ಆತ್ಮೀಯರೆ ಇಲ್ಲಿಯವರೆಗೆ ಪಾಂಡರಂಗಬಾಬು ಆವರು ಮಂಡಿಸಿದ್ದ ವಿಚಾರದ ಮೇಲೆ ನಾಲ್ಕು ಜನ ಮಿತ್ರರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಒಂದು ಜನಾಂಗೀಯ ಹಿನ್ನೆಲೆಯಲ್ಲಿ ಶಿಕ್ಷಣ ಮತ್ತು ಭಾಷೆ ಈ ಎರಡು ವಿಚಾರಗಳ ಬಗ್ಗೆ ನಾವು ಚರ್ಚೆಯನ್ನ ನಡೆಸಿದ್ದೇವೆ. ಇದಕ್ಕೆ ಒಂದು ವಿಶಿಷ್ಟವಾದ ಪ್ರಾಮುಖ್ಯತೆ ಇದೆ. ಯಾಕೆಂದ್ರೆ ದಲಿತರು ನಮ್ಮಲ್ಲಿ ಬಹುಸಂಖ್ಯಾತರು ಅನೇಕ ವರ್ಷಗಳಿಂದ ಈ ಶತಮಾನದ ನಿರ್ಲಕ್ಷ್ಯಕ್ಕೆ ತುತ್ತಾದವರು. ಕಳೆದ ಶತಮಾನದಿಂದ ತಮ್ಮದೇ ಆದ ಸೈದ್ಧಾಂತಿಕ ನೆಲೆಯಲ್ಲಿ ಪ್ರಪಂಚಕ್ಕೆ ಪರಿಚಿತರಾಗಿ ಶಿಕ್ಷಣದಲ್ಲಿ ಹೆಚ್ಚಿನ ಸ್ಥಾನಮಾನಗಳಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿರುವ ಒಂದು ಸಮುದಾಯ. ಈ ಹಿನ್ನೆಲೆಯಲ್ಲಿ ನಾವು ಶಿಕ್ಷಣ ಮತ್ತು ಭಾಷೆ ಎಂಬ ವಿಚಾರವನ್ನು ಕುರಿತು ಅನೇಕ ಸಂದರ್ಭಗಳಲ್ಲಿ ಚರ್ಚೆ ಮಾಡುತ್ತ ಬಂದಿದ್ದೇವೆ. ಮತ್ತು ಹೊಸ ಹೊಸ ಸಮಸ್ಯೆಗಳನ್ನ ಹೊಸ ಹೊಸ ಪ್ರಮೇಯಗಳನ್ನ ಹುಟ್ಟು ಹಾಕ್ತ, ಅದಕ್ಕೆ ಬೇಕಾದಂತಹ ಉತ್ತರಗಳನ್ನ ಕಂಡುಕೊಳ್ಳುವಂತಹ ಪ್ರಯತ್ನಗಳನ್ನು ಕೂಡ ಮಾಡ್ತಾ ಇದ್ದೇವೆ. ಪಾಂಡುರಂಗಬಾಬು ತಮ್ಮ ಪ್ರಬಂಧವನ್ನು ಮಂಡಿಸುವ ಸಮಯದಲ್ಲಿ ಇವತ್ತು ಕನ್ನಡ ಭಾಷೆಯ ಒಳಗಡೇ ಇರುವ ಬಹುಮುಖಿ ಸ್ವರೂಪವನ್ನು ಪ್ರಸ್ತಾಪ ಮಾಡ್ತ ನಾವೇ ಸೃಷ್ಟಿಸಿಕೊಂಡಿರುವ Birthಗಳನ್ನ ಅದನ್ನ ಮಚ್ಚಿಗೆ ಅಂತ ಕರೀತೀವಿ ಹಳ್ಳಿಗಳ ಕಡೆ. ಆ ರೀತಿ Linguistic Births ಅಂತ ಏನು ಕರೀತೇವೆ ಅದನ್ನು ಸೃಷ್ಟಿ ಮಾಡಿಕೊಂಡಿದ್ದೇವೆ. ಆ ಸೃಷ್ಟಿ ಮಾಡಿಕೊಂಡಿರುವುದು ಕೂಡ ನಮ್ಮ ಕೆಲವು ಅನುಕೂಲಗಳಿಗಾಗಿ. ಅಂತಹ ಒಂದು Birth ಯಾವುದು ಅಂದ್ರೆ ಶಿಷ್ಟ ಭಾಷೆ ಅಥವಾ ಪ್ರಮಾಣಿತ ಭಾಷೆ ಎಂದು ಹೇಳ್ತ, ಅದು ಒಂದು ಅಪಕಲ್ಪನೆ ಇದ್ರೂ ಇರ್ಬಹುದು ಎನ್ನುವ ಸಂದೇಹವನ್ನ ಅವರು ವ್ಯಕ್ತ ಪರಿಸಿದ್ರು. ಶಿಷ್ಟ ಭಾಷೆ ಎನ್ನುವುದು ನಮ್ಮ ಅನುಕೂಲಕ್ಕೋಸ್ಕರ ನಾವು ಸೃಷ್ಟಿಸಿಕೊಂಡಂತಹ ಒಂದು ಪರಿಕಲ್ಪನೆ. Linguistically ಮಾತನಾಡುವಾಗ ಭಾಷಾ ನೆಲೆಯಲ್ಲಿ ಅದಕ್ಕೆ ಒಂದು ಸ್ಪಷ್ಟವಾದ ಪರಿಕಲ್ಪನೆ ಇದೆ. ಬೇರೆ ಸಂದರ್ಭದಲ್ಲಿ ನಾವು ಬಳಸುವಾಗ ಅದನ್ನ ಬೇರೆ ಬೇರೆ ಅರ್ಥ ಬರುವ ರೀತಿಯಲ್ಲಿ ಬಳಸುವ ಪ್ರಯತ್ನ ಮಾಡ್ತಾ ಇದ್ದೇವೆ. ಆದರೆ ಇಲ್ಲಿ ಮುಖ್ಯವಾಗಿ ಬೇಕಾಗಿರುವುದು ನಮ್ಮ ದಲಿತ ಸಮುದಾಯ ಮತ್ತು ಗ್ರಾಮೀಣ ಸಮುದಾಯ. ದಲಿತ ಭಾಷೆ ಮತ್ತು ಗ್ರಾಮೀಣ ಭಾಷೆಯಲ್ಲಿ ಯಾವ ರೀತಿಯ ವ್ಯತ್ಯಾಸ ಮಾಡ್ಕೋಬೇಕು ಅಂತ ನನಗೆ ಇನ್ನೂ ಸ್ಟಷ್ಟವಾಗಿ ಗೊತ್ತಿಲ್ಲ. ಇದನ್ನು ಒಂದು ಗ್ರಾಮ ಅಥವಾ ಹಳ್ಳಿಯ ಪರಿಸರದ ಒಳಗಡೆ ಇರುವ ದಲಿತರು ಮತ್ತು ದಲಿತೇತರರ ಮಧ್ಯದಲ್ಲಿ ಭಾಷೆಯ ವ್ಯತ್ಯಾಸ ಗಣನೀಯ ಪ್ರಮಾಣದಲ್ಲಿ ಇದೆ ಎನ್ನುವುದು ಸ್ವಲ್ಪ ಕಷ್ಟದ ಕೆಲಸ. ಅದಕ್ಕೆ ಇನ್ನೂ ನಾವು ಬೇಕಾದಂತಹ ದತ್ತಾಂಶಗಳನ್ನ ಸಂಗ್ರಹ ಮಾಡಿ ಆ ನಿರ್ಣಯಕ್ಕೆ ಬರಬೇಕಾಗ್ತದೆ. ಅದರಲ್ಲೂ ಬಹಳ ಮುಖ್ಯವಾಗಿ ಕಂಡು ಬರುವ ವ್ಯತ್ಯಾಸಗಳು ಎಲ್ಲಿವೆ, ಅಂತಂದ್ರೆ ನಾವು ಹೆಚ್ಚಿನ ಅರ್ಥದಲ್ಲಿ ಬರುವ ಸ್ವೀಕೃತವಾದ ಸಂಸ್ಕೃತ ನಾಮಪದಗಳು ಮತ್ತೆ ಗ್ರಾಮೀಣ ಪ್ರದೇಶದಲ್ಲಿ ಅಥವಾ ದಲಿತರಲ್ಲಿ ಬಳಕೆಯಾಗ್ತಕ್ಕಂತಹ ನಮ್ಮ ಸ್ಥಳೀಯವಾದ ಕನ್ನಡದ ನಾಮಪದಗಳು. ಅದನ್ನ ಬಿಟ್ರೆ ರಾಚನಿಕವಾಗಿ ನೀವು ನೋಡುವಾಗ ಬಹುಶಃ ಕನ್ನಡದ ಮೂಲ ರಾಚನಿಕ ಸ್ವರೂಪದಲ್ಲಿ ಹೆಚ್ಚಿನ ವ್ಯತ್ಯಾಸಗಳೇನೂ ಕಂಡು ಬರುವುದಿಲ್ಲ. ಇರುವಂತಹ ಒಂದು ಅಪವಾದ ಸ್ವಲ್ಪಮಟ್ಟಿಗೆ ಅಖ್ಯಾತ ಪ್ರತ್ಯಯಗಳನ್ನು ಮೊಟಕು ಗೊಳಿಸುವಂತಹ, ಹ್ರಸ್ವಗೊಳಿಸುವಂತಹ ಒಂದು ಪ್ರಯತ್ನ ಬೇರೆ ಬೇರೆ ರೀತಿ ಇಲ್ಲಿ ಕಂಡು ಬರುತ್ತದೆ. ನಾವು ಬಂದೆವು ಅಂತ ಶಿಷ್ಟ ಭಾಷೆಯಲ್ಲಿ ಮಾತನಾಡಿದರೆ ನಾವು ಬಂದೊ ಅಂತ ದಲಿತರಲ್ಲಿ ಮಾತ್ನಾಡಬಹುದು. ಆ ತರಹದ ಒಂದಷ್ಟು ಉದಾಹರಣೆಗಳನ್ನ ನಾವು ಕಾಣಬಹುದು. ಆದ್ರೆ ಎಲ್ಲಿ ಪ್ರಧಾನವಾಗಿ ಕಂಡು ಬರುತ್ತೆ ಅಂತಂದ್ರೆ ನಾನು ಪದಗಳನ್ನ ಸಂಸ್ಕೃತದಿಂದ ಅಗಾಧವಾಗಿ ಸ್ವೀಕಾರ ಮಾಡ್ಕೊಂಡಿದ್ದೇವಲ್ಲ ಅವುಗಳನ್ನ ಬಳಸಿ ಮಾತನಾಡುವಾಗ ನಾವೆಲ್ಲರೂ ಶಿಷ್ಟರಾಗಿ ಬಿಡ್ತೇವೆ. ಅದೇ ನಮ್ಮ ಸ್ಥಳೀಯವಾದ ಗ್ರಾಮೀಣ ಪ್ರದೇಶದ ಅಥವಾ ನಮ್ಮ ಹಿಂದಿನ ತಲೆಮಾರುಗಳವರು ಬಳಸ್ತಾ ಇದ್ದಂತಹ ಭಾಷೆ ಸ್ವರೂಪ ನಾಮ ಸ್ವರೂಪಗಳನ್ನ ನಾವು ಬಳಸುವಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾವು ಪರಿಶಿಷ್ಟರಾಗಿ ಬಿಡ್ತೇವೆ. ಈ ರೀತಿಯ ಒಂದು ಭಾಷಿಕ ಬಳಕೆ ನಮ್ಮ ಮಧ್ಯದಲ್ಲಿ ನಡ್ಕೊಂಡು ಬರ್ತಾ ಇದೆ ಎನ್ನುವಂತಹದು ಮುಖ್ಯವಾದುದು. ಆದರೆ ಸಮಸ್ಯೆ ಇರುವಂತಹದು ದಲಿತರು ಮತ್ತು ಶಿ‌ಕ್ಷಣ ಭಾಷೆಯನ್ನು ಕುರಿತು ಮಾತನಾಡುವಾಗ. ನಾವು ಎಲ್ಲೋ ಒಂದು ಕಡೆಯಲ್ಲಿ ಮತ್ತೆ ಮತ್ತೆ ಅದೇ ತಪ್ಪನ್ನ ಮಾಡ್ತಾ ಇದ್ದೇವೆ. ನಿಜವಾದ ಮೂಲಗಳಿಗೆ ಹೋಗಿ ವಿಶ್ಲೇಷಣೆ ಮಾಡ್ತಾ ಇಲ್ಲ.

ದಲಿತ ಶಿಕ್ಷಣ ಅಂದ ಕೂಡಲೇ ಸಮಸ್ಯೆ ಬರುವಂತಹದು ಎಲ್ಲಿ ಅಂತಂದ್ರೆ ಆ ಶಿಕ್ಷಣಕ್ಕೆ ದಲಿತ Curriculam ಅಂತ ಸೃಷ್ಟಿಯಾಗಿಲ್ಲ ಇಲ್ಲಿ. ದಲಿತ Curriculam ಅಂತ ಎಲ್ಲಾದರೂ ಇದೆಯಾ? ಇಲ್ಲ. Eduction Curriculam ಅಂತ ಇದೆ. Eduction Curriculam ಒಳಗಡೆ ನಾವು ಏನು ಮಾಡ್ಬಹುದು ಅಂತಂದ್ರೆ ಹಲವಾರು ಅವಕಾಶಗಳನ್ನ ಕಲ್ಪಿಸಿ ಕೊಟ್ಟಿರ್ತ್ತಾರೆ ಅಂತಲ್ಲಿ ನಾವು ಅಲ್ಲಿನ ಭಾಷಿಕ ಸ್ವರೂಪವನ್ನ ಪರಿಚಯ ಮಾಡಿ ಕೊಡ್ಬೇಕು ಅನ್ನುವಂತಹದು. ಆದ್ರೆ ಸಮಸ್ಯೆ ಇರುವುದು ಐತಿಹಾಸಿಕ ಪ್ರಕ್ರಿಯೆಯಲ್ಲಿ ಎಂದು ನನಗೆ ಅನಿಸುವಂತಹದು. ನಾನಾಗಲೇ ಒಂದು ಮಾತನ್ನು ಕೇಳಿದೆ. ಕೆಲವು Lingusitc Birthsನ್ನು ಸೃಷ್ಟಿ ಮಾಡಿಕೊಂಡು ಬರ್ತಿದ್ದೇವೆ ಅಂತ. ನೀವು ಐತಿಹಾಸಿಕವಾಗಿ ಕನ್ನಡ ಭಾಷೆಯನ್ನ ತೆಗೆದುಕೊಂಡ್ರುನೂವೆ ಕನ್ನಡ ಭಾಷೆಗೆ ಸಂಸ್ಕೃತ ಪದಗಳನ್ನು ಸ್ವೀಕಾರ ಮಾಡಿಕೊಳ್ಳುವ ಹಂತದಲ್ಲಿನೇನೇ ನಾವು ನಿಜವಾಗಿಯೂ ನಮ್ಮ ಸ್ಥಳೀಯವಾದ, ನಮ್ಮ ಜನರಿಗೆ ಬೇಕಾದ ರೀತಿಯಲ್ಲಿ ಪರಿವರ್ತಿಸುವ ನಾಲಿಗೆಗೆ ಒಗ್ಗುವ ನಮ್ಮ ಧ್ವನಿಮಾಗಳಿಗೆ ಹತ್ತಿರವಾಗುವ ರೀತಿಯಲ್ಲಿ ನಾವು ಅದನ್ನ ಸ್ವೀಕಾರ ಮಾಡ್ಬೇಕಾಗಿತ್ತು. ಅದು ಮಾಡ್ಲಿಲ್ಲ ನಾವು. ಅಂದ್ರೆ ನಮ್ಮಲ್ಲಿ ದಲಿತ ವಿರೋಧಿ ಅಥವಾ ಸಾಮಾನ್ಯ ಜನ ವಿರೋಧಿ ಭಾಷಿಕವಾದಂತಹ ಒಂದು ಸೂತ್ರವನ್ನು ಒಂದು ಪ್ರಮೇಯವನ್ನ ನಾವು ಬಹಳ ಹಿಂದಿನಿಂದಲೇ ಬೆಳೆಸಿಕೊಂಡೇ ಬಂದಿದ್ದೇವೆ ಎನ್ನುವಂತಹದು ಬಹಳ ದುರಂತದ ವಿಷಯ. ಹಾಗೆ ನೋಡಿದರೆ ಕವಿರಾಜಮಾರ್ಗದಂತಹ ಒಂದು ಕೃತಿಯಲ್ಲಿನೇ ಅವನು ಮಾತಾಡುವಂತಹ ಸಂಸ್ಕೃತ, ಸಮ ಸಂಸ್ಕೃತ ಮತ್ತು ತದ್ಭವ ಎನ್ನುವ ಮೂರು ಪದಗಳಿವೆಯಲ್ಲ ಅವು ಇವತ್ತಿನ ನಮ್ಮ ಕನ್ನಡವನ್ನ ಬೇರೆ ರೀತಿಯಲ್ಲಿ ನಿರ್ಣಾಯಕ ಮಾಡ್ಬೇಕಾಗಿತ್ತು. ಕವಿರಾಜಮಾರ್ಗದಲ್ಲಿ ಅವನು ಏನು ಮಾತಾನಾಡ್ತಾನೆ. ನೀವು ಸಂಸ್ಕೃತ ಪದವನ್ನ ಹಾಗೇ ಸ್ವೀಕಾರ ಮಾಡುವಂತಹ ಒಂದು ಪರಿ ಆದ್ರೆ ಸಮಸಂಸ್ಕೃತ ಎನ್ನುವ ಇನ್ನೊಂದು ಪ್ರಕ್ರಿಯೆಯನ್ನು ಸೃಷ್ಟಿ ಮಾಡಿ ಕನ್ನಡ ಪದಗಳಿಗೆ ಸಂಸ್ಕೃತವನ್ನು ಹಚ್ಚುವಂತಹ ಒಂದು ಪರಿಸ್ಥಿತಿಯನ್ನ ಸೃಷ್ಟಿ ಮಾಡ್ತಾನೆ. ಇನ್ನೊಂದು ತದ್ಭವ ಅಂತೇಳಿ. ನಮಗೆಲ್ಲರಿಗೂ ಗೊತ್ತಿತ್ತು ತದ್ಭವ ಅನ್ನುವಂತಹದು ನಮ್ಮ ಕನ್ನಡದ ಜಾಯಮಾನಕ್ಕೆ ಒಗ್ಗುವಂತಹದು. ಸಂಸ್ಕೃತ ಮತ್ತು ಸಮಸಂಸ್ಕೃತ ಎರಡೂ ಒಗ್ಗುವಂತಹವಲ್ಲ. ನಮಗೆ ಒಗ್ಗಬೇಕಾಗಿರುವುದು ಯಾವುದು ಅಂತೇಳಿದ್ರೆ ತದ್ಭವ. ಅಂದ್ರೆ ಸಂಸ್ಕೃತದಿಂದ ಪ್ರಾಕೃತದ ಭಾಷೆಗಳು ಹೇಗೆ ಹುಟ್ಟಿಕೊಂಡವೋ ಹಾಗೆಯೇ ಸಂಸ್ಕೃತ ಎನ್ನುವಂತಹದು ಪರಿವರ್ತನೆಯಾಗಿ ಸ್ಥಳೀಯ ಜನರಿಗೆ ಸ್ವೀಕಾರವಾಗ್ಬೇಕಾದಂತಹ ಒಂದು ಭಾಷೆ ಅದು. ಅದನ್ನ ತಮ್ಮ ಹಿಂದಿನ ಕವಿಗಳು ಮಾಡಿದ್ರು. ಆದರೆ ನಂತರದ ದಿನಗಳಲ್ಲಿ ನಾವು ಅದನ್ನ ಪೂರ್ಣವಾಗಿ ತಿರಸ್ಕರಿಸಿ ಶುದ್ಧವಾದ ಸಂಸ್ಕೃತದ ಬರಹದ ರೂಪವನ್ನು ಮತ್ತು ಶುದ್ಧವಾದ ಸಂಸ್ಕೃತ ಬಳಕೆಯ ರೂಪವನ್ನು ಸ್ವೀಕಾರ ಮಾಡ್ತಾ ಹೋದ್ವಿ. ಪಂಪನಂತಹವನೇ ಆರಂಕುಸವಿಟ್ಟಟ್ಟೊಡಂ ಅಂತ ಹೇಳ್ದ. ಅಂಕುಶ ಅಂತ ಹೇಳ್ಲಿಲ್ಲ ಅವನು. ಅಂದ್ರೆ ಒತ್ತಾಯಪೂರ್ವಕವಾಗಿ ನಮ್ಮ ಮೇಲೆ ‘ಶ’ ಕಾರಗಳನ್ನ ತಂದ್ರು. ಮಹಾಪ್ರಾಣವನ್ನು ನಿಜವಾಗಿ ಕನ್ನಡ ಭಾಷೆಯಲ್ಲಿ ಇದೆ ಅಂತೇಳಿ ನಮ್ಮ ಮೇಲೆ ಹೇರಿದ್ದು. ಈ ರೀತಿ ಮಹಾಪ್ರಾಣಕ್ಕೆ ಕೊಟ್ಟಂತಹ ಮಹತ್ವದಿಂದಾಗಿ ಕನ್ನಡದ ಧ್ವನಿಮಾದಲ್ಲಿಯೇ ಬದಲಾವಣೆಗಾಗಿ ಹೋಯಿತು. ‘ಪ’ ಕಾರ ‘ಹ’ ಕಾರಯಾಕಾಯಿತು. ಅನ್ನುವುದರ ಬಗ್ಗೆ ಇವತ್ತು ನಾವು ತಲೆ ಕೆಡ್ಸಿಕೊಳ್ತೇವೆ. ಆದ್ರೆ ನನಗನ್ನಿಸೋದು ಈ ಮಹಾಪ್ರಾಣಕ್ಕೆ ಕೊಟ್ಟಂತಹ ಮಹತ್ವವೇ ಪ್ರಕಾರ ಎನ್ನುವಂತಹ ಅಲ್ಪಪ್ರಾಣವನ್ನ ಹಕಾರದಂತಹ ಒಂದು ಮಹಾಪ್ರಾಣ ಮಾಡಕ್ಕೆ ಸಾಧ್ಯ ಆಯಿತು ಅಂತ. ಬಹಳ ಅನಾವಶ್ಯಕವಾದಂತಹ ಒಂದು ಪ್ರಮೇಯವನ್ನ ಒಂದು Lingaistic Birth ಅನ್ನ ನಾವು ಸೃಷ್ಟಿ ಮಾಡ್ಕೊಂಡು ಬಂದಿದ್ದೀವಿ. ಅದರಿಂದ ಇವತ್ತು ಶುದ್ಧ ಭಾಷೆ, ಶಿಷ್ಟ, ಭಾಷೆ ಎನ್ನುವ ಪರಿಕಲ್ಪನೆಗಳನ್ನು ಹುಟ್ಟು ಹಾಕಿಕೊಂಡು ಅದನ್ನ ಒಂದು ಪ್ರಮಾಣೀಕೃತ ಭಾಷೆಯನ್ನಾಗಿ ಶಿಕ್ಷಣದ ಭಾಷೆಯನ್ನಾಗಿ ನಾವು ಸ್ವೀಕಾರ ಮಾಡಿಕೊಂಡಿದ್ದೇವೆ ಮತ್ತು ಕಡ್ಡಾಯ ಪೂರ್ವಕವಾಗಿ ಅದೇ ರೀತಿಯ ಕೃತಕವಾದ ಮಾದರಿಯನ್ನು ಕಲಿಯಬೇಕು ಕಲಿಸ್ಬೇಕು ಅಂತ ಶಾಲಾ ಶಿಕ್ಷಣದಲ್ಲಿ ಅನ್ವಯಿಸಿಕೊಂಡಿದ್ದೇವೆ. ಇದನ್ನ ಹೇಗೆ ಹೋಗಲಾಡಿಸ್ಬೇಕು? ಬೆಳಗ್ಗೆ ಕೆ.ವಿ. ನಾರಾಯಣ ಅವರು ಚರ್ಚೆ ಮಾಡ್ತಿದ್ದಂತಹ ಡಿ.ಎನ್.ಭಟ್ ಅವರ ಪುಸ್ತಕದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಅವರು ಚರ್ಚೆ ಮಾಡ್ತಾರೆ. ಅಂದ್ರೆ ನಮ್ಮ ದಲಿತರು ಅಥವಾ ಗ್ರಾಮೀಣ ಪ್ರದೇಶದಿಂದ ಬರುವಂತಹವರಿಗೆ ತೊಡಕಾಗುವಂತಹ ಭಾಷಿಕ ಏರಿಯಾಗಳು ಯಾವುವು ಅನ್ನುವುದನ್ನು ಅವರು ಅಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಇದು ಒಂದು ಕಡೆ ಆಯ್ತು. ಈಗ್ಲೂ ಕೂಡ ನಾವು ಶಿಕ್ಷಣದಿಂದ ವಂಚಿತರಾದ ಬಹುಸಂಖ್ಯಾತರಿಗೆ ಯಾವುದೇ ಕಾರ್ಯಕ್ರಮವನ್ನ ಶೈಕ್ಷಣಿಕ ಕಾರ್ಯಕ್ರಮವನ್ನೆ ಅಂದ್ರೆ ಭಾಷಾ ಚೌಕಟ್ಟಿನ ಒಳಗಡೆ ಅಥವಾ ವಿಷಯದ ವಸ್ತುವಿನ ಚೌಕಟ್ಟಿನ ಒಳಗಡೆ ರೂಪಿಸುವಂತಹ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡ್ಲಿಲ್ಲ. ನಟರಾಜ ಹುಳಿಯಾರ್ ಅವರು ಒಂದನೇ ತರಗತಿಯಿಂದ ಮಕ್ಕಳಿಗೆ ಇಂಗ್ಲಿಶ್ ಕಲಿಸೋ ಬಗ್ಗೆ ಮಾತನಾಡಿದ್ರು. ಅವರು ಹಿಂದೆನೂ ಅನೇಕ ವೇದಿಕೆಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಆಶ್ಚರ್ಯವಾಗೋದೇನು ನನಗೆ ಅಂದ್ರೆ ಯಾವ ತರಗತಿಯಿಂದ ಕಲಿಸ್ಬೇಕು ಅನ್ನೋ ಮಂದಿ ಹೇಗೆ ಕಲಿಸ್ಬೇಕು ಅನ್ನೋ ಬಗ್ಗೆ ಮಾತ್ನಾಡೇ ಇಲ್ಲ ಇಲ್ಲೀವರ್ಗೆ. ನೀವು ೫ನೇ ತರಗತಿಯಿಂದ ಕಲ್ಸಿ Cat ಕ್ಯಾಟ್ Dog ಡಾಗ್ ಅನ್ನೋ ಒಂದೇ ಪರಿಣಾಮ ಆಗೋದಾದ್ರೆ ನೀವು ಎಲ್ಲಿಂದ ಕಲ್ಸಿದ್ರುನೂ ಒಂದೇ, ಯಾಕೆಂದ್ರೆ ಕ್ಯಾಟ್ ಅನ್ನೋದನ್ನ ಪಾಸ್ಟ್‌ಟೆನ್ಸ್‌ನಲ್ಲಿ ಪ್ರೆಸೆಂಟ್‌ಟೆನ್ಸ್‌ನಲ್ಲಿ ಯೂಸ್ ಮಾಡೋದು ಹೇಗೆ ಅಂತ ಕಲ್ಸಿದೇ ಹೋದ್ರೆ ಬರೀ ಒಂದು ವರ್ಡ್ ಅನ್ನು ಕಲ್ಸೋದ್ರಿಂದ ಏನಾಗುತ್ತೆ. ನೀವು ಹೇಗೆ ಕಲಿಸ್ತೀರಿ. ಕಲಿಸೋವಂತ ವ್ಯಕ್ತಿಯನ್ನ ನೀವು ತಯಾರು ಮಾಡಿದ್ರಾ? ಇದೆಲ್ಲ ಶಿಕ್ಷಣ ಸಚಿವರಿಗೆ ನಾವು ಯಾರೂನೂ ಇವತ್ತೂ ಪ್ರಶ್ನೆ ಹಾಕ್ಲಿಲ್ಲ. ಎರಡನೇಯದೇನಾಗಿದೆ ಅಂದ್ರೆ ನಾವು ಇಂಗ್ಲಿಶ್ ಮತ್ತು ಕನ್ನಡ ಎರಡೂನು ಒಂದೇ ವಿಧಾನದಲ್ಲಿ ಕಲಿಸ್ತಾ ಇದ್ದೀವಿ. ಅದು ಮಾತೃಭಾಷಾ ವಿಧಾನ. ಈ ಮಾತೃಭಾಷೆಯನ್ನು ಕಲಿಸೋದಿಕ್ಕೆ ಒಂದು ವಿಧಾನ ಇದೆ. ಮತ್ತು ಅದನ್ನ ಕಲಿಸೋದಿಕ್ಕೆ ಕೆಲವು ಪೂರ್ವ ಶರತ್ತುಗಳಿವೆ. ಕನ್ನಡ ನಮಗೆಲ್ಲರಿಗೂ ಮಾತೃಭಾಷೆ. ಆದ್ರೆ ಇಂಗ್ಲಿಶ್ ಯಾರ ಮಾತೃಭಾಷೆನೂ ಅಲ್ಲ. ಹಾಗಾಗಿ ಕನ್ನಡ ಮಾತೃಭಾಷೆ ಅನ್ನೋದಿಕ್ಕೆ ಕೆಲವು ಶರತ್ತುಗಳು ಏನೂಂದ್ರೆ, ಶಾಲೆಗೆ ಬರೋಕೆ, ಮುಂಚೆನೇ ಮಗು ಕನ್ನಡವನ್ನು ಕಲ್ತಿರುತ್ತೆ ಮನೆಯ ವಾತಾವರಣದಲ್ಲಿ, ಸ್ನೇಹಿತರ ವಾತಾವರಣದಲ್ಲಿ, ಬೀದಿಯ ವಾತಾವರಣದಲ್ಲಿ. ಹಾಗಾಗಿ ಮೂಲಭೂತವಾಗಿ ಮಗು ಶಾಲೆಗೆ ಬರುವ ಹಂತದಲ್ಲಿ ಅದು ಕಲೀಬೇಕಾದುದು Literary Skill ಏನಿರುತ್ತೆ ಅದನ್ನ ಕಲೀಬೇಕಾಗುತ್ತೆ. ಆದ್ರೆ ಇಂಗ್ಲಿಶಿಗೆ ಬಂದಾಗ ಅದು ಯಾರದೇ ಮಾತೃಭಾಷೆ ಅಲ್ಲದೇ ಇರೋದ್ರಿಂದ ಅದು ನಾಲ್ಕು Skillಗಳನ್ನು ಶಾಲೆಯಲ್ಲಿಯೇ ಕಲೀಬೇಕಾಗಿರೋದ್ರಿಂದ ಅದಕ್ಕೆ ಬೇಕಾದಂತಹ ಫೀಡ್ ಬ್ಯಾಕ್ ಅಥವಾ Re-inforcerment ಅಂತ ನಾವೇನು ಕರೀತೇವೆ ಭಾಷೆಯನ್ನ ಕಲಿಸ್ಬೇಕಾದ್ರೆ ಖಂಡಿತ ನಮಗೆ ಸಿಗೋದಿಲ್ಲ. ನಗರ ಪ್ರದೇಶದಲ್ಲಿ ಸಿಗ್ಬಹುದು. ನಾನು ನಗರ ಪ್ರದೇಶವನ್ನು ಗಮನದಲ್ಲಿಟ್ಟುಕೊಂಡು ಮಾತ್ನಾಡೋದಿಲ್ಲ. ಗ್ರಾಮೀಣ ಪ್ರದೇಶವನ್ನ ಗಮನದಲ್ಲಿಟ್ಟುಕೊಂಡು ಮಾತ್ನಾಡ್ತಾ ಇದ್ದೀನಿ. ಅಲ್ಲಿಗೆ ಶಾಲಾ ಶಿಕ್ಷಕರಿಗೇ ಸರಿಯಾಗಿ ಇಂಗ್ಲಿಶ್ ಬರೋದಿಲ್ಲ. ಇಂಗ್ಲಿಶ್ ಮಾತಾಡೋಕೆ ಬರೋದಿಲ್ಲ. ರಚನೆ ಸರಿಯಾಗಿ ಗೊತ್ತಿರೋದಿಲ್ಲ. ಅವರು ಮಗೂಗೆ ಕಲ್ಸಿದ್ರೆ ಅದು ಮನೆಗೆ ಹೋದ್ರೆ ಅದಕ್ಕೆ ಸರಿಯಾದ Re-inforcement ಸಹ ಇರೋದಿಲ್ಲ – ಅದಕ್ಕೆ ನೀವು ೧ನೇ ತರಗತಿಯಿಂದ ಕಲ್ಸಿ ಅಂತ ಹೇಳೋದಾದ್ರೆ ೧ನೇ ತರಗತಿಯಿಂದ ೩ನೇ ತರಗತಿವರೆಗೆ ಬರೇ ಇಂಗ್ಲಿಶಿನಲ್ಲಿ ಮಾತನಾಡೋದ್ನ ಕಲಿಸಿ. ಒಂದು ಆತ್ಮ ವಿಶ್ವಾಸ ಬರ್ಲಿ. ನಾನು ದತ್ತಾಂಶಗಳನ್ನ ಸಂಗ್ರಹ ಮಾಡಿ ಅದರ ಹಿನ್ನೆಲೆಯಲ್ಲಿ ಮಾತನಾಡ್ತಾ ಇದ್ದೇನೆ. ಅನೇಕ ಜನ ವಿದ್ಯಾರ್ಥಿಗಳಿಗೆ ಇಂಗ್ಲಿಶ್ ಮಾತನಾಡುವ ವಿಷಯ ಬಂದಾಗ ಭಯ ಸುರುವಾಗುತ್ತದೆ. ಬರವಣಿಗೆಯ ವಿಷಯ ಬಂದಾಗ ಉರು ಹೊಡ್ದಾದ್ರೂ ಬರ್ದು ಬರ್ತಾರೆ ಕೆಲವರು. ಆದರೆ ಮಾತು ಅವರನ್ನ ಕೊಲ್ತಾ ಇರೋದು. ಇಂಗ್ಲಿಶ್‌ನಲ್ಲಿ ಮಾತನಾಡುವ ಡೊಮೈನ್ ಬಂದಾಗ ಒಂದು ಏರಿಯಾ ಆ ಎನ್‌ಕೌಂಟರನ್ನು ಮಾಡ್ತಾ ಇರುವಾಗ ನಡುಗ್ತಾರೆ. ಇಂಗ್ಲಿಶ್‌ನವರು ಕಲಿಸಿದ ಮೆಥಡ್ ಅನ್ನು ನಾವು ಬ್ಲೈಂಡ್ ಆಗಿ ಒಪ್ಕೊಂಡು ಮುಂದುವರಿಸಿಕೊಂಡು ಬರ್ತಾ ಇದ್ದೇವೆ. ಅದರಲ್ಲಿ ಇಂಗ್ಲಿಶ್ ಭಾಷೆಯನ್ನ ಬೋಧಿಸುವಂತಹ ವಿಧಾನವನ್ನು ಬದಲಾಸ್ಲಿಕ್ಕೆ ತಯಾರಿಲ್ಲ. ಒಂದನೇ ತರಗತಿಯಿಂದ ಕಲ್ಸಿ ಅಂತ ಹೇಳಿದ್ರೆ ಕಲಿಸ್ಬೇಕಾದ ಕಾಂಪಿಟೆಂಟ್ ಟೀಚರ್ಸ್ ಇಲ್ಲ. ಆಮೂಲಾಗ್ರವಾದ ಬದ್ಲಾವಣೆಯನ್ನು ನೀವು ಮಾಡದ ಹೊರ್ತು ಈ ಮಟ್ಟದಲ್ಲಿ ನೀವು ಸುಧಾರಣೆಯನ್ನ ತರದೆ ಹೋದ್ರೆ ದಲಿತರಿಗೆ ನೀವು ಒಂದನೇ ತರಗತಿಯಿಂದ ಇಂಗ್ಲಿಶ್ ಕಲ್ಸಿದ್ರುನೂ ಏನೂ ಪ್ರಯೋಜನ ಇಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಅದ್ರಿಂದ ಮೊದಲಿಗೆ ಇವತ್ತು ನಾವು ಭಾಷೆಯ ಬಗೆಗಿನ ಚರ್ಚೆಗಳನ್ನ ಇನ್ನೂ ಸೂಕ್ಷ್ಮವಾಗಿ ಅಲ್ಲಿರ್ತಕ್ಕಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡ್ಬೇಕು. ದಲಿತರ ಭಾಷೆ ಸೃಜನಶೀಲ ಕೃತಿಯಲ್ಲಿ ಬಳಕೆಯಾದದ್ದರ ಬಗೆಗೆ ಯಾರದ್ದೂ ಅಸಮಧಾನ ಇಲ್ಲ. ಯಾರದ್ದೂ ತಿರಸ್ಕಾರ ಇಲ್ಲ. ಯಾಕೆಂದ್ರೆ ಭಾಷೆಗೆ ಅನೇಕ ಮುಖಗಳಿರುತ್ತವೆ, ಅನೇಕ ಸ್ವರೂಪಗಳಿರ್ತವೆ. ಯಾವುದೇ ಭಾಷೆ ಏಕಮುಖಿಯಾಗಿಯಂತೂ ಆಗಿರೋದಿಲ್ಲ. ಆಮೇಲೆ ಭಾಷೆಯ ಸಾಮಾಜಿಕ ವ್ಯತ್ಯಾಸಗಳು Sociolect ಎನ್ನುವುದು ಇಂಡಿಯಾಕ್ಕೆ ವಿಶಿಷ್ಟವಾದುದು ಇದು. ಸಾಮಾಜಿಕ ಉಪಭಾಷೆ ಎನ್ನುವುದು ಭಾರತಕ್ಕೆ ವಿಶಿಷ್ಟವಾದುದು. ಯಾಕೆಂತೇಳ್ದ್ರೆ ಇಲ್ಲಿ ಸಾಮಾಜಿಕ ಸ್ಥರಗಳಲ್ಲಿರುವ ವ್ಯತ್ಯಾಸಗಳಿಂದಾಗಿ. ಆ ಹಿನ್ನೆಲೆಯಲ್ಲಿ ನಾವು ದಲಿತರ ಬರವಣಿಗೆಯನ್ನು ಯಾರೂ ತಿರಸ್ಕರಿಸ್ತ ಇಲ್ಲ. ಎಲ್ಲರೂ ಸ್ವೀಕರಿಸ್ತಾರೆ. ಸೃಜನಶೀಲವಾದ ಬರವಣಿಗೆಯಲ್ಲಿ ಅವರು ಏನನ್ನು ಬಳಸ್ತಾರೋ ಅದು ಈ ಭಾಷೆಗೆ ಕೊಟ್ಟಂತಹ, ಸಾಹಿತ್ಯಕ್ಕೆ ಕೊಟ್ಟಂತಹ ಕೊಡುಗೆ ಅದು. ಆದ್ರೆ ಶಿಕ್ಷಣದ ಒಳಗಡೆ ಬಂದಾಗ ಅಸಹನೆ ಇದೆ. ಅಲ್ಲಿ ಯಾವುದನ್ನು ಸ್ವೀಕರಿಸ್ಬೇಕು. ಯಾವುದನ್ನು ಬಿಡ್ಬೇಕು ಅನ್ನೋದರ ಬಗ್ಗೆ ಇನ್ನೂ ನಮ್ಮಲ್ಲಿ ಚರ್ಚೆಗಳು ಇದಾವೆ. ಇರುವ ವರ್ಣಮಾಲೆಯನ್ನು ನಾವು ಎಷ್ಟರಮಟ್ಟಿಗೆ ಒಪ್ಕೊಂಡಿದ್ದೇವೆ ಅಂದ್ರೆ ಅದರಲ್ಲಿರುವ ಸಣ್ಣ ಒಂದು ಉಪಯೋಗಕ್ಕೆ ಬಾರದೆ ಇರುವ ಅಕ್ಷರವನ್ನು ಕಿತ್ತು ಹಾಕಲಿಕ್ಕೆ ಹೊರಟ್ರುನೂ ವ್ಯಾಪಕವಾದ ವಿವಾದ ಆಗ್ತದೆ. ಋ ಕಾರದ ಬಗ್ಗೆ ಎದ್ದ ವಿಚಾರವನ್ನು ನೀವು ಗಮನಿಸ್ಬಹುದು. ಹಿಂದೆ ನಾನು ಋಕಾರ ಬೇಡ ಎಂದು ಲೇಖನ ಬರೆದ ಬಗ್ಗೆ ಅನೇಕ ಗಲಭೆಗಳಾದುವು. ನಮ್ಮ ಅನೇಕ ವಿದ್ವಾಂಸರು ಬೀದಿಗಿಳಿದು ಗಲಾಟೆ ಮಾಡೋದಕ್ಕೂ ಸಿದ್ಧರಾದ್ರು. ನಮ್ಮಲಿ ಙ, ಞ ಮುಂತಾದ ಅನುನಾಸಿಕಗಳು ಬೇಕಾಗಿಲ್ಲ ಕಿತ್ತು ಹಾಕೋಣ ಮಹಾಪ್ರಾಣಗಳು ಬೇಡ ಕಿತ್ತು ಹಾಗೆಯೇ ಯಾವುದು ಕಲೀಲಿಕ್ಕೆ. ಕಷ್ಟ ಆಗ್ತದೋ ಅವು ನಮ್ಮವಲ್ಲ. ಹಾಗಾಗಿ ಅವನ್ನ ಕಲಿಸ್ಬೇಕಾಗಿಲ್ಲ. ಹಾಗೂ ಕಲಿಸ್ಬೇಕಾದ್ರೆ ನಾವು ಅದನ್ನ ಕಲ್ತ್‌ಕೋತಾರೆ. ಹೀಗೆ ಅನೇಕ ವಾದಗಳನ್ನು ಮಂಡಿಸಿದಾಗಲೂ ಅದಕ್ಕೆ ಗಮನ ಕೊಡುವಂತಹ ಯಾವುದೇ ವ್ಯಕ್ತಿ ಇಲ್ಲ. ಹಾಗಾಗಿ ಸಮಸ್ಯೆಗಳು ಹಾಗೇ ಮುಂದುವರಿತಾ ಇದೆ. ಮಹಾಪ್ರಾಣದ ಸಮಸ್ಯೆ ಹಾಗೇ ಮುಂದುವರಿತಾ ಇದೆ. ನಮಗೆ ಖಂಡಿತಾ ಮಹಾಪ್ರಾಣಗಳು ಬೇಕಾಗಿಲ್ಲ. ಇವತ್ತು ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ನಡುವೆ ಯಂತೂ Hyper Correction ನಡಿತಾ ಇದೆ. ಹಾರ್ದಿಕ ಅಂತ ನೀವ್ಯಾರೋ ಹೇಳಿದ್ರಿ ಇಲ್ಲಿ. ‘ದ’ಕ್ಕೆ ಮಹಾಪ್ರಾಣ ಕೊಡುವಂತಹದು Hyper Correcton ನಡಿತಾ ಇದೆ. ಯಾಕೆ ನಡಿತಾ ಇದೆ ಅಂದ್ರೆ ಅಲ್ಪ ಪ್ರಾಣ ಮಹಾಪ್ರಾಣಗಳ ನಡುವಿನ ವ್ಯತ್ಯಾಸವನ್ನು ಅಥವಾ ಮೂಲ ಪದವನ್ನು ಗುರುತಿಸುವ ಸ್ಥಿತಿಯಲ್ಲೂ ನಾವಿಲ್ಲ. ಅಷ್ಟರಮಟ್ಟಿಗೆ ನಮ್ಮಲ್ಲಿ Confusion ಅನ್ನುವಂತಹದು ಇವತ್ತು ಆಗೋಗಿದೆ. ಈ ರೀತಿಯ ಆಮೂಲಾಗ್ರ ಬದಲಾವಣೆಗಳನ್ನ ಭಾಷೆಯ ಚೌಕಟ್ಟಿನೊಳಗೆ ತರ್ಬೇಕಾಗಿದೆ. ತಂದಾಗ ಅದಕ್ಕೆ ಒಂದು ಸ್ಪಷ್ಟವಾದ ಮಾತನ್ನ ಹೇಳ್ತ ಇಲ್ಲಿ ಅನೇಕ ವಿಷಯಗಳನ್ನ ಕುರಿತು ಬಹಳ ದೀರ್ಘವಾದ ಮಾತನಾಡೋದಕ್ಕೆ ಸಾಧ್ಯ ಇದೆ. ಇವನ್ನ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಕ್ಕೆ ಚರ್ಚೆಯಲ್ಲಿ ಬಳಿಸಿಕೊಳ್ತಾನೆ ಇದ್ದೇವೆ. ಒಂದು ಮಾತನ್ನ ಇಲ್ಲಿ ಹೇಳೋಕೆ ಇಷ್ಟಪಡ್ತೇನೆ. ದಲಿತರು ಇಲ್ಲಿಯವರೆಗೆ Monolingual ವಲಯವನ್ನು ಸೃಷ್ಟಿ ಮಾಡ್ಕೊಂಡವರು ಅವರು. ಗಡಿ ಪ್ರದೇಶವನ್ನು ಬಿಟ್ರೆ ಒಳಪ್ರದೇಶಗಳಲ್ಲಿ ಅವರು ಏಕಭಾಷಾ ವಲಯವನ್ನು ಸೃಷ್ಟಿ ಮಾಡ್ಕೊಂದಿದ್ದಂತಹವರು. ಇವರುನೂ ಸಹ ಇಂಗ್ಲಿಶ್ ಸಂಪರ್ಕದಿಂದಾಗಿ ಅಥವಾ ಇನ್ನೊಂದು ಭಾಷೆಯ ಸಂಪರ್ಕದಿಂದಾಗಿ ಇವತ್ತು ಬೈಲಿಂಗ್ವಲ್ ಆಗ್ತಾ ಇದ್ದಾರೆ. ಬಹಳ ಒಳ್ಳೆಯ ಬೆಳವಣಿಗೆ ಅದು. ಯಾವಾಗ ಏಕಭಾಷಾ ಪರಿಸರದಲ್ಲಿದ್ದವರು ದ್ವಿಭಾಷಾ ಪರಿಸರಕ್ಕೆ ಬರ್ತಾರೊ ಅನಂತರ ತ್ರಿಭಾಷಾ ಅಥವಾ ಹೆಚ್ಚಿನ ಭಾಷಾ ಪರಿಸರಕ್ಕೆ ಕಾಲಿಡುತ್ತಾ ಹೋಗ್ತಾರೊ ಮೂಲ ಅಶಿಷ್ಟ ಅಂತ ನಾವು ಇವತ್ತು ಏನೂ ಹೇಳ್ತಾ ಇದ್ದೀವೊ ಆ ರೀತಿಯ ಭಾಷಿಕ ಅಂಶವನ್ನು ನಿಧಾನವಾಗಿ ಬಿಡ್ತಾ ಹೋಗ್ತಾರೆ. ಇದು ಒಂದು ರೀತಿಯ ಲಿಂಗ್ವಿಸ್ಟಿಕ್ ಮೊಬಿಲಿಟಿ ಎನ್ನುವಂತಹ ಸಂದರ್ಭದಲ್ಲಿ ಆಗೇ ಆಗ್ಬೇಕಾಗುತ್ತದೆ. ಈಗ ಆಗುವಂತಹ ಸಂದರ್ಭದಲ್ಲಿ ಗೊಂದಲಗಳಾಗ್ತಾ ಇವೆ.ಆ ರೀತಿಯ ಒಂದು ಗೊಂದಲದ ವಾತಾವರಣದಲ್ಲಿ ನಾವಿದ್ದೇವೆ. ಆದರೆ ಒಂದು, ಬಹಳ ಮುಖ್ಯವಾಗಿ ಯಾವುದೂ ಶುದ್ಧವಲ್ಲ ಯಾವುದೂ ಅಶುದ್ಧವಲ್ಲ. ಕಡೆಗೂ ಆಡುವ ಭಾಷೆ ಅನ್ನುವಂತಹದು ನಿಜವಾಗಿಯೂ ನಮಗೆ ಭಾಷೆಯ ರಾಚನಿಕ ಸ್ವರೂಪವನ್ನು ತಿಳಿಸಿಕೊಂಡುವಂತಹದು. ಇವೆಲ್ಲ ನಮ್ಮ ಅನುಕೂಲಕ್ಕೋಸ್ಕರ ಸೃಷ್ಟಿಸಿಕೊಂಡದ್ದು. ಆ ರೀತಿಯ ಅನುಕೂಲ ವಲಯಕ್ಕೆ ನಮ್ಮನ್ನೇ ನಾವು ಪರಿವರ್ತನೆ ಮಾಡಿಕೊಳ್ಳುವ ಸಂದರ್ಭದಲ್ಲಿ ಆಗಬಹುದಾದಂತಹ ಸಣ್ಣ ಪುಟ್ಟ ತಪ್ಪುಗಳು ಯಾವುದೇ ಭಾಷಿಕ ವಲಯಕ್ಕೆ ಆಗಬಾರದು ಎನ್ನುವ ಸಣ್ಣ ಪುಟ್ಟ ತಿಳುವಳಿಕೆ ನಮ್ಮಲ್ಲಿ ಇದ್ರೆ ಬಹಳ ಒಳ್ಳೆಯದು. ಇಷ್ಟು ಮಾತನ್ನ ಹೇಳೋದಿಕ್ಕೆ, ಅವಕಾಶ ಮಾಡಿಕೊಟ್ಟ ನಿಮಗೆಲ್ಲ ವಂದಿಸಿ ನನ್ನ ಮಾತು ಮುಗಿಸ್ತೇನೆ.

(ಅಧ್ಯಕ್ಷೀಯ ಭಾಷಣ)