ವೆಂಕಟಕೃಷ್ಣಯ್ಯನವರು ೧೮೪೪ನೇ ಆಗಸ್ಟ್‌ ೨೦ನೇ ತಾರೀಖು ಶ್ರಾವಣ ಬಹುಳ ಗೋಕುಲಾಷ್ಟಮಿ ಶುಭ ದಿನ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಅಂತರಸಂತೆ ಹೋಬಳಿ ಮಗ್ಗೆ ಗ್ರಾಮದಲ್ಲಿ ಹುಟ್ಟಿದರು. ಆ ದಿವಸ ಮನೆಯಲ್ಲಿ ಹಬ್ಬ. ಎಲ್ಲರಿಗೂ ಆನಂದ. ತಂದೆ ಸುಬ್ಬಯ್ಯನವರಿಗೂ ತಾಯಿ ಭಾಗೀರಥಮ್ಮನವರಿಗೂ ಬಹಳ ಸಂತೋಷ. ಮಗು ಒಳ್ಳೆ ಶುಭ ದಿನದಲ್ಲಿ ಹುಟ್ಟಿದೆ; ಕೃಷ್ಣದೇವರ ಹಾಗೆ ಬೆಳೆದು ನಮ್ಮ ಮನೆತನಕ್ಕೆ ಯಶಸ್ಸು ತರಲಿ ಎಂದು ಇಬ್ಬರೂ ಭಗವಂತನನ್ನು ಪ್ರಾರ್ಥಿಸಿದರು.

ಮಗ್ಗೆ ಕಾವೇರೀ ಉಪನದಿಯಾದ ಕಪಿನೀ ನದಿ ತೀರದಲ್ಲಿದೆ. ಸುತ್ತಲೂ ಆನೆಗಳು ಸಂಚರಿಸುವ ದಟ್ಟವಾದ ಕಾಡು. ಗ್ರಾಮ ಹಳೆಯದು. ರೈತರು ವ್ಯವಸಾಯದಿಂದಲೂ ಸಣ್ಣ ಕೈಗಾರಿಕೆಗಳಿಂದಲೂ ಜೀವಿಸುತ್ತಿದ್ದರು. ಕೆಲವು ಬ್ರಾಹ್ಮಣ ಮನೆಗಳೂ ಇದ್ದುವು. ಸುಬ್ಬಯ್ಯನವರು ತೆಲುಗರು, ಬ್ರಾಹ್ಮಣರು, ಆಗಿನ ಕಾಲದ ಸಂಪ್ರದಾಯದಂತೆ ವೇದಾಧ್ಯಯನ ಮಾಡಿ ಆಚಾರಶೀಲರಾಗಿದ್ದವರು. ಇವರಿಗೆ ಅಲ್ಪಸ್ವಲ್ಪ ಜಮೀನೂ ಇತ್ತು. ರೈತರು ಬೇಕಾದವರಾಗಿದ್ದರು. ಅವರು ಜಮೀನು ಸಾಗುವಳಿ ಮಾಡಿ ಸುಬ್ಬಯ್ಯನವರ ಮನೆಗೆ ದವಸವನ್ನು ತಂದು ಹಾಕುತ್ತಿದ್ದರು. ಸುಬ್ಬಯ್ಯನವರೂ ರೈತರಿಗೆ ಲಗ್ನ ಕಟ್ಟಿ ಕೊಡುವುದು ಮುಂತಾದ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. ಆಗಿನ ಕಾಲದ ಪದ್ಧತಿಯಂತೆ ತಮ್ಮ ಮನೆಗೆ ಬೇಕಾದ ಸೌದೆಯನ್ನು ತಾವೇ ಒಡೆದು, ಊಟಕ್ಕೆ ಬೇಕಾದ ಎಲೆ, ಕಾಯಿ ಮುಂತಾದವುಗಳನ್ನು ಕಾಡಿನಿಂದ ತರುತ್ತಿದ್ದರು.

ಅವರ ಸಂಸಾರ ತಕ್ಕಮಟ್ಟಿಗೆ ದೊಡ್ಡದು. ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ಅವರ ಅಣ್ಣ ಗೋಪಾಲಯ್ಯ ಅಲ್ಲಿಯೇ ಫಾರೆಸ್ಟ್‌ ರೇಂಜರು. ಅವರದೇ ಬೇರೆ ಸಂಸಾರ. ಅವರಿಗೆ ಮಕ್ಕಳಿರಲಿಲ್ಲ. ಆಸ್ತಿಯೇನೋ ಬಹಳ, ಒಂದು ಲಕ್ಷ ರೂಪಾಯಿನವರೆಗೆ.  ಅವರು ತಮ್ಮನನ್ನೂ, ಅತ್ತಿಗೆಯನ್ನೂ ಕೇಳಿದರು: “ನಿಮ್ಮ ಎರಡನೇ ಮಗ ವೆಂಕಟಕೃಷ್ಣಯ್ಯನನ್ನು ನನಗೆ ದತ್ತು ಕೊಡಿ.” ತಂದೆಗೇನೋ ಆಕ್ಷೇಪಣೆಯಿರಲಿಲ್ಲ. ತಾಯಿ ಮಾತ್ರ ಒಪ್ಪಲಿಲ್ಲ.  ಈ ಸಲಹೆ ಅಲ್ಲಿಗೇ ನಿಂತು ಹೋಯಿತು. ಆದರೆ ಗೋಪಾಲಯ್ಯನವರಿಗೆ ಅಸಮಾಧಾನ ತಪ್ಪಲಿಲ್ಲ. ಅವರು ೧೮೬೬ರಲ್ಲಿ ಮೃತರಾದರು.

ಸುಬ್ಬಯ್ಯ ಬಹಳ ನಿಷ್ಠರು. ಕಾಲಕ್ಕೆ ಸರಿಯಾಗಿ ಆಹ್ನೀಕಾದಿಗಳನ್ನು ಮುಗಿಸಿಕೊಂಡು, ದಿನಕ್ಕೆ ಎರಡು ಸಾರಿ ದೇವತಾರ್ಚನೆ ಮಾಡುತ್ತಿದ್ದರು. ದೇವತಾರ್ಚನೆಯಾದನಂತರ, ಪೂರ್ವ ಸಂಪ್ರದಾಯದಂತೆ, ಪ್ರತಿ ದಿನವೂ ವಾಲ್ಮೀಕಿ ರಾಮಾಯಣವನ್ನು ನುಡಿಯಲ್ಲಿಯೇ ಪಾರಾಯಣ ಮಾಡುತ್ತಿದ್ದರು. ಬಹಳ ಭಕ್ತಿಯಿಂದ ಪಾರಾಯಣ ಮಾಡುತ್ತಿದ್ದುದರಿಂದ ಆನಂದಬಾಷ್ಪ ಇವರ ಕಣ್ಣಿನಿಂದ ಧಾರೆ ಧಾರೆಯಾಗಿ ಸುರಿಯುತ್ತಿತ್ತು. ಅದನ್ನು ಸಣ್ಣ ಪಂಚೆಯಿಂದ ಆಗಾಗ ಒರೆಸಿಕೊಳ್ಳುತ್ತಿದ್ದರು. ಪಾರಾಯಣ ಮುಗಿಯುವ ಹೊತ್ತಿಗೆ ಎರಡು ಸಣ್ಣ ಪಂಚೆಗಳು ಆನಂದಬಾಷ್ಪದಿಂದ ಒದ್ದೆಯಾಗುತ್ತಿದ್ದುವು.

ವೆಂಕಟಕೃಷ್ಣಯ್ಯನವರು ತಾವೇ ಬರೆದಿರುವ ತಮ್ಮ ಜೀವನಚರಿತ್ರೆಯ ಪ್ರಾರಂಭ ಭಾಗದಲ್ಲಿ ಹೀಗೆ ಹೇಳಿದ್ದಾರೆ: “ಅವರು ಪಾರಾಯಣ ಮಾಡುವಾಗ ಎರಡು ಪಂಚೆಗಳನ್ನು ಸಮೀಪದಲ್ಲಿ ಇಟ್ಟುಕೊಂಡು, ಪಾರಾಯಣ ಮಾಡುತ್ತಾ, ಕಣ್ಣೀರುಗಳನ್ನು ಒರೆಸಿಕೊಳ್ಳುತ್ತಿದ್ದರು. ಪಾರಾಯಣ ಮುಗಿದು ‘ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ’ ಎಂಬುದನ್ನು ಹೇಳುವಾಗ್ಗೆ, ಎರಡು ಪಂಚೆಗಳು ಅವರ ಕಣ್ಣೀರುಗಳಿಂದ ಒದ್ದೆಯಾಗುತ್ತಿದ್ದುವು.”

ಸುಬ್ಬಯ್ಯ ತಮ್ಮ ಮಕ್ಕಳಿಗೆ ಸಂಸ್ಕೃತ, ತೆಲುಗು ಮತ್ತು ಕನ್ನಡವನ್ನು ಹೇಳಿ ಕೊಡುತ್ತಿದ್ದರು; ಉಪಯುಕ್ತವಾದ ಪದ್ಯಗಳನ್ನು ಗಟ್ಟಿ ಮಾಡಿಸುತ್ತಿದ್ದರು. ಈ ಪೈಕಿ ಸುಮತಿ ಶತಕದ್ದೊಂದು ಪದ್ಯ. ಅದು ಈ ರೀತಿಯಿದೆ:

“ಎಪ್ಪಟಿಕೆಯ್ಯದಿ ಪ್ರಸ್ತು |
ಮಪ್ಪಟಿಕಾಮಾಟ ಲಾಟಿಯನ್ನಲ ಮನಮುಲ |
ನೊಪ್ಪಿಂಚಕ ತಾನೊಪ್ಪಕ
ತಪ್ಪಿಂಚಕ ತಿರುಗುವಾಡು ಧನ್ಯುಡು ಸುಮತಿ ||

(ಯಾರನ್ನೂ ನೋಯಿಸಬಾರದು. ತಾನೂ ನೊಂದುಕೊಳ್ಳಬಾರದು. ಯಾರು ಹೀಗೆ ಇರಬಲ್ಲರೋ ಅವರೇ ಧನ್ಯರು.)

ತಾಯಿ ಭಾಗೀರಥಮ್ಮ ಕೂಡ ಶ್ರೇಷ್ಠ ವೈದಿಕ ಮನೆತನದವರು. ಅಷ್ಟಪದಿ ರಾಮಶಾಸ್ತ್ರಿ ಎಂಬುವರು ಅವರ ತಂದೆ. ತಾಯಿ ಪೂರ್ವ ಸಂಪ್ರದಾಯವನ್ನು ಬಿಡದೆ ತಮ್ಮ ಪತಿಗೆ ಅನುಕೂಲವಾಗಿದ್ದುಕೊಂಡು ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ ನಡೆಸುತ್ತಿದ್ದರು. ತಮ್ಮ ಮಕ್ಕಳಿಗೆ ರಾಮಾಯಣ, ಭಾರತ, ಭಾಗವತ ಮುಂತಾದವುಗಳಿಂದ ಕತೆಗಳನ್ನು ಹೇಳುತ್ತಿದ್ದರು.

ಅದೇ ಊರಿನಲ್ಲಿ ಆಗ ಅರುಣಾಚಲ ಶಾಸ್ತ್ರಿಗಳೆಂಬ ೯೦ ವರ್ಷ ವಯಸ್ಸಿನ ಒಬ್ಬ ಪಂಡಿತರಿದ್ದರು. ಅವರು ಅನೇಕ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. ಸಂಸ್ಕೃತದಲ್ಲಿ ಅವರ ಪಾಂಡಿತ್ಯ ಅಗಾಧ. ಅವರು ಪ್ರತಿ ಸಂಧ್ಯಾಕಾಲ ಆ ಊರಿನ ಜನರಿಗೆ ಪುರಾಣ ಪುಣ್ಯ ಕಥೆಗಳನ್ನು ಶ್ರವಣ ಮಾಡಿಸುತ್ತಿದ್ದರು. ಸುಬ್ಬಯ್ಯನವರೂ ಅವರ ಮಕ್ಕಳೂ ಅರುಣಾಚಲ ಶಾಸ್ತ್ರಿಯವರ ಪ್ರವಚನಗಳಿಗೆ ತಪ್ಪದೆ ಹೋಗುತ್ತಿದ್ದರು. ಬಾಲಕನಾದ ವೆಂಕಟಕೃಷ್ಣಯ್ಯನ ಮನಸ್ಸಿನ ಮೇಲೆ ಅರುಣಾಚಲ ಶಾಸ್ತ್ರಿಯವರ ಪ್ರವಚನಗಳು ಬಹಳ ಪ್ರಭಾವ ಉಂಟುಮಾಡಿದವು. ಶಾಸ್ತ್ರಿಯವರು ಕೂಡ ಬಾಲಕನ ಪ್ರಶ್ನೆಗಳಿಗೆಲ್ಲಾ ಉತ್ತರ ಹೇಳುತ್ತಾ, ಅವನಲ್ಲಿ ಬಹಳ ಪ್ರೀತಿಯಿಟ್ಟಿದ್ದರು. ಆ ಹುಡುಗನು ಮುಂದೆ ಬಹಳ ಪ್ರವರ್ಧಮಾನಸ್ಥಿತಿಗೆ ಬರುವನೆಂದು ಶಾಸ್ತ್ರಿಯವರು ತಂದೆ ತಾಯಿಗಳಿಗೆ ಹೇಳುತ್ತಿದ್ದರು.

ಬಾಲಕ ವೆಂಕಟಕೃಷ್ಣಯ್ಯ ಕೂಡ ಆ ಗ್ರಾಮದ ಬಾಲಕರನ್ನು ಸೇರಿಸಿಕೊಂಡು ಆಟವಾಡುವುದು, ಕಥೆ ಹೇಳುವುದು, ಮುಂತಾದ ಬಾಲಕ್ರೀಡೆಗಳಲ್ಲಿ ನಿರತನಾಗಿದ್ದನು. ಆ ಚಿಕ ವಯಸ್ಸಿನಲ್ಲಿಯೂ ಅವನು ಸುಮ್ಮನೆ ಕಾಲಹರಣ ಮಾಡುತ್ತಿರಲಿಲ್ಲ; ಮನೆಯಲ್ಲಿ ಉಪಯುಕ್ತವಾದ ಸಹಾಯ ಕೆಲಸಗಳನ್ನು ಮಾಡುತ್ತಿದ್ದನು.

ಭಾಗೀರಥಮ್ಮ ತಮ್ಮ ಯಜಮಾನರನ್ನು ‘ಮೈಸೂರು ನಗರಕ್ಕೆ ಹೋಗೋಣ; ಅಲ್ಲಿ ಸಂಸಾರ ಮಾಡೋಣ; ಹುಡುಗರಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ’ ಎಂದು ಆಗಾಗ್ಗೆ ಹೇಳುತ್ತಲೇ ಇದ್ದರು. ಯಜಮಾನರು “ಆಗಲಿ ಹೋಗೋಣ” ಎಂದು ಉತ್ತರ ಹೇಳುತ್ತಲೇ ಇದ್ದರು. ವೆಂಕಟಕೃಷ್ಣಯ್ಯನಿಗ ಹತ್ತು ವರ್ಷವಾಯಿತು. ಇಷ್ಟರಲ್ಲಿ, ೧೮೫೪ರಲ್ಲಿ, ಸುಬ್ಬಯ್ಯನವರು ದೈವಾಧೀನರಾದರು.

ಸಂಸಾರಕ್ಕೆ ಬಹಳ ಕಷ್ಟ ಒದಗಿತು. ಹುಡುಗರೆಲ್ಲಾ ಇನ್ನೂ ಚಿಕ್ಕವರು, ಈ ಸಮಯದಲ್ಲಿ ತಾಯಿ ಭಾಗೀರಥಮ್ಮ ಧೈರ್ಯಗೆಡದೆ ನಾಲ್ಕು ಮಕ್ಕಳನ್ನೂ ಕರೆದುಕೊಂಡು ಮೈಸೂರು ನಗರಕ್ಕೆ ಹೋಗಲು ನಿರ್ಧರಿಸಿದರು. ಅವರ ನಿರ್ಧಾರವೇ ನಿರ್ಧಾರ! ಮಕ್ಕಳೊಡನೆ ಮೈಸೂರು ನಗರಕ್ಕೆ ಬಂದೇ ಬಿಟ್ಟರು.

ಮೈಸೂರು ನಗರ ದೊಡ್ಡ ಊರು. “ಕೆಟ್ಟು ಪಟ್ಟಣ ಸೇರು” ಎಂಬ ಗಾದೆಯೇನೋ ಕನ್ನಡದಲ್ಲಿದೆ. ಈ ದೊಡ್ಡ ಊರಿನಲ್ಲಿ ಅವರಿಗೆ ಯಾರು ದಿಕ್ಕು? ಆಗ ಮುಮ್ಮುಡಿ ಕೃಷ್ಣೃರಾಜ ಒಡೆಯರ ಕಾಲ. ಮಹಾರಾಜರು ರಾಜ್ಯಾಧಿಕಾರ ಕಳೆದುಕೊಂಡು ಕೊರಗಿನಲ್ಲಿದ್ದರು. ಬ್ರಿಟಿಷ್‌ ಕಮಿಷನರು ರಾಜ್ಯಾಧಿಕಾರ ನಡೆಸುತ್ತಿದ್ದರು. ಆದರೂ ಕೃಷ್ಣರಾಜ ಒಡೆಯರು ಧರ್ಮ ಪ್ರಭು; ಅವರ ಅರಮನೆ ಮೈಸೂರು ನಗರದಲ್ಲಿ ಅನೇಕ ಸಂಸಾರಗಳಿಗೆ ಆಶ್ರಯ ಕೊಡುತ್ತಿತ್ತು. ಈ ಪೈಕಿ ಭಾಗವತ ಸುಬ್ಬರಾಯರೆಂಬೊಬ್ಬ ಪುಣ್ಯಾತ್ಮರು ಅರಮನೆಯ ಕೆಲಸದಲ್ಲಿದ್ದರು. ಇವರದು ಒಂದು ಭಾರಿ ಲಾಯ; ಈಗ ಚಾಮರಾಜ ಒಡೆಯರ ಪ್ರತಿಮೆ ಇರುವ ಪ್ರದೇಶದಲ್ಲಿತ್ತು. ಅದು ಸಂಸಾರ ಮಾಡುವ ಜನರ ಒಂದು ಅಗ್ರಹಾರ. ಅದಕ್ಕೆ ಸೌದೇಕೊಪ್ಪಲು ಎಂದೂ ಹೆಸರು. ಸುಬ್ಬರಾಯರು ಬಹಳ ದಯಾಳು. ಅವರು ತಮ್ಮ ಲಾಯದ ಹಿಂಭಾಗದ ಒಂದು ಚಿಕ್ಕ ಮನೆಯನ್ನು ಭಾಗೀರಥಮ್ಮನಿಗೆ ವಾಸಕ್ಕೆ ಕೊಟ್ಟರು. ಇರಲು ಒಂದು ಗೂಡು ಸಿಕ್ಕಿತಲ್ಲಾ ಎಂದು ಭಾಗೀರಥಮ್ಮ ದೇವರಿಗೆ ಕೃತಜ್ಞತೆ ಅರ್ಪಿಸಿ ಆ ಮನೆಯಲ್ಲಿ ನಾಲ್ಕು ಮಕ್ಕಳೊಡನೆ ವಾಸಮಾಡತೊಡಗಿದರು.

ವಾಸಕ್ಕೆ ಮನೆಯೇನೋ ದೊರೆಯಿತು; ಜೀವನ ಹೇಗೆ? ಭಾಗೀರಥಮ್ಮನೂ ಅವರ ಇಬ್ಬರು ಹೆಣ್ಣು ಮಕ್ಕಳೂ ಅಲ್ಲಿ ಇಲ್ಲಿ ಅವರಿವರ ಮನೆಗಳಲ್ಲಿ ಕೆಲಸವನ್ನು ಮಾಡುತ್ತಾ ಬಂದದ್ದರಲ್ಲಿ ಜೀವನ ತಳ್ಳಬೇಕಾಯಿತು. ಆಗ ಮೈಸೂರು ನಗರದಲ್ಲಿ ಕುಡಿಯುವ ನೀರಿಗೆ ತಾಪತ್ರಯ; ಇನ್ನೂ ಕೊಳಾಯಿ ನೀರು ಬಂದಿರಲಿಲ್ಲ. ಕಾರಂಜಿ ಕೆರೆಗೆ ಹೋಗಿ ಕೊಡದಲ್ಲಿ ನೀರು ತರಬೇಕಾಗಿತ್ತು. ಭಾಗೀರಥಮ್ಮನ ಇಬ್ಬರು ಹೆಣ್ಣು ಮಕ್ಕಳೂ ದಿನಂ ಪ್ರತಿ ಕಾರಂಜಿ ಕೆರೆಗೆ ಹೋಗಿ, ಕೊಡಗಳಲ್ಲಿ ನೀರು ಹೊತ್ತುಕೊಂಡು ತಂದು, ಕೆಲವು ಅನುಕೂಲಸ್ಥರ ಮನೆಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದರು. ಒಂದು ಕೊಡಕ್ಕೆ ಒಂದು ಕಾಸು (ಅರ್ಧ ಪೈಸ ), ಕೆಲವು ಸಾರಿ ಮೂರು ಕಾಸು.

ವೆಂಕಟಕೃಷ್ಣಯ್ಯನಿಗೆ ಮೈಸೂರಿಗೆ ಬಂದಾಗ ೧೦ ವರ್ಷ. ಇನ್ನೂ ಉಪನಯನವಾಗಿರಲಿಲ್ಲ. ಭಾಗವತ ಸುಬ್ಬರಾಯರು ಅವನಿಗೆ ಧರ್ಮೋಪನಯನ ಮಾಡಿಸಿದರು. ಕೆಲವು ದಿವಸ ತನಗೆ ಬಂದ ಮಂತ್ರಗಳಿಂದ ಅಲ್ಲಲ್ಲಿ ದೇವರ ಪೂಜೆ ಮಾಡುವುದು, ವ್ರತಗಳನ್ನು ಮಾಡಿಸುವುದು, ಲಗ್ನ ಕಟ್ಟಿಕೊಡುವುದು, ಈ ರೀತಿಯಾಗಿ ಅಲ್ಪ ಸ್ವಲ್ಪ ಸಂಪಾದನೆ ಮಾಡಿದ್ದಾಯಿತು. ಆದರೆ, ಜೀವನೋಪಾಯಕ್ಕೆ ಸರಿಯಾದ ವಿದ್ಯೆಯನ್ನು ಸಂಪಾದಿಸಬೇಕೆಂದು ಮನಸ್ಸಿಗೆ ಬಂದಿತು; ಇಂಗ್ಲಿಷು ಕಲಿಯಬೇಕೆಂಬ ಆಸೆ ಬಂದಿತು. ಆದರೆ ಈ ಆಸೆ ಈಡೇರುವುದು ಹೇಗೆ? ಯಾರನ್ನು ಕೇಳಬೇಕು? ಏನು ಮಾಡಬೇಕು? ಒಂದು ದಿವನ ಭಾಗವತ ಸುಬ್ಬರಾಯರ ಮುಂದೆ ವೆಂಕಟಕೃಷ್ಣಯ್ಯ ಕೈಮುಗಿದು, ಸುಮ್ಮನೆ ನಿಂತ. ಸುಬ್ಬರಾಯರಿಗೆ ಈ ಹುಡುಗನ ಮೇಲೆ ಕರುಣೆ ಬಂದು, “ಏನು ಬೇಕಪ್ಪಾ, ನಿನಗೆ?” ಎಂದು ಕೇಳಿದರು. “ನನಗೆ ವಿದ್ಯಾದಾನ ಮಾಡಬೇಕು, ನನಗಿನ್ನೇನೂ ಬೇಡ” ಎಂದು ಹುಡುಗ ನಮ್ರನಾಗಿ ಹೇಳಿದ. ಅವನ ಕಣ್ಣಿನಲ್ಲಿ ನೀರು ಬಂತು. ಅಳಲು ಆರಂಭಿಸಿದ. “ನನಗೆ ನೀವೇ ತಂದೆ, ನಾನು ಅನಾಥ” ಎಂದ. ಸುಬ್ಬರಾಯರು ಹುಡುಗನ ಕಣ್ಣೀರು ಒರಸಿ,  “ಅಳಬೇಡಪ್ಪ, ನಾನು ನಿನಗೆ ವಿದ್ಯೆಗೆ ಏರ್ಪಾಡು ಮಾಡುತ್ತೇನೆ” ಎಂದು ಹೇಳಿ, ಮರುದಿವಸವೇ ಅವನನ್ನು ಮಹಾರಾಜರು ಆಗತಾನೇ ಸ್ಥಾಪಿಸಿದ್ದ “ರಾಜಾ ಫ್ರೀ ಸ್ಕೂಲ್‌” ಎಂಬ ಆಂಗ್ಲೋ-ವರ್ನಾಕ್ಯುಲರ್ ಸ್ಕೂಲಿಗೆ ಸೇರಿಸಿದರು. ಆಗ ವೆಂಕಟಕೃಷ್ಣಯ್ಯನಿಗೆ ೧೪ ವಯಸ್ಸು.  ಆ ಸ್ಕೂಲಿನಲ್ಲಿ ಇನ್ನೂ ಚಿಕ್ಕ ಹುಡುಗರಿದ್ದರು, ಇವನಿಗಿಂತ ವಯಸ್ಸಿನಲ್ಲಿ ಬಹಳ ಚಿಕ್ಕವರು. ವೆಂಕಟಕೃಷ್ಣಯ್ಯಗೆ ಮೊದಲು ನಾಚಿಕೆಯಾಯಿತು.  ಆದರೆ, ಕ್ರಮೇಣ ಅವರೆಲ್ಲರ ಸ್ನೇಹ ಮಾಡಿಕೊಂಡು, ಅವರ ಪ್ರೀತಿ ಗಳಿಸಿಕೊಂಡು, ಬೇಗ ಬೇಗ ವಿದ್ಯೆ ಕಲಿತ. ತನ್ನ ಒಡನಾಡಿಗಳಿಗೇ ಪಾಠ ಹೇಳಿಕೊಡಲಾರಂಭಿಸಿದ. ಈ ಸ್ಕೂಲಿನ ಮುಖ್ಯೋಪಾಧ್ಯಾಯರಾದ ಹಾರ್ಡಿ ಎಂಬುವರು ವಿದ್ಯಾರ್ಥಿಯಾದ ವೆಂಕಟಕೃಷ್ಣಯ್ಯನಲ್ಲಿ ಬಹಳ ವಾತ್ಸಲ್ಯದಿಂದ್ದರು. ಡನ್ನಿಂಗ್‌ ಮತ್ತು ಜೋಸಯ ಹಡ್ಸನ್ ಎಂಬ ಉಪಾಧ್ಯಾಯರೂ ಯುವಕನ ಮನಸ್ಸಿನ ಮೇಲೆ ಬಹಳ ಪರಿಣಾಮ ಉಂಟು ಮಾಡಿದರು.

ಮೂರು ವರ್ಷಗಳಾದ ಮೇಲೆ ಮೆಟ್ರಕ್ಯುಲೇಷನ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಸ್ಕೂಲಾದ ವೆಸ್ಲಿಯನ್ ಮಿಷನ್ ಸ್ಕೂಲಿಗೆ ಸೇರಿದ. ಇಲ್ಲಿ ಕಷ್ಟ ಪಟ್ಟು ವ್ಯಾಸಂಗ ಮಾಡಿದ.

ಇದು ಮಿಷನ್ ಸ್ಕೂಲ್‌ ಆದ್ದರಿಂದ ಕ್ರಿಸ್ತಮತದ ಪವಿತ್ರ ಗ್ರಂಥ ಬೈಬಲ್‌ ಮುಂತಾದವುಗಳನ್ನು ಹೇಳಿಕೊಡುತ್ತಿದ್ದರು. ಹೀಗೆಯೇ ಪಾಠ ಹೇಳುವಾಗ ಹಿಂದೂ ಮತವನ್ನು ನಿಂದಿಸುತ್ತಿದ್ದರು. ವಾಗ್ವಾದಗಳಾಗುತ್ತಿದ್ದುವು.

ವೆಂಕಟಕೃಷ್ಣಯ್ಯ ಪಠ್ಯಪುಸ್ತಕಗಳನ್ನು ಮಾತ್ರವೇ ಅಲ್ಲದೆ, ಮತ, ವಿಜ್ಞಾನ, ತತ್ವಶಾಸ್ತ್ರ, ಇವುಗಳ ಬಗ್ಗೆ ಆಂಗ್ಲ ಪುಸ್ತಕಗಳನ್ನು ಓದಿ ವಿಚಾರ ಮಥನ ಮಾಡುತ್ತಿದ್ದ. ಹರ್ಬರ್ಟ್ ಸ್ಪೆನ್ಸರ್, ಹಕ್ಸ್ಲಿ, ಟನ್‌ಡಾಲ್‌, ಬೇಕನ್, ಮುಂತಾದವರ ಗ್ರಂಥಗಳನ್ನೆಲ್ಲಾ ಓದಿದ. ಇವುಗಳ ಪೈಕಿ ಹರ್ಬರ್ಟ್ ಸ್ಪೆನ್ಸರಿನ ಗ್ರಂಥಗಳು ಬಹಳ ಪ್ರಿಯವಾದವು. ಅವುಗಳನ್ನು ಪುನಃ ಪುನಃ ಓದಿ ತನ್ನ ಶಕ್ತಿ ಯನ್ನು ಹದಗೊಳಿಸಿಕೊಂಡ.

ಇದೇ ಕಾಲದಲ್ಲಿ ಮನಸ್ಸಿನಲ್ಲಿ ಮನೆಮಾಡಿಕೊಂಡಿದ್ದ ಅನೇಕ ಮೂಢ ನಂಬಿಕೆಗಳು ಮಾಯವಾದವು. ಮತಗಳ ವಿಷಯವಾಗಿ ಸ್ವತಂತ್ರವಾಗಿ ವಿಚಾರ ಮಾಡುತ್ತ ಬಂದನು. ಕ್ರಿಸ್ತಮತದಲ್ಲಿರುವ ಮೂಢ ನಂಬಿಕೆಗಳನ್ನು ಕ್ರಿಸ್ತ ಪಾದ್ರಿಗಳಿಗೆ ತೋರಿಸುತ್ತ ಬಂದನು. ಹಿಂದೂ ಮತದ ಹಾಗೂ ವೇದಾಂತದ ಮೇಲ್ಮೈಯನ್ನು ತಿಳಿಯಬೇಕೆಂದು ಅವರಿಗೆ ಬೋಧಿಸಿದನು. ಆಗ ಮೈಸೂರಿನಲ್ಲಿ ‘ಪಾಂಡಿಚೇರಿ ತಾತ’ ಎಂಬುವರೊಬ್ಬರಿದ್ದರು. ಅವರ ಬಳಿ ಒಂದು ದೊಡ್ಡ ಗ್ರಂಥ ಸಂಗ್ರಹವಿತ್ತು. ವೆಂಕಟಕೃಷ್ಣಯ್ಯ ಅವರ ಸ್ನೇಹ ಮಾಡಿಕೊಂಡು, ಅವರಲ್ಲಿದ್ದ ಪುಸ್ತಕಗಳನ್ನೆಲ್ಲಾ ಓದಿದ.  ಗ್ರಂಥ ಪಠನವೆಂದರೆ ಬಹಳ ಇಷ್ಟ; ನೂರಾರು ಗ್ರಂಥಗಳನ್ನು ಚಿಕ್ಕಂದಿನಲ್ಲಿಯೇ ಓದಿಬಿಟ್ಟ!

ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ವೆಂಕಟಕೃಷ್ಣಯ್ಯ ವಿದ್ಯಾರ್ಥಿಯಾಗಿದ್ದಾಗ, ರೆವರೆಂಡ್‌ಗಳಾದ ಬ್ಯಾಂಕ್ಸ್‌, ಮ್ಯಾರಿಯಟ್‌, ಹಚೆನ್‌, ಸ್ಪೆಕ್ಸ್‌, ಹಡ್ಸನ್ ಮುಂತಾದವರು ಮುಖ್ಯೋಪಾಧ್ಯಾಯರಾಗಿದ್ದರು. ಇವರೆಲ್ಲರೂ ಬಹಳ ವಿದ್ಯಾವಂತರಾಗಿದ್ದು ಬಾಲಕರಿಗೆ ಬಹಳ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು. ಬೈಬಲ್‌ ಜೊತೆಗೆ ಇನ್ನೂ ಅನೇಕ ಧರ್ಮ ವಿಷಯಗಳನ್ನು ತಿಳಿಸುತ್ತಿದ್ದರು. ಈ ಉಪಾಧ್ಯಾಯರು ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಲು ಕೂಡ ಅವಕಾಶ ಕೊಡುತ್ತಿದ್ದರು. ವೆಂಕಟಕೃಷ್ಣಯ್ಯ ಅನೇಕ ಪ್ರಶ್ನೆಗಳನ್ನು ಹಾಕುತ್ತಿದ್ದರು. ಉಪಾಧ್ಯಾಯರು ಸಂತೋಷವಾಗಿ ಉತ್ತರ ಹೇಳುತ್ತಿದ್ದರಲ್ಲದೆ ಇನ್ನೂ ಹೆಚ್ಚು ವಿಷಯಗಳನ್ನು ತಿಳಿಯಬೇಕಾದರೆ ಇಂಥಿಂಥ ಗ್ರಂಥಗಳನ್ನು ಓದು ಎಂದು ಸಲಹೆ ಕೊಡುತ್ತಿದ್ದರು.  ಈ ಸಲಹೆಗಳಂತೆ ಆ ಗ್ರಂಥಗಳನ್ನು ವೆಂಕಟಕೃಷ್ಣಯ್ಯ ಓದಿ, ತನ್ನ ಜ್ಞಾನಭಂಡಾರವನ್ನೂ ವಿಚಾರಶಕ್ತಿಯನ್ನೂ ಬೆಳೆಸಿಕೊಂಡರು.

ಉಪಾಧ್ಯಾಯರುಗಳ ಪೈಕಿ ಹಡ್ಸನ್‌ರವರು ವಿದ್ಯಾರ್ಥಿಗಳಿಗೆ ನೀತಿಬೋಧೆ ಮಾಡುತ್ತಾ ‘ಅಪಕಾರ ಮಾಡಿದವರಿಗೂ ಉಪಕಾರ ಮಾಡುವ ಸ್ವರ್ಣ ನೀತಿಯನ್ನು ನೀವು ಕಲಿಯಬೇಕು,’ ಎಂದು ಪದೇ ಪದೇ ಹೇಳುತ್ತಿದ್ದರು. ಈ ಹೇಳಿಕೆ ಬಾಲಕರ ಮೇಲೆ ಪರಿಣಾಮ ಮಾಡಿತು. ವೆಂಕಟಕೃಷ್ಣಯ್ಯನ ಮೇಲಂತೂ ಇದರ ಪ್ರಭಾವ ಬಹಳ ಚೆನ್ನಾಗಿ ಆಯಿತು.

ಅವರು ವಿದ್ಯಾರ್ಥಿ ದೆಶೆಯಲ್ಲಿದ್ದಾಗ, ಮೈಸೂರು ನಗರದಲ್ಲಿ ಕ್ರಿಸ್ತ ಪಾದ್ರಿಗಳೂ ಉಪದೇಶಕರೂ ಹಿಂದೂ ಮತವನ್ನು ನಿಂದಿಸಿ ಪತ್ರಿಕೆಗಳಲ್ಲಿಯೂ ಹೊರಗಡೆಯೂ ಪ್ರಚಾರಮಾಡುತ್ತಿದ್ದರು. ಬೀದಿ ಬೀದಿಗಳಲ್ಲಿ ಇವರು ಉಪನ್ಯಾಸ ಮಾಡುತ್ತಿದ್ದರು.

ಹಿಂದೂ ಮುಖಂಡರೂ, ಯುವಕರೂ, ವಿದ್ಯಾರ್ಥಿಗಳೂ ಈ ಪ್ರಚಾರಗಳನ್ನು ಪ್ರತಿಭಟಿಸಿ ಭಾಷಣ ಮಾಡುತ್ತಿದ್ದರು. ಈ ಪೈಕಿ ಜಯರಾಮರಾಯರೆಂಬುವರು ಹಿಂದೂ ಮತವನ್ನು ಸಮರ್ಥನೆ ಮಾಡಿ, ಕ್ರಿಸ್ತ ಮತದ ಕೆಲವು ಸಿದ್ಧಾಂತಗಳನ್ನು ಟೀಕಿಸಿ ಮೈಸೂರು ನಗರದಲ್ಲಿ ನಾನಾ ಕಡೆ ಉಪನ್ಯಾಸ ಮಾಡುತ್ತಿದ್ದರು. ಅವರು ಮದ್ರಾಸ್‌ ಪತ್ರಿಕೆಗಳಿಗೂ ಬರೆಯುತ್ತಿದ್ದರು. ಜಯರಾಮರಾಯರು ಮದ್ರಾಸ್‌ ವಿಶ್ವವಿದ್ಯಾಲಯದ ಪದವೀಧರರು. ಇವರನ್ನು ಬ್ರಿಟಿಷ್‌ ಸರಕಾರ ಚಾಮರಾಜ ಒಡೆಯರ ಬಾಲ್ಯದಲ್ಲಿ ಅವರ ವಿದ್ಯಾ ಗುರುಗಳನ್ನಾಗಿ ನೇಮಿಸಿತು. ಇವರು ಅತ್ಯಂತ ನಿಷ್ಠರು, ಕರ್ತವ್ಯದಲ್ಲಿ ನಿಷ್ಠುರರು. ಪಾಠಕ್ಕೆ ತಡವಾಗಿ ಬಂದರೆ, ಅಥವಾ ತಮ್ಮ ಮರ್ಯಾದೆಗೆ ಭಂಗ ಬರುವಂತೆ ಮಾತನಾಡಿದರೆ, ಚಾಮರಾಜ ಒಡೆಯರನ್ನು ಕೂಡ ಸುಮ್ಮನೆ ಬಿಡುತ್ತಿರಲಿಲ್ಲ; ಅವರಿಗೂ ವಾಗ್ದಂಡನೆ ಮಾಡುತ್ತಿದ್ದರು. ಇಂಥ ನಿಷ್ಠುರ ಮತ್ತು ಉದಾತ್ತ ವ್ಯಕ್ತಿಗಳನ್ನು ಕಂಡರೆ ವೆಂಕಟಕೃಷ್ಣಯ್ಯಗೆ ಸಹಜವಾಗಿ ಅತ್ಯಂತ ಗೌರವ. ಇವರ ಉದಾತ್ತ ಉದಾಹರಣೆಯನ್ನು ವಿದ್ಯಾರ್ಥಿಗಳ ಮುಂದೆ ಇಡುತ್ತಿದ್ದರು.

ವೆಂಕಟಕೃಷ್ಣಯ್ಯ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಹೊತ್ತಿಗೆ ಮೈಸೂರು ನಗರದ ವಿದ್ಯಾವಂತ ಯುವಕರಲ್ಲಿ ಅತ್ಯಂತ ಶ್ರೇಷ್ಠ ಎಂಬ ಖ್ಯಾತಿಯನ್ನು ಪಡೆದರು. ಕಾಲೇಜು ವಿದ್ಯಾರ್ಥಿಗಳಿಗೆ ಕೂಡ ಇವರನ್ನು ಕಂಡರೆ ಗುರುಮರ್ಯಾದೆ ಇತ್ತು. ವೆಂಕಟಕೃಷ್ಣಯ್ಯ ವಿದ್ಯಾರ್ಥಿಯಾಗಿದ್ದಾಗಲೇ ನಮ್ಮ ದೇಶದ ಆಗಿನ ಸ್ಥಿತಿಯ ಬಗ್ಗೆ ಬಹಳ ವಿಚಾರ ಮಾಡುತ್ತಿದ್ದರು. ಅವರಿಗೆ ಕಥೆ ಕಾದಂಬರಿಗಳನ್ನು ಓದಲು ಇಷ್ಟವಿರಲಿಲ್ಲ. ಗಂಭೀರವಾದ ವಿಚಾರಗಳುಳ್ಳ ಪುಸ್ತಕಗಳನ್ನು, ಅವು ಎಲ್ಲೇ ಇರಲಿ-ಗ್ರಂಥಾಲಯದಲ್ಲಿರಲಿ, ಉಪಾಧ್ಯಾಯರ ಹತ್ತಿರವಿರಲಿ-ಅವನ್ನ ತಂದು ರಾತ್ರಿಯೆಲ್ಲಾ ಓದಿ,  ಬೆಳಿಗ್ಗೆ ಹಿಂತಿರುಗಿ ಕೊಡುತ್ತಿದ್ದರು.

ವಿದ್ಯಾರ್ಥಿ ದೆಶೆ ಮುಗಿಯುವ ಹೊತ್ತಿಗೆ ವೆಂಕಟಕೃಷ್ಣಯ್ಯನವರ ತಲೆ ದೇಶದ ಅನೇಕ ಗಂಭೀರ ವಿಷಯಗಳಿಂದ ತುಂಬಿತ್ತು. ಬಡತನದ ಕಾರಣ ಕಾಲೇಜಿನಲ್ಲಿ ವೆಂಕಟಕೃಷ್ಣಯ್ಯ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ; ಆದರೂ ವೆಂಕಟಕೃಷ್ಣಯ್ಯನವರ ಲೇಖನ ಸಾಮರ್ಥ್ಯವೂ ವಾಕ್‌ ಸಾಮರ್ಥ್ಯವೂ ಜ್ಞಾನ ಸಂಪತ್ತೂ ಯಾವ ವಿಶ್ವವಿದ್ಯಾಲಯದ ಪದವೀಧರನಿಗಿಂತಲೂ ಕಡಿಮೆ ಇರಲಿಲ್ಲ.

ವೆಂಕಟಕೃಷ್ಣಯ್ಯನವರಿಗೆ ಕೌಟುಂಬಿಕ ಜೀವನದಿಂದ ದೊರೆತ ಸುಖಸಂತೋಷಗಳು ಬಹಳ ಸ್ವಲ್ಪ. ಅವರ ಕೌಟುಂಬಿಕ ಜೀವನದಲ್ಲಿ ಕಷ್ಟದ ಮೇಲೆ ಕಷ್ಟ, ದುಃಖದ ಮೇಲೆ ದುಃಖ ಪ್ರಾಪ್ತವಾಯಿತು. ಸಾಮಾನ್ಯರಾಗಿದ್ದರೆ ಈ ದುಃಖಗಳಿಂದ ಬಹಳ ಸುಸ್ತಾಗಿ ಬಿಡುತ್ತಿದ್ದರು. ಅವರು ನಿಜವಾದ ವೇದಾಂತಿಗಳಂತೆ ಈ ಕಷ್ಟ ನಷ್ಟ ದುಃಖಗಳನ್ನು ಧೈರ್ಯದಿಂದ ಸೈರಿಸಿಕೊಂಡು, ಅವುಗಳಿಗೆ ’ಮನಸ್ಸು ಕೊಡದೆ, ಸಾರ್ವಜನಿಕ ಜೀವನವನ್ನು ಸಂತತವಾಗಿ ನಡೆಸಿಕೊಂಡು ಬಂದರು. ತಮ್ಮ ಕಷ್ಟಕ್ಕೆ ಇವರ ಹೃದಯ ವಜ್ರಾದಪಿ ಕಠೋರ. ಇತರರ ಕಷ್ಟಕ್ಕೆ ಕುಸುಮದಂತೆ ಸುಕೋಮಲ. ಇಂತಹವರು ಜಗತ್ತಿನಲ್ಲಿ ಅತಿ ವಿರಳ. ಮೊದಲನೆಯ ಹೆಂಡತಿ ಸಾವಿತ್ರಮ್ಮ ೧೮೮೨ರಲ್ಲಿಯೇ ಕಾಲವಾದರು. ಈಕೆ ಬಹಳ ಗುಣಶಾಲಿ. ಯಜಮಾನರಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದರು. ದೊಡ್ಡ ಸಂಸಾರ. ಮನೆಯಲ್ಲಿ ಇಬ್ಬರು ಸಹೋದರಿಯರು ವೆಂಕಟಕೃಷ್ಣಯ್ಯನವರ ಜೊತೆಯಲ್ಲಿಯೇ ಬೆಳೆದು, ಕಷ್ಟ ನಿಷ್ಠುರಗಳಲ್ಲಿ: ಕೂಡ ಇದ್ದವರು. ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು. ವೆಂಕಟಕೃಷ್ಣಯ್ಯನವರಿಗೆ ಸಂಪಾದನೆಯೂ ಅಷ್ಟಿರಲಿಲ್ಲ.  ಈ ಇಬ್ಬರು ಗಂಡು ಮಕ್ಕಳೇ  ಮುಂದೆ ಸುಬ್ಬಯ್ಯ ಮತ್ತು ನಾರಾಯಣ ರಾವ್‌ ಎಂಬ ಹೆಸರಿನಿಂದ ಬೆಳೆದರು. ಈ ಹೆಣ್ಣು ಮಗಳೇ ಮುಂದೆ ಭಾಗೀರಥಿ ಎಂಬ ಹೆಸರಿನಿಂದ ಬೆಳೆದಳು. ಈ ಮಗಳನ್ನು ಕಂಡರೆ ವೆಂಕಟಕೃಷ್ಣಯ್ಯನವರಿಗೆ ಪಂಚಪ್ರಾಣ.

ಸಾವಿತ್ರಮ್ಮ ಕಾಲವಾದಮೇಲೆ ಈಕೆಯ ತಂಗಿ ಪುಟ್ಟಲಕ್ಮಮ್ಮ ವೆಂಕಟಕೃಷ್ಣಯ್ಯನವರನ್ನು ಮದುವೆಯಾದರು. ಈಕೆ ಬಹಳ ಬುದ್ಧಿವಂತೆ, ವಿದ್ಯಾವಂತೆ. ಇವರಿಗೆ ಇಂಗ್ಲಿಷಲ್ಲದೆ, ಸಂಸ್ಕೃತ ಬಹಳ ಚೆನ್ನಾಗಿ ಬರುತ್ತಿತ್ತು. ರಾಮಾಯಣ ಮಹಾಭಾರತ ನೀರು ಕುಡಿದ ಹಾಗೆ. ಮನೆಯಲ್ಲಿ ಮಕ್ಕಳಿಗೆಲ್ಲಾ ಸಂಸ್ಕೃತ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದರು. ಪಾಣಿನಿಯ ವ್ಯಾಕರಣ ಸೂತ್ರಗಳೆಲ್ಲಾ ಇವರಿಗೂ ಇವರ ಮಗಳಾದ ಭಾಗೀರಥಮ್ಮನಿಗೂ ಬಾಯಿಗೆ ಬರುತ್ತಿದ್ದುವೆಂದು ಹೇಳುತ್ತಾರೆ.

ಇವರು ಮದುವೆಯಾದಾಗಿನಿಂದ, ೧೮೮೨ರಿಂದ, ಬದುಕಿರುವವರೆಗೂ, ೧೮೯೯ರವರೆಗೂ, ವೆಂಕಟಕೃಷ್ಣಯ್ಯನವರ ಮನೆಗೆ ಆದರ್ಶ ಗೃಹಲಕ್ಷ್ಮೀಯಾಗಿದ್ದರು. ಆಗ ಇವರ ಮನೆ ‘ಪದ್ಮಾಲಯ’. ಈ ಗೃಹ ಯಾವಾಗಲೂ ಅತಿಥಿಗಳಿಂದ ತುಂಬಿರುತ್ತಿತ್ತು. ಅಸೆಂಬ್ಲಿ ಸದಸ್ಯರು. ಉಪಾಧ್ಯಾಯರು, ಪತ್ರಿಕೋದ್ಯಮಿಗಳು, ವಿದ್ಯಾರ್ಥಿಗಳು, ಇನ್ನೂ ಇತರ ಸ್ನೇಹಿತರು ಇವರ ಮನೆಯಲ್ಲಿ ಯಾವಾಗಲೂ ತುಂಬಿರುತ್ತಿದ್ದರು. ಎಲ್ಲರಿಗೂ ಬಿಡಾರ, ಊಟ, ತಿಂಡಿ, ತೀರ್ಥ, ಉಪಚಾರ ಇವುಗಳನ್ನೆಲ್ಲಾ ಪುಟ್ಟಲಕ್ಷಮ್ಮನವರೇ ನೋಡಿಕೊಳ್ಳುತ್ತಿದ್ದರು. ಇವರು ಜೀವಿಸಿರುವವರೆಗೂ ವೆಂಕಟಕೃಷ್ಣಯ್ಯನವರ ಜೀವನ ತುಂಬು ಜೀವನವಾಗಿತ್ತು.

೧೮೯೬ರಲ್ಲಿ ದುಃಖಕ್ಕೆ ಆರಂಭವಾಯಿತು. ಆ ವರ್ಷ ವೆಂಕಟಕೃಷ್ಣಯ್ಯನವರ ಅಳಿಯ, ಭಾಗೀರಥಮ್ಮನ ಪತಿ, ದಕ್ಷಿಣಾಮೂರ್ತಿ ಆಕಾಲ ಮರಣಕ್ಕೆ ಗುರಿಯಾದನು. ಇವನು ಬಹಳ ಬುದ್ಧಿವಂತ. ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ; ಪ್ರೊಫೆಸರ್ ಡೆನ್‌ಹಾಮ್‌ರವರಿಗೆ ಬಹಳ ಅಷ್ಚುಮೆಚ್ಚು. ವೆಂಕಟಕೃಷ್ಣಯ್ಯನವರು ಇವನನ್ನು ಮೃತ್ಯುವಿನ ದವಡೆಯಿಂದ ತಪ್ಪಿಸಲು ವೈದ್ಯರಿಗಾಗಿಯೂ, ವೈದ್ಯಕ್ಕಾಗಿಯೂ, ನೀರಿನಂತೆ ಹಣ ಖರ್ಚು ಮಾಡಿದರು. ಆದರೆ ದೈವವಿಧಿ ಬೇರೆಯಿತ್ತು. ಇವನ ಮರಣ ಹೊಂದಿದ ಕೆಲವು ದಿನಗಳಲ್ಲಿಯೇ, ಮದ್ರಾಸ್‌ ಯೂನಿವರ್ಸಿಟಿ ಬಿ.ಎ. ಪರೀಕ್ಷೆ ಫಲಿತಾಂಶಗಳು ಪ್ರಕಟವಾದವು. ದಕ್ಷಿಣಾಮೂರ್ತಿಗೆ ಫಸ್ಟ್‌ಕ್ಲಾಸ್‌ ದೊರೆತಿತ್ತು. ಇದನ್ನು ನೋಡಿಯಂತೂ ಮಾವ ಮತ್ತು ಅತ್ತೆಯವರ ದುಃಖ ಹೇಳತೀರದು. ತಮ್ಮ ಮಿತ್ರ ಎಂ.ಎಸ್‌. ಪುಟ್ಟಣ್ಣನವರಿಗೆ ಬರೆದ ಪತ್ರದಲ್ಲಿ ತಮ್ಮ ಒಬ್ಬಳೇ ಮಗಳ ವೈಧವ್ಯದ ಬಗ್ಗೆ ಬಹಳ ಪರಿತಪಿಸಿದ್ದಾರೆ.

ಈ ದುಃಖ ಇನ್ನೂ ಉಪಶಮನವಾಗದಿರುವಾಗಲೇ, ೧೮೯೮ರಲ್ಲಿ, ಅವರ ದ್ವಿತೀಯ ಪತ್ನಿ ದಿವಂಗತರಾಯರು. ಇವರ ಮರಣದಿಂದ ವೆಂಕಟಕೃಷ್ಣಯ್ಯನವರಿಗೆ ಉಂಟಾದ ಶೋಕಕ್ಕೆ ಪಾರವೇ ಇಲ್ಲ. ಮನೆಯ ತುಂಬ ಇನ್ನೂ ಚಿಕ್ಕ ಮಕ್ಕಳು, ಎಳೆಯ ಹುಡುಗ ವೆಂಕಟರಾಮು. ವಿಧವೆಯಾದ ಚಿಕ್ಕ ವಯಸ್ಸಿನ ಮಗಳು ಕ್ಷಯ ರೋಗದಿಂದ ಪೀಡಿತಳಾಗಿ ಹಾಸಿಗೆ ಹಿಡಿದಿದ್ದಾಳೆ. ತಮ್ಮ ಸಂಸಾರಕ್ಕೆ ಬಂದ ಕಷ್ಟವನ್ನು ನೋಡಿ, ಇದೇನು ವಿಧಿಯ ವಿಕಟ ವಿಲಾಸ ಎಂದು ಮರುಗಿದರು. ಆದರೂ ಧೈರ್ಯ ತಂದುಕಲೊಂಡು ನಿರಾಶರಾಗದೆ ಸಂಸಾರವನ್ನು ನಡೆಸಿಕೊಂಡು ಬಂದರು. ತಾವು ನಡೆಸುತ್ತಿದ್ದ ರಾಜಕೀಯ ಹೋರಾಟ, ಪತ್ರಿಕಾ ಜೀವನ, ಉಪಾಧ್ಯಾಯ ವೃತ್ತಿ ಇವುಗಳಲ್ಲಿ ಸ್ವಲ್ಪವೂ ಅಧೀರತೆಯನ್ನು ತೋರಿಸಲಿಲ್ಲ.೧೯೦೨ರಲ್ಲಿ ಭಾಗೀರಥಮ್ಮ ವಿಧಿವಶರಾದರು.

ವೆಂಕಟಕೃಷ್ಣಯ್ಯನವರ ಹಿರಿಯ ಮಗ ಸುಬ್ಬಯ್ಯ ತತ್ವಶಾಸ್ತ್ರ ಪ್ರವೀಣ. ಮಹಾ ರಾಜಾ ಕಾಲೇಜಿನಲ್ಲಿ ಪ್ರೊಫೆಸರ್. ಇದ್ದಕ್ಕಿದ್ದ ಹಾಗೆ ಅವರ ಮೆದುಳು ಕೆಟ್ಟು, ಅವರು ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟರು. ಮನೆಯಲ್ಲಿಯೇ ಅವರ ಚಿಕಿತ್ಸೆಯ ಏರ್ಪಾಡು ಮಾಡಲಾಯಿತು.

ಭಾಗೀರಥಮ್ಮನ ರಾಮ ಲಕ್ಷ್ಮಣ ಎಂಬ ಇಬ್ಬರು ಗಂಡು ಮಕ್ಕಳು ಅವರ ಮನೆಯಲ್ಲಿಯೇ ಬೆಳೆಯುತ್ತಿದ್ದರು. ಇವರಿಬ್ಬರು ೧೩-೧೪ ವರ್ಷ ಬೆಳೆದು ಒಂದೇ ವಾರದಲ್ಲಿ ಪ್ಲೇಗಿನಿಂದ ೧೯೧೭ ರಲ್ಲಿ ಮೃತರಾದರು.

ಇನ್ನು ಕೆಲವು ದಿವಸಗಳಲ್ಲಿಯೇ ವೆಂಕಟಕೃಷ್ಣಯ್ಯನವರ ಕಿರಿಯ ಮಗ ವೆಂಕಟರಾಮು ಎಂಬ ಇನ್ನೂ ೧೫ ವಯಸ್ಸಿನ ಬಾಲಕ ಪ್ಲೇಗಿನಿಂದ ಮೃತನಾದ. ಮನೆಯೇ ಬರಿದಾದ ಹಾಗೆ ಆಯಿತು.

ವೆಂಕಟಕೃಷ್ಣಯ್ಯನವರು ಇಂತಹ ಸ್ಥಿತಿಯಲ್ಲಿದ್ದಾಗಲೇ ಪತ್ರಿಕೆಗಳೂ ನಿಂತು ಹೋದವು. ಮುದ್ರಣಾಲಯವೂ ಮುಚ್ಚಿತು. ಇನ್ನು ‘ಪದ್ಮಾಲಯ’ವನ್ನು ಬಿಡಬೇಕೆಂದು ಅವರ ಮನಸ್ಸಿಗೆ ಬಂದಿತು. ಆಗಿನ ಕಾಲದಲ್ಲಿಯೇ ೨೫,೦೦೦ ರೂಪಾಯಿ ಬೆಲೆ ಬಾಳುವ ಮನೆಯನ್ನು ೭,೦೦೦ ಅಥವ ೮,೦೦೦ ರೂಪಾಯಿಗೆ ಮಾರಿ, ರಮಾ ವಿಳಾಸ ಅಗ್ರಹಾರದ ಒಂದು ಬಾಡಿಗೆ ಮನೆಯಲ್ಲಿ ತಮ್ಮ ಇಬ್ಬರು ವಿಧವಾ ಸಹೋದರಿಯರೊಂದಿಗೆ ವಾಸಮಾಡತೊಡಗಿದರು. ಆಗ ಇದ್ದುದು ಒಂದೇ ಕೆಲಸ. ಅದು ಮರಿಮಲ್ಲಪ್ಪ ಸ್ಕೂಲು ಮುಖ್ಯೋಪಾಧ್ಯಾಯ ಪದವಿ. ಈ ಕೆಲಸದಲ್ಲಿಯೇ ಇದ್ದುಕೊಂಡು ಕೆಲವು ವರ್ಷ ಮುಂದಕ್ಕೆ ತಳ್ಳಿದರು.

ಇನ್ನೊಂದು ಕೌಟುಂಬಿಕ ದುರ್ಘಟನೆ ನಡೆದದ್ದೂ ೧೯೧೮ರಲ್ಲಿಯೇ, ಇವರ ಎರಡನೆಯ ಮಗ ನಾರಾಯಣ ರಾವ್‌ ಬೆಂಗಳೂರಿನಲ್ಲಿ ಬೈಸಿಕಲ್‌ ಮೇಲೆ ಹೋಗುತಿದ್ದಾಗ ಒಂದು ಜಟಕಾದೊಡನೆ ಢಿಕ್ಕಿ ಹೊಡೆದು, ಕೂಡಲೇ ಆ ಸ್ಥಳದಲ್ಲಿಯೇ ಮೃತರಾದರು. ಸಬ್‌ ರಿಜಿಸ್ಟ್ರಾರರಾಗಿದ್ದ ಅವರನ್ನು ಅಮಲ್ದಾರ್ ಗ್ರೇಡಿಗೆ ಏರಿಸಿದ ಕಾರಣ ಅಂದೇ ಚಾರ್ಜು ತೆಗೆದುಕೊಂಡು ಅವರು ಮನೆಗೆ ಸಾಯಂಕಾಲ ಸೈಕಲ್‌ ಮೇಲೆ ಬರುತ್ತಿದ್ದರು. ಈಗಿನ ಕಾರ್ಪೊರೇಷನ್ ಆಫೀಸಿನ ಸ್ವಿಮಿಂಗ್‌ ಪೂಲಿಗೂ ಕರ್ಬ್ಬ ಪಾರ್ಕಿಗೂ ಹೋಗುವ ರಸ್ತೆ ಮಧ್ಯೆ ಈ ಆಕಸ್ಮಿಕ ನಡೆಯಿತು. ವೆಂಕಟಕೃಷ್ಣಯ್ಯನವರಿಗೆ ಈ ಸುದ್ದಿ ಸಿಡಿಲು ಬಡಿದಂತಾಯಿತು. ಆದರೂ,  ಸ್ವಲ್ಪ ಹೊತ್ತಿನಲ್ಲಿ ಸಮಾಧಾನ ತಂದುಕೊಂಡು, “ಜಗದೀಶ್ವರನ ಚಿತ್ತ” ಎಂದರು.

ನಾರಾಯಣ ರಾಯರು ಬೆಂಗಳೂರಿನ ಡಾ. ಸಿ.ಬಿ. ರಾಮರಾಯರ ಅಳಿಯ. ಇವರ ಮಕ್ಕಳೇ ಬಿಹಾರಿನಲ್ಲಿ ಐ.ಸಿ.ಎಸ್‌. ಆಫೀಸರ್ ಆಗಿದ್ದು  ಈಗ ರಾಂಚಿಯಲ್ಲಿ ಹಿಂದೂಸ್ಥಾನ್‌ ಸ್ಟೀಲ್ಸ್‌ ಲಿಮಿಟೆಡ್‌ನ ಛೇರಮನ್‌ರಾಗಿ ಕೆಲಸ ಮಾಡುತ್ತಿರುವ ಎಂ.  ಸುಬ್ಬರಾಯರು. ವೆಂಕಟಕೃಷ್ಣಯ್ಯನವರು ಬದುಕಿದ್ದಾಗಲೇ ತಮ್ಮ ಒಬ್ಬ ಮೊಮ್ಮಗ ಐ.ಸಿ.ಎಸ್‌.  ಆಫೀಸರ್ ಆದದ್ದನ್ನು ನೋಡಿ ಸಂತೋಷಿಸಿದರು. ಈ ಮೊಮ್ಮಗ ಐ.ಸಿ.ಎಸ್‌. ಆಗಬಾರದೆಂದು ವೆಂಕಟಕೃಷ್ಣಯ್ಯನವರ ಕೆಲವು ವಿರೋಧಿಗಳು ಬ್ರಿಟಿಷ್‌ ರೆಸಿಡೆಂಟರಿಗೆ ಪತ್ರ ಬರೆದಿದ್ದರು; ಆ ಹುಡುಗನ ತಾತ, ವೆಂಕಟಕೃಷ್ಣಯ್ಯನವರು, ಬ್ರಿಟಿಷ್‌ ರಾಜ್ಯದ್ರೋಹಿ ಎಂದು ತಿಳಿಸಿದ್ದರು.

ರೆಸಿಡೆಂಟರು ವೆಂಕಟಕೃಷ್ಣಯ್ಯನವರನ್ನು ಕರೆಸಿಕೊಂಡು ಮಾತನಾಡಿ ಅವರ ಉದಾರತೆಯನ್ನೂ, ವಿಶಾಲ ಮನೋಭಾವವನ್ನೂ ಕಂಡು ಆಶ್ಚರ್ಯಪಟ್ಟು, ಇಂತಹವರು ಯಾವ ರಾಜ್ಯಕ್ಕಾದರೂ ಭೂಷಣಪ್ರಾಯರು ಎಂದು ಅಭಿಪ್ರಾಯಪಟ್ಟರು.

ಹೀಗೆ ವೆಂಕಟಕೃಷ್ಣಯ್ಯನವರ ಜೀವನದಲ್ಲಿ ಸುಖದುಃಖಗಳು ಬೆಳಿಕು ಕತ್ತಲೆಗಳಂತೆ ಒಂದಾಗುತ್ತಲೊಂದು ಬರುತ್ತಲೇ ಇದ್ದವು. ಇವೆಲ್ಲಾ ಬಂದರೂ ಪುಟಕ್ಕೆ ಹಾಕಿದ ಚಿನ್ನದಂತೆ ಅವರ ಜೀವನ ಕಾಂತಿಯಿಂದ ಬೆಳಗುತ್ತಿತ್ತು.