾರವನ್ನು ಹುಟ್ಟಿಸುವ ಈ  ಆಧುನಿಕ ಶಿಕ್ಷಣವನ್ನು ಧಿಕ್ಕರಿಸಿ, ಎಂದು ಗರ್ಜಿಸಿ ಹೇಳಿದರು.

ಸಶಸ್ತ್ರ ಕ್ರಾಂತಿಯ ಅಗ್ರದೂತ:

ಸ್ವಾಮಿ ದಯಾನಂದರ ದೇಶಭಕ್ತಿಯು ಕೇವಲ ಮಾತುಗಾರಿಕೆಯದಾಗಿರಲಿಲ್ಲ. ಅವರು ಕೃತಿವೀರರೂ ಆಗಿದ್ದರು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮವೂ ವಿಫಲವಾಯಿತು. ಅನಂತರ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗುವವರೆಗೆ (೧೮೮೫) ಸ್ವಾತಂತ್ರ್ಯ ಪ್ರೇಮವನ್ನು ಜನರ ಮನಸ್ಸಿನಲ್ಲಿ ಸದಾ ಜಾಗೃತವಾಗಿಟ್ಟ ಮಹಾತ್ಮರಲ್ಲಿ ಸ್ವಾಮಿ ದಯಾನಂದರು ಒಬ್ಬರು. ಇದಕ್ಕಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿದರು. ಎಲ್ಲ ದೇಶಿಯ ಅರಸರನ್ನು ಮತ್ತೊಮ್ಮೆ ಒಂದುಗೂಡಿಸುವುದಕ್ಕಾಗಿ, ಜೋಧಪುರ, ಉದಯಪುರ ಶಹಾಪೂರ ಮುಂತಾದ ಸ್ಥಾನಗಳಲ್ಲಿ ಆರ್ಯ ಸಮಾಜದ ಶಾಖೆಗಳನ್ನು ತೆರೆದು ಅನೇಕ ರಾಜರು ಆರ್ಯ ಸಮಾಜದ  ಅನುಯಾಯಿಗಳಾಗುವಂತೆ ಮಾಡಿದರು.  ಸಶಸ್ತ್ರ ಕ್ರಾಂತಿಯಿಂದಲೇ ಆಂಗ್ಲರನ್ನು ಭಾರತದಿಂದ ಹೊರದೋಡಬಲ್ಲೆವೆಂದು ಸ್ವಾಮಿ ದಯಾನಂದರ ಖಚಿತ ಅಭಿಪ್ರಾಯವಾಗಿತ್ತು. ಅದಕ್ಕಾಗಿ ಅವರು ಪ್ರಸಿದ್ಧ ಕ್ರಾಂತಿಕಾರಿ ಶ್ಯಾಮಜೀ ಕೃಷ್ಣವರ್ಮ  ಎಂಬುವವರನ್ನು ಸಶಸ್ತ್ರ ಕ್ರಾಂತಿಗೆ ಪ್ರೇರಣೆ  ಹಾಗೂ ತರಬೇತಿಯನ್ನು ಪಡೆಯಲು ಫ್ರಾನ್ಸಿಗೆ ಕಳಿಸಿದರು.

ದಯಾನಂದರು ಸ್ಥಾಪಿಸಿದ ಆರ್ಯಸಮಾಜ ಹಾಗೂ ಗುರುಕುಲಗಳು ದೇಶಭಕ್ತರನ್ನು ಸಿದ್ಧಗೊಳಿಸಿ, ಅವರಿಗೆ ಸಶಸ್ತ್ರ ಕ್ರಾಂತಿಗೆ ಪ್ರೇರಣೆ ನೀಡುವ ಕೇಂದ್ರಗಳಾಗಿದ್ದವು. ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಬಹಿರಂಗವಾಗಿಯೇ ಪ್ರಯತ್ನಿಸಿದ ಸ್ವಾಮಿ ದಯನಂದ, ಭಾಯಿ ಪರಮಾನಂದ, ಲಾಲಾ ಲಜಪತರಾಯ್, ಲಾಲಾ ಹರದಯಾಳ್, ಇವರೆಲ್ಲರೂ ಆರ್ಯ ಸಮಾಜದ ಪ್ರಮುಖ ಅನುಯಾಯಿಗಳಾಗಿದ್ದರು. ಪ್ರಸಿದ್ಧ ಕ್ರಾಂತಿಕಾರಿ ಯುವಕರಾಗಿದ್ದ ಗೇಂದಾಲಾಲ್ ದೀಕ್ಷಿತ, ರೋಶನ್ ಲಾಲ್, ರಾಮ ಪ್ರಸಾದ್ ಬಿಸ್ಮಿಲ್ ಮೊದಲಾದವರಿಗೆ ತಾವು ಆರ್ಯಸಮಾಜದವರೆಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಎನಿಸುತ್ತಿತ್ತು.

ಬ್ರಿಟಿಷರಿಗೆ ಸ್ವಾಮಿ ದಯಾನಂದರ ಬಗ್ಗೆ ಸಂದೇಹ ಪ್ರಾರಂಭದಿಂದಲೇ ಇತ್ತು. ಆದ್ದರಿಂದ ಸ್ವಾಮೀಜಿಯವರ ಹಿಂದೆ ಸದಾ ಗೂಢಚಾರರ ಗುಂಪು ಇದ್ದೇ ಇರುತ್ತಿತ್ತು. ಜೋಧಪುರದಲ್ಲಿ ಸ್ವಾಮೀಜಿಯವರಿಗೆ ವಿಷಯ ಹಾಕುವುದರಲ್ಲಿಯೂ ಬ್ರಿಟಿಷರ ಕೈವಾಢವಿತ್ತೆಂದು ತಿಳಿದುಬಂದಿದೆ.

ಭೀಮಬಲ :

ಸ್ವಾಮಿದಯಾನಂದರು ಬಹಳ ಬಲಶಾಲಿಗಳು. ಕಾಸಗಂಜಿನಲ್ಲಿದ್ದಾಗ ಅವರ ಅದ್ಭುತ ಶಕ್ತಿಯನುನ ಎತ್ತಿತೋರಿಸುವ ಘಟನೆಯೊಂದು ನಡೆಯಿತು.

ಒಮ್ಮೆ ದಾರಿಗಡ್ಡಲಾಗಿ, ಕೊಬ್ಬಿದ ಎರಡು ಗೂಳಿಗಳು ಭಯಂಕರವಾಗಿ ಕಾದಾಡುತ್ತಿದ್ದವು. ಅದನ್ನು ನೋಡುತ್ತಾ ದೂರ ನಿಂತ ನೂರಾರು ಜನರು ಭಯದಿಂದ ನಡುಗುತ್ತಿದ್ದರು. ಎಷ್ಟು ಹೊತ್ತಾದರೂ ಆ ಗೂಳಿಗಳು ಶಾಂತವಾಗುವ ಲಕ್ಷಣಗಳು ಕಂಡುಬರಲಿಲ್ಲ. ಆಗ ಜನರು ಗುಂಪನ್ನು ಸೀಳಿಕೊಂಡು ಸ್ವಾಮಿ ದಯಾನಂದರು ಗೂಳಿಗಳತ್ತ, ನಡೆದರು. ಅದನ್ನು ಕಂಡು ಬೆದರಿದ ಜನರು, “ಸ್ವಾಮೀಜಿ ! ಅವುಗಳ ಹತ್ತಿರ ಹೋದರೆ ಉಳಿಯುವುದಿಲ್ಲ. ಹಿಂದಕ್ಕೆ ಬನ್ನಿ” ಎಂದು ಕೂಗಿಕೊಂಡರು. ಆದರೆ ಸ್ವಾಮಿ ದಯಾನಂದರು ಅದನ್ನು ಲೆಕ್ಕಿಸದೇ ಮುನ್ನಡೆದು ಆ ಗೂಳಿಗಳನ್ನು ಸಮೀಪಿಸಿದರು. ಚನ್ನಾಗಿ ಕೊಬ್ಬಿದ ಆ ಒಂದೊಂದು ಗೂಳಿಯ ಕೊಂಬನ್ನು ಒಂದೊಂದು ಕೈಯಿಂದ ಹಿಡಿದು ಎರಡನ್ನೂ ಒಮ್ಮೆಲೆ ಜೋರಾಗಿ ಒಂದೊಂದು ದಿಕ್ಕಿಗೆ ತಳ್ಳೀಬಿಟ್ಟರು.  ಆ ಗೂಳಿಗಳೂ ಮತ್ತೇ ತಿರುಗಿ ಕೂಡ ನೋಡದೆ ಬೇರೆ ಬೇರೆ ದಿಕ್ಕಿನಲ್ಲಿ  ಹೊರಟು ಹೋದವು. ನೆರೆದಿದ್ದ ಜನ ಆ ಮೊಂಡು ಸಂನ್ಯಾಸಿ ಭೀಮ ಬಲವನ್ನು ಕಂಡು ಬೆರಗಾದರು.

ಸ್ವಾಮಿ ದಯಾನಂದರ ಶರೀರ ಇಷ್ಟೊಂದು ಬಲಯುತವಾಗಿದ್ದರಿಂದಲೇ ಭಯಂಕರವಾದ ಕಾಲಕೂಟ ವಿಷವನ್ನು ಕುಡಿದು ಅವರು ಒಂದು ತಿಂಗಳ ಕಾಲ ಬದುಕಲು ಸಾಧ್ಯವಾಯಿತು.

ಸಮಾಜ ಸುಧಾರಕ :

ಸ್ವಾಮಿದಯಾನಂದರು ಸಂನ್ಯಾಸಿಗಳಾಗಿದ್ದರೂ ಜನರ ದುಃಖ ದಾರಿದ್ಯ್ರವನ್ನು ಕಂಡು ಬಹುವಾಗಿ ಸೃಷ್ಟಿಯನ್ನು ಪ್ರೀತಿಸಿದರೆ ಭಗವಂತನನ್ನು ಪ್ರೀತಿಸಿದಂತೆ” ಎಂದು ಅವರು ಜನರಿಗೆ ಬೋಧಿಸುತ್ತಿದ್ದರು.

ಜನಜಾಗೃತಿಗಾಗಿ ದಯಾನಂದರು ಭಾರತದ ಬಹುಭಾಗವನ್ನು ಸಂಚರಿಸಿದರು. ಹೋದ ಹೋದಲೆಲ್ಲಾ ಅವರು ಜಾತಿ ಪದ್ಧತಿ, ವಿಗ್ರಹರಾಧನೆ, ಬಾಲ್ಯ ವಿವಾಹ ಹಾಗೂ ಕ್ರೂರ ಪದ್ಧತಿಗಳನ್ನು ಕಟುವಾಗಿ ಖಂಡಿಸಿದರು. ಜಾತಿ ಪದ್ಧತಿ ಬೇಡ, ಮಕ್ಕಳೀಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದು ತಪ್ಪು, ಹೆಂಗಸರಿಗೆ ಗಂಡಸರೊಂದಿಗೆ ಸಮನಾತೆಯಿರಬೇಕು. ಮನುಷ್ಯನ ಜೀವನದಲ್ಲಿ ಶುದ್ಧ ನಡತೆ ಮುಖ್ಯವೆಂದು ಉಪದೇಶ ಮಾಡಿದರು.  ಇದರಿಂದ ಜನತೆಯಲ್ಲಿ ಜಾಗೃತಿಯುಂಟಾಗತೊಡಗಿತು. ಕಾಲಕಳೆದಂತೆ ಹಿಂದು ಧರ್ಮದಲ್ಲಿಯೂ ಕೆಲವು ಕೆಟ್ಟ  ಪದ್ಧತಿಗಳು ಸೇರಿಕೊಂಡಿದ್ದವು. ಈ ಕೆಟ್ಟ ಪದ್ಧತಿಗಳೇ ಎದ್ದು  ಕಾಣುತ್ತಿದ್ದುದರಿಂದ ನಿಜವಾದ ಹಿಂದೂ ಧರ್ಮದ ಸತ್ವ ಶ್ರೇಷ್ಠತೆಗಳೂ ಮರೆಯಾಗಿದ್ದವು. ದಯಾನಂದರಿಂದ ನಿಜವಾದ ಹಿಂದು ಧರ್ಮದ ಬೋಧನೆ ಬೆಳಲಾರಂಭಿಸಿತು. ಆಂಗ್ಲ ಸಂಸ್ಕೃತಿಗೆ ಮರುಳಾಗಿ ಕ್ರೈಸ್ತ ಮತಕ್ಕೆ ಮತಾಂತರಗೊಳ್ಳಲಿದ್ದ ಸಹಸ್ರಾರು ಹಿಂದು ಯುವಕರು ವೈದಿಕ ಧರ್ಮದ ಅನುಯಾಯಿಗಳಾದರು. ಒಮ್ಮೆ ಹಿಂದು ಧರ್ಮವನ್ನು ಬಿಟ್ಟು ಬೇರೆ ಮತಕ್ಕೆ ಹೊದವರು ಮತ್ತೇ ಹಿಂದಕ್ಕೆ ಬರಲು ಆಶೆ ಪಡಬಹುದು. ಆದರೆ ಅದಕ್ಕೆ ಹಿಂದು ಧರ್ಮವನ್ನು ಅವಕಾಶ ಕೊಡುತ್ತಿರಲಿಲ್ಲ.  ಸ್ವಾಮಿದಯಾನಂದರು ಕ್ರೈಸ್ತ ಹಾಗೂ ಮುಸ್ಲಿಂ ಮತಕ್ಕೆ ಮತಾಂತರಗೊಂಡಿದ್ದ ಹಿಂದೂಗಳನ್ನು ಶುದ್ಧೀಕರಣಗೊಳಿಸಿ ಪುನಃ ತಮ್ಮ ಮಾತೃ ಧರ್ಮಕ್ಕೆ ಹಿಂತಿರುಗುವಂತೆ ಮಾಡಿದರು. ಇದೊಂದು ಭಾರತೀಯರ ಸಾಮಾಜಿಕ ಜೀವನದಲ್ಲಿ ದಯಾನಂದರು ಸಾಧಿಸಿದ ಕ್ರಾಶಂತಿ ಎಂದೇ ಹೇಳಬಹುದು.

ದಯಾನಂದರು ಹೆಂಗಸರ ಸಮಾನತ್ವದ ಬಗ್ಗೆ ಒತ್ತಿ ಹೇಳುತ್ತಿದ್ದರು. ಹೆಂಗಸರಿಗೆ ವಿದ್ಯೆ ಕೊಡದೇ ಅವರನ್ನು ಅಜ್ಞಾನದಲ್ಲಿ  ಇಟ್ಟುದುದರಿಂದಲೇ ಭಾರತವೂ ಇಂತಹ ದುರ್ಗತಿಗೆ ಇಳಿದಿದೆ ಎಂದು ಅವರು ಹೇಳುತ್ತಿದ್ದರು.  ಹೆಣ್ಣು ಮಕ್ಕಳು ಪರದೆಯಂತಹ ಹೀನ ಪದ್ದತಿಯಿಂದ ಬಂಧಿತರಾಗಿರುವವರೆಗೆ ಅಭ್ಯುದಯವು ಅವರ ಪಾಲಿಗೆ ಕನ್ನಡಿಯೊಳಗಿನ ಗಂಟೇ ಸರಿ. ಅವರು ಪರದೆಯನ್ನು ಹರಿದೊಗೆಯಬೇಕು. ಸೀತಾ-ಸಾವಿತ್ರಿಯರು ಪ್ರಾತಃ ಸ್ಮರಣೀಯರಾದುದು ಪರದೆಗಳ ಹಿಂದೆ ಸೇರಿಕೊಂಡುದರಿಂದಲ್ಲ, ತಮ್ಮ  ಉಜ್ವಲ ಚಾರಿತ್ರ್ಯ ಹಾಗೂ ಪಾತಿವ್ರತ್ಯದಿಂದಾಗಿ ಎಂದು ಬೋಧಿಸುತ್ತಿದ್ದರು.

ದಯಾನಂದರು ಅಸ್ಪ್ರಶ್ಯತೆಯ ಕಡು ವಿರೊಧಿಗಳಾಗಿದ್ದರು. “ಅಸ್ಪ್ರಶ್ಯತೆಯು ನಮ್ಮ ಸಮಾಜಕ್ಕೆ ತಗುಲಿದ  ಘೋರ ಶಾಪ. ಪ್ರತಿಯೊಂದು ಪ್ರಾಣಿಯಲ್ಲಿಯೂ ಪ್ರೀತಿಗೆ ಯೋಗ್ಯವಾದ ಒಂದು ಆತ್ಮವಿದೆ: ಪ್ರತಿಯೊಬ್ಬ ಮಾನವನದಲ್ಲಿಯೂ ಗೌರವಕ್ಕೆ ಯೋಗ್ಯವಾದ ಒಂದು ಆತ್ಮವಿದೆ ಎಂಬ ಮೂಲ ಸಿದ್ಧಾಂತವನ್ನು ಅರಿಯದವರು ವೈದಿಕ ಧರ್ಮವನ್ನೆಂದೂ ಅರ್ಥಮಾಡಿಕೊಳ್ಳಲಾರರು” ಎಂದು ಬೋಧಿಸಿದರು.

ವಿದ್ಯಾಭ್ಯಾಸ ಬೆಳೆಯದೆ ದೇಶ ಬೆಳೆಯುವುದಿಲ್ಲವೆಂದು ದಯಾನಂದರು ದೃಢವಾಗಿ ನಂಬಿದ್ದರು. ಆದರೆ ನಮ್ಮ ದೇಶದ ಶಿಕ್ಷಣ ಪದ್ದಥಿ ಪಾಶ್ಚಾತ್ಯರ ಶಿಕ್ಷಣ ಪದ್ಧತಿಯ ಅಚ್ಚಾಗಬಾರದು ಎಂದೂ ಅವರ ಅಭಿಪ್ರಾಯ. ಎಂಟು ವರ್ಷವಾದ ನಂತರ ತಂದೆ ತಾಯಿ ಮಕ್ಕಳನ್ನು ಶಾಲೆಗೆ ಕಳುಹಿಸಲೇಬೇಕು ಎಂದು ಕಾನೂನು ಮಾಡಬೇಕು: ಹುಡುಗರಿಗೆ, ಹುಡುಗಿಯರಿಗೆ ಪ್ರತ್ಯೇಕ ಗುರುಕುಲಗಳಿರಬೇಕು. ಅವರು ಅಲ್ಲಿಯೇ ವಾಸಿಸಬೇಕು: ರಾಜನ ಮಗನಾಗಲಿ, ಬಡ ರೈತನ ಮಗನಾಗಲಿ, ಗುರುಕುಲದಲ್ಲಿ ಒಂದೇ ಸ್ಥಾನ ಇರಬೇಕು: ಒಂದೇ ಬಗೆಯಾಗಿ ಕಷ್ಟಪಡುವಂತಿರಬೇಕು. ನಮ್ಮ ದೇಶದ ಸಂಸ್ಕೃತಿ, ವೇದಗಳಂತಹ ಮಹಾಗ್ರಂಥಗಳು ಇವೆಲ್ಲದರ ಪರಿಚಯ ವಿದ್ಯಾರ್ಥಿಗಳಿಗಾಗಬೇಕು.  ಜೊತೆಗೆ ಆಧುನಿಕ ಜಗತ್ತಿಗೆ ಅಗತ್ಯವಾದ ಗಣಿತ, ಖಗೋಲ ವಿಜ್ಞಾನ, ಭೂ ವಿಜ್ಞಾನ ಮೊದಲಾದ ವಿಷಯಗಳನ್ನೂ ಕಲಿಸಬೇಕು. ಇಂತಹ ತತ್ವಗಳಿಗೆ ಅನುಗುಣವಾಗಿ ಅವರು ಗುರುಕುಲಗಳನ್ನು ಸ್ಥಾಪಿಸಿದರು. ಇವುಗಳಲ್ಲಿ ಕಾಂಗಡಿ ಗುರುಕುಲ  ಇಂದೂ ಪ್ರಸಿದ್ಧ.

ಆರ್ಯ ಸಮಾಜದ ಸಂಸ್ಥಾಪಕ :

ನಮ್ಮ ನಂತರವೂ ಸಮಾಜ ಸುಧಾರಣೆಯ ಕಾರ್ಯವು ನಿರಂತರ ನಡೆಯುವಂತಾಗಲೆಂದು ಸ್ವಾಮಿ ದಯಾನಂದರು ೧೮೭೫ನೇ ಏಪ್ರೀಲ್ ೧೦ನೇ ದಿನದಂದು ಮುಂಬಯಿ ನಗರದಲ್ಲಿ ಆರ್ಯ ಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.  ಬರ ಬರುತ್ತ ಈ ಸಂಸ್ಥೆಯು ಬೃಹದಾಕಾರವಾಗಿ ಬೆಳೆದು ಹೊರದೇಶಗಳಿಗೂ ಕಾಲಿಟ್ಟಿತ್ತು.  ಅನೇಕ ಕೋಟಿ ಹಿಂದುಗಳು ಇದರಿಂದ ಪ್ರಭಾವಿತರಾದರು. ಆರ್ಯ ಸಮಾಜವು ಧರ್ಮ ಪ್ರಚಾ ಕೇಂದ್ರಗಳು, ಗುರುಕುಲಗಳು, ಶಾಲಾ ಕಾಲೇಜುಗಳು, ಮಹಿಳ ವಿದ್ಯಾಲಯಗಳೂ, ಅನಾಥಾಶ್ರಮ, ವಿಧವಾಶ್ರಮ ಮುಂತಾದವುಗಳ ಮೂಲಕ ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ , ಅದ್ವೀತಿಯ.

ಮಹಾಕೃತಿಸತ್ಯಾರ್ಥ ಪ್ರಕಾಶ

ಸ್ವಾಮಿ ದಯಾನಂದರು ನೀಡಿದ ಇನ್ನೊಂದು ಮಹತ್ತರ ಕೊಡುಗೆ, “ಸತ್ಯಾರ್ಥ ಪ್ರಕಶ”. ಹದಿನಾಲ್ಕು ಅಧ್ಯಾಯಗಳಿಂದ ಕೂಡಿದ ಬೃಹತ್ ಗ್ರಂಥ ಒಂದು ಮಹಾಕೃತಿ. ವೇದಗಳ ಅರ್ಥವನ್ನು ಸತ್ಯ ಅರ್ಥದಲ್ಲಿ ಹೇಳುವುದೇ” ಸತ್ಯಾರ್ಥ ಪ್ರಕಾಶ”. ಆದುದರಿಂದ ಈ ಗ್ರಂಥಕ್ಕೆ ವೇದಗಳೇ ಆಧಾರ.

ಸ್ವಾಮಿ ದಯಾನಂದರ ಉಪದೆಶಗಳನ್ನೆಲ್ಲ ಸ್ಪಷ್ಟವಾಗಿ ರೂಪಿಸುವ ಕೃತಿ ಇದು. ತಮ್ಮ ಉಪದೇಶಗಳಿಗೆ ವೇದಗಳಿಂದ ಆಧಾರವನ್ನು ಕೊಟ್ಟರು ಸ್ವಾಮಿಗಳೂ. ಹಿಂದೂಗಳಲ್ಲಿ ಮಾತ್ರವಲ್ಲದೇ ಇತರೆ ಧರ್ಮಗಳರವರಲ್ಲಿನ ಕೆಟ್ಟ ಪದ್ಧತಿಗಳನ್ನು ತೋರಿಸಿದರು. ದೇಶದ ಗುಲಾಮಗಿರಿಯನ್ನು ಕಿತ್ತೊಗೆಯುವಂತೆ ಭಾರತೀಯರಿಗೆ ವೀರ ಆಹ್ವಾನವನ್ನು ಕೊಟ್ಟರು.ಯಾರ ಧರ್ಮವೇ ಆಗಲಿ, ಸತ್ತ ಮೇಲೆ ಮನುಷ್ಯನಿಗೆ ಮೋಕ್ಷ ಸಿಕ್ಕುವ ದಾರಿಯಷ್ಟನ್ನೇ ತೋರಿಸಿದರೆ ಸಾಲದು. ಈ ಲೋಕದಲ್ಲಿ ಸಾರ್ಥಕವಾಗಿ ಹೇಗೆ ಬದುಕಬೇಕು ಎಂಬುವುದನ್ನೂ ತೋರಿಸಿಕೊಡಬೇಕು ಎಂದು ಘೊಷಿಸಿದರು.  ಧರ್ಮ, ಅರ್ಥ, (ಸಂಪತ್ತು), ಕಾಮ (ಆಸೆ) ಮತ್ತು ಮೋಕ್ಷ- ಈ ನಾಲ್ಕು ಪುರುಷಾರ್ಥಗಳನ್ನು  (ಜೀವನದ ಗುರಿಗಳನ್ನು) ಮನುಷ್ಯನ ಮುಂದೆ ಇಟ್ಟ ವೈದಿಕ ಧರ್ಮ ಸರಿಯಾದ ದಾರಿಯನ್ನು ತೋರಿಸಿತು ಎಂದು ವಿವರಿಸಿದರು.

ಆಗಿನ ಕಾದಲ್ಲಿ ನಮ್ಮ ಜನಕ್ಕೆ ವೇದಗಳ ವಿಷಯವೇ ತಿಳಿದಿರಲಿಲ್ಲ. ಸ್ವಾಮಿದಯಾನಂದರು ಜನರ ಈ ಆಜ್ಞಾನವನ್ನು ಹೋಗಲಾಡಿಸಲು ಬಹುವಾಗಿ ಶ್ರಮಿಸಿದರು. ಅವರು, ಮುಕ್ತಿಯು ಮಾನವನ ಮುಖ್ಯಗುರಿ. ಆದರೆ, ಈ ಲೋಕದಲ್ಲಿ ಸರಿಯಾಗಿ ಬಾಳದಿದ್ದರೆ ಮೋಕ್ಷೂ ಸಿಕ್ಕುವುದಿಲ್ಲ ಎಂಭುವುದನ್ನು ವೇದಗಳ ಆಧಾರಗಳಿಂದ ತಿಳೀಸಿಕೊಟ್ಟು, ವೇದಗಳತ್ತ ತಿರುಗುವಂತೆ ಜನರಿಗೆ ಅದೇಶ ನೀಡಿದರು.

ಭಯವನ್ನೇ ತಿಳೀಯದೇ ಸಂನ್ಯಾಸಿ :

ದಯಾನಂದರು ತಾವು ಸತ್ಯವೆಂದು ನಂಬಿದುದನ್ನು ಧೈರ್ಯದಿಂದ ಹೆಳುವ ನಿರ್ಭಿತ ಸಂನ್ಯಾಸಿಗಳಾಗಿದ್ದರು. ಒಮ್ಮೆ ಶೂಲ್ ಬ್ರೇಡ್‌ನೆಂಬ ಪಾದ್ರಿಯು, “ಕ್ರೈಸ್ತ ಮತವನ್ನು ಟೀಕಿಸಿದರೆ, ಸೆರೆಮನೆ ಸೇರಬೇಕಾದೀತು” ಎಂದು ಬೆದರಿಸಿದರು. ಅದಕ್ಕೆ ದಯಾನಂದರು, “ಅಯ್ಯಾ ಮಿತ್ರ! ಯೇಸು ಕ್ರಿಸ್ತನೇ ಸತ್ಯವನ್ನು ಹೇಳಿದುದಕ್ಕೆ ಶೂಲಕ್ಕೇರಬೇಕಾಗಲಿಲ್ಲವೇ? ಆದರೆ ಸತ್ಯವನ್ನು ನುಡಿಯಲು ನನಗೆ ಯಾರ ಭಯವೂ ಇಲ್ಲ” ಎಂದು ನಿರ್ಭಯವಾಗಿ ಹೇಳೀದರು.

ದಯಾನಂದರು ಹಿಂದುಗಳಲ್ಲಿದ್ದ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದಂತೆಯೇ ಇತರರಲ್ಲಿದ್ದ ತಪ್ಪುಗಳನ್ನೂ ಎತ್ತಿ ತೋರಿಸುತ್ತಿದ್ದರು. ಇದರಿಂದಾಗಿ ಅನೇಕಬಾರಿ ಇತರೆ ಮತಗಳವರ ಕೋಪವನ್ನು ಎದುರಿಸಬೇಕಾಯಿತು. ಜೋಧಪುರದಲ್ಲಿ ಅವರು ಸಭೆಯಲ್ಲಿ ಮಾತನಾಡುತ್ತಿದ್ದಾಗ ಅಲ್ಲಿನ ದಿವಾನನ ನೆಂಟನೊಬ್ಬ ಕತ್ತಿಯ ಮೇಲೆ ಕೈ ಇಟ್ಟು, ಎಚ್ಚರಿಕೆ. ನಮ್ಮ ಮತವನ್ನು ಟೀಕಿಸಿಯೇ:” ಎಂದ. ದಿವಾನನಂತೂ, “ನಿಮ್ಮನ್ನು ಕತ್ತರಿಸಿ ಹಾಕಬೇಕು” ಎಂದ. “ತಪ್ಪು ಎಲ್ಲಿದ್ದರೂ ತೋರಿಸುವವನೇ ನಾನು. ನಿನ್ನನಂತಹ ನರಿಗಳ ಕೂಗಿಗೆ ಹೆದರುವ ಮೊಲವಲ್ಲ” ಎಂದು ಹೇಳೀ ದಯಾನಂದರು ಅವನ ಮತದಲ್ಲಿನ ತಪ್ಪುಗಳನ್ನು ತೋರಿಸಿದರು.

ವಿಷವಿಟ್ಟವನಿಗೆ ಜೀವದಾನ:

ದೇವರಿಗೆ ರೂಪವಿಲ್ಲ, ಆದುದರಿಂದ ಮೂರ್ತಿಗಳನ್ನು ಪೂಜಿಸಬಾರದು ಎಂದು ದಯಾನಂದರ ವಾದ. ಇದು ಬಹಳ ಜನ ಹಿಂದುಗಳಿಗೆ ಸರಿ ಎನಿಸಲಿಲ್ಲ. ಆದರೆ ವಾದದಲ್ಲಿ ಅವರನ್ನು ಸೋಲಿಸುವ ಯೋಗ್ಯತೆಯೂ ಅವರಲ್ಲಿ ಯಾರಿಗೂ ಈರದಿದ್ದರಿಂದ ಅವರೆಲ್ಲರೂ ಗುಟ್ಟಾಗಿ ದಯಾನಂದರನ್ನು ಕೊಲ್ಲುವ ಯೋಚನೆ ಮಾಡತೊಡಗಿದರು. ಇತರೆ ಮತಗಳಿಗೆ ಸೇರಿದ್ದ ಸಹಸ್ರಾರು ಹಿಂದುಗಳು ದಯಾನಂದರಿಂದ ಶುದ್ಧೀಕರಣ ಹೊಂದಿ  ಪುನಃ ಹಿಂದುಗಳಾದುದನ್ನುಕಂಡು  ಆ ಮತಗಳವರಿಗೂ ರೋಷ. ಹೀಗೆ ದಯಾನಂದರು ಸ್ವಕೀಯ ಹಾಗೂ ಪರಕೀಯರು ಒಡ್ಡುವ ಗಂಡಾಂತರಗಳೊಳಗಿಂದಲೇ ಮುನ್ನಡೆಯಬೇಕಾಯಿತು.

ಅನೂಪಶಹರಿನಲ್ಲಿ ಹಿಂದುವೊಬ್ಬನು ದಯಾನಂದರಿಗೆ ಮೋಸದಿಂದ ತಾಂಬೂಲದಲ್ಲಿ ವಿಷ ಭರಿಸಿಕೊಟ್ಟು. ಅನಂತರ ಇದು ದಯಾನಂದರಿಗೆ ಗೊತ್ತಾಯಿತು.ಅವರು ನದಿಗೆ ಹೋಗಿ ಯೋಗ ಕ್ರಿಯೆಗಳಿಂದ ಹೊಟ್ಟೆಯೊಳಗಿದ್ದ ಆಹಾರವನ್ನು ಹೊರ ಹೊರಡಿಸಿ ವಿಷದಿಂದ ಉಳಿದುಕೊಂಡರು. ಅವರು ವಿಷ ಹಾಕಿದವನಿಗೆ ಚಕಾರ ಶಬ್ದವನ್ನು ಆಡಲಿಲ್ಲವಾದರೂ ಹಿಂದೂಗಳು ತಮ್ಮ ನಿಜವಾದ ಹಿತಚಿಂತಕನನ್ನು ಅರಿಯದೇ ಹೋದರಲ್ಲಾ ಎಂದು ಬಹುವಾಗಿ ನೊಂದುಕೊಂಡರು. ದಯಾನಂದರಿಗೆ ವಿಷ ವಿಟ್ಟುದ,ಅಲ್ಲಿನ ತಹಸಿಲ್ದಾರನೂ ಹಾಗೂ ದಯಾನಂದರ ಭಕ್ತನೂ ಆದ ಸಯ್ಯದ ಸಾಹೇಬನಿಗೆ ತಿಳಿದು ಆತನು ವಿಷ ಹಾಕಿದವನನ್ನು ಬಂಧಿಸಿಟ್ಟನು. ಇದನ್ನು ತಿಳಿದ ದಯಾನಂದರು ಅತ್ಯಂತ ಕುಪಿತರಾಗಿ, “ಅಯ್ಯಾ, ನಾನು ಈ ಪ್ರಪಂಚಕ್ಕೆ ಬಂದಿರುವುದು ಜನರನ್ನು ಬಂಧ ಮುಕ್ತರನ್ನಾಗಿ ಮಾಡಲಿಕ್ಕೆ: ಯಾರನ್ನು ಬಂಧಿಸಲಿಕ್ಕಲ್ಲ” ಎಂದರು. ಇದನ್ನು ಕೇಳಿದ ಸಯ್ಯದ ಸಾಹೆಬನ ಕಣ್ಣುಗಳಲ್ಲಿ ನೀರು ತುಂಬಿಬಂತು. ದಯಾನಂದ ಎಂಬುವುದು ಅವರಿಗೆ ತೀರ ಅನ್ವರ್ಥನಾಮವಾಗಿತ್ತು.

ಆದರೆ ವಿಧಿಯ ಗತಿಯೇ ಬೇರೆಯಾಗಿತ್ತು. ಕೊನೆಗೂ ಹಂತಕರ ಕೈ ಮೇಲಾಯಿತು. ಸ್ವಾಮಿದಯಾನಂದರು ಜೋಧಪುರಕ್ಕೆ ಹೋಗಿದ್ದರು.  ಅಲ್ಲಿನ ಮಹಾರಾಜ ಬಸವಂತಸಿಂಹನು ಬಹಳ ಕೆಟ್ಟ ನಡತೆಯುಳ್ಳವನು. ಆತನು ನನ್ಹಿಜಾನಳೆಂಬ ಯುವತಿಯಲ್ಲಿ ಅನುರಕ್ತನಾಗಿದ್ದನು. ಎಷ್ಟೋ ಬರಿ ತನಗೆ ಅವಮಾನವಾಗುವ ಹಾಗೆ ನಡೆದುಕೊಳ್ಳುತಿದ್ದ. ದಯಾನಂದರು ಆತ  ಮಾಡುತ್ತಿದ್ದುದು ತಪ್ಪು. ನಾಚಿಕೆಗೇಡು ಎಂದು ಬಹು ಸ್ಪಷ್ಟವಾಗಿ ಹೇಳೀದರು. ಇದರಿಂದ ನನ್ಹಿಜಾನಳಿಗೆ ಅವರ ವಿಷಯದಲ್ಲಿ ದ್ವೇಷ ಪ್ರಾರಂಭವಾಯಿತು.

೧೮೮೩ನೇ ಇಸವಿಯ ಸೆಪ್ಟೆಂಬರ ತಿಂಗಳಿನ ೩೦ರ ರಾತ್ರಿ ದಯಾನಂದರು ಎಂದಿನಂತೆ ಹಾಲು  ಕುಡಿದು ಮಲಗಿಕೊಂಡರು. ಸುಮಾರು ಅರ್ಧರಾತ್ರಿ ಮೀರಿರಬಹುದು. ಅವರಿಗೆ ಹೊಟ್ಟೆಯಲ್ಲಿ ವಿಪರೀತ  ನೋವು ಕಾಣಿಸಿಕೊಂಡಿತು. ಎಚ್ಚರಗೊಂಡು ದಯಾನಂದರಿಗೆ ಹೊಟ್ಟೆಯಲ್ಲಿ ವಿಷವು ಹೊಕ್ಕಿದೆ ಎಂದು ಗೊತ್ತಾಯಿತು. ಕೂಡಲೇ ಒಂದೆರಡು ಸಲ ವಾಂತಿಯನ್ನು ಮಾಡಿಕೊಂಡರು. ಆದರೆ ಪ್ರಯೋಜನವಾಗಲಿಲ್ಲ. ವಿಷವು ಆಗಲೇನರನರಗಳಲ್ಲಿ ಸೇರಿಕೊಂಡು ದೇಹವೆಲ್ಲ ವ್ಯಾಪಿಸಿ ಬಿಟ್ಟಿತು. ಹೊಟ್ಟೆ ಮತ್ತು ಎದೆಯಲ್ಲಿ ಭಯಂಕರ ಉರಿಯು ಪ್ರಾರಂಭವಾಯಿತು. ಮರುದಿನ ಆಲಿಮರ್ದಾನ ಖಾನನೆಂಬ ಡಾಕ್ಟರನನ್ನು ಚಕಿತ್ಸೆಗಾಗಿ ಕರೆಯಿಸಲಾಯಿತು.  ಈತನು ಕೊಟ್ಟ ಔಷಧಿಯಿಂದ ಅವರ ಸ್ಥಿತಿ ಇನ್ನೂ ಕೆಟ್ಟಿತು.   ಶರೀರದ ತುಂಬೆಲ್ಲ ಹುಣ್ಣೂಗಳಾಗಿ ನೆತ್ತರು ಸೋರತೊಡಗಿದತು. ಈ ಯಮಯಾತನೆಯು ಕೆಲವು ದಿನಗಳತನಕ ಇತ್ತು. ಮಹರಾಜನಿಗೂ ಅತೀವ ದುಃಖವಾಯಿತು. ಆದರೆ ಅವನು ಈಗ ಏನನ್ನೂ ಮಾಡುವಂತಿರಲಿಲ್ಲ. ದಯಾನಂದರನ್ನು ಚಕಿತ್ಸೆಗಾಗಿ ಬೇರೆ ಕಡೆಗೆ ಕಳೂಹಿಸುವಾಗ ಆತನೇ ಸ್ವಲ್ಪದೂರ ಪಲ್ಲಕಿಗೆ ಹೆಗಲು ಕೊಟ್ಟ.

ಒಂದು ದಿನ ಸ್ವಾಮಿ ದಯಾನಂದರು ಯಾರು ಇಲ್ಲದಾಗ, ತಮ್ಮ ಅಡಿಗೆ ಮಾಡುವ ದೌಢಮಿಶ್ರನನ್ನು ಕರೆದರು. ಒಳಗೆ ಬಂದ ಆತನಿಗೆ ದಯಾನಂದರ ಮೈಮೇಲಿನ ರಕ್ತಕಾರುವ ಗಾಯಗಳನ್ನು ಕಂಡು ದುಃಖವು ಒತ್ತರಿಸಿ ಬಂದಿತು. ಆತನು ಕೂಡಲೇ ದಯಾನಂದರ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು,. “ದ್ರೋಹಿಗಳ ಮಾತು ಕೇಳಿ ನಾನು ತಮಗೆ ಹಾಲಿನಲ್ಲಿ  ಅರೆದ ಗಾಜಿನ ಪುಡಿ ಹಾಗೂ ವಿಷವನ್ನು ಬೆರೆಸಿಕೊಟ್ಟೆ. ಭಗವಾನ! ನಾನು ಮಹಾಪಾಪ ಮಾಡಿದೆ, ಕ್ಷಮಿಸಿ” ಎಂದು ದೊಡ್ಡ ಧ್ವನಿಯಿಂದ ಅಳತೊಡಗಿದನು. ದಯಾನಂದರು ಆತನನ್ನು ಸಂತೈಸುತ್ತ, “ನನ್ನ ಹಣೆಯ ಬರಹವೇ ಹಾಗಿದೆ. ಅದರಲ್ಲಿ ನಿನ್ನದೇನು ತಪ್ಪು?” ಎಂದು ಹೇಳಿದರು.  ಆತನ ಕೈಯಲ್ಲಿ ಎರಡೂ ನೂರು ರೂಪಾಯಿಗಳನ್ನಿಟ್ಟರು. “ಇದು ರಾಜನಿಗೂ ಗೊತ್ತಾದರೆ ನಿನಗೆ ಕೆಡು ತಪ್ಪದು. ಆದ್ದರಿಂದ ದೂರ ನೇಪಾಳಕ್ಕೆ ಹೋಗಿ ತಲೆಮರೆಸಿಕೊಂಡಿರು. ಈ ಹಣ ನಿನ್ನ ಹಾದಿಯ ಖರ್ಚಿಗೆ ಇರಲಿ” ಎಂದು ಆತನನ್ನು ಸುರಕ್ಷಿತ ಸ್ಥಾನಕ್ಕೆ ಕಳಿಸಿಕೊಟ್ಟರು.

ಮುಂದೆ ಸ್ವಾಮಿ ದಯಾನಂದರನ್ನು ಚಕಿತ್ಸೆಗಾಗಿ ಅಬುಪರ್ವತಕ್ಕೆ, ಅಲ್ಲಿಂದ ಅಜ್ಮೀರಗೆ ಕರೆದೊಯ್ಯಲಯಿತು. ಯಾವ ಪ್ರಯತ್ನವೂ ಅವರನ್ನು ಉಳೀಸಿಕೊಳ್ಳಳು ಸಮರ್ಥವಾಗಲಿಲ್ಲ. ೧೮೮೩ರ ಅಕ್ಟೋಬರ ೩೦ರಂದು ದೀಪಾವಳಿ. ದಯಾನಂದರು ಕ್ಷೌರ ಮಾಡಿಸಿಕೊಂಡು ಶುಚಿಭೂರ್ತರಾಗಿ, ಶುಭ್ರವಾದ ಕೌಪೀನ್ ಧರಿಸಿ ಮಂಚದ ಮೇಲೆ ಮಲಗಿದರು. ತಮ್ಮೆಲ್ಲ ಶಿಷ್ಯಂದಿರನ್ನು ಕರೆಯಿಸಿಕೊಂಡು, ಮಂದಹಾಸ ಬೀರುತ್ತ ಅವರೆಲ್ಲರನ್ನೊಮ್ಮೆ ನೋಡಿದರು. ಅನಂತರ ಗಾಯತ್ರಿ ಮಂತವನ್ನು ಉಚ್ಚರಿಸುತ್ತ ಸಮಾಧಿಸ್ಥರಾದರು. ಸಂಜೆ ಆರು ಗಂಟೆಗೆ “ಓಂ” ಎಂಬ ಶಬ್ದವು ಅವರ ಮುಖದಿಂದ ಹೊರಟಿತು. ಅದರೊಡನೆ ಉಸಿರು ನಿಂತಿತು.

 

ದೂರ ನೇಪಾಳಕ್ಕೆ ಹೋಗಿ ತಲೆಮರೆಸಿಕೊಂಡಿರು

ದಯಾನಂದರು ಶ್ರೇಷ್ಠ ದಾರ್ಶನಿಕರು, ಅದ್ಭುತ ತಾರ್ಕಿಕರು, ಪ್ರಚಂಡ ವಾಗ್ಮೀಗಳೂ, ಶ್ರೇಷ್ಠ ದರ್ಜೆಯ ಲೇಖಕರು, ಸಮಾಜ ಸುಧಾರಕರು, ಉಜ್ವಲ ದೇಶಭಕ್ತರು, ಸಶಸ್ತ್ರ ಕ್ರಾಂತಿಯ ಅಗ್ರದೂತರು, ಪರೋಫಕಾರಿ, ತಪಸ್ವಿ, ಉಜ್ವಲ ಚಾರಿತ್ರ್ಯದ ಸಾಕಾರ ರೂಪ. ಸ್ವತಂತ್ರ್ಯವಾಗಿ , ನಿರ್ಭಯವಾಗಿ ಆಲೋಚನೆ ಮಾಡುವುದನ್ನು ಜನರಿಗೆ ಕಲಿಸಿದರು.

ದಯಾನಂದರು ಮಹಾನ್ ಋಷಿ, ಯೋಗಾಭ್ಯಾಸದಲ್ಲಿ ಸಿಗುತ್ತಿದ್ದ ಕಷ್ಟಭರಿತ ಜನಜೀವನಕ್ಕಿಳಿದು, ಬಂದರು.  ಇಲ್ಲಿ ಅವರಿಗೆ ದೊರಕಿದುದಾದರೂ ಏನು?  ದೊಣ್ಣೆ ಪೆಟ್ಟು, ಅವಮಾನ, ಬೈಗುಳ ಸುರಿಮಳೆ ಮತ್ತು ವಿಷ ಎಲ್ಲವನ್ನೂ ನಗುನಗುತ್ತಾ ಸ್ವೀಕರಿಸಿದರು. ಸಮಸ್ತ ಜನತೆಯ ಕಲ್ಯಾಣವನ್ನೇ ಬಯಸಿದರು.