ವೆಂಕಟಕೃಷ್ಣಯ್ಯನವರು ಮೈಸೂರಿನ ಪತ್ರಿಕಾ ಪಿತಾಮಹ ಎಂಬ ಪ್ರೀತಿಯ ಬಿರುದಿಗೆ ಅರ್ಹರು. ಅವರು ತಾವು ಉಪಾಧ್ಯಾಯರಾಗಿ ಜೀವನವನ್ನು ಪ್ರಾರಂಭಿಸಿದ ಒಂದೆರಡು ವರ್ಷಗಳಲ್ಲಿಯೇ ಪತ್ರಿಕಾಕರ್ತ ಜೀವನವನ್ನೂ ಆರಂಭಿಸಿದರು. ಅವರು ಉಪಾಧ್ಯಾಯ ಜೀವನವನ್ನು ಪ್ರವೇಶಿಸಲು ಹೇಗೆ ಸಿ. ರಂಗಾಚಾರ್ಲುರವರ ಉಪದೇಶ ಕಾರಣವೋ, ಹಾಗೆಯೇ ಪತ್ರಿಕಾ ಜೀವನವನ್ನು ಪ್ರವೇಶಿಸಲೂ ರಂಗಾಚಾರ್ಯರವರ ಉಪದೇಶವೇ ಕಾರಣ. ಎಂ.ಎಸ್‌. ಪುಟ್ಟಣ್ಣ, ವಿ.ಪಿ. ಮಾಧವರಾವ್‌, ಇವರುಗಳನ್ನೂ ‘ಪತ್ರಿಕಾ ಕರ್ತರಾಗಿ’ ಎಂದು ರಂಗಾಚಾರ್ಲುರವರು ಉಪದೇಶಿಸಿದರು. ಇವರ ಉಪದೇಶದಂತೆ ಎಂ.ಎಸ್‌. ಪುಟ್ಟಣ್ಣನವರು ಪತ್ರಿಕೆ ನಡೆಸಲು ಆರಂಭಿಸಿದರು. ಆಕಾಲದಲ್ಲಿ, ಎಂದರೆ ೧೯ನೇ ಶತಮಾನದ ಅಂತ್ಯಭಾಗದಲ್ಲಿ ಮತ್ತು ೨೦ನೇ ಶತಮಾನದ ಆದಿಭಾಗದಲ್ಲಿ, ದೇಶದ ಮಹಾ ನಾಯಕರುಗಳು ಸಾಮಾನ್ಯವಾಗಿ ಉಪಾಧ್ಯಾಯರೂ, ಜೊತೆಗೆ ಪತ್ರಿಕಾಕರ್ತರೂ ಹಾಗೂ ರಾಜಕೀಯ ಮುಖಂಡರುಗಳೂ ಆಗಿರುತ್ತಿದ್ದರು.

ಸ್ವಾತಂತ್ರ್ಯ ಬಂದಮೇಲೆದ ಪತ್ರಿಕೆಗಳು ದೊಡ್ಡ ದೊಡ್ಡ ಕೈಗಾರಿಕಾ ಸಂಸ್ಥೆಗಳ ಹಾಗೆ ನಡೆಯಲು ತೊಡಗಿದುದರಿಂದ ಹಾಗೂ ವೃತ್ತಿಗಳು ಬಹಳವಾಗಿ ವಿಂಗಡವಾಗಿರುವುದರಿಂದ ತಮ್ಮ ಕೆಲಸ ಬಿಟ್ಟು ಬೇರೆ ಕೆಲಸ ಮಾಡಲು ಸಾಧ್ಯವಿಲ್ಲವಾಯಿತು. ಉಪಾಧ್ಯಾಯರು ಉಪಾಧ್ಯಾಯರೇ. ಪತ್ರಿಕಾಕರ್ತರು ಪತ್ರಿಕಾಕರ್ತರೇ. ರಾಜಕೀಯ ಮನುಷ್ಯರು ರಾಜಕೀಯ ಮನುಷ್ಯರೇ. ದೇಶದ ಸ್ವಾತಂತ್ಯ್ರಾನಂತರ ಪತ್ರಿಕೆಗಳನ್ನು ಆಧುನಿಕ ರೀತಿಯಾಗಿ ನಡೆಸಲು ಬಹಳ ಬಂಡವಾಳ ಬೇಕು. ಪತ್ರಿಕೆಗಳ ಮುದ್ರಣ, ಹಂಚಿಕೆ ಮುಂತಾದವುಗಳನ್ನು ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಬೇಕು. ಈಗ ಸಾಮಾನ್ಯವಾಗಿ ದೇಶಭಾಷಾ ಪತ್ರಿಕೆಗಳ ಪ್ರಚಾರ ಸಂಖ್ಯೆ ಇಷ್ಟು ಸಾವಿರ ಅಷ್ಟು ಸಾವಿರ ಎಂದು ಸಾವಿರ ಸಂಖ್ಯೆಯಲ್ಲಿ ಗಣಿನಬೇಕಾಗಿದೆ. ಈಗಿನ ಪತ್ರಿಕೆಗಳಿಗೆ ಜಾಹಿರಾತಿನ ಪುಷ್ಟಿಯೂ ಇದೆ. ಸುಲಭವಾಗಿ ಹೊಸ ಪತ್ರಿಕೆಗಳನ್ನು ಸ್ಥಾಪಿಸುವುದು ಸಾಧ್ಯವೇ ಇಲ್ಲ. ಪತ್ರಿಕೆಗಳನ್ನು ಈಗ ಸ್ಥಾಪಿಸಬೇಕಾದರೆ ೧೦ ಲಕ್ಷ, ೨೦ ಲಕ್ಷ ರೂಪಾಯಿಗಳ ಬಂಡವಾಳ ಬೇಕು. ಸಣ್ಣ ಪತ್ರಿಕೆಗಳನ್ನು ಪ್ರಾರಂಭಿಸಿದರೂ ಅವು ಬಹಳ ಕಾಲ ಉಳಿಯುವುದಿಲ್ಲ.

ಸ್ವರಾಜ್ಯ ಬಂದಮೇಲೆ ರಾಜಕೀಯವೇ ಪ್ರತ್ಯೇಕವಾಗಿ ಬಿಟ್ಟಿದೆ. ವಿಧಾನ ಸಭೆ, ವಿಧಾನ ಪರಿಷತ್‌, ಲೋಕಸಭೆ, ರಾಜ್ಯಸಭೆ. ಈ ಸಭೆಗಳ ಸದಸ್ಯರು ಚುನಾಯಿತರಾಗಿ ಬಂದವರು ಪ್ರತ್ಯೇಕ ಪಾರ್ಟಿಗಳನ್ನು ಕಟ್ಟಿಕೊಂಡು ರಾಜಕೀಯ ನಡೆಸುತ್ತಾರೆ. ಎಲ್ಲಾ ವಿಷಯಗಳೂ ಪಾರ್ಟಿಗಳಲ್ಲಿ ಚರ್ಚಿತವಾಗುತ್ತವೆ. ಪಾರ್ಟಿಗಳ ತೀರ್ಮಾನದಂತೆ ಸದಸ್ಯರು ನಡೆಯುತ್ತಾರೆ, ಮತ್ತು ಭಾಷಣ ಮಾಡುತ್ತಾರೆ. ಕಾಂಗ್ರೆಸ್‌ ಪಾರ್ಟಿ , ಕಮ್ಯುನಿಸ್ಟ್‌ ಪಾರ್ಟಿ, ಸೋಷಲಿಸ್ಟ್‌ ಪಾರ್ಟಿ, ಸ್ವತಂತ್ರ ಪಾರ್ಟಿ, ಜನ ಸಂಘ, ದ್ರಾವಿಡ ಮುನ್ನೇಟ್ರ ಕಳಗಂ, ಎಂಬುದಾಗಿ ಅನೇಕ ಪಾರ್ಟಿಗಳಿವೆ. ಆದುದರಿಂದ ಈಗ ರಾಜಕೀಯದಲ್ಲಿ ಪತ್ರಿಕೆಗಳಿಗಿಂತಲೂ ರಾಜಕೀಯ ಪಾರ್ಟಿಗಳು ಮುಂದಾಗಿವೆ. ಪತ್ರಿಕೆಗಳು ಹೊಸ ಕಾನೂನುಗಳನ್ನೂ, ಪಾರ್ಟಿಗಳ ನಡವಳಿಕೆಗಳನ್ನೂ, ಸರ್ಕಾರದ ಕೆಲಸಗಳನ್ನೂ ಟೀಕಿಸುತ್ತವೆ. ಈಗಿನ ಪತ್ರಿಕೆಗಳಲ್ಲಿ ರಾಜಕೀಯದ ಜೊತೆಗೆ, ವ್ಯಾಪಾರ, ಕೈಗಾರಿಕೆ, ತೆರಿಗೆ, ಸುಂಕ, ಬ್ಯಾಂಕುಗಳು,ಮುನಿಸಿಪಾಲಿಟಿ, ತಾಲ್ಲೂಕು ಬೋರ್ಡ್, ಡಿಸ್ಟ್ರಿಕ್ಟ್‌ ಬೋರ್ಡ್, ವಿಶ್ವವಿದ್ಯಾಲಯ, ವಿದ್ಯಾಸಂಸ್ಥೆಗಳು, ವಿವಿಧ ಕ್ರೀಡೆಗಳು, ನಾಟಕ, ಸಂಗೀತ, ಸಿನಿಮಾ, ಚಿತ್ರಕಲೆ, ಇವೇ ಮುಂತಾದ ವಿಷಯಗಳಿಗೂ ಸ್ಥಳ ಕೊಡಬೇಕು. ಪತ್ರಿಕೆಗಳೆಂದರೆ ಸಮಗ್ರ ಸಂಸ್ಥೆಗಳು. ಒಂದು ಒಳ್ಳೇ ಪತ್ರಿಕೆಯನ್ನು ಓದಿದರೆ ಪ್ರಪಂಚದ ವಿದ್ಯಮಾನಗಳೆಲ್ಲಾ ವಿದಿತವಾಗುತ್ತದೆ. ಅಲ್ಲದೆ, ಈಗ ಪತ್ರಿಕೆಗಳ ಪುಟಸಂಖ್ಯೆ, ಆಕಾರ, ವೈವಿಧ್ಯತೆ, ಇವುಗಳನ್ನು ನೋಡಿದರೆ ಯಾವನೇ ಒಬ್ಬ ವಾಚಕನು ಪತ್ರಿಕೆಯ ಪ್ರಥಮ ಪುಟದಿಂದ ಕಡೆಯ ಪುಟದವರೆಗೆ ಎಲ್ಲವನ್ನೂ ಓದುತ್ತಾನೆ ಎನ್ನುವ ಹಾಗಿಲ್ಲ. ಅಲ್ಲದೆ, ವಾರ ಪತ್ರಿಕೆಗಳೂ, ಪಕ್ಷ ಪತ್ರಿಕೆಗಳೂ, ಮಾಸ ಪತ್ರಿಕೆಗಳೂ ಬೇರೆ ಬೇರೆ ವಿಷಯಗಳಿಗೆ ಮೀಸಲಾಗಿಯೇ ಇರುತ್ತವೆ. ಈಗಿನ ಪತ್ರಿಕೆಗಳು ಚಿತ್ರಗಳಿಂದ ತುಂಬಿರುತ್ತವೆ. ಹಾಗೆಯೇ ಈಗ ಪತ್ರಿಕೆಗಳ ಬೆಲೆಯೂ ಏರಿದೆ.

ಈಗಿನ ಪತ್ರಿಕೆಗಳ ವರಮಾನ, ವೆಚ್ಚ, ಕೆಲಸಮಾಡುವವರ ಸಂಖ್ಯೆ, ಯಂತ್ರೋಪಕರಣಗಳು, ಟೆಲಿ ಪ್ರಿಂಟರ್ಸ್, ಟೆಲಿರ್ಫೋ, ಟೆಲಿಗ್ರಾಫ್‌, ರೇಡಿಯೋ ಫೋಟೊ, ಮುಂತಾದವುಗಳನ್ನು ತೆಗೆದುಕೊಂಡರೆ ಅವು ಅಗಾಧವಾಗಿವೆ. ಇವು ಈಗಿನ ಪತ್ರಿಕೆಗಳ ವಿಶೇಷ.

ವೆಂಕಟಕೃಷ್ಣಯ್ಯನವರ ಕಾಲದಿಂದ ಸ್ವಾತಂತ್ರ್ಯ ಬರುವವರೆಗೆ, ದೇಶದ ಅನೇಕ ರಾಷ್ಟ್ರನಾಯಕರು, ರಾಜಕೀಯ ಮುಖಂಡರು, ತಮ್ಮ ಬಾಹ್ಯ ಸಾರ್ವಜನಿಕ ಜೀವನದ ಜೊತೆಗೆ ತಮ್ಮದೇ ಆದ ಪತ್ರಿಕೆಗಳನ್ನು ನಡೆಸುತ್ತಿದ್ದರು. ರಾಜಾರಾಮ ಮೋಹನರಾಯ್‌, ಬಾಲಗಂಗಾಧರ ತಿಲಕ್‌, ಗೋಪಾಲಕೃಷ್ಣ ಗೋಖಲೆ, ಪಂಡಿತ ಮದನ ಮೋಹ ಮಾಳವೀಯ, ಲಾಲಾ ಲಜಪತರಾಯ್‌, ಬೆರ್ಪಿ ಚಂದ್ರ ಪಾಲ್‌, ಸುರೇಂದ್ರನಾಥ ಬ್ಯಾನರ್ಜಿ, ಅರವಿಂದ ಘೋಷ್‌, ಜಿ. ಸುಬ್ರಹ್ಮಣ್ಯ ಅಯ್ಯರ್, ಆನಿ ಬೆಸೆಂಟ್‌, ಸಿ.ಆರ್. ದಾಸ್‌, ಮೋತಿಲಾಲ್‌ ನೆಹರು, ಮಹಮದ್‌ ಆಲಿ, ಸಿ.ವೈ. ಚಿಂತಾಮಣಿ, ಸರ್ ಫಿರೋಜ್‌ ಷಾ ಮೆಹ್ತಾ, ಪಟ್ಟಾಭಿ ಸೀತಾರಾಮಯ್ಯ, ಟಿ. ಪ್ರಕಾಶಂ, ಸಿ. ರಾಜ ಗೋಪಾಲಚಾರಿ, ಸುಭಾಸ್‌ ಚಂದ್ರ ಬೋಸ್‌, ಗಾಂಧೀಜಿ ಇವರೆಲ್ಲರೂ ತಮ್ಮ ತಮ್ಮ ಸಂಪಾದಕತ್ವದಲ್ಲಿ ಪತ್ರಿಕೆಗಳನ್ನು ನಡೆಸುತ್ತಿದ್ದರು. ಜವಾಹರಲಾಲ್‌ ನೆಹರೂ ತಾವೇ ಸ್ವತಃ  ಸಂಪಾದಕರಾಗದಿದ್ದರೂ ಒಂದು ಪತ್ರಿಕೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಈ ಪತ್ರಕೆಗಳು ಅವರುಗಳ ರಾಜಕೀಯವನ್ನು ಪ್ರತಿಬಿಂಬಿಸುತ್ತಿದ್ದವು ಹಾಗೂ ಪ್ರಚಾರ ಮಾಡುತ್ತಿದ್ದವು.

ಇದೇ ರೀತಿಯ ಸಂಪ್ರದಾಯ ಮೈಸೂರಿನಲ್ಲಿಯೂ ಇತ್ತು. ವೆಂಕಟಕೃಷ್ಣಯ್ಯನವರ ಪತ್ರಿಕೆಗಳೆಲ್ಲವೂ ಅವರ ರಾಜಕೀಯವನ್ನು ಪ್ರಚಾರ ಮಾಡುತ್ತಿದ್ದುವು. ಆದುದರಿಂದ ವೆಂಕಟಕೃಷ್ಣಯ್ಯನವರ ಪತ್ರಿಕೆಗಳ ವಿಷಯವನ್ನು ಪ್ರಸ್ತಾಪಿಸುವಾಗ, ಅವರ ರಾಜಕೀಯವೂ ಅದರಲ್ಲಿ ಸೇರಿಕೊಂಡೇ ಬರುತ್ತದೆ. ಅವರ ಪತ್ರಿಕೆಗಳು ಅವರ ರಾಜಕೀಯದ ಕೈ ಗೊಂಬೆಗಳಾಗಿದ್ದವು. ಅವರ ರಾಜಕೀಯದ ಏರಿಳಿತದಂತೆಯೇ ಅವರ ಪತ್ರಿಕೆಗಳ ಏರಿಳಿತವೂ ಇತ್ತು. ಆಗಿನ ಕಾಲದ ರಾಜಕೀಯ ಜನಸೇವೆ ಮಾತ್ರವೇ ಹೊರತು, ಈಗಿನ ಹಾಗೆ ಯಾವ ಪ್ರತಿಫಲವೂ ಅದಕ್ಕೆ ಇರಲಿಲ್ಲ. ಸ್ವಾತಂತ್ರ್ಯ ಬರುವವರೆಗೆ ದೇಶೀಯ ಪತ್ರಿಕೆಗಳೆಲ್ಲಾ ಆಗಿನ ಸರ್ಕಾರಕ್ಕೆ ವಿರೋಧವಾಗಿಯೇ ಇದ್ದವು. ಡೆಮಾಕ್ರಸಿ ಇಲ್ಲದ ಕಡೆ, ಪತ್ರಿಕೆಗಳೇ ವಿರೋಧ ಪಕ್ಷ.

ವೆಂಕಟಕೃಷ್ಣಯ್ಯನವರ ಪತ್ರಿಕೆಗಳ ಹಣಕಾಸಿನ ಸ್ಥಿತಿ ಶೋಚನೀಯ. ತಾವೇ ಹಣ ಹಾಕಿ ನಡೆಸುತ್ತಿದ್ದರು. ಆಗ ಅನೇಕ ದೇಶೀಯ ಪತ್ರಿಕೆಗಳ ಸ್ಥಿತಿಯೂ ಇದೇ ಆಗಿತ್ತು. ವೆಂಕಟಕೃಷ್ಣಯ್ಯನವರು ತಮ್ಮ ಜೀವನಮಾನದಲ್ಲಿ ೬೦ ವರ್ಷಗಳಿಗಿಂತ ಜಾಸ್ತಿಯಾಗಿ ರಾಜಕೀಯದಲ್ಲಿದ್ದರು ಮತ್ತು ಪತ್ರಿಕೆ ನಡೆಸುತ್ತಿದ್ದರು. ಅವರದು ಬಡತನ. ಅವರ ಪತ್ರಿಕೆಗಳದೂ ಬಡತನ. ಅವುಗಳನ್ನು ನಡೆಸಿಕೊಂಡು ಹೋಗುವುದೇ ಕಷ್ಟವಾಗಿತ್ತು. ಪತ್ರಿಕೆಗಳನ್ನು ಉಚಿತವಾಗಿ ಓದಬೇಕೆಂದು ಅಪೇಕ್ಷಿಸುವವರೇ ಜಾಸ್ತಿ. ಚಂದಾದಾರರಾದವರು ಚಂದಾ ಸರಿಯಾಗಿ ಕೊಡುತ್ತಿರಲಿಲ್ಲ. ಈ ಸ್ಥಿತಿಯಲ್ಲಿಯೇ ಅವರ ಪತ್ರಿಕೆಗಳು ಕಡೆಯವರೆಗೂ ನಡೆಯುತ್ತಿದ್ದವು.

ವೆಂಕಟಕೃಷ್ಣಯ್ಯನವರು ಮೈಸೂರಿನಲ್ಲಿ ಪತ್ರಿಕೆಗಳನ್ನು ಆರಂಭಿಸಿದ ಕಾಲದಲ್ಲಿಯೇ, ಸ್ವಲ್ಪ ಹೆಚ್ಚು ಕಡಿಮೆ, ಬ್ರಿಟಿಷ್‌ ಇಂಡಿಯಾದಲ್ಲಿಯೂ ಪತ್ರಿಕೆಗಳು ಆರಂಭವಾದವು. ಬಹು ಪತ್ರಿಕೆಗಳು ೧೮೭೦-೧೮೮೦ ರಲ್ಲಿ ಆರಂಭವಾದವು. ೧೮೭೦ ರಲ್ಲಿ ಕಲ್ಕತ್ತಾದ ‘ಅಮೃತ ಬಜಾರ ಪತ್ರಿಕೆ’, ಅಲಹಾಬಾದಿನ ‘ಪಯೊನೀರ್’, ಲಾಹೋರಿನ ‘ಸಿವಿಲ್‌ ಅಂಡ್‌ ಮಿಲಿಟರಿ ಗೆಜೆಟ್‌’, ಅಲಹಾಬಾದಿನ ‘ಇಂಡಿಯನ್ ಪೀಪಲ್‌’, ಲಾಹೋರಿನ ‘ಟ್ರಿಬ್ಯೂನ್’, ಮದ್ರಾಸಿನ ‘ಹಿಂದೂ’ (೧೮೭೩), ಪೂನಾದ ‘ಕೇಸರಿ’ ಮತ್ತು ‘ಮರಾಠಾ’ (೧೮೮೧), ಮದ್ರಾಸಿನ ‘ಮದ್ರಾಸ್‌ ಸ್ಟ್ಯಾಂಡಡ್‌’ ಮತ್ತು ‘ಇಂಡಿರ್ಯ ‘ಪೇಟ್ರಿಯೆಟ್‌’, ಕಲ್ಕತ್ತಾದ ‘ಹಿಂದೂ ಪೇಟ್ರೆಯೆಟ್‌’, ಪೂನಾದ ‘ಜ್ಞಾನ ಪ್ರಕಾಶ್‌’ ಮದ್ರಾಸಿನ ‘ಸ್ವದೇಶಮಿತ್ರನ್’ ಮುಂತಾದ ಪತ್ರಿಕೆಗಳು ಉದಯಿಸಿದವು.

ಆಗ ಮೈಸೂರಿಗೆ ಮದ್ರಾಸಿನ ಪತ್ರಿಕೆಗಳು ಬರುತ್ತಿದ್ದುವು. ಮೈಸೂರಿನ ವಿಷಯಗಳ ಬಗ್ಗೆ ಅವು ಬಹಳ ಆಸಕ್ತಿ ವಹಿಸಿ ವಿಮರ್ಶೆ ಮಾಡುತ್ತಿದ್ದುವು.

ಆಗ, ಬೆಂಗಳೂರಿನಲ್ಲಿ ಭಾಷ್ಯಾಚಾರ್ಯ ಎಂಬುವರು ‘ಕರ್ಣಾಟಕ ಪ್ರಕಾಶಿಕಾ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದರು. ಕೆಲವು ಕಾಲವಾದ ಮೇಲೆ ‘ಮೈಸೂರು ಸ್ಟ್ಯಾಂಡರ್ಡ್’ ಮತ್ತು ‘ನಡೆಗನ್ನಡಿ’ ಎಂಬ ಪತ್ರಿಕೆಗಳನ್ನು ಶ್ರೀನಿವಾಸಯ್ಯಂಗಾರ್ ಮತ್ತು ಗೋಪಾಲಯ್ಯಂಗಾರ್ ಎಂಬ ಇಬ್ಬರು ಸಹೋದರರು ನಡೆಸುತ್ತಿದ್ದರು.

ಮೈಸೂರು ನಗರದಲ್ಲಿ ಕ್ರಿಸ್ತ ಮಿಷನರಿಗಳು ‘ವೃತ್ತಾಂತ ಪತ್ರಿಕೆ’ಯನ್ನು ನಡೆಸುತ್ತಿದ್ದರು. ಯಜಮಾನ್‌ ಬಸಪ್ಪನವರು ‘ಮೈಸೂರ್ ಸ್ಟಾರ್’ ಎಂಬ ಪತ್ರಿಕೆಯನ್ನು ಸ್ಥಾಪಿಸಿದರು. ಆದರೆ ವೆಂಕಟಕೃಷ್ಣಯ್ಯನವರ ಪತ್ರಿಕೆಗಳು ಪ್ರಧಾನವಾಗಿದ್ದವು. ಅವರು ಮೊದಲು ಸಂಪಾದಕರಾದದ್ದು “ಹಿತಬೋಧಿನಿ” ಎಂಬ ಪತ್ರಿಕೆಗೆ.

೧೮೮೩ರಲ್ಲಿ ಎಂ.ಎಸ್‌. ಪುಟ್ಟಣ್ಣನವರೂ, ಎಂ.ಬಿ. ಶ್ರೀನಿವಾಸಯ್ಯಂಗಾರ್ಯರೂ ವಿದ್ಯಾಥಿಗಳ ಉಪಯೋಗಕ್ಕಾಗಿ “ಹಿತಬೋಧಿನಿ’’ ಎಂಬ ಕನ್ನಡ ಮಾಸ ಪತ್ರಿಕೆಯನ್ನು ಸ್ಥಾಪಿಸಿದರು. ಒಂದು ವರ್ಷ ನಡೆಸಿದ ಮೇಲೆ ಇವರು ಆ ಪತ್ರಿಕೆಯನ್ನು ವೆಂಕಟಕೃಷ್ಣಯ್ಯನವರಿಗೆ ವಹಿಸಿದರು.

೧೮೮೭ನೇ ಅಕ್ಟೋಬರ್ “ಹಿತಬೋಧಿನಿ” ಸಂಚಿಕೆಯಲ್ಲಿ ಸಂಪಾದಕರು ವಾಚಕರಿಗೆ ಕೆಳಗಿನ ರೀತಿ ಪ್ರಾರ್ಥನೆ ಮಾಡಿದರು:

“ಈ ‘ಹಿತಬೋಧಿನಿ’ ಪತ್ರಿಕೆ ಪ್ರಾರಂಭವಾಗಿ ಕಳೆದ ತಿಂಗಳಿಗೆ ನಾಲ್ಕು ವರ್ಷಗಳಾದುವು. ಈ ಪತ್ರಿಕೆಗಳು ಮೊದಲು ಒಂದೂ ಇರಲಿಲ್ಲ. ನಮ್ಮ ‘ಹಿತಬೋಧಿನಿ’ ಪತ್ರಿಕೆಯನ್ನು ಮ|| ರಾ|| ಎಂ.ಎಸ್‌. ಪುಟ್ಟಣ್ಣ, ಬಿ.ಎ,, ಯವರೂ, ಎಂ.ಬಿ. ಶ್ರೀನಿವಾಸಯ್ಯಂಗಾರ್, ಬಿ.ಎ., ಯವರೂ ಯಾವ ಉದ್ದೇಶದಿಂದ ಪ್ರಾರಂಭ ಮಾಡಿದರೋ ಆ ಉದ್ದೇಶವು ದಿನೇ ದಿನೇ ಕೈಗೂಡುತ್ತ ಬಂದಿರುತ್ತದೆ.

“ನಮ್ಮ ದೇಶವು  ಪೂರ್ವದಲ್ಲಿ ಅತ್ಯುತ್ಕೃಷ್ಟ ದೆಸೆಯಲ್ಲಿದ್ದು ಈಗ ಕ್ಷೀಣ ದೆಸೆಗೆ ಬಂದಿರುವುದಕ್ಕೂ ಅತಿ ಹೀನ ಸ್ಥಿತಿಯಲ್ಲಿದ್ದ ಯೂರೋಪ್‌ ಖಂಡದ ದೇಶಗಳು ಈಗ ನಾವು ನೋಡುವಂಥ ವೃದ್ಧಿ ಸ್ಥಿತಿಗೆ ಬಂದಿರುವುದಕ್ಕೂ, ಈಗ ನಾವು ಪ್ರತ್ಯಕ್ಷವಾಗಿ ನೋಡುತ್ತಿರುವ ತಂತೀ ವರ್ತಮಾನ,ಟಪಾಲು, ರೈಲುಗಳು, ಹೊಗೆ ಜಹಾಜು,ಹೊಗೆ ಯಂತ್ರಗಳು ಮುಂತಾದ ಉತ್ಕ್ರಷ್ಟವಾದ ಪ್ರಮೇಯಗಳು. ಜನಗಳಿಗೆ ಅಸಂಖ್ಯಾತವಾದ ಅನುಕೂಲಗಳು ಉಂಟಾಗುವುದಕ್ಕೂ, ದಿನೇ ದಿನೇ ನಾಗರಿಕತೆ ಹಬ್ಬುವುದಕ್ಕೂ ನಮ್ಮ ಪೂರ್ವದೇಶಗಳಲ್ಲಿ ಇಲ್ಲದಿರುವ ಭೌತಿಕ ಶಾಸ್ತ್ರಾದಿ ಪಾಶ್ಚಿಮಾತ್ಯ ಶಾಸ್ತ್ರಗಳೇ ಮುಖ್ಯ ಕಾರಣಗಳಾಗಿರುತ್ತವೆ. ಸರ್ವಸ್ಯ ಲೋಚನಂ ಶಾಸ್ತ್ರಂ| ಯಸ್ಯ ನಾಸ್ತ್ಯಂಧ ಏವ ಸಃ|| (ಅಂದರೆ ಶಾಸ್ತ್ರ ಸರ್ವರಿಗೂ ಕಣ್ಣಿನಂತಹುದು. ಅದಿಲ್ಲದವನು ಕುರುಡನೇ ಸರಿ) ಎಂಬ ಪ್ರಮಾಣವನ್ನನುಸರಿಸಿ ಇಂತಹ ಪ್ರಯೋಜನಕಾರಿಗಳಾದ ಪಾಶ್ಚಿಮಾತ್ಯ ಶಾಸ್ತ್ರಗಳನ್ನು ಹೂಣ ವಿದ್ಯಾಬಲವಿಲ್ಲದವರಿಗೆ ತಿಳಿಯಪಡಿಸುವುದು ಮುಖ್ಯವೆಂದೆಣಿಸಿ, ಸಾಧ್ಯವಾದ ಮಟ್ಟಿಗೂ ಈ ಶಾಸ್ತ್ರ ವಿಷಯಗಳನ್ನೂ, ಆಗಾಗ್ಗೆ ನಡೆಯುವ ಸರ್ಕಾರಿ ಏರ್ಪಾಡುಗಳನ್ನೂ ಸ್ವದೇಶ ಅನ್ಯದೇಶ ವೃತ್ತಾಂತಗಳನ್ನೂ ಕುಟುಂಬ ವರ್ತಮಾನಗಳನ್ನೂ ಅವಕಾಶಾನುಗುಣವಾಗಿ ವಿವರಿಸುತ್ತಾ ಬಂದಿರುತ್ತೇವೆ.

“ಮ||ಗಳಾದ ಕೆ. ಶಾಮಯ್ಯಂಗಾರ್, ಕೆ. ವೆಂಕಟಸ್ವಾಮಿ, ಬಿ.ಎ., ಎಂ. ರಂಗಾಚಾರ್, ಎಂ.ಎಸ್‌. ಪುಟ್ಟಣ್ಣ, ಬಿ.ಎ., ಬಿ. ರಾಮಸ್ವಾಮಿ, ಬಿ.ಎ., ಎಚ್‌.ವಿ. ನಂಜುಂಡಯ್ಯ, ಎಂ.ಎ.,ಬಿ.ಎಲ್‌., ಎಂ. ಗಣೇಶ ಸಿಂಗ್‌, ಎ. ಸಿ. ಸುಬ್ಬರಾವ್‌, ಬಿ.ಎ., ಎಸ್‌. ಕೃಷ್ಣರಾವ್‌, ಎಂ. ಕೃಷ್ಣಯ್ಯಂಗಾರ್, ಎð. ರಾಮಾಶಾಸ್ತ್ರಿ, ಶೇಷಾಚಾರ್, ಆ. ಆನಂದಾಳ್ವಾರ್ ಮುಂತಾದವರ ಹೆಸರುಗಳನ್ನು ಉಲ್ಲೇಖಿಸಿ, ಅವರುಗಳು ಪತ್ರಿಕೆಗೆ ಲೇಖನಗಳನ್ನು ಬರೆದು ಕೊಡುತ್ತಿರುವುದಕ್ಕಾಗಿ ಎಂ. ವೆಂಕಟಕೃಷ್ಣಯ್ಯನವರು ಕೃತಜ್ಞತೆ ಅರ್ಪಿಸುತ್ತಾರೆ.”

ಈ ಪತ್ರಿಕೆಯನ್ನು ವೆಂಕಟಕೃಷ್ಣಯ್ಯನವರು ನಡೆಸಿಕೊಂಡು ಹೋದುದಲ್ಲದೆ, ‘ಮೈಸೂರ್ ಹೆರಲ್ಡ್‌’ (ಆಂಗ್ಲ ವಾರಪತ್ರಿಕೆ) ‘ವೃತ್ತಾಂತ ಚಿಂತಾಮಣಿ’ (ಕನ್ನಡ ವಾರಪತ್ರಿಕೆ)ಗಳನ್ನೂ ಹೊರಡಿಸಿ ನಡೆಸಿಕೊಂಡು ಬಂದರು. “ವಿದ್ಯಾದಾಯಿನಿ” ಎಂಬ ವಿದ್ಯಾರ್ಥಿ ಪತ್ರಿಕೆಯನ್ನು ಬಾಪು ಸುಬ್ಬರಾಯರು ಆರಂಭಿಸಿದ ಮೇಲೆ, “ಹಿತ ಬೋಧಿನಿ”ಯನ್ನು, ಒಂದೇ ರೀತಿಯ ಎರಡು ಪತ್ರಿಕೆಗಳು ಬೇಡ, ಎಂದು ನಿಲ್ಲಿಸಲಾಯಿತು.

ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಗಳಲ್ಲಿ ದಿನದಿನದ ದೇಶೀ ವಿದೇಶೀ ವೃತ್ತಾಂತಗಳನ್ನೂ, ಪ್ರಮುಖ ವಿಷಯಗಳ ಮೇಲೆ ಟೀಕಟಿಪ್ಪಣಿಗಳನ್ನೂ ಅಗ್ರಲೇಖನಗಳನ್ನೂ ಪ್ರಕಟಿಸುತ್ತಿದ್ದರು. ಸರ್ಕಾರ ಮತ್ತು ಪ್ರಜೆಗಳ ಸಂಬಂಧ, ಸರ್ಕಾರದ ಕರ್ತವ್ಯ, ಪ್ರಜೆಗಳ ಅಧಿಕಾರ-ಇವುಗಳನ್ನು ತಿಳಿಸುತ್ತಿದ್ದರು. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಇವುಗಳಿಗೆ ಸಂಬಂಧಿಸಿದ ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಸ್ತ್ರೀ ವಿದ್ಯಾಭ್ಯಾಸ , ಬಾಲ್ಯವಿವಾಹ ನಿಷೇಧ, ಪಾನನಿರೋಧ, ಅನಾಥರಕ್ಷಣೆ, ಹರಿಜನರ  (ಆಗ ಆದಿಕರ್ಣಾಟಕರು, ಪಂಚಮರು ಎಂದು ಕರೆಯುತ್ತಿದ್ದರು) ಅಭ್ಯುದಯ-ಇವೇ ಮುಂತಾದ ಸಾಮಾಜಿಕ ಸುಧಾರಣಾ ಅಂಶಗಳನ್ನೂ ಬರೆಯುತ್ತಿದ್ದರು.

ಪ್ರಜಾಭಿಪ್ರಾಯದಂತೆ ಸರ್ಕಾರ ನಡೆಯಬೇಕೆಂದು ಪುನಃ ಪುನಃ ಒತ್ತಿ ಬರೆಯುತ್ತಿದ್ದರು. ತಾವು ಪ್ರತಿಪಾದಿಸುವ ತತ್ತ್ವಗಳಿಗೆ ಉದಾಹರಣೆಯಾಗಿ, ಇಂಗ್ಲೆಂಡಿನ ಮತ್ತು ಅಮೆರಿಕದ ಚರಿತ್ರೆಯಿಂದ ಅನೇಕ ಅಂಶಗಳನ್ನು ತಿಳಿಸುತ್ತಿದ್ದರು. ನಮ್ಮ ಜನ ನಿಸ್ಸಹಾಯರಾಗಿರಬಾರದು; ಸ್ವಪ್ರಯತ್ನದಿಂದ ಪ್ರಗತಿಯನ್ನು ಸಾಧಿಸಬೇಕು; ರಾಜಕೀಯದಲ್ಲಿ ಒಗ್ಗಟ್ಟಾಗಿ ಸಭೆಗಳನ್ನೂ, ಸಮ್ಮೇಳನ್ನಗಳನ್ನೂ ನಡೆಸಿ, ಪ್ರಜೆಗಳು ತಮ್ಮ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ತಿಳಿಸಿ, ಅವುಗಳಂತೆ ಸರ್ಕಾರಿ ಅಧಿಕಾರಿಗಳು ನಡೆಯುವಂತೆ ಒತ್ತಾಯ ಮಾಡಬೇಕು ಎಂದು ಬರೆಯುತ್ತಿದ್ದರು. ಮಗು ಅಳದೆ ತಾಯಿಯೂ ಹಾಲು ಕೊಡುವುದಿಲ್ಲ; ಹಾಗೆಯೇ, ಪ್ರಜೆಗಳು ಒದ್ದಾಡಿ ರಗಳೆ ಮಾಡಿದ ಹೊರತು ಸರ್ಕಾರ ಅಲ್ಲಾಡುವುದಿಲ್ಲ ಎಂದು ಹೇಳುತ್ತಿದ್ದರು. ಇಂಗ್ಲೆಂಡಿನಲ್ಲಿ ಮತ್ತು ಅಮೆರಿಕಾದಲ್ಲಿ ಅಷ್ಟು ಚುರುಕು ಸರ್ಕಾರ ಇರುವುದಕ್ಕೆ ಅಲ್ಲಿನ ಜನರೇ ಕಾರಣ; ಜನರಂತೆ ಸರ್ಕಾರ; ಜನರು ಯಾವ ಸರ್ಕಾರಕ್ಕೆ ಅರ್ಹರೋ ಅಂಥ ಸರ್ಕಾರ ದೊರೆಯುತ್ತದೆ; ಮೈಸೂರಿನಲ್ಲಿಯೂ ಪ್ರಜೆಗಳು ಚುರುಕಾಗಿ ಹೋರಾಡಿ ಒಳ್ಳೆಯ ಸರ್ಕಾರವನ್ನು ಏರ್ಪಡಿಸಬೇಕು ಎಂದು ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಗಳಲ್ಲಿ ಪದೇ ಪದೇ ಬರೆಯುತ್ತಿದ್ದರು.

ಪತ್ರಿಕೆಗಳಿರುವುದು ಸರ್ಕಾರವನ್ನು ಟೀಕಿಸುವುದಕ್ಕೆ; ಆದುದರಿಂದ ಅವು ಆ ಕರ್ತವ್ಯವನ್ನು ಮಾಡುತ್ತಿರಬೇಕು; ಅಧಿಕಾರಿಗಳು ಅಧಿಕಾರದಲ್ಲಿದ್ದಾಗ ಮತ್ತರಾಗಿ ಪ್ರವರ್ತಿಸುವುದುಂಟು. ಅಧಿಕಾರ ಮದ್ಯದಂತೆ ಮತ್ತನ್ನು ತರುತ್ತದೆ; ಅಂತಹವರನ್ನು ಎಚ್ಚರಿಸಿ ಕರ್ತವ್ಯೋನ್ಮುಖರಾಗುವಂಥೆ ಮಾಡುವುದು ಪತ್ರಿಕೆಗಳ ಕರ್ತವ್ಯ ಎಂದು ಬರೆಯುತ್ತಿದ್ದರು. ಅವರಿಗೆ ಬಹಳ ಮುಪ್ಪು ಬಂದ ಮೇಲೆ ಪತ್ರಿಕೆ ನಡೆಸುತ್ತಿದ್ದಾಗಲೂ ಅಧಿಕಾರ ಮತ್ತರಾದ ಅಧಿಕಾರಿಗಳನ್ನು ಎಚ್ಚರಿಸುವುದೇ ಅವರ ಕರ್ತವ್ಯವಾಗಿತ್ತು.

ಅವರು ಸರಳವೂ, ಸುಲಲಿತವೂ ಆದ ಭಾಷೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ತಾವು ಬರೆಯುತ್ತಿರುವುದು ಸಾಮಾನ್ಯ ಜನರು ಓದುವುದಕ್ಕಾಗಿ; ಆದುದರಿಂದ ವಿಷಯಗಳನ್ನು ಬಹಳ ಸುಲಭವಾಗಿ ಬರೆಯಬೇಕು ಎಂಬುದು ಅವರ ನೀತಿ. ಯಾವುದನ್ನು ಬರೆಯಬೇಕಾದರೂ ನೇರವಾದ ರೀತಿಯಲ್ಲಿ ಬರೆಯುತ್ತಿದ್ದರು. ಅವರದು ಸಾಹಿತಿಗಳ ಆಲಂಕಾರಿಕ ಭಾಷೆಯಲ್ಲ. ಅವರ ಪತ್ರಿಕೆಗಳು ವಯಸ್ಕರ ಶಿಕ್ಷಣ ಶಾಲೆಗಳಿಂತಿದ್ದುವು.

ಸಾಧ್ಯವಾದ ಮಟ್ಟಿಗೆ ಮೃದು ಮಧುರವಾದ ಭಾಷೆಯಲ್ಲಿಯೇ ಅವರು ಸರ್ಕಾರವನ್ನು ಟೀಕಿಸುತ್ತಿದ್ದರು. ಸಮಯ ಬಂದರೆ ಉಗ್ರವಾದ ಭಾಷೆಯನ್ನು ಉಪಯೋಗಿಸಲು ಹಿಂಜರಿಯುತ್ತಿರಲಿಲ್ಲ. ಅವರ ಬರವಣಿಗೆಗಳಿಂದ ಆಗಿನ ಕೆಲವು ದಿವಾನರಿಗೂ, ಅಧಿಕರಿಗಳಿಗೂ ಕೆಲವು ಸಾರಿ ಅತೃಪ್ತಿ ಅಸಮಾಧಾನಗಳುಂಟಾಗುತ್ತಿದ್ದುವು. ಕೆಲವು ಅಧಿಕಾರಿಗಳು ಅವರಿಗೆ ಬಹಳ ಕಿರುಕುಳ ಕೊಟ್ಟದ್ದೂ ಉಂಟು. ಆದರೂ, ಅವರು ನಿರ್ದಾಕ್ಷಿಣ್ಯವಾಗಿ ಮತ್ತು ನಿರ್ಭಯವಾಗಿ ತಮ್ಮ ಕರ್ತವ್ಯವನ್ನು ಮುಂದುವರಿಸಿದರು.

ವೆಂಕಟಕೃಷ್ಣಯ್ಯನವರ ಪತ್ರಿಕೆಗಳು ಆಕಾರದಲ್ಲಿಯೂ, ಪುಟದಲ್ಲಿಯೂ, ಸಣ್ಣದಾಗಿದ್ದರೂ ಜನಕ್ಕೆ ಬಹಳ ಉಪಕಾರ ಮಾಡುತ್ತಿದ್ದುವು. ಸಂಕಟ ಬಂದವರಿಗೆಲ್ಲಾ ವೆಂಕಟಕೃಷ್ಣಯ್ಯನವರೂ, ಅವರ ಪತ್ರಿಕೆಗಳೂ “ವೆಂಕಟರಮಣ”. ಬಡ ಜನರ ಕಷ್ಟ ನಷ್ಟಗಳನ್ನು ಬಹಿರಂಗ ಪಡಿಸಿ, ಅಧಿಕಾರಿಗಳ ಗಮನಕ್ಕೆ ತಂದು, ಪರಿಹಾರ ಕಲ್ಪಿಸುವುದೇ ಅವರ ದಿನಂಪ್ರತಿಯ ಕೆಲಸ. ಕೆಟ್ಟ ನಡತೆಯ, ದುರಾಚಾರದ, ಅಹಂಕಾರದ ಅಧಿಕಾರಿಗಳ ದುರ್ಭಾಷೆಗಳನ್ನೂ, ದುಷ್ಕಾರ್ಯಗಳನ್ನೂ ಹೊರಹಾಕಿ, ಅವರಿಗೆ ಬಂದೋ ಬಸ್ತು ಮಾಡಿಸುವುದೇ ಅವರ ನಿತ್ಯಕಾರ್ಯ.

ಅವರಿಗೆ ಪತ್ರಿಕೆ ನಡೆಸುವುದರಲ್ಲಿ ಬಹಳ ಸಹಾಯ ಮಾಡಿದವರೆಂದರೆ ಹಂಪಾಪುರದ ನರಸಿಂಗರಾಯರು, ಎಚ್. ಕೃಷ್ಣರಾಯರು ಮತ್ತು ಎಂ.ಎಸ್‌. ಪುಟ್ಟಣ್ಣನವರು.

ದಿವಾನರಾದ ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ಕೃಷ್ಣಮೂರ್ತಿಗಳ ಕಾಲದಲ್ಲಿ ವೆಂಕಟಕೃಷ್ಣಯ್ಯನವರ ಪತ್ರಿಕೆಗಳು ಉಜ್ವಲ ಸೇವೆ ಮಾಡಿದವು.

ದಿವಾನ್‌ ಮಾಧವರಾಯರ ಕಾಲದಲ್ಲಿ, ೧೯೦೮ ರಲ್ಲಿ, ವೃತ್ತ ಪತ್ರಿಕಾ ಶಾಸನ ಜಾರಿಗೆ ಬಂದ ಮೇಲೆ, ಆ ಉಗ್ರ ಶಾಸನದ ಜಾರಿಗೆ ವಿರೋಧವಾಗಿ, ಇತರ ದೇಶೀಯ ಪತ್ರಿಕೆಗಳಂತೆ, ವೆಂಕಟಕೃಷ್ಣಯ್ಯನವರೂ ತಮ್ಮ ಪತ್ರಿಕೆಗಳನ್ನೆಲ್ಲಾ ನಿಲ್ಲಿಸಿಬಿಟ್ಟರು. ಇದು ನಡೆದದ್ದು ೧೯೦೮ರಲ್ಲಿ.

ವೆಂಕಟಕೃಷ್ಣಯ್ಯನವರು ಪತ್ರಿಕಾ ಸ್ವಾತಂತ್ರ್ಯಕ್ಕಾಗಿಯೂ ಪ್ರಜೆಗಳ  ಹಕ್ಕು ಬಾಧ್ಯತೆಗಳಿಗಾಗಿಯೂ ದಿವಾನ್‌ ಮಾಧವರಾಯರೊಡನೆ ಹೋರಾಡುತ್ತಿದ್ದ ಕಾಲದಲ್ಲಿಯೇ, ಅವರಿಗೆ ವೈಯಕ್ತಿಕವಾಗಿ ಕೌಟುಂಬಿಕವಾಗಿ ಅನೇಕ ದುಃಖ ಪ್ರಸಂಗಗಳು ಒದಗಿದವು. ೧೯೦೯ ರಲ್ಲಿ ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಗಳನ್ನು ನಿಲ್ಲಿಸಿದ್ದಲ್ಲದೆ, ಹಣದ ಕೊರತೆಯಿಂದ ಮುದ್ರಣಾಲಯವನ್ನೂ ಕೆಲವು ಕಾಲ ಮುಚ್ಚಬೇಕಾಯಿತು. ಕೆಲವು ಪ್ರಕರಣಗಳಲ್ಲಿ ವೆಂಕಟಕೃಷ್ಯಯ್ಯನವರು ಪ್ರಜೆಗಳ ಏಕಮಾತ್ರ ಮುಖಂಡರಾಗಿ ದಿವಾನರನ್ನು ಎದುರಿಸಬೇಕಾಗಿ ಬಂದುದರಿಂದ, ಅವರನ್ನು ದಿವಾನರು ಗಡೀಫಾರು ಮಾಡಬೇಕೆಂದು ಆಲೋಚಿಸಿದ್ದರು. ಮಹಾರಾಜರು ಒಪ್ಪದಿದ್ದ ಕಾರಣ, ದಿವಾನರು ಆ ಆಲೋಚನೆಯನ್ನು ವಾಪಸ್ಸು ತೆಗೆದುಕೊಂಡರು. ಆದರೂ, ವೆಂಕಟಕೃಷ್ಣಯ್ಯನವರಿಗೆ ದೇಹಕ್ಲೇಶ ಮತ್ತು ಮನಃಕ್ಲೇಶ ತಪ್ಪಲಿಲ್ಲ.

ದಿವಾನ್‌ ಆನಂದರಾಯರು ದಿವಾನರಾಗಿದ್ದ ಕಾಲದಲ್ಲಿ, ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಗಳನ್ನು ಪುನಃ ಪ್ರಾರಂಭಿಸಿದರು. ಇಂಗ್ಲಿಷ್‌ ವಾರ ಪತ್ರಿಕೆಯಾದ “ಮೈಸೂರ್ ಪೇಟ್ರಿಯಟ್‌” ಮತ್ತು ಕನ್ನಡ ವಾರಪತ್ರಿಕೆಯಾದ “ಸಾಧ್ವಿ” ಪತ್ರಿಕೆಗಳು ಚೆನ್ನಾಗಿ ಬೆಳೆಯುತ್ತ ಬಂದವು. ದಿವಾನ್‌ ಆನಂದರಾಯರ ಕಾಲದಲ್ಲಿ ಪತ್ರಿಕೆಗಳಿಗೂ ಸರ್ಕಾರಕ್ಕೂ ಅಷ್ಟೇನೂ ಘರ್ಷಣೆಗಳಾಗಲಿಲ್ಲ.

ದಿವಾ ವಿಶ್ವೇಶ್ವರಯ್ಯನವರ ಕಾಲದಲ್ಲಿ ವೆಂಕಟಕೃಷ್ಣಯ್ಯನವರು “Wealth of Mysore” ಎಂಬ ಆಂಗ್ಲ ದಿನಪತ್ರಿಕೆಯನ್ನೂ “ಸಂಪದಭ್ಯುದಯ” ಎಂಬ ಕನ್ನಡ ದಿನ ಪತ್ರಿಕೆಯನ್ನೂ ಆರಂಭಿಸಿದರು.

ಇದೇ ಕಾಲದಲ್ಲಿ ಡಿ.ವಿ. ಗುಂಡಪ್ಪನವರು “ಕರ್ನಾಟಕ” ಎಂಬ ಆಂಗ್ಲ ವಾರ ಪತ್ರಿಕೆಯನ್ನೂ, “ಜನಜೀವನ” ಎಂಬ ಕನ್ನಡ ವಾರಪತ್ರಿಕೆಯನ್ನೂ ಬೆಂಗಳೂರಿನಲ್ಲಿ ಪ್ರಭಾವಶಾಲಿಯಾಗಿ ನಡೆಸುತ್ತಿದ್ದರು. ಸರ್ಕಾರದವರ ಪ್ರೋತ್ಸಾಹದಿಂದಲೇ ಸಿ. ಹಯವದನ ರಾಯರು “Mysore Economic Journal” ಎಂಬ ಮಾಸಪತ್ರಿಕೆಯನ್ನೂ, ಹನುಮಂತೇಗೌಡರು “ಅರ್ಥಸಾಧಕ ಪತ್ರಿಕೆ” ಎಂಬ ಪಕ್ಷಪತ್ರಿಕೆಯನ್ನೂ ಆರಂಭಿಸಿ ನಡೆಸುತ್ತಿದ್ದರು.

ದಿವಾನರು ಪ್ರಗತಿಶೀಲರಾದ್ದರಿಂದ ವೃತ್ತ ಪತ್ರಿಕೆಗಳ ಏಳಿಗೆಗೆ ಅವರು ಪ್ರೋತ್ಸಾಹವಿತ್ತರು. ಅವರ ಕಾಲದಲ್ಲಿ ಮೈಸೂರು ಪತ್ರಿಕಾ ಶಾಸನ ಸುಪ್ತವಾಗಿತ್ತು ಎಂದು ಹೇಳಬಹುದು. ಪತ್ರಿಕೆಗಳು ಸರ್ಕಾರದ ಪ್ರಗತಿಗಾಮಿಯಾದ ಆರ್ಥಿಕ ಸುಧಾರಣೆಗಳನ್ನು ಪೋಷಿಸುತ್ತ ಬಂದವು. ಆ ಕಾಲದಲ್ಲಿ ಪ್ರಪಂಚದ ಮೊದಲನೇ ಘೋರಯುದ್ಧ ನಡೆಯುತ್ತಿತ್ತು. ಅದರ ಸಮಾಚಾರಗಳನ್ನು ಮೈಸೂರಿನ ಪತ್ರಿಕೆಗಳೂ ಪ್ರಕಟಿಸುತ್ತ ಬಂದು, ಅವುಗಳ ಪ್ರಚಾರಬಲವೂ ಹೆಚ್ಚಿತು. ಪತ್ರಿಕೆಗಳನ್ನು ಓದುವವರ ಸಂಖ್ಯೆಯೂ ಬೆಳೆಯಿತು. ದಿವಾನರು ಲೈಬ್ರರಿಗಳನ್ನೂ, ವಾಚನಾಲಯಗಳನ್ನೂ ಸ್ಥಾಪಿಸಬೇಕೆಂದು ಪ್ರಚಾರ ನಡೆಸಿದರು. ವಾಚನಾಲಯಗಳಲ್ಲಿ ಪತ್ರಿಕೆಗಳನ್ನು ತರಿಸಿಕೊಂಡು ಓದಿ, ಜನ ಜ್ಞಾನ ಸಂಪಾದನೆ ಮಾಡಲಾರಂಭಿಸಿದರು. ಇದೇ ಕಾಲದಲ್ಲಿ ಅಸ್ಪೃಶ್ಯತಾ ನಿವಾರಣೆ, ನಿಮ್ನ ವರ್ಗದವರ ಉದ್ದಾರ ಬಲಗೊಂಡು, ಪತ್ರಿಕೆಗಳು ಹಿಂದಿನ ಅನಾಚಾರಗಳನ್ನು ಖಂಡನೆ ಮಾಡುತ್ತ ಬಂದವು. ವೆಂಕಟಕೃಷ್ಣಯ್ಯನವರು ತಮ್ಮ ಪತ್ರಿಕೆಗಳಲ್ಲಿ ಈ ವಿಚಾರಗಳಿಗೆ ಹೆಚ್ಚು ಗಮನಕೊಡುತ್ತಿದ್ದರು.

ಈ ದಿವಾನರ ಕಾಲದಲ್ಲಿಯೇ ಆರಂಭವಾದ ಬ್ರಾಹ್ಮಣ-ಬ್ರಾಹ್ಮಣೇತರ ವಿವಾದ ಮೈಸೂರಿನ ಪತ್ರಿಕೆಗಳಲ್ಲಿ ಕಂಡುಕೊಂಡವು. ವೆಂಕಟಕೃಷ್ಣಯ್ಯನವರು ಬ್ರಾಹ್ಮಣರು, ಅವರು ಬ್ರಾಹ್ಮಣ ಪಕ್ಷಪಾತಿ ಮತ್ತು ಬ್ರಾಹ್ಮಣೇತರ ವಿರೋಧಿ ಎಂದು ಬ್ರಾಹ್ಮಣೇತರ ಮುಖಂಡರು ಮತ್ತು ಅವರ ಪತ್ರಿಕೆಗಳು ಪ್ರಚಾರ ಮಾಡ ತೊಡಗಿದವು. ವೆಂಕಟಕೃಷ್ಣಯ್ಯನವರು ಇದನ್ನು ಅಲ್ಲಗೆಳೆಯುತ್ತ ಬಂದರು.

ಹೀಗೆ ವಿಶ್ವೇಶ್ವೆರಯ್ಯನವರ ದಿವಾನ್‌ಗಿರಿಯ ಅಂತ್ಯದ ವೇಳೆಗೆ ಮೈಸೂರಿನ ಸಾರ್ವಜನಿಕ ವಾತಾವರಣ ಬಹಳ ಕದಡಿತ್ತು.

ಸರದಾರ್ ಎಂ. ಕಾಂತರಾಜೇ ಅರಸರು ದಿವಾನಗಿರಿಗೆ ಬರುವ ವೇಳಗೆ ಇಂಡಿಯಾದ ಹೊಸ ರಾಜಕೀಯ ಸುಧಾರಣೆಗಳ ವಾತಾವರಣ ಪತ್ರಿಕೆಗಳ ಗಮನವನ್ನು ಬಹಳವಾಗಿ ಸೆಳೆದಿತ್ತು. ಮೈಸೂರಿನ ಪತ್ರಿಕೆಗಳೂ ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಬರುತ್ತಿದ್ದವು. ಆಗ ವೆಂಕಟಕೃಷ್ಣಯ್ಯನವರಿಗೆ ೭೫ ವರ್ಷವಾಗಿತ್ತು; ಅವರ ಪತ್ರಿಕಾ ಜೀವನ ತಡೆಯಿಲ್ಲದೆ ನಡೆದುಕೊಂಡು ಬರುತ್ತಿತ್ತು.

ವೆಂಕಟಕೃಷ್ಣಯ್ಯನವರ ಪತ್ರಿಕೆಗಳಿಗೆ ಪ್ರಕಟನೆಗಾಗಿ ಅನೇಕ ಲೇಖನಗಳು ಬರುತ್ತಿದ್ದುವು. ಅವುಗಳಲ್ಲಿ “ಸಂಪಾದಕರಿಗೆ ಪತ್ರಗಳು” (Letters to the Editor) ಎಂಬ ರೀತಿಯವು ಮುಖ್ಯವಾದವು. ಇದರಲ್ಲಿ ಕೆಲವರು ತಮ್ಮ ಹೆಸರು ವಿಳಾಸವನ್ನು ಕೊಡುತ್ತಿದ್ದರು. ಕೆಲವರು ತಮ್ಮ ಹೆಸರು ವಿಳಾಸಗಳನ್ನು ಪ್ರಕಟಿಸಬಾರದೆಂದು ಸಂಪಾದಕರಿಗೆ ಬರೆಯುತ್ತಿದ್ದರು. ಕೆಲವರು ತಮ್ಮ ಹೆಸರು ವಿಳಾಸಗಳನ್ನು ಪ್ರಕಟಿಸಲು ಅನುಮತಿ ಈಯುತ್ತಿದ್ದರು. ಇವರು ಪ್ರಕಟನೆಗಾಗಿ ಕಳುಹಿಸುವ ಅಭಿಪ್ರಾಯಗಳು ಸಂಪಾದಕರದಲ್ಲ, ಲೇಖಕರದೇ. ಆದರೂ ಈ ಲೇಖನಗಳಲ್ಲಿ ಮಾನನಷ್ಟಕರವಾದ ಅಥವಾ ರಾಜದ್ರೋಹಕರವಾದ ಅಂಶಗಳಿದ್ದರೆ ಅವುಗಳ ಜವಾಬ್ದಾರಿ ಸಂಪಾದಕರು, ಮುದ್ರಕರು ಇವರಿಗೂ ಇರುತ್ತಿತ್ತು. ಆದುದರಿಂದ ಸಾಧ್ಯವಾದಷ್ಟು ಮಟ್ಟಿಗೆ ವೆಂಕಟಕೃಷ್ಣಯ್ಯನವರು ಲೇಖನಗಳನ್ನು ಶೋಧಿಸಿ, ತಿದ್ದಿ ಪ್ರಕಟಿಸುತ್ತಿದ್ದರು.

ಪತ್ರಿಕೆಗಳು ಇರುವುದು ಸಂಪಾದಕರ ಲೇಖನಗಳನ್ನು ಪ್ರಕಟಿಸುವುದಕ್ಕೆ ಮಾತ್ರವಲ್ಲ. ಕಾನೂನಿಗೆ ವಿರೋಧವಲ್ಲದ ಅಭಿಪ್ರಾಯಗಳನ್ನು ಇತರರು ಪ್ರಕಟಿಸಲು ಇಚ್ಛಿಸಿದರೆ ಅವುಗಳನ್ನು ಪ್ರಕಟಿಸಬೇಕಾದದ್ದು ಸಂಪಾದಕರ ಧರ್ಮ. ಇದು ಪತ್ರಿಕಾ ಸ್ವಾತಂತ್ರ್ಯದ ಮುಖ್ಯಭಾಗ.

ಪತ್ರಿಕೆಗಳಲ್ಲಿ ಸಂಪಾದಕರ ಅಭಿಪ್ರಾಯಗಳಲ್ಲದೆ ಅವುಗಳನ್ನು ವಿರೋಧಿಸುವವರಿಗೂ ಅವಕಾಶವಿರಬೇಕು. ಈ ಪತ್ರಿಕಾ ಸ್ವಾತಂತ್ರ್ಯ ಧರ್ಮವನ್ನು ಅವರು ಯಾವಜ್ಜೀವವೂ ಪರಿಪಾಲಿಸುತ್ತಿದ್ದರು. ತಮ್ಮ ಅಭಿಪ್ರಾಯಕ್ಕೆ ವಿರೋಧವಾದ ಅಭಿಪ್ರಾಯಗಳನ್ನು ಪ್ರಕಟಿಸುವ ಸಂದರ್ಭದಲ್ಲಿ, “ಇವು ಸಂಪಾದಕರ ಅಭಿಪ್ರಾಯವಲ್ಲ; ಲೇಖಕರ ಅಭಿಪ್ರಾಯ” ಎಂಬ ಒಂದು ಟಿಪ್ಪಣಿ ಇರುತ್ತಿತ್ತು.

ದಿವಾನ್‌ ಶೇಷಾದ್ರಿ ಅಯ್ಯರ್ ಅವರ ಕಾಲದಿಂದ ಹಿಡಿದು ಸರ್ ಮಿರ್ಜಾ ಇಸ್ಮಾಯಿಲರ ಕಾಲದವರೆಗೆ ಅವರು ನಡೆಸುತ್ತಿದ್ದ ಪತ್ರಿಕೆಗಳಲ್ಲಿ ಈ ಧರ್ಮವನ್ನು ವೆಂಕಟಕೃಷ್ಣಯ್ಯನವರು ನಿರ್ದುಷ್ಟವಾಗಿ ಪರಿಪಾಲಿಸುತ್ತಿದ್ದರು. ಸಂಪಾದಕೀಯ ಲೇಖನಗಳೂ ಲೇಖಕರ ಲೇಖನಗಳೂ ಅನೇಕವೇಳೆ ಅಧಿಕಾರಿಗಳಿಗೆ ಸರಿಬೀಳುತ್ತಿರಲಿಲ್ಲ, ಆದರೇನು ಮಾಡುವುದು? ಪತ್ರಿಕಾ ಧರ್ಮವಿರುವುದೇ ಹಾಗೆ. ಇಂತಹ ಅಸಮಾಧಾನಗಳ ದೊಡ್ಡ ಪಟ್ಟಿಯನ್ನೇ ಕೊಡಬಹುದು. ತಮ್ಮ ಪತ್ರಿಕೆಗಳನ್ನು ಅಧಿಕಾರಿಗಳ ನೀತಿಯನ್ನು ತಿದ್ದಲು ಉಪಯೋಗಿಸುತ್ತಿದ್ದರು.

ಕೆಲವು ಸ್ನೇಹಿತರ ಲೇಖನಗಳನ್ನು ಪ್ರಕಟಿಸಿದ್ದರಿಂದ ಅವರ ಮೇಲೆಯೂ, ಅವರ ಪತ್ರಿಕೆಗಳ ಮೇಲೆಯೂ ಕೋರ್ಟು ಮೊಕದ್ದಮೆಗಳಾದ ಪ್ರಸಂಗಗಳು ಬೇಕಾದಷ್ಟಿವೆ. ಇಂತಹ ಲೇಖನಗಳಿಂದ ಅವರಿಗೆ ಸರ್ಕಾರದಿಂದ ಹಿಂಸೆಯಾದ ಪ್ರಸಂಗಗಳೂ ಬೇಕಾದಷ್ಟಿವೆ. ಆದರೂ, ಅವರು ಯಾವಾಗಲೂ ಹಿಂದು ಮುಂದು ನೋಡದೆ ತಮ್ಮ ಸ್ನೇಹಿತರ ಲೇಖನಗಳನ್ನು ಸಾರ್ವಜನಿಕ ಹಿತಕ್ಕಾಗಿ ಪ್ರಕಟಿಸಿಬಿಡುತ್ತಿದ್ದರು.

ಅವರ ಕಾಲದಲ್ಲಿ ಮೈಸೂರಿನಲ್ಲಿ, ಕಾಂಗ್ರೆಸಿನಂತಹ, ಸ್ವತಂತ್ರ ರಾಜಕೀಯ ಪಾರ್ಟಿ ಯಾವುದೂ ಇರಲಿಲ್ಲ. ಸರ್ಕಾರ ಅಧಿಕಾರಿಗಳ ಸರ್ಕಾರ. ಅದೊಂದು ಬ್ಯೂರಾಕ್ರಸಿಯಾಗಿತ್ತು. ಅದನ್ನು ಅಂಕುಶದಲ್ಲಿಡಲು ಬಲವಾದ ವಿರೋಧಪಕ್ಷವಿರಲಿಲ್ಲ. ಈ ವಿರೋಧ ಪಕ್ಷದ ಕಾರ್ಯವನ್ನೆಲ್ಲಾ ವೆಂಕಟಕೃಷ್ಣಯ್ಯನವರ ಪತ್ರಿಕೆಗಳೂ, ಇತರ ಸ್ವತಂತ್ರ ಪತ್ರಿಕೆಗಳೂ ಮಾಡಬೇಕಾಗಿತ್ತು. ಆಗ ಜನರಿಗೆ ಬಾಯಿ ಎಂದರೆ ಪತ್ರಿಕೆಗಳೇ. ತಮ್ಮ ದೂರುಗಳನ್ನೂ, ಅಹವಾಲುಗಳನ್ನೂ ಪತ್ರಿಕೆಗಳ ಮೂಲಕವೇ ಹೇಳಿಕೊಳ್ಳಬೇಕಾಗಿತ್ತು. ವಿಷಯ ಒಂದೇ ಆದರೂ, ಅದನ್ನು ಬೇರೆ ಬೇರೆ ರೀತಿಯಾಗಿ ಲೇಖಕರು ಪತ್ರಿಕೆಗಳಿಗೆ ಬರೆಯುತ್ತಿದ್ದರು. ರಾಜಕೀಯ ರಂಗವೇ ಇಲ್ಲದಿರುವಾಗ ಪತ್ರಿಕೆಗಳೇ ರಾಜಕೀಯ ರಂಗವಾಗಿ ಪರಿಣಮಿಸುತ್ತಿದ್ದುವು. ಆದುದರಿಂದ ವೆಂಕಟಕೃಷ್ಣಯ್ಯನವರು ಆಗಿನ ಕಾಲದ ಪತ್ರಿಕೆಗಳ  ಕರ್ತವ್ಯ ಮತ್ತು ಜವಾಬ್ದಾರಿಯನ್ನು ಅರಿತು, ಲೇಖಕರ ಲೇಖನಗಳನ್ನು ಹೇರಳವಾಗಿ ಪ್ರಕಟಿಸುತ್ತಿದ್ದರು. ಲೇಖನಗಳನ್ನು ಬರೆಯಲು ಬರದವರು ಅನೇಕರು ದಿನಂ ಪ್ರತಿ ಅವರ ಬಳಿ ಬಂದು, ಆಗುತ್ತಿದ್ದ ತೊಂದರೆಗಳನ್ನು ಹೇಳಿಕೊಳ್ಳುತ್ತಿದ್ದರು. ಆ ವಿಷಯವನ್ನು ಕೂಡ ತಾವೇ ಬರೆದು, ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು.

ಹೊರಗಿನಿಂದ ಬಂದ ಪತ್ರಿಕೆಗಳನ್ನೆಲ್ಲಾ ಓದಿ ಅಥವಾ ಓದಿಸಿ ಮುಖ್ಯಾಂಶಗಳನ್ನು ಗುರುತು ಮಾಡುತ್ತಿದ್ದರು ಮತ್ತು ಮಾಡಿಸುತ್ತಿದ್ದರು. ಆ ಪೈಕಿ ಯಾವುದಾದರೂ ತಮ್ಮ ಪತ್ರಿಕೆಗಳಿಗೆ ಅರ್ಹವಾಗಿದ್ದರೆ, ಅದನ್ನು ಕೂಡಲೇ ಕನ್ನಡದ ಅನುವಾದ ಮಾಡಿ ತಮ್ಮ ಪತ್ರಿಕೆಗೆ ಪ್ರಕಟಣೆಗೆ ಕೊಡುತ್ತಿದ್ದರು. ತಮ್ಮ ಸ್ನೇಹಿತರಿಗೆ ಕೆಲವು ಹೊರಗಿನ ಪತ್ರಿಕೆಗಳನ್ನು ಓದಿ ತಮಗೆ ಮುಖ್ಯವೆಂದು ತೋರಿದ್ದನ್ನು ಗುರ್ತುಮಾಡಬೇಕೆಂದು ಹೇಳಿಕಳುಹಿಸುತ್ತಿದ್ದರು. ಆ ಪತ್ರಿಕೆಗಳು ಹಿಂತಿರುಗಿ ಬಂದಮೇಲೆ ಆ ಗುರ್ತಾದ ಭಾಗಗಳನ್ನು ನೋಡುತ್ತಿದ್ದರು, ಮತ್ತು ಅವಶ್ಯಕವೆಂದು ಕಂಡರೆ ಅವನ್ನು ತಮ್ಮ ಪತ್ರಿಕೆಗಳಿಗೆ ಬರೆಸುತ್ತಿದ್ದರು.

ಯಾವುದಾದರೂ ಹೊಸ ಪುಸ್ತಕಗಳು ಬಂದಾಗಲೂ ಈ ರೀತಿಯಾಗಿಯೇ ಅವರು ಮಾಡುತ್ತಿದ್ದರು. ತಾವೇ ಓದುತ್ತಿದ್ದರು ಮತ್ತು ತಮ್ಮ ಸ್ನೇಹಿತರಿಗೆ ಓದುವುದಕ್ಕೆ ಕಳುಹಿಸುತ್ತಿದ್ದರು. ಅವರು ಗುರ್ತುಮಾಡಿದ ಭಾಗಗಳನ್ನು ಇವರು ನೋಡಿ ಅವುಗಳಲ್ಲಿ ಉಪಯುಕ್ತವಾದದ್ದನ್ನು ತಮ್ಮ ಪತ್ರಿಕೆಗಳಿಗೆ ಬರೆಯಿಸುತ್ತಿದ್ದರು.

ಸರಿಯಾದ ಸುದ್ದಿಯನ್ನು ಪ್ರಕಟಿಸಿ ತಪ್ಪೇನಾದರೂ ಆದರೆ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮಾಪಣೆಯನ್ನು ಪ್ರಕಟಿಸುತ್ತಿದ್ದರು. ಇದು ಸತ್ಯವಾದ ಪತ್ರಿಕೆಗಳ ಧರ್ಮ.

೧೯೨೨ರಿಂದ ೧೯೩೩ರವರೆಗಿನ ಬ್ಯಾನರ್ಜಿ ಮತ್ತು ಮಿರ್ಜಾ ಕಾಲದಲ್ಲಿಯೂ, ವೆಂಕಟಕೃಷ್ಣಯ್ಯನವರು ಪತ್ರಿಕಾ ಕಾನೂನು ವಜಾ ಆಗಬೇಕೆಂದೂ ಮಿಲ್ಲರ್ ಕಮಿಟಿಯ ಆರ್ಡರು ರದ್ದಾಗಬೇಕೆಂದೂ ತಮ್ಮ ಪತ್ರಿಕೆಗಳಲ್ಲಿ ವಾದಿಸುತ್ತಲೇ ಇದ್ದರು. ಮೈಸೂರು ದೇಶದ ಬಾಲಕ ಬಾಲಕಿಯರಿಗೆ ಉಚಿತ ವಿದ್ಯಾಭ್ಯಾಸ ದೊರೆಯಬೇಕೆಂದೂ ವಾದಿಸುತ್ತ ಬಂದರು.

ದಿವಾನ್‌ ಬ್ಯಾನರ್ಜಿ ಇವರ ವಿಷಯದಲ್ಲಿ ಬಹಳ ಗೌರವದಿಂದಲೇ ನಡೆದುಕೊಳ್ಳುತ್ತಿದ್ದರು. ಈ ಕಾಲದಲ್ಲಿಯೇ ಬ್ರಿಟಿಷ್‌ ಇಂಡಿಯಾದಲ್ಲಿ ಅಸಹಕಾರ ಚಳುವಳಿ ಆರಂಭವಾಗಿ, ಅದರ ಗಾಳಿ ಮೈಸೂರಿನಲ್ಲಿಯೂ ಬೀಸುತ್ತಿತ್ತು. ಇಂಡಿರ್ಯ ನ್ಯಾಷನಲ್‌  ಕಾಂಗ್ರೆಸ್ಸಿನ ಶಾಖೆ ಮೈಸೂರಿನಲ್ಲಿಯೂ ಸ್ಥಾಪನೆಯಾಗಿ ಗಾಂಧೀಜಿಯವರ ರಚನಾತ್ಮಕ ಕಾರ್ಯಗಳು ಆಚರಣೆಗೆ ಬಂದವು. ವೆಂಕಟಕೃಷ್ಣಯ್ಯನವರು ಬಹಳ ವೃದ್ಧಾಪ್ಯದಲ್ಲಿಯೂ ಗಾಂಧೀಜಿಯವರ ಚಳುವಳಿಗೆ ತಮ್ಮ ನೈತಿಕ ಬೆಂಬಲವನ್ನು ಕೊಡುತ್ತಾ ಬಂದರು. ಸರ್ಕಾರದ ಆಡಳಿತದಲ್ಲಿನ ನ್ಯೂನತೆಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸುತ್ತ ಬಂದರು. ಆಗಾಗ್ಗೆ, ಸರ್ಕಾರದ ಆಗ್ರಹಕ್ಕೆ ಗುರಿಯಾಗುತ್ತಿದ್ದರು.