ಆನಂದರಾಯರ ಅನಂತರ, ಅಧಿಕಾರಿಗಳ ಪರಂಪರೆಯನ್ನನುಸರಿಸಿ ವೆಂಕಟಕೃಷ್ಣಯ್ಯನವರ ಮಿತ್ರರಾದ ಎಚ್‌.ವಿ. ನಂಜುಂಡಯ್ಯನವರು ದಿವಾನರಾಗಬೇಕಾಗಿತ್ತು. ವೆಂಕಟಕೃಷ್ಣಯ್ಯನವರಿಗೂ ಇದು ಇಷ್ಟವಾಗಿತ್ತು. ಆದರೆ ಮಹಾರಾಜರು ಛೀಫ್‌ ಇಂಜಿನಿಯರಾಗಿದ್ದ ಎಂ. ವಿಶ್ವೇಶ್ವರಯ್ಯನವರನ್ನು ದಿವಾನ್‌ಗಿರಿಗೆ ಏರಿಸಿದರು. ಈ ನೇಮಕ ಮೈಸೂರು ಸಂಸ್ಥಾನದ ಜನರಿಗೂ ಹೊರಗಿನ ಜನರಿಗೂ ಬಹು ಸಂತೋಷವುಂಟುಮಾಡಿತು. ವಿಶ್ವೇಶ್ವರಯ್ಯನವರು ಮೈಸೂರಿನಲ್ಲಿಯೇ ಜನಿಸಿ, ಬೆಂಗಳೂರು ಸೆಂಟ್ರಲ್‌ ಕಾಲೇಜಿನಲ್ಲಿಯೇ ಓದಿ, ಬಿ.ಎ. ಡಿಗ್ರಿ ತೆಗೆದುಕೊಂಡು, ಪುನಾದ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ರ‍್ಯಾಂಕನ್ನು ಪಡೆದು, ಮುಂಬಯಿ ಆಧಿಪತ್ಯದಲ್ಲಿಯೇ ಸರ್ಕಾರದಲ್ಲಿ ಇಂಜಿನಿಯರ್ ಕೆಲಸಕ್ಕೆ ಸೇರಿ ಕ್ರಮ ಕ್ರಮವಾಗಿ ಸೂಪರಿಂಟೆಂಡಿಂಗ್‌ ಇಂಜಿನಿಯರ್ ಪದವಿಗೇರಿದರು. ಮುಂದೆ ಛೀಫ್‌ ಇಂಜಿನಿಯರ್ ಪದವಿ ಅಲ್ಲಿ ಇವರಿಗೆ ಸಿಕ್ಕುವ ಹಾಗಿರಲಿಲ್ಲ. ಏಕೆಂದರೆ, ಆಗ ಛೀಫ್‌ ಇಂಜಿನಿಯರ್ ಪದವಿ ಬಿಳಿಯವರಿಗೇ ಮೀಸಲಾಗಿತ್ತು. ಆದುದರಿಂದ ವಿಶ್ವೇಶ್ವರಯ್ಯನವರು ತಮಗೆ ಬೊಂಬಾಯಿ ಆಧಿಪತ್ಯದಲ್ಲಿ ಇನ್ನೂ ಸರ್ವಿಸಿದ್ದರೂ ಅದಕ್ಕೆ ೧೯೦೮ ರಲ್ಲಿ ರಾಜೀನಾಮೆಯಿತ್ತು, ಇಂಗ್ಲೆಂಡ್‌ ಯೂರೋಪ್‌ ಮತ್ತು ಅಮೆರಿಕಾಕ್ಕೆ ಸಂಚಾರ ಹೊರಟು ಹೋದರು. ಇವರು ಹಿಂದೆಯೇ, ೧೮೯೮ರಲ್ಲಿ, ಜಪಾನಿನಲ್ಲಿಯೂ ಸಂಚರಿಸಿದ್ದರು. ಪುಣೆಯ ದೇಶಭಕ್ತರಾದ ರಾನಡೆ. ಗೋಖಲೆ ಮುಂತಾದವರ ಸಂಪರ್ಕ ಸಹವಾಸದಿಂದ ಇವರಲ್ಲಿ ಅತ್ಯುಜ್ವಲ  ದೇಶಾಭಿಮಾನ ಉಂಟಾಯಿತು. ರಾಜಕೀಯ ಕ್ಷೇತ್ರ ಬಿಟ್ಟು ಆರ್ಥಿಕ ಕ್ಷೇತ್ರದಲ್ಲಿ ಸೇವೆ ಮಾಡಬೇಕೆಂದು ಹಂಬಲಿಸಿ ವಿದೇಶಗಳಲ್ಲಿ ಸಂಚರಿಸಿ ತಮ್ಮ ಮನಸ್ಸನ್ನೂ ಬುದ್ಧಿಯನ್ನೂ ವಿಕಾಸಗೊಳಿಸಿದ್ದರು. ಇವರು ಯೂರೋಪಿನಲ್ಲಿ ಸಂಚರಿಸುತ್ತಿದ್ದಾಗಲೇ ಇವರಿಗೆ ದಿವಾನ್‌ ಆನಂದರಾಯರು ಮೈಸೂರಿಗೆ ಛೀಫ್‌ ಇಂಜಿನಿಯರಾಗಿ ಒಂದು ಸ್ವಪ್ರಾಂತ್ಯದಲ್ಲಿ ಸೇವೆ ಮಾಡಬೇಕೆಂದು ಆಹ್ವಾನ ಕಳುಹಿಸಿದ್ದರು. ಈ ಆಹ್ವಾನದ ಫಲವಾಗಿಯೇ ಇವರು ಮೈಸೂರಿಗೆ ಛೀಫ್‌ ಇಂಜಿನಿಯರಾಗಿ ಬಂದದ್ದು. ಮಹಾರಾಜರು ಇವರ ದೇಶಾಭಿಮಾನವನ್ನೂ ಪ್ರಗತಿ ಮನೋಭಾವವನ್ನೂ ನವೀನತೆಯನ್ನೂ, ದಕ್ಷತೆಯನ್ನೂ ಕಂಡು ಇವರನ್ನೇ ದಿವಾನರನ್ನಾಗಿ ನೇಮಿಸಿದರು.

ವಿಶ್ವೇಶ್ವರಯ್ಯನವರ ಕಾಲದಲ್ಲಿ, ಏಳು ವರ್ಷ ಕಾಲದಲ್ಲಿ, ಮೈಸೂರು ಅತ್ಯಂತ ಪ್ರಗತಿ ಸಾಧಿಸಿ, ಮಾದರಿ ಸಂಸ್ಥಾನವೆಂಬ ಖ್ಯಾತಿ ಪಡೆಯಿತು. ಇವರ ಕಾಲದಲ್ಲಿ ಸಾರ್ವಜನಿಕರ ವಿಷಯದಲ್ಲಿಯೂ, ಪತ್ರಿಕೆಗಳ ವಿಷಯದಲ್ಲಿಯೂ ಸರ್ಕಾರ ಉದಾರ ನೀತಿ ಅನುಸರಿಸಿತು.

ವೆಂಕಟಕೃಷ್ಣಯ್ಯನವರಿಗೆ ಆಗಲೇ ೭೦ ವರ್ಷದ ಹತ್ತಿರ ಹತ್ತಿರ ಆಗಿತ್ತು. ಆದರೂ ದೃಢಕಾಯರಾಗಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದರು. ದಿವಾನ್‌ ವಿಶ್ವೇಶ್ವರಯ್ಯನವರು ಇವರಲ್ಲಿ ಗುರುಭಾವವನ್ನಿಟ್ಟುಕೊಂಡು, ಆಗಾಗ್ಗೆ ತಮ್ಮ ಮನೆಗೆ ಕರೆದುಕೊಂಡು ಹೋಗಿ, ತಮ್ಮ ವೃದ್ಧ ಮಾತೆಯವರ ಭೇಟಿ ಮಾಡಿಸುತ್ತಿದ್ದರು.  ಈ ವೃದ್ಧ ಮಾತೆಯವರ ವಿಷಯವಾಗಿ ವೆಂಕಟಕೃಷ್ಣಯ್ಯನವರು ಹೀಗೆ ಬರೆದಿದಾರೆ :

“ಈಕೆ ಬಹಳ ಪುಣ್ಯಶಾಲಿ. ಮಗನಾದ ವಿಶ್ವೇಶ್ವರಯ್ಯನವರಿಗೆ ಆಗಾಗ್ಗೆ ಉಪದೇಶ ಮಾಡುತ್ತಾ, ‘ನಿನ್ನನ್ನು ಸ್ತೋತ್ರ ಮಾಡುವವರಿಂದ ದೂರ ಇರು, ನಿನ್ನನ್ನು ಟೀಕಿಸುವವರನ್ನು ನಿನ್ನ ಹಿತಚಿಂತಕರೆಂದು ತಿಳಿದುಕೋ. ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಯಲ್ಲಿಯೂ, ಇತರ ಕಡೆಯಲ್ಲಿಯೂ ನಿನ್ನನ್ನು ಟೀಕಿಸಿದರೆ, ಅವರನ್ನು ನಿನ್ನ ಹಿತೈಷೆಗಳೆಂದು ತಿಳಿದುಕೋ. ಅವರ ಮೇಲೆ ಕೋಪಿಸಿಕೊಳ್ಳಬೇಡ ಎಂದು ಹೇಳುತ್ತಿದ್ದರು.”

ವಿಶ್ವೇಶ್ವರಯ್ಯನವರು ಕೂಡ ವೆಂಕಟಕೃಷ್ಣಯ್ಯನವರನ್ನು ಚೆನ್ನಾಗಿ ತಿಳಿದು ಕೊಂಡಿದ್ದರು. ಅವರು ಪ್ರಜಾಮುಖಂಡರು, ಅನಾಥ ಬಂಧುಗಳು, ಪತ್ರಿಕಾಕರ್ತರು; ಆದುದರಿಂದ ಅನೇಕರು ಬಂದು ಅವರ ಹತ್ತಿರ ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ; ಸಾರ್ವಜನಿಕರೂ, ಸರ್ಕಾರದ ಕೆಳಗಿನ ನೌಕರರೂ ಮೇಲಿನ ಅಧಿಕಾರಿಗಳಿಂದ ಆಗುವ ಹಿಂಸೆಗಳನ್ನು ಹೇಳಿಕೊಳ್ಳುತ್ತಾರೆ; ಅದನ್ನು ಅವರು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ; ಮತ್ತು ಮೇಲಧಿಕಾರಿಗಳಿಗೆ ಕಾಗದ ಬರೆಯುತ್ತಾರೆ. ವೆಂಕಟಕೃಷ್ಣಯ್ಯನವರ ಉದ್ದೇಶ ಶುದ್ಧವಾದುದು. ಕಷ್ಟದಲ್ಲಿರ ಉವ ಜನರಿಗೆ ಬೇಗ ಪರಿಹಾರ ದೊರೆಯಲೆಂದು ಅವರು ಸದಾ ಪ್ರಯತ್ನಿಸುತ್ತಿರುತ್ತಾರೆ ಎಂಬುದಾಗಿ ತಿಳಿದುಕೊಂಡಿದ್ದರು.

ವಿಶ್ವೇಶ್ವರಯ್ಯನವರ ಈ ಉದಾತ್ತ ಮನೋಭಾವದಿಂದ, ವೆಂಕಟಕೃಷ್ಣಯ್ಯನವರಿಗೂ ಅವರಿಗೂ, ಪರಸ್ಪರ ಸ್ನೇಹ , ಗೌರವ, ಇದ್ದೇ ಇದ್ದುವು. ವಿಶ್ವೇಶ್ವರಯ್ಯನವರಿಗೆ ಹೃತ್ಪೂರ್ವಕವಾದ ಸಹಕಾರವನ್ನು ಕೊಡುತ್ತಿದ್ದರು. ೧೯೧೨ರಲ್ಲಿ ‘ಸಂಪದಭ್ಯುದಯ’ ಎಂಬ ಕನ್ನಡ ದಿನಪತ್ರಿಕೆಯನ್ನು ಸ್ಥಾಪಿಸಿದರು.  ಹೀಗೆಯೇ ‘ವೆಲ್ತಾ ಆಫ್‌ ಮೈಸೂರ್’, ‘ಸಾಧ್ವಿ’ ಇವುಗಳನ್ನು ಸ್ಥಾಪಿಸಿ ನಡೆಸಿಕೊಂಡು ಬಂದರು. ವಿಶ್ವೇಶ್ವರಯ್ಯನವರೊಡನೆ ಈ ಪತ್ರಿಕೆಗಳು ದೇಶಾಭ್ಯುದಯ ಕಾರ್ಯಗಳಲ್ಲಿ ಪೂರ್ತಿಯಾಗಿ ಸಹಕರಿಸಿದವು.

ಇದೇ ಕಾಲದಲ್ಲಿ ಡಿ.ವಿ. ಗುಂಡಪ್ಪನವರು ಇಂಗ್ಲಿಷಿನಲ್ಲೂ, ಕನ್ನಡದಲ್ಲೂ “ಕರ್ಣಾಟಕ” “ಜನಜೀವನ” ಎಂಬ ಪತ್ರಿಕೆಗಳನ್ನು ಪ್ರಭಾವಶಾಲಿಯಾಗಿ ನಡೆಸುತ್ತಿದ್ದರು.

ವಿಶ್ವೇಶ್ವರಯ್ಯನವರು ವೆಂಕಟಕೃಷ್ಣಯ್ಯನವರ ಟೀಕೆಗಳನ್ನು ಹೇಗೆ ತೆಗೆದುಕೊಳ್ಳಬೇಕೋ ಹಾಗೆಯೇ ತೆಗೆದುಕೊಳ್ಳುತ್ತಿದ್ದರು. ವಿಶ್ವೇಶ್ವರಯ್ಯನವರು ೧೯೧೬ರಲ್ಲಿ ಲೆಜಿಸ್ಲೆಟವ್‌ ಕೌನ್ಸಿಲಿನಲ್ಲಿ ಎಂ. ವೆಂಕಟಕೃಷ್ಣಯ್ಯನವರನ್ನು ಈ ರೀತಿ ಪ್ರಶಂಸೆ ಮಾಡಿದರು:

“ಮುವತ್ತು ವರ್ಷಗಳಿಗಿಂತ ಹೆಚ್ಚಾಗಿ ಜನತಾಸೇವೆಯನ್ನು ಪ್ರಾಮಾಣಿಕವಾಗಿಯೂ ಗೌರವಯುತವಾಗಿಯೂ ಮಾಡಿರುವ ಶ್ರೀ ಎಂ.  ವೆಂಕಟಕೃಷ್ಣಯ್ಯನವರು ತಮ್ಮ ಜೀವಮಾನದಲ್ಲೆಲ್ಲಾ ಸರ್ಕಾರದ ವಿರುದ್ಧವಾಗಿಯೇ ಹೋರಾಡಿದ್ದಾರೆ.

“ಆದರೆ ಈಗ ನನ್ನ ಆಡಳಿತದ ಬಗ್ಗೆ ಒಂದು ರೀತಿಯಾದ ಅಭಿಮಾನವನ್ನು ತೋರಿಸುತ್ತಿದ್ದಾರೆ. ಆದರೂ ಅವರು ತಮ್ಮ ಹಿಂದಿನ ಅಭ್ಯಾಸವನ್ನು ಬಿಡಲಾರರು. ಸರ್ಕಾರದ ಮೇಲೆ ಯಾರದಾದರೂ ದೂರು ಅಥವಾ ಅಸಮಾಧಾನ ಬಂದರೆ ಅವರು ಅದನ್ನು ಎತ್ತಿ ಹಿಡಿದು ವಾದಿಸುತ್ತಾರೆ. ಅದು ಸರಿಯೇ ತಪ್ಪೇ ಎಂಬುದನ್ನು ವಿಚಾರಿಸಲು ಅವರು ನಿಧಾನ ಮಾಡುವುದಿಲ್ಲ. ಯಾವನಾದರೂ ಸರ್ಕಾರಿ ಅಧಿಕಾರಿಯ ವಿರುದ್ಧ ಅಕ್ರಮ ಯಾವುದಾದರು ಇದೆ ಎಂಬ ಸೂಚನೆ ಬಂದರೆ ಸಾಕು, ಆ ತತ್‌ಕ್ಷಣ ಅವರ ಮನಸ್ಸಿಗೆ ಅದು ನಿಜವೆಂದು ತೋರಿ ಅದನ್ನು ನಂಬುತ್ತಾರೆ.

“ಸರ್ಕಾರದ ಇಲಾಖೆಯಲ್ಲಿ ಖರ್ಚು ಹೆಚ್ಚಾದರೆ ಅದು ದುಂದುಗಾರಿಕೆ ಎಂದು ಅವರಿಗೆ ಅನ್ನಿಸುತ್ತದೆ. ಆದರೆ ಅವರಿಗೆ ನಿಜಸ್ಥಿತಿಯನ್ನು ತಿಳಿಸಿ ಅವರ ಮನಸ್ಸನ್ನು ಒಪ್ಪಿಸಿದರೆ, ಅವರು ಉದಾರದಿಂದಲೂ ಬಿಚ್ಚಿದ ಹೃದಯದಿಂದಲೂ ತಾವು ಬರೆದದ್ದಕ್ಕಿಂತ ಸತ್ಯಾಂಶ ಬೇರೆ ಎಂದು ಒಪ್ಪುತ್ತಾರೆ. ಇದು ಶ್ರೀ ವೆಂಕಟಕೃಷ್ಣಯ್ಯನವರ ನಿಜವಾದ ದೊಡ್ಡ ಗುಣ.”

ಇಷ್ಟು ದಿವಾನರುಗಳಲ್ಲಿ ವೆಂಕಟಕೃಷ್ಣಯ್ಯನವರ ನಿಜವಾದ ಗುಣವನ್ನು ಕಂಡು ಹಿಡಿದು ಮೆಚ್ಚಿದವರೆಂದರೆ ವಿಶ್ವೇಶ್ವರಯ್ಯನವರೇ. ಇಬ್ಬರೂ ಉದಾರ ಚರಿತರು. ಒಬ್ಬರ ಹೃದಯವನ್ನು ಇನ್ನೊಬ್ಬರು ತಿಳಿದುದರಲ್ಲೇನು ಆಶ್ಚರ್ಯ?

ಇಪ್ಪತ್ತನೇ ಶತಮಾನದ ದ್ವಿತೀಯ ದಶಕದಲ್ಲಿ ವಿಶ್ವೇಶ್ವರಯ್ಯನವರ ದಿವಾನಗಿರಿಯ ಕಾಲವನ್ನು ಸ್ವ ರ್ಣಯುಗವೆಂದು ಕರೆಯಬಹುದು. ೧೯೧೮ನೆಯ ಇಸವಿ ಮುಗಿಯುವ ಹೊತ್ತಿಗೆರ ವಿಶ್ವೇಶ್ವರಯ್ಯನವರ ದಿವಾನಗಿರಿಯೂ ಮುಗಿಯುತ್ತ ಬಂದಿತು. ಇವರ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಾದವು. ಹಿಂದೆ ಪ್ರಜಾಪ್ರತಿನಿಧಿ ಸಭೆ ವರ್ಷಕ್ಕೆ ಒಂದು ಸಾರಿ ದಸರೆಯ ಸಮಯದಲ್ಲಿ ಸೇರುತ್ತಿತ್ತು. ವಿಶ್ವೇಶ್ವರಯ್ಯನವರು ಈ ಸಭೆ ವರ್ಷಕ್ಕೆ ಎರಡಾವರ್ತಿ ಸೇರುವಂತೆ ಮಾಡಿದರುಇ. ಒಂದು ಸಾರಿ ದಸರೆಯಲ್ಲಿ  (ಅಕ್ಟೋಬರ್ ತಿಂಗಳ ಸುಮಾರಿನಲ್ಲಿ), ಎರಡನೆಯ ಸಾರಿ ರ್ಜೂ ತಿಂಗಳಲ್ಲಿ (ಮಹಾರಾಜರ ವರ್ಧಂತಿಯ ಸಮಯದಲ್ಲಿ). ಸದಸ್ಯರಿಗೆ ಪ್ರಶ್ನೆಗಳನ್ನೂ, ಉಪ ಪ್ರಶ್ನೆಗಳನ್ನೂ ಹಾಕುವ ಅಧಿಕಾರ ಕೊಡಲಾಯಿತು. ಸರ್ಕಾರದ ಹಣಕಾಸಿನ ಆದಾಯ ವೆಚ್ಚವನ್ನು ಚರ್ಚಿಸಲೂ ಅವಕಾಶ ಕೊಡಲಾಯಿತು.

ನ್ಯಾಯವಿಧಾಯಕ ಸಭೆಗೆ ಇದುವರೆಗೂ ಪ್ರಜಾಪ್ರತಿನಿಧಿ ಸಭೆಯಿಂದ ಚುನಾಯಿತರಾಗುವ ಸಂಖ್ಯೆ ಎರಡು ಇದ್ದುದನ್ನು ನಾಲ್ಕಕ್ಕೆ ಏರಿಸಿದರು. ಹೆಚ್ಚು ಜನರಿಗೆ ಅಸೆಂಬ್ಲಿ ಸದಸ್ಯರನ್ನು ಚುನಾಯಿಸುವ ಓಟಿನ ಅಧಿಕಾರವನ್ನು ಕೊಡಲಾಯಿತು. ನ್ಯಾಯವಿಧಾಯಕ ಸಭೆಯ ಸದಸ್ಯರ ಅಧಿಕಾರಗಳನ್ನೂ ಹೆಚ್ಚಿಸಲಾಯಿತು. ಸದಸ್ಯರು ಹೆಚ್ಚು ಸ್ವಾತಂತ್ರ್ಯದಿಂದ ಸರ್ಕಾರಕ್ಕೆ ಸಲಹೆ ಕೊಡಲು ಅವಕಾಶ ದೊರೆಯಿತು.

ವಿದ್ಯಾಭ್ಯಾಸ ಬಹಳ ಮುಂದರಿಯಿತು. ಇವರ ಕಾಲದಲ್ಲಿಯೇ ವಿದ್ಯಾರ್ಥಿಗಳು ಹೈಸ್ಕೂಲಿನ ಅಂತ್ಯದಲ್ಲಿ ಮೈಸೂರಿನಲ್ಲಿಯೇ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗೆ ಕೂಡುವ ಅವಕಾಶವಾಯಿತು. ಮದ್ರಾಸು ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಶನ್‌ ಪರೀಕ್ಷೆಗೆ ಕಳುಹಿಸುವುದನ್ನು ನಿಲ್ಲಿಸಲಾಯಿತು. ಮೈಸೂರು ವಿಶ್ವ ವಿದ್ಯಾಲಯ ಸ್ಥಾಪನೆಯಾಯಿತು. ಇಂಜಿನಿಯರಿಂಗ್‌ ಸ್ಕೂಲು ಮತ್ತು ಕಾಲೇಜು ಸ್ಥಾಪನೆಯಾದವು.

ಕೈಗಾರಿಕೆಗಳು ಅಭಿವೃದ್ಧಿಗೊಂಡವು. ಗಂಧದೆಣ್ಣೆ ಕಾರ್ಖಾನೆ, ಸಾಬೂನು ಕಾರ್ಖಾನೆ, ರೇಷ್ಮೆ ಕಾರ್ಖಾನೆ, ಗೌರ್ನ್‌‌ಮೆಂಟ್‌ ಇಂಡಸ್ಟ್ರಿಯಲ್‌ ವೆರ್ಕ್‌ಷಾಪ್‌, ಭದ್ರಾವತಿ ಕಬ್ಬಿಣದ ಕಾರ್ಖಾನೆ, ಮೈಸೂರು-ಅರಸೀಕರೆ ರೈಲ್ವೆ ಬಡಾವಣೆ ಇವೇ ಮುಂತಾದ ಪ್ರಗತಿಯ ಕಾರ್ಯಗಳು ನಡೆದವು.

ಸರ್ಕಾರದ ಸೆಕ್ರೆಟರಿಯೆಟ್ಟನ್ನು ಸುಧಾರಿಸಲಾಯಿತು. ಸರ್ಕಾರದ ಕೆಲಸಗಳು ಇನ್ನೂ ಹೆಚ್ಚು ಚುರುಕಿನಿಂದ ನಡೆಯುವಂತೆ ವ್ಯವಸ್ಥೆ ಮಾಡಲಾಯಿತು.

ಮೈಸೂರಿನ ಹೊರಗೆ, ಬ್ರಿಟಿಷ್‌ ಇಂಡಿಯಾದಲ್ಲೂ ಇಂಗ್ಲೆಂಡಿನಲ್ಲೂ, ಅಖಿಲ ಪ್ರಪಂಚದಲ್ಲೂ, ಅನಿರೀಕ್ಷಿತವಾದ ಬದಲಾವಣೆಗಳಾದವು. ೧೯ ನೆಯ ಶತಮಾನದ ಅಂತ್ಯದಲ್ಲಿ ಇಂಗ್ಲೆಂಡಿನ ಮತ್ತು ಯೂರೋಪಿನ ಜನರು ಪ್ರಗತಿಯ ದಾರಿಯಲ್ಲಿ ಅತ್ಯಂತ ದೊಡ್ಡ ಘಟ್ಟವನ್ನು ಮುಟ್ಟಿದುದಾಗಿ ಭಾವಿಸಿದ್ದುದಲ್ಲದೆ, ಇನ್ನು ಮುಂದೆ ಪ್ರಗತಿಯ ಓಟವೇ ಹೊರತು ಅವನತಿಯಿಲ್ಲ ಎಂಬ ಸುಖ ಸ್ವಪ್ನವನ್ನು ಅನುಭವಿಸುತ್ತಿದದರು. ವಿಜ್ಞಾನ ತಮ್ಮ ಜೀವನದ ಕೈದೀವಿಗೆ, ಮತವೆಂಬುದು ಕತ್ತಲೆಯ ದಾರಿ ಎನ್ನುವ ಮಟ್ಟಿಗೆ ನಾಸ್ತಿಕತೆ ಜನತೆಯನ್ನಾವರಿಸಿತ್ತು. ಬ್ರಿಟನ್ನು ತನ್ನ ಕಾಲೊನಿಗಳಿಂದಲೂ, ವ್ಯಾಪಾರದ ಪ್ರಮಾಣದಿಂದಲೂ, ಐಶ್ವರ್ಯದ ಆಧಿಕ್ಯದಿಂದಲೂ ಉನ್ನತಿಯ ಶಿಖರವನ್ನು ಮುಟ್ಟಿರುವುದಾಗಿ ಭಾವಿಸಿತ್ತು.

ಆದರೆ, ೨೦ನೇ ಶತಮಾನದ ಆದಿಯಲ್ಲಿ ಸಂಭವಿಸಿದ ರಷ್ಯಾ-ಜಪಾನ್‌ ಯುದ್ಧದಲ್ಲಿ ಜಪಾನೀಯರ ವಿಜಯ ಬಿಳಿಯವರ ಪ್ರತಿಷ್ಠೆಯನ್ನು ಇಳಿಸಿತು. ೧೯೧೪ ರಲ್ಲಿ ಆರಂಭವಾದ ಮೊದಲನೇ ಮಹಾಯುದ್ಧ ಫ್ರಾನ್ಸಿನ ಗರ್ವವನ್ನು ಇಳಿಸಿತು. ಇಂಗ್ಲೆಂಡ್‌ ತಳಮಳಗೊಂಡಿತು. ಜರ್ಮನಿಯ ಕೈಸರನು ಇನ್ನೇನು ವಿಜಯಲಕ್ಷ್ಮೀ ತನ್ನ ಕೊರಳಿಗೆ ಹಾರ ಹಾಕುವಳು ಎನ್ನುವ ವೇಳೆಗೆ ಸಬ್‌ಮೆರಿನ್‌ಗಳ ಉಪಟಲದಿಂದ ಅಮೆರಿಕಾ ಸಂಯುಕ್ತ ಸಂಸ್ಥಾನ ಯುದ್ಧವನ್ನು ಪ್ರವೇಶಿಸಿತು. ಅಷ್ಟರಲ್ಲಿ ಜರ್ಮನಿಯ ಸೈನ್ಯ ಸುಸ್ತಾಗಿ ಯುದ್ಧ ನಿಲ್ಲಿಸಿತು.

೧೯೧೮ ರಲ್ಲಿ ಯುದ್ಧ ವಿರಾಮವಾದರೂ ಇಂಗ್ಲೆಂಡ್‌ ಮತ್ತು ಯೂರೋಪ್‌ ಅಗ್ನಿಕುಂಡದಲ್ಲಿ ಬಿದ್ದು ಎದ್ದಂತೆ ಆದವು. ವರ್ಸೇಲ್‌ ಒಪ್ಪಂದದ ಭಾಗಗಳು ಸ್ವಲ್ಪ ಸ್ವಲ್ಪವಾಗಿ ಹೊರಬೀಳುವುದರ ಒಳಗೆ ಯುದ್ಧಾನಂತರದ ಆಯಾಸವೂ ನಿರಾಶೆಯೂ ಪಶ್ಚಿಮ ಪ್ರಪಂಚವನ್ನು ಸ್ತಬ್ಧಗೊಳಿಸಿತು.

ಏತನ್ಮಧ್ಯೆ, ಇಂಡಿಯಾದಲ್ಲಿ ಬಂಗಾಳಾ ವಿಭಜನೆ (ವಂಗಭಂಗ) ಕಾಲದಿಂದ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮ ಮುಂದುವರಿಯುತ್ತಲೇ ಬಂತು. ೧೯೦೭ರಲ್ಲಿ ಬ್ರಿಟಿಷ್‌ ಸರ್ಕಾರ ಕೊಟ್ಟ ಮಾರ್ಲೆ-ಮಿಂಟೋ ಸುಧಾರಣೆಗಳು ಭಾರತೀಯರಿಗೆ ತೃಪ್ತಿಯುಂಟು ಮಾಡಲಿಲ್ಲ. ಆದಾಗ್ಯೂ ಮೊದಲನೇ ಘೋರ ಯುದ್ಧದ ಕಾಲದಲ್ಲಿ ಇಂಡಿಯಾ ಸರ್ಕಾರ ಮತ್ತು ಪ್ರಜೆಗಳು ಇಂಗ್ಲೆಂಡಿಗೆ ಶಕ್ತಿ ಮೀರಿ ಸಹಾಯ ಮಾಡಿದರು. ವರ್ಸೇಲ್‌ ಒಪ್ಪಂದದ ಪ್ರಕಾರ, ಅಮೆರಿಕಾ ಅಧ್ಯಕ್ಷ  ವಿಲ್ಸನ್‌ರವರ ‘ಸೆಲ್ಫ್‌ಡಿಟರ್ಮಿನೇರ್ಷ’ (ಸ್ವಯಂ ನಿರ್ಣಯ) ತತ್ವದ ಪ್ರಕಾರ, ಇಂಡಿಯಾಕ್ಕೆ ಸ್ವಾತಂತ್ರ್ಯ ಬರಬೇಕೆಂದು ಇಂಡಿರ್ಯ ನ್ಯಾಷನಲ್‌ ಕಾಂಗ್ರೆಸು ಘೋಷಿಸಿತು.

೧೯೧೯ನೇ ಆರಂಭದ ವೇಳೆಗೆ ಬ್ರಿಟಿಷ್‌ ಇಂಡಿಯಾದಲ್ಲಿ ಹೊರಟ ನವಚೈತನ್ಯ ಪ್ರವಾಹ ಮೈಸೂರನ್ನೂ ವ್ಯಾಪಿಸಿತು. ವಿಶ್ವೇಶ್ವರಯ್ಯನವರು ಇದನ್ನು ಮನಗಂಡು, ಇಂಡಿಯಾ ಸೆಕ್ರೆಟರಿ ಆಫ್‌ ಸ್ಟೇಟ್‌ ಮಾಂಟೆಗೂರವರು ಇಂಡಿಯಾಕ್ಕೆ ಬಂದಿದ್ದಾಗ ಅವರಿಗೆ “ದೇಶೀಯ ಸಂಸ್ಥಾನಗಳಲ್ಲಿಯೂ ಪ್ರಜೆಗಳು ಎಚ್ಚೆತ್ತಿದ್ದಾರೆ. ಅವರೂ ರಾಜ್ಯಾಡಳಿತವನ್ನು ತಮ್ಮ ಚುನಾಯಿತ ಪ್ರತಿನಿಧಿಗಳ ಮೂಲಕವೇ ನಡೆಸಬೇಕೆಂದು ಕಾತರುರಾಗಿದ್ದಾರೆ” ಎಂದು ಮನವರಿಕೆ ಮಾಡಿದರು.

ವಿಶ್ವೇಶ್ವರಯ್ಯನವರು ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಲು ೧೯೧೮ರಲ್ಲಿ ಕೈಗಾರಿಕಾ ಇಲಾಖೆಯನ್ನು ಸ್ಥಾಪಿಸಿದರು. ೧೯೧೬ರಲ್ಲಿ ಮೈಸೂರು ಛೇಂಬರ್ ಆಫ್‌ ಕಾಮರ್ಸ್‌ ಸ್ಥಾಪನೆಯಾಯಿತು. ೧೯೧೩ರಲ್ಲಿ ಪ್ರೈಮರಿ ವಿದ್ಯಾಭ್ಯಾಸವನ್ನು ಕಡ್ಡಾಯ ಮಾಡಲಾಯಿತು.

೧೯೧೮ರಲ್ಲಿ ಯೂರೋಪಿನ ಘೋರ ಯುದ್ಧ ಮುಗಿದ ಮೇಲೆ, ಇಂಡಿಯಾದಲ್ಲೆಲ್ಲಾ ಇðಪ್ಲೂಯೆಂಜಾ ಎಂಬ ಜಾಡ್ಯ ಹರಡಿ ಸಾವಿರಾರು ಜನ ಸತ್ತು ಹೋದರು. ಆಹಾರದ ಅಭಾವ ಉಂಟಾಯಿತು. ಇದನ್ನು ಸರಿಪಡಿಸಲು ಒಬ್ಬ ವಿಶೇಷ ಅಧಿಕಾರಿಯನ್ನು ನೇಮಿಸಲಾಯಿತು.

೧೯೧೧-೧೨ರಲ್ಲಿ ಎಕ್ಸಿಕ್ಯೂಟಿವ್‌ ಕೌನ್ಸಿಲಿನ ಸದಸ್ಯರ ಸಂಖ್ಯೆಯನ್ನು ಎರಡರಿಂದ ಮೂರಕ್ಕೆ ಏರಿಸಲಾಯಿತು.

ವಿಶ್ವೇಶ್ವರಯ್ಯನವರ ದಿವಾನಗಿರಿ ಮುಗಿಯುವ ಹೊತ್ತಿಗೆ ಮದ್ರಾಸಿನಲ್ಲಿ ಬ್ರಾಹ್ಮಣೇತರ ಚಳುವಳಿ ಆರಂಭವಾಯಿತು. ೧೯೧೬-೧೭ರಲ್ಲಿ ಡಾ. ಟಿ.ಎಂ. ನಾಯರ್ ಈ ಚಳುವಳಿಯನ್ನು ಆರಂಭಿಸಿದರು. ಇವರು ಬಹಳ ಪ್ರಭಾವಶಾಲಿ. ಚಳುವಳಿ ಆರಂಭವಾದ ರೀತಿಯನ್ನು ಎ.ಆರ್. ಬ್ಯಾನರ್ಜಿ ತಾವು ಬರೆದ ಒಂದು ಗ್ರಂಥದಲ್ಲಿ ವಿವರಿಸಿದ್ದಾರೆ.

ಮದ್ರಾಸ್‌ ನಗರದಲ್ಲಿ  ತಿರುವಳಿಕ್ಕೇಣಿ   (ಟ್ರಿಪ್ಲಿಕೇನ್‌) ಎಂಬ ಪ್ರದೇಶವಿದೆ. ಇಲ್ಲಿಂದ ವರ್ಷವರ್ಷವೂ ಮದ್ರಾಸ್‌ ಕಾರ್ಪೊರೇಷನಿಗೆ ಟಿ.ಎಂ. ನಾಯರ್ ಸದಸ್ಯರಾಗಿ ಆರಿಸಿ ಬರುತ್ತಿದ್ದರು. ಇವರು ೧೯೧೫-೧೬ರಲ್ಲಿ ಕಶ್ಮಲ ತೆಗೆದುಹಾಕುವ ಉದ್ದೇಶದಿಂದ ಪಾರ್ಥಸಾರಥಿ ದೇವಸ್ಥಾನದಲ್ಲಿ ಪುಷ್ಕರಿಣಿಯನ್ನು ಖಾಲಿ ಮಾಡಿಸಿ ರಸಾಯನ ದ್ರವ್ಯಗಳಿಂದ ಶುದ್ಧೀಕರಿಸಿದರು.

ಅಲ್ಲಿದ್ದ ಬ್ರಾಹ್ಮಣರು  ಈ ಕೆಲಸ ಬೇಡ. ಈ ಶುದ್ಧೀಕರಣದಿಂದ, ಆ ಪುಷ್ಕರಿಣಿಯ ಪವಿತ್ರತೆ ಹೋಗುವುದು ಎಂದು ಕೇಳಿಕೊಂಡರು. ಆ ಪುಷ್ಕರಿಣಿ ಶುದ್ದವಾಗಲಿ ಎಂಬ ಒಂದೇ ಉದ್ದೇಶ ಟಿ.ಎಂ. ನಾಯರ್ ರಿಗೆ ಇದ್ದುದು; ಆದುದರಿಂದ ಆ ಬ್ರಾಹ್ಮಣರ ಮಾತನ್ನು ಕಿವಿಗೆ ಹಾಕಿಕೊಳ್ಳದೆ ತಟಾಕವನ್ನು ಶುದ್ಧೀಕರಿಸಿದರು. ಇದರಿಂದ ಆ ಬ್ರಾಹ್ಮಣರಿಗೆಲ್ಲಾ ಕೋಪ ಬಂದಿತು.

ಮುಂದಿನ ಸಾರಿ ಟಿ.ಎಂ. ನಾಯರ್ ರವರು ತಿರುವಳಿಕ್ಕೇಣಿಯಿಂದ ಕಾರ್ಪೋರೇಷನ್ನಿನ ಚುನಾವಣೆಗೆ ನಿಂತಾಗ, ಅವರನ್ನು ಸೋಲಿಸಿದರು.  ಇದರಿಂದ ಟಿ.ಎಂ. ನಾಯರ್ ರಿಗೆ ಮಹಾಕೋಪ ಬಂದಿತು.

ಜಾತಿ ಭೇದ ತೊಲಗಿದ ಹೊರತೂ ನಮ್ಮ ದೇಶಕ್ಕೆ ಮುಕ್ತಿಯಿಲ್ಲ; ಆದುದರಿಂದ ಬ್ರಾಹ್ಮಣರ ವಿರುದ್ಧ ಬಲವಾದ ಪಾಟಿಯನ್ನು ಕಟ್ಟಿ ಹೋರಾಡಿದ ವಿನಾ ಬೇರೆ ದಾರಿ ಇಲ್ಲ ಎಂದು ಸರ್. ಪಿ. ತ್ಯಾಗರಾಯ ಚೆಟ್ಟ, ಪಾನಗಲ್‌ ರಾಜ, ಪಾತ್ರೋ, ಬೊಬ್ಬಲಿ ರಾಜ ಮುಂತಾದವರನ್ನು ಸೇರಿಸಿಕೊಂಡು ಬ್ರಾಹ್ಮಣೇತರ ಪಾರ್ಟಿಯನ್ನು ಕಟ್ಟಿ, ಬ್ರಾಹ್ಮಣರ ವಿರುದ್ಧ ಹೋರಾಟಕ್ಕೆ ಆರಂಭಿಸಿದರು. ಇದಕ್ಕೆ ಜಸ್ಟಿಸ್‌ ಪಾರ್ಟಿ ಎಂದು ಹೆಸರಿಟ್ಟು , ಈ ಪಾರ್ಟಿಯ ಉದ್ದೇಶಗಳನ್ನು ಸಾಧಿಸಲು “ಜಸ್ಟಿಸ್‌” ಎಂಬ ಆಂಗ್ಲ ದಿನಪತ್ರಿಕೆಯನ್ನೂ ಮದ್ರಾಸಿನಲ್ಲಿ ಸ್ಥಾಪಿಸಿದರು.

ಇದರ ಗಾಳಿ ಮೈಸೂರು ಸಂಸ್ಥಾನಕ್ಕೂ ಬೀಸಿ,ಇಲ್ಲಿಯೂ ಬ್ರಾಹ್ಮಣೇತರ ಪಾರ್ಟಿ ಆರಂಭವಾಯಿತು. ಇದಕ್ಕೆ ಎಂ. ಬಸವಯ್ಯ, ರಾವ್‌ ಸಾಹೇಬ್‌ ಚನ್ನಯ್ಯ, ಗುಲಾಮ್‌ ಮಹಮ್ಮದ್‌ ಕಲಾಮಿ ಮುಂತಾದವರು ನಾಯಕರಾದರು. ಈ ಪಾರ್ಟಿ ಕ್ರಮೇಣ ಬೆಳೆದು, ಮೈಸೂರು ಅಸೆಂಬ್ಲಿಯಲ್ಲಿಯೂ ಲೆಜಿಸ್ಲೆಟಿವ್‌ ಕೌನ್ಸಿಲಿನಲ್ಲಿಯೈ ಇದರ ತತ್ವ ಪ್ರಚಾರ ನಡೆಯಿತು. ಪ್ರಾರಂಭದಲ್ಲಿ, ಇದರ ರೂಪ ಚಿಕ್ಕದಾಗಿದ್ದು, ಕ್ರಮೇಣ ಬೃಹದ್‌ ರೂಪವನ್ನು ತಾಳಿತು.

ಸರ್ಕಾರದ ಅಧಿಕಾರಿಗಳಲ್ಲಿ ಬ್ರಾಹ್ಮಣರೇ ಅತ್ಯಂತ ಅಧಿಕ ಸಂಖ್ಯೆಯಲ್ಲಿದ್ದಾರೆ, ಸರ್ಕಾರದ ದೊಡ್ಡ ದೊಡ್ಡ ಅಧಿಕಾರಿಗಳ ನೌಕರಿಗಳೂ ಬ್ರಾಹ್ಮಣರ ಮೀಸಲಾಗಿವೆ. ಬ್ರಾಹ್ಮಣೇತರರಿಗೆ ಅವು ದೊರೆಯುವುದು ಕಷ್ಟ; ಆದುದರಿಂದ ಬ್ರಾಹ್ಮಣೇತರ ಸಂಖ್ಯೆ ಸರ್ಕಾರಿ ಅಧಿಕಾರಗಳಲ್ಲಿ ತಕ್ಕಷ್ಟು ಪ್ರಮಾಣದಲ್ಲಿ ಏರುವವರೆಗೂ ಬ್ರಾಹ್ಮಕಣರಿಗೆ ಸರ್ಕಾರದಲ್ಲಿ ನೌಕರಿಗಳನ್ನು ಕೊಡಬಾರದೆಂದೂ, ವಿದ್ಯಾಭ್ಯಾಸ ಸಂಸ್ಥೆಗಳಲ್ಲಿಯೂ ಬ್ರಾಹ್ಮಣೇತರರಿಗೆ ಬಹು ಸಂಖ್ಯೆ ದೊರೆಯಬೇಕೆಂದೂ ಬ್ರಾಹ್ಮಣೇತರ ಮುಖಂಡರು ಪ್ರಚಾರ ನಡೆಸಿದ್ದಲ್ಲದೆ, ಸರ್ಕಾರದವರು ತಮ್ಮ ಅಭಿಪ್ರಾಯವನ್ನು ಒಪ್ಪಬೇಕೆಂದೂ ಒತ್ತಡ ತಂದರು. ಮಹಾರಾಜರನ್ನು ಭೇಟಿಮಾಡಿ ತಮ್ಮ ಅಹವಾಲನ್ನು ಹೇಳಿಕೊಂಡರು. ಮಹಾರಾಜರು ಬ್ರಾಹ್ಮಣರು ಮಾಡಿರುವ ಸೇವೆಯ ಪ್ರಶಂಸೆ ಮಾಡಿ, ಬ್ರಾಹ್ಮಣೇತರ ವಿಷಯದಲ್ಲಿಯೂ ಸಹಾನುಭೂತಿ ತೋರಿಸಿದರು. ಈ ವಿಷಯವನ್ನು ತಮ್ಮ ದಿವಾನರೂ ಮಂತ್ರಿ ಮಂಡಲವೂ ಆಲೋಚಸಬೇಕೆಂದೂ ಸೂಚಿಸಿದರು.

ವಿಶ್ವೇಶ್ವರಯ್ಯನವರು ಬ್ರಾಹ್ಮಣೇತರರು ಹಿಂದುಳಿದಿರುವ ವಿಷಯವನ್ನು ಒಪ್ಪಿಕೊಂಡು, ‘ಅವರನ್ನು ಮುಂದಕ್ಕೆ ತರಬೇಕಾದರೆ ಅವರ ವಿದ್ಯಾಭ್ಯಾಸಕ್ಕೆ ಸರ್ಕಾರ ಹೇರಳವಾಗಿ ಸಹಾಯಮಾಡಬೇಕು, ಸ್ಕಾಲರ್ಷಿಪ್‌ಗಳನ್ನು ಕೊಡಬೇಕು. ಆದರೆ ಸರ್ಕಾರಿ ನೌಕರಿಗಳಿಗೆ ಜನರನ್ನು ಸೇರಿಸುವಾಗ ಜಾತಿ, ಮತ, ಕೋಮು ಮುಂತಾದುವನ್ನು ಅನುಸರಿಸಕೂಡದು. ವಿದ್ಯೆ ಮುಂತಾದ ಯೋಗ್ಯತೆಗಳನ್ನು ಪರೀಕ್ಷಿಸಿ ಅದರಲ್ಲಿ ಮೇಲೆ ಬಂದವರನ್ನೇ ಸರ್ಕಾರದ ಅಧಿಕಾರಕ್ಕೆ ತೆಗೆದುಕೊಳ್ಳಬೇಕು, ಇಲ್ಲದೆ ಹೋದರೆ, ಸರ್ಕಾರದ ದಕ್ಷತೆ ಕಡಿಮೆಯಾಗುವುದಲ್ಲದೆ, ಜನರಲ್ಲಿ ಜಾತಿಭೇದದ ಬೀಜವನ್ನು ಬಿತ್ತಿದಂತಾಗುವುದು. ಇದರಿಂದ ದೇಶಕ್ಕೆ ಅನರ್ಥ’ ಎಂದು ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದರು.

ಇದು ಮಹಾರಾಜರ ಮತ್ತು ಇನ್ನೂ ಕೆಲವು ಪ್ರಬಲರ ಅಭಿಪ್ರಾಯಕ್ಕೆ ವಿರುದ್ಧವಾಗಿತ್ತು. ಸರ್ಕಾರೀ ನೌಕರಿಗಳ ವಿಷಯದಲ್ಲಿ ಬ್ರಾಹ್ಮಣೇತರ ಪಕ್ಷದ ಕೋರಿಕೆಯನ್ನು ವಿಮರ್ಶಿಸಿ, ವ್ಯವಹಾರಯೋಗ್ಯವಾದ ಸಲಹೆಗಳನ್ನು ಕೊಡಲು ಛೀಫ್‌ ಜಸ್ಟಿಸ್‌ ಲೆಸ್ಲಿಮಿಲ್ಲರ್ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು.

ವಿಶ್ವೇಶ್ವರಯ್ಯನವರು ಈ ತತ್ವವನ್ನು ಒಪ್ಪದೆ ೧೯೧೮ ನೇ ಏಪ್ರಿಲ್‌ನಲ್ಲಿಯೇ ದಿವಾನಗಿರಿಗೆ ರಾಜೀನಾಮೆ ಸಲ್ಲಿಸಿದರು. ಕೆಲವು ಪ್ರಾಮುಖ್ಯವಾದ ಕೆಲಸಗಳನ್ನು ವಿಶ್ವೇಶ್ವರಯ್ಯನವರೇ ಮಾಡಿ ಮುಗಿಸಬೇಕಾಗಿದ್ದುದರಿಂದ, ಮಹಾರಾಜರು ಅವರನ್ನೇ ೧೯೧೮ನೇ ಅಂತ್ಯದವರೆಗು ಇದ್ದು, ಆ ಕೆಲಸಗಳನ್ನು ಮುಗಿಸಬೇಕೆಂದು ಕೇಳಿಕೊಂಡರು. ಆದುದರಿಂದ ವಿಶ್ವೇಶ್ವರಯ್ಯನವರು ೧೯೧೮ ನೇ ಆಖೈರ್ ವರೆಗೂ ದಿವಾನರಾಗಿದ್ದರು. ನಿವೃತ್ತರಾಗುವುದಕ್ಕೆ ಮುಂಚೆ ಆರು ತಿಂಗಳು ರಜಾ ತೆಗೆದುಕೊಂಡು, ತಮ್ಮ ದಿವಾನ್‌ ಪದವಿಯಿಂದ ಡಿಸೆಂಬರ್ ೧೦ ರಲ್ಲಿ ವಿಮುಕ್ತರಾದರು. ಛೀಫ್‌ ಇಂಜಿನಿಯರಾಗಿ ಬಂದಂದಿನಿಂದಲೂ ವಿಶ್ವೇಶ್ವರಯ್ಯನವರು ಸಂಸ್ಥಾನಕ್ಕೆ ಉತ್ಕೃಷ್ಟ ಸೇವೆ ಸಲ್ಲಿಸಿದರು.