ರಾಜಕೀಯದಲ್ಲಿ ಆಗಾಗ ವಿಭಿನ್ನ ರೀತಿಯ ಚರ್ಚೆ, ಆರೋಪ ಎಲ್ಲವೂ ನಡೆಯುತ್ತಿರುತ್ತವೆ. ಹಾಗೆ ಕೆಲವೊಮ್ಮೆ ಇದು ವೈಯಕ್ತಿಕ ಹಂತವನ್ನು ತಲುಪುವುದೂ ಉಂಟು. ಆದರೆ, ಇಂತಗ ಚರ್ಚೆ, ಆರೋಪ, ಅಭಿಪ್ರಾಯಗಳನ್ನು, ಅವು ವ್ಯಕ್ತಿಗತವಾಗಿರದಿದ್ದರೆ, ಸ್ವೀಕರಿಸಬೇಕಾದ್ದು ಅತ್ಯಗತ್ಯ. ಈಗ ಎಲ್ಲರ ಗಮನವನ್ನೂ ಸೆಳೆದಿರುವ, ಆಂಗ್ಲ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಎಂಬ ವಿಚಾರದ ಬಗ್ಗೆ ಇಂತಹ ಸಾರ್ವಜನಿಕ ಚರ್ಚೆ ನಡೆಯುತ್ತಿಲ್ಲ. ನಮ್ಮ ಹಿರಿಯ ಪ್ರಾಧ್ಯಾಪಕರು, ಸಾಮಾಜಿಕ ಕಾರ್ಯಕರ್ತರು, ಇಂಥಹ ಚರ್ಚೆಗೆ ಮನ್ನಣೆ ನೀಡುತ್ತಿಲ್ಲ. ನಿಜ, ಆಂಗ್ಲ ಭಾಷೆಯ ಬೋಧನೆಯ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುವವರು ಹೊಂದಿರುವ ಮೂಲಭೂತ ಕಾಳಜಿಯನ್ನು ನಾನು ಪ್ರಶ್ನಿಸುತ್ತಿಲ್ಲ. ಅವರ ಕಾಳಜಿ, ಕಳಕಳಿಯ ಬಗ್ಗೆ ಗೌರವವನ್ನು ಇಟ್ಟುಕೊಂಡೇ, ಯಾವುದೇ ಪೂರ್ವ ನಿರ್ಧಾರವನ್ನು ಇಟ್ಟುಕೊಳ್ಳದೇ ಈ ಪ್ರಶ್ನೆಯನ್ನು ನೋಡಬೇಕಾಗಿದೆ.

ಮೊದಲನೆಯದಾಗಿ, ಒಂದನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳು, ಕೇವಲ ೬ ವರ್ಷದವರಾಗಿರುವುದರಿಂದ ಅವರು ಕನ್ನಡವನ್ನು ಬಲಿ ಕೊಡದೇ ಇಂಗ್ಲಿಶ್ ಕಲಿಯುವುದು ಸಾಧ್ಯವಿಲ್ಲ ಎಂಬ ಮಾತನ್ನು ನೋಡೋಣ. ವಿಶ್ವದ ಬೇರೆ ಬೇರೆ ಭಾಷಾತಜ್ಞರು ಮಕ್ಕಳ ಭಾಷಾ ಕಲಿಕೆಯ ಸಾಮರ್ಥ್ಯದ ಬಗ್ಗೆ ನಡೆಸಿದ ಅಧ್ಯಯನ ಇಂತಹ ಅಭಿಪ್ರಾಯಕ್ಕೆ ಪೂರಕವಾಗಿಲ್ಲ ಎಂಬುದು ಗಮನಾರ್ಹ. ಮೂರರಿಂದ ಆರನೆಯ ವಯಸ್ಸಿನ ಅವಧಿಯಲ್ಲಿ ಮಕ್ಕಳು ಎರಡನೆಯ ಅಥವಾ ಮೂರನೆಯ ಭಾಷೆಯನ್ನು ಕಲಿಯುವುದು ಮಾತ್ರವಲ್ಲ. ಮಾತೃಭಾಷೆಯನ್ನು ಕಲಿತೂ ಬೇರೆ ಭಾಷೆಯನ್ನೂ ಕಲಿಯಬಲ್ಲದು. ಆರನೆಯ ವಯಸ್ಸಿನಲ್ಲಿ ಅವಧಿಯಲ್ಲಿ ಮಕ್ಕಳು ಎರಡನೆಯ ಅಥವಾ ಮೂರನೆಯ ಭಾಷೆಯನ್ನು ಕಲಿಯುವುದು ಮಾತ್ರವಲ್ಲ. ಮಾತೃಭಾಷೆಯನ್ನು ಕಲಿತೂ ಬೇರೆ ಭಾಷೆಯನ್ನೂ ಕಲಿಯಬಲ್ಲದು. ಆರನೆಯ ವಯಸ್ಸಿನಲ್ಲಿ ಮಗುವಿನ ಮೆದುಳು ಎಲ್ಲ ರೀತಿಯ ಬೆಳವಣಿಗೆಯನ್ನೂ ಹೊಂದಿ, ಮಾಹಿತಿಯನ್ನು ತನ್ನ ನೆನಪಿನಲ್ಲಿ ದಾಸ್ತಾನು ಮಾಡಿಕೊಳ್ಳುತ್ತದೆ.

“ಭಾಷಾ ಕಲಿಕೆಯ ಸಂಕೀರ್ಣತೆಯ ನಡುವೆಯೂ ಮೂರನೆಯ ವಯಸ್ಸಿನಲ್ಲಿ ಹಾಗೂ ಅದಕ್ಕಿಂತ ಮೊದಲು ಒಂದು ಅಥವಾ ಹೆಚ್ಚು ಭಾಷೆಯನ್ನು ಕಲಿಯುವ ಸಾಮರ್ಥ್ಯವನ್ನು ಮಗು ಹೊಂದಿರುತ್ತದೆ” (ಹೆಲನ್ ಡೋರಾನ್, ಅರ್ಲಿ ಇಂಗ್ಲಿಶ್). ಬಹುತೇಕ ಭಾಷಾತಜ್ಞರು ಹೇಳುವಂತೆ ೫ ಅಥವಾ ೬ನೆಯ ವಯಸ್ಸಿನ ಮಗು “ಭಾಷಾ ಪ್ರೌಢ”. ಆತ ತಾನು ಕಲಿತ ಭಾಷೆಯನ್ನು ನಿಯಂತ್ರಿಸಿ ಇಟ್ಟುಕೊಳ್ಳಬಲ್ಲ (ಹೊಕೆಟ್, ಎ ಕೋರ್ಸ್ ಇನ್ ಮಾಡರ್ನ್ ಲಿಂಗ್ವಿಸ್ಟಿಕ್ಸ್).

ಡಾ. ಲಿನ್‌ಬರ್ಗ್‌ ಅವರಂತಹ ಭಾಷಾ ಪರಿಣಿತರು, ಮನೋಭಾಷಾತಜ್ಞರು, ಭಾಷೆಯ ಮೂಲದ ಅಧ್ಯಯನ ಮಾಡಿದವರು ಬೇರೆ ಬೇರೆ ದಾರಿಯ ಮೂಲಕ ಇದೇ ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ. “ಭಾಷಾ ಕಲಿಕೆಗೆ ಮೂರು ಅಥವಾ ನಾಲ್ಕು ವರ್ಷ ಸರಿಯಾದ ವಯಸ್ಸು” ಎಂದು ಲಿನ್‌ಬರ್ಗ್‌ ಹೇಳುತ್ತಾರೆ.

“ಇದೇ ವಯಸ್ಸಿನಲ್ಲಿ ಸರಿಯಾದ ವಾಕ್ಯವನ್ನು ಹೇಳಲು ಕಲಿಯುವುದು ಮಾತ್ರವಲ್ಲ, ಅತೀ ಕಡಿಮೆ ಅವಧಿಯಲ್ಲಿ ಬೇರೆ ಭಾಷೆಯನ್ನು ಕಲಿಯಬಲ್ಲದು. ಈ ಅವಧಿಯಲ್ಲಿ ಮಾನವ ಭಾಷೆಯನ್ನು ಕಲಿಯುವ ಅವಕಾಶವನ್ನು ಕಲ್ಪಿಸದಿದ್ದರೆ, ಭಾಷೆಯನ್ನು ಕಲಿಯುವ ಶಕ್ತಿಯೇ ಆ ಮಗುವಿಗೆ ಹೊರಟು ಹೋಗಬಲ್ಲದು” (ಲಿನ್‌ಬರ್ಗ್‌, ಬಯಲಾಜಿಕಲ್ ಫೌಂಡೇಶನ್ ಆಫ್ ಲಾಂಗ್ವೇಜ್).

ಎರಡನೆಯ ಭಾಷೆಯ ಕಲಿಕೆಯ ಕುರಿತ ಇನ್ನೊಂದು ಅಧ್ಯಯನವು ಕಲಿಕೆ ಮತ್ತು ವಯೋಮಾನದ ಕುರಿತು ಇದನ್ನೇ ಹೇಳುತ್ತದೆ.

“ಮೊದಲನೆಯ ಮತ್ತು ಎರಡನೆಯ ಭಾಷೆಯ ಕಲಿಕೆಯ ಬಗ್ಗೆ ಸ್ಪಷ್ಟವಾದ ಗೆರೆ ಎಳೆಯುವುದು ಸಾಧ್ಯವಿಲ್ಲ. ಯಾಕೆಂದರೆ ಮೊದಲ ಭಾಷಾಕಲಿಕೆ ಮುಗಿಯುವುದಕ್ಕೆ ಮೊದಲೇ ಎರಡನೆಯ ಭಾಷಾಕಲಿಕೆ ಪ್ರಾರಂಭವಾಗಿ ಬಿಡುತ್ತದೆ. ಮೂರನೆಯ ವರ್ಷದಿಂದಲೇ ಎರಡನೆಯ ಭಾಷೆಯನ್ನು ಮಗು ಕಲಿಯಲು ಪ್ರಾರಂಭಿಸುತ್ತದೆ……” (ಕೆನ್, ಸೆಕೆಂಡ್ ಲಾಂಗ್ವೇಜ್ ಅಕ್ಷಿಸಿಶನ್). ಮಗು ಒಂದು ಅಥವಾ ಅದಕ್ಕಿಂತ ಹೆಚ್ಚು ಭಾಷೆಯನ್ನು ಏಕಕಾಲದಲ್ಲಿ ಕಲಿಯಬಲ್ಲದು ಎಂಬುದು ಈಗಾಗಲೇ ಬೆಳಕಿಗೆ ಬಂದಿದೆ. ಅದರಂತೆ ನ್ಯೂರೋಸೈಕಾಲಜಿಯ ಪ್ರಕಾರ ಎಂಟು ಅಥವಾ ಒಂಬತ್ತನೆಯ ವರ್ಷದಲ್ಲಿ ಮಾನಸಿಕ ಪ್ರೌಢಿಮೆ ಬರುವುದರಿಂದ, ಆಮೇಲೆ ಬೇರೆ ಭಾಷೆಯನ್ನು ಕಲಿಯುವುದು ಕಷ್ಟ (ಮ್ಯಾಕಿಂತೋಶ್ ಅಂಡ್ ಸ್ಟೀವನ್ಸ್-ಲಿಂಗ್ವಿಸ್ಟಿಕ್ ಸೈನ್ಸ್ ಅಂಡ್ ಲಾಂಗ್ವೇಜ್ ಟೀಚರ್ಸ್).

ಇದೆಲ್ಲ ಸರಿ. ಎರಡನೆಯ ಭಾಷೆ ವಿದೇಶಿ ಅಥವಾ ಅಪರಿಚಿತ ಭಾಷೆಯಾದರೆ ಈ ವಾದ ನಿಲ್ಲಬಲ್ಲುದೆ…? ಡಾ. ರಿಂಜೋ ಟೀಟೋನ್ ಈ ವಿಚಾರದ ಬಗ್ಗೆ ಹೀಗೆ ಹೇಳುತ್ತಾರೆ: “ತಮ್ಮ ಸಣ್ಣ ವಯಸ್ಸಿನಲ್ಲೇ ಅಪರಿಚಿತ ಭಾಷೆಯನ್ನು ಕಲಿಯುವ ಮಕ್ಕಳು ತಮ್ಮ ಮೂಲ ಭಾಷೆಗಿಂತ ಅದನ್ನು ಹೆಚ್ಚು ಅಳವಾಗಿ ತಿಳಿದುಕೊಳ್ಳುತ್ತಾರೆ. ಯಾಕೆಂದರೆ ಭಾಷೆ ಎನ್ನುವುದು ಏನು ಎಂಬುದು ಅವರಿಗೆ ಅರ್ಥವಾಗುತ್ತದೆ. ಅವರ ಸಾಂಸ್ಕೃತಿಕ ನೋಟ ವಿಸ್ತಾರವಾಗುತ್ತದೆ. ಏಕೆಂದರೆ ತಮ್ಮ ಮಾತೃಭಾಷೆಯನ್ನು ಮಾತ್ರ ಕಲಿಯುವ ಮಕ್ಕಳು ವಿಶ್ವದಲ್ಲಿ ತಮ್ಮ ಭಾಷೆ ಮತ್ತು ಪದ್ಧತಿ ಮಾತ್ರ ಮುಖ್ಯ ಎಂದುಕೊಂಡಿರುತ್ತಾರೆ”.

ಇಂಡಿಯಾದಂತಹ ಬಹುಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ನಾಡಿನಲ್ಲಿ ಇದು ಮುಖ್ಯವಾಗುತ್ತದೆ.

-೨-

ನಮಗೆ ಮಾತನಾಡಲು ಭಾಷೆ ಬೇಕು. ಮಕ್ಕಳು ಮಾತನಾಡಲು ಸಾವಕಾಶವಾಗಿ ಕಲಿಯುತ್ತವೆ. ಮಕ್ಕಳು ಭಾಷೆಯನ್ನು ಶಬ್ದದ ಮೂಲಕ, ಅದನ್ನು ಕೇಳುವ ಮೂಲಕ ಕಲಿಯುತ್ತದೆ. ಮಕ್ಕಳಿಗೆ ಕಲಿಸುವಾಗ ಶಬ್ದದ ಜೊತೆಗೆ ವಸ್ತುಗಳ ಮೂಲಕ ಕಲಿಸಿದರೆ ಹೆಚ್ಚು ಅನುಕೂಲ. ಯಾಕೆಂದರೆ ಆಂಗ್ಲ ಭಾಷೆಯ ಬಹಳಷ್ಟು ಶಬ್ದಗಳನ್ನು ಅನೇಕ ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಮಾತನಾಡುವಾಗಲೇ ಬಳಸುತ್ತಿರುತ್ತವೆ.

ಬೆಂಗಳೂರಿನಲ್ಲಿರುವ ಇಂಗ್ಲಿಶ್ ಪ್ರಾದೇಶಿಕ ಸಂಸ್ಥೆ ಶಿಕ್ಷಕರ ಸಹಕಾರ ಮತ್ತು ಅಭಿಪ್ರಾಯವನ್ನು ಪಡೆದುಕೊಂಡು ಈ ವಿಷಯವನ್ನು ಗುರುತಿಸಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು, ಪಾಲಕರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮಕ್ಕಳು ತಮ್ಮ ಮಾತೃಭಾಷೆಯ ಜೊತೆ ಬಳಸುವ ೨೪೮ ಆಂಗ್ಲ ಭಾಷೆಯ ಶಬ್ದಗಳನ್ನು ಪಟ್ಟಿ ಮಾಡಿದ್ದಾರೆ )’ಯಾವ ವಯಸ್ಸಿನಲ್ಲಿ ಇಂಗ್ಲಿಶ್…..?’ ೨೦೦೩-೨೦೦೪).

೨೦ ಜಿಲ್ಲೆಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಮುಖವಾಗಿ ಇಟ್ಟುಕೊಳ್ಳಲಾಗಿತ್ತು :

೧. ಸಣ್ಣ ವಯಸ್ಸಿನಲ್ಲೇ ಇಂಗ್ಲಿಶ್ ಕಲಿಸುವ ಬಗ್ಗೆ ಪಾಲಕರು, ಸಮುದಾಯದ ನಾಯಕರು ಮತ್ತು ಶಿಕ್ಷಕರ ಅಭಿಪ್ರಾಯ ಸಂಗ್ರಹಿಸುವುದು.

೨. ಇಂಗ್ಲಿಶ್ ಕಲಿಸಲು ಶಿಕ್ಷಕರು ಎಷ್ಟರಮಟ್ಟಿಗೆ ಸಿದ್ಧರಾಗಿದ್ದಾರೆ ಎಂದು ತಿಳಿದುಕೊಳ್ಳುವುದು.

೩. ಇಂತಹ ಕಲಿಕೆಗೆ ಸರಿಯಾದ ವಯಸ್ಸು ಯಾವುದು ಎಂಬುದನ್ನು ತಿಳಿದುಕೊಳ್ಳುವುದು.

ಈ ಸಮೀಕ್ಷೆ ಅತೀ ಕಡಿಮೆ ಸಾಕ್ಷರತೆ ಇರುವ ೨೦ ಬ್ಲಾಕುಗಳನ್ನು ಪ್ರಮುಖವಾಗಿ ಕೈಗೆತ್ತಿಕೊಂಡಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ೬೧೩ ಪಾಲಕರಲ್ಲಿ ೫೯೨ ಪಾಲಕರು ತಮ್ಮ ಮಕ್ಕಳಿಗೆ ಆಂಗ್ಲ ಭಾಷೆ ಕಲಿಕೆಯ ಅವಕಾಶ ಇರಬೇಕು ಎಂದಿದ್ದಾರೆ. ೧೮ ಪಾಲಕರು ಮಾತ್ರ ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಮೀಕ್ಷೆಯಿಂದ ಬಹಿರಂಗವಾದ ಇನ್ನೂ ಕೆಲವು ಅಂಶಗಳು ಕುತೂಹಲಕರವಾಗಿರದೆ. ಕೇವಲ ಪ್ರತಿಶತ ೯ರಷ್ಟು ಜನ ಮಾತ್ರ ಆಂಗ್ಲ ಭಾಷೆ ಕಲಿಕೆಯ ಮಾಧ್ಯವಾಗಿರಬೇಕು ಎಂದಿದ್ದಾರೆ. ಪ್ರತಿಶತ ೧೩ರಷ್ಟು ಜನ ಮೂರನೆಯ ತರಗತಿಯಿಂದ ಆಂಗ್ಲ ಭಾಷೆಯ ಕಲಿಕೆ ಪ್ರಾರಂಭವಾಗಬೇಕು ಎಂದು ಹೇಳಿದರೆ, ಪ್ರತಿಶತ ೭೫ರಷ್ಟು ಜನ-ಅವರೆಲ್ಲ ಮನೆಯಲ್ಲಿ ಕನ್ನಡ ಮಾತನಾಡುವವರು – ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿಸಬೇಕೆಂದಿದ್ದಾರೆ. ಉಳಿದಂತೆ ಉರ್ದು, ತಮಿಳು ಮತ್ತು ತೆಲುಗು ಮಾತೃಭಾಷೆಯವರ ಜೊತೆಗೆ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಪ್ರತಿಶತ ೬೫ರಷ್ಟು ಜನ ಗ್ರಾಮಾಂತರ ಪ್ರದೇಶದವರಾದರೆ, ಪ್ರತಿಶತ ೩೩ರಷ್ಟು ಜನ ಕೊಳಚೆ ಪ್ರದೇಶವೂ ಸೇರಿದಂತೆ ನಗರ ಪ್ರದೇಶದವರು.

ಮಕ್ಕಳು ಆಂಗ್ಲ ಭಾಷೆಯನ್ನು ಕಲಿಯುವ ವಿಚಾರದಲ್ಲಿ ಶಿಕ್ಷಕರು ಪಾಲಕರ ಜೊತೆ ಸಹಮತವನ್ನು ಹೊಂದಿದಂತಿದೆ. ಈ ಸಮೀಕ್ಷೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ೨೧೮ ಶಿಕ್ಷಕರಲ್ಲಿ ಅರ್ಧದಷ್ಟು ಜನ ಪಠ್ಯಪುಸ್ತಕ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಶತ ೧೯ರಷ್ಟು ಶಿಕ್ಷಕರು ಆಡಿಯೋ, ವಿಡಿಯೋ ಚಾರ್ಟ್‌ಗಳು ಸೇರಿದಂತೆ ಹೆಚ್ಚುವರಿ ಸಂಪನ್ಮೂಲ ಬೇಕು ಎಂದಿದ್ದಾರೆ. ಜೊತೆಗೆ ಬಹುತೇಕ ಶಿಕ್ಷಕರು ತಾವು ಇಂಗ್ಲಿಶ್ ಬೋಧನೆ ಮಾಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲ, ಇದು ತಮಗೆ ಭಾರವಲ್ಲ ಎಂದೂ ಹೇಳಿದ್ದಾರೆ.

ಇಂಗ್ಲಿಶ್ ಪ್ರಾದೇಶಿಕ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾದ ಅಂಶಗಳು ಈ ಮೊದಲು ಕೆಲವು ತಜ್ಞರು ನಡೆಸಿದ ಅಧ್ಯಯನದಿಂದ ಕಂಡುಕೊಂಡ ಅಂಶಗಳನ್ನು ಸಮರ್ಥಿಸಿವೆ. ೨೦೦೪-೨೦೦೫ರಲ್ಲಿ ನಡೆದ ಎಸ್.ಎಸ್.ಎಲ್.ಸಿ.ಪರೀಕ್ಷೆಯನ್ನು ತೆಗೆದು ಕೊಂಡ ಆಂಗ್ಲ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಇಂಗ್ಲಿಶ್‌ನ್ನು ಎರಡನೆಯ ಭಾಷೆಯನ್ನಾಗಿ ತೆಗೆದುಕೊಂಡ ಪ್ರತಿಶತ ೭೮ ವಿದ್ಯಾರ್ಥಿಗಳು ಉತ್ತೀರ್ಣರಾದರೆ, ಕನ್ನಡ ಮಾಧ್ಯಮದಲ್ಲಿ ಓದಿದ ಪ್ರತಿಶತ ೬೨ ಮತ್ತು ೫೯ರಷ್ಟು ವಿದ್ಯಾರ್ಥಿಗಳು ಇಂಗ್ಲಿಶ್‌ನಲ್ಲಿ ಪಾಸಾಗಿದ್ದಾರೆ. ಪಿ.ಯು.ಸಿ.ಯಲ್ಲಿ ೨೦೦೪ರಲ್ಲಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಿದ ಪ್ರತಿಶಥ ೮೧ರಷ್ಟು ವಿದ್ಯಾರ್ಥಿಗಳು ಪಾಸಾದರೆ, ಕನ್ನಡ ಮಾಧ್ಯಮದಲ್ಲಿ ಓದಿದ ಪ್ರತಿಶಥ ೩೧ರಷ್ಟು ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಇದು ೨೦೦೫ರ ಪರೀಕ್ಷೆಯಲ್ಲೂ ಪುನರಾವರ್ತನೆಯಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪದವಿಯಲ್ಲಿ ಮತ್ತು ಸ್ನಾತಕೋತ್ತರ ಪದವಿಯಲ್ಲೂ ಇದೇ ಸಮಸ್ಯೆಯನ್ನು ಎದುರಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮೀಕ್ಷೆಯಿಂದ ವ್ಯಕ್ತವಾದ ಈ ಅಂಶಗಳಿಂದಾಗಿಯೇ ಮಹಾರಾಷ್ಟ್ರ ಸರ್ಕಾರ ಜೂನ್ ೨೦೦೦ರಿಂದ ಮೊದಲನೆಯ ತರಗತಿಯಿಂದ ೫ನೆಯ ತರಗತಿಯವರೆಗೆ ಇಂಗ್ಲಿಶ್‌ನ್ನು ಒಂದು ಭಾಷೆಯಾಗಿ ಕಲಿಸುತ್ತಿರಬಹುದೆ…..?

ಶಿಕ್ಷಣ ಇಲಾಖೆ ಶಿಕ್ಷಕರ ತರಬೇತಿಯಲ್ಲಿ ಒಂದನೆಯ ತರಗತಿಯಿಂದ ಇಂಗ್ಲಿಶ್ ಕಲಿಸುವುದನ್ನು ಪಟ್ಟಿ ಮಾಡಿದೆ. ಇದಕ್ಕೆ ಬಹುಮುಖ್ಯ ಕಾರಣ, ಆಂಗ್ಲ ಭಾಷೆಯ ಐತಿಹಾಸಿಕ ಹಿನ್ನೆಲೆ ಮತ್ತು ಭಾರತದಲ್ಲಿ ಇಂಗ್ಲಿಶ್ ಸಂವಹನದ ಪ್ರಮುಖ ಭಾಷೆಯಾಗಿರುವುದನ್ನು ತಿಳಿಸುವುದು, ಜೊತೆಗೆ ಇಂಗ್ಲಿಶ್ ಜ್ಞಾನಾರ್ಜನೆಗೆ ಎಷ್ಟು ಮುಖ್ಯ ಎಂಬುದನ್ನು, ಅದು ಇಲ್ಲಿನ ಸಂಪರ್ಕ ಭಾಷೆ ಎಂಬ ವಾಸ್ತವವನ್ನು ಅರಿಯುವಂತೆ ಮಾಡುವುದು.

ಇಂಗ್ಲಿಶ್ ಬಗೆಗೆ ನಮ್ಮ ದೇಶದಲ್ಲಿ ತುಂಬಾ ವಿಭಿನ್ನವಾದ ಅಭಿಪ್ರಾಯಗಳಿವೆ. ಇದು ವಸಾಹತುಶಾಹಿಗಳ ಭಾಷೆ, ಅದು ನಮ್ಮ ಬರಹಗಾರರ ಮೇಲೆ, ಚಿಂತಕರ ಮೇಲೆ ಶಿಕ್ಷಕ ಮೇಲೆ ನೀತಿ ನಿರೂಪಕರ ಮೇಲೆ ಪ್ರಭಾವ ಬೀರಿದೆ. ಜೊತೆಗೆ ಈ ಜಗತ್ತಿನಲ್ಲಿ ಬದುಕಲು ಇಂಗ್ಲಿಶಿನ ತಿಳುವಳಿಕೆ ಅತ್ಯಗತ್ಯ ಎಂಬ ಭಾವನೆಯೂ ಇದೆ. ಹಾಗೆ ಅವಕಾಶ ವಂಚಿತರು ತಮಗೆ ಇಂಗ್ಲಿಶ್ ಕಲಿಯುವ ಅವಕಾಶದಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂಬ ಭಾವನೆಯನ್ನು ಹೊಂದಿದ್ದಾರೆ. ಅಮೇರಿಕದಲ್ಲಿ, ಕೆನಡಾದಲ್ಲಿ, ಇಂಗ್ಲೆಂಡಿನಲ್ಲಿ, ನ್ಯೂಜಿಲೆಂಡಿನಲ್ಲಿ, ಐರ್ಲೆಂಡಿನಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಜನ ಇಂಗ್ಲಿಶ್ ಮಾತನಾಡುತ್ತಾರೆ ಎಂಬ ವಾಸ್ತವಿಕ ಅಂಶಗಳಿಂದ ಬಂದ ಭಾವನೆ ಇದಲ್ಲ. ಜೊತೆಗೆ ವಿಶ್ವದ ೭೦ ರಾಷ್ಟ್ರಗಳಲ್ಲಿ ಭಾರತವೂ ಸೇರಿದಂತೆ, ಇಂಗ್ಲಿಶ್ ಆಡಳಿತಾತ್ಮಕವಾಗಿ ವಿಶೇಷ ಸ್ಥಾನಮಾನವನ್ನು ಹೊಂದಿದೆ. ೧೦೦ ದೇಶಗಳಲ್ಲಿ ಮಕ್ಕಳು ವಿದೇಶಿ ಭಾಷೆಯನ್ನು ಕಲಿಯುವಾಗ ಇಂಗ್ಲಿಶ್‌ನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಭಾರತವನ್ನೇ ತೆಗೆದುಕೊಂಡರೆ, ಇಲ್ಲಿ ಅಮೇರಿಕಾ ಮತ್ತು ಇಂಗ್ಲೆಂಡುಗಳಲ್ಲಿ ಎಷ್ಟು ಜನ ಇಂಗ್ಲಿಶ್ ಮಾತನಾಡುವವರಿದ್ದಾರೋ ಅದಕ್ಕಿಂತ ಹೆಚ್ಚು ಜನ ಇಂಗ್ಲಿಶ್ ಮಾತನಾಡುವವರಿದ್ದಾರೆ.

ಇದರಿಂದ ಕನ್ನಡಕ್ಕೆ ಅಪಾಯವಾಗಲಿದೆಯೇ…..?ಮುಂದಿನ ೫೦೦, ೧೦೦೦ ವರ್ಷಗಳಲ್ಲಿ ಕನ್ನಡ ಮರೆಯಾಗಿ ಹೋಗಲಿದೆಯೆ….? ಸ್ಥಳೀಯ ಭಾಷೆಗಳ ಮೇಲೆ ಇಂಗ್ಲಿಶ್‌ನ ದುಷ್ಪರಿಣಾಮವನ್ನು ತುಂಬ ಸರಳೀಕರಿಸಿ ಹೇಳಲಾಗುತ್ತಿದೆ. ಯಾವುದೇ ಭಾಷೆ ಅಪಾಯಕ್ಕೆ ಸಿಲುಕುವುದಕ್ಕೆ ವಿಶ್ವ ಭಾಷೆಯಾದ ಇಂಗ್ಲಿಶ್ ಬೆಳೆಯುತ್ತಿರುವುದೊಂದೇ ಕಾರಣ ಅಲ್ಲ. ನಾವು ಜಾಗತೀಕರಣದಿಂದ ಮಾರುಕಟ್ಟೆ ಮತ್ತು ಸಂಸ್ಕೃತಿಯ ಮೇಲೆ ಉಂಟಾಗುವ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಇದರಿಂದ ಭಾಷಾ ಸಮತೋಲನದ ಮೇಲೆ ಉಂಟಾಗುವ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳಬೇಕು.

ಡೇವಿಡ್ ಕ್ರಿಸ್ಟಲ್ ಪ್ರಕಾರ, “ಭಾಷೆಯನ್ನು ಬರೆದು ದಾಖಲಿಸಿದರೆ ಮಾತ್ರ ಅದು ಉಳಿದುಕೊಳ್ಳುತ್ತದೆ. ಈ ಶತಮಾನದ ಅತ್ಯಂದಲ್ಲೂ ಸುಮಾರು ೨೦೦೦ ಭಾಷೆಗಳು ಇನ್ನೂ ದಾಖಲೆಯಾಗಿಲ್ಲ (ಡೇವಿಡೇ ಕ್ರಿಸ್ಟಲ್, ದಿ ಲಾಂಗ್ವೇಜ್ ರೆವಲ್ಯೂಷನ್, ೨೦೦೪).

ಅತ್ಯುತ್ತಮ ಸಾಹಿತ್ಯ ಸಂಗೀತ ಹಾಗೂ ಜನಬಳಕೆಯನ್ನು ಹೊಂದಿರುವ, ಟೀವಿ, ಪತ್ರಿಕೆಗಳ ಮೂಲಕ ಜನಮಾನಸದಲ್ಲಿ ಬೇರು ಬಿಟ್ಟಿರುವ ಕನ್ನಡ ಭಾಷೆ ಅಳಿದು ಹೋಗುತ್ತದೆ ಎಂದು ಹೇಳುವುದು ಸರಿಯಾದ ಮಾತಲ್ಲ. ಈಗ ಮಾಡಬಹುದಾದ್ದೆಂದರೆ, ಕನ್ನಡ ಸಾಫ್ಟ್‌ವೇರ್‌ಗಳ ಅಭಿವೃದ್ಧಿ. ಆ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು.

—-
(‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ ಸರಣಿಯಿಂದ ಆಯ್ದ ಭಾಗಗಳ ಅನುವಾದ)