ತಾತಯ್ಯನವರ ಕಾಂಗ್ರೆಸ್ಅಧ್ಯಕ್ಷ ಭಾಷಣ

ಬೆಂಗಳೂರು ನಗರದ ಮೆಜಿಸ್ಟಿಕ್‌ ಥಿಯೇಟರಿನಲ್ಲಿ ೧೯೨೯ ಮೇ ೫ರಲ್ಲಿ ಮೈಸೂರು ಸ್ಟೇಟ್‌ ಕಾಂಗ್ರೆಸ್ಸಿನ ಎರಡನೇ ಅಧಿವೇಶನ ನಡೆಯಿತು. ಇದರ ಉದ್ಘಾಟನೆಯನ್ನು ಸೇಲಮ್ಮಿನ ಮಾಜಿ ಕಾಂಗ್ರೆಸ್‌ ಅಧ್ಯಕ್ಷ ವಿಜಯರಾಘವಾಚಾರ್ಯರವರು ನೆರವೇರಿಸಿದರು. ಎಂ. ವೆಂಕಟಕೃಷ್ಣಯ್ಯನವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷ ಭಾಷಣದ ಕೆಲವು ಭಾಗಗಳಿವು:

ಪ್ರಭುತ್ವಮಾಡತಕ್ಕವರಿಗೆ ಕೀರ್ತಿ ಬರಬೇಕಾದರೆ ಮಂತ್ರಿಗಳೇ ಮೊದಲಾದ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸಮಾಡಬೇಕು… ಅನ್ನ ವಸ್ತ್ರಗಳಿಗಿಲ್ಲದವರು ನ್ಯಾಯವಾದ ಮಾರ್ಗದಿಂದ ಅನ್ನ ವಸ್ತ್ರಗಳನ್ನು ಸಂಪಾದಿಸಿಕೊಳ್ಳುವುದು ಸಾಧ್ಯವಾದರೆ ನ್ಯಾಯಸ್ಥರಾಗಿರುವರು, ಅದು ಅಸಾಧ್ಯವಾದರೆ ಹೇಗಾದರೂ ಹಿಟ್ಟಿಗೂ ಬಟ್ಟೆಗೂ ಸಂಪಾದಿಸಿಕೊಳ್ಳುವ ಪ್ರಯತ್ನವನ್ನು ಮಾಡುವರು. ಅನ್ನ ವಸ್ತ್ರಗಳಿಗೆ ಏರ್ಪಾಡನ್ನು ಮಾಡದೆ, ‘ನೀನು ಹರಿಶ್ಚಂದರನಾಗು’ ಎಂದು ಹೇಳಿದರೆ, ಹಾಗಾಗತಕ್ಕವರೇ ಕೋಟಿಗೆ ಒಬ್ಬರು ಸಿಕ್ಕುವುದೂ ಕಷ್ಟ. ಎಲ್ಲರೂ ಮನಃಪೂರ್ವಕವಾಗಿ ಉದ್ಯೋಗವನ್ನು ಮಾಡಿ, ತಮ್ಮ ಅನ್ನ ವಸ್ತ್ರಗಳಿಗೆ ಬೇಕಾದ್ದನ್ನು ಸಂಪಾದಿಸಿಕೊಂಡು ಸರ್ಕಾರದವರು ಮಾಡಬೇಕಾದ ದುಷ್ಟನಿಗ್ರಹ ಶಿಷ್ಟಪರಿಪಾಲನದ ಕೆಲಸಕ್ಕೂ ಬೇಕಾದಷ್ಟು ದ್ರವ್ಯವು ಒದಗುವಂತೆ ಮಾಡುವುದು ಕಷ್ಟವಲ್ಲ… ನಮ್ಮ ಮಾತೃಭೂಮಿಯು ಕೆಲಸ ಮಾಡತಕ್ಕವರಿಗೆ ಕಲ್ಪವೃಕ್ಷವಾಗಿಯೂ ಕಾಮಧೇನುವಾಗಿಯೂ ಪರಿಣಮಿಸುವಂತೆ ಮಾಡುವುದು ಕಷ್ಟವಲ್ಲ. ಇದನ್ನೆಲ್ಲಾ ಸಾಕ್ಷಾತ್ತಾಗಿಯೂ, ಪರೋಕ್ಷವಾಗಿಯೂ ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ರವರು ಪರ್ಯಾಲೋಚಿಸಿ,  ಈ ಸಂಸ್ಥಾನವು ಮಾದರಿ ಸಂಸ್ಥಾನವಾಗುವಂತೆ ಮಾಡಬೇಕೆಂದು ಕುತೂಹಲಪಟ್ಟು, ಸರ್ಕಾರದ ನೌಕರರೂ ಪ್ರಜೆಗಳೂ ಸೇರಿ ಕೆಲಸಮಾಡಿದರೆ ತಮ್ಮ ಇಷ್ಟಾರ್ಥವು ಚರಿತಾರ್ಥವಾಗುದೆಂದು ಗೊತ್ತುಮಾಡಿ, ಪ್ರಜಾಪ್ರತಿನಿಧಿ ಸಭೆಯನ್ನು ಏರ್ಪಡಿಸಿದರು. ಈ ಸಭೆಯು ಎಷ್ಟು ಅಭಿವೃದ್ಧಿಗೆ ಬರಬೇಕೋ ಅಷ್ಟು ಅಭಿವೃದ್ಧಿಗೆ ಬಂದಿಲ್ಲವೆಂದು ತಿಳಿದುಕೊಂಡು ಕೆಲವರು ಅತೃಪ್ತಿಯನ್ನು ತೋರಿಸುತ್ತಾರೆ. “ರೋಮ್‌ ಪಟ್ಟಣವು ಒಂದು ದಿವಸದಲ್ಲಿ ಕಟ್ಟಲ್ಪಡಲಿಲ್ಲ” ಎಂಬ ಗಾದೆಯನ್ನು ಅನೇಕರು ಕೇಳಿರಬಹುದು….೪೯ ವರ್ಷಗಳಲ್ಲಿ ಈ ಸಭೆಯ ಪ್ರತಿನಿಧಿಗಳು ಅಸಾಧಾರಣ ಪ್ರಜ್ಞೆಯನ್ನು ತೋರಿಸಿದಾರೆ. ಜಾತಿಭೇದ, ಮತಭೇದಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ಉಂಟಾಗತಕ್ಕ ಚರ್ಚೆಗಳನ್ನು ಬಿಟ್ಟರೆ ಮಿಕ್ಕ ವಿಷಯಗಳಲ್ಲಿ ಮೆಂಬರುಗಳು ಅಸಾಧಾರಣವಾದ ಪರಸ್ಪರ ಪ್ರೀತಿಯನ್ನು ತೋರಿಸುತ್ತಲಿರುವದು ಗೊತ್ತಾಗುತ್ತದೆ…. ಸಾರ್ವತ್ರಿಕ ವಿಷಯಗಳಲ್ಲಿ ಭೇದಭಾವಗಳಿರುವುದಿಲ್ಲ. ಕ್ರಮೇಣ ಸರ್ಕಾರದ ಉದ್ಯೋಗಳಿಗೋಸ್ಕರ ಉಂಟಾಗತಕ್ಕ ಭೇದಭಾವಗಳೂ ಹೋಗಬಹುದು. ಜನಗಳ ಜೀವನಕ್ಕೆ ಸುಲಭವಾಗಿಯೂ, ನಿರುಪಾಧಿಕವಾಗಿಯೂ ಇರತಕ್ಕ ಎಷ್ಟೋ ವೃತ್ತಿಗಳಿರುತ್ತವೆ. ಕೃಷಿ, ಕೈಗಾರಿಕೆ, ವ್ಯಾಪಾರಗಳಲ್ಲಿ ಶ್ರದ್ಧೆಯಿಂದ ಕೆಲಸಮಾಡತಕ್ಕವರು ಸರ್ಕಾರದ ನೌಕರಿಯಿಂದ ಜೀವನ ಮಾಡತಕ್ಕವರಿಗಿಂತಲೂ ಹೆಚ್ಚು ನೆಮ್ಮದಿಯನ್ನು ಹೊಂದಬಹುದು….

ನಮ್ಮ ಸಂಸ್ಥಾನದ ಜನಗಳು ಸಕಲ ಲೌಕಿಕ ವಿಶಾರದರಾದ ಪಾಶ್ಚಾತ್ಯರಂತೆ ಸರ್ವತೋಮುಖವಾಗಿ ಮುಂದಾಳುಗಳಾಗುವಂತೆ ಮಾಡಬೇಕೆಂದು ಶ್ರೀ ಚಾಮರಾಜೇಂದ್ರ ಒಡೆಯರವರು  ಈ ಪ್ರತಿನಿಧಿಸಭೆಯನ್ನು ಏರ್ಪಾಡು ಮಾಡಿದರು. ಈ ಉದ್ದೇಶವು ಇನ್ನು ನೆರವೇರಿಲ್ಲ. ಇದು ನೆರವೇರುವಂತೆ ಮಾಡುವುದು ಈ ಕಾಂಗ್ರೆಸ್ಸಿನ ಮುಖ್ಯ ಉದ್ದೇಶ…. ಬ್ರಿಟಿಷ್‌ ಇಂಡಿಯಾ ದೇಶದಲ್ಲಿ ನ್ಯಾಷನಲ್‌ ಕಾಂಗ್ರೆಸ್‌ ಹೇಗಿರುವುದೋ, ಹಾಗೆ ಈ ಮೈಸೂರು ಸಂಸ್ಥಾನದಲ್ಲಿ ಮೈಸೂರು ಸ್ಟೇಟ್‌ ಕಾಂಗ್ರೆಸ್‌ ಇರುವುದು…. ಸರ್ಕಾರದವರು ನಿರಂಕುಶವಾಗಿ ಅಧಿಕಾರವನ್ನು ಮಾಡುವುದಕ್ಕೂ, ಸರ್ಕಾರದ ಉತ್ಪತ್ತಿಯನ್ನು ಮನಸ್ವೀ ಖರ್ಚುಮಾಡುವುದಕ್ಕೂ, ಸ್ವಾರ್ಥಪರತೆಗೋಸ್ಕರ ಸರ್ಕಾರದ ಹುಟ್ಟುವಳಿಯನ್ನು ವಿನಿಯೋಗಿಸಿಕೊಳ್ಳುವುದಕ್ಕೂ ಕಂದಾಯವು ಉಪಯೋಗಿಸಲ್ಪಡದಂತೆ ಮಾಡಬೇಕು… ಸರ್ಕಾರದವರು ತಮ್ಮ ಕರ್ತವ್ಯವನ್ನು ತಿಳಿದುಕೊಂಡು ತಮ್ಮ ಸಂಪತ್ತಿಗೆ ಕಾರಣ ಭೂತರಾದ ಕಂದಾಯಕೊಡತಕ್ಕ ಪ್ರಜೆಗಳ ಕ್ಷೇಮಚಿಂತನೆಯನ್ನು ಸರಿಯಾಗಿ ಮಾಡಿದರೆ ಸಕಲ ಪ್ರಜೆಗಳೂ, ಧರ್ಮಿಷ್ಠರಾದ ಅಧಿಕಾರಿಗಳನ್ನು ದೇವರಂತೆ ಕಾಣುವ ಹಾಗೆ ಮಾಡಬಹುದು. ‘ರಾಜಾ ಕಾಲಸ್ಯ ಕಾರಣಂ’ ಎಂಬ ವಾಕ್ಯವನ್ನು ಅನೇಕ ರಾಝರು ಮರೆತ್ತಿರುತ್ತಾರೆ. ರಾಜರು ಮನೋವಾಕ್ಕರ್ಮಗಳಲ್ಲಿ ಪರಿಶುದ್ದರಾಗಿ ಪರೋಪಕಾರಿಗಳಾದರೆ ಪ್ರಜೆಗಳೂ ಕೂಡ ಅವರ ಮೇಲ್ಪಂಗ್ತಿಯನ್ನನುಸರಿಸುವರು. ‘ಯಥಾ ರಾಜಾ ತಥಾ ಪ್ರಜಾಃ’ ಎಂಬ ವಚನವು ಸುಳ್ಳಲ್ಲ…. ಪ್ರಭುಗಳ ಕ್ಷೇಮಕ್ಕೆ ಪ್ರಜೆಗಳ ಕ್ಷೇಮವು ಆಧಾರವಾದದ್ದು. ಅದಕ್ಕೆ ಲೋಪ ಬರುವಂತೆ ಮಾಡಲ್ಪಟ್ಟಿದೆ. ಇದು ಸರಿಯಲ್ಲ. ಅನೇಕ ಪ್ರಜೆಗತಿಗೆ ಅವರ ಹಕ್ಕುಬಾಧ್ಯತೆ ವಿಷಯವಾದ ತಿಳುವಳಿಕೆಯು ಸರಿಯಾಗಿರುವುದಿಲ್ಲ. ಈ ವಿಷಯದಲ್ಲಿ ಅವರಿಗೆ ತಿಳುವಳಿಕೆಯನ್ನುಂಟುಮಾಡಬೇಕು. ರಾಜಭಕ್ತಿ ವಿಶ್ವಾಸಗಳಿಗೆ ನ್ಯೂನತೆಯು ಬರುವ ಸೂಚನೆಗಳು ತೋರುತ್ತಲಿವೆ. ಜನಗಳು ಅಕೃತ್ರಿಮವಾದ ರಾಜಭಕ್ತಿ ವಿಶೇಷಗಳುಳ್ಳವರಾಗುವಂತೆ ಮಾಡಲ್ಪಡಬೇಕು. ಇವೇ ಮೊದಲಾದ ಅತ್ಯವಶ್ಯಕವಾದ ಕೆಲಸಗಳನ್ನು ಮಾಡುವುದಕ್ಕೆ ಮೈಸೂರು ಸ್ಟೇಟ್‌ ಕಾಂಗ್ರೆಸಿನವರಿಗೆ ಇರತಕ್ಕ ಸೌಲಭ್ಯಗಳು ಯಾರಿಗೂ ಇರುವುದಿಲ್ಲ. ಆದುದರಿಂದ ಪ್ರಜೆಗಳು ಮಾತ್ರವೇ ಅಲ್ಲದೆ ಸರ್ಕಾರದವರೂ ಕೂಡ ಈ ಕಾಂಗ್ರೆಸ್ಸಿನ ಅಭಿವೃದ್ಧಿಗೆ ಸಹಾಯವನ್ನು ಮಾಡಬೇಕು. ಈ ಕಾಂಗ್ರೆಸ್ಸಿನವರು ಸರ್ಕಾರಕ್ಕೆ ಪ್ರತಿಕಕ್ಷಿಗಳಲ್ಲ. ಸರ್ಕಾರದವರ ನ್ಯುನಾತಿರೇಕಗಳನ್ನು ತೋರಿಸಿ, ಸರ್ಕಾರಕ್ಕೂ ಮಹಾಪ್ರಭುಗಳಿಗೂ ನಿರ್ದುಷ್ಟವಾದ ಕೀರ್ತಿಯು ಬರುವಂತೆ ಮಾಡಬೇಕಾದರೆ ಏನೇನು ಮಾಡಬೇಕೋ ಅದನ್ನು ಜಾರಿಗೆ ತರುವುದೇ ಈ ಸಭೆಯ ಮುಖ್ಯ ಉದ್ದೇಶ…. ಈ ಕಾಂಗ್ರೆಸಿನವರು ಕೇವಲ ಸಹಕಾರ ಬುದ್ಧಿಯುಳ್ಳವರಾಗಿರುತ್ತಾರೆ. ಇದರ ಪ್ರಯೋಜನವನ್ನು ಸರ್ಕಾರದವರು ಪರಿಪೂರ್ಣವಾಗಿ ಹೊಂದಿ, ಸಾಂಕುಶವಾಗಿಯೂ, ಜವಾಬ್ದಾರಿ ಸಂಕಲ್ಪದಿಂದಲೂ ಕೆಲಸ ಮಾಡಿ, ಆಚಂದ್ರಾರ್ಕಸ್ಥಾಯಿಯಾದ ಕೀರ್ತಿಗೆ ಪಾತ್ರರಾಗುವರೆಂದು ನಾನು ನಂಬಿದ್ದೇನೆ.