ಸಾರ್ವಜನಿಕ ಜೀವನದಲ್ಲಿರುವವರಿಗೆ ವೈಯಕ್ತಿಕ ಜೀವನವಿಲ್ಲವೆಂದು ಹೇಳುವ ವಾಡಿಕೆ. ವೆಂಕಟಕೃಷ್ಣಯ್ಯನವರು ತಮ್ಮ ಜೀವನದ ಪ್ರತಿಯೊಂದು ದಿನವನ್ನೂ ಸಾರ್ವಜನಿಕರಿಗಾಗಿಯೇ ಕಳೆದರು ಎಂದರೆ ಅತಿಶಯೋಕ್ತಿಯಲ್ಲ.

ತಮ್ಮ ೨೫-೩೦ ವಯಸ್ಸಿನಿಂದ ಕೊನೆಯವರೆಗೆ ಅವರು ತಮ್ಮ ಸ್ಕೂಲಿಗಾಗಿಯೋ, ಪತ್ರಿಕೆಗಳಿಗಾಗಿಯೋ, ಅನಾಥಾಲಯಕ್ಕಾಗಿಯೇ ಪ್ರಜಾಪ್ರತಿನಿಧಿ ಸಭೆ, ನ್ಯಾಯ ವಿಧಾಯಕ ಸಭೆ, ಮೈಸೂರು ನಗರದ  ಪೌರಸಭೆ ಇನ್ನೂ ಇತರ ಸಂಸ್ಥೆಗಳ ಏಳಿಗೆಗಾಗಿಯೋ, ತಮ್ಮ ಕಾಲವನ್ನು ವಿನಿಯೋಗಿಸಿದರು. ಅವರ ವೃದ್ಧಾಪ್ಯದಲ್ಲೂ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿವರೆಗೆ ಏನಾದರೂ ಸಾರ್ವಜನಿಕ ಕೆಲಸ ಮಾಡುತ್ತಲೇ ಇರುತ್ತಿದ್ದರು. ವಿಶ್ರಾಂತಿ ಎಂಬುದು ಇವರಿಗಿರಲಿಲ್ಲ. ಒಂದು ಕೆಲಸ ಬೇಜಾರಾದರೆ ಆ ಕೆಲಸ ಬಿಟ್ಟು ಬೇರೆ ಇನ್ನೊಂದು ಕೆಲಸ ಮಾಡುತ್ತಿದ್ದರು.  Rest is change of occupation. ಬರೀ ವಿಶ್ರಾಂತಿ ಎಂದರೆ ತುಕ್ಕು ಹಿಡಿಯುವುದು (rest is rust) ಎಂದು ಅವರು ಅರ್ಥ ಮಾಡುತ್ತಿದ್ದರು. ಅವರಿಗೆ ಸೋಮಾರಿತನವಾಗಲಿ, ಪಾಲುಮಾರಿಕೆಯಾಗಲೀ ಇರಲಿಲ್ಲ. ಈಗ ಮಾಡುವ ಕೆಲಸವನ್ನು ಈಗಲೇ ಮಾಡಬೇಕು, ಅದನ್ನು ಮುಂದಕ್ಕೆ ಹಾಕಬಾರದು ಎಂದು ಆ ಕೆಲಸವನ್ನು ಆಗಲೇ ಮಾಡುತ್ತಿದ್ದರು. ಮಧ್ಯಾಹ್ನದ ಹೊತ್ತು ನಿದ್ರೆ ಮಾಡುತ್ತಿರಲಿಲ್ಲ. ಮಧ್ಯಾಹ್ನ ಊಟ ಮಾಡಿಕೊಂಡು ಬಂದ ಕೂಡಲೇ ಟಪಾಲನ್ನು ನೋಡಿ ಕಾಗದಗಳಿಗೆ ಆಗಲೇ ಉತ್ತರ ಬರೆದು ಪೋಸ್ಟ್‌ ಮಾಡಿಸುತ್ತಿದ್ದರು. ಬಂದ ಕಾಗದಗಳಿಗೆ ಅಂದಂದೇ ಉತ್ತರ ಬರೆಯುವ ಪದ್ಧತಿ ಅವರದಾಗಿತ್ತು. ಪತ್ರ ವ್ಯವಹಾರದಲ್ಲಿ ಅವರಷ್ಟು ಕ್ರಮ ಪದ್ಧತಿಯನ್ನು ಅನುಸರಿಸುವವರು ಬಹಳ ಅಪರೂಪ.

ಅವರ ಬಳಿ ಅನೇಕರು ಶಿಫಾರಸುಗಳಿಗೆ ಬರುತ್ತಿದ್ದರು. ಯಾರಿಗೂ ಅವರು ಇಲ್ಲವೆನ್ನುತ್ತಿರಲಿಲ್ಲ. ಎಲ್ಲರಿಗೂ ಯಾವ ಶಿಫಾರಸು ಕಾಗದ ಬೇಕೋ ಅದನ್ನು ಕೊಡುತ್ತಿದ್ದರು. ಅವರವರ ಅದೃಷ್ಟದ ಪ್ರಕಾರ ಈ ಶಿಫಾರಸಿನ ಫಲ ಆ ಮನುಷ್ಯರಿಗೆ ದೊರೆಯುತ್ತಿತ್ತು. ಅವರ ಶಿಫಾರಸಿನಿಂದ ಫಲಹೊಂದಿ, ಅನೇಕರು, ಅವರ ಹೆಸರು ಹೇಳಿಕೊಂಡು, ಮನೆಯಲ್ಲಿ ದೀಪ ಹಚ್ಚುತ್ತಿದ್ದರು.

ಅವರು ಒಂದು ಅನಾಥಾಲಯವನ್ನು ನಡೆಸುತ್ತಿದ್ದರು. ಅದು ಈಗಲೂ ಮೈಸೂರು ನಗರದಲ್ಲಿ ಚೆನ್ನಾಗಿ ನಡೆಯುತ್ತಿದೆ. ಈ ಸಂಸ್ಥೆ ಸುಬ್ಬರಾಯನ ಕೆರೆಯ ಏರಿಯ ಮೇಲಿದೆ. ದೊಡ್ಡ ಮಹಡಿ ಕಟ್ಟಡ. ಅನೇಕ ವಿದ್ಯಾರ್ಥಿಗಳ ಅಶನ ವಸತಿಗಳಿಗೆ ಏರ್ಪಾಡಿದೆ.

ಈ ಅನಾಥಾಲಯ ೧೮೯೬ಕ್ಕಿಂತ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಪ್ರಾರಂಭದಲ್ಲಿ ಶೇಷಾದ್ರಿ ಅಯ್ಯರ್ ಅವರ ಬಂಗಲೆಯ ಹಿಂಭಾಗದ ಒಂದು ಕಟ್ಟಡದಲ್ಲಿ ನಡೆಯುತ್ತಿತ್ತು. ಈಗ ಆ ಕಟ್ಟಡದಲ್ಲಿ ಮಹಾರಾಣಿ ಬಾಲಿಕಾ ಪಾಠಶಾಲೆ ಇದೆ. ಈ ಅನಾಥಾಲಯವನ್ನು ವಿಶ್ವೇಶ್ವರಾನಂದ ಸರಸ್ವತಿ ಎಂಬ ಸನ್ಯಾಸಿ ನಡೆಸುತ್ತಿದ್ದರು. ೧೮೯೬ರಲ್ಲಿ ಈ ಸನ್ಯಾಸಿ ಇದನ್ನು ವೆಂಕಟಕೃಷ್ಣಯ್ಯನವರಿಗೆ ವಹಿಸಿ ಕೊಟ್ಟು ಇದನ್ನು ಮುಂದೆ ನಡೆಸಿಕೊಂಡು ಬರಬೇಕೆಂದು ಕೇಳಿಕೊಂಡರು. ಇದನ್ನು ನಡೆಸಲು ವೆಂಕಟಕೃಷ್ಣಯ್ಯನವರು ಒಂದು ಸಮಿತಿ ಸ್ಥಾಪಿಸಿದರು. ಈಗ ಇರುವ ಕಟ್ಟಡಕ್ಕೆ ನಿವೇಶನವನ್ನು ದೊರಕಿಸಿಕೊಳ್ಳಲು ಮತ್ತು ಅದನ್ನು ಕಟ್ಟಲು ಬಹಳ ಕಷ್ಟಪಟ್ಟರು. ಅವರು ಬದುಕಿರುವವರೆಗೂ ಅದರ ಕಾರ್ಯದರ್ಶಿಯಾಗಿ ಕೆಲಸ ನಡೆಸಿಕೊಂಡು ಬಂದರು. ಅಂಬಳೆ ಸುಬ್ರಹ್ಮಣ್ಯ ಅಯ್ಯರ್ ಅವರು ಅಧ್ಯಕ್ಷರಾಗಿದ್ದರು.

ವೆಂಕಟಕೃಷ್ಣಯ್ಯನವರ ಮರಣದ ಅನಂತರ ಪ್ರಸಿದ್ಧ ಲಾಯರ್ ಸಿ. ನರಸಿಂಹಯ್ಯನವರು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.

ಅನಾಥಾಲಯದ ವಿದ್ಯಾರ್ಥಿಗಳಿಗೆ ಧರ್ಮ ಮತ್ತು ನೀತಿಯ ಉಪದೇಶವನ್ನು ಕೊಡಿಸಲು ಅನೇಕ ಯತಿವರ್ಯರ ಮತ್ತು ಪಂಡಿತೋತ್ತಮರ ಉಪನ್ಯಾಸಗಳನ್ನು ನಡೆಸುತ್ತಿದ್ದರು.

ಅವರ ಪರೋಪಕಾರದ ಉದಾಹರಣೆಗಳು ಬೇಕಾದಷ್ಟಿವೆ. ಯಾರಾದರೂ ಅವರ ಬಳಿಗೆ ಬಂದು ಸಹಾಯ ಕೇಳಿದರೆ, ನಾಸ್ತಿ ಎನ್ನುವುದು ಅವರ ಸ್ವಭಾವವಲ್ಲ. ನಾಳೆಗಿದೆಯೋ, ಇಲ್ಲವೋ ನೋಡುತ್ತಿರಲಿಲ್ಲ. ಕಬೀರದಾಸರಂತೆ ತಮ್ಮ ಹತ್ತಿರ ಇದ್ದುದನ್ನು ಕೊಟ್ಟುಬಿಡುತ್ತಿದ್ದರು.

ದಿವಾನ್‌ ರಂಗಚಾರ್ಲುರವರ ಕಾಲದಲ್ಲಿ ಸ್ಥಾಪಿತವಾದ ಟೌನ್‌ಹಾಲಿನ ಮಹಡಿಯ ಮೇಲೆ ಇರುವ ಲಿಟರರಿ ಯೂನಿರ್ಯ ಎಂಬ ಸಂಸ್ಥೆಯ ಮೇಲ್ವಿಚಾರಣೆಯನ್ನು ಆ ಸಂಸ್ಥೆಯ ಅಧ್ಯಕ್ಷರಾಗಿ ತಾವು ಬದುಕಿರುವವರೆಗೂ ನೋಡಿಕೊಳ್ಳುತ್ತಿದ್ದರು. ಇದರಲ್ಲಿ ಒಂದು ಲೈಬ್ರರಿ ಇದೆ, ವಾಚನಾಲಯ ಇದೆ. ಈ ಸಂಸ್ಥೆಯ ಆಶ್ರಯದಲ್ಲಿ ಸಭೆಗಳೂ, ಗೋಷ್ಠಿಗಳೂ ನಡೆಯುತ್ತವೆ.

ಪದ್ಮಾಲಯವನ್ನು ಬಿಟ್ಟ ಮೇಲೆ ಅವರು ಕೆಲವು ದಿವಸ ಸೀತಾವಿಲಾಸ ಅಗ್ರಹಾರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ಆ ಬಾಡಿಗೆ ಮನೆಯಲ್ಲಿಯೂ ಕೆಲವು ವಿದ್ಯಾರ್ಥಿಗಳನ್ನಿಟ್ಟುಕೊಂಡು ಅವರಿಗೆ ಅನ್ನಹಾಕುತ್ತಿದ್ದರು. ಅವರು ಲಕ್ಷ್ಮೀಪುರದಲ್ಲಿ ತಮ್ಮ ಹೊಸ ಮನೆಗೆ ಬಂದ ಮೇಲೆ ತಾವು ಒಂದು ಕೊಠಡಿಯಲ್ಲಿದ್ದುಕೊಂಡಿದ್ದರು. ಪಕ್ಕದಲ್ಲಿಯೇ ತಮ್ಮ ಕೃಷ್ಣರಾಜ ವಾಣೀವಿಲಾಸ ಪ್ರೆಸ್ಸನ್ನು ನಡೆಸುತ್ತಿದ್ದರು. ಪತ್ರಿಕೆಗಳನ್ನೂ ಅಲ್ಲಿಯೇ ನಡೆಸುತ್ತಿದ್ದರು. ಕೆಲವು ವಿದ್ಯಾರ್ಥಿಗಳಿಗೆ ವಾಸ ಮಾಡಲು ಕೊಠಡಿಗಳನ್ನೂ ಕೊಟ್ಟಿದ್ದರು.

ಅವರು ಬೆಳಿಗ್ಗೆ ೫ ಗಂಟೆಗೇ ಎದ್ದು ಲೇಖನ ಬರೆಯಿಸಿ, ೬ ಗಂಟೆ ಹೊತ್ತಿಗೆ ಸ್ನಾನ ಗೃಹಕ್ಕೆ ಹೋಗುತ್ತಿದ್ದರು. ಅವರು ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುತ್ತಿದ್ದರು. ತಮ್ಮ ಮಲಕೋಶವನ್ನು ಯಾವಾಗಲೂ ಶುದ್ಧವಾಗಿಡುತ್ತಿದ್ದರು. ಸ್ನಾನವಾದ ಮೇಲೆ ಶುದ್ಧವಾದ ಬಟ್ಟೆ ಹಾಕಿಕೊಂಡು ತಮ್ಮ ಕೊಠಡಿಯ ಹೊರಗಡೆ ಆಸನದಲ್ಲಿ ಬಂದು ಕೊಡುತ್ತಿದ್ದರು. ಸಂಚಾರಕ್ಕೆ ಕೆಲವು ಮಿತ್ರು ಕಾರು ತರುತ್ತಿದ್ದರು. ಅದಿಲ್ಲದೆ ಹೋದರೆ ಎತ್ತು ಕಟ್ಟಿದ ತಮ್ಮ ಪೆಟ್ಟಿಗೆ ಗಾಡಿಯನ್ನು ಉಪಯೋಗಿಸುತ್ತಿದ್ದರು. ಬೆಳಿಗ್ಗೆ ೧೧ ಗಂಟೆಯವರೆಗೆ ಕೊಠಡಿಯ ಹೊರಗೇ ಕುಳಿತುಕೊಂಡು ಬರೆಸುತ್ತಿದ್ದರು. ಮಧ್ಯೆ ಮಧ್ಯೆ ಯಾರಾದರೂ ಬರುತ್ತಲೇ ಇರುತ್ತಿದ್ದರು. ಅವರು ಬರುತ್ತಲೇ ಬರೆಸುವುದನ್ನು ನಿಲ್ಲಿಸಿ, ಅವರೊಡನೆ ಮಾತನಾಡಿ ಕಳುಹಿಸುತ್ತಿದ್ದರು. ದಿವಾನರುಗಳೂ, ದೊಡ್ಡ ಅಧಿಕಾರಿಗಳೂ, ಸಾರ್ವಜನಿಕ ಮಹನೀಯರೂ ಅವರನ್ನು ಅಲ್ಲಿಯೇ ನೋಡುತ್ತಿದ್ದರು.

ಅವರ ಮಿತ್ರ ಡಾ. ಆರ್ಮುಗಂರವರು ಆಗಾಗ್ಗೆ ಬರುತ್ತಿದ್ದರು. ಮನೆಯ ಕಾಂಪೌಂಡಿನಲ್ಲಿ ಅವರೊಡನೆ ತಿರುಗಾಡುತ್ತ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮೈಸೂರಿನ ಅನೇಕ ದೊಡ್ಡ ರಾಜಕೀಯ ವಿಷಯಗಳು ಚರ್ಚೆಯಾಗುತ್ತಿದ್ದವು ಎಂದು ಕಾಣುತ್ತದೆ. ವಿನೋದವಾಗಿಯೂ ಸ್ವಲ್ಪ ಕಾಲ ಕಳೆಯುತ್ತಿದ್ದರು.

ಕೆಲವು ಸಾರಿ, ಮಿರ್ಜಾ ಇಸ್ಮಾಯಿಲ್‌ರವರು ತಾವು ಮಹಾರಾಜರ ಪ್ರೈವೆಟ್‌ ಸೆಕ್ರೆಟರಿಯಾಗಿದ್ದಾಗಲೂ, ದಿವಾನ್‌ಗಿರಿಯ ಪ್ರಾರಂಭ ದಿನಗಳಲ್ಲಿಯೂ, ಈ ಕಾಂಪೌಂಡಿನೊಳಕ್ಕೆ ಬಂದು ವೆಂಕಟಕೃಷ್ಣಯ್ಯನವರೊಡನೆ ಮಾತನಾಡಿಕೊಂಡು ಹೋಗುತ್ತಿದ್ದರು.

ವೈಸ್‌ಛಾನ್ಸಲರ್ ಡಾ. ಬ್ರಜೇಂದ್ರನಾಥ ಸೀಲರು, ಬಿ.ಎಂ. ಶ್ರೀಕಂಠಯ್ಯನವರು, ಎð.ಎಸ್‌. ಸುಬ್ಬರಾಯರು, ಎಸ್‌. ಹಿರಣ್ಣಯ್ಯನವರು, ಡಾ. ಮೈಲ್‌ ವಾಘನಂ ಅವರು, ಸಿ.ಆರ್. ರೆಡ್ಡಿಯವರು, ಇನ್ನೂ ಅನೇಕರು ಈ ಕಾಂಪೌಂಡಿನಲ್ಲಿ ವೆಂಕಟಕೃಷ್ಣಯ್ಯನವರನ್ನು ಸಂದರ್ಶಿಸಿ ಮಾತನಾಡಿಕೊಂಡು ಹೋಗುತ್ತಿದ್ದರು.

ಅವರು ಬೆಳಿಗ್ಗೆ ೧೧ ಗಂಟೆಗೆ ತಮ್ಮ ಎತ್ತಿನ ಪೆಟ್ಟಿಗೆ ಗಾಡಿಯಲ್ಲಿ ಊಟಕ್ಕೆ ಹೋಗುತ್ತಿದ್ದರು.

ಅಲ್ಲಿಂದ ಮಧ್ಯಾಹ್ನ ೨-೨.೩೦ ಗಂಟೆಯ ಹೊತ್ತಿಗೆ ಮನೆಗೆ ಬಂದು ತಮ್ಮ ಕೊಠಡಿಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಂದರಿಸುತ್ತಿದ್ದರು. ಸಾಮಾನ್ಯವಾಗಿ ಪತ್ರಿಕಾ ಕೆಲಸ. ಸಾಯಂಕಾಲ “ವಾಕಿಂಗ್‌” (ಗಾಳಿಸವಾರಿ) ಹೋಗಿ ಬರುತ್ತಿದ್ದರು. ಮೀಟಿಂಗುಗಳು ಏನಾದರೂ ಇದ್ದರೆ ಮುಂಚೆಗೆ ಮುಂಚೆಯೇ ತಮ್ಮ ಪೆಟ್ಟಿಗೆ ಗಾಡಿಯಲ್ಲಿ ಆ ಮೀಟಿಂಗಿಗೆ ಹೋಗಿ ಬರುತ್ತಿದ್ದರು.

ರಾತ್ರಿ ಬಂದಮೇಲೆ, ಪುನಃ ಸ್ನಾನಗೃಹಕ್ಕೆ ಹೋಗಿ ತಮ್ಮ ದೇಹಬಾಧೆಯನ್ನು ತೀರಿಸಿಕೊಂಡು ಬಂದು, ಇಷ್ಟವಿದ್ದರೆ ಮಿತವಾಗಿ ಆಹಾರ ಸ್ವೀಕರಿಸಿ, ಮಲಗುತ್ತಿದ್ದರು.

ಅವರು ಚಿಕ್ಕ ವಯಸ್ಸಿನಿಂದಲೂ ಬೆಳಿಗ್ಗೆ ಮತ್ತು ಸಾಯಂಕಾಲ ಬಹಳ ದೂರ ಬಿರುಸಾಗಿ ವಾಕಿಂಗ್‌ ಹೋಗುತ್ತಿದ್ದರು. ಅನೇಕ ದಿನಗಳವರೆಗೆ ಚಾಮುಂಡಿ ಬೆಟ್ಟವನ್ನು ಹತ್ತುವುದು ಮತ್ತು ಇಳಿಯುವುದು ಅವರ ಬೆಳಗಿನ ಸಾಧನೆಯಾಗಿತ್ತು. ಆದುದರಿಂದಲೇ ಬದುಕಿರುವವರೆಗೂ ಗಟ್ಟಿಯಾಗಿ ಆರೋಗ್ಯವಾಗಿ ಇದ್ದರು. ಅವರಿಗೆ ತಲೆ ನೋವು, ನೆಗಡಿ, ಕೆಮ್ಮು ಅಪರೂಪ. ವೃದ್ಧಾಪ್ಯದಲ್ಲಿ ವಯೋಧರ್ಮಕ್ಕನುಗುಣವಾಗಿ ಯಾವಾಗಲೋ ಒಂದೊಂದು ಸಲ ಅವರಿಗೆ ನೆಗಡಿ ಕೆಮ್ಮು ಕಾಣಿಸಿಕೊಳ್ಳುತ್ತಿತ್ತು.

ಇವರಿಗೆ ಎಂಭತ್ತು-ತೊಂಭತ್ತು ವರ್ಷ ವಯಸ್ಸಾಗಿದ್ದರೂ ಬೆನ್ನು ಬಗ್ಗಿರಲಿಲ್ಲ. ನೆಟ್ಟಗೆ ನಡೆಯುತ್ತಿದ್ದರು. ಕೈನಡುಗುತ್ತಿರಲಿಲ್ಲ. ಕಣ್ಣು ಚೆನ್ನಾಗಿ ಕಾಣುತ್ತಿತ್ತು. ಕಿವಿ ಚೆನ್ನಾಗಿ ಕೇಳುತ್ತಿತ್ತು. ಜ್ಞಾಪಕಶಕ್ತಿ ಚೆನ್ನಾಗಿತ್ತು. ಜೀವನದಲ್ಲಿ ಆಸಕ್ತಿ ವಹಿಸಿ, ಸಮಯೋಚಿತವಾಗಿ ವಿನೋದವಾಗಿ ಮಾತನಾಡುತ್ತಿದ್ದರು. ಇಂತಹ ವಯಸ್ಸಿನಲ್ಲಿಯೂ ಇವರ ಮನಸ್ಸು ಮಕ್ಕಳ ಮನಸ್ಸಿನಂತೆ ಹಗುರವಾಗಿತ್ತು.

ಅವರು ತಮ್ಮ ಮನಸ್ಸನ್ನು ಯಾವಾಗಲೂ ಪ್ರಸನ್ನವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಸುಖದಲ್ಲಿ ವಿಶೇಷವಾಗಿ ಉತ್ಸಾಹ ತೋರದೆ, ದುಃಖದಲ್ಲಿ ವಿಶೇಷವಾಗಿ ಕುಗ್ಗದೆ ತಮ್ಮ ಮನಸ್ಸನ್ನು ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುತ್ತಿದ್ದರು.

೧೯೨೯ರಲ್ಲಿ ಅವರ ಪತ್ರಿಕೆಗಳನ್ನು ಮಿರ್ಜಾ ಸರ್ಕಾರ ನಿಲ್ಲಿಸಿಬಿಟ್ಟ ಮೇಲೆ ವೆಂಕಟಕೃಷ್ಣಯ್ಯನವರು ಶಾಂತಿಯನ್ನು ಕಳೆದುಕೊಳ್ಳದೆ ಇನ್ನೂ ನಾಲ್ಕು ವರ್ಷಗಳವರೆಗೆ, ೧೯೩೩ನೇ ನವೆಂಬರ್ ೮ ರಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಯುವವರೆಗೆ, ಸಾರ್ವಜನಿಕ ಕಾರ್ಯದಲ್ಲಿ ನಿರತರಾಗಿಯೇ ಇದ್ದರು.

ಅವರು ಮೃತರಾಗಿ ೩೫ ವರ್ಷಗಳಾದಾಗ್ಯೂ ಅಂತಹವರು ಇನ್ನೊಬ್ಬರು ಮೈಸೂರಿನಲ್ಲಿ ಇದುವರೆಗೂ ಹುಟ್ಟಿಲ್ಲ. ಅವರ ಸಮಕಾಲೀನರಾದ ವಿಶ್ವೇಶ್ವರಯ್ಯನವರು ಅಖಿಲ ಭಾರತ ಖ್ಯಾತಿಯನ್ನು ಪಡೆದರು. ಆದರೆ ಅವರು ಬಹುಕಾಲ ಸರ್ಕಾರದ ಸೇವೆಯಲ್ಲಿದ್ದರು. ಮತ್ತು ಅನುಕೂಲಸ್ಥರಾಗಿದ್ದರು. ಅವರ ದಾರಿಯೇ ಬೇರೆ.

ಅವರ ಮಿತ್ರರಾದ ಎಚ್‌.ವಿ. ನಂಜುಂಡಯ್ಯನವರು ಅಸಾಧಾರಣ ಪ್ರತಿಭಾಶಾಲಿಗಳು ಮತ್ತು ಕರ್ತವ್ಯದಕ್ಷರು. ಮೈಸೂರು ದಿವಾನಗಿರಿ ಸ್ವಲ್ಪದರಲ್ಲಿಯೇ ಇವರಿಗೆ ತಪ್ಪಿಹೋಯಿತು. ಮೈಸೂರು ಚೀಫ್‌ ಕೋರ್ಟಿನ ಚೀಫ್‌ ಜಸ್ಟಿಸರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಪ್ರಥಮ ವೈಸ್‌ಛಾನ್ಸಲರಾಗಿದ್ದರು. ಇವರು ಅನೇಕ ವ್ಯಾವಹಾರಿಕ ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಅರ್ಥಶಾಸ್ತ್ರವನ್ನು ಬರೆದವರಲ್ಲಿ ಇವರೇ ಮೊದಲು ಇವರ ಕೀರ್ತಿಯೂ ಅಪಾರವಾದುದು.

ವೆಂಕಟಕೃಷ್ಣಯ್ಯನವರು, ವಿಶ್ವೇಶ್ವರಯ್ಯನವರು, ನಂಜುಂಡಯ್ಯನವರು ಇವರು ಮೂವರೂ ಪರಸ್ಪರ ಮಿತ್ರರು. ಒಬ್ಬರಿಗೊಬ್ಬರು ಪ್ರೋತ್ಸಾಹಕರಗಿದ್ದರು. ಒಬ್ಬೊಬ್ಬರದು ಒಂದೊಂದು ದಾರಿ. ಆದರೆ, ಸಾರ್ವಜನಿಕ ಜೀವನದಲ್ಲಿಯೂ ಪರೋಪಕಾರದಲ್ಲಿಯೂ, ಜೀವನದ ಕಷ್ಟಗಳನ್ನು ಎದುರಿಸುವುದರಲ್ಲಿಯೂ ವೆಂಕಟಕೃಷ್ಣಯ್ಯನವರಿಗೆ ಸಮಾನರು ಯಾರೂ ಇರಲಿಲ್ಲ. ಅವರು ತಮ್ಮ ಕಾಲದ ಮೈಸೂರಿನ ಅತ್ಯಂತ ಶ್ರೇಷ್ಠ ವ್ಯಕ್ತಿ ಎಂದರೆ ಅತಿಶಯೋಕ್ತಿಯಲ್ಲ, ಅವರು ನಿಜವಾಗಿಯೂ ಆದರ್ಶಪುರುಷರು.

ವೆಂಕಟಕೃಷ್ಣಯ್ಯನವರ ೮೨ನೇ ವಯಸ್ಸಿನಲ್ಲಿ ಮೈಸೂರು ನಗರದಲ್ಲಿ ಅವರ ಜಯಂತ್ಯುತ್ಸವ ನಡೆಯಿತು. ಬಿಡಾರಂ ಕೃಷ್ಣಪ್ಪನವರು ಬಾಯಿ ತುಂಬ ಹೊಗಳಿದರು. ಲೋಕಹಿತೈಷಿ ಅಂಬಳೆ ಅಣ್ಣಯ್ಯ ಪಂಡಿತರು “ಇವರಂತಹವರನ್ನು ನಾವು ಏನೆಂದು ಹೊಗಳೋಣ? ಇವರು ತನು, ಮನ, ಧನವನ್ನು ಪರೋಪಕಾರಕ್ಕೆ ವಿನಿಯೋಗಿಸಿದ್ದಾರೆ. ಇವರ ಪ್ರತಿಯೊಂದು ರಕ್ತಕಣವೂ ದಯಾರಸದಿಂದ ತುಂಬಿದೆ. ಇವರನ್ನು ಇನ್ನು ಮುಂದೆ ‘ದಯಾಸಾಗರ’ ಎಂದು ಕರೆಯೋಣ” ಎಂದರು.

೧೯೨೭ರಲ್ಲಿ, ಇವರ ೮೩ನೇ ಹುಟ್ಟಿದ ಹಬ್ಬದ ದಿನ ಮೈಸೂರಿನ ರಂಗಾಚಾರ್ಲು ಭವನಲ್ಲಿ ನಾಗರಿಕರು ಅವರನ್ನು ಸನ್ಮಾನಿಸಿದರು. ರಾವ್‌ ಬಹದ್ದೂರ್ ಎಂ.ಸಿ. ರಂಗಯ್ಯಂಗಾರ್ಯರು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ದೇಶದ ನಾನಾ ಭಾಗಗಳಿಂದಲೂ ಬೊಂಬಾಯಿನಿಂದಲೂ, ಮದ್ರಾಸಿನಿಂದಲೂ ಶುಭ ಸಂದೇಶಗಳು ಬಂದಿದ್ದವು. ಮೈಸೂರಿನಲ್ಲಿ ಅಧಿಕಾರದಲ್ಲಿದ್ದಾಗ ಇವರ ವಿರೋಧಿಗಳಾಗಿದ್ದ ಡಾ.ಸಿ.ಆರ್. ರೆಡ್ಡಿಯವರು “ವೆಂಕಟಕೃಷ್ಣಯ್ಯನವರು ಮೈಸೂರಿನಲ್ಲಲ್ಲದೆ ಬ್ರಿಟಿಷ್‌ ಇಂಡಿಯಾದಲ್ಲಿ ಹುಟ್ಟಿದ್ದಿದ್ದರೆ, ಇವರ ಕಾರ್ಯ ಕ್ಷೇತ್ರ ಬ್ರಿಟಿಷ್‌ ಇಂಡಿಯಾ ಆಗಿದ್ದಿದ್ದರೆ, ಇವರು ಲೋಕಮಾನ್ಯ ಬಾಲ ಗಂಗಾಧರ ತಿಲಕರಂತೆ ಕೀರ್ತಿಶಾಲಿಗಳಾಗುತ್ತಿದ್ದರು. ಇವರದು ವಿಶಾಲ ಹೃದಯ. ವಜ್ರದಂತಹ ದೃಢತೆ. ಇವರ ಕೂಡ ಹೋರಾಡಿದ ನನಗೆ ಗೊತ್ತು ಇವರ ಯೋಗ್ಯತೆ. ವಜ್ರ ವಜ್ರವನ್ನು ತಿಕ್ಕುವಂತಿತ್ತು, ಇವರೊಡೆನ ಹೋರಾಟ” ಎಂದು ಸಂದೇಶ ಕಳುಹಿಸಿದ್ದರು.

೧೯೨೮ ರಲ್ಲಿ ಮೈಸೂರು ನಗರಕ್ಕೆ ಮೈಸೂರು ವಿಶ್ವವಿದ್ಯಾಲಯದ ಭಾಷಣವನ್ನು ಕೊಡಲು ಬಂದಾಗ ರೆಡ್ಡಿಯವರು ವೆಂಕಟಕೃಷ್ಣಯ್ಯನವರ ಕ್ಷಮಾಗುಣವನ್ನು ಎಷ್ಟೆಂದು ವರ್ಣಿಸಿದರೂ ಸಾಳದು.ಅವರ ಪ್ರೆಸ್ಸಿನಿಂದ ಸಾಮಾನುಗಳನ್ನೂ, ಹಣವನ್ನೂ ಕದ್ದುಕೊಂಡು ಹೋಗವವರು ಕೆಲವರಿದ್ದರು. ಅವರು ಕದ್ದುಕೊಂಡು ಹೋದುದು ಪತ್ತೆಯಾಗುತ್ತಿತ್ತು. ಕದ್ದವರನ್ನು ಹಿಡಿದುಕೊಂಡು ಬಂದು ಮುಂದೆ ನಿಲ್ಲಿಸಿದಾಗ, ಕ್ಷಣಕಾಲ ಕೋಪವನ್ನು ತೋರಿಸಿ, ಆ ಮೇಲೆ ಅವರನ್ನು ಕ್ಷಮಿಸಿ, ಕಳುಹಿಸಿ ಬಿಡುತ್ತಿದ್ದರು. ತಮ್ಮ ಕೆಲಸಗಾರರೇ ಆಗಿದ್ದರೆ ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದರು. ಯಾರಾದರೂ ವೆಂಕಟಕೃಷ್ಣಯ್ಯನವರನ್ನು “ನೀವು ಹೀಗೆ ಮಾಡಬಾರದು. ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆ ಕೊಡಬೇಕು. ಅವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬಾರದು” ಎಂದು ಹೇಳಿದರೆ, “ದೇವರು ಹೀಗೆ ಮಾಡುತ್ತಾನೆಯೇ?” ಎಂದು ಉತ್ತರ ಹೇಳಿ, ಸುಮ್ಮನಿರುತ್ತಿದ್ದರು, “ಕ್ಷಮಾ ಗುಣ ದೇವರ ಗುಣ. ಮನುಷ್ಯರ ತಪ್ಪನ್ನು ಕ್ಷಮಿಸುತ್ತಾನೆ. ಹಾಗೆಯೇ ನಾವೂ ಮಾಡಬೇಕು” ಎಂಬುದು ಅವರ ನೀತಿಯಾಗಿತ್ತು.

ವೆಂಕಟಕೃಷ್ಣಯ್ಯನವರ ವಿಶೇಷ ಗುಣವೆಂದರೆ ಅವರ ಆಧುನಿಕತೆ. ಪ್ರಪಂಚದ ಇತರ ಭಾಗಗಳಲ್ಲಿ ನಡೆಯುತ್ತಿರುವ ಮಾನವನ ಉನ್ನತಿಯನ್ನು ಕಂಡು, ಓದಿ ತಿಳಿದುಕೊಂಡು, ಮೈಸೂರಿನಲ್ಲಿಯೂ ಅಂತಹ ಉನ್ನತಿ ಉಂಟಾಗಬೇಕೆಂದು ಪ್ರಯತ್ನಿಸಿದರು.

ವೈದಿಕರಾಗಿ ಹುಟ್ಟಿದ ಅವರು ವೈದಿಕಧರ್ಮವನ್ನೇ ಅನುಸರಿಸಿ, ವೈದಿಕ ವಿದ್ಯೆಯನ್ನೇ ಕಲಿತು, ತಮ್ಮ ಜೀವಮಾನವನ್ನು ನಡೆಸಿದ್ದರೆ ಅವರ ಹೆಸರು ಇಷ್ಟು ಪ್ರಕಾಶಕ್ಕೆ ಬರುತ್ತಿತ್ತೇ? ಅವರ ಕಾಲದಲ್ಲಿ ಮೈಸೂರು ನಗರದಲ್ಲಿ ಉದ್ದಾಮ ಸಂಸ್ಕೃತ ಪಂಡಿತರಿದ್ದರು, ವೇದ ಘನಪಾಠಿಗಳಿದ್ದರು, ತರ್ಕ ವ್ಯಾಕರಣಾದಿ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡವರಿದ್ದರು, ವೇದಾಂತ ಶಿರೋಮಣಿಗಳಿದ್ದರು. ಆದುದರಿಂದ ಅದೇ ಪ್ರಾಚೀನವಿದ್ಯೆಯಲ್ಲಿ ಮುಂದುವರಿದಿದ್ದರೆ, ಆ ಪಂಡಿತರ ಪಂಗ್ತಿಯಲ್ಲಿ ವೆಂಕಟಕೃಷ್ಣಯ್ಯನವರೂ ಸೇರುತ್ತಿದ್ದರು.

ಬಾಲ್ಯದಲ್ಲಿ ಕೆಲವು ವರ್ಷಕಾಲ ಪ್ರಾಚೀನ ವಿದ್ಯೆಯ ದಾರಿಯನ್ನು ತುಳಿದರು. ಆದರೆ ಅದರಿಂದ ತಮಗೂ ಅಷ್ಟೇನೂ ಪ್ರಯೋಜನವಿಲ್ಲ ಮತ್ತು ಲೋಕಕ್ಕೂ ಹೆಚ್ಚು ಸೇವೆ ಮಾಡುವುದಕ್ಕಾಗುವುದಿಲ್ಲ ಎಂದು ತಿಳಿದ ಮೇಲೆ, ಆಧುನಿಕ ಇಂಗ್ಲಿಷ್‌ ವಿದ್ಯಾಭ್ಯಾಸದ ಕಡೆಗೆ ತಿರುಗಿ, ಅದರ ಸ್ವತಂತ್ರ ಮನೋಭಾವದಿಂದ ಪ್ರೇರಿತರಾದರು. ತಮ್ಮ ಜೀವನವನ್ನು ಈ ನೂತನ ಸ್ವತಂತ್ರ ದಾರಿಗೆ ತಿರುಗಿಸಿದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯಾದ ಮೇಲೆ, ಅವರು ಅಪೇಕ್ಷೆ ಪಟ್ಟಿದ್ದರೆ, ದಿವಾನ್‌ ರಂಗಾಚಾರ್ಲುರವರು ಅವರಿಗೆ ಒಳ್ಳೇ ನೌಕರಿ ಕೊಡಿಸುತ್ತಿದ್ದರು. ಆದರೆ ಅವರ ಶಕ್ತಿಯನ್ನು ಕಂಡು ರಂಗಾಚಾರ್ಲುರವರು ಅವರನ್ನು ಖಾಸಗೀ ವಿದ್ಯಾಲಯದ ಉಪಾಧ್ಯಾಯ ಕೆಲಸಕ್ಕೆ ಸೇರಿಸಿದರು. ಆಗಿನ ಕಾಲದಲ್ಲಿ ಖಾಸಗೀ ವಿದ್ಯಾಲಯದ ಉಪಾಧ್ಯಾಯರಿಗೆ ಪತ್ರಿಕೋದ್ಯೋಗಿಯಾಗಲು ಮತ್ತು ಅಸೆಂಬ್ಲಿ ಮುಂತಾದ ಸಂಸ್ಥೆಗಳ ಸದಸ್ಯರಾಗಲು ಯಾವ ನಿರ್ಬಂಧವೂ ಇರಲಿಲ್ಲ. ಇದರಿಂದ ವೆಂಕಟಕೃಷ್ಣಯ್ಯನವರು ಸಾರ್ವಜನಿಕ ಜೀವನವನ್ನು ಪ್ರವೇಶಿಸಿ ಸೇವೆಮಾಡಲು ಅವಕಾಶವಾಯಿತು. ಅವರು ಅನೇಕ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ತಮ್ಮ ಪತ್ರಿಕೆಗಳಲ್ಲಿ ಪ್ರಚಾರಮಾಡುತ್ತ ಬಂದರು. ಆಗಿನ ಕಾಲೊದಲ್ಲಿ ದಿವಾನರನ್ನಾಗಲೀ, ಸರ್ಕಾರವನ್ನಾಗಲೀ ಟೀಕಿಸುವುದೆಂದರೆ ವಿದ್ಯಾವಂತರಿಗೂ ಕೂಡ ಹೆದರಿಕೆ. ಅದರಲ್ಲಿಯೂ ಹೆಸರುವಾಸಿಯಾದರೂ, ಅತ್ಯಂತ ಸಮರ್ಥರೂ, ಪ್ರಜ್ಞಾಶಾಲಿಗಳೂ, ಆಗಿದ್ದ ದಿವಾನ್‌ ಶೇಷಾದ್ರಿ ಅಯ್ಯರ್ ಅವರೊಡನೆ ಮೈಸೂರು ಜನಗಳಿಗಾಗಿ ಕಾದಾಡುವುದೆಂದರೆ ಬಹಳ ಎದೆಗಾರಿಕೆ ಬೇಕಿತ್ತು. ವೆಂಕಟಕೃಷ್ಣಯ್ಯನವರು ಬಹಳ ಧೈರ್ಯದಿಂದಲೂ, ವಿವೇಕದಿಂದಲೂ ಈ ಸಾರ್ವಜನಿಕ ಸೇವೆಯನ್ನು ಮಾಡುತ್ತಿದ್ದುದರಿಂದ, ಜನರು ಅವರನ್ನು ತಮ್ಮ ಏಕಮಾತ್ರ ಮುಖಂಡರನ್ನಾಗಿ ಭಾವಿಸಿ ಗೌರವಿಸುತ್ತಿದ್ದರು.

ರಾಜಕೀಯದರ ಜೊತೆಗೆ, ಸಮಾಜ ಸುಧಾರಣಾ ಕಾರ್ಯಗಳನ್ನೂ ಅವರು ಮಾಡುತ್ತಿದ್ದರು. ಹಳೆಯ-ದಾರಿಯನ್ನು ಬಿಟ್ಟು ಹೊಸ ದಾರಿಯಲ್ಲಿ ನಡೆಯಬೇಕೆಂದರೆ ಜನರಿಗೆ ಸಮಾಜದ ಹೆದರಿಕೆ. ಆದುದರಿಂದ ಇಂತಹ ಕಾಲದಲ್ಲಿ ಜಡವಾಗಿದ್ದ ಸಮಾಜವನ್ನು ಲಕ್ಷಿಸದೆ ಮುಂದುವರಿಯಬೇಕಾದರೆ ಬಹಳ ಧೈರ್ಯಬೇಕು. ವೆಂಕಟಕೃಷ್ಣಯ್ಯನವರು ಈ ಕಾರ್ಯವನ್ನು ಬಹಳ ಧೈರ್ಯವಾಗಿ ಮಾಡಿದರು. ಅಂಬಲ್‌ ನರಸಿಂಹಯ್ಯಂಗಾರ್, ಸಿ. ಶ್ರೀನಿವಾಸರಾವ್‌, ಸಿ. ವಾಸುದೇವರಾವ್‌ ಮುಂತಾದವರು ಈ ಕಾರ್ಯದಲ್ಲಿ ವೆಂಕಟಕೃಷ್ಣಯ್ಯನವರಿಗೆ ಬಹಳ ಬೆಂಬಲವಿತ್ತರು.

ಸರ್ಕಾರದವರು ಮಿಲ್ಲರ್ ಕಮಿಟಿ ಆರ್ಡರನ್ನು ಹೊರಡಿಸಿದ ಮೇಲೆ, ಬ್ರಾಹ್ಮಣ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಯಿತು. ಆಗ ಅವರು, ರಿಟಯರ್ಡ್ ಚೀಫ್‌ ಇಂಜನಿಯರ್ ಕರ್ಪೂರ್ ಶ್ರೀನಿವಾಸರಾಯರು, ಇನ್ನೂ ಅನೇಕ ಜನ ಮಹನೀಯರು ಬ್ರಾಹ್ಮಣ ವಿದ್ಯಾರ್ಥಿ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ನಿಧಿಯನ್ನು ವಸೂಲು ಮಾಡಿದರು. ಇದರ ಶಾಖೆಗಳನ್ನು ಮೈಸೂರು ನಗರ, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಡಿಸ್ಟ್ರಿಕ್ಟ್‌ ಹೆಡ್‌ ಕ್ವಾರ್ಟರುಗಳಲ್ಲಿ ತೆರೆಯಲಾಯಿತು.

ಇನ್ನೂ ಅನೇಕ ಸಂಸ್ಥೆಗಳ ಸ್ಥಾಪನೆಗೆ ಸಹಾಯ ಮಾಡಿದರು. ಉತ್ತರ ಕ್ರಿಯಾದಿಗಳಿಗೆ ಸಹಾಯ ಮಾಡಲು ಬ್ರಾಹ್ಮಣ ಧರ್ಮ ಸಹಾಯ ಸಭೆಯನ್ನು ತೆರೆದರು. ಇದಕ್ಕೆ ರಿಟೈರ್ಡ್ ಛೀಫ್‌ ಇಂಜನಿಯರ್ ಸುಬ್ಬರಾಯರು ಅಧ್ಯಕ್ಷರಾದರು. ಇದೇ ರೀತಿಯ ಸಭೆಗಳು ಬೆಂಗಳೂರು ನಗರದಲ್ಲಿಯೂ ಇತರ ಕಡೆಯಲ್ಲಿಯೂ ಕ್ರಮೇಣ ಸ್ಥಾಪಿತವಾದುವು.

ಬೆಂಗಳೂರಿನಲ್ಲಿಯೂ, ಮೈಸೂರಿನಲ್ಲಿಯೂ ೧೯೩೨ರಲ್ಲಿ ಪತ್ರಿಕೋದ್ಯೋಗಿಗಳ ಸಂಘಗಳು ಸ್ಥಾಪನೆಯಾದುವು. ಬೆಂಗಳೂರು ನಗರ ಸಂಘಕ್ಕೆ ಶ್ರೀ ಡಿ.ವಿ. ಗುಂಡಪ್ಪನವರು ಅಧ್ಯಕ್ಷರಾಗಿದ್ದರು. ಈ ಸಂಘಗಳ ಸ್ಥಾಪನೆಗೂ ಪೋಷಣೆಗೂ ವೆಂಕಟಕೃಷ್ಣಯ್ಯನವರು ಬಹಳ ಸಹಾಯ ಮಾಡಿದರು.

ಕನ್ನಡ ಭಾಷೆಯ ಏಳಿಗೆಗಾಗಿ, ೧೯೧೫ರಲ್ಲಿ ದಿವಾನ್‌ ವಿಶ್ವೇಶ್ವರಯ್ಯನವರಿಂದ ಬೆಂಗಳೂರು ನಗರದಲ್ಲಿ ಕರ್ಣಾಟಕ ಸಾಹಿತ್ಯ ಪರಿಷತ್‌ ಎಂಬ ಸಂಸ್ಥೆ ಸ್ಥಾಪನೆಯಾಯಿತು. ಇದಕ್ಕೆ ಕರ್ಪೂರ್ ಶ್ರೀನಿವಾಸರಾಯರು ಅಧ್ಯಕ್ಷರಾಗಿದ್ದರು. ಇದರ ಸ್ಥಾಪನೆಯಲ್ಲೂ ವೆಂಕಟಕೃಷ್ಣಯ್ಯನವರು ಭಾಗವಹಿಸಿ, ಇಂಗ್ಲಿಷಿನಿಂದ ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮುಂತಾದ ವಿಷಯಗಳನ್ನು ಕನ್ನಡಕ್ಕೆ ಸರಳವಾದ ಸುಲಭವಾದ ರೀತಿಯಲ್ಲಿ ಜನಸಾಮಾನ್ಯರಿಗೆ ತಿಳಿಯುವಂತೆ ಅನುವಾದ ಮಾಡಬೇಕೆಂದು ಉಪದೇಶಿಸಿದರು. “ನಮ್ಮ ದೇಶದ ಪ್ರಾಚೀನ ವಿದ್ಯೆಯ ಮೇಲೆ ಪುಸ್ತಕಗಳು ಕನ್ನಡದಲ್ಲಿ ಬೇಕಾದಷ್ಟಿವೆ. ಈಗ ನಮಗೆ ಬೇಕಾಗಿರುವುದು ಹೊರಗಿನ ಜ್ಞಾನ, ಅದರ ಮೇಲೆ ಕನ್ನಡದಲ್ಲಿ ಪುಸ್ತಕಗಳನ್ನು ಬರೆಯಬೇಕು”, ಎಂದು ಸೂಚಿಸಿದರು. ೧೯೨೨ರಲ್ಲಿ ದಾವಣಗೆರೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದು ಉಪಯುಕ್ತ ಸಲಹೆಗಳನ್ನು ಕೊಟ್ಟರು.

ಅವರು ಸ್ವತಃ ಇಂಗ್ಲಿಷ್‌ ಪುಸ್ತಕಗಳಿಂದ ವಿಷಯಗಳನ್ನು ಸಂಗ್ರಹಿಸಿ ಕನ್ನಡದಲ್ಲಿ ಅನೇಕ ಪುಸ್ತಕಗಳನ್ನು ಬರೆದರು. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಸರಿಸಿದೆ: ಬೂಕರ್ ಟಿ. ವಾಷಿಂಗ್ ಟನ್‌, ಪರಂತಪವಿಜಯ, ಅರ್ಥಸಾಧನ, ಹರಿಶ್ಚಂದ್ರ ಚರಿತ್ರೆ, ಚೋರಗ್ರಹಣ ತಂತ್ರ, ಆರೋಗ್ಯ ನಿದಾನ ಪ್ರಕಾಶಿಕ, ದೇಶಾಭಿಮಾನ, ಹಿತಬೋಧಿನಿ, ಧನಾರ್ಜನೆಯ ಕ್ರಮ, ಟೆಲಿಮಾಕಸ್ಸನ ಸಾಹಸ ಚರಿತ್ರೆ (ಮೂರು ಭಾಗಗಳು), ವಿದ್ಯಾರ್ಥಿಕರ ಭೂಷಣ (ಜಾನ್ ಟಾಡ್‌ರವರ Students’ Manual ಗ್ರಂಥದ ಆಧಾರ) (ಮೂರು ಭಾಗಗಳು). ಅವರು ಎಷ್ಟೋ ಇಂಗ್ಲಿಷ್‌ ಪುಸ್ತಕಗಳಿಗೆ ಕನ್ನಡದಲ್ಲಿ ಟೀಕೆ ಟಿಪ್ಪಣಿಗಳನ್ನು ಬರೆದರು.

ಮೈಸೂರಿನ ಜನ ಜೀವನವನ್ನು ನವೀನತೆಯ ದಾರಿಗೆ ತಿರುಗಿಸಿದ ಮಹಾಶಯರಲ್ಲಿ ವೆಂಕಟಕೃಷ್ಣಯ್ಯನವರದು ಅಗ್ರ ಪಂಕ್ತಿಯಲ್ಲಿ ಅಗ್ರಸ್ಥಾನ. ತಮ್ಮ ವೈಯಕ್ತಿಕ ಜೀವನದಲ್ಲಿ ಈ ನವೀನತೆಗೆ ಪ್ರಾಮುಖ್ಯ ಸ್ಥಾನ ಕೊಟ್ಟಿದ್ದರು.

ವೆಂಕಟಕೃಷ್ಣಯ್ಯನವರು ಸಾಯುವ ಮುನ್ನ ತಮ್ಮ ಮೊಮ್ಮಕ್ಕಳಿಗೆ ಹೀಗೆ ಹೇಳಿದರು: “ನನ್ನ ಪತ್ರಿಕೆಗಳನ್ನು ಸರ್ಕಾರದವರು ನಿಲ್ಲಿಸಿದರು. ನಾನು ಪುನಃ ಅವುಗಳನ್ನು ನಡೆಸಲು ಸರ್ಕಾರದ ಅನುಮತಿ ಕೇಳಿದ್ದೇನೆ. ಅದು ಬರಬಹುದು. ನೀವು ಆ ಪತ್ರಿಕೆಗಳನ್ನು ನಡೆಸಿಕೊಂಡು ಹೋಗಿ.ಇಷ್ಟರಲ್ಲಿಯೇ ಸರ್ಕಾರ ಪತ್ರಿಕಾ ಶಾಸನವನ್ನು ರದ್ದು ಮಾಡುವ ಸೂಚನೆಯೂ ಇದೆ.”

೧೯೩೩ರ ಹೊತ್ತಿಗೆ ಅವರ ದೇಹಸ್ಥಿತಿ ಬಹಳ ಕ್ಷೀಣವಾಗಿತ್ತು. ೧೯೩೩ನೇ ನವಂಬರ್ ತಿಂಗಳಿನಲ್ಲಿ ಅವರು ಒಂದು ದಿವಸ ಸಾಯಂಕಾಲ ಒಂದು ಸಭೆಗೆ ನಡೆದುಕೊಂಡು ಹೋಗುತ್ತಿದ್ದಾಗ ದೊಡ್ಡ ಮಳೆ ಬಂದು, ನೆನೆದುಬಿಟ್ಟರು. ಅದೇ ಕಾರಣವಾಗಿ ಕಾಯಿಲೆ ಮಲಗಿದವರು ಪುನಃ  ಏಳಲಿಲ್ಲ. ಶ್ರೀ ಕೃಷ್ಣರಾಜೇಂದ್ರ ಆಸ್ಪತ್ರೆಯಲ್ಲಿ ಆರ್ಮುಗಂ ವಾರ್ಡಿಗೆ ಇವರನ್ನು ಸೇರಿಸಲಾಯಿತು. ಅತ್ಯಂತ ಉತ್ತಮವಾದ ಚಿಕಿತ್ಸೆಯನ್ನು ಮಾಡಿದಾಗ್ಯೂ, ದೈವ ಸಂಕಲ್ಪ ಬೇರಯಾಗಿತ್ತು. ೧೯೩೩ನೇ ಇಸವಿ ನವಂಬರ್ ೮ನೇ ತಾರೀಖು ಪ್ರಾತಃಕಾಲ ತಮ್ಮ ೯೦ನೇ ವಯಸ್ಸಿನಲ್ಲಿ ವೆಂಕಟಕೃಷ್ಣಯ್ಯನವರು ಇಹಲೋಕವನ್ನು ತ್ಯಜಿಸಿದರು. ಮೈಸೂರಿನ ಒಬ್ಬ ಮಹಾಪುರುಷ ಇಲ್ಲದಂತಾಯಿತು. ಇಡೀ ಸಂಸ್ಥಾನವೇ ಕಣ್ಣೀರಿಟ್ಟಿತು.

ವೆಂಕಟಕೃಷ್ಣಯ್ಯನವರ ಮರಣ ಒಂದು ದೊಡ್ಡ ಜೀವನದ ಕಡೆಯ ಪರದೆಯನ್ನು ಎಳೆಯಿತು. ಒಂದು ದೊಡ್ಡ ಕಾಲಮಾನವೇ ಗತಿಸಿ ಹೋದಂತಾಯಿತು.

ಬಾಲ್ಯದ ೧೦ ವರ್ಷಗಳನ್ನು ಬಿಟ್ಟರೆ, ೮೦ ವರ್ಷಗಳು ವೆಂಕಟಕೃಷ್ಣಯ್ಯನವರದು ತಿಳಿವಳಿಕೆಯ ಜೀವನ. ಇದರಲ್ಲಿ ೭೦ ವರ್ಷಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕ ಜೀವನ; ಪೂರ್ಣ ಚೇತನ ಜೀವನ;ಧೀರ ಜೀವನ; ಪರೋಪಕಾರ ಜೀವನ; ಗಂಧದ ಕಟ್ಟಿಗೆಯನ್ನು ತೇದಂತೆ ತಮ್ಮ ಜೀವನವನ್ನು ತೇದು ಪರಿಮಳವನ್ನು  ಹರಡಿದವರು.

ಇಂತಹವರು ಬಹಳ ಸಂಖ್ಯೆಯಲ್ಲಿ ಹುಟ್ಟುವುದಿಲ್ಲ. ವೆಂಕಟಕೃಷ್ಣಯ್ಯನವರು ಗತಿಸಿದ ಮೇಲೆ ಅಂದಿನಿಂದ ಇಂದಿನವರೆಗೂ ಅವರಿಗೆ ಸಮನಾದವರು ಮೈಸೂರು ನಗರದಲ್ಲೂ ದೇಶದಲ್ಲೂ ಬರಲಿಲ್ಲ. ಅವರು ಬದುಕಿದ್ದಾಗಲೇ ಅವರ ಸರಿಸಮನಾಗಿದ್ದವರು ಯಾರೂ ಇರಲಿಲ್ಲ. ಇಂತಹ ಮಹಾಪುರುಷರವರು.