ಪಿ.ಎನ್‌. ಕೃಷ್ಣಮೂರ್ತಿ ಅವರ ದಿವಾನಗಿರಿ

ದಿವಾನ್‌ ಶೇಷಾದ್ರಿ ಅಯ್ಯರ್ ಅವರು ನಿವೃತ್ತರಾದ ಮೇಲೆ, ಪಿ.ಎನ್‌. ಕೃಷ್ಣಮೂರ್ತಿ ೧೯೦೧ನೇ ಮಾರ್ಚ್‌ನಿಂದ ದಿವಾನರಾದರು. ಅವರು ೧೯೦೬ ನೇ ಮಾರ್ಚ್‌ವರೆಗೂ ಅಧಿಕಾರದಲ್ಲಿದ್ದರು. ಈ ಐದು ವರ್ಷದಲ್ಲಿ ಅವರು ಸಾಧ್ಯವಾದಷ್ಟು ಮೈಸೂರಿನ ಪ್ರಗತಿಯನ್ನು ಸಾಧಿಸಿದರು. ಅವರ ಕಾಲದಲ್ಲಿ, ೧೯೦೨ ರಲ್ಲಿ, ನಾಲ್ವಡಿ ಕೃಷ್ಣರಾಜ ಒಡೆಯರು ಮಹಾರಾಣೀ ರೀಜೆಂಟರಿಂದ ರಾಜ್ಯಾಧಿಕಾರ ಪದವಿಯನ್ನು ವಹಿಸಿಕೊಂಡರು. ಅವರು ಮೈಸೂರಿನಲ್ಲಿಯೇ ಹುಟ್ಟಿ, ಮೈಸೂರಿನಲ್ಲಿಯೇ ಬೆಳೆದು, ಕನ್ನಡವನ್ನು ಚೆನ್ನಾಗಿ ತಿಳಿದವರಾಗಿದ್ದುದರಿಂದ, ಅವರಿಗೆ ಜನರ ಆಶೆ ಆಕಾಂಕ್ಷೆಗಳು ಚೆನ್ನಾಗಿ ಮನದಟ್ಟಾಗಿದ್ದವು. ಆದರೂ ಅವರು ಬಹಳ ಮುಂದೆ ಹೋಗಲಾಗಲಿಲ್ಲ. ಅವರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆ ಶಾಂತವಾಗಿಯೇ ನಡೆದುಕೊಂಡು ಬಂದಿತು. ವೆಂಕಟಕೃಷ್ಣಯ್ಯನವರು ಸಾರ್ವಜನಿಕ ಮುಖಂಡರಾಗಿ ಸಲಹೆಗಳನ್ನು ಕೊಡತ್ತಿದ್ದರು. ಒಂದೊಂದು ವೇಳೆ ದಿವಾನ್‌ ಕೃಷ್ಣಮೂರ್ತಿಗಳು ಅಧಿಕಾರ ದರ್ಪವನ್ನು ತೋರಿಸಿ ಅಸೆಂಬ್ಲಿ ಸದಸ್ಯರ ಬಗ್ಗೆ ಅಗೌರವವಾಗಿ  ನಡೆದುಕೊಂಡರೆ, ಪ್ರಜಾಮುಖಂಡರಾದ ವೆಂಕಟಕೃಷ್ಣಯ್ಯನವರು ದಿವಾನರನ್ನು ಬಹಳ ಕಟುವಾಗಿ ಟೀಕಿಸುತ್ತಿದ್ದರು.

ಒಂದು ಸಾರಿ ‘ಮೈಸೂರು ಸ್ಟ್ಯಾಂಡರ್ಡ್’ ಎಂಬ ಬೆಂಗಳೂರಿನ ಪತ್ರಿಕೆಯ ಸಂಪಾದಕರಾಗಿದ್ದ ಟಿ. ಶ್ರೀನಿವಾಸ ಅಯ್ಯಂಗಾಯ್ರು (ಇವರು ಅಸೆಂಬ್ಲಿಯ ಸದಸ್ಯರೂ ಆಗಿದ್ದರು.) ಅಸೆಂಬ್ಲಿಯಲ್ಲಿ ಕೆಲವು ಅನಾನುಕೂಲವಾದ ಪ್ರಶ್ನೆಗಳನ್ನು ಹಾಕಿ ಬಹಳ ತೀಕ್ಷ್ಣವಾಗಿಯೇ ಮಾತನಾಡಿದರು. ಇದನ್ನು ದಿವಾನರು ಸಹನೆಯಿಂದ ಕೇಳದೆ,  ಶಾಂತಿ ಕಳೆದುಕೊಂಡು, ಆ ಸದಸ್ಯರನ್ನು “ಸಭೆ ಬಿಟ್ಟು ಹೊರಗೆ ಹೋಗಿ” ಎಂದು ಆಜ್ಞಾಪಿಸಿದರು. ಅಸೆಂಬ್ಲಿಯ ಸದಸ್ಯರಲ್ಲಿ ಬಹು ಮಂದಿಗೆ ಇದು ಬಹಳ ಖೇದವನ್ನೂ ಕ್ರೋಧವನ್ನೂ ಉಂಟುಮಾಡಿತು. ದಿವಾನರನ್ನು ಸದಸ್ಯರು ಉಗ್ರವಾಗಿ ಟೀಕಿಸಿದರು. ವೆಂಕಟಕೃಷ್ಣಯ್ಯನವರು ಎಲ್ಲರಿಗೂ ತಾಳ್ಮೆಯನ್ನು ಬೋಧಿಸಿ ‘ದಿವಾನರು ಹಾಗೆ ಮಾಡಬಾರದಾಗಿತ್ತು , ಆ ಸದಸ್ಯರನ್ನು ಒಳಗೆ ಕರೆಯಿಸಿ ಅವರಿಗೆ ಪಶ್ಚಾತ್ತಾಪವನ್ನು ಸೂಚಿಸಬೇಕು’ ಎಂದರು. ತಮ್ಮ ಮಿತ್ರರು ತಮ್ಮನ್ನು ಕೈಬಿಟ್ಟರಲ್ಲಾ ಎಂದು ದಿವಾನರಿಗೆ ಕೋಪ ಬಂದಿತು. ಈ ಕೋಪದ ಕಾರಣದಿಂದ ವೆಂಕಟಕೃಷ್ಣಯ್ಯನವರೊಡನೆ ಮಾತನ್ನೂ ಬಿಟ್ಟುಬಿಟ್ಟರು.

ವೆಂಕಟಕೃಷ್ಣಯ್ಯನವರು ಇದನ್ನು ಲಕ್ಷಿಸಲಿಲ್ಲ. ತಮ್ಮ ಪತ್ರಿಕೆಯಲ್ಲಿಯೂ ದಿವಾನರ ನಡತೆಯನ್ನು ಟೀಕಿಸಿ ಲೇಖನ ಬರೆದರು. ದಿವಾನರ ಪ್ರೈವೆಟ್‌ ಸೆಕ್ರಟರಿಗಳಾಗಿದ್ದ ಎಂ.  ಶಾಮರಾಯರು ವೆಂಕಟಕೃಷ್ಣಯ್ಯನವರ ಬಳಿ ಬಂದು, ‘ದಿವಾನ್‌ ಕೃಷ್ಣಮೂರ್ತಿಗಳು ತಮ್ಮನ್ನು ಆಹ್ವಾನಿಸಿದ್ದಾರೆ; ಮನೆಗೆ ಬನ್ನಿ’ ಎಂದು ಹೇಳಿದರು. “ಬರುವುದಿಲ್ಲ” ಎಂದು ವೆಂಕಟಕೃಷ್ಣಯ್ಯನವರು ಉತ್ತರ ಹೇಳಿ ಕಳುಹಿಸಿದರು.  ಹೀಗೆ ವೆಂಕಟಕೃಷ್ಣಯ್ಯನವರು ಸ್ನೇಹಿತರು, ಸ್ನೇಹಿತರಲ್ಲದವರು ಎಂಬ ಭೇದ ನೋಡದೆ, ಅನ್ಯಾಯವನ್ನು ಖಂಡಿಸುತ್ತಿದ್ದರು.