ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮೇಲೆ ವೆಂಕಟಕೃಷ್ಣಯ್ಯ ಅಲ್ಲಲ್ಲಿ ಉದ್ಯೋಗ ಹುಡುಕಿದರು. ಕೆಲಸ ಸಿಕ್ಕುವವರೆಗೂ ಕೆಲವು ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಪಾಠ ಹೇಳಿಕೊಟ್ಟು ಅಷ್ಟಿಷ್ಟು ಹಣ ಸಂಪಾದಿಸಿದರು.

ಸಂಧ್ಯಾಕಾಲ ಸಭೆಗಳಿಗೆ ಹೊಗಿ, ಉಪನ್ಯಾಸ ಮಾಡುತ್ತಿದ್ದರು. ಒಂದು ಸಾಯಂಕಾಲ ಸಿ. ರಂಗಾಚಾರ್ಲುರವರು ನಡೆಸುತ್ತಿದ್ದ ಟೆನ್ನಿಸ್‌ ಕ್ಲಬ್ಬಿನಲ್ಲಿ ಸ್ತ್ರೀ ವಿದ್ಯಾಭ್ಯಾಸ ಕುರಿತು ಚರ್ಚೆಯಾಯಿತು. ಈ ಕ್ಲಬ್‌ ಮೈಸೂರು ನಗರದ ನಜರ್ ಬಾದ್‌ ಹತ್ತಿರ ಕುಪ್ಪಣ್ಣ ತೋಟದಲ್ಲಿತ್ತು. ಪ್ರತಿ ಸಾಯಂಕಾಲ  ಊರಿನ ದೊಡ್ಡ ಮನುಷ್ಯರನೇಕರು ಮನರಂಜನೆಗಾಗಿ ಅಲ್ಲಿಗೆ ಬರುತ್ತಿದ್ದರು. ಅಂದಿನ ಚರ್ಚಾ ಸಭೆಗೆ ರಂಗಾಚಾರ್ಲುರೇ ಅಧ್ಯಕ್ಷರು. ಆ ಸಭೆಗೆ ಹೋಗಿದ್ದ ಯುವಕ ವೆಂಕಟಕೃಷ್ಣಯ್ಯ ನಮ್ಮ ದೇಶದಲ್ಲಿ ಸ್ತ್ರೀ ವಿದ್ಯಾಭ್ಯಾಸದ ಅವಶ್ಯಕತೆಯನ್ನು ಕುರಿತು ಬಹಳ ಉತ್ಸಾಹವಾಗಿಯೂ ಸ್ಫೂರ್ತಿಯುತವಾಗಿಯೂ ಭಾಷಣ ಮಾಡಿದರು. ಈ ಉಜ್ವಲ ಭಾಷಣ ಕೇಳಿ ಸಭಿಕರೆಲ್ಲರೂ ಚಕಿತರಾದರು. ಅಧ್ಯಕ್ಷರಾಗಿದ್ದ ರಂಗಾಚಾರ್ಲು ಈ ಭಾಷಣಕಾರರ ಬೆನ್ನು ತಟ್ಟಿ, “ಭಾಷಣ  ಬಹಳ ಚೆನ್ನಾಗಿತ್ತು” ಎಂದರು. ಯುವಕ ವೆಂಕಟಕೃಷ್ಣಯ್ಯ ಪುಲಕಿತನಾದನು. ಇದೇ ರಂಗಾಚಾರ್ಲು ಅವರೊಡನೆ ಯುವಕ ವೆಂಕಟಕೃಷ್ಣಯ್ಯನ ಮೊದಲ ಭೇಟಿ.

ರಂಗಾಚಾರ್ಲು ಆಗ ಮೈಸೂರು ಅರಮನೆಯ ಕಂಟ್ರೋಲರ್ ಆಗಿದ್ದರು. ಮುಮ್ಮಡಿ ಕೃಷ್ಣರಾಜ ಒಡೆಯರು ೧೮೬೮ರಲ್ಲಿ ಮೃತಪಟ್ಟ ಮೇಲೆ, ಬ್ರಿಟಿಷ್‌ ಸರ್ಕಾರ ಅರಮನೆಗೆ ಕಾವಲಿಟ್ಟು ಅದರಲ್ಲಿದ್ದ ಹಣಕಾಸು, ಒಡವೆಗಳು ಮುಂತಾದವುಗಳ ಲೆಕ್ಕವನ್ನು ತನಿಖೆ ಮಾಡಿ, ಅನಾವಶ್ಯಕವಾದ ಸಿಬ್ಬಂದಿಯನ್ನು ತೆಗೆದು ಹಾಕಿ, ಖರ್ಚನ್ನು ತಗ್ಗಿಸಲು ರಂಗಾಚಾರ್ಲುಗೆ ಪೂರ್ಣ ಅಧಿಕಾರವನ್ನು ಕೊಟ್ಟಿತ್ತು.

ಇವರು ಮೈಸೂರಿನವರಲ್ಲ. ಮದ್ರಾಸಿನ ಚೆಂಗಲ್ಪೆಟ್‌ ಜಿಲ್ಲೆಯವರು. ಇಂಗ್ಲಿಷ್‌ ವಿದ್ಯಾಭ್ಯಾಸ ಮುಗಿದು ಬಿ.ಎ. ಡಿಗ್ರಿ ತೆಗೆದುಕೊಂಡ ಮೇಲೆ, ಮದ್ರಾಸ್‌ ಸರ್ಕಾರದಲ್ಲಿ ಕೆಲಸಕ್ಕೆ ಸೇರಿ, ಕ್ರಮ ಕ್ರಮವಾಗಿ ಕಲ್ಲೀಕೋಟೆಯ ಡೆಪ್ಯುಟ ಕಲೆಕ್ಟರ್ ಹುದ್ದೆಗೆ ಏರಿದ್ದರು.

ಇವರು ಮೈಸೂರಿಗೆ ಬರುವ ಮುಂಚೆ ಕಲ್ಲೀಕೋಟೆಯ ಹುದ್ದೆಯಲ್ಲಿದ್ದರು. ಇವರು ಉನ್ನತ ಪ್ರಾಮಾಣಿಕತೆ, ಶ್ರದ್ಧೆ,  ನಿಷ್ಪಕ್ಷಪಾತ, ನಿರ್ದಾಕ್ಷಿಣ್ಯ, ದಕ್ಷತೆಯಿಂದ ಕರ್ತವ್ಯ ನಿರ್ವಹಣೆ, ಈ ಗುಣಾತಿಶಯವುಳ್ಳವಾರಾಗಿದ್ದುದರಿಂದ, ಎಲ್ಲರೂ ಇವರನ್ನು ಗೌರವಿಸುತ್ತಿದ್ದರು ಮತ್ತು ಕಂಡರೆ ಹೆದರುತ್ತಿದ್ದರು. ಬ್ರಿಟಿಷ್‌ ಸರ್ಕಾರ ಮತ್ತು ಅಧಿಕಾರಿಗಳು ಇವರಲ್ಲಿ ಬಹಳ ಗೌರವವಿಟ್ಟಿದ್ದರು.

ಅರಮನೆಯ ಸಿಬ್ಬಂದಿಯನ್ನು ಕಡಿಮೆ ಮಾಡುವುದರಲ್ಲಿ ಅನೇಕರಿಗೆ ಅಸಮಾಧಾನವಾಯಿತು. ಅರಮನೆಯೊ ಹಿಂದಿನ ರಾಣಿಗಳು ಮತ್ತು ಸಿಬ್ಬಂದಿಯವರು ಇವರ ನಿಷ್ಠೆಯನ್ನು ಕಂಡು ಹೆದರಿದರು. ಉಪವಾಸಾದಿಗಳನ್ನು ಮಾಡಿ ಇವರನ್ನು ಅಲ್ಲಾಡಿಸೋಣವೆಂದು ಪ್ರಯತ್ನಿಸಿದರು. ಏನೂ ಫಲವಾಗಲಿಲ್ಲ. ಇವರು ಲಂಚಕೋರರೆಂದು ಇವರ ಮೇಲೆ ಬ್ರಿಟಿಷ್‌ ಸರ್ಕಾರಕ್ಕೆ ಅರ್ಜಿ ಹಾಕಿದರು. ವಿಚಾರಣೆ ನಡೆದು, ರಂಗಾಚಾರ್ಲು ನಿರ್ದೋಷಿಗಳೆಂದು ರುಜುವಾತಾಯಿತು. ಇಂತಹ ಶುದ್ಧ ಪ್ರಾಮಾಣಿಕತೆಯಿಂದ ಕೂಡಿದ ಮಹನೀಯರು ರಂಗಾಚಾರ್ಲು. ರಂಗಾಚಾರ್ಲುರವರು ಬಡವರ ಮತ್ತು ಪ್ರಾಮಾಣಿಕರ ಬಂಧು.

ದೇಶ ಮುಂದಕ್ಕೆ ಬರಬೇಕಾದರೆ ಸ್ವತಂತ್ರ ಸಾರ್ವಜನಿಕ ಜೀವನ ಬೆಳೆಯಬೇಕು, ಇದಕ್ಕಾಗಿ ಒಳ್ಳೆಯ ಕೆಲಸಗಾರರನ್ನು ಸಿದ್ಧ ಮಾಡಬೇಕಲು ಎಂದು ಸಂಕಲ್ಪಿಸಿದರು. ಹೀಗ ಆಲೋಚನೆ ಮಾಡುತ್ತಿರುವ ಕಾಲದಲ್ಲಿ, ವೆಂಕಟಕೃಷ್ಣಯ್ಯನವರಂತಹ ಪ್ರಾಮಾಣಿಕ ಯುವಕ ವಿದ್ಯಾವಂತ ಸಿಕ್ಕಿದ್ದು ಇವರಿಗೆ ಒಂದು ಮಹಾನಿಧಿ ಸಿಕ್ಕಿದ ಹಾಗಾಯಿತು. ಯುವಕ ವೆಂಕಟಕೃಷ್ಣಯ್ಯನವರನ್ನು ಮುಂದಕ್ಕೆ ತರಬೇಕೆಂದು, ಅವರಿಗೆ ಬಹಳ ಪ್ರೋತ್ಸಾಹ ಕೊಟ್ಟರು. ವೆಂಕಟಕೃಷ್ಣಯ್ಯನವರಿಗೆ ಸರ್ಕಾರಿ ನೌಕರಿ ಕೊಡಬೇಕಾಗಿತ್ತು. ಅದಕ್ಕೆ ಅವರು ಅವರು ಬಹಳ ಅರ್ಹರೂ, ಯೋಗ್ಯತೆಯುಳ್ಳವರೂ ಆಗಿದ್ದರು. ಆದರೆ, ರಂಗಾಚಾರ್ಲುರವರಿಗೆ ಇದು ಇಷ್ಟವಿರಲಿಲ್ಲ. ವೆಂಕಟಕೃಷ್ಣಯ್ಯನವರಂತಹ ಯುವಕರು ಮೈಸೂರಿನ ಸಾರ್ವಜನಿಕ ಜೀವನವನ್ನು ಕಟ್ಟಬೇಕೆಂಬ ಆಲೋಚನೆ ರಂಗಾಚಾರ್ಲುರವರಿಗಿತ್ತು. ಆದುದರಿಂದ ಯೋಚನೆ ಮಾಡಿ ವೆಂಕಟಕೃಷ್ಣಯ್ಯನವರಿಗೆ “ನೀನು ಸರ್ಕಾರಿ ನೌಕರಿಯನ್ನು ಸೇರಬೇಡ, ಖಾಸಗಿ ಸ್ಕೂಲಿನ ಉಪಾಧ್ಯಾಯ ವೃತ್ತಿಯನ್ನು ಆರಿಸಿಕೋ, ಮತ್ತು ಪತ್ರಿಕೋದ್ಯೋಗಿಯಾಗು; ಕನ್ನಡ ಇಂಗ್ಲಿಷ್‌ ಪತ್ರಿಕೆಗಳನ್ನು ಹೊರಡಿಸಿ ಸಾಮಾನ್ಯ ಜನರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳನ್ನು ಬೋಧೆ ಮಾಡು,” ಎಂದು ಉಪದೇಶ ಮಾಡಿದರು. ಗುರು ಭಾವನೆಯಿಂದ ರಂಗಾಚಾರ್ಲುರವರ ಉಪದೇಶದಂತೆ ನಡೆಯುವುದಾಗಿ ವಾಗ್ದಾನ ಮಾಡಿ ಅಂದಿನಿಂದಲೇ ದೇಶಸೇವಾ ದೀಕ್ಷೆಯನ್ನು ವಹಿಸಿದರು.

ಅರಮನೆ ಗುರುಕಾರರಾಗಿದ್ದ ಮರಿಮಲ್ಲಪ್ಪನವರ ನಾಮಾಂಕಿತವಾಗಿ ೧೮೭೫ರಲ್ಲಿ ಸಂತೆಪೇಟೆಯಲ್ಲಿ ಒಂದು ಆಂಗ್ಲೊ-ವರ್ನಾಕ್ಯುಲರ್ (ಇಂಗ್ಲಿಷ್‌ ಮತ್ತು ಕನ್ನಡ) ಸ್ಕೂಲು ಸ್ಥಾಪನೆಯಾಯಿತು. ಈ ಸ್ಕೂಲು ಸ್ಥಾಪನೆಯಾದದ್ದು ರಂಗಾಚಾರ್ಲುರವರ ಪ್ರೋತ್ಸಾಹದಿಂದಲೇ. ಅದು ಹೇಗೆಂದರೆ, ಗುರುಕಾರ್ ಮರಿಮಲ್ಲಪ್ಪನವರು ತಮ್ಮಲ್ಲಿದ್ದ ಹಣವನ್ನು ಒಂದು ದೇವಸ್ಥಾನ ಕಟ್ಟಲು ವಿನಿಯೋಗಿಸಬೇಕೆಂದಿದ್ದರು. ‘ಅದು ಬೇಡ, ಒಂದು ಸ್ಕೂಲನ್ನು ಸ್ಥಾಪಿಸಿ’ ಎಂದು ರಂಗಾಚಾರ್ಲು ಸಲಹೆಯಿತ್ತರು. ಇದರ ಮೇಲ್ವಿಚಾರಣೆಯೂ ಪ್ರಾರಂಭದಲ್ಲಿ ಇವರ ಕೈಯಲ್ಲಿಯೇ ಇತ್ತು. ಎಸ್‌. ರಂಗಾಚಾರ್ಯ ಎಂಬುವರನ್ನು ಮುಖ್ಯೋಪಾಧ್ಯಾಯರನ್ನಾಗಿಯೂ, ಎಚ್‌.ಕೃಷ್ಣರಾಯರನ್ನು ಎರಡನೇ ಉಪಾಧ್ಯಾಯರನ್ನಾಗಿಯೂ ರಂಗಾಚಾರ್ಲುರವರೇ ನೇಮಿಸಿದರು. ಮುಖ್ಯೋಪಾಧ್ಯಾಯರಿಗೆ ತಿಂಗಳಿಗೆ ೧೫ ರೂಪಾಯಿ ಸಂಬಳ, ಉಳಿದ ಇಬ್ಬರು ಉಪಾಧ್ಯಾಯರಿಗೆ ತಲಾ ೧೦ ರೂಪಾಯಿ.

ಈ ಸ್ಕೂಲನ್ನು ಸೇರಿದ ಕೂಡಲೇ ಅದನ್ನು ಮುಂದಕ್ಕೆ ತರಲು ತಮ್ಮ ಜೀವನವನ್ನೆಲ್ಲಾ ವಿನಿಯೋಗಿಸಲು ವೆಂಕಟಕೃಷ್ಣಯ್ಯ ಸಂಕಲ್ಪಿಸಿದರು.

ಗುರುಕಾರ್ ಮರಿಮಲ್ಲಪ್ಪನವರ ಮರಣಶಾಸನದ ಪ್ರಕಾರ ಪ್ರಾರಂಭದಲ್ಲಿ ಈ ಸ್ಕೂಲಿಗೆ ರೂ. ೩೨,೫೦೦ ಮಾತ್ರ ಬಂದವು. ಎಸ್‌. ರಂಗಾಚಾರ್ಯರು ಒಂದೆರಡು ವರ್ಷಗಳಲ್ಲಿಯೇ ಈ ಸ್ಕೂಲನ್ನು ಬಿಟ್ಟು ಸರ್ಕಾರಿ ನೌಕರಿಯನ್ನು ಸೇರಿದರು. ಇನ್ನು ಮುಂದೆ ವೆಂಕಟಕೃಷ್ಣಯ್ಯನವರೇ ಈ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಎಲ್ಲಾ ಜವಾಬ್ದಾರಿಯನ್ನೂ ವಹಿಸಿಕೊಂಡು ಬಹಳ ಉತ್ಸಾಹದಿಂದ ಕೆಲಸ ಮಾಡಿದರು. ವಿದ್ಯಾರ್ಥಿಗಳು ಬಹು ಸಂಖ್ಯೆಯಲ್ಲಿ ಈ ಸ್ಕೂಲಿಗೆ ಬರುವ ಹಾಗಾಯಿತು. ವೆಂಕಟಕೃಷ್ಣಯ್ಯನವರು ಈ ಸ್ಕೂಲಿನಲ್ಲಿಯೇ ವಿದ್ಯಾರ್ಥಿಗಳನ್ನು ಮದ್ರಾಸ್‌ ವಿಶ್ವವಿದ್ಯಾಲಯದ ಮೆಟ್ರಕ್ಯುಲೇರ್ಷ ಪರೀಕ್ಷೆಗೂ ತಯಾರು ಮಾಡುತ್ತ ಬಂದರು. ೧೮೭೯ರಲ್ಲಿಯೇ ಈ ಸ್ಕೂಲಿನಲ್ಲಿ ಓದಿದ ವಿದ್ಯಾರ್ಥಿಗಳು ಮೊದಲನೇ ಸಲ ಮೆಟ್ರಕ್ಯುಲೇರ್ಷ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇದರಿಂದ ರಂಗಾಚಾರ್ಲುರವರಿಗೆ ಬಹಳ ಸಂತೋಷವಾಯಿತು. ಈ ಸ್ಕೂಲನ್ನು ನಡೆಸಲು ಜವಾಬ್ದಾರಿ ವಹಿಸಿದ್ದ ಇತರ ಟ್ರಸ್ಟಿಗಳೂ ಸಂತೋಷಪಟ್ಟರು.

ಸಂತೆಪೇಟೆಯಲ್ಲಿದ್ದ ಸ್ಕೂಲ್‌ ಕಟ್ಟಡ ವಿದ್ಯಾರ್ಥಿಗಳಿಗೆ ಸಾಕಾಗಲಿಲ್ಲ. ಸ್ಕೂಲ್‌ ಟ್ರಸ್ಟಿಗಳು ದಿವಂಗತ ಮರಿಮಲ್ಲಪ್ಪನವರ ಪತ್ನಿಯನ್ನು ಇನ್ನೂ ಹಣ ಕೊಡಬೇಕೆಂದು ಪ್ರಾರ್ಥಿಸಿದರು. ಅವರು “ಹೊಸ ಸ್ಕೂಲು ಕಟ್ಟಿಸಿಕೊಳ್ಳಿ, ನಾನು ೧೨,೦೦೦ ರೂಪಾಯಿ ಕೊಡುತ್ತೇನೆ. ಈ ಸಂತೆಪೇಟೆ ಸ್ಕೂಲ್‌ ಕಟ್ಟಡವನ್ನು ಮಾರಿ, ಅದರಲ್ಲಿ ಬಂದ ಹಣವನ್ನೂ ತೆಗೆದುಕೊಂಡು ಒಳ್ಳೇ ಕಟ್ಟಡ ಕಟ್ಟಿಸಿ” ಎಂದರು.

ಟ್ರಸ್ಟಿಗಳು ಕಟ್ಟಡಕ್ಕೆ ಸರ್ಕಾರದ ಸಹಾಯವನ್ನೂ ಕೇಳಿದರು. ಅವರು ಸ್ಕೂಲ್‌ ಕಟ್ಟಲು ಒಂದು ವಿಶಾಲವಾದ ಮೈದಾನವನ್ನೂ, ೧೦,೦೦೦ ರೂಪಾಯಿಗಳನ್ನೂ ಕೊಟ್ಟರು.

ಇದನ್ನೆಲ್ಲಾ ಸೇರಿಸಿ ಟ್ರಸ್ಟಿಗಳು ಈಗ ಇರುವ ಸ್ಕೂಲನ್ನು ರಮಾವಿಲಾಸ ಅಗ್ರಹಾರದಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಬಂಗಲೆ ಹಿಂದೆ ಕಟ್ಟಿಸಿದರು. ೧೯೦೦ ರಲ್ಲಿ ಕಟ್ಟಡ ಕಟ್ಟಿ ಮುಗಿದ ಮೇಲೆ ಸಂತೆಪೇಟೆಯಿಂದ ಇಲ್ಲಿಗೆ ಸ್ಕೂಲನ್ನು ವರ್ಗಾಯಿಸಲಾಯಿತು.

ವೆಂಕಟಕೃಷ್ಣಯ್ಯನವರ ಶ್ರದ್ಧೋತ್ಸಾಹಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಸಾವಿರದವರೆಗೂ ಏರಿತು. ೧೯೦೫ರವರೆಗೂ ಹಂಗಾಮಿ ಹೈ ಸ್ಕೂಲಾಗಿಯೇ ವಿದ್ಯಾರ್ಥಿಗಳನ್ನು ಮದ್ರಾಸ್‌ ಮೆಟ್ರಕ್ಯುಲೇರ್ಷ ಪರೀಕ್ಷೆಗೆ ಕಳುಹಿಸುತ್ತಿತ್ತು; ಆಗ ಈ ಸ್ಕೂಲಿನ ಅಭಿವೃದ್ಧಿಯನ್ನು ಪರಿಶೀಲಿಸಿ ಇದನ್ನು ಸ್ಥಿರ ಸ್ಕೂಲಾಗಿ ಸರ್ಕಾರ ಅಂಗೀಕರಿಸಿತು. ಇಷ್ಟೇ ಅಲ್ಲದೆ, ಈ ಸ್ಕೂಲಿನ ಮಹಡಿಯ ಮೇಲ ಹಾಲುಗಳನ್ನು ಕಟ್ಟಿಸಲು ಧನಸಹಾಯವನ್ನೂ ಮಾಡಿತು. ಸರ್ಕಾರ ಪ್ರಾರಂಭದಲ್ಲಿ ತಿಂಗಳಿಗೆ ೫೦ ರೂಪಾಯಿ ಗ್ರಾಂಟು ಕೊಡುತ್ತಿತ್ತು; ಅದನ್ನು ಕ್ರಮೇಣ ೫೪೦ ರೂಪಾಯಿವರೆಗೆ ಏರಿಸಿತು. ಈ ಸ್ಕೂಲಿನ ವಿಶೇಷವೆಂದರೆ, ಹಿಂದುಳಿದ ಜನರೂ, ಮುಸ್ಲಿಮರೂ ಬೇರೆ ಕಡೆಗಿಂತ ಹೆಚ್ಚು ಪ್ರೋತ್ಸಾಹ ಹೊಂದುತ್ತಿದ್ದರು.

ವೆಂಕಟಕೃಷ್ಣಯ್ಯ ೪೩ ವರ್ಷ ಕಾಲ ಮರಿಮಲ್ಲಪ್ಪ ಸ್ಕೂಲಿನ ಸೇವೆ ಮಾಡಿದರು. ಅವರ ಜೀವನದ ಬಹು ಮುಖ್ಯವಾದ ಕಾಲ ಈ ಸ್ಕೂಲಿನ ಸೇವೆಗೆ ಅರ್ಪಿತವಾಯಿತು. ವರ್ಷ ವರ್ಷಕ್ಕೂ ವಿದ್ಯಾರ್ಥಿಗಳ ಸಂಖ್ಯೆಯೂ ಏರಿತು, ಸ್ಕೂಲಿನ ಕೀರ್ತಿಯೂ ಬೆಳೆಯಿತು. ಮರಿಮಲ್ಲಪ್ಪ ಸ್ಕೂಲೆಂದರೆ ವೆಂಕಟಕೃಷ್ಣಯ್ಯ, ವೆಂಕಟಕೃಷ್ಣಯ್ಯ ಎಂದರೆ ಮರಿಮಲ್ಲಪ್ಪ ಸ್ಕೂಲು ಎನ್ನುವ ಮಟ್ಟಿಗೆ ಆಯಿತು.

ದಿವಾನ್ ಶೇಷಾದ್ರಿ ಅಯ್ಯರ್ ಮತ್ತು ಟಿ. ಪರಮಶಿವಯ್ಯರ್ ತಮ್ಮ ಮಕ್ಕಳನ್ನು ಈ ಸ್ಕೂಲಿಗೆ ವಿದ್ಯಾಭ್ಯಾಸಕ್ಕೆ ಕಳುಹಿಸಿತ್ತಿದ್ದರು. ಈ ಸ್ಕೂಲಿನಲ್ಲಿ ಓದಿದ ಅನೇಕರು ಮೈಸೂರು ಸರ್ಕಾರದ ದೊಡ್ಡ ಅಧಿಕಾರಿಗಳಾದರು, ದೊಡ್ಡ ಲಾಯರುಗಳಾದರು, ದೊಡ್ಡ ಡಾಕ್ಟರುಗಳಾದರು, ದೊಡ್ಡ ಉಪಾಧ್ಯಾಯರಾದರು, ದೊಡ್ಡ ಸಾಹುಕಾರರಾದರು, ಖಾಸಗಿ ಉದ್ಯಮಗಳ ಮುಖಂಡರಾದರು. ಈ ಸ್ಕೂಲಿನಲ್ಲಿ ಓದಿ ಮುಂದೆ ಪ್ರಸಿದ್ಧಿಗೆ ಬಂದವರಲ್ಲಿ ಕೆಲವರ ಹೆಸರುಗಳನ್ನು ಇಲ್ಲಿ ಗುರ್ತಿಸಬಹುದು: ಸರ್ ಎಂ.ಎ. ಕೃಷ್ಣರಾವ್‌, ಮೀರ್ ಹಂಜಾ ಹುರ್ಸೇ, ದಿವಾಣ್‌ ಬಹದೂರ್ ಕೆ. ರಾಮಸ್ವಾಮಿ, ಎ.ವಿ. ಸುಬ್ರಹ್ಮಣ್ಯರಾಜೇ ಅರಸ್‌, ರಾವ್‌ ಬಹದೂರ್ ಎಂ. ರಾಮಸ್ವಾಮಿ, ಬಿ.ಟಿ. ಕೇಶವಯ್ಯಂಗಾರ್, ಜಿ.ವಿ. ಕರ್ವೆ, ಎಸ್‌.ಜಿ.ಶಾಸ್ತ್ರಿ, ಎಂ. ಶಾಮಣ್ಣ, ವಿ.ವೇದ ವ್ಯಾಸಚಾರ್ಯ, ಎಂ.ಪಿ. ಸೋಮಶೇಖರರಾವ್‌, ದಿವಾನ್‌ ಬಹದೂರ್ ಪಿ. ಮಹದೇವಯ್ಯ, ಕೆ. ಕೃಷ್ಣಯ್ಯಂಗಾರ್. ಹಂಜಾ ಹುಸೇನರಿಗೆ ಬೇರೆ ಯಾವ ಸ್ಕೂಲಿನಲ್ಲಿಯೂ ಓದಲು ಅವಕಾಶ ದೊರೆಯದಿರಲು, ಎಚ್‌. ಕೃಷ್ಣರಾಯರ ಶಿಫಾರಸಿನ ಮೇಲೆ ಇವರನ್ನು ಈ ಸ್ಕೂಲಿಗೆ ಸೇರಿಸಲಾಯಿತು.

ವೆಂಕಟಕೃಷ್ಣಯ್ಯ ಈ ಸ್ಕೂಲಿನಲ್ಲಿ ಉಪಾಧ್ಯಾಯರಾಗಿಯೂ, ಮುಖ್ಯೋಪಾಧ್ಯಾಯರಾಗಿಯೂ ಇದ್ದ ಕಾಲದಲ್ಲಿ ಏನಿಲ್ಲವೆಂದರೂ ೨೦,೦೦೦ ವಿದ್ಯಾರ್ಥಿಗಳಿಗೆ ಅವರು ಪಾಠ ಹೇಳಿದ್ದಾರೆ. ಎಸ್‌.ಜಿ. ಶಾಸ್ತ್ರಿಗಳು ಹೇಳಿರುವಂತೆ,

ಮುನೀನಾಂ ದಶಸಾಹಸ್ರಂ ಯೋsನ್ನದಾನಾದಿಪೋಷಣಾತ್‌ |
ಅಧ್ಯಾಪಯತಿ ವಿಪ್ರರ್ಷಿಃ ಅಸೌ ಕುಲಪತಿಃಸ್ಮೃತಃ ||

ವೆಂಕಟಕೃಷ್ಣಯ್ಯನವರನ್ನು ಇಂಗ್ಲೆಂಡಿನ ಪ್ರಸಿದ್ಧ ವಿದ್ಯಾ ಸಂಸ್ಥೆಗಳ ಹೆಡ್ಮಾಸ್ಟರುಗಳಿಗೆ ಹೋಲಿಸಬಹುದು: ರಗ್ಬಿಯ ಡಾ. ಆರ್ನಲ್ಡ್‌ ಎಂಬ ಪ್ರಸಿದ್ಧ ಆಂಗ್ಲ ಹೆಡ್ಮಾಸ್ಟರಂತೆ; ತಮಿಳು ನಾಡಿನ ಅಪ್ಪಾ ಶಾಸ್ತ್ರಿಗಳಂತೆ.

ಅವರನ್ನು ನಮ್ಮ ಪ್ರಾಚೀನ ವಿದ್ಯಾ ಸಂಸ್ಥೆಗಳ ಸ್ಥಾಪಕರೂ, ಮುಖ್ಯಸ್ಥರೂ ಆದ ಮಹರ್ಷಿಗಳಿಗೆ ಹೋಲಿಸಬಹುದು. ತಮ್ಮ ಕೈ ಕೆಳಗೆ ಬಂದ ವಿದ್ಯಾರ್ಥಿಗಳ ದೇಹ, ಮನಸ್ಸು, ಬುದ್ಧಿ, ಆತ್ಮ ಎಲ್ಲವನ್ನೂ ಹದಗೊಳಿಸಿ, ಅವರು ಪರೀಕ್ಷೆಗಳಲ್ಲಿ ಯಶಸ್ವಿಯಾಗುವುದಲ್ಲದೆ, ಜೀವನದಲ್ಲಿಯೂ ಯಶಸ್ವಿಯಾಗುವಂತೆ ಬೋಧಿಸುತ್ತಿದ್ದರು. ಅವರ ದೃಷ್ಟಿಯಲ್ಲಿದ್ದುದು ಆಯಾಯಾ ದಿನದ ಪಾಠ ಮಾತ್ರವಲ್ಲ; ವಿದ್ಯಾರ್ಥಿಯ ನಡೆ, ನುಡಿ, ಶೀಲ, ಕ್ರಿಯಾ ಸಾಮರ್ಥ್ಯ, ಜೀವನ ಉದ್ದೇಶ, ಇವೆಲ್ಲವೂ ಇದ್ದುವು. ಆದುದರಿಂದ ವಿದ್ಯಾರ್ಥಿಗಳಿಗೆ ಇಡೀ ಜೀವನವೆಂಬ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ಪಾಠ ಹೇಳಿಕೊಡುತ್ತಿದ್ದರು.

ವಿದ್ಯಾರ್ಥಿ ಪಾಠವನ್ನು ಗಟ್ಟಿಮಾಡುವುದಲ್ಲದೆ, ಕಾಲಕ್ಕೆ ಸರಿಯಾಗಿ ಸ್ಕೂಲಿಗೆ ಬರಬೇಕು, ಉಪಾಧ್ಯಾಯರಿಗೂ ಇತರ ವಿದ್ಯಾರ್ಥಿಗಳಿಗೂ ಮರ್ಯಾದೆ ತೋರಿಸಬೇಕು, ಇತರರೊಡನೆ ಸಹವಾಸದಿಂದ ಬಾಳುವುದನ್ನು ಕಲಿಯಬೇಕು.

ವಿದ್ಯಾರ್ಥಿಗಳಿಗೆ ಇವರೇ ತಂದೆಯಂತಿದ್ದುಕೊಂಡು, ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು. ಸಾಧ್ಯವಾದರೆ ಅವರು ಕೊಡಬೇಕಾಗಿದ್ದ ಶುಲ್ಕವನ್ನು ಮಾಫಿ ಮಾಡುತ್ತಿದ್ದರು. ಯಾರಿಗೂ ಇವರ ಸ್ಕೂಲಿನಲ್ಲಿ ವಿದ್ಯೆ ಇಲ್ಲವೆಂದು ಹೇಳುತ್ತಿರಲಿಲ್ಲ. ಬುದ್ಧಿವಂತರಾದ ವಿದ್ಯಾರ್ಥಿಗಳಿಗೆ ಮಾತ್ರವೇ ಅಲ್ಲದೆ, ದಡ್ಡರಾದ ವಿದ್ಯಾರ್ಥಿಗಳಿಗೂ ಇವರ ಸ್ಕೂಲಿನಲ್ಲಿ ಪ್ರವೇಶವಿತ್ತು. ಬುದ್ಧಿವಂತರನ್ನು ಮಾತ್ರವೇ ಅಲ್ಲದೆ ದಡ್ಡರನ್ನೂ ಮುಂದಕ್ಕೆ ತರುವುದು ವಿದ್ಯಾ ಸಂಸ್ಥೆಗಳ ಕರ್ತವ್ಯವೆಂದು ಅವರು ತಿಳಿದಿದ್ದರುಇ. ಮರಿಮಲ್ಲಪ್ಪ ಸ್ಕೂಲಿನಲ್ಲಿ ಅನೇಕ ಮಂದಬುದ್ಧಿಯವರೂ ವಿದ್ಯಾಭ್ಯಾಸ ಮಾಡಿದ್ದಾರೆ. ಅವರು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಲು ಅಸಮರ್ಥರಾದರೂ, ಸ್ಕೂಲು ಬಿಟ್ಟ ಮೇಲೆ ಕೆಲವು ಖಾಸಗೀ ಉದ್ಯೋಗಗಳನ್ನು ಪ್ರವೇಶಿಸಿ ಬಹಳ ಮುಂದಕ್ಕೆ ಬಂದಿದ್ದಾರೆ; ವ್ಯಾಪಾರದಲ್ಲಿ ಲಕ್ಷಾಧಿಪತಿಗಳಾಗಿದ್ದಾರೆ.

ಆಗಿನ ಕಾಲದಲ್ಲಿ ಇಂಗ್ಲಿಷ್‌ ವಿದ್ಯಾಭ್ಯಾಸದಲ್ಲಿ ಬಹಳ ಪ್ರಾಧಾನ್ಯತೆಯಿತ್ತು. ಆದುದರಿಂದ ವೆಂಕಟಕೃಷ್ಣಯ್ಯ ಇಂಗ್ಲಿಷನ್ನು ಪ್ರೈಮರಿ ಕ್ಲಾಸಿನಲ್ಲಿಯೇ ಕಲಿಸಲು ಆರಂಭಿಸಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ಈ ರೀತಿಯ ಆಂಗ್ಲಭಾಷಾ ಪ್ರಧಾನ ವಿದ್ಯಾಭ್ಯಾಸ ಪದ್ಧತಿ ೧೯ನೇ ಶತಮಾನದ ಅಂತ್ಯ ಮತ್ತು ೨೦ನೇ ಶತಮಾನದ ಎರಡು ದಶಕಗಳವರೆಗೂ ಇತ್ತು. ಆಮೇಲೆ ಇಂಗ್ಲಿಷ್‌ ಭಾಷೆಯ ಪ್ರಾಬಲ್ಯವನ್ನು ಕಡಿಮೆ ಮಾಡಿ ದೇಶ ಭಾಷೆಗಳ ಸಂಪತ್ತನ್ನು ಹೆಚ್ಚಿಸಬೇಕೆಂದು ವಿದ್ಯಾಭಿಮಾನಿಗಳು ಪ್ರಯತ್ನಿಸಿದರು.

ವೆಂಕಟಕೃಷ್ಣಯ್ಯನವರೇ ಅನೇಕ ಮೇಲಿನ ತರಗತಿಗಳಿಗೆ ಇಂಗ್ಲಿಷ್‌ ಪೊಯೆಟ್ರಿ (ಪದ್ಯ) ಮತ್ತು ಪ್ರೋಸನ್ನು (ಗದ್ಯ) ಹೇಳಿಕೊಡುತ್ತಿದ್ದರು. ಅನ್ಯ ಭಾಷೆಯಾದ ಇಂಗ್ಲಿಷನ್ನು ಚೆನ್ನಾಗಿ ಕಲಿಯಬೇಕಾದರೆ ಬಹಳ ಶ್ರಮ ಪಡಬೇಕು ಎಂಬುದು ಅವರಿಗೆ ತಿಳಿದಿತ್ತು. ಅವರು ವಿದ್ಯಾರ್ಥಿಗಳಿಗೆ ಒಳ್ಳೇ ಇಂಗ್ಲಿಷ್‌ ಪೊಯೆಟ್ರಿಯನ್ನೂ ಪ್ರೋಸನ್ನೂ, ಅವುಗಳ ಅರ್ಥ ತಿಳಿದುಕೊಂಡು, ಅಭಿನಯ ಪೂರ್ವಕವಾಗಿ, ಬಾಯಿ ಪಾಠ ಮಾಡಬೇಕೆಂದು ಹೇಳುತ್ತಿದ್ದರು. ಪ್ರತಿ ನಿತ್ಯವೂ ಹೀಗೆ ಬಾಯಿ ಪಾಠ ಮಾಡಿಸುತ್ತಿದ್ದರು. ೫,೦೦೦-೬,೦೦೦ ಸಾಲು ಇಂಗ್ಲಿಷ್‌ ಪೊಯಿಟ್ರಿಯನ್ನೋ, ಪ್ರೋಸನ್ನೋ ಅರ್ಥ ತಿಳಿದುಕೊಂಡು ಚೆನ್ನಾಗಿ ಬಾಯಿಪಾಠ ಮಾಡಿದರೆ, ಇಂಗ್ಲಿಷ್‌ ಚೆನ್ನಾಗಿ ಓದಲು ಬರೆಯಲು ಬರುತ್ತದೆ ಎಂದು ಅವರು ಆಗಾಗ ಹೇಳುತ್ತಿದ್ದರು.

ಅವರು ಸ್ವತಃ ಎಷ್ಟೋ ಪದ್ಯಗಳನ್ನು ಬಾಯಿ ಪಾಠ ಮಾಡಿದ್ದರು. ಅನ್ಯ ಭಾಷೆಯಾದ ಇಂಗ್ಲಿಷನ್ನು ಚೆನ್ನಾಗಿ ಬರೆಯಲು ಬರಬೇಕಾದರೆ ಇಂಗ್ಲಿಷ್‌ ಶಬ್ದ ಸಂಪತ್ತು ಚೆನ್ನಾಗಿ ಇರಬೇಕೆಂದು ಹೇಳುತ್ತಿದ್ದರು. ಆರ್ನಡೇಲ್‌ ಡಿಕ್ಷ್‌ನರಿಯಲ್ಲಿ ಬಹು ಭಾಗವನ್ನು ಅವರು ಬಾಯಿಪಾಠ ಮಾಡಿದ್ದರೆಂದು ಅವರ ಪ್ರಿಯ ಶಿಷ್ಯರನೇಕರು ಹೇಳುತ್ತಿದ್ದರು. ಅವರು ಯಾವಾಗಲೂ ಆರ್ನಡೇಲ್‌ ಡಿಕ್ಷ್‌ನರಿಯನ್ನು ಕಂಕುಳಲ್ಲಿ ಇಟ್ಟು ಕೊಂಡೇ ತರಗತಿಗಳಿಗೆ ಬರುತ್ತಿದ್ದರು. ಇಂಗ್ಲಿಷ್‌ ಪದಗಳ ಉಚ್ಚಾರವನ್ನೂ ಅವರು ಡಿಕ್ಷ್‌ನರಿ ಓದಿ ಹೇಳುತ್ತಿದ್ದರು. ವ್ಯಾಕರಣ ಶುದ್ಧವಾಗಿ ತಪ್ಪಿಲ್ಲದೆ ಇಂಗ್ಲಿಷ್‌ ಬರೆಯುವುದನ್ನು ಅವರು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದರು. ಇಂಗ್ಲಿಷ್‌ ಓದುವಾಗ ಪದಗಳ ಉಚ್ಚಾರ ಸರಿಯಾಗಿರಬೇಕು, ಬರೆಯುವಾಗ ಪದಗಳ ಸ್ಪೆಲಿಂಗ್‌ (ಕಾಗುಣಿತ) ತಪ್ಪಿಲ್ಲದಿರಬೇಕು ಎಂಬುದು ಅವರ ದೃಢ ಅಭಿಪ್ರಾಯ. ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮಾತ್ರ ತೇರ್ಗಡೆ ಹೊಂದಿದ್ದರೂ, ಯಾವ ಎಂ.ಎ. ಪದವೀಧರನಾಗಲೀ ಇವರನ್ನು ಸ್ವಚ್ಛವಾಗಿ ತಪ್ಪಿಲ್ಲದೆ ಇಂಗ್ಲಿಷ್‌ ಬರೆಯುತ್ತಿರಲಿಲ್ಲ ಮತ್ತು ಮಾತನಾಡುತ್ತಿರಲಿಲ್ಲ. ಇಂಗ್ಲಿಷ್‌ ಈಡಿಯಂಗಳನ್ನು ಅವರು ಬಹಳ ಚೆನ್ನಾಗಿ ಅಭ್ಯಾಸ ಮಾಡಿದ್ದರು. ಅವರ ಇಂಗ್ಲಿಷ್‌ ಭಾಷಾಜ್ಞಾನ ಉನ್ನತ ಮಟ್ಟದ್ದಾಗಿತ್ತು. ಅವರು ಅಲಂಕಾರಿಕ ಭಾಷೆ ಬರೆಯುತ್ತಿರಲಿಲ್ಲ. ಸರಳವಾದ ನೇರವಾದ ಶೈಲಿ ಅವರದು. ಅವರು ಸ್ಕೂಲಿನಲ್ಲಿ ಇಂಗ್ಲಿಷ್‌ ಪಾಠ ಹೇಳಿಕೊಡುತ್ತಿದ್ದುದಲ್ಲದೆ, ಇಂಗ್ಲಿಷ್‌ ಪತ್ರಿಕೆಗಳನ್ನು ನಡೆಸಿ ಅವುಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು, ಮತ್ತು ಪ್ರಜಾ ಪ್ರತಿನಿಧಿ ಸಭೆ ಮತ್ತು ನ್ಯಾಯವಿಧಾಯಕ ಸಭೆಯಲ್ಲಿ ಅವಶ್ಯಕ ಬಿದ್ದಾಗ ಇಂಗ್ಲಿಷಿನಲ್ಲಿಯೇ ಚೆನ್ನಾಗಿ ಭಾಷಣ ಮಾಡುತ್ತಿದ್ದರು. ಸಾರ್ವಜನಿಕ ಸಭೆಗಳಲ್ಲಿಯೂ ಅವರು ಅವಶ್ಯಕವಿದ್ದಾಗ ಇಂಗ್ಲಿಷಿನಲ್ಲೇ ವ್ಯಾಖ್ಯಾನ ಮಾಡುತ್ತಿದ್ದರು.

ವೆಂಕಟಕೃಷ್ಣಯ್ಯನವರು ನಮ್ಮ ದೇಶಕ್ಕೆ ಹೊಸ ಜ್ಞಾನವನ್ನು ಕೊಡಬೇಕಾದರೆ ಇಂಗ್ಲಿಷ್‌ ತಿಳಿದವರು ಹೆಚ್ಚಬೇಕು ಮತ್ತು ಇಂಗ್ಲಿಷ್‌ ಗ್ರಂಥಗಳಿಂದ ಅನೇಕ ವಿಷಯಗಳನ್ನು ಕನ್ನಡದಲ್ಲಿ ಅನುವಾದ ಮಾಡಿ ಜನತೆಯಲ್ಲಿ ಪ್ರಚಾರ ಮಾಡಬೇಕು ಎಂದು ಹೇಳುತ್ತಿದ್ದರು. ನಮ್ಮ ದೇಶದಲ್ಲಿ ಇರುವ ಸಂಸ್ಕೃತ ವಿದ್ಯೆ ಅಪಾರವಾದುದು. ಅದನ್ನು ಜನರಿಗೆ ತಿಳಿಸಲು ಬೇಕಾದಷ್ಟು ಪುಸ್ತಕಗಳು ಆಗಲೇ ಪ್ರಕಟವಾಗಿವೆ; ಈಗ ನಮಗೆ ಬಹಳವಾಗಿ ಬೇಕಾಗಿರುವುದು ಪಾಶ್ಚಿಮಾತ್ಯ ವಿದ್ಯೆ; ನಾವು ಇನ್ನು ಮುಂದೆ ಹೆಚ್ಚು ಹೆಚ್ಚಾಗಿ ಪಾಶ್ಚಿಮಾತ್ಯ ಗ್ರಂಥಗಳನ್ನು ಕನ್ನಡದಲ್ಲಿ ಅನುವಾದ ಮಾಡಿ ಪ್ರಚಾರ ಮಾಡಬೇಕು ಎಂದು ಅವರು ಹೇಳುತ್ತಿದ್ದರು. ಆದುದರಿಂದ ಅವರು ತರಗತಿಯಲ್ಲಿ ಪಾಠ ಹೇಳುವಾಗ ಪಾಶ್ಚಿಮಾತ್ಯ ಗ್ರಂಥಗಳ ವಿಷಯವನ್ನೇ ಹೆಚ್ಚಾಗಿ ತಿಳಿಸುತ್ತಿದ್ದರು. ನಮ್ಮ ದೇಶದ ಪುರಾಣಗಳ ವಿಷಯವನ್ನು ಅವರು ಹೆಚ್ಚಾಗಿ ಪ್ರಸ್ತಾಪಿಸುತ್ತಿರಲಿಲ್ಲ. ಅವರ ಪತ್ರಿಕೆಗಳಲ್ಲಿಯೂ ಹಾಗೆಯೇ ಪಾಶ್ಚಿಮಾತ್ಯ ವಿಜ್ಞಾನ, ಇತಿಹಾಸ , ಅರ್ಥಶಾಸ್ತ್ರ, ಮಹಾ ಪುರುಷರ ಜೀವನ ಚರಿತ್ರೆ ಮುಂತಾದ ವಿಷಯಗಳನ್ನು ಪ್ರಾಮುಖ್ಯವಾಗಿ ತಿಳಿಸುತ್ತಿದ್ದರು.

ಈ ರೀತಿ ಮರಿಮಲ್ಲಪ್ಪ ಸ್ಕೂಲೆಂದರೆ ಇಂಗ್ಲಿಷಿಗೆ ಪ್ರಸಿದ್ಧಿಯಾದ ಸ್ಕೂಲಾಯಿತು. ಇದಕ್ಕಾಗಿ ಅವರು ಸ್ಕೂಲಿನಲ್ಲಿ ಒಂದು ವಾಚನಾಲಯವನ್ನೂ ಗ್ರಂಥಾಲಯವನ್ನೂ ಸ್ಥಾಪಿಸಿ, ಅವುಗಳಲ್ಲಿ ಬೇಕಾದಷ್ಟು ಇಂಗ್ಲೀಷ್‌ ಪತ್ರಿಕೆಗಳನ್ನೂ, ಇಂಗ್ಲಿಷ್‌ ಗ್ರಂಥಗ ಳನ್ನೂ ಶೇಖರಿಸಿದ್ದರು. ಯಾವ ಕಾಲೇಜಿನಲ್ಲಿಯೂ ಇಂತಹ ವಾಚನಾಲಯವಾಗಲಿ ಅಥವಾ ಗ್ರಂಥಾಲಯವಾಗಲಿ ಇರಲಿಲ್ಲ. ಆಂಗ್ಲ ಪ್ರಸಿದ್ಧ ಗ್ರಂಥಕರ್ತರ ಕೃತಿಗಳೆಲ್ಲವೂ ಇಲ್ಲಿ ಇದ್ದವು. ‘ಹಿಸ್ಟೋರಿಯನ್ಸ್‌ ಹಿಸ್ಟರಿ ಆಫ್‌ ದಿ ವರ್ಲ್ಡ್’ ಎಂಬ ಇತಿಹಾಸ ಗ್ರಂಥ, ಎನ್‌ಸೈಕ್ಲೋಪಿಡಿಯ ಕೂಡ ಗ್ರಂಥಾಲಯದಲ್ಲಿ ಇತ್ತು. ‘ಸೈಂಟಿಫಿಕ್‌ ಅಮೆರಿಕನ್’ ಎಂಬ ವಿಜ್ಞಾಣದ ಪತ್ರಿಕೆಯೂ ವಾಚನಾಲಯಕ್ಕೆ ಬರುತ್ತಿತ್ತು. ಇದರಿಂದಲೇ ವೆಂಕಟಕೃಷ್ಣಯ್ಯನವರು ಎಷ್ಟು ಪ್ರಗತಿಗಾಮಿಗಳಾಗಿದ್ದರೆಂಬುದು ಗೊತ್ತಾಗುತ್ತದೆ.

ಕನ್ನಡ ‘ಪ್ರಹಸನ ಪಿತಾಮಹ’ ಎಂದು ಖ್ಯಾತಿ ಗಳಿಸಿದ ಟಿ.ಪಿ. ಕೈಲಾಸಂ ಅವರ ಶಿಷ್ಯರು. ಮಿಡ್ಲ್ ಸ್ಕೂಲ್‌ ವಿದ್ಯಾಭ್ಯಾಸವನ್ನು ಅವರ ಸ್ಕೂಲಿನಲ್ಲಿ ಮುಗಿಸಿದರೆಂದು ತಿಳಿದುಬರುತ್ತದೆ. ಕೈಲಾಸಂ ಕನ್ನಡದಲ್ಲಿಯೇ ಅಲ್ಲದೆ ಇಂಗ್ಲಿಷಿನಲ್ಲಿಯೂ ನಾಟಕಗಳನ್ನು ಬರೆದಿದ್ದಾರೆ. ಇಂಗ್ಲಿಷಿನಲ್ಲಿ ಪದ್ಯಗಳನ್ನು ಬರೆದಿದ್ದಾರೆ. ಅವರ ಇಂಗ್ಲಿಷ್‌ ಜ್ಞಾನ ಶ್ರೇಷ್ಠತರವಾದುದು. ಅವರು ಒಂದು ದಿವಸ ವೆಂಕಟಕೃಷ್ಣಯ್ಯನವರ ಬಳಿಗೆ ಬಂದು, ನಮಸ್ಕರಿಸಿ, ತಮ್ಮ ಇಂಗ್ಲೆಂಡಿನ ವಿದ್ಯಾಭ್ಯಾಸದ ಅನುಭವಗಳನ್ನೂ, ಅಲ್ಲಿನ ನಾಗರಿಕತೆ ಮತ್ತು ಜನಜೀವನದ ವಿಷಯಗಳನ್ನೂ ತಿಳಿಸಿದರು. ಹಾಗೂ ತಮ್ಮ ಸ್ಕೂಲಿನ ದಿನಗಳನ್ನು ನೆನಪಿಗೆ ತಂದುಕೊಂಡರು. ವೆಂಕಟಕೃಷ್ಣಯ್ಯನವರು ಹೇಳಿಕೊಟ್ಟ ಶುದ್ಧ ವ್ಯಾಕರಣಬದ್ಧ ಇಂಗ್ಲಿಷ್‌ ಭಾಷೆ ತಮಗೆ ಬಹಳ ಸಹಾಯ ಮಾಡಿತು ಎಂದು ತಿಳಿಸಿದರು.

ಈಗ ಬದುಕಿದ್ದಿದ್ದರೆ, ಇಂಗ್ಲಿಷ್‌ ಭಾಷೆಯನ್ನು ನಮ್ಮ ವಿದ್ಯಾಭ್ಯಾಸ ವ್ಯವಸ್ಥೆಯಿಂದ ತೆಗೆದು ಹಾಕಬಾರದು ಎಂದು ವಾದಿಸುತ್ತಿದ್ದರೇನೋ!

ವಯಸ್ಸಾಗಿದ್ದ ವೆಂಕಟಕೃಷ್ಣಯ್ಯನವರನ್ನು ವಿದ್ಯಾರ್ಥಿಗಳು “ತಾತಯ್ಯ” ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಸ್ಕೂಲು ಆಗಿನ ಕಾಲದಲ್ಲಿ ಬೆಳಿಗ್ಗೆ ೧೧ರಿಂದ ಸಾಯಂಕಾಲ ೫ ಗಂಟೆಯವರೆಗೂ ನಡೆಯುತ್ತಿತ್ತು: ೪೦ ನಿಮಿಷಗಳ ೬ ಪಿರಿಯೆಡ್‌ಗಳು; ಮಧ್ಯೆ ಒಂದು ಗಂಟೆಯ ವಿರಾಮ. ಎಲ್ಲ ಉಪಾಧ್ಯಾಯರೂ ವಿದ್ಯಾರ್ಥಿಗಳೂ ಸ್ಕೂಲಿಗೆ ಕಾಲಕ್ಕೆ ಸರಿಯಾಗಿ ಬರಬೇಕು, ತಡವಾಗಿ ಬರಬಾರದು, ಎಂಬುದು ಅವರು ಮಾಡಿದ ನಿಯಮ. ಆದುದರಿಂದ ಉಪಾಧ್ಯಾಯರೂ ವಿದ್ಯಾರ್ಥಿಗಳೂ ೫-೧೦ ನಿಮಿಷ ಮುಂಚಿತವಾಗಿಯೇ ಸ್ಕೂಲಿಗೆ ಬರುತ್ತಿದ್ದರು. ಅವರು ಕೂಡ ಕಾಲು ಗಂಟೆ , ಅರ್ಧ ಗಂಟೆ ಮುಂಚಿತವಾಗಿ ಬಂದು, ಸ್ಕೂಲಿನ ಆಡಳಿತ ವಿಷಯಗಳನ್ನು ಪರಿಶೀಲಿಸುತ್ತಿದ್ದರು. ೧೧ ಗಂಠೆ ಹೊಡೆದ ಕೂಡಲೆ ಪ್ರತಿಯೊಂದು ತರಗತಿಗೂ ಹೋಗಿ ಉಪಾಧ್ಯಾಯರೂ ವಿದ್ಯಾರ್ಥಿಗಳೂ ಕಾಲಕ್ಕೆ ಸರಿಯಾಗಿ ಬಂದಿರುವರೇ ಇಲ್ಲವೆ ಎಂಬುದನ್ನು ತನಿಖೆ ಮಾಡುತ್ತಿದ್ದರು.  ಯಾರಾದರೂ ಉಪಾಧ್ಯಾಯರು ತಡವಾಗಿ ಬಂದರೆ, ಅವರನ್ನು ತಮ್ಮ ಕೊಠಡಿಗೆ ಕರೆಸಿಕೊಂಡು ವಾಗ್ದಂಡನೆ ಮಾಡುತ್ತಿದ್ದರು. ವಿದ್ಯಾರ್ಥಿಗಳು ತಡವಾಗಿ ಬಂದರೆ ಅವರ ಮೋಟು ಬೆತ್ತದಲ್ಲಿ ಒಂದು ಏಟು ತಿನ್ನಬೇಕಾಗಿತ್ತು. ಏಟು ಬಿದ್ದಾಗ ಹುಡುಗ ಅತ್ತರೆ ಅವನಿಗೆ ಸಮಾಧಾನ ಹೇಳಿ, ಪೆಪ್ಪರ್ ಮೆಂಟ್‌ ಕೊಟ್ಟು ಕಳುಹಿಸುತ್ತಿದ್ದರು. ಎಷ್ಟೋ ಹುಡುಗರು  ಈ ಪೆಪ್ಪರ್ ಮೆಂಟಿನ ಆಶೆಗಾಗಿ ಅವರ ಬೆತ್ತದಿಂದ ಏಟು ತಿಂದದ್ದೂ ಉಂಟು! ಅವರು ವಿದ್ಯಾರ್ಥಿಗಳ ಮುಖ ಮತ್ತು ಚಟುವಟಿಕೆ ನೋಡಿ ಅವರ ಜೀವನದ ಭವಿಷ್ಯವನ್ನು ಗುರ್ತಿಸುತ್ತಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮುಂದೆ ಇವನು ಪ್ರಖ್ಯಾತನಾಗುವನು ಎಂದು ಹೇಳುತ್ತಿದ್ದರು. ಅವರು ಹೇಳಿದಂತೆಯೇ ವಿದ್ಯಾರ್ಥಿಗಳು ಪ್ರಖ್ಯಾತಿಗೆ ಬಂದ ಅನೇಕ ನಿದರ್ಶನಗಳಿವೆ.

ಅವರು ತರಗತಿಯಲ್ಲಿ ಇಂಗ್ಲಿಷ್‌ ಪದ್ಯ ಪಾಠ ಹೇಳಿಕೊಡುತ್ತಿದ್ದಾಗ, ಮುಂದಿನ ಪಾಠ ಮಾಡುವ ಮುಂಚೆ ಹಿಂದಿನ ಪಾಠವನ್ನು ಕೇಳುತ್ತಿದ್ದರು. ಯಾವನಾದರೂ ವಿದ್ಯಾರ್ಥಿ ಬಾಯಿಪಾಠ ತಪ್ಪಿದರೆ ಅವರ ಬೆತ್ತದಿಂದ ಒಂದು ಏಟು ತಿನ್ನಬೇಕಾಗುತ್ತಿತ್ತು. ಒಂದೊಂದು ದಿವಸ ಹಿಂದಿನ ಪಾಠವನ್ನು ಗಟ್ಟಿ ಮಾಡಿಕೊಂಡು ಬರಲು ಆಗದಿದ್ದಾಗ ಕೆಲವು ಹುಡುಗರು ಹೆಡ್ಮಾಸ್ಟರು ತರಗತಿಗೆ ಬರುವ ಮುನ್ನವೇ ಅವರನ್ನು ಕರೆದುಕೊಂಡು ಬರುವ ಹಾಗೆ ಮಾಡಿ, ಕೂಡಲೇ ಹೊಸ ಪಾಠ ಹೇಳುವುದಕ್ಕೆ ಪುಸಲಾಯಿಸುತ್ತಿದ್ದರು; ಅಂತೂ ಆ ದಿವಸ ಬಾಯಿಪಾಠ ಮಾಡದ ವಿದ್ಯಾರ್ಥಿಗಳಿಗೆ ಏಟು ತಪ್ಪುತ್ತಿತ್ತು!

ಅವರು ಪಾಠ ಹೇಳುವ ರೀತಿ ಬಹಳ ಸ್ವಾರಸ್ಯವಾಗಿತ್ತು. ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರವೇ ಅಲ್ಲದೆ, ಹೇಳಿದ ವಿಷಯ ವಿದ್ಯಾರ್ಥಿಗಳ ಮನಸ್ಸಿಗೆ ಚೆನ್ನಾಗಿ ನಾಟುವಂತೆ ಉದಾಹರಣೆಗಳನ್ನು ಹೇಳುತ್ತಿದ್ದರು. ಕಥೆಗಳು, ಉಪಕಥೆಗಳು, ಜೀವನ ಚರಿತ್ರೆಗಳು ಇವೆಲ್ಲಾ ಅವರ ಪಾಠಗಳಲ್ಲಿ ಸೇರಿರುತ್ತಿದ್ದುವು. ಮಕ್ಕೀಕಾಮಕ್ಕಿ ಅಂದ ಹಾಗೆ, ಪದಕ್ಕೆ ಅರ್ಥ ಹೇಳಿಕೊಟ್ಟು ಬಿಟ್ಟು ಪಾಠ ಮುಗಿಸುತ್ತಿರಲಿಲ್ಲ. ಆ ಪಾಠದಲ್ಲಿ ಅಡಗಿರುವ ನೀತಿಯೇನು, ಅದರಿಂದ ವಿದ್ಯಾರ್ಥಿಯ ಮುಂದಿನ ಜೀವನಕ್ಕೆ ಏನಾದರೂ ಬೆಳಕಿದೆಯೇ ಎಂಬುದನ್ನು ಶೋಧಿಸಿ, ಹುಡುಗರಿಗೆ ಬೇಸರವಾಗದ ಹಾಗೆ ಪಾಠ ಹೇಳುತ್ತಿದ್ದರು.

ಅವರ ಮನಸ್ಸು ಬಹಳ ಸಂತೋಷದಿಂದ ಇದ್ದ ದಿವಸ ೪೦ ನಿಮಿಷ ಅವಧಿ ನಾಲ್ಕು ನಿಮಿಷಗಳಂತೆ ಕಳೆದು ಹೋಗುತ್ತಿತ್ತು. ಪಾಠ ಮುಗಿಯುವ ಹೊತ್ತಿಗೆ ವಿದ್ಯಾರ್ಥಿಯ ಮೆದುಳಿಗೂ ಪುಷ್ಟಿ, ಹೃದಯಕ್ಕೂ ತುಷ್ಟಿ. ವೆಂಕಟಕೃಷ್ಣಯ್ಯನವರನ್ನು ಹುಟ್ಟು ಉಪಾಧ್ಯಾಯ (born teacher) ಎಂದು ಹೇಳಬಹುದು. ಅವರ ಕೈಕೆಳಗೆ ಎರಡು ಮೂರು ವರ್ಷ ಓದಿದ ವಿದ್ಯಾರ್ಥಿಗಳು ನೂರಾರು ಜೀವನ ಚರಿತ್ರೆಗಳನ್ನು ಓದಿದಷ್ಟು ಪರಿಣತರಾಗುತ್ತಿದ್ದರು. ದೇಶದ ಮತ್ತು ಪರದೇಶದ ಪ್ರಖ್ಯಾತರ ಜೀವನ ಚರಿತ್ರೆಗಳೆಲ್ಲಾ ಅವರ ಪಾಠಗಳಲ್ಲಿ ಅಡಗಿರುತ್ತಿದ್ದುವು. ಸ್ವಾತಂತ್ರ್ಯ ವೀರರಾದ ರಾಣಾ ಪ್ರತಾಪ, ಶಿವಾಜಿ, ಬಾಲ ಗಂಗಾಧರ ತಿಲಕ್‌, ಗೋಪಾಲ ಕೃಷ್ಣ ಗೋಖಲೆ, ಲಾಲಾ ಲಜಪತ್‌ ರಾಯ್‌, ದಾದಾಭಾಯಿ ನವರೋಜಿ, ಅರವಿಂದ ಘೋಷ್‌, ಮಹಾತ್ಮಾ ಗಾಂಧಿ, ವೀರ ಸಾವರ್ಕರ್ ಮುಂತಾದವರ ಜೀವನ ಚರಿತ್ರೆಯನ್ನು ಅವರ ಬಾಯಿಂದ ಕೇಳಿದವರು ಎಂದೂ ಮರೆಯಲಾರರು. ಈ ವೀರರು ಪಟ್ಟ ಕಷ್ಟ ಪರಂಪರೆಗಳ ವರ್ಣನೆ ಮಾಡುವಾಗ ತಾತಯ್ಯನವರ ಕಣ್ಣಿನಿಂದ ಧಾರಾಕಾರವಾಗಿ ಅಶ್ರು ಸುರಿಯುತ್ತಿತ್ತು.

ಇಷ್ಟೇ ಅಲ್ಲದೆ ಅವರು ದೇಶದ ಪ್ರಖ್ಯಾತ ಸಮಾಜ ಸುಧಾರಕರ ಹಾಗೂ ಉಪಾಧ್ಯಾಯರ ಜೀವನ ಕಥೆಗಳನ್ನೂ ಹೇಳುತ್ತಿದ್ದರು. ಬಂಗಾಳದ ಪ್ರಖ್ಯಾತ ಉಪಾಧ್ಯಾಯರಾದ  ಈಶ್ವರ ಚಂದ್ರ ವಿದ್ಯಾಸಾಗರರ ಬಡತನದ ವಿದ್ಯಾರ್ಥಿ ಜೀವನವನ್ನು ವರ್ಣಿಸುವಾಗಲಂತೂ ಅವರ ಕಂಠ ಬಹಳ ಗದ್ಗದವಾಗುತ್ತಿತ್ತು.

ವಿದೇಶಗಳಲ್ಲಿ ಪ್ರಖ್ಯಾತರಾದವರ ವಿಷಯವನ್ನೂ ಅವರು ತಿಳಿಸುತ್ತಿದ್ದರು. ಮತ ಸ್ವಾತಂತ್ರ್ಯಕ್ಕಾಗಿಯೂ, ದೇಶ ಸ್ವಾತಂತ್ರ್ಯಕ್ಕಾಗಿಯೂ ದಂಗೆ ಎದ್ದವರ ಕಥೆಯನ್ನು ಹೃದಯಂಗಮವಾಗಿ ವಿವರಿಸುತ್ತಿದ್ದರು. ಮಾರ್ಟೀಲೂಥರ್, ಜಾರ್ಜ್ ವಾಷಿಂಗ್‌ಟನ್‌, ಆಲಿವರ್ ಕ್ರಾಮವೆಲ್‌, ಮ್ಯಾಜಿನಿ, ಗ್ಯಾರಿಬಾಲ್ಡಿ, ಬ್ರಾಡ್‌ಲಾ, ಕೀರ್ ಹಾರ್ಡಿ, ಗ್ಲಾಡರ್ಸ್ಟ ಮುಂತಾದವರ ಜೀವನದ ವಿಷಯಗಳನ್ನು ಮನಸ್ಸಿಗೆ ಹತ್ತುವಂತೆ ತಿಳಿಸುತ್ತಿದ್ದರು.

ಅಮೆರಿಕಾದ ಪ್ರಸಿದ್ಧ ವಿಜ್ಞಾನಿಯೂ, ಗ್ರಂಥಕರ್ತನೂ, ರಾಜಕಾರಿಣಿಯೂ ಆದ ಬೆಂಜರ್ಮಿ ಫ್ರಾಂರ್ಕ್ಲಿನ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ಪುನಃಪುನಃ ತಿಳಿಸುತ್ತಿದ್ದರು. ಅವರಿಗೆ ಸೆಲ್ಫ್‌ ಹೆಲ್ಪ್‌ ಅಥವಾ ಸ್ವಪ್ರಯತ್ನದಲ್ಲಿ ಬಹಳ ನಂಬಿಕೆ. ಸ್ವಪ್ರಯತ್ನದಿಂದ ಮೇಲಕ್ಕೆ ಬಂದದ್ದಲ್ಲದೆ, ತನ್ನಲ್ಲಿದ್ದ ದುರ್ಗುಣಗಳನ್ನೆಲ್ಲಾ ನಿಗ್ರಹಿಸಿಕೊಂಡ ಫ್ರಾಂಕ್‌ ಲಿನ್ನಿನ ಉದಾಹರಣೆಯನ್ನು ವಿದ್ಯಾರ್ಥಿಗಳ ಮುಂದೆ ಇಡುತ್ತಿದ್ದರು. ಫ್ರಾಂಕ್‌ಲಿನ್ನಿನ ಡೈರಿಯ ;ವಿಷಯವನ್ನು ಕೂಡ ಅವರು ಬರೆದಿದ್ದಾರೆ.

ಹಳೆಯ ಮೂಢ ನಂಬಿಕೆಗಳನ್ನು ಬಿಡಬೇಕೆಂದು ಅವರು ವಿದ್ಯಾರ್ಥಿಗಳಿಗೆ ಪುನಃ ಪುನಃ ಬೋಧಿಸುತ್ತಿದ್ದರು. ಈ ಸಂಬಂಧವಾಗಿ ಹಾಸ್ಯರಸಭರಿತವಾದ ಅನೇಕ ಕಥೆಗಳನ್ನು ಹೇಳುತ್ತಿದ್ದರು. ಅವರಿಗೆ ವಯಸ್ಸು ಆಗುತ್ತಾಗುತ್ತ ಮನಸ್ಸಿನ ನವೀನತೆ ಕಾಣುತ್ತಿತ್ತು. ಯಾವ ಹೊಸ ವಿಷಯಗಳು ಬರಲಿ, ಅವನ್ನು ವಿದ್ಯಾರ್ಥಿಗಳಂತೆ ಕುತೂಹಲದಿಂದ ತಿಳಿದುಕೊಳ್ಳುತ್ತಿದ್ದರು ಮತ್ತು ಅವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದರು. ವಿಚಾರ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದೂ, ಅವರಿವರು ಹೇಳಿದ್ದನ್ನೆಲ್ಲಾ ಸುಮ್ಮನೆ ನಂಬಬಾರದೆಂದೂ ಹೇಳುತ್ತಿದ್ದರು; ವಿದ್ಯಾರ್ಥಿಗಳು ಸ್ವಾತಂತ್ರ್ಯಪ್ರಿಯತೆ ಮತ್ತು ಅನ್ಯಾಯದ ಪ್ರತಿಭಟನೆಯ ಮನೋಭಾವವನ್ನು ಬಲಗೊಳಿಸಿಕೊಳ್ಳಬೇಕೆಂದು ಪುನಃ ಪುನಃ ಹೇಳುತ್ತಿದ್ದರು.

ಅವರು ಅನೇಕ ಕೆಲಸ ಕಾರ್ಯಗಳನ್ನು ಇಟ್ಟುಕೊಂಡಿದ್ದರು.  ಆದಾಗ್ಯೂ, ಮರಿಮಲ್ಲಪ್ಪ ಸ್ಕೂಲಿನ ಕರ್ತವ್ಯಗಳನ್ನು ಅತ್ಯಂತ ಪ್ರೀತಿಯಿಂದಲೂ ಕರ್ತವ್ಯ ನಿಷ್ಠೆಯಿಂದಲೂ ನಿರ್ವಹಿಸುತ್ತಿದ್ದರು. ಅವತ್ತವತ್ತಿನ ಕೆಲಸವನ್ನು ಅವತ್ತಾವತ್ತೇ ಮುಗಿಸುತ್ತಿದ್ದರು. ಇಂದು ಮಾಡಬೇಕಾದ್ದನ್ನು ನಾಳೆಗೆ ಹಾಕುತ್ತಿರಲಿಲ್ಲ. ಸ್ಕೂಲಿನ ಶಿಸ್ತನ್ನು ಅವರು ಸ್ವತಃ ಪಾಲಿಸುತ್ತಿದ್ದುದಲ್ಲದೆ, ಉಪಾಧ್ಯಾಯರೂ, ವಿದ್ಯಾರ್ಥಿಗಳೂ, ಪಾಲಿಸುವಂತೆ ಮಾಡುತ್ತಿದ್ದರು. ಸ್ಕೂಲಿಗೆ ಬರಬೇಕಾದರೆ ಉಪಾಧ್ಯಾಯರೂ, ವಿದ್ಯಾರ್ಥಿಗಳೂ ಸರಿಯಾದ ಉಡುಪಿನಲ್ಲಿ ಬರಬೇಕು. ಅವರು ಸ್ವತಃ ಲಾಂಗ್‌ ಕೋಟ್‌, ಕಂಕಳ ಸುತ್ತವಲ್ಲಿ, ತಲೆಗೆ ರುಮಾಲು, ಕಾಲಿಗೆ ಪಾಪಾಸು ಹಾಕಿಕೊಂಡು ಬರುತ್ತಿದ್ದರು. ಪಾಪಾಸು ಹೆಡ್ಮಾಸ್ಟರು ಬರುತ್ತಿದ್ದಾರೆಂದು ದೂರದಿಂದಲೇ ತಿಳಿಸುತ್ತಿತ್ತು. ಕನ್ನಡಕವನ್ನು ಹಾಕಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ಅವರು ಧೋತ್ರವನ್ನು ಉಟ್ಟುಕೊಳ್ಳುತ್ತಿದ್ದರು  (ವೃದ್ಧಾಪ್ಯದಲ್ಲಿ ಷರಾಯಿಯನ್ನು ಉಪಯೋಗಿಸುತ್ತಿದ್ದರು). ಚುರುಕಾಗಿ ನಡೆಯುತ್ತಿದ್ದರು. ರುಮಾಲಿಲ್ಲದೆ ಟೋಪಿ ಹಾಕಿಕೊಂಡು ಬಂದ ಉಪಾಧ್ಯಾಯರಿಗೆ ರುಮಾಲು ಹಾಕಿಕೊಳ್ಳಬೇಕೆಂದು ಹೇಳುತ್ತಿದ್ದರು. ವಿದ್ಯಾರ್ಥಿಗಳಂತೂ ಆ ಕಾಲದಲ್ಲಿ ತಲೆಗೆ ಟೋಪಿ ಹಾಕಿಕೊಂಡು ಬರಲೇ ಬೇಕಾಗಿತ್ತು; ಬರಿಯ ತಲೆಯಲ್ಲಿ ಯಾರೂ ಬರವ ಹಾಗಿರಲಿಲ್ಲ.

ಬಡ ವಿದ್ಯಾರ್ಥಿಗಳಿಗೆ ಅವರ ಸ್ಕೂಲಿನಲ್ಲಿ ಆಶ್ರಯ ದೊರೆಯುತ್ತಿದ್ದ ಹಾಗೆ ಇನ್ನು ಯಾವ ಸ್ಕೂಲಿನಲ್ಲಿಯೂ ದೊರೆಯುತ್ತಿರಲಿಲ್ಲ, ನಿಯಮದ ಪ್ರಕಾರದ ನೂರರಲ್ಲಿ ೨೫ ಜನಕ್ಕೆ ಪೂರ್ತಿ ಫೀಜು ಮಾಫಿ ಮಾಡಲು ಅವಕಾಶವಿತ್ತು. ಇದನ್ನು ವಿಭಾಗ ಮಾಡಿ ೧೦೦ರಲ್ಲಿ ೧೦ ಜನಕ್ಕೆ ಪೂರ್ತಿ ಫೀಜನ್ನೂ, ಮುವ್ವತ್ತು ಜನಕ್ಕೆ ಅರ್ಧ ಫೀಜನ್ನೂ ಮಾಫಿ ಮಾಡುತ್ತಿದ್ದರು. ಇದನ್ನು ಪರೀಕ್ಷೆಗಳ ಫಲಿತಾಂಶಗಳ ರ್ಯಾಂಕಿನ ಪ್ರಕಾರ ನಿರ್ಧರಿಸುತ್ತಿದ್ದರು. ಅನಾಥಾಲಯದ ಹುಡುಗರಿಗೂ, ಲಿಂಗಾಯಿತ ವಿದ್ಯಾರ್ಥಿಗಳಿಗೂ ಪೂರ್ತಿ ಫೀಜು ಮಾಫಿ; ಇದಲ್ಲದೆ ಇನ್ನೂ ಯಾರಾದರೂ ಬಾಲಕರು ಅತ್ಯಂತ ಬಡವರೆಂದು ತಿಳಿದರೆ ಹೆಡ್ಮಾಸ್ಟರೇ ತಮ್ಮ ಸ್ವಂತ ಸಂಬಳದಿಂದ ಅವರ ಫೀಜನ್ನು ಕೊಡುತ್ತಿದ್ದರು. ಕೆಲವರಿಗೆ ಪುಸ್ತಕಗಳನ್ನೂ ತೆಗೆಸಿಕೊಡುತ್ತಿದ್ದರು. ಅನೇಕರ ಫೀ ಬಾಕಿಯನ್ನು ವಜಾ ಮಾಡಿಬಿಡುತ್ತಿದ್ದರು.

ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದುದರಿಂದ ವಿಜ್ಞಾನವನ್ನು ಕಲಿಸಬೇಕಾಗಿತ್ತು. ಇದಕ್ಕಾಗಿ ಒಂದು ಸುಸಜ್ಜಿತ ಲೆಬೋರೇಟರಿ ಇತ್ತು. ಇದರಲ್ಲಿ ಭೌತ ಶಾಸ್ತ್ರ ಮತ್ತು ರಾಸಾಯನ ಶಾಸ್ತ್ರ ಕಲಿಸುವುದಕ್ಕೆ ಸಹಾಯಕವಾದ ಯಂತ್ರಗಳೂ, ಸಾಮಾನುಗಳೂ, ಮಾಡೆಲ್‌ಗಳೂ ಸಾಕಾದಷ್ಟಿದ್ದವು.

ವರ್ಷಾಂತ್ಯದಲ್ಲಿ ಪರೀಕ್ಷೆ ನಡೆದು ಮೇಲಿನ ತರಗತಿಗಳಿಗೆ ವಿದ್ಯಾರ್ಥಿಗಳನ್ನು ಹಾಕಬೇಕಾದರೆ, ಈ ಸ್ಕೂಲಿನಲ್ಲಿ ಬಹಳ ಉದಾರ ನೀತಿ. ಎಲ್ಲೋ ಕೆಲವರನ್ನು ಮಾತ್ರ ಹಿಂದಿನ ಕ್ಲಾಸ್‌ನಲ್ಲಿ ಉಳಿಸುತ್ತಿದ್ದರು. ೧೦೦ಕ್ಕೆ ೯೦ ಬಾಲಕರನ್ನು ಮೇಲಿನ ಕ್ಲಾಸಿಗೆ ಹಾಕಿಬಿಡುತ್ತಿದ್ದರು. ಮೆಟ್ರಿಕ್ಯುಲೇಷನ್ ಕ್ಲಾಸ್‌ವರೆಗೂ ಇದು ಸಾಧ್ಯವಾಗಿತ್ತು. ಆಮೇಲೆ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ವಿದ್ಯಾರ್ಥಿ ತೇರ್ಗಡೆಯಾಗಲೇ ಬೇಕಾಗಿತ್ತು. ೧೯೧೩ ರಿಂದ ಮೈಸೂರು ವಿದ್ಯಾ ಇಲಾಖೆಯೇ ಮೆಟ್ರಿಕ್ಯುಲೇಷನ್ಗೆ ಬದಲಾಗಿ ಸ್ಕೂಲ್‌ ಫೈನಲ್‌ ಪರೀಕ್ಷೆಯನ್ನು ನಡೆಸುತ್ತಿತ್ತು. ವಿದ್ಯಾರ್ಥಿಗಳು ಈ ಪಬ್ಲಿಕ್‌ ಪರೀಕ್ಷೆಯಲ್ಲಿಯೂ ತೇರ್ಗಡೆಯಾಗಲೇಬೇಕಾಗಿತ್ತು.

ಈ ಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ಬೌದ್ಧಿಕ ವಿಷಯಗಳನ್ನಲ್ಲದೆ, ಶಾರೀರಕ ಶಿಕ್ಷಣವನ್ನೂ ಕೊಡಲಾಗುತ್ತಿತ್ತು. ಸ್ಕೂಲಿನ ಆವರಣದಲ್ಲಿಯೇ ಒಂದು ಗರಡಿಯಿತ್ತು. ಜಿಮ್ನೇಷಿಯಂ ಇತ್ತು, ಕ್ರಿಕೆಟ್‌ ಮೈದಾನವಿತ್ತು, ಬ್ಯಾಡ್‌ಮಿಂರ್ಟ ಮುಂತಾದವುಗಳಿಗೆಲ್ಲಾ ಏರ್ಪಾಡಿತ್ತು. ಪುಟ್‌ಬಾಲ್‌ ಆಡಲು ಡೆಪ್ಯುಟಿ ಕಮಿಷನರ್ ಕಛೇರಿಯ ಹತ್ತಿರ ಒಂದು ಮೈದಾನವಿತ್ತು. ವಾರ್ಷಿಕೋತ್ಸವ ಸಮಯದಲ್ಲಿ ಅಥ್ಲೆಟಿಕ್ಸ್‌ಗೂ ಅವಕಾಶವಿತ್ತು.

ಈ ಸ್ಕೂಲಿನಲ್ಲಿ ಒಂದೊಂದು ತರಗತಿಯವರೂ ಚರ್ಚಾಕೂಟಗಳನ್ನು ಸ್ಥಾಪಿಸಿಕೊಂಡು ತಮ್ಮ ವಾಕ್‌ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಿದ್ದರು.

ವೆಂಕಟಕೃಷ್ಣಯ್ಯನವರು ಪ್ರಸಿದ್ಧರಾದ ಹೆಡ್ಮಾಸ್ಟರಾಗಿದ್ದುದರಿಂದ, ಈ ಸ್ಕೂಲಿಗೆ ಅನೇಕ ಪ್ರಖ್ಯಾತರನ್ನು ಬರಮಾಡಿಕೊಂಡು, ಅವರಿಗೆ ಸ್ಕೂಲನ್ನು ತೋರಿಸಿ ಅಭಿವೃದ್ಧಿಗಾಗಿ ಅವರ ಸಲಹೆಗಳನ್ನು ಪಡೆಯುತ್ತಿದ್ದರು. ವಿಶ್ವೇಶ್ವರಯ್ಯನವರು ದಿವಾನ್ ಪದವಿ ವಹಿಸಿದ ಮೇಲೆ ಈ ಸ್ಕೂಲಿಗೆ ಬಂದು ಎಲ್ಲ ತರಗತಿಗಳಿಗೂ ಭೇಟಿ ಕೊಟ್ಟು, ವಿದ್ಯಾರ್ಥಿಗಳೊಡನೆ ಮಾತನಾಡಿ, ಈ ಶಾಲೆಯ ಅಭಿವೃದ್ಧಿಗಾಗಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಯುವರಾಜರು ೧೯೧೪ ರಲ್ಲಿ ಈ ಸ್ಕೂಲಿನ ವಾರ್ಷಿಕೋತ್ಸವದಲ್ಲಿ ಅಧ್ಯಕ್ಷತೆ ವಹಿಸಿ, ಈ ಸಂಸ್ಥೆಯ ಅಭಿವೃದ್ಧಿಯನ್ನು ಕುರಿತು ತಮ್ಮ ಸಂತೋಷ ವ್ಯಕ್ತಪಡಿಸಿದರು.

ದಿವಾನ್ ಮಿರ್ಜಾಇಸ್ಮಾಯಿಲರು ಮರಿಮಲ್ಲಪ್ಪ ಸ್ಕೂಲಿನ ಸ್ಥಾಪಕರ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ೧೯೩೮ನೆಯ ಡಿಸಂಬರ್ ೨೦ ರಂದು ಮಾಡಿದ ಭಾಷಣದಲ್ಲಿ ವೆಂಕಟಕೃಷ್ಣಯ್ಯನವರು ಸ್ಕೂಲಿಗೆ ಮಾಡಿದ ಸೇವೆಯನ್ನು ಮುಕ್ತ ಕಂಠದಿಂದ ಹೊಗಳಿದರು.*

ವೆಂಕಟಕೃಷ್ಣಯ್ಯನವರು ಬೇರೆ ವಿದ್ಯಾ ಸಂಸ್ಥೆಗಳ ಕಡೆಗೂ ತಮ್ಮ ಗಮನಕೊಟ್ಟರು. ಬಕ್ಷಿ ನರಸಪ್ಪನವರ ಅಂಗಡಿಗಳ ಮಹಡಿಯ ಮೇಲೆ ಶಾರದಾ ವಿಲಾಸ ಸ್ಕೂಲನ್ನು (ಆಗ ಇದನ್ನು ಜಯಭೇರಿ ಸ್ಕೂಲು ಎಂದು ಕರೆಯುತ್ತಿದ್ದರು). ಮಿಡ್‌ಲ್‌ ಸ್ಕೂಲ್‌ ದರ್ಜೆಯಿಂದ ಹೈ ಸ್ಕೂಲ್‌ ದರ್ಜೆಗೆ ಏರಿಸಿದರು. ಒಳ್ಳೇ ಸಮರ್ಥರಾದ ಉಪಾಧ್ಯಾಯರನ್ನು  ನೇಮಿಸಿ, ಎಸ್‌.ಎಸ್‌.ಎಲ್‌.ಸಿ.  ಪರೀಕ್ಷೆಯಲ್ಲಿ ಈ ಸ್ಕೂಲಿಗೆ ಒಳ್ಳೇ ಫಲಿತಾಂಶ ಬರುವಂತೆ ಮಾಡಿದರು. ಲ್ಯಾರ್ನ್ಸ್‌ಡೌ ಬಿಲ್ಡಿಂಗ್‌ ಮಹಡಿಯ ಮೇಲಿದ್ದ ಈ ಸ್ಕೂಲಿಗೆ ಒಳ್ಳೇ ಕಟ್ಟಡವಿರಲಿಲ್ಲ. ಮೈಸೂರು ಸಿಟಿ ಮುನಿಸಿ ಪಾಲಿಟಿಯ ಸಹಾಯದಿಂದ ಕೃಷ್ಣಮೂರ್ತಿಪುರದಲ್ಲಿ ಇದಕ್ಕೆ ಒಳ್ಳೆಯ ನಿವೇಶನವನ್ನು ದೊರಕಿಸಿ ಸಾರ್ವಜನಿಕರ ಮತ್ತು ಸರ್ಕಾರದ ಸಹಾಯದಿಂದ ಒಂದು ಭವ್ಯವಾದ ಮತ್ತು ವಿಶಾಲವಾದ ಕಟ್ಟಡವನ್ನು ನಿರ್ಮಿಸುವಂತೆ ಮಾಡಿದರು. ಅವರು ಬದುಕಿರುವವರೆಗೂ ಈ ಸ್ಕೂಲಿನ ಸಂಬಂಧವಿಟ್ಟುಕೊಂಡಿದ್ದರು. ಅವರು ಬದುಕಿದ್ದಾಗ ಶಾರದಾ ವಿಲಾಸ ಕಾಲೇಜು, ಲಾ ಕಾಲೇಜು ಇರಲಿಲ್ಲ; ಇವು ಈಚೆಗೆ ಸ್ಥಾಪಿತವಾದವು.

ತಿರುಮಲಾಚಾರ್ಯರಿಂದ ಸ್ಥಾಪಿತವಾದ ಸದ್ವಿದ್ಯಾ ಪಾಠಶಾಲೆಯನ್ನೂ ವೆಂಕಟಕೃಷ್ಣಯ್ಯನವರು ಮುಂದಕ್ಕೆ ತರಲು ಸಹಾಯ ಮಾಡಿದರು. ವೆಂಕಟಕೃಷ್ಣಯ್ಯನವರು ತಮ್ಮ ಕಡೆಯ ಕಾಲದವರಿಗೂ ಇದರ ಮೇಲ್ವಿಚಾರಣೆ ನೋಡುತ್ತಿದ್ದರು.

ಕಾಲದ ಸ್ಥಿತಿ ಬದಲಾವಣೆಯಾಗುತ್ತ, ವಿದ್ಯಾವಂತರು ಸರ್ಕಾರಿ ನೌಕರಿಯ ಮೇಲೆಯೇ ಅವಲಂಬಿಸುವುದು ಸಾಧ್ಯವಾಗಲಿಲ್ಲ. ಸರ್ಕಾರದಲ್ಲಿರುವುದು ಕೆಲವು ನೌಕರಿಗಳು ಮಾತ್ರ. ವಿದ್ಯಾವಂತರ ಸಂಖ್ಯೆ ವರ್ಷ ವರ್ಷವೂ ಏರುತ್ತ ಬಂದಿತು. ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಯಾದ ಮೇಲಂತೂ, ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಮಿತಿಮೀರಿತು. ಇವರಿಗೆಲ್ಲಾ ಸರ್ಕಾರದಲ್ಲಿ ನೌಕರಿ ಸಿಕ್ಕುವುದು ಅಸಾಧ್ಯವಾಯಿತು. ಆದುದರಿಂದ ಇನ್ನು ಮುಂದೆ ವಿದ್ಯಾರ್ಥಿಗಳು ಯಾವುದಾದರೂ ಜೀವನೋಪಾಯ ಕಸಬನ್ನು ಕಲಿಯುವುದು ಅವಶ್ಯಕವೆಂದು ವೆಂಕಟಕೃಷ್ಣಯ್ಯನವರಿಗೆ ತೋರಿ, ಈಗಿನ ವಿದ್ಯಾಭ್ಯಾಸ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಜೀವನೋಪಾಯದ ಕಸಬುಗಳನ್ನು ಕಲಿಸುವುದು ಅಗತ್ಯವೆಂದು ಸರ್ಕಾರಕ್ಕೆ ತಿಳಿಸುತ್ತ ಬಂದರು. ಅವರು ಮೈಸೂರು ನಗರದಲ್ಲಿ ತಾವು ನಡೆಸುತ್ತಿದ್ದ ಅನಾಥಾಲಯದಲ್ಲಿ ಟೈಪ್‌ರೈಟಿಂಗ್‌, ಷಾರ್ಟಹ್ಯಾಂಡ್‌, ಅಕೌಂಟೆನ್ಸಿ, ಟೈಲರಿಂಗ್‌, ನೇಯುವುದು, ಮುಂತಾದ ಕಸಬುಗಳನ್ನೂ ಕಲಿಸಲು ಉಪಕ್ರಮಿಸಿದರು; ಒಂದು ವರ್ಕ್‌ಷಾಪನ್ನೂ ಸ್ಥಾಪಿಸಬೇಕೆಂದಿದ್ದರು.

ವೆಂಕಟಕೃಷ್ಣಯ್ಯನವರು ಹಿಂದಿನಿಂದ ನಡೆದುಕೊಂಡು ಬಂದಿರುವ ಕಸಬುಗಳನ್ನು ಕಾಲಕ್ಕೆ ಅನುಗುಣವಾಗಿ ನವೀನಗೊಳಿಸುವುದು ಅವಶ್ಯಕವೆಂದು ಸರ್ಕಾರಕ್ಕೂ ಸಾರ್ವಜನಿಕರಿಗೂ ತಿಳಿಸುತ್ತಿದ್ದರು. ಆದುದರಿಂದ, ಹಿಂದಿನ ಕಸುಬುದಾರರ ಮಕ್ಕಳು ಈಗಿನ ನವೀನ ವಿದ್ಯೆಯೊಂದಿಗೆ ತಮ್ಮ ಕಸಬುಗಳನ್ನು ಮುಂದುವರಿಸಿಕೊಂಡು ಬರಬೇಕೆಂಬ ಸಲಹೆಯನ್ನು ಸಾರ್ವಜನಿಕರ ಮುಂದೆ ಇಟ್ಟದ್ದಲ್ಲದೆ, ತಾವೂ ಇತರರೂ ನಡೆಸುತ್ತಿದ್ದ ಆದಿಕರ್ಣಾಟಕ ಬೋರ್ಡಿಂಗ್‌ ಹೋಮಿನಲ್ಲಿ ಬೆತ್ತ ಹೆಣೆಯುವುದು, ಬುಟ್ಟಿ ನೇಯುವುದು, ಮರಗೆಲಸ, ಚರ್ಮಹದಮಾಡುವುದು, ಜೋಡುಗಳ ತಯಾರಿಕೆ, ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಏರ್ಪಾಡು ಮಾಡಿದರು.

ಮೈಸೂರು ನಗರದಲ್ಲಿ ಸ್ಥಾಪಿತವಾಗಿರುವ ಇಂಡಸ್ಟ್ರಿಯಲ್‌ ಸ್ಕೂಲ್‌, ಚಾಮರಾಜೇಂದ್ರ ಟೆಕ್ನಿಕಲ್‌ ಇನ್ಸ್‌ಟ್ಯೂಟ್‌ ಮುಂತಾದವುಗಳ ಸ್ಥಾಪನೆ ಮತ್ತು ಏಳಿಗೆಗೂ ವೆಂಕಟಕೃಷ್ಣಯ್ಯನವರು ಕಾರಣರು.

ಬಡವರು, ಅಂಗವಿಕಲರು, ಇವರ ವಿಷಯದಲ್ಲಿ ವೆಂಕಟಕೃಷ್ಣಯ್ಯನವರಿಗೆ ಬಹಳ ದಯೆ ಮತ್ತು ಪ್ರೇಮ. ಆದುದರಿಂದ ಇವರಿಗಾಗಿ ಸಹಾಯ ಸಂಸ್ಥೆಗಳನ್ನು ಏರ್ಪಡಿಸುವುದರಲ್ಲಿ ಅವರಿಗೆ ಬಹಳ ಶ್ರದ್ಧೆ. ಮೈಸೂರಿನಲ್ಲಿ ನಡೆಯುತ್ತಿರುವ ಅನೇಕ ವಿದ್ಯಾರ್ಥಿ ನಿಲಯಗಳನ್ನು ಮುಂದಕ್ಕೆ ತಂದರು. ಅಂಗ ವಿಕಲರಾದ ಕುರುಡು, ಕಿವುಡು, ಮೂಗು ಮಕ್ಕಳ ಪಾಠಶಾಲೆಯ ಸ್ಥಾಪನೆಯಲ್ಲೂ, ಅದರ ಏಳಿಗೆಯಲ್ಲೂ ಅವರು ಅತ್ಯಂತ ಆಸಕ್ತಿ ವಹಿಸಿದ್ದರು.

ದಿವಾನ್ ವಿಶ್ವೇಶ್ವರಯ್ಯನವರ ಪ್ರಯತ್ನದ ಫಲವಾಗಿ ೧೯೧೬ ರಲ್ಲಿ ಮೈಸೂರು ಸಂಸ್ಥಾನದಲ್ಲಿ ಒಂದು ಸ್ವತಂತ್ರ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಮದ್ರಾಸ್‌ ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಮೈಸೂರಿನ ಕೆಲವು ಕಾಲೇಜ್‌ ಅಧಿಕಾರಿಗಳು ಈ ಸ್ಥಾಪನೆಯನ್ನು ವಿರೋಧಿಸಿದರು. ಆದರೆ ಮೈಸೂರಿನವರಿಗೆಲ್ಲಾ ಈ ಸ್ಥಾಪನೆ ಸಂತೋಷ ಉಂಟುಮಾಡಿತು. ಆಗಿನಿಂದ ಮೈಸೂರು ಸಂಸ್ಥಾನದಲ್ಲಿ ವಿದ್ಯಾಭ್ಯಾಸದ ಹೊಸ ಯುಗವೇ ಆರಂಭವಾಯಿತು.

ವೆಂಕಟಕೃಷ್ಣಯ್ಯನವರು ಈ ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದ ಇದರ ಪುರೋಭಿವೃದ್ಧಿಗಾಗಿ ಶ್ರಮಿಸಿದರು. ಇವರ ಮಿತ್ರ ಹೆಚ್‌.ವಿ. ನಂಜುಮಡಯ್ಯನವರೇ ಈ ವಿಶ್ವವಿದ್ಯಾಲಯದ ಪ್ರಥಮ ವೈಸ್‌ ಛಾನ್ಸಲರ್. ಇವರು ಇಂಡಿಯಾ ದೇಶದ ನಾನಾ ಭಾಗಗಳಿಂದ ಉತ್ತಮೋತ್ತಮ ವಿದ್ವಾಂಸರನ್ನು ಬರಮಾಡಿಕೊಂಡು ಅವರನ್ನು ಈ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನಾಗಿ ನೇಮಿಸಿದರು. ಹೀಗೆ ಪ್ರಾಧ್ಯಾಪಕರಾದವರಲ್ಲಿ, ರಾಧಾಕೃರ್ಷ್ಣ (ಹಿಂದಿನ ರಾಷ್ಟ್ರಪತಿ), ರಾಧಾ ಕುಮುದ ಮುಖರ್ಜಿ, ಸಿ.ಆರ್. ರೆಡ್ಡಿ, ಎ.ಆರ್. ವಾಡಿಯ ಮುಂತಾದವರಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ವೈಸ್‌ ಛಾನ್ಸಲರಾಗಿದ್ದ ಆಷುತೋಷ್‌ ಮುಖರ್ಜಿಯವರು ೧೯೧೮ರಲ್ಲಿ ಪದವೀದಾನ ಭಾಷಣ ಮಾಡಿ ಈ ಹೊಸ ವಿಶ್ವವಿದ್ಯಾಲಯಕ್ಕೆ ಬಹಳ ಬೆಂಬಲವಿತ್ತರು.

ಈ ವಿಶ್ವವಿದ್ಯಾಲಯದ ಸೆನೆಟ್‌ ಮೆಂಬರಾಗಿಯೂ, ಕೌನ್ಸಿಲ್‌ ಮೆಂಬರಾಗಿಯೂ ವೆಂಕಟಕೃಷ್ಣಯ್ಯನವರು ಪೂರ್ಣ ಸಹಕಾರವಿತ್ತರು. ಮೈಸೂರಿನಲ್ಲಿ ಮೆಡಿಕಲ್‌ ಕಾಲೇಜನ್ನು ಸ್ಥಾಪಿಸಲು ಡಾ. ಮೈಲ್ವಾಗನಂರವರಿಗೆ ಬಹಳ ಒತ್ತಾಸೆಯಿತ್ತರು. ಮೈಸೂರಿನಲ್ಲಿ ಕಾಲೇಜಿನ ವಿಜ್ಞಾನ ಶಾಖೆಯನ್ನು ತೆರೆಯಬೇಕೆಂದು ಸರ್ಕಾರದಲ್ಲಿ ಅನೇಕ ಸಾರಿ ಮನವಿ ಮಾಡಿಕೊಂಡರು. ಮೈಸೂರಿನಲ್ಲಿ ಒಂದು ಲಾ ಕಾಲೇಜನ್ನು ಸ್ಥಾಪಿಸಬೇಕೆಂದೂ ಸಂಬಂಧಪಟ್ಟವರಿಗೆ ಸಲಹೆಯಿತ್ತರು; ಆದರೆ, ಅವರ ಜೀವಿತ ಕಾಲದಲ್ಲಿ ಈ ಕೋರಿಕೆ ಈಡೇರಲಿಲ್ಲ.

ವೆಂಕಟಕೃಷ್ಣಯ್ಯನವರು ಬೇರೆ ಇನ್ನಾವ ಸಾರ್ವಜನಿಕ ಕಾರ್ಯವನ್ನೂ ಮಾಡದೆ ಕೇವಲ ಉಪಾಧ್ಯಾಯರಾಗಿಯೇ ಇದ್ದಿದ್ದರೂ, ಅವರ ಸೇವೆ ಶಾಶ್ವತವಾದುದು; ಎಂದೂ ಮರೆಯತಕ್ಕದ್ದಲ್ಲ.


* If the name of Mr. Marimallappa is for ever identified with this school, another name is also closely associated with it. For a long period Mr. MK. Venkatakrishnayya “the Grand Old Man of Mysore”, as he was affectionately known, ruled over this institution with silken reins, and to be near the place of his life’s work, built himself a house on the opposite side of the road. For many years his familiar figure could be seen each day walking))across the road to the school. We all know the very considerable part Mr. Venkatakrishnayya played for about half a century in the life of the State in more than one department. Today, I invite you to pay the tribute of respect & gratitude that is justly due to his memory as a head master who so closely associated himself with the school that it is impossible to think of it without recalling his name. It is true that it is impossible to think of it without recalling his name. It is true that in his later years he transferred his affections to the Benjamin of his old age, the Sharada Vilas High School, and he was largely responsible for its existence and its high level of efficiency and its recognition at the hands of Government. But perhaps `transfer’ is too strong a word, for Marimallappa’s school always retained an important place in his affections, and although his direct connection with the school was severed in the latter years of his life, his interest in its welfare was as strong as when he was its headmaster. There must be thousands scattered all over the State who will recall with feelings of affection and gratitude his relations with them then they were pupils in his institution, how he could readily combine discipline with liniency, deep affection with a capacity to rebuke and scold the delinquents.