ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವ ವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪೆನಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾನ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಕನ್ನಡ ವಿಶ್ವವಿದ್ಯಾಲಯದ ದಲಿತಸಂಸ್ಕೃತಿ ಅಧ್ಯಯನ ಪೀಠವು ೧೨ ಮತ್ತು ೧೩ ಜನವರಿ ೨೦೦೬ರಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಜತೆಯಲ್ಲಿ ನಡೆಸಿದ ‘ದಲಿತರು, ಭಾಷೆ ಮತ್ತು ಸಮಾಜ’ ಎಂಬ ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳು ಹಾಗೂ ಉಪನ್ಯಾಸಗಳು ಸಂಪುಟ ರೂಪದಲ್ಲಿ ಇಲ್ಲಿ ಒಟ್ಟು ಸೇರಿವೆ. ದಲಿತರ ಭಾಷೆ ಹಾಗೂ ದಲಿತರು ಮತ್ತು ಭಾಷೆಯನ್ನು ಕುರಿತು ಮೊತ್ತಮೊದಲ ಬಾರಿಗೆ ಭಿನ್ನಭಿನ್ನ ಕ್ಷೇತ್ರಗಳ ಚಿಂತಕರು, ಭಾಷಾವಿಜ್ಞಾನಿಗಳು, ಚಳುವಳಿಗಾರರು ಮತ್ತು ಮಾಧ್ಯಮದವರು ಒಂದು ಕಡೆ ಸೇರಿ ಚರ್ಚಿಸಿ, ತಮ್ಮ ಅಭಿಪ್ರಾಯಗಳನ್ನು ಪ್ರಕಟಿಸಿದ್ದಾರೆ. ಭಿನ್ನ ಸಾಮಾಜಿಕ ಸನ್ನಿವೇಶಗಳಲ್ಲಿ ದಲಿತರ ಭಾಷೆಗಳು ಮತ್ತು ಉಪಭಾಷೆಗಳು ಹುಟ್ಟಿಕೊಂಡು ಶಿಕ್ಷಣದ ವ್ಯವಸ್ಥೆಗೆ ಬಂಧಾಗ ಭಾಷೆಗಳು ಪಲ್ಲಟವಾಗುತ್ತ ದಲಿತರಲ್ಲಿ ತಲ್ಲಣ ಆತಂಕ ಸಂಭ್ರಮಗಳನ್ನು ಉಂಟುಮಾಡಿದ ಸಂಕಥನದ ಅಪೂರ್ವ ಮಾದರಿಗಳು ಇಲ್ಲಿ ದೊರೆಯುತ್ತವೆ. ನೋವಿನ, ಸಿಟ್ಟಿನ ಮತ್ತು ಹಸಿವಿನ ಭಾಷೆಯಾಗಿ ದಲಿತರ ಬದುಕಿನಲ್ಲಿ ಅಭಿವ್ಯಕ್ತಗೊಳ್ಳುವ ಶಕ್ತಿಯ ರೂಪಗಳು ಪ್ರತಿಭಟನೆಯ ರೂಪಾಂತರಕ್ಕೆ ಒಳಗಾಗಬೇಕಾದ ಆಶಯಗಳು ಇಲ್ಲಿ ಮೂಡಿ ಬಂದಿವೆ. ಕನ್ನಡ ಭಾಷೆಯ ರೂಪ ಮತ್ತು ಬಳಕೆ, ಇಂಗ್ಲಿಷ್‌ ಭಾಷೆಯ ಹಂಬಲಗಳ ಜೊತೆಗೆ ಸಮಾನತೆಯ ಕಡೆಗೆ ಸಾಗಲು ಭಾಷೆಯನ್ನು ಶಕ್ತಿಯ ಸಾಧನವಾಗಿ ಬಳಸಬೇಕಾದ ಅಗತ್ಯಗಳ ಕುರಿತು ಇಲ್ಲಿ ಆಲೋಚನೆಗಳು ದೊರೆಯುತ್ತವೆ.

ದಲಿತರನ್ನು ಕೇಂದ್ರವನ್ನಾಗಿಟ್ಟುಕೊಂಡು, ಭಾಷಾವಿಜ್ಞಾನ, ಸಾಹಿತ್ಯ, ಸಮಾಜವಿಜ್ಞಾನ, ರಾಜಕೀಯ ಕ್ಷೇತ್ರಗಳನ್ನು ಆವರಿಸಿಕೊಂಡು ಕನ್ನಡದಲ್ಲಿ ಮೊತ್ತಮೊದಲ ಬಾರಿಗೆ ವ್ಯಾಪಕ ಚಿಂತನೆಯೊಂದು ಇಲ್ಲಿ ರೂಪು ತಾಳಿದೆ. ದಲಿತರ ಶಕ್ತಿ ಮತ್ತು ಸಾಧ್ಯತೆಗಳ ಕುರಿತು ಸದಾ ಕ್ರಿಯಾಶೀಲವಾಗಿ ಒಳಗೊಳ್ಳುತ್ತಾ ಬಂದ ಕನ್ನಡ ವಿಶ್ವವಿದ್ಯಾಲಯವು ಈ ವಿಚಾರ ಸಂಕಿರಣದ ಮೂಲಕ ದಲಿತರು, ಭಾಷೆ ಮತ್ತು ಸಮಾಜದ ಹೊಸ ಸಂವಿಧಾನವೊಂದನ್ನು ರೂಪಿಸಲು ಅವಕಾಶ ಕಲ್ಪಿಸಿದೆ ಎನ್ನುವುದು ಸಂತೋಷದ ಸಂಗತಿ. ನಮ್ಮ ವಿಶ್ವವಿದ್ಯಾಲಯದ ದಲಿತಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಪಿ. ಮಹಾದೇವಯ್ಯನವರು ನಾಡಿನ ಬಹುಚಿಂತನೆಯ ಸಮಸ್ತರನ್ನು ಒಂದುಗೂಡಿಸಿ ಸಂವಾದವೊಂದನ್ನು ಏರ್ಪಡಿಸಿ ತುಂಬ ಪರಿಶ್ರಮ ಮತ್ತು ಪ್ರೀತಿಯಿಂದ ಆ ಎಲ್ಲ ಆಲೋಚನೆಗಳನ್ನು ಬರಹ ರೂಪದಲ್ಲಿ ಸಂಪಾದಿಸಿ ಮಹತ್ವಪೂರ್ಣ ಗ್ರಂಥವೊಂದರ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಸಂಶ್ಕೃತಿಯ ಸೂಕ್ಷ್ಮಸಂವೇದನೆ ಮತ್ತು ಸಂಘಟನೆಯ ಶಿಸ್ತಿನ ಮೂಲಕ ಇದನ್ನು ಸಾಧ್ಯವಾಗಿಸಿದ ಡಾ. ಪಿ. ಮಹಾದೇವಯ್ಯನವರಿಗೆ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಅಭಿನಂದನೆಗಳು.

ಬಿ.ಎ. ವಿವೇಕ ರೈ
ಕುಲಪತಿ