೧೯೨೬ನೇ ಏಪ್ರಿಲ್‌ ೧ಕ್ಕೆ ಬ್ಯಾನರ್ಜಿಯವರ ದಿವಾನಗಿರಿ ಮುಕ್ತಾಯವಾಯಿತು; ಅದೇ ದಿವಸ ಮಿರ್ಜಾ ಎಂ. ಇಸ್ಮಾಯಿಲರು ದಿವಾನರಾದರು.

ಬ್ಯಾನರ್ಜಿಯವರು ನಿವೃತ್ತರಾಗುವುದಕ್ಕೆ ಮುಂಚೆ, ಒಂದೆರಡು ತಿಂಗಳು, ಮೈಸೂರಿನ ಪತ್ರಿಕೆಗಳಲ್ಲಿಯೂ, ಮದ್ರಾಸಿನ ಪತ್ರಿಕೆಗಳಲ್ಲಿಯೂ ಮುಂದಿನ ದಿವಾನರು ಯಾರಾಗಬಹುದು ಎಂಬ ಬಗ್ಗೆ ಬಹಳ ಚರ್ಚೆ ನಡೆಯಿತು. ಆಂಗ್ಲ ಅಧಿಕಾರಿಗಳ ಹೆಸರನ್ನು ಹೇಳಿ, ಅವರು ದಿವಾನರಾಗಿ ಬರಬಹುದೆಂಬ ಊಹೆಯನ್ನೂ ಮಾಡಲಾಯಿತು. ಕಡೆಗೆ, ಮಿರ್ಜಾ ಇಸ್ಮಾಯಿಲರನ್ನು ದಿವಾನರನ್ನಾಗಿ ನೇಮಿಸಲಾಗಿದೆ ಎಂಬ ಅಪ್ಪಣೆ ಹೊರಟ ಮೇಲೆ, ಊಹಾಪೋಹಗಳೆಲ್ಲವೂ ನಿಂತು ಹೋದವು. ವೆಂಕಟಕೃಷ್ಣಯ್ಯನವರು ಮಿರ್ಜಾರವರ ನೇಮಕವನ್ನು ಒಪ್ಪಿ, ತಮ್ಮ ಪತ್ರಿಕೆಗಳಲ್ಲಿ ಅಗ್ರಲೇಖನಗಳನ್ನು ಬರೆದರು. ಇವರನ್ನು ಮಹಾರಾಜರ ಅಸಿಸ್ಟೆಂಟ್‌ ಹುಜೂರ್ ಸೆಕ್ರೆಟರಿಯನ್ನಾಗಿ ನೇಮಿಸಿದಾಗಲೇ ವೆಂಕಟಕೃಷ್ಣಯ್ಯನವರು ಇವರ ವಿಷಯವನ್ನು ಪ್ರಸ್ತಾಪಿಸಿ, ಇವರು ಮುಂದಕ್ಕೆ ದಿವಾನ್‌ ಪದವಿಗೂ ಏರಬಹುದೆಂಬ ಭವಿಷ್ಯವನ್ನು ನುಡಿದಿದ್ದರು. ಆದುದರಿಂದ ಮಿರ್ಜಾ ಇಸ್ಮಾಯಿಲರ ದಿವಾನಗಿರಿಯ ಪ್ರಾರಂಭದ ವರ್ಷಗಳಲ್ಲಿ ವೆಂಕಟಕೃಷ್ಣಯ್ಯನವರೂ ಅವರೂ ಬಹಳ ಸ್ನೇಹವಾಗಿಯೇ ಇದ್ದರು. ಅನೇಕ ವರ್ಷಗಳಿಂದ ಇಬ್ಬರಿಗೂ ಪರಿಚಯವಿದ್ದುದರಿಂದ, ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಂಡಿದ್ದರು.

ವಾಸ್ತವ್ಯವಾಗಿ ಮಿರ್ಜಾರವರು ಪ್ರಾರಂಭದಲ್ಲಿ ಒಳ್ಳೆಯ ಉದ್ದೇಶದಿಂದಲೇ ಕೆಲಸ ಕಾರ್ಯಗಳನ್ನು ನಡೆಸುತ್ತ ಬಂದರು. ಬ್ರಾಹ್ಮಣ-ಬ್ರಾಹ್ಮಣೇತರ ವೈಷಮ್ಯವನ್ನು ಕಡಿಮೆ ಮಾಡಬೇಕೆಂದು, ಉಭಯ ಪಂಗಡಗಳ ಮುಖಂಡರೊಡನೆಯೂ ಕಲೆತು ಸಮಾಲೋಚನೆ ನಡೆಸಿದರು. ಆದರೆ ಇದು ಬ್ರಾಹ್ಮಣೇತರ ಪಂಗಡದವರಿಗೆ ಒಂದೆರಡು ವರ್ಷಗಳಲ್ಲಿಯೇ ಅಸಮಾಧಾನ ಉಂಟುಮಾಡಿತು. ಇವರ ಕೆಲಸಕಾರ್ಯಗಳು ಸಾರ್ವಜನಿಕ ಟೀಕೆಗಳಿಗೆ ಗುರಿಯಾದವು. ಮಿರ್ಜಾರವರಿಗೆ ಆಗದವರನೇಕರಿದ್ದರು. ಅವರು ಮತ್ಸರದಿಂದಲೂ, ಇತರ ಕಾರಣಗಳಿಂದಲೂ ಮಿರ್ಜಾರವರ ತಪ್ಪುಗಳನ್ನೇ ಎತ್ತಿ ತೋರಿಸುತ್ತಿದ್ದರು.

ಇನ್ನೊಂದು ಗಮನೀಯವಾದ ಅಂಶವೇನೆಂದರೆ, ಮಿರ್ಜಾರವರು ಎಲ್ಲರನ್ನೂ ಹತ್ತಿರಕ್ಕೆ ಸೇರಿಸುತ್ತಿದ್ದರು; ಅವರ ಮಾತುಗಳನ್ನು ಕೇಳುತ್ತಿದ್ದರು. ಕೆಲವು ಜನರು ಅವರ ಬಳಿ ಇತರರ ಮೇಲೆ ಚಾಡಿಗಳನ್ನೂ ಕ್ಷುದ್ರಗಳನ್ನೂ ಹೇಳಲಾರಂಭಿಸಿದರು; ತಾವು ಮಿರ್ಜಾರವರ ಹಿತೈಷಿಗಳೋ ಎಂಬಂತೆ ಕೆಲವು ದೊಡ್ಡ ಮನುಷ್ಯರ ಮೇಲೆಲ್ಲಾ ಅಪವಾದದ ಮಾತುಗಳನ್ನು ಹೇಳುತ್ತಿದ್ದರು. ಯಾರು ರಾಜ್ಯದ ನಿಜವಾದ ಹಿತೈಷಿಗಳು, ಯಾರು ಅಲ್ಲ ಎಂಬುದು ಕೆಲವು ಸಾರಿ ಮಿರ್ಜಾರವರಿಗೆ ಗೊತ್ತಾಗುತ್ತಿರಲಿಲ್ಲ. ಇದರಿಂದ ಕೆಲವು ಕೆಟ್ಟ ಪರಿಣಾಮಗಳು ಆಗುತ್ತಿದ್ದುವು. ನೇರವಾಗಿ, ಪ್ರಾಮಾಣಿಕವಾಗಿ, ಸತ್ಯವನ್ನು ದಿವಾನರಿಗೆ ಹೇಳುವವರು ಕಡಿಮೆಯಾದರು. ಅವರಿಗೆ ಪ್ರಿಯವಾದ ವಿಷಯಗಳನ್ನು ಹೇಳುವವರೇ ಅವರ ಬಳಿ ಹೆಚ್ಚಾಗಿ ಸುಳಿದಾಡುತ್ತಿದ್ದರು. ಇದರಿಂದ ಅನೇಕ ನಿಜವಾದ ದೇಶಾಭಿಮಾನಿಗಳು ಮಿರ್ಜಾರವರ ಬಳಿ ನಿಜವನ್ನು ಹೇಳಲು ಹೆದರುತ್ತಿದ್ದರು.

ಈ ರೀತಿಯಾಗಿ, ಒಂದೆರಡು ವರ್ಷಗಳಲ್ಲಿಯೇ ಮಿರ್ಜಾರವರು ಸ್ತೋತ್ರಪ್ರಿಯರೆಂದೂ, ಕಟು ಸತ್ಯದ ಪ್ರೇಮಿಗಳಲ್ಲವೆಂದೂ ಜನ ಆಡಿಕೊಳ್ಳಲು ಅವಕಾಶವಾಯಿತು. ಆದುದರಿಂದ ಮಿರ್ಜಾರವರು ಎಷ್ಟೇ ಸದುದ್ದೇಶದಿಂದ ಕೂಡಿದ್ದರೂ, ಅವರು ಮಾಡಿದ ಕೆಲವು ಕೆಲಸಗಳು ಅನರ್ಥ ಪರಿಣಾಮ ಉಂಟು ಮಾಡಿದವು.

ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಚೊಕ್ಕಟಗೊಳಿಸಿ ವಿಶಾಲಗೊಳಿಸಲು ಹಳೆಯ ಅಶ್ವತ್ಥ ಕಟ್ಟೆಗಳನ್ನು ಕೆಲವು ಕಡೆ ಸೇರಿಸಿದರು. ಕೆಲವು ಶಿಥಿಲವಾದ ದೇವಸ್ಥಾನಗಳಿಂದ ಅವುಗಳ ವಿಗ್ರಹವನ್ನು ಬೇರೆ ಕಡೆ ಸ್ಥಾಪಿಸಲು ಪ್ರಯತ್ನಿಸಿದರು.

ಇದೇ ರೀತಿ, ಬೆಂಗಳೂರು ಸಿಟಿ ಸುಲ್ತಾನ್‌ ಪೇಟೆ ಸ್ಕೂಲಿನಲ್ಲಿ ಗೇಟಿಗೆ ಎದುರಾಗಿಯೇ ಇದ್ದ ವಿಗ್ರಹವನ್ನು ಪಕ್ಕಕ್ಕೆ ಒಂದು ಕಡೆಗೆ ಬದಲಾಯಿಸಲು ಪ್ರಯತ್ನಿಸಿದರು. ವರ್ಷ ವರ್ಷವೂ ಸ್ಕೂಲ್‌ ಕಟ್ಟಡವನ್ನು ದುರಸ್ತು ಮಾಡುವ ಕಂಟ್ರಾಕ್ಟರು ಗೇಟಿನ ಎದುರಿಗೇ ಇದ್ದ ಗಣೇಶನ ವಿಗ್ರಹಕ್ಕೆ ಒಂದು ಗೂಡು ಕಟ್ಟಲು, ಆ ವಿಗ್ರಹವನ್ನು ಬೇರೆಕಡೆ ಇಟ್ಟಿದ್ದರು. ಇದನ್ನು ನೋಡಿ ಆಗ ಸಿಟಿ ಮುನಿಸಿಪಲ್‌ ಪ್ರೆಸಿಡೆಂಟರಾಗಿದ್ದ ಮಹಮ್ಮದ್‌ ಅಬ್ಬಾಸ್‌ ಖಾನರು ಗಣೇಶನಿಗೆ ಹೊಸದಾಗಿ ಗುಡಿಯನ್ನು ಕಟ್ಟಿಸುತ್ತಿದ್ದಾರೆ ಎಂಬ ಆಪಾದನೆಯನ್ನು ಮಾಡಿ, ಸರ್ಕಾರಕ್ಕೆ ತಿಳಿಸಿದರು. ದಿವಾನರು  ಈ ದೂರಿನ ಆಧಾರದ ಮೇಲೆ ವಿದ್ಯಾಭ್ಯಾಸದ ಇಲಾಖೆ ಅಧಿಕಾರಿಗೆ ಒಂದು ಡಿ.ಒ. ಬರೆದು, ಆ ವಿಗ್ರಹವನ್ನು ಎಲ್ಲಾದರೂ ಒಂದು ಮೂಲೆಯಲ್ಲಿ ಇಡುವಂತೆ ಏರ್ಪಡಿಸಬೇಕೆಂದೂ, ಗೇಟಿನ ಎದುರಿಗೆ ಇಡಬಾರದೆಂದೂ ತಿಳಿಸಿದರು. ವಿದ್ಯಾಭ್ಯಾಸದ ಅಧಿಕಾರಿಗಳು ಆ ವಿಗ್ರಹವನ್ನು ಗೇಟಿನ ಎದುರಿಗೆ ಇಡಬಾರದೆಂದು ಸ್ಕೂಲಿನ ಅಧಿಕಾರಿಗಳಿಗೆ ಅಪ್ಪಣೆ ಮಾಡಿದರು. ವಿದ್ಯಾರ್ಥಿಗಳಿಗೆ ಈ ಅಪ್ಪಣೆ ಅಸಮಾಧಾನ ಉಂಟು ಮಾಡಿತು. ಅವರು ಸತ್ಯಾಗ್ರಹವನ್ನು ಸ್ಕೂಲಿನ ಆವರಣದಲ್ಲಿ ಆರಂಭಿಸಿದರು. ಊರಿನ ಕೆಲವು ವರ್ತಕ ಮಹನೀಯರು ವಿದ್ಯಾರ್ಥಿಗಳಿಗೆ ಬೆಂಬಲಿಗರಾದರು. ಕೆಲವು ಸಾರ್ವಜನಿಕರೂ ಕೂಡಾ ಸಹಕಾರವಿತ್ತರು.  ಸರ್ಕಾರ ಮೂರು ಮುಖಂಡರನ್ನು ದಸ್ತಗಿರಿ ಮಾಡಿತು. ಈ ಗಣೇಶನ ಗಲಾಟೆ ಪ್ರಬಲವಾಗಿ, ಜುಲೈ ೩೦ನೇ ತಾರೀಖು ಬೆಂಗಳೂರಿನಲ್ಲೆಲ್ಲಾ ಬಹಳ ಗಲಭೆಯಾಯಿತು. ಪೋಲೀಸರೇ ಅಲ್ಲದೆ ಮಿಲಿಟರಿಯವರೂ ಪ್ರವೇಶಿಸಿದರು. ಕಡೆಗೆ ಸರ್ಕಾರ ಆ ಮೂವರು ಮುಖಂಡರನ್ನೂ ಬಿಡುಗಡೆ ಮಾಡಿತು.

ಅದೇ ರಾತ್ರಿ, ಮೇಲೆ ತಿಳಿಸಿದ ಮುಸಲ್ಮಾನ್‌ ಮುಖಂಡರ ಮನೆಯ ಮುಂದೆ ಬಹಳ ಗಲಭೆಯಾಗಿ, ಅವರ ಮನೆಯಿಂದ ಖಾಸಗೀ ಜನರು ಗುಂಡು ಹಾರಿಸಿದ ಸಂಗತಿ ವರದಿಯಾಯಿತು.

ಮರು ದಿವಸವೇ ದಿವಾನರು ಗಲಭೆಗೆ ಕಾರಣರಾದವರನ್ನೆಲ್ಲಾ  (ಮುಸ್ಲಿಂ ಮುಖಂಡರನ್ನೂ ಸೇರಿಸಿ) ಪೋಲೀಸರಿಂದ ಬಂಧಿಸಿ, ಮೊಖದ್ದಮೆಗಳನ್ನು ನಡೆಸಿದ್ದರೆ ಪರಿಸ್ಥಿತಿ ಹತೋಟಿಗೆ ಬರುತ್ತಿತ್ತು. ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟರು ಮತ್ತು ಪೊಲೀಸ್‌ ಇನ್ಸ್‌ಪೆಕ್ಟರು ತಮ್ಮ ಕರ್ತವ್ಯ ನೆರವೇರಿಸದೆ ತಟಸ್ಥರಾಗಿದ್ದರು. ದಿವಾನರು ಸರ್ಕಾರದ ಅಧಿಕಾರಗಳನ್ನೆಲ್ಲಾ ತಮ್ಮ ಕೈಯಲ್ಲಿಯೇ ಕೇಂದ್ರೀಕರಿಸಿಟ್ಟುಕೊಂಡು, ಮುಖ್ಯವಾದ ತುರ್ತು ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ದೊಂಬಿಯನ್ನು ಅಡಗಿಸುವ ಮತ್ತು ಶಾಂತಿಯನ್ನು ಸ್ಥಾಪಿಸುವ ಕಾರ್ಯಗಳನ್ನು ಮಾಡಲಾಗದಂತಹ ಸ್ಥಿತಿಯಾಗಿದ್ದಿತು.

ನಿವೃತ್ತ ದಿವಾನರಾದ ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ಒಂದು ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು.  ದಿನಂ ಪ್ರತಿ ಬಹಿರಂಗ ವಿಚಾರಣೆ ನಡೆದು, ಅನೇಕರು ಸಾಕ್ಷ್ಯವಿತ್ತರು. ಸಂಬಂಧಪಟ್ಟವರ ಸಾಕ್ಷ್ಯವೆಲ್ಲಾ ದೊರೆಯಿತು. ಈ ಸಾಕ್ಷ್ಯದ ವಿವರ ದಿನಂಪ್ರತಿ ಮದ್ರಾಸ್‌ ಪತ್ರಿಕೆಗಳಲ್ಲೂ, ಮೈಸೂರು ಪತ್ರಿಕೆಗಳಲ್ಲೂ ಪ್ರಕಟವಾಗುತ್ತ ಬಂದಿತು.

ಶ್ರೀ ಎಂ. ಸೀತಾರಾಮಶಾಸ್ತ್ರಿಯವರು ಕೆಲವು ತಿಂಗಳ  ಹಿಂದೆ ಸ್ಥಾಪಿಸಿದ್ದ “ವೀರ ಕೇಸರಿ” ದಿನಪತ್ರಿಕೆಯಲ್ಲಿ ಎಲ್ಲವನ್ನೂ ಕನ್ನಡದಲ್ಲಿ ಪ್ರಕಟಿಸುತ್ತ ಬಂದರು. ಆ ವಿವರವನ್ನು ಓದುತ್ತಿರುವಾಗಲೇ ಸರ್ಕಾರದ ತಪ್ಪು ಬಹಳವಿದೆ ಎಂದು ಜನರ ಮನಸ್ಸಿನಲ್ಲಿ ಅಭಿಪ್ರಾಯ ಬೇರೂರಿತು. ಆ ವರ್ಷದ ಪ್ರಜಾಪ್ರತಿನಿಧಿ ಸಭೆಯ ದಸರಾ ಅಧಿವೇಶನದ ಹೊತ್ತಿಗೆ, ಈ ಸಮಿತಿಯ ಸಾಕ್ಷ್ಯಗಳೆಲ್ಲಾ ಮುಗಿದಿದ್ದುವು. ಇನ್ನೇನು ವರದಿ ಹೊರ ಬೀಳುವುದರಲ್ಲಿತ್ತು. ಕೆಲವು ಸದಸ್ಯರು ದಿವಾನರನ್ನು “ಆ ವರದಿಯ ಶಿಫಾರಸಿನಂಥೆ ನಡೆಯುತ್ತೀರಾ” ಎಂದು ಕೇಳಿದರು. “ಆ ವರದಿಗೆ ಸರ್ಕಾರವೇನೂ ಬದ್ಧವಲ್ಲ. ಅದೂ ಒಂದು ವರದಿ” ಎಂದು ಉತ್ತರವಿತ್ತರು. ಈ ಉತ್ತರ ಅನೇಕರಿಗೆ ಆಶ್ಚರ್ಯ ಉಂಟುಮಾಡಿತು. ವಿಶ್ವೇಶ್ವರಯ್ಯನವರಂತಹವರನ್ನು ಈ ವಿಚಾರಣೆ ನಡೆಸಿ ಎಂದು ಕೇಳಿಕೊಂಡು ಅವರು ವರದಿ ತಯಾರಿಸಿ ಶಿಫಾರಸು ಕೊಟ್ಟ ಮೇಲೆ, ಅದನ್ನು ಸರ್ಕಾರ ನಿರಾಕರಿಸುವುದು ಯುಕ್ತವೇ ಎಂದು ಹಲವರು ಅಭಿಪ್ರಾಯಪಟ್ಟರು.

ವೆಂಕಟಕೃಷ್ಣಯ್ಯನವರು ಈ ವಿಷಯಗಳನ್ನೆಲ್ಲಾ ಚೆನ್ನಾಗಿ ಆಲೋಚಿಸುತ್ತಿದ್ದರು. ತಮ್ಮ ಸ್ನೇಹಿತರೊಡನೆಯೂ ಚರ್ಚಿಸುತ್ತಿದ್ದರು. ಮಿರ್ಜಾರವರು ದಿವಾನ್‌ಪದವಿಗೆ ಏರಿದ ಮೇಲೆ ರಾಜ್ಯದ ಸ್ಥಿತಿ ಉತ್ತಮವಾಗುತ್ತಾ ಹೋಗುವುದೆಂದು ಆಲೋಚಿಸಿ, ಪ್ರಾರಂಭದಲ್ಲಿ ತಮ್ಮ ಪತ್ರಿಕೆಗಳಲ್ಲಿಯೂ, ಅಸೆಂಬ್ಲಿ ಮತ್ತು ಕೌನ್ಸಿಲಿನಲ್ಲಿಯೂ ಸರ್ಕಾರಕ್ಕೆ ಬೆಂಬಲವಿತ್ತರು. ೧೯೨೬, ೧೯೨೭ ಮತ್ತು ೧೮೨೮ರ ಆದಿಭಾಗ ವೆಂಕಟಕೃಷ್ಣಯ್ಯನವರು ಮಿರ್ಜಾರವರ ಬೆಂಬಲಿಗರಾಗಿಯೇ ಇದ್ದರು. ಹಲವು-ಕೆಲವು ದೋಷಗಳನ್ನು ತೋರಿಸಿ ಅವುಗಳ ನಿವಾರಣೆಗಾಗಿ ಸಲಹೆಯನ್ನೂ ಕೊಡುತ್ತಿದ್ದರು. ಜೊತೆಗೆ, ಮಿಲ್ಲರ್ ಕಮಿಟಿಯ ಆರ್ಡರು ರದ್ದಾಗಬೇಕೆಂದೂ, ಪತ್ರಿಕಾ ಕಾನೂನು ರದ್ದಾಗಬೇಕೆಂದೂ ವಾದಿಸುತ್ತಲೇ ಇದ್ದರು.

೧೯೨೭ರಲ್ಲಿ ಹೊಸ ಚುನಾವಣೆಗಳಾದಾಗ ವೆಂಕಟಕೃಷ್ಣಯ್ಯನವರು ಪ್ರಜಾಪ್ರತಿ ನಿಧಿ ಸಭೆಗೆ ಮೈಸೂರು ನಗರದಿಂದ ಚುನಾಯಿತರಾಗಿ ಬಂದರು.  ಈ ಅಸೆಂಬ್ಲಿ ಅವಧಿ ಮುಗಿದ ಮೇಲೆ ಅವರು ಪುನಃ ಆ ಸಭೆಗೆ ಚುನಾವಣೆಗೆ ನಿಲ್ಲಲೇ ಇಲ್ಲ. ೧೮೨೬ ರಿಂದ ಈಚೆಗೆ ಅವರು ನ್ಯಾಯವಿಧಾಯಕ ಸಭೆಯಲ್ಲಿಯೂ ಇರಲಿಲ್ಲ. ಅವರು ಆರ್ಥಿಕ ಸಮ್ಮೇಳನದ ಸದಸ್ಯರಾಗಿ ಮಾತ್ರ ಇದ್ದರು. ೧೯೨೭ ರಲ್ಲಿ ವೈಸರಾಯ್‌ ಲಾರ್ಡ್ ಆರ್ವೀರು ಮೈಸೂರಿಗೆ ಬಂದಿದ್ದಾಗ, ಮೈಸೂರು ಸರ್ಕಾರ ಕೊಡಬೇಕಾದ ಪೊಗದಿಯಲ್ಲಿ ವರ್ಷಕ್ಕೆ ೧೦೧/೨ ಲಕ್ಷ ರೂಪಾಯಿ ಕಡಿಮೆ ಮಾಡಿದರು.

೧೯೨೭ನೇ ಆಗಸ್ಟ್‌ನಲ್ಲಿ ಕೃಷ್ಣರಾಜ ಒಡೆಯರ ಆಳ್ವಿಕೆಯ ರಜತೋತ್ಸವ ಮೈಸೂರು ನಗರದಲ್ಲಿಯೂ, ಬೆಂಗಳೂರು ನಗರದಲ್ಲಿಯೂ ಬಹಳ ವಿಜೃಂಭಣೆಯಿಂದ ನಡೆಯಿತು. ೧೮೨೭ ರಲ್ಲಿ ಮಹಾತ್ಮಾ ಗಾಂಧೀಯವರು ತಮ್ಮ ಆರೋಗ್ಯ ಸುಧಾರಣೇಗಾಗಿ ನಂದಿ ಬೆಟ್ಟದ ಮೇಲೆ ಕೆಲವು ದಿನಗಳು ವಿಶ್ರಾಂತಿ ತೆಗೆದುಕೊಂಡರು. ಆ ಸಮಯದಲ್ಲಿಯೇ ಕೆಲವು ಕಾಲ, ಅವರು ಬೆಂಗಳೂರು ನಗರದಲ್ಲಿದ್ದರು. ಮೈಸೂರು ನಗರಕ್ಕೂ ಬಂದು ಶೇಷಾದ್ರಿ ಹೌಸಿನಲ್ಲಿ ತಂಗಿದ್ದರು. ಈ ಸಂದರ್ಭದಲ್ಲಿ ವೆಂಕಟಕೃಷ್ಣಯ್ಯನವರು ಮಹಾತ್ಮಾ ಗಾಂಧೀಯವರಿಗೆ ಗೌರವ ಸಮರ್ಪಣೆ ಮಾಡಿದರು. ವೆಂಕಟಕೃಷ್ಣಯ್ಯನವರನ್ನು ನೋಡಿದ ಕೂಡಲೇ ಗಾಂಧೀಜಿ “ನಿಮ್ಮ ಕೀರ್ತಿ ನಿಮಗಿಂತಲೂ ಮೊದಲೇ ನನ್ನ ಬಳಿಗೆ ಬಂದಿದೆ” ಎಂದು ಕೈ ಜೋಡಿಸಿದರು.

ಮಿರ್ಜಾರವರು ಬ್ರಿಟಿಷ್‌ ಇಂಡಿಯಾದ ರಾಜಕೀಯ ಮುಖಂಡರನೇಕರೊಡನೆ ಸ್ನೇಹದಿಂದಿದ್ದರು. ರೈಟ್‌ ಆನರಬಲ್‌ ಶ್ರೀನಿವಾಸ ಶಾಸ್ತ್ರಿ, ಸರ್ ಕುಮಾರಸ್ವಾಮಿಶಾಸ್ತ್ರಿ, ಸರ್.ಪಿ.ಎಸ್‌. ಶಿವಸ್ವಾಮಿ ಅಯ್ಯರ್ ಮುಂತಾದವರು ಇವರ ಮಿತ್ರರಾಗಿದ್ದರು. ಸರ್ ತೇಜ್‌ ಬಹದೂರ್ ಸಪ್ರು, ಪಂಡಿತ ಮೋತಿಲಾಲ್‌ ನೆಹರು ಮತ್ತು ಬೊಂಬಾಯಿನ ಅನೇಕ ಮುಖಂಡರು ಇವರ ಸ್ನೇಹಿತರಾಗಿದ್ದರು.  ಬ್ರಿಟಿಷ್‌ ಇಂಡಿಯಾದ ‘ಹಿಂದೂ’, ‘ಟೈಮ್ಸ್‌ ಆಫ್‌ ಇಂಡಿಯಾ’, ‘ಲೀಡರ್’ ಮುಂತಾದ ಪತ್ರಿಕೆಗಳ ಸಂಪಾದಕರೆಲ್ಲಾ ಇವರ ಮಿತ್ರರೇ. ಬೆಂಗಳೂರಿನ ಬ್ರಿಟಿಷ್‌ ರೆಸಿಡೆಂಟರೂ ಇವರಿಗೆ ಬೇಕಾದವರೇ. ಹೀಗೆ ಮಿರ್ಜಾರವರ ಪ್ರಭಾವ ಬಹಳ ಜಾಸ್ತಿಯಾಗಿತ್ತು.

ಆದರೂ ಮೈಸೂರು ಸಂಸ್ಥಾನದ ಒಳಗೆ ಗಣೇಶನ ಗಲಾಟೆ ಇವರ ಕೀರ್ತಿಗೆ ಬಹಳ ಮಟ್ಟಿಗೆ ಕಳಂಕ ತಂದಿತು. ವಿಶ್ವೇಶ್ವರಯ್ಯ ಸಮಿತಿ ೧೯೨೮ನೇ ಡಿಸೆಂಬರ್ ನಲ್ಲಿ ಈ ಗಲಭೆಗಳ ಬಗ್ಗೆ ಸರ್ವಾನುಮತದ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತು.

ವರದಿಯ ಸಾರಾಂಶ: ೧೯೨೮ನೇ ಜುಲೈ ೩೦ ನೇ ದಿನದ ಗಲಭೆಯನ್ನು ಅಡಗಿಸಲು ಮತ್ತು ಶಾಂತಿಯನ್ನು ಸ್ಥಾಪಿಸಲು ಅವಶ್ಯಕವಾದ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಳ್ಳಲಿಲ್ಲ; ಮ್ಯಾಜಿಸ್ಟ್ರೇಟರುಗಳೂ, ಪೊಲೀಸ್‌ ಆಫೀಸರುಗಳೂ ಕೈಕಟ್ಟಿಕೊಂಡು ಸುಮ್ಮನಿದ್ದುಬಿಟ್ಟರು, ಈ ಆಫೀಸರುಗಳ ನಿಷ್ಠೆಯೆ ಖಂಡನೀಯ; ಸರ್ಕಾರದೊಡನೆ ಈ ಇಲಾಖೆಗಳ ಉನ್ನತಾಧಿಕಾರಿಗಳು ಗಂಟೆಗಂಟೆಗೂ ಮಾತನಾಡುತ್ತಿದ್ದರು. ಆ ದಿವಸವಾಗಲೀ , ಮರುದಿವಸವಾಗಲೀ ಸರ್ಕಾರ ಅಧಿಕಾರಿಗಳನ್ನು “ನೀವು ಏಕೆ ಸು ಮ್ಮನಿದ್ದಿರಿ? ಏಕೆ ನಿಷ್ಕ್ರಿಯರಾಗಿದ್ದಿರಿ? ಅವಶ್ಯಕವಾದ ಕರ್ತವ್ಯಗಳನ್ನು ಏಕೆ ನಿರ್ವಹಿಸಲಿಲ್ಲ?” ಎಂದು ಆಕ್ಷೇಪಣೆ ಮಾಡಲಿಲ್ಲ. ಉಭಯರೂ ಒಂದು ರೀತಿಯಾಗಿ ಧೈರ್ಯಶೂನ್ಯರೂ, ದಿಕ್ಕು ತೋರದವರೂ ಆಗಿದ್ದಂತೆ ವರ್ತಿಸಿದರೆಂಬ ಅಭಿಪ್ರಾಯಕ್ಕೆ ಬರದೇ ವಿಧಿಯಿಲ್ಲ.

ಈ ಸಮಿತಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ಅನೇಕ ಉಪಯುಕ್ತವಾದ ಸಲಹೆಗಳನ್ನು ಕೊಟ್ಟಿತು. ಅಷ್ಟೇ ಅಲ್ಲದೆ, ಮಿಲ್ಲರ್ ಕಮಿಟಿಯ ಆರ್ಡರಿನಿಂದ ಸಂಸ್ಥಾನದ ಪ್ರಜೆಗಳಲ್ಲಿ ಕೋಮುವಾರು ಭಾವನೆ ಪ್ರಬಲಿಸಿ ಹೋಗಿದೆ. ಇದರಿಂದ ಸರ್ಕಾರವನ್ನು ಟೀಕಿಸುವ ಅಭ್ಯಾಸ ಜಾಸ್ತಿಯಾಗಿದೆ. ಏನೇ ಅನಿಷ್ಟ ಸಂಭವಿಸಲಿ, ಜನ ಸರ್ಕಾರವೇ ಕಾರಣ ಎನ್ನುತ್ತಾರೆ. ಆದುದರಿಂದ, ಜನಕ್ಕೆ ಸರಿಯಾದ ಜವಾಬ್ದಾರಿ ಬುದ್ಧಿ ಬರಬೇಕಾದರೆ, ರಾಜ್ಯಾಡಳಿದ ಜವಾಬ್ದಾರಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ವಹಿಸಬೇಕು, ಎಂಬ ಸಲಹೆಯನ್ನು ಸಮಿತಿ ಕೊಟ್ಟಿತು.

ಈ ಸಮಿತಿಗೆ ಬಹಳ ಗಣ್ಯರಾದ ಮಹನೀಯರು ಸದಸ್ಯರಾಗಿದ್ದರು. ಅವರಾರೆಂದರೆ ಎಂ. ವಿಶ್ವೇಶ್ವರಯ್ಯ (ಅಧ್ಯಕ್ಷರು), ಟಿ.ಕೆ. ರಾಮರಾವ್‌, ಹೆಚ್‌.ಜಿ. ಬಸವಪ್ಪ, ಗುಲಾಮ್‌ ಮಹಮದ್‌ ಕಲಾಮಿ, ವಿ. ಮಾಣಿಕ್ಯವೇಲು ಮೊದಲಿಯಾರ್, ಬಿ. ನಾಗಪ್ಪ ಮತ್ತು ರಾಲ್ಫ್‌ನಾಯ್‌. ಈ ವರದಿಗೆ ಎಲ್ಲರೂ ರುಜು ಮಾಡಿದರು. ಜಿ.ಎಂ. ಕಲಾಮಿಯವರು ಮಾತ್ರ ವರದಿಯ ಜೊತೆಗೆ ಒಂದು ಪ್ರತ್ಯೇಕವಾದ ಟಿಪ್ಪಣಿಯನ್ನು ಕೊಟ್ಟರು.

ಸರ್ಕಾರ  ಈ ವರದಿಯನ್ನು ಪರಿಶೀಲಿಸಿ, ಅನೇಕ ಸಮಾಧಾನಗಳನ್ನು ಹೇಳಿ, ರಾಜಕೀಯ ಸುಧಾರಣೆಗಳ ಬಗ್ಗೆ, ಅವುಗಳಿಗೂ ಈ ಘಟನೆಗಳಿಗೂ ಏನೂ ಸಂಬಂಧವಿಲ್ಲವೆಂದೂ, ಜನರ ರಾಜಕೀಯ ಆಶೋತ್ತರಗಳ ಬಗ್ಗೆ ಸರ್ಕಾರ ಉದಾರ ನೀತಿಯಿಂದಿರುವುದಾಗಿಯೂ ಆರ್ಡರನ್ನು ಹೊರಡಿಸಿತು.

ಸರ್ಕಾರದ ಈ ವರ್ತನೆ ಮುಂದುವರಿದ ಅನೇಕ ಪ್ರಜಾನಾಯಕರಿಗೂ ಸರಿಬೀಳಲಿಲ್ಲ. ವೆಂಕಟಕೃಷ್ಣಯ್ಯನವರಿಗೂ ಸರ್ಕಾರದ ರೀತಿ ಅಸಮಧಾನ ಉಂಟುಮಾಡಿತು. ಇದನ್ನು ಅವರು ತಮ್ಮ ಪತ್ರಿಕೆಗಳಲ್ಲಿ ಸೂಚಿಸಿದರು.

ಮಿರ್ಜಾರವರು ಅಧಿಕಾರಕ್ಕೆ ಬಂದಮೇಲೆ, ಅವರನ್ನು ಅಭಿನಂದಿಸಿದವರಲ್ಲಿ ವೆಂಕಟಕೃಷ್ಣಯ್ಯನವರು ಪ್ರಮುಖರು. ಕ್ರಮ-ಕ್ರಮೇಣ, ಮಿರ್ಜಾರವರ ಸಾಮರ್ಥ್ಯದ ಬಗ್ಗೆಯೂ ಕೋಮುವಾರು ನಿಷ್ಪಕ್ಷಪಾತದ ಬಗ್ಗೆಯೂ ವೆಂಕಟಕೃಷ್ಣಯ್ಯನವರಿಗೆ ಸಂದೇಹ ಹುಟ್ಟಿತು. ಇವರು ರಂಗಾಚಾರ್ಲುರವರಂತೆ ಅಥವಾ ವಿಶ್ವೇಶ್ವರಯ್ಯನವರಂತೆ ಪ್ರಜಾ ಸ್ವಾತಂತ್ರ್ಯ ಪ್ರಿಯರಲ್ಲವೆಂಬುದು ಅವರ ಮನಸ್ಸಿಗೆ ಬಂದಿತು. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಇವರಿಗೆ ಯಾವ ಆಸ್ಥೆಯೂ ಇಲ್ಲವೆಂಬುದು ತಿಳಿದು ಬಂದಿತು. ತಗಡೂರು ರಾಮಚಂದ್ರರಾಯರಿಗೆ ‘ಕಣಿಯರ ಪತ್ರಿಕೆ’ ಎಂಬ ಹೆಸರಿನಲ್ಲಿ ಒಂದು ಸಣ್ಣ ಪತ್ರಿಕೆಯನ್ನು ಹೊರಡಿಸಲು ಅಪ್ಪಣೆ ಕೊಡದೆ, ಅವರಿಗೆ ನಾನಾ ತೊಂದರೆಗಳನ್ನು ಸರ್ಕಾರ ಕೊಟ್ಟಿತು. ಸರ್ಕಾರದ ಈ ನೀತಿ ಸರಿಯಾದುದಲ್ಲವೆಂದು ವೆಂಕಟಕೃಷ್ಣಯ್ಯನವರ ಪತ್ರಿಕೆಗಳಲ್ಲಿ ಬಂದ ಲೇಖನಗಳು ಮಿರ್ಜಾರವರಿಗೆ ಸರಿ ಬೀಳಲಿಲ್ಲ.

ಬೆಂಗಳೂರು ಗಣೇಶನ ಗಲಾಟೆ ಸಂಬಂಧದಲ್ಲಿ ಮಿರ್ಜಾರವರು ಯಾರ ಮಾತನ್ನೋ ಕೇಳಿ, ತಪ್ಪಿತಸ್ಥರನ್ನು ಶಿಕ್ಷಿಸದೆ, ಯಾರೋ ನಿರಪರಾಧಿಗಳನ್ನು ವಿಚಾರಣೆಗೆ ಗುರಿ ಮಾಡಿದುದು ವೆಂಕಟಕೃಷ್ಣಯ್ಯನವರಿಗೆ ಸರಿ ಎಂದು ಕಾಣಲಿಲ್ಲ. “ಹಣ್ಣು ತಿಂದವನು ತಪ್ಪಿಸಿಕೊಂಡ, ಸಿಪ್ಪೆ ತಿಂದವನು ಸಿಕ್ಕಿಕೊಂಡ” ಎಂಬ ಗಾದೆಯನ್ನು ಒಂದು ಸಮ್ಮೇಳನ ನಡೆದಾಗ ದಿವಾನರ ಗಮನಕ್ಕೆ ತಂದರು.

“ಬ್ರಾಹ್ಮಣ ಪಿತೂರಿ” ಎಂಬ ಬೊಬ್ಬೆಯನ್ನು ಕೆಲವರು ಎಬ್ಬಿಸಿದುದೂ ವೆಂಕಟಕೃಷ್ಣಯ್ಯನವರ ಮನಸ್ಸಿಗೆ ನೋವುಂಟುಮಾಡಿತು. ವಿಶ್ವೇಶ್ವರಯ್ಯ ಸಮಿತಿಯ ವಿಚಾರಣೆ ವರದಿಗಳು ಹೊರಬಿದ್ದಂತೆಲ್ಲಾ, ಮಿರ್ಜಾರವರು ದಿವಾನಗಿರಿ ನಡೆಸಲು ಅಸಮರ್ಥರೆಂದು ವೆಂಕಟಕೃಷ್ಣಯ್ಯನವರಿಗೆ ಮನವರಿಕೆಯಾಯಿತು. ಇದೇ ರೀತಿಯಾದ ಅಭಿಪ್ರಾಯ ಕೆಲವು ಕಡೆ ಬಲವಾಯಿತು. ಈ ಸಂಗತಿಗಳೆಲ್ಲಾ ವೆಂಕಟಕೃಷ್ಣಯ್ಯನವರ ಪತ್ರಿಕೆಗಳಲ್ಲಿ ಪ್ರಕಟವಾದವು.

ಈ ಪರಿಸ್ಥಿತಿಯಲ್ಲಿ ಮೈಸೂರಿನ ಆಡಳಿತ ಸರಿಪಡಿಸು ಒಬ್ಬ ಯೂರೋಪಿಯನ್‌ ದಿವಾನರನ್ನು ನೇಮಿಸಬೇಕೆಂದು, ಒಬ್ಬ ಬಾತ್ಮೀದಾರರು ಕಳುಹಿಸಿದ ಪತ್ರವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರು. ಮಿರ್ಜಾರವರು ಮಹಾರಾಜರ ಆಪ್ತರಾದ್ದರಿಂದ ಅವರಿಗೆ ಒಂದು ಜಹಗಿರಿಯನ್ನು ಕೊಡಬಹುದೆಂದೂ, ಆದರೆ ಅವರು ದಿವನಾಗಿರಿಯಲ್ಲಿ ಮುಂದುವರಿದರೆ ದೇಶಕ್ಕೆ ಅನರ್ಥವೆಂದೂ ಬಾತ್ಮಿ ಅವರ ಪತ್ರಿಕೆಗಳಲ್ಲಿ ಪ್ರಕಟವಾಯಿತು.

ಮಿರ್ಜಾರವರಿಗೆ ಬಹಳ ಅಸಮಾಧಾನವಾಯಿತು. ಕ್ರೋಧವೂ ಬಂದಿತು. ಅದರ ಪರಿಣಾಮವಾಗಿ ವೆಂಕಟಕೃಷ್ಣಯ್ಯನವರ ಪತ್ರಿಕೆಗಳ ಮೇಲೆ ಪತ್ರಿಕಾ ಕಾನೂನಿನ ಪ್ರಯೋಗಮಾಡಿದರು; ಅವುಗಳನ್ನು ನಡೆಸಕೂಡದೆಂದೂ ಸರ್ಕಾರದ ಅಪ್ಪಣೆಯಾಯಿತು. ಈ ಅಪ್ಪಣೆ ೧೯೨೯ ನೇ ಇಸವಿ ಜನವರಿಯ ಮೊದಲನೇ ವಾರದಲ್ಲಿ ವೆಂಕಟಕೃಷ್ಣಯ್ಯನವರ ಮೇಲೆ ಜಾರಿಯಾಯಿತು.  ಇದನ್ನು ಉಲ್ಲಂಘಿಸಿದರೆ ಗಡೀಫಾರು ಆಗುತ್ತಿತ್ತು.

ಈ ಆಜ್ಞೆಗೆ ೩-೪ ತಿಂಗಳ ಹಿಂದೆ, ಪ್ರಜಾಪ್ರತಿನಿಧಿ ಸಭೆಯ ೧೯೨೮ ನೇ ಅಕ್ಟೋಬರ್ ಅಧಿವೇಶನದಲ್ಲಿ, ವೆಂಕಟಕೃಷ್ಣಯ್ಯನವರು ಪತ್ರಿಕೆಗಳ ಕರ್ತವ್ಯಗಳ ಬಗ್ಗೆ ಹೀಗೆ ಹೇಳಿದರು:

ಎಲ್ಲಾ ದೇಶಗಳಲ್ಲಿಯೂ ಪತ್ರಿಕೆಗಳ ಮುಖ್ಯವಾದ ಕರ್ತವ್ಯ ಒಂದೇ. ಅದೇನೆಂದರೆ, ಪ್ರಜೆಗಳ ತಪ್ಪನ್ನು ಪ್ರಜೆಗಳಿಗೆ ತಿಳಿಸತಕ್ಕದ್ದು ಮತ್ತು ಸರ್ಕಾರದ ತಪ್ಪುಗಳನ್ನು ಸರ್ಕಾರಕ್ಕೆ ತೋರಿಸತಕ್ಕದ್ದು. ಅದರಂತೆ ನಮ್ಮ ಪತ್ರಿಕೆಗಳು ಕೆಲಸ ಮಾಡುತ್ತಿವೆ.

ಈ ರೀತಿಯಾಗಿ ‘ಮೈಸೂರ್ ಪೇಟ್ರಿಯಟ್‌’ನಲ್ಲಿ ಈಚೆಗೆ ಕೆಲವು ಲೇಖನಗಳು ಬಂದಿವೆ. ಅವು ಆಕ್ಷೇಪಕರವಾದುವು ಎಂದೂ, ಅದರಿಂದ ಆ ಪತ್ರಿಕೆ ಮೇಲೆ ಸರ್ಕಾರ ಕಾರ್ಯಕ್ರಮ ಕೈಗೊಳ್ಳಬೇಕೆಂದೂ ಕೆಲವು ಟೀಕಾಕಾರರು ಸಲಹೆ ಮಾಡಿದ್ದಾರೆ. ಅದಕ್ಕೆ ನನ್ನ ಉತ್ತರವಿದು: ಪತ್ರಿಕೆಯ ಉದ್ದೇಶ ಸಾರ್ವಜನಿಕರ ಅಭಿಪ್ರಾಯಗಳನ್ನು ಪ್ರಕಟಿಸುವುದು; ನಮ್ಮ ಪತ್ರಿಕೆಯಲ್ಲಿ ಬರುವ ಅಗ್ರ ಲೇಖನಗಳನ್ನು ನೋಡಿದರೆ ನಮ್ಮ ನೀತಿ ಸ್ಪಷ್ಟವಾಗುತ್ತದೆ.

ನಾನು ಕಳೆದ ೬೦ ವರ್ಷಗಳಿಂದ ಪತ್ರಿಕೆಗಳನ್ನು ನಡೆಸುತ್ತಿದ್ದೇನೆ. ಒಂದು ದಿನವಾದರೂ ನಮ್ಮ ಪತ್ರಿಕೆಯಲ್ಲಿ ಶ್ರೀಮನ್‌ ಮಹಾರಾಜರವರಿಗೆ ಅಗೌರವ ಸೂಚಿಸುವ ಲೇಖನ ಬಂದಿಲ್ಲ, ನಮ್ಮ ಮಹಾರಾಜರಲ್ಲಿ ಎಲ್ಲರೂ ರಾಜಭಕ್ತಿಯಿಂದ ಕೂಡಿರಬೇಕೆಂದು ಬರೆಯುತ್ತಲೇ ಬಂದಿದ್ದೇವೆ. ಆದಾಗ್ಯೂ ನಾವು ಇತರ ಬಾತ್ಮೀದಾರರ ಲೇಖನಗಳನ್ನು ಪ್ರಕಟಿಸಬೇಕಾಗುತ್ತದೆ. ಈ ಲೇಖನಗಳನ್ನು ಚೆನ್ನಾಗಿ ಶೋಧಿಸಿಯೇ ಪ್ರಕಟಿಸಲಾಗುತ್ತಿದೆ. ಪತ್ರಿಕೆಯ ಧ್ವನಿಯಲ್ಲಿ ಈಗ ಏನಾದರೂ ಬದಲಾವಣೆ ಕಂಡುಬಂದರೆ ಅದು ಈಗಿನ ವ್ಯತ್ಯಾಸ ಪರಿಸ್ಥಿತಿಯಿಂದಲೇ ಎಂಬುದನ್ನು ತಿಳಿಯಬೇಕು. ಈಚೆಗೆ ಎರಡು ತಿಂಗಳಿಂದ ಬೆಂಗಳೂರಿನಲ್ಲಿ ನಡೆದ ಕೆಲವು ಘಟನೆಗಳ ಕಾರಣ ಪ್ರಜಾಭಿಪ್ರಾಯ ಕ್ಷುಭಿತವಾಗಿದೆ. ಮೈಸೂರು ಬೆಂಗಳೂರಿನಿಂದ ದೂರ; ಕೆಲವು ಸಮಯದ್ಲಿ ತಪ್ಪು ಸುದ್ದಿಗಳು ನಮ್ಮನ್ನು ಮುಟ್ಟಿರಬಹುದು; ಅವನ್ನು ನಾವು ಪ್ರಕಟಿಸಿರಬಹುದು. ಆದರೆ ಸರ್ಕಾರದ ಪಬ್ಲಿಸಿಟಿ ಆಫೀಸರು ಆ ತಪ್ಪನ್ನು ತೋರಿಸಿದ ಕೂಡಲೇ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.

ಒಬ್ಬ ಯೂರೋಪಿಯನ್ ದಿವಾನರನ್ನು ನೇಮಿಸಬೇಕೆಂಬ ಅಭಿಪ್ರಾಯಕ್ಕೆ ನಮ್ಮ ಬೆಂಬಲವಿದೆಯೆಂದು ಆಪಾದನೆ ಮಾಡಲಾಗಿದೆ. ಅದು ಸಂಪಾದಕರ ಅಭಿಪ್ರಾಯವಲ್ಲವೆಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ. ಬೊಂಬಾಯಿನಿಂದ ಒಬ್ಬ ಲೇಖಕರು ಅದನ್ನು ಪ್ರಕಟನೆಗಾಗಿ ನಮಗೆ ಕಳುಹಿಸಿದರು, ನಾವು ಅದನ್ನು ಪ್ರಕಟಿಸಿದೆವು. ಇದೇ ರೀತಿಯಾಗಿ ದಿವಾನರನ್ನು ಸಹ ಮಹಾರಾಜರನ್ನಾಗಿ ಮಾಡಬೇಕೆಂದು ಒಂದು ಲೇಖನ ನಮ್ಮ ಪತ್ರಿಕೆಯಲ್ಲಿ ಪ್ರಕಟವಾದ್ದು ಕೂಡ ಪತ್ರಿಕೆಯ ಅಭಿಪ್ರಾಯವಲ್ಲ. ಹೊರಗಿನಿಂದ ಜವಾಬ್ದಾರಿ ಲೇಖಕರಿಂದ ಬರುವ ಎಲ್ಲಾ ಲೇಖನಗಳನ್ನೂ ಪ್ರಕಟಿಸುವುದಿಲ್ಲವೆಂದು ತಿರಸ್ಕಾರ ಮಾಡುವ ಹಾಗಿಲ್ಲ. ಕೆಲವನ್ನು ಪ್ರಕಟಿಸಿ ಅವನ್ನು ವಾಚಕರ ವಿಚಾರಕ್ಕೆ ಬಿಡಬೇಕು.

ನನ್ನ ಸ್ವಂತ ಅಭಿಪ್ರಾಯವಿರುವುದು ಮೈಸೂರಿನಲ್ಲಿಯೇ ಹುಟ್ಟಿ ಬೆಳೆದು ವಿದ್ಯಾವಂತರೂ ದಕ್ಷರೂ ಆದವರು ಮೈಸೂರಿನ ದಿವಾನರಾಗಿರಬೇಕು ಎಂಬುದು. ಹೊರಗಿನವರನ್ನು ಮೈಸೂರಿನ ದಿವಾನಗಿರಿಗೆ ಕರೆಸಕೂಡದೆಂದು ನಾನು ಅಭಿಪ್ರಾಯಪಟ್ಟಿದ್ದೇನೆ. ಸಂಸ್ಥಾನದಲ್ಲಿ ಇರುವ ಅಥವಾ ಹೊರಗೆ ಇರುವ ಯಾವ ಪತ್ರಿಕೆಯೇ ಆಗಲಿ ಸಾರ್ವಜನಿಕ ಅಭಿಪ್ರಾಯವನ್ನು ಪ್ರತಿಬಿಂಬಿಸದೇ ಇರಲಾರದು.

ಈಗಿನ ದಿವಾನರನ್ನು ನಾನು ಅವರು ಚಿಕ್ಕ ಮಗುವಾಗಿದ್ದಾಗಿನಿಂದಲೂ ಬಲ್ಲೆ. ಅವರ ಮೇಲೆ ನನ್ನ ಆರೋಪಣೆ ಯಾವುದೂ ಇಲ್ಲ.

‘ಮೈಸೂರು ಪೇಟ್ರಿಯಟ್‌’ ಮೇಲೆ ಮೈಸೂರು ಪತ್ರಿಕಾ ಕಾನೂನನ್ನು ಜಾರಿ ಮಾಡುವ ವಿಷಯದಲ್ಲಿ ನಾನು ಹೇಳುವುದಿಷ್ಟೆ. ‘ಮೈಸೂರು ಪೇಟ್ರಿಯಟ್‌’ಗಿಂತಲೂ ಹೆಚ್ಚು ಉದಾರ ಭಾವನೆಯ ಪತ್ರಿಕೆಯಿಲ್ಲ. ಆ ಪತ್ರಿಕೆಯಲ್ಲಿ ಬಂಧ ಬರವಣಿಗೆಗಳ ಬಗ್ಗೆ ಅವುಗಳು ಬರೆದ ಸಮಯ ಸಂದರ್ಭಗಳಿಂದ ಬೇರ್ಪಡಿಸಿ ಅರ್ಥ ಮಾಡುತ್ತಿರುವುದನ್ನು ಕಂಡು ನಾನು ಬಹಳ ವಿಷಾದಪಡುತ್ತೇನೆ.

ಮೈಸೂರು ಪ್ರೆಸ್‌ ಕಾನೂನಿನ ಬಗ್ಗೆ ಒಬ್ಬ ಬ್ರಿಟಿಷ್‌ ವೈಸರಾಯರು ಇದಕ್ಕಿಂತ ಕ್ರೂರವಾದ ಕಾನೂನು ಬೇರೊಂದಿಲ್ಲ ಎಂದು ಹೇಳಿದ ಮಾತನ್ನು ಈ ಸಭೆಗೆ ಜ್ಞಾಪಿಸುತ್ತೇನೆ. ಆದಾಗ್ಯೂ ಮೈಸೂರಿನಲ್ಲಿ ಪತ್ರಿಕೆಗಳು ನಿರಾತಂಕವಗಿ ನಡೆದುಕೊಂಡು ಬಂದಿವೆ. ಇದಕ್ಕೆ ಕಾರಣವೇನೆಂದರೆ ಮೈಸೂರಿನ ಪತ್ರಿಕೆಗಳು ತಮ್ಮ ಇತಿಮಿತಿಯನ್ನು ತಿಳಿದುಕೊಂಡು ರಾಜಭಕ್ತಿಯುತವಾಗಿ ತಮ್ಮ ಕರ್ತವ್ಯವನ್ನು ಮಾಡುತ್ತಿವೆ.

ಶೇಷಾದ್ರಿ ಅಯ್ಯರ್ ಅಥವಾ, ಮಾಧವರಾಯರು ಪ್ರಯೋಗಿಸದೇ ಇದ್ದ ಶಸ್ತ್ರವನ್ನು ಮಿರ್ಜಾರವರು ೧೯೨೯ನೇ ನವಯುಗದಲ್ಲಿ ಪ್ರಯೋಗಿಸಿದರು. ದೇಶಕ್ಕೆ ದೇಶವೇ ಸ್ತಂಭೀಭೂತವಾಯಿತು. ಸರ್ಕಾರ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಎಷ್ಟು ದೂರ ಹೋಗಬಲ್ಲದು ಎಂಬುದು ಇದರಿಂದಲೇ ವ್ಯಕ್ತವಾಯಿತು. ಇದಕ್ಕೆ ಕೆಲವು ದಿನಗಳ ಹಿಂದೆ, “ಪ್ರಜಾಮಿತ್ರ” ಎಂಬ ಬೆಂಗಳೂರು ನಗರದ ದಿನಪತ್ರಿಕೆಯನ್ನು ಸರ್ಕಾರ ನಿಲ್ಲಿಸಿತ್ತು. ವೆಂಕಟಕೃಷ್ಣಯ್ಯನವರ ಪತ್ರಿಕೆಗಳನ್ನು ನಿಲ್ಲಿಸಿದ ಒಂದೆರಡು ತಿಂಗಳಲ್ಲಿಯೇ ಬೆಂಗಳೂರಿನಲ್ಲಿ ‘ವೀರಕೇಸರಿ’ ಸೀತಾರಾಮ ಶಾಸ್ತ್ರಿಗಳ ಮೇಲೆಯೂ, ‘ನವಜೀವನ’ ಅಶ್ವತ್ಥನಾರಾಯಣ ರಾಯರ ಮೇಲೆಯೂ ಸರ್ಕಾರ ರಾಜದ್ರೋಹದ ಮೊಖದ್ದಮೆ ಹೂಡಿತು.

ಒಟ್ಟಿನಲ್ಲಿ, ೧೯೨೯ನೇ ಆದಿಭಾಗದಲ್ಲಿ ಮಿರ್ಜಾ ಸರ್ಕಾರ ಬಹಳ ಉಗ್ರರೂಪವನ್ನು ತಾಳಿತ್ತು. ಅದು ೧೯೨೮ನೇ ಜುಲೈ ೩೦ರಲ್ಲಿ ಎಷ್ಟು ತಟಸ್ಥವಾಗಿ ಜಡವಾಗಿತ್ತೋ, ೧೯೨೯ನೇ ಆದಿ ಭಾಗದಲ್ಲಿ ಅಷ್ಟು ತೀವ್ರತೆಯಿಂದ ಕಾರ್ಯಕ್ರಮಗಳನ್ನು ಕೈಗೊಂಡಿತು. ದೇಶೀಯ ಸಂಸ್ಥಾನವಾದ ಮೈಸೂರಿನಲ್ಲಿ ಇಷ್ಟು ಉಗ್ರ ಕಾರ್ಯಗಳನ್ನು ಸರ್ಕಾರ ಯಾವತ್ತೂ ನಡೆಸಿರಲಿಲ್ಲ. ಅನೇಕ ಪತ್ರಿಕೆಗಳಿಗೆ ಸರ್ಕಾರ ಎಚ್ಚರಿಕೆಯ ನೋಟೀಸುಗಳನ್ನು ಕಳುಹಿಸಿತು. ಅನೇಕ ಸಾರ್ವಜನಿಕರ ಮೇಲೆ ಬೇರೆ ಬೇರೆ ಮೊಖದ್ದಮೆಗಳನ್ನು ಹೂಡಿತು. ೧೯೨೯ರ ಮಧ್ಯದವರೆಗೂ ಸರ್ಕಾರದ ನೀತಿ ಹೀಗೆಯೇ ಇತ್ತು.

ವೆಂಕಟಕೃಷ್ಣಯ್ಯನವರು ಸರ್ಕಾರದ ಅಪ್ಪಣೆಯಂತೆ ತಮ್ಮ ಪತ್ರಿಕೆಗಳನ್ನು ನಿಲ್ಲಿಸಿಬಿಟ್ಟರು. ಅನೇಕ ಸಾರ್ವಜನಿಕರು ಸಂಸ್ಥಾನದ ಹೊರಗೂ ಒಳಗೂ ವೆಂಕಟಕೃಷ್ಣಯ್ಯನವರಿಗೆ ಸಹಾನುಭೂತಿ ಸೂಚಿಸಿ, ಸರ್ಕಾರವನ್ನು ಖಂಡಿಸಿದರು.

೧೯೨೮ನೇ ಮಾರ್ಚ್ ತಿಂಗಳಿನಲ್ಲಿ ನಡೆದ ನ್ಯಾಯವಿಧಾಯಕ ಸಭೆಯಲ್ಲಿ ಪತ್ರಿಕಾ ಕಾನೂನನ್ನು ರದ್ದು ಮಾಡಬೇಕೆಂಬ ನಿರ್ಣಯ ಸರ್ವಾನುಮತದಿಂದ ಪಾಸಾಯಿತು. ಸರ್ಕಾರವೂ ಆ ಹಳೇ ಕಾನೂನನ್ನು ರದ್ದು ಮಾಡುವುದಾಗಿಯೂ, ಅದರ ಜಾಗದಲ್ಲಿ ಬೇರೆ ಉದಾರವಾದ ಪತ್ರಿಕಾ ನಿಯಮವನ್ನು ಜಾರಿಗೆ ತರುವುದಾಗಿಯೂ ಭರವಸೆಯಿತ್ತಿತು. ಇಂತಹ ಭರವಸೆ ಕೊಟ್ಟಿದ್ದರೂ, ಸರ್ಕಾರ ಆ ಹಳೇ ಕಾನೂನನ್ನು ಉಪಯೋಗಿಸಿ ವೃದ್ಧಪಿತಾಮಹರ ಪತ್ರಿಕೆಗಳನ್ನು ನಿಲ್ಲಿಸಿದ್ದಕ್ಕಾಗಿ ಬಹಳವಾಗಿ ಟೀಕಿಸಲಾಯಿತು. ಪತ್ರಿಕೆಗಳಲ್ಲಿ ಯಾವುದಾದರೂ ಆಕ್ಷೇಪಕರವಾದ ಲೇಖನ ಬಂದರೆ, ಅದನ್ನು ಒಬ್ಬ ಹೈ ಕೋರ್ಟ್ ಜಡ್ಜರ ‘ಕ್ವಾಸಿ-ಜುಡಿಷಿಯಲ್‌ ಎðಕ್ವೈರಿ’ಗೆ ಗುರಿಪಡಿಸಿ, ಅವರ ತೀರ್ಮಾನದಂತೆ ನಡೆಯುವುದಾಗಿ ಸರ್ಕಾರದವರು ಆಶ್ವಾಸನೆ ಕೊಟ್ಟಿದ್ದರು; ಈ ಆಶ್ವಾಸನೆಗೂ ಬೆಲೆ ಇಲ್ಲದಂತಾಯಿತೆಂದು ಟೀಕಿಸಲಾಯಿತು.

ವೆಂಕಟಕೃಷ್ಣಯ್ಯನವರು ಮಹಾರಾಜರಿಗೆ ಅಪೀಲು ಹಾಕಿದರು. ನಾಲ್ಕೈದು ಸಾರಿ ಪ್ರೈವೆಟ್‌ ಸೆಕ್ರೆಟರಿಯವರೊಡನೆ ವೆಂಕಟಕೃಷ್ಣಯ್ಯನವರ ವಿಸ್ತಾರ ಭೇಟಿ ನಡೆಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ.  ವೆಂಕಟಕೃಷ್ಣಯ್ಯನವರು ಧೈರ್ಯಗೆಡದೆ “ನೇಚರ್ ಕ್ಯೂರ್” ಎಂಬ ಪತ್ರಿಕೆಯನ್ನು ಆರಂಭಿಸಿ ಅದರಲ್ಲಿ ಪ್ರಕೃತಿಯ ಚಿಕಿತ್ಸೆ ವಿಧಾನ, ಆರೋಗ್ಯ ನಿಯಮಗಳು, ನೀತಿ ಜೀವನ, ಮುಂತಾದ ವಿಷಯಗಳನ್ನು ಬರೆಯುವುದಾಗಿ ತಿಳಿಸಿದರು. ಕೆಲವು ಲಾಯರುಗಳ ಅಭಿಪ್ರಾಯದಂತೆ ಇಂಥ ಪತ್ರಿಕೆಗೆ ಸರ್ಕಾರದ ಅಪ್ಪಣೆ ಬೇಕಿಲ್ಲ ಎಂದು ತಿಳಿದು ವೆಂಕಟಕೃಷ್ಣಯ್ಯನವರು ಸರ್ಕಾರದ ಅಪ್ಪಣೆ ಕೇಳದೆ ಪ್ರಕಟಿಸಿದರು. ಇದು ದಿನಪತ್ರಿಕೆ. “ವೆಲ್ತ್‌ ಆಫ್‌ ಮೈಸೂರ್” ಆಕಾರದ್ದು. ಇದು ೧೦-೧೫ ದಿನಗಳು ನಡೆಯಿತು. ಅಷ್ಟರಲ್ಲಿಯೇ ವೆಂಕಟಕೃಷ್ಣಯ್ಯನವರ ಮಿತ್ರರಾದ ಕೆಲವು ಸರ್ಕಾರಿ ಅಧಿಕಾರಿಗಳು ಬಂದು ‘ಇದು ಪತ್ರಿಕಾ ಕಾನೂನಿನ ಉಲ್ಲಂಘನೆಯಾದಂತಾಗುವುದು. ಇದಕ್ಕೆ ಸರ್ಕಾರ ಗಡೀಫಾರು ಶಿಕ್ಷೆ ವಿಧಿಸುವುದಕ್ಕೂ ಹೇಸುವುದಿಲ್ಲ. ನೀವು ಖಂಡಿತ ಪತ್ರಿಕೆ ನಿಲ್ಲಿಸಿಬಿಡಿ’ ಎಂದು ಬಲಾತ್ಕರಿಸಿದರು.

ಮಿರ್ಜಾರವರ ಸರ್ಕಾರ ವೆಂಕಟಕೃಷ್ಣಯ್ಯನವರನ್ನು ಗಡೀಫಾರು ಮಾಡುವ ಸೂಚನೆಯಿದೆ ಎಂದು ಪೂನಾದ ಸವೆಂಟ್ಸ್‌ ಆಫ್‌ ಇಂಡಿಯಾ ಸೊಸೈಟಿಯ ಕೆಲವು ಸದಸ್ಯರಿಗೆ ತಿಳಿಯಿತು. ಅವರು ವೆಂಕಟಕೃಷ್ಣಯ್ಯನವರಿಗೆ ತಂತಿ ಕಳುಹಿಸಿದರು, ಕಾಗದ ಬರೆದರು, ‘ನಿಮಗೆ ನಾವು ಆಶ್ರಯ ಕೊಡುತ್ತೇವೆ. ಇಲ್ಲಿಗೆ ಬಂದುಬಿಡಿ’ ಎಂಬುದಾಗಿ. ಆದರೆ, ಮುಂದೆ ಪರಿಸ್ಥಿತಿ ಪ್ರಬಲವಾಗದಂಥೆ ವೆಂಕಟಕೃಷ್ಣಯ್ಯನವರು “ನೇಚರ್ ಕ್ಯೂರ್” ಪತ್ರಿಕೆಯನ್ನು ನಿಲ್ಲಿಸಿಬಿಟ್ಟರು. ಇದೇ ಇವರು ಪತ್ರಿಕೆಗಳನ್ನು ನಡೆಸಿದ ಕಡೆಯ ಅಂಕ. ಪುನಃ, ಅವರು ಬದುಕಿದ್ದವರೆಗೆ, ಯಾವ ಪತ್ರಿಕೆಯನ್ನೂ ಹೊರಡಿಸಲಿಲ್ಲ. ಒಂದೆರಡು ಸಾರಿ ತಮ್ಮ ಪತ್ರಿಕೆಗಳನ್ನು ಪುನರುಜ್ಜೀವಗೊಳಿಸಲು ಸರ್ಕಾರಕ್ಕೆ ಬರೆದರು. ಆದರೆ, ಸರ್ಕಾರ ಅವರ ಕೋರಿಕೆಯನ್ನು ತಿರಸ್ಕರಿಸಿತು.

ವೆಂಕಟಕೃಷ್ಣಯ್ಯನವರು ಇನ್ನು ಮುಂದೆ ಮೈಸೂರಿನ ಮತ್ತು ಹೊರಗಿನ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಪುನಃ “ಹಿತಬೋಧನೆ” ಎಂಬ ಗ್ರಂಥಮಾಲೆಯನ್ನು ಆರಂಭಿಸಿ, ಕೆಲವು ತಿಂಗಳವರೆಗೆ ನಡೆಸಿದರು.

ಅವರ ಪತ್ರಿಕೆಗಳನ್ನು ನಿಲ್ಲಿಸಿದ್ದು ಅವರ ಕೈ ಕಟ್ಟಿದಂತಾಗಿತ್ತು. ಅವರ ಆರೋಗ್ಯಕ್ಕೂ ಕುಂದಕವಾಯಿತೆಂದು ಹೇಳಬಹುದು. ಪತ್ರಿಕೆಗಳು ನಿಂತುಹೋದ ಮೇಲೆ ೪ ೧/೨ ವರ್ಷಗಳ ಕಾಲ ಅವರು ಬದುಕಿದ್ದರೂ, ಅವರ ಜೀವನ ಹಿಂದಿನಂತೆ ಬಹಳ ಲವಲವಿಕೆಯಿಂದ ಕೂಡಿರಲಿಲ್ಲ.

೧೯೨೯ರಲ್ಲಿ ಬೆಂಗಳೂರಿನಲ್ಲಿ ಡಿ.ವಿ. ಗುಂಡಪ್ಪನವರು ಒಂದು ಕಾಂಗ್ರೆಸ್‌ ಅಧಿವೇಶನವನ್ನು ಏರ್ಪಡಿಸಿದ್ದರು. ಬೆಂಗಳೂರಿನ ನಾಗರಿಕರು ವೆಂಕಟಕೃಷ್ಣಯ್ಯನವರನ್ನು ಸಾರ್ವಜನಿಕ ಮೆರವಣಿಗೆಯಲ್ಲಿ ಸಭಾ ಮಂಟಪಕ್ಕೆ ಕರೆತಂದರು. ಅವರ ಅಧ್ಯಕ್ಷ ಭಾಷಣ ಸ್ಫೂರ್ತಿಯುತವಾಗಿತ್ತು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ದಿವಾನ್‌ ರಂಗಾಚಾರ್ಲುರವರ ಕಾಲದಲ್ಲಿ ಅಸೆಂಬ್ಲಿ ಸ್ಥಾಪನೆಯಾದ ಉದ್ದೇಶ ಮತ್ತು ಅದು ಬೆಳೆದುಕೊಂಡು ಬಂದ ಬಗೆ, ವಿಶ್ವೇಶ್ವರಯ್ಯನವರ ಕಾಲದಲ್ಲಿ ದೇಶದ ನಾನಾ ಮುಖ ಪ್ರಗತಿ ಇವುಗಳನ್ನೆಲ್ಲಾ ವಿಮರ್ಶಿಸಿದ್ದರು. ತಿಲಕ್‌, ಗಾಂಧೀ ಮುಂತಾದವರು ಭಾರತೀಯ ಸ್ವರಾಜ್ಯ ಸ್ಥಾಪಿಸಲು ಜನರನ್ನು ಹೇಗೆ ತರಪೇತು ಮಾಡಿದರೆಂಬುದನ್ನೂ ವಿವರಿಸಿದ್ದರು. ಈಗ ಜನರಲ್ಲಿ ವಿದ್ಯಾಭ್ಯಾಸ ಹರಡಿದೆ; ಅವರಿಗೆ ತಮ್ಮ ಹಕ್ಕು  ಬಾಧ್ಯತೆಗಳ ಜ್ಞಾನ ಚೆನ್ನಾಗಿದೆ; ಆದುದರಿಂದ ಪ್ರಜೆಗಳಿಗೆ ಸಲ್ಲಬೇಕಾದ ಜವಾಬ್ದಾರಿ ಸರ್ಕಾರವನ್ನು ಕೊಡಲೇಬೇಕು ಎಂಬಿವೇ ಮುಂತಾದ ವಿಚಾರಗಳನ್ನು ತಿಳಿಸಿದರು.

೧೯೩೦ ರಲ್ಲಿ ಗಾಂಧೀಜಿ ಉಪ್ಪಿನ ಸತ್ಯಾಗ್ರಹವನ್ನು ಆರಂಭಿಸಿದಾಗ ಅವರಿಗೆ ಶುಭವನ್ನು ಕೋರಿ, ಮೈಸೂರು ನಗರದಲ್ಲಿ ನಡೆದ ಸಭೆಗಳಲ್ಲಿ ಭಾಷಣ ಮಾಡಿ ಜನರನ್ನು ಹುರಿದುಂಬಿಸಿದರು.

ಲಂಡನ್ನಿನಲ್ಲಿ ನಡೆದ ರೌಂಡ್‌ ಟೇಬಲ್‌ ಸಮ್ಮೇಳನಗಳ ವಿಷಯವಾಗಿ ಆಸಕ್ತಿ ವಹಿಸಿ ಅನೇಕ ಲೇಖನಗಳನ್ನು ಬರೆದರು.