ಮುಂದೆ ಬಂದ ದಿವಾನರು ವಿ.ಪಿ. ಮಾಧವರಾಯರು. ಇವರು ಹಿಂದೆ ಮೈಸೂರು ಸರ್ಕಾರದಲ್ಲಿಯೇ ಅಧಿಕಾರಿಯಾಗಿದ್ದು ೧೮೯೫ರಲ್ಲಿ ಶ್ರೀಮನ್‌ ಮಹಾರಾಜರ ಎಕ್ಸಿಕ್ಯುಟಿವ್‌ ಕೌನ್ಸಿಲಿನ ಮೆಂಬರಾದರು. ಶೇಷಾದ್ರಿ ಅಯ್ಯರ್ ಅವರು ನಿವೃತ್ತರಾದ ಮೇಲೆ ತಮಗೆ ದಿವಾನಗಿರಿ ಬರಬೇಕೆಂದು ಇವರೂ ಇವರ ಮಿತ್ರರೂ ಅಪೇಕ್ಷಿಸಿದ್ದರು. ಆದರೆ, ಶ್ರೀಮನ್‌ ಮಹಾರಾಜರ ಕೃಪೆಯಿಂದ, ಕೃಷ್ಣಮೂರ್ತಿಗಳು ದಿವಾನರಾದರು. ಈ ಸಂಗತಿ ಮಾಧವರಾಯರ ಮನಸ್ಸಿನಲ್ಲಿ ಕುದಿಯುತ್ತಲೇ ಇತ್ತು. ಆದರೇನು ಮಾಡಲಾದೀತು? ಮೈಸೂರು ಸರ್ವಿಸಿನಿಂದ ೧೯೦೪ರಲ್ಲಿ ನಿವೃತ್ತರಾದರು. ಇಷ್ಟರಲ್ಲಿ ಮಾಧವರಾಯರ ಅದೃಷ್ಟದಿಂದ, ಅವರನ್ನು ತಿರುವಾಂಕೂರಿಗೆ ಆಹ್ವಾನಿಸಿ, ಅಲ್ಲಿನ ದಿವಾನ್‌ ಪದವಿಗೆ ನೇಮಿಸಲಾಯಿತು.

ಮಾಧವರಾಯರು ಬಹಳ ದರ್ಪದಿಂದಲೂ ಸಾಮರ್ಥ್ಯದಿಂದಲೂ ತಿರುವಾಂಕೂರಿನ ಆಡಳಿತ ನಡೆಸಿದರು. “ಶ್ರೀ ಮೂಲಂ” ಅಸೆಂಬ್ಲಿಯನ್ನು ಸ್ಥಾಪಿಸಿದರು. ಬ್ರಿಟಿಷ್‌ ಪ್ಲಾಂಟರುಗಳನ್ನು ತಹಬಂದಿಗೆ ತಂದರು. ಸಂಸ್ಥಾನದ ಹಣಕಾಸಿನ ಸ್ಥಿತಿಯನ್ನು ಉತ್ತಮ ಪಡಿಸಿದರು. ಇವರಿಗೆ ಬಹಳ ಒಳ್ಳೇ ಹೆಸರು ಬಂದಿತು.

ಮೈಸೂರಿನಲ್ಲಿ ಕೃಷ್ಣಮೂರ್ತಿಯವರು  ನಿವೃತ್ತರಾದ ಮೇಲೆ ಯಾರನ್ನು ಮುಂದೆ ದಿವಾನರನ್ನಾಗಿ ನೇಮಿಸಬೇಕೆಂಬ ಜಿಜ್ಞಾಸೆಯುಂಟಾಯಿತು. ಮಾಧವರಾಯರು ಮೈಸೂರಿನಲ್ಲಿ ಬಹಳ ಕಾಲ ಸೇವೆ ಮಾಡಿದ್ದುದರಿಂದಲೂ ತಿರುವಾಂಕೂರಿನಲ್ಲಿ ಒಳ್ಳೆಯ ಸಮರ್ಥರೆಂಬ ಹೆಸರನ್ನು ಪಡೆದಿದ್ದುದರಿಂದಲೂ, ಅವರನ್ನೇ ಕರೆಯಿಸಿಕೊಂಡು ದಿವಾನರನ್ನಾಗಿ ಮಾಡಬೇಕೆಂದು ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಧರಿಸಿದರು. ಅದರಂತೆ, ೧೯೦೬ನೇ ಮಾರ್ಚ್‌ನಿಂದ, ಮಾಧವರಾಯರು ಮೈಸೂರಿನ ದಿವಾನರಾದರು.

ಈ ಹೊಸ ದಿವಾನರಿಗೂ ವೆಂಕಟಕೃಷ್ಣಯ್ಯನವರಿಗೂ ಮೊದಲಿನಿಂದ ಪರಿಚಯವೂ ಸ್ನೇಹವೂ ಇತ್ತು. ಮಾಧವರಾಯರು ಮದ್ರಾಸ್‌ ಪಾರ್ಟಿಗೆ ಸೇರಿದವರಾದಾಗ್ಯೂ ತಿರುವಾಂಕೂರಿನಲ್ಲಿ ಅವಗರು ಮಾಡಿದ ಸೇವೆ ವೆಂಕಟಕೃಷ್ಣಯ್ಯನವರ ಪ್ರಶಂಸೆಗೆ ಪಾತ್ರವಾಗಿತ್ತು.

ಇದೂ ಅಲ್ಲದೆ, ಸ್ವಂತ ಗೃಹಕೃತ್ಯದ ಮೇಲೆ ವೆಂಕಟಕೃಷ್ಣಯ್ಯನವರು ತಿರುವಾಂಕೂರಿಗೆ ಹೋಗಿದ್ದಾಗ್ಗೆ, ದಿವಾನ್‌ ಮಾಧವರಾಯರು ಇವರನ್ನು ಬಹಳ ಪ್ರೀತ್ಯಾದರದಿಂದ ಬರಮಾಡಿಕೊಂಡು, ಅವರಿಗೆ ಬೇಕಾದ ಸೌಲಭ್ಯವನ್ನುಂಟುಮಾಡಿದರು. ಈ ಸೌಜನ್ಯತೆಯೂ ವೆಂಕಟಕೃಷ್ಣಯ್ಯನವರ ಮನಸ್ಸಿನ ಮೇಲೆ ಬಹಳ ಪರಿಣಾಮ ಉಂಟುಮಾಡಿತ್ತು. ಇವೆಲ್ಲ ಕಾರಣಗಳಿಂದ, ಪ್ರಾರಂಭದಲ್ಲಿ, ವೆಂಕಟಕೃಷ್ಣಯ್ಯನವರು ಸಾರ್ವಜನಿಕ ಕಾರ್ಯಗಳಲ್ಲಿ ದಿವಾನರೊಡನೆ ಪೂರ್ಣವಾಗಿ ಸಹಕರಿಸಿದರು. ಆದರೆ, ಈ ಸೌಹಾರ್ದ ಮತ್ತು ಸಹಕಾರ ಬಹಳ ಕಾಲ ಉಳಿಯಲಿಲ್ಲ. ಮಾಧವರಾಯರದು ಬಹಳ ದರ್ಪ ಸ್ವಭಾವ; ಶೇಷಾದ್ರಿ ಅಯ್ಯರ್ ಹಾಗೆ, ಜನ ಒಪ್ಪಲಿ ಅಥವಾ ಒಪ್ಪದಿರಲಿ, ತಮಗೆ ಸರಿ ಎಂದು ತೋರಿದ್ದನ್ನು ಮಾಡುವವರು; ಜನಕ್ಕೇನು ಗೊತ್ತು ಎಂಬ ತಿರಸ್ಕಾರ ಬೇರೆ.

ಇಂಡಿಯಾದ ರಾಜಕೀಯ ಪರಿಸ್ಥಿತಿ ಮಾಧವರಾಯರು ಮೈಸೂರು ದಿವಾನರಾಗಿದ್ದ ಮೂರು ವರ್ಷವೂ ಬಹಳ ವಿಷಮವಾಗಿತ್ತು. ಅದರ ಪ್ರತಿಕ್ರಿಯೆ ಮೈಸೂರಿನಲ್ಲೂ ಆಯಿತು. ಈ ಕಾರಣದಿಂದ ಸರ್ಕಾರ ಕೆಲವು ಉಗ್ರ ಕಾರ್ಯಗಳನ್ನು ಕೈಗೊಂಡಿತು. ೧೯೦೮ ರಲ್ಲಿ ಮೊದಲನೇ ಬಾರಿಗೆ ಮೈಸೂರಿನಲ್ಲಿ ನ್ಯೂಸ್‌ ಪೇಪರ್ ರೆಗ್ಯುಲೇಷನ್ ಎಂಬ ಕ್ರೂರ ಪತ್ರಿಕಾ ಕಾನೂನು ಜಾರಿಗೆ ಬಂದಿತು. ಈ ಕಾನೂನು ಬರುವುದಕ್ಕೆ ಮುಂಚೆ ಯಾರು ಬೇಕಾದರೂ ಸರ್ಕಾರದ ಅಪ್ಪಣೆಯಿಲ್ಲದೆ ಪತ್ರಿಕೆಗಳನ್ನು ಹೊರಡಿಸಬಹುದಾಗಿತ್ತು ಮತ್ತು ನಿರಾತಂಕವಾಗಿ ಪತ್ರಿಕೆಗಳನ್ನು ನಡೆಸಬಹುದಾಗಿತ್ತು. ಹೀಗಿದ್ದರೂ, ಮೈಸೂರಿನಲ್ಲಿ ಪತ್ರಿಕೆಗಳ ಸಂಖ್ಯೆ ಬಹಳ ಕಡಿಮೆಯಾಗಿತ್ತು. ವೆಂಕಟಕೃಷ್ಣಯ್ಯನವರಂತಹವರು ಮಾತ್ರ ನಷ್ಟವಾಗುತ್ತಿದ್ದರೂ ಪತ್ರಿಕೆಗಳನ್ನು ನಡೆಸುತ್ತಿದ್ದರು.

ಈ ಹೊಸ ಕಾನೂನಿನಿಂದ ಪತ್ರಿಕಾ ಸ್ವಾತಂತ್ರ್ಯದ ಬುಡಕ್ಕೆ ಕೊಡಲಿ ಹಾಕಿದ ಹಾಗಾಯಿತು. ಯಾವನಿಗಾದರೂ ಪತ್ರಿಕೆ ನಡೆಸಬೇಕೆಂದು ಪ್ರೇರೇಪಣೆ ಬಂದರೆ, ಅವನು ಸರ್ಕಾರದ ಚೀಫ್‌ ಸೆಕ್ರೆಟರಿಗೆ ಅರ್ಜಿ ಹಾಕಿಕೊಳ್ಳಬೇಕು; ಅರ್ಜಿ ಹಾಕಿಕೊಂಡ ಮೇಲೆ ಈ ಮನುಷ್ಯನು ಯಾರು, ಇವನಿಗೆ ಪತ್ರಿಕೆ ನಡೆಸಲು ಅನುಮತಿ ಕೊಟ್ಟರೆ ಇವನು ಯಾವ ನೀತಿ ಅನುಸರಿಸುವನು, ಸರ್ಕಾರಕ್ಕೆ ಅನುಕೂಲವಾಗಿ ಅಥವಾ ವಿರೋಧವಾಗಿ ಲೇಖನವನ್ನು ಪ್ರಕಟಿಸುವನೇ, ಇವನು ಹಿಂದೆ ಸರ್ಕಾರಕ್ಕೆ ವಿರುದ್ಧ ವಾದ ಯಾವ ಕೆಲಸವನ್ನಾದರೂ ಮಾಡಿರುವನೇ, ಇವನ ಸಹವಾಸ ಎಂತಹುದು ಎಂಬಿವೇ ಮುಂತಾದ ಸಂಗತಿಗಳನ್ನು ತಿಳಿಯಲು ಚೀಫ್‌ ಸೆಕ್ರೆಟರಿ ಅರ್ಜಿಯನ್ನು ಪೋಲೀಸ್‌ ಇನ್‌ಸ್ಪೆಕ್ಟರ್-ಜನರಲ್‌ಗೆ ಕಳುಹಿಸುವರು. ಇವರು ಅದನ್ನು ಡೆಪ್ಯುಟಿ ಕಮಿಷನರಿಗೆ ಕಳುಹಿಸುವರು. ಡೆಪ್ಯುಟಿ ಕಮಿಷನರು ಪೊಲೀಸ್‌ ಸೂಪರಿಂಟೆಂಡೆಂಟರಿಗೆ ಕಳುಹಿಸುವರು. ಇವರು ಪೊಲೀಸ್‌ ಇನ್ಸ್‌ಪೆಕ್ಟರಿಗೆ ಕಳುಹಿಸುವರು. ಇವರು ಪೊಲೀಸ್‌ ಕಾನ್‌ಸ್ಟೇಬಲಿಗೆ ಕಳುಹಿಸುವರು. ಈ ಪೊಲೀಸ್‌ ಕಾನ್‌ಸ್ಟೇಬಲ್‌ ತಾನು ಸ್ವತಃ ಮತ್ತು ಸಿ.ಐ.ಡಿ.ಗಳಿಂದ ಅರ್ಜಿದಾರನ ವಿಷಯವನ್ನು ಅಕ್ಕಪಕ್ಕದವರ ಮೂಲಕ ವಿಚಾರಿಸಿ, ಮೇಲಕ್ಕೆ ವರದಿ ಮಡುವನು. ಈ ವರದಿ ಚೀಫ್‌ ಸೆಕ್ರೆಟರಿಯವರನ್ನು ಮುಟ್ಟಲು ಕೆಲವು ಸಾರಿ ೬ ತಿಂಗಳಾದರೂ ಆಗಬಹುದು. ಸರ್ಕಾರ ಈ ಪೊಲೀಸ್‌ ಕಾನ್‌ಸ್ಟೇಬಲಿನ ವರದಿಯ ಆಧಾರದ ಮೇಲೆ ಅರ್ಜಿದಾರನಿಗೆ ಪತ್ರಿಕೆ ಹೊರಡಿಸಲು ಅನುಮತಿ ಕೊಡಬೇಕೋ ಬೇಡವೋ ಎಂಬುದನ್ನು ತೀರ್ಮಾನ ಮಾಡುವುದು. ಅರ್ಜಿದಾರನ ಅದೃಷ್ಟ ಚೆನ್ನಾಗಿದ್ದರೆ, ಪತ್ರಿಕೆ ಹೊರಡಿಸಲು ಅನುಮತಿ ಬರುವುದು. ಪೊಲೀಸ್‌ ಕಾನ್‌ಸ್ಟೇಬಲ್‌ ವರದಿ ಅನುಕೂಲವಿಲ್ಲದಿದ್ದರೆ, ಅನುಮತಿಯಿಲ್ಲ. ಅಂತೂ ಅರ್ಜಿದಾರನ ಅದೃಷ್ಟ ಪೊಲೀಸ್‌ ಕಾನ್‌ಸ್ಟೇಬಲಿನ ಕೈಯಲ್ಲಿತ್ತು. ಅರ್ಜಿದಾರನು ಎಷ್ಟು ವಿದ್ಯಾವಂತನಾಗಲೀ, ಶ್ರೀಮಂತನಾಗಲೀ, ಗೌರವಸ್ಥನಾಗಲಿ, ಪೊಲೀಸ್‌ ಕಾನ್‌ಸ್ಟೇಬಲಿನ ಒಳ್ಳೆಯ ಸರ್ಟಿಫಿಕೇಟಲ್ಲದೆ ಅವನಿಗೆ ಪತ್ರಿಕೆ ಹೊರಡಿಸಲು ಅವಕಾಶ ಇರಲಿಲ್ಲ.

ಈ ಕಾನೂನು ಬಂದ ಮೇಲೆ ನೂರಾರು ಜನರಿಗೆ ಪತ್ರಿಕೆ ಹೊರಡಿಸಲು ಅನುಮತಿ ದೊರೆಯಲಿಲ್ಲ. ಏಕೆ ಅನುಮತಿ ಕೊಡಲಿಲ್ಲ ಎಂಬುದಕ್ಕೆ ಕಾರಣವನ್ನು ಕೊಡುತ್ತಿರಲಿಲ್ಲ. ಸರ್ಕಾರದ ಮೇಲೆ ಕೋರ್ಟಿಗೂ ಅಪೀಲಿಲ್ಲ. ಒಂದಾವರ್ತಿ ಅನುಮತಿ ದೊರೆತ ಮೇಲೆ ಪತ್ರಿಕೆಯನ್ನು ಹೊರಡಿಸಿದರೆ ಅದರ ಬಾಳು ನಿರ್ಬಾಧಿತವೇ ಇಲ್ಲ. ಸರ್ಕಾರವನ್ನು ಹೊಗಳಿಕೊಂಡು, ಅದರ ಮೇಲೆ ಯಾವ ವಿರೋಧ ಟೀಕೆಯನ್ನೂ ಮಾಡದೆ ಇರುವ ತನಕ ಆ ಪತ್ರಿಕೆಯ ಜೀವನಕ್ಕೆ ಸರ್ಕಾರದಿಂದ ಯಾವ ಕಂಟಕವೂ ಇಲ್ಲ. ಅದು ಬಿಟ್ಟು,ಲ ಸರ್ಕಾರದ ವಿರೋಧ ಟೀಕೆ ಮಾಡಿದರಾಯಿತು, ಕೆಲವರಿಗೆ ನಿಮ್ಮ ಪತ್ರಿಕೆಯನ್ನು ಸರ್ಕಾರದವರು ಏತಕ್ಕೆ ನಿಲ್ಲಿಸಬಾರದು ಎಂಬ ಎಚ್ಚರಿಕೆ; ಕೆಲವರಿಗೆ ಯಾವ ಎಚ್ಚರಿಕೆಯೂ ಇಲ್ಲದೆ, ಪತ್ರಿಕೆಯನ್ನು ನಿಲ್ಲಿಸಬೇಕು, ಹೊರಡಿಸಕೂಡದು, ಎಂಬ ಆಜ್ಞೆ; ಈ ಆಜ್ಞೆ ಮೀರಿದರೆ ಆಸ್ತಿಪಾಸ್ತಿ ಜಫ್ತಿ ಮತ್ತು ಗಡೀಪಾರು.

ವೆಂಕಟಕೃಷ್ಣಯ್ಯನವರು ಕೂಡ ಈ ಪತ್ರಿಕಾ ಶಾಸನಕ್ಕೆ ಗುರಿಯಾಗಿ, ಇನ್ನೇನು ಗಡೀಪಾರಾಗಬೇಕು ಎನ್ನುವ ಸ್ಥಿತಿಯವರೆಗೂ ಬಂದಿದ್ದರು. ದಿವಾನ್‌ ಮಾಧವರಾಯರು ಇಂಥಾ ಕಠಿಣವಾದ ಪತ್ರಿಕಾ ಕಾನೂನನ್ನು ಮೈಸೂರಿನಲ್ಲಿ ತಂದುದು ಅಖಿಲ ಭಾರತದ ಗಮನಕ್ಕೆ ಬಂದು, ಅಲ್ಲಿನ ಪತ್ರಿಕೆಗಳೂ ಉಗ್ರವಾಗಿ ಅದನ್ನು ಟೀಕಿಸಿದವು.

ಮೈಸೂರಿನ ಸ್ವಾತಂತ್ರ್ಯ ಪ್ರೇಮಿಗಳಾದ ಎಲ್ಲಾ ಪತ್ರಿಕಾಕರ್ತರೂ ಈ ಕಾನೂನು ಜಾರಿಗೆ ಬಂದ ಕೂಡಲೇ ತಮ್ಮ ಪತ್ರಿಕೆಗಳನ್ನು ನಿಲ್ಲಿಸಿಬಿಟ್ಟರು. ಪ್ರಾಮುಖ್ಯವಾಗಿ ಮೈಸೂರು ನಗರದಲ್ಲಿ ವೆಂಕಟಕೃಷ್ಣಯ್ಯನವರು ತಾವು ೨೩ ವರ್ಷದಿಂದಲೂ ನಡೆಸಿಕೊಂಡು ಬಂದಿದ್ದ ಹೆರಲ್ಡ್‌, ವೃತ್ತಾಂತ ಚಿಂತಾಮಣಿ ಮತ್ತು ಇತರ ಪತ್ರಿಕೆಗಳನ್ನು ನಿಲ್ಲಿಸಿಬಿಟ್ಟರು. ಕೆಲವು ಸಾಹಸಿ ಮೈಸೂರಿನವರು ಮದ್ರಾಸಿಗೆ ಹೋಗಿ, ಕನ್ನಡ ಪತ್ರಿಕೆಗಳನ್ನು ಹೊರಡಿಸಿ, ಪ್ರಚಾರ ಮಾಡಿದರು. ಚನ್ನಕೇಶವ ಅಯ್ಯಂಗಾರ್ ಎಂಬುವರು “ವೀರಕೇಸರಿ” ಎಂಬ ಹೆಸರಿನಿಂದ ಕನ್ನಡ ವಾರಪತ್ರಿಕೆಯನ್ನು ಮದ್ರಾಸಿನಿಂದ ಹೊರಡಿಸಿದರು.

ಹೆರಲ್ಡ್‌ ಪತ್ರಿಕೆಯನ್ನು ನಿಲ್ಲಿಸಿದಾಗ ವೆಂಕಟಕೃಷ್ಣಯ್ಯನವರು ಕಡೆಯ ಅಗ್ರಲೇಖನದಲ್ಲಿ ಪತ್ರಿಕಾ ಕಾನೂನನ್ನು ಉಗ್ರವಾಗಿ ಟೀಕಿಸಿ, ತಮ್ಮ ಮಿತ್ರರಾದ ಮಾಧವರಾಯರೇ ಇಂತಹ ಉಗ್ರ ಕಾನೂನನ್ನು ಜಾರಿಗೆ ತಂದರೆಲ್ಲಾ ಎಂದು ಶೋಕಿಸಿ, ಅಧಿಕಾರಿಗಳು ನಿರಂಕುಶರಾದರೆ ಪ್ರಜೆಗಳು ಹಾಳಾಗಿ ಹೋಗುವರೆಂದೂ, ಸರ್ಕಾರವನ್ನೂ ಅಧಿಕಾರಿಗಳನ್ನೂ ಅಂಕುಶದಲ್ಲಿರುವಂತೆ ಮಾಡುವುದು ಪತ್ರಿಕೆಗಳ ಕರ್ತವ್ಯವೆಂದೂ ತಿಳಿಸಿದರು. ಇಂಗ್ಲೆಂಡಿನಲ್ಲಿ ಪತ್ರಿಕೆಗಳು ರಾಜರನ್ನು ಬಿಟ್ಟು ಪ್ರಧಾನ ಮಂತ್ರಿಯವರನ್ನು ಮತ್ತು ಇತರ ಮಂತ್ರಿಗಳನ್ನು ಎಷ್ಟು ಸ್ವತಂತ್ರವಾಗಿ ಟೀಕಿಸುತ್ತವೆ ಎಂಬ ನಿದರ್ಶನವನ್ನೂ ಸರ್ಕಾರದ ಮುಂದಿಟ್ಟರು.

‘ಇಂಗ್ಲೆಂಡಿನ ಉದಾಹರಣೆಯನ್ನೇ ಮೈಸೂರಿನ ಪತ್ರಿಕೆಗಳು ಅನುಸರಿಸಿ ಮಹಾರಾಜರನ್ನು ಬಿಟ್ಟು, ದಿವಾನರಿಂದ ಆದಿಯಾಗಿ ಯಾವ ಅಧಿಕಾರಿಯನ್ನಾಗಲೀ ಟೀಕಿಸಲು ಅಧಿಕಾರ ಹೊಂದಿರುತ್ತವೆ. ಅದಕ್ಕೆ ಭಂಗ ಬರುವಂತೆ ದಿವಾನರು ಮಾಡಿದ್ದು ಸರ್ವಥಾ ಸರಿಯಲ್ಲ, ನ್ಯಾಯವಲ್ಲ. ಇದರಿಂದ ದೇಶಕ್ಕೆ ಬಹಳ ಅಪಕಾರ. ಪತ್ರಿಕಾ ಕಾನೂನನ್ನು ಉಲ್ಲಂಘಿಸಿದರೆ ಗಡಿಪಾರೇ? ಇದೆಂತಹ ಹುಚ್ಚು ಶಿಕ್ಷೆ! ವಿಧಿಯಿಲ್ಲದೆ ಈಗ ಪತ್ರಿಕೆಯನ್ನು ನಿಲ್ಲಿಸಿದ್ದೇವೆ. ಮುಂದೆ ಒಳ್ಳೇ ಸಮಯ ಬಂದಾಗ ಪತ್ರಿಕೆಯನ್ನು ಪುನಃ ಹೊರಡಿಸುತ್ತೇವೆ. ಸದ್ಯಕ್ಕೆ ಎಲ್ಲರಿಗೂ ನಮಸ್ಕಾರ’ ಎಂದು ತಮ್ಮ ಲೇಖನಿಯನ್ನು ಮುಗಿಸಿದರು.

ಮಾಧವರಾಯರು ಈ ಉಗ್ರ ಪತ್ರಿಕಾ ಕಾನೂನನ್ನು ಮೈಸೂರಿನಲ್ಲಿ ತಾವು ಜಾರಿಗೆ ತಂದುದು ಬ್ರಿಟಿಷ್‌ ಇಂಡಿಯಾ ಸರ್ಕಾರದ ರಕ್ಷಣೆಗಾಗಿಯೇ ಎಂದು ಬ್ರಿಟಿಷ್‌ ಪಾರ್ಲಿಮೆಂಟ್‌ ಸದಸ್ಯರ ಮುಂದೆ ತಿಳಿಸಿದುದಾಗಿ ವರದಿಯಾಗಿದೆ. ಈ ಮಾತನ್ನು ಮಾಧವರಾಯರು ಹೇಳಿದ್ದು ೧೯೧೮ರಲ್ಲಿ, ಇಂಡಿರ್ಯ ನ್ಯಾಷನಲ್ ಕಾಂಗ್ರೆಸ್‌ ಪ್ರತಿನಿಧಿಯಾಗಿ ಇಂಡಿಯಾಕ್ಕೆ ಕೂಡಲೇ ಸ್ವರಾಜ್ಯ ಕೊಡಬೇಕು ಎಂದು ವಾದಿಸಲು ಲಂಡನ್ನಿಗೆ ಹೋಗಿದ್ದಾಗ.

ಮೈಸೂರು ದಿವಾನಗಿರಿಯಿಂದ ಇವರು ನಿವೃತ್ತರಾದ ಮೆಲೆ ಬರೋಡಾದ ದಿವಾನರಾಗಿದ್ದರು. ಇದೂ ಆದ ಮೇಲೆ ಇವರು ಇಂಡಿರ್ಯ ನ್ಯಾಷನಲ್‌ ಕಾಂಗ್ರೆಸನ್ನು ಸೇರಿ ಪ್ರಭಾವಶಾಲಿ ಪ್ರಜಾ ಮುಖಂಡರಾದರು. ೧೯೩೦ರ ವರೆಗೂ ಇವರು ಕಾಂಗ್ರೆಸಿನಲ್ಲಿದ್ದರು. ಆಮೇಲೂ ೧೯೩೫ರವರೆಗೆ, ಮರಣ ಪರ್ಯಂತ, ಇವರು ಕಾಂಗ್ರೆಸಿನ ಅಭಿಮಾನಿಯಾಗಿಯೇ ಇದ್ದರು.

ಇವರು ಮೈಸೂರಿನ ಹೊರಗಡೆ ಪ್ರಜಾ ಸ್ವಾತಂತ್ಯ್ರಾಭಿಮಾನಿಗಳಾಗಿದ್ದರೂ ಮೈಸೂರಿನಲ್ಲಿ ದಿವಾನರಾಗಿದ್ದ ಕಾಲದಲ್ಲಿ ಪ್ರಜಾ ಸ್ವಾತಂತ್ರ್ಯಕ್ಕೆ ಪ್ರತಿಕೂಲವಾಗಿಯೇ ನಡೆದುಕೊಂಡದ್ದು ಆಶ್ಚರ್ಯದ ವಿಷಯ.

ಇವರ ಕಾಲದಲ್ಲಿ ಮೈಸೂರು ಲೆಜಿಸ್ಲೆಟಿವ್‌ ಕೌನ್ಸಿಲ್‌ ಸ್ಥಾಪನೆಯಾಯಿತು. ಇದರ ಕಾನೂನಿನ ಪ್ರಕಾರ ಮೈಸೂರು ಪ್ರಜಾಪ್ರತಿನಿಧಿ ಸಭೆ ತನ್ನ ಇಬ್ಬರು ಸದಸ್ಯರನ್ನುಲೆಜಿಸ್ಲೆಟಿವ್‌ ಕೌನ್ಸಿಲಿಗೆ ಚುನಾಯಿಸುವ ಅಧಿಕಾರವಿತ್ತು. ಈ ಸಂದರ್ಭದಲ್ಲಿ ವೆಂಕಟಕೃಷ್ಣಯ್ಯನವರೂ ಬೆಂಗಳೂರಿನ ಡಿ. ವೆಂಕಟರಾಮಯ್ಯನವರೂ ಪ್ರಜಾಪ್ರತಿನಿಧಿ ಸಭೆಯಿಂದ ಚುನಾಯಿತರಾದರು. ಮಾಧವರಾಯರು  ಇವರಿಬ್ಬರ ಚುನಾವಣೆಯನ್ನು ರದ್ದು ಮಾಡಿದರು. ಇದು ಪ್ರಜಾಪ್ರತಿನಿಧಿಗಳಿಗೆ ಅವಮಾನ ಮಾಡಿದ ಹಾಗಾಯಿತು. ಅವರೆಲ್ಲಾ ರೇಗಿದರು. ಬಹಳ ಉತ್ಕಟ ಸ್ಥಿತಿಯುಂಟಾಯಿತು, ಪತ್ರಿಕೆಗಳಲ್ಲೂ ಬಹಳ ಉಗ್ರಲೇಖನಗಳು ಪ್ರಕಟವಾದುವು. ದಿವಾನರಿಗೂ ಬಹಳ ಕೋಪವೇ ಬಂದಿತು. ವೆಂಕಟಕೃಷ್ಣಯ್ಯನವರನ್ನು ಗಡೀಪಾರು ಮಾಡಬೇಕೆಂಬ ಸಲಹೆಯನ್ನು ಮಾಡಿದರು. ಮಹಾರಾಜರು ಒಪ್ಪಲಿಲ್ಲ. ಈ ರೀತಿಯಾಗಿ ದಿವಾನರು ಪ್ರಜಾವಿರೋಧ ಕೆಲಸವನ್ನು ಮಾಡಿ ಪ್ರಜಾನುರಾಗ ಕಳೆದುಕೊಂಡರು.

ಈ ಸಂದರ್ಭದಲ್ಲಿ, ಬ್ರಿಟಿಷ್‌ ಇಂಡಿಯಾದ ಮತ್ತು ಇಂಗ್ಲೆಂಡಿನ ರಾಜಕೀಯ ಪರಿಸ್ಥಿತಿಯನ್ನು ಲಘುವಾಗಿ, ಅದು ಮೈಸೂರಿಗೆ ಸಂಬಂಧಪಟ್ಟ ಮಟ್ಟಿಗೆ, ವಿಮರ್ಶಿಸಬಹುದು.

ಇಂಗ್ಲೆಂಡಿನಲ್ಲಿ ೧೯೦೧ರಲ್ಲಿ, ವಿಕ್ಟೋರಿಯಾ ರಾಣಿಯ ಮರಣದ ಅನಂತರ, ಏಳನೇ ಎಡ್ವರ್ಡರು ಸಿಂಹಾಸನ ಏರಿದರು. ಅಲ್ಲಿ ರ್ಕಸರ್ವೆಟಿವ್‌ ಪಕ್ಷವೇ ಅಧಿಕಾರದಲ್ಲಿತ್ತು. ರ್ಕಸರ್ವೆಟವ್‌ ಪಕ್ಷದ ಬಾಲ್‌ಫರ್ ರವರು ಪ್ರಧಾನಮಂತ್ರಿಯಾಗಿದ್ದರು. ೧೯೦೬ರಲ್ಲಿ ಲಿಬರಲ್‌ ಪಕ್ಷಕ್ಕೆ ಸೇರಿದ ಕ್ಯಾಂಬಲ್‌ ಬ್ಯಾನರ್ ರ್ಮ್ಯಾ ಎಂಬುವರು ಪ್ರಧಾನಮಂತ್ರಿಯಾದರು. ಇವರು ೧೯೦೮ ರಲ್ಲಿ ಮೃತರಾದರು. ಇವರಾದ ಮೇಲೆ ಬಂದವರು ಲಿಬರಲ್‌ ಪಾರ್ಟಿಯ ಪ್ರಸಿದ್ಧ  ಆಸ್ಕ್ವಿತ್‌. ಇಂಗ್ಲೆಂಡಿನ ಕನ್‌ಸರ್ವೆಟವ್‌ ಪಂಗಡ ಅಧಿಕಾರದಲ್ಲಿದ್ದಾಗ ಇಂಡಿಯಾದ ಬಗ್ಗೆ ಇಂಗ್ಲೆಂಡ್‌ ಅನುದಾರ ನೀತಿಯನ್ನು ಅನುಸರಿಸಿತು.

ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ೨೦ ನೇ ಶತಮಾನದ ಆದಿಯವರೆಗು ಇಂಡಿಯಾದ ಬಡತನದ ಸಮಸ್ಯೆಯನ್ನು ನಿವಾರಿಸಬೇಕೆಂದು ಮತ್ತು ಬ್ರಿಟಿಷರಿಗೆ ಸಮನಾದ ಸರ್ಕಾರಿ ಹುದ್ದೆಗಳನ್ನು ಭಾರತೀಯರಿಗೂ ಕೊಡಬೇಕೆಂದು ವಿಜ್ಞಾಪನೆ ನಿರ್ಣಯವನ್ನು ಮಾಡುತ್ತಿದ್ದಿತು. ಸ್ಪಷ್ಟವಾಗಿ ಸ್ವರಾಜ್ಯದ ಮಾತನ್ನೆತ್ತುತ್ತಿರಲಿಲ್ಲ. ೧೯೦೫ರಲ್ಲಿ ವಯಸ್‌ ರಾಯ್‌ ಲಾರ್ಡ್‌ ಕರ್ಜನರು ಬಂಗಾಳ ಪ್ರಾಂತ್ಯವನ್ನು ಇಬ್ಭಾಗ ಮಾಡಿದರು. ಇದು ಬಂಗಾಳೀಯರಿಗೆಲ್ಲ ಅತ್ಯಂತ ಕೋಪ ಉಂಟುಮಾಡಿತು. ಬ್ರಿಟಿಷ್‌ ಸರ್ಕಾರಕ್ಕೆ ವಿರುದ್ಧವಾದ ಚಳುವಳಿ ಪ್ರಾರಂಭವಾಯಿತು. ಆಗ ಭಾರತೀಯ ಮುಖಂಡರಾಗಿದ್ದ ಲಾಲಾ ಲಜಪತರಾಯ್‌,  ಬೆಪಿನ್‌ ಚಂದ್ರ ಪಾಲ್‌ ಮತ್ತು ಬಾಲ ಗಂಗಾಧರ ತಿಲಕ್‌ ಈ ಚಳುವಳಿಯ ಪ್ರಮುಖರಾದರು. ಅರವಿಂದ ಘೋಷರೂ ಈ ಚಳುವಳಿಯನ್ನು ಸೇರಿದರು. ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಈ ಚಳುವಳಿ ವ್ಯಾಪಿಸಿ ದೇಸದಲ್ಲಿ ಅಭೂತಪೂರ್ವವಾದ ಜ್ವಾಲೆಯೆದ್ದಿತು. ಇದು ಮೈಸೂರಿಗೂ ಪ್ರವೇಶಿಸಿತು.

೧೯೦೭-೦೮ರಲ್ಲಿ ಇಂಡಿಯಾ ಸರ್ಕಾರದವರು ತಿಲಕರನ್ನು ೭ ವರ್ಷ ಮಾಂಡಲೆಗೆ ಗಡೀಫಾರು ಮಾಡಿದರು. ಲಜಪತರಾಯರನ್ನು ೬ ತಿಂಗಳು ಮಾಂಡಲೆಗೆ ಕಳುಹಿಸಿದರು. ಬೆಪಿನ್‌ ಚಂದ್ರ ಪಾಲರಿಗೂ ಶಿಕ್ಷೆಯಾಯಿತು. ಅರವಿಂದ ಘೋಷರನ್ನೂ ದಸ್ತಗಿರಿ ಮಾಡಿದರು. ದೇಶದಲ್ಲಿ ದೊಡ್ಡ ಆಂದೋಳನವೇ ಆಯಿತು.

ಸ್ವದೇಶಿ ಚಳುವಳಿ ಆರಂಭವಾಯಿತು. ರಾಷ್ಟ್ರೀಯ ಸ್ಕೂಲುಗಳನ್ನು ತೆರೆದರು. ಎಲ್ಲೆಲ್ಲೂ ಬಾಲಕರು ಬಾಲಕಿಯರು ವಂದೇ ಮಾತರಂ ಎಂದು ಘೋಷಿಸಿ ಆ ಗೀತೆಯನ್ನು ಹಾಡತೊಡಗಿದರು. ಕ್ರಾಂತಿವಾದಿಗಳು ಹುಟ್ಟಿಕೊಂಡು, ಕೆಲವು ಬಾಂಬುಗಳನ್ನು ಬ್ರಿಟಿಷ್‌ ಅಧಿಕಾರಿಗಳ ಮೇಲೆ ಪ್ರಯೋಗಿಸಿದರು. ಇದರಿಂದ ಇಂಗ್ಲೆಂಡಿನ ಪಾರ್ಲಿಮೆಂಟಿನವರೆಗೂ ಭಾರತದ ಬಿಸಿ ತಗಲಿ ಬ್ರಿಟಿಷ್‌ ರಾಜಕಾರಣಿಗಳು ಈ ದೇಶಕ್ಕೆ ಏನಾದರೂ ರಿಯಾಯಿತಿ ಕೊಡಲೇಬೇಕೆಂದು ನಿರ್ಧರಿಸಿದರು.  ಇದು ಆದದ್ದು ಕ್ಯಾಂಬೆಲ್‌ ಬ್ಯಾನರ್ ಮ್ಯಾನ್‌ ಕಾಲದಲ್ಲೇ, ಲಾರ್ಡ್ ಮಾರ್ಲೆ ಎಂಬ ಸೆಕ್ರೆಟರಿ ಆಫ್‌ಸ್ಟೇಟ್‌ರವರು ಭಾರತಕ್ಕೆ ಕೊಡಬೇಕಾದ ಸುಧಾರಣೆಗಳನ್ನು ರೂಪಿಸಿದರು. ಇವೇ ಮುಂದೆ ಜಾರಿಗೆ ಬಂಧ ಮಾರ್ಲೆ-ಮಿಂಟೋ ಸುಧಾರಣೆಗಳು.

ಮೈಸೂರಿನಲ್ಲಿ ಅಲ್ಲಲ್ಲಿ ಸಾರ್ವಜನಿಕ ಸಭೆಗಳು ನಡೆದು ಬ್ರಿಟಿಷ್‌ ಇಂಡಿಯಾ ಸರ್ಕಾರವನ್ನು ಟೀಕಿಸಲಾಯಿತು. ದೇಶಾಭಿಮಾನ ತುಂಬುವ ಸ್ಪೂರ್ತಿಯುತ ಭಾಷಣಗಳನ್ನು ವೆಂಕಟಕೃಷ್ಣಯ್ಯನವರು ಮಾಡುತ್ತ ಬಂದರು; ಶಿವಾಜಿ, ರಾಣಾ ಪ್ರತಾಪ ಮುಂತಾದ ವೀರರ ಚರಿತ್ರೆಗಳನ್ನು ವಿವರಿಸುತ್ತ ಬಂದರು. ಸ್ಕೂಲ್‌ ಬಾಲಕರು, ಕಾಲೇಜ್‌ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿಯೂ ಮೈಸೂರಿನಲ್ಲಿಯೂ ದೇಶಾಭಿಮಾನ ಪೂರಿತರಾಗಿ, ಉತ್ಸಾಹಿಗಳಾಗಿ, ಸ್ವದೇಶಿಗೆ ಗಮನಕೊಟ್ಟರು. ಹೊಸ ಚೈತನ್ಯ  ಇಡೀ ಮೈಸೂರಿನಲ್ಲಿ ಪ್ರವಹಿಸಿತು.

ಸರ್ಕಾರದವರು ಸ್ವಲ್ಪಮಟ್ಟಿಗೆ ಗಾಬರಿಗೊಂಡರು. ಇದುವರೆಗೂ ನಡೆಯುತ್ತಿದ್ದ ಆಂದೋಳನಗಳಿಗೂ ಇದಕ್ಕೂ ಬಹಳ ವ್ಯತ್ಯಾಸ. ಇದು ಇಡೀ ಹಿಂದೂಸ್ಥಾನದ ಚಳುವಳಿಯ ಭಾಗ. ಮಾಧವರಾಯರು ಮೈಸೂರಿನಲ್ಲಿ ಪ್ರವಹಿಸುತ್ತಿದ್ದ ಈ ಚಳುವಳಿಯನ್ನು ಮಟ್ಟ ಹಾಕಲು ಅನೇಕ ಉಗ್ರ ಕಾರ್ಯಕ್ರಮಗಳನ್ನು ಕೈಗೊಂಡರು. ಇದರಿಂದಲೂ ಮಾಧವರಾಯರ ಮೇಲಿನ ಪ್ರಜಾವಿರೋಧ ಅಧಿಕವಾಯಿತು. ಕಡೆಗೆ ೧೯೦೯ನೇ ಮಾರ್ಚ್ ತಿಂಗಳಿನಲ್ಲಿ ಮಾಧವರಾಯರು ಮೈಸೂರು ದಿವಾನ್‌ ಪದವಿಯಿಂದ ನಿವೃತ್ತರಾದರು.