ಸರ್.ಟಿ. ಆನಂದ ರಾಯರ ದಿವಾನಗಿರಿ

ಸರ್.ಟಿ. ಆನಂದ ರಾಯರು ಮಾಧವರಾಯರ ಅನಂತರ ೧೯೦೯ ರಲ್ಲಿ ದಿವಾನರಾಗಿ ಬಂದರು. ಇವರೂ ಮೂರು ವರ್ಷ ೧೯೧೨ರ ವರೆಗೆ, ದಿವಾನರಾಗಿದ್ದರು. ಇವರ ಕಾಲದಲ್ಲಿಯೇ ಸರ್.ಎಂ. ವಿಶ್ವೇಶ್ವರಯ್ಯನವರು ಮೈಸೂರಿನ ಛೀಫ್‌ ಇಂಜಿನಿಯರಾಗಿ ಬಂದು ಕೃಷ್ಣರಾಜ ಜಲಾಶಯದ ಕೆಲಸವನ್ನು ಆರಂಭಿಸಿದರು. ಜನರ ಆರ್ಥಿಕಾಭ್ಯುದಯವನ್ನು ಸಾಧಿಸುವ ಸಲುವಾಗಿ ಮೈಸೂರ್ ಎಕನಾಮಿಕ್‌ ರ್ಕಾಪೆರನ್ಸ್‌ (ಮೈಸೂರು ಆರ್ಥಿಕ ಸಮ್ಮೇ ಳನ) ಅನ್ನು ವಿಶ್ವೇಶ್ವರಯ್ಯನವರ ಸಲಹೆ ಮೇಲೆ ಸ್ಥಾಪಿಸಲಾಯಿತು.

ವೆಂಕಟಕೃಷ್ಣಯ್ಯನವರು ಇವರ ದಿವಾನ್‌ಗಿರಿಯಲ್ಲಿ ತಮ್ಮ ಸಾರ್ವಜನಿಕ ಕಾರ್ಯವನ್ನು ಸಾಮಾನ್ಯವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಆನಂದರಾಯರು ಬಹಳ ಸೌಜನ್ಯಶೀಲರಾದಾಗ್ಯೂ ಇವರ ಕಾಲದಲ್ಲಿ ಬ್ರಿಟಿಷ್‌ ರೆಸಿಡೆಂಟರು ಪ್ರಬಲರಾಗಿ ಸರ್ಕಾರದ ನಡವಳಿಕೆಗಳಲ್ಲಿ ಕೈ ಹಾಕುತ್ತಿದ್ದರು.  ಉದಾಹರಣೆ: ೧೯೧೧ ರಲ್ಲಿ, ಮದ್ರಾಸಿನ ವಿ.ಎಸ್‌. ಶ್ರೀನಿವಾಸ ಶಾಸ್ತ್ರಿಯವರು  (ಈಚೆಗೆ ರೈಟ್ ಆನರಬಲ್‌) ಸಾಮಾಜಿಕ ಸುಧಾರಣಯೆ ಬಗ್ಗೆ ಬೆಂಗಳೂರು ಶಂಕರ ಮಠದ ಒಂದು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಬೇಕಾಗಿತ್ತು: ಸಭೆಗೆ ಮಾಧವರಾಯರೇ ಅಧ್ಯಕ್ಷರಾಗಬೇಕಾಗಿತ್ತು; ಆದರೆ ಈ ಸಭೆಯು ನಡೆಯಕೂಡದೆಂದು ಸರ್ಕಾರ ಪ್ರತಿಬಂಧಿಸಿತು.  ಈ ಘಟನೆ ಸಖೇದಾಶ್ಚರ್ಯವುಂಟುಮಾಡಿತು. ಮದ್ರಾಸಿನ ಪತ್ರಿಕೆಗಳಲ್ಲಿ ಅನೇಕ ತಿಂಗಳ ಕಾಲ ಇದರ ಬಗ್ಗೆ ದಿವಾನರನ್ನು ಟೀಕಿಸಿ ಲೇಖನಗಳು ಬರುತ್ತಿದ್ದುವು.