ದಯಾಸಾಗರ ವೃದ್ಧಪಿತಾಮಹ ಎಂ. ವೆಂಕಟಕೃಷ್ಣಯ್ಯನವರ ಸಾರ್ವಜನಿಕ ಜೀವನ ಮಹಾಜೀವನ. ಅವರು ಜೀವಿಸಿದ್ದು ಸುಮಾರು ೯೦ ವರ್ಷ; ಹತ್ತಿರ ಹತ್ತಿರ ಒಂದು ಶತಮಾನವೇ ಅವರ ಪಾದದ ಅಡಿಯಲ್ಲಿ ಹರಿದುಹೋಗಿದೆ. ಮೈಸೂರಿನ ಒಂದು ಶತಮಾನದ ಸಾರ್ವಜನಿಕ ಜೀವನದಲ್ಲಿ ಅವರ ದೊಡ್ಡ ಪಾಲಿದೆ. ಅವರು ಜೀವಿಸಿದಷ್ಟು ಕಾಲವೂ ಮೈಸೂರು ನಗರದಲ್ಲಿಯೇ ಇದ್ದ ಕಾರಣ ಆ ನಗರದ ಆ ಕಾಲದ ವಾತಾವರಣ ಅವರ ಪ್ರಭಾವದಿಂದ ತುಂಬಿತ್ತು.

ಅವರ ಜೀವಿಸಿದ್ದು ೧೮೪೪ರಿಂದ ೧೯೩೩ರವರೆಗೆ. ಅವರು ದಿವಂಗತರಾದ ೧೪ ವರ್ಷದ ಮೇಲೆ, ೧೯೪೭ರಲ್ಲಿ, ನಮಗೆ ಸ್ವಾತಂತ್ರ್ಯ ಬಂದಿತು; ಹಾಗೂ ಮೈಸೂರು ಸಂಸ್ಥಾನಕ್ಕೆ ಪ್ರಜಾರಾಜ್ಯ ಲಭಿಸಿತು. ಈ ಎರಡು ಮಹಾ ಉದ್ದೇಶಗಳಿಗಾಗಿ ಅವರು ತಮ್ಮ ಜೀವವನ್ನು ಸವೆಸಿದರು.

ತಾತಯ್ಯನವರದು ವೀರಜೀವನ. ೧೯ನೇ ಶತಮಾನದ ಮಧ್ಯ ಭಾಗದಿಂದ ೨೦ನೇ ಶತಮಾನದ ಅರ್ಧದವರೆಗೆ ನಮ್ಮ ದೇಶ ವೀರಜೀವನದಿಂದ ತುಂಬಿತ್ತು. ದಾದಾಬಾಯಿ ನವರೋಜಿ, ಬಾಲ ಗಂಗಾಧರ ತಿಲಕ್‌, ಮದನ ಮೋಹನ ಮಾಲವೀಯ, ಲಾಲಾ ಲಜಪತರಾಯ್‌, ಗೋಪಾಲ ಕೃಷ್ಣ ಗೋಖಲೆ, ಮಹಾತ್ಮಾ ಗಾಂಧೀ, ಜವಹರಲಾಲ್‌ ನೆಹರು, ಸುಭಾಷ್‌ ಚಂದ್ರ ಬೋಸ್‌ ಮುಂತಾದ ರಾಷ್ಟ್ರವೀರರು ನಮ್ಮ ದೇಶವನ್ನು ಸ್ವತಂತ್ರಗೊಳಿಸಲು ತ್ಯಾಗಜೀವನವನ್ನು ನಡೆಸಿದುದೇ ಅಲ್ಲದೆ, ಅನೇಕ ಸಾಹಸಕಾರ್ಯಗಳನ್ನು ಮಾಡಿದರು. ಅವರ ಕಾರ್ಯಕ್ಷೇತ್ರ ವಿಶಾಲ ಭಾರತ. ವೆಂಕಟಕೃಷ್ಣಯ್ಯನವರೂ ಅದೇ ವೀರರ ಪಂಗ್ತಿಗೆ ಸೇರಿದವರು; ಆದರೆ, ಇವರ ಕಾರ್ಯಕ್ಷೇತ್ರ ಸಣ್ಣ ಮೈಸೂರು ಸಂಸ್ಥಾನ. ಆದರೂ ಇವರು ದೇಶಭಕ್ತಿ, ಕಾರ್ಯಸಾಮರ್ಥ್ಯ, ಜನ ನಾಯಕತ್ವ, ತ್ಯಾಗ ಬುದ್ಧಿ ಮುಂತಾದ ಗುಣಗಳಲ್ಲಿ ಆ ಮಹಾವೀರರಿಗಿಂತ ಲೇಶವೂ ಕಡಿಮೆ ಇರಲಿಲ್ಲ.

ವೆಂಕಟಕೃಷ್ಣಯ್ಯನವರು ಸಾರ್ವಜನಿಕ ಜೀವನವನ್ನು ಆರಂಭಿಸಿದ ೧೮೮೧ನೇ ಇಸವಿಯಿಂದ ಅವರು ಕಾಲವಾದ ೧೯೩೩ನೇ ಇಸವಿಯವರೆಗೆ ಮೈಸೂರು ದೇಶದಲ್ಲಿಯೂ, ಇಂಡಿಯಾ ದೇಶದಲ್ಲಿಯೂ, ಅಖಿಲ ಪ್ರಪಂಚದಲ್ಲಿಯೂ ಬಹಳ ಬದಲಾವಣೆಗಳಾದುವು. ಜನಜೀವನದಲ್ಲಿಯೂ, ವ್ಯಾಪಾರ ವಹಿವಾಟುಗಳಲ್ಲಿಯೂ, ಸಾಮಾಜಿಕ ಸಂಪ್ರದಾಯಗಳಲ್ಲಿಯೂ, ರಾಜಕೀಯ ಕ್ಷೇತ್ರದಲ್ಲಿಯೂ ಆಗಿರುವ ಪರಿವರ್ತನೆ ಊಹಿಸಲೂ ಅಸಾಧ್ಯ. ವೆಂಕಟಕೃಷ್ಣಯ್ಯನವರೇ ತಮ್ಮ ಕಣ್ಣೆದುರಿಗೆ ಆಗುತ್ತಿದ್ದ ಬದಲಾವಣೆಗಳನ್ನು ಕುರಿತು ಅನೇಕ ಸಾರಿ ಪ್ರಸ್ತಾಪಿಸಿದ್ದಾರೆ. ಪ್ರಪಂಚದ ರಾಜಕೀಯ ಭೂಪಟವೇ ಬಹಳ ಸಾರಿ ವ್ಯತ್ಯಾಸ ಹೊಂದಿದೆ. ಯೂರೋಪಿನಲ್ಲಿಯೇ ಇಂಗ್ಲೆಂಡ್‌ ಒಂದು ಬಿಟ್ಟು ರಾಜರು ಮತ್ತು ಚಕ್ರವರ್ತಿಗಳು ಇತಿಹಾಸದಿಂದ ಮಾಯವಾಗಿದ್ದಾರೆ. ರಾಜ್ಯಗಳ ಮೇರೆಗಳು ಬದಲಾವಣೆ ಹೊಂದಿವೆ. ವೆಂಕಟಕೃಷ್ಣಯ್ಯನವರು ಗಾಂಧೀಜಿ ಬ್ರಿಟಿಷ್‌ ಸಾಮ್ರಾಜ್ಯದ ಬುಡವನ್ನು ಅಲ್ಲಾಡಿಸಿದ್ದನ್ನು ಸ್ವತಃ ಕಂಡರು. ೧೯೧೪ರಿಂದ ೧೯೧೮ರವರೆವಿಗೆ ನಡೆದ ಮೊದಲನೇ ಘೋರ ಯುದ್ಧದ ಪರಿಣಾಮಗಳನ್ನು ಅವರು ಸ್ವತಃ ಅನುಭವಿಸಿದ್ದರು. ಇಂಡಿಯಾದಲ್ಲಿ ಸ್ವರಾಜ್ಯ ಸ್ಥಾಪನೆಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂಬ ದೃಢ ಭಾವ ಅವರ ಮನಸ್ಸಿನಲ್ಲಿತ್ತು. ಇಂಡಿಯಾದಲ್ಲಿ ಇದ್ದ ಸುಮಾರು ೭೦೦ ಸಂಸ್ಥಾನಗಳ ಪ್ರಜೆಗಳಲ್ಲಿಯೂ ಹೊಸ ಚೇತನವುಂಟಾಗಿ ಜವಾಬ್ದಾರಿ ಸರ್ಕಾರದ ಕೂಗು ಎಲ್ಲೆಲ್ಲೂ ವ್ಯಾಪಿಸಿದ್ದನ್ನು ಅವರು ಕೇಳಿದ್ದರು. ಸಂಸ್ಥಾನಗಳ ಒಳಗೂ ಪ್ರಜಾರಾಜ್ಯದ ಸ್ಥಾಪನೆ ಬಹುದೂರದಲ್ಲಿಲ್ಲ ಎಂದು ಅವರು ತಿಳಿದಿದ್ದರು.

ವಿಜ್ಞಾನದ ನಾಗಾಲೋಟದ ಪ್ರಗತಿ ನಮ್ಮ ನಿತ್ಯ ಜೀವನದಲ್ಲಿಯೇ ಬದಲಾವಣೆ ಮಾಡುತ್ತಿದ್ದುದನ್ನು ಅವರು ನೋಡಿದ್ದರು.

ಬ್ರಿಟಿಷ್‌ ಇಂಡಿಯಾದಲ್ಲಿ ರಾಜಕೀಯ ಸುಧಾರಣೆಗಳ ವೇಗ ಹೆಚ್ಚಿ, ಪ್ರಜೆಗಳಿಗೆ ಜವಾಬ್ದಾರರಾದ ಮಂತ್ರಿಗಳು ಅಧಿಕಾರ ಪೀಠದಲ್ಲಿ ಕುಳಿತಿದ್ದುದನ್ನು ಅವರು ಕಂಡರು. ಮೈಸೂರಿನಲ್ಲಿಯೂ ಪ್ರಜೆಗಳಿಂದ ಚುನಾಯಿಸಲ್ಪಟ್ಟ ಮಂತ್ರಿಗಳು ಮಂತ್ರಿ ಸ್ಥಾನಕ್ಕೆ ಬರಬೇಕೆಂದು ಅವರು ಹಾತೊರೆಯುತ್ತಿದ್ದರು. ಅವರು ಜೀವಿಸಿದ್ದಾಗ ಆ ಸ್ಥಿತಿ ಬರಲಿಲ್ಲ.

ಯುವಕರ ಮತ್ತು ವಿದ್ಯಾರ್ಥಿಗಳ ವಿಷಯದಲ್ಲಿ ಅವರು ಬಹಳ ಸಹಾನುಭೂತಿ ಹೊಂದಿದ್ದರು. ಅವರಿಗೆ ಧಾರಾಳವಾಗಿ ಪ್ರೋತ್ಸಾಹ ನೀಡುತ್ತಿದ್ದರು.

ವೆಂಕಟಕೃಷ್ಣಯ್ಯನವರ ಕಾಲದಲ್ಲಿ ಮೈಸೂರಿನ ಜನಜೀವನ ಕೆಲವು ಮಿತಿಗಳಲಿಂದ ಕೂಡಿತ್ತು. ಬಾಲ್ಯದಲ್ಲಿ ಮೈಸೂರು ಬ್ರಿಟಿಷ್‌ ಕಮಿಷನ್ನಿನ ವಶವಾಗಿತ್ತು. ಮಹಾರಾಜರು ಯಾವ ಅಧಿಕಾರವೂ ಇಲ್ಲದೆ ಅರಮನೆಯಲ್ಲಿ ಕುಳಿತಿದ್ದರು. ಕಷ್ಟಪಟ್ಟು ರಾಜ್ಯಾಧಿಕಾರ ತಮ್ಮ ದತ್ತು ಪುತ್ರನಿಗೆ ದೊರೆಯುವಂತೆ ಮಾಡಿಕೊಂಡರು. ರೆಂಡಿಷನ್ ಆದ ಮೇಲೆ ಕೂಡ ಬ್ರಿಟಿಷ್‌ ಸರ್ಕಾರದ ಹೆದರಿಕೆ ಮಹಾರಾಜರಿಗೆ ಇದ್ದೇ ಇದ್ದಿತು. ಮೈಸೂರಿನಲ್ಲಿ ಬ್ರಿಟಿಷರ ವಿರುದ್ಧ ಯಾವ ಚಳುವಳಿಯೂ ನಡೆಯದಂತೆ ಬ್ರಿಟಿಷ್‌ ರೆಸಿಡೆಂಟರು ಕಾವಲು ಇರುತ್ತಿದ್ದರು. ಆದುದರಿಂದ ಮಹಾರಾಜರು ಸರ್ಕಾರವನ್ನು ನಡೆಸುವಾಗ  ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ ಇದ್ದರು. ಮೈಸೂರು ರಾಜ್ಯ ಬ್ರಿಟಿಷರಿಗೆ ಅಧೀನವಾಗಿದ್ದರೂ, ನೇರವಾದ ಅಧೀನತೆ ಇರಲಿಲ್ಲ; ಮಹಾರಾಜರ ಮೂಲಕ ಅಧೀನತೆ. ಈ ಮಿತಿಯನ್ನು ತಿಳಿದುಕೊಂಡು ವೆಂಕಟಕೃಷ್ಣಯ್ಯನವರು ತಮ್ಮ ರಾಜಕೀಯ ಹೋರಾಟಗಳನ್ನು ನಡೆಸಿದರು. ಆದುದರಿಂದಲೇ ಅವರು ದಿವಾನರಾದಿಯಾಗಿ ಎಲ್ಲಾ ಅಧಿಕಾರಿಗಳೂ ಪ್ರಜೆಗಳ ಸಹಜವಾದ ಮತ್ತು ನ್ಯಾಯವಾದ ಹಕ್ಕುಗಳನ್ನು ಗೌರವಿಸಿ ಅವರ ಮೇಲೆ ದಬ್ಬಾಳಿಕೆ ನಡೆಸದೆ ಸಾಂಕುಶರಾಗಿ ಅಧಿಕಾರ ನಡೆಸಬೇಕೆಂದು ಚಳುವಳಿ ನಡೆಸಿದರು. ಮೈಸೂರಿನ ರಾಜಕೀಯ ಹೋರಾಟವನ್ನು, ಮಹಾರಾಜರನ್ನು ಮುಟ್ಟದೆ, ನಡೆಸಿದರು. ಬ್ರಿಟಿಷ್‌ ಇಂಡಿಯಾದಲ್ಲಾದರೋ ಈ ಮಿತಿ ಇರಲಿಲ್ಲ. ಅಲ್ಲಿ ಬ್ರಿಟಿಷ್‌ರೊಡನೆ ನೇರವಾದ ಹೋರಾಟ ನಡೆಯಿತು. ಮೈಸೂರಿನ ಹಾಗೆ ದ್ರಾವಿಡ ಪ್ರಾಣಾಯಾಮವಲ್ಲ. ಈ ಅಂಶವನ್ನು ತಿಳಿದುಕೊಂಡರೆ ಮೈಸೂರಿನ ರಾಜಕ ಈಯ ಹೋರಾಟದ ಸೂಕ್ಷ್ಮ ಅರ್ಥವಾಗುತ್ತದೆ. ೧೯೪೭ರವರೆಗೂ ಈ ಸ್ಥಿತಿಯೇ ಇತ್ತು. ಕಡೆಯ ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್ ಮೌಂಟ್‌ ಬೇಟನ್‌ “ಸಾಮ್ರಾಜ್ಯ ಸರ್ಕಾರವೆಂಬುದು ಇನ್ನಿಲ್ಲ; ದೇಶೀಯ ರಾಜರಿಗೆ ಬ್ರಿಟಿಷ್‌ ಸೈನ್ಯದ ರಕ್ಷಣೆ ಇನ್ನಿಲ್ಲ.  ಆದುದರಿಂದ ಅವರು ಮುಂದೆ ಬರುವ ಇಂಡಿಯಾ ಸರ್ಕಾರದ ಒಡನೆಯಾಗಲೀ, ಪಾಕಿಸ್ಥಾನ ಸರ್ಕಾರದ ಒಡನೆಯಾಗಲೀ ಒಪ್ಪಂದ ಮಾಡಿಕೊಳ್ಳಬೇಕು” ಎಂದು ತಿಳಿಸಿದಾಗ, ದೇಶೀಯ ರಾಜರ ಜಂಘಾಬಲವೇ ಬಿಟ್ಟುಹೋಯಿತು. ಅವರಿಗೆ ಆಕಾಶವೂ ಇಲ್ಲವಾಯಿತು, ಭೂಮಿಯೂ ಇಲ್ಲವಾಯಿತು, ತ್ರತಿಶಂಕುವಿನಂತಾದರು. ಈ ಸ್ಥಿತಿಯಲ್ಲಿ ಸರದಾರ್ ಪಟೇಲರು ಮಧ್ಯ ಮಾರ್ಗ ಸೂಚಿಸಿ, ಅವರಿಗೆ ನೆರವಾದರು. ಈ ಸ್ಥಿತಿಯನ್ನು ನೋಡಲು ವೆಂಕಟಕೃಷ್ಣಯ್ಯನವರು ಬದುಕಿರಲಿಲ್ಲ. ಈಗಿನ ಇಂಡಿಯಾವನ್ನು ಹಾಗೂ ಮೈಸೂರನ್ನು ವೆಂಕಟಕೃಷ್ಣಯ್ಯನವರೇ ಬಂದು ನೋಡಿದರೆ ಅವರ ವಿಸ್ಮಯಕ್ಕೆ ಮಿತಿಯೇ ಇಲ್ಲದಂತಾಗುವುದು.

ವೆಂಕಟಕೃಷ್ಣಯ್ಯನವರಂತಹ ಮಹಾಪುರುಷರ ವೈವಿಧ್ಯಪೂರ್ಣ ಜೀವನ ಚರಿತ್ರೆಯನ್ನು ಸಮಗ್ರವಾಗಿ ತಿಳಿಸುವುದು ಸಾಹಸದ ಕಾರ್ಯ; ನಾನು ಸಂಗ್ರಹವಾಗಿ ತಿಳಿಸಲು ಮಾತ್ರ ಪ್ರಯತ್ನಿಸಿದ್ದೇನೆ.  ಇದರಲ್ಲಿ ಮೈಸೂರು ದೇಶದ ಸುಮಾರು ಒಂದು ಶತಮಾನದ ಚರಿತ್ರೆಯ ಪರಿಚಯವಿದೆ. ಗುರುಸಮಾನರಾದ ಡಾ.ಡಿ.ವಿ. ಗುಂಡಪ್ಪನವರೂ, ಮಿತ್ರರಾದ ಶ್ರೀ ಎಂ.ಪಿ. ಸೋಮಶೇಖರರಾಯರೂ ತಾತಯ್ಯನವರ ವಿಷಯವಾಗಿ ಹೇಳಿದ ಎಷ್ಟೋ ವಿಷಯಗಳನ್ನು ನಾನು ಗ್ರಹಿಸಿದ್ದೇನೆ. ಶ್ರೀ ಸೋಮಶೇಖರರಾಯರು ತಾತಯ್ಯನವರ ಕುಟುಂಬಕ್ಕೆ ಸಂಬಂಧಪಟ್ಟ ಅನೇಕ ಅಂಶಗಳನ್ನು ತಿಳಿಸಿದರು. ಸ್ಟ್ಯಾಂಡಿಂಗ್‌ ಕಮಿಟಿ ವಿಷಯವಾಗಿ ಆ ಕಾಲದಲ್ಲಿ ಮುದ್ರಿತವಾಗಿದ್ದ ಒಂದು ವರದಿಯನ್ನು ನನಗೆ ವಿಷಯಗಳನ್ನು ಸಂಗ್ರಹಿಸಲು ಕೊಟ್ಟಿದ್ದರು. ವೆಂಕಟಕೃಷ್ಣಯ್ಯನವರು ತಮ್ಮ ಅಳಿಯ ಮೃತಿಹೊಂದಿದ ಕಾಲದಲ್ಲಿ ಶ್ರೀ ಸೋಮಶೇಖರರಾಯರ ತಂದೆ ಶ್ರೀ ಎಂ.ಎಸ್‌. ಪುಟ್ಟಣ್ಣನವರಿಗೆ ಬರೆದ ಕೈಬರಹದ ಕಾಗದವನ್ನೂ ಕೊಟ್ಟರು. ಅದನ್ನು ಈ ಗ್ರಂಥದಲ್ಲಿ ಮುದ್ರಿಸಿದೆ. ಮೈಸೂರು ಪ್ರಜಾಪ್ರತಿನಿಧಿ ಸಭೆಯ ಮತ್ತು ನ್ಯಾಯವಿಧಾಯಕ ಸಭೆಯ ಕೆಲವು ವರದಿಗಳನ್ನು ಪರಿಶೀಲಿಸಿದ್ದೇನೆ. ೧೮೮೧ರಿಂದ ದಿವಾನ್‌ ಸರ್ ಮಿರ್ಜಾ ಇಸ್ಮಾಯಿಲರ ಕಾಲದವರೆಗೂ ಪ್ರಕಟವಾಗಿರುವ ದಿವಾನರ ಭಾಷಣಗಳನ್ನು ತಿರುವಿ ಹಾಕಿದ್ದೇನೆ. ನಾನಾಗಿಯೇ ನೋಡಿ ತಿಳಿದ ಅನೇಕ ವಿಷಯಗಳೂ ಇವೆ. ಅವನ್ನೆಲ್ಲಾ ಉಪಯೋಗಿಸಿಕೊಂಡು ಈ ಗ್ರಂಥವನ್ನು ಬರೆದಿದ್ದೇನೆ. ಗ್ರಂಥದಲ್ಲಿ ದೋಷಗಳೇನಾದರೂ ಕಂಡುಬಂದರೆ, ಉದಾರ ಹೃದಯರಾದ ವಾಚಕರು ಕ್ಷಮಿಸುವರೆಂದು ನಂಬುತ್ತೇನೆ.

ನನ್ನ ಈ ಕಾರ್ಯದಲ್ಲಿ ಸ್ನೇಹಿತರನೇಕರು ಸಲಹೆಗಳನ್ನು ಕೊಟ್ಟು ನೆರವಾದರು; ನನ್ನ ತಂಗಿಯ ಮೊಮ್ಮಗಳು ಕುಮಾರಿ ಗಾಯಿತ್ರಿ ಬಹಳ ಸಹಾಯ ಮಾಡಿದಳು. ತಾತಯ್ಯ ಪ್ರತಿಮೆ ಸಮಿತಿಯವರೂ ಸಹಾಯ ಮಾಡಿದರು. ಅವರೆಲ್ಲರಿಗೂ ನಾನು ಋಣಿ. ಮುದ್ರಕರಿಗೂ ಪ್ರಕಾಶಕರಿಗೂ ನನ್ನ ಕೃತಜ್ಞತೆಗಳು.

ಈ ಗ್ರಂಥವನ್ನು ಕನ್ನಡಿಗರ ಅಡಿದಾವರೆಯಲ್ಲಿ ಸಮರ್ಪಿಸಿದ್ದೇನೆ, ಅವರ ಆಶೀರ್ವಾದಗಳಿಗಾಗಿ.

ಪಿ.ಆರ್. ರಾಮಯ್ಯ
ಬೆಂಗಳೂರು
ಏಪ್ರಿಲ್‌ ೧, ೧೯೬೯