ಜಿ.ಒ.ಎಂ., ತಾತಯ್ಯ, ವೃದ್ಧಪಿತಾಮಹ, ದಯಾಸಾಗರ ಎಂಬ ನಾನ ಪ್ರಿಯ ನಾಮಗಳಿಂದ ಎಂ. ವೆಂಕಟಕೃಷ್ಣಯ್ಯನವರನ್ನು ಅವರ ಸಮಕಾಲೀನರು ಕರೆಯುತ್ತಿದ್ದರು.

ಅವರು ೧೯೩೩ರಲ್ಲಿ ಮೃತರಾದರೂ, ಅವರ ಹೆಸರು ಇನ್ನೂ ಜನರ ನೆನಪಿನಲ್ಲಿದೆ; ಇನ್ನೂ ಅನೇಕ ವರ್ಷಗಳು ಜನರ ನೆನಪಿನಲ್ಲಿರುತ್ತದೆ. ಅವರ ಹೆಸರನ್ನು ಮೈಸೂರಿನವರು ಯಾವತ್ತೂ ಮರೆಯಲಾರರು. ಅವರು ಮೈಸೂರಿನ ಜನರಿಗೆ ಮಾಡಿರುವ ಸೇವೆ ಮತ್ತು ಉಪಕಾರ ಅಪಾರವಾದುದು.

ಅವರ ಕಾಲದಲ್ಲಿ ಅವರು ಮೈಸೂರಿನ ಜನರ ಏಕಮಾತ್ರ ಮುಖಂಡರಾಗಿದ್ದರು. ಅವರ ಸರಕಾರದ ಅಧಿಕಾರದಲ್ಲಿರಲಿಲ್ಲ. ಆಗಿನ ಕಾಲದಲ್ಲಿ ಈಗಿನ ಹಾಗೆ ಮುಖ್ಯ ಮಂತ್ರಿಗಳನ್ನು ಚುನಾಯಿಸುವ ಅಧಿಕಾರ ಮೈಸೂರಿನ ಜನರಿಗೆ ಇದ್ದಿದ್ದರೆ, ಅವರು ಅನೇಕ ವರ್ಷಗಳ ಕಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿರುತ್ತಿದ್ದರು. ಇಂಗ್ಲೆಂಡಿನಲ್ಲಿ ಗ್ಲ್ಯಾಡ್‌ಸ್ಟನ್ ಮುಖ್ಯಮಂತ್ರಿಯಾಗಿ ಯಾವ ರೀತಿ ಜನಸೇವೆ ಮಾಡಿದನೋ ಹಾಗೆಯೇ ವೆಂಕಟಕೃಷ್ಣಯ್ಯನವರೂ ಮಾಡುತ್ತಿದ್ದರೆಂದು ಅವರ ಸಮಕಾಲೀನರು ಹೇಳುತ್ತಿದ್ದರು.

ಅವರ ಕಾಲದಲ್ಲಿ ವೆಂಕಟಕೃಷ್ಣಯ್ಯನವರ ಹೆಸರು ಮನೆಮಾತಾಗಿತ್ತು. ಮೈಸೂರಿನಲ್ಲಿ ಮಾತ್ರವೇ ಅಲ್ಲ; ಮದ್ರಾಸ್‌, ಪೂನಾ, ಬೊಂಬಾಯಿ, ಕಲ್ಕತ್ತ ಮುಂತಾದ ನಗರಗಳಲ್ಲಿದ್ದ ಪತ್ರಿಕೆಗಳಿಗೆ ಅವರ ಹೆಸರು ಚೆನ್ನಾಗಿ ಗೊತ್ತಿತ್ತು. ಅಲ್ಲಿಯ ಆಗಿನ ಪ್ರಜಾನಾಯಕರು ಅವರ ಪ್ರಜಾಸೇವೆಯ ಮಹಿಮೆಯನ್ನು ಚೆನ್ನಾಗಿ ತಿಳಿದಿದ್ದರು.

ಅವರ ಸೇವೆಯ ಗುರುತಾಗಿ ಅವರಿಂದಲೇ ಮೈಸೂರು ನಗರದಲ್ಲಿ ಸ್ಥಾಪಿತವಾದ ಮರಿಮಲ್ಲಪ್ಪ ಹೈಸ್ಕೂಲು, ಶಾರದಾವಿಲಾಸ ಕಾಲೇಜು ಮತ್ತು ವಿದ್ಯಾ ಸಂಸ್ಥೆಗಳು, ದಳವಾಯಿ ಸ್ಕೂಲು, ಸದ್ವಿದ್ಯಾ ಪಾಠಶಾಲೆ, ಆರ್ಯ ಬಾಲಿಕಾ ಪಾಠಶಾಲೆ, ಅನಾಥಾಲಯ ಮುಂತಾದ ವಿದ್ಯಾಸಂಸ್ಥೆಗಳು ಈಗಲೂ ಇವೆ.

ಅವರು ಬಹಳ ವೈಭವವಾಗಿ ಬಾಳಿದ ಕಾಲದಲ್ಲಿ ವಾಸಮಾಡುತ್ತಿದ್ದ ಸ್ವಂತ ಮನೆ ದಿವಾನ್‌ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ಶೇಷಾದ್ರಿ ಭವನದ ಎದುರಿಗಿದೆ. ಅದೇ “ಪದ್ಮಾಲಯ.” ಅವರು ಕಡೆಗಾಲದಲ್ಲಿದ್ದ ಸ್ವಂತ ಮನೆ ಮತ್ತು ವಾಣಿವಿಲಾಸ ಪ್ರೆಸ್‌ ಲಕ್ಷ್ಮೀಪುರದಲ್ಲಿವೆ.

ಅವರ ಸೇವಾ ಕಾರ್ಯದ ಗುರುತಾಗಿ ಮೈಸೂರು ನಗರ ಸಭೆಯ ಭವನದಲ್ಲಿಯೂ ಮರಿಮಲ್ಲಪ್ಪ ಸ್ಕೂಲಿನಲ್ಲಿಯೂ ಶಾರದಾ ವಿಲಾಸ ಹೈಸ್ಕೂಲಿನಲ್ಲಿಯೂ ಅವರ ಭಾವ ಚಿತ್ರಗಳು ಪ್ರಕಾಶಿಸುತ್ತಿವೆ. ಅವರು ಮೈಸೂರು ಪತ್ರಿಕೋದ್ಯೋಗಿಗಳಿಗೆ ಆದಿಗುರು, ಮಹಾಗುರು.

ಮೈಸೂರು ನಗರದಲ್ಲಿ ಶ್ರೀ ಅಗರಂ ರಂಗಯ್ಯನವರು ನಡೆಸುತ್ತಿರುವ “ಸಾಧ್ವಿ” ಪತ್ರಿಕೆ ವೆಂಕಟಕೃಷ್ಣಯ್ಯನವರಿಂದ ಸ್ಥಾಪಿತವಾದುದು. ಅವರಿಂದಲೇ ಸ್ಥಾಪಿತವಾದ ಲಿಟೆರರಿ ಯೂನಿಯನ್‌ ಮೈಸೂರು ನಗರದಲ್ಲಿ ಇನ್ನೂ ಶೋಭಿಸುತ್ತಿದೆ.

ಅವರು ಮೈಸೂರಿನ ದಿವಾನರುಗಳೆಲ್ಲರನ್ನೂ ಬಲ್ಲವರಾಗಿದ್ದರು; ಅವರ ಬಹಳ ಹತ್ತಿರದ ಮಿತ್ರರಾಗಿದ್ದರು. ಮೊದಲನೆಯ ದಿವಾನರಾದ ಸಿ. ರಂಗಾಚಾರ್ಲು ಅವರ ಗುರು. ಎರಡನೆಯ ದಿವಾನರಾದ ಕೆ. ಶೇಷಾದ್ರಿ ಅಯ್ಯರ್ ಅವರು ರಾಜಕೀಯ ವಿರೋಧಿ ಹಾಗೂ ಮಿತ್ರರು. ಮೂರನೆಯ ದಿವಾನರಾದ ಪಿ.ಎನ್. ಕೃಷ್ಣಮೂರ್ತಿ ಅವರು ಪರಮಮಿತ್ರರು. ನಾಲ್ಕನೆಯ ದಿವಾನರಾದ ವಿ.ಪಿ. ಮಾಧವರಾಯರು ಕೂಡ ದಿವಾನ್‌ರಂಗಾಚಾರ್ಲುರವರ ಶಿಷ್ಯರೇ; ಆದರೂ ವೆಂಕಟಕೃಷ್ಣಯ್ಯನವರಿಗೂ ಮಾಧವರಾಯರಿಗೂ ರಾಜಕೀಯ ಕುಸ್ತಿಗಳು ಆಗುತ್ತಲೇ ಇದ್ದವು. ಐದನೆಯ ದಿವಾನರಾದ ಆನಂದರಾಯರೂ ಅವರ ಮಿತ್ರರು. ಏಳನೆಯ ದಿವಾನರಾದ ವಿಶ್ವೇಶ್ವರಯ್ಯನವರು ವೆಂಕಟಕೃಷ್ಣಯ್ಯನವರನ್ನು ಭೀಷ್ಮನಂತೆ ಗೌರವಿಸುತ್ತಿದ್ದರು. ಎಂಟನೆಯ ದಿವಾನರಾದ ಎಂ. ಕಾಂತರಾಜೇ ಅರಸಿನವರಿಗೂ ಇವರಿಗೂ ಭಿನ್ನಾಭಿಪ್ರಾಯವಿದ್ದರೂ, ಪರಸ್ಪರ ಗೌರವವಿತ್ತು. ಒಂಬತ್ತನೆಯ ದಿವಾನರಾದ ಎ.ಆರ್. ಬ್ಯಾನರ್ಜಿಯವರು ಅವರನ್ನು ಗೌರವ ಸನ್ಮಾನ್ಯರಂತೆ ಕಾಣುತ್ತಿದ್ದರು. ಹತ್ತನೆಯ ದಿವಾನರಾದ ಮಿರ್ಜಾ ಎಂ. ಇಸ್ಮಾಯಿಲರನ್ನು ವೆಂಕಟಕೃಷ್ಣಯ್ಯನವರು ಬಾಲ್ಯದಿಂದಲೂ ಬಲ್ಲರು. ಆದ್ದರಿಂದ ಶಿಷ್ಯರಿಗೆ ಬುದ್ಧಿವಾದ ಹೇಳುವಂತೆ ನೀತಿಬೋಧೆ ಮಾಡುತ್ತಿದ್ದರು. ಹೀಗೆ ವೆಂಕಟಕೃಷ್ಣಯ್ಯನವರು ಹತ್ತು ದಿವಾನರನ್ನು ನೋಡಿ, ಅವರ ವ್ಯವಹಾರಗಳನ್ನೆಲ್ಲಾ ಚೆನ್ನಾಗಿ ಪರಿಶೀಲಿಸಿದವವರು.

ಅವರು ವಿದ್ಯಾರ್ಥಿಗಳಿಗಾಗಿ ಬರೆದು ಪ್ರಕಟಿಸಿದ ಅನೇಕ ಗ್ರಂಥಗಳ ಪೈಕಿ, ಚೋರ ಗ್ರಹಣ ತಂತ್ರ, ವಿದ್ಯಾರ್ಥಿಕರಭೂಷಣ, ಬೂಕರ್ ಟಿ. ವಾಷಿಂಗ್ಟನ್, ಟೆಲೆಮಾಕಸ್ಸನ ಸಾಹಸ ಕೃತ್ಯಗಳು, ಪರಂತಪ ವಿಜಯ ಇವು ಅನೇಕ ಗ್ರಂಥಾಲಯಗಳಲ್ಲಿಯೂ, ಮನೆಗಳಲ್ಲಿಯೂ ಇರುವುವು.

ಆಗಿನಿಂದ ಈಗಿನವರೆಗೂ ಅಂತಹ ಮಹನೀಯರು ಮೈಸೂರಿನಲ್ಲಿ ಪುನಃ ಹುಟ್ಟಲಿಲ್ಲ ಎಂದು ತಿಳಿದವರು ಹೇಳುತ್ತಾರೆ. ಅವರನ್ನು  ಮೀರಿದ ಉಪಾಧ್ಯಾಯರಿರಬಹುದು, ಶಾಸನ ಸಭಾ ಸದಸ್ಯರಿರಬಹುದು,  ಪತ್ರಿಕಾಕರ್ತರಿರಬಹುದು, ಸಾರ್ವಜನಿಕ ಮುಖಂಡರಿರಬಹುದು, ಗ್ರಂಥಕರ್ತರಿರಬಹುದು, ಪರೋಪಕಾರಿಗಳಿರಬಹುದು; ಆದರೆ  ಈ ಎಲ್ಲ ವ್ಯಕ್ತಿಗಳನ್ನೂ ವ್ಯವಹಾರಗಳನ್ನೂ ತಮ್ಮ ಒಬ್ಬರಲ್ಲಿಯೇ ಹುದುಗಿಸಿಕೊಂಡು, ಅಷ್ಟು ದೀರ್ಘಕಾಲ ಯಶಸ್ವಿಯಾಗಿ ಅವನ್ನು ನಡೆಸಿದ ಮಹಾಪುರುಷರು ವೆಂಕಟಕೃಷ್ಣಯ್ಯನವರನ್ನು ಬಿಟ್ಟರೆ ಮತ್ತೊಬ್ಬರಿಲ್ಲ. ಅವರು ಹುಟ್ಟಿದಾಗ ಬಡವರು, ಬೆಳೆದಾಗ ಬಡವರು, ಅಂತ್ಯ ಕಾಲದಲ್ಲಿಯೂ ಬಡವರು; ಐಶ್ವರ್ಯ ಹಾಗೂ ಅಧಿಕಾರಿಗಳ ಸಂಪಾದನೆ ಅವರ ಜೀವನ ಗುರಿಯಾಗಿರಲಿಲ್ಲ. ಅನ್ಯಾಯವನ್ನು ಧೈರ್ಯವಾಗಿ ಪ್ರತಿಭಟಿಸಿ ಬಡವರಿಗೂ ಬಲ್ಲಿದರಿಗೂ ನ್ಯಾಯವನ್ನು ದೊರಕಿಸುವುದಕ್ಕಾಗಿ ಅವರು ಪ್ರಬಲರೊಡನೆಯೂ ಅಧಿಕಾರಿಗಳೊಡನೆಯೂ ಧೈರ್ಯವಾಗಿ ಕಾದಾಡಿದರು. ಅಧಿಕಾರಿಗಳ ಬೆದರಿಕೆಗಳಿಗೂ ಶಿಕ್ಷೆಗಳಿಗೂ ಅವರು ಅಂಜುತ್ತಿರಲಿಲ್ಲ. ಲೇಖನಿಯೇ ಅವರ ಆಯುಧ; ಭಾಷಣವೇ ಅವರ ಶಕ್ತಿ; ಪತ್ರಿಕೆಗಳು ಸಾರ್ವಜನಿಕ ವೇದಿಕೆ, ಅಸೆಂಬ್ಲಿ ಮತ್ತು ನ್ಯಾಯ ವಿಧಾನಯಕ ಸಭೆಯೇ ಅವರ ಕಾರ್ಯಕ್ಷೇತ್ರ.  ಎಷ್ಟೋ ಜನರಿಗೆ ಉಪಕಾರ ಮಾಡಿದಾಗ್ಯೂ ಯಾರಿಂದಲೂ ಯಾವ ಕಾಲದಲ್ಲಿಯೂ ಪ್ರತ್ಯುಪಕರವನ್ನು ಅವರು ನಿರೀಕ್ಷಿಸುತ್ತಿರಲಿಲ್ಲ. ಅನಾಥರ ಬಂಧು, ಬಡವರ ಬಂಧು, ಆರ್ತರ ರಕ್ಷಕರು ಅವರು. ವಿದ್ಯಾಲಯಗಳೇ ಅವರ ದೇವರ ಗುಡಿ; ಅನಾಥಾಲಯಗಳೇ ಅವರ ತಪೋವನ. ಬಿಡುವಿಲ್ಲದೆ ದುಡಿಯುವುದೇ ಅವರ ತಪಸ್ಸು. ಜನತೆಯೇ ಅವರ ಜನಾರ್ದನ.

ವೆಂಕಟಕೃಷ್ಣಯ್ಯನವರು ಎಲ್ಲರಂತೆಯೇ ಕುಟುಂಬಿಗಳಾಗಿದ್ದರು. ಅವರು ಅನುಭವಿಸಿದಷ್ಟು ಕೌಟುಂಬಿಕ ಕಷ್ಟ ದುಃಖಗಳನ್ನು ಯಾರೂ ಅನುಭವಿಸಿಲ್ಲ. ಒಬ್ಬರಾಗುತ್ತರೊಬ್ಬರಂತೆ ಇಬ್ಬರು ಪತ್ನಿ ತೀರಿಹೋದರು. ಬಹಳ ಬುದ್ಧಿವಂತನಾಗಿ ವಿದ್ಯಾವಂತನಾಗಿ ಕಾಲೇಜ್‌ ಪ್ರಾಧ್ಯಾಪಕನಾಗಿದ್ದ ಹಿರಿಯ ಮಗನಿಗೆ ಬುದ್ಧಿ ಭ್ರಮಣೆಯಾಯಿತು; ಕಡೆಯವರೆಗೂ ಆತನಿಗೆ ಖಾಯಿಲೆ ವಾಸಿಯಾಗಲಿಲ್ಲ. ವಿಶ್ರಾಂತಿಯಿಂದಿರುವ ವೃದ್ಧಾಪ್ಯದಲ್ಲಿ ಹಿರಿಯ ಮಗನ ಸಂಸಾರವನ್ನು ಪೋಷಿಸಿಕೊಂಡು ಬರುವ ಜವಾಬ್ದಾರಿ ವೆಂಕಟಕೃಷ್ಣಯ್ಯನವರಿಗೆ ಬಿತ್ತು. ಅಮಲ್ದಾರಗಿರಿಗೆ ಏರಿದ್ದ ಎರಡನೆಯ ಪುತ್ರ ಆಕಸ್ಮಿಕ ಘಟನೆಗೆ ಗುರಿಯಾಗಿ ಮೃತನಾದ. ಒಳ್ಳೇ ವಿದ್ಯಾವಂತರಾದ ಹೆಣ್ಣು ಮಗಳು ಮತ್ತು ಅಳಿಯ ಚಿಕ್ಕ ವಯಸ್ಸಿನಲ್ಲಿಯೇ ಮೃತರಾದರು. ಇನ್ನೂ ಬಹಳ ಚಿಕ್ಕ ವಯಸ್ಸಿನ ಒಬ್ಬ ಅತ್ಯಂತ ಬುದ್ಧಿಶಾಲಿ ಮಗ ತೀರಿಕೊಂಡ. ಮಗಳ ಇಬ್ಬರ ಗಂಡು ಮಕ್ಕಳು, ವಯಸ್ಸಿಗೆ ಬಂದವರು, ಮೃತಿ ಹೊಂದಿದರು. ತಾವೇ ಕಟ್ಟಿ ಚೆನ್ನಾಗಿ ಬಾಳಿದ ಮನೆಯಾದ “ಪದ್ಮಾಲಯ”ವನ್ನು ಸಾಲ ತೀರಿಸಲು ವೃದ್ಧಾಪ್ಯದಲ್ಲಿ ಮಾರಬೇಕಾಯಿತು.

ಸಾರ್ವಜನಿಕ ಜೀವನದ ಸಂಬಂಧವಾಗಿಯೂ ಅವರಿಗೆ ಅನೇಕ ಕಷ್ಟ ನಷ್ಟಗಳು ಬಂದವು. ಇವೆಲ್ಲವನ್ನೂ ಅವರು ಶಾಂತವಾಗಿ ಸಹಿಸಿದರು. ಸಂತೋಷ ಕಾಲದಲ್ಲಿ ಹಿಗ್ಗದ ಮತ್ತು ದುಃಖದ ಕಾಲದಲ್ಲಿ ಕುಗ್ಗದ ವೈರಾಗ್ಯ ಜೀವನ ಅವರದು.  ಸಂಸಾರಿಯಾಗಿದ್ದರೂ ಸಂನ್ಯಾಸಿಯಂತೆ ತ್ಯಾಗ ಬುದ್ಧಿಯಿಂದ ಇಹಲೋಕ ಯಾತ್ರೆಯನ್ನು ನಡೆಸಿದರು. ರಾಜಕೀಯದಲ್ಲಿ ಅವರು ಸ್ಪೆನ್ಸರಿನ ಶಿಷ್ಯರಾಗಿದ್ದರೆಂದು ಡಾ. ಡಿ.ವಿ.ಜಿ. ಹೇಳಿದ್ದಾರೆ. ಸರ್ ಕೆ. ಶೇಷಾದ್ರಿ ಅಯ್ಯರ್ ಅವರು ಒಬ್ಬ ವಿದೇಶಿಯ ದೊಡ್ಡ ಮನುಷ್ಯರೊಡನೆ ಮಾತನಾಡುತ್ತಿದ್ದಾಗ, “ಅಗೋ, ನೋಡಿ,” ಎಂದು ಎದುರು ಮನೆ ಕಡೆ “ಪದ್ಮಾಲಯ” ತೋರಿಸಿ. “ಅಲ್ಲೊಬ್ಬರಿದ್ದಾರೆ: ಅವರು ಹರ್ಬರ್ಟ್ ಸ್ಪೆನ್ಸರಿನ ಎಲ್ಲ ಗ್ರಂಥಗಳನ್ನೂ ಓದಿದ್ದಾರೆ” ಎಂದು ಹೇಳಿದ್ದರು. ವೆಂಕಟಕೃಷ್ಣಯ್ಯನವರು ಒಬ್ಬ ಸ್ವತಂತ್ರ, ತೆರೆದ ಮನಸ್ಸಿನ, ವಿಚಾರ ಶೀಲರಾಗಿದ್ದರು. ಯಾವಾಗಲೂ ಅವರು ಆಶಾಜೀವಿಯಾಗಿಯೇ ಇದ್ದರು. ನಿರಾಶೆಯೆಮಬುದು ಅವರಿಗೆ ಯಾವಾಗಲೂ ಇರಲಿಲ್ಲ. ಅವರದು ಸಣ್ಣ ಜೀವನವಲ್ಲ; ದೊಡ್ಡ ಜೀವನ. ಅವರ ಉದಾರತೆಯೂ ಪರೋಪಕಾರ ಭಾವವೂ ಅತ್ಯಂತ ಶ್ರೀಮಂತವಾಗಿದ್ದುವು.