೧೮೯೫ರಲ್ಲಿ ಪ್ರಜಾಪ್ರತಿನಿಧಿ ಸಭೆ ಸೇರುವ ವೇಳೆಗೆ ಮೈಸೂರಿನ ಪರಿಸ್ಥಿತಿಯಲ್ಲಿ ಬಹಳ ಬದಲಾವಣೆಯಾಗಿತ್ತು. ಮೈಸೂರಿನ ಜನರ ದುರ್ದೈವದಿಂದ ಶ್ರೀಮನ್‌ ಮಹಾರಾಜ ಚಾಮರಾಜ ಒಡೆಯರು ೧೮೯೪ನೇ ಡಿಸೆಂಬರ್ ೨೮ರಲ್ಲಿ ಕಲ್ಕತ್ತಾದಲ್ಲಿ ಹಠಾತ್ತಾಗಿ ಮೃತರಾದರು. ಇವರು ೧೮೬೬ರಲ್ಲಿ ಹುಟ್ಟಿ, ೧೮೬೭ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ದತ್ತು ತೆಗೆದುಕೊಳ್ಳಲ್ಪಟ್ಟವರಾಗಿ, ೧೮೬೮ರಲ್ಲಿ ಮುಮ್ಮಡಿಯವರ ಮರಣಾನಂತರ ಸಿಂಹಾನಸನವನ್ನು ಆರೋಹಣ ಮಾಡಿದರು. ೧೮೮೧ರಲ್ಲಿ ರಾಜ್ಯಾಧಿಕಾರವನ್ನು ವಹಿಸಿದರು. ಇವರಿಗೆ ಕೃಷ್ಣರಾಜ ಒಡೆಯರ್, ಕಂಠೀರವ ನರಸಿಂಹರಾಜ ಒಡೆಯರ್ ಎಂಬ ಇಬ್ಬರು ಗಂಡು ಮಕ್ಕಳೂ, ಮೂರು ಹೆಣ್ಣು ಮಕ್ಕಳೂ ಇದ್ದರು. ಉತ್ತರಾಧಿಕಾರಿ ಶ್ರೀ ಕೃಷ್ಣರಾಜ ಒಡೆಯರಿಗೆ ಇನ್ನೂ ೧೦ ವರ್ಷ ವಯಸ್ಸು. ಮಹಾರಾಣಿ ವಾಣಿವಿಲಾಸ ಸನ್ನಿಧಾನದವರು ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುವುದೇ ಅಲ್ಲದೆ, ರಾಜ್ಯಭಾರವನ್ನೂ ನಿರ್ವಹಿಸಬೇಕಾಯಿತು. ೧೮೯೪ನೇ ಡಿಸೆಂಬರ್ ೩೦ ರಲ್ಲಿ ಶ್ರೀಕೃಷ್ಣರಾಜ ಒಡೆಯರನ್ನು ಮುಂದಿನ ಮಹಾರಾಜರೆಂದು ಇಂಡಿಯಾ ಸರ್ಕಾರ ಅಂಗೀಕರಿಸಿತು, ಮತ್ತು ಮುಂದೆ ರೀಜೆಂಟನ್ನು ನೇಮಿಸುವವರೆಗೂ ದಿವಾನ್‌ ಶೇಷಾದ್ರಿ ಅಯ್ಯರ್ ಅವರೇ ಮಹಾರಾಣಿಯವರ ಸಲಹೆಯಂತೆಯೂ ಬ್ರಿಟಿಷ್‌ ರೆಸಿಡೆಂಟರ ಒಪ್ಪಿಗೆಯಂತೆಯೂ ರಾಜ್ಯಾಧಿಕಾರವನ್ನು ನಡೆಸಬೇಕೆಂದು ಆಜ್ಞೆ ಹೊರಡಿಸಿತು.

ಏನತ್ಮಧ್ಯೆ ಮೈಸೂರು ರಾಜ್ಯದಲ್ಲಿ ಪ್ರಜೆಗಳೆಲ್ಲರೂ ಮಹಾರಾಜರ ಮರಣದಿಂದ ದುಃಖ ಮಗ್ನರಾದರು ಮತ್ತು ಮುಂದೆ ಶ್ರೀಕೃಷ್ಣರಾಜ ಒಡೆಯರು ರಾಜ್ಯಭಾರಕ್ಕೆ ಬರುವವರೆಗೆ ಯಾರು ರೀಜೆಂಟರಾಗಿರುವರೆಂಬ ಬಗ್ಗೆ ಬಹಳ ಕಳವಳಗೊಂಡಿದ್ದರು. ದಿವಾನ್‌ ಶೇಷಾದ್ರಿ ಅಯ್ಯರ್ ಅವರು ಬಹಳ ಪ್ರಭಾವಶಾಲಿ, ಕೀರ್ತಿಶಾಲಿ; ಅವರು ತಮ್ಮ ಸಾಮರ್ಥ್ಯದಿಂದ ಇಂಡಿಯಾ ಸರ್ಕಾರದಲ್ಲಿ ಕೆಲಸಮಾಡಿ ರೀಜನ್ಸಿ ಪದವಿಯನ್ನು ಪಡೆಯಬಹುದು ಎಂಬ ಮಾತು ಅಲ್ಲಲ್ಲಿ ಹರಡಿತು. ಆದರೆ, ಮೈಸೂರಿನವರಿಗೆ ಮಹಾರಾಣಿಯವರಾದ ವಾಣಿ ವಿಲಾಸ ಸನ್ನಿಧಾನದವರೆ ರೀಜೆಂಟಾಗಬೇಕೆಂಬ ಆಸೆಯಿತ್ತು. ಈ ಆಸೆ ಈಡೇರುವುದು ಹೇಗೆ? ಮೈಸೂರಿನ ಪ್ರಮುಖರಾದ ವೆಂಕಟಕೃಷ್ಣಯ್ಯನವರೂ, ಪಿ.ಎನ್‌. ಕೃಷ್ಣ ಮೂರ್ತಿಗಳೂ ಜನತೆಯ ಮುಖಂಡತ್ವವನ್ನು ವಹಿಸಿ ಕೆಲಸ ಮಾಡಿದರು. ಪ್ರಜಾಭಿಪ್ರಾಯವನ್ನು ಘನೀಕರಿಸಿದರು, ಮತ್ತು ಮೈಸೂರಿನ ಮತ್ತು ಅಖಿಲ ಭಾರತ ಪತ್ರಿಕೆಗಳಲ್ಲಿ ಪ್ರಚಾರ ಮಾಡಿದರುಇ. ಎಲ್ಲಕ್ಕಿಂತಲೂ ಹೆಚ್ಚಾಗಿ ಅಸೆಂಬ್ಲಿ ಸ್ಟ್ಯಾಂಡಿಂಗ್‌ ಕಮಿಟಿ ಜನವರಿ ೩೦ನೇ ತಾರೀಖಿನಲ್ಲಿ ಪ್ರಜಾಪ್ರತಿನಿಧಿಗಳ ಒಂದು ಜನರಲ್‌ ಮೀಟಿಂಗನ್ನು ಸೇರಿಸಿತು. ಸಭೆಯನ್ನು ಸೇರಿಸಿ ಕೆಲಸ ಕಾರ್ಯ ನಡೆಸುವುದರಲ್ಲಿ ವೆಂಕಟಕೃಷ್ಣಯ್ಯನವರು ಪ್ರಧಾನ ಪಾತ್ರ ವಹಿಸಿದರು. ಗತಿಸಿದ ಶ್ರೀಮನ್‌ ಮಹಾರಾಜರ ಚರಮ ಪ್ರಶಂಸೆಯನ್ನು ಅನೇಕ ಭಾಷಣಕಾರರು ಮಾಡಿದ ಮೇಲೆ, ಸಭೆ ಸರ್ವಾನುಮತದಿಂದ ಹೀಗೆ ನಿರ್ಣಯ ಮಾಡಿತು:

“ಈ ಸಭೆಯ ಜನಕರಾಗಿ ನಮ್ಮನ್ನೆಲ್ಲಾ ಪುತ್ರ ವಾತ್ಸಲ್ಯದಿಂದ ಕಾಣುತ್ತಿದ್ದ ನಮ್ಮ ಶ್ರೀಮನ್‌ ಮಹಾರಾಜ ಚಾಮರಾಜೇಂದ್ರ ಒಡೆಯರನ್ನು ಇಷ್ಟು ಆಕಾಲದಲ್ಲಿ ಕಳೆದುಕೊಂಡ ನಮ್ಮ ದೌರ್ಭಾಗ್ಯಕ್ಕೆ ಮಿತಿಯೇ ಇಲ್ಲ. ಇದರಿಂದ ನಮ್ಮ ಮಹಾಮಾತೃಶ್ರೀಯವರಿಗೆ ಉಂಟಾಗಿರತಕ್ಕ ಸಂತಾಪ ಅನಿರ್ವಚನೀಯ. ಈ ಸಭೆಯೂ ಈ ಸಂಸ್ಥಾನದೊಡನೆ ಅನಾಥವಾಯಿತು. ನಮ್ಮ ಶ್ರೀಮನ್‌ ಮಹಾರಾಜರು ಮೆಜಾರಿಟಿಗೆ ಬರುವವರೆಗೂ ಮಹಾರಾಣೀ ವಾಣೀವಿಲಾಸ ಸನ್ನಿಧಾನದ ಮಹಾಮಾತೃಶ್ರೀಯವರು ರೀಜೆಂಟರಾಗಿ ಇರಬೇಕೆಂದು ಈ ಸಭೆ ಪ್ರಾರ್ಥಿಸುತ್ತದೆ.”

ನಾಡಿಗ ಶಿವಪ್ಪ ಈ ನಿರ್ಣಯವನ್ನು ಸೂಚಿಸಿದವರು.

ರಾಜ್ಯದ ಆಡಳಿತವನ್ನು ನೋಡುವುದಕ್ಕೆ ನಮ್ಮ ಮಹಾಮಾತೃಶ್ರೀಯವರಿಗೆ ಸಹಾಯ ಮಾಡುವುದಕ್ಕೋಸ್ಕರ ಒಂದು ಎಕ್ಸಿಕ್ಯೂಟಿವ್‌ ಕೌನ್ಸಿಲ್‌ ಆಗಬೇಕೆಂಬುದಾಗಿಯೂ, ಈ ಕೌನ್ಸಿಲಿಗೆ ಐದು ಜನ ಸದಸ್ಯರು ಇರಬೇಕೆಂಬುದಾಗಿಯೂ, ದಿವಾನರು ಈ ಕೌನ್ಸಿಲಿನ ಸದಸ್ಯರಾಗಿಯೂ, ಉಳಿದ ನಾಲ್ವರು ಸದಸ್ಯರು ಮೈಸೂರಿನವರಾಗಿರಬೇಕೆಂದೂ ಈ ಸಭೆ ಪ್ರಾರ್ಥಿಸಿತು. ಈ ನಿರ್ಣಯವನ್ನು ಅಂಬಳೆ ಅಣ್ಣಯ್ಯ ಪಂಡಿತರು ಸೂಚಿಸಿದರು; ;ರಾಮಾನುಜ ಅಯಂಗಾರ್, ಶಿವಪ್ಪ ಮೊದಲಾದವರು ಅನುಮೋದಿಸಿದರು.

ಸಭೆಯ ಅನುಮತಿಯಂತೆ, ಕಾರ್ಯದರ್ಶಿಯವರಾದ ವೆಂಕಟಕೃಷ್ಣಯ್ಯನವರು ಈ ನಿರ್ಣಯಗಳನ್ನು ವೈಸ್‌ರಾಯರಿಗೂ ಬ್ರಿಟಿಷ್‌ ರೆಸಿಡೆಂಟರಿಗೂ, ಮಹಾರಾಣಿಯವರಿಗೂ ತಂತೀ ಮೂಲಕ ಕಳುಹಿಸಿಕೊಟ್ಟರು.

ಮೈಸೂರು ನಗರದಲ್ಲಿ ಈ ಸಭೆ ನಡೆದು ನಿರ್ಣಯಗಳಾದಾಗ ದಿವಾನ್ ಶೇಷಾದ್ರಿ ಅಯ್ಯರ್ ಇನ್ನೂ ಕಲ್ಕತ್ತಾದಲ್ಲಿಯೇ ಇದ್ದರು. ಮೈಸೂರಿಗೆ ಹಿಂತಿರುಗಿ ಬಂದಾಗ ಪರಿಸ್ಥಿತಿ ದಿವಾನರಿಗೆ ಪ್ರತಿಕೂಲವಾಗಿತ್ತು. ಶೇಷಾದ್ರಿ ಅಯ್ಯರೂ, ಅವರ ಕೆಲವು ಮಿತ್ರರೂ, ಕೆಲವು ಮದ್ರಾಸ್‌ ಪತ್ರಿಕೆಗಳೂ ದಿವಾನರೇ ರೀಜೆಂಟರಾಗಿ ಇರಬೇಕೆಂದು ಪ್ರಚಾರ ನಡೆಸಿ, ಇಂಡಿಯಾ ಸರ್ಕಾರಕ್ಕೆ ತಂತಿ ಕಳುಹಿಸಿದ್ದರು. ಸ್ಟ್ಯಾಂಡಿಂಗ್‌ ಕಮಿಟಿ ಮಹಾರಾಣಿಯವರೇ ರೀಜೆಂಟ್‌ ಆಗಬೇಕೆಂದು ನಿರ್ಣಯ ಮಾಡಿ ಇಂಡಿಯಾ ಸರಕಾರಕ್ಕೆ ಅದನ್ನು ಕಳುಹಿಸಿದ್ದು ಶೇಷಾದ್ರಿ ಅಯ್ಯರ್ ಅವರಿಗೆ ಸ್ವಲ್ಪವೂ ಸರಿ ಬೀಳಲಿಲ್ಲ.

ಈ ಮಧ್ಯೆ, ೧೮೯೪ ರಲ್ಲಿ, ದಿವಾನರು ಸ್ಟ್ಯಾಂಡಿಂಗ್‌ ಕಮಿಟಿಯ ವಿಷಯದಲ್ಲಿ ಅನುಸರಿಸಿದ ನೀತಿಯೂ, “ದೇಶಾಭಿಮಾನಿ” ಎಂಬ ಪತ್ರಿಕೆಯನ್ನು ಮುಟ್ಟುಕೋಲು ಹಾಕಿದ ವಿಷಯವೂ ಸಂಸ್ಥಾನದ ಒಳಗೂ, ಹೊರಗೂ ಅವರ ಕೀರ್ತಿಗೆ ಕಳಂಕ ತಂದುವು. ಪ್ರಜಾಸ್ವಾತಂತ್ರ್ಯ ಪ್ರಿಯರಾದ ಅನೇಕ ಭಾರತೀಯ ಮುಖಂಡರು ಅವರ ನಿರಂಕುಶತೆಯನ್ನು ಖಂಡಿಸಿದರು. ಗೋಪಾಲ ಕೃಷ್ಣ ಗೋಖಲೆಯವರಿಗೆ ಗುರುಗಳಾದ ಮಹದೇವ ಗೋವಿಂದ ರಾನಡೆ ಶೇಷಾದಿ ಅಯ್ಯರ್ ಅವರ ಈ ನಿರಂಕುಶ ಧೋರಣೆಗಾಗಿ ಅಸಮಾಧಾನ ಸೂಚಿಸಿದರು.

ಕಡೆಗೆ, ೧೮೯೫ನೇ ಫೆಬ್ರವರಿ ೧೮ರಲ್ಲಿ, ಚಾಮರಾಜ ಒಡೆಯರು ಗತಿಸಿದ ೫೧ ದಿವಸಗಳ ನಂತರ, ಇಂಡಿಯಾ ಸರ್ಕಾರ ಒಂದು ಅಪ್ಪಣೆ ಹೊರಡಿಸಿ ಶ್ರೀಮನ್‌ ಮಹಾರಾಣಿ ವಾಣೀ ವಿಲಾಸ ಸನ್ನಿಧಾನವನ್ನು ರೀಜೆಂಟಾಗಿ ನೇಮಿಸಿತು. ಒಂದು ಕೌನ್ಸಿಲನ್ನೂ ನೇಮಿಸಿತು. ಇದರಲ್ಲಿ ಮೂರು ಜನ ಸದಸ್ಯರು: ಟಿ.ಆರ್. ಎ. ತಂಬೂಚೆಟ್ಟ, ಪಿ.ಎð. ಕೃಷ್ಣಮೂರ್ತಿ ಮತ್ತು ರ್ಖಾ ಬಹದೂರ್ ಅಬ್ದುಲ್‌ ರಹರ್ಮಾ. ಮೂರನೆಯವರು ೧೮೯೮ ರಲ್ಲಿ ನಿವೃತ್ತರಾದರು. ಇವರ ಸ್ಥಾನಕ್ಕೆ ವಿ.ಪಿ. ಮಾಧವರಾಯರು ಬಂದರು. ಈ ಪೈಕಿ ಮೂವರೂ, ಮುಂದೆ, ದಿವಾನ್ ಪದವಿಗೆ ಏರಿದರು.

ಈ ನೇಮಕ ಶೇಷಾದ್ರಿ ಅಯ್ಯರ್ ಅವರಿಗೆ ಸರಿಬೀಳಲಿಲ್ಲ. ಇಂಡಿಯಾ ಸರ್ಕಾರ ತಮ್ಮನ್ನು ರೀಜಂಟನ್ನಾಗಿ ಮಾಡುವುದೆಂದು ತಿಳಿದುಕೊಂಡಿದ್ದರುಇ; ಆಶಾಭಂಗವಾಯಿತು. ಕೌನ್ಸಿಲಿನ ರಚನೆಯೂ ಸರಿಬೀಳಲಿಲ್ಲ. ಇನ್ನು ಮುಂದೆ ಅವರ ಅಧಿಕಾರ ಕೆಲವು ತಡೆಗಳಿಂದ ನಡೆಯಬೇಕಾಯಿತು. ಶ್ರೀಮನ್‌ ಮಹಾರಾಣಿಯವರು ಹೇಳಿದಂತೆ ನಡೆಯಬೇಕು, ಮತ್ತು ಬ್ರಿಟಿಷ್‌ ರೆಸಿಡೆಂಟರು ಮೊದಲಿಗಿಂತಲೂ ಹೆಚ್ಚಾಗಿ ರಾಜ್ಯದ ಆಡಳಿತದಲ್ಲಿ ಕೈಹಾಕಲು ಆರಂಭಿಸಿದರು. ಕೌನ್ಸಿಲಿನಲ್ಲಿಯೂ ದಿವಾನರಿಗೆ ಪ್ರತಿಭಟನೆ ಇರುತ್ತಿತ್ತು. ಆದುದರಿಂದ, ೧೮೯೫ ರಿಂದ ಶೇಷಾದ್ರಿ ಅಯ್ಯರ್ ಅವರು ಹಿಂದಿನ ಹಾಗೆ ತಮ್ಮ ದಿವಾನಗಿರಿಯ ಕುದುರೆಯನ್ನು ಓಡಿಸಲಾಗಲಿಲ್ಲ.

ದಿವಾನರು ಪ್ರಜಾಪ್ರಭುತ್ವ ನೀತಿಯನ್ನು ವಿರೋಧಿಸುತ್ತಿದ್ದುದನ್ನು ಸಹಿಸಲಾರದೆ ೧೮೯೫ರ ಆದಿಯಲ್ಲಿಯೇ ಎಕ್ಸಿಕ್ಯುಟಿವ್‌ ಕೌನ್ಸಿಲ್‌ ಸದಸ್ಯತ್ವಕ್ಕೆ ಚಂತ್ಸಲ್‌ ರಾವ್‌ ರಾಜೀನಾಮೆಯಿತ್ತರು. ಅವರು ಕಾರಣ ಹೇಳಿದರು: “ದಿವಾನರ ಮತ್ತು ನನ್ನ ಮಾರ್ಗಗಳು ಭಿನ್ನವಾದವು. ಅವರು ಎಷ್ಟೇ ವಿರೋಧವಿದ್ದರೂ ತಮ್ಮ ಕಾರ್ಯಕ್ರಮಗಳನ್ನು ಸಾಧಿಸಿ ಬಿಡುತ್ತಾರೆ. ವಿರೋಧಾಭಿಪ್ರಾಯವನ್ನು ಲಕ್ಷಿಸುವುದಿಲ್ಲ. ಕೆಲವು ಸಾರಿ ಅವರು ವಿರೋಧಿಗಳ ಕಣ್ಣಿಗೆ ಮಣ್ಣೆರಚುವುದೂ ಉಂಟು. ಆದರೆ ನನ್ನ ರೀತಿ ಅಂತಹುದಲ್ಲ. ನಿಧಾನವಾದರೂ ಚಿಂತೆಯಿಲ್ಲ, ಜನರನ್ನು ನನ್ನ ಕಡೆಗೆ ಒಲಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇದರಿಂದ ನಾನು ಪ್ರಜಾನುರಾಗಿ; ದಿವಾನರು ಪ್ರಜಾನುರಾಗಿಯಲ್ಲ.”

ಚಂತ್ಸಲರಾಯರ ಅಭಿಪ್ರಾಯ ಶೇಷಾದ್ರಿ ಅಯ್ಯರ್ ಅವರ ಪ್ರಜಾಪ್ರಭುತ್ವ ವಿರೋಧವನ್ನು ಸೂಚಿಸುತ್ತದೆ; ಅಲ್ಲದೆ ೧೮೯೫ರ ಆದಿಯಲ್ಲಿಯೇ ಅವರು ಪ್ರಜಾನುರಾಗವನ್ನು ಕಳೆದುಕೊಂಡಿದ್ದರೆಂದೂ ತಿಳಿಸುತ್ತದೆ.

ಇದೇ ಕಾಲದಲ್ಲಿ ಮದರಾಸಿನ “ಹಿಂದೂ” ಪತ್ರಿಕೆಯ ವಿಶೇಷ ಬಾತ್ಮೀದಾರರು ಮೈಸೂರು ಸಂಸ್ಥಾನವನ್ನು ಭೇಟಿ ಮಾಡಿ, ಇಲ್ಲಿನ ರಾಜಕೀಯ ಚಿತ್ರವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದರು. ಅದರಲ್ಲಿ ಅವರು ಹೇಳಿದ ಕೆಲವು ಮಾತುಗಳಿವು:

“ಎಂ. ವೆಂಕಟಕೃಷ್ಣಯ್ಯನವರು ಶೇಷಾದ್ರಿ ಅಯ್ಯರ್ ಅವರ ಆಡಳಿತವನ್ನು ಟೀಕಿಸಿ ಎದುರಿಸುತ್ತಿದ್ದವರಲ್ಲಿ ಮುಖಂಡರಾಗಿದ್ದರು. ಅವರಿಗೆ ಬೆಂಬಲರಾಗಿ ಬಹಳ ಜನ ಖಾಸಗಿ ದೊಡ್ಡ ಮನುಷ್ಯರಿದ್ದರು. ವೆಂಕಟಕೃಷ್ಣಯ್ಯನವರು ವಾಸಿಸುವ ‘ಪದ್ಮಾಲಯ’ ಎಂಬ ಬಂಗಲೆ ದಿವಾನ್ ಶೇಷಾದ್ರಿ ಅಯ್ಯರ್ ಅವರ ಸೌಧಕ್ಕೆ ಎದುರಾಗಿದೆ. ದಿವಾನರ ಕೆಲವು ಮಿತ್ರರು ಶೇಷಾದ್ರಿ ಅಯ್ಯರ್ ಅವರಿಗೆ ತಿಳಿಯದಂತೆ ವೆಂಕಟಕೃಷ್ಣಯ್ಯನವರ ಮನೆಗೆ ಹೋಗಿ ಬರುತ್ತಿದ್ದರು. ವೆಂಕಟಕೃಷ್ಣಯ್ಯನವರ ಮನೆ ತೆರೆದ ಮನೆ, ಅದು ಯಾವಾಗಲೂ ಅಸೆಂಬ್ಲಿ ಸದಸ್ಯರಿಂದ ತುಂಬಿರುತ್ತಿತ್ತು. ದಿವಾನರ ಮತ್ತು ಸರ್ಕಾರದ ವಿಷಯದಲ್ಲಿ ವಿರೋಧಿಗಳ ಅಸಮಾಧಾನವೂ, ಟೀಕೆಗಳೂ ಏನೇ ಇರುತ್ತಿದ್ದರೂ, ಶ್ರೀಮನ್‌ ಮಹಾರಾಜರ ವಿಷಯದಲ್ಲಿ ಅವರ ಭಕ್ತಿ ಅಪಾರವಾಗಿತ್ತು.”

೧೮೯೫ ನೇ ಅಕ್ಟೋಬರಿನಲ್ಲಿ ಪ್ರಜಾಪ್ರತಿನಿಧಿ ಸಭೆ ಸೇರಿದಾಗ ದಿವಾನ್ ಶೇಷಾದ್ರಿ ಅಯ್ಯರ್ ಅವರ ಮನಸ್ಸು ಹೇಗಿತ್ತೆಂಬುದನ್ನು ತಿಳಿಯಬಹುದು. ಸ್ಟ್ಯಾಂಡಿಂಗ್‌ ಕಮಿಟಿಯ ಬಗ್ಗೆ ಚರ್ಚೆಗೆ ಪುನಃ ಆರಂಭವಾಯಿತು. ಈ ಕಮಿಟಿಯ ಸದಸ್ಯರು ಸರ್ಕಾರದ ತಿರಸ್ಕಾರ ಪತ್ರವನ್ನು ಟೀಕಿಸಿದರು. ಇದೇ ವಿಷಯದ ಮೇಲೆ ವೆಂಕಟಕೃಷ್ಣಯ್ಯನವರು ಸಭೆಯಲ್ಲಿ ದಿವಾನರ ಮುಂದೆ ಈ ರೀತಿ  ಭಾಷಣ ಮಾಡಿದರು:

“ಈ ಕಮಿಟಿ ಪ್ರಯೋಜನವಾದದ್ದೆಂಬುದಾಗಿ ದಿವಾನರ ಅಭಿಪ್ರಾಯವಿದ್ದುದರಿಂದ, ಒಂದೆರಡಾವರ್ತಿ ಪ್ರತಿನಿಧಿಗಳು ಒಪ್ಪಿ ಕಮಿಟಿಯನ್ನು ಏರ್ಪಡಿಸಿಕೊಂಡ ಪಕ್ಷದಲ್ಲಿ ಅದು ತಮಗೂ (ದಿವಾನರಿಗೂ) ಅಭಿಮತವಾದದ್ದೆಂದು ತಾವು (ದಿವಾನರು) ಅಪ್ಪಣೆ ಕೊಡಿಸಿದ್ದರಿಂದ, ಈ ಕಮಿಟಿಯನ್ನು ಏರ್ಪಡಿಸಲಾಯಿತು. ತಮ್ಮ ವಿಶ್ವಾಸ ಸಮಗ್ರವಾಗಿ ಈ ಕಮಿಟಿಯ ವಿಷಯದಲ್ಲಿ ಇದ್ದರೆ ಅದು ನಡೆಯಲಿ, ಹಾಗೆ ಇಲ್ಲದಿದ್ದರೆ ತಮ್ಮ ಅಭಿಪ್ರಾಯವನ್ನು ಈ ವಿಷಯದಲ್ಲಿ ಇದ್ದರೆ ಅದು ನಡೆಯಲಿ, ಹಾಗೆ ಇಲ್ಲದಿದ್ದರೆ ತಮ್ಮ ಅಭಿಪ್ರಾಯವನ್ನು ಈ ವಿಷಯದಲ್ಲಿ ಎಲ್ಲ ಪ್ರತಿನಿಧಿಗಳೂ ನಿರೀಕ್ಷಿಸುತ್ತಾರೆ. ವೃಥಾ ಮನಃಕ್ಲೇಶದಿಂದ ಏನೂ ಪ್ರಯೋಜನವಿಲ್ಲ. ಕಮಿಟಿ ಇರುವುದು ಅವಶ್ಯಕವೆಂದು ಪ್ರತಿನಿಧಿಗಳಲ್ಲಿ ಅನೇಕರು ಭಾವಿಸಿದ್ದಾರೆ. ಈ ವಿಷಯದಲ್ಲಿ ರುಜು ಮಾಡಿ ಮನವಿಯನ್ನು ಈ ಸಭೆಯಲ್ಲಿ ಒಪ್ಪಿಸಿರುತ್ತಾರೆ. ಇದಕ್ಕೆ ಆಗದವರು ಕೂಡ ಅರ್ಜಿಯನ್ನು ಕೊಟ್ಟಿದ್ದಾರೆ. ಈ ಕಮಿಟಿ ವಿಷಯದಲ್ಲಿ ತಮಗೆ ಅಭಿಮಾನವಿದ್ದರೆ ಹೆಚ್ಚು ಜನರು ಅಪೇಕ್ಷಿಸತಕ್ಕ ರೀತಿಯಲ್ಲಲಿ ಆಜ್ಞೆಯನ್ನು ಮಾಡಬಹುದು. ಇಲ್ಲದ ಪಕ್ಷದಲ್ಲಿ ತಮ್ಮ ಚಿತ್ತಕ್ಕೆ ತೋರಿದಂತೆ ಮಾಡಬಹುದು.”

ನೇರವಾದ ಈ ಪ್ರಶ್ನೆಗೆ ದಿವಾನರು ಉತ್ತರ ಕೂಡಲೇ ಬೇಕಾಯಿತು. ೧೮೯೨ರಿಂದ ಈ ಕಮಿಟಿಯ ವಿಷಯದಲ್ಲಿ ಸಂದೇಹದಿಂದಲೇ ನೋಡುತ್ತಿದ್ದ ದಿವಾನರು ಈಗ ನಿರ್ಧಾರವಾಗಿ ಒಂದು ತೀರ್ಮಾನಕ್ಕೆ ಬರಬೇಕಾಯಿತು.

ವೆಂಕಟಕೃಷ್ಣಯ್ಯನವರ ಭಾಷಣವಾದ ಮೇಲೆ ೧೦ ನಿಮಿಷಗಳವರೆಗೂ ದಿವಾನರೂ ಕೌನ್ಸಿಲರೂ ಚೀಟಿಗಳ ಮೂಲಕ ಮಾತನಾಡಿಕೊಂಡರು. ಅನಂತರ ದಿವಾನರು ತಿಳಿಸಿದರು:

“ಸರ್ಕಾರದವರು ಈ ಕಮಿಟಿಯನ್ನು ಅಂಗೀಕರಿಸುವುದಕ್ಕೆ ಆಗುವುದಿಲ್ಲ. ಹಾಗೆ ಅಂಗೀಕರಿಸದೇ ಇರುವುದಕ್ಕೆ ಕಾರಣಗಳನ್ನು ಹೇಳುವುದಕ್ಕೆ ಆಗುವುದಿಲ್ಲ. ಆದರೆ ಇಷ್ಟು ಮಟ್ಟಿಗೆ ನಾನು ಹೇಳಬಲ್ಲೆ, ಈ ಕಮಿಟಿಯನ್ನು ಅಂಗೀಕರಿಸುವುದರಿಂದ ಪ್ರತಿನಿಧಿಗಳಲ್ಲಿ ಜಗಳ, ಹೊಟ್ಟೆಕಿಚ್ಚು ಪ್ರಬಲವಾಗುತ್ತದೆ. ಆದುದರಿಂದ ಈ ಕಮಿಟಿಯನ್ನು ಅಂಗೀಕರಿಸುವುದಕ್ಕೆ ಆಗುವುದಿಲ್ಲ. ಇದಲ್ಲದೆ, ಈ ಕಮಿಟಿಯ ಪ್ರಸ್ತಾಪವನ್ನು ಇನ್ನು ಮೇಲೆ ಈ ಸಭೆಯಲ್ಲಿ ತರುವುದಕ್ಕೆ ಅವಕಾಶವನ್ನೂ ಕೊಡುವುದಿಲ್ಲ.”ಈ ರೀತಿ ದಿವಾಣರು ಹೇಳಿದ್ದನ್ನು ಕೇಳಿ ಕಮಿಟಿಯವರು ಬಹಳ ಸಂತಾಪಪಟ್ಟರು.

ಮರು ದಿವಸ ಕಮಿಟಿ ಮೆಂಬರುಗಳು ಸಭೆ ಸೇರಿ “ಸರ್ಕಾರ ಈ ಕಮಿಟಿಯನ್ನು ಅಂಗೀಕರಿಸಲಿ, ಅಥವಾ ಬಿಡಲಿ; ನಾವು ಮಾತ್ರ ಇದನ್ನು ಮುಂದೆಯೂ ನಡೆಸಿಕೊಂಡು ಹೋಗಬೇಕು. ಯಾವ ಸದಸ್ಯರಿಗೆ ಈ ಕಮಿಟಿ ಬೇಕೋ ಅವರು ಇದನ್ನು ಒಪ್ಪಲಿ, ಇದಕ್ಕೆ ಬೆಂಬಲ ಕೊಡಲಿ. ಬೇಡದಿದ್ದವರಿಗೆ ಬೇಡ. ಕಮಿಟಿ ಮಾತ್ರ ಒಗ್ಗಟ್ಟಾಗಿದ್ದುಕೊಂಡು ದೇಶದ ಸಮಸ್ಯೆಗಳನ್ನು ಚರ್ಚಿಸಿ, ತೀರ್ಮಾನಗಳನ್ನು ಮಾಡಿ, ಇಂಡಿಯಾ ಸರ್ಕಾರಕ್ಕೂ, ರೆಸಿಡೆಂಟರಿಗೂ, ರೀಜಂಟರಿಗೂ, ಪತ್ರಿಕೆಗಳಿಗೂ ಆ ತೀರ್ಮಾನಗಳನ್ನು ಕಳುಹಿಸೋಣ. ಸರ್ಕಾರಕ್ಕೂ ಅದನ್ನು ಕಳುಹಿಸೋಣ. ಅವರು ಕಾರ್ಯಕ್ರಮ ಕೈಕೊಳ್ಳುವುದೂ ಬಿಡುವುದೂ ಅವರಿಗೆ ಸೇರಿದ್ದು. ನಾವು ಮಾತ್ರ ಸ್ವತಂತ್ರರಾಗಿ ನಮ್ಮ ಕೆಲಸವನ್ನು ಮಾಡೋಣ” ಎಂದು ನಿರ್ಧರಿಸಿಕೊಂಡರು.

ವೆಂಕಟಕೃಷ್ಣಯ್ಯನವರು ಕಮಿಟಿಯ ಮೀಟಿಂಗಿನ ಕೊನೆಯಲ್ಲಿ “ಪ್ರಜೆಗಳು ನ್ಯಾಯವಾದ ವಿಷಯಗಳಲ್ಲಿ ಐಕ್ಯಮತ್ಯವಾಗಿ ನಡೆಯದೆ ಹೋದರೆ ಸಾಂಕುಶ ಪ್ರಭುತ್ವ ದೊರೆಯುವುದು ಕಷ್ಟ. ಪಾಶ್ಚಾತ್ಯರು ಸಾಂಕುಶವಾದ ರಾಜ್ಯಭಾರವನ್ನು ಹೊಂದುವುದಕ್ಕೆ ಅವರ ಐಕಮತ್ಯವೇ ಮುಖ್ಯ ಕಾರಣ. ಅವರನ್ನು ನೋಡಿ ನಾವುಗಳೂ ಸಾಂಕುಶ ರಾಜ್ಯಭಾರವನ್ನು ಸ್ಥಾಪಿಸಲು ಪ್ರಯತ್ನಿಸಬೇಕು” ಎಂದು ಉಪದೇಶ ಮಾಡಿದರು.

ದಿವಾನರು ಸ್ಟ್ಯಾಂಡಿಂಗ್‌ ಕಮಿಟಿಯನ್ನು ಅಸೆಂಬ್ಲಿಯಲ್ಲಿ ಮಟ್ಟ ಹಾಕಿದ ವಿಷಯ ಇಡೀ ದೇಶದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಸ್ಥಳೀಯ ಪತ್ರಿಕೆಗಳೂ, ಕೆಲವು ಹೊರಗಿನ ಪತ್ರಿಕೆಗಳೂ ಬಲವಾಗಿ ದಿವಾನರನ್ನು ಟೀಕಿಸಿದವು.

ಸ್ಟ್ಯಾಂಡಿಂಗ್‌ ಕಮಿಟಿಯ ವಿಷಯ ವೆಂಕಟಕೃಷ್ಣಯ್ಯನವರು ತಮ್ಮ ಹದ್ದು ಬಸ್ತಿನಲ್ಲಿದ್ದುಕೊಂಡು ದೃಢವಾಗಿ ತತ್ವಕ್ಕೆ ನಿಲ್ಲತಕ್ಕವರು ಎಂಬುದನ್ನು ಎತ್ತಿ ತೋರಿಸುತ್ತದೆ.

ಪ್ರಜಾಪ್ರತಿನಿಧಿ ಸಭೆಯ ಆ ಅಧಿವೇಶನದಲ್ಲಿಯೇ ದಿವಾನರ ಭಾಷಣದಲ್ಲಿ ಕೆಲವು ಮುಖ್ಯ ವಿಷಯಗಳನ್ನು ಹೇಳದೆ ಬಿಟ್ಟಿದುದನ್ನು ಸದಸ್ಯರು ದಿವಾನರ ಗಮನಕ್ಕೆ ತಂದರು. ನವೆಂಬರಿನಲ್ಲಿ ವೈಸರಾಯರು ಮೈಸೂರಿಗೆ ಬರತಕ್ಕ ವಿಷಯ ದಿವಾನರ ಭಾಷಣದಲ್ಲಿ ಸೇರಿರಲಿಲ್ಲ.

ಅಸೆಂಬ್ಲಿ ಸದಸ್ಯರು ವೈಸ್‌ರಾಯರಿಗೆ ಒಂದು ಮಾನ ಪತ್ರ ಅರ್ಪಿಸಬೇಕೆಂದು ಕೋರಿದರು. ಅದಕ್ಕೆ ದಿವಾನರು ಒಪ್ಪಿದರು. ಮಾನಪತ್ರ ಸಿದ್ಧವಾಯಿತು.  ಅದರಲ್ಲಿದ್ದ ‘ಶ್ರೀಮನ್‌ ಮಹಾರಾಜರು ಕಲ್ಕತ್ತೆಯಲ್ಲಿ ಕಾಲವಾದಾಗ, ವೈಸ್‌ರಾಯರು ಮಹಾಮಾತೃಶ್ರೀಯವರಿಗೆ ಮಾಡಿದ ದುಃಖೋಪಶಾಂತಿಗೂ, ಮೈಸೂರು ಜನರ ಪ್ರಾರ್ಥನೆಗೆ ಅನುಸಾರವಾಗಿ ಮಹಾರಾಣಿಯವರನ್ನು ರೀಜೆಂಟರನ್ನಾಗಿ ಮಾಡಿದ್ದಕ್ಕೂ, ರಾಜ್ಯಭಾರದಲ್ಲಿ ಅವರಿಗೆ ಸಹಾಯಾರ್ಥವಾಗಿ ಒಂದು ಎಕ್ಸಿಕ್ಯುಟಿವ್‌ ಕೌನ್ಸಿಲನ್ನು ಏರ್ಪಡಿಸಿದ್ದಕ್ಕೂ ನಾವು ಕೃತಜ್ಞರಾಗಿದ್ದೇವೆ’ ಎಂಬ ವಾಕ್ಯವನ್ನು ತೆಗೆದುಹಾಕಬೇಕೆಂದು ಸರ್ಕಾರದ ಸೆಕ್ರೆಟರಿಗಳು ದಿವಾನರ ಅಪ್ಪಣೆಯಂತೆ ತಿಳಿಸಿದರು. ಪ್ರಜಾಪ್ರತಿನಿಧಿಗಳು ಇದಕ್ಕೆ ಒಪ್ಪಲಿಲ್ಲ. ತಮ್ಮನ್ನು ಭೇಟಿಮಾಡಲು ಸದಸ್ಯರ ಸಂಖ್ಯೆಯಲ್ಲಿ ಯಾವ ನಿರ್ಬಂಧವನ್ನೂ ವೈಸರಾಯರು ಮಾಡದಿದ್ದರೂ, ೩೦ ಜನರೇ ಸಾಕು ಮಾನಪತ್ರ ಅರ್ಪಿಸಲು ಎಂದು ದಿವಾನರು ನಿರ್ಬಂಧಸಿದ್ದೂ ಪ್ರಮುಖರ ಮನಸ್ಸಿಗೆ ನೋವುಂಟುಮಾಡಿತು.

ಸರ್ಕಾರದ ಕೆಲಸಕ್ಕೆ ನೌಕರರನ್ನು ನೇಮಿಸುವ ವಿಷಯದಲ್ಲಿಯೂ ಪ್ರಜಾಮುಖಂಡರಿಗೂ ಶೇಷಾದ್ರಿ ಅಯ್ಯರ್ ಅವರಿಗೂ ತೀಕ್ಷ್ಣವಾದ ಭಿನ್ನಾಭಿಪ್ರಾಯವಿತ್ತು. ದಿವಾನರು ದೊಡ್ಡ ಹುದ್ದೆಗಳಿಗೇ ಅಲ್ಲದೆ ಚಿಕ್ಕ ಹುದ್ದೆಗಳಿಗೂ ಮದ್ರಾಸಿನವರನ್ನೇ ಹೆಚ್ಚು ಹೆಚ್ಚಾಗಿ ನೇಮಿಸುತ್ತ ಬಂದರು. ಅನೇಕ ಸಂದರ್ಭಗಳಲ್ಲಿ ಅರ್ಹತೆಯಿದ್ದಾಗ್ಯೂ ಮೈಸೂರಿನವರಿಗೆ ಹುದ್ದೆಗಳನ್ನು ಕೊಡುತ್ತಿರಲಿಲ್ಲ. ಇದರಿಂದ ಮೈಸೂರಲ್ಲಿ ಹುಟ್ಟಿ ಬೆಳೆದು ವಿದ್ಯಾವಂತರಾದ ಜನರಿಗೆ ಅನ್ಯಾಯವಾಗುತ್ತಿತ್ತು.  ಈ ಅನ್ಯಾಯವನ್ನು ದಿವಾನರ ಗಮನಕ್ಕೆ ತಂದಾಗ್ಯೂ ಅವರು ಅದನ್ನು ಸರಿಪಡಿಸುತ್ತಿರಲಿಲ್ಲ.

೧೮೯೧ರಿಂದ ಸರ್ಕಾರದ ದೊಡ್ಡ ಹುದ್ದೆಗಳಿಗೆ ನೌಕರರನ್ನು ನೇಮಿಸಲು ಹೊಸ ಸಿವಿಲ್‌ ಸರ್ವಿಸ್‌ ಪರೀಕ್ಷೆಯ ಏರ್ಪಾಡನ್ನು ಜಾರಿಗೆ ತಂದರು. ಇದರಲ್ಲಿ ಉತ್ತಮಸ್ಥಾನ ಪಡೆದವರನ್ನು ಪ್ರೊಬೇಷನರಿ ಅಸಿಸ್ಟೆಂಟ್‌ ಕಮಿಷನರನ್ನಾಗಿ ನೇಮಿಸುತ್ತಿದ್ದರು. ಈ ಪರ ಈಕ್ಷೆಗೆ ಸ್ಫರ್ಧಿಸುವವರು ಅಖಿಲ ಭಾರತದಿಂದ ಬರಬಹುದು ಎಂಬ ನಿಯಮವಿತ್ತು. ನ್ಯಾಯವಾಗಿ, ಮೈಸೂರಿನಲ್ಲಿ ಹುಟ್ಟಿ ಬೆಳೆದವರಿಗೂ ಮೈಸೂರಿನಲ್ಲಿ ನೆಲೆಸಿರುವವರಿಗೂ ಇದು ನಿಯಮತಿವಾಗಿರಬೇಕಾಗಿತ್ತು. ಅಖಿಲ ಭಾರತದವರಿಗೆ ತೆರೆದಿದ್ದುದರಿಂದ ಮದ್ರಾಸಿನ ಬುದ್ಧಿವಂತರಾದ ಮತ್ತು ವಿದ್ಯಾವಂತರಾದ ಯುವಕರೇ ಹೆಚ್ಚಾಗಿ  ಈ ಪರೀಕ್ಷೆಗೆ ಸ್ಪರ್ಧಿಸಿ ಸ್ಥಾ ನಗಳನ್ನು ಪಡೆದು, ಅವರೇ ಹೆಚ್ಚಾಗಿ ಪ್ರೊಬೇಷನರಿ ಅಸಿಸ್ಟೆಂಟ್‌ ಕಮಿಷನರ್ ಹುದ್ದೆಗೆ ಬರುವ ಹಾಗಾಯಿತು. ಮದ್ರಾಸನ್ನು ಬಿಟ್ಟು ಇತರ ಪ್ರಾಂತದವರು  ಈ ಪರೀಕ್ಷೆಗೆ ಬರುತ್ತಿರಲಿಲ್ಲ. ಆಗ ಐ.ಸಿ.ಎಸ್‌., ಎಫ್‌.ಸಿ.ಎಸ್‌. ಮುಂತಾದ ಪರೀಕ್ಷೆಗಳು ಇಂಡಿಯಾದಲ್ಲಿ ಇನ್ನೂ ಆರಂಭವಾಗಿರಲಿಲ್ಲ. ಆದ್ದರಿಂದ ಚುರುಕಾದ ಮದ್ರಾಸ್‌ ಯುವಕರು ಈ ಪರೀಕ್ಷೆಗೆ ಸ್ಪರ್ಧಿಸುತ್ತಿದ್ದುದರಲ್ಲಿ ಆಶ್ಚರ್ಯವಿಲ್ಲ. ಕೆ.ಎಸ್‌. ಚಂದ್ರಶೇಖರ ಅಯ್ಯರ್, ಕೆ.ಆರ್. ಶ್ರೀನಿವಾಸಯ್ಯಂಗಾರ್, ವಿ. ತ್ಯಾಗರಾಜ ಅಯ್ಯರ್, ಕೆ. ಮ್ಯಾರ್ಥ, ಸಿ.ಎಸ್‌. ಬಾಲಸುಂದರಂ ಅಯ್ಯರ್, ಕೆ.ವಿ. ಅನಂತರಾಮರ್ಕ, ಎ.ವಿ. ರಾಮನಾರ್ಥ, ಎð. ಮಾಧವರಾವ್‌, ಎಸ್‌.ಪಿ. ರಾಜಗೋಪಾಲಚಾರಿ ಮುಂತಾದವರೆಲ್ಲರೂ ಎಂ.ಸಿ.ಎಸ್‌. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, ಮೈಸೂರಿನ ಅಧಿಕಾರಿಗಳಾದರು. ಮದ್ರಾಸಿನ ಕಾಂಗ್ರೆಸ್‌ ಮುಖಂಡರಾಗಿದ್ದ ಎಸ್‌. ಸತ್ಯಮೂರ್ತಿಯವರೂ  ಈ ಪರೀಕ್ಷೆಗೆ ಕುಳಿತಿದ್ದರೆಂದು ತಿಳಿದುಬಂದಿದೆ. ಈ ಪರೀಕ್ಷೆಗಳಲ್ಲಿ ಕೆಲವು ಮೈಸೂರಿನವರು ತೇರ್ಗಡೆಯಾದರೂ ಹೆಚ್ಚಾಗಿ ಮದ್ರಾಸಿನವರೇ ಇದ್ದರು. ಮದ್ರಾಸಿನವರು ಹೀಗೆ ತೇರ್ಗಡೆಯಾಗುವುದಕ್ಕೆ ಅಲ್ಲಿ ಇಂಗ್ಲಿಷ್‌ ವಿದ್ಯಾಭ್ಯಾಸ ಸುಮಾರು ಒಂದು ಶತಮಾನದ ಹಿಂದೆಯೇ ಪ್ರಾರಂಭವಾಗಿದ್ದುದು ಕಾರಣ. ಮದ್ರಾಸು ವಿಶ್ವವಿದ್ಯಾಲಯ ವಿದ್ಯಾರ್ಥಿಗಳನ್ನು ಇಂಗ್ಲಿಷ್‌ನಲ್ಲಿಯೂ ಇತರ ವಿಷಯಗಳಲ್ಲಿಯೂ ಚೆನ್ನಾಗಿ ತಯಾರು ಮಾಡುತ್ತಿದ್ದಿತು. ಮೈಸೂರಿನಲ್ಲಿ ಇಂಗ್ಲಿಷ್‌ ವಿದ್ಯಾಭ್ಯಾಸ ಆಗ ಇನ್ನೂ ಹಿಂದೆ ಇತ್ತು; ಇಲ್ಲಿ ಕಾಲೇಜುಗಳೂ ಕಡಿಮೆ.

ತೇರ್ಗಡೆಯಾದ ಮದ್ರಾಸು ಯುವಕರು ಕ್ರಮೇಣ ಮೈಸೂರಿನಲ್ಲಿಯೇ ನೆಲೆಸಿ ಸ್ಥಳದ ನಿವಾಸಿಗಳೇ ಆದರು. ಕನ್ನಡವನ್ನು ಕಲಿತರು. ಅವರ ಮಕ್ಕಳಂತೂ ನೂರಕ್ಕೆ ನೂರರಷ್ಟು ಮೈಸೂರಿನವರೇ.

ಆದರೆ, ದಿವಾನ್‌ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ, ಅವರ ದಿವಾನ್‌ಗಿರಿಯ ಅವಧಿ ಮುಗಿಯುವವರೆಗೂ, ಮದ್ರಾಸಿನವರಿಗೂ ಮೈಸೂರಿನವರಿಗೂ ಭೇದ ಬಹಳವಾಗಿತ್ತು. ‘ಮೈಸೂರ್ ಪಾರ್ಟಿ’ ಎಂಬುದಾಗಿಯೂ ‘ಮದ್ರಾಸ್‌ ಪಾರ್ಟಿ’ ಎಂಬುದಾಗಿಯೈ ಮೇಲಿನ ಜನಗಳಲ್ಲಿ ಎರಡು ಪಾರ್ಟಿಗಳಾದುವು.

ವೆಂಕಟಕೃಷ್ಣಯ್ಯನವರೂ ಅವರ ಮಿತ್ರರೂ ಅಸೆಂಬ್ಲಿಯಲ್ಲಿಯೂ ಹೊರಗಡೆಯೂ “ಮೈಸೂರು ಮೈಸೂರಿನವರಿಗೆ” (“Mysore for Mysoreans”) ಎಂಬ ನೀತಿಗಾಗಿ ಸರ್ಕಾರದೊಡನೆ ಬಹಳ ವಾದ ಮಾಡಿದರು. ಈ ವಾದ ಶೇಷಾದ್ರಿ ಅಯ್ಯರ್ ಅವರ ಮನಸ್ಸಿಗೆ ಬಹಳ ಬೇಜಾರನ್ನೂ ವ್ಯಥೆಯನ್ನೂ ಉಂಟುಮಾಡಿತು. ಆದರೇನು ಮಾಡುವುದಕ್ಕಾಗುತ್ತದೆ? ಆಯಾಯಾ ಪ್ರಾಂತದ ಜನರು ಆಯಾಯಾ ಪ್ರಾಂತದ ಜನರಿಗಾಗಿ ಹೊಡೆದಾಡುವುದು ರಾಜಕೀಯ ತತ್ವ. ತಿರುವಾಂಕೂರಿನಲ್ಲಿಯೂ ಆ ಕಾಲದಲ್ಲಿ ‘ತಿರುವಾಂಕೂರು ತಿರುವಾಂಕೂರಿನವರಿಗೆ’ ಎಂಬ ಚಳುವಳಿಯಿತ್ತು. ಬಿಹಾರಿನವರು  “ಬಿಹಾರ್ ಬಿಹಾರಿನವರಿಗೆ” ಎಂದು ಬಂಗಾಳಿಗಳ ವಿರುದ್ಧ ಜಗಳವಾಡುತ್ತಿದ್ದರು.

ಏನೇ ಆಗಲಿ, ೧೮೯೨ ರಿಂದ ೧೯೦೧ ರವರೆವಿಗೆ, ಸುಮಾರು ೯ ವರ್ಷಕಾಲ ‘ಮೈಸೂರು ಮೈಸೂರಿನವರಿಗೆ’ ಎಂಬ ಚಳುವಳಿ ದಿವಾನರಿಗೆ ಬಹಳ ಅಸುಖವನ್ನುಂಟು ಮಾಡಿತು. ಶೇಷಾದ್ರಿ ಅಯ್ಯರ್ ಅವರ ಮಿತ್ರರು ಮೈಸೂರಿನ ಈ ಚಳುವಳಿಯನ್ನು ಅಲ್ಪತನವೆಂದು ಅಲ್ಲಗೆಳೆದರು. ಹೀಗೆ ಅನ್ನುವುದು ಸರಿಯಾಗಿರಲಿಲ್ಲ. ಮೈಸೂರಿನವರು ಉನ್ನತ ಭಾರತೀಯರಾಗಿದ್ದುದಲ್ಲದೆ ತಮ್ಮ ಪ್ರಾಂತ್ಯದ ಜನರ ಹಕ್ಕು ಬಾಧ್ಯತೆಗಳಿಗಾಗಿ ಹೊಡೆದಾಡುತ್ತಿದ್ದರು; ಇದರಲ್ಲಿ ಅಲ್ಪತನವೇನಿದೆ, ಎಂದು ವೆಂಕಟಕೃಷ್ಣಯ್ಯನವರೂ ಅವರ ಮಿತ್ರರೂ ಪ್ರಶ್ನಿಸುತ್ತಿದ್ದರು.

ವೆಂಕಟಕೃಷ್ಣಯ್ಯನವರು ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಮಾತ್ರವಲ್ಲದೆ ತಾವು ಬದುಕಿದಷ್ಟು ದಿನವೂ ಮೈಸೂರು ಸಂಸ್ಥಾನ ಮುಂದುವರಿಯಬೇಕು, ಮೈಸೂರಿನವರು ಹೆಚ್ಚು ಪ್ರಾಶಸ್ತ್ಯ ಹೊಂದಬೇಕು ಎಂದು ವಾದಿಸುತ್ತಲೇ ಇದ್ದರು. ಮೈಸೂರು ಸಿವಿಲ್‌ ಸರ್ವಿಸ್‌ ಪರೀಕ್ಷೆಯನ್ನು ಮೈಸೂರಿನವರಿಗೇ ನಿಯಮಿತಗೊಳಿಸಬೇಕು ಎಂದು ಅಸೆಂಬ್ಲಿಯಲ್ಲಿಯೂ ಹೊರಗೂ ವಾದಿಸುತ್ತಲೇ ಇದ್ದರು.

ಕಡೆಗೆ ೧೯೧೨ರಲ್ಲಿ ಟಿ. ಆನಂದರಾಯರು, ತಾವು ದಿವಾನರಾಗಿದ್ದಾಗ, ಹಳೆಯ ಮೈಸೂರು ಸಿವಿಲ್‌ ಸರ್ವಿಸ್‌ ಪರೀಕ್ಷಾ ಪದ್ಧತಿಯನ್ನು ವಜಾಮಾಡಿ ಹೊಸ ಮೈಸೂರು ಸಿವಿಲ್‌ ಸರ್ವಿಸ್‌ ಪದ್ಧತಿಯನ್ನು ಜಾರಿಗೆ ತಂದರು. ಹೊಸ ಪದ್ಧತಿಯ ಪ್ರಕಾರ, ಈ ಪರೀಕ್ಷೆಗೆ ಹುಟ್ಟು ಮೈಸುರಿನವರಾಗಲೀ ಮೈಸೂರಿನಲ್ಲಿ ಡಾಮಿಸೈಲ್‌ ಆದವರಾಗಲೀ ಅಥವಾ ಮೈಸೂರಿನ ಯಾವುದಾದರೂ ಕಾಲೇಜಿನಲ್ಲಿ ಡಿಗ್ರಿಯನ್ನು ತೆಗೆದುಕೊಂಡವರಾಗಲೀ ಸ್ಪರ್ಧಿಸಬಹುದಾಗಿತ್ತು.

ಹೀಗೆ ವೆಂಕಟಕೃಷ್ಣಯ್ಯನವರು ೧೮೯೨ರಲ್ಲಿ ಆರಂಭಿಸಿದ “ಮೈಸೂರು ಮೈಸೂರಿನವರಿಗೆ” ಎಂಬ ಹೋರಾಟ ೧೯೧೨ರಲ್ಲಿ, ಮೂವತ್ತು ವರ್ಷಗಳ ಅನಂತರ, ಜಯಪ್ರದವಾಯಿತು. ಅವರ ನ್ಯಾಯವಾದ ಬೇಡಿಕೆ ಈಡೇರಲು ಅಷ್ಟು ವರ್ಷ ಹಿಡಿಯಿತು.

ದಿವಾನ್‌ ಶೇಷಾದ್ರಿ ಅಯ್ಯರ್ ಅವರ ಗ್ರಹಗತಿ ಚಾಮರಾಜ ಒಡೆಯರು ಗತಿಸಿದಂದಿನಿಂದ ಇಳಿಮುಖವಾಯಿತು. ಪ್ರಜಾನುರಾಗವೂ ಅವರ ಬಗ್ಗೆ ಕಡಿಮೆಯಾಯಿತು. ಬ್ರಿಟಿಷ್‌ ರೆಸಿಡೆಂಟರು ಬಲವಾಗುತ್ತ ಬಂದರು. ಅವರ ಆರೋಗ್ಯವೂ ಕೆಟ್ಟಿತು. ಆಗಾಗ್ಗೆ ಖಾಯಿಲೆ ಬೀಳುತ್ತಿದ್ದರು. ಡಯಾಬಿಟಿಸ್‌ ಎಂಬ ಸಿಹಿ ಮೂತ್ರ ರೋಗ ಅವರಿಗೆ ಬಹಳ ಬಾಧೆಯನ್ನು ಕೊಡುತ್ತಿತ್ತು.

ರಾಜ್ಯದಲ್ಲಿ ಅನೇಕ ಅನರ್ಥಗಳೂ ಸಂಭವಿಸಿದವು.

೧೮೯೭ರಲ್ಲಿ, ಚಾಮರಾಜ ಒಡೆಯರ ಮೊದಲನೇ ಕುಮಾರಿಯ ವಿವಾಹ ಪೂರ್ತಿಯಾಗುವ ಮುಂಚೆಯೇ, ಕಡೆಯ ದಿವಸ, ಹಳೆಯ ಅರಮನೆಗೆ ಬೆಂಕಿ ಬಿದ್ದು, ಬಹಳ ಅನಾಹುತವಾಯಿತು. ಮದುವೆ ಚಪ್ಪರದ ಮೇಲುಗಡೆಯೇ ಬೆಂಕಿ ಕಾಣಿಸಿಕೊಂಡಿದ್ದು ಮನಸ್ಸಿಗೆ ಬಹಳ ವ್ಯಾಕುಲತೆಯನ್ನುಂಟುಮಾಡಿತು. ಅರಮನೆಯ ಯಾವಳೋ ಒಬ್ಬ ಸೇವಕಿಯ ಅಚಾತುರ್ಯದಿಂದ ಈ ಘಟನೆ ನಡೆಯಿತೆಂದು ಹೇಳಲಾಗಿದೆ.

ಇನ್ನೊಂದು ಮಹಾ ದುರ್ಘಟನೆ,೧೮೯೮ನೇ ಆಗಸ್ಟಿನಲ್ಲಿ ಪ್ಲೇಗ್‌ ವ್ಯಾಧಿ ಮೈಸೂರಿಗೆ ಬಂದದ್ದು. ಹುಬ್ಬಳ್ಳಿ ಕಡೆಯಿಂದ ಇದು ಮೈಸೂರಿಗೆ ವ್ಯಾಪಿಸಿತು. ಮೈಸೂರು ನಗರದಲ್ಲೂ, ಬೆಂಗಳೂರು ನಗರದಲ್ಲೂ ಸಾವಿರಾರು ಸಂಸಾರಗಳು ಈ ವ್ಯಾಧಿಗೆ ತುತ್ತಾದರು. ಈ ವ್ಯಾಧಿಯಿಂದ ಮೂರು ವರ್ಷ ಕಾಲ ಮೈಸೂರು ಸಂಸ್ಥಾನದಲ್ಲಿ ಬಹಳ ಕ್ಷೋಭೆಯುಂಟಾಯಿತು.

ಪ್ಲೇಗಿನ ಕಾರಣದಿಂದ ೧೮೯೮ರಲ್ಲಿ ಪ್ರಜಾಪ್ರತಿನಿಧಿ ಸಭೆಯ ಅಧಿವೇಶನ ನಡೆಯಲೇ ಇಲ್ಲ.

೧೮೯೭-೯೮ ರಲ್ಲಿ, ದಿವಾನ್‌ ಶೇಷಾದ್ರಿ ಅಯ್ಯರ್ ಅವರ ಅಸ್ವಸ್ಥತೆಯ ಕಾರಣ, ಮೊದಲನೇ ಕೌನ್‌ಸಿಲರ್ ಟಿ.ಆರ್. ಎ. ತಂಬೂಚೆಟ್ಟಿಯವರು ಆಕ್ಟಿಂಗ್‌ ದಿವಾನರಾಗಿದ್ದರು.

ವೆಂಕಟಕೃಷ್ಣಯ್ಯ ನವರೂ ಅವರ ಮಿತ್ರರೂ ಪ್ರಜಾಪ್ರತಿನಿಧಿ ಸಭೆಯಲ್ಲಿಯೂ, ಹೊರಗೂ, ಪತ್ರಿಕೆಗಳಲ್ಲಿಯೂ, ಪ್ರಕಟವಾಗಿ ದಿವಾನರ‍ನ್ನು ವಿರೋಧಿಸುತ್ತಿದ್ದರು. ದಿವಾನರ ಹಿತೈಷಿಗಳೆನಿಸಿಕೊಂಡಿದ್ದವರೂ ಕೂಡ ಅವರ ಬೆನ್ನು ಹಿಂದೆ ಅವರನ್ನು ಆಕ್ಷೇಪಿಸುತ್ತ ಬಂದರು. ದೀರ್ಘ ಕಾಲದ ಈ ದಿವಾನ್‌ಗಿರಿ ಶೇಷಾದ್ರಿ ಅಯ್ಯರ್ ಅವರ ಕೆಲವು ಮಿತ್ರರಿಗೇ ಸರಿಯಾದ್ದೆಂದು ತೋರಲಿಲ್ಲ. ಅವರ ರಾಜಕೀಯ ನೀತಿಯೂ ಇವರಿಗೆ ಸರಿಬೀಳಲಿಲ್ಲ. ಆದರೆ ಹಾಗೆ ಅವರ ಎದುರಿಗೆ ಹೇಳಲು ಇವರಿಗೆ ಧೈರ್ಯವಿಲ್ಲ.

ದಿವಾನರು ಖಾಯಿಲೆಯ ಕಾರಣ ಆಗಾಗ್ಗೆ ರಜೆ ತೆಗೆದುಕೊಳ್ಳುತ್ತಿದ್ದರು. ೧೯೦೦ ರಿಂದ ದೀರ್ಘ ಕಾಲ ರಜಾ ತೆಗೆದುಕೊಳ್ಳಬೇಕಾಯಿತು. ಕಡೆಗೆ ೧೯೦೧ ನೇ ಮಾರ್ಚ್ ೧೮ ರಿಂದ ಪೂರ್ತಿಯಾಗಿ ನಿವೃತ್ತರಾದರು. ಅವರು ವಿಶ್ರಾಂತಿ ಸುಖವನ್ನು ಹೆಚ್ಚುಕಾಲ ಅನುಭವಿಸಲಿಲ್ಲ. ನಿವೃತ್ತಿಯಾದ ೬ ತಿಂಗಳಲ್ಲಿಯೇ ಬೆಂಗಳೂರಿನಲ್ಲಿ, ಕುಮಾರಾ ಪಾರ್ಕ್ ಎಂಬ ಸ್ವಗೃಹದಲ್ಲಿ, ದೈವಾಧೀನರಾದರು.

ಮೈಸೂರು ಸಂಸ್ಥಾನ ಬಹಳ ದೊಡ್ಡ ದಿವಾನರನ್ನು ಕಳೆದುಕೊಂಡಿತು. ಇಡೀ ರಾಜ್ಯ ಶೋಕಮಗ್ನವಾಯಿತು. ಹೀಗೆ ಶೋಕ ಪಟ್ಟವರಲ್ಲಿ ವೆಂಕಟಕೃಷ್ಣಯ್ಯನವರು ಪ್ರಮುಖರು. ಮರಣವಾರ್ತೆ ತಿಳಿದಕೂಡಲೇ ಅವರು ದಿವಾನರ ಸಂಸಾರಕ್ಕೆ ತಂತೀ ಮೂಲಕ ತಮ್ಮ ಸಂತಾಪವನ್ನು ಕಳುಹಿಸಿ, ತಮ್ಮ ಪತ್ರಿಕೆಯಲ್ಲಿ ದಿವಂಗತರ ಬಗ್ಗೆ ಚರಮ ಪ್ರಶಂಸೆಯನ್ನು ಅತ್ಯಂತ ಉನ್ನತ ರೀತಿಯಲ್ಲಿ ಮಾಡಿದರು. ತಮಗೂ ದಿವಾನರಿಗೂ ರಾಜಕೀಯ ವಿರೋಧವಿದ್ದಾಗ್ಯೂ, ಅವರ ವಿಷಯದಲ್ಲಿ ತಮಗೆ ಮೈತ್ರಿಯೂ ಅತ್ಯಂತ ಸದ್ಭಾವನೆಯೂ ಇತ್ತೆಂದು ವಿವರಿಸಿದರು. ದಿವಂಗತರ ಜ್ಞಾಪಕಾರ್ಥವಾಗಿ ಒಂದು ಉನ್ನತ ಮತ್ತು ಭವ್ಯವಾದ ಪ್ರತಿಮೆಯನ್ನು  ನಿರ್ಮಿಸಬೇಕೆಂದು ಸಲಹೆಯಿತ್ತರು. ಮುಂದೆ ಬರುವ ದಿವಾನರು ಶೇಷಾದ್ರಿ ಅಯ್ಯರ್ ಅವರ ಉತ್ತಮ ಗುಣಗಳನ್ನು ಅನುಸರಿಸಬೇಕೆಂದೂ, ಆಡಳಿತವನ್ನು ದಕ್ಷತೆಯಿಂದ ಮತ್ತು ನಿಷ್ಪಕ್ಷಪಾತ ಬುದ್ಧಿಯಿಂದ ನಿರ್ವಹಿಸಬೇಕೆಂದೂ ಆಶಿಸಿದರು.

ಸಾಮಾಜಿಕ ಸುಧಾರಣೆ ಮತ್ತು ಸ್ತ್ರೀ ವಿದ್ಯಾಭ್ಯಾಸ ವಿಷಯಗಳಲ್ಲಿ ವೆಂಕಟಕೃಷ್ಣಯ್ಯನವರೂ ಶೇಷಾದ್ರಿ ಅಯ್ಯರ್ ಅವರೂ ಸಹಕಾರದಿಂದ ಕೆಲಸ ಮಾಡಿದರು. ಮೈಸೂರು ರಾಜ್ಯದಲ್ಲಿ ಬಾಲ್ಯ ವಿವಾಹ ಪದ್ಧತಿಯನ್ನೂ ತಪ್ಪಿಸಲು ಕಾನೂನು ಆಗಲು ದಿವಾನರಿಗೆ ಬಹಳ ಬೆಂಬಲವಿತ್ತರು.

ರಾಜಕೀಯ ವಿರೋಧವಿದ್ದಾಗ್ಯೂ, ಶೇಷಾದ್ರಿ ಅಯ್ಯರ್ ಅವರು ತಮ್ಮ ಮಕ್ಕಳನ್ನೆಲ್ಲಾ ವಿದ್ಯಾಭ್ಯಾಸಕ್ಕಾಗಿ ಮರಿಮಲ್ಲಪ್ಪ ಸ್ಕೂಲಿಗೇ ಕಳುಹಿಸುತ್ತಿದ್ದುದು ಗಮನೀಯವಾದ ಅಂಶ.

ಶೇಷಾದ್ರಿ ಅಯ್ಯರ್ ಅವರ ಚರಮ ಪ್ರಶಂಶೆಯನ್ನು ಅನೇಕ ಬ್ರಿಟಿಷ್‌ ಇಂಡಿಯಾ ಪತ್ರಿಕೆಗಳು ಮಾಡಿದವು. ಇಂಡಿರ್ಯ ನ್ಯಾಷನಲ್‌ ಕಾಂಗ್ರೆಸಿನ ಅಧಿವೇಶನದಲ್ಲಿ, ೧೯೦೧ರಲ್ಲಿ, ಡಿ. ಈ. ವಾಚಾರವರು ಗತಿಸಿದ ದಿವಾನರ ಗುಣಗಾನ ಮಾಡಿದರು.  ವೈಸರಾಯರುಗಳಾದ ಲಾರ್ಡ್‌ ಕರ್ಜರವರೂ, ಲಾರ್ಡ್ ಹಾರ್ಡಿಂಜ್‌ರವರೂ ಶೇಷಾದ್ರಿ ಅಯ್ಯರ್ ಅವರ ಆಡಳಿತ ಸಾಮರ್ಥ್ಯವನ್ನು ಕೊಂಡಾಡಿದರು.

ಬೆಂಗಳೂರಿನಲ್ಲಿ ಅವರ ಸ್ಮಾರಕವಾಗಿ ‘ಶೇಷಾದ್ರಿ ಅಯ್ಯರ್ ಮೆಮೋರಿಯಲ್‌ ಹಾಲ್‌’ ಎಂಬ ಭವನವೂ (ಅದರಲ್ಲಿ ಲೈಬ್ರೆರಿಯಿದೆ), ಅದರ ಮುಂದೆ ಭವ್ಯವಾದ ಕಂಚಿನ ಪ್ರತಿಮೆಯೂ ಕಂಗೊಳಿಸುತ್ತಿವೆ.

೧೦

ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ವೆಂಕಟಕೃಷ್ಣಯ್ಯನವರು ಪ್ರಜಾ ಸ್ವಾತಂತ್ರ್ಯಕ್ಕಾಗಿ ಹೊಡೆದಾಡುವ ವೀರರೆಂಬ ಉನ್ನತ ಕೀರ್ತಿಯನ್ನು ಸ್ಥಾಪಿಸಿಕೊಂಡರು. ಅವರ ಪ್ರಜಾಮುಖಂಡತ್ವ ಕೀರ್ತಿಯ ಶಿಖರವನ್ನು ಮುಟ್ಟಿತು. ಆಗ ಸ್ಥಾಪಿಸಿದ ಕೀರ್ತಿಗೆ ಮುಂದಿನ ವರ್ಷಗಳಲ್ಲಿ ಇನ್ನೂ ಮೆರುಗು ಬಂದಿತು.

ಶೇಷಾದ್ರಿ ಅಯ್ಯರ್ ಅವರ ದಿವಾನಗಿರಿ ಮುಕ್ತಾಯವಾಗುವ ಹೊತ್ತಿಗೆ ಒಂದು ಹೊಸ ಶತಮಾನವೇ ಆರಂಭವಾಯಿತು. ಇದು ೨೦ನೇ ಶತಮಾನ. ೧೯ನೇ ಶತಮಾನ ಪ್ರಪಂಚದ ಚರಿತ್ರೆಯಲ್ಲೇ ಹೆಸರುವಾಸಿಯಾದದ್ದು. ಈ ಶತಮಾನದಲ್ಲಿಯೇ ಹೊಸ ವಿಜ್ಞಾನ ಶೋಧನೆಗಾಗಿ, ಸ್ಟೀಮ್‌ ಎಂರ್ಜಿ ಮುಂತಾದ ಯಂತ್ರಗಳು ಆರಂಭವಾದವು. ವಿದ್ಯುಚ್ಛಕ್ತಿ ಪ್ರಾಬಲ್ಯಕ್ಕೆ ಬಂದಿತು. ಜನರಲ್ಲಿ ಹಿಂದಿನ ಕಾಲದ ಭಾವನೆಗಳೂ ಮೂಢ ಭ್ರಾಂತಿಗಳೂ ಅಳಿಸಿ ಹೋಗುತ್ತ ಬಂದವು.

ಇಂಗ್ಲೆಂಡಿನ ಪರಿಸ್ಥಿತಿಯಲ್ಲಿ ತೀವ್ರ ಬದಲಾವಣೆಗಳಾಗಿದ್ದವು. ಇಂಗ್ಲೆಂಡಿನ ರಾಜ್ಯ ಪದ್ಧತಿಯಲ್ಲಿ ರಾಜ ಅಥವಾ ರಾಣಿಯ ಸ್ಥಾನ ಉನ್ನತವಾದಾಗ್ಯೂ, ಪಾರ್ಲಿಮೆಂಟಿನ ಮತ್ತು ಪ್ರಧಾನ ಮಂತ್ರಿಯ ಅಧಿಕಾರವೇ ಅಧಿಕವಾಗುತ್ತ ಬಂದಿತು. ಪ್ರಧಾನ ಮಂತ್ರಿ ಮುಂದಿಟ್ಟ ಕಾಗದಕ್ಕೆ ರುಜು ಹಾಕುವುದು ಮಾತ್ರ ವಿಕ್ಟೋರಿಯಾ ರಾಣಿಯ ಕೆಲಸವಾಯಿತು. ಆಕೆ ಸ್ವತಂತ್ರವಾಗಿ ಪ್ರವರ್ತಿಸುವ ಹಾಗಿರಲಿಲ್ಲ. ಆಕೆಯೂ ೬೪ ವರ್ಷ ರಾಜ್ಯ ಭಾರ ಮಾಡಿ ತನ್ನ ಅಧಿಕಾರವನ್ನು ಕ್ರಮಕ್ರಮವಾಗಿ ಕಳೆದುಕೊಂಡು, ೧೯೦೧ ನೇ ಜನವರಿಯಲ್ಲಿ ಮೃತರಾದರು. ಅವರ ಮರಣದಿಂದ ಒಂದು ಯುಗವೇ ಅಸ್ತವಾದಂತಾಯಿತು.

ಹೊಸ ವಿಜ್ಞಾನ ಯುಗ ಬಹಳ ಕಾಂತಿಯಿಂದ ಪ್ರಾರಂಭವಾಯಿತು. ಇಂಡಿಯಾದಲ್ಲಂತೂ ಹಳೇ ಭಾವನೆಗಳು ಮಾಯವಾಗಿ, ಆಶಾದಾಯಕವಾದ ಹೊಸ ಭಾವನೆಗಳು ಜನಸಾಮಾನ್ಯರಲ್ಲಿ ಮೂಡಿದುವು.

ಇಂಡಿಯಾದ ರಾಜಕೀಯ ಸ್ಥಿತಿಯಲ್ಲಿ ಬಹಳ ಬದಲಾವಣೆಗಳು ಕಂಡು ಬಂದವು. ಮಹಾರಾಷ್ಟ್ರ, ಬೊಂಬಾಯಿ, ಬಂಗಾಳ, ಮದ್ರಾಸ‌ ಪ್ರದೇಶಗಳಲ್ಲಿ ಸ್ವರಾಜ್ಯದ ಭಾವನೆಗಳು ಅಂಕುರಿಸಿದವು. ಪೂನಾದಲ್ಲಿ ರಾನಡೆ ಗೋಖಲೆ ತಿಲಕರೂ, ಬೊಂಬಾಯಿನಲ್ಲಿ ದಾದಾಭಾಯಿ ನವರೋಜಿ ಫಿರೋಜ್‌ ಷಾ ಮೆಹ್ತಾ ಮುಂತಾದವರೂ, ಬಂಗಾಳದಲ್ಲಿ ಮೋತಿಲಾಲ್‌ ಘೋಷ್‌, ಸುರೇಂದ್ರನಾಥ ಬ್ಯಾನರ್ಜಿ, ಬೆರ್ಪಿ ಚಂದ್ರ ಪಾಲ್‌ ಮುಂತಾದವರೂ, ಪಂಜಾಬಿನಲ್ಲಿ ಲಾಲಾ ಲಜಪತ ರಾಯರೂ, ಮದ್ರಾಸಿನಲ್ಲಿ ಜಿ. ಸುಬ್ರಹ್ಮಣ್ಯ ಅಯ್ಯರ್ ಆನಂದಾಚಾರ್ಲು ಮುಂತಾದವರೂ ಮುಖಂಡರಾಗಿ ಭಾರತವನ್ನು ಎಚ್ಚರಿಸುವ ಕಾರ್ಯದಲ್ಲಿ ತೊಡಗಿದ್ದರು.

ವೆಂಕಟಕೃಷ್ಣಯ್ಯನವರು ಈ ದೇಶಭಕ್ತರ ಗುಂಪಿಗೇ ಸೇರಿದವರು. ಸಿ.ಆರ್. ರೆಡ್ಡಿಯವರು ಹೇಳಿರುವಂತೆ, ವೆಂಕಟಕೃಷ್ಣಯ್ಯನವರು ಸಣ್ಣ ಕ್ಷೇತ್ರವೂ ದೇಶೀಯ ಸಂಸ್ಥಾನವೂ ಆದ ಮೈಸೂರಿನಲ್ಲಿ ಹುಟ್ಟಿ ಕೆಲಸ ಮಾಡದೆ, ಬ್ರಿಟಿಷ್‌ ಇಂಡಿಯಾದಲ್ಲಿ ಇದ್ದಿದ್ದರೆ ಲೋಕಮಾನ್ಯ ತಿಲಕರಿಗೆ ಸರಿಸಮವಾಗಿ ರಾಜಕೀಯ ಔನ್ನತ್ಯವನ್ನು ಪಡೆಯು೭ತ್ತಿದ್ದರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ದೊಡ್ಡ ಪ್ರಾಣಿಯಾದ ಆನೆಯಾದರೂ, ಚಿಕ್ಕ ಕನ್ನಡಿಯಲ್ಲಿ ಚಿಕ್ಕದಾಗಿಯೇ ಕಾಣುತ್ತದೆ. ಆದರೆ ಆನೆ ಆನೆಯೇ.