ಸರ್.ಎಂ. ಕಾಂತರಾಜೇ ಅರಸರು ಮುಂದಿನ ದಿವಾನರು. ಇವರು ಶ್ರೀಮನ್‌ ಮಹಾರಾಜರ ಸೋದರಮಾವಂದಿರು ಮತ್ತು ಭಾವಂದಿರು. ಚಾಮರಾಜ ಒಡೆಯರ ಮೊದಲನೆ ಮಗಳು ಶ್ರೀಮತಿ ಜಯಲಕ್ಷ್ಮಮ್ಮಣ್ಣಿಯನ್ನು ಇವರಿಗೆ ವಿವಾಹ ಮಾಡಿಕೊಟ್ಟಿತ್ತು. ಕಾಂತರಾಜೇ ಅರಸರು ಚಿಕ್ಕ ಅಧಿಕಾರದಿಂದ ಕ್ರಮಕ್ರಮವಾಗಿ ಮೇಲಕ್ಕೆ ಏರಿದವರು.

ಇವರು ಅಧಿಕಾರ ವಹಿಸಿದ ಕೆಲವು ದಿವಸಗಳಲ್ಲಿಯೇ ಯುದ್ಧ ಶಾಂತಿಯ ಸಂತೋಷ ಸಮಾರಂಭಗಳು ನಡೆದವು. ಇದೇ ಕಾಲದಲ್ಲಿಯೇ ಶ್ರೀ ಜಯಚಾಮರಾಜ ಒಡೆಯರು ಹುಟ್ಟಿದರು.

ನೂತನ ದಿವಾನರು ಆರ್ಥಿಕ ಸಮ್ಮೇಳನವನ್ನು ಪುನರ್ವ್ಯವಸ್ಥೆಗೊಳಿಸಿ ಅದನ್ನು ಬಲಪಡಿಸಿದರು. ನ್ಯಾಯವಿಧಾಯಕ ಸಭಾ ಸದಸ್ಯರ ಸಂಖ್ಯೆಯನ್ನು ೨೧ ರಿಂದ ೩೦ ಕ್ಕೆ ಏರಿಸಿದರು. ೧೯೧೯ರಲ್ಲಿ, ಮೊದಲನೇ ಸಾರಿ, ಮಿಡ್ಲ್ ಸ್ಕೂಲುಗಳಿಗೂ ಫೀಜನ್ನು ವಜಾ ಮಾಡಿ, ಮಿಡ್ಲ್‌ ಸ್ಕೂಲ್‌ ಅಂತ್ಯದವರೆಗೂ ವಿದ್ಯಾಭ್ಯಾಸ ಉಚಿತ ಮಾಡಿದರು. ಅದೇ ವರ್ಷ ಸಂಸ್ಥಾನದಲ್ಲಿ ಸ್ಕೌಟ್‌ ಚಟುವಟಿಕೆಯನ್ನು ಆರಂಭಿಸಲಾಯಿತು.

ಆಹಾರ ಪದಾರ್ಥಗಳ ಬೆಲೆ ಯುದ್ಧದ ಪರಿಣಾಮವಾಗಿ ಬಹಳವಾಗಿ ಏರಿದ್ದರಿಂದ ಸರ್ಕಾರದ ಬೊಕ್ಕಸದಿಂದ ಹಣ ಹೇರಳವಾಗಿ ವ್ಯಯವಾಗಿ, ಹಣಕಾಸಿನ ಸ್ಥಿತಿ ಯೋಚನೆಗೆ ಅವಕಾಶ ಉಂಟುಮಾಡಿತು. ಸರ್ಕಾರದ ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸಲು ಹಾಗೂ ಖರ್ಚನ್ನು ಕಡಿಮೆಮಾಡಲು ಸಲಹೆಗಳನ್ನು ಸೂಚಿಸುವ ಸಲುವಾಗಿ ದಿವಾನರು ಪುಟ್ಟಣ್ಣನವರ ಅಧ್ಯಕ್ಷತೆಯಲ್ಲಿ ಒಂದು ಕಮಿಟಿಯನ್ನು ಸ್ಥಾಪಿಸಿದರು.

ಅಸ್ಪೃಶ್ಯರ ಸ್ಥಿತಿಯನ್ನು ಉತ್ತಮ ಪಡಿಸಲು ಅನೇಕ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಯಿತು.

ಇವರ ಕಾಲದಲ್ಲಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಎರಡು ಮುಖ್ಯವಾದ ವಿಷಯಗಳ ಮೇಲೆ ಚರ್ಚೆ ನಡೆಯಿತು. ಒಂದು, ೧೯೦೮ರಿಂದ ಜಾರಿಯಲ್ಲಿದ್ದ ಪತ್ರಿಕಾ ಕಾನೂನನ್ನು ರದ್ದು ಮಾಡುವುದು. ಎರಡು, ಬ್ರಿಟಿಷ್‌ ಇಂಡಿಯಾದಲ್ಲಿ ಶಿಫಾರಸು ಮಾಡಿದ ಹಾಗೆ ಇಲ್ಲಿಯೂ ರಾಜ್ಯಾಂಗ ಸುಧಾರಣೆಗಳನ್ನು ಜಾರಿಗೆ ತರುವುದು. ಪ್ರಜಾಪ್ರತಿನಿಧಿ ಸಭೆಯ ಸದಸ್ಯರು ಇನ್ನೂ ಒಂದು ಮುಖ್ಯ ನಿರ್ಣಯವನ್ನು ಸರ್ಕಾರಕ್ಕೆ ಸೂಚಿಸಿದರು. ಅದೇನೆಂದರೆ, ಶ್ರೀಮನ್‌ ಮಹಾರಾಜರ ಎಕ್ಸಿಕ್ಯುಟಿವ್‌ ಕೌನ್ಸಿಲಿಗೆ ಒಬ್ಬ ಖಾಸಗಿ ಮನುಷ್ಯರನ್ನು ಸದಸ್ಯರನ್ನಾಗಿ ತೆಗೆದುಕೊಳ್ಳುವುದು.

ಹಿಂದುಳಿದ ಜನರಿಗೆ ಸರ್ಕಾರದ ನೌಕರಿಗಳಲ್ಲಿ ಸರಿಯಾದ ಪ್ರಾತಿನಿಧ್ಯ ದೊರಕಬೇಕೆಂಬುದು ಹಿಂದಿನಿಂದಲೂ ನಡೆದುಕೊಂಡ ಬಂದ ಸಂಪ್ರದಾಯ. ಇದು ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿಯೇ ಆರಂಭವಾಯಿತೆನ್ನಬಹುದು. ವಿಶ್ವೇಶ್ವರಯ್ಯನವರು ಅಧಿಕಾರ ಸ್ವೀಕರಿಸಿದ ಮೇಲೆ, ೧೯೧೪ರಲ್ಲಿಯೇ, ಅಮಲ್ದಾರರನ್ನು ನೇಮಿಸುವಾಗ ಹಿಂದುಳಿದವರಿಗೆ ಬ್ರಾಹ್ಮಣರಷ್ಟು ವಿದ್ಯೆಯ ಯೋಗ್ಯತೆ ಇರಬೇಕಾಗಿಲ್ಲವೆಂದು ಅಪ್ಪಣೆ ಆಗಿತ್ತು. ೧೯೧೫ರಲ್ಲಿ ಇದೇ ತತ್ವವನ್ನು ಶೇಕ್‌ ದಾರ್ ಅಥವಾ ರೆವಿನ್ಯೂ ಇನ್‌ಸ್ಪೆಕ್ಟರ್ ಕೆಲಸಗಳಿಗೂ ಅನ್ವಯಿಸಲಾಯಿತು. ೧೯೧೬ರಲ್ಲಿ ಶೇಕಡ ೨೫ ರಷ್ಟು ನೌಕರಿಗಳನ್ನು ವಿದ್ಯಾಯೋಗ್ಯತೆ ಹೊಂದದ ಹಿಂದುಳಿದವರಿಗೆ ಕೊಡಬೇಕೆಂದು ಸರ್ಕಾರ ಅಪ್ಪಣೆ ಮಾಡಿತು.

ಇದು ಸಾಲದೆಂದು ಹಿಂದುಳಿದ ಜನಕ್ಕೆ ತೋರಿತು.  ಅವರು ಚಳುವಳಿ ಆರಂಭಿಸಿ ಕೋಲಾಹಲ ಉಂಟುಮಾಡಿದರು. ಆದುದರಿಂದ, ಶ್ರೀಮನ್‌ ಮಹಾರಾಜರ ಸಲಹೆಯ ಮೇರೆಗೆ, ೧೯೧೮ರಲ್ಲಿ ಛೀಫ್‌ ಜಸ್ಟಿಸ್‌ ಸರ್ ಲೆಸ್ಲಿಮಿಲ್ಲರ್ ಅಧ್ಯಕ್ಷತೆಯಲ್ಲಿ ಖಾಸಗೀ ಸದಸ್ಯರನ್ನೊಳಗೊಂಡ ಒಂದು ಸಮಿತಿಯನ್ನು ನೇಮಿಸಲಾಯತಿ. ಸರ್ಕಾರದ ನೌಕರಿಗಳಲ್ಲಿ ಬ್ರಾಹ್ಮಣರು ಅತ್ಯಧಿಕ ಸಂಖ್ಯೆಯಲ್ಲಿದ್ದುದರಿಂದ, ಇದನ್ನು ಸರಿಪಡಿಸಿ ಎಲ್ಲಾ ಕೋಮುಗಳಿಗೂ ಸರ್ಕಾರಿ ನೌಕರಿಯಲ್ಲಿ ಸಾಕಾದಷ್ಟು ಪ್ರಾತಿನಿಧ್ಯ ದೊರೆಯುವಂತೆ ಯಾವ ಕಾರ್ಯಕ್ರಮಗಳನ್ನು ಕೈಕೊಳ್ಳುವುದು ಅವಶ್ಯಕ ಎಂಬುದನ್ನು ಆಲೋಚಿಸಿ ಸರ್ಕಾರಕ್ಕೆ, ಸೂಕ್ತ ಶಿಫಾರಸುಗಳನ್ನು ಮಾಡುವಗ ಸಲುವಾಗಿಯೇ ಈ ಸಮಿತಿಯನ್ನು ನೇಮಿಸಲಾಗಿದ್ದುದು. ಈ ಸಮಿತಿ ೧೯೧೯ರಲ್ಲಿ ವರದಿ ಒಪ್ಪಿಸಿತು. ಸರ್ಕಾರ ಈ ವರದಿಯನ್ನು ಪರಿಶೀಲಿಸಿ ೧೯೨೧ನೇ ತಿಂಗಳಿನಲ್ಲಿ ಒಂದು ಅಪ್ಪಣೆ ಹೊರಡಿಸಿತು. ಇದೇ ಪ್ರಸಿದ್ಧವಾದ ಮಿಲ್ಲರ್ ಕಮಿಟಿ ಆರ್ಡರ್.

ಇದರ ಪ್ರಕಾರ, ಸಾಕಾದಷ್ಟು ವಿದ್ಯಾ ಯೋಗ್ಯತೆ ಹೊಂದಿದ ಹಿಂದುಳಿದ ಅರ್ಜಿದಾರರು ಸಿಕ್ಕಿದರೆ, ಏಳು ವರ್ಷಗಳಲ್ಲಿ ಸರ್ಕಾರದ ಒಟ್ಟು ನೌಕರರ ಸಂಖ್ಯೆಯಲ್ಲಿ ೫೦ ರಷ್ಟು ನೌಕರಿಗಳನ್ನು ಹಿಂದುಳಿದ ವರ್ಗದ ನೌಕರರಿಂದ ತುಂಬಬೇಕು ಎಂಬುದು ಸರ್ಕಾರದ ಗುರಿ.  ಈ ನೌಕರಿಗಳಲ್ಲಿ ಕೆಳಗಿನ ನೌಕರಿಗಳನ್ನು ಸೇರಿಸಬಾರದು. ಆದುದರಿಂದ ಈ ಏಳು ವರ್ಷಗಳಲ್ಲಿ ಹೊಸದಾಗಿ ಸರ್ಕಾರಿ ನೌಕರಿಗಳಿಗೆ ಜನರನ್ನು ನೇಮಿಸುವಾಗ ಹಿಂದುಳಿದ ವರ್ಗದವರಿಂದಲೇ ಮೊದಲು ತೆಗೆದುಕೊಳ್ಳಬೇಕು. ಇದಕ್ಕಾಗಿ ಒಂದು ಕೇಂದ್ರ ರೆಕ್ಯೂಟ್‌ಮೆಂಟ್‌ ಬೋರ್ಡನ್ನು ರಚಿಸಲಾಯಿತು. ಸರ್ಕಾರದ ಒಬ್ಬ ಎಕ್ಸಿಕ್ಯುಟಿವ್‌ ಕೌನ್ಸಿಲರು ಇದರ ಅಧ್ಯಕ್ಷರು. ಕೆಲಸಕ್ಕಾಗಿ ಬಂದ ಎಲ್ಲಾ ಅರ್ಜಿಗಳನ್ನೂ ರಿಜಿಸ್ಟರ್ ಮಾಡತಕ್ಕದ್ದು. ಯಾವ ಇಲಾಖೆಯಲ್ಲಿ ನೌಕರಿ ಖಾಲಿ ಬೀಳುತ್ತದೆಯೋ, ಅಲ್ಲಿಗೆ ಅರ್ಜಿದಾರರನ್ನು ಕಳುಹಿಸತಕ್ಕದ್ದು. ಇದೆಲ್ಲಾ ಸರಿಯಾಗಿ ನಡೆಯುವಂತೆ ಇದೇ ಬೋರ್ಡು ಎಚ್ಚರಿಕೆ ಕಮಿಟಿ (ವಿಜಿಲೆನ್ಸ್‌ ಕಮಿಟಿ) ಯಾಗಿಯೂ ಇರತಕ್ಕದ್ದು.

ಇದರಿಂದ ಮುಂದುವರಿದವರೆಂದು ಎನಿಸಿಕೊಂಡ ಬ್ರಾಹ್ಮಣ ವಿದ್ಯಾವಂತ ಯುವಕರಿಗೆ ಬಹಳ ಕಷ್ಟವಾಯಿತೆಂದು ಹೇಳಬಹುದು. ಸರ್ಕಾರದಲ್ಲಿ ಆ ಕಾಲದಲ್ಲಿ ಒಟ್ಟು ಇದ್ದ ನೌಕರರ ಸಂಖ್ಯೆ ೨೦,೦೦೦ ಮಾತ್ರ, ಇದರಲ್ಲಿ ತಿಂಗಳಿಗೆ ೧೦೦ ರೂಪಾಯಿಗಿಂತ ಜಾಸ್ತಿ ಬರುತ್ತಿದ್ದವರ ಸಂಖ್ಯೆ ಒಂದು ಸಾವಿರ. ಉಳಿದ ೧೯,೦೦೦ ನೌಕರರು ೧೫ ರಿಂದ ೧೦೦ ರೂಪಾಯಿವರೆಗೆ ತಲಬು ತೆಗೆದುಕೊಳ್ಳುತ್ತಿದ್ದರು. ಪ್ರತಿ ವರ್ಷವೂ ಕಾಲೇಜುಗಳಿಂದಲೂ ಹೈಸ್ಕೂಲ್‌ಗಳಿಂದಲೂ ಸಾವಿರಾರು ಯುವಕರು. ಹೊರ ಬೀಳುತ್ತಿದ್ದರು. ಇವರಿಗೆಲ್ಲಾ ನೌಕರಿ ಎಲ್ಲಿ ಸಿಗಬೇಕು? ಮುಂದೆ ನಾಲ್ಕು ವರ್ಷಗಳಾದ ಮೇಲೆ ಕೊಟ್ಟ ಲೆಖ್ಖದಂತೆ, ೨೮,೦೦೦ ಯುವಕರು ಸರ್ಕಾರದ ಕೆಲಸಕ್ಕೆ ಅರ್ಜಿ ಹಾಕಿದರೆ, ಒಟ್ಟು ನೌಕರಿ ಸಿಕ್ಕಿದವರು ೨೪೧೦ ಮಾತ್ರ. ಇದರಲ್ಲಿಯೂ ಬಹು ಜನರು ಹಿಂದುಳಿದವರು, ಉಳಿದ ಬ್ರಾಹ್ಮಣ ಯುವಕರ ಪಾಡೇನು? ಇದರಿಂದ ಬ್ರಾಹ್ಮಣ ತಂದೆತಾಯಿಗಳಿಗೂ, ಕೆಲಸ ಸಿಗದ ಯುವಕರಿಗೂ ಅಸಮಾಧಾನವಾಗುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ.

ಈ ಅತೃಪ್ತಿ ಅಸಮಾಧಾನಗಳು ಮೈಸೂರಿನ ಪತ್ರಿಕೆಗಳಲ್ಲಿಯೂ ಪ್ರಜಾಪ್ರತಿನಿಧಿ ಸಭೆಯಲ್ಲಿಯೂ ಚೆನ್ನಾಗಿ ಕಾಣಿಸಿಕೊಂಡವು. ವೆಂಕಟಕೃಷ್ಣಯ್ಯನವರು ತೊಂದರೆಗೆ ಸಿಕ್ಕಿದ ಯುವಕರ ಪಕ್ಷ ವಹಿಸಿ ಸರ್ಕಾರದ ನೀತಿಯನ್ನು ಟೀಕಿಸಿದಾಗ, ಅವರನ್ನು ಬ್ರಾಹ್ಮಕಣ ಪಕ್ಷಪಾತಿಗಳೆಂದೂ, ಕೋಮುವಾರು ವಾದಿಗಳೆಂದೂ ಬ್ರಾಹ್ಮಣೇತರ ಮುಖಂಡರೂ ಅವರ ಪತ್ರಿಕೆಗಳೂ ಹೆಸರು ಹೇಳಿ ಖಂಡಿಸಿದ್ದರಲ್ಲಿ ಆಶ್ಚರ್ಯವಿಲ್ಲ. ವೆಂಕಟಕೃಷ್ಣಯ್ಯನವರು ಕೂಡ ಈ ಕಷ್ಟಕ್ಕೆ ಕಾರಣವಾದ ಮಿಲ್ಲರ್ ಕಮಿಟಿಯ ಆರ್ಡರಿಗೆ ವಿರುದ್ಧ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಿದ್ದುದು ಸಹಜವೇ ಆಗಿದೆ.

ಕಾಂತರಾಜೇ ಅರಸರೂ ವೆಂಕಟಕೃಷ್ಣಯ್ಯನವರೂ ಬಹಳ ಕಾಲದಿಂದ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದವರಾಗಿದ್ದಾಗ್ಯೂ, ಈ ವಿಷಯದಲ್ಲಿ ಬಹಳ ಭಿನ್ನಾಭಿಪ್ರಾಯ ಹೊಂದಿ, ಅಸೆಂಬ್ಲಿಯ ವಾತಾವರಣದಲ್ಲಿಯೂ ಇದು ಕಾಣಿಸಿಕೊಂಡಿದ್ದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಹೀಗೆ, ೧೯೧೯ರಿಂದ ೧೯೨೨ರ ವರೆಗೂ, ಎಂದರೆ ಕಾಂತರಾಜೇ ಅರಸರು ನಿವೃತ್ತರಾಗುವವರೆಗೂ , ವೆಂಕಟಕೃಷ್ಣಯ್ಯನವರು ವಿರೋಧ ಪಕ್ಷದಲ್ಲಿಯೇ ಇದ್ದರೆಂದು ಹೇಳಬಹುದು. ಬ್ರಾಹ್ಮಣೇತರ ಮುಖಂಡರು ತಮ್ಮದೇ ಪಂಗಡವನ್ನು ಕಟ್ಟಿಕೊಂಡುದೂ ಆ ಕಾಲದ ಒಂದು ವಿಶೇಷವಾಗಿದೆ. ವೆಂಕಟಕೃಷ್ಣಯ್ಯನವರು ಪ್ರಜಾಪ್ರತಿನಿಧಿ ಸಭೆಯಲ್ಲಿದ್ದರೂ, ಅಲ್ಪ ಸಂಖ್ಯೆ ಮುಖಂಡರಾಗಿಯೇ ಮುಂದುರಿದರು.

ವೆಂಕಟಕೃಷ್ಣಯ್ಯನವರಿಗೆ ಕಾಂತರಾಜೇ ಅರಸರ ದಿವಾನಗಿರಿಯ ಕಾಲದಲ್ಲಿ ೭೭-೭೮ ವರ್ಷ ವಯಸ್ಸು. ಇಷ್ಟು ವೃದ್ಧಾಪ್ಯದ್ಲಿ ಅನೇಕರು  ಎಲ್ಲಾ ಕೆಲಸಕಾರ್ಯಗಳಿಂದಲೀ ನಿವೃತ್ತರಾಗಿ ವಿಶ್ರಾಂತಿಯನ್ನನುಭವಿಸುತ್ತಾರೆ. ಆದರೆ ವೆಂಕಟಕೃಷ್ಣಯ್ಯನವರು ಹಾಗಿರದೆ ದಿನ ಬೆಳಗಾದರೆ ತಮ್ಮ ಸ್ವಂತ ಕರ್ತವ್ಯಗಳನ್ನೂ, ಸಾರ್ವಜನಿಕ ಕರ್ತವ್ಯಗಳನ್ನೂ ಕಾಲಕ್ಕೆ ಸರಿಯಾಗಿ ನಡೆಸಿಕೊಂಡು ಬರುತ್ತಾ, ಸ್ತೋತ್ರಕ್ಕೆ ಹಿಗ್ಗದೆ, ನಿಂದೆಗೆ ಕುಗ್ಗದೆ ನಿರ್ಲಿಪ್ತರಾಗಿ ಸೇವೆ ಮಾಡುತ್ತಲೇ ಇದ್ದರು. ಇದನ್ನು ಕಂಡು ಇವರ ರಾಜಕೀಯ ವಿರೋಧಿಗಳು ಕೂಡ ಇವರಲ್ಲಿ ಗೌರವವನ್ನಿಟ್ಟುಕೊಂಡಿದ್ದರು.

ವೆಂಕಟಕೃಷ್ಣಯ್ಯನವರು ಭೀಷ್ಮಾಚಾರ್ಯರಂತೆ ವಯೋವೃದ್ಧರೂ ಜ್ಞಾನವೃದ್ಧರೂ ಆಗಿ ಆ ಕಾಲದಲ್ಲಿ ಮೈಸೂರು ನಗರದ ಒಬ್ಬ ಆಚಾರ್ಯ ಪುರುಷರಂತೆ ಶೋಭಿಸುತ್ತಿದ್ದರು. ಮೈಸೂರು ನಗರಕ್ಕೆ, ಬಂದವರು ವೆಂಕಟಕೃಷ್ಣಯ್ಯನವರ ದರ್ಶನ ಮಾಡಿ, ಅವರೊಡನೆ ಸಮಭಾಷಣೆ ನಡೆಸದೆ, ಹೋಗುತ್ತಿರಲಿಲ್ಲ.

ಆ ಕಾಲದ ಪ್ರಸಿದ್ಧ ಪತ್ರಿಕೋದ್ಯೋಗಿ ಸೇಂಟ್‌ ಸಿಹಾಲ್‌ಸಿಂಗ್‌ ಅವರು (೧೯೨೨ ನೇ ಜನವರಿಯಲ್ಲಿ ಪ್ರಿನ್ಸ್‌ ಆಫ್‌ ವೇಲ್ಸ್‌ರವರ ಕೂಡ ಬಂದ ಪತ್ರಿಕಾ ಪ್ರತಿನಿಧಿಗಳಲ್ಲಿ ಒಬ್ಬರು) ಆಗ ಅಮೆರಿಕಾದಲ್ಲಿ ಒಂದು ಪತ್ರಿಕೆಯ ಪ್ರತಿನಿಧಿಯಾಗಿದ್ದರು. ಮೈಸೂರು ನಗರದಲ್ಲಿ ವೃದ್ಧ ಪತ್ರಿಕೋದ್ಯೋಗಿ ವೆಂಕಟಕೃಷ್ಣಯ್ಯನವರನ್ನು ಸಂದರ್ಶಿಸಿ, ಅವರೊಡನೆ ಸಂಭಾಷಣೆ ನಡೆಸಿ, ಬಹಳ ಸಂತೋಷಪಟ್ಟರು.

“ನೀವು ಬಹಳ ಹಿರಿಯರು. ಪರಿಉದ್ಧಾತ್ಮರು. ನಿಮ್ಮ ಕಾಲಿಗೆ ಬೀಳುತ್ತೇನೆ, ಆಶೀರ್ವದಿಸಿ”, ಎಂದು ಅವರು ನಮಸ್ಕರಿಸಿದರು.

“ನೀವು ಇಷ್ಟು ವರ್ಷ ಪತ್ರಿಕೋದ್ಯೋಗಿಯಾಗಿದ್ದಾಗ ವೆಂಕಟಕೃಷ್ಣಯ್ಯನವರನ್ನು ಸಂದರ್ಶಿಸಿ, ಅವರೊಡನೆ ಸಂಭಾಷಣೆ ನಡೆಸಿ, ಬಹಳ ಸಂತೋಷಪಟ್ಟರು.

“ನೀವು ಬಹಳ ಹಿರಿಯರು.ಪರಿಶುದ್ಧಾತ್ಮರು ನಿಮ್ಮ ಕಾಲಿಗೆ ಬೀಳುತ್ತೇನೆ, ಆಶೀರ್ವದಿಸಿ”, ಎಂದು ಅವರು ನಮಸ್ಕರಿಸಿದರು.

“ನೀವು ಇಷ್ಟು ವರ್ಷ ಪತ್ರಿಕೋದ್ಯೋಗಿಯಾಗಿದ್ದಾಗ್ಯೂ ಇನ್ನೂ ಇಷ್ಟು ಬಡತನದಲ್ಲಿಯೇ ಇದ್ದೀರಲ್ಲ” ಎಂದು ವೆಂಕಟಕೃಷ್ಣಯ್ಯನವರನ್ನು ಅವರು ಪ್ರಶ್ನಿಸಿದರು. “ನನ್ನ ಬಡತನವೇ ನನಗೆ ಸಿರಿತನ. ನನ್ನ ಆತ್ಮ ಸಿರಿವಂತವಾಗಿದೆ. ಅಷ್ಟೇ ಸಾಕಲು, ನನಗೆ” ಎಂದರು.

ಈ ಸುವರ್ಣ ವಚನವನ್ನು ಕೇಳಿ ಸೇಂಟ್‌ ನಿಹಾಲ್‌ ಸಿಂಗರು ಇನ್ನೂ ಮುಗ್ಧರಾದರು. ಕಣ್ಣಿನಿಂದ ಆನಂದಾಶ್ರುವನ್ನು ಸುರಿಸುತ್ತಿರುವಲ್ಲಿ “ನಾನು ಧನ್ಯನಾದೆ. ನಾನೊಬ್ಬ ಮಹಾ ತ್ಯಾಗಿಯ ದರ್ಶನ ಮಾಡಿದೆ” ಎಂದು ಪುನಃ ನಮಸ್ಕರಿಸಿ, ತೆರಳಿದರು.

ಒಂದು ಕಡೆ ವೃದ್ಧಾಪ್ಯ; ಇನ್ನೊಂದು ಕಡೆ ಬಡತನ; ಮತ್ತೊಂಧು ಕಡೆ, ಅನ್ಯಾಯದಿಂದ ಕಷ್ಟಪಡುತ್ತಿರುವವರ ಕಣ್ಣೀರು ಇವುಗಳ ಮಧ್ಯೆ ವೆಂಕಟಕೃಷ್ಣಯ್ಯನವರು ತಮ್ಮ ಮುಂದಿನ ದಿನಗಳನ್ನು ಆಶಾವಾದಿಗಳಾಗಿಯೇ ಕಳೆದರು.