(ಒಂದನೇ ತರಗತಿಯಿಂದಲೇ ಇಂಗ್ಲಿಶ್ ಕಡ್ಡಾಯ : ಭ್ರಮೆ ಮತ್ತು ವಾಸ್ತವ)

ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೇ ಕಡ್ಡಾಯವಾಗಿ ಇಂಗ್ಲಿಶ್ ‘ಕಲಿಸುವ’ ನಿರ್ಧಾರವನ್ನು ಸಂಪುಟ ಸಭೆ ಕೈಗೊಂಡಿದೆ. ಇದನ್ನು ಕೆಲವು ಸಂಘಟನೆಗಳು ಬುದ್ಧಿಜೀವಿ ಸಾಹಿತಿಗಳು ಸಮರ್ಥಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲರು, ನಾಡಿನ ಹಿರಿಯ ಸಾಹಿತಿಗಳನ್ನು ಸಂಘಟಿಸಿಕೊಂಡು, ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯವಿಲ್ಲದಿರುವುದರ ಬಗ್ಗೆ ಸುಪ್ರೀಂಕೋರ್ಟಿನ ರಿಟ್ ಅನ್ನು ತೆರವುಗೊಳಿಸಿ, ನಂತರ ಇಂಗ್ಲಿಶ್‌ನ್ನು ಕಡ್ಡಾಯಗೊಳಿಸುವ ಬಗ್ಗೆ ತೀರ್ಮಾನಿಸಿ ಎಂಬ ನಿಲುವನ್ನು ತಾಳಿದ್ದಾರೆ. ಎರಡೂ ನಿಲುವಿನವರು ಶಿಕ್ಷಣದ ಚೌಕಟ್ಟಿನಲ್ಲಿ ಮತ್ತು ಭಾಷಾ ಕಲಿಕೆಯ ನೆಲೆಯಲ್ಲಿ ಮಾತ್ರ ಆಲೋಚಿಸಿದ್ದಾರೆ. ಉಳಿದಂತೆ ಇಂಗ್ಲಿಶ್ ಕಲಿಸುವುದನ್ನು ಸಮರ್ಥಿಸುವವರು, ಇಂದು ಮಕ್ಕಳು ಒಂದನೇ ತರಗತಿಯಿಂದಲೆ ಇಂಗ್ಲಿಶ್ ಕಲಿತರೆ ಮುಂದೆ ಅವರು ಬದುಕಲು ಎಲ್ಲ ಅವಕಾಶ ಪಡೆಯಲು ಸಮರ್ಥರಾಗುತ್ತಾರೆ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಪ್ರಸ್ತುತ ವಿಷಯವನ್ನು ಕೇವಲ ಶೈಕ್ಷಣಿಕ ಚೌಕಟ್ಟು ಮತ್ತು ಭಾಷಾ ಕಲಿಕೆಯ ವಿಷಯವನ್ನಾಗಿ ಮಾತ್ರ ಪರಿಗಣಿಸುವಂತಿಲ್ಲ. ಅದರಿಂದ ಮೇಲಿನ ವಿಷಯವನ್ನು ರಾಜಕೀಯ ಹಾಗೂ ಸಾಮಾಜಿಕ ಆಯಾಮಗಳ ಸಮಗ್ರ ನೆಲೆಯಲ್ಲಿ ಆಲೋಚಿಸಬೇಕು.

ಆಳುವ ವರ್ಗಕ್ಕೆ ಈ ನಾಡಿನ ಪ್ರಜೆಗಳ ಬಗ್ಗೆ ಮತ್ತು ಇಂದಿನ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಇಷ್ಟೊಂದು ಕಾಳಜಿ ಮೂಡಿರುವುದು ತುಂಬಾ ಸ್ವಾಗತಾರ್ಹ ಬೆಳವಣಿಗೆ. ಇಂದಿನ ಮಕ್ಕಳನ್ನು ಮುಂದಿನ ಭವಿಷ್ಯಕ್ಕೆ ಸಿದ್ಧಗೊಳಿಸಲು ನಾವು ಇಂದಿನಿಂದಲೇ ಜಾಗೃತರಾಗಬೇಕು ಎಂಬುದನ್ನು ಜನರಿಗೆ ಆಳುವ ವರ್ಗ ಹೇಳಿಕೊಡಬೇಕಿಲ್ಲ. ಆಳುವ ವರ್ಗದ ಇಂತಹ ಯೋಜನೆಗಳನ್ನು ಕಳೆದ ೫೦-೬೦ ವರುಷಗಳ ಪ್ರತ್ಯಕ್ಷ ಅನುಭವದಲ್ಲಿ ಜನರು ಬಲ್ಲರು. ಆದರೆ ಒಂದು ವಿಚಿತ್ರ ಸಂಗತಿಯೇನೆಂದರೆ, ಆಳುವ ವರ್ಗ ತನ್ನ ಹಿತಾಸಕ್ತಿಯನ್ನು ಸಾಮಾನ್ಯ ಜನರ ಮತ್ತು ದಲಿತರ ಹಿತಾಸಕ್ತಿ ಎಂಬುದಾಗಿ ಮೊದಲು ಅಭಿಪ್ರಾಯ ಹುಟ್ಟಿಸಿಬಿಡುತ್ತದೆ. ನಂತರ ದಲಿತ ಸಮುದಾಯದ ಕೆಲವರು, ಜೊತೆಗೆ ದಲಿತ ಸಹಾನುಭೂತಿವುಳ್ಳವರು ಇದನ್ನು ಸಮರ್ಥಿಸುತ್ತ ಹೋಗುತ್ತಾರೆ. ಜಾಗತೀಕರಣದ ಸಮರ್ಥನೆಯಲ್ಲೂ ಇದೇ ನಡೆಯಿತು. ಈಗ ಇಂಗ್ಲಿಶ್ ಕಲಿಸುವ ಸರದಿ. ಈಗಾಗಲೆ ದಲಿತ ಸಮುದಾಯದ ಕೆಲವರು ‘ದಲಿತ ಮಕ್ಕಳು ಇಂಗ್ಲಿಶ್ ಕಲಿತರೆ ಮಾತ್ರ ಅವರ ವಿಮೋಚನೆ’ ಎಂಬಂತೆ ಮಾತಾಡುತ್ತಿದ್ದಾರೆ. ಉಳಿದವರು ಇದನ್ನು ಸಮರ್ಥಿಸುತ್ತಿದ್ದಾರೆ. ದಲಿತರು ಆಳುವ ವರ್ಗಕ್ಕೆ ಓಟ್ ಬ್ಯಾಂಕ್ ಮಾತ್ರ ಆಗಿಲ್ಲ. ಆಳುವ ವರ್ಗದ ಕುತಂತ್ರ ಯೋಜನೆಗಳು ದಲಿತಪರ ಎಂದು ಹೇಳಿಸಲು ಎಲೈಟ್ ದಲಿತರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ತುಂಬಾ ವಿಷಾಧದ ಸಂಗತಿ. ಪರಿಣಾಮವಾಗಿ, ‘ಒಂದನೆ ತರಗತಿಯಿಂದಲೆ ಕಡ್ಡಾಯ ಇಂಗ್ಲಿಶ್ ಕಲಿಕೆ’ಯನ್ನು ಮಿಮರ್ಶಾತ್ಮಕವಾಗಿ ಗ್ರಹಿಸುವವರನ್ನು ‘ದಲಿತ ವಿರೋಧಿ’ಗಳೆಂದು ಪರಿಗಣಿಸುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ.

ಪ್ರಸ್ತುತ ವಿಷಯ ಕೇವಲ ಭಾಷಾ ಕಲಿಕೆಗೆ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ್ದೆಂದು ಯಾಂತ್ರೀಕರಿಸುವಂತಿಲ್ಲ. ಅದನ್ನೂ ಒಳಗೊಂಡಂತೆ, ಭವಿಷ್ಯದ ಭ್ರಮೆಯಲ್ಲಿ ತೇಲಾಡದೆ ವರ್ತಮಾನದ ಸುಡುವಾಸ್ತವಗಳ ಒಡಲಲ್ಲಿ ವಿಷಯವನ್ನು ಚರ್ಚಿಸಬೇಕಾಗಿದೆ. ನಾಡಿನಾದ್ಯಂತ ಸಾವಿರಾರು ಏಕೋಪಾಧ್ಯಾಯ ಶಾಲೆಗಳಿವೆ. ಅಲ್ಲಿ ಪ್ರತಿದಿನ ೧೪ ಪುಸ್ತಕಗಳನ್ನು ಬೋಧಿಸುವ ಸಮಸ್ಯೆಯನ್ನು ಶಿಕ್ಷಕರು ಎದುರಿಸುತ್ತಿದ್ದಾರೆ. ಇಂಗ್ಲಿಶ್ ಕಡ್ಡಾಯಗೊಳಿಸುವುದರಿಂದ ಆ ಸಂಖ್ಯೆ ೧೮ಕ್ಕೆ ಏರುತ್ತದೆ. ಶಿಕ್ಷಕರ ಸಮಸ್ಯೆ ಸ್ವಲ್ಪ ಅಗವಾಗುತ್ತದೆ; ಮಕ್ಕಳ ಕಲಿಕೆಯ ಒತ್ತಡ ಜಾಸ್ತಿಯಾಗುತ್ತದೆ; ಒಂದು ಕೋಲು ಹಿಡಿಯುವ ಶಿಕ್ಷಕರು ಎರಡು ಕೋಲು ಹಿಡಿಯಬಹುದು ಅಷ್ಟೆ. ಶಿಕ್ಷಕರು ಕಲಿಸುವ – ಮಕ್ಕಳು ಕಲಿಯುವ ಪರಿಣಾಮದಲ್ಲಿ ಯಾವುದೇ ಗುಣಾತ್ಮಕ ಬದಲಾವಣೆಗಳು ಸಂಭವಿಸುವುದಿಲ್ಲ. ಇದು ಶಿಕ್ಷಕರು ಮತ್ತು ಮಕ್ಕಳ ಇಂಗ್ಲಿಶ್ ಕಲಿಸುವ ಮತ್ತು ಕಲಿಯುವ ಸಾಮರ್ಥ್ಯವನ್ನು ಕುರಿತ ಹೇಳಿಕೆ ಅಲ್ಲ.

ಔಪಚಾರಿಕ ಶಿಕ್ಷಣದಲ್ಲಿ ಈಗ ಭಾಷೆಯನ್ನು ಅಥವಾ ಇಂಗ್ಲಿಶ್ ಭಾಷೆಯನ್ನು ಕಲಿಸುತ್ತಿರುವ ವಿಧಾನವು ಭಾಷಾ ಕಲಿಕೆಯ ಕ್ರಮಕ್ಕೆ ವಿರುದ್ಧವಾಗಿದೆ. ಭಾಷೆಯನ್ನು ಬರಹದ ಹಂಗಿಲ್ಲದೆ ಕಲಿಯುವ ಸಾಮರ್ಥ್ಯ ಮನುಷ್ಯನ ಮೆದುಳಿಗಿದೆ. ಇದು ಬಹಳ ಸಹಜವಾದುದು. ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಆಡುವ ಅನಕ್ಷರಸ್ಥರಿದ್ದಾರೆ. ಹಂಪಿಯಲ್ಲಿ ದನ ಕಾಯುವ ಅನಕ್ಷರಸ್ಥ ಮಕ್ಕಳು, ಹಣ್ಣು ಹೂ ಮಾರುವವರು, ಜೀವನೋಪಾಯಕ್ಕಾಗಿ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡವರು ಲೀಲಾಜಾಲವಾಗಿ ಇಂಗ್ಲಿಶ್ ಮಾತಾಡುತ್ತಾರೆ. ಇವರ್ಯಾರು ಒಂದನೇ ತರಗತಿಯಿಂದ ‘ಕಡ್ಡಾಯವಾಗಿ’ ಇಂಗ್ಲಿಶ್ ಕಲಿತವರಲ್ಲ. ಇವರ್ಯಾರು ಕೂಡ ಬರಹದ ಮೂಲಕ ಎರಡನೆ ಅಥವಾ ಮೂರನೇ ಭಾಷೆಯನ್ನು ಕಲಿತವರಲ್ಲ. ಅಂದರೆ ಶಿಕ್ಷಣವನ್ನು ಓದು – ಬರಹದ ಮೂಲಕವೇ ಭಾಷೆಯನ್ನು ಕಲಿಸುವ ವಿಧಾನ ಭಾಷಾ ಕಲಿಕೆಯ ಸಾಮಾನ್ಯ ಕ್ರಮಕ್ಕೆ ವಿರುದ್ಧವಾಗಿದೆ.

ಇಂದಿನ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಆಳವು ವರ್ಗಕ್ಕೆ ಅಷ್ಟೊಂದು ಕಾಳಜಿ ಇರುವುದು ನಿಜವೇ ಆದರೆ ಒಂದೇ ಒಂದು ಗಂಭೀರ ಪ್ರಶ್ನೆಯನ್ನು ಕೇಳಬೇಕಾಗಿದೆ. ಈಗಾಗಲೇ ವಿವಿಧ ಬಗೆಯ ಶಿಕ್ಷಣ ಪಡೆದು, ಆಳುವ ವರ್ಗದ ಶೋಷಣೆಯ ತಂತ್ರಗಳಿಂದಾಗಿ ನಿರುದ್ಯೋಗಿಗಳಾಗಿರುವ ಮತ್ತು ಪ್ರತಿವರ್ಷ ಶಿಕ್ಷಣ ಪಡೆದ ತಪ್ಪಿಗೆ ನಿರುದ್ಯೋಗಿಗಳಾಗುತ್ತಿರುವ ಲಕ್ಷಲಕ್ಷ ಯುವಜನಾಂಗದ ಕರಾಳ ಬದುಕನ್ನು ಹಸನು ಮಾಡಲು ಆಳುವ ವರ್ಗಕ್ಕೆ ಯಾಕೆ ಸಾಧ್ಯವಾಗಿಲ್ಲ?. ೫ನೇ ತರಗತಿಯಿಂದ ಎರಡನೇ ಪದವಿ ತರಗತಿಯವರೆಗೆ ಇಂಗ್ಲಿಶ್‌ನ್ನು ಕಡ್ಡಾಯಗೊಳಿಸಿ, ಅದರಲ್ಲಿ ಬಹುಸಂಖ್ಯಾತರನ್ನು ದುರ್ಬಲರೆಂದು ಡ್ರಾಪ್‌ಔಟ್ ಮಾಡಿಸಿ, ಅವರಲ್ಲಿ ಅಪರಾದಿ ಪ್ರಜೆಯನ್ನು ಮೂಡಿಸಲಾಗಿದೆ. ಇಂತಹ ಅಸಹಾಯಕ ಮುಗ್ಧ ಜೀವಿಗಳ ಬದುಕಿಗೆ ಆಳುವ ವರ್ಗ ಏನು ಮಾಡಿದೆ? ಈಗ ಕಲಿಸುತ್ತಿರುವ ಇಂಗ್ಲಿಶ್ ಕೂಡ ಮಕ್ಕಳು ಇಂಗ್ಲಿಶ್ ಕಲಿಯಲಿ ಎಂಬ ಉದ್ದೇಶವನ್ನೇ ಹೊಂದಿದೆ. ಆದರೆ ಅಲ್ಲಿ ಪರಿಣಾಮ ಏನಾಗಿದೆ? ಉಳಿದೆಲ್ಲ ಪತ್ರಿಕೆಗಳಲ್ಲಿ ಪಾಸಾಗಿ ಇಂಗ್ಲಿಶ್ ಪತ್ರಿಕೆಯಲ್ಲಿ ಮಾತ್ರ ಫೇಲಾಗಿ, ಮರಳಿ ಪ್ರಯತ್ನ ಮಾಡುವ ಅವಕಾಶವೂ ಇಲ್ಲದೆ, ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿರುವ ಬಡಪಾಯಿಗಳು ಸಾವಿರಾರು. ಅಂದರೆ ಈಗ ಕಲಿಸುತ್ತಿರುವ ಇಂಗ್ಲಿಶ್, ಮಕ್ಕಳು ಇಂಗ್ಲಿಶ್ ಕಲಿಯಲಿ ಎಂದೋ ಅಥವಾ ಬಹುಸಂಖ್ಯೆಯ ಮಕ್ಕಳು ಇಂಗ್ಲಿಶ್ ಪತ್ರಿಕೆಯಲ್ಲಿ ಫೇಲಾಗಿ ಉಳ್ಳವರ ಮನೆಯಲ್ಲಿ ಕೂಲಿನಾಲಿ, ಕಸಮುಸುರೆ, ಮಾಡಿಕೊಂಡಿರಲಿ ಎಂದೊ? ಇಂದು ಯಾವುದೇ ಅಂಗಡಿಗೊ, ಹೋಟೆಲಿಗೊ, ಲಾಡ್ಜಿಗೊ, ಧಣಿಗಳ ಮನೆಗೊ, ಮಲೆನಾಡಿನ ಕಾಫಿ ತೋಡಗಳಿಗೊ, ಬೆಂಗಳೂರಿನ ಕಟ್ಟಡ ಕಟ್ಟುವ ಕಾರ್ಮಿಕರ ಬಳಿಗೋ ಹೋಗಿ ನೋಡಿ. ಅಲ್ಲಿ ಶಿಕ್ಷಣದ ಯಾವುದಾದರೂ ಒಂದು ಹಂತದಲ್ಲಿ ಕಡ್ಡಾಯವಾಗಿ ಇಂಗ್ಲಿಶ್‌ನಲ್ಲಿ ಫೇಲಾಗಿರುವವ ದುರಂತ ಬದುಕಿನ ಕಣ್ಣೀರ ಕೋಡಿಯೇ ಹರಿಯುತ್ತಿದೆ. ಇದು ಕೇವಲ ಭಾವುಕತೆಯ ಮಾತಲ್ಲ. ನಾವು ಸಾಮಾಜಿಕ ಬೆಳವಣಿಗೆಯನ್ನು ಹೇಗೆ ನೋಡಬೇಕು? ಎಂಬ ಮೂಲಭೂತ ಪ್ರಶ್ನೆ. ಗ್ರಾಮಾಂತರ ಪ್ರದೇಶದ ಅಥವಾ ದಲಿತ ಕುಟುಂಬದ ಕೆಲವೇ ಕೆಲವರು ಮಾತ್ರ ಇಂಗ್ಲಿಶ್ ಕಲಿತು ನೌಕರ, ಅಧಿಕಾರ ಆದ ತಕ್ಷಣ ಅದನ್ನೇ ಸಾಮಾಜಿಕ ಬೆಳವಣಿಗೆಯ ಪ್ರಧಾನ ಭಾಗ ಎಂದು ಪರಿಗಣಿಸುವುದು ಸಂಕುಚಿತ ವಿಧಾನ. ಇದೇ ಸಮುದಾಯಗಳಿಂದ ಶಿಕ್ಷಣ ಪಡೆಯಲು ಬಂದು, ಇಂಗ್ಲಿಶ್ ಪಾಸು ಮಾಡಲಾಗಿದೆ ನಿರುದ್ಯೋಗಿಗಳಾದವರು ಬಹುಸಂಖ್ಯಾತರು. ಬಹುಸಂಖ್ಯೆಯನ್ನು ಪ್ರಧಾನ ಎಂದು ಪರಿಗಣಿಸುವುದು ಪ್ರಜಾಪ್ರಭುತ್ವದ ಪದ್ಧತಿ ಆಗಿದ್ದರೆ ಇಂಗ್ಲಿಶ್ ಪಾಸು ಮಾಡಲಾಗದೆ ಮನೆಗೆ ಮರಳಿ ಕೂಲಿನಾಲಿ ಮಾಡಿಕೊಂಡಿರುವ ಬಹುಪ್ರಮಾಣವನ್ನು ಪ್ರಧಾನವೆಂದು ಪರಿಗಣಿಸಬೇಕು. ಆ ಮೂಲಕ ಸಾಮಾಜಿಕ ಬೆಳವಣಿಗೆಯನ್ನು ಪರಿಗಣಿಸಿದಾಗ ವಾಸ್ತವ ತಿಳಿಯುತ್ತದೆ.

ಕರ್ನಾಟಕದಲ್ಲಿ ಇಂದು ಲಕ್ಷಲಕ್ಷ ಜನ ನಿರು‌ದ್ಯೋಗಿಗಳಿದ್ದಾರೆ. ಒಂದು ಕಾಲಕ್ಕೆ ನಿರುದ್ಯೋಗ ಅಕ್ಷರಸ್ಥ ಸಮುದಾಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಕಳೆದ ೧೦-೧೫ ವರುಷಗಳಲ್ಲಿ ಅನಕ್ಷರಸ್ಥ ಸಮುದಾಯದಲ್ಲಿ ಕೂಲಿನಾಲಿ ಮಾಡಲು ಅವಕಾಶಗಳಿಲ್ಲದೆ ಅಲ್ಲಿಯೂ ಕೂಡ ನಿರುದ್ಯೋಗ ಸೃಷ್ಟಿಯಾಗಿದೆ. ಕೊನೇ ಪಕ್ಷ ಅಕ್ಷರಸ್ಥ ನಿರುದ್ಯೋಗಿಗಳಿಗಾದರೂ ಸುವರ್ಣ ಕರ್ನಾಟಕದ ದ್ಯೋತಕವಾಗಿ ನೌಕರಿ ಕೊಡುವ ಮಹಾನ್ ತೀರ್ಮಾನವನ್ನು ಆಳುವ ವರ್ಗ ತೆಗೆದುಕೊಳ್ಳುತ್ತದೆಯೇ? ಅದಕ್ಕೆ ಅಷ್ಟು ಧೈರ್ಯವಿದೆಯೇ? ಅಧಿಕಾರಕ್ಕೆ ಬರುವ ಮೊದಲು ‘ನಿರುದ್ಯೋಗಿಗಳಿಗೆ ಮಾಸಿಕ ೫೦೦.೦೦ ರೂಪಾಯಿ ನಿರುದ್ಯೋಗ ಭತ್ಯೆ ಕೊಡುತ್ತೇವೆ’ ಎಂಬ ಆಶ್ವಾಸನೆ ಎಲ್ಲಿ ಹೋಯಿತು? ಇಂದು ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವ ಜನರು ಎಂದಿಲ್ಲದ ಬಿಕ್ಕಟ್ಟಿನ ಹಾಗೂ ಆತಂಕದ ದುರ್ದಿನಗಳನ್ನು ಎದುರಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಕೂಲಿ ಮಾಡುವವರು ಹಸಿರು ಕಾರ್ಡಿಗಾಗಿ ಪರದಾಡುವ ಸಮಸ್ಯೆ ಮುಗಿಲು ಮುಟ್ಟಿದೆ. ಬಡ ಹಾಗೂ ದಲಿತ ಕುಟುಂಬಗಳಲ್ಲಿ ಗಂಭೀರ ಸಮಸ್ಯೆ ಸೃಷ್ಟಿಯಾಗಿದೆ. ಆಳುವ ವರ್ಗ ಸಾಮ್ರಾಜ್ಯಶಾಹಿಯ ಗುಲಾಮನಾಗಿದೆ. ಕರ್ನಾಟಕ ಎಫ್.ಡಿ.ಐ.ನಲ್ಲಿ ಇಂಡಿಯಾದಲ್ಲೆ ಎರಡನೇ ಸ್ಥಾನದಲ್ಲಿದೆ’ ಎಂಬ ವರದಿಯು ಶೋಷಿತ ಜನರ ಬದುಕನ್ನು ಎಫ್‌ಡಿಐ ಬಲಿ ತೆಗೆದುಕೊಂಡ ಕ್ರೂರವಾಸ್ತವವನ್ನೆ ಹೇಳುತ್ತಿದೆ. ಸರಕಾರ ಎಂಬುದು ಸಾಮ್ರಾಜ್ಯಶಾಹಿಯ ಏಜೆಂಟ್ ಆಗಿದೆ. ರೈತ, ದಲಿತ, ಕಾರ್ಮಿಕ, ಆದಿವಾಸಿ, ಕೃಷಿಕೂಲಿ, ವಿದ್ಯಾರ್ಥಿ ಯುವಜನರು ತೀವ್ರವಾದ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ‘ನಿಮ್ಮ ಅಜ್ಜನಿಗೋ ತಾತಜ್ಜನಿಗೋ ಚಿನ್ನದ ಅಂಬಾರಿ ಇತ್ತು. ಅದನ್ನು ನೆನಪಿಸಿಕೊಂಡು ಖುಷಿಪಡು’ ಎಂದು ಹೇಳುವುದು. ಮತ್ತೊಂದು ಕಡೆ ‘ಇಂದಿನ ಮಕ್ಕಳು ಒಂದನೇ ತರಗತಿಯಿಂದಲೇ ಕಡ್ಡಾಯವಾಗಿ ಇಂಗ್ಲಿಶ್ ಕಲಿತರೆ ಮುಂದೆ ಅವರ ಬದುಕು ಪಾವನವಾಗುತ್ತದೆ. ಅವರು ಭೂಲೋಕದಲ್ಲಿ ಸ್ವರ್ಗವನ್ನು ಕಾಣುತ್ತಾರೆ’ ಎಂದು ಭ್ರಮೆ ಹುಟ್ಟಿಸುವುದು. ಈ ಎರಡರ ಹಿಂದಿನ ಗುಟ್ಟೇನು? ವರ್ತಮಾನದಲ್ಲಿ ಜನಸಾಮಾನ್ಯರು, ನಿರುದ್ಯೋಗಿಗಳು ಎದುರಿಸುತ್ತಿರುವ ಸುಡವಾಸ್ತವಗಳನ್ನು ಅವರು ಮುಚ್ಚಿಟ್ಟುಕೊಂಡು, ಮುಂದಿನ ೨೦-೨೫ ವರುಷಗಳ ಆಚೆಗೆ ಯೋಚನೆ ಮಾಡಿ ಎಂಬಂತೆ ಪ್ರಚೋದಿಸುವುದು ತಾನೇ? ಇಂದಿನ ಮಕ್ಕಳಿಗೆ ಒಂದನೇ ತರಗತಿಯಿಂದ ಇಂಗ್ಲಿಶ್ ಕಡ್ಡಾಯಗೊಳಿಸಿ, ಮುಂದೆ ಅವರಿಗೆ ಸ್ವರ್ಗವನ್ನೇ ಭೂಮಿಗೆ ಇಳಿಸುವ ಮಹಾನ್ ಕನಸು ಆಳುವ ವರ್ಗಕ್ಕೆ ಇರುವುದಾದರೆ, ಇಂದು ನರಕ ಯಾತನೆ ಅನುಭವಿಸುತ್ತಿರುವವರ ಬಗ್ಗೆ ಅವರ ನಿಲುವೇನು ಎಂಬ ಪ್ರಶ್ನೆಯನ್ನು ಈ ನೆಲದ ಶೋಷಿತರು ಮತ್ತು ನಿರದ್ಯೋಗಿ ಯುವಜನರು ಸೀರಿಯಸ್ ಆಗಿ ಕೇಳಬೇಕಾಗಿದೆ. ನಮಗೇ ಸಾಮಾನ್ಯ ಅಗತ್ಯಗಳನ್ನು ಪೂರೈಸದ ಆಳುವ ವರ್ಗ, ಮುಂದೆ ನಮ್ಮ ಮಕ್ಕಳಿಗೆ ಬಂಗಾರದ ಹಾಸಿಗೆ ಹಾಸುವ ಕನಸಿನ ಹಿಂದಿನ ಕುಹಕ ಏನು ಎಂಬುದನ್ನು ವಿದ್ಯಾರ್ಥಿ ಯುವಜನರು ಅರಿಯಬೇಕಾಗಿದೆ.

ಕಳೆದ ಶತಮಾನದ ೬೦-೭೦ರ ದಶಕದಲ್ಲಿ ದಲಿತರು, ಹಿಂದುಳಿದವರು ಮತ್ತು ಗ್ರಾಮಾಂತರ ಪ್ರದೇಶದವರು ಶಿಕ್ಷಣ ಪಡೆದರೆ ಸಾಕು; ಅವರಿಗೆ ನೌಕರಿ ಗ್ಯಾರಂಟಿ ಎಂಬ ಅಭಿಪ್ರಾಯವನ್ನು ಗಟ್ಟಿಗೊಳಿಸಲಾಗಿತ್ತು. ಆದರೆ ಆದದ್ದಾದರೂ ಏನು? ನಿರುದ್ಯೋಗಿಗಳ ಸೃಷ್ಟಿ ಅಷ್ಟೆ. ೧೯೮೬ರವರೆಗೆ ಸ್ನಾತಕೋತ್ತರ ಪದವಿ ಪಡೆದವರು ನೇರವಾಗಿ ಉಪನ್ಯಾಸಕ ಹುದ್ದೆಗೆ ಅರ್ಹರಾಗಿದ್ದರು. ಕ್ರಮೇಣ ಆ ಪದವಿ ಪಡೆದವರ ಸಂಖ್ಯೆ ಜಾಸ್ತಿಯಾಗುತ್ತಾ ಹೋಯಿತು. ಆಗ ನಿರುದ್ಯೋಗಿಗಳನ್ನು ತಡೆಹಿಡಿಯುವ ಸಲುವಾಗಿ ಮತ್ತು ಅವರಲ್ಲಿ ಅಪರಾಧಿ ಪ್ರಜ್ಞೆಯನ್ನು ಹುಟ್ಟುಹಾಕುವ ಉದ್ದೇಶದಿಂದ ಎನ್‌ಇಟಿ/ಯುಜಿಸಿ ಎಂಬ ಕರಾಳ ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ನಿಯಮವನ್ನು ಜಾರಿಗೆ ತಂದರು. ಆ ಪರೀಕ್ಷೆಯಲ್ಲಿ ಪಾಸಾಗುವುದಕ್ಕೆ ತರಗತಿಯೊಳಗಿನ ಬೋಧನೆಗೂ ಎಳ್ಳಷ್ಟೂ ಸಂಬಂಧವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ ಆ ಪರೀಕ್ಷೆಯಲ್ಲಿ ಪಾಸಾಗಲಿಲ್ಲವಲ್ಲ ಎಂಬ ಆತಂಕ ಸ್ನಾತಕೋತ್ತರ ಪದವಿ ಮುಗಿಸಿದವರಲ್ಲಿ ಸದಾ ಕಾಡುತ್ತಿದೆ. ಅಂದರೆ ಆ ಪರೀಕ್ಷೆಯ ಉದ್ದೇಶವೇ ಸ್ನಾತಕೋತ್ತರ ಪದವೀಧರರನ್ನು ಅನರ್ಹಗೊಳಿಸುವುದಾಗಿದೆ. ಇದರ ಹಾಗೆ ಇಂದು ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿತ ತಕ್ಷಣ ಮುಂದಿನ ೧೫-೨೦ ವರುಷಗಳಲ್ಲಿ ನೌಕರಿ ಇತ್ಯಾದಿ ಗ್ಯಾರಂಟಿ ಎಂಬ ಭ್ರಮೆಯನ್ನು ಹುಟ್ಟುಹಾಕಲಾಗಿದೆ. ಈಗ ಕಲಿತ ಇವರು, ಆಗ ನೌಕರಿ ಕೇಳುವ ಪ್ರಸಂಗ ಬಂದಾಗ, ಎನ್‌ಇಟಿ/ಯುಜಿಸಿಯಂತಹ ಯಾವುದೋ ಕರಾಳ ಪರೀಕ್ಷೆಯನ್ನು ತಂದು ಇವರನ್ನು ಮತ್ತೆ ಅನರ್ಹಗೊಳಿಸಲಾರರು ಎಂಬ ಗ್ಯಾರಂಟಿ ಏನಿದೆ?

ಕಳೆದ ೯೦ರ ದಶಕದಲ್ಲಿ ಸಾಮ್ರಾಜ್ಯಶಾಹಿ ಶೋಷಣೆಯನ್ನು ನಯವಾಗಿ ಮುಂದುವರಿಸಲಾಯಿತು. ಈಗ ಇಡಿಯಾಗಿ ಶಿಕ್ಷಣ ವ್ಯವಸ್ಥೆಯನ್ನು ನೇರವಾಗಿ ಬಹುರಾಷ್ಟ್ರೀಯ ಕಂಪನಿಗಳ ಲೂಟಿಗೆ, ಸಾಮ್ರಾಜ್ಯಶಾಹಿ ಶೋಷಣೆಗೆ ತೆರೆದಿಟ್ಟಿದ್ದಾರೆ. ಪರಿಣಾಮವಾಗಿ ಅವರ ನಿರ್ದೇಶನಗಳನ್ನು ಶಿಕ್ಷಣದಲ್ಲಿ ಜಾರಿ ಮಾಡುವ ಜರೂರಿಗೆ ಆಳುವ ವರ್ಗ ಒಳಗಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಜಾಸ್ತಿಯಾಗಬೇಕಾದರೆ ಅವರು ಕೊಡುವ ಕೂಲಿ ಅತ್ಯಂತ ಕಡಿಮೆಯಾಗಬೇಕು. ಹರುಕುಮುರುಕು ಇಂಗ್ಲಿಶ್ ಕಲಿತವರು ಅತ್ಯಂತ ಕಡಿಮೆ ಕೂಲಿಗೆ ದುಡಿಯುತ್ತಾರೆ. ಇಂಗ್ಲಿಶ್‌ನ್ನು ಮಾಧ್ಯಮ ಮಾಡಿ ಎಂಬ ಇನ್‌ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಯಲ್ಲಿ ಇದೇ ಸ್ಪಷ್ಟ ಹುನ್ನಾರ ಅಡಗಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗಿನ ಸಮಾಜ ಕಲ್ಯಾಣ ರೂಪದ ಎಲ್ಲ ಧನ ಸಹಾಯವನ್ನು ಸರಕಾರಗಳು ಬಹುತೇಕ ನಿಲ್ಲಿಸಿವೆ; ಮುಂದೆ ಸಂಪೂರ್ಣ ನಿಲ್ಲಿಸುವ ಸ್ಥಿತಿ ತಲುಪಿವೆ. ಇನ್ನು ಮುಂದೆ ದಲಿತ ಬಡಮಕ್ಕಳ ಹಾಸ್ಟೆಲ್‌ಗಳು ಬಂದ್ ಆಗುತ್ತವೆ. ಶಿಕ್ಷಣದಲ್ಲಿದ್ದ ಮೀಸಲಾತಿ ಬಂದ್‌ ಆಗುತ್ತದೆ. ‘ಬಾ ಮರಳಿ ಶಾಲೆಗೆ’, ವಯಸ್ಕರ ಶಿಕ್ಷಣ, ಸರ್ವಶಿಕ್ಷಣ ಅಭಿಯಾನ ಮುಂತಾದ ವಿಶ್ವಬ್ಯಾಂಕ್ ಮತ್ತು ಐಎಂಎಫ್‌ನ ನೇರ ಕಾರ್ಯಕ್ರಮಗಳು ಶಿಕ್ಷಣದ ಬಗ್ಗೆ ಇನ್ನಿಲ್ಲದ ಭ್ರಮೆಗಳನ್ನು ಈಗಾಗಲೇ ಹುಟ್ಟುಹಾಕಿವೆ. ಕಳೆದ ೯೦ರ ದಶಕದಲ್ಲೆ ಐಎಂಎಫ್ ನಿರ್ದೇಶನದಂತೆ ಶಿಕ್ಷಣ ಕ್ಷೇತ್ರವನ್ನು ‘ಅನುತ್ಪಾದಕ ಕ್ಷೇತ್ರ’ವೆಂದು ತೀರ್ಮಾನಿಸಲಾಗಿದೆ. ಪರಿಣಾಮವಾಗಿ ಶಿಕ್ಷಣ ಎಂಬುದು ಈಗ ಬಂಡವಾಳ ಹಾಕಿ ಬಂಡವಾಳ ಹಾಕಿ ಬಂಡವಾಳ ವೃದ್ಧಿಸಿಕೊಳ್ಳುವ ಅಗ್ಗದ ಕ್ಷೇತ್ರವಾಗಿದೆ. ಔಷಧಿ, ಕುಡಿಯುವ ನೀರು ಮತ್ತು ಶಿ‌ಕ್ಷಣ ಇವು ಈ ಕಾಲದ ಪ್ರಧಾನ ಲಾಭದ ಇಂಡಸ್ಟ್ರಿಗಳು. ಶಿಕ್ಷಣ ಎಂಬುದು ‘ಕಲಿಯುವ ಮತ್ತು ಕಲಿಸುವ ಕ್ಷೇತ್ರ’ ಎಂದು ಭಾವಿಸುವ ಕಾಲ ಮುಗಿದು ಹೋಗಿದೆ. ಈಗ ಏನಿದ್ದರೂ ಅದು ಇಂಡಸ್ಟ್ರಿ. ಈ ಕ್ರೂರ ಸತ್ಯಗಳನ್ನೆಲ್ಲ ಮುಚ್ಚಿಟ್ಟು, ಇಂಗ್ಲಿಶ್ ಕಲಿಸುವುದರಿಂದ, ಅದನ್ನು ಮಕ್ಕಳು ಕಲಿಯುತ್ತಾರೆ; ಅದರಿಂದ ಸ್ವರ್ಗ ಭೂಮಿಗೆ ಬರುತ್ತದೆ ಎಂದು ಸಂಭ್ರಮ ಪಡುವುದು ಸಮಾಜದ ಬಗೆಗಿನ ಅಜಾಗೃತ ಮನಸ್ಥಿತಿಯ ಸೂಚನೆ ಅಷ್ಟೆ. ಹಾಗಾಗಿ ಇಂಗ್ಲಿಶ್ ಕಲಿಸುವ ಯೋಜನೆ ನಿಜವಾಗಲೂ ಜನತೆಯ ಹಿತಾಸಕ್ತಿಯಿಂದ ಹುಟ್ಟಿಲ್ಲ. ಅಂದರೆ ಒಂದನೆ ತರಗತಿಯಿಂದಲೆ ಇಂಗ್ಲಿಶ್ ಕಲಿಸುವ ಯೋಜನೆಯ ಹಿಂದಿರುವ ಉದ್ದೇಶ ಇಂಗ್ಲಿಶ್ ಕಲಿಸಬೇಕು ಎಂಬುದಲ್ಲ. ವರ್ತಮಾನದಲ್ಲಿ ಯಾರು ಯಾರು ತಮ್ಮ ತಮ್ಮ ಕಷ್ಟ ಸಂಕಟಗಳಿಗಾಗಿ ಆಳುವ ವರ್ಗದ ವಿರುದ್ಧ ಅಸಹನೆಗೊಂಡಿದ್ದಾರೊ. ಅಂತಹವರ ಅಸಹನೆ ಮತ್ತು ಆಕ್ರೋಶವನ್ನು ಶಮನಗೊಳಿಸುವುದಾಗಿದೆ.

ಇಂಗ್ಲಿಶ್ ‘ಕಲಿಸುವುದನ್ನು’ ಕಡ್ಡಾಯಗೊಳಿಸುವುದರಿಂದ ಯಾರಿಗೆ ಲಾಭವಾಗುತ್ತದೆ? ಹೇಗೆ ಲಾಭವಾಗುತ್ತದೆ? ಯಾರಿಗೆ ನಷ್ಟವಾಗುತ್ತದೆ? ಹೇಗೆ ನಷ್ಟವಾಗುತ್ತದೆ? ಎಂಬುದನ್ನು ಸ್ಪಷ್ಟವಾಗಿ ಬಿಡಿಸಿ ಹೇಳಬೇಕಾಗಿದೆ. ಇದರಿಂದ ಆಳುವ ವರ್ಗವು ರೈತ, ಕಾರ್ಮಿಕ, ವಿದ್ಯಾರ್ಥಿ ಯುವಜನರು, ಅದರಲ್ಲೂ ಶೋಷಿತ, ವಂಚಿತ ಮತ್ತು ನಿರುದ್ಯೋಗಿಗಳಿಂದ ತನ್ನ ಮೇಲೆ ಬರುವ ಒತ್ತಡದಿಂದ ತಪ್ಪಿಸಿಕೊಳ್ಳುತ್ತದೆ. ಇದು ಆಳುವ ವರ್ಗಕ್ಕೆ ಆಗುವ ಭಾರೀ ಲಾಭ. ‘ಒಂದನೆ ತರಗತಿಯಿಂದಲೇ ಇಂಗ್ಲಿಶ್ ಕಲಿತ ನಮ್ಮ ಮಕ್ಕಳ ಮುಂದೆ ಇಂದ್ರನ ನಂದನ ವನದಲ್ಲಿ ನಲಿಯುತ್ತಾರೆ’ ಎಂದು ಭ್ರಮಿಸಿ ತಮ್ಮ ಇವತ್ತಿನ ತುತ್ತು ಅನ್ನದ ಪ್ರಶ್ನೆಯನ್ನು ಮರೆಯುವ ಹುನ್ನಾರಕ್ಕೆ ಒಳಗಾಗುವ ನಷ್ಟ ನಾಡಿನ ನತದೃಷ್ಟರದು.