ಕರ್ನಾಟಕದಲ್ಲಿ ಹೊಲೆಮಾದಿಗರ ಕನ್ನಡದ ರಚನೆ ಕುರಿತು ಮಾಡಿರುವ ಸಂಶೋಧನೆಗಳು

ದಲಿತರು, ಭಾಷೆ ಮತ್ತು ಸಮಾಜ ಎಂಬ ವಿಷಯ ಕೇಳಿದ ತಕ್ಷಣ ಕೆಲವರು ಗಾಬರಿಯಾದರು. ಕಾರಣವಿಷ್ಟೆ ದಲಿತರಿಗೆ ಪ್ರತ್ಯೇಕವಾದ ಭಾಷೆಯೆಂಬುದು ಇದೆಯೇ. ದಲಿತರು ಎಂದರೆ ಯಾರು? ಎಂಬ ಪ್ರಶ್ನೆಗಳು ಸಭೆಯಿಂದ ಹೊರಬಂದವು. ಮುಂದುವರಿದು ಗ್ರಾಮೀಣ ಭಾಷೆಗೂ ಮತ್ತು ದಲಿತರಾಡುವ ಭಾಷೆಗೂ ವ್ಯತ್ಯಾಸವಿಲ್ಲ ಎಂಬ ಅಭಿಪ್ರಾಯ ಬಂತು. ಗ್ರಾಮೀಣ ಪ್ರದೇಶದಲ್ಲಿ ಕೇವಲ ದಲಿತರೇ ವಾಸಿಸುವುದಿಲ್ಲ ತಾನೇ? ಗ್ರಾಮೀಣ ಪ್ರದೇಶದಲ್ಲಿ ಹಲವಾರು ಸಾಮಾಜಿಕ ವರ್ಗಗಳು ಇವೆ. ದಲಿತರು ಎಂದರೆ ಇಲ್ಲಿ ಹೊಲೆಯರು ಮತ್ತು ಮಾದಿಗರನ್ನು ಮಾತ್ರ ಪರಿಗಣಿಸಿದೆ. ಕರ್ನಾಟಕದಲ್ಲಿ ಪ್ರಾದೇಶಿಕವಾಗಿ ಹೊಲೆಮಾದಿಗರು ಆಡುವ ಕನ್ನಡ ಇತರ ಸಾಮಾಜಿಕ ವರ್ಗಗಳು ಆಡುವ ಕನ್ನಡಕ್ಕಿಂತ ಭಿನ್ನವಾಗಿದೆ. ಪ್ರಾದೇಶಿಕವಾಗಿ ಕರ್ನಾಟಕದಲ್ಲಿ ಇವರಾಡುವ ಕನ್ನಡದ ಲಕ್ಷಣ ಸಾಮಾನ್ಯವಾಗಿ ಪ್ರಾದೇಶಿಕವಾಗಿ ಸ್ಥಿರಗೊಂಡಿದೆ. ಕರ್ನಾಟಕದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಹೊಲೆಮಾದಿಗರ ಕನ್ನಡದ ರಚನೆಯನ್ನು ಕುರಿತು ಸಂಶೋಧನೆಗಳು ಜರುಗಿವೆ. ಅದರಲ್ಲೂ ಗ್ರಾಮೀಣ ಪ್ರದೇಶದ ಅಶಿಕ್ಷಿತ ಹೊಲೆಮಾದಿಗರ ಕನ್ನಡದ ರಚನೆ ಕುರಿತು ವಿಶ್ಲೇಷಣೆ ಮಾಡಲಾಗಿದೆ. ಲಭ್ಯವಾದ ಮಾಹಿತಿಯನ್ನು ಆಧರಿಸಿ ಇಲ್ಲಿ ದಾಖಲಿಸಲಾಗಿದೆ.

ಧಾರವಾಡ ಜಿಲ್ಲೆಯ ಬ್ರಾಹ್ಮಣ, ಲಿಂಗಾಯತ ಮತ್ತು ಹರಿಜನರ ಕನ್ನಡದ ರಚನೆಯನ್ನು ಸಾಮಾಜಿಕ ಭಾಷಾಶಾಸ್ತ್ರದ ರೀತ್ಯಾ ಮ್ಯಾಕ್ರೂ ಮ್ಯಾಕ್ ಅವರು ಮಾಡಿರುವ ಸಂಶೋಧನೆ ಮಹತ್ತರವಾದದು. ಬಿ.ನಂ.ಚಂದ್ರಯ್ಯನವರು “A descriptive grammar of Harijan dialect’ (1987) ಪ್ರಬಂಧದಲ್ಲಿ ಭಾಷಿಕ ಸಾಮಗ್ರಿಗಾಗಿ ಮೈಸೂರು ನಗರದಲ್ಲಿ ಕುಕ್ಕರಹಳ್ಳಿ, ಕುಂಬಾರಕೊಪ್ಪಲು, ಮೇಟಗಳ್ಳಿ ಬೋಗಾದಿ, ಅಶೋಕಪುರಂ ಮತ್ತು ಪಡುವಾರಹಳ್ಳಿ ಮುಂತಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಏರಿಯಾದಲ್ಲರುವ ಹರಿಜನರ ಆರ್ಥಿಕ ಸ್ಥಿತಿಯನ್ನು ಗಮನಿಸಿ ವಿವಿಧ ಭಾಷಿಕ ಹಂತಗಳಲ್ಲಿ ಅವರ ಕನ್ನಡದ ರಚನೆಯನ್ನು ವಿಶ್ಲೇಷಣೆ ಮಾಡಿದ್ದಾರೆ. ಕೆ.ಮುಥಾಲಿಕ್ ಅವರು “ಬಾಗಲಕೋಟೆ ಕನ್ನಡ: ಸಾಮಾಜಿಕ ಭಾಷಾವಿಜ್ಞಾನದ ವಿಶ್ಲೇಷಣೆ ಎಂಬ ಪಿಎಚ್.ಡಿ.ಮಹಾಪ್ರಬಂಧದಲ್ಲಿ ವಿವಿಧ ಸಾಮಾಜಿಕ ವರ್ಗಗಳಾದ ಬ್ರಾಹ್ಮಣ, ಬ್ರಾಹ್ಮಣೇತರ ಮತ್ತು ಹರಿಜನರ ಕನ್ನಡದ ರಚನೆಯನ್ನು ವಿವಿಧ ಸಾಮಾಜಿಕ ಭಿನ್ನಾಂಶಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಸೂಚಕರನ್ನು ಅವರ ಸಾಮಾಜಿಕ ಭಿನ್ನಾಂಶಗಳಾದ ಆರ್ಥಿಕಮಟ್ಟ, ವಯಸ್ಸು ಮತ್ತು ಲಿಂಗ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಿ ತೌಲನಿಕವಾಗಿ ಅಧ್ಯಯನ ಮಾಡಲಾಗಿದೆ. ಡಿ.ಎನ್.ಶಂಕರಭಟ್ ಅವರು “The dialects of Kannada in Mysore district’ ಲೇಖನದಲ್ಲಿ ಬ್ರಾಹ್ಮಣ, ಬ್ರಾಹ್ಮನೇತರ ಮತ್ತು ಹರಿಜನರ ಕನ್ನಡದ ರಚನೆಯನ್ನು ನಿದರ್ಶನ ಸಹಿತ ವಿವರಿಸಿದ್ದಾರೆ. ಕೆ.ವಿ.ನಾರಾಯಣ ಅವರು “ಮಾತಿನಲ್ಲಿ ಸಾಮಾಜಿಕತೆ” (ಮತ್ತೆ ಭಾಷೆಯ ಸುತ್ತಮುತ್ತ, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ) ಲೇಖನದಲ್ಲಿ ಸಾಮಾಜಿಕ ಸ್ವಭಾವವನ್ನು ಚಹರೆಯನ್ನು ಗುರುತಿಸುವ ಹಲವು ಸೂಚಕಗಳಲ್ಲಿ ಭಾಷೆಯು ಒಂದು ಎಂದು ಅಭಿಪ್ರಾಯಪಡುತ್ತಾರೆ. ಪ್ರತಿಯೊಂದು ಸಾಮಾಜಿಕ ವರ್ಗವು ಒಪ್ಪಿತ ಪದಕೋಶವೊಂದನ್ನು ಪಡೆದಿರುತ್ತದೆ. ಅದೇ ಆ ಸಾಮಾಜಿಕ ವರ್ಗದ ಚಹರೆಯಾಗುತ್ತದೆ ಎಂದಿದ್ದಾರೆ. ಇವರ ಚಿಂತನಾಕ್ರಮ ಹೆಚ್ಚು ಸಮಾಜ ಮುಖಿಯಿಂದ ಕೂಡಿರುವುದಾಗಿದೆ.

ಡಾ. ಸೋಮಶೇಖರಗೌಡ ಅವರು “ಕನ್ನಡ ಮೈಸೂರು ಸಿಟಿ : ಎ ಸರ್ವೆ” ಎಂಬ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. ಅದರಲ್ಲಿ ಮೈಸೂರು ನಗರದ ಮಂಡಿಮೊಹಲ್ಲ ಪಡುವರಹಳ್ಳಿ, ಕುಕ್ಕರಹಳ್ಳಿ ಮತ್ತು ಅಶೋಕಪುರಂನಲ್ಲಿ ಮಾತನಾಡುವ ಕನ್ನಡದ ರಚನೆಯನ್ನು ಸಾಮಾಜಿಕ ಭಾಷಾವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ಕುಕ್ಕರಹಳ್ಳಿ ಮತ್ತು ಅಶೋಕಪುರಂನಲ್ಲಿ ಮಾತನಾಡುವ ಹೊಲೆಯರ ಕನ್ನಡದ ರಚನೆಯನ್ನು ಇತರ ಏರಿಯಾಗಳ ಕನ್ನಡದ ರಚನೆಯೊಂದಿಗೆ ತೌಲನಿಕವಾಗಿ ನೋಡಿದ್ದಾರೆ.

ಬಿ.ಮಲ್ಲಿಕಾರ್ಜುನ (೧೯೯೦) ಅವರು ಮಂಡ್ಯ ‘ಮಂಡ್ಯ ಜಿಲ್ಲೆಯ ಆದಿಕರ್ನಾಟಕ ಕನ್ನಡ; ಒಂದು ವಿವರಣಾತ್ಮಕ ಅಧ್ಯಯನ’ ಪ್ರಬಂಧದಲ್ಲಿ ಮಂಡ್ಯ ಜಿಲ್ಲೆಯ ಆದಿಕರ್ನಾಟಕರ ಕನ್ನಡದ ರಚನೆಯನ್ನು ಪ್ರಮಾಣ ಕನ್ನಡದೊಂದಿಗೆ ಹೋಲಿಸಿ ಅಧ್ಯಯನ ಮಾಡಿದ್ದಾರೆ. ಮಾರುತಿ ತಳವಾರ. ಎಂ. (೧೯೯೫) ‘ಬೆಳಗಾವಿ ಜಿಲ್ಲೆಯ ಆದಿಕರ್ನಾಟಕ ಕನ್ನಡ : ಒಂದು ವಿವರಣಾತ್ಮಕ ಅಧ್ಯಯನ’, ಪ್ರಬಂಧದಲ್ಲಿ ಬೆಳಗಾವಿ ಜಿಲ್ಲೆಯ ಆದಿಕರ್ನಾಟಕ ಕನ್ನಡದ ರಚನೆಯನ್ನು ವಿವರಿಸಿದ್ದಾರೆ. ಪಾಂಡುರಂಗಬಾಬು ಅವರು (೧೯೯೫) ‘ಹುಣಸೂರು ತಾಲೂಕಿನ ಆದಿ ಜಾಂಬವ ಕನ್ನಡ : ಒಂದು ವಿವರಣಾತ್ಮಕ ಅಧ್ಯಯನ’ ಎಂಬ ಪ್ರಬಂಧದಲ್ಲಿ ಹುಣಸೂರಿನ ಸುತ್ತಮುತ್ತಲ ಪ್ರದೇಶದ ಆದಿಜಾಂಬವರು ಮಾತನಾಡುವ ಕನ್ನಡ ರಚನೆಯನ್ನು ವಿವರಿಸಿದ್ದಾರೆ. ವಿಶೇಷವಾಗಿ ಇವರು ಸಂಬೋಧನೆ ಮಾಡುವ ಸಂದರ್ಭದಲ್ಲಿ ಣೀ.ಮೀ.ಲೇ. ಎಂಬ ರೂಪಗಳು ವಿಶಿಷ್ಟವಾಗಿ ಬಳಕೆಯಾಗುವುದನ್ನು ವಿವರಿಸಿದ್ದಾರೆ.

೧. ಣೀ : ಇದೊಂದು ಸ್ತ್ರೀ ಸಂಬೋಧನಾ ರೂಪ. ಈ ರೂಪ ಹೊಲೆಯ ಈಡಿಗ, ಕುಂಬಾರ, ಹಜಾಮ, ತೊರೇರು, ನಾಯಕ, ಉಪ್ಪಾರ, ಅಗಸ ಮುಂತಾದ ವರ್ಗಗಳಲ್ಲಿ ಮಾತ್ರ ಬಳಕೆಯಲ್ಲಿದ್ದೆ ಎಂದಿದ್ದಾರೆ.

ಉದಾ : ಣೀ ವಸಿ ಯಸುರ್ಕೊಡು – ಸ್ವಲ್ಪ ಸಾರು ಕೊಡೆ

೨. ಮೀ : ಈ ಸ್ತ್ರೀ ಸಂಬೋಧನಾ ರೂಪವು ಹೆಚ್ಚಾಗಿ ಮಾದಿಗ ಜನಾಂಗದಲ್ಲಿ ಕಂಡು ಬರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಉದಾ : ಮೀನಿಂತ್ಕೊ : ಲೇ ನಿಂತುಕೋ

ಮೀ ಒಳಿಕ್ಕೋಗೋ : ಲೇ ಒಳಗಡೆ ಹೋಗು

೩. ಲೇ : ಇದೊಂದು ಸ್ತ್ರೀ ಸಂಬೋಧನಾ ರೂಪ. ಈ ಸಂಬೋಧನಾ ರೂಪವು ಮೇಲ್ಜಾತಿಯ ಜನವರ್ಗಗಳಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುತ್ತದೆ. ಎಂದಿದ್ದಾರೆ. ಇವರ ಮತ್ತೊಂದು ಲೇಖನವಾದ ‘ಭಾಷೆಯ ಸಾಮಾಜಿಕ ಚಹರೆಗಳು’ (ನುಡಿನೋಟ ೨೦೦೬ ಆಕಾಶ್ ಪ್ರಕಾಶನ ಹೊಸಪೇಟೆ) ಲೇಖನದಲ್ಲಿ ಪ್ರತಿಯೊಂದು ಸಾಮಾಜಿಕ ವರ್ಗಕ್ಕೂ ಆದರದೇ ಆದ ಭಾಷೆಯ ಚಹರೆ ಇರುತ್ತದೆ ಎಂಬುದನ್ನು ನಿದರ್ಶನ ಸಹಿತ ವಿವರಿಸಿ ಹೇಳಿದ್ದಾರೆ. Kelageri Harijan Kannada in Dharwad District ವಿಷಯ ಕುರಿತು ಗುರು ಎಸ್. ಕಾಳೆ ಅವರು ಎಂ.ಎ. Dessertationನ್ನು ೧೯೯೭ರಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ.

ಡಿ.ಎನ್. ಶಂಕರಭಟ್ ಅವರು ತಮ್ಮ “ಕನ್ನಡ ಕಲ್ಪಿತ ಚರಿತ್ರೆ” (ಕನ್ನಡ ವಿಶ್ವವಿದ್ಯಾಲಯ, ಹಂಪಿ) ಕೃತಿಯಲ್ಲಿ ಕರ್ನಾಟಕದ ಕೆಲವು ಪ್ರದೇಶದ ಹರಿಜನರ ಕನ್ನಡ ಧ್ವನಿರಚನೆಯನ್ನು ಕುರಿತು ವಿವರಿಸಿದ್ದಾರೆ. ಹರಿಜನರ ಕನ್ನಡ ಕೆಲವು ಪ್ರದೇಶಗಳಲ್ಲಿ ಮೂಲ ದ್ರಾವಿಡದ ಲಕ್ಷಣಗಳನ್ನು ಉಳಿಸಿಕಂಡಿದೆ. ಕೆಲವು ಪ್ರದೇಶಗಳಲ್ಲಿ ಬದಲಾವಣೆ ಹೊಂದಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಉಳಿಸಿಕೊಂಡಿರುವುದಕ್ಕೆ ಕಾರಣಗಳು ಇರುವ ಹಾಗೆ ಬದಲಾವಣೆ ಆಗಿರುವುದಕ್ಕೂ ಕಾರಣಗಳನ್ನು ವಿವರಿಸಿದ್ದಾರೆ, ಹರಿಜನರ ಕನ್ನಡ ಬರಹದ ಕನ್ನಡಕ್ಕಿಂತ ಹೇಗೆ ಬದಲಾವಣೆ ಆಗಿದೆ ಎಂಬುದನ್ನು ನಿದರ್ಶನ ಸಹಿತ ವಿವರಿಸಿದ್ದಾರೆ. ಕೆಲವು ಪ್ರದೇಶದ ಹರಿಜನರ ಕನ್ನಡದ ರಚನೆಯಲ್ಲಿರುವ ಬದಲಾವಣೆಯನ್ನು ಕುರಿತು ಹೆಚ್ಚಿನ ಸಂಶೋಧನೆಗೆ ಕರೆ ನೀಡಿದ್ದಾರೆ.

ಪದಾಂತ್ಯದಲ್ಲಿ ಬಳಕೆಯಾಗಿರುವ ‘ಎ’ ಕಾರವು ಕನ್ನಡದ ಹಲವಾರು ಆಧುನಿಕ ಪ್ರಭೇದಗಳಲ್ಲಿ ‘ಇ’ ಕಾರವಾಗಿರುವುದು ಕಂಡುಬರುತ್ತದೆ. ಮೈಸೂರು ಕನ್ನಡದಲ್ಲಿ ಕ್ರಿಯಾಪದಗಳಲ್ಲಿ ಮಾತ್ರ ‘ಇ’ ಕಾರವಾಗಿದೆ. (ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಪು.೬೭) ಮೈಸೂರು ಜಿಲ್ಲೆಯ ಪೂರ್ವ ವಿಭಾಗವಾದ ಕೊಳ್ಳೇಗಾಲ ಸುತ್ತಮುತ್ತಲ ಪ್ರದೇಶಗಳಲ್ಲಿ ನಾಮಪದ, ಕ್ರಿಯಾ ಪದಗಳೆರಡು ‘ಅ’ ಕಾರಾಂತವಾಗಿದೆ. ಇದು ಹೆಚ್ಚು ಹೊಲೆ ಮಾದಿಗರ ಕನ್ನಡದಲ್ಲಿ ಕಂಡು ಬರುತ್ತದೆ.

ಉದಾ : ಕ್ರಿಯಾಪದಗಳು

ಬರಹದ ಕನ್ನಡ                           ಚಾಮರಾಜನಗರದ ಹೊಲೆಮಾದಿಗರ ಕನ್ನಡ

ನಡೆ                                                    ನಡ

ಬರೆ                                                    ಬರ

ನಾಮಪದಗಳು

ಒಲೆ                                                   ವಲ

ಕಾಗೆ                                                   ಕಾಗ

ಅಡಿಕೆ                                                  ಅಡ್ಕ

ಈ ಬದಲಾವಣೆಯನ್ನು ಕುರಿತು ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ಡಿ.ಎನ್.ಶಂಕರಭಟ್ ಅವರು ಅಭಿಪ್ರಾಯಪಡುತ್ತಾರೆ. ಸಂಬೋಧನೆಯಲ್ಲಿ ಬರುವ ‘ಎ’ ಕಾರ ಚಾಮರಾಜನಗರದ ಹೊಲೆಮಾದಿಗರ ಕನ್ನಡದಲ್ಲಿ ಪದದ ಕೊನೆಯಲ್ಲಿ ಅಯ್ ಎಂಬುದಾಗಿ ಬಳಕೆಯಲ್ಲಿದೆ.

ಬರಹದ ಕನ್ನಡಚಾಮರಾಜನಗರದ ಹೊಲೆಮಾದಿಗರ ಕನ್ನಡ

ಓ ಅವ್ವ/ಓ ಹೆಣ್ಣೇ                               ವದೈ/ವದಯ್

ಬಾ ಅವ್ವ/ಬಾ ಹೆಣ್ಣೇ                            ಬದೈ/ಬದಯ್

ಈ ಮೇಲಿನ ನಿದರ್ಶನಗಳಿಂದ ತಿಳಿದುಬರುವ ಭಾಷಾಸಂಗತಿ ಎಂದರೆ ಚಾಮರಾಜನಗರ ಸುತ್ತಮುತ್ತಲ ಪ್ರದೇಶದಲ್ಲಿರುವ ಹೊಲೆಮಾದಿಗರ ಕನ್ನಡದ ಸಂಬೋಧನೆಯಲ್ಲಿ ಮೂಲ ದ್ರಾವಿಡ ರೂಪವನ್ನೇ ಉಳಿಸಿಕೊಂಡು ಬಂದಿದೆ ಎಂದು ವಾದಿಸಲು ಸಾಧ್ಯವಿದೆ.

ನಂಜನಗೂಡಿನ ಹರಿಜನರ ಮಾತಿನಲ್ಲಿ ನಾಮಪದಗಳ ಕೊನೆಯಲ್ಲಿ ಬರುವ ‘ಎ’ ಕಾರವು ‘ಅ’ ಕಾರವಾಗಿದೆ. (ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಪು. ೬೮)

ಬರಹದ ಕನ್ನಡ                           ನಂಜನಗೂಡಿನ ಹರಿಜನರ ಕನ್ನಡ

ಮನೆ                                                   ಮನ

ಗೋಡೆ                                                ಗ್ವಾಡ

ತಲೆ                                                    ತಲ

ಈ ಲಕ್ಷಣ ಚಾಮರಾಜನಗರದ ಹೊಲೆಮಾದಿಗರ ಕನ್ನಡದಲ್ಲಿ ಬಳಕೆಯಲ್ಲಿರುವುದನ್ನು ಹಿಂದೆ ಗಮನಿಸಿದ್ದೇವೆ.

‘ಹ’ ಕಾರ ಚಾಮರಾಜನಗರದ ಹೊಲೆಮಾದಿಗರ ಕನ್ನಡದ ಮಾತಿನಲ್ಲಿ ನಷ್ಟವಾಗಿರುವುದನ್ನು ಕಾಣಬಹುದು.

ಬರಹದ ಕನ್ನಡ                           ಚಾಮರಾಜನಗರದ ಹೊಲೆಮಾದಿಗರ ಕನ್ನಡ

ಹಳ್ಳಿ                                                  ಅಳ್ಳಿ

ಹೂವು                                                ಊವು

ಹೊಗೆ                                                 ವಗ

ಹಂಚು                                                ಅಂಚು

ಹೊಲ                                                ವಲ

ಚಾಮರಾಜನಗರ ಹೊಲೆಮಾದಿಗರ ಕನ್ನಡದಲ್ಲಿ ನಕಾರ ‘ಣ’ ಕಾರಗಳ ನಡುವಿನ ವ್ಯತ್ಯಾಸ ನಷ್ಟವಾಗಿದೆ.

ಅಣ್ಣ                                                 ಅನ್ನ

ಕಾಣು                                                 ಕಾನು

ಕಣ್ಣು                                                 ಕನ್ನು

ಹಣೆ                                                   ಅನ

ಈ ಪ್ರಕ್ರಿಯೆಗೆ ವಿರುದ್ಧವಾಗಿ ಬಳಕೆಯಲ್ಲಿರುವುದು ವಿಶೇಷವಾಗಿದೆ.

ಅನ್ನ                                                  ಅಣ್ಣ

ಬೋನ                                                ಬ್ವೋಣ

ಜನ                                                    ಜಣ

ಈ ರೀತಿ ಧ್ವನಿಗಳ ಬಳಕೆ ಹೊಲೆಮಾದಿಗರ ಕನ್ನಡ ಭಾಷೆಯ ಚಹರೆಯಾಗಿದೆ. ಡಿ.ಎನ್.ಶಂಕರಭಟ್ ಅವರು ತಮ್ಮ “ಕನ್ನಡ ಭಾಷೆಯ ಕಲ್ಪಿತ ಚರಿತ್ರೆ”ಯಲ್ಲಿ ಇಂತಹ ಹಲವಾರು ಸಾಮಾಜಿಕ ಪ್ರಭೇದಗಳ ಧ್ವನಿ ರಚನೆಯ ಸ್ವರೂಪವನ್ನು ವಿಶ್ಲೇಷಣೆ ಮಾಡಿದ್ದಾರೆ. ಮುಖ್ಯವಾಗಿ ಬಡಗರ ಕನ್ನಡ, ಸೋಲಿಗರ ಕನ್ನಡ, ಬಳ್ಳಾರಿಯ ಕುರುಬರ ಕನ್ನಡ, ನಂಜನ ಗೂಡಿನ ಒಕ್ಕಲಿಗರ ಕನ್ನಡದ ಕರಾವಳಿಯ ಹವ್ಯಕರ ಕನ್ನಡ, ಕರಾವಳಿಯ ಹಾಲಕ್ಕಿ ಒಕ್ಕಲಿಗರ ಕನ್ನಡ, ಪುತ್ತೂರು ಗೌಡರ ಕನ್ನಡ, ಮಡಿಕೇರಿಯ ಜೇನು ಕುರುಬರ ಕನ್ನಡ ಮುಂತಾದ ಸಾಮಾಜಿಕ ವರ್ಗಗಳ ಕನ್ನಡದ ರಚನೆಯನ್ನು ಕಾರಣ ಸಹಿತ ವಿವರಿಸಿದ್ದಾರೆ. ಇದರಿಂದ ತಿಳಿಯುವುದೇನೆಂದರೆ ಪ್ರತಿಯೊಂದು ಸಾಮಾಜಿಕ ವರ್ಗಕ್ಕೂ ಅದರದೇ ಆದ ಭಾಷಿಕ ಚಹರೆ ಇರುತ್ತದೆ. ಅದು ಆಯಾ ಸಾಮಾಜಿಕ ವರ್ಗದ ಭಾಷಿಕ ಲಕ್ಷಣವೂ ಆಗಿದೆ.

೧೯೭೬ರಲ್ಲಿ ಅಂದರೆ ಇಂದಿಗೆ ಮೂವತ್ತು ವರ್ಷಗಳ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯ ರಜತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಭಾರತಿ ಶೀರ್ಷಿಕೆಯಲ್ಲಿ ಕೃತಿಯೊಂದನ್ನು ಪ್ರಕಟಿಸಿದೆ. ಇದರಲ್ಲಿ ಸಮಗ್ರ ಕರ್ನಾಟಕ ಜಿಲ್ಲಾವಾರು ಕನ್ನಡದ ರಚನೆಯನ್ನು ವಿವರಣಾತ್ಮಕ ಮಾದರಿಯಲ್ಲಿ ವಿವಿಧ ಭಾಷಾಶಾಸ್ತ್ರಜ್ಞರು ನಿರ್ದಿಷ್ಟವಾಗಿ ಹರಿಜನರ ಕನ್ನಡದ ರಚನೆಯನ್ನು ಪ್ರತ್ಯೇಕವಾಗಿ ಹೇಳಿಲ್ಲವಾದರೂ ಇತರ ಸಾಮಾಜಿಕ ವರ್ಗಗಳ ಕನ್ನಡಕ್ಕಿಂತ ಹರಿಜನರ ಕನ್ನಡದ ರಚನೆ ಹೇಗೆ ಭಿನ್ನವಾಗಿದೆ ಎಂಬುದನ್ನು ನಿದರ್ಶನ ಸಹಿತ ವಿವರಿಸಿದ್ದಾರೆ. ಈ ಕೃತಿಯಲ್ಲಿ ಆದಿಶಿಲ್ಪ, ಮಧ್ಯಶಿಲ್ಪ ಮತ್ತು ಅಂತ್ಯಶಿಲ್ಪ ಎಂದು ವರ್ಗೀಕರಣ ಮಾಡಲಾಗಿದೆ. ಆದಿಶಿಲ್ಪದಲ್ಲಿ ಭಾಷಾ ಪ್ರಭೇದ, ಭಾಷಾ ಪ್ರಭೇದದ ವಿಶ್ಲೇಷಣಾ ವಿಧಾನ, ಭಾಷಾ ಪ್ರಭೇದಗಳ ಅಧ್ಯಯನದ ಪ್ರಯೋಜನ; ಅವುಗಳು ಹೇಗೆ ನಿರ್ಮಾಣವಾಗುತ್ತಿವೆ; ನಿರ್ಮಾಣವಾಗುವುದಕ್ಕೆ ಇರುವ ಕಾರಣಗಳು ಮತ್ತು ಕನ್ನಡ ಭಾಷಾ ಪ್ರಭೇದಗಳನ್ನು ಹೇಗೆ ಅಧ್ಯಯನ ಮಾಡಬೇಕು ಎಂಬ ವಿಚಾರಗಳನ್ನು ವಿವಿಧ ವಿದ್ವಾಂಸರುಗಳು ಚರ್ಚಿಸಿದ್ದಾರೆ.

ಮಧ್ಯಶಿಲ್ಪದ ಭಾಗದಲ್ಲಿ ಬೀದರ್, ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ವಿಜಾಪುರ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಕೋಲಾರ, ಬೆಂಗಳೂರು, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳ ಕನ್ನಡದ ವೈಶಿಷ್ಟ್ಯಗಳನ್ನು ಕುರಿತು ವಿವರಣಾತ್ಮಕವಾಗಿ ಅಧ್ಯಯನ ಮಾಡಿದ್ದಾರೆ. ಕೆಲವರು ವಿವರಣಾತ್ಮಕ ಅಧ್ಯಯನದ ಒಳಗೆ ಸಾಮಾಜಿಕ ಅಧ್ಯಯನವನ್ನು ನಡೆಸಿದ್ದಾರೆ. ಅಂತಹ ಸಾಮಾಜಿಕ ವರ್ಗಗಳಲ್ಲಿ ಹರಿಜನರು ಅಥವಾ ನಿಮ್ನವರ್ಗದವರು ಒ‌ಬ್ಬರು. ಪ್ರಸ್ತುತ ಕೃತಿಯಲ್ಲಿ ಹರಿಜನರು ಅಥವಾ ನಿಮ್ನವರ್ಗದವರು ಮಾತನಾಡುವ ಕನ್ನಡದ ರಚನೆಯನ್ನು ಯಾರು ಅಧ್ಯಯನ ಮಾಡಿದ್ದಾರೆ, ಅದು ಯಾವ ಪ್ರದೇಶದ್ದು, ಹರಿಜನರು ಬಳಸುವ ಕನ್ನಡದ ವೈಶಿಷ್ಟ್ಯಗಳನ್ನು ಯಥಾವತ್ತಾಗಿ ದಾಖಲಿಸಲಾಗಿದೆ. ಇದರ ಉದ್ದೇಶ ಮುಂದೆ ಕರ್ನಾಟಕದಲ್ಲಿ ಹೊಲೆಮಾದಿಗರ ಕನ್ನಡದ ರಚನೆ ಕುರಿತು ಅಧ್ಯಯನ ಮಾಡುವವರಿಗೆ ಒಂದು ಪೂರಕ ಮಾಹಿತಿ ಆಗಬಹುದೆಂಬ ಸದುದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ. ಕಾಸರಗೋಡು ತಾಲೂಕಿನ ಸುತ್ತಮುತ್ತಲ ಪ್ರದೇಶದಲ್ಲಿ ‘ಮಾದಿಗ ಕನ್ನಡ’ದ ರಚನೆಯನ್ನು ದಾಖಲಿಸಲಾಗಿದೆ. ಅಂತ್ಯಶಿಲ್ಪದ ಭಾಗದಲ್ಲಿ ಹೊರರಾಜ್ಯದ ಕನ್ನಡ ರಚನೆಯನ್ನು ಚರ್ಚಿಸಲಾಗಿದೆ. ಕರ್ನಾಟಕ ಭಾರತಿ ಪ್ರಧಾನ ಸಂಪಾದಕರು, ಸಹಾಯಕ ಸಂಪಾದಕರನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ಇಂತಹ ಒಂದು ಮಹತ್ವವಾದ ಕೃತಿಯೊಂದನ್ನು ಪ್ರಕಟಿಸಿದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ವಂದನೆಗಳು.

ಪಿ.ಪಿ. ಗಿರಿಧರ ಅವರು ರಾಯಚೂರು ಜಿಲ್ಲೆಯ ಕನ್ನಡದ ರಚನೆಯನ್ನು ಕುರಿತು ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಪದಾದಿಯ ‘ಹ’ ಕಾರದ ಹೇಳಿದ್ದಾರೆ. ಈ ಭಾಗದ ಎಲ್ಲ ಹರಿಜನರ ಅಥವಾ ಅಶಿಕ್ಷಿತ ಬ್ರಾಹ್ಮಣೇತರರ ಭಾಷೆಯ ವೈಶಿಷ್ಟ್ಯವೆಂದು ಅಭಿಪ್ರಾಯ ಪಟ್ಟಿದ್ದಾರೆ. ಏಕೆ ಸಾಮಾಜಿಕ ಪ್ರಭೇದಗಳಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತದೆ ಎಂದರೆ ಬ್ರಾಹ್ಮಣರು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮುಂದುವರಿದವರು ಆಗಿದ್ದಾರೆ. ಆದರೆ ಹರಿಜನರು, ಇತರ ಹಿಂದುಳಿದ ವರ್ಗಗಳಲ್ಲಿ ಹಿಂದುಳಿದಿದ್ದಾರೆ. ಹರಿಜನರು ಬಳಕೆ ಮಾಡುವ ಭಾಷೆಯು ವಿಶಿಷ್ಟವಾಗಿರುತ್ತದೆ. ಸಾಮಾಜಿಕ ಅಂತರವೂ ಜಾಸ್ತಿಯಾದಷ್ಟು ಭಾಷೆಯ ಅಂತರವೂ ಹೆಚ್ಚಾಗಿದೆ.

ರಾಯಚೂರು ಜಿಲ್ಲೆಯ ಪರಿಸರದ ದಲಿತ ಅಥವಾ ನಿಮ್ನವರ್ಗದವರ ಕನ್ನಡದ ವೈಶಿಷ್ಟ್ಯಗಳು :

೧. ನಾಮಪದ ಮತ್ತು ಕ್ರಿಯಾಪದಗಳೆರಡರಲ್ಲೂ ದಲಿತ ಅಥವಾ ನಿಮ್ನವರ್ಗದವರ ಕನ್ನಡದಲ್ಲಿ ಪದಾದಿ ಪರಿಸರದಲ್ಲಿ ‘ಹ’ ಕಾರ ಲೋಪವಿದೆ. ಆದರೆ ಶಿಕ್ಷಣ ಪಡೆದ ದಲಿತರಲ್ಲಿ ‘ಹ’ ಕಾರವಿದೆ.

ಹೇಳು – ಏಳು

ಹsಲ್ಲಿ – ಅsಲ್ಲಿ

ಹೋದ – ಓದ~ವಾದ

ಹರಿಜನ – ಅರಿಜನ

೨. ಹರಿಜನ ಮಾತಿನಲ್ಲಿ ಮಹಾಪ್ರಾಣ ಲೋಪವಾಗಿದೆ.

ಖರ್ಚು – ಕರ್ಚು

ಖಡು – ಕಡು

೩. ಹರಿಜನರ ಅಥವಾ ನಿಮ್ನ ವರ್ಗದವರ ಮಾತಿನಲ್ಲಿ ಸಾಮಾನ್ಯವಾಗಿ ‘ಹ’ ಕಾರ ಇಲ್ಲದ ಪದಗಳಿಗೆ ಪದಾದಿ ಪರಿಸರಕ್ಕೆ ‘ಹ’ ಸೇರಿಸಿ ಉಚ್ಚಾರಣೆ ಮಾಡುತ್ತಾರೆ.

ಅಳತೆ – ಹಳಕೆ

ಆಕಳು – ಹಾಕಳು

ಅನ್ನ – ಹನ್ನ

ಈ ಒಂದು ಭಾಷಿಕ ಪ್ರಕ್ರಿಯೆಯನ್ನು ನಿಮ್ನವರ್ಗದವರ ಆಕಾಂಕ್ಷೆಯ ಅಜಾಗೃತ ಅಭಿವ್ಯಕ್ತಿ ಎಂದು ಹೇಳಬಹುದು ಎಂದಿದ್ದಾರೆ.

೪. ಪದ ಮಧ್ಯ ಪರಿಸರದಲ್ಲಿ ‘ಇ’ ಸ್ವರ ಇವರ ಭಾಷೆಯಲ್ಲಿ ಮಧ್ಯ ಸ್ವರ (Centralise)ವಾಗಿ ಉಚ್ಚಾರಣೆಯಲ್ಲಿದೆ.

ಬರಂಗಿಲ್ಲ > ಬರಂಗಿಲ್ಲ

ನೋಡಿಲ್ಲ > ನೋಡಿಲ್ಲ

೫. ತಾಲವ್ಯೀಕರಣ (Palatalization) ಮತ್ತು ಅತಾಲವ್ಯೀಕರಣ (depalalization) ನಿಮ್ನವರ್ಗದ ಭಾಷೆಯ ವೈಶಿಷ್ಟ್ಯ.

ಬ್ರಾಹ್ಮಣರ ಕನ್ನಡ                       ನಿಮ್ನವರ್ಗದವರ ಕನ್ನಡ

ಛೆಲೊ                                                 ಸೊಲೋ

ಚೀಲ                                                  ಸೀಲ

ಚಳಿ                                                    ಸಳಿ

ಕೆಲವು ಪದಗಳಲ್ಲಿ ಬ್ರಾಹ್ಮಣ ಕನ್ನಡದಲ್ಲಿ ‘ಸ’ ಕಾರ ನಿಮ್ನವರ್ಗದಲ್ಲಿ ‘ಚ’ಕಾರ ವಾಗುತ್ತದೆ. ಈ ಪ್ರಕ್ರಿಯೆಯನ್ನು ತಾಲವ್ಯೀಕರಣವಾಗುತ್ತದೆ.

ಸಂಜೆಕ್ಕ – ಚಂಚೆಕ್ಕ

ಅಗ್ಸಾಲ್ರ – ಅಗ್ಚಾಲ್ರ

೬. ಮೂರು ಅಕ್ಷರಗಳಲ್ಲಿ ಒಂದು ಸ್ವರ ಲೋಪವಾಗುತ್ತದೆ. ಈ ಒಂದು ಲಕ್ಷಣ ಬ್ರಾಹ್ಮಣ ಮತ್ತು ನಿಮ್ನವರ್ಗದರಿಬ್ಬರಲೂ ಕಂಡು ಬರುತ್ತದೆ.

ಗಡಿಗೆ – ಗಡ್ಗಿ

ಅಡಿಗೆ – ಅಡ್ಗಿ

೮. ಧ್ವನಿಲೋಪ ಪ್ರಕ್ರಿಯೆ ನಿಮ್ನವರ್ಗದವರ ಭಾಷೆಯ ವೈಶಿಷ್ಟ್ಯ.

ಬ್ರಾಹ್ಮಣರ ಕನ್ನಡ                       ನಿಮ್ಮ ವರ್ಗದವರ ಕನ್ನಡ

ಹೋಗಲಿ                                             ಓಲಿ

ಆಗಲಿ                                                 ಆಲಿ

ಹೋಗ್ತಾನ್ಮ                                        ಓತಾನ

ಸಹಾಯ                                             ಸಾಯಾ

ಅಮವಾಸಿ                                           ಅಮಾಸಿ

೯. ನಿಮ್ನ ಭಾಷೆಯಲ್ಲಿ ಧ್ವನಿ ಪಲ್ಲಟ ಪ್ರಕ್ರಿಯೆ ಬಳಕೆಯಲ್ಲಿದೆ.

ಕಾಗದ > ಕಾದಗ

ಅಂದಾಜು > ಅಂಜಾದು

ದಾರಣೆ > ದ್ರಾಣ್ಣೆ

೧೦. ಆತ್ಮಾರ್ಥಕ (Reflexive) ಪ್ರತ್ಯಯ ಬ್ರಾಹ್ಮಣ ಭಾಷೆಯಲ್ಲಿ |ಕೊ|, ಆದರೆ ನಿಮ್ನವರ್ಗದವರ ಭಾಷೆಯಲ್ಲಿ |-ಕ್ಯ| |~ಕs| ಧ್ವನಿಗಳು ಬಳಕೆಯಲ್ಲಿವೆ.

೧೧. ವ್ಯಂಜನ ದ್ವಿತ್ವೀಕರಣ (Consonantal Assimilation)ನಿಮ್ನವರ್ಗದವರ ಭಾಷೆಯ ವೈಶಿಷ್ಟ್ಯ.

ಎರಡು > ಎರ್ಡು > ಎಡ್ಡು

ಲಿಂದ > ಲಿದ್ದ

ದಾರ್ಣಿ > ದಾಣ್ಣಿ

೧೨. ನಿಮ್ನವರ್ಗದವರ ಭಾಷೆಯಲ್ಲಿ ಪದಾದಿ ಆರಂಭದಲ್ಲಿ |ಇ| ಗೆ ಮೊದಲು ಬರುವ |ವ|, |ಯ| ಆಗಿ ಬದಲಾಗುತ್ತದೆ.

ವಿಚಾರ > ಯಿಚಾರ

ಎಂ.ಎನ್.ಲೀಲಾವತಿ ಅವರು ಹಾಸನ ಜಿಲ್ಲೆಯ ಕನ್ನಡವನ್ನು ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಮಾಹಿತಿಗಳನ್ನೂ ವಿವಿಧ ಸಾಮಾಜಿಕ ವರ್ಗಗಳ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿಯನ್ನು ಚನ್ನರಾಯಪಟ್ಟಣ, ಬೇಲೂರು, ಅರಕಲಗೂಡು ಮತ್ತು ಸಕಲೇಶಪುರ ತಾಲೂಕಿನ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗಿದೆ. ವಿದ್ಯಾರ್ಥಿಗಳನ್ನು ಬ್ರಾಹ್ಮಣ, ಒಕ್ಕಲಿಗ ಮತ್ತು ಹರಿಜನ ಜಾತಿಗಳಿಂದ ಆಯ್ದುಕೋಂಡಿದ್ದೇನೆ ಎಂದು ಲೇಖಕರು ತಿಳಿಸಿದ್ದಾರೆ. ಈ ಸಮೀಕ್ಷೆ ಒಂದು ರೀತಿಯಲ್ಲಿ ಶಿಷ್ಟ ಭಾಷೆಯೊಂದಿಗೆ ತುಲನೆ ಮಾಡಲಾಗಿದೆ.

ಪ್ರೊ.ಲಿಂಗದೇವರು ಹಳೇಮನೆ ಅವರು ತುಮಕೂರು ಜಿಲ್ಲೆಯ ಕನ್ನಡದ ರಚನೆಯನ್ನು ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಭಾಷೆಯಲ್ಲಿ ಕಾಣಿಸಕೊಳ್ಳುತ್ತಿರುವ ಈ ಮಾದರಿ ವ್ಯತ್ಯಾಸಗಳು ಗ್ರಾಮೀಣ ಪ್ರದೇಶದಲ್ಲಿರುವ ಹರಿಜನ ಮತ್ತು ಸಾಮಾಜಿಕವಾಗಿ ಕೆಳಮಟ್ಟದಲ್ಲಿರುವ ಇತರ ಜನಾಂಗದವರ ಭಾಷೆಯನ್ನು ಗಮನಿಸಿದಾಗ ಅತಿ ಹೆಚ್ಚಿನ ಬದಲಾವಣೆಯನ್ನು ನೋಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಉದಾಹರಣೆಗೆ: ಪರಿಮಾಣ ವಾಚಕಗಳಾದ ಅಷ್ಟು, ಇಷ್ಟು, ಎಷ್ಟುಗಳು ಆಟು, ಈಟು, ಏಟುಗಳಾಗಿವೆ. ಹಾಗೆ, ಹೀಗೆ, ಹೇಗೆ, ಗಳು ಅಂಗೆ, ಇಂಗೆ, ಎಂಗೆಗಳಾಗಿವೆ. ಇಂತಹ ನೂರಾರು ಭಾಷೆಯ ಸ್ತರಗಳನ್ನು ಗಮನಿಸಿದಾಗ ನಿಮ್ನವರ್ಗದವರ ಭಾಷೆ ಸಂಕೀರ್ಣವಾದ ವ್ಯಾಖರಣ ವ್ಯವಸ್ಥೆಯನ್ನು ಸರಳಗೊಳಿಸಿದೆ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಮಾನ್ಯವಾಗಿ ಸಾಮಾಜಿಕ ಭಾಷಾ ಪ್ರಭೇದ ವ್ಯಕ್ತಿಯ ಪರಿಸರಕ್ಕನುಗುಣವಾಗಿ ಬೆಳೆಯುತ್ತಾ ಹೋಗುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅತಿ ಉನ್ನತ ಸಾಮಾಜಿಕ ವರ್ಗವಾದ ಬ್ರಾಹ್ಮಣರ ಮಾತು ಗ್ರಂಥಸ್ಥ ಭಾಷೆಗೆ ಹತ್ತಿರವಾಗಿದ್ದರೆ, ಅತ್ಯಂತ ಕೆಳಸ್ತರದಲ್ಲಿರುವ ಸಾಮಾಜಿಕ ವರ್ಗವಾದ ಹರಿಜನರ ಮಾತು ಗ್ರಂಥಸ್ಥ ಭಾಷೆಗೆ ತೀರ ಭಿನ್ನವಾಗಿರುತ್ತದೆ ಎಂದು ಹಳೇಮನೆ ಅವರು ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅಂದರೆ ಹರಿಜನರು ಬಳಕೆ ಮಾಡುವ ಕನ್ನಡ ವಿಶಿಷ್ಟವಾಗಿದ್ದು, ಬರಹದ ಕನ್ನಡಕ್ಕಿಂತ ಭಿನ್ನ ಎಂದು ಗೊತ್ತಾಯಿತು.

ಪ್ರೊ. ಹಳೇಮನೆ ಅವರು ಈ ಪ್ರಾಂತ್ಯದಲ್ಲಿ ಹರಿಜನರ ಬೈಗುಳ ವಿಶಿಷ್ಟವಾಗಿರುವುದನ್ನು ನಿದರ್ಶನ ಸಹಿತ ದಾಖಲಿಸಿದ್ದಾರೆ. ಉದಾಹರಣೆಗೆ: ತುಮಕೂರಿನಿಂದ ಇಪ್ಪತ್ತೈದು ಮೈಲು ರಾಷ್ಟ್ರೀಯ ಹೆದ್ದಾರಿಯ ಕಡೆಗೆ ಹೋದರೆ ‘ಗಾಡಿದಿ ಮಗನೆ’ ಎಂದು ಹರಿಜನರು ಬೈಯುವುದನ್ನು ನಾವು ಕೇಳಬಹುದು. ಏಕೆ ಈ ಮಾದರಿ ವ್ಯತ್ಯಾಸದ ಬೈಗುಳ ಇವರಲ್ಲಿ ಬಳಕೆಯಲ್ಲಿದೆ ಎಂದರೆ ‘ಕತ್ತೆ ಮಗನೆ’ ಎಂಬ ಪದ್ಕೆಕ ಸಂವಾದಿಯಾಗಿ ಅವರು ತೆಲುಗು. ಕನ್ನಡ ಪದಗಳ ಸಮ್ಮಿಶ್ರಣ ಬೈಗಳಾದ ‘ಗಾಡಿದಿ ಮಗನೆ’ ಎಂದು ಬಳಕೆ ಮಾಡುತ್ತಾರೆ ಎಂದು ಕಾರಣ ಸಹಿತ ವಿವರಿಸುವ ಪ್ರಯತ್ನ ಮಾಡಿದ್ದಾರೆ.

ಕೆ.ಕೆಂಪೇಗೌಡ ಅವೆರು ಮಂಡ್ಯ ಜಿಲ್ಲೆಯ ಕನ್ನಡದ ರಚನೆಯನ್ನು ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಈ ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ವರ್ಗಗಳು ವಾಸಿಸುತ್ತಿದ್ದಾರೆ. ಪ್ರಮುಖವಾಗಿ ಬ್ರಾಹ್ಮಣರು ಮತ್ತು ಲಿಂಗಾಯಿತರು ಆಡುವ ಕನ್ನಡಕ್ಕಿಂತ ಒಕ್ಕಲಿಗರು, ಹರಿಜನರು, ಬೆಸ್ತರು, ಕುರುಬರು, ಕುಂಬಾರರು, ಅಗಸರು ಆಡುವ ಕನ್ನಡಕ್ಕಿಂತ ವ್ಯತ್ಯಾಸವಾಗಿರುವುದನ್ನು ನಿದರ್ಶನ ಸಹಿತ ವಿವರಿಸಿದ್ದಾರೆ. ಹರಿಜನರಲ್ಲಿ ಎರಡು ಪಂಗಡಗಳಿವೆ ಎಂಬುದನ್ನು ಭಾಷೆಯ ದೃಷ್ಟಿಯಿಂದ ಅಧ್ಯಯನ ಮಾಡಿಲ್ಲ. ಹರಿಜನ, ಬೆಸ್ತ, ಕುರುಬ, ಗಾಣಿಗ, ಒಕ್ಕಲಿಗ ಮುಂತಾದ ಜಾತಿಯ ಜನರ ಕನ್ನಡದಲ್ಲಿ ‘ಒ’, ‘ಓ’ ಸ್ವರಗಳು ಬೇರೆ ಬೇರೆ ಧ್ವನಿಮಾಗಳಾಗಿ ಬಳಕೆಯಲ್ಲಿವೆ. ಹಾಗೆಯೇ ಬಹುವಚನ ಹಾಗೂ ಏಕವಚನ ರೂಪಗಳನ್ನು ವ್ಯತ್ಯಾಸವಿಲ್ಲದೆ ಏಕವಚನದಲ್ಲಿ ಬಳಸುವುದು ಹೆಚ್ಚಾಗಿ ಹರಿಜನ, ಬೆಸ್ತರು, ಒಕ್ಕಲಿಗರಲ್ಲಿ ಕಂಡು ಬರುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ. ಉದಾಹರಣೆಗೆ:

ಬರಹದ ಕನ್ನಡ                           ನಿಮ್ನವರ್ಗದವರ ಕನ್ನಡ

ಅಪ್ಪ ಬಂದನು                                     ಅಪ್ಪ ಬಂದ

ಅಪ್ಪ ಬಂದರು                                     ಅಪ್ಪ ಬನ್ನ

ಅವ್ವ ಬಂದಳು                                     ಅವ್ವ ಬಂದ

ಅಮ್ಮ ಬಂದರು                                    ಅವ್ವ ಬನ್ನ/ಅಮ್ಮ ಬನ್ನ

ಮುಂದುವರಿದು ಅವನು, ಅವಳು, ಅವರು ಎಂಬ ರೂಪಗಳನ್ನು ಯಾವ ಭೇದವೂ ಇಲ್ಲದೆ ‘ಅದು’ ಎಂತಲೂ, ಇವನು, ಇವಳು, ಇವರು ಎಂಬ ರೂಪಗಳನ್ನು ಪುಂಸ್ತ್ರೀಲಿಂಗ ಭೇದವಿಲ್ಲದೆ ‘ಇದು’ ಎಂತಲೂ ಬಳಸುವುದು ಹರಿಜನರಲ್ಲಿ ಹೆಚ್ಚು ಬಂದು ಅಭಿಪ್ರಾಯಪಟ್ಟಿದ್ದಾರೆ.

ಹರಿಜನರು ಅಪ್ಪ ಬಂದ, ಅವ್ವ ಬಂದ್ಲು, ಅಪ್ಪ ಬಂದ್ನ, ಅವ್ವ ಬಂದ್ನ, ಅಪ್ಪ ಹೋದ, ಅವ್ವ ಹೋದ್ಲು, ಅಪ್ಪ ಹೋದ್ನ, ಅವ್ವ ಹೋದ್ನ, ಅಪ್ಪವಾದ, ಅವ್ವವಾದ್ನ, ಅಮ್ಮವಾದ್ಲು ಮುಂತಾದ ರೀತಿಗಳನ್ನು ಬಳಸುವುದು ಹೆಚ್ಚಾಗಿ ಕಂಡು ಬರುತ್ತದೆ. ಇದೇ ರೀತಿಯಲ್ಲಿ ಹರಿಜನರಲ್ಲಿ ಸ್, ಶ್, ಷ್ ಧ್ವನಿಗಳ ನಡುವೆ ಉಚ್ಚಾರಣೆ ಅಭೇದವಾಗಿದೆ ಎಂದಿದ್ದಾರೆ.

ಮಾದಿಗ ಕನ್ನಡ

ಕಾಸರಗೊಡು ತಾಲೂಕಿನ ಕೂಡ್ಳು, ಪಿಲಾಂಕಟ್ಟೆ, ಪಟ್ಟ, ಮುಳ್ಳೇರಿಯ, ಕುಂಟಾರು, ತೆಕ್ಕಿಲು, ಬೋವಿಕ್ಕಾನ, ಉಪ್ಪಳ, ಬಾಡೂರ ಮುಂತಾದೆಡೆಗಳಲ್ಲಿ ನೆಲೆ ನಿಂತಿರುವ ಮಾದಿಗರ ಮಾತೃಭಾಷೆ ಕನ್ನಡ, ಚರ್ಮ ಮತ್ತು ಸುಣ್ಣದ ಕೆಲಸವನ್ನು ಮಾಡುವ ಈ ವರ್ಗದವರಲ್ಲಿ ಹೆಚ್ಚಿನವರು ಅವಿದ್ಯಾವಂತರಾಗಿವುದರಿಂದ ಇವರ ನುಡಿ ಬ್ರಾಹ್ಯ ಪ್ರಭಾವಕ್ಕೆ ಅಷ್ಟಾಗಿ ಸಿಲುಕಿಲ್ಲ.

ಮಾದಿಗ ಕನ್ನಡದ ಕೆಲವು ವಿಶಿಷ್ಟ ಪದಗಳು : ಕಿಮಿ(ಕಿವಿ), ಹಾವು(ಹಾವು), ಗಾಯ (ಗಾಯ), ಮಂಡ್ಳಿ (ಮಂಡೆಲಿ-ತುಳು), ಆಯಿತ್ವಾರ (ಆದಿತ್ಯವಾರ), ಸನಿವಾರ (ಶನಿವಾರ), ಬೇಸ್ತ್ವಾರ (ಬೃಹಸ್ಪತಿವಾರ), ಅಸರೊತ್ತು (ಆಸರ ಹೊತ್ತು – ಸುಮಾರು ಸಂಜೆ ನಾಲ್ಕು ಗಂಟೆಯ ಸಮಯ), ಕಸಾಲೆ (ಕುರ್ಚಿ), ಕೊಬ್ಣ (ಕಬ್ಬಿಣ), ಕುರ್ಸು (ಕುರ್ಚಿ), ~ ಹಿಡಿ (ಪೊರಕೆ), ಅರ್ಬೆ (ಅರಿವೆ), ಚಾಳೆ (ಗುಬ್ಬಚ್ಚಿ), ಗೂಟುಗೆಣ್ಣು (ಮರ ಗೆಣಸು), ಜಿಗುಟು (ಚಿವುಟು), ದೀಪ ಹೊಚ್ಚು (ದೀಪ ಹೊತ್ತಿಸು), ಬೆಂಕಿ ಹೊಚ್ಚು (ಬೆಂಕಿ ಹಚ್ಚು), ರೊಟ್ಟಿ, ಸುಡು, (ರೊಟ್ಟಿ ಬೇಯಿಸು), ಬೆಣ್ತಕ್ಕಿ (ಬೆಳ್ತಿಗೆ ಅಕ್ಕಿ) ಇತ್ಯಾದಿ.

ಪದಾರ್ಥಗಳನ್ನು ಹೇಳುವ ಪದಗಳು : ಪಾರ್ತ (ಪದಾರ್ಥ), ಮೇಲಾಗ್ರ (ಮೇಲೋಗರ), ಚಟ್ಣಿ, ಮುದ್ದೆ, ನೀರು (ಮುದ್ದೆ ಪಾರ್ತ, ನೀರು ಪಾರ್ತ) ಇತ್ಯಾದಿ.

ತರಕಾರಿಗಳ ಹೆಸರು : ಸೌಂತೆಕಾಯ್, ಅಲಸೊಂಡೆ, ಹಾಲ್ಸೊರೆ, ಬೆಂಡೆಕಾಯ್, ಪಟ್ಳಕಾರ್ಯ್‌ ಇತ್ಯಾದಿ.

ಚಪ್ಪಲಿ ಹೊಲಿಯುವ ವೃತ್ತಿಯ ಕೆಲವು ಉಪಕರಣಗಳು : ಉಳಿ, ರೊಂಪಿಗೆ, ಹೊಲಿಗೇಂದಿ, ಕೊಡ್ತಿ, ಕೊಕ್ಕೆ ಉಳಿ, ಇತ್ಯಾದಿ.

ಸಂಬಂಧವಾಚಕಗಳು: ಅವ್ವ, ಅಯ್ಯ, ಅಕ್ಕ, ಅಣ್ಣ, ತಮ್ಮ, ತಂಗಿ ಮಾವ, ಅತ್ತೆ, ಬಾಮೈದ, ಬಾವ ಇತ್ಯಾದಿ.

ಸ್ತ್ರೀ ಪ್ರತ್ಯಯ :

ಹೆಚ್ಚು ಬಳಕೆಯಲ್ಲಿರುವ ಸ್ತ್ರೀ ಪ್ರತ್ಯಯ ‘ತ್ತಿ’. ಉದಾ : ಬಿಲ್ಲೊತ್ತಿ ಹೊಲ್ತಿ, ಕೊರಗ್ತಿ, ಮದುವಳ್ತಿ ಇತ್ಯಾದಿ.

ವಿಭಕ್ತಿ :

ವಿಭಕ್ತಿ                       ಪ್ರತ್ಯಯ                    ಪ್ರಯೋಗ

ಪ್ರ.                                                                       ಅವ್ವ ಬಂದೈತೆ.

ದನ ಹಾಯ್ತು.

ದ್ವಿ.                                ಗೆ.ಕ್ಕೆ,                              ಅವ್ನಿಗೆ ನಾಯಿ ಕಚ್ಚು.

ಅವ ಮರ ಹತ್ತಾನೆ.

ತೃ.                                 ಆಗೆ, ಆಲಿ                         ಅವ್ನಿಗೆ ಕೈಯಾಗೆ ಒಂದ ಹೊಡ್ದೆ.

ಚ.                                  ಗೆ, ಕ್ಕೆ                              ಕಾಲ್ಗೆಗಾಯ ಆಗೈತೆ.

ದನಕ್ಕೆ ಅಕ್ಕಚ್ಚು ಕೊಡು.

ಪಂ.                                ಇಂದ                               ಮರ್ದಿಂದ ಹಣ್ಣು ಬಿದ್ದಾತು.

ಷ.                                  ಅ                                   ಬ್ರಾಮ್ಮರ ಗದ್ದೆ, ಎಂಕ್ಟನ ಬಸ್ಸು, ಕೊಬ್ಣದ ಕಸಾಲೆ.

ಸ.                                   ಆಗೆ, ಅಲಿ                         ತಲೆಯಲಿ ಹುಣ್ಣು ಉಂಟು.

ಮೈಯಾಗೆ ಗಾಯ ಉಂಟು.

ಸರ್ವನಾಮ : ನಾನು, ನೀನು, ನಾವು, ನೀವು, ಅವ, ಇವ, ಅವ್ಳು, ಇವ್ಳು, ಅವ್ರು, ಇವ್ರು, ಅದು, ಇದು ಇತ್ಯಾದಿ.

ಕ್ರಿಯಾಪದ                  ಭೂತಕಾಲ:

ಪ್ರ.ಕ.                       ಮಾ.ಕ.                      ಪ್ರ.ಕ,          ಮಾ.ಕ.

ಬಂದಿದ್ದಾನೆ                      ಬಂದಿದಾನೆ                        ಬಂದಿದೆ           ಬಂದೆತೆ

ಬಂದನು                           ಬಂದ                               ಬಂದಿತು          ಬಂತು

ಹೋಗಿದ್ದಾನೆ                    ಹೋಗಿದಾನೆ                      (ನೀನು) ಬಂದೆ  ಬಂದಿ

ಬಂದಿದ್ದಾಳೆ                      ಬಂದಿದಾಳೆ                        ಬಂದಿರಿ           ಬಂದ್ರಿ

ಬಂದಳು                           ಬಂದ್ಳು                           ಬಂದೆನು          ಬಂದೆ

ಬಂದೆವು          ಬಂದ್ವು

ವರ್ತಮಾನ ಭವಿಷತ್ :

ಬರಿತ್ತಾನೆ                          ಬರ್ತಾನೆ                           ಬರುತ್ತಿ           ಬರ್ತಿ

ಬರುತ್ತಾಳೆ                        ಬರ್ತಾಳೆ                           ಬರುತ್ತೀರಿ       ಬರ್ತೀರಿ

ಬರುತ್ತದೆ                         ಬರ್ತದೆ                            ಬರುತ್ತೇನೆ       ಬರ್ತೇನೆ

ಬರುತ್ತಾರೆ                        ಬರ್ತಾರೆ                           ಬರುತ್ತೇನೆ       ಬರ್ತೇವೆ

 

ಬರುವನು                         ಬಂದಾನು                         ಬರುವೆ           ಬಂದೀಯ

ಬರುವಳು                         ಬಂದಾಳು                         ಬರುವಿರಿ         ಬಂದೀರಿ

ಬರುವುದು                        ಬಂದಾತು                         ಬರುವೆನು        ಬಂದೇನು

ಬರುವರು                         ಬಂದಾರು                         ಬರುವೆವು        ಬಂದೇವು

ಬರುವುವು                         ಬಂದಾವು

ಮಾದಿಗ ಕನ್ನಡದಲ್ಲಿ ಗೌರವಾರ್ಥದ ಸ್ತ್ರೀಲಿಂಗ ಕ್ರಿಯಾಪದವೊಂದಿದೆ.

ಅಮ್ಮ ಬಂದಿದಾಳೆ              ಅವ್ವ ಬಂದೈತೆ

ಅಕ್ಕ ಹೋಗಿದ್ದಾಳೆ             ಆಕ್ಕ ಹೋಗೈತೆ

ಅಮ್ಮ ಹೋಗುತ್ತಾಳೆ          ಅವ್ವ ಹೋಗ್ತೀತು ಇತ್ಯಾದಿ.

ಹೀಗೆ ಮಾದಿಗ ಕನ್ನಡ ತನ್ನದೇ ಆದ ವೈಶಿಷ್ಟ್ಯಗಳನ್ನುಳಿಸಿಕೊಂಡು ಅಭ್ಯಾಸ ಯೋಗ್ಯವಾಗಿದೆ.

ಹಿಂದೆಯೇ ಇಲ್ಲಿನ ನಿವಾಸಿಗಳಾಗಿದ್ದ ಅಗಸರ, ಕ್ಷೌರಿಕರ ಮನೆಮಾತು ತುಳು ಇಲ್ಲವೆ ಮಲೆಯಾಳ. ಕನ್ನಡ ಮನೆಮಾತಾಗಿರುವ ಕ್ಷೌರಿಕರು ಮತ್ತು ಅಗಸರು ಹೊರಗಿನಿಂದ ಬಂದವರು. ಅವರಿಲ್ಲಿಗೆ ಕೆಳದಿಯ ನಾಯಕರೊಂದಿಗೆ ಬಂದವರೆಂದು ಪ್ರತೀತಿ. ಬಂದಡ್ಕದ ಗೌಡಕನ್ನಡ, ದಕ್ಷಿಣ ಕನ್ನಡದ ಸುಳ್ಯ ಜಾಲ್ಸೂರುಗಳ ಗೌಡ ಕನ್ನಡಕ್ಕೆ ಸಮೀಪವರ್ತಿ.

ಕೇರಳದ ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಕನ್ನಡದಲ್ಲಿ ಅನಾಯಾಸವಾಗಿ ಕೆಲವು ಮಲೆಯಾಳ ಶಬ್ದಗಳು ಪ್ರವೇಶಿಸಿವೆ. ಆ ಪ್ರವೇಶವೂ ಪ್ರತ್ಯೇಕ ದಾರಿಯಲ್ಲಿ ನಡೆದಿದೆ. ಕೇರಳ ರಾಜ್ಯದ ವಿದ್ಯಾ ಇಲಾಖೆ ಕನ್ನಡ ವಿದ್ಯಾರ್ಥಿಗಳಿಗಾಗಿ ಮಲಯಾಳ ಮಾಧ್ಯಮದ ವಿಜ್ಞಾನ, ಸಾಮಾಜಿಕ ಅಧ್ಯಯನ ಮತ್ತು ಗಣಿತಶಾಸ್ತ್ರಗಳ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸುವಲ್ಲಿ ಅಜ್ಞಾತವಾಗಿ ಮಲೆಯಾಳ ಶಬ್ದಗಳು ಆ ಭಾಷಾಂತರ ಕನ್ನಡದಲ್ಲಿ ಪ್ರವೇಶ ಪಡೆದಿವೆ. ವಿದ್ಯಾರ್ಥಿಗಳು ಆ ಶಬ್ದಗಳನ್ನೇ ಮುಂದುವರಿಸುವುದು ಸ್ವಾಭಾವಿಕವಷ್ಟೇ.

ಅಂತಹ ಕೆಲವು ಪದಗಳು

ತಾರತಮ್ಯೇನ (ತರತಮ ಸೂಚಕ), ಕಾಲಘಟ್ಟ (ಪರಿಸ್ಥಿತಿ), ಭರಣ ಘಟನೆ (Constitution), ಭರಣ (ಆಡಳಿತೆ), ರಾಷ್ಟ್ರೀಯ (ರಾಜಕೀಯ), ಜನಾಧಿಪತ್ಯ (ಪ್ರಜಾ ಪ್ರಭುತ್ವ), ಜೀವಿತ (ಜೀವನ) ಇತ್ಯಾದಿ. ಕಾಸರಗೋಡಿನ ವ್ಯಾವಹಾರಿ, ಕನ್ನಡದಲ್ಲೂ ಇತ್ತೀಚೆಗೆ ಮಾಲಯಾಳ ಶಬ್ದಗಳು ತಕ್ಕ ಪ್ರಮಾಣದಲ್ಲಿ ಸೇರುತ್ತಿವೆ. ಕೆಲವೊಮ್ಮೆ ಶಬ್ದ ಸಂಸ್ಕೃತದ್ದಾದರೂ ಮಲಯಾಳದಲ್ಲಿ ಅದರ ಅರ್ಥವೇನೋ ಅದೇ ಕನ್ನಡದಲ್ಲೂ ಬರುತ್ತದೆ. ಸಮರ (ಮುಷ್ಕರ), ರಕ್ಷೆ (ರಕ್ಷಣೆ), ಪ್ರಸಂಗ (ಭಾಷಣ), ಮತಪ್ರಸಂಗ (ಧಾರ್ಮಿಕ ಪ್ರವಚನ), ಕುಡಿಕಿಡಪ್ಪು (ಗೇಣಿದಾರಿಕೆ), ಸಂಭವ (ಘಟನೆ), ಅವಸಾನ (ಕೊನೆ), ಸೇವನವಾರ (ಸೇವಾ ಸಪ್ತಾಹ) ಇತ್ಯಾದಿ ಅಂತಹ ಶಬ್ದಗಳಲ್ಲಿ ಕೆಲವು.

ಕೇರಳದ ವ್ಯಾವಹಾರಿಕ ಕನ್ನಡದ ಹಾಗೂ ಮೇಲೆ ಹೇಳಿದ ಎಲ್ಲ ಸಾಮಾಜಿಕ ಪ್ರಭೇದಗಳ ಸರಿಯಾದ ಅಭ್ಯಾಸ ನಡೆಯಬೇಕು. ಆಗಷ್ಟೇ ಕನ್ನಡ ಭಾಷೆಯ ಎಷ್ಟೋ ವೈಶಿಷ್ಟ್ಯಗಳು ಬೆಳಕಿಗೆ ಬರಲು ಸಾಧ್ಯವಾದೀತು; ಕನ್ನಡ ಭಾಷಾವಿಜ್ಞಾನ ಶ್ರೀಮಂತವಾದೀತು.

ಈ ಎಲ್ಲ ಅಧ್ಯಯನಗಳಿಂದ ತಿಳಿದುಬರುವ ಭಾಷಾ ಸಂಗತಿ ಎಂದರೆ ಕರ್ನಾಟಕದಲ್ಲಿ ಕನ್ನಡ ಮನೆಮಾತಾಗಿರುವ ಹೊಲೆಮಾದಿಗರ ಕನ್ನಡದ ರಚನೆ ಮತ್ತು ಚಹರೆಯನ್ನು ಉಳಿಸಿಕೊಂಡಿದೆ ಎಂದು ತಿಳಿದುಬರುತ್ತದೆ. ಮಾಹಿತಿಯ ಕೊರತೆಯಿಂದ ನನ್ನ ಗಮನಕ್ಕೆ ಬಂದಿರುವ ಅಧ್ಯಯನಗಳನ್ನು ಮಾತ್ರ ದಾಖಲಿಸಿದ್ದೇನೆ. ಇನ್ನೂ ಹೆಚ್ಚು ಹೆಚ್ಚು ಸಂಶೋಧನೆಗಳು ಆಗಬೇಕಿದೆ. ಆಗ ಆದಾಗ ಮಾತ್ರ ಕರ್ನಾಟಕದಲ್ಲಿ ಸಮಗ್ರ ದಲಿತರ ಭಾಷೆಯ ಯೋಜನೆಯೊಂದನ್ನು ರೂಪಿಸಲು ಸಾಧ್ಯ.

ಒಟ್ಟಾರೆ ಇಲ್ಲಿಯವರೆಗೆ ಒಂದು ಕಡೆ ಇಷ್ಟು ವಿವಿಧ ಮಾದರಿಯ ಲೇಖನಗಳು ಒಂದೇ ಸಮುದಾಯದ ಭಾಷೆ ಕುರಿತು ಚರ್ಚೆ ಮಾಡಿದ್ದು ಇಲ್ಲ. ಇಲ್ಲಿಯೂ ಪರಿಪೂರ್ಣವಾಗಿದೆ ಎಂದು ಹೇಳಲಾರೆ. ಇಂತಹ ಅಧ್ಯಯನವೊಂದು ಕನ್ನಡದಲ್ಲಿ ಆರಂಭವಾಗಬೇಕು ಎಂಬ ಇಚ್ಛೆಯಿಂದ ಶುರು ಮಾಡಲಾಗಿದೆ. ಈ ಕೃತಿಯಿಂದ ಈಗಿರುವ ಕೊರತೆ ಸ್ವಲ್ಪ ಮಟ್ಟಿಗಾದರೂ ನಿವಾರಣೆ ಆಗುತ್ತದೆಂಬ ಆಶಾಭಾವನೆ ನನ್ನದು. ಭಾಷೆಯನ್ನು ಬಳಸುವ ಸಾಮಾಜಿಕ ಅಪೇಕ್ಷೆಗಳು ಬದಲಾದಂತೆ ಭಾಷೆಯಲ್ಲಿನ ಬಳಕೆ ಶ್ರಮ ಬದಲಾಗುತ್ತದೆ. ಇದು ಮೊದಲ ಪ್ರಯತ್ನ. ಈ ಕೃತಿಯಿಂದ ಕನ್ನಡಿಗರಿಗೆ ಸಿಗುವ ಅನುಭವ ಇನ್ನೂ ಉತ್ತಮವಾದ ರಚನೆಗೆ ನಾಂದಿಯಾಗುತ್ತದೆಂದು ಆಶಿಸುತ್ತೇನೆ.

– ಪಿ.ಮಹಾದೇವಯ್ಯ