೧೯೨೨ನೇ ಜೂನ್‌ ೧ ರಲ್ಲಿ ಕಾಂತರಾಜೇ ಅರಸರು ನಿವೃತ್ತರಾದ ಮೇಲೆ, ಸರ್.ಎ.ಆರ್. ಬ್ಯಾನರ್ಜಿ ದಿವಾನರಾದರು. ಬ್ಯಾನರ್ಜಿಯವರಿಗೆ ದಿವಾನ್‌ಗಿರಿ ದೊರೆತಿದ್ದು ಅವರಿಗೇ ಒಂದು ಆಕಸ್ಮಿಕ ಘಟನೆ. ಬ್ಯಾನರ್ಜಿಯವರು ತಮ್ಮ ಸರ್ವಿಸೆಲ್ಲಾ ಮುಗಿದು, ಮದ್ರಾಸಿನ ಮುಖಾಂತರ ಕಲ್ಕತ್ತಾಕ್ಕೆ ಹೋಗೋಣವೆಂದು ತಮ್ಮ ಸಾಮಾನು ಸರಂಜಾಮುಗಳನ್ನೆಲ್ಲಾ ರೈಲಿಗೆ ಹಾಕಿಸಿ, ತಾವೂ ರೈಲುಗಾಡಿ ಹತ್ತುವುದರಲ್ಲಿದ್ದರು. ಅಷ್ಟರಲ್ಲೇ ಮಹಾರಾಜರಿಂದ ಒಂದು ಆಹ್ವಾನ ಬಂದಿತು. ಅದೇನೆಂಬುದು ಅವರು ಮಹಾರಾಜರನ್ನು ಸಂದರ್ಶಿಸಿದಾಗಲೇ ತಿಳಿಯಿತು.

“ನೀವು ಇದುವರೆಗೂ ಹಂಗಾಮಿಯಾಗಿ ಮೈಸೂರು ದಿವಾನರಾಗಿ ಕೆಲಸಮಾಡಿದಿರಿ. ಇನ್ನು ಮುಂದೆ ನೀವು ಮೂರು ವರ್ಷಕಾಲ ಖಾಯಂ ದಿವಾನರಾಗಿ ಸೇವೆ ಮಾಡಬೇಕೆಂಬುದು ನಮ್ಮ ಅಪೇಕ್ಷೆ” ಎಂದು ಮಹಾರಾಜರು ಅಪ್ಪಣೆ ಕೊಡಿಸಿದರು. “ಕೃತಜ್ಞತೆಯಿಂದ ಒಪ್ಪಿದ್ದೇನೆ” ಎಂದು ಉತ್ತರ ಹೇಳಿ, ದಿವಾನಗಿರಿಯನ್ನು ಬ್ಯಾನರ್ಜಿಯವರು ವಹಿಸಿದರು. ಇವರು ಹಿಂದೆ ಐ.ಸಿ.ಎಸ್‌. ಆಫೀಸರಾಗಿದ್ದರುಇ. ಕಡಪಾ ಜಿಲ್ಲೆಯ ಕಲೆಕ್ಟರಾಗಿ ಕೆಲಸ ಮಾಡಿದ್ದರು. ೧೯೧೭ ರಲ್ಲಿ ಇವರನ್ನು ಮೈಸೂರು ಸರ್ಕಾರದ ಎಕ್ಸಿಕ್ಯುಟಿವ್‌ ಕೌನ್ಸಿಲರನ್ನಾಗಿ ಮಹಾರಾಜರು ನೇಮಿಸಿದರು. ವಿಶ್ವೇಶ್ವರಯ್ಯನವರ ಕಾಲದಲ್ಲಿ ಇವರು ಎಕ್ಸಿಕ್ಯುಟಿವ್‌ ಕೌನ್ಸಿಲರಾಗಿಯೇ ಇದ್ದರು. ಅವರು ನಿವೃತ್ತರಾದ ಮೇಲೆ ಕಾಂತರಾಜೇ ಅರಸರನ್ನು ದಿವಾನ್‌ ಪದವಿಗೆ ನೇಮಿಸಿದ ಮೇಲೆ, ಅವರಿಗೆ ಅಸ್ವಸ್ಥತೆ ಇದ್ದುದರಿಂದ, ಬ್ಯಾನರ್ಜಿಯವರು ಆರು ತಿಂಗಳು ಹಂಗಾಮಿಯಾಗಿ ದಿವಾನರಾಗಿದ್ದರು. ಕಾಂತರಾಜೇ ಅರಸರು ಅಧಿಕಾರ ವಹಿಸಿದ ಮೇಲೆ ಅವರು ಖಾಯಿಲೆ ಬಿದ್ದಾಗಲೆಲ್ಲ ಇವರು ಹಂಗಾಮಿಯಾಗಿ ದಿವಾನರ ಕೆಲಸ ನೋಡಿಕೊಳ್ಳುತ್ತಿದ್ದರು. ಆದುದರಿಂದ ಇವರು ಖಾಯಂ ಆಗಿ ದಿವಾನರಾಗುವ ಮುಂಚೆಯೇ ಆ ದೊಡ್ಡ ಅಧಿಕಾರದ ಅನುಭವವೂ ಪರಿಚಯವೂ ಇವರಿಗೆ ಚೆನ್ನಾಗಿ ಆಗಿತ್ತು.

ಇವರಿಗೆ ಕನ್ನಡ ಚೆನ್ನಾಗಿ ಬರದಿದ್ದರೂ, ಅರ್ಥಮಾಡಿಕೊಳ್ಳುತ್ತಿದ್ದರು. ಒಂದೆರಡು ಕನ್ನಡ ಮಾತೂ ಆಡುತ್ತಿದ್ದರು.

ಇವರು ಅಸೆಂಬ್ಲಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾಗಲೆಲ್ಲಾ, ಮೈಸೂರು ಜರಿ ರುಮಾಲನ್ನು ಮೈಸೂರಿನವರಂತೆಯೇ ಧರಿಸಿಕೊಂಡು ಇರುತ್ತಿದ್ದರು.

ಇವರು ಇಂಗ್ಲೆಂಡಿನ ಪಾರ್ಲಿಮೆಂಟರಿ ಪದ್ಧತಿಗಳನ್ನು ಪ್ರತ್ಯಕ್ಷವಾಗಿ ತಿಳಿದುಕೊಂಡವರಾದ್ದರಿಂದಲೂ, ಮುಂದೆ ನಿವೃತ್ತರಾದ ಮೇಲೆ ಇಂಗ್ಲೆಂಡಿನ ಪಾರ್ಲಿಮೆಂಟಿನ ಮೆಂಬರಾಗಬೇಕೆಂಬ ಆಶೆಯಿದ್ದುದರಿಂದಲೂ, ಮೈಸೂರು ಅಸೆಂಬ್ಲಿ ಮತ್ತು ಲೆಜಿಸ್ಲೆಟಿವ್‌ ಕೌನ್ಸಿಲಿನ ಕಾರ್ಯಕಲಾಪಗಳನ್ನು ಇಂಗ್ಲೆಂಡಿನ ಪಾರ್ಲಿಮೆಂಟರಿ ರೀತಿಯಲ್ಲಿಯೇ ನಡೆಸುತ್ತಿದ್ದರು. ಪಾಯಿಂಟ್‌ ಆಫ್‌ ಆರ್ಡರುಗಳನ್ನು ಗೌರವಿಸಿ ರೂಲಿಂಗ್‌ಗಳನ್ನು ಕೊಡುತ್ತಿದ್ದರು. ಸಭಿಕರಿಗೂ ತಾವು ಪಾರ್ಲಿಮೆಂಟರಿ ರೀತಿಯ ಸಂಸ್ಥೆಯ ಸದಸ್ಯರೆಂಬ ಅಭಿಮಾನ ಬರುವ ಹಾಗೆ ಲವಲವಿಕೆಯನ್ನು ಉಂಟುಮಾಡುತ್ತಿದ್ದರು. ಇವರು ದಿವಾನಾರಾಗಿ ಇದ್ದ ಮೂರು ವರ್ಷವೂ ಮೈಸೂರು ಅಸೆಂಬ್ಲಿ ಸ್ವಾರಸ್ಯವಾಗಿಯೇ ಕೆಲಸ ಕಾರ್ಯಗಳನ್ನು ನಡೆಸಿತು. ಸದಸ್ಯರ ಮಾತನಾಡುವ ಹಕ್ಕುಗಳನ್ನು ದಿವಾನರು ಎಂದಿಗೂ ಮೊಟಕು ಮಾಡುತ್ತಿರಲಿಲ್ಲ.

ಇವರ ಕಾಲದಲ್ಲಿ ವೆಂಕಟಕೃಷ್ಣಯ್ಯನವರು, ಬಹಳ ವಯಸ್ಸಾಗಿದ್ದಾಗ್ಯೂ, ಸಾರ್ವಜನಿಕ ಕೆಲಸಕಾರ್ಯಗಳನ್ನು ಆಲ್ಸಯವಿಲ್ಲದೆ ಮಾಡುತ್ತಿದ್ದರು. ಯಾವ ಸಭೆಗಾಗಲೀ, ಕಾಲಕ್ಕೆ ಸರಿಯಾಗಿ ಹೋಗಿ, ಅಲ್ಲಿನ ನಡೆವಳಿಕೆಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ, ಸೂಕ್ತವಾದ ಸಲಹೆಗಳನ್ನು ಕೊಡುತ್ತಿದ್ದರು. ಪ್ರಸಂಗ ಬಂದಾಗಲೆಲ್ಲಾ ಪತ್ರಿಕಾ ಕಾನೂನು ರದ್ದಾಗಬೇಕೆಂದೂ, ಮಿಲ್ಲರ್ ಕಮಿಟಿ ಆರ್ಡರನ್ನು ಸರ್ಕಾರ ವಾಪಸು ತೆಗೆದುಕೊಳ್ಳಬೇಕೆಂದೂ ವಾದಿಸುತ್ತಿದ್ದರು. ತಮ್ಮ ಪತ್ರಿಕೆಗಳಲ್ಲಿ ಎಂದಿನಂತೆ ಅನ್ಯಾಯವಾದವರಿಗೆಲ್ಲಾ ರಕ್ಷಣೆ ಕೊಡುತ್ತಿದ್ದರು. ಲಂಚಕೋರತನವನ್ನು ಕಂಡರೆ ಇವರಿಗಾಗದು. ಬ್ಯಾನರ್ಜಿಯವರ ಕಾಲದಲ್ಲಿ ಹೊಸದಾಗಿ ರೈಲ್ವೆ ಇಂಜಿನುಗಳನ್ನು ಕೊಂಡಾಗ ಸಂಬಂಧಿಸಿದ ಅಧಿಕಾರಿಗಳು ಬಹಳ ಕಮಿಷನ್ ತೆಗೆದುಕೊಂಡರೆಂಬ ಸುದ್ದಿಯನ್ನು ಅವರ ಪತ್ರಿಕೆಯಲ್ಲಿ ಪ್ರಕಟಿಸಿ, ಆ ಬಗ್ಗೆ ಪೂರ್ತಿಯಾಗಿ ವಿಚಾರಣೆ ಯಾಗುವಂತೆ ಮಾಡಿದರು. ಒಂದು ವಿಷಯವನ್ನು ಅವರು ಪ್ರಕಟಿಸಿದ ಮೇಲೆ ಅದನ್ನು ಹಾಗೆಯೇ ಬಿಡುತ್ತಿರಲಿಲ್ಲ. ಪುನಃ ಪುನಃ ಸಂಬಂಧಪಟ್ಟವರ ಗಮನವನ್ನು ಅದಕ್ಕೆ ಸೆಳೆದು, ಅದು ಸರಿಯಾಗುವವರೆಗೂ ಬಿಡುತ್ತಿರಲಿಲ್ಲ.

ದಿವಾನರಿಂದ ಆದಿಯಾಗಿ ಎಲ್ಲ ಅಧಿಕಾರಿಗಳೂ ಇವರ ಲೇಖನಿಗೆ ಹೆದರುತ್ತಿದ್ದರು. ಬ್ಯಾನರ್ಜಿಯವರು ಕೂಡ ಇವರಿಗೆ ಬಹಳ ಭಯ ಭಕ್ತಿಗಳನ್ನು ತೋರಿಸುತ್ತಿದ್ದರು. ಇವರು ವೆಂಕಟಕೃಷ್ಣಯ್ಯನವರಿಗೆ ಅಸೆಂಬ್ಲಿಯಲ್ಲಾಗಲೀ, ನ್ಯಾಯವಿದಾಯಕ ಸಭೆಯಲ್ಲಾಗಲೀ ಭಾಷಣ ಮಾಡಲು ಪೂರ್ಣಾವಕಾಶ ಕೊಟ್ಟು, ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳುತ್ತಿದ್ದರು.

ಬ್ಯಾನರ್ಜಿಯವರ ಕಾಲದಲ್ಲಿ ಪತ್ರಿಕಾ ಕಾನೂನನ್ನು ರದ್ದುಮಾಡಲು ಸರ್ಕಾರ ಒಂದು ಪ್ರಯತ್ನ ನಡೆಸಿತು. ಅದು ಸಫಲವಾಗಲಿಲ್ಲ. ಇವರ ಕಾಲದಲ್ಲಿಯೇ ಅಸೆಂಬ್ಲಿಗೂ, ಲೆಜಿಸ್ಲೆಟಿವ್‌ ಕೌನ್ಸಿಲಿಗೂ ಇನ್ನೂ ಹೆಚ್ಚಿನ ಅಧಿಕಾರಗಳನ್ನು ಕೊಡಬೇಕೆಂದು ಸರ್ಕಾರ ಆಲೋಚಿಸಿ, ಮೈಸೂರು ವಿಶ್ವವಿದ್ಯಾಲಯ ವೈಸ್‌ ಛಾನ್ಸಲರಾಗಿ ಆಗ ಕೆಲಸ ಮಾಡುತ್ತಿದ್ದ ಡಾ. ಬ್ರಜೇಂಧ್ರನಾಥ ಸೀಲ್‌ ಅವರ ಅಧ್ಯಕ್ಷತೆಯಲ್ಲಿ ಸೂಕ್ತವಾದ ಸಲಹೆಗಳನ್ನು ಶಿಫಾರಸು ಮಾಡಲು ಒಂದು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿ ೧೯೨೩ನೇ ಮಾರ್ಚ್ ತಿಂಗಳಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಅರ್ಪಿಸಿತು. ಪ್ರಜಾಭಿಪ್ರಾಯವನ್ನು ತಿಳಿದುಕೊಳ್ಳಲು ಸರ್ಕಾರ ಇದನ್ನು ೧೯೨೪ನೇ ಏಪ್ರಿಲ್‌ನಲ್ಲಿ ಪ್ರಕಟಿಸಿತು. ಪ್ರಜೆಗಳ ಅನೇಕ ನಾಯಕರೂ, ಸಂಘಗಳೂ, ಸಮ್ಮೇಳನಗಳೂ, ಈ ಸಮಿತಿಯ ವರದಿಯನ್ನು ದೀರ್ಘವಾಗಿಯೂ ಕೂಲಂಕುಷವಾಗಿಯೂ ಪರಿಶೀಲಿಸಿ, ತಮ್ಮ ತಿದ್ದುಪಡಿಗಳನ್ನು ಸರ್ಕಾರಕ್ಕೆ ಸೂಚಿಸಿದರು. ಮಹಾರಾಜರೂ, ಸರ್ಕಾರದವರೂ ಎಲ್ಲ ಅಂಶಗಳನ್ನೂ ಪರಿಶೀಲಿಸಿದ ಮೇಲೆ, ಘೋಷಣೆಯನ್ನು ಹೊರಡಿಸಲಾಯಿತು.

ಮಹಾರಾಜರ ಈ ಘೋಷಣೆಯಲ್ಲಿ ಮುಂದಿನ ಅಸೆಂಬ್ಲಿಯ ಮತ್ತು ನ್ಯಾಯವಿಧಾಯಕ ಸಭೆಯ ಅಧಿಕಾರಗಳ ವ್ಯಾಪ್ತಿಯನ್ನು ವಿಧಾಯಕ ಮಾಡಲಾಗಿತ್ತು. ಇದರ ಪ್ರಕಾರ, ಅಸೆಂಬ್ಲಿ ಸದಸ್ಯರ ಸಂಖ್ಯೆ ೨೫೦ರಿಂದ ೨೭೫ರ ವರೆಗೂ ಇರಬಹುದು; ನ್ಯಾಯ ವಿಧಾಯಕ ಸಭೆಯ ಸದಸ್ಯರ ಸಂಖ್ಯೆ ೫೦ ಇರಬಹುದು.  ಈ ಎರಡು ಸಭೆಗಳಿಗೂ ಚುನಾವಣಾಧಿಕಾರವನ್ನು ಹೊಂದುವವರ ಅರ್ಹತೆಯನ್ನೂ ನಿಯಾಮಕ ಮಾಡಲಾಯಿತು. ನೂತನ ನಿಬಂಧನೆಗಳ ಪ್ರಕಾರ ಚುನಾಯಿತವಾದ ಅಸೆಂಬ್ಲಿ ಮತ್ತು ನ್ಯಾಯವಿಧಾಯಕ ಸಭೆಯ ಪ್ರಥಮ ಅಧಿವೇಶನವನ್ನು ಮಹಾರಾಜರು ೧೯೨೪ನೇ ಮಾರ್ಚ್ ೧೭ರಲ್ಲಿ ಮೈಸೂರು ಜಗನಮೋಹನ ಬಂಗಲೆಯಲ್ಲಿ ಉದ್ಘಾಟಿಸಿ, ‘ಮೈಸೂರಿನ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಗಿದೆ’ ಎಂದು ಆಶೀರ್ವದಿಸಿದರು.

ಈ ಸಭೆಗಳ ಐದು ಅಧಿವೇಶನಗಳಲ್ಲಿ ಬ್ಯಾನರ್ಜಿಯವರು ಅಧ್ಯಕ್ಷತೆ ವಹಿಸಿ, ಕಾರ್ಯಕಲಾಪಗಳನ್ನು ನಡೆಸಿದರು. ಮುಖ್ಯವಾಗಿ ಸರ್ಕಾರಿ ನೌಕರಿಗಳ ಹಂಚಿಕೆಯ ಬಗ್ಗೆಯೇ ಹಿಂದುಳಿದವರಿಗೆ ಇನ್ನೂ ಹೆಚ್ಚಿನ ನೌಕರಿಗಳು ಬೇಗಬೇಗನೆ ದೊರೆಯಬೇಕೆಂದು ಹಿಂದುಳಿ ಪಂಗಡಗಳ ನಾಯಕರು ವಾದಿಸುತ್ತ ಬಂದರು. ಪತ್ರಿಕಾ ಕಾನೂನನ್ನು ರದ್ದು ಮಾಡಬೇಕೆಂದು ಸಭಿಕರು ಪುನಃಪುನಃ ನಿರ್ಣಯಗಳನ್ನು ತಂದರು. ಎಕ್ಸಿಕ್ಯುಟಿವ್‌ ಕೌನ್ಸಿಲಿಗೆ ಒಬ್ಬ ಖಾಸಗಿ ಸದಸ್ಯರನ್ನು ಸೇರಿಸಿಕೊಳ್ಳಬೇಕೆಂದೂ ಅನೇಕ ಸಾರಿ ಸಭಿಕರು ವಾದಿಸಿದರು.

೧೯೨೫ನೇ ಡಿಸೆಂಬರಿನಲ್ಲಿ ನಡೆದ ನ್ಯಾಯವಿಧಾಯಕ ಸಭೆಯಲ್ಲಿ ವೆಂಕಟಕೃಷ್ಣಯ್ಯನವರು ಖಾಸಗಿ ಎಕ್ಸಿಕ್ಯುಟಿವ್‌ ಕೌನ್ಸಿಲರ ನೇಮಕದ ವಿಷಯವನ್ನು ಬಹಳ ಒತ್ತಾಯಪಡಿಸಿದರು. ಆಗ ಬ್ಯಾನರ್ಜಿಯವರು ಅವರಿಗೆ ವಿಷಯ ಸ್ಪಷ್ಟವಾಗದಿರಲು, ವೆಂಕಟಕೃಷ್ಣಯ್ಯನವರನ್ನು ‘ನೀವು ಹೇಳುವುದೇನು?’ಎಂದು ಕೇಳಿದರು. ವೆಂಕಟಕೃಷ್ಣಯ್ಯನವರು ಥಟಕ್ಕನೆ ಈ ಉತ್ತರ ಹೇಳಿದರು: ‘ಸ್ವಾಮಿ, ತಾವು ಅಲಂಕರಿಸಿರುವ ವೇದಿಕೆಯ ಮೇಲೆ ದಿವಾನರಾದಿಯಾಗಿ ಮಂತ್ರಿ ಮಂಡಲದಲ್ಲಿ ಒಬ್ಬ ಮೈಸೂರಿನವನೂ ಇಲ್ಲ. ಅಲ್ಲಿ ಮೈಸೂರಿನವರಿರಬೇಕು. ಅಲ್ಲದೆ, ನೀವು ಕುಳಿತಿರುವ ವೇದಿಕೆಯಮೇಲೆ ಈ ಸಭೆಯ ಸದಸ್ಯರಾದವರು ಕೂಡಬೇಕು. ಇದೇ ನನ್ನ ಆಶಯ. ಈಗ ನನ್ನ ಮಾತು ಅರ್ಥವಾಯಿತೇ?’ ಎಂದು ಹೇಳಿ, ಆಸನದಲ್ಲಿ ಕುಳಿತರು.

ಆಗ ವೆಂಕಟಕೃಷ್ಣಯ್ಯನವರಿಗೆ ೮೧ ವರ್ಷ ವಯಸ್ಸು. ಇಷ್ಟು ತೀವ್ರತೆಯಿಂದ ಮಾತನಾಡಿದ್ದನ್ನು ಈಚಿನ ವರ್ಷಗಳಲ್ಲಿ ಯಾರೂ ಕೇಳಿರಲಿಲ್ಲ. ಆಗಲೀಗ ದಿವಾನರಾದಿಯಾಗಿ ಎಲ್ಲ ಸಭಿಕರಿಗೂ ವೆಂಕಟಕೃಷ್ಣಯ್ಯನವರೆಂದರೆ ಏನೆಂಬುದು ಕಲ್ಪನೆಗೆ ಬಂದಿತುಇ; ಅವರ ಐವತ್ತು ವರ್ಷಗಳ  ಸಾರ್ವಜನಿಕ ಜೀವನದ ಹೋರಾಟದ ಚಿತ್ರ ಸಭಿಕರ ಮುಂದೆ ಹಾದು ಹೋಯಿತು.

ಈ ರೀತಿ, ಬ್ಯಾನರ್ಜಿಯವರ ಕಾಲದಲ್ಲಿಯೂ, ವೆಂಕಟಕೃಷ್ಣಯ್ಯನವರು ಹಳೇ ಹುಲಿಯಂತೆಯೇ ಜನತೆಯ ಪರವಾಗಿ ಹೋರಾಡಿದರು.