ವೆಂಕಟಕೃಷ್ಣಯ್ಯನವರ ಸಾರ್ವಜನಿಕ ಸೇವೆ ನಾನಾ ಮುಖವಾದುದು. ಆಗಿನಕಾಲದಲ್ಲಿ ಸಾರ್ವಜನಿಕ ಕೆಲಸಗಾರರಲ್ಲಿ ಕೆಲವರು ಎಲ್ಲಾ ತರಹದ ಕೆಲಸಗಳನ್ನೂ ಕೈಗೊಳ್ಳಬೇಕಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ವೆಂಕಟಕೃಷ್ಣಯ್ಯನವರು ಉಪಾಧ್ಯಾಯರು ಪತ್ರಿಕೋದ್ಯೋಗಿಗಳು ರಾಜಕೀಯ ಮುಖಂಡರೂ ಆಗಿದ್ದರಲ್ಲದೆ, ಸಮಾಜ ಸೇವೆ ಮತ್ತು ಸುಧಾರಣಾ ಕಾರ್ಯಗಳಲ್ಲಿ ಪ್ರಮುಖ ಭಾಗವಹಿಸುತ್ತಿದ್ದರು. ಆಗ ಅನೇಕ ವಿಷಯಗಳಿಗೆ ನಮ್ಮ ದೇಶದಲ್ಲಿ ಇನ್ನೂ ಪ್ರಾರಂಭಕಾಲ; ಹಾಗೆಯೇ ಸಮಾಜ ಸೇವೆ ಮತ್ತು ಸುಧಾರಣೆಗೂ ಪ್ರಾರಂಭಕಾಲ.

ಬ್ರಿಟಿಷ್‌ ಇಂಡಿಯಾ ಸರ್ಕಾರ ಆಗ ನಮ್ಮ ಸಮಾಜ ಸುಧಾರಣಾ ಕಾರ್ಯಗಳಲ್ಲಿ ಕೈಹಾಕುತ್ತಿರಲಿಲ್ಲ. ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿತ್ತು. ಪ್ರಖ್ಯಾತ ಮುಖಂಡರಾದ ಬಾಲಗಂಗಾಧರ ತಿಲಕರು ಪರದೇಶಿ ಸರ್ಕಾರ ನಮ್ಮ ಸಮಾಜ ಸುಧಾರಣೆಗಳಲ್ಲಿ ಕೈ ಹಾಕಕೂಡದು ಎಂದು ಹೇಳುತ್ತಿದ್ದರು. ಇವರ ಮಿತ್ರರಾದ ಅಗರ್ ಕರ್ ರವರು ಭಿನ್ನವಾದ ಅಭಿಪ್ರಾಯ ಹೊಂದಿದ್ದರು. ಬ್ರಿಟಿಷ್‌ ಸರ್ಕಾರ ಸಮಾಜ ಸುಧಾರಣಾ ಕಾನೂನುಗಳನ್ನು ಮಾಡಬೇಕೆಂಬುದು ಇವರ ಅಭಿಪ್ರಾಯವಾಗಿತ್ತು. ಇದಕ್ಕೆ ತಿಲಕರು ‘ಸಾಮಾಜಿಕ ಸುಧಾರಣಾ ಕಾನೂನುಗಳನ್ನು ನಮಗೆ ಸ್ವರಾಜ್ಯ ಬಂದ ಮೇಲೆ ನೋಡಿಕೊಳ್ಳೋಣ’ ಎಂದು ಉತ್ತರ ಹೇಳುತ್ತಿದ್ದರು.

ಮೈಸೂರು ರಾಜ್ಯ ಶ್ರೀಮನ್‌ ಮಹಾರಾಜರ ರಾಜ್ಯವಾದ್ದರಿಂದ ಇಲ್ಲಿ ಹೆಚ್ಚು ಸ್ವಾತಂತ್ರ್ಯ ವಹಿಸಿ ಕೆಲವು ಸಮಾಜ ಸುಧಾರಣಾ ಕಾನೂನುಗಳನ್ನು ಜಾರಿಮಾಡಲು ಅವಕಾಶವಿತ್ತು. ಆದರೆ ಆಚಾರಶೀಲರ ಮನಸ್ಸನ್ನು ನೋಯಿಸಲು ಮೈಸೂರು ಸರ್ಕಾರಕ್ಕೆ ಇಷ್ಟವಿರಲಿಲ್ಲ. ಸಮಾಜ ಸುಧಾರಣೆಯಲ್ಲಿ ಆಸಕ್ತರಾದ ಸಾರ್ವಜನಿಕರು ಜನರಿಗೆ ಸಮಾಜ ಸುಧಾರಣೆ ವಿಷಯದಲ್ಲಿ ಶಿಕ್ಷಣಕೊಡುವ ಅವಶ್ಯಕತೆಯಿತ್ತು. ವೆಂಕಟಕೃಷ್ಣಯ್ಯನವರೂ, ಅವರ ಸ್ನೇಹಿತರೂ ಸಮಾಜ ಸುಧಾರಣೆಗಳ ವಿಷಯವನ್ನು ಪತ್ರಿಕೆಗಳಲ್ಲಿಯೂ, ಸಾರ್ವಜನಿಕ ಸಭೆಗಳಲ್ಲಿಯೂ ಪ್ರಚಾರಮಾಡುತ್ತಾ ಬಂದರು. ಏನೂ ತಿಳಿಯದ ಜನಸಾಮಾನ್ಯರಿಗೆ ಹಿಂದಿನ ಸಮಾಜ ಪದ್ಧತಿಗಳಲ್ಲಿಯೇ ವಿಶ್ವಾಸ; ಹೊಸ ಸಂಗತಿಗಳನ್ನು ಹೇಳಿದರೆ ಏನೋ ಹಾಸ್ಯವಾಗಿ ತಿಳಿದುಕೊಳ್ಳುತ್ತಿದ್ದರು. ಆದರೆ ವೆಂಕಟಕೃಷ್ಣಯ್ಯನವರು ಸುಧಾರಣೆ ಕೆಲಸದಲ್ಲಿ ಹಿಂಜರಿಯಲಿಲ್ಲ.

ಅವರು ಸ್ತ್ರೀಯರು ವಿದ್ಯಾಭ್ಯಾಸ ಮಾಡಬೇಕಕು, ಗಂಡಸರಂತೆ ಸ್ತ್ರೀಯರು ದೊಡ್ಡ ದೊಡ್ಡ ಪರೀಕ್ಷೆಗಳನ್ನು ಪಾಸು ಮಾಡಬೇಕು ಎಂದು ಪ್ರಚಾರ ನಡೆಸುತ್ತಿದ್ದರು. ಪ್ರಾರಂಭದ ದಿನಗಳಲ್ಲಿ ತಂದೆತಾಯಿಗಳು ಮತ್ತು ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಸ್ಕೂಲಿಗೆ ಕಳುಹಿಸುವುದಕ್ಕೆ ಹಿಂಜರಿಯುತ್ತಿದ್ದರು.

ಈ ಸ್ಥಿತಿಯಲ್ಲಿ ವೆಂಕಟಕೃಷ್ಣಯ್ಯನವರ ಪತ್ನಿಯವರಾದ ಪುಟ್ಟಲಕ್ಷಮ್ಮನವರೇ ಮುಂದೆ ಬಂದು, ಮಹಾರಾಣೀ ಸ್ಕೂಲಿನ ಉಪಾಧ್ಯಾಯಿನಿಯಾಗಿ, ಹೆಣ್ಣು ಮಕ್ಕಳಿಗೆ ಸ್ಕೂಲಿಗೆ ಬಂದು ಓದಲು ಪ್ರೋತ್ಸಾಹ ಕೊಡುತ್ತಿದ್ದರು. ಸ್ತ್ರೀ ವಿದ್ಯಾಭ್ಯಾಸದಲ್ಲಿ ಇವರು ಮುಂದಾಳುತನವನ್ನು ವಹಿಸಿದರೂ, ಪೂರ್ವಾಚಾರ ಪರಾಯಣರಾಗಿ ಪತಿಸೇವೆ ಮಾಡುತ್ತಾ, ಮಕ್ಕಳನ್ನು ಚೆನ್ನಾಗಿ ಪೋಷಿಸುತ್ತಲೂ ಇದ್ದರು. ಇವರು ಬಹಳ ಒಳ್ಳೆಯ ಉಪಾಧ್ಯಾಯಿನಿ ಎಂಬ ಹೆಸರು ಪಡೆದರು.

೧೮೮೮ ನೇ ನವೆಂಬರ್ “ಹಿತಬೋಧಿನಿ” ಸಂಚಿಕೆಯಲ್ಲಿ ಮಹಾರಾಣೀ ಬಾಲಿಕಾ ಪಾಠಶಾಲೆಯ ೭ ನೇ ವಾರ್ಷಿಕೋತ್ಸವವನ್ನು ವಿವರಿಸಲಾಗಿದೆ.

ಈ ಶಾಲೆ ಸ್ಥಾಪನೆಯಾದುದು ೧೮೮೦ ರಲ್ಲಿ. ಇದನ್ನು ಪ್ರಾರಂಭಿಸಿದವರು ವೆಂಕಟಕೃಷ್ಣಯ್ಯ ಮತ್ತು ಅಂಬಲ್‌ ನರಸಿಂಹಯ್ಯಂಗಾರ್. ಆಗ ೧೪ ಬಾಲಕಿಯರು ಮಾತ್ರ ಇದ್ದರು. ೧೮೮೨ ರಲ್ಲಿ ದಿವಾನ್‌ ರಂಗಾಚಾರ್ಲುರವರು ಈ ಶಾಲೆಯ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದವರು ಎಷ್ಟೋ ಆವರ್ತಿ ಬಾಲಿಕಾ ಪಾಠಶಾಲೆಗಳನ್ನು ತೆರೆದರು; ಆದರೆ, ಬಾಲಿಕೆಯರು ಇನ್ನೂ ಸೇರುತ್ತಿರಲಿಲ್ಲ. ಈ ಪಾಠ ಶಾಲೆಗಳನ್ನು ಮುಚ್ಚಬೇಕಾಗಿ ಬಂದಿತು. ಆದರೆ ವೆಂಕಟಕೃಷ್ಣಯ್ಯನವರು ಸ್ಥಾಪಿಸಿದ ಬಾಲಿಕಾ ಪಾಠಶಾಲೆ ಮಾತ್ರ ಕ್ರಮಕ್ರಮವಾಗಿ ಏಳಿಗೆ ಹೊಂದಿತು. ಏಳನೇ ವಾರ್ಷಿಕೋತ್ಸವದಲ್ಲಿ ಮಹಾರಾಜ ಚಾಮರಾಜ ಒಡೆಯರು ಸಭಾಧ್ಯಕ್ಷರಾಗಿದ್ದರು. ರೆಸಿಡೆಂಟರು, ದಿವಾನರು, ಇತರ ದೊಡ್ಡ ಮನುಷ್ಯರು ಆಗಮಿಸಿದ್ದರು. ಮಹಾರಾಜರು ಈ ಶಾಲೆಯ ಅಭಿವೃದ್ಧಿಯ ಬಗ್ಗೆ ದಿವಾನರ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಆಗ ಈ ಶಾಲೆಯಲ್ಲಿ ಒಟ್ಟು ೪೭೯ ವಿದ್ಯಾರ್ಥಿನಿಯರು ಇದ್ದರು. ವಿವರ ಈ ರೀತಿ ಇದೆ; ಹೈಸ್ಕೂಲಿನಲ್ಲಿ ೬, ಮಿಡ್ಲ್‌ ಸ್ಕೂಲಿನಲ್ಲಿ ೬೨, ಅಪ್ಪರ್ ಪ್ರೈಮರಿಯಲ್ಲಿ ೧೪೫, ಲೋಯರ್ ಪ್ರೈಮರಿಯಲ್ಲಿ ೬೯, ಮಕ್ಕಳ ತರಗತಿಯ ಮೇಲ್ಭಾಗದಲ್ಲಿ ೨೬, ಕೆಳಭಾಗದಲ್ಲಿ ೧೨೦, ಮನೆಯಲ್ಲಿ ಓದತಕ್ಕ ವಿದ್ಯಾರ್ಥಿನಿಯರು ೫೧. ಗ್ರಾಮಾಂತರ ಪ್ರದೇಶಗಳಿಂದ ೧೫ ಜನ ವಿದ್ಯಾರ್ಥಿನಿಯರು ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಸಂಸ್ಥೆಗೆ ಡಿ. ಸುಬ್ಬಯ್ಯನವರು ಸೂಪರಿಂಟೆಂಡೆಂಟರಾಗಿದ್ದರು.

ಮದ್ರಾಸ್‌ ಗವರ್ನರು ಈ ಪಾಠಶಾಲೆಯನ್ನು ನೋಡಿ ಬಹಳ ಸಂತೋಷಪಟ್ಟು, “ಇಂಡಿಯಾ ದೇಶದಲ್ಲಿ ಇಂಥ ಶಾಲೆಗಳು ಬಹಳವಿಲ್ಲ, ಇದು ಬಹಳ ಪ್ರಗತಿ ಹೊಂದಿದೆ” ಎಂದು ಪ್ರಶಂಸೆ ಮಾಡಿದರು.

ಈ ಪಾಠಶಾಲೆಯ ಕಾರ್ಯದರ್ಶಿಗಳು ನರಸಿಂಹಯ್ಯಂಗಾರ್. ಇವರ ಸೇವೆಯನ್ನು ಅಧ್ಯಕ್ಷರು ಹೊಗಳಿದರು. ಲೇಡೀ ಢಫರಿನ್‌‍ರವರು ಈ ಶಾಲೆಯನ್ನು ಭೇಟಿಮಾಡಿದಾಗ ಆರೋಗ್ಯ ಶಾಸ್ತ್ರ ಕಲಿಸಲು ಇಲ್ಲಿ ಮಾಡಿರುವ ವ್ಯವಸ್ಥೆಯನ್ನು ಶ್ಲಾಘಿಸಿದರು.

ಮಹಾರಾಜರು ಈ ಶಾಲೆಯಲ್ಲಿ ಉಪಾಧ್ಯಾಯಿನಿಯರನ್ನು ತಯಾರು ಮಾಡುವ ಅವಶ್ಯಕತೆಯನ್ನು ತಿಳಿಸಿದರು. ಸ್ತ್ರೀ ವಿದ್ಯಾಭ್ಯಾಸದ ಏಳಿಗೆಗೆ ಒಳ್ಳೇ ಉಪಾಧ್ಯಾಯಿನಿಯರೆ ತಳಹದಿ ಎಂದು ದಿವಾನ್‌ ಶೇಷಾದ್ರಿ ಅಯ್ಯರ್ ಅವರೂ ತಿಳಿಸಿದರು.

ಮೈಸೂರು ನಗರದಲ್ಲಿ ಸ್ಥಾಪನೆ ಮಾಡಿದ ಬಾಲಿಕಾ ಪಾಠಶಾಲೆಯ ಮಾದರಿಯನ್ನೇ ಅನುಸರಿಸಿ ಮೇಲುಕೋಟೆ, ತುಮಕ ಊರು ಮುಂತಾದ ಊರುಗಳಲ್ಲೂ ಬಾಲಿಕಾ ಪಾಠಶಾಲೆಗಳನ್ನು ಸ್ಥಾಪಿಸಿದರೆಂದು ಮೈಸೂರು ಪ್ರಜಾಪ್ರತಿನಿಧಿ ಸಭೆಯ ವರದಿಯಿಂದ ತಿಳಿದು ಬರುತ್ತದೆ.

ಮಹಾರಾಣೀ ಬಾಲಿಕಾ ಪಾಠಶಾಲೆ ಕ್ರಮೇಣ ಮೈಸೂರಿನಲ್ಲಿರುವ ಮಹಾರಾಣೀ ಕಾಲೇಜಾಗಿ ಬೆಳೆಯಿತು. ಈ ಶಾಲೆಯ ವ್ಯವಸ್ಥೆಯನ್ನು ೧೮೯೧ ರಲ್ಲಿ ಸರ್ಕಾರ ವಹಿಸಿಕೊಂಡಿತು. ೧೧ ವರ್ಷಕಾಲ ವೆಂಕಟಕೃಷ್ಣಯ್ಯನವರ ಮತ್ತು ಅವರ ಮಿತ್ರರ (ನರಸಿಂಹಯ್ಯಂಗಾರ್, ಪುಟ್ಟಣ್ಣ , ವೆಂಕಟಸ್ವಾಮಯ್ಯ, ಇತರರು) ಆಡಳಿತದಲ್ಲಿ ಈ ಶಾಲೆ ಬಹಳ ಅಭಿವೃದ್ಧಿ ಪಡೆಯಿತು.

ಹೀಗೆ ನೋಡುವಲ್ಲಿ, ಮೈಸೂರು ನಗರದಲ್ಲಿ ಸ್ತ್ರೀ ವಿದ್ಯಾಭ್ಯಾಸಕ್ಕಾಗಿ ಕೆಲಸ ಮಾಡಿದ ಮೂಲಪುರುಷರಲ್ಲಿ ವೆಂಕಟಕೃಷ್ಣಯ್ಯನವರು ಅಗ್ರಗಣ್ಯರು ಎಂಬುದು ಸ್ಪಷ್ಟವಾಗುತ್ತದೆ.

ಸ್ತ್ರೀಯರಿಗಾಗಿ ಸ್ಥಾಪಿತವಾದ ಸಂಸ್ಥೆಗಳಲ್ಲಿ ಆಟಪಾಟಗಳಿಗಾಗಿಯೂ ಏರ್ಪಾಡನ್ನು ಮಾಡಲಾಗಿತ್ತು. ಕೋಲಾಟ, ಜಡೆ ಕೋಲಾಟ, ಹೊಲಿಗೆ , ಕಸೂತಿ, ಮಣಿ ಹಾಕುವುದು ಮುಂತಾದವುಗಳನ್ನು ಹೇಳಿಕೊಡಲಾಗುತ್ತಿತ್ತು.

ಪರಸ್ಥಳದಿಂದ ಬಂದ ವಿದ್ಯಾರ್ಥಿನಿಯರ ಅಶನ ವಸತಿಗಳಿಗಾಗಿ ಹಾಸ್ಟೆಲನ್ನು ವೆಂಕಟಕೃಷ್ಣಯ್ಯನವರು ಮಹಾರಾಣೀ ಕಾಲೇಜಿನ ಆಶ್ರಯದಲ್ಲಿ ಸ್ಥಾಪಿಸಿದ್ದರು.

ಬಾಲ ವಿಧವೆಯರ ಸಂರಕ್ಷಣೆಗಾಗಿಯೂ, ವಿದ್ಯಾಭ್ಯಾಸಕ್ಕಾಗಿಯೂ ಮೈಸೂರು ನಗರದಲ್ಲಿ ನರಸಿಂಹಯ್ಯಂಗಾರ್ಯರೂ ವೆಂಕಟಕೃಷ್ಣಯ್ಯನವರೂ ಒಂದು “ವಿಡೋಸ್‌ ಹೋಮ್‌” (ವಿಧವೆಯರ ಆಶ್ರಯಗೃಹ) ಎಂಬ ಸಂಸ್ಥೆಯನ್ನು ಸ್ಥಾಪಿಸಿ, ನಡೆಸಿಕೊಂಡು ಬಂದರು. ಪ್ರಾರಂಭ ದಿನಗಳಲ್ಲಿಯೇ ವಿದ್ಯಾರ್ಥಿನಿಯರ ಹಾಸ್ಟೆಲಿನಲ್ಲಿ ೩೩ ಹೆಣ್ಣು ಮಕ್ಕಳು, ವಿಡೋಸ್‌ ಹೋಂನಲ್ಲಿ ೨೦ ಸ್ತ್ರೀಯರು ಇದ್ದರು.

ನಿಮ್ಮ ವರ್ಗದವರ, ಎಂದರೆ ಹರಿಜನರ, ವಿದ್ಯಾಭ್ಯಾಸಕ್ಕಾಗಿ ಪ್ರಾರಂಭದಲ್ಲಿ ಸರ್ಕಾರ ಏನೂ ಏರ್ಪಾಡು ಮಾಡಿರಲಿಲ್ಲ. ವೆಂಕಟಕೃಷ್ಣಯ್ಯನವರು ಅವರ ವಿದ್ಯಾಭ್ಯಾಸಕ್ಕಾಗಿ ಸಂಸ್ಥೆಗಳನ್ನು ಸ್ಥಾಪಿಸಿದರು. ಕ್ರಿಶ್ಚಿರ್ಯ ಮಿಷನರಿಗಳಲು ಅವರಿಗಾಗಿ ಕೆಲವು ಶಾಲೆಗಳನ್ನು ತೆರೆದರು.

ಪಂಚಮರನ್ನು ಮೇಲಕ್ಕೆತ್ತಬೇಕು ಎಂಬ ಸಮಾಜ ಸುಧಾರಣಾ ಕಾರ್ಯ ಜನಾಂಗದಲ್ಲಿ ಬೆಳೆಯುತ್ತ, ಈ ಜಾತಿಯವರ ವಿಷಯದಲ್ಲಿ ಮೇಲುಜಾತಿಯವರು ಕರುಣೆಯನ್ನೂ ಪ್ರೀತಿಯನ್ನೂ ತೋರಿ, ಉದಾರ ಭಾವ ವಹಿಸುತ್ತ ಬಂದರು.

ಪಂಚಮಾ ಎಜುಕೇಷನ್ ಲೀಗನ್ನು ೧೯೧೦ ರಲ್ಲಿ ಸ್ಥಾಪನೆ ಮಾಡಿ, ಅದರ ಮೂಲಕ ಹರಿಜನರ ವಿದ್ಯಾಭ್ಯಾಸವನ್ನು ಮುಂದರಿಸಿದರು. ಅವರಿಗೆ ಅನೇಕ ಮಹನೀಯರು ಸಹಾಯಕರಾಗಿ ನಿಂತರು. ಆರ್. ಗೋಪಾಲಸ್ವಾಮಿ ಅಯ್ಯರ್ ಮುಖ್ಯ ಸಹಾಯಕರಾಗಿದ್ದರು.

ಅಖಿಲ ಭಾರತದಲ್ಲಿ “ಸೋಷ್ಯಲ್‌ ರಿಫಾರಂ” ಸಮ್ಮೇಳನಗಳು ನಡೆದು ಪಂಚಮರ ಸ್ಥಿತಿಯನ್ನು ಉತ್ತಮ ಪಡಿಸಬೇಕೆಂದು ಉತ್ತಮ ಜಾತಿಯ ಜನರಿಗೆ ಬೋಧನೆಯಾಯಿತು. ಮೈಸೂರು ರಾಜ್ಯದಲ್ಲಿಯೂ, ಮೈಸೂರು ನಗರದಲ್ಲಿಯೂ, ಇದರ ಪರಿಣಾಮ ಬಹಳ ಚೆನ್ನಾಗಿಯೇ ಆಯಿತು. ಮೈಸೂರು ನಗರದಲ್ಲಿ ಒಂದು ಪಂಚಮಾ ಬೋರ್ಡಿಂಗ್‌ ಸ್ಕೂಲು ಸ್ಥಾಪನೆಯಾಯಿತು; ಇದು ಕ್ರಮೇಣ ಪಂಚಮ ಇಂಡಸ್ಟ್ರಿಯಲ್‌ ಸ್ಕೂಲ್‌ ಆಯಿತು. ಆದಿಯಿಂದಲೂ ಈ ಸಂಸ್ಥೆಯ ಮುಖ್ಯ ಸದಸ್ಯರಾಗಿ ವೆಂಕಟಕೃಷ್ಣಯ್ಯನವರು ಬಹಳ ಸೇವೆ ಮಾಡಿದರು.

ಗಾಂಧೀಜಿಯವರಿಂದ ಅಸ್ಪೃಶ್ಯತಾ ನಿವಾರಣಾ ಚಳುವಳಿ ಆರಂಭವಾದ ಮೇಲೆ,  ಮೈಸೂರು ನಗರದಲ್ಲಿಯೂ, ಈ ಉದ್ದೇಶಕ್ಕಾಗಿಯೇ ಒಂದು ಸಂಸ್ಥೆ ಸ್ಥಾಪನೆಯಾಯಿತು. ವೆಂಕಟಕೃಷ್ಣಯ್ಯನವರು ಈ ಸಂಸ್ಥೆಗೆ ಸದಸ್ಯರಾಗಿ ಅಸ್ಪೃಶತಾ ನಿವಾರಣೆಯ ಬಗ್ಗೆ ಉನ್ನತ ಪ್ರಚಾರ ನಡೆಸಿದರು.

೧೯೧೮ ನೇ ನವೆಂಬರ್ ೨೯ ರಲ್ಲಿ ಸರ್ಕಾರ ಅತ್ಯಂತ ಮುಖ್ಯವಾದ ಒಂದು ಅಪ್ಪಣೆ ಹೊರಡಿಸಿತು. ಸರ್ಕಾರ ನಡೆಸುವ ಮತ್ತು ಸರ್ಕಾರದ ಸಹಾಯ ಪಡೆಯುವ ಎಲ್ಲಾ ಸ್ಕೂಲುಗಳಿಗೂ ಹರಿಜನ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಡ್ಡಿ ಇರಕೂಡದು; ಅವರು ಪ್ರವೇಶ ಮಾಡಬೇಕೆಂದು ಬಂದರೆ, ಅವರಿಗೆ ಕಡ್ಡಾಯವಾಗಿ ಪ್ರವೇಶ ದೊರೆಯೊಲೇಬೇಕು ಎಂಬರ್ಥದ ಅಪ್ಪಣೆಯಿದು. ಇದರಿಂದ ಪ್ರಾರಂಭದಲ್ಲಿ ಕೆಲವರಿಗೆ ಅಸಮಾಧಾನವಾದರೂ, ಕ್ರಮೇಣ ಎಲ್ಲ ಸ್ಕೂಲುಗಳಿಗೂ ಹರಿಜನರ ಪ್ರವೇಶ ದೊರೆಯಿತು.

ಸರ್ಕಾರದ ಈ ಮುಂದರಿದ ನೀತಿಗೆ ಅನೇಕ ವರ್ಷಗಳಿಂದಲೂ ನಡೆಯುತ್ತಿದ್ದ ಅಸ್ಪೃಶ್ಯ ನಿವಾರಣೆ, ಹರಿಜನೋದ್ಧಾರ, ಸಮಾಜ ಸುಧಾರಣ ಕಾರ್ಯಗಳೇ ಕಾರಣ. ಅನೇಕ ಹರಿಜನ ಮುಖಂಡರು ವೆಂಕಟಕೃಷ್ಣಯ್ಯನವರಲ್ಲಿ  ಗುರುಭಾವವನ್ನಿಟ್ಟಿದ್ದರು.

ವೆಂಕಟಕೃಷ್ಣಯ್ಯನವರು ಮೂಗು ಪ್ರಾಣಿಗಳ ವಿಷಯದಲ್ಲಿ ಬಹಳ ದಯೆ ತೋರಿಸುತ್ತಿದ್ದರು. ಗೋ ರಕ್ಷಣಾ ಸಂಸ್ಥೆಗಳಿಗೆ ಬಹಳ ಬೆಂಬಲವೀಯುತ್ತಿದ್ದರು. ಮುದಿಯಾದ, ಕಾಲು ಮುರಿದ ಅನೇಕ  ಹಸುಗಳೂ, ಎತ್ತುಗಳೂ, ಇತರ ಪ್ರಾಣಿಗಳೂ ರಕ್ಷಣೇಯಿಲ್ಲದೆ ಇರುವುದನ್ನು ಕಂಡು, ಮಹಾರಾಜರು “ಪಿಂಜ್ರಾಪೋಲ್‌” ಎಂಬ ಒಂದು ಸಂಸ್ಥೆಯನ್ನು ಏರ್ಪಡಿಸಿದರು. ಇದಕ್ಕೆ ಸರ್ಕಾರದಿಂದಲೂ ನಗರದ ಮುನಿಸಿಪಾಲಿಟಿಯಿಂದಲೂ ಸಹಾಯ ಹಣ ದೊರೆಯುತ್ತಿತ್ತು. ವೆಂಕಟಕೃಷ್ಣಯ್ಯನವರು ಈ ಸಂಸ್ಥೆಗೆ ಆಗಾಗ ಭೇಟಿ ಕೊಟ್ಟು, ಸೂಕ್ತವಾದ ಸಲಹೆ ಕೊಡುತ್ತಿದ್ದರು.

ಮೈಸೂರು ಸಂಸ್ಥಾನದಲ್ಲಿ  ಇಂಡಿಯಾದ ಇತರ ಎಲ್ಲಾ ಪ್ರಾಂತ್ಯಗಳಿಗಿಂತಲೂ ಮೊದಲಾಗಿ ಬಾಲ್ಯ ವಿವಾಹವನ್ನು ಕಾನೂನಿಂದ ಪ್ರತಿಬಂಧಿಸಲಾಯಿತು. ಹಿಂದೆ ೩ ವರ್ಷದ ಅಥವಾ ೫ ವರ್ಷದ ಹೆಣ್ಣುಮಗುವಿಗೆ ೫೦ ವರ್ಷದ ಮುದುಕನಾಗಿದ್ದರೂ ತಾಲೀಕಟ್ಟ, ಮದುವೆಯಾಗುವ ಪದ್ಧತಿಯಿತ್ತು. ಇಂತಹ ವಿವಾಹಗಳನ್ನು ಪ್ರತಿ ಬಂಧಿಸಬೇಕೆಂದು ವೆಂಕಟಕೃಷ್ಣಯ್ಯನವರೂ ಅವರ ಮಿತ್ರರೂ ಮೊದಲಿನಿಂದಲೂ ಪ್ರಚಾರ ಮಾಡುತ್ತಲೇ ಬಂದರು. ೧೮೮೬ ರಲ್ಲಿ ಮೈಸೂರು ಸರ್ಕಾರ ಒಂದು ಕಾನೂನು ಮಾಡಿತು. ಗಂಡಸಿಗೆ ೫೦ ವರ್ಷ ಅಥವಾ ಹೆಚ್ಚಾಗಿ ಆಗಿದ್ದರೆ ಅವನು ೧೬ ಅಥವಾ ಕೆಳಗಿನ ವರ್ಷದ ಹುಡುಗಿಯನ್ನು ಮದುವೆ ಮಾಡಿಕೊಳ್ಳಕೂಡದೆಂಬುದೇ ಈ ಕಾನೂನು. ವೆಂಕಟಕೃಷ್ಣಯ್ಯನವರೂ ಅವರ ಮಿತ್ರರೂ ಈ ಕಾನೂನನ್ನು ಶ್ಲಾಘಿಸಿ, ಬಾಲಕಿಯರ ಮತ್ತು ಬಾಲಕರ ವಿವಾಹದ ವಯಸ್ಸನ್ನು ಏರಿಸಬೇಕೆಂಬ ಕಾನೂನುಗಳೂ ಆಗಬೇಕೆಂದು ಪ್ರಚಾರ ಮಾಡಿದರು.

ಆ ಕಾಲದಲ್ಲಿ ಬ್ರಾಹ್ಮಣರು ಸಮುದ್ರ ಪ್ರಯಾಣಮಾಡಿ ಇಂಗ್ಲೆಂಡು ಮುಂತಾದ ಪರದೇಶಗಳಿಗೆ ಹೋಗಲು ಪ್ರತಿಬಂಧಕವಿತ್ತು. ಕೆಲವು ಕಾಲವಾದ ಮೇಲೆ ಸಮುದ್ರಯಾನ ಮಾಡಿ ಬಂದವರಿಗೆ ಪ್ರಾಯಶ್ಚಿತ್ತ ಮಾಡುತ್ತಿದ್ದರು. ಇದೆಲ್ಲಾ ಸರಿಯಲ್ಲ, ಬ್ರಾಹ್ಮಣರು ಅನುಕೂಲವಿದ್ದರೆ ಸಮುದ್ರಯಾನ ಮಾಡಿ ವಿದೇಶಗಳಿಗೆ ಹೋಗಿಬರಲು ಅಡ್ಡಿ ಆತಂಕಗಳಿರಬಾರದೆಂದು ಪ್ರಚಾರ ಮಾಡಿದರು.

ಬಾಲವಿಧವೆಯರು ಮತ್ತು ಇತರ ವಿಧವೆಯರೂ ಅಪೇಕ್ಷಿಸಿದರೆ ಅವರಿಗೆ ಪುನರ್ವಿವಾಹಕ್ಕೆ ಕಾನೂನಿನ ಅವಕಾಶವಿರಬೇಕೆಂದೂ ವೆಂಕಟಕೃಷ್ಣಯ್ಯನವರೂ ಅವರ ಮಿತ್ರರೂ ಪ್ರಚಾರ ನಡೆಸಿದರು.

ಇಷ್ಟೇ ಅಲ್ಲದೆ, ಆಗಿನ ಕಾಲದಲ್ಲಿ ಬಾಲಕಿಯರಿಗೆ ಋತುಮತಿಯರಾಗುವುದಕ್ಕೆ ಮುಂಚೆಯೇ ಎರಡನೇ ಮದುವೆಯವನಿಗೋ, ಮೂರನೇ ಮದುವೆಯನಿಗೋ, ಮುದುಕನಿಗೂ ಬಲಾತ್ಕಾರವಾಗಿ ವಿವಾಹ ಮಾಡುತ್ತಿದ್ದರು. ಇದನ್ನು ತಪ್ಪಿಸಿ, ಋತುಮತಿಯಾದವರ ವಿವಾಹ ಧಾರಾಳವಾಗಿ ನಡೆಯುವಂತೆ ಸಮಾಜದಲ್ಲಿ ಸುಧಾರಣೆಯಾಗಬೇಕೆಂದು ವೆಂಕಟಕೃಷ್ಣಯ್ಯನವರೂ, ಅವರ ಮಿತ್ರರೂ ಪ್ರಚಾರ ನಡೆಸುತ್ತ ಬಂದರು.

ಈಗಿನ ಕಾಲದಲ್ಲಿ ಈ ಪದ್ಧತಿಗಳೆಲ್ಲಾ ಸರ್ವಸಾಮಾನ್ಯವಾಗಿವೆ. ಆಗಿನ ಕಾಲದಲ್ಲಿ ಜನ ಬಹಳ ಹಿಂಜರಿಯುತ್ತಿದ್ದರು. ಆದುದರಿಂದ ಜನಾಂಗವನ್ನು ಮುಂದಕ್ಕೆ ತರಲು ಇಂತಹ ಪ್ರಚಾರಗಳು ಆಗ ಬಹಳ ಅವಶ್ಯಕವಾಗಿದ್ದುವು.

ಆ ಕಾಲದಲ್ಲಿ, ಇಂತಹ ಪ್ರಚಾರ ಮಾಡುವವರನ್ನು ಜನ ಹಾಸ್ಯಮಾಡುತ್ತಿದ್ದರು. ಆದರೆ, ವೆಂಕಟಕೃಷ್ಣಯ್ಯನವರು ಈ ಹಾಸ್ಯಗಳಿಗೂ ಟೀಕೆಗಳಿಗೂ ಹೆದರದೆ, ಜನಾಂಗದ ಏಳಿಗೆಯ ದೃಷ್ಟಿಯಲ್ಲಿಯೇ ಮನಸ್ಸಿಟ್ಟು, ಈ ಸಮಾಜ ಸುಧಾರಣಾ ಪ್ರಚಾರವನ್ನು ಪತ್ರಿಕೆಗಳಲ್ಲಿಯೂ, ಹೊರಗೂ, ಭಾಷಣಗಳ ಮೂಲಕವೂ ಮಾಡುತ್ತಿದ್ದರು.

ಆ ಕಾಲದಲ್ಲಿ ಬ್ರಾಹ್ಮಣ-ಬ್ರಾಹ್ಮಣೇತರ ವೈಷಮ್ಯಗಳು ಇರಲಿಲ್ಲ. ಮಧ್ಯೆ ಕೆಲವು ಕಾಲ ಇತ್ತು. ಆಗ ವೆಂಕಟಕೃಷ್ಣಯ್ಯನವರು ಹಿಂದುಳಿದವರ ಹಿತೈಷಿಗಳಾಗಿಯೇ ಇದ್ದರು, ಆದರೂ, ಅಲ್ಪ ಸಂಖ್ಯಾತರಾದ ಒಂದು ಪಂಗಡಕ್ಕೂ ಅನ್ಯಾಯವಾಗದಂತೆ ಸರ್ಕಾರ ನಡೆದುಕೊಳ್ಳಬೇಕೆಂದು ವಾದಿಸುತ್ತಿದ್ದರು. ಹಿಂದುಳಿದ ಕೆಲವು ಮುಖಂಡರು ತಪ್ಪರ್ಥ ಮಾಡಿಕೊಂಡು ಇವರನ್ನು ದೂಷಿಸುತ್ತಿದ್ದರು. ಆದರೆ ವೆಂಕಟಕೃಷ್ಣಯ್ಯನವರು ಇಂಥವರನ್ನೂ ಪ್ರೀತಿಯಿಂದಲೂ, ಸ್ನೇಹದಿಂದಲೂ ಕಾಣುತ್ತ ಅವರ ಸುಖ ದುಃಖಗಳಲ್ಲಿ ಭಾಗಿಯಾಗುತ್ತಿದ್ದರು.

ಕೋಮುವಾರು ಶಾಂತಿಗಾಗಿ ಪ್ರಾರ್ಥನೆ ಮಾಡುತ್ತಾ, ಅವರು ನ್ಯಾಯವಿಧಾಯಕ ಸಭೆಯಲ್ಲಿ ಹೀಗೆ ಹೇಳಿದರು:

“ನಮ್ಮ ದೇಶದಲ್ಲಿ ಕೋಮುವಾರು ಶಾಂತಿಯಿಲ್ಲ. ಕೋಮುವಾರು ಸಮಾಧಾನವಿಲ್ಲ. ನಾನು ಹಿಂದುವಾಗಿದ್ದರೂ ನಮ್ಮ ಸಮಾಜದಲ್ಲಿ ಒಂದು ದುರದೃಷ್ಟ ಸ್ಥಾನದಲ್ಲಿದ್ದೇನೆ. ಸಂಪ್ರದಾಯಬದ್ಧರಾದ ಬ್ರಾಹ್ಮಣರು ನನಗೆ ಕಲಿಪುರುಷ ಎಂಬ ಹೆಸರಿಟ್ಟಿದ್ದಾರೆ. ಬ್ರಾಹ್ಮಣೇತರರು ನನ್ನನ್ನು ಅವರ ದ್ವೇಷಿ ಎಂದು ಕರೆಯುತ್ತಾರೆ. ಹೀಗೆ ಕರೆಯುತ್ತಾರೆಂದು ನಾನೇನೂ ಹೆದರುವುದಿಲ್ಲ. ಅದಕ್ಕೆ ಬದಲು ನಾನು ನನ್ನ ಈ ಸ್ಥಾನಕ್ಕಾಗಿ ಹೆಮ್ಮೆ ಪಡುತ್ತೇನೆ.”

“ಬ್ರಾಹ್ಮಣೇತರರನ್ನು ದ್ವೇಷಿಸುವ ಬ್ರಾಹ್ಮಣರೂ, ಬ್ರಾಹ್ಮಣರನ್ನು ದ್ವೇಷಿಸುವ ಬ್ರಾಹ್ಮಣೇತರರೂ ಇಬ್ಬರೂ ತಮ್ಮ ಸ್ಥಿತಿಯನ್ನು ತಿಳಿದುಕೊಳ್ಳದಿರುವುದು ದುರದೃಷ್ಟ. ಅವರನ್ನು ಬಿಟ್ಟು ಇವರಿರಲಾರರು; ಇವರನ್ನು ಬಿಟ್ಟು ಅವರಿರಲಾರರು. ಪಂಚಮರೂ ನಮಗೆ ಬೇಕು. ಅವರನ್ನು ಬಿಟ್ಟು ನಾವು ಇರಲು ಸಾಧ್ಯವೇ? ಅವರನ್ನು ಮೇಲಕ್ಕೆತ್ತುವುದು ನಮ್ಮ ಕರ್ತವ್ಯವಲ್ಲವೇ? ೪೦ ವರ್ಷಗಳಿಂದ ಪಂಚಮರನ್ನು ಮೇಲಕ್ಕೆತ್ತುವ ಕೆಲಸದಲ್ಲಿ ಆದಷ್ಟು ಆಸಕ್ತಿ ವಹಿಸಿ ನಾನು ಕೆಲಸಮಾಡುತ್ತಿದ್ದೇನೆ. ಈ ವಿಷಯವೇ ಅತಿ ಮುಖ್ಯವಾದುದು”.

ಮುಖ್ಯವಾಗಿ, ವೆಂಕಟಕೃಷ್ಣಯ್ಯನವರದು ಪರೋಪಕಾರ ಜೀವನ. ಕಷ್ಟದಲ್ಲಿರುವವರನ್ನು ನೋಡಿದರೆ ಅವರ ಹೃದಯ ಕರಗಿಹೋಗುತ್ತಿತ್ತು. ಅವರ ಜೊತೆಯಲ್ಲಿ ತಾವೂ ಕಣ್ಣೀರುಹಾಕುತ್ತಿದ್ದರು. ಎಷ್ಟು ಜನ ಬಡ ವಿದ್ಯಾರ್ಥಿಗಳಿಗೆ ಅನ್ನ ಹಾಕಿದ್ದಾರೆಯೋ, ಫೀಜು ಕೊಟ್ಟಿದ್ದಾರೆಯೋ, ಬಟ್ಟೆ ಹೊಲಿಸಿಕೊಟ್ಟಿದ್ದಾರೆಯೋ, ಪುಸ್ತಕಗಳನ್ನು ತೆಗಿಸಿ ಕೊಟ್ಟಿದ್ದಾರೆಯೋ?

ಎಷ್ಟು ಜನ ವಿಧವೆಯರ ಕಣ್ಣೀರನ್ನು ನೋಡಿ ಮರುಗಿದ್ದಾರೆಯೋ? ಸ್ವತಃ ಧನ ಸಹಾಯ ಮಾಡಿದ್ದಾರೆಯೋ? ಸಂಸ್ಥೆಗಳಿಗೆ ಸೇರಿಸಿದ್ದಾರೆಯೋ?

ಎಷ್ಟು ಜನ ಬಡವರ, ನೌಕರಿ ಇರುವವರು ಇಲ್ಲದವರ ಕಷ್ಟದಲ್ಲಿ ಮರುಗಿದ್ದಾರೆಯೋ? ಎಷ್ಟು ಜನರಿಗೆ ಆದ ಅನ್ಯಾಯವನ್ನು ಸಹಿಸಲಾರದೆ ಸರ್ಕಾರಕ್ಕೆ ಅವರ ಬಗ್ಗೆ ಬರೆದಿದ್ದಾರೆಯೋ? ಪತ್ರಿಕೆಗಳಲ್ಲಿ ಅವರ ಪಕ್ಷವನ್ನು ಹಿಡಿದು ವಾದಿಸಿದ್ದಾರೆಯೋ? ಸಾರ್ವಜನಿಕ ವೇದಿಕೆ ಮೇಲೆಯೀ ಬಡವರಿಗಾಗಿ, ಕಷ್ಟದಲ್ಲಿರುವವರಿಗಾಗಿ, ಅನ್ಯಾಯಕ್ಕೆ ಸಿಕ್ಕಿದವರಿಗಾಗಿ, ಕಣ್ಣೀರು ಮತ್ತು ಕೂಗು. ಅಸೆಂಬ್ಲಿಯಲ್ಲಿಯೂ, ನ್ಯಾಯವಿಧಾಯಕ ಸಭೆಯಲ್ಲಿಯೂ ಅನ್ಯಾಯದ ಪ್ರತಿಭಟನೆ ಮತ್ತು ನ್ಯಾಯದೊರೆಯಬೇಕೆಂಬ ಹಠವಾದ. ಅವರ ಪತ್ರಿಕೆಗಳಂತೂ ಬಡವರ ಆಧಾರಿ. ಯಾರೇ ಆಗಲಿ, ಮಹಾರಾಣಿಯವರಿಂದ ಆದಿಯಾಗಿ ಸಾಮಾನ್ಯ ಪ್ರಜೆಯವರಿಗೂ, ವೆಂಕಟಕೃಷ್ಣಯ್ಯನವರ ಪತ್ರಿಕೆಗಳು ನ್ಯಾಯದ ಆಧಾರ ಸ್ತಂಭಗಳು. ಅವರಿಗೆ ಅವರವರ ನ್ಯಾಯ, ಅವರಿಗೆ ಅವರವರ ಕರ್ತವ್ಯ, ಎಲ್ಲರಿಗೂ ಅವರವರಿಗೆ ತಕ್ಕ ಸೌಖ್ಯ. ಇದಕ್ಕಾಗಿ ವೆಂಕಟಕೃಷ್ಣಯ್ಯನವರು ಯಾವಜ್ಜೀವವೂ ಶ್ರಮಿಸಿದರು.