ದಿವಾನ್ ರಂಗಾಚಾರ್ಲುರವರ ಅನಂತರ ಕೆ. ಶೇಷಾದ್ರಿ ಅಯ್ಯರ್ ಅವರು ದಿವಾನರಾದರು. ಅವರು ಅತ್ಯಂತ ಮೇಧಾವಿಗಳೂ, ಚತುರರೂ, ದಕ್ಷರೂ ಆಗಿದ್ದುದಲ್ಲದೆ, ಬಹಳ ವರ್ಚಸ್ಸಿನಿಂದ ಕೂಡಿದ ಮಹಾನುಭಾವರಾಗಿದ್ದರು. ಅವರ ಪ್ರತಿಭೆಯ ಕೀರ್ತಿ ಇಂಡಿಯಾ ದೇಶದಲ್ಲೆಲ್ಲಾ ಹರಡಿತ್ತು. ಅವರು ಮೈಸೂರಿನಲ್ಲಿ ಆಡಳಿತ ನಡೆಸಿದ ೧೮ ವರ್ಷಗಳ ಕಾಲ ಬಹಳ ಪರಿಣಾಮದಿಂದ ಕೂಡಿತ್ತು. ಅವರು ದಿವಾನರಾಗಿದ್ದ ಕಾಲದಲ್ಲಿ, ೧೮೯೪ ರಲ್ಲಿ, ಮಹಾರಾಜ ಶ್ರೀ ಚಾಮರಾಜ ಒಡೆಯರು ಹಠಾತ್ತಾಗಿ ಕಲ್ಕತ್ತಾದಲ್ಲಿ ಮೃತರಾದರು. ಇದು ಮೈಸೂರು ರಾಜ್ಯಕ್ಕೆ ಬಹಳ ಸಂದಿಗ್ಧ ಕಾಲ. ಕಲ್ಕತ್ತಾದಲ್ಲಿಯೇ ಇದ್ದ ಶೇಷಾದ್ರಿ ಅಯ್ಯರ್ ಅವರು ಆ ನಗರದಲ್ಲಿಯೇ ದಿವಂಗತ ಮಹಾರಾಜರಿಗೆ ಮೊದಲೆರಡು ದಿನಗಳ ಉತ್ತರ ಕ್ರಿಯೆಗಳನ್ನು ನಡೆಸಿ, ರಾಜ್ಯದ ಆಡಳಿತಕ್ಕೆ ಸೂಕ್ತವಾದ ಏರ್ಪಾಡನ್ನು ಬಹಳ ಕ್ಷಿಪ್ರವಾಗಿ ಮಾಡಿದರು. ಮುಂದಿನ ಮಹಾರಾಜರಾಗುವ ಶ್ರೀ ಕೃಷ್ಣರಾಜ ಒಡೆಯರು ಇನ್ನೂ ಮೈನರ್ ಆಗಿದ್ದುದರಿಂದ ರೀಜನ್ಸಿ ಏರ್ಪಾಡು ಆಗಬೇಕಾಯಿತು. ಇಂಡಿಯಾ ಸರ್ಕಾರದವರು ಮಹಾ ಮಾತೆ ಶ್ರೀ ವಾಣೀ ವಿಲಾಸ ಸನ್ನಿಧಾನದವರನ್ನು ರೀಜೆಂಟರನ್ನಾಗಿ ನೇಮಿಸಿದರು.

ಅವರ ಆಡಳಿತಕಾಲದಲ್ಲಿ ದೇಶಾಭ್ಯುದಯದ ಅನೇಕ ದೊಡ್ಡ ದೊಡ್ಡ ಕಾರ್ಯಗಳು ನಡೆದವು. ಶಿವಸಮುದ್ರದ ವಿದ್ಯುಚ್ಛಕ್ತಿಯ ಕಾರಾಗಾರಕ್ಕೆ ಅವರೇ ಅಂಕುರಾರ್ಪಣ ಮಾಡಿದವರು. ಏಷಿಯಾದಲ್ಲಿಯೇ ಇದು ಮೊದಲನೆಯ ವಿದ್ಯುತ್ಪಾದಕ ಉದ್ಯಮ. ಇದಲ್ಲದೆ ಅವರ ಕಾಲದಲ್ಲಿಯೇ ಮಾರೀಕಣಿವೆ ಜಲಾಶಯ, ಬೆಂಗಳೂರು ಸಿಟಿಯ ಹೊಸ ಬಡಾವಣೆಗಳು, ಮೈಸೂರು ಮತ್ತು ಬೆಂಗಳೂರಿನಲ್ಲಿ ಕುಡಿಯುವ ನೀರಿನ ಜಲಾಶಯಗಳು, ಬೆಂಗಳೂರು-ಮೈಸೂರು, ಬೆಂಗಳೂರು-ಹಿಂದೂಪುರ, ಬೆಂಗಳೂರು-ಹರಿಹರ, ಮೈಸೂರು-ನಂಜನಗೂಡು, ಬೀರೂರುಶಿವಮೊಗ್ಗ ರೈಲ್ವೆಗಳು, ಮೈಸೂರು ಸಿವಿಲ್‌ ಸರ್ವಿಸ್‌ ಪರೀಕ್ಷೆ (ಅಖಿಲ ಭಾರತದವರಿಗೆ ತೆರೆದುದು), ಮೈಸೂರು ಚೀಫ್‌ ಕೋರ್ಟ್‌ ಮುಂತಾದವು ನಿರ್ಮಿತವಾದವು. ಮೈಸರು, ಬೆಂಗಳೂರು ಮತ್ತು ಇತರ ಜಿಲ್ಲಾ ಮುಖ್ಯ ನಗರಗಳಲ್ಲಿ ವಿದ್ಯಾಭ್ಯಾಸ ಬೆಳೆಯಿತು. ಅವರು ಆಡಳಿತವನ್ನು ಬಹಳ ಬಿಗಿಯಾಗಿ ನಡೆಸಿದರು.

ಆಡಳಿತದಲ್ಲಿ ಇಷ್ಟು ಪ್ರಭಾವ ತೋರಿಸಿದ ಶೇಷಾದ್ರಿ ಅಯ್ಯರ್ ಅವರು ಪ್ರುಜೆಗಳ ಹಕ್ಕು ಬಾಧ್ಯತೆಗಳ ವಿಷಯದಲ್ಲಿ ರಂಗಾಚಾರ್ಲು ಅವರಂತೆ ಉದಾರಿಗಳಾಗಿರಲಿಲ್ಲ. ಇದು ಮೈಸೂರು ಜನತೆಯ ದೌರ್ಭಾಗ್ಯ.

ಮೈಸೂರು ಆಗತಾನೇ ಇಂಗ್ಲಿಷ್‌ ವಿದ್ಯಾಭ್ಯಾಸದಲ್ಲಿ ಅಡಿಯಿಡುತ್ತಿತ್ತು. ಇನ್ನೂ ಪ್ರಾರಂಭ ಕಾಲ. ಸರ್ಕಾರದ ಕೆಲಸ ಕಾರ್ಯಗಳು ಇಂಗ್ಲಿಷಿನಲ್ಲಿ ನಡೆಯುತ್ತಿದ್ದವು. ಆದುದರಿಂದ ಶೇಷಾದ್ರಿ ಅಯ್ಯರ್ ಅವರು ಇಂಗ್ಲಿಷಿನಲ್ಲಿ ಬಹಳ ಮುಂದರಿದಿದ್ದ ಮದ್ರಾಸ್‌ ಪ್ರಾಂತದಿಂದ ಬಂದ ಜನರನ್ನು ದೊಡ್ಡ ಮತ್ತು ಚಿಕ್ಕ ಸರ್ಕಾರೀ ನೌಕರಿಗಳಿಗೆ ಸೇರಿಸುತ್ತಿದ್ದರು. ಇದರಿಂದ ದೇಶೀಯರಾದ ಮೈಸೂರಿನವರಿಗೆ ಬಹಳ ಅಸಮಾಧಾನವಾಯಿತು.

ಇಷ್ಟೇ ಅಲ್ಲ, ರಂಗಾಚಾರ್ಲುರವರು ಸ್ಥಾಪಿಸಿದ ಪ್ರಜಾಪ್ರತಿನಿಧಿ ಸಭೆಯನ್ನು ಪ್ರೀತಿಯಿಂದಲೂ ಆದರಣೆಯಿಂದಲೂ ಮುಂದಕ್ಕೆ ತರದೆ ಆ ಸಭೆಯ ಸದಸ್ಯರು ಮಾಡಿದ ದೇಶಾಭ್ಯುದಯ ಸಲಹೆಗಳನ್ಪು ತಿರಸ್ಕರಿಸುತ್ತಿದ್ದುದಲ್ಲದೆ, ಅದಕ್ಕೆ ಸಲ್ಲಬೇಕಾದ ಮರ್ಯಾದೆಯನ್ನೂ ಸಲ್ಲಿಸುತ್ತಿರಲಿಲ್ಲ. ಪ್ರಜಾಪ್ರತಿನಿಧಿ ಸಭೆಯು ತಮ್ಮ ಆಡಳಲಿತಕ್ಕೆ ಆತಂಕವೆಂಬ ಭಾವನೆಯಿಂದ ಅದನ್ನು ತಿರಸ್ಕಾರ ಹಾಗೂ ತಾತ್ಸಾರ ಭಾವನೆಯಿಂದ ಕಾಣುತ್ತಿದ್ದರು.

ಈ ಕಾರಣದಿಂದ ಶೇಷಾದ್ರಿ ಅಯ್ಯರ್ ಅವರಿಗೆ ೮-೧೦ ವರ್ಷ ಕಾಲ ಮೈಸೂರಿನಲ್ಲಿ ಪ್ರಬಲವಾದ ವಿರೋಧ ಪ್ರಜಾಭಿಪ್ರಾಯವಿದ್ದಿತು. ಇದಕ್ಕೆ ಅವರ ಅನುದಾರ ರಾಜಕೀಯ ನೀತಿಯೇ ಕಾರಣವೆಂದು ಹೇಳಬಹುದು. ಅವರು  ಬ್ರಿಟಿಷ್‌ ಇಂಡಿಯಾದ ಪ್ರಜೆಗಳ ಸ್ವರಾಜ್ಯ ಹೋರಾಟವನ್ನು ಮೆಚ್ಚುತ್ತಿದ್ದಾಗ್ಯೂ, ಮೈಸೂರಿನೊಳಗೆ ಇಲ್ಲಿನ ಪ್ರಜೆಗಳು ತಮ್ಮ ಹಕ್ಕುಬಾಧ್ಯತೆಗಳಿಗೆ ಹೊಡೆದಾಡುವುದನ್ನು ಮೆಚ್ಚುತ್ತಿರಲಿಲ್ಲ. ಅಸಹನೆಯನ್ನೂ, ಅಪ್ರಿಯತೆಯನ್ನೂ ತೋರಿಸುತ್ತಿದ್ದರು. ಮೈಸೂರಿನ ಹೊರಗೆ ಇಂಡಿರ್ಯ ನ್ಯಾಷನಲ್‌ ಕಾಂಗ್ರೆಸ್‌ ಎಂದರೆ ಅವರಿಗೆ ಬಹಳ ಗೌರವ ಹಾಗೂ ಪ್ರೀತಿ. ಆದರೆ ಮೈಸೂರಿನ ಪ್ರಜಾಮುಖಂಡರಾದ ವೆಂಕಟಕೃಷ್ಣಯ್ಯನವರೆಂದರೆ ಬಹಳ ತಾತ್ಸಾರ. ಮೈಸೂರಿನ ಪ್ರಜಾಮುಖಂಡರ ಪೈಕಿ ವೆಂಕಟಕೃಷ್ಣಯ್ಯನವರಂತಹವರು ಉನ್ನತ ರಾಜಕೀಯ ಪ್ರಜಾಶಾಲಿಗಳೆಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು.ಶೇಷಾದ್ರಿ ಅಯ್ಯರ್ ಅವರೂ ಹರ್ಬಟ್‌ ಸ್ಪೆನ್ಸರಿನ ಶಿಷ್ಯರು, ವೆಂಕಟಕೃಷ್ಣಯ್ಯನವರೂ ಹರ್ಬಟ್‌ ಸ್ಪೆನ್ಸರಿನ ಶಿಷ್ಯರು. ಈ ವಿಷಯದಲ್ಲಿ ಉಭಯರಿಗೂ ಪರಸ್ಪರ ಅಭಿಮಾನ. ಆದರೆ ರಾಜಕೀಯ ರಂಗದಲ್ಲಿ ಈರ್ವರೂ ಪರಸ್ಪರ ವಿರೋಧಿಗಳು, ಇದೊಂದು ಚಮತ್ಕಾರ.

ಶೇಷಾದ್ರಿ ಅಯ್ಯರ್ ಅವರು ಪ್ರಾರಂಭದ ಎಂಟು ವರ್ಷಗಳಲ್ಲಿ ನಿರ್ಬಾಧಿತರಾಗಿ ಯಾವ ವಿರೋಧವೂ ಇಲ್ಲದೆ ಕೆಲಸಕಾರ್ಯಗಳನ್ನು ನಡೆಸಿದರು. ಮಹಾರಾಜರ ಕೌನ್ಸಿಲು ಅವರಿಗೆ ಪೂರ್ಣ ಸಹಕಾರ ಕೊಟ್ಟಿತು. ಪ್ರಜಾಪ್ರತಿನಿಧಿ ಸಭೆಯೂ ಅವರ ಆಡಳಿತವನ್ನು ಮೆಚ್ಚುತ್ತಾ, ಪ್ರಶಂಸಾ ಭಾವನೆಯನ್ನೇ ಹೊಂದಿತ್ತು. ಈ ಎಂಟು ವರ್ಷಗಳಲ್ಲಿ ಶೇಷಾದ್ರಿ ಅಯ್ಯರ್ ಅವರ ಕೀರ್ತಿ ಅಖಿಲ ಭಾರತದಲ್ಲಿ ವ್ಯಾಪಿಸಿತು. ವಾಸ್ತವ್ಯವಾಗಿ, ಆಡಳಿತ ದಕ್ಷತೆಯಲ್ಲಿ ಅವರು ಅನೇಕ ಐ.ಸಿ.ಎಸ್‌. ಮತ್ತು ಯೂರೋಪಿರ್ಯ ಅಧಿಕಾರಿಗಳಿಗಿಂತಲೂ ಮೇಲಾಗಿದ್ದರು. ಈ ಎಂಟು ವರ್ಷಗಳು ಶೇಷಾದ್ರಿ ಅಯ್ಯರ್ ಅವರಿಗೆ ಬಹಳ ಹರ್ಷದಾಯಕವಾದ ಕಾಲ.

೧೮೮೭ ರಲ್ಲಿ ಅವರು ಪ್ರಜಾಪ್ರತಿನಿಧಿ ಸಭೆಯಲ್ಲಿ ಸದಸ್ಯರ ಬಗ್ಗೆ ಬಹಳ ಪ್ರೋತ್ಸಾಹಕರವಾದ ಭಾಷಣವನ್ನು ಮಾಡಿದರು:

“I need scarcely tell you that this is the seventh time we meet, having been called together in the very first year of Rendition. The earnest desire of His Highness was to take you into his confidence and make known to you the views and objects of his Government in the adoption of various measures for the administration of the country; he hoped thereby to obtain the benefit of your honest and practical suggestions and thus to advance the real welfare of his people. He now directs me to say that his hopes have been very fairly realised and success attained in the past six years is an encouragement to his Government to persevere in their endeavours to make this Assembly of still greater use for the good administration of the province”.

೧೮೯೦ ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಅಂಗರಚನೆಯಲ್ಲಿ ಇನ್ನೂ ಹೆಚ್ಚಿನ ಉದಾರತೆಯಿಂದ ಕೂಡಿದ ಸುಧಾರಣೆಗಳನ್ನು ಮಾಡಿದರು. ಹಿಂದಿನ ಸಾರಿಗಿಂತಲೂ, ಈ ಸಾರಿ ಈ ಸಭೆಯ ಸದಸ್ಯ ನಡವಳಿಕೆಯನ್ನು ಇನ್ನೂ ಮುಕ್ತಕಂಠದಿಂದ ಹೊಗಳಿದರು. “ನಿಮ್ಮ ಸೌಮ್ಯತೆ, ವಿವೇಕ, ವ್ಯವಹಾರ ನೈಪುಣ್ಯತೆ ಇವೆಲ್ಲವೂ ನಿಮ್ಮ ಚರ್ಚೆಗಳನ್ನು ಬಹಳ ಸಹಾಯಕಾರಿಯನ್ನಾಗಿ ಮಾಡಿವೆ. ಶ್ರೀಮನ್‌ ಮಹಾರಾಜರು ಬಹಳ ಸಂತೋಷ ಪಟ್ಟಿದ್ದಾರೆ” ಎಂದು ಅವರು ಹೇಳಿದರು.

ಅವರ ಭಾಷಣದ ಭಾಗ:

“These attempts at improving the constitution of the Assembly have so far been attended with success that His Highness’ Government are now encouraged to take a further and important step towards securing a fuller and more satisfactory representation of every important interest in the country. The moderation, the intelligence and the practical good sense which have characterised your discussion in past years, the material help you have given the Governmnet in the discussion of important measures and the sustained interest you have evinced in public affairs have convinced His Highness the Maharaja that the time has now come when the wealthier and the more enlightened classes may well be left safely to themselves to choose the members of the Assembly”.

೧೮೯೧ ರಲ್ಲಿ ನಡೆದ ಪ್ರಜಾಪ್ರತಿನಿಧಿ ಸಭೆ ಅಧಿವೇಶನದಲ್ಲಿ ೩೫೧ ಸದಸ್ಯರಿದ್ದರು. ಇದೇ ಸಂಖ್ಯೆ ಬಹಳ ವರ್ಷದವರಿಗೆ ಮುಂದುವರೆಯಿತು. ಈ ಅಧಿವೇಶನದ ಪ್ರಾರಂಭದಲ್ಲಿ ದಿವಾನರೂ ಹೃತ್ಪೂರ್ವಕವಾಗಿ ಸದಸ್ಯರನ್ನು ಅಭಿನಂದಿಸಿದರು. ಅವರು ಹೇಳಿದರು:

“You come here as the duly elected representatives of the agriculture l, the industrial and the commercial interests of the State. Last year when His Highness was pleased to grant the valued privilege of election, he was not without some misgivings as to how the experiment would succeed, but it is most gratifying to His Highness, though unused to the system, the electoral body have been able, in the very first year of existence, to exercise the privilege with so much judgment and sense of responsibility as to send to this Assembly men in every way qualified to speak on their behalf”.

೧೮೯೧ರವರಿಗೆ ಶೇಷಾದ್ರಿ ಅಯ್ಯರ್ ಅವರು ಪ್ರಜಾಪ್ರತಿನಿಧಿ ಸಭೆಯ ಪರಮಮಿತ್ರರಂತೆ ವರ್ತಿಸಿದರು. ಈ ಸಭೆಯ ಸದಸ್ಯರು ಮಾಡಿದ ಕೋರಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ, ರಚನಾತ್ಮಕವಾದ ಸಲಹೆಯನ್ನಿತ್ತರು. ಅವರೇ ಸಭೆಯ ಸ್ಟಾಂಡಿಂಗ್‌ ಕಮಿಟಿಯ ಸ್ಥಾಪನೆಯ ಬಗ್ಗೆ ಸಲಹೆಯನ್ನಿತ್ತವರು; ಕಡೆಗೆ, ಅವರೇ ಈ ಸ್ಟ್ಯಾಂಡಿಂಗ್‌ ಕಮಿಟಿಯನ್ನು ಸರ್ಕಾರ ಅಂಗೀಕರಿಸುವುದಿಲ್ಲ ಎಂದು ಹೇಳಿ ಸಭೆಯ ಸದಸ್ಯರ ಮೂಗು ಮುರಿದವರು. ಅಸಂಬದ್ಧ ಮತ್ತು ಅಸಹನೆಯ ನೀತಿಯಿಂದ ಶೇಷಾದ್ರಿ ಅಯ್ಯರ್ ಅವರು ಅಸೆಂಬ್ಲಿ ಸದಸ್ಯರ ಅನುರಾಗವನ್ನೂ ಪ್ರಜೆಗಳ ಪ್ರೀತಿಯನ್ನೂ ಕಳೆದುಕೊಂಡರೆಂದು ಹೇಳಬಹುದು.

೧೮೯೦ರಲ್ಲಿ ಪ್ರಜಾಪ್ರತಿನಿಧಿ ಸಭೆ ಸೇರಿದ ಕಾಲದಲ್ಲಿ ಕೆಲವು ಪ್ರತಿನಿಧಿಗಳು (ಇವರಲ್ಲಿ ವೆಂಕಟಕೃಷ್ಣಯ್ಯನವರೂ ಇದ್ದರು) ದಿವಾನರೊಡದೆ ನಡೆದ ಭೇಟಿಯ ಕೆಲವು ಸಂಗತಿಗಳನ್ನು ಅರಿಕೆ ಮಾಡಿಕೊಂಡರು. ಈ ಪೈಕಿ ಮುಖ್ಯವಾದುದೆಂದರೆ, ಶ್ರೀಮನ್‌ ಮಹಾರಾಜರ ಕೌನ್ಸಿಲಿನಲ್ಲಿ ತಮ್ಮ ಪ್ರತಿನಿಧಿಯೊಬ್ಬರನ್ನು ನೇಮಿಸಿಕೊಳ್ಳಬೇಕೆಂಬುದು. ಈ ಪ್ರತಿನಿಧಿಯನ್ನು ಅಸೆಂಬ್ಲಿ ಸದಸ್ಯರು ಚುನಾಯಿಸುವರೆಂದೂ, ಇಂತಹ ನೇಮಕದಿಂದ ಪ್ರತಿನಿಧಿಗಳ ಅಭಿಪ್ರಾಯಗಳು ನೇರವಾಗಿ ಶ್ರೀಮನ್‌ ಮಹಾರಾಜರಿಗೆ ತಿಳಿಯುವುದೆಂದೂ ಪ್ರತಿನಿಧಿಗಳು ತಿಳಿಸಿದರು. ದಿವಾನರು ಅಪ್ಪಣೆ ಕೊಟ್ಟರೆ ಈ ಅಧಿವೇಶನದಲ್ಲಿಯೇ ಅಸೆಂಬ್ಲಿ ಸದಸ್ಯರು ಒಬ್ಬ ಪ್ರತಿನಿಧಿಯನ್ನು ಕೌನ್ಸಿಲಿಗೆ ಚುನಾಯಿಸುವರೆಂದೂ ಹೇಳಿದರು.

ಈ ಅಹವಾಲನ್ನು ಆಳವಾಗಿ ಪರಿಶೀಲಿಸಿದರೆ, ಇದು ಎಷ್ಟು ದೂರಗಾಮಿಯಾದುದೆಂದು ತಿಳಿಯುತ್ತದೆ. ಬ್ರಿಟಿಷ್‌ ಸರ್ಕಾರದವರು ೧೯೨೦ ರಲ್ಲಿ ಜಾರಿಗೆ ತಂದ ಬ್ರಿಟಿಷ್‌ ಪ್ರಾಂತಗಳ ಡಯಾರ್ಕಿ ತತ್ತ್ವವು ಇದರಲ್ಲಿ ಅಡಗಿದೆ. ಬ್ರಿಟಿಷ್‌ ಪ್ರಾಂತ್ಯದ ಗೌರ್ನರ್ ರವರ ಕೌನ್ಸಿಲ್‌ನಲ್ಲಿ ಗೌರ್ನರ್ ರಿಂದ ನೇಮಕರಾದ ಕೆಲವರೂ, ಅಸೆಂಬ್ಲಿಯಿಂದ ಆರಿಸಲ್ಪಟ್ಟ ಕೆಲವರೂ ಇರುತ್ತಿದ್ದರು. ಮೈಸೂರಿನಲ್ಲಿಯೂ ೧೯೪೦ ರಲ್ಲಿ ಶ್ರೀನಿವಾಸಯ್ಯಂಗಾರ್ ಸಮಿತಿಯ ಇಂತಹ ಸಲಹೆಯನ್ನೇ ಕೊಟ್ಟಿತು. ಆದರೆ ೧೯೪೧ರಿಂದ ಮೈಸೂರಿನಲ್ಲಿ ಏರ್ಪಾಡಾದ ಎಕ್ಸಿಕ್ಯೂಟಿವ್‌ ಕೌನ್ಸಿಲಿನಲ್ಲಿ ಮಹಾರಾಜರು ಅಧಿಕಾರಿಗಳ ಪೈಕಿ ಕೆಲವರನ್ನೂ, ಅಸೆಂಬ್ಲಿಯ ಪ್ರತಿನಿಧಿಗಳ ಪೈಕಿ ಕೆಲವರನ್ನೂ ಆರಿಸಿದ್ದರು. ಇದಕ್ಕೆ ಮುಂಚೆಯೇ ಡಾ. ಸೀಲ್‌ ಸುಧಾರಣಾ ಸಮಿತಿಯವರು ಪ್ರಜೆಗಳಿಂದ ಒಬ್ಬರನ್ನು ಶ್ರೀಮನ್‌ ಮಹಾರಾಜರ ಕೌನ್ಸಿಲಿಗೆ ನೇಮಿಸಬಹುದೆಂದು ಶಿಫಾರಸು ಮಾಡಿದ್ದರು.

೧೯೨೫ರ ನ್ಯಾಯ ವಿಧಾಯಕ ಸಭೆ ಅಧಿವೇಶನದಲ್ಲಿಯೂ ವೆಂಕಟಕೃಷ್ಣಯ್ಯನವರು ಮೈಸೂರಿನ ಪ್ರಜೆಗಳ ಪೈಕಿ ಒಬ್ಬರನ್ನು ಎಕ್ಸಿಕ್ಯುಟಿವ್‌ ಕೌನ್ಸಿಲಿಗೆ ನೇಮಿಸಬೇಕೆಂಬ ನಿರ್ಣಯವನ್ನು ಸೂಚಿಸಿದರು. ಆಗ ಸರ್ ಎ.ಆರ್. ಬ್ಯಾನರ್ಜಿಯವರು ದಿವಾನರಾಗಿದ್ದರು. ನ್ಯಾಯವಿಧಾಯಕ ಸಭೆಯ ಚುನಾಯಿತ ಬಹುಮತ ಸದಸ್ಯರು ವೆಂಕಟಕೃಷ್ಣಯ್ಯನವರ ನಿರ್ಣಯಕ್ಕೆ ಬೆಂಬಲ ಕೊಟ್ಸರು. ೧೮೯೦ ರಲ್ಲಿಯೇ ಇಂತಹ ಒಂದು ಕೋರಿಕೆಯನ್ನು ದಿವಾನ್ ಶೇಷಾದ್ರಿ ಅಯ್ಯರ್ ಅವರ ಮುಂದೆ ಇಡಬೇಕಾದರೆ, ಆಗಿನ ಸದಸ್ಯರು ಎಷ್ಟು ದೂರದರ್ಶಿಗಳೆಂಬುದು ಗೊತ್ತಾಗುತ್ತದೆ. ಈ ಕೋರಿಕೆಗೆ ವೆಂಕಟಕೃಷ್ಣಯ್ಯನವರು ಮುಖ್ಯ ಪೋಷಕರಾಗಿದ್ದರೆಂದು ತಿಳಿದುಕೊಂಡರೆ, ಅವರು ಎಂತಹ ಪ್ರಗತಿಗಾಮಿಯಾದ ರಾಜನೀತಿಜ್ಞರಾಗಿದ್ದರು ಎಂಬುದು ವ್ಯಕ್ತವಾಗುತ್ತದೆ.

ಪ್ರಜಾಪ್ರತಿನಿಧಿ ಸಭೆ ಸ್ಥಾಪನೆಯಾಗಿ ೯ ವರ್ಷಗಳಾಗಿದ್ದರೂ ತಮ್ಮನ್ನು ಚುನಾಯಿಸಿದ ಪ್ರಜೆಗಳಿಗೆ ಅನುಕೂಲವಾದ ಒಂದು ನಿರ್ಣಯವನ್ನಾಗಲೀ ಈ ಸಭೆಯಲ್ಲಿ ಸೂಚಿಸಲು ಅವಕಾಶವಿರಲಿಲ್ಲ. ಏನೋ ಲೋಕಾಭಿರಾಮವಾಗಿ ಅಸೆಂಬ್ಲಿ ಸದಸ್ಯರು ವರ್ಷಕ್ಕೆ ಒಂದಾವರ್ತಿ ದಿವಾನರ ಮುಂದೆ ಸೇರಿ ಏನೋ ಅದೂ-ಇದೂ ಮಾತನಾಡಿ ಚದುರುವುದು ಪದ್ಧತಿಯಾಗಿತ್ತು. ಇದೊಂದು ರೀತಿಯಾದ ದಿವಾನರ ದರ್ಬಾರೋ, ಜಮಾಬಂದಿಯ ಸಭೆಯೋ ಎನ್ನುವಂಥೆ ಇತ್ತು. ಈ ರೀತಿಯಾದ ನಿಸ್ಸಾರವಾದ ಪ್ರತಿನಿಧಿ ಸಭೆಯ ಅಧಿವೇಶನದಿಂದ ಏನೂ ಪ್ರಯೋಜನವಿಲ್ಲವೆಂಬುದು ಅನೇಕ ಸದಸ್ಯರಿಗೆ ಮಂದಟ್ಟಾಯಿತು.

ಅದಲ್ಲದೆ ಬ್ರಿಟಿಷ್‌ ಇಂಡಿಯಾದಲ್ಲಿ ಇಂಡಿರ್ಯ ನ್ಯಾಷನಲ್‌ ಕಾಂಗ್ರೆಸ್‌ ಸ್ಥಾಪನೆಯಾದ ಮೇಲೆ ನಾಲ್ಕು ಅಧಿವೇಶನಗಳು ನಡೆದು ಅದರ ರಾಜಕೀಯ ಪ್ರಭಾವವೂ ಪ್ರಜಾಪ್ರತಿನಿಧಿ ಸಭೆ ಸದಸ್ಯರ ಮೇಲೆ ಆಗಿತ್ತು. ೧೮೯೦ರ ಹೊತ್ತಿಗೆ ಮೈಸೂರಿನಲ್ಲಿ ವೆಂಕಟಕೃಷ್ಣಯ್ಯನವರ ಪತ್ರಿಕೆಗಳು, ರ್ಶರೀನಿವಾಸಯ್ಯಂಗಾರ್ಯರ ‘ನಡೆಗನ್ನಡಿ’ ಮತ್ತು ‘ಮೈಸೂರು ಸ್ಟ್ಯಾಂಡರ್ಡ್, ‘ದೇಶಾಭಿಮಾನಿ’ ಮುಂತಾದ ಪತ್ರಿಕೆಗಳು ಪ್ರಜೆಗಳ ಹಕ್ಕುಬಾಧ್ಯತೆಗಳ ವಿಷಯದಲ್ಲಿ ಉಜ್ವಲವಾದ ಲೇಖನಗಳನ್ನು ಬರೆಯುತ್ತಿದ್ದುವು. ಮದರಾಸಿನ ‘ಹಿಂದೂ’, ಕಲ್ಕತ್ತದ ‘ಅಮೃತಬಜಾರ್ ಪತ್ರಿಕೆ’, ಪುನಾದ ‘ಕೇಸರಿ’ ಮತ್ತು “ಮರಾಠಾ” ಪತ್ರಿಕೆಗಳು ಭಾರತೀಯರನ್ನು ಸ್ವರಾಜ್ಯಕ್ಕಾಗಿ ಹುರಿದುಂಬಿಸುತ್ತಿದ್ದುವು. ಆದ್ದರಿಂದ ಮೈಸೂರಿನಲ್ಲಿಯೂ ರಾಜಕೀಯ ಜಾಗೃತಿ ಉಂಟಾದುದು ಸಹಜವೇ ಆಗಿದೆ.

ದಿವಾನ್ ಶೇಷಾದ್ರಿ ಅಯ್ಯರ್ ಅವರು ಈ ಹಿಂದೆಯೇ ತಿಳಿಸಿರುವಂತೆ ಕಾಂಗ್ರೆಸಿನ ಮತ್ತು ಸ್ವರಾಜ್ಯದ ಅಭಿಮಾನಿಗಳಾದರೂ, ಮೈಸೂರಿನೊಳಗೆ ಸ್ವಾತಂತ್ರ್ಯ ಅಭಿಪ್ರಾಯಗಳು ಕಾರ್ಯರೂಪಕ್ಕೆ ಬರಲು ವಿರೋಧಿಗಳಾಗಿದ್ದರು. ಅವರ ಅಭಿಪ್ರಾಯದಲ್ಲಿ, ದೇಶೀಯ ಸಂಸ್ಥಾನಗಳು ಬ್ರಿಟಿಷ್‌ ಇಂಡಿಯಾಕ್ಕಿಂತಲೂ ಹಿಂದುಳಿದವು; ಇಲ್ಲಿ ಮಹಾರಾಜರು ಮತ್ತು ಭಾರತೀಯ ಅಧಿಕಾರಿಗಳೆ ಇರುವುದರಿಂದ ಇದು ಒಂದು ರೀತಿಯಾದ ಸ್ವರಾಜ್ಯವೇ ಆಗಿದೆ; ಇಲ್ಲಿನ ಪ್ರಜೆಗಳು ಬ್ರಿಟಿಷ್‌ ಇಂಡಿಯಾದ ಪ್ರಜೆಗಳಂತೆ ಸರ್ಕಾರಕ್ಕೆ ವಿರುದ್ಧವಾಗಿ ವರ್ತಿಸಬೇಕಾಗಿಲ್ಲ; ಏನಿದ್ದರೂ ಅಹವಾಲುಗಳನ್ನು ಹೇಳಿಕೊಳ್ಳಬಹುದು. ಶೇಷಾದ್ರಿ ಅಯ್ಯರ್ ಅವರಿಗೆ ಪ್ರಜಾಪ್ರತಿನಿಧಿ ಸಭೆ ಒಂದು ಅರ್ಜಿಕೂಟವೇ ಆಗಿರಬೇಕು, ಮತ್ತು ಅದಕ್ಕಿಂತ ಹೆಚ್ಚಿನ ಅಂತಸ್ತನ್ನು ಈ ಸಭೆ ಕೋರಬಾರದು ಎಂಬುದೇ ಅಭಿಪ್ರಾಯವಾಗಿತ್ತು.

ಆದುದರಿಂದ ಪ್ರಜಾಪ್ರತಿನಿಧಿ ಸಭೆಯ ಕೆಲವು ಸದಸ್ಯರು ತಮ್ಮಲ್ಲಿ ಒಬ್ಬರನ್ನು ಶ್ರೀಮನ್‌ ಮಹಾರಾಜರ ಕೌನ್ಸಿಲಿಗೆ ತೆಗೆದುಕೊಳ್ಳಬೇಕೆಂದು ಹೇಳಿದ ವಿಷಯ ಶೇಷಾದ್ರಿ ಅಯ್ಯರ್ ಅವರಿಗೆ ಅಂತರಂಗದಲ್ಲಿ ಕ್ಷೋಭೆಯನ್ನೇ ಉಂಟುಮಾಡಿರಬೇಕು. “ಏನಪ್ಪಾ ಇದು, ಮೈಸೂರಿನಲ್ಲಿಯೂ ಬ್ರಿಟಿಷ್‌ ಇಂಡಿಯಾ ಗಾಳಿಯೇ ಬೀಸಿತಲ್ಲಾ” ಎಂದು ತೋರಿರಬೇಕು. ಆದರೆ, ಶೇಷಾದ್ರಿ ಅಯ್ಯರ್ ಅವರು ಲೌಕಿಕವನ್ನು ಚೆನ್ನಾಗಿ ತಿಳಿದವರು; ಮೊದಲನೆಯ ಬಾರಿಗೇ ಬಂದ ಈ ಅರಿಕೆಯ ತಲೆಯ ಮೇಲೆ ಮೊಟಕದೆ ಉಪಾಯವಾಗಿ ಪರಿಸ್ಥಿತಿಯನ್ನು ಧಾಟಿದರು. ಅವರು ತಾಳ್ಮೆಯಿಂದ ಉತ್ತರವಿತ್ತರು:

“ಎಕ್ಸಿಕ್ಯುಟಿವ್‌ ಕೌನ್ಸಿಲಿಗೆ ಸರ್ಕಾರಕ್ಕೆ ಜವಾಬ್ದಾರರಾಗಿರತಕ್ಕ ಉದ್ಯೋಗಸ್ಥರನ್ನು ವಿನಾ ಇತರರರನ್ನು ಸೇರಿಸುವುದು ಸಮಂಜಸವಾಗಿಲ್ಲ. ಎಕ್ಸಿಕ್ಯುಟಿವ್‌ ಕೆಲಸವನ್ನು ಮಾಡತಕ್ಕುದ್ದರಲ್ಲಿ ಪ್ರತಿನಿಧಿಗಳು ಯಾವ ವಿಷಯದಲ್ಲಿ ಏನನ್ನು ಹೇಳಿದಾಗ್ಯೂ ಅದನ್ನು ಸರ್ಕಾರದವರು ಕೇಳುವರು. ಆದರೆ ಈ ಕೌನ್ಸಿಲಿನಲ್ಲಿ ಪ್ರತಿನಿಧಿಗಳನ್ನು ಮೆಂಬರುಗಳನ್ನಾಗಿ ಸೇರಿಸಿಕೊಳ್ಳಲಾಗುವುದಿಲ್ಲ.”

ಈ ಉತ್ತರವನ್ನು ಕೇಳಿ ಹತಾಶರಾದ ಸದಸ್ಯರು ಕಾನೂನು ಮಾಡತಕ್ಕ ಒಂದು ಲೆಜಿಸ್ಲೆಟಿವ್‌ ಕೌನ್ಸಿಲನ್ನಾದರೂ ರಚಿಸಿ ಅದಕ್ಕೆ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಪೈಕಿ ಕೆಲವರನ್ನು ಆರಿಸಿಕೊಳ್ಳಬೇಕು ಎಂದು ಪ್ರಾರ್ಥಿಸಿದರು. ಇದಕ್ಕೆ ಶೇಷಾದ್ರಿ ಅಯ್ಯರ್ ಅವರು “ಈ ಸಂಸ್ಥಾನದಲ್ಲಿ ಕಾನೂನು ಮಾಡತಕ್ಕದ್ದು ವಿಶೇಷವಾಗಿಲ್ಲ. ನಾವು ಜಾರಿಗೆ ತರತಕ್ಕ ಕಾನೂನುಗಳೆಲ್ಲಾ ಬ್ರಿಟಿಷ್‌ ಇಂಡಿಯಾದ ಕಾನೂನುಗಳಾಗಿ ಇರುತ್ತವೆ. ಅವುಗಳನ್ನು ಸಂದರ್ಭಗಳಿಗೆ ಅನುಸಾರವಾಗಿ ಜಾರಿಯಲ್ಲಿ ತರುತ್ತಾ ಇದ್ದೇವೆ, ಇದಕ್ಕಾಗಿ ಒಂದು ಕ್ರಮವಾದ ಲೆಜಿಸ್ಲೆಟಿವ್‌ ಕೌನ್ಸಿಲು ಅವಶ್ಯಕವಿಲ್ಲ” ಎಂದು ಉತ್ತರ ನೀಡಿದರು.

ಈ ಕೋರಿಕೆಯೂ ನಿರರ್ಥಕವಾದ ಮೇಲೆ ಪ್ರಜಾಪ್ರತಿನಿಧಿ ಸಭೆಯ ಸದಸ್ಯರು “ಸ್ವಾಮಿ, ನಾವು ವರ್ಷಕೊಂದಾವರ್ತಿ ಸೇರಿ ಅರಣ್ಯ ರೋದನ ಮಾಡಿದರೆ ಪ್ರಯೋಜನವೇನು? ಅದಕ್ಕೋಸ್ಕರ ಪ್ರಜಾಪ್ರತಿನಿಧಿ ಸಭೆಯ ಸದಸ್ಯರೇ ಮೂರು ವರ್ಷಕೊಂದಾವರ್ತಿ ಒಂದು ಸ್ಟ್ಯಾಂಡಿಂಗ್‌ ಕಮಿಟಿಯನ್ನು ಚುನಾವಣೆ ಮಾಡಿಕೊಳ್ಳುತ್ತೇವೆ.  ಈ ಸ್ಟ್ಯಾಂಡಿಂಗ್‌ ಕಮಿಟ ವರ್ಷದಲ್ಲಿ ಆಗಾಗ್ಗೆ ಬೆಂಗಳೂರಿನಲ್ಲೋ, ಮೈಸೂರಿನಲ್ಲೇ ಕಲೆತು ಸಂಸ್ಥಾನದ ಪ್ರಜೆಗಳ ಸಮಸ್ಯೆಗಳನ್ನು ಪರಿಶೀಲಿಸಿ ಸರ್ಕಾರ ಮಾಡಬೇಕಾದ ಕೆಲಸಗಳನ್ನು ಕುರಿತು ತೀರ್ಮಾನಗಳನ್ನು ಕಳುಹಿಸುತ್ತೇವೆ. ಸರ್ಕಾರದವರು ಆ ಸ್ಟ್ಯಾಂಡಿಂಗ್‌ ಕಮಿಟಿಯನ್ನೂ ಅದರ ತೀರ್ಮಾನಗಳನ್ನೂ ಒಪ್ಪಬೇಕು” ಎಂದು ಪ್ರಾರ್ಥಿಸಿದರು.

ಶೇಷಾದ್ರಿ ಅಯ್ಯರ್ ಅವರಿಗೆ ಈ ಸಲಹೆ ಸೂಕ್ತವಾಗಿದೆಯೆಂದು ತೋರಿತು. ಅವರು ಅಸೆಂಬ್ಲಿಯ ಸ್ಟಾಂಡಿಂಗ್‌ ಕಮಿಟಿಯ ರಚನೆಯನ್ನೂ, ಅದರ ತೀರ್ಮಾನಗಳನ್ನೂ ಒಪ್ಪುವುದಾಗಿ ತಿಳಿಸಿದರು. ಆದರೆ, ಕಾನೂನುಬದ್ಧವಾದ ಯಾವ ಆರ್ಡರನ್ನೂ ಸರ್ಕಾರ ಮಾಡಲಿಲ್ಲ. ಇದೇ ಶೇಷಾದ್ರಿ ಅಯ್ಯರ್ ಅವರ ರಾಜಕೀಯ ಚಾಣಕ್ಯತನ.

ಇದು ನಡೆದದ್ದು ೧೮೯೦ರಲ್ಲಿ. ದಿವಾನರಿಂದ ಭರವಸೆ ದೊರೆತಮೇಲೆ ಪ್ರಜಾಪ್ರತಿನಿಧಿಗಳು ಸಭೆ ಸೇರಿ ಎಲ್ಲಾ ಜಿಲ್ಲೆಯ ಪ್ರತಿನಿಧಿಗಳನ್ನೂ ಒಳಗೊಂಡ ಒಂದು ಸ್ಟ್ಯಾಂಡಿಂಗ್‌ ಕಮಿಟಿಯನ್ನು ಮಾಡಿಕೊಂಡರು, ದಾವಣಗೆರೆ ಸದಸ್ಯ ಎಚ್‌.ಎಸ್‌. ನಂಜುಂಡಯ್ಯ ಈ ಕಮಿಟಿಗೆ ಅಧ್ಯಕ್ಷರಾದರು. ಮೈಸೂರಿನ ಎಂ.ಸಿ. ರಂಗಯಂಗಾರ್ಯರು ಕಾರ್ಯದರ್ಶಿ. ಸದಸ್ಯರು: ಅಂಬಳೆ ಅಣ್ಣಯ್ಯ ಪಂಡಿತ, ಎಂ. ವೆಂಕಟಕೃಷ್ಣಯ್ಯ, ಡಿ. ವೆಂಕಟರಾಮಯ್ಯ, ಚಿಕ್ಕಮಗಳೂರು ಕಾಫಿ ಪ್ಲಾಂಟರ್ ಸಿ. ಶ್ರೀನಿವಾಸರಾವ್‌, ಶ್ರೀನಿವಾಸ ಜೋಯಿಸ್‌, ಎಚ್‌ ಕೃಷ್ಣರಾವ್‌, ವೆಂಕಟಸುಬ್ಬಯ್ಯ, ನಂಜುಂಡಯ್ಯ, ರಾಮಾನುಜಯಂಗಾರ್, ಸುಬ್ಬಯ್ಯ, ಸದಾಶಿವರಾವ್‌, ನಾಡಿಗ ರಾಮಣ್ಣ, ಆರ್. ಎಚ್‌ ಎಲಿಯೆಟ್‌ ಮತ್ತು ಬುಕನನ್‌.

ಸ್ಟಾಂಡಿಂಗ್‌ ಕಮಿಟಿಯ ಕೆಲಸಕಾರ್ಯಗಳು ಕ್ರಮಬದ್ಧವಾಗಿ ನಡೆಯುತ್ತಿದ್ದವು. ಈ ಕಮಿಟಿಯ ಕಾರ್ಯಕಲಾಪಗಳನ್ನೆಲ್ಲಾ ಇಂಗ್ಲಿಷಿನಲ್ಲಿಯೇ ಬರೆದು ಸರ್ಕಾರಕ್ಕೆ ಕಳುಹಿಸಲಾಗುತ್ತಿತ್ತು. ೧೮೯೦-೧೮೯೧, ಈ ಎರಡು ವರ್ಷಗಳು ಕಮಿಟಿಯ ಕೆಲಸ ಸರ್ಕಾರದೊಡನೆ ಯಾವ ವಿರಸವೂ ಇಲ್ಲದೆ ನಡೆಯಿತು.

೧೮೯೨ರಲ್ಲಿ ಸ್ಟ್ಯಾಂಡಿಂಗ್‌ ಕಮಿಟಿಯ ಚುನಾವಣೆದು ನಡೆದು ವೆಂಕಟಕೃಷ್ಣಯ್ಯನವರು.ಕಾರ್ಯದರ್ಶಿಯಾದರು. ಅವರು ಆ ಕಾಲದ ಪ್ರಗತಿಗಾಮಿಗಳಾದ ಪ್ರಜಾಸ್ವಾತಂತ್ರ್ಯ ಪ್ರೇಮಿಗಳಲ್ಲಿ ಅಗ್ರಗಣ್ಯರು; ಪಾರ್ಲಿಮೆಂಟರಿ ರಾಜ್ಯಪದ್ಧತಿ ಹೇಗೆ ನಡೆಯುತ್ತದೆ ಎಂಬುದನ್ನು ಚೆನ್ನಾಗಿ ತಿಳಿದಿದ್ದವರು. ಅವರ ರಾಜಕೀಯ ಸಿದ್ಧಾಂತದಂತೆ, ಇಂಗ್ಲೆಂಡಿನ ರಾಜನಂತೆ, ರಾಜರು ಯಾವ ತಪ್ಪೂ ಮಾಡುವವರಲ್ಲ. “The King can do no wrong” ಎಂದರೆ ರಾಜ್ಯಾಡಳಿತದ ಯಾವ ತಪ್ಪಿಗೂ ರಾಜರು ಜವಾಬ್ದಾರರಲ್ಲ, ಮುಖ್ಯ ಮಂತ್ರಿಯದೇ ಜವಾಬ್ದಾರಿ. ಆ ರೀತಿಯಾದ ರಾಜನಿರುವ ಪದ್ಧತಿಯೇ ವೆಂಕಟಕೃಷ್ಣಯ್ಯನವರ ಆದರ್ಶ. ಆದುದರಿಂದ ಮೈಸೂರಿನಲ್ಲಿಯೂ ಇದೇ ರೀತಿಯ ಆದರ್ಶವನ್ನು ಜಾರಿಗೆ ತರಬೇಕೆಂದು ಪ್ರಯತ್ನಿಸಿದರು. ಯಾವ ಮುಖ್ಯ ಮಂತ್ರಿಯೇ ಆಗಲಿ ಮಹಾರಾಜರ ಹೆಸರನ್ನು ರಾಜ್ಯಾಡಳಿತಕ್ಕೆ ಎಳೆಯದೆ ತಾನೇ ಪೂರ್ಣ ಜವಾಬ್ದಾರಿಯನ್ನು ವಹಿಸಬೇಕು. ಈ ತತ್ತ್ವವನ್ನು ಅನುಸರಿಸಿ ವೆಂಕಟಕೃಷ್ಣಯ್ಯನವರು ಮಹಾರಾಜರಲ್ಲಿ ಪೂರ್ಣ ರಾಜಭಕ್ತಿಯಿಟ್ಟು, ಅವರ ಹೆಸರನ್ನು ಎಳೆಯದೆ, ರಾಜ್ಯಾಡಳಿತದ ಯಾವ ಅಂಶಕ್ಕೂ ದಿವಾನರನ್ನೂ ಅವರ ಎಕ್ಸಿಕ್ಯುಟಿವ್‌ ಕೌನ್ಸಿಲನ್ನೂ, ಪಾರ್ಲಿಮೆಂಟರಿ ಪದ್ಧತಿಯನ್ನು ಅನುಸರಿಸಿ, ಪೂರ್ಣವಾಗಿ ಟೀಕಿಸುತ್ತಿದ್ದರು. ಅವರು ಯಾವಾಗಲೂ ವೈಯಕ್ತಿಕ ಜೀವನದ ವಿಷಯಗಳನ್ನು ವರ್ಜಿಸುತ್ತಿದ್ದರು. ಆದರೂ ಅಧಿಕಾರಿಗಳು, ರಂಗಾಚಾರ್ಲುರವರಂತೆ, ನೀತಿವಂತರಾಗಿ ಇರಬೇಕೆಂಬ ಅಭಿಪ್ರಾಯವನ್ನು ಹೊಂದಿದ್ದರು.

ವೆಂಕಟಕೃಷ್ಣಯ್ಯನವರು ತಮ್ಮ ಸಮಕಾಲೀನರಾದ ಬ್ರಿಟಿಷ್‌ ಇಂಡಿಯಾ ರಾಜನೀತಿಜ್ಞರ ಅಭಿಪ್ರಾಯಗಳನ್ನೂ ಸುಭಾಷಿತಗಳನ್ನೂ ಚೆನ್ನಾಗಿ ಗಮನಿಸಿ ಮನಸ್ಸಿನಲ್ಲಿಟ್ಟುಕೊಳ್ಳುತ್ತಿದ್ದರು. ಆ ಕಾಲದ ಮಹಾಮಹಿಮರಾದ ಭಾರತೀಯ ರಾಜಕೀಯ ಗುರು ದಾದಾಭಾಯಿ ನವರೋಜಿಯವರೆಂದರೆ ಅವರಿಗೆ ಅತ್ಯಂತ ಗೌರವ. ಅವರು ರಚಿಸಿದ “Poverty and Un-British Rule in India” ಎಂಬ ಪುಸ್ತಕವನ್ನು ಚೆನ್ನಾಗಿ ಓದಿ ಗ್ರಹಿಸಿದ್ದರು.

ಬ್ರಿಟಿಷರು ತಮ್ಮ ದೇಶದಲ್ಲಿ ಒಳ್ಳೇ ಜನಾಂಗವಾದರೂ ಭಾರತದಲ್ಲಿ ಬ್ರಿಟಿಷ್‌ ನೀತಿಗೆ ಸಮ್ಮತವಲ್ಲದ ರೀತಿಯಲ್ಲಿ ನಡೆಯುತ್ತಿದ್ದಾರೆ ಎಂಬುದು ವೆಂಕಟಕೃಷ್ಣಯ್ಯನವರ ಮತ. ನಮ್ಮ ಜನ ಬ್ರಿಟಿಷರ ಒಳ್ಳೆ ನಡೆನುಡಿಗಳನ್ನು ಕಲಿಯಬೇಕೆಂಬುದು ಅವರ ಅಭಿಪ್ರಾಯ. ಬ್ರಿಟಿಷರು ತಮ್ಮ ದೇಶದಲ್ಲಿ ಬಹಳ ನ್ಯಾಯಪ್ರಿಯರು, ಅನ್ಯಾಯವನ್ನು ಸಹಿಸರು ಎಂಬುದು ಅವರ ನಂಬಿಕೆ. ಆದುದರಿಂದ ಅನೇಕಾವರ್ತಿ ಇವರು ಬ್ರಿಟಿಷ್‌ ನ್ಯಾಯಪ್ರಿಯತೆಯನ್ನು ಕೊಂಡಾಡುತ್ತಿದ್ದರು. ಅವರ ಭಾವನೆಗಳನ್ನು ನೋಡಿ ಬ್ರಿಟಿಷ್‌ ರೆಸಿಡೆಂಟರು ಸಂತೋಷಪಟ್ಟು, ‘ನಿಮ್ಮಂಥದವರು ನಮ್ಮ ದೇಶವಾದ ಇಂಗ್ಲೆಂಡಿಗೂ ಭೂಷಣ ಪ್ರಾಯರು’ ಎಂದು ಹೇಳಿದರು. ವೆಂಕಟಕೃಷ್ಣಯ್ಯನವರದು ಅಂತಹ ಗುಣ.

ಅಂತಹವರು ಮೈಸೂರು ಪ್ರಜಾಪ್ರತಿನಿಧಿ ಸದಸ್ಯರ ಸ್ಟ್ಯಾಂಡಿಂಗ್‌ ಕಮಿಟಿಯ ಕಾರ್ಯದರ್ಶಿಯಾದ ಮೇಲೆ ಶೇಷಾದ್ರಿ ಅಯ್ಯರ್ ಅವರಿಗೆ ಅಸೆಂಬ್ಲಿಯ ವಾತಾವರಣ ಸ್ವಲ್ಪ ಬಿಸಿಯಾದ್ದರಲ್ಲಿ-ಆಶ್ಚರ್ಯವೇನಿಲ್ಲ. ತಾವೇ ಒಪ್ಪಿ ಸ್ಥಾಪನೆಯಾದ ಸ್ಟ್ಯಾಂಡಿಂಗ್‌ ಕಮಿಟಿಯನ್ನು ಅಂತ್ಯಗೊಳಿಸಲು ಅನೇಕ ಭೇದ ನೀತಿಗಳನ್ನು ಶೇಷಾದ್ರಿ ಅಯ್ಯರ್ ಅವರು ಹೂಡಿದರು. ಮೊದಲುಮೊದಲು, ೧೮೯೨ರಲ್ಲಿ, ಸ್ಟ್ಯಾಂಡಿಂಗ್‌ ಕಮಿಟಿಯ ಬಗ್ಗೆ ಮಾತನಾಡುತ್ತಾ ದಿವಾನರು “ನಿಮ್ಮ ನಿಮ್ಮಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ನಾವು ಈ ಕಮಿಟಯ ಅಭಿಪ್ರಾಯವನ್ನು ಮನ್ನಿಸುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು. ಕಾರ್ಯದರ್ಶಿ ವೆಂಕಟಕೃಷ್ಣಯ್ಯನವರು “ಯಾವ ಸಮಿತಿ ಸಭೆಯಲ್ಲಾಗಲೀ ಭಿನ್ನಾಭಿಪ್ರಾಯಗಳು ಇದ್ದೆ ಇರುತ್ತವೆ. ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಇದು ಸಹಜ. ವಿಷಯಗಳ ಮೇಲೆ ಚರ್ಚೆಯಾಗುತ್ತದೆ. ತೀರ್ಮಾನ ಬಹುಮತದ ಪ್ರಕಾರ ಆಗುತ್ತದೆ. ಈ ಕ್ರಮ ನ್ಯಾಯವಾದದ್ದೇ” ಎಂದು ಉತ್ತರವಿತ್ತರು.

ಈ ಮಧ್ಯೆ, ಈ ಸಭೆಯ ಕೆಲವು ಸದಸ್ಯರು ಮತ್ತು ಹೊರಗಿನ ಕೆಲವು ವೃತ್ತ ಪತ್ರಿಕೆಗಳು, ಯಾರ ಪ್ರೇರಣೆಯಿಂದಲೇ ಏನೋ, “ನಮಗೆ ಈ ಸ್ಟ್ಯಾಂಡಿಂಗ್‌ ಕಮಿಟಿ ಬೇಕಾಗಿಲ್ಲ. ಇದರಲ್ಲಿ ಚರ್ಚೆಗಳೆಲ್ಲಾ ಇಂಗ್ಲಿಷಿನಲ್ಲೇ ನಡೆಯುತ್ತದೆ. ನಮಗೆ ಅರ್ಥವಾಗುವುದಿಲ್ಲ. ಓಟು ತೆಗೆದುಕೊಂಡು ಚರ್ಚೆಯ ವಿಷಯಗಳನ್ನು ನಿಗದಿ ಮಾಡುತ್ತಾರೆ. ಕೆಲವು ಸದಸ್ಯರ ದೊಡ್ಡಸ್ತಿಗೆಗೋಸ್ಕರ ಈ ಕಮಿಟಿ ಇದೆ. ಅವರು ಎಲ್ಲಾ ಮರ್ಯಾದೆಗಳನ್ನೂ ಪಡೆಯುತ್ತಾರೆ. ಬಾಕಿಯವರಿಗೆ ಎಲ್ಲಾ ಸೊನ್ನೆ” ಎಂಬುದಾಗಿ ಪ್ರಚಾರ ಮಾಡಿ, ಅಸೆಂಬ್ಲಿ ಅಧಿವೇಶನದಲ್ಲಿ ಸ್ಟ್ಯಾಂಡಿಂಗ್‌ ಕಮಿಟಿಯ ಬಗ್ಗೆ ಅಸಮಾಧಾನವನ್ನು ಸೂಚಿಸಿದರು.

ಹೇಗ್‌ ಸಾಹೇಬರು ಪ್ರಜಾಪ್ರತಿನಿಧಿ ಸಭೆಯಲ್ಲಿ “ನಾನು ಕಮಿಟಿಯಲ್ಲಿದ್ದೇನೆ. ಮೆಂಬರುಗಳು ತರತಕ್ಕ ವಿಷಯಗಳಲ್ಲಿ ಕೆಲವನ್ನು ಸ್ಥಳೀಯ ವಿಷಯಗಳೆಂದೂ, ಕೆಲವನ್ನು ಸಾಮಾನ್ಯವಿಷಯಗಳೆಂದೂ ಬಹುಜನ ಸಮ್ಮತಿ ಮೇಲೆ ಓಟು ತೆಗೆದುಕೊಂಡು ವಿಂಗಡಿಸಿದರು. ಕೆಲವರ ಅಸಮಾಧಾನಕ್ಕೆ ಇದು ಕಾರಣವಾಗಿರಬಹುದು” ಎಂದು ಹೇಳಿದರು.

ವೆಂಕಟಕೃಷ್ಣಯ್ಯನವರು ಉತ್ತರವಾಗಿ ಹೇಳಿದರು: “ಪ್ರತಿನಿಧಿಗಳಲ್ಲಿ ಬಹುಮಂದಿ ಸ್ಟ್ಯಾಂಡಿಂಗ್‌ ಕಮಿಟಿಯ ಪಕ್ಷದವರಾಗಿರುತ್ತಾರೆ. ಈ ವಿಷಯವನ್ನು ಗೊತ್ತುಮಾಡುವುದು ಅಸಾಧ್ಯವಲ್ಲ. ಈಗ ಓಟು ತೆಗೆದುಕೊಂಡರೆ ಈ ವಿಷಯ ವ್ಯಕ್ತವಾಗುತ್ತದೆ”.

ಇದಕ್ಕೆ ಶೇಷಾದ್ರಿ ಅಯ್ಯರ್ ಅವರು “ಈ ಕಮಿಟಿಯನ್ನು ನಡೆಸತಕ್ಕವರು ಸ್ವಯಂ ಚುನಾಯಿತ (ಸೆಲ್ಫ್‌ಕಾನ್‌ಸ್ಟಿಟ್ಯೂಟೆಡ್‌) ಸದಸ್ಯರಾಗಿರುವುದಲ್ಲದೆ, ತಮಗೆ ಇಲ್ಲದೇ ಇರತಕ್ಕ ಅಧಿಕಾರವನ್ನೆಲ್ಲಾ ಸ್ವೀಕರಿಸಿಕೊಂಡು, ಓಟು ವಗೈರೆಗಳನ್ನು ತೆಗೆದುಕೊಳ್ಳುತ್ತಾರೆ” ಎಂದು ಟೀಕಿಸಿದರು.

ಕೆಲವು ಸದಸ್ಯರು “ಸೆಲ್ಫ್‌ಕಾನ್‌ಸ್ಟಿಟ್ಯೂಟೆಡ್‌” ಎಂಬ ಆಪಾದನೆಯನ್ನು ನಿರಾಕರಿಸಿದರು.

ದಿವಾನರು ತಮ್ಮ ಮುಕ್ತಾಯ ಭಾಷಣದಲ್ಲಿ “ಮೆಂಬರುಗಳು ತಿಳಿದವರಲ್ಲ. ಅನೇಕರಿಗೆ ಇಂಗ್ಲಿಷ್‌ ಬರುವುದಿಲ್ಲ; ಓಟು ಮುಂತಾದ್ದು ಅರ್ಥವಾಗುವುದಿಲ್ಲ. ಆದುದರಿಂದ ಇಂಗ್ಲಿಷಿನಲ್ಲಿ ಚರ್ಚಿಸದೆ, ಓಟು ಮುಂತಾದ್ದು ತೆಗೆದುಕೊಳ್ಳದೆ, ಮೆಂಬರುಗಳನ್ನು ಸುಲಭಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಸಮಾಧಾನವಾಗಿ ಮಾತನಾಡಿದರು.

ಆದರೆ, ೧೮೯೩ನೇ ಪ್ರಜಾಪ್ರತಿಧಿ ಸಭೆ ಅಧಿವೇಶನದಲ್ಲಿ ಸ್ಟ್ಯಾಂಡಿಂಗ್‌ ಕಮಿಟಿಯು ಮಾಡಿದ್ದ ನಿರ್ಣಯಗಳ ಬಗ್ಗೆ ವೆಂಕಟಕೃಷ್ಣಯ್ಯನವರು ಪ್ರಸ್ತಾಪಿಸಲು ಎದ್ದಾಗ, ದಿವಾನರು ತೀವ್ರದೃಷ್ಟಿಯನ್ನು ಬೀರಿ “ಈ ಕಮಿಟಿಗೆ ವಿರೋಧವಾಗಿ ಕೆಲವು ಜನ ಮೆಂಬರುಗಳು ನಮ್ಮಲ್ಲಿ ಮಾತನಾಡಿದರು. ಅವರು ಈ ಕಮಿಟಿ ಬೇಕಾಗಿಲ್ಲವೆಂದು ಅಭಿಮತವಿತ್ತರು.” ಎಂದು ಹೇಳಿದರು.

ಕಡೆಯಲ್ಲಿ, ವೆಂಕಟಕೃಷ್ಣಯ್ಯನವರು ನೇರವಾಗಿ ಉತ್ತರವಿತ್ತರು: “ಕೆಲವು ಸದಸ್ಯರಿಗೆ ಈ ಸ್ಟ್ಯಾಂಡಿಂಗ್‌ ಕಮಿಟಿ ಬೇಕಿಲ್ಲ ಎಂಬುದಾಗಿ ದಿವಾನರು ಹೇಳಿದರು. ಹೆಚ್ಚು ಮಂದಿ ಸದಸ್ಯರಿಗೆ ಈ ಕಮಿಟಿಯಿಂದ ಪ್ರಯೋಜನವಿಲ್ಲವೆಂದು ತೋರಿದ ಪಕ್ಷದಲ್ಲಿ ಈ ಕಮಿಟಿ ಇರುವುದರಿಂದ ಯಾವ ಪ್ರಯೋಜನವೂ ಇಲ್ಲ. ಆದರೆ ಇದು ಪ್ರಯೋಜನವಾದದ್ದೆಂದು ಸರ್ಕಾರದವರ ತಾತ್ಪರ್ಯ ಇದ್ದು, ಹೆಚ್ಚು ಸದಸ್ಯರ ತಾತ್ಪರ್ಯವೂ ಇದ್ದ ಪಕ್ಷದಲ್ಲಿ, ಇದು ಇರಬಹುದು. ಹೆಚ್ಚು ಜನರಿಗೆ ಇದು ಅಭಿಮತವಾದದ್ದು ಹೌದೋ ಅಲ್ಲವೋ ಎಂಬುದನ್ನು ಈ ಸಭೆಯಲ್ಲಿ ಓಟು ತೆಗೆದುಕೊಂಡು ನಿಷ್ಕರ್ಷೆ ಮಾಡಿದರೆ ಈ ಪ್ರತಿನಿಧಿ ಸಭೆಯ ಅಭಿಮಾನಿಗಳು ಸರ್ಕಾರಕ್ಕೆ ಬಹಳ ಕೃತಜ್ಞರಾಗಿರುವರು.”

ದಿವಾನರಿಗೆ ಗೊತ್ತಿತ್ತು, ಓಟು ತೆಗೆದುಕೊಂಡರೆ ಹೆಚ್ಚು ಜನ ಸದಸ್ಯರು ಸ್ಟ್ಯಾಂಡಿಂಗ್‌ ಕಮಿಟಿಯು ಇರುವುದಕ್ಕೆಅಭಿಮತರಾಗಿರುತ್ತಾರೆ ಎಂಬುದು. ಆದುದರಿಂದ, ದಿವಾನರು “ಕಮಿಟಿಯಿರುವುದೂ, ಇಲ್ಲದಿರುವುದು ಎರಡು ನಮಗೆ ಒಂದೇ, ಕಮಿಟಿಯನ್ನು ಇಟ್ಟುಕೊಳ್ಳುವುದು ಪ್ರತಿನಿಧಿಗಳಿಗೆ ಸೇರಿದ್ದು” ಎಂದು ಬಿಟ್ಟರು!

ರೀಸ್‌ ಸಾಹೇಬರು “ಈ ಕಮಿಟಿ ಅತ್ಯಾವಶ್ಯಕ” ಎಂದು ಹೇಳಿದರು, ಅಲ್ಲದೆ, “ಪೂರ್ವದಲ್ಲಿ ಈ ಕಮಿಟಿಯ ವಿಷಯದಲ್ಲಿ ದಿವಾನರ ಅಭಿಪ್ರಾಯ ಸಂಪೂರ್ಣವಾಗಿ ಅನುಕೂಲವಾಗಿ ಇದ್ದಂತೆ ನನಗೆ ತಿಳಿದು ಬರುತ್ತದೆ”  ಎಂದೂ ಅವರು ಹೇಳಿದರು.

“ಡಿಸ್ಟ್ರಿಕ್ಟಿನ ಮೆಂಬರುಗಳು ಸೇರಿ ಚರ್ಚೆ ಮಾಡಿಕೊಳ್ಳುವುದಕ್ಕೆ ನಾನು ಅಭಿಮತಪಟ್ಟಿರಬಹುದು” ಎಂದು ದಿವಾನರು ಉತ್ತರ ಹೇಳಿದರು.

ರೀಸ್‌ ಸಾಹೇಬರು “ಸ್ಟ್ಯಾಂಡಿಂಗ್‌ ಕಮಿಟಿಯಿಂದ ಪ್ರಜಾಪ್ರತಿನಿಧಿ ಸಭೆಗೆ ಬಹಳ ಅನುಕೂಲ” ಎಂದು ಪುನಃ ಹೇಳಿದರು.

ದಿವಾನರು “ಪ್ರತಿನಿಧಿಗಳೆಲ್ಲಾ ಸಮ್ಮತಿ ಸೂಚಿಸಿದರೆ ಸ್ಟ್ಯಾಡಿಂಗ್‌ ಕಮಿಟಿ ಮಾಡಿಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟರು.

೧೮೯೪ನೇ ಇಸವಿ ದಿವಾನ್ ಶೇಷಾದ್ರಿ ಅಯ್ಯರ್ ಅವರ ಚರಿತ್ರೆಯಲ್ಲಿ ಅತ್ಯಂತ ಉನ್ನತ ಸ್ಥಾನದ್ದು. ಆಗ ಅವರು ಅಧಿಕಾರದ ಅತ್ಯಂತ ಉನ್ನತ ಸ್ಥಾನದಲ್ಲಿದ್ದುದಲ್ಲದೆ, ತಮ್ಮ ಜೀವನದ ಉತ್ತಮ ದೆಶೆಯಲ್ಲಿಯೂ ಇದ್ದರು. ಮೈಸೂರಿನಲ್ಲಿ ಅವರ ಅಧಿಕಾರವೇ ಅಧಿಕಾರ. ಭಾರತದಲ್ಲೇ ಅತ್ಯಂತ ಉತ್ತಮ ಆಡಳಿತಗಾರರೆಂಬ ಪ್ರಶಸ್ತಿ ಪಡೆದಿದ್ದರು. ಮದ್ರಾಸಿನ ಕೆಲವು ಪತ್ರಿಕೆಗಳಂತೂ ಅವರನ್ನು ಕೊಂಡಾಡಿದ್ದೂ ಕೊಂಡಾಡಿದ್ದೇ.

ಶೇಷಾದ್ರಿ ಅಯ್ಯರ್ ಅವರು ಹುಟ್ಟಿದ್ದು ೧೮೪೫ ರಲ್ಲಿ; ಇವರಿಗೂ ವೆಂಕಟಕೃಷ್ಣಯ್ಯನವರಿಗೂ ಒಂದೇ ವರ್ಷ ಅಂತರ. ಶೇಷಾದ್ರಿ ಅಯ್ಯರ್ ಅವರು ಹುಟ್ಟಿದ ಊರು ಕುಮಾರಪುರಂ. ಅವರ ಪೂರ್ವಜರು ಪಾಲಘಾಟನವರಾದರೂ, ಅವರ ತಂದೆ ಕೃಷ್ಣ ಅಯ್ಯರ್ ಕಲ್ಲಿಕೋಟೆಯಲ್ಲಿ ನೆಲೆಸಿದ್ದರು. ಇವರು ತಮ್ಮ ಮಗನಿಗೆ ಇನ್ನೂ ೬ ತಿಂಗಳಾಗಿರುವಾಗಲೇ ಇಹಲೋಕ ಯಾತ್ರೆ ಮುಗಿಸಿದರು. ಬಾಲಕ ಶೇಷಾದ್ರಿಯನ್ನು ಅವರ ತಾಯಿ ಮತ್ತು ದೊಡ್ಡಪ್ಪ ಮುಂದಕ್ಕೆ ತಂದರು. ಶೇಷಾದ್ರಿ ಅತ್ಯಂತ ಬುದ್ಧಿಶಾಲಿ, ಎಲ್ಲಾ ತರಗತಿಗಳಲ್ಲೂ ಉತ್ತಮ ದರ್ಜೆ. ಗಣಿತದಲ್ಲಿ ಅಪ್ರತಿಮ ಪ್ರತಿಭೆ. ೧೮೬೫ರಲ್ಲಿ ಬಿ.ಎ. ಆಯಿತು. ಕಲ್ಲಿಕೋಟೆ ಕಲೆಕ್ಟರ್ ಕಚೇರಿಯಲ್ಲಿ ಯುವಕ ಕೆಲಸಕ್ಕೆ ಸೇರಿದ. ಅದೇ ಕಛೇರಿಯಲ್ಲಿ ಸಿ. ರಂಗಾಚಾರ್ಲು ಡೆಪ್ಯುಟಿ ಕಲೆಕ್ಟರಾಗಿದ್ದರು.

ಶೇಷಾದ್ರಿಯ ಪ್ರತಿಭೆಯನ್ನು ಕಂಡು ಅವನನ್ನು ಮುಂದಕ್ಕೆ ತರಬೇಕೆಂದು ರಂಗಾಚಾರ್ಲು ಸಂಕಲ್ಪಿಸಿದರು. ಅವರು ೧೮೬೮ ರಲ್ಲಿ ಮೈಸೂರಿನ ಪ್ಯಾಲೇಸ್‌ ಕಂಟ್ರೋಲರ್ ಆಗಿ ನೇಮಿತರಾದ ಕೂಡಲೇ, ಶೇಷಾದ್ರಿಯನ್ನು ಮೈಸೂರಿಗೆ ಕರೆಸಿಕೊಂಡು ಅಷ್ಟಗ್ರಾಮ ಡಿವಿಷನ್ ಸೂಪರಿಂಟೆಂಡೆಂಟ್‌ ಕಚೇರಿಯ ಜ್ಯುಡಿಷಿಯಲ್‌ ಶಿರಸ್ತೇದಾರರನ್ನಾಗಿ ನೇಮಿಸಿದರು.

೧೮೭೪ ರಲ್ಲಿ ಶೇಷಾದ್ರಿ ಅಯ್ಯರ್ ಬಿ.ಎಲ್‌. ಪಾಸ್‌ ಮಾಡಿದರು. ೧೮೭೯ ರಲ್ಲಿ ತುಮಕೂರು ಡೆಪ್ಯುಟಿ ಕಮಿಷನರಾದರು; ೧೮೮೧ ರಲ್ಲಿ ಮೈಸೂರು ಡೆಪ್ಯುಟಿ ಕಮಿಷನ್‌ರಾದರು. ೧೮೮೩ರಲ್ಲಿ ಶಿವಮೊಗ್ಗ ಡೆಪ್ಯುಟಿ ಕಮೀಷನರಾದರು. ೧೮೮೩ರಲ್ಲಿ ರಂಗಾಚಾರ್ಲುರವರು ‘ಮೃತರಾದಾಗ, ಶೇಷಾದ್ರಿ ಅಯ್ಯರ್ ಅವರು ಶಿವಮೊಗ್ಗಾ ಡೆಪ್ಯುಟಿ ಕಮಿಷನರಾಗಿದ್ದರು. ಈ ಸ್ಥಾನದಿಂದ ಅವರು ನೇರವಾಗಿ ದಿವಾನ್‌ಗಿರಿಗೆ ಏರಿದರು.

ಅವರು ದಿವಾನ್‌ಗಿರಿಗೆ ಬಂದಾಗ ವಯಸ್ಸು ೩೮. ಇನ್ನೂ ಚಿಕ್ಕ ವಯಸ್ಸು. ೫೦ನೇ ವಯಸ್ಸಿಗೆ ಕಾಲಿಡುತ್ತಿದ್ದಾಗ, ಬ್ರಿಟಿಷ್‌ ಸರ್ಕಾರ ಕೆ.,ಸಿ.ಎಸ್‌.ಐ. ಬಿರುದನ್ನು ದಯಪಾಲಿಸಿತು.

೧೮೯೪ ರ ಆಖೈರು ಹೊತ್ತಿಗೆ ಸಂಸ್ಥಾನದ ಆದಾಯ ಉತ್ತಮ ಹೊಂದಿ, ಖರ್ಚು ಕಳೆದು ಒಂದೂ ಕಾಲು ಲಕ್ಷ ರೂಪಾಯಿ ಉಳಿಯುವ ಹಾಗಾಯಿತು. ವಿದ್ಯಾ ಸಂಸ್ಥೆಗಳು ೧೩ ವರ್ಷದಲ್ಲಿ ೮೬೬ ರಿಂದ ೧೭೯೭ ಕ್ಕೆ ಏರಿದವು. ಇನ್ನೂ ಅನೇಕ ಪ್ರಗತಿಯ ಚಿಹ್ನೆಗಳು ಕಂಡುಬಂದವು.

ಆದುದರಿಂದ, ೧೮೯೪ರ‍ಲ್ಲಿ ಪ್ರಜಾಪ್ರತಿನಿಧಿ ಸಭೆ ಸೇರಿದಾಗ, ಶೇಷಾದ್ರಿ ಅಯ್ಯರ್ ಅವರು ಬಹಳ ದರ್ಪದಿಂದ ವರ್ತಿಸಿದರೆಂದು ಹೇಳಬಹುದು. ವೆಂಕಟಕೃಷ್ಣಯ್ಯನವರು ಹೇಳಲುತ್ತಿದ್ದಂತೆ, ಅಧಿಕಾರ ಮದವನ್ನು ಏರಿಸಿತು. ಅದು ತಲೆಗೆ ಏರಿದರೆ, ಮನುಷ್ಯನ ತಲೆ ಕೆಡುತ್ತದೆ , ಅವರು ಪ್ರ.ಪ್ರ. ಸಭೆಯಲ್ಲಿ ಸ್ಟ್ಯಾಂಡಿಂಗ್‌ ಕಮಿಟಿಯನ್ನು ಬಹಳ ತಿರಸ್ಕಾರವಾಗಿ ಕಂಡರು. ಪ್ರಜಾಪ್ರತಿನಿಧಿಗಳು ಸುಷುಪ್ತ ಅವಸ್ಥೆಯಲ್ಲಿದ್ದ ಸ್ಟ್ಯಾಂಡಿಂಗ್‌ ಕಮಿಟಿಯವರನ್ನು ಉಜ್ಜೀವಿಸುವಂತೆ ಪ್ರಯತ್ನ ಮಾಡಿದರು. ಈ ಕಮಿಟಿಯ ಮೀಟಿಂಗು ನಡೆದು, ಸರ್ಕಾರಕ್ಕೆ ಅನೇಕ ವಿಷಯಗಳನ್ನು ಕಳುಹಿಸಲಾಯಿತು. ‘ಸರ್ಕಾರ ಈ ಕಮಿಟಿಯನ್ನು ಅಂಗೀಕರಿಸಲಿ ಅಥವಾ ಬಿಡಲಿ; ನಾವು ನಮ್ಮ ಕೆಲಸವನ್ನು ಮಾಡುತ್ತ ಬರಬೇಕು’ ಎಂದು ಕಮಿಟಿಯೂ, ಜನರಲ್‌ ಸಭೆಯೂ ನಿರ್ಧರಿಸಿದವು. ೧೮೯೪ ನೇ ಪ್ರಜಾಪ್ರತಿನಿಧಿ ಸಭೆಯಲ್ಲಿ ದಿವಾನರಿಗೂ ಸ್ಟ್ಯಾಂಡಿಂಗ್‌ ಕಮಿಟಿಗೂ ವೈಷಮ್ಯ ಜಾಸ್ತಿಯಾಗಿ, ಈ ಕಮಿಟಿಯನ್ನು ಪೂರ್ತಿಯಾಗಿ ತಿರಸ್ಕರಿಸಲೇಬೇಕೆಂದು ಅವರು ನಿರ್ಧರಿಸಿದರು.

೧೮೯೪-೯೫ ರಲ್ಲಿ ತುಮಕೂರು ಜಿಲ್ಲೆಯ ಕಡಬಾ, ಗುಬ್ಬಿ, ನಿಟ್ಟೂರು, ಬೆಲವತ್ತ ಪ್ರದೇಶಗಳಲ್ಲಿ ಮಳೆ ಸರಿಯಾಗಿ ಬರದೆ ಬೆಳೆ ಸರಿಯಾಗಿ ಆಗಲಿಲ್ಲ. ಅಲ್ಲಿನ ರೈತರಿಗೆ ಕಂದಾಯ ಕೊಡುವುದು ಕಷ್ಟವಾಯಿತು. ಅವರು ಮಾಫೀಗಾಗಿ ಸರ್ಕಾರವನ್ನು ಕೇಳಿಕೊಂಡರು. ಆದಾಗ್ಯೂ, ರೆವಿನ್ಯೂ ಅಧಿಕಾರಿಗಳು ಕಂದಾಯ ವಸೂಲಿಯ ವಿಷಯದಲ್ಲಿ ರೈತರಿಗೆ ತೊಂದರೆ ಕೊಟ್ಟರು. ರೈತರು ಸರ್ಕಾರಕ್ಕೆ ಫಿರ್ಯಾದು ಕಳುಹಿಸಿದರು.

ಈ ವಿಷಯವನ್ನು ತುಮಕೂರು ಜಿಲ್ಲೆಯ ರೈತರನೇಕರು ೧೮೯೫ನೇ ಮಾರ್ಚ್ ೧೨ರಲ್ಲಿ ಅಸೆಂಬ್ಲಿ ಸ್ಯ್ಯಾಂಡಿಂಗ್‌ ಕಮಿಟಿಗೆ ತಿಳಿಸಿ, ಸರ್ಕಾರದಿಂದ ತಮಗೆ ಪರಿಹಾರ ದೊರೆಯುವಂತೆ ಪ್ರಯತ್ನಿಸಬೇಕೆಂದು ಪ್ರಾರ್ಥಿಸಿದರು. ಸ್ಯ್ಟಾಂಡಿಂಗ್‌ ಕಮಿಟಿ ಈ ಪ್ರಾರ್ಥನೆಯನ್ನು ಸಮರ್ಥಿಸಿ, ಸರ್ಕಾರ ಆ ತಾಲ್ಲೂಕುಗಳ ಪ್ರಜೆಗಳಿಗೆ ಸಹಾನುಭೂತಿ ನೀಡಿ ಕೂಡಲೇ ಪರಿಹಾರ ಕೊಡಬೇಕೆಂದು ನಿರ್ಣಯ ಮಾಡಿತು.

ಸರ್ಕಾರದವರು ಈ ಪ್ರಾರ್ಥನೆಯನ್ನು ಸಹಾನುಭೂತಿಯಿಂದ ಪರಿಶೀಲಿಸದೆ ಸ್ಟ್ಯಾಂಡಿಂಗ್‌ ಕಮಿಟಿಯ ಕಾರ್ಯದರ್ಶಿಗೆ ಬಹಳ ಅಗೌರವವಾದ ಉತ್ತರ ಬರೆದರು. ಅದರ ವಿವರ ಹೀಗಿತ್ತು; “ನಿಮ್ಮ ಕಮಿಟಿಗೆ ಪ್ರಜಾಪ್ರತಿನಿಧಿ ಸಭೆಯ ಪರವಾಗಿ ಸರ್ಕಾರಕ್ಕೆ ಯಾವ ವಿಜ್ಞಾಪನೆ ಮಾಡುವುದಕ್ಕೂ ಅಧಿಕಾರವಿಲ್ಲ. ನೀವು ಮಾಡಿರತಕ್ಕ ಪ್ರಾರ್ಥನೆಗಳಿಗೆ ಸರ್ಕಾರದವರು ಯಾವ ಗಮನವನ್ನೂ ಕೊಡುವುದಿಲ್ಲ. ಈ ಸಂಸ್ಥಾನದ ರೈತರಿಗೆ ಯಾವಾಗ ರಿಮಿಷನ್ ಕೊಡಬೇಕು ಎಂಬ ವಿಷಯವನ್ನು ನಾವು ನಮ್ಮ ಲೋಕಲ್‌ ಆಫಿಸರುಗಳಿಂದ ತಿಳಿದುಕೊಳ್ಳುವುದಕ್ಕೆ ಸಂಪೂರ್ನ ಶಕ್ತರಾಗಿದ್ದೇವೆ. ಈ ವಿಷಯದಲ್ಲಿ ನೀವು ಹೇಳುವುದು ನಮಗೆ ಲೇಶವೂ ಪ್ರಯೋಜನವಿಲ್ಲ.” ಈ ಉತ್ತರಕ್ಕೆ ಚೀಫ್‌ ಸೆಕ್ರೆಟರಿ ಅನಂತಸ್ವಾಮಿರಾಯರ ರುಜು ಇತ್ತು.

ಸರ್ಕಾರದ ಈ ಉತ್ತರ ಎಷ್ಟು ಅವಿನಯದಿಂದಲೂ, ಉದ್ದಂಡತನದಿಂದಲೂ ಕೂಡಿತ್ತೆಂಬುದನ್ನು ಎಲ್ಲರೂ ಅರ್ಥಮಾಡಿಕೊಂಡರು. ಶೇಷಾದ್ರಿ ಅಯ್ಯರ್ ಅವರು ತಮ್ಮ ಸಲಹೆಯಿಂದಲೇ, ಅಸೆಂಬ್ಲಿ ಸದಸ್ಯರಿಂದಲೇ, ರಚಿತವಾದ ಈ ಸ್ಟ್ಯಾಂಡಿಂಗ್‌ ಕಮಿಟಿಯನ್ನು ಇಷ್ಟು ತಿರಸ್ಕಾರವಾಗಿ ಕಂಡದ್ದನ್ನು ನೋಡಿ ಎಲ್ಲರಿಗೂ ಆಶ್ಚರ್ಯವೂ ಕ್ರೋಧವೂ ಉಂಟಾಯಿತು. ಸ್ಥಳೀಯ ಪತ್ರಿಕೆಗಳೂ ಹೊರಗಿನ ಪತ್ರಿಕೆಗಳೂ ಸರ್ಕಾರದ ಈ ನೀತಿಯನ್ನು ಖಂಡಿಸಿದುವು.

ಸ್ಟ್ಯಾಂಡಿಂಗ್‌ ಕಮಿಟಿಯವರು ಪುನಃ ಸಭೆ ಸೇರಿ, ಈ ವಿಷಯವನ್ನು ಚರ್ಚಿಸಿ, ಚೀಫ್‌ ಸೆಕ್ರೆಟರಿಯವರ ಪತ್ರ ಅಗೌರವಕರವಾದುದೆಂದೂ, ದಿವಾನರೇ ಆಗಲಿ ಅಥವಾ ಶ್ರೀಮನ್‌ ಮಹಾರಾಜರ ಕೌನ್ಸಿಲೇ ಆಗಲಿ ಕಮಿಟಿಯ ಸಲಹೆಯನ್ನು ಪುನರ್ವಿಮರ್ಶೆ ಮಾಡಿ, ರೈತರಿಗೆ ಸಹಾಯ ಮಾಡಬೇಕೆಂದೂ ದಿವಾನರಿಗೆ ಬರೆದರು.

ಮದರಾಸಿನ “ಹಿಂದೂ” ಪತ್ರಿಕೆ ದಿವಾನ್ ಶೇಷಾದ್ರಿ ಅಯ್ಯರ್ ಅವರಲ್ಲಿ ವಿಶೇಷ ಗೌರವ ಇಟ್ಟಿದ್ದ ಪತ್ರಿಕೆ. ಈ ಪತ್ರಿಕೆ ಕೂಡ ಚೀಫ್‌ ಸೆಕ್ರೆಟರಿಯ ಪತ್ರವನ್ನು ಟೀಕಿಸಿತು. ಆ ಟೀಕೆಯ ಕನ್ನಡ ಭಾಷಾಂತರವಿದು:

“ಮ.ಎಂ. ವೆಂಕಟಕೃಷ್ಣಯ್ಯನವರಿಗೆ ಮ. ಅನಂತಸ್ವಾಮಿರಾಯರು ಬರೆದಿರತಕ್ಕ ಪತ್ರವನ್ನು ನಾವು ಮುದ್ರಿಸುವಾಗ ಈ ಅಫಿಷಿಯೇಟಿಂಗ್‌ ಸೆಕ್ರೆಟರಿಯವರು ಕಾಗದವನ್ನು ತುಂಬಾ ಮರ್ಯಾದೆಯಿಂದ ಬರೆಯಬಹುದಾಗಿತ್ತು ಎಂದು ನಾವು ನಿನ್ನೆ ಹೇಳಿದೆವು. ಮೈಸೂರಿನಲ್ಲಿ ಸ್ಟ್ಯಾಂಡಿಂಗ್‌ ಸಮಿತಿಯ ಸದಸ್ಯರು ಸಭೆ ಸೇರಿ ಈ ಅಫಿಷಿಯೇಟಿಂಗ್‌ ಸೆಕ್ರೆಟರಿ ಬರೆದಿರತಕ್ಕ ಪತ್ರ ಅಗೌರವವಾದದ್ದೆಂದು ತಮ್ಮ ಅತೃಪ್ತಿ ತೋರಿಸಿದ್ದನ್ನು ಕೇಳಿ ನಾವು ಸಂತೋಷಿಸುತ್ತೇವೆ. ಸಂಸ್ಥಾನದ ಪ್ರತಿಯೊಬ್ಬ ನಿವಾಸಿಗೂ ಇರುವ ಅರ್ಜಿ ಬರೆದುಕೊಳ್ಳತಕ್ಕ ಹಕ್ಕು ಒಂದು ಸ್ಟ್ಯಾಂಡಿಂಗ್‌ ಕಮಿಟಿಗೂ ಇಲ್ಲವೆಮದು ಹೇಳಿರುವ ಮಾತು ಯುಕ್ತವಾಗಿಲ್ಲ. ಮ. ಅಣ್ಣಯ್ಯ ಪಂಡಿತರು ಮತ್ತು ಇತರರು ‘ಸರ್ಕಾರದವರು ಈ ರೀತಿಯಲ್ಲಿ ನಡೆದದ್ದರಿಂದ ಅಧೈರ್ಯ ಪಡಬಾರದು. ನಮ್ಮ ಹಕ್ಕುಗ ಳಿಗೋಸ್ಕರ ನಾವು ಹೊಡೆದಾಡಬೇಕು’ ಎಂದು ಹೇಳಿದ್ದು ಬಹಳ ಸಮಂಜಸವಾಗಿದೆ. ಈ ಸಮಿತಿಯ ನಡೆವಳಿಕೆಯನ್ನು ದಿವಾನರು ಪುನರಾಲೋಚನೆ ಮಾಡಿ ವಿಮರ್ಶೆ ಮಾಡಬೇಕಲು; ಹಾಗಿಲ್ಲದ ಪಕ್ಷದಲ್ಲಿ ಈ ನಡವಳಿಕೆಯ ಆಲೋಚನೆಯನ್ನು ಕೌನ್ಸಿಲಿನಲ್ಲಿ ತರಬೇಕು, ಎಂದು ನಿರ್ಣಯ ಮಾಡಿದ್ದಾರೆ. ಚೀಫ್‌ ಸೆಕ್ರೆಟರಿಯವರ ಪತ್ರದಲ್ಲಿ, ‘ಇಂತಹ ವಿಷಯಗಳಲ್ಲಿ ನೀವು ಹೇಳತಕ್ಕದ್ದು ಸರ್ಕಾರಕ್ಕೆ ಲೇಶಮಾತ್ರವೂ ಪ್ರಯೋಜನವಿಲ್ಲ’ ಎಂಬ ಮಾತುಗಳು ಅಪ್ರಸ್ತುತವಾಗಿಯೂ, ಪ್ರಬಲವಾದ ಕೋಪದಿಂದ ಕೂಡಿದುದಾಗಿ ಮಿ. ವುಲ್ಸ್‌ ಮಿರೆ ಸಾಹೇಬರು ಮಿ. ಜಗನ್ನಾಥ ಶಾಸ್ತ್ರಿಗೆ ಬರೆದ ಕಾಗದದಂತಿದೆ.

“ಪ್ರಜಾಪ್ರತಿನಿಧಿಗಳ ಸ್ಟ್ಯಾಂಡಿಂಗ್‌ ಕಮಿಟಿಯನ್ನು ಸರ್ಕಾರದವರು ಅಂಗೀಕರಿಸಲಿಲ್ಲವೆಂದು ನಾವು ಆಕ್ಷೇಪಣೆ ಮಾಡತಕ್ಕವರಲ್ಲ. ಆದರೆ ರಾಜ್ಯಭಾರ ಮಾಡತಕ್ಕವರಿಗೆ ಬಹಳ ಹೀನಸ್ಥಿತಿಯಲ್ಲಿರುವ ಮನುಷ್ಯ ಕೂಡ ಪ್ರಜೆಗಳ ಕ್ಷೇಮಕ್ಕೆ ಅನುಕೂಲವಾದ ಸಲಹೆಯನ್ನು ಹೇಳುವುದಕ್ಕೆ ಸಮರ್ಥನಾಗಿದ್ದಾನಲ್ಲವೆ? ಅಂತಹವನ ಸಲಹೆಯಿಲ್ಲದೆ ಸರ್ಕಾರಕ್ಕೆ ದೌಲತ್ತು ಮಾಡುವುದಕ್ಕೆ ಅವಕಾಶವಿದ್ದಾಗ್ಯೂ, ಅಂತಹ ಸಲಹೆ ಪ್ರಕಾರ ನಡೆಯತಕ್ಕದ್ದು ಐಚ್ಛಿಕವಾದಾಗ್ಯೂ, ಆ ಸಲಹೆಯನ್ನು ಕೇಳುವುದರಲ್ಲಿ ಬಾಧಕವೇನಿದೆ? ಹೀಗೆ ಸಲಹೆಯನ್ನು ಹೇಳತಕ್ಕ ಮನುಷ್ಯನನ್ನು ಅಪಮಾನ ಮಾಡುವುದು ಧರ್ಮವೇ?

“ಸರ್ಕಾರದಲ್ಲಿರುವವರು ಕೋಪತಾಪಗಳಿಗೆ ಲಗಾಮು ಹಾಕಿ ಪ್ರಜೆಗಳ ವಿಷಯದಲ್ಲಿ ಅವರ ಯುಕ್ತವಾದ ಸಲಹೆಗಳಂತೆ ರಾಜಕಾರ್ಯಗಳನ್ನು ನಡೆಸಿದರೆ ಪ್ರಜೆಗಳ ತೃಪ್ತಿಯನ್ನು ಸಂಪಾದಿಸುವುದಕ್ಕೆ ಬಹಳ ಸಾಧಕವಾಗುವುದು. ಮೈಸೂರು ಸ್ಟ್ಯಾಂಡಿಂಗ್‌ ಕಮಿಟಿಯ ವಿಷಯದಲ್ಲಿ ದಿವಾನರು ಹೇಗೆ ನಡೆದುಕೊಂಡಿರುತ್ತಾರೋ ಹಾಗೆ ಲಾರ್ಡ್‌ ಎರ್ಲ್ಗಿ ಸಾಹೇಬರು ಕೂಡ ನ್ಯಾಷನಲ್‌ ಕಾಂಗ್ರೆಸ್‌ ಡೆಪ್ಯುಟೇಷನ್ ವಿಷಯದಲ್ಲಿ ನಡೆದುಕೊಂಡರು. ಆದರೆ ಎಲ್ಗಿನ್ ಸಾಹೇಬರ ಸೆಕ್ರೆಟರಿ ಮ. ಅನಂತಸ್ವಾಮಿರಾಯರಂತೆ ಅಗೌರವವಾದ ಪದ ಪ್ರಯೋಗಗಳನ್ನು ಮಾಡಿ ಬರೆಯಲಿಲ್ಲ.”