ವೆಂಕಟಕೃಷ್ಣಯ್ಯನವರನ್ನು ಮೈಸೂರಿನ ಸಾರ್ವಜನಿಕ ಜೀವನದ ಜನಕರೆನ್ನಬಹುದು. ಅವರು ಜನ್ಮವೆತ್ತಿದ ಕಾಲದಲ್ಲಿ ಮೈಸೂರು ಇನ್ನೂ ಬ್ರಿಟಿಷ್‌ ಕಮಿಷನರ್ ಆಡಳಿತದಲ್ಲಿತ್ತುಇ. ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಟೀಪೂ ಸುಲ್ತಾನರ ಪತನದ ಅನಂತರ ಮೈಸೂರು ರಾಜ್ಯದ ಅಧಿಕಾರ ಬಂದಾಗ್ಯೂ, ೧೮೩೧ ರಲ್ಲಿ ಬ್ರಿಟಿಷ್‌ ಸರ್ಕಾರ ಅವರ ಅಧಿಕಾರವನ್ನು ತಪ್ಪಿಸಿ, ರಾಜ್ಯಾಡಳಿತವನ್ನು ಒಂದು ಬ್ರಿಟಿಷ್‌ ಕಮಿಷನರಿಗೆ ವಹಿಸಿತು. ೧೮೩೧ ರಲ್ಲಿ ಏನೇ ಘಟನೆಗಳು ನಡೆದಿರಲಿ, ಮುಮ್ಮಡಿ ಕೃಷ್ಣರಾಜ ಒಡೆಯರು ರಾಜ್ಯಾಧಿಕಾರ ಕಳೆದುಕೊಳ್ಳುವಂತಹ ಅಪರಾಧವನ್ನೇನೂ ಮಾಡಿರಲಿಲ್ಲ ಎಂಬುದು ಲಾರ್ಡ್ ವಿಲಿಯಂ ಬೆಂಟಂಕ್‌ರವರಿಗೂ ಬ್ರಿಟಿಷ್‌ ಸರ್ಕಾರಕ್ಕೂ ಆಮೇಲೆ ಮನವರಿಕೆಯಾಯಿತೆಂಬುದು ಇತಿಹಾಸದ ಕೆಲವು ದಾಖಲೆಗಳಿಂದ ತಿಳಿದುಬಂದಿದೆ. ಏನೇ ಆಗಲಿ, ಮುಮ್ಮಡಿ ಕೃಷ್ಣರಾಜ ಒಡೆಯರು ಧೈರ್ಯಗೆಡದೆ , ಇಂಗ್ಲೆಂಡ್‌ ಸರ್ಕಾರದೊಡನೆ ವಾದಮಾಡಿ, ತಮ್ಮ ಅಧಿಕಾರದ ಹಕ್ಕನ್ನು ೧೮೬೭ರಲ್ಲಿ ಸ್ಥಾಪಿಸಿಕೊಂಡರುಇ. ಇವರ ದತ್ತು ಮಗ ಚಾಮರಾಜ ಒಡೆಯರಿಗೆ ೧೮೮೧ರಲ್ಲಿ ಮೈಸೂರಿನ ರಾಜ್ಯಾಧಿಕಾರವನ್ನು ವಾಪಸು ಕೊಡಲಾಯಿತು.

ಈ ವೇಳೆಗೆ ವೆಂಕಟಕೃಷ್ಣಯ್ಯನವರಿಗೆ ೩೭ ವರ್ಷವಾಗಿತ್ತು. ಆದುದರಿಂದ ಅವರು ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಸ್ವತಃ ನೋಡಿದ್ದರೆಂದು ಹೇಳಬಹುದು. ವೆಂಕಟಕೃಷ್ಣಯ್ಯನವರು ೧೮-೧೯ ವರ್ಷದವರಾಗಿದ್ದಾಗ ಭಾಗವತ ಸುಬ್ಬರಾಯರು ಇವರನ್ನು ಅರಮನೆಗೆ ಕರೆದುಕೊಂಡು ಹೋಗಿ, ಮುಮ್ಮಡಿಯವರ ಭೇಟಿ ಮಾಡಿಸಿದ್ದರೆಂದು ತಿಳಿದು ಬರುತ್ತದೆ. ಮುಮ್ಮಡಿಯವರಿಗೆ, ಚಾಮರಾಜ ಒಡೆಯರಿಗೆ ಕೊಡಿಸಿದಂತೆ, ಒಳ್ಳೆಯ ಇಂಗ್ಲಿಷ್‌ ವಿದ್ಯಾಭ್ಯಾಸವನ್ನೂ ಆಡಳಿತ ವಿದ್ಯಾಭ್ಯಾಸವನ್ನೂ ಕೊಡಿಸಿದ್ದರೆ ರಾಜ್ಯಾಡಳಿತ ಅಧಿಕಾರ ಅವರ ಕೈ ತಪ್ಪುತ್ತಿರಲಿಲ್ಲವೆಂದು ವೆಂಕಟಕೃಷ್ಣಯ್ಯನವರು ಹೇಳುತ್ತಿದ್ದರು. ಮೈಸೂರು ರಾಜ್ಯದ ರಾಜ ಸಂತತಿಯವರೆಗೆ ಪುನಃ ರಾಜ್ಯಾಡಳಿತ ಅಧಿಕಾರ ಬರಲು ಆಗಿನ ಬ್ರಿಟಿಷ್‌ ಪ್ರಧಾನ ಮಂತ್ರಿ ಲಾರ್ಡ್ ಸ್ಯಾಲಿಸ್‌ಬರಿಯವರೂ, ಬ್ರಿಟಿಷ್‌ ರಾಜನೀತಿಜ್ಞ ಲಾರ್ಡ್ ಮಾರ್ಲೆಯವರೂ, ‘ಫಾರ್ಟ್‌ನೈಟ್ಲೀ ಜರ್ನಲ್‌’ ಎಂಬ ಇಂಗ್ಲೆಂಡಿನ ಪತ್ರಿಕೆಯೂ ಭಾರತೀಯ ಮುಖಂಡರಾದ ದಾದಾಭಾಯಿ ನವರೋಜಿಯವರೂ ಸಹಾಯ ಮಾಡಿದರೆಂದು ಹೇಳಲಾಗಿದೆ.

ವೆಂಕಟಕೃಷ್ಣಯ್ಯನವರು ರಾಜಕೀಯ ಸೇವಾ ಕ್ಷೇತ್ರವನ್ನು ಪ್ರವೇಶಿಸುವುದಕ್ಕೆ ಮುಂಚೆ ತಕ್ಕ ಸಿದ್ಧತೆಯನ್ನು ಹೊಂದಿದ್ದರು. ಅವರ ವಿದ್ಯಾಭ್ಯಾಸ ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲಿ ನಡೆದ ಕಾರಣ, ಅಲ್ಲಿ ಮತೀಯ ವಿಷಯಗಳ ಚರ್ಚೆಗಳು ಬಹಳ ತೀವ್ರವಾಗಿ ನಡೆಯುತ್ತಿದ್ದುದರಿಂದ, ಅವರು ಅನೇಕ ಆಂಗ್ಲ ತತ್ತ್ವ ಜ್ಞಾನಿಗಳ ಜೀವನ ಚರಿತ್ರೆಗಳನ್ನೂ, ಅವರು ಬರೆದ ಗ್ರಂಥಗಳನ್ನೂ ಚೆನ್ನಾಗಿ ಓದಿ, ಮನನ ಮಾಡಿಕೊಂಡಿದ್ದರು. ಅವರಲ್ಲಿ ಸ್ವತಂತ್ರ ಭಾವನೆ ಬಹಳ ಚೆನ್ನಾಗಿ ಬೇರೂರಿತ್ತು. ಆದುದರಿಂದ ಅವರು ರಾಜಕೀಯದಲ್ಲಿ ಪ್ರತ್ಯಕ್ಷವಾಗಿ ಇಳಿಯುವ ವೇಳೆಗೆ ಮೈಸೂರಿನ ಅತ್ಯಂತ ಶ್ರೇಷ್ಠ ರಾಜಕೀಯ ಗುರುಗಳಾಗಿದ್ದರು. ಅವರು ಕಾಲೇಜಿನ ಮೆಟ್ಟಲನ್ನು ಹತ್ತದೇ ಹೋದರೂ, ಅವರ ಜ್ಞಾನ ಕೆಲವು ಕಾಲೇಜ್‌ ಅಧ್ಯಾಪಕರಿಗಿದ್ದುದಕ್ಕಿಂತಲೂ ಮಿಗಿಲಾಗಿತ್ತು ಎಂದು ತಿಳಿದು ಬರುತ್ತದೆ. ಆಗಿನ ಕಾಲದ ಅತ್ಯುತ್ತಮ ಕಾಲೇಜ್‌ ವಿದ್ಯಾರ್ಥಿಗಳಾದ ಎಂ. ಶಾಮರಾವ್‌ ಮುಂತಾದವರು ವೆಂಕಟಕೃಷ್ಣಯ್ಯನವರ ರಾಜಕೀಯ ಪಾಂಡಿತ್ಯವನ್ನು ಕೊಂಡಾಡಿದ್ದಾರೆ.

ಮುಮ್ಮಡಿ ಕೃಷ್ಣರಾಜ ಒಡೆಯರು ೧೮೬೮ರಲ್ಲಿ ಮೃತರಾದ ಮೇಲೆ, ಅರಮನೆಗೆ ಬ್ರಿಟಿಷ್‌ ಸರ್ಕಾರ ಬೀಗ ಹಾಕಿಸಿ, ಸುತ್ತಲೂ ಕಾವಲಿಟ್ಟಿತು. ಮುಂದಿನ ಮಹಾರಾಜರು ವಯಸ್ಸಿಗೆ ಬರುವವರೆಗೂ ಅರಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಎಲಿಯೆಟ್‌ ಎಂಬ ಬ್ರಿಟಿಷ್‌ ಅಧಿಕಾರಿಯನ್ನು ಇಂಡಿಯಾ ಸರ್ಕಾರ ನೇಮಿಸಿತು. ಸಿ. ರಂಗಾಚಾರ್ಲು ಅವರನ್ನು ದೇಶೀಯ ಅಧಿಕಾರಿಯನ್ನಾಗಿ ಇಂಡಿಯಾ ಸರ್ಕಾರ ನೇಮಿಸಿತು. ರಂಗಾಚಾರ್ಲುರವರೇ ಮುಖ್ಯವಾಗಿ ಕೆಲಸ ಮಾಡಬೇಕಾಯಿತು. ಅವರು ಮುಮ್ಮಡಿಯವರ ಕಾಲದಲ್ಲಿದ್ದ ಅನಾವಶ್ಯಕವಾದ ವೆಚ್ಚಗಳನ್ನೆಲ್ಲಾ ಕಡಿಮೆ ಮಾಡಿ, ಅರಮನೆಯ ಆದಾಯ ವ್ಯಯವನ್ನು ಸರಿಪಡಿಸಿದರು. ಸುಮಾರು ೬೦೦ ಜನರನ್ನು ಅವರಿಗೆ ಸರಿಯಾದ ಕೆಲಸವಿಲ್ಲದ್ದರಿಂದ ಅರಮನೆ ಸರ್ವಿಸಿನಿಂದ ತೆಗೆದು ಹಾಕಿದರು. ಇದರಿಂದ ರೂ. ೩೮,೦೦೦ ಉಳಿತಾಯವಾಯಿತು.

ರಂಗಾಚಾರ್ಲುರವರ ಪ್ರಾಮಾಣಿಕತೆಯನ್ನೂ ದಕ್ಷತೆಯನ್ನೂ ಕಂಡ ಇಂಡಿಯಾ ಸರ್ಕಾರ ಅವರನ್ನೇ ಮುಂದಿನ ಮಹಾರಾಜರ ಗಾರ್ಡಿಯನ್ನಾಗಿಯೂ, ಅವರ ವಿದ್ಯಾಭ್ಯಾಸದ ಮೇಲ್ವಿಚಾರಕರನ್ನಾಗಿಯೂ ನೇಮಿಸಿತು. ಅವರ ಜೊತೆಗೆ ಜೆ.ಹೀನ್ಸ್‌, ಮಾಲಿಸನ್ ಮತ್ತು ಜೆ.ಡಿ. ಗೋರ್ಡನ್‌ ಎಂಬ ಮೂರು ಇಂಗ್ಲಿಷ್‌ ಅಧಿಕಾರಿಗಳು ಒಬ್ಬರಾಗುತ್ತಲೊಬ್ಬರು ಬಂದರು. ಆದರೆ ಬಹಳ ಮುಖ್ಯವಾದ ಜವಾಬ್ದಾರಿ ರಂಗಾಚಾರ್ಲುರವರದೇ ಆಗಿತ್ತು.

ಅವರು ಜಯರಾಮರಾವ್‌ ಎಂಬುವರೊಬ್ಬರನ್ನು ಮಹಾರಾಜರ ಪಾಠಕರನ್ನಾಗಿ ನೇಮಿಸಿದರು. ಜಯರಾಮರಾಯರು ಕೊಟ್ಟ ಶಿಸ್ತಿನ ಶಿಕ್ಷಣವೇ ಮುಂದಿನ ಮಹಾರಾಜರನ್ನು ಬಹಳ ಸಮರ್ಥರನ್ನಾಗಿ ಮಾಡಿತೆಂದು  ವೆಂಕಟಕೃಷ್ಣಯ್ಯನವರು ಹೇಳುತ್ತಿದ್ದರು. ಆಗಿನ ಅರಮನೆಯ ಸ್ಥಿತಿಯಲ್ಲಿ ಚಾಮರಾಜ ಒಡೆಯರನ್ನು ಕೆಟ್ಟ ಪರಿಣಾಮಗಳಿಂದ ತಪ್ಪಿಸಲು ಜಯರಾಮರಾಯರಿಂದ ವಿನಾ ಇನ್ನಾರಿಂದಲೂ ಸಾಧ್ಯವಾಗುತ್ತಿರಲಿಲ್ಲವೆಂದು ರಂಗಾಚಾರ್ಲು ತಿಳಿದಿದ್ದರು.

ಅರಮನೆಯ ದುಬಾರಿ ವೆಚ್ಚವನ್ನು ಕಡಿಮೆ ಮಾಡಿದ್ದರಿಂದಲೂ, ಮುಂದಿನ ಮಹಾರಾಜರನ್ನು ಕಟ್ಟುನಿಟ್ಟಾಗಿ ಇಟ್ಟಿದ್ದರಿಂದಲೂ, ಅರಮನೆಯಲ್ಲಿಯೇ ಇದ್ದ ಅನೇಕ ರಾಣಿ ವಾಸದವರೂ ಇತರರೂ ರಂಗಾಚಾರ್ಲುರವಿಗೆ ವಿರೋಧಿಗಳಾಗಿ, ಅವರ ವಿರುದ್ಧ ಇಂಡಿಯಾ ಸರ್ಕಾರಕ್ಕೆ ಅರ್ಜಿಯನ್ನು ಹಾಕಿದ್ದರು. ಇಂಡಿಯಾ ಸರ್ಕಾರ ಅದರಲ್ಲಿ ಹುರುಳಿಲ್ಲವೆಂದು ತಿರಸ್ಕರಿಸಿತು. ಇದರಿಂದ ರಂಗಾಚಾರ್ಲುರವರ ಕೀರ್ತಿ ಇನ್ನೂ ಹೆಚ್ಚಿತು.

ರಂಗಾಚಾರ್ಲು ಅರಮನೆಯ ಕಂಟ್ರೋಲರ್ ಆಗಿದ್ದಾಗಲೇ, ವೆಂಕಟಕೃಷ್ಣಯ್ಯನವರು ಅವರ ಶಿಷ್ಯರಾಗಿದ್ದರು ಮತ್ತು ತಮ್ಮ ಗುರುವಿನ ಕೆಲಸ ಕಾರ್ಯಗಳನ್ನು ಬಹಳ ಹತ್ತಿರದಿಂದ ನೋಡಲು ಅವಕಾಶ ಹೊಂದಿದ್ದರು. ಅವರ ಹೃದಯದಲ್ಲಿ ರಂಗಾಚಾರ್ಲುರವರಿಗೆ ಎಂದೂ ಅಳಿಯದ ಒಂದು ಪ್ರಧಾನ ಸ್ಥಾನ ಮೀಸಲಾಯಿತು. ಅವರಿಗೆ ರಂಗಾಚಾರ್ಲು ಆದರ್ಶ ಆಡಳಿತಗಾರರಾಗಿಯೂ. ಆದರ್ಶ ರಾಜ ನೀತಿಜ್ಞರಾಗಿಯೂ ಕಂಡರು. ರಂಗಾಚಾರ್ಲು ಅನೇಕ ಸನ್ನಿವೇಶಗಳಲ್ಲಿ ಆಡಿದ ಒಂದೊಂದು ಮಾತೂ ಅವರ ಮನಸ್ಸಿನಲ್ಲಿ ನಿಂತಿತು. ರಂಗಾಚಾರ್ಲುರವರೂ ಶಿಷ್ಯನಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ರಂಗಾಚಾಲುರವರ ಸಾನ್ನಿಧ್ಯವೇ ತಮಗೆ ಅತ್ಯುತ್ತಮ. ರಾಜಕೀಯ ವಿದ್ಯಾಭ್ಯಾಸವೆಂದು ವೆಂಕಟಕೃಷ್ಣಯ್ಯನವರು ಪರಿಗಣಿಸಿದ್ದರು.

ರಂಗಾಚಾಲು ತಾವು ಅರಮನೆಯ ಕಂಟ್ರೋಲರ್ ಆಗಿದ್ದಾಗಲೇ Fifty Years of British Administration of Mysore ಎಂಬ ಪುಟ್ಟ ಗ್ರಂಥವನ್ನು ಬರೆದು, ೫೦ ವರ್ಷ ಮೈಸೂರಿನಲ್ಲಿ ಕಮಿಷನ್ ಕಾಲದಲ್ಲಿ ನಡೆದ ಬ್ರಿಟಿಷ್‌ ಆಡಳಿತದ ಲೋಪದೋಷಗಳನನ್ನು ಎತ್ತಿ ತೋರಿಸಿದ್ದರು. ಇದಕ್ಕೆ ಹಿಂದೆ, ಮೈಸೂರಿಗೆ ಬರುವುದಕ್ಕೆ ಮುಂಚೆಯೇ, ‘ಲಂಚ’ ((Bribery) ಎಂಬ ವಿಷಯದ ಮೇಲೆ ಒಂದು ಸಣ್ಣ ಪುಸ್ತಕವನ್ನು ಪ್ರಕಟಿಸಿದ್ದರು.

೧೩ ವರ್ಷಗಳ ಕಾಲ ದಕ್ಷತೆಯಿಂದ ಅರಮನೆಯ ಆಡಳಿತ ನಡೆಸಿದ ರಂಗಾಚಾರ್ಲುರವರನ್ನು, ಚಾಮರಾಜ ಒಡೆಯರು ೧೮೮೧ರಲ್ಲಿ ರಾಜ್ಯಾಧಿಕಾರ ವಹಿಸಿದಾಗ, ಪ್ರಥಮ ದಿವಾನರನ್ನಾಗಿ ಇಂಡಿಯಾ ಸರ್ಕಾರ ನೇಮಿಸಿತು. ಈ ನೇಮಕ ಮೈಸೂರಿನ ಪ್ರಜೆಗಳಿಗೆ ಸಂತೋಷ ಉಂಟುಮಾಡಿತು. ಅಖಿಲ ಭಾರತದಲ್ಲಿಯೂ ಮುಂದರಿದ ವೃತ್ತ ಪತ್ರಿಕೆಗಳೂ, ನಾಯಕರೂ ಈ ನೇಮಕವನ್ನು ಕೊಂಡಾಡಿದರು. ಶಿಷ್ಯರಾದ ವೆಂಕಟಕೃಷ್ಣಯ್ಯನವರ ಆನಂದಕ್ಕೆ ಪಾರವೇ ಇರಲಿಲ್ಲ.

ದಿವಾನರ ಸಹಾಯಕ್ಕೆ ಒಂದು ಮಹಾರಾಜರ ಕೌನ್ಸಿಲನ್ನೂ ನೇಮಿಸಲಾಯಿತು. ಪ್ರಥಮ ಕೌನ್ಸಿಲ್‌ನಲ್ಲಿ ಟಿ.ಆರ್.ಎ. ತಂಬೂಚೆಟ್ಟ, ಪೂರ್ಣ ಕೃಷ್ಣರಾವ್‌ ಮತ್ತು ಎ. ರತ್ನಸಭಾಪತಿ ಮೊದಲಿಯಾರ್ ಇದ್ದರು.

ಜೆ.ಡಿ. ಗೋರ್ಡನ್‌ ಮೊದಲನೇ ಬ್ರಿಟಿಷ್‌ ರೆಸಿಡೆಂಟ್‌

ದಿವಾನ್ ರಂಗಾಚಾರ್ಲುರವರ ಜವಾಬ್ದಾರಿ ಬಹಳ ದೊಡ್ಡದಾಗಿತ್ತು. ಬ್ರಿಟಿಷ್‌ ಕಮಿಷನರ ಆಡಳಿತದ ಕಡೆಯ ವರ್ಷಗಳಲ್ಲಿ, ಧಾತು ಮತ್ತು ಈಶ್ವರ ಸಂವತ್ಸರಗಳಲ್ಲಿ, ಸಂಭವಿಸಿದ ಘೋರ ಕ್ಷಾಮದ ಪರಿಣಾಮವಾಗಿ ಲಕ್ಷಾಂತರ ಜನರು ತಿನ್ನುವುದಕ್ಕಿಲ್ಲದೆ ಸತ್ತು ಹೋಸರು. ದನಕರುಗಳ ನಾಶವಂತೂ ಹೇಳತೀರದು. ಈ ಕ್ಷಾಮದ ಸಂಬಂಧದಲ್ಲಿ ಮೈಸೂರು ಸರ್ಕಾರ ರೂ. ೧೬೦ ಲಕ್ಷ ವೆಚ್ಚ ಮಾಡಿತು. ಸರ್ಕಾರಕ್ಕೆ ರೂ. ೮೦ ಲಕ್ಷ ಸಾಲವಾಯಿತು. ೧೮೮೦-೮೧ ರಲ್ಲಿ ಮೈಸೂರು ಸರ್ಕಾರದ ಆದಾಯ ರೂ. ೧೦೧ ಲಕ್ಷ ಮಾತ್ರ ಇತ್ತು. ಇಂತಹ ದುಃಸ್ಥಿತಿಯಲ್ಲಿ ರಂಗಾಚಾರ್ಲು ದಿವಾನರಾದರು.

ಮೈಸೂರಿನ ರಾಜ್ಯಭಾರ ವೈಸರಾಯರ (ಇಂಡಿಯಾ ಸರ್ಕಾರದ) ಸಾರ್ವಭೌಮತ್ವದಲ್ಲಿ ನಡೆಯಬೇಕಾಗಿತ್ತು, ವೈಸರಾಯರು ಇಂಗ್ಲೆಂಡ್‌ ರಾಜರ ಪ್ರತಿನಿಧಿ. ಇವರೇ ಗವರ್ನರ್-ಜನರಲ್‌. ಇವರಿಗೆ ಬ್ರಿಟಿಷ್‌ ಇಂಡಿಯಾ ಪ್ರಾಂತಗಳ ಮೇಲೆ ನೇರ ಅಧಿಕಾರ, ವೈಸರಾಯರಾಗಿ ಸುಮಾರು ೭೫೦ ದೇಶೀಯ ಸಂಸ್ಥಾನಗಳ ಮೇಲೆ ಅಧಿಕಾರ. ಒಂದೊಂದು ದೇಶೀಯ ಸಂಸ್ಥಾನಕ್ಕೂ ಒಬ್ಬೊಬ್ಬ ಬ್ರಿಟಿಷ್‌ ರೆಸಿಡೆಂಟರು ಇರುತ್ತಿದ್ದರು. ಅವರು ಇದ್ದ ಊರಿನಲ್ಲಿಯೇ ಬ್ರಿಟಿಷ್‌ ಸೈನ್ಯದ ಒಂದು ತಂಡವೂ ಇರುತ್ತಿತ್ತು. ಬ್ರಿಟಿಷ್‌ ರೆಸಿಡೆಂಟರು ದೇಶೀಯ ರಾಜರುಗಳ ಮತ್ತು ಅವರ ಸರ್ಕಾರಗಳ ಮೇಲೆ ಉಸ್ತುವಾರಿಯಾಗಿ ಕೆಲಸ ಮಾಡುತ್ತಿದ್ದರು, ಮತ್ತು ದೇಶೀಯ ರಾಜ್ಯಗಳ ಬಗ್ಗೆ ಇಂಡಿಯ ಸರ್ಕಾರದ ಪೊಲಿಟಿಕಲ್‌ ಡಿಪಾರ್ಟ್‌ಮೆಂಟ್‌ (ರಾಜಕೀಯ ಇಲಾಖೆ) ಮೂಲಕ ವೈಸರಾಯರಿಗೆ ವರದಿ ಮಾಡುತ್ತಿದ್ದರು. ದೇಶೀಯ ಸಂಸ್ಥಾನಗಳು ಪೂರ್ಣಾಧಿಕಾರ ಹೊಂದಿರಲಿಲ್ಲ. ಹೊರಗಿನ ವಿಷಯಗಳ ಬಗ್ಗೆ ಬ್ರಿಟಿಷ್‌ ಸರ್ಕಾರದ ಅಧೀನ, ಒಳಗಿನ ವಿಷಯಗಳ ಬಗ್ಗೆ ಪ್ರತಿವರ್ಷವೂ ಇಷ್ಟೊಂದು ಪೊಗದಿ ಸಲ್ಲಿಸಬೇಕು ಮತ್ತು ಮುಖ್ಯ ವಿಷಯಗಳಲ್ಲಿ ಬ್ರಿಟಿಷ್‌ ರೆಸಿಡೆಂಟರ ಸಲಹೆ ಪಡೆಯಬೇಕು. ಈ ವಿಷಯಗಳನ್ನೆಲ್ಲಾ ಒಳಗೊಂಡ ಒಂದೊಂದು ಕೌಲು ಬ್ರಿಟಿಷ್‌ ಸರ್ಕಾರದೊಡನೆ ಪ್ರತಿಯೊಂದು ದೇಶೀಯರಾಜರಿಂದಲೂ ಇತ್ತು.

ಹೊಸದಾಗಿ ಪ್ರಾರಂಭವಾದ ಮೈಸೂರು ರಾಜ್ಯವೂ ಕೂಡ ಬ್ರಿಟಿಷ್‌ ಸರ್ಕಾರಕ್ಕೆ ಅಧೀನವಾಗಿ, ಬ್ರಿಟಿಷ್‌ ರೆಸಿಡೆಂಟರ ಪ್ರಭಾವಕ್ಕೆ ಒಳಪಟ್ಟಿತ್ತು. ಆದುದರಿಂದ ಮೈಸೂರು ಮಹಾರಾಜರು ಸ್ವತಂತ್ರ ರಾಜ್ಯದ ರಾಜರಂತೆ ವರ್ತಿಸಲು ಆಗುತ್ತಿರಲಿಲ್ಲ.

ಈ ಚೌಕಟ್ಟಿಗೆ ಒಳಪಟ್ಟ ದಿವಾನಗಿರಿಯನ್ನು ರಂಗಾಚಾರ್ಲು ೧೮೮೧ ರಲ್ಲಿ ಪ್ರಾರಂಭಿಸಿದರು. ಇವರು ಬಹಳ ಕಾಲ ಆಡಳಿತ ನಡೆಸಲಾಗಲಿಲ್ಲ. ಆಡಳಿತಾಧಿಕರ ವಹಿಸಿದ ೩೩ ತಿಂಗಳಲ್ಲಿ ಇವರು ಕೀರ್ತಿಶೇಷರಾದರು; ಆದರೆ ಆಡಳಿತ ನಡೆಸಿದ ಅಲ್ಪಾವಧಿಯಲ್ಲಿ ಇವರು ಪ್ರಜಾಭ್ಯುದಯಕರವಾದ ಅನೇಕ ಕೆಲಸಗಳನ್ನು ಮಾಡಿದರು. ಹಣಕಾಸಿನ ಸ್ಥಿತಿಯನ್ನು ಉತ್ತಮ ಪಡಿಸಿದ್ದಲ್ಲದೆ, ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದರು. ಈ ಸಭೆ ಇಂಡಯಾದಲ್ಲಿಯೇ ಮೊದಲನೆಯದು. ಪ್ರಾರಂಭದಲ್ಲಿ ಇದರಲ್ಲಿ ೧೪೪ ಸದಸ್ಯರಿದ್ದರು. ಇವರೆಲ್ಲರೂ ಜರ್ಮೀದಾರರು ಅಥವಾ ವರ್ತಕರು. ರಂಗಾಚಾರ್ಲು ಅಸೆಂಬ್ಲಿಗೆ ಕೊಟ್ಟ ಮೊದಲನೇ ಭಾಷಣದ ಉಪಯುಕ್ತ ಭಾಗವನ್ನೂ ಇಲ್ಲಿಕೊಟ್ಟಿದೆ:

“ಶ್ರೀಮನ್‌ ಮಹಾರಾಜರ ಆಜ್ಞೆಗೆ ಅನುಸಾರವಾಗಿ, ನಾವು ಈ ದಿನ ಈ ಸಭೆಯಲ್ಲಿ ಸೇರಿದ್ದೇವೆ. ಈ ಸಭೆ ಇನ್ನೂ ಮೇಲೆ ಪ್ರತಿ ವರ್ಷದಲ್ಲಿಯೂ ಸೇರತಕ್ಕದ್ದಾಗಿದೆ. ಈ ಸಭೆಯಲ್ಲಿ ಸೇರತಕ್ಕ ಪ್ರತಿನಿಧಿಗಳಿಗೆ ಕಳೆದ ವರ್ಷದ ರಾಜ್ಯಭಾರದ ಆಡಳಿತ ವರದಿಯನ್ನೂ, ಮುಂದಣ ವರ್ಷದಲ್ಲಿ ನಡೆಯಿಸಬೇಕಾದ ಏರ್ಪಾಡುಗಳ ಕಾರ್ಯಕ್ರಮವನ್ನೂ ಶೃತಪಡಿಸಬೇಕೆಂಬುದಾಗಿ ಶ್ರೀಮನ್‌ ಮಹಾರಾಜರು ಆಜ್ಞೆ ಮಾಡಿರುತ್ತಾರೆ. ಸರ್ಕಾರದ ರಾಜ್ಯಭಾರದ ಏರ್ಪಾಡುಗಳು ಪ್ರಜೆಗಳ ಇಷ್ಟಾರ್ಥ ಪ್ರಾಪ್ತಿಗೂ ಕ್ಷೇಮಕ್ಕೂ ಅನುಸಾರವಾಗಿರುವಂತೆ ಮಾಡಬೇಕೆಂಬುದೇ ಶ್ರೀಮನ್‌ ಮಹಾರಾಜರ ಮುಖ್ಯ ಉದ್ದೇಶ. ಪ್ರಜೆಗಳ ಕ್ಷೇಮಾಭಿವೃದ್ಧಿ ವಿಷಯದಲ್ಲಿ ನೀವು ಸೂಚಿಸತಕ್ಕ ವಿಷಯಗಳನ್ನು ಶ್ರೀಮನ್‌ ಮಹಾರಾಜರ ಸರ್ಕಾರ ಬಹಳ ಸಂತೋಷದಿಂದ ಪರಿಗ್ರಹಿಸುವುದು. ನೀವು ಹೇಳತಕ್ಕ ಸಂಗತಿಗಳನ್ನು ಸರ್ಕಾರದವರು ಅತ್ಯಂತ ಸಮಾಧಾನದಿಂದ ಪರ್ಯಾಲೋಚಿಸುವರೆಂದು ನಾನು ನಿಮಗೆ ಪ್ರತ್ಯಯ ವನ್ನುಂಟುಮಾಡತಕ್ಕದ್ದೇನೂ ಆವಶ್ಯಕವಾಗಿ ತೋರುವುದಿಲ್ಲ. ಸರ್ಕಾರದವರು ಎಂತಹ ಅಭಿಪ್ರಾಯಗಳಿಂದ ಈ ಪ್ರಜಾಪ್ರತಿನಿಧಿ ಸಭೆಯನ್ನು ಪ್ರತಿಷ್ಠಿಸಿದ್ದಾರೋ, ಪ್ರಜೆಗಳ ಯೋಗ ಕ್ಷೇಮ ಚಿಂತನೆಯ ವಿಷಯದಲ್ಲಿ ಅದೇ ವಿಧವಾದ ಅಭಿಪ್ರಾಯಗಳಿಂದ ಸಲಹೆಗಳನ್ನು ನೀವು ಮಾಡಿ, ಪ್ರಜಾಕ್ಷೇಮಕ್ಕೆ ಬದ್ಧಾದರಾಗುತ್ತೀರೆಂದು ನಾನು ಆಶಿಸುತ್ತೇನೆ.”*

ಪ್ರಜಾಪ್ರತಿನಿಧಿ ಸಭೆಯ ಸ್ಥಾಪನೆ ಮೈಸೂರು ಸಂಸ್ಥಾನದಲ್ಲಿಯೂ ಒಳ್ಳೆಯ ಪರಿಣಾಮ ಉಂಟುಮಾಡಿತು. ಇಂಗ್ಲೆಂಡಿನಲ್ಲಿಯೂ ಪಾರ್ಲಿಮೆಂಟ್‌ ಸದಸ್ಯ ಕೀರ್ ಹಾರ್ಡಿ ಮುಂತಾದವರು ಶ್ಲಾಘನೆ ಮಾಡಿದರು.

ಪ್ರಜಾಪ್ರತಿನಿಧಿ ಸಭೆಯ ದ್ವಿತೀಯ ಅಧಿವೇಶನದಲ್ಲಿ ರಂಗಾಚಾರ್ಲು ಸಭೆಯ ಪ್ರಾಶಸ್ತ್ಯವನ್ನು ವಿವರಿಸಿದರು. ಇದು ಸ್ಥಾಪನೆಯಾದ ಮೇಲೆ, ಇಂಡಿಯಾ ಸರ್ಕಾರದವರು ಪ್ರಜಾಪ್ರಭುತ್ವ ವಿಷಯಗಳಲ್ಲಿ ತಮ್ಮ ಅಭಿಪ್ರಾಯವನ್ನು ಮುಂದರಿಸಿ ನ್ಯಾಯ ವಿಧಾಯಕ ಸಭೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಿಕೊಳ್ಳಬೇಕೆಂದು ಸಲಹೆ ಮಾಡಿದರು. ಇಂಡಿರ್ಯ ನ್ಯಾಷನಲ್‌ ಕಾಂಗ್ರೆಸಿನವರು ಮುಂದೆ ಮಾಡಿದ ವಾದವನ್ನು ರಂಗಾಚಾಲು ೧೮೮೩ ರಲ್ಲಿಯೇ, ಇಂಡಿರ್ಯ ನ್ಯಾಷನಲ್‌ ಕಾಂಗ್ರೆಸ್‌ ಸ್ಥಾಪನೆಯಾಗಲು ಎರಡು ವರ್ಷ ಮುಂಚೆಯೇ, ಪ್ರಜಾಪ್ರತಿನಿಧಿ ಸಭೆಯಲ್ಲಿ ಉದ್ಘೋಷಿಸಿದರು. ಅದೇನೆಂದರೆ: “ಸ್ವರಾಜ್ಯ ಸ್ಥಾಪನಬೆಗೆ ನಮ್ಮ ಜನ ವಿದ್ಯಾಭ್ಯಾಸದಲ್ಲಿ ಬಹಳ ಮುಂದುವರೆಯುವವರೆಗೂ ಕಾಯಬೇಕೆಂಬ ವಾದ ಹುರಳಿಲ್ಲದ್ದು. ಹಾಗೆ ಮಾಡಿದರೆ, ನಾವು ಯಾವಾಗಲೂ ಕಾಯುತ್ತಲೇ ಇರಬೇಕಾಗುತ್ತದೆ.

ಇದು ಎಂತಹ ರಾಜಕೀಯ ಪ್ರವಾದಿಯ ಹೇಳಿಕೆ! ಇವರ ರಾಜಕೀಯ ಪ್ರಜ್ಞೆ ಎಷ್ಟು ಪೂರ್ಣವಾದುದು, ದೂರಗಾಮಿಯಾದುದು!

ಇಂತಹ ಮಹಾ ಪ್ರಾಜ್ಞರು ಮೈಸೂರಿನ ದಿವಾನರಾಗಿ ಬಹುಕಾಲ ಮುಂದುವರಿಯುವುದನ್ನು ಮೈಸೂರು ಕೇಳಿಕೊಂಡು ಬರಲಿಲ್ಲ.

ಪ್ರಜಾಪ್ರತಿನಿಧಿ ಸಭೆಯ ಎರಡನೆಯ ವರ್ಷದಲ್ಲಿಯೇ ಸದಸ್ಯರನ್ನು ಅವರು ಪ್ರಶಂಸೆ ಮಾಡಿದರು:

“ನೀವು ನಿಮ್ಮ ಚರ್ಚೆಗಳಲ್ಲಿ ಬಹಳ ಸೌಮ್ಯವಾಗಿಯೂ, ವ್ಯವಹಾರ ಕೌಶಲ್ಯದಿಂದಲೂ, ವಿವೇಕದಿಂದಲೂ ವರ್ತಿಸಿದ್ದೀರಿ. ಉಪಯುಕ್ತವಾದ ಸಲಹೆಗಳನ್ನು ಕೊಟ್ಟಿದ್ದೀರಿ. ಅವನ್ನ ಕೇಳಿ ಅವಶ್ಯಕವಾದ ಸುಧಾರಣೆಗಳಾವುವು ಎಂಬುದು ನಮಗೆ ತೋರಿಬರುತ್ತದೆ. ಪ್ರಜೆಗಳು ತಮ್ಮ ಹಿತ ಸಂಬಂಧದ ವಿಷಯಗಳಲ್ಲಿ ಎಷ್ಟು ವ್ಯವಹಾರ ಜಾಣ್ಮೆಯಿಂದ ವರ್ತಿಸುತ್ತಾರೆ ಎಂಬುದು ಇದರಿಂದ ತಿಳಿದು ಬರುತ್ತದೆ. ಯಾವುದೋ ಆಕಾಶ ಪುರಾಣಗಳಿಂದ ನೀವು ದೂರವಾಗಿರುವುದು ನನಗೆ ಅತ್ಯಂತ ಸಂತೋಷದ ವಿಷಯ.**

ರಂಗಾಚಾರ್ಲುರವರ ಆಶಯ ಇದ್ದುದು, ಈ ಸಭೆಯನ್ನೇ ಇಂಗ್ಲೆಂಡಿನ ಪಾರ್ಲಿಮೆಂಟಿನ ಹಾಗೆ ಮಾಡಬೇಕೆಂಬುದಾಗಿ. ಅವರಿಗೆ ಭವಿಷ್ಯದ ದೃಷ್ಟಿ ಚೆನ್ನಾಗಿತ್ತು. ಇಂಡಿಯಾಕ್ಕೆ ಸ್ವರಾಜ್ಯ ಲಭಿಸುವುದೆಂಬ ಭರವಸೆ ಅವರಿಗಿತ್ತು. ಪ್ರಜೆಗಳನ್ನು ಜವಾಬ್ದಾರಿ ನಾಯಕರನ್ನಾಗಿ ಮಾಡುವ ಕಾರ್ಯಕ್ರಮದ ಮೊದಲನೆಯ ಹೆಜ್ಜೆಯೇ ಪ್ರಜಾ ಪ್ರತಿನಿಧಿ ಸಭೆ. ಇದನ್ನು ಅವರು ಸ್ಪಷ್ಟವಾಗಿ ಎಲ್ಲಿಯೂ ಬರೆದಿಡಲಿಲ್ಲ; ಆದರೆ ಅವರ ಆಶಯ ಹಾಗಿತ್ತೆಂಬುದನ್ನು ಅವರ ಭಾಷಣಗಳಿಂದಲೂ ಅವರ ಆಗಿನ ಕಾಲದ ಸ್ನೇಹಿತರಿಂದಲೂ ತಿಳಿಯಬಹುದು.

“ದಿವಾನ್ ರಂಗಾಚಾರ್ಲುರವರ ಕಾಲದಲ್ಲಿ ಲಂಚ, ದುರಾಚಾರ, ದುಮಾರ್ಗ ಪ್ರವರ್ತನೆ, ಮೊದಲಾದ ದುಷ್ಕೃತ್ಯಗಳು ಅತ್ಯಂತ ವಿರಳವಾಗಿದ್ದವು. ಇನ್ನೂ ಕೆಲವು ವರ್ಷಗಳು ಇವರು ಜೀವಂತರಾಗಿ ಇದ್ದಿದ್ದರೆ ಮೈಸೂರು ರಾಜ್ಯ ರಾಮರಾಜ್ಯವಾಗಿ ಪರಿಣಮಿಸುವಂತೆ ತೋರುತ್ತಿತ್ತು. ಈ ಸಂಸ್ಥಾನದ ದುರದೃಷ್ಟದಿಂದ ಇವರು ಅಕಾಲ ಮರಣವನ್ನು ಹೊಂದಿದರು” ಎಂದು ವೆಂಕಟಕೃಷ್ಣಯ್ಯನವರು ದುಃಖಿಸಿದ್ದಾರೆ.

ರಂಗಾಚಾರ್ಲು ೧೮೩೧ರಲ್ಲಿ ಮದರಾಸಿನ ಚೆಂಗಲ್ಪಟ್‌ ಜಿಲ್ಲೆಯ ಒಂದು ಹಳ್ಳಿಯಲ್ಲಿ ಹುಟ್ಟಿದವರು. ಒಳ್ಳೇ ವಿದ್ಯಾಭ್ಯಾಸ ಪಡೆದು ಸರ್ಕಾರದಲ್ಲಿ ಕೆಲಸಕ್ಕೆ ಸೇರಿದರು. ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಸರ್ಕಾರದ ಸೇವಾ ಕ್ಷೇತ್ರದಲ್ಲಿ ಬಹಳ ಮೇಲಕ್ಕೇರಿ ಮೈಸೂರಿಗೆ ಅರಮನೆ ಕಂಟ್ರೋಲರಾಗಿ ಬರುವುದಕ್ಕೆ ಮುಂಚೆ ಕ್ಯಾಲಿಕಟ್ಟಿನಲ್ಲಿ ಡೆಪ್ಯುಟಿ ಕಲೆಕ್ಟರಾಗಿದ್ದರು. ಮೈಸೂರಿನ ಸೇವೆಗೆ ೧೮೬೮ರಲ್ಲಿ ಬಂದು ೧೫ ವರ್ಷ ಕಾಲ ಉತ್ತಮ ಸೇವೆ ಸಲ್ಲಿಸಿ ಬೆನ್ನುಫಣೆ ಎದ್ದು, ಮದ್ರಾಸಿಗೆ ಚಿಕಿತ್ಸೆ ಪಡೆಯುವುದಕ್ಕಾಗಿ ಹೋದವರು ಅಲ್ಲಿಯೇ ೨೧-೧-೧೮೮೩ ರಲ್ಲಿ ಮೃತರಾದರು.

ಮರಣ ಕಾಲದಲ್ಲಿಯೂ ಅವರಿಗೆ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಯೋಚನೆ. ಈ ಸಭೆಯನ್ನು ಊರ್ಜಿತ ಪಡಿಸಿಕೊಂಡು ಮುಂದಕ್ಕೆ ತರಬೇಕೆಂದು ಶ್ರೀಮನ್‌ ಮಹಾರಾಜರಿಗೆ ಬಿನ್ನವಿಸಿಬೇಕೆಂದು ತಮ್ಮ ಆಪ್ತಮಿತ್ರರಿಗೆ ಹೇಳಿದರೆಂದೂ, ಈ ಪೈಕಿ ಮುಂದೆ ದಿವಾನ್‌ರಿಗೆ ಬಂದ ಸರ್.ಕೆ. ಶೇಷಾದ್ರಿ ಅಯ್ಯರ್ ಅವರು ಒಬ್ಬರೆಂದೂ ವೆಂಕಟಕೃಷ್ಣಯ್ಯನವರು ಬರೆದಿದ್ದಾರೆ.

ರಂಗಾಚಾರ್ಲುರವರ ಮರಣ ಶ್ರೀಮನ್‌ ಮಹಾರಾಜರಿಗೂ ಮತ್ತು ಮೈಸೂರು ಪ್ರಜೆಗಳಿಗೂ ಬಹಳ ದುಃಖವನ್ನುಂಟುಮಾಡಿತು.  ಅವರ ಮರಣದ ಅನಂತರ ಬೆಂಗಳೂರಿನಲ್ಲಿ ಚೀಫ್‌ ಜಡ್ಜ್‌ ಸಿ.ಜಿ. ಪ್ಲಮರ್ ಅವರ ಅಧ್ಯಕ್ಷತೆಯಲ್ಲಿ ಒಂದು ಭಾರಿ ಸಭೆ ನಡೆದು, ಗತಿಸಿದ ದಿವಾನರ ಚರಮ ಪ್ರಶಂಸೆ ಮಾಡಲಾಯಿತು. ಪ್ಲಮರ್ ಅವರು ರಂಗಾಚಾರ್ಲು ಅವರನ್ನು ಹೀಗೆ ವರ್ಣಿಸಿದರು:

“He was a man of talents, a man of principles and a man of character. He was actuated by no other principle than that interests of the Government were identical with those of the people. He made everyone understand that merit wihtout honesty wa of no avail.”

ರಂಗಾಚಾರ್ಲುರವರ ಸ್ಮಾರಕವಾಗಿ ಮೈಸೂರು ನಗರದಲ್ಲಿ ನಗರ ಭವನವನ್ನು  ನಿರ್ಮಿಸಿದೆ. ಇದರ ನಿರ್ಮಾಣಕ್ಕಾಗಿ ವೆಂಕಟಕೃಷ್ಣಯ್ಯನವರು, ಅಂಬಳೆ ಅಣ್ಣಯ್ಯ ಪಂಡಿತರು ಮುಂತಾದವರು ಚಂದಾಹಣವನ್ನು ಕೂಡಿಸಿದರು.


* “We have met here today by command of His Highness the ‘Maharaja and it is His Highness’ wish that I should place before you at these annual meetings a report of the administration of the past year and an outline of the measures proposed to be carried into effect in the coming year. His highness hopes that by this arrangement the action of the Government will be brought into greater harmony with the wishes and interests of the people. His Highness’ Govt. will be glad to receive any observations which you may wish to make in the public interest and I need not assure you that they will meet with every consideration. I have only to express my hope that appreciating the spirit in which these arrangements have been initiated, your observations may be directed to matters of real public interest.”

If the spread of any degree of education among the great mass of the people were to be insisted upon as a sine qua non we may have to wait for ever.

** “The moderation and practical good sense which characterised your discussion on the occasion of our meeting last year and the several measures of useful and necessary refolrm which resulted from them, induce me to place a high value on the practical views of the people on matters immidiately affecting their interests as contrasted with mere theroetical ideas.”