ದಲಿತ ಸೂಚಕ ಭಾಷೆ ಅಥವಾ ಭಾಷೆಯು ದಲಿತ ಸೂಚಕ ಹೇಗೆ?

ದಲಿತರೆಂದರೆ ಅಸ್ಪೃಶ್ಯರೆಂದು ಗುರುತಿಸಲ್ಪಟ್ಟಿರುವ ಜಾತಿಗಳನ್ನು ಒಳಗೊಂಡು ಅಷ್ಟೆ ಪ್ರಮಾಣದ ಅಪಮಾನ ಮುತ್ತು ತುಳಿತಕ್ಕೆ ಒಳಪಟ್ಟ ಕರ್ನಾಟಕದ ಶೋಷಿತ ಜಾತಿಗಳು ಎಂಬುದಾಗಿ ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ದಲಿತ ಭಾಷೆಯನ್ನು ಸಾಮಾಜಿಕ ಶ್ರೇಣಿಯಲ್ಲಿ ಅತ್ಯಂತ ಕೆಳಸ್ಥರದಲ್ಲಿರುವ ಕನ್ನಡ ಮನೆಮಾತಾಗಿರುವ ಅಸ್ಪೃಶ್ಯ ಜಾತಿಗಳ ಜನರಾದ ಹೊಲೆಮಾದಿಗರ ಕನ್ನಡದ ರಚನೆಯನ್ನು (ಕೆಲವು ಪ್ರದೇಶದ)ಮಾತ್ರ ಕುರಿತು ಚರ್ಚಿಸುವ ಪ್ರಯತ್ನ ಮಾಡಲಾಗಿದೆ.

ಈಗಾಗಲೇ ದಲಿತ ಸೂಚಕ ಪರಿಭಾಷೆಯೊಂದು ಬಳಕೆಯಲ್ಲಿದೆ. ನಮ್ಮ ಸಾಮಾಜಿಕ ವ್ಯವಸ್ಥೆಯೊಳಗಡೆ ಸಮಾಜ ಸೂಚಕ ಪರಿಭಾಷೆಗಳು ಬೇರೆ ಬೇರೆ ಆಗಿ ಬಳಕೆಯಲ್ಲಿವೆ. ನಮ್ಮ ಕನ್ನಡ ದಿನ ಪತ್ರಿಕೆಗಳು “ದಲಿತ” ಎಂಬ ಗುಣವಾಚಕ ಪದವನ್ನು ‘ಎ’ ಕಾರಾಂತಗೊಳಿಸಿ “ದಲಿತೆ” ಎಂದು ನಾಮಪದವನ್ನಾಗಿ ಬಳಕೆ ಮಾಡಿವೆ. ಮುಂದುವರಿದು ‘ದಲಿತ’ ಪದಕ್ಕೆ ವಿರುದ್ಧಾರ್ಥಕವಾಗಿ ‘ಅದಲಿತ’ ಎಂದೂ ಬಳಕೆ ಮಾಡಲಾಗಿದೆ. (ದಿನದಿನ: ೩, ಕನ್ನಡ ಭಾಷಾಧ್ಯಯನ ವಿಭಾಗ, ಕನ್ನಡ ವಿ.ವಿ.ಹಂಪಿ) ನಮ್ಮ ಪತ್ರಿಕೆಯವರು ಹೊಸ ಹೊಸ ಪದಗಳನ್ನು ಪ್ರಯೋಗ ಮಾಡುತ್ತಿರವುದು ಬಳಕೆಯನ್ನು ಸೂಕ್ಷ್ಮವಾಗಿ ಗ್ರಹಿಸುವವರಿಗೆ ತಿಳಿಯುತ್ತದೆ. ಅಂದರೆ ಒಂದು ಹೊಸ ಪದ ಸುಮ್ಮನೆ ರಚನೆ ಆಗುವುದಿಲ್ಲ. ಅದಕ್ಕೊಂದು ನಿಯಮವನ್ನೇ ಆಧರಿಸಿ ಬಳಕೆ ಮಾಡುತ್ತಿರುತ್ತಾರೆ. ಇನ್ನೂ ಕೆಲವು ಸಂದರ್ಭದಲ್ಲಿ ನಿಯಮ ಮೀರಿ ರಚನೆ ಮಾಡುತ್ತಿರುತ್ತಾರೆ. ಇಲ್ಲಿ ‘ದಲಿತ’ ಪದವನ್ನು ಪುಲ್ಲಿಂಗ ಸೂಚಕ ಪದವೆಂದು ತಿಳಿದು ಅದಕ್ಕೆ ವಿರುದ್ಧವಾಗಿ ಸ್ತ್ರೀಲಿಂಗ ಸೂಚಕ ಪದವನ್ನಾಗಿ ‘ದಲಿತೆ’ ಪದವನ್ನು ಬಳಕೆ ಮಾಡಲಾಗಿದೆ. ಈ ರಚನೆಯ ಹಿಂದೆ ಸಾದೃಶ್ಯತೆ ಕೆಲಸ ಮಾಡಿಲ್ಲ.

ಕನ್ನಡದಲ್ಲಿ ಲಿಂಗಸೂಚಕ ಪದಗಳನ್ನು ವರ್ಗೀಕರಣ ಮಾಡುವ ಕ್ರಮವೊಂದಿದೆ ಅದು ‘ಅ’ ಕಾರಂತ ಪದಗಳೆಲ್ಲವೂ ಪುಲ್ಲಿಂಗ. ಅಲ್ಲದೆ ‘ಇ’ ಕಾರಂತ ಮತ್ತು ‘ಎ’ ಕಾರಾಂತ ಪದಗಳೆಲ್ಲವೂ ಸ್ತ್ರೀಲಿಂಗ ಎಂಬ ವಾದವೊಂದು ಇದೆ. ಬಹುಶಃ ‘ದಲಿತ’ ಮತ್ತು ‘ದಲಿತೆ’ ಪದಗಳನ್ನು ಈ ಹಿನ್ನೆಲೆಯಿಂದ ಬಳಕೆ ಮಾಡಿರಬಹುದು.

ಕನ್ನಡದಲ್ಲಿ ‘ಚಿಂತಕ’ ‘ಚಿಂತಕಿ’ ಪದಗಳು ಲಿಂಗಸೂಚಕವಾಗಿಯೂ ಸಾಹಿತಿ ಪದವು ಸಾಮಾನ್ಯ ಅರ್ಥದಲ್ಲಿಯೂ ಬಳಕೆಯಲ್ಲಿದೆ. “ಮಹಿಳೆ” ಸ್ತ್ರೀ ಸೂಚಕವಾಗಿದೆ. ಈ ಪದಗಳ ಅದಿ ಭಾಗಕ್ಕೆ ‘ದಲಿತ’ ಪದವನ್ನು ಸೇರಿಸಿದಾಗ ದಲಿತ ಚಿಂತಕ, ದಲಿತ ಚಿಂತಕಿ, ದಲಿತ ಸಾಹಿತಿ, ದಲಿತ ಮಹಿಳೆ ಎಂದು ಒಂದು ನಿರ್ದಿಷ್ಟ ವರ್ಗವನ್ನು ಸೂಚಿಸುತ್ತದೆ. ದಲಿತ ಪುರುಷ ಪದ ಬಳಕೆಯಲ್ಲಿ ಇದ್ದಂತಿಲ್ಲ. “ದಲಿತ ಮಹಿಳೆ” ಹೆಚ್ಚು ಬಳಕೆಯಲ್ಲಿದೆ. ಎಡಗೈ ಮತ್ತು ಬಲಗೈ ಪದಗಳು ಮನುಷ್ಯನ ಪ್ರಧಾನ ಅಂಗಗಳು. ಇವು ಕರ್ನಾಟಕದಲ್ಲಿ ಒಂದ ನಿರ್ದಿಷ್ಟ ಸಾಮಾಜಿಕ ವರ್ಗವನ್ನು ಸೂಚಿಸುವ ಪದಗಳಾಗಿ ಬಳಕೆಯಲ್ಲಿವೆ. ಎಡಗೈ ಎಂದರೆ ‘ಮಾದಿಗ’ ಎಂತಲೂ ಬಲಗೈ ಎಂದರೆ ‘ಹೊಲೆಯ’ ಎಂತಲೂ ಬಳಕೆಯಲ್ಲಿದೆ.

ಇಂಗ್ಲಿಶಿನ’ಏಕೆ’ ಪದದ ವಿಸ್ತೃರೂಪ Adi Karnataka ಎಂದು. ಇದು ನಮ್ಮ ಗ್ರಾಮೀಣ ಪ್ರದೇಶದ ಕನ್ನಡಿಗರ ಮಾತಿನಲ್ಲಿ ತದ್ಭೀಕರಣ ಹೊಂದಿ ‘ಯೆಕೆಸು’ ಎಂದು ಉಚ್ಚಾರಣೆಯಲ್ಲಿದೆ. ಅಂದರೆ ಭಾಷೆಯಲ್ಲಿ ವ್ಯಕ್ತವಾಗುವ ಪದಗಳು ಸಾಮಾಜಿಕ ಸೂಚಕವಾಗಿ ಬಳಕೆಯಲ್ಲಿದೆ ಎಂದಾಯ್ತು.

ದಲಿತರಿಗೆ ಒಂದು ಸಮಾಜ ಇರುವ ಹಾಗೆ ಒಂದು ನಿರ್ದಿಷ್ಟ ಸಂಸ್ಕೃತಿಯೂ ಇದೆ. ಅದೇ ರೀತಿ ಅವರಿಗೊಂದು ಭಾಷೆಯೂ ಇದೆಯೇ ಎಂಬುದನ್ನು ಶೋಧಿಸುವ ಜರೂರು ಇಂದು ಇದೆ. ಕರ್ನಾಟಕದಲ್ಲಿರುವ ಹೊಲೆಮಾದಿಗರು ಒಂದೇ ಪ್ರದೇಶದಲ್ಲಿ ವಾಸಿಸುತ್ತಿರುವುದಿಲ್ಲ. ಅದೇ ರೀತಿ ಒಂದೇ ಬಗೆಯ ಕನ್ನಡವನ್ನು ಮಾತನಾಡುವುದಿಲ್ಲ. ಪ್ರಾದೇಶಿಕವಾಗಿ ಬೇರೆ ಬೇರೆ ಆಗಿವೆ. ಅಂತಹ ಬೇರೆ ಬೇರೆ ಕೆಲವು ಮಾದರಿಗಳನ್ನು ಒಂದು ಕಡೆ ದಾಖಲಿಸುವ ಪ್ರಯತ್ನ ಮಾಡಲಾಗಿದೆ.

ಹೊಲೆಮಾದಿಗರ ಭಾಷೆಯನ್ನು ನಿರ್ದಿಷ್ಟವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಸರಳವಾಗಿ ದಲಿತರಾಡುವ ಭಾಷೆಯನ್ನು ದಲಿತ ಭಾಷೆ ಎಂದು ಹೇಳಬಹುದು. ಕರ್ನಾಟಕದಲ್ಲಿ ಹೊಲೆಮಾದಿಗರು ಮನೆ ವಲಯದಲ್ಲಿ ಬಳಸುವ ಕನ್ನಡವನ್ನು ಅಸ್ಪೃಶ್ಯರು ಬಳಸುವ ಕನ್ನಡವೆಂದು ಹೇಳಬಹುದು. ಹೊಲೆಮಾದಿಗರು ಬಳಸುವ ಕನ್ನಡ ಅವರ ಚಹರೆಯಾಗಿದ್ದು ಅವುಗಳನ್ನು ವಿವಿಧ ವಿದ್ವಾಂಸರು ಧ್ವನಿರಚನೆ ಮತ್ತು ಪದರಚನೆ (ವ್ಯಾಕರಣ) ಮುಂತಾದ ಭಾಷಿಕ ಮಾದರಿಗಳ ಮೂಲಕ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಈ ಮಾದರಿ ಕನ್ನಡವನ್ನು ಅಲಕ್ಷಿತ ಹೊಲೆಮಾದಿಗರು ಆಡುವ ಕನ್ನಡವೆಂದು ಪರಿಗಣಿಸಲಾಗಿದೆ. ಅಲಕ್ಷಿತ ಗ್ರಾಮೀಣ ಪ್ರದೇಶದವರೆಲ್ಲ ಒಂದೇ ಮಾದರಿ ಕನ್ನಡವನ್ನು ಬಳಕೆ ಮಾಡಲಾಗುವುದಿಲ್ಲ. ಅವರವರ ಸಾಮಾಜಿಕ ಪರಿಸರಕ್ಕೆ ನಿರ್ದಿಷ್ಟವಾಗಿ ಬಳಕೆಯಲ್ಲಿರುವ ಪದಗಳು ಆಯಾ ಸಾಮಾಜಿಕ ವರ್ಗಗಳ ಪರಿಭಾಷೆಗಳಾಗಿ ಬಳಕೆಯಲ್ಲಿವೆ. ಅದೇ ರೀತಿ ಕರ್ನಾಟಕದಲ್ಲಿರುವ ಹೊಲೆಮಾದಿಗರಿಗೂ ಒಂದು ನಿರ್ದಿಷ್ಟವಾದ ಭಾಷೆಯ ‘ಚಹರೆ’ ಇದೆ ಎಂಬುದು ಈ ಕೃತಿಯಿಂದ ತಿಳಿದುಬರುತ್ತದೆ. ದಲಿತರು ತಮಟೆಯನ್ನು ಬಿಟ್ಟಿಯಾಗಿ ಬಾರಿಸುವುದು ತಲೆತಲಾಂತರದಿಂದ ನಡೆದು ಬಂದಿದೆ. ಜತೆಗೆ ಅದೊಂದು ವೃತ್ತಿಯಾಗಿತ್ತು. ಒಂದು ವೇಳೆ ತಮಟೆ ಬಡಿಯುವುದನ್ನು ನಿರಾಕರಿಸಿದರೆ ಅವರಿಗೆ ಬಹಿಷ್ಕಾರ ಹಾಕಿರುವ ನಿದರ್ಶನಗಳು ನಮ್ಮ ಚರಿತ್ರೆಯಲ್ಲಿ ದಾಖಲಾಗಿವೆ. ಆ ಬಹಿಷ್ಕಾರ ಎಷ್ಟರ ಎಷ್ಟರಮಟ್ಟಿಗೆ ಎಂದರೆ ಅಂತಹವರನ್ನು ಚರ್ಮ ಸುಲಿಯುವ ಮಟ್ಟಿಗೂ ನಡೆದಿದೆ. ಎಪ್ಪತ್ತರ ದಶಕದಲ್ಲಿ ಸಲಿತ ಸಂಘರ್ಷ ಸಮಿತಿ ಆರಂಭವಾದ ಮೇಲೆ, ತಮಟೆ ಬಡಿಯುವುದನ್ನು ನಿರಾಕರಿಸಿತು. ಇದರಿಂದ ಅನೇಕ ಕಡೆ ದಲಿತರು ದೌರ್ಜನ್ಯಕ್ಕೆ ಒಳಗಾಗಿರುವ ನಿರ್ದಶನಗಳೂ ನಡೆದಿವೆ. ಇದಾದ ಮೂವತ್ತು ವರ್ಷಗಳಲ್ಲಿ ದಲಿತ ಸಂಘಟನೆಗಳ ಪ್ರಭಾವದಿಂದ ತಮಟೆ ಬಡಿಯುವ ಪದ್ಧತಿಯಿಂದ ಕಾರಣಾಂತರಗಳಿಂದ ಸ್ವತಂತ್ರರಾದರು. ನಂತರದ ದಿನಗಳಲ್ಲಿ ‘ತಮಟೆ‘ಒಂದು ಕಲಾ ವಾದ್ಯವಾಯಿತು. ಮೊದಲು ತಮಟೆ ಬಡಿಯುವುದನ್ನು ಬಹಿಷ್ಕರಿಸಿದ ಸಂಘಟನೆಗಳು ತಮ್ಮ ಸ್ಥಾನಮಾನದ, ಸಂಕೇತದ, ಚಹರೆಯನ್ನಾಗಿ ಘೋಷಿಸಿಕೊಂಡರು. ಇಂದು ತಮಟೆ ಬಡಿಯುವುದು ಸ್ವಾಭಿಮಾನದ ಸಂಕೇತವಾಗಿ ಮೊಳಗುತ್ತಿದೆ. ಈ ವಿಚಾರವನ್ನು ಈ ನಾಡಿನ ಚಿಂತಕರಾದ ದೇವನೂರು ಮಹಾದೇವ ಅವರು “ಪ್ರತಿಭಾನ್ವೇಷಣೆಗಾಗಿ ಮೀಸಲಾತಿ” ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈ ತಮಟೆಯ ಕತೆಯನ್ನೇ ಕನ್ನಡ ಭಾಷೆಯಲ್ಲಿ ದಲಿತರ ಕನ್ನಡದ ಉಚ್ಚಾರಣೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಧ್ವನಿಗಳಿಗೆ ಅನ್ವಯಿಸಿ ನೋಡಬೇಕಾಗಿದೆ. ಆರಂಭದಲ್ಲಿ ದಲಿತರು ತಮ್ಮ ಕನ್ನಡದಲ್ಲಿ ಸ, ಶ ಮತ್ತು ‘ಷ’ ಕಾರಗಳ ನಡುವೆ ಅಭೇದ ತೋರುವುದು. ಪದಾದಿಯಲ್ಲಿ ಹಕಾರವನ್ನು ಲೋಪ, ‘ಋ’ ಕಾರಕ್ಕೆ ‘ರು’ ಕಾರ ಬಳಕೆ ಹಾಗೂ ಮಹಾಪ್ರಾಣಗಳನ್ನು ಅಲ್ಪ ಪ್ರಾಣಗಳನ್ನಾಗಿ ಉಚ್ಚರಿಸುವುದು. ಲಜ್ಜೆಯ ವಿಷಯವಾಗಿತ್ತು. ಆದರೆ ಇಂದು ಹೆಮ್ಮೆಯ ವಿಷಯವಾಗಿದೆ. ಅಂದರೆ ದಲಿತರು ತಾವು ಬಳಸುತ್ತಿರುವ ಕನ್ನಡದಲ್ಲಿ ಮಾಡುವ ಈ ವ್ಯತ್ಯಾಸಗಳನ್ನು ನಮ್ಮ ಭಾಷೆಯ ಲಕ್ಷಣಗಳೆಂದು ಭಾವಿಸಿದಂತಿದೆ. ಅದು ಇಂದು ದಲಿತ ಕನ್ನಡದ ಭಾಷೆಯ ಚಹರೆಯೂ ಆಗಿದೆ.

ದಲಿತರು ಮಾತನಾಡುತ್ತಿರುವ ಕನ್ನಡ ತಪ್ಪು ಅಥವಾ ದೋಷಪೂರಿತವಾಗಿದೆ ಎನ್ನುವದಾದರೆ ದಲಿತರು ಯಾವ ಮಾದರಿಯ ಕನ್ನಡವನ್ನು ಅನುಕರಿಸಬೇಕು? ಸಂಸ್ಕೃತ ಭೂಯಿಷ್ಟವಾದ ಕನ್ನಡವನ್ನು ಪ್ರಮಾಣ ಕನ್ನಡವೆಂದು ಪರಿಗಣಿಸಿ ಇದನ್ನು ನೀವೆಲ್ಲ ಬಳಸಬೇಕು ಎಂಬ ಒತ್ತಾಯವೊಂದು ಕನ್ನಡದಲ್ಲಿ ಕೆಲಸ ಮಾಡುತ್ತಿದೆ ಎಂದೆನಿಸುತ್ತದೆ. ಹಾಗದರೆ ದಲಿತ ಸಮುದಾಯ ಮಾತನಾಡುತ್ತಿರುವ ಕನ್ನಡ ಎಂತಹದು. ದಲಿತರು ಬಳಕೆ ಮಾಡುತ್ತಿರುವ ಕನ್ನಡವನ್ನು ವೈಶಿಷ್ಟ್ಯ ಎಂದು ಪರಿಗಣಿಸದೆ ತರತಮ ಭಾವದಿಂದ ನೋಡುವುದು ಸರಿಯಲ್ಲ ಎಂದೆನಿಸುತ್ತದೆ. ಬಹುಸಂಖ್ಯಾತರು ಆಡುವ ಕನ್ನಡಕ್ಕೆ ದಲಿತರೆ ಏಕೆ ಪಲ್ಲಟವಾಗಬಾರದು ಎಂದು ಕೆಲವು ವಿದ್ವಾಂಸರುಗಳು ಅಭಿಪ್ರಾಯಪಡುತ್ತಾರೆ. ಸಮಸ್ಯೆ ಇರುವುದು ಇದು ಬಹುಸಂಖ್ಯಾತರಾಡುವ ಕನ್ನಡ, ಇದು ಅಲ್ಪಸಂಖ್ಯಾತರಾಡುವ ಕನ್ನಡ ಎಂದು ವರ್ಗೀಕರಿಸುವುದಲ್ಲ. ಪ್ರತಿಯೊಬ್ಬರೂ ನಿಜ ನೆಲದ ಕನ್ನಡವನ್ನು ಬಳಸಬೇಕೆಂಬುದು ಇಲ್ಲಿ ಅತಿ ಮುಖ್ಯವಾದ ಅಂಶ.

ಸಾಮಾಜಿಕ ಅಂತಕ್ಕೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿರುವಾಗೆ ಭಾಷೆಯೂ ಕಾರಣವಾಗಿದೆ ಎಂದೆನಿಸುತ್ತದೆ. ಈ ಹಿನ್ನೆಲೆಯಿಂದ ದಲಿತರ ಭಾಷೆಯಆಯ್ಕೆಯನ್ನು ಕುರಿತು ಇಂದು ಚರ್ಚೆಯಾಗಬೇಕಿದೆ. ಕನ್ನಡ ಭಾಷೆ ದಲಿತರನ್ನು ಹೇಗೆ ನೋಡುತ್ತಿದೆ. ಕನ್ನಡ ಭಾಷೆಯಲ್ಲಿ ದಲಿತಪರ ಪ್ರತಿನಿಧೀಕರಣ ಹೇಗೆ? ದಲಿತರು ಮತ್ತು ಕನ್ನಡ ಭಾಷೆ ಸಂಬಂಧ ಎಂತಹದು ಎಂಬುದನ್ನು ಕುರಿತು ಚಿಂತಿಸಬೇಕಾಗಿದೆ. ಕೆಲವು ಸಂಪ್ರದಾಯವಾದಿಗಳಿಗೆ ದಲಿತರು ಮಾತನಾಡುತ್ತಿರುವ ಕನ್ನಡವನ್ನು ಬದಲಾವಣೆ ಮಾಡಿಕೊಳ್ಳಬೇಕು ಅಥವಾ ಕಳೆದುಕೊಳ್ಳಬೇಕು ಎಂಬ ಮನಸಿದೆ. ಇದಕ್ಕೆ ವಿರುದ್ಧವಾಗಿ ದಲಿತರು ಇಂದು ತಾವು ಮಾತನಾಡುವ ಕನ್ನಡವನ್ನು ಸಂರಕ್ಷಿಸಿಕೊಳ್ಳಬೇಕಾದ ತುರ್ತಿದೆ. ದಲಿತರು ತಮ್ಮ ದೇಸಿ ಜ್ಞಾನ ಸಂಪತ್ತನ್ನು ಹುದುಗಿಸಿಕೊಂಡಿರುವ ಹಾಗೆ ಅವರ ಭಾಷೆಯ ಚಹರೆಯನ್ನು ಉಳಿಸಿಕೊಳ್ಳಬೇಕಿದೆ. ಅಂದರೆ ದಲಿತರು ಸಾಂಸ್ಕೃತಿಕ ಚಹರೆಯಾಗಿ ‘ತಮಟೆ’ಯನ್ನು ಸಂರಕ್ಷಿಕೊಂಡಿರುವಾಗೆ ಅವರಾಡುವ ವ್ಯವಹಾರಿಕ ಕನ್ನಡದ ರಚನೆಯನ್ನು ಚಹರೆಯಾಗಿ ಉಳಿಸಿಕೊಳ್ಳಬೇಕಾಗಿದೆ. ಆ ಹಿನ್ನೆಲೆಯಿಂದ ಸಮಕಾಲೀನ ಸಂದರ್ಭದಲ್ಲಿ ದಲಿತ ಸಮುದಾಯಗಳ (ಹೊಲೆಮಾದಿಗರ) ಭಾಷೆಯ ಭವಿಷ್ಯವನ್ನು ರೂಪಿಸುವ ಸಾಧ್ಯತೆಯನ್ನು ಕುರಿತು ಚರ್ಚಿಸುವುದು ಜರೂರಾಗಿದೆ. ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏಕಭಾಷಿಕವಾಗಿದ್ದ ದಲಿತರು ಇಂದು ಅಂದರೆ ಜಾಗತಿಕ ಸಂದರ್ಭದಲ್ಲಿ ದ್ವಿಭಾಷಿಕ ಸಮುದಾಯದತ್ತ ಒಲವು ತೋರಿಸುತ್ತಿರುವುದರ ಹಿಂದಿನ ಭಾಷಾ ರಾಜಕಾರಣದತ್ತ ಚರ್ಚೆ ಆರಂಭಿಸಬೇಕಾಗಿದೆ. ಮನೆಮಾತುಳ್ಳ ಸಮುದಾಯ ಬೇರೆ ಭಾಷೆ ಕಡೆಗೆ ಒಲವು ತೋರಿಸಿದರೆ ಬೇರೆ ಭಾಷೆ ಸಮುದಾಯಗಳು ಕನ್ನಡದತ್ತ ಒಲವು ತೋರಿಸುತ್ತಿರುವುದರ ಹಿಂದಿನ ಭಾಷಾ ರಾಜಕಾರಣವೇನು? ಎಂಬುದನ್ನು ಕುರಿತು ಚರ್ಚಿಸಬೇಕಾಗಿದೆ.

ಪ್ರಸ್ತುತ ಕೃತಿಯಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷಾ ಬಳಕೆಯಲ್ಲಿ ದಲಿತರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಲಾಗಿದೆ. ದಲಿತ ಕನ್ನಡದ ರಚನೆ ಮತ್ತು ಬಳಕೆಯನ್ನು ಎರಡು ನೆಲೆಗಳಲ್ಲಿ ಚರ್ಚಿಸಲಾಗಿದೆ ಅವು ಇಂತಿವೆ.

ಶಿಕ್ಷಣ, ಸಾಮಾಜಿಕ ಸಂವಹನ ಮತ್ತು ಮಾಧ್ಯಮದ ಭಾಷಾಬಳಕೆಯಲ್ಲಿ ದಲಿತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪ್ರಾದೇಶಿಕವಾಗಿ ದಲಿತ ಕನ್ನಡದ ವೈಶಿಷ್ಟ್ಯಗಳು ಅವುಗಳ ವ್ಯತ್ಯಾಸಗಳು.

ಶಿಕ್ಷಣ, ಸಾಮಾಜಿಕ ಸಂವಹನ ಮತ್ತು ಮಾಧ್ಯಮದಲ್ಲಿ ಭಾಷಾ ಬಳಕೆಯನ್ನು ಕುರಿತು ಚರ್ಚೆಯನ್ನು ಮಾಡಲಾಗಿದೆ. ಪ್ರಾದೇಶಿಕವಾಗಿ ದಲಿತ ಕನ್ನಡದ ವೈಶಿಷ್ಟ್ಯಗಳನ್ನು ಕುರಿತು ಚರ್ಚಿಸುವಾಗ ರಚನೆಯನ್ನು ಕುರಿತು ಚರ್ಚಿಸಲಾಗಿದೆ. ಈ ಎರಡು ನೆಲೆಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಿರುವ ವಿವಿಧ ವಿದ್ವಾಂಸರಗಳ ಲೇಖನಗಳನ್ನು ಅವುಗಳ ಆಶಯದ ಹಿನ್ನೆಲೆಯಲ್ಲಿ ಎರಡು ಭಾಗವಾಗಿ ವಿಂಗಡಿಸಬಹುದು.

೧. ಓರಿಯಂಟೇಶನ್ ನೀಡುವ ಮಾದರಿಯಲ್ಲಿ ರಚನೆಗೊಂಡಿರುವವು.

೨. ಮಾಹಿತಿ ಪ್ರಧಾನ ಹಿನ್ನೆಲೆಯಲ್ಲಿ ಅಂದರೆ ಶಿಕ್ಷಿತ ನೆಲೆಯಲ್ಲಿ ರಚನೆಗೊಂಡಿರುವವು. ಓರಿಯಂಟೇಶನ್ ಮಾದರಿಯಲ್ಲಿ ರಚನೆಗೊಂಡಿರುವ ಆಶಯವುಳ್ಳ ಲೇಖನಗಳಲ್ಲಿ ದಲಿತರು ಕನ್ನಡ ಭಾಷೆಯ ಬಳಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳೇನು? ಆ ಸಮಸ್ಯೆಗಳ ವಿರುದ್ಧ ದಲಿತರ ಪ್ರತಿಕ್ರಿಯೆ ಎಂತಹದು ! ದಲಿತರು ತಮ್ಮ ಪ್ರತಿಕ್ರಿಯೆಯಿಂದ ಹೇಗೆ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಕನ್ನಡ ಭಾಷೆಯಲ್ಲಿ ದಲಿತರ ಪ್ರತಿನಿಧೀಕರಣದ ಸ್ವರೂಪ, ದಲಿತ ಅಧ್ಯನಗಳಿಗೆ ಕನ್ನಡ ಭಾಷೆ ಏಕೆ ಮತ್ತು ಹೇಗೆ ಅಧ್ಯಯನ ವಿಷಯವಾಗಬಲ್ಲದು? ಭಾಷೆಯು ದಲಿತ ಸೂಚಕ ಹೇಗೆ? ದಲಿತರಿಗೆ ಕನ್ನಡ ಭಾಷೆಯ ಬಳಕೆಗೆ ಇರುವ ನಿರ್ಭಂದಗಳೇನು? ಅದಕ್ಕೆ ಪ್ರತಿಭಟನೆಯ ಸ್ವರೂಪ ಎಂತಹದ್ದು? ಭಾಷಿಕ ಸಂವಹನದಲ್ಲಿ ದಲಿತರು ಎದುರಿಸುತ್ತಿರುವ ಸಮಸ್ಯೆಗಳೇನು? ಸೃಜನಶೀಲ ಬರಹದಲ್ಲಿ ದಲಿತರ ಪ್ರತಿನಿಧೀಕರಣ ಮತ್ತು ದಲಿತರ ಹಾಗೂ ಕನ್ನಡ ಭಾಷೆಯ ಸಂಬಂಧ ಮುಂತಾದ ಆಯಾಮಗಳಲ್ಲಿ ಚರ್ಚೆ ಮಾಡಲಾಗಿದೆ.

ದಲಿತ ಸಮುದಾಯ ಮತ್ತು ಗ್ರಾಮೀಣ ಸಮುದಾಯಗಳ ಭಾಷಾ ಬಳಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬರದೇ ಇದ್ದರೂ ಕರ್ನಾಟಕದ ಹೊಲೆಯ ಮಾದಿಗರ ಕನ್ನಡದ ರಚನೆ ಮತ್ತು ಬಳಕೆಯಲ್ಲಿ ತಮ್ಮದೇ ಆದ ಭಾಷೆಯ ಚಹರೆಯನ್ನು ಉಳಿಸಿಕೊಂಡಿದೆ. ಈ ಅಂಶವನ್ನು ಹೊಲೆಮಾದಿಗರು ಕನ್ನಡದ ರಚನೆ ಕುರಿತು ಆಗಿರುವ ಅಧ್ಯಯನಗಳಿಂದ ತಿಳಿಯಬಹುದು.

ಕನ್ನಡದ ನೆಲದಲ್ಲಿ ದಲಿತರು ಬಳಸುವ ಕನ್ನಡದ ರಚನೆ ಮತ್ತು ಬಳಕೆಯಲ್ಲಿ ತಾರತಮ್ಯ ನಡೆದಿದ್ದಿಯೇ? ಒಂದು ವೇಳೆ ಈ ರೀತಿ ಭಾಷೆಯ ತಾರತಮ್ಯ ಆಗಿದೆ ಎಂದರೆ ಅದರ ಸ್ವರೂಪ ಎಂತಹದು ಎಂಬುದನ್ನು ಕುರಿತು ಚರ್ಚೆ ಮಾಡಲಾಗಿದೆ. ಸಾಮಾನ್ಯವಾಗಿ ಕನ್ನಡದಲ್ಲಿ ಸಾಮಾಜಿಕ ಪ್ರಭೇದಗಳಲ್ಲಿ ಭಾಷೆಯಲ್ಲಿ ವ್ಯತ್ಯಾಸಗಳು ಸ್ವಚ್ಛಂದ ಪರಿಸರದಲ್ಲಿ ಬಳಕೆಯಲ್ಲಿರುವುದರಿಂದ ಈ ಭಾಗದ ಲೇಖನಗಳು ಹೆಚ್ಚು ಮಾಹಿತಿ ಪ್ರಧಾನವಾಗಿವೆ. ಓರಿಯಂಟೇಶನ್ ಮಾದರಿಯ ಲೇಖನಗಳು ಮತ್ತು ಮಾಹಿತಿ ಪ್ರಧಾನವಾದ ಲೇಖನಗಳು ಬೇರೆ ಬೇರೆ ನೆಲೆಯವು. ಓರಿಯಂಟೇಶನ್ ನೀಡುವ ಮಾದರಿಯ ಲೇಖನಗಳಿಗೆ ಮಾಹಿತಿ ಪ್ರಧಾನ ಅಂಶಗಳು ಅಗತ್ಯ. ಆದರೆ ಮಾಹಿತಿ ಪ್ರಧಾನವಾದ ಲೇಖನಗಳಲ್ಲಿ ಓರಿಯಂಟೇಶನ್ ನೀಡುವ ಅಂಶಗಳು ಇರಬೇಕು ಎಂದು ನಿರೀಕ್ಷಿಸುವಂತಿಲ್ಲ. ಪ್ರಸ್ತುತ ಕೃತಿಯಾದ “ದಲಿತ ಭಾಷೆ ಮತ್ತು ಸಮಾಜ” ಕೃತಿಯಲ್ಲಿ ಓರಿಯಂಟೇಶನ್ ನೀಡುವ ಚಿಂತನೆಯುಳ್ಳ ಲೇಖನಗಳು ಹೆಚ್ಚಿನ ಪ್ರಮಾಣದಲ್ಲಿವೆ. ಹಾಗಾಗಿ ಇದೊಂದು ಅಪರೂಪದ ಮಹತ್ವ ಹೊಂದಿರುವ ಕೃತಿಯಾಗಿದೆ. ಇದರಿಂದ ಉ‌ನ್ನತ ಆಲೋಚನೆಗೆ ದಾರಿ ಮಾಡಿಕೊಡುತ್ತದೆ.

ಶಿಕ್ಷಣ ಸಾಮಾಜಿಕ ಸಂವಹನ ಮತ್ತು ಮಾಧ್ಯಮಗಳಲ್ಲಿ ಬಳಕೆಯಾಗುತ್ತಿರುವ ಕನ್ನಡದ ಸ್ವರೂಪವನ್ನು ಗಮನಿಸಿದಾಗ ಭಾಷೆಗಾಗಿ ಸಾಮಾಜಿಕರೋ ಸಾಮಾಜಿಕರಿಗಾಗಿ ಭಾಷೆಯೋ ಎಂಬ ಅನುಮಾನ ಶುರುವಾಗುತ್ತದೆ. ಈ ಎರಡು ಹೇಳಿಕೆಗಳಲ್ಲಿ ಯಾವುದು ಸರಿ? ಭಾಷೆಗಾಗಿ ಸಾಮಾಜಿಕರು ಎಂದರೆ ಭಾಷೆ ಪ್ರಧಾನ, ಸಾಮಾಜಿಕರು ಗೌಣ ಎಂದಾಗುತ್ತದೆ. ಸಾಮಾಜಿಕರಿಗಾಗಿ ಭಾಷೆ ಎಂದರೆ ಸಾಮಾಜಿಕರು ಪ್ರಧಾನ ಭಾಷೆ ಗೌಡ. ಪರಿಣಾಮಕಾರಿ ಸಾಮಾಜಿಕರ ಸಂವಹನದ ದೃಷ್ಟಿಯಿಂದ ಸಾಮಾಜಿಕರಿಗಾಗಿ ಭಾಷೆ ಇರಬೇಕೆ ವಿನಃ ಭಾಷೆಗಾಗಿ ಸಾಮಾಜಿಕರು ಇರೆಬೇಕಾಗಿಲ್ಲ. ಈ ಅಭಿಪ್ರಾಯವನ್ನು ದಲಿತರು ಮತ್ತು ಕನ್ನಡ ಭಾಷೆ ನಡುವೆ ಎಂತಹ ಸಂಬಂಧವಿದೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಈ ವಿಚಾರವನ್ನು ನೇರವಾಗಿ ದಲಿತರಿಗೆ ಅನ್ವಯಿಸಿ ನೋಡುವುದಾದರೆ ದಲಿತರಿಗಾಗಿ ಕನ್ನಡವೋ ಕನ್ನಡಕ್ಕಾಗಿ ದಲಿತರೋ ಎಂಬ ಪ್ರಶ್ನೆ ನಮ್ಮ ಮುಂದೆ ನಿಲ್ಲುತ್ತದೆ. ಪ್ರಾಚೀನಕಾಲದಿಂದಲೂ ದಲಿತರು ಕನ್ನಡಕ್ಕಾಗಿ ದಲಿತರು ಇರುವ ಹಾಗೆ ದಲಿತರಿಗಾಗಿ ಕನ್ನಡ ಇರಬೇಕು. ಅದು ಹೇಗಿರಬೇಕು ಎಂಬುದನ್ನು ಡಿ.ಎನ್.ಶಂಕರಭಟ್ ಅವರು ಮತ್ತು ಕೆ.ವಿ.ನಾರಾಯಣ ಅವರುಗಳು ತಮ್ಮ ಅಭಿಪ್ರಾಯಗಳನ್ನು ಅಲ್ಲಲ್ಲಿ ಹೇಳುತ್ತಾ ಬಂದಿದ್ದಾರೆ.

ಕನ್ನಡಕ್ಕಾಗಿ ದಲಿತರು ರಕ್ಷಕರಾಗಿ ಕೆಲಸ ಮಾಡಿದ್ದಾರೆ. ಅಂದ ಮೇಲೆ ದಲಿತರಿಗಾಗಿ ಕನ್ನಡ ಇರಬೇಕಾದರೆ ಕನ್ನಡದ ಉಚ್ಚಾರಣೆ ಮತ್ತು ಬರಹದ ನಡುವೆ ಇರುವ ಅಂತರವನ್ನು ಇಲ್ಲದಂತೆ ಮಾಡುವ ಸಾಧ್ಯತೆ ಕುರಿತು ಚಿಂತಿಸಬೇಕಾಗಿದೆ. ಒಂದು ವೇಳೆ ಹೀಗೆ ಮಾಡಿದರೆ ಶಾಲಾ ಶಿಕ್ಷಣದಲ್ಲಿ ದಲಿತ ಮಕ್ಕಳು ಸುಲಭವಾಗಿ ಕನ್ನಡದಲ್ಲಿ ಪಾಂಡಿತ್ಯವನ್ನುಗಳಿಸಬಹುದು. ಈಗಿರುವ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲದಂತಾಗಿದೆ. ದಲಿತ ಮಕ್ಕಳ ಮನೆವಲಯದ ಭಾಷೆಗೂ ಶಾಲೆಯಲ್ಲಿ ಬಳಕೆ ಆಗುತ್ತಿರುವ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ಹಿನ್ನೆಲೆಯಿಂದ ದಲಿತ ಮಕ್ಕಳು ಶಾಲೆಯ ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಸುಲಭವಾಗಿ ಕನ್ನಡ ಭಾಷೆಗೆ ತೆರೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಉದಾ:- ನಮ್ಮ ಶಾಲೆಯ ಕನ್ನಡ ಪಠ್ಯ ಪುಸ್ತಕಗಳಲ್ಲಿ ಸಂಧಿ ಕಾರ್ಯ ವಿವರಿಸುವುದಕ್ಕೆ ಗಂಗೋರ್ಮಿ, ಮೇಘೌಘ, ಮಹೌಜ, ನದಡ್ಡಮರುಕ, ಲಸತ್ಪೋಡಕ, ಆಯಷ್ಟಂಕ, ಛಗ, ಖಗ, ಅಜ, ಮೊದಲಾದ ಕನ್ನಡ ದಿನನಿತ್ಯ ಬಳಕೆಯಲ್ಲಿ ಇಲ್ಲದ ಪದಗಳನ್ನು ಕಲಿಯಬೇಕೆಂದರೆ ತುಂಬಾ ಕಷ್ಟದ ಕೆಲಸ. ಒಂದು ವೇಳೆ ಕಂಠಪಾಠ ಮಾಡುವುದರ ಮೂಲಕ ಕಲಿತರೂ ಅವು ನೆನಪಿನಲ್ಲಿ ಉಳಿಯಲಾರವು. ಅದೇ ಮನೆಯಲ್ಲಿ ಸಂಸ್ಕೃತ ಭಾಷೆ ಬಳಕೆ ಮಾಡುವ ಮಕ್ಕಳಿಗೆ ಅದು ಕಷ್ಟವಾಗುವುದಿಲ್ಲ ಅಥವಾ ಮನೆಯ ವಲಯದಲ್ಲಿ ಶಿಕ್ಷಣದಲ್ಲಿ ಬಳಕೆಯಾಗುತ್ತಿರುವ ಭಾಷೆಗೆ ಸಮೀಪವಾಗಿರುವ ಮಕ್ಕಳಿಗೂ ಕಷ್ಟವಾಗಲಾರದು. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಡಿ.ಎನ್.ಶಂಕರಭಟ್ ಅವರು ಇತ್ತೀಚೆಗೆ ‘ಕನ್ನಡ ಬರಹವನ್ನು ಸರಿಪಡಿಸೋಣ’ ರಂಬ ಉತ್ತಮವಾದ ಕೃತಿಯೊಂದನ್ನು ಪ್ರಕಟಿಸಿದ್ದಾರೆ. ಈ ಕೃತಿಯಲ್ಲಿ ದಲಿತರ ಕನ್ನಡ ಹೇಗಿರಬೇಕು. ದಲಿತ ಮಕ್ಕಳೀಗೆ ಶಾಲೆಯ ಪಠ್ಯಪುಸ್ತಕಗಳಲ್ಲಿ ಬಳಕೆಯಾಗುತ್ತಿರುವ ಕನ್ನಡ ಭಾಷೆ ಏಕೆ ಕಠಿಣವಾಗುತ್ತಿದೆ. ದಲಿತ ಬರಹಗಾರರು ಯಾವ ರೀತಿಯ ಕನ್ನಡವನ್ನು ಬಳಸಬೇಕಾಗಿದೆ ಮುಂತಾದ ಉದ್ದೇಶಗಳನ್ನಿಟ್ಟುಕೊಂಡು ಚರ್ಚಿಸಿದ್ದಾರೆ. ಅವರ ಅಭಿಪ್ರಾಯ ಇಂತಿದೆ. ‘ಜನರು ದೇವಾಲಯಗಳನ್ನು ಮತ್ತು ತಮ್ಮ ಮನೆಗಳನ್ನು ಪ್ರವೇಶಿಸಿದಲ್ಲಿ ನಮ್ಮ ಧರ್ಮವೇ ನಾಶವಾದೀತೆಂದು ಮೇಲ್ವರ್ಗದ ಜನರು ವಾದಿಸುತ್ತಿದ್ದರು. ನಿಜಕ್ಕೂ ಕೆಳವರ್ಗದ ಜನ ಕೆಳವರ್ಗದಲ್ಲಿಯೇ ಅಸ್ಪೃಶ್ಯರಾಗಿರಬೇಕೆಂಬುದೇ ಈ ವಾದದ ಮೂಲ ಉದ್ದೇಶವಾಗಿತ್ತು. ಈವತ್ತಿಗೂ ಹಳ್ಳಿಗಳಲ್ಲಿ ಇದೇ ಧರ್ಮದ ಹೆಸರಿನಲ್ಲಿ ಕೆಳವರ್ಗದ ಜನರನ್ನು ದೂರ ಇರಿಸಲಾಗುತ್ತಿದೆ. ಕನ್ನಡ ಬರಹದಲ್ಲಿ ಬರುವ ಸಂಸ್ಕೃತ ಪದಗಳನ್ನು ಸಂಸ್ಕೃತದಲ್ಲಿರುವಾಗೆ ಬರೆಯಬೇಕು. ಇಲ್ಲವಾದರೆ ನಮ್ಮ ಸಂಸ್ಕೃತಿ ನಷ್ಟವಾದೀತೆಂಬ ವಾದವು ಇದೇ ರೀತಿಯಲ್ಲಿದ್ದಿತು. ಕನ್ನಡ ಬರಹವನ್ನು ಕೆಳವರ್ಗದ ಜನರಿಂದ ದೂರ ಇರಿಸುವ ಮತ್ತು ಇದರ ಮೂಲಕ ಅವರು ಕೆಳವರ್ಗದಲ್ಲೇ ಉಳಿಯುವ ಹಾಗೆ ಮಾಡುವ ಒಂದು ಪ್ರಯತ್ನ ಇರಬೇಕಲ್ಲವೆ?

ಏಕೆಂದರೆ ಸಂಸ್ಕೃತ ಪದಗಳನ್ನು ಸಂಸ್ಕೃತದಲ್ಲಿ ಇರುವ ಹಾಗೆಯೇ ಬರೆಯುವ ಕೆಲಸ ಮೇಲ್ವರ್ಗದ ಮಕ್ಕಳಿಗಿಂತಲೂ ಕೆಳವರ್ಗದ ಮಕ್ಕಳಿಗೆ ಹೆಚ್ಚು ಕಷ್ಟವಾಗುತ್ತದೆ. ಹಾಗಾಗಿ ಈ ನಿರ್ಬಂಧದಿಂದಾಗಿ ಬರಹದಿಂದ ದೂರ ಉಳಿಯುವವರು ಹೆಚ್ಚಾಗಿ ಕೆಳವರ್ಗದ ಮಕ್ಕಳೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.’

ಈ ಮಾದರಿ ಬದಲಾವಣೆಯನ್ನು ದಿಢೀರನೆ ತರುವುದಕ್ಕೆ ಆಗದಿದ್ದರೂ ಅದರ ಸಾಧ್ಯತೆಯನ್ನಾದರೂ ಕುರಿತು ಚರ್ಚೆ ನಡೆದರೆ ಅರ್ಥಪೂರ್ಣವಾಗುತ್ತದೆ. ಏಕೆಂದರೆ ಸುಮಾರು ಒಂದೂವರೆ ಸಾವಿರ ವರ್ಷಗಳಿಂದ ನಂಬಿಕೊಂಡು ಬಂದಿರುವ ಭಾಷಾ ಬಳಕೆ ಮತ್ತು ರಚನೆ ಎಂಬ ಆಚರಣೆಯನ್ನು ಬದಲಾವಣೆ ಮಾಡಲು ಅನೇಕ ಸಂಪ್ರದಾಯವಾದಿಗಳ ವಿರೋಧವಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಈ ದೇಶದಲ್ಲಿ ಅಸ್ಪೃಶ್ಯತೆ, ವರ್ಣಭೇದಗಳಿಗಿಂತ ಭಾಷಾ ಅಸ್ಪೃಶ್ಯತೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ಕರ್ನಾಟಕದಲ್ಲಿರುವ ದಲಿತರಲ್ಲೇ ಕೆಲವರು ಗಡಿ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಅವರು ಅನಿವಾರ್ಯವಾಗಿ ಕನ್ನಡದ ಜತೆಗೆ ತಾವು ವಾಸಿಸುವ ಪ್ರದೇಶದ ಭಾಷೆಯನ್ನು ವ್ಯವಹಾರಿಕವಾಗಿ ಬಳಸುವ ಪರಿಸ್ಥಿತಿ ನಿರ್ಮಾನವಾಗಿದೆ. ಅಂತಹ ದ್ವಿಭಾಷಿಕ ಪರಿಸರದ (ಕನ್ನಡ ಮತ್ತು ತೆಲುಗು, ಕನ್ನಡ ಮತ್ತು ತಮಿಳು, ಕನ್ನಡ ಮತ್ತು ಕೊಂಕಿಣಿ, ಕನ್ನಡ ಮತ್ತು ಉರ್ದು, ಕನ್ನಡ ಮತ್ತು ಮರಾಠಿ) ದಲಿತರು ಮತ್ತು ದಲಿತರ ಮಕ್ಕಳು ಯಾವ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಚರ್ಚಿಸಬೇಕಾಗಿದೆ. ಪ್ರಸ್ತುತ ಕೃತಿಯಲ್ಲಿ ಕನ್ನಡ ಮತ್ತು ತೆಲುಗು ಹಾಗೂ ಕನ್ನಡ ಮತ್ತು ಮರಾಠಿ ಪರಿಸರದಲ್ಲಿ ದಲಿತರು ಮತ್ತು ದಲಿತ ಮಕ್ಕಳ ಕನ್ನಡದ ಕಲಿಕೆ ಹಾಗೂ ಬಳಕೆಯನ್ನು ಕುರಿತು ವಿವರಿಸಲಾಗಿದೆ. ಈ ಮಾದರಿಯನ್ನು ಕುರಿತು ಇನ್ನೂ ತಲಸ್ಪರ್ಶಿ ಅಧ್ಯಯನ ಆಗಬೇಕಿದೆ. ಭಾಷಾ ವಿದ್ವಾಂಸರುಗಳ ಕೊರತೆಯಿಂದ ಈ ಭಾಗದಲ್ಲಿ ಹೆಚ್ಚು ಲೇಖನಗಳನ್ನು ಮಂಡಿಸುವುದಕ್ಕೆ ಸಾಧ್ಯವಾಗಿಲ್ಲ.

ಸಾಮಾಜಿಕ ಸಂವಹನದಲ್ಲಿ ಭಾಷಾ ಬಳಕೆಯನ್ನು ಕುರಿತು ಕೆಲವರು ತಮ್ಮ ವಾದವನ್ನು ಆರಂಭದಿಂದಲೂ ಮಂಡಿಸುತ್ತಾ ಬಂದಿದ್ದಾರೆ. ಈ ವಾದವನ್ನು ಮಂಡಿಸುವವರು ಭಾಷೆಯನ್ನು ಬಳಸುವಾಗ ಮತ್ತು ಬರವಣಿಗೆ ಮಾಡುವಾಗ ಅದರ ಶುದ್ಧ ರೂಪವನ್ನು ಮಾತ್ರ ಬಳಸಬೇಕು ಎಂಬುದು. ಡಿ.ಎನ್.ಶಂಕರಭಟ್ ಅವರು ಕರ್ನಾಟಕದಲ್ಲಿರುವ ದಲಿತರೆಲ್ಲರೂ ಒಂದೇ ಮಾದರಿಯ ಕನ್ನಡವನ್ನು ಬಳಕೆ ಮಾಡುವುದಿಲ್ಲ. ಬದಲಾಗಿ ಪ್ರಾದೇಶಿಕವಾಗಿ ಬೇರೆ ಬೇರೆ ಆಗಿವೆ ಎಂಬುದನ್ನು ತಮ್ಮ “ಕನ್ನಡ ಭಾಷೆಯ ಕಲ್ಪಿತ ಚರಿತ್ರೆ”ಯಲ್ಲಿ ನಿದರ್ಶನಗಳ ಸಹಿತ ವಿವರಿಸಿದ್ದಾರೆ.

ಕರ್ನಾಟಕದಲ್ಲಿರುವ ಹೊಲೆಮಾದಿಗರ ಸಾಮಾಜಿಕ ಸಂವಹನದಲ್ಲಿ ಕಾಣಿಸಿಕೊಳ್ಳುತ್ತಿರುವ ಕನ್ನಡದ ಉಚ್ಚಾರಣೆಯಲ್ಲಿನ ವ್ಯತ್ಯಾಸಗಳನ್ನು ಐದು ನೆಲೆಗಳಲ್ಲಿ ವರ್ಗೀಕರಿಸಬಹುದು.

೧. ಮಹಾಪ್ರಾಣಗಳನ್ನು ಅಲ್ಪಪ್ರಾಣವಾಗಿ ಉಚ್ಚರಿಸುವುದು.

೨. ಸ, ಶ ಮತ್ತು ‘ಷ’ ಗಳ ಉಚ್ಚಾರಣೆಯಲ್ಲಿ ಅಭೇದ ತೋರುವುದು.

೩. ಪದಾದಿಯಲ್ಲಿ ‘ಹ’ ಕಾರ ಲೋಪ ಮಾಡುವುದು

೪. ನ ಮತ್ತು ಣ ಧ್ವನಿಗಳ ನಡುವೆ ಅಭೇದ ತೋರವುದು.

೫. ‘ಋ’ ಕಾರಕ್ಕೆ ‘ರು’ ಕಾರ ಬಳಕೆ ಮಾಡುವುದು.

ಈ ಮಾದರಿಯ ಉಚ್ಚಾರಣೆಯಲ್ಲಿರುವ ವ್ಯತ್ಯಾಸಗಳನ್ನು ಭಾಷೆಯ ಅಶುದ್ಧತೆ ಎಂದು ತಿಳಿಯಲಾಗುತ್ತದೆ. ಇದು ಅಶುದ್ಧತೆಯಲ್ಲ, ಹೊಲೆಮಾದಿಗರ ಭಾಷೆಯ ಚಹರೆಯಾಗಿದೆ. ನಿಮ್ಮ ಚಹರೆಯನ್ನು ಕಳೆದುಕೊಳ್ಳದ ಹೊರತು ನಿಮಗೆ ಕನ್ನಡದಲ್ಲಿ ಅಸ್ತಿತ್ವವಿಲ್ಲ ಎಂಬ ವಾದವನ್ನು ಕೆಲವರು ಮಂಡಿಸುತ್ತಾ ಬಂದಿದ್ದಾರೆ. ಇಂತಹವರು ಮೇಲ್ಕಂಡ ವ್ಯತ್ಯಾಸಗಳನ್ನು ದೋಷಗಳೆಂದು ಪರಿಗಣಿಸುವವರು. ನಿಜವಾಗಲೂ ಆರೋಪಗಳನ್ನು ಮಾಡುತ್ತಿರುವವರು ಸರಿಯಾದ ಕನ್ನಡವನ್ನು ಮಾತನಾಡದೇ ಬೇರೊಂದು ಭಾಷೆಯ ಮಾದರಿಗಳನ್ನು ಇದೇ ನಿಜವಾದ ಕನ್ನಡವೆಂದು ನಂಬಿಸಿಕೊಂಡು ಬಂದಿದ್ದಾರೆ. ಈ ವರ್ಗದ ಜನರೇ ಮತ್ತೊಂದು ಅಭಿಪ್ರಾಯವನ್ನು ಹೇಳುತ್ತಾ ಬಂದಿದ್ದಾರೆ. ಅದೇನೆಂದರೆ ಗ್ರಾಮೀಣ ಪ್ರದೇಶದ ಕನ್ನಡಕ್ಕೂ ದಲಿತರು ಮಾತನಾಡುವ ಕನ್ನಡಕ್ಕೂ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸವಿಲ್ಲವೆಂದು ಹೇಳುತ್ತಾರೆ. ಹಾಗಾದರೆ ಇಲ್ಲಿಯವರೆಗೂ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹೊಲೆಮಾದಿಗರ ಕನ್ನಡವನ್ನು ಕುರಿತು ಮಂಡನೆಯಾಗಿರುವ ವಿವರಣಾತ್ಮಕ ಅಧ್ಯಯನಗಳು ಏನನ್ನು ಹೇಳುತ್ತವೆ. ಡಿ.ಎನ್.ಶಂಕರಭಟ್ ಅವರು ತಮ್ಮ “ಕನ್ನಡ ಭಾಷೆಯ ಕಲ್ಪಿತ ಚರಿತ್ರೆ”ಯಲ್ಲಿ ಪ್ರಾದೇಶಿಕವಾಗಿ ಬೇರೆ ಬೇರೆ ಎಂದು ಗುರುತಿಸಿಕೊಂಡಿರುವ ಹೊಲೆಮಾದಿಗರ ಕನ್ನಡದ ಧ್ವನಿರಚನೆಯನ್ನು ಕುರಿತು ಹೇಳಿರುವ ಅಭಿಪ್ರಾಯಗಳನ್ನು ಈ ವಿದ್ವಾಂಸರುಗಳು ಗಮನಿಸಿಲ್ಲವೆ? ವಿದ್ವಾಂಸರುಗಳ ಕೊರತೆಯಿಂದ ಸಮಗ್ರ ಕರ್ನಾಟಕದ ಹೊಲೆಮಾದಿಗರ ಕನ್ನಡದ ರಚನೆಯನ್ನು ರೂಪಿಸಲು ಸಾಧ್ಯವಾಗಿಲ್ಲ ಇದು ಈ ಕೃತಿಯ ಮಿತಿ ಎಂದು ನಂಬಿದ್ದೇನೆ.

ಅಂದರೆ ಶುದ್ಧ ಮತ್ತು ಅಶುದ್ಧ ಎಂಬ ಪರಿಕಲ್ಪನೆಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಮರುಪರಿಶೀಲಿಸಬೇಕಾಗಿದೆ. ಬದಲಾಗುತ್ತಿರುವ, ಸಾಮಾಜಿಕ, ಸಾಂಸ್ಕೃತಿಕ ಜಾಗತಿಕ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಸಂವಹನದ ಬಳಕೆಯನ್ನು ಸೂಕ್ತರೀತಿಯಲ್ಲಿ ನಿರ್ವಹಿಸುವುದು ಹೇಗೆ ಎಂಬುದರ ಬಗೆಗೆ ಚಿಂತಿಸಬೇಕಾಗಿದೆ. ಇದರಿಂದ ದಲಿತ ಕನ್ನಡದ ರಚನೆಯನ್ನು ಮತ್ತಷ್ಟು ಖಚಿತಗೊಳಿಸಿಕೊಂಡಂತೆ ಆಗುತ್ತದೆ ಎಂದು ಭಾವಿಸಿದ್ದೇನೆ.

ಕರ್ನಾಟಕದ ಪತ್ರಿಕಾ ಮಾಧ್ಯಮದಲ್ಲಿ ಪ್ರದಾನ ಪಾತ್ರಗಳಲ್ಲಿ ದಲಿತರು ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಿಲ್ಲ. ಚಲನಚಿತ್ರ ಮಾಧ್ಯಮ ಇದಕ್ಕೆ ಹೊರತಾಗಿಲ್ಲ. ಇದಕ್ಕೆ ಕಾರಣವೇನು? ಇದಕ್ಕೆ ಕಾರಣ ದಲಿತರೇ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಮತ್ತೆ ಕೆಲವರು ಪತ್ರಿಕೆಯಲ್ಲಿ ಬಳಕೆಯಾಗುವ ಭಾಷೆ ಮತ್ತು ದಲಿತರ ಮನೆ ಆವರಣದಲ್ಲಿ ಬಳಕೆಯಾಗುವ ಭಾಷೆಗಳ ನಡುವೆ ಅಂತರ ಹೆಚ್ಚಿದ್ದು ಇವುಗಳ ನಡುವಿನ ಅಂತರ ಕಡಿಮೆ ಮಾಡಿದರೆ ದಲಿತರ ಪ್ರತಿನಿಧೀಕರಣ ಮಾಧ್ಯಮದಲ್ಲಿ ಸಾಧ್ಯ ಎಂದು ಕೆಲವು ಅಭಿಪ್ರಾಯಪಡುತ್ತಾರೆ.

ಪತ್ರಿಕೆ ಮಾಧ್ಯಮದಲ್ಲಿ ಬಳಕೆ ಮಾಡುತ್ತಿರುವ ಭಾಷೆಯನ್ನಾಧರಿಸಿ ಎರಡು ರೀತಿಯ ಭಾಷಾ ಬಳಕೆಯನ್ನು ಗುರುತಿಸಬಹುದು? ದಲಿತರನ್ನು ವಿವರಿಸಲು ಬಳಸುವ ಭಾಷೆ ಅಥವಾ ದಲಿತರನ್ನು ಸೇರಿಕೊಂಡು ದಲಿತರಪರ ಭಾಷಾ ಬಳಕೆ. ಒಂದನೆಯ ಮಾದರಿಯಲ್ಲಿ ಯಾರಾದರೂ ದಲಿತರನ್ನು ಕುರಿತು ಬರವಣಿಗೆ ಮಾಡಬಹುದು. ದಲಿತರೇ ಭಾಷಾ ಬಳಕೆ ಮಾಡುವುದು. ಈ ಮಾದರಿಯಲ್ಲಿ ದಲಿತರೇ ತಮ್ಮ ಬದುಕಿನ ಪ್ರತಿನಿಧೀಕರಣ ಹೇಗೆ ಎಂಬುದನ್ನು ಕುರಿತು ಚಿಂತಿಸುತ್ತಾರೆ ಮತ್ತು ದಲಿತತನ ಹೇಗೆ ತಮ್ಮ ಸಂಕಥನಗಳಲ್ಲಿ ವ್ಯಕ್ತವಾಗಿದೆ ಎಂಬುದನ್ನು ಕುರಿತು ಚರ್ಚಿಸಲಾಗುತ್ತದೆ. ಇಂದು ಪತ್ರಿಕೆಗಳಲ್ಲಿ ದಲಿತ ಸಂವೇದನೆಯುಳ್ಳ ಭಾಷಾ ಬಳಕೆ ಅತ್ಯಗತ್ಯ. ಈ ವಿಷಯವನ್ನು ಪ್ರತಿಯೊಂದು ಕನ್ನಡ ಪತ್ರಿಕೆಗಳು ಪ್ರಾಮಾಣಿಕವಾಗಿ ಮಾಡಬೇಕು ಎಂಬ ವಿಚಾರಗಳು ಮಾಧ್ಯಮ, ದಲಿತರು ಮತ್ತು ಭಾಷೆ ಲೇಖನಗಳಲ್ಲಿ ವ್ಯಕ್ತವಾಗಿದೆ.

ನಮ್ಮ ಪತ್ರಿಕೆಗಳು ದಲಿತರ ಮೇಲಿನ ದೌರ್ಜನ್ಯ, ಸಾಮಾಜಿಕ ನ್ಯಾಯ ಮುಂತಾದ ವಿವರಗಳನ್ನು ಜನಸಾಮಾನ್ಯರಿಗೆ ತಿಳಿಸುವಾಗ ಹೇಗೆ ತಾರತಮ್ಯ ಮಾಡುತ್ತಿದೆ ಎಂಬುದಕ್ಕೆ ಅಂಬೇಡ್ಕರ್ ಪ್ರತಿಮೆಗೆ ಮಧ್ಯಾಭಿಷೇಕ ವರದಿಯಲ್ಲಿನ ಭಾಷಾ ಬಳಕೆಯಲ್ಲಿ ಆಗಿರುವ ತಾರತಮ್ಯವನ್ನು ಕುರಿತು ಡಾ. ಕೆ.ವಿ.ನಾರಾಯಣ ಅವರು ತಮ್ಮ “ಭಾಷೆಯ ಸುತ್ತಮುತ್ತ” ಕೃತಿಯಲ್ಲಿ ಈ ರೀತಿ ವಿಶ್ಲೇಷಣೆ ಮಾಡುತ್ತಾರೆ.

ಅಂಬೇಡ್ಕರ್ ಪ್ರತಿಮೆಗೆ ‘ಮಧ್ಯಾಭಿಷೇಕ’ ಎಂಬ ಶೀರ್ಷಿಕೆಯಡಿಯಲ್ಲಿ ವರದಿಯೊಂದು ‌ಪ್ರಕಟವಾಯಿತು. ಇದರ ಅರ್ಥವೇನು? ಅಭಿಷೇಕ ಮಾಡುವುದಕ್ಕೆ ಮದ್ಯವನ್ನು ಬಳಸುವುದಿಲ್ಲ ಅಥವಾ ಮದ್ಯದಿಂದ ಅಭಿಷೇಕ ಮಾಡುವುದಿಲ್ಲ. ನಮ್ಮ ಸಾಂಸ್ಕೃತಿಕ ನಿಘಂಟಿನಲ್ಲಿ ‘ಅಭಿಷೇಕ’ ಪದಕ್ಕೆ ಅದರದೇ ಆದ ಸಾಂಸ್ಕೃತಿ, ಅರ್ಥವಿದೆ. ಆದರೆ ಪತ್ರಿಕೆಯಲ್ಲಿ ಮದ್ಯಾಭಿಷೇಕ ಪದದ ಬಳಕೆ ಒಂದು ಬೌದ್ಧಿಕ ಅಸ್ಪೃಶ್ಯತೆಯನ್ನು ಆಚರಿಸಿದಂತಿದೆ. ಮದ್ಯವನ್ನು ಅಂಬೇಡ್ಕರ್ ಪ್ರತಿಮೆಯ ಮೇಲೆ ಸುರಿದು ಅವಮಾನಿಸಿದ್ದು ಒಂದು ಭೌತಿಕ ಕ್ರಿಯೆಯ ಅಸ್ಪೃಶ್ಯತೆ ಎನಿಸಿದರೆ, ಪತ್ರಿಕೆಯಲ್ಲಿ ಈ ಮಾದರಿ ಭಾಷೆಯ ಬಳಕೆ ಮಾಡಿದ್ದು ಒಂದು ಬೌದ್ಧಿಕ ಅಸ್ಪೃಶ್ಯತೆ ಎಂತಲೇ ವಿಶ್ಲೇಷಣೆ ಮಾಡಬೇಕಾಗಿದೆ ಎಂದಿದ್ದಾರೆ.

ದಲಿತರ ವ್ಯಕ್ತಿನಾಮಗಳು

ಕರ್ನಾಟಕದಲ್ಲಿರುವ ಹೊಲೆಮಾದಿಗರ ವ್ಯಕ್ತಿನಾಮಗಳು ಬಹಳ ವಿಶಿಷ್ಟವಾಗಿವೆ. ಅಂದರೆ ಪ್ರಾದೇಶಿಕವಾಗಿ ಬೇರೆ ಬೇರೆ ಆಗಿವೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ದಲಿತರ ವ್ಯಕ್ತಿನಾಮಗಳು ಸಾಮಾನ್ಯವಾಗಿ ‘ಅಯ್ಯ’ ಎಂಬ ವಾರ್ಗಿಕದಿಂದ ಅಂತ್ಯಗೊಳ್ಳುತ್ತವೆ. ಅಂದರೆ ಈ ಭಾಗದಲ್ಲಿ ವಾರ್ಗಿಕ ಸಹಾಯದಿಂದ ಸಾಮಾಜಿಕ ವರ್ಗವನ್ನು ನಿರ್ಣಯಿಸಲು ಸಾಧ್ಯ. ಆದರೆ ಉತ್ತರ ಕರ್ನಾಟಕದಲ್ಲಿ ನಿರ್ದಿಷ್ಟಕ್ಕಿಂತ ಅಡ್ಡ ಹೆಸರುಗಳು ಪ್ರಧಾನವಾಗಿರುತ್ತವೆ. ಉದಾ:- ಹಳೆ ಮೈಸೂರು ಪ್ರಾಂತ್ಯದಲ್ಲಿ ಮಲ್ಲಯ್ಯ, ಸಿದ್ಧಯ್ಯ, ಬೋರಯ್ಯ, ಪುಟ್ಟಮಾದಯ್ಯ, ಜವರಯ್ಯ, ರಂಗಯ್ಯ, ಮಹದೇವಯ್ಯ, ದಾಸಯ್ಯ, ಜೋಗಯ್ಯ, ಬೆಂಕಿ ಮಾದಯ್ಯ, ಮುಂತಾದ ವ್ಯಕ್ತಿನಾಮಗಳು ಹೊಲೆಮಾದಿಗರನ್ನು ಪ್ರತಿನಿಧಿಸುತ್ತವೆ. ಇದೇ ರೀತಿ ಸ್ತ್ರೀಯರು ಮಾರಮ್ಮ ಪುಟ್ಟಮಾದಮ್ಮ, ರಂಗಮ್ಮ, ಜೋಗಮ್ಮ, ಜವರಮ್ಮ, ಸಿದ್ಧಮ್ಮ, ಮುಂತಾಗಿ ಸಂಬೋಧನೆಯಲ್ಲಿ ಉಳಿಸಿಕೊಂಡಿದ್ದಾರೆ. ಸುಮಾರು ೨೦ ವರ್ಷದ ಹಿಂದೆ ‘ಅಯ್ಯ’ ರಹಿತ ವ್ಯಕ್ತಿನಾಮಗಳನ್ನು ದಲಿತರು ಇಟ್ಟುಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ.

೧೯೮೯ರಲ್ಲಿ ಮೈಸೂರ (ಈಗ ಚಾಮರಾಜನಗರ ಜಿಲ್ಲೆ)ಜಿಲ್ಲೆ ಯಳಂದೂರು ತಾಲೂಕು ಮದ್ದೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಆನಂದರಾವ್ ಎಂದು ಹೆಸರನ್ನು ಇಟ್ಟುಕೊಂಡನು. ಆತನಿಗೆ ಸರ್ಕಾರದಿಂದ ಬರಬೇಕಾಗಿದ್ದ ಸ್ಕಾಲರ್‌ಶಿಪ್ ಬರಲಿಲ್ಲ. ಆತ ಗಾಬರಿಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದಾಗ ಅವರು ತಾಲೂಕಿನ ತಹಶೀಲ್ದಾರ್ ಅವರಿಗೆ ಪರಿಶೀಲನೆಗಾಗಿ ಆದೇಶ ನೀಡಿದರು. ತಹಶೀಲ್ದಾರ್, ಡೆಪ್ಯುಟಿ ತಹಶೀಲ್ದಾರ್ ಮತ್ತು ಗ್ರಾಮಲೆಕ್ಕಿಗರು ಸೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿದರು. ಆ ವರದಿಯಲ್ಲಿ ವ್ಯಕ್ತಿಯು ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು ಹೆಸರು ಮಾತ್ರ ಆನಂದರಾವ್ ಎಂದು ಇಟ್ಟುಕೊಂಡಿದ್ದಾನೆಂದು ದಾಖಲಿಸಿದರು. ನಂತರ ಸ್ಕಾಲರಶಿಪ್ ಮುಂಜೂರಾಯಿತು. ಏಕೆ ಈ ಮಾತನ್ನು ದಾಖಲಿಸಿದೆನೆಂದರೆ ೨೦ ವರ್ಷಗಳ ಹಿಂದೆ ದಲಿತರು ತಮ್ಮ ಹೆಸರುಗಳನ್ನು ಇಟ್ಟುಕೊಳ್ಳಬೇಕಾದರೆ ಮೇಲ್ವರ್ಗದವರನ್ನು ಅನುಕರಿಸುವುದಕ್ಕೆ ಆಗುತ್ತಿರಲಿಲ್ಲ.

ಇಂದು ಹಲವು ಕಾರಣಗಳಿಂದ ಬದಲಾಗಿದೆ. ಅಂದರೆ ಕರ್ನಾಟಕದಲ್ಲಿ ಹೊಲೆಮಾದಿಗರು ಭಾಷೆಯಲ್ಲಿ ತಮ್ಮ ಚಹರೆಯನ್ನು ಉಳಿಸಿಕೊಂಡಿರುವ ಹಾಗೆ ವ್ಯಕ್ತಿನಾಮಗಳಲ್ಲೂ ಉಳಿಸಿಕೊಂಡಿದ್ದಾರೆ ಎಂಬುದು ಗಮನಿಸುವಂತಹ ಅಂಶ. ಹೆಚ್ಚಿನ ಸಂದರ್ಭಗಳಲ್ಲಿ ವ್ಯಕ್ತಿ ನಾಮಗಳು ಸಾಮಾಜಿಕ ಸೂಚಕವಾಗಿ ಕೆಲಸ ಮಾಡುತ್ತವೆ. ಆರಂಭದಲ್ಲಿ ವ್ಯಕ್ತಿನಾಮಗಳು ಒಂದು ಲಜ್ಜೆಯ ವಿಷಯವಾಗಿ ಕೆಲಸ ಮಾಡುತ್ತಿದ್ದು. ಆದರೆ ಇಂದು ಅವು ಹೆಮ್ಮೆಯ ವಿಷಯವಾಗಿ ಕೆಲಸ ಮಾಡುತ್ತಿವೆ. ಅಂದರೆ ವ್ಯಕ್ತಿಗಳು ತಮ್ಮ ಹೆಸರುಗಳ ಮುಂದೆ ತಮ್ಮ ಸಾಮಾಜಿಕ ವರ್ಗವನ್ನು ಇಟ್ಟುಕೊಳ್ಳುವ ಪರಿಪಾಠ ಬೆಳೆಯುತ್ತಿದೆ. ಉದಾ: ಸುಬ್ಬು ಹೊಲೆಯಾರ್, ದೇವಣ್ಣ ಮಾದಾರ್, ಬಸಪ್ಪಮಾದರ್.

ಸಾಮಾಜಿಕ ಸೂಚಕವಾಗಿ ಸಂಬೋಧನಾ ಕ್ರಮ

ಗ್ರಾಮೀಣ ಪ್ರದೇಶದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಜಾತಿಗಳು ದಲಿತರನ್ನು ಉದ್ದೇಶಿಸಿ ಬಳಸುವ ಸಂಬೋಧನಾ ಕ್ರಮ ಸಾಮಾಜಿಕ ಸೂಚಕವಾಗಿರುತ್ತದೆ. ಮೇಲ್ವರ್ಗದ ಅತ್ಯಂತ ಕಿರಿಯ ವಯಸ್ಸಿನವರು ದಲಿತ ವರ್ಗದ ಅತ್ಯಂತ ಹಿರಿಯ ವಯಸ್ಸಿನ ದಲಿತ ವ್ಯಕ್ತಿಯನ್ನು ಆತನ ಹೆಸರನ್ನು ಹಿಡಿದು ಕರೆಯುವುದು ವಾಡಿಕೆ, ಹೆಸರು ಹಿಡಿದು ಕರೆಯುವುದು ಕೂಡ ಹೆಸರಿನ ನಿರ್ದಿಷ್ಟ ಭಾಗದಲ್ಲಿ ಅರ್ಧ ಭಾಗವನ್ನು ಮಾತ್ರ ಹಿಡಿದು ಕರೆಯುತ್ತಾರೆ. ಕೆಲವು ಸಂದರ್ಭದಲ್ಲಿ ದಲಿತರಿಗೆ ಅನ್ವಯವಾಗುವ ಒಂದು ಸಾಮಾನ್ಯ ಹೆಸರನ್ನು ಹಿಡಿದು ಕರೆಯುವುದು ವಾಡಿಕೆ. ಉದಾಹರಣೆಗೆ: ಚಾಮರಾಜನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ನಂಜ ಸಿದ್ದ, ಮಾದ, ಎಂದು ಗಂಡಸರನ್ನು ಕರೆದರೆ ಹೆಂಗಸರನ್ನು ನಂಜಿ ಸಿದ್ಧಿ, ಮಾದಿ, ಕೆಂಪಿ, ಮುಂತಾದ ಹ್ರಸ್ವಗೊಳಿಸಿದ ಹೆಸರುಗಳಿಂದ ಕರೆಯುತ್ತಾರೆ. ಈ ಕ್ರಮಕ್ಕೆ ವಿರುದ್ಧವಾಗಿ ದಲಿತರು ಮೇಲ್ವರ್ಗದವರ ಹೆಸರುಗಳನ್ನು ಪೂರ್ಣವಾಗಿ ಕರೆಯುವುದಲ್ಲದೆ ಹೆಚ್ಚುವರಿಯಾಗಿ ಸಂಬಂಧಸೂಚಕ ಪದವಾದ ‘ಅಪ್ಪ’ ಎನ್ನುವ ರೂಪವನ್ನು ನಿರ್ದಿಷ್ಟ ಭಾಗದ ಜತೆಗೆ ಸೇರಿಸಿ ಕರೆಯುತ್ತಾರೆ. ಉದಾಹರಣೆಗೆ: ರಂಗಣ್ಣ -ರಂಗಪ್ಪ, ಮಲ್ಲೇಶ್ – ಮಲೇಶಪ್ಪ, ಶ್ರೀಕಂಠ-ಶ್ರೀಕಂಠಪ್ಪ ಇತ್ಯಾದಿ. ಅದೇ ರೀತಿ ಮೇಲ್ವರ್ಗದ ಹೆಂಗಸರ ಹೆಸರಿನ ನಿರ್ದಿಷ್ಟ ಭಾಗಕ್ಕೆ “ಅಮ್ಮ” ಅಥವಾ ಅಮ್ಮವರು ಎಂದು ಹೆಸರಿಸಿ ಸಂಬೋಧನೆ ಮಾಡುವರು. ಉದಾ: ಮೀನಾಕ್ಷಿ-ಮೀನಾಕ್ಷಮ್ಮ, ಸಾವಿತ್ರಿ-ಸಾವಿತ್ರಮ್ಮನವರು. ಶಿಶಿಕಲ-ಶಶಿಕಲಮ್ಮವರು ಇತ್ಯಾದಿ.

ಮೇಲ್ವರ್ಗದ ಹೆಂಗಸರು ಮತ್ತು ಗಂಡಸರು ದಲಿತ ವರ್ಗದ ಹೆಂಗಸರನ್ನು ಅವರ ಹೆಸರಿನ ನಿರ್ದಿಷ್ಟ ಭಾಗಕ್ಕೆ “ಅಮ್ಮಿ” ಸೇರಿಸಿ ಕರೆಯುವರು. ಉದಾ:- ಅಮ್ಮೆ ಕೆಂಪಿ, ಅಮ್ಮೆ ಮಾದಿ, ಅಮ್ಮೆರಂಗಿ ಎಂದು ಸಂಭೋದನೆ ಮಾಡುವುದುಂಟು. ಆದರೆ ಸಾಮಾನ್ಯವಾಗಿ ‘ಅಮ್ಮಿ’ ಪದವನ್ನು ಗಂಡ ತನ್ನ ಹೆಂಡತಿಯನ್ನು ಕರೆಯಲು ಬಳಸುವುದುಂಟು. ಇದು ಚಾಮರಾಜನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ‘ಅಮ್ಮಿ’ ಪದ ಬಳಕೆ ಇಲ್ಲವಾಗಿದೆ ಅದಕ್ಕೂ ಕಾರಣಗಳಿವೆ.

ಹೊಲೆಮಾದಿಗ ಸೂಚಕ ಗಾದೆಗಳು ಮತ್ತು ನುಡಿಗಟ್ಟುಗಳು

ಕರ್ನಾಟಕದಲ್ಲಿ ದಲಿತರನ್ನು ಕುರಿತು ಗಾದೆಗಳು ಮತ್ತು ನುಡಿಗಟ್ಟುಗಳು ಬೇರೆ ಬೇರೆ. ಆದರೂ ಅವುಗಳ ಆಶಯ ಒಂದೆ. ಸಾಮಾನ್ಯ ಜನರು ತಾವು ಏನನ್ನು ಹೇಳಬೇಕು ಎನ್ನುವುದನ್ನು ಖಚಿತ ಪಡಿಸುವುದಕ್ಕಾಗಿ ತಮ್ಮ ಮಾತಿನ ಮಧ್ಯ ಮಧ್ಯ ತಮ್ಮ ಸಾಮಾಜಿಕ ಪರಿಸರದ ಸುತ್ತಮುತ್ತಲ ಪ್ರದೇಶದಲ್ಲಿ ಬಳಕೆಯಲ್ಲಿರುವ ಗಾದೆಗಳನ್ನು ಬಳಸುತ್ತಾರೆ. ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೇಳುವುದು ಗಾದೆ ಮಾತಿನ ಲಕ್ಷಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿಹಂತದಲ್ಲೂ ಬಗೆ ಬಗೆಯ ಗಾದೆಗಳನ್ನು ಬಳಸುತ್ತಾರೆ. ಗಾದೆಗಳು ಹೇಗೆ ಜಾತಿ ಸೂಚಕವಾಗಿ ಕೆಲಸ ಮಾಡುತ್ತವೆ ಎಂಬುದು ಗಮನಿಸುವಂತಹ ಅಂಶ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲವೆಂಬ ಮಾತಿಗೆ ತಕ್ಕಂತೆ ಗಾದೆಗಳು ಸತ್ಯವಾಗಿ ಬಳಕೆಯಲ್ಲಿದೆ. ಗಾದೆಗಳ ನುಡಿಗಳ ಭಾಷಿಕ ರೂಪ ಕೆಳಕಂಡಂತೆ ಇದೆ. ಈ ಗಾದೆಗಳ ಬಳಕೆಯ ವಲಯ ಮೇಲ್ವರ್ಗದವರು ಮತ್ತೊಂದು ಮೇಲ್ವರ್ಗದವರನ್ನು ಉದ್ದೇಶಿಸಿ ಹೇಳುವ ಸಂದರ್ಭವಿದು.

ಅ. ವಲಯನ ಮಾತು ನೆಲ್ಲುಲ್ಲಿಗೆ ಸಮಾನ (ಚಾಮರಾಜನಗರ)

ಆ. ವಲಯನ ಮಾತಿಗೆ ನೆಲೆ ಎಲ್ಲಿ

ಇ. ಊರು ಉಟ್‌ದ್ಮೇಲೆ ವಲ್ಗೇರಿ ಇದ್ದೆ ಇರುತ್ತೆ (ಚಾಮರಾಜನಗರ)

ಈ . ತುಂಬಾ ವಲ್ಗೇರಿ ಯಬ್ರಿಸ್ ಬಿಟ್ಟ (ಹೊಸಪೇಟೆ)

ಉ . ದನತಿನ್ನೋನ್ಗೆ ಗೊಬ್ಬರಾದಾಣೆ ಬೇರೆ

ಊ. ಮಾದಿಗನ ಮಾತು ಸಂಜೆ ತನಕ

ಹೊಲೆಮಾದಿಗ ಸೂಚಕ ಬೈಗುಳ ಹೊಲೆಮಾದಿಗರನ್ನು ಬಿಟ್ಟಂತೆ ಮೇಲ್ವರ್ಗದವರು ಮತ್ತೊಂದು ಮೇಲ್ವರ್ಗದವನ ಬೈಯುವುದಕ್ಕೆ ಹೊಲೆಮಾದಿಗ ಸೂಚಕ ಪದಗಳನ್ನು ಸಾಧನವಾಗಿಸುವುದು ರೂಢಿ.

ಉದಾಹರಣೆಗೆ:

ಅ. ವಲ್ಗೇರಿ ನನ್‌ಮಗ್ನೆ

ಆ. ವಲೆಯನ ಆಟ ಆಡ್‌ಬ್ಯಾಡ

ಇ . ನಿಮ್ಮ ಅವ್ವನ ಇಡ್ಕೊಂಡು ಮರಳ್ಳಿ ಮಾದ್ಗ ವದಿಕವಾಗ

ಈ. ನಿಮ್ಮ ಅವ್ವನ ಇಡ್ಕೊಂಡು ಕಬ್ಬಳ್ಳಿ ಮಾದ್ಗ ವದಿಕವಾಗಉ\

ಉ. ಮಾದಿಗ ಸೂಳ ಮಗನೆ

ಊ. ವಲಯ ಸೂಳ ಮಗನೆ

ಎನ್ನುವ ಪದಗಳು ಚಾಮರಾಜನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿವೆ. ಚಾಮರಾಜನಗರ ಜಿಲ್ಲೆಯ ಮರಳ್ಳಿ/ಕಬ್ಬಹಳ್ಳಿಯಲ್ಲಿ ಮಾದಿಗರು ಹೆಚ್ಚು ವಾಸಿಸುತ್ತಾರೆ.

ದಲಿತ ಬರಹಗಾರರ ಸೃಜಶೀಲ ಅಭಿವ್ಯಕ್ತಿಯಲ್ಲಿ ಭಾಷೆಯ ಬಳಕೆ!

ಕನ್ನಡ ದಲಿತ ಬರಹಗಾರರು ಕರ್ನಾಟಕದಲ್ಲಿ ಒಂದೇ ಬಗೆಯ ಭಾಷೆಯನ್ನು ಬಳಕೆ ಮಾಡುತ್ತಿಲ್ಲ. ಪ್ರಾದೇಶಿಕವಾಗಿ ಬೇರೆ ಬೇರೆ, ಕೆಲವರು ಬರಹದ ರಚನೆಗೆ ಹತ್ತಿರವಾಗಿರುವ ಭಾಷೆಯನ್ನು ಬಳಕೆ ಮಾಡಿದರೆ, ಮತ್ತೆ ಕೆಲವರು ಬರಹದ ಮಾದರಿಗಿಂತ ಭಿನ್ನವಾಗಿ ಬಳಕೆ ಮಾಡುತ್ತಿದ್ದಾರೆ. ಈ ಎರಡು ವಲಯಗಳಲ್ಲಿ ಬಳಕೆ ಆಗಿರುವ ಭಾಷೆಯಿಂದ ದಲಿತ ಸಾಹಿತ್ಯ ಕನ್ನಡ ಭಾಷೆಯನ್ನು ಬೆಳೆಸಿದೆ. ಆದರೆ ಸಂಸ್ಕೃತಮಯ ಪ್ರಮಾಣ ಕನ್ನಡ ದಲಿತರ ಕನ್ನಡವನ್ನು ಚಾರಿತ್ರಿಕವಾಗಿ ನಿರಾಕರಿಸಿದೆ. ಆದರೆ ದಲಿತ ಸಾಹಿತ್ಯ ಒಂದು ಪ್ರಜ್ವಲವಾದ ಭಾಷೆಯನ್ನು ಸಾಹಿತ್ಯಲೋಕಕ್ಕೆ ಕೊಡುಗೆಯಾಗಿ ನೀಡಿದೆ. ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಒಂದು ರೀತಿ ಮಿಂಚು ಬಂದಿದೆ ಎಂದು ‘ಡಾ. ಬಸವರಾಜ ಕಲ್ಗುಡಿ’ ಅವರು ಅಭಿಪ್ರಾಯಪಡುತ್ತಾರೆ. ಈ ಹಿನ್ನೆಲೆಯಿಂದ ದಲಿತ ಭಾಷೆ ವಾಸ್ತವವಾಗಿ ಕನ್ನಡ ಸಂಸ್ಕೃತಿಯ ಉಜ್ವಲತೆಯ ದೀಪವನ್ನು ಬೆಳಗಿಸಿದೆ.

ದಲಿತ ಬರಹಗಾರರು ತಮ್ಮ ಬರವಣಿಗೆಯಲ್ಲಿ ಯಾವ ಮಾದರಿಯ ಕನ್ನಡವನ್ನು ಬಳಕೆ ಮಾಡಿದ್ದಾರೆ/ಮಾಡುತ್ತಿದ್ದಾರೆ. ಅದರಿಂದ ಆ ಜನಾಂಗಕ್ಕೆ ಏನು ಪ್ರಯೋಜನ ಆಗುತ್ತಿದೆ. ಅದಕ್ಕೆ ಕಾರಣಗಳೇನು? ಇನ್ನು ಮುಂದೆ ದಲಿತ ಬರಹಗಾರರು ಯಾವ ಮಾದರಿ ಕನ್ನಡವನ್ನು ಬಳಸಬೇಕು ಎಂಬುದನ್ನು ಕುರಿತು ಚರ್ಚೆ ಮಾಡುವುದು ಇಂದು ಅಗತ್ಯವಾಗಿದೆ.

ದಲಿತ ಬರಹಗಾರರು ಎರಡು ನೆಲೆಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ/ಎದುರಿಸಿದ್ದಾರೆ.

ಅ. Content ಬಳಕೆ

ಆ. ಭಾಷಾ ಬಳಕೆ

ಈ ಎರಡು ನೆಲೆಗಳಲ್ಲಿ ಯಾರಿಗೆ ಯಾವ ನೆಲೆಗಳಲ್ಲಿ ಯಾವುದು ಸಮಸ್ಯೆಯ ಕ್ಷೇತ್ರವಾಗಿದೆ. ದಲಿತ ಬರಹಗಾರರು ತಾನು ವಾಸಿಸುವ ಸಾಮಾಜಿಕ ಪರಿಸರದ ಮಣ್ಣಿ ವಾಸನೆಯುಳ್ಳ ಕನ್ನಡವನ್ನು ತನ್ನ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿಕೊಳ್ಳುವುದು ಸರಿಯಾದ ಕ್ರಮ. ಹೀಗೆ ಬಳಸಿಕೊಳ್ಳುವಾಗ ತನ್ನ ಸಾಮಾಜಿಕ ಸಮಸ್ಯೆಗಳನ್ನು ತನ್ನ ದೇಶೀ ಭಾಷೆಯಲ್ಲೆ ಬರೆಯುವುದು ಸೂಕ್ತ. ಅದನ್ನು ಬಿಟ್ಟು ತನ್ನ ಮಾತಿನ ರೂಪಕ್ಕಿಂತ ಬೇರೆಯಾದ ಮತ್ತೊಬ್ಬರ ಕನ್ನಡ ರಚನೆಯನ್ನು ಅನುಸರಿಸಿ ಬರೆಯುವುದು ಸೂಕ್ತ. ಅದನ್ನು ಬಿಟ್ಟು ತನ್ನ ಮಾತಿನ ರೂಪಕ್ಕಿಂತ ಬೇರೆಯಾದ ಮತ್ತೊಬ್ಬರ ಕನ್ನಡ ರಚನೆಯನ್ನು ಅನುಸರಿಸಿ ಬರೆಯುವುದು ಎಷ್ಟರಮಟ್ಟಿಗೆ ಸರಿ. ಆದ್ದರಿಂದ ಸಾಮಾಜಿಕವಾಗಿ ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ ಎಂಬುದು ಕೆಲವರ ಅಭಿ‌ಪ್ರಾಯ. ಇದರ ಹಿಂದೆ ಇರುವ ಉದ್ದೇಶ ಇಲ್ಲಿಯವರೆಗೆ ಕನ್ನಡ ಬರಹ ಕೇವಲ ಮೇಲ್ವರ್ಗದ ಸ್ವತ್ತಾಗಿದೆ. ಅದು ಇಂದು ಎಲ್ಲ ವಂಚಿತ ವರ್ಗದ ಸ್ವತ್ತಾಗಬೇಕು. ಈ ರೀತಿ ಆಗಬೇಕಾದರೆ ನಾವು ಸಾಮಾಜಿಕವಾಗಿ ಬಳಕೆ ಮಾಡುತ್ತಿರುವ ಕನ್ನಡದಲ್ಲೆ ಕೆಲವಾರು ಬದಲಾವಣೆಗಳು ಆಗಬೇಕಾಗಿದೆ ಅದಕ್ಕೆ ನಮ್ಮ ದಲಿತ, ಬಂಡಾಯಗಾರರು ಚಾಲನೆ ನೀಡಬೇಕಾಗಿದೆ ಎಂದು ಡಿ.ಎನ್.ಶಂಕರಭಟ್ ಅವರು ಅಭಿಪ್ರಾಯಪಡುತ್ತಾರೆ. (ಕನ್ನಡ ಬರಹವನ್ನು ಸರಿಪಡಿಸೋಣ, ಪು.೨೩೬). ಚಾರಿತ್ರಿಕವಾಗಿ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿದಾಗ ಈ ಮಾದರಿಯ ಚಿಂತನೆ ಹೊಸದೇನು ಅಲ್ಲ. ಹಿಂದೆ ಹರಿಹರ, ಱೞ, ಗಳನ್ನು ಬಿಟ್ಟು ತೋರಿಸಿಕೊಟ್ಟಿದ್ದಾನೆ.

ಈಗಾಗಲೇ ದಲಿತ ಬರಹಗಾರರು ತಮ್ಮ ಸೃಜನಶೀಲ ಬರಹಗಳಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಇದರಿಂದ ಆ ಕೃತಿಗಳು ಕನ್ನಡ ಸಾಹಿತ್ಯಲೋಕದ ಮೇಲೆ ವಿಶೇಷ ಪರಿಣಾಮ ಬೀರಿವೆ. ಇದನ್ನು ಸೃಜನಶೀಲಯೇತರ ಬರಹಗಳಲ್ಲೂ ಅಧಿಕೃತವಾಗಿ ಮಾನ್ಯ ಮಾಡಬೇಕಾಗಿದೆ. ಚಾರಿತ್ರಿಕವಾಗಿ ದಲಿತ ಸಾಹಿತ್ಯದಲ್ಲಿ ಬಳಸಿರುವ ಭಾಷೆಯನ್ನು ತಿರುಗಿ ನೋಡಿದಾಗ ಭಾಷೆಯ ಬಳಕೆಗೆ ಒಂದು ವಿಶಿಷ್ಟ ಶಕ್ತಿ ಇದೆ ಎಂದೆನಿಸುತ್ತದೆ. ಇದರಿಂದ ಬರವಣಿಗೆಗೆ ಒಂದು ಸಾಮಾಜಿಕ ಶಕ್ತಿ ಇರುವ ಹಾಗೆ ಒಂದು ಸಂಘಟನಾ ಶಕ್ತಿಯಾ ಇದೆ. ಮಾತು ಬರಹ ರೂಪ ಪಡೆದ ತಕ್ಷಣ, ಅದು ಸಾರ್ವಜನಿಕವಾದ ಶಾಶ್ವತವಾದ ಸಾರ್ವಕಾಲಿಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಅನೇಕ ಜನರು ದಲಿತರ ಬರಹವನ್ನು ವಿರೋಧಿಸುತ್ತಾ ಬಂದಿದ್ದಾರೆ.

ಕವಿ ಸಿದ್ಧಲಿಂಗಯ್ಯನವರ ‘ಹೊಲಮಾದಿಗರ ಹಾಡು’ ಕವನ ಸಂಕಲನದಲ್ಲಿ ಬಳಕೆ ಆಗಿರುವ ಭಾಷೆಯ ಮಾದರಿಯ ವಿರುದ್ಧ ದಲಿತೇತರರು ಪ್ರತಿಭಟನೆ ಮಾಡಿದರು. ಪ್ರತಿಭಟನೆ ‘ಹೊಲೆಮಾದಿಗರ ಹಾಡು’ ಕವನ ಸಂಕಲನದಲ್ಲಿನ Content ಬಳಕೆ ಕುರಿತು ಆಗಿರಲಿಲ್ಲ. ಭಾಷೆಯ ಬಳಕೆಯ ಕುರಿತು, ಅಂದರೆ ಈ ರೀತಿಯ ಅಭಿಪ್ರಾಯದ ಹಿಂದಿನ ಉದ್ದೇಶವೇನೆಂದರೆ ದಲಿತೇತರರು ಬಳಸುವ ಭಾಷೆಯ ಮಾದರಿಗೆ ದಲಿತರು ಪಲ್ಲಟವಾಗಬೇಕೆಂಬ ಅಪೇಕ್ಷೆ.

ಚಾರಿತ್ರಿಕವಾಗಿ ದಲಿತ ಸಾಹಿತ್ಯ ಅಧ್ಯಯನದ ಬರಹದ ಮಾದರಿಗಳನ್ನು ಗಮನಿಸಿದಾಗ ೬೦-೭೦ರ ದಶಕದಲ್ಲಿ ದಲಿತ ಬರಹಗಾರರು ಬಳಸಿರುವ ಅಥವಾ ಬಳಕೆಯ ವಿರುದ್ಧ ಪ್ರತಿರೋಧ ವ್ಯಕ್ತವಾಗಿರುವುದನ್ನು ಕಾಣಬಹುದು. ಏನು ಹೇಳುವುದಕ್ಕೆ ಪ್ರಯತ್ನಿಸುತ್ತೇನೆಂದರೆ ದಲಿತ ಬರಹಗಾರರಿಗೆ ಎದುರಾಗುತ್ತಿರುವ ಭಾಷಾಬಳಕೆ ಮತ್ತು Content ಬಳಕೆಯಲ್ಲಿನ ಸಮಸ್ಯೆಗಳು ಇಂದಿನದಲ್ಲ. ಅದಕ್ಕೊಂದು ಚರಿತ್ರೆಯಿದೆ ಎಂಬುದನ್ನು ಗಮನಿಸಬೇಕು. ಈ ಮಾತನ್ನು ಈಗಾಗಲೇ ಆಗಿರುವ ಸಂಶೋಧನೆಗಳ ಆಧಾರದಿಂದ ಹೇಳುತ್ತಿದ್ದೇನೆ.