ಮೂರು ಕೃತಿಗಳನ್ನು ಇಟ್ಟುಕೊಂಡು ಮಾತನಾಡೋದು ಅಂದ್ರೆ ಇದು ಒಂದು ದೊಡ್ಡ ಸಾಹಸಕ್ಕೆ ಕೈ ಹಾಕಿದಂತೆ. ಯಾಕೆಂತೇಳಿದ್ರೆ ಒಂದು ಕೃತಿನ ನಾನು ಈಗ ನೋಡ್ತಾ ಇದ್ದೀನಿ. ಸ್ವಲ್ಪ ಕಾಲಾವಕಾಶ ಸಿಗ್ತು. ಏನೋ ಒಂದು ಪ್ರಯತ್ನ ಮಾಡಬಲ್ಲೆ ಅನ್ನೋ ಆತ್ಮವಿಶ್ವಾಸ ಇಟ್ಕೊಂಡು ವಿಷಯವನ್ನ ಪ್ರಾರಂಭ ಮಾಡ್ತೇನೆ. ಈ ಮೂರು ಪುಸ್ತಕಗಳಲ್ಲಿ ಒಂದನ್ನು ಮಾತ್ರ ಪ್ರಧಾನವಾಗಿಟ್ಟು ಮಾತಾಡ್ಲಿಕ್ಕೆ ಬಯಸ್ತೀನಿ.

ಕನ್ನಡ ವಿಶ್ವವಿದ್ಯಾಲಯದ ದಲಿತ ಅಧ್ಯಯನ ಪೀಠ ಮತ್ತು ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಜೊತೆ ಸೇರಿ ‘ದಲಿತರು ಮತ್ತು ಪರ್ಯಾಯ ರಾಜಕಾರಣ’ ಎನ್ನುವ ವಿಚಾರವನ್ನು ಕುರಿತು ಎರಡು ದಿನಗಳ ವಿಚಾರ ಸಂಕಿರಣವನ್ನು ನಡೆಸಲು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಅನುಮತಿ ಕೊಟ್ರು. ಅದು ತುಂಬ ಯಶಸ್ವಿಯಾದ ಕಾರ್ಯಕ್ರಮವಾಯಿತು. ಹಾಗಾಗಿ ಅವೊಂದು ನೈತಿಕತೆಯ ಬೆನ್ನ ಹಿಂದೆನೇ ನಾನು ದಲಿತರು ಮತ್ತು ಪರ್ಯಾಯ ರಾಜಕಾರಣ ಅನ್ನುವ ಪುಸ್ತಕವನ್ನು ಕುರಿತು ಮಾತಾಡ್ತೀನಿ.

ಈ ಪುಸ್ತಕದಲ್ಲಿ ಮಹತ್ವಪೂರ್ಣವಾದ ಇಪ್ಪತ್ತಮೂರು ಲೇಖನಗಳು ಪ್ರಕಟಗೊಂಡಿವೆ. ಹಂಪಿ ವಿಶ್ವವಿದ್ಯಾಲಯದ ಒಂದು ಮುಖ್ಯವಾದ ಪ್ರಕಟಣೆ ಇದು. ಇಡೀ ಎರಡು ದಿವಸಗಳ ವಿಚಾರಗೋಷ್ಠಿಯನ್ನು ಸಂಪೂರ್ಣವಾಗಿ ಧ್ವನಿ ಮುದ್ರಿಸಿ ಯಥಾವತ್ತಾಗಿ ಅದ್ನನ ಬರಹರೂಪಕ್ಕೆ ಇಳಿಸಿ ಲೇಖಕರಿಗೆ ಕಳುಹಿಸಿ ಅವರಿಂದ ತಿದ್ದುಪಡಿ ಪಡೆಯಲಾಗಿದೆ. ದಲಿತರು ಮತ್ತು ಪರ್ಯಾಯ ರಾಜಕಾರಣದ ಇಂದು ದಲಿತರು, ಭಾಷೆ ಮತ್ತು ಸಮಾಜ ವಿಷಯವನ್ನು ಕುರಿತು ಇಂದಿನ ವಿಚಾರಸಂಕಿರಣಕ್ಕೆ ಆಳವಾದಂತಹ ವಿಷಯವನ್ನು ಆಯ್ಕೆ ಮಾಡಲಾಗಿದೆ. ಪ್ರಭಾವದಿಂದ ಕರ್ನಾಟಕ ಸರ್ವೋದಯ ಪಕ್ಷ ರಚನೆಯಾಗಿದೆ. ಆ ಪಕ್ಷಕ್ಕೆ ಈ ಪುಸ್ತಕ ಒಂದು ಕ್ರಿಯಾಶೀಲತೆಯನ್ನ ತಂದುಕೊಡಬಲ್ಲದು ಎನ್ನುವ ವಿಶ್ವಾಸದಿಂದ, ಆ ಪುಸ್ತಕದಲ್ಲಿ ಬಂದಿರುವ ವಿಷಯಗಳನ್ನ ಕುರಿತು ನಿಮ್ಮ ಮುಂದೆ ಮಾತಾಡ್ಲಿಕ್ಕೆ ಬಯಸ್ತೀನಿ.

ಮಾಜಿ ಕೇಂದ್ರ ಸಚಿವರಾದ ಶ್ರೀ ವಿ.ಶ್ರೀನಿವಾಸ ಪ್ರಸಾದ್ ಅವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ರು. ತುಂಬಾ ಆಳವಾದಂತಹ ಅನುಭವ, ಖಚಿತವಾದ ನಿಲುವುಗಳನ್ನಿಟ್ಟುಕೊಂಡು ಅವರು ಉದ್ಘಾಟನಾ ಭಾಷಣ ಮಾಡಿದ್ರು. ವಿವಿಧ ದಲಿತ ಸಂಘಟನೆಯ ಬಣಗಳು ಒಂದಾದರೆ ಇಡೀ ದೇಶವನ್ನೇ ನಡುಗಿಸಬಹುದು ಅನ್ತಕ್ಕಂತಹ ಮಾತನ್ನ ಅವರು ತಿಳಿಸಿದ್ರು. ರಾಜಕೀಯ ಅಸ್ಥಿರತೆಯ ದಿನಗಳಲ್ಲಿ ಇದು ತುಂಬ ಮುಖ್ಯವಾದ ಕೆಲಸ ಅಂತ ಹೇಳಿ ನಮಗೆ ಬೇಕಾಗಿರ್ತಕ್ಕಂತಹದ್ದು ಪರ್ಯಾಯ ರಾಜಕೀಯ ವ್ಯವಸ್ಥೆ ಅಂತ ಹೇಳಿದ್ದಾರೆ. ಇನ್ನೊಬ್ಬ ಮುಖ್ಯ ತಿಥಿ ದಲಿತ ಕ್ಷೇತ್ರದ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಿರ್ತಕ್ಕಂತಹ ಪ್ರೊ.ಮ.ನ.ಜವರಯ್ಯನವರು ತಮ್ಮ ಅಭಿಪ್ರಾಯವನ್ನು ವ್ಯಕ್ತಿಪಡಿಸುತ್ತ ಪರ್ಯಾಯ ಅಂದರೆ ಶಾಸ್ತ್ರೀಯವಾದ ವಿಚಾರಗಳಿಗೆ ವಿರುದ್ಧವಾದ ಅರ್ಥ ಬರುವ ರೀತಿಯಲ್ಲಿ ನಾವು ಪರ್ಯಾಯವನ್ನ ಕಂಡುಕೊಳ್ಬೇಕು ಅಂತ ಹೇಳಿ, ಬಸವಣ್ಣನವರಿಂದ ಪರ್ಯಾಯ ವ್ಯವಸ್ಥೆ ಹೇಗೆ ಹುಟ್ಟಿತು ಅನ್ತಕ್ಕಂತಹದ್ದನ್ನ ಅವರು ಅಲ್ಲಿ ಸುದೀರ್ಘವಾಗಿ ತಿಳಿಸಿದ್ದಾರೆ. ಅವರ ವಿದ್ವತ್‌ಪೂರ್ಣವಾದಂತ ಮಾತು ಇಡೀ ಎರಡು ದಿನದ ಚರ್ಚೆಗೆ ಅವಕಾಶ ಒದಗಿಸಿಕೊಡ್ತು, ಅದೇನಪ್ಪಾಂತಂದ್ರೆ ಎಲ್ಲಿಯವರೆಗೆ ಈ ಪರ್ಯಾಯ ಸಾಮಾಜಿಕ ವ್ಯವಸ್ಥೆ, ಪರ್ಯಾಯ ಸಾಂಸ್ಕೃತಿ, ಮೌಲ್ಯಗಳು ನಮಗೆ ಸೃಷ್ಟವಾಗುವುದಿಲ್ಲವೋ ಅಲ್ಲಿಯವರೆಗೆ ನಮಗೆ ಪರ್ಯಾಯ ರಾಜಕಾರಣ ಅರ್ಥವಾಗೋದಿಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಜೊತೆಗೆ ಪರ್ಯಾಯ ರಾಜಕಾರಣಕ್ಕೂ ಹೋಮದಾಣಿಕೆಯ ರಾಜಕಾರಣಕ್ಕೂ ವ್ಯತ್ಯಾಸವಿದೆ, ಪರ್ಯಾಯ ರಾಜಕಾರಣಕ್ಕೂ ರಾಜಿ ರಾಜಕಾರಣಕ್ಕೂ ವ್ಯತ್ಯಾಸ ಇದೆ, ಪರ್ಯಾಯ ರಾಜಕಾರಣಕ್ಕೂ ಗುಡಿ-ಗುಂಡೆಗಳ ರಾಜಕಾರಣಕ್ಕೂ ವ್ಯತ್ಯಾಸ ಇದೆ ಅಂತ ತುಂಬಾ ಸ್ಥೂಲವಾಗಿ ತಿಳಿಸುತ್ತಾ ಪರ್ಯಾಯ ರಾಜಕಾರಣ ಪದ ಅಪಾರವದ ವಿಸ್ತಾರವನ್ನು ಒಳಗೊಂಡಿದೆ ಅಂತ ಹೇಳಿದ್ದಾರೆ. ಅವರು, ಪರ್ಯಾಯ ರಾಜಕಾರಣ ಪರ್ಯಾಯ ಸಾಂಸ್ಕೃತಿಕ ವ್ಯವಸ್ಥೆ ಆಗ್ಬೇಕು ಅನ್ನೋ ಅಭಿಪ್ರಾಯ ವ್ಯಕ್ತಿಪಡ್ಸಿದ್ದಾರೆ. ಕೆ.ಟಿ.ಶಿವಪ್ರಸಾದರವರು ಪರ್ಯಾಯ ಸಂಸ್ಕೃತಿ ಬೇಕು ಅನ್ನೋ ವಾದವನ್ನ ಮಂಡಿಸಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಂತಹ ಕುಲಪತಿ ಬಿ.ಎ.ವಿವೇಕ ರೈಯವರು ಪರ್ಯಾಯದೊಳಗೆ ತಳಮಟ್ಟದ ವ್ಯಕ್ತಿಯೂ ಸೇರಬೇಕು ಎಂದಿದ್ದಾರೆ. ಬುದ್ಧ ಮತ್ತು ಇವರಿಬ್ಬರೂ ಕೂಡ ಪರ್ಯಾಯ ರಾಜಕಾರಣಕ್ಕೆ ತುಂಬ ಅಗತ್ಯ ಇರ್ತಕ್ಕಂತಹ ವ್ಯಕ್ತಿಗಳು ಎನ್ನುವ ವಿಷಯವನ್ನ ತಿಳಿಸಿದ್ದಾರೆ. ನಮಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ವಾಸ್ತವಿಕತೆ ಹಾಗೂ ಬುದ್ಧನ ಆದರ್ಶ ಇವೆರಡೂ ಮುಖ್ಯವಾಗಿರಬೇಕು. ಇವೆರಡರಲ್ಲಿ ಯಾವುದಾದ್ರೂ ಒಂದನ್ನ ಬಿಟ್ರೆ ನಮ್ಮ ಗುರಿಯನ್ನ ಈಡೇರಿಸಲಿಕ್ಕೆ ಸಾಧ್ಯವಿಲ್ಲ ಎನ್ನುವ ಮಾತನ್ನ ಕುಲಪತಿಗಳು ಹೇಳಿದ್ದಾರೆ.

ಆ ವಿಚಾರಸಂಕಿರಣದಲ್ಲಿ ಮಂಡಿಸಲಾದ ಕೆಲವು ಪ್ರಬಂಧಗಳನ್ನು ಕುರಿತು ಈಗ ಮಾತಾಡ್ತೀನಿ. ಮೊಲದನೆಯದಾಗಿ ಗೆಳೆಯ ಮೊಗಳ್ಳಿ ಗಣೇಶ್ ಅವರ ಪ್ರಬಂಧವನ್ನು ಕುರಿತು ಪರ್ಯಾಯ ರಾಜಕಾರಣದ ತಾತ್ವಿಕತೆ – ತಾತ್ವಿಕತೆ ಅಂತ ಹೇಳ್ದ ಕೂಡ್ಲೆ ಇವತ್ತಿನ ರಾಜಕಾರಣದಲ್ಲಿ ಸಂಬಂಧವಿದೆಯೇ ಎನ್ನುವು ಒಂದು ಹೊಸ ಚರ್ಚೆನೆ ಪ್ರಾರಂಭವಾಗ್ತದೆ. ಅವರ ವಿಷಯ ಮಂಡನೆಯಲ್ಲಿ ಪ್ರಭುತ್ವರಹಿತ ರಾಜಕಾರಣ, ಧರ್ಮರಹಿತ ರಾಜಕಾರಣ, ಮಾನವೀಕರಣದ ರಾಜಕಾರಣ, ಸ್ತ್ರೀ ಪ್ರಜ್ಞೆಯ ರಾಜಕಾರಣ, ಅಭಿವೃದ್ಧಿ ನಿಷ್ಠೆಯ ರಾಜಕಾರಣ ಬುದ್ಧತ್ವದ ರಾಜಕಾರಣ ನಮಗೆ ಬೇಕು ಎಂದು ಎಳೆ ಎಳೆಯಾಗಿ ವಿಶ್ಲೇಷಣೆ ಮಾಡಿದ್ದಾರೆ. ಈ ಎಲ್ಲದರ ಪ್ರತಿರೂಪ ಏನೂಂತಂದ್ರೆ ಒಂದು ಮಾನವತಾವಾದದ ಕಡೆಗೆ ಪರ್ಯಾಯ ರಾಜಕಾರಣ ಹೋಗ್ಬೇಕು ಅನ್ನೋದು ಅವರ ಸಂಕಲ್ಪವಾಗಿದೆ. ಇದನ್ನ ನೋಡ್ತಿದ್ದಾಗ ನನಗನ್ನಿಸ್ತು ಪ್ಲೇಟೊ ಒಂದು ಆದರ್ಶ ರಾಜ್ಯದ ಕಲ್ಪನೆ ಇಟ್ಟು ಮಾತಾಡ್ತಾನೆ. ಮೊಗಳ್ಳಿ ಗಣೇಶ್ ಅವರು ಆ ಪ್ಲೇಟೋನ ಆದರ್ಶ ರಾಜ್ಯ ಪರಿಕಲ್ಪನೆಯತ್ತ ಈ ಪರ್ಯಾಯ ರಾಜಕಾರಣವನ್ನು ತಾತ್ವಿಕತೆಯ ಹಿನ್ನೆಲೆಯಲ್ಲಿ ನೋಡಕ್ಕೆ ಬಯಸ್ತಕ್ಕಂತಹದ್ದು ಈ ಸಮಾಜಕ್ಕೆ ಅನ್ವಯ ಆಗ್ಲಿಕ್ಕೆ ಸಾಧ್ಯ ಇದೆಯಾ ಎನ್ನುವ ಒಂದು ಅನುಮಾನ ನನ್ನಲ್ಲಿ ವ್ಯಕ್ತವಾಗ್ತದೆ. ಯಾಕೆಂತೇಳಿದ್ರೆ ಪ್ಲೇಟೊನ ಐಡಿಯಲ್ ಸ್ಟೇಟ್ ಆ ಗ್ರೀಕ್‌ನಂತಹ ಸಣ್ಣ ರಾಜ್ಯದಲ್ಲಿ ಕೂಡ ಅಸ್ತಿತ್ವಕ್ಕೆ ಬರ್ಲಿಕ್ಕೆ ಸಾಧ್ಯವಾಗದೆ ಹೋಗ್ತದೆ. ಆದ್ರೆ ಡೆಮಾಕ್ರಸಿಯ ತಳಹದಿಯ ಸ್ವರೂಪವನ್ನ ಆ ಒಂದು ಆದರ್ಶ ರಾಜ್ಯದ ಪರಿಕಲ್ಪನೆ ಕೊಡ್ತದೆ. ಹಾಗೆಯೇ ಮೊಗಳ್ಳಿ ಗಣೇಶ್ ಅವರ ಈ ಪ್ರಬಂಧ ಕೂಡ ದಲಿತರು ಮತ್ತು ಪರ್ಯಾಯ ರಾಜಕಾರಣಕ್ಕೆ ಒಂದು ತಾತ್ವಿಕತೆಯ ನೆಲೆಗಟ್ಟನ್ನ ಭದ್ರಪಡಿಸ್ತಕ್ಕಂತಹ ಬುನಾದಿಯನ್ನ ಹಾಕಿಕೊಟ್ಟಿದೆ ಅನ್ನೋದರಲ್ಲಿ ಸಂಶಯವಿಲ್ಲ. ಜೊತೆಗೆ ಕೆಲವು ಸವಾಲುಗಳನ್ನ ಕೂಡ ತಮ್ಮ ಪ್ರಬಂಧದಲ್ಲಿ ನೀಡಿದ್ದಾರೆ. ಪರ್ಯಾಯ ಮಿತ್ರರು ಸವಾಲನ್ನ ಸ್ವೀಕರಿಸಿ ಅದನ್ನ ನಿವಾರಣೆ ಮಾಡ್ಬೇಕು ಅನ್ತಕ್ಕಂತಹದ್ದು ಅವರ ಉದ್ದೇಶವೂ ಆಗಿರ್ತದೆ. ಅವರು ನೀಡಿರುವ ಮೂರು ಸವಾಲುಗಳು ಈ ರೀತಿ ಇವೆ. ಮೊದಲನೆಯದು – ಗ್ರಾಮೀಣ ಸಮಾಜದ ಒಟ್ಟು ರಚನೆಯನ್ನು ಮುರಿದು ಹಳ್ಳಿಗಳ ಸಮಗ್ರ ಬದಲಾವಣೆಗೆ ತೊಡಗುವುದು. ಅಂದ್ರೆ ಅಂಬೇಡ್ಕರ್ ಅವರು ನೀಡಿರುವ ಹಳ್ಳಿಯ ವ್ಯಾಖ್ಯಾನವನ್ನ ಆಧಾರವಾಗಿಟ್ಕೊಂಡು ಇಡೀ ಆ ಸ್ಟ್ರಕ್ಚರನ್ನ ಡೆಮಾಲಿಶ್ ಮಾಡ್ಬೇಕು ಎನ್ನುವುದು ಅವರ ಅಭಿಲಾಷೆ. ಎರಡನೆಯ ಸವಾಲು ಭೂಮಿಯನ್ನು ಸಮಾನವಾಗಿ ಹಂಚುವುದು. ಇದು ಎರಡೂ ದಿನ ವಿಚಾರಸಂಕಿರಣದಲ್ಲಿ ಹೆಚ್ಚು ಚರ್ಚೆಗೆ ಬಂದ ವಿಷಯ. ಮೂರನೆಯ ಸವಾಲು ಕರಕುಶಲ ಸಮುದಾಯಗಳೆಲ್ಲವನ್ನು ಜಾತ್ಯಾತೀತಗೊಳಿಸಿ ಅವುಗಳು ದೇಶಿಯ ತಂತ್ರಜ್ಞಾನಗಳನ್ನು ಆಧುನಿಕ ಜಗತ್ತಿನ ವಿವೇಕದ ಜೊತೆಗೆ ಪರಿಷ್ಕರಿಸಿ ಸಮಕಾಲೀನ ಜಗತ್ತಿನ ಜೊತೆಗೆ ಮುಖಾಮುಖಿ ಮಾಡುವ ಹಾಗೂ ಅವುಗಳಿಗೆ ಆರ್ಥಿಕ ಸ್ವಾಯತ್ತತೆಯನ್ನು ಜಾಗತಿಕವಾಗಿ ನಿರ್ಮಿಸುವ ಅವಕಾಶವನ್ನು ಸೃಷ್ಟಿಸುವುದು. ಇದು ಇಂದಿನ ಜಾಗತೀಕರಣ ಸಂದರ್ಭದಲ್ಲಿ ಬಹಳ ಅರ್ಥಪೂರ್ಣವಾದುದು. ನಮ್ಮ ಸ್ವದೇಶಿ ವಸ್ತುಗಳನ್ನು ರಕ್ಷಿಸಿಕೊಳ್ಳುವ ಪ್ರಕ್ರಿಯೆಗೆ ಈ ಒಂದು ಸರ್ವೋದಯ ಪಕ್ಷ ಯೋಚನೆ ಮಾಡ್ಬೇಕು ಎನ್ನುವ ಸವಾಲನ್ನು ಕೂಡ ಮೊಗಳ್ಳಿ ಗಣೇಶ್ ಕೊಟ್ಟಿದ್ದಾರೆ.

ದಲಿತರು ಮತ್ತು ಪರ್ಯಾಯ ರಾಜಕಾರಣದ ಫಿಲ್ಲರ್ ಅಂತ ನಾವೇನು ಕರೀತೀವಿ ಅದರಲ್ಲಿ ಕೆ.ಎಸ್.ಪುಣ್ಣಣಯ್ಯ ಅವರೂ ಒಬ್ಬರು. ಎರಡು ದಿನಗಳೂ ಅವರು ಆ ಸಮಾರಂಭದಲ್ಲಿ ಭಾಗವಹಿಸಿದ್ರು. ರೈತರು ಮತ್ತು ಪರ್ಯಾಯ ರಾಜಕಾರಣ ಎನ್ನುವ ವಿಚಾರವನ್ನು ಕುರಿತು ಅವರು ಮಾತಾಡಿದ್ರು. ಮೊದಲನೇ ಸಾರ್ವತ್ರಿಕ ಚುನಾವಣೆಯಿಂದ ರಾಜಕಾರಣವನ್ನು ಮಾಡ್ಕೊಂಡು ಬಂದಿದ್ದೇವಿ ಆದರೆ ಎಲ್ಲಿಯೂ ನಾವು ಪರ್ಯಾಯ ಯೋಚನೆಯನ್ನು ಮಾಡಿಲ್ಲ ಎನ್ನುವ ವಿಚಾರದಿಂದ ಪ್ರಾರಂಭ ಮಾಡಿ ದಲಿತ ಚಳುವಳಿ ಮತ್ತು ರೈತ ಚಳುವಳಿ ಒಂದಾಗ್ತೀವಿ ಅಂತ ಹೇಳುವುದೇ ಒಂದು ದೊಡ್ಡ ರಾಜಕೀಯ ಚಿಂತನೆ. ಅಂದ್ರೆ ಇವತ್ತು ನಾವು ಒಂದಾಗ್ತೀವಿ, ನಾವು ಮಾತಾಡ್ತೀವಿ, ಎಲ್ಲಾ ಬಣಗಳನ್ನು ಒಂದು ಕಡೆ ತರ್ತೀವಿ ಎನ್ನುವ ಒಂದು ಚಿಂತನೆನೇ ದೊಡ್ಡ ರಾಜಕೀಯ ಚಿಂತನೆ ಎಂದು ಹೇಳಿ ಮುಂದುವರಿದು, ದಲಿತರು ಮತ್ತು ರೈತರು ಭಾರತದಲ್ಲಿ ಮೊಟ್ಟಮೊದಲನೆಯದಾಗಿ ನಾವು ಒಂದಾಗ್ತೀವಿ ಅಂತ ಹೇಳುವ ವಿಚಾರವೇ ಪರ್ಯಾಯ ಅಂತ ಹೇಳಿದ್ದಾರೆ. ಯಾಕೆ ಈ ಮಾತು ಹೇಳ್ತಾ ಇದ್ದಾರೆ ಅನ್ತಕ್ಕಂತಹದ್ದು ಕೂಡ ಪ್ರಸ್ತುತ ಸನ್ನಿವೇಶದಲ್ಲಿ ತುಂಬ ಅಗತ್ಯವಾಗಿದೆ. ವಲಸೆ ಮತ್ತು ಹೊಲಸು ರಾಜಕಾರಣಕ್ಕೆ ನಾವು ಇತಿಶ್ರೀ ಹಾಡಬೇಕಾಗಿದೆ. ಇವತ್ತು ಆ ಇಡೀ ಕ್ಷೇತ್ರವೇ ವಲಸೆ ಮತ್ತು ಹೊಲಸು ರಾಜಕಾರಣವಾಗಿದೆ. ಆ ಕ್ಷೇತ್ರವನ್ನ ನಾವು ಸರಿಪಡಿಸ್ಬೇಕು. ಈ ದೊಡ್ಡ ರಾಜಕೀಯ ಚಿಂತನೆಯಿಂದ ಅದನ್ನು ಪ್ರಾರಂಭ ಮಾಡ್ಬೇಕು ಅನ್ನುವುದು ಅವರ ಇಂಗಿತವಾಗಿದೆ. ದೈಹಿಕ ಶ್ರಮಕ್ಕೆ ನಮ್ಮ ದೇಶದಲ್ಲಿ ಮಾನ್ಯತೆ ದೊರೆತಿಲ್ಲ ಅನ್ನುವುದು ಅವರ ನೋವು. ದೈಹಿಕ ಶ್ರಮ ಎನ್ನುವುದು ಜ್ಞಾನ ಎನ್ನುವ ಘೋಷಣೆ ಆಗ್ಬೇಕು ಎನ್ನುವುದು ಅವರ ಅಭಿಮತ. ಈ ಜಾತಿ ಪದ್ಧತಿ ಯಾಕೆ ಇನ್ನೂ ಜೀವಂತವಾಗಿದೆ, ಯಾಕೆ ಇನ್ನು ಬಲಿಷ್ಠವಾಗಿದೆ ಅಂತೇಳಿದ್ರೆ ಅದಕ್ಕೆ ಆರ್ಥಿಕ ಅಸಮಾನತೆಯೇ ಕಾರಣ ಎನ್ನುವುದು ಪುಟ್ಟಣಯ್ಯನವರ ವಾದ. ರೈತರ ಆತ್ಮಹತ್ಯೆಯನ್ನು ಕುರಿತು ಅವರು ಮಾತನಾಡ್ತ, ಖಾಸಗಿ ಸಾಲದ ಮೂಲಕ ಇಡೀ ಸಮಾಜವೇ ದುರ್ಬಲತೆಗೆ ಹೋಗಿದೆ ಅನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಪ್ರೊ. ಮುಜಾಫರ್ ಎಚ್. ಅಸಾದಿ ಅವರು ಭಾರತದ ರಾಜಕಾರಣದಲ್ಲಿ ಪರ್ಯಾಯ ರಾಜಕಾರಣವನ್ನು ಕುರಿತು ಮಾತನಾಡಿದ್ದಾರೆ. ಪರ್ಯಾಯ ಮಠಗಳಂತೆ ನಾವು ಕೂಡ ಹೋಗ್ತಾ ಇದ್ದೀವಿ ಎನ್ನುವ ಎಚ್ಚರವಹಿಸಿ ಎನ್ನುವ ಎಚ್ಚರಿಕೆಯ ಮಾತುಗಳು ಆ ಪ್ರಬಂಧದಲ್ಲಿ ನನಗೆ ಕಂಡು ಬರುತ್ತದೆ.

ನಟರಾಜ ಹುಳಿಯಾರ್ ಅವರು ಸಾಮಾಜಿಕ ಚಳುವಳಿಗಳ ಒಕ್ಕೂಟದಿಂದ ಸರ್ವೋದಯ ಕರ್ನಾಟಕದವರೆಗೆ ಎನ್ನುವ ವಿಷಯವನ್ನು ಕುರಿತು ಬರೆದಿದ್ದಾರೆ. ಇವರು ಕೂಡ ತಮ್ಮ ಪ್ರಬಂಧದಲ್ಲಿ ಬುಡಮಟ್ಟದ ಸರ್ವೋದಯ ರಾಜಕಾರಣ ಗ್ರಾಮಮಟ್ಟದಿಂದ ಪ್ರಾರಂಭವಾಗ್ಬೇಕು ಆಗ ಮಾತ್ರ ಜಾಗತೀಕರಣದ ಸವಾಲಿಗೆ ಉತ್ತರ ನೀಡಬಹುದು ಎಂದಿದ್ದಾರೆ. ಅವರ ಪ್ರಕಾರ ನಮ್ಮ ಊರಿನ ಮೇಣದ ಬತ್ತಿಯನ್ನು ಪಕ್ಕದ ಊರಿನಲ್ಲಿ ತಯಾರಾಗುವ ಸೋಪಿಗೆ ಬದಲಾಗಿ ಮಾರುವುದಾದರೆ ಏಕಕಾಲಕ್ಕೆ ಜಾಗತೀಕರಣವನ್ನು ಎದುರಿಸಿದಂತಾಯ್ತು, ದೇಶಿ ವ್ಯವಸ್ಥೆಯನ್ನು ಬಲಪಡಿಸಿದಂತಾಯ್ತು, ನಮ್ಮೂರಿನ ದುಡಿಯುವ ಕೈಗಳಿಗೆ ಕೆಲಸ ಒದಗಿಸಿದಂತಾಯ್ತು ಎನ್ನುವ ಅರ್ಥಪೂರ್ಣವಾದ ವಿಚಾರವನ್ನು ಮಂಡಿಸಿದ್ದಾರೆ. ಇದು ತುಂಬಾ ಗಂಭೀರವಾದಂತಹ ವಿಷಯ.

ಹಿರಿಯ ವಿಮರ್ಶಕರಾದ ಪ್ರೊ.ಜಿ.ಎಚ್.ನಾಯಕ ಅವರು ಅಧ್ಯಕ್ಷ ಭಾಷಣದಲ್ಲಿ ಶ್ರೀನಿವಾಸ ಪ್ರಸಾದ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ, ನಮಗೆ ಬೇಕಾಗಿರುವುದು ಪರ್ಯಾಯ ರಾಜಕಾರಣವಲ್ಲ ಪರ್ಯಾಯ ರಾಜಕೀಯ ವ್ಯವಸ್ಥೆ ಎಂದು ಹೇಳಿದ್ದಾರೆ. ಆದರೆ ಪರ್ಯಾಯ ವ್ಯವಸ್ಥೆ ಯಾವುದು ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ ಎಂದು ತಿಳಿಸಿ ಒಂದು ನಿರ್ದಿಷ್ಟವಾದ ಪೊಲಿಟಿಕಲ್ ಐಡಿಯಾಲಜಿ ಅವರಲ್ಲಿ ಹೊಮ್ಮಲಿಲ್ಲ ಎಂದು ಹೇಳಿದ್ದಾರೆ. ಕೋಮು ಸೌಹಾರ್ದವೇದಿಕೆಯ ಮಿತ್ರರು ಕೆಲವು ಸಲಹೆಗಳನ್ನು ನೀಡಿದರು. ಆ ಸಲಹೆಗಳನ್ನು ಜಿ.ಎಚ್.ನಾಯಕ ಅವರು ತಿರಸ್ಕಿರಿಸಿದರು. ನಟರಾಜ್ ಹುಳಿಯಾರ್ ಕೊಟ್ಟಂತಹ ಸಲಹೆಯನ್ನು ಕೂಡ ಅವರು ತಿರಸ್ಕರಿಸಿದರು. ಕೋಮು ಸೌಹಾರ್ದವೇದಿಕೆಯನ್ನು ಪರ್ಯಾಯ ರಾಜಕಾರಣ ಬಳಸಿಕೊಳ್ಬಹುದು ಎನ್ನುವ ಸಲಹೆಗೆ ಜಿ.ಎಚ್.ನಾಯಕ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿ ಮಠಾಧಿಪತಿಗಳು ಸುಧಾರಣಾವಾದಿಯ ಮನೋಭಾವದಿಂದ ಇರಬಹುದು. ಪ್ರಗತಿಪರ ಸ್ವಾಮಿಗಳು ಇರಬಹುದು ಅವರ ಬಗೆಗೆ ಗೌರವ ಇದೆ. ಪ್ರಾಮಾಣಿಕತೆ ಬಗ್ಗೆ ಆದರೆ ಅವರುಗಳು ಮಠಾಧಿಪತಿಯ ಅಸ್ಥಿತ್ವದಿಂದ ಹೊರಬರಲಿಕ್ಕೆ ಸಾಧ್ಯವಾಗಿಲ್ಲ. ಅವರೇನಾದ್ರೂ ಹೊರಗೆ ಬಂದ್ರೆ ತಮ್ಮ ಕಿರೀಟಗಳನ್ನ ತಮ್ಮ ಸ್ಥಾನಗಳನ್ನ ಕಳ್ಕೊತ್ತಾನೆ. ಅಂತಹ ಹಿಡಿತದ ಒಳಗಿನ ಜೊತೆಗೆ ಯಾವ ರೀತಿ ನಿಮ್ಮ ಪರ್ಯಾಯ ಹೋಗಲು ಸಾಧ್ಯ ಎನ್ನುವುದು ಜಿ.ಎಚ್.ನಾಯಕ ಅವರ ಪ್ರಶ್ನೆಯಾಗಿದೆ.

ಟಿ.ಆರ್.ಚಂದ್ರಶೇಖರ್ ಅವರು ಪರ್ಯಾಯ ವ್ಯವಸ್ಥೆಯನ್ನು ಅಭಿವೃದ್ಧಿಯ ಪರಿಕಲ್ಪನೆಯಲ್ಲಿಟ್ಟು ನೋಡಿದ್ದಾರೆ. ಅವರ ದೃಷ್ಟಿಯಲ್ಲಿ ನಮ್ಮ ಅಭಿವೃದ್ಧಿನೇ ಒಂದು ಪರ್ಯಾಯ ಎನ್ನುವಂತಹದ್ದು. ಗದ್ದಿಗೆಯ ರಾಜಕಾರಣ ಸಾಕು, ಜನತೆಯ ರಾಜಕಾರಣಬೇಕು ಎನ್ನುವುದು ಕೋಡಿಹಳ್ಳಿ ಚಂದ್ರಶೇಖರ್ ಅವರ ನಿಲುವು. ಅಲ್ಲಿ ಮಂಡನೆಯಾದ ಬಹುತೇಕ ಪ್ರಬಂಧಗಳ ತಿರುಳನ್ನು ಗಮನಿಸಿದಾಗ ಶ್ರೀಸಾಮಾನ್ಯನ ಕಡೆಗೆ ಈ ಪರ್ಯಾಯ ರಾಜಕಾರಣ ಕೇಂದ್ರೀಕೃತವಾಗಿರುವುದು ಕಂಡು ಬರುತ್ತದೆ. ಪರ್ಯಾಯ ರಾಜಕಾರಣ ಎನ್ನುವ ಪದವೇ ಇವತ್ತು Fashionable ಮತ್ತು Popular Word ಆಗಿದೆ. ಈ Fashionable Word ಮತ್ತು Popular Word ಇವೆರಡೂ ಸಹ ಶ್ರೀಸಾಮಾನ್ಯನ ಜೊತೆ ಇರ್ಬೇಕು. ಶ್ರೀಸಾಮಾನ್ಯನೇ ಈ ಪರ್ಯಾಯ ವ್ಯವಸ್ಥೆಯನ್ನ ಕಂಡುಕೊಳ್ತಕ್ಕಂತಹ, ಪರ್ಯಾಯ ವ್ಯವಸ್ಥೆಗೆ ತಳಹದಿಯನ್ನ ಕೊಡ್ತಕ್ಕಂತಹ, ಅದಕ್ಕೆ ಶಕ್ತಿಯನ್ನು ತುಂಬ್ತಕ್ಕಂತಹ ಕೆಲ್ಸವನ್ನು ಮಾಡ್ಬೇಕು ಅನ್ನುವಂತಹ ವಿಚಾರ ತಿಳಿದುಬರ್ತದೆ.

ಈ ದೇಶದ ಎಲ್ಲ ವಿದ್ಯಾವಂತರು, ಬುದ್ಧಿಜೀವಿಗಳು, ಹೊಸ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಂತಹ ಶಿಕ್ಷಕರು, ಅವರಿಗಿಂತ ಹೆಚ್ಚಾಗಿ ಕಾನೂನು ರಚಿಸಿ ಅನುಸರಿಸುತ್ತಿರುವ ಎಲ್ಲರೂ ವಿಫಲಗೊಂಡಿದ್ದಾರೆ ಎಂದು ಪ್ರೊ.ರವಿವರ್ಮಕುಮಾರ್ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದ್ದಾರೆ. ಅವರು ಹೊಸ ಸಮಾಜವನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಶ್ರೀಸಾಮಾನ್ಯನ ಕೈಗೆ ನೀಡುವ ಅಭಿಪ್ರಾಯ ತಾಳಿದ್ದಾರೆ. ನಾವು ನಿಜವಾಗಿಯೂ ಪರ್ಯಾಯ ರಾಜಕಾರಣ ಮಾಡ್ಬೇಕಾದ್ರೆ ಶ್ರೀಸಾಮಾನ್ಯನ ಹೆಸರಲ್ಲಿ ಮಾಡ್ಬೇಕು. ಅವನೇ ನಮ್ಮ ಗುರು. ಆಗ ಮಾತ್ರ ಪರ್ಯಾಯ ರಾಜಕಾರಣ ಅರ್ಥಪೂರ್ಣವಾಗ್ತದೆ ಅಂತ ತಿಳಿಸಿದ್ದಾರೆ. ದಲಿತರು ಪೂನಾ ಒಡಂಬಡಿಕೆಯಲ್ಲಿ ಕಳ್ಕೊಂಡಿರುವ ಡಬಲ್ ವೋಟ್ ಅನ್ನು ಪಡೆಯುವ ಕಾರ್ಯಕ್ಕೆ ತೊಡಗಬೇಕು ಎಂದಿದ್ದಾರೆ. ಯಾವ್ಯಾವ ವ್ಯವಸ್ಥೆಯಲ್ಲಿ ಮೀಸಲಾತಿ ಬೇಕು ಅನ್ನೋದನ್ನ ಅಂಕಿ ಅಂಶಗಳ ಮೂಲಕ ಸ್ಪಷ್ಟಪಡ್ಸಿದ್ದಾರೆ.

ದೇವನೂರು ಮಹಾದೇವ ಅವರು, ಸಹೋದರರೆ, ನಾವು ದಾಯಾದಿ ಮನೋಭಾವದಿಂದ ಹೊರಬರಬೇಕು. ಈ ನಮ್ಮ ಅಸಹಾಯಕ ಪರಿಸ್ಥಿತಿಯಲ್ಲಾದರು ನಾವು ಸಹೋದರರಂತೆ ಬೆರೆತುಕೊಳ್ಳದಿದ್ರೆ ನಮಗೆ ಉಳಿಗಾಲವಿಲ್ಲ ಎಂದಿದ್ದಾರೆ. ಅಂಬೇಡ್ಕರ್ ಅವರು ಅಧ್ಯಕ್ಷರಾಗಿ, ಲೋಹಿಯಾ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ಸಮಾಜವಾದಿ ಪಕ್ಷವನ್ನು ಪುನರೂಪಿಸುವ ಪ್ರಯತ್ನ ಅಂಬೇಡ್ಕರ್ ಅವರ ನಿಧನದಿಂದ ಅಲ್ಲಿಗೇ ನಿಂತಿತು. ಈ ಜವಾಬ್ದಾರಿಯನ್ನ ನಾವೀಗ ಕರ್ನಾಟಕದಲ್ಲಿ ಕೈಗೆತ್ತಿಕೊಂಡಿದ್ದೀವಿ. ಹಾಗೆಯೇ ಅಂತರಂಗದಲ್ಲಿ ಇದನ್ನು ಸಾಧಿಸುವ, ಬಹಿರಂಗದಲ್ಲಿ ಇದನ್ನು ಕಾರ್ಯರೂಪಗೊಳಿಸುವ ಒಂದು ಗುರಿಯನ್ನು ಇಟ್ಕೊಂಡು ಕರ್ನಾಟಕ ಸರ್ವೋದಯ ಪಕ್ಷದ ಜವಾಬ್ದಾರಿಯನ್ನ ಹೊರ್ಲಿಕ್ಕೆ ತಯಾರಿದ್ದೀನಿ ಅಂತ ತಿಳ್ಸಿದ್ದಾರೆ. ಗೀಜಗ ಹೇಗೆ ತನ್ನ ಗೂಡನ್ನು ಕುಟ್ಟುತ್ತದೆಯೋ ಅದೇ ರೀತಿ ದಲಿತರು ಮತ್ತು ಪರ್ಯಾಯ ವ್ಯವಸ್ಥೆ ಕೂಡ ಆಗ್ಬೇಕು ಎನ್ನುವ ಇಂಗಿತವನ್ನು ಅವರು ವ್ಯಕ್ತಪಡ್ಸಿದ್ದಾರೆ.

ಇನ್ನೂ ಹಲವಾರು ಮಿತ್ರರು ಅಲ್ಲಿ ತಮ್ಮ ಪ್ರಬಂಧ ಮಂಡಿಸಿದ್ದಾರೆ. ದಾಸನೂರು ಕೂಸಣ್ಣ ಅವರು ದಲಿತರ ಒಡಕಿನ ರಾಜಕಾರಣದ ಬಗ್ಗೆ ಮಾತನಾಡ್ತ ಈ ಒಡಕು ಯಾವ ದಿಕ್ಕಿಗೆ ಹೋಗ್ತಾ ಇದೆ, ಇದರಿಂದ ಆಗ್ತಕ್ಕಂತಹ ಅನಾಹುತ ಏನು, ಅದನ್ನ ಹೇಗೆ ತಪ್ಪಿಸಬಹುದು ಅನ್ನೋದನ್ನ ಕುರಿತು ಚರ್ಚೆ ಮಾಡಿದ್ದಾರೆ. ರಹಮತ್ ತರೀಕೆರೆ ಅವರು ಅಹಿಂದ ರಾಜಕಾರಣ ಮತ್ತು ಜಾಗತೀಕರಣವನ್ನು ಕುರಿತು ಬರ್ದಿದ್ದಾರೆ. ಈಗ ಹೆಚ್ಚು ಚಲಾವಣೆಯಲ್ಲಿರ್ತಕ್ಕಂತಹ ನಾಣ್ಯ ಆಹಿಂದ ರಾಜಕಾರಣ. ದಲಿತರ ಪರ್ಯಾಯ ರಾಜಕಾರಣ ಕೂಡ ಅದರ ಜೊತೆಗೆ ಆ ದಿಕ್ಕಿನತ್ತ ಹೋಗ್ತಾ ಇದೆ ಎಂದಿದ್ದಾರೆ. ಬಿ.ಎಂ.ಪುಟ್ಟಯ್ಯನವರು ದಲಿತಶಾಸ್ತ್ರದ ಸ್ವರೂಪದಲ್ಲಿ ರೈತಸಂಘ+ದಲಿತ ಸಂಘ=? ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಕಿರಿಯ ಮಿತ್ರರಾದ ನರೇಂದ್ರ.ಕುಮಾರ್ ಅವರು ಪ್ರಜಾಪ್ರಭುತ್ವದ ಆಶಯ ಮತ್ತೆ ಹುಟ್ಟಬೇಕಾದರೆ ಪರ್ಯಾಯ ರಾಜಕಾರಣವೇ ಒಂದು ಮಾರ್ಗ ಅಂತ ತಿಳ್ಸಿದ್ದಾರೆ. ಒಟ್ಟಿನಲ್ಲಿ ಆ ಒಂದು ಪ್ರಯತ್ನದಿಂದ ವಿವಿಧ ಸಂಘಟನೆಗಳನ್ನ ಒಂದು ಕಡೆ ತರ್ತಕ್ಕಂತಹ ಪ್ರಯತ್ನವನ್ನು ಎರಡೂ ವಿಶ್ವವಿದ್ಯಾನಿಲಯಗಳು ಸೇರಿ ಮಾಡಿ ಒಂದು ರಾಜಕೀಯ ಪಕ್ಷದ ಉಗಮಕ್ಕೆ ಕಾರಣಕರ್ತರಾಗಿದೆ. ಈ ಪುಸ್ತಕದ ಸಂಪಾದಕರಾದ ಡಾ. ಪಿ.ಮಹಾದೇವಯ್ಯ ಅವರು ವಿಶ್ವವಿದ್ಯಾಲಯಗಳು ಸಮಾಜೀಕರಣಗೊಳಿಸುವ ಕೆಲಸವನ್ನು ಮಾಡ್ತಾ ಇದ್ದೀವಿ ಅನ್ನುವ ಮಾತನ್ನ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದಾರೆ. ಅದಕ್ಕೆ ಪ್ರತಿರೂಪವಗಿ ದಲಿತರು ಮತ್ತು ಪರ್ಯಾಯ ರಾಜಕಾರಣ ಎನ್ನುವ ಪುಸ್ತಕ ಹೊರಹೊಮ್ಮಿರುವುದು ಮಹತ್ವದ ಮೈಲುಗಲ್ಲು ಅಂತ ಈ ಸಂದರ್ಭದಲ್ಲಿ ಹೇಳ್ಲಿಕ್ಕೆ ಬಯಸ್ತೀನಿ.

ಎರಡನೆಯ ಪುಸ್ತಕ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರ ಸಂಪಾದಕತ್ವದಲ್ಲಿ ಹೊರಬಂದಿರುವ “ದಲಿತರು ಮತ್ತು ಚರಿತ್ರೆ”. ಈ ಪುಸ್ತಕ ಹದಿನಾರು ಲೇಖನಗಳನ್ನೊಳಗೊಂಡಿದೆ. ನಮ್ಮ ಚರಿತ್ರೆಯನ್ನು ಮತ್ತೊಮ್ಮೆ ಅವಲೋಕಿಸುವ ಪ್ರಯತ್ನವನ್ನು ಈ ಪುಸ್ತಕ ಮಾಡಿದೆ. ಪ್ರೊ.ಸಿದ್ಧಲಿಂಗಯ್ಯನವರು ಹೇಲಿದ ಹಾಗೆ ಚರಿತ್ರೆಯಲ್ಲಿ ಅಡಗಿರುವ ಒಂದು ಹೊಸ ವಿಷಯವನ್ನು ನಮಗೆ ತಲುಪಿಸುವಲ್ಲಿ ಈ ಪುಸ್ತಕ ಸಫಲವಾಗಿದೆ. ಇದು ದಲಿತರ ವಿವಿಧ ಮುಖಗಳನ್ನು ತಿಳಿಸುತ್ತದೆ.

ಮೂರನೆಯ ಪುಸ್ತಕ ಡಾ. ಟಿ.ಆರ್.ಚಂದ್ರಶೇಖರ್ ಅವರ ಸಂಪಾದಕತ್ವದ “ದಲಿತ ಅಧ್ಯಯನ”, ಇದರಲ್ಲಿ ಹತ್ತೊಂಬತ್ತು ಲೇಖನಗಳಿವೆ. ವರ್ಣ-ಜಾತಿ, ವರ್ಗ-ಲಿಂಗ ಜಾಗತೀಕರಣದ ಸಂದರ್ಭದಲ್ಲಿ ದಲಿತ ಚಿಂತನೆ, ದಲಿತ ಸಾಹಿತ್ಯ ಮತ್ತು ಸಂಸ್ಕೃತಿ, ದಲಿತ ಚಳುವಳಿ ಮತ್ತು ಸಮಕಾಲೀನ ಎಂದು ನಾಲ್ಕು ಭಾಗಗಳಾಗಿ ಮಾಡಿದ್ದಾರೆ. ಈ ಪುಸ್ತಕದಲ್ಲಿ ಏನು ಗಮನಿಸಿದೆ ಅಂತೇಳಿದ್ರೆ ಕೆಲವರಿಗೆ ಮಾತ್ರ ಹೆಚ್ಚು ಅವಕಾಶ ಒದಗಿಸಿಕೊಟ್ಟಿರುವುದು. ಒಬ್ಬ ಲೇಖಕನಿಂದ ಒಂದು ಲೇಖನ ಪಡ್ಕೊಂಡು ಉಳಿದವರಿಗೆ ಅವಕಾಶ ಮಾಡಿ ಕೊಡ್ಬಹುದಿತ್ತು. ಆದ್ರೆ ಮಿತ್ರ ಟಿ.ಆರ್.ಚಂದ್ರಶೇಖರ ಅವರು ಈ ಕೆಲಸವನ್ನ ಮಾಡಿಲ್ಲ. ಒಬ್ಬ ಲೇಖಕನ ಎರಡು ಮೂರು ಲೇಖನಗಳು ಆ ಪುಸ್ತಕದಲ್ಲಿ ಪ್ರಕಟವಾಗಿವೆ. ಅವೆಲ್ಲ ಮೌಲಿಕವಾದ ಲೇಖನಗಳೇ. ಆದರೆ ಇನ್ನೂ ಕೆಲವು ಯುವ ಬರಹಗಾರರಿಗೆ ಅವಕಾಶ ಕೊಡಬಹುದಾಗಿತ್ತಲ್ಲ ಎನ್ನುವುದು ನನ್ನ ಇಂಗಿತು. ಹಾಗಾಗಿ ಇನ್ನು ಮುಂದೆ ಅವರು ಈ ನ್ಯೂನತೆಯನ್ನ ಸರಿಪಡಿಸಿಕೊಳ್ಳಲಿ.

ಸ್ನೇಹಿತರೇ, ಕನ್ನಡ ವಿಶ್ವವಿದ್ಯಾಲಯ ಈ ಮೂರು ಪುಸ್ತಕಗಳನ್ನ ತುಂಬ ಅಚ್ಚುಕಟ್ಟಾಗಿ ಪ್ರಕಟಣೆ ಮಾಡಿದೆ. ಪುಸ್ತಕ ಬೆಲೆ ಕೂಡ ನಮಗೆ ನಿಲುಕುವಂತೆಯೇ ಇದೆ.

—-
(೨೦೦೬ರ ಜನವರಿ ೧೨, ೧೩ ರಂದು ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹಯೋಗದಲ್ಲಿ ನಡೆದ “ದಲಿತರು, ಭಾಷೆ ಮತ್ತು ಸಮಾಜ” ವಿಚಾರ ಸಂಕಿರಣದಲ್ಲಿ ಬಿಡುಗಡೆಗೊಂಡ, ‘ದಲಿತರು ಮತ್ತು ಪರ್ಯಾಯ ರಾಜಕಾರಣ’, ‘ದಲಿತರು ಮತ್ತು ಚರಿತ್ರೆ’ ಹಾಗೂ ‘ದಲಿತ ಅಧ್ಯಯನ’ ಕೃತಿಗಳನ್ನು ಕುರಿತು ಮಾಡಿದ ಭಾಷಣ)