‘ದಲಿತರು‘, ‘ಶಿಕ್ಷಣ’ ಭಾಷೆ ಈ ಪರಿಭಾಷೆಗಳನ್ನು ಶೈಕ್ಷಣಿಕ ಮತ್ತಿತರ ಸಂದರ್ಭಗಳಲ್ಲಿ ಬಿಡಿಯಾಗಿ ಕೆಲವೊಮ್ಮೆ ದಲಿತರು ಮತ್ತು ಶಿಕ್ಷಣ, ಶಿಕ್ಷಣ ಮತ್ತು ಭಾಷೆ ಎಂಬ ಜೋಡಿ ಪರಿಭಾಷೆಗಳ ರೂಪದಲ್ಲಿ ಒಂದಲ್ಲಾ ಒಂದು ವಿಧದಲ್ಲಿ ಚರ್ಚಿಸಿರುತ್ತೇವೆ. ಪರಿಚಯಿಸಿಕೊಂಡಿರುತ್ತೇವೆ.

ಈ ಹೊತ್ತಿನಲ್ಲಿ ದಲಿತರು, ಶಿಕ್ಷಣ ಮತ್ತು ಭಾಷೆ ಮೂರು ಪರಿಭಾಷೆಗಳನ್ನು ಒಟ್ಟಾಗಿ ನೋಡಲೇ ಬೇಕಾದ ಅನಿವಾರ್ಯತೆಯಿದೆ. ಕಾರಣ ದಲಿತರ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ಶೈಕ್ಷಣಿಕಲ ವಲಯದಾಚೆಗಿನ ಕಾರಣಗಳನ್ನು ಗುರುತಿಸುತ್ತಿದ್ದೇವೆ. ಶಿಕ್ಷಣ ದಲಿತರ ಏಳ್ಗೆಯ ಸಾಮಾಜಿಕ ರಾಜಕೀಯ ಸಮಾನತೆಯ, ದಾಸ್ಯ ವಿಮೋಚನೆಯ ಅಸ್ತ್ರವಾಗಿ ನಿರೂಪಿತವಾಗಿದೆ. ಇಂದು ಶಿಕ್ಷಣ ದಲಿತರಿಗೆ ಅರಿವಿನ, ಜ್ಞಾನದ ತಿಳುವಳಿಕೆಯ ಸಾಧನವಾಗಿ ಮಾತ್ರವಲ್ಲ, ಅನ್ನದ, ದುಡಿಮೆಯ, ಅಸ್ತಿತ್ವದ ಅನಿವಾರ್ಯ ಅಂಶವಾಗಿದೆ. ದಲಿತರ ಶಿಕ್ಷಣಕ್ಕೂ ಉದ್ಯೋಗಕ್ಕೂ ಸಂಬಂಧವಿರುವಂತೆ. ಶಿಕ್ಷಣಕ್ಕೂ, ಭಾಷೆಗೂ ಇರುವ ಅಂದರೆ ದಲಿತರ ಭಾಷೆಗೂ ಶಿಕ್ಷಣಕ್ಕೂ ಆ ಮೂಲಕ ಔದ್ಯೋಗಿಕ ಕ್ಷೇತ್ರಕ್ಕೂ ಇರುವ ಸಂಬಂಧಗಳನ್ನು ಸಮಸ್ಯೆಗಳನ್ನು ಅರಿಯುವ ಅಗತ್ಯವಿದೆ. ಶೈಕ್ಷಣಿಕ ಕ್ಷೇತ್ರದ ಸಾಧನೆ ಶಿಕ್ಷಣೋತ್ತರ ಔದ್ಯೋಗಿಕ ಕ್ಷೇತ್ರದಲ್ಲಿ ಮೌಲೀಕರಣ ಗೊಳ್ಳುತ್ತದೆ. ದಲಿತರು ಔದ್ಯೋಗಿಕ ಕ್ಷೇತ್ರವನ್ನು ಪ್ರವೇಶಿಸಬೇಕಾದರೆ ಕೆಲವು ನಿರ್ದಿಷ್ಟ ಶೈಕ್ಷಣಿಕ ಅರ್ಹತೆ, ಪ್ರತಿಭೆ ಇವುಗಳನ್ನು ಹೊಂದಿರುವುದನ್ನು ಔದ್ಯೋಗಿಕ ಕ್ಷೇತ್ರ ಅಪೇಕ್ಷಿಸುತ್ತದೆ. ಮತ್ತು ಸಹಜವಾಗಿಯೇ ದಲಿತರು ಈ ಔದ್ಯೋಗಿಕ ಕ್ಷೇತ್ರಗಳು ಬಯಸುವ ಅಂಕಪಟ್ಟಿ ಆಧಾರಿತ ಅಳತೆಗೋಲುಗಳ ವ್ಯಾಪ್ತಿಯಲ್ಲಿ ಹಿಂದುಳಿದಿರುತ್ತಾರೆ. ಹೀಗೆ ನಿರ್ದಿಷ್ಟಗೊಳಿಸಿದ ಅರ್ಹತೆ, ತಜ್ಞತೆಗಳಲ್ಲಿ ಹಿಂದುಳಿದಿರುವಂತೆ ಕಾಣುವುದು ನಿಜವಾದರೂ ಹೀಗೆ ಹಿಂದುಳಿದಿರುವಿಕೆಗೆ ಇರುವ ಕಾರಣಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಶಿಕ್ಷಣ ವಲಯದಲ್ಲಿನ ದಲಿತರ ಸಮಸ್ಯೆಗಳಿಗೆ ನೀಡುತ್ತಿರುವ ಕಾರಣ ಮತ್ತು ಪರಿಹಾರೋಪಾಯಗಳನ್ನು ಈಗಾಗಲೇ ಹೇಳಿರುವಂತೆ ಶಿಕ್ಷಣ ಕ್ಷೇತ್ರದ ಹೊರಗಿನ ಕಾರಣಗಳಿಂದ ಅಂದರೆ ಕೌಟುಂಬಿಕ, ಆರ್ಥಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಹುಡುಕುತ್ತಿದ್ದೇವೆ. ಈ ಅಂಶಗಳು ಹಿಂದುಳಿದಿರುವಿಕೆಯ ಸಮಸ್ಯೆಗೆ ಬಾಹ್ಯವಾದ ಪೂರಕ ಅಂಶಗಳಾಗಬಹುದೇ ಹೊರತು ಪ್ರಧಾನ ಕಾರಣಗಳೆಂದು ಭಾವಿಸಬೇಕಿಲ್ಲ. ಹಾಗಿದ್ದರೇ, ಶಿಕ್ಷಣ ಕ್ಷೇತ್ರದಲ್ಲಿನ ದಲಿತರ ಸಮಸ್ಯೆಗಳಿಗೇ ಪ್ರಧಾನ ಕಾರಣಗಳು ಶಿಕ್ಷಣ ವ್ಯವಸ್ಥೆಯಲ್ಲಿಯೇ ಇವೆ. ಈ ಪ್ರಧಾನ ಕಾರಣಗಳಲ್ಲಿ ಮುಖ್ಯವಾದುದು ಭಾಷಿಕ ಕಾರಣವೂ ಒಂದು. ಭಾಷಿಕ ಕಾರಣಗಳನ್ನು ಇದುವರೆಗಿನ ಚರ್ಚೆಗಳಲ್ಲಿ ಸಮಸ್ಯೆ ಶಾಸ್ತ್ರಜ್ಞರಾಗಲೀ ಸರಿಯಾಗಿ ಗುರುತಿಸಿಲ್ಲ. ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಯನ್ನು ಸರಿಯಾಗಿ ಅರ್ಥೈಸಲು ಭಾಷಾ ಕೇಂದ್ರಿತವಾದ ಎರಡು ಮುಖ್ಯ ಅಂಶಗಳ ನೆಲೆಯಿಂದ ಗ್ರಹಿಸಲು ಪ್ರಯತ್ನಿಸಬಹುದು. ಸದ್ಯಕ್ಕೆ ಆ ನೆಲೆಗಳನ್ನು ‘ದಲಿತರ ಭಾಷೆ’ ಹಾಗೂ ‘ದಲಿತರು ಮತ್ತು ಭಾಷೆ’ ಎಂದು ಹೆಸರಿಸಬಹುದು

ದಲಿತರ ಭಾಷೆ

ನಮ್ಮ ಶೈಕ್ಷಣಿಕ ಚಟುವಟಿಕೆ ಮೊದಲಾಗುವುದು ‘ಭಾಷಾ ಶಿಕ್ಷಣ’ ದೊಂದಿಗೆ ಇಲ್ಲಿ ಗಮನಿಸಬೇಕಾಗಿರುವುದು ಮೊದಲ ಭಾಷೆ ಅಥವಾ ತಾಯಿ ಭಾಷಾ ಶಿಕ್ಷಣದೊಂದಿದೆ. ಓದು ಬರಹದ ಕೌಶಲದ ಜತೆಗೆ ಶಿಕ್ಷಣ ಆರಂಭವಾಗುವುದೇ ಮಕ್ಕಳಿಗೆ ‘ಸರಿಯಾದ’ ಅಥವಾ ‘ಶುದ್ಧವಾದ’ ಭಾಷೆಯನ್ನು ಕಲಿಸುವುದರೊಂದಿಗೆ, ದಲಿತರ ಶಿಕ್ಷಣದ ಮೊದಲ ಸಮಸ್ಯೆ ಆರಂಭವಾಗುವುದೇ ಇಲ್ಲಿ. ಯಾಕೆಂದರೆ ಒಂದನೇ ತರಗತಿಯ ಪ್ರವೇಶ ಪಡೆಯುವ ಹೊತ್ತಿಗೆ ಮಗು ತನ್ನ ತಾಯ್ನುಡಿಯನ್ನು ಅನೌಪಚಾರಿಕವಾಗಿ ಕಲಿತೇ ಬಂದಿರುತ್ತದೆ. ಔಪಚಾರಿಕ ಶಾಲಾ ವಲಯದಲ್ಲಿ ಆರಂಭವಾಗುವ ಭಾಷಾ ಬೋಧನೆ ಆರಂಭವಾಗುವುದು ಉಚ್ಚಾರಣೆಯನ್ನು ತಿದ್ದುವುದರೊಂದಿಗೆ ಇದರ ಮೌಲ್ಯಮಾಪನ ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರದ ಪ್ರವೇಶದವರೆಗೂ ನಿರಂತರವಾಗಿರುತ್ತದೆ. ಅಂದರೆ ಇಲ್ಲಿ ಭಾಷಾ ಶಿಕ್ಷಣದಲ್ಲಿ ಒತ್ತು ನೀಡುವುದು ಮಗು ಕಲಿತಿರುವ ಭಾಷೆಯನ್ನು ವಿಸ್ತರಿಸುವುದಕ್ಕಿಂತ ತನ್ನ ಭಾಷಿಕ ಚಹರೆಳನ್ನು ನಿರಾಕರಿಸುವ ಮತ್ತು ಕಳೆದುಕೊಳ್ಳುವುದಕ್ಕೆ ಪ್ರೇರಕವಾಗಿರುತ್ತವೆ.

ಉದಾಹರಣೆಗೆ ತನ್ನ ಕೌಟುಂಬಿಕ ಪರಿಸರದಲ್ಲಿ ದಲಿತ ಸಮುದಾಯದ ಮಗು ಅವ್ವ ಮತ್ತು ಅಮ್ಮ ಎಂಬ ಎರಡು ಸಂಬಂಧವಾಚಕ ಪದಗಳನ್ನು ಕಲಿತಿರುತ್ತದೆ. ತನ್ನ ಭಾಷಿಕ ವಲಯದಲ್ಲಿ ತಾಯಿಯನ್ನು ಅವ್ವ, ಅಜ್ಜಿಯನ್ನು ಅಮ್ಮ ಎಂದು ಗ್ರಹಿಸಿರುತ್ತದೆ. ಶಾಲಾ ಶೈಕ್ಷಣಿಕ ಆವರಣದಲ್ಲಿ ತನ್ನ ಅನೇಕ ಸಹಪಾಠಿಗಳು ಮನೆಯಲ್ಲಿ ಬಳಸುತ್ತಿರುವ ಅಮ್ಮ ಅಂದರೆ ತಾಯಿ ಅಜ್ಜಿ ಎಂದರೆ ತಾಯಿಯ ತಾಯಿ ಎನ್ನುವ ರೂಪಗಳನ್ನು ಕಲಿಸಲಾಗುತ್ತದೆ. ಇಲ್ಲಿ ತಾನು ಈಗಾಗಲೇ ಕಲಿತಿರುವ ಸಂಬಂಧವಾಚಕ ಪದಗಳನ್ನು ಏನು ಮಾಡಬೇಕು? ಅದನ್ನೇ ಪರೀಕ್ಷೆ ಮಾಡುವಾಗ ಮೌಲ್ಯಮಾಪನ ಮಾಡುವಾಗ ನಿಮ್ಮ ತಾಯಿಯ ತಾಯಿಯನ್ನು ಏನೆಂದು ಸಂಬೋಧಿಸುವಿರಿ ಎಂದು ಒಂದು ಪ್ರಶ್ನೆ ಹಾಕಿದರೆ ದಲಿತ ಮಗು ಅಮ್ಮ ಎಂದು ಬರೆದು ಇನ್ನೊಂದು ಮಗು ಅಜ್ಜಿ ಎಂದು ಬರೆದರೆ ಫಲಿತಾಂಶದ ಪರಿಣಾಮ ಏನಾಗಿರುತ್ತದೆ? ಈ ಉದಾಹರಣೆಯ ಮುಖಾಂತರ ನಾನು ವಿವರಿಸಲು ಅಥವಾ ಗಮನ ಸೆಳೆಯಲು ಪ್ರಯತ್ನಿಸುತಿರುವುದು ಏನೆಂದರೆ ಭಾಷಾ ಶಿಕ್ಷಣದಲ್ಲಿ ಪ್ರಮಾಣಿತ ಅಥವಾ ಶಿಷ್ಟ ಭಾಷೆಯನ್ನು ಆಧರಿಸಿ ಅದಕ್ಕೆ ಪೂರಕವಾಗಿ ಪಠ್ಯ, ಬೋಧನೆ, ಕಲಿಕೆ ಮೌಲ್ಯ ಮಾಪನಗಳು ರೂಪುಗೊಂಡಿವೆ. ಶಿಷ್ಟಭಾಷೆ ಎನ್ನುವುದೇ ಒಂದು ಅಪಕಲ್ಪನೆ ಅಥವಾ ತಪ್ಪಾದ ಪರಿಕಲ್ಪನೆ. ಶಿಷ್ಟ ಭಾಷೆ ಎನ್ನುವುದಕ್ಕೆ ಭಾಷಿಕವಾದ ಯಾವುದೇ ಸಮರ್ಥನೆಯಿಲ್ಲ. ಇದಕ್ಕಿರುವುದು ಸಾಮಾಜಿಕವಾದ ಮೌಲ್ಯ ಮಾತ್ರ ಅಂದರೆ ಭಾಷೆಯಲ್ಲಿ ಶಿಷ್ಟ, ಶುದ್ಧ ಸರಿಯಾದದ್ದು, ತಪ್ಪಾದದ್ದು ಎನ್ನುವ ಕಲ್ಪನೆಗಳಿಗೆ ಸಮರ್ಥನೀಯ ಆಧಾರಗಳಿಲ್ಲ. ಪ್ರಮಾಣಿತ ಅಥವಾ ಶಿಷ್ಟ ಭಾಷೆಗೆ ಈಗಿರುವ ವ್ಯಾಖ್ಯಾನ ಸಮಾಜದಲ್ಲಿ ಗಣ್ಯರು, ಶಿಷ್ಟರು, ಅಕ್ಷರಸ್ಥರು, ವಿದ್ಯಾವಂತರು ಬಳಸುವ ಭಾಷೆ ಎಂಬುದಷ್ಟೇ ಆಗಿದೆ. ಅಲ್ಲಿಗೆ ಶಿಷ್ಟ ಸಮಾಜದ ಮಗು ಬಳಸುವ ತಾಯಿ ಪದಕ್ಕೆ ಸಮನಾದ ‘ಅಮ್ಮ’ ಮತ್ತು ದಲಿತ ಸಮುದಾಯದ ಮಗು ಬಳಸುವ ‘ಅವ್ವ’ ಪದಗಳು ಭಾಷಿಕವಾಗಿ ಸಮಾನ ಅರ್ಥ ಮೌಲ್ಯವುಳ್ಳವಾದರೂ ಸಾಮಾಜಿಕವಾಗಿ ಅಥವಾ ಶೈಕ್ಷಣಿಕ ವಲಯದಲ್ಲಿ ‘ಅವ್ವ’ ಪದಕ್ಕೆ ಅಪಮೌಲ್ಯವೂ ಅಮ್ಮ ಪದಕ್ಕೆ ಗುಣಾತ್ಮಕ ಮೌಲ್ಯವೂ ಇದೆ. ಈ ಸಂದರ್ಭದಲ್ಲಿ ಉಚ್ಚಾರಣೆಗೆ ಸಂಬಂಧಿಸಿದ ಪ್ರಶ್ನೆಗಳೂ ಅಷ್ಟೇ. ಮಕ್ಕಳ ಅದರಲ್ಲೂ ದಲಿತ ಮಕ್ಕಳ ಭಾಷಾಕಲಿಕೆ ಬಳಕೆಗೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣೋತ್ತರ ಔದ್ಯೋಗಿಕ ಸಾಮಾಜಿಕ ಕ್ಷೇತ್ರಗಳವರೆಗೂ ಒಂದು ತಪ್ಪು ಆರೋಪವನ್ನು ಹೋರಿಸಲಾಗುತ್ತಿದೆ. ಅದರಲ್ಲೂ ಆ ಉಚ್ಛಾರಣಾ ದೋಷಗಳನ್ನು ಬೆರಳಿನಲ್ಲಿ ಎಣಿಸಿ ಪಟ್ಟಿ ಮಾಡಿ ಬಿಡಬಹುದಾದಷ್ಟು ಕಡಿಮೆ ಇದೆ. ಉದಾ. ಅಲ್ಪಪ್ರಾಣ, ಮಹಾಪ್ರಾಣ ಮತ್ತು ಊಷ್ಮ ಧ್ವನಿಗಳಾದ ಶ, ಷ, ಸ, ನಡುವಿನ ವ್ಯತ್ಯಾಸವನ್ನು ಸರಿಯಾಗಿ ಬಳಸುವುದಿಲ್ಲ ಮತ್ತು ಗ್ರಹಿಸುವುದಿಲ್ಲ ಎನ್ನುವ ಆಪಾದನೆ ಮತ್ತು ಆರೋಪಗಳಿವೆ. ವಾಕ್ ದೃಶ್ಯ ಮಾಧ್ಯಮಗಳಲ್ಲಿ ಇಂತಹ ಉಚ್ಚರಣಾ ವಿಷಯಗಳಿಗೆ ಮಹತ್ವ ಕೊಡಲಾಗುತ್ತಿದೆ. ಉಚ್ಚಾರಣಾ ವಿಷಯಕ್ಕೆ ಇಷ್ಟೊಂದು ಮಹತ್ವ ಮತ್ತು ಇದೊಂದು ಬೌದ್ಧಿಕ ಸಾಮರ್ಥ್ಯದ ಮಾನದಂಡವಾಗಿ ಪರಿಗಣಿಸಬೇಕೆ? ಯಾಕೆಂದರೆ ಗಾಯಕ ಎಸ್ಪಿ ಬಾಲಸುಬ್ರಮಣ್ಯದಿಂದ ಹಿಡಿದು ಹಿರಿ-ಕಿರಿಯ ಸಾಹಿತಿ, ಸಂಸ್ಕೃತಿ ಲೋಕದ ವಕ್ತಾರರೆಲ್ಲರೂ ಕನ್ನಡ ಬಳಸುವವರ ಇಂತಹ ಉಚ್ಛಾರಣಾ ದೋಷಗಳ ಕಡೆಗೆ ಬೆರಳು ಮಾಡುತ್ತಾರೆ.

ಭಾಷೆಯಲ್ಲಿ ದೋಷ ಅಥವಾ ತಪ್ಪು ಆಗುವುದು. ಧ್ವನ್ವಂಗಗಳ ವಿಕಲತೆಯಿರುವರಿಂದಲೇ ಅಥವಾ ಮನೋವೈಕಲ್ಯವಿರುವವರಿಂದ ಮಾತ್ರ ಸಾಧ್ಯ. ಉದಾ. ಅಪ್ಪ ಅನ್ನುವುದನ್ನು ಅನ್ನ ಎಂದರೆ ಕತ್ತೆ ಎನ್ನುವುದವನ್ನು ಅತ್ತೆ ಅಂದರೆ ಅದನ್ನು ದೋಷವೆನ್ನ ಬಹುದೇನೋ, ಆದರೆ ವಿಷವನ್ನು ಇಸ ಎನ್ನುವುದು ತಪ್ಪು ಅಥವಾ ದೋಷ ಎಂದು ಹೇಳಲಾಗುತ್ತದೆ. ಇಂತಹ ಉದಾಹರಣೆಗಳನ್ನು ಸಾಕಷ್ಟು ವಿಸ್ತರಿಸಬಹುದಾದರೂ ಇಲ್ಲಿ ನಾನು ಹೇಳಬೇಕೆಂದಿರುವುದು ಕನ್ನಡದಲ್ಲಿ ಬಳಕೆಯಾಗುವ ಇಂತಹ ಭಿನ್ನರೂಪಗಳನ್ನು ದೋಷಗಳೆಂದು ಭಾವಿಸದೆ ವೈವಿಧ್ಯಗಳು ಎಂದೇ ಮಾನ್ಯ ಮಾಡಿದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಹಾಗೆಯೇ ನಮ್ಮ ಶಿಕ್ಷಣ ಕ್ಷೇತ್ರ ಸಾಮಾಜಿಕ ಕ್ಷೇತ್ರಗಳು ಹೊಂದಿರುವ ಭಾಷಿಕರೆಡೆಗಿನ ದೃಷ್ಟಿಕೋನವನ್ನು ಬಿಂಬಿಸುವ ಒಂದು ಉದಾಹರಣೆಯನ್ನು ಪಠ್ಯಗಳಿಂದ ಆಯ್ದು ಕೊಡಬಯುಸತ್ತೇನೆ. ನಾಲ್ಕನೇ ತರಗತಿಯ ಕನ್ನಡ ಪುಸ್ತಕ ‘ಒಡನಾಟ’ ಎಂಬ ೧೦ನೇ ಪಾಟವನ್ನು ಕುತೂಹಲಕ್ಕೆ ಗಮನಿಸಬಹುದು. ಪಠ್ಯದ ವಿಷಯ ಹೀಗಿದೆ. ಎರಡು ಗಿಳಿಗಳು ಬೇರೆ ಬೇರೆಯಾಗಿ ಒಂದು ಕಳ್ಳರ ಜತೆಯಲ್ಲೂ ಒಂದು ಋಷಿಯ ಆಶ್ರಮದಲ್ಲಿಯೂ ಬೆಳೆಯುತ್ತವೆ. ನಂತರ ಇವುಗಳ ಭಾಷಿಕ ಚಹರೆಗಳನ್ನು ಆಧರಿಸಿ ಯಾವುದು ಸಜ್ಜನರ ಭಾಷೆ ಯಾವುದು ದುರ್ಜನರ ಭಾಷೆ ಎಂಬುದನ್ನು ಬಿಂಬಿಸುವ ಪ್ರಯತ್ನವಿದೆ.

ಕಳ್ಳರ ಹತ್ತಿರ ಬೆಳೆದ ಗಿಳಿಯ ಮಾತಿನ ಮಾದರಿ

ಏನ್ ನೋಡ್ತಿರ್ರೋ‍? ಒಳ್ಳೆ ಇಸಮು ಸಿಕ್ಕೈತೆ ಅವನನ್ನು ಕೊಲ್ರಿ ಮುತ್ತು ರತ್ನ ಕಿತ್ಕೊಳ್ರೀ……
ಏ ಸುಮ್ಮನೆ ಇರು ಅವ ನಿದ್ದೆ ಮಾಡ್ತಿಲ್ಲ ಅವನ
ಸವಾಸ ಬೆಂಕಿ ಜತೆ ಆಟ ಅಡ್ಡಂಗ
ಬ್ಯಾಡ ಸುಮ್ಮನೆ ಇರು
ಅರೆ ತಪ್ಪಿಸಿಕೊಂಡು ಹೊಂಟಾನ ಬುಡ ಬ್ಯಾಡ್ರಿ
ಒಳ್ಳೆ ಬ್ಯಾಟಿ ಸಿಕ್ಕೈತೆ

ಆಶ್ರಮದಲ್ಲಿ ಬೆಳೆದ ಗಿಳಿಯ ಮಾತಿನ ಮಾದರಿ

ಮಾನ್ಯರೇ ತಮಗೆ ಆದರದ ಸ್ವಾಗತ, ಬನ್ನಿರಿ ತಮ್ಮ ಆಗಮನದಿಂದ
ಸಂತೋಷವಾಯಿತು,…..ಹಣ್ಣುಗಳನ್ನು ತರಲು ವನಕ್ಕೆ ಹೋಗಿದ್ದಾರೆ,
ಹಣ್ಣುಗಳನ್ನು ಸ್ವೀಕರಿಸಿ ವಿಶ್ರಾಂತಿ ಪಡೆಯಿರಿ…..

ಈ ಎರಡೂ ಮಾದರಿಗಳಲ್ಲಿ ಉಚ್ಚಾರಣೆ ಮತ್ತು ಪದರೂಪಗಳ ಬಳಕೆಯ ಮುಖಾಂತರವೇ ಸಜ್ಜನ, ದುರ್ಜನರ ನಡುವಿನ ವ್ಯತ್ಯಾಸಗಳ್ನು ಬಿಂಬಿಸಲು ಯತ್ನಿಸಿರುವುದು ಆತಂಕಕಾರಿ ವಿಷಯವಾಗಿದೆ. ಇಲ್ಲಿ ಕತೆಯ ನೀತಿ ಏನೇ ಇದ್ದರೂ ಭಾಷಾ ರೂಪಗಳು ಮತ್ತು ಅವುಗಳ ಬಳಕೆಯ ಬಗೆಗೆ ಮಕ್ಕಳಲ್ಲಿ ಅಂದರೆ ಮೊದಲ ಗಿಳಿಯ ರೂಪದ ಮಾತುಗಳ್ನನು ಬಳಸುವ ಸಮುದಾಯಗಳಿಂದ ಬಂದ ಮಕ್ಕಳು ಮತ್ತು ಎರಡನೆ ಗಿಳಿಯ ಮಾತುಗಳನ್ನು ಬಳಸುವ ಸಮುದಾಯಗಳಿಂದ ಬಂದ ಮಕ್ಕಳು ಪರಸ್ಪರ ಮನೋಭಾವಗಳನ್ನು ಹೇಗೆ ರೂಪಿಸಿಕೊಳ್ಳುತ್ತಾರೆ?

ಇನ್ನೊಂದು ವಿಷಯವನ್ನು ಇಲ್ಲಿಯೇ ಹೇಳಬೇಕು. ಅದೆಂದರೆ ಉಚ್ಚಾರಣಾ ದೋಷಗಳೆಂದು ಆರೋಪಿಸುತ್ತಿರುವ ಉದಾಹರಣೆಗಳು ಎಷ್ಟೋ ಸಾರಿ ಕಲ್ಪಿತ ಉದಾಹರಣೆಗಳಾಗಿವೆ ಎನಿಸುತ್ತವೆ. ಹಾಲು-ಆಲು, ಅಕ್ಕಿ-ಹಕ್ಕಿ = ಅಂತಹ ಕಡೆ Aspiralion ಇದ್ದರೂ ನಿರೀಕ್ಷಿತ ಮಹಾಪ್ರಾಣ ಇಲ್ಲದಿದ್ದರೂ ಅದೊಂದು ಬೇರೆ ಬಗೆಯ ಧ್ವನಿಯಾಗಿರುತ್ತದೆ. ಆದರೆ ಅಲ್ಪ ಪ್ರಾಣ ಮಹಾಪ್ರಾಣದ ಬಗೆಗಿನ ಪೂರ್ವಕಲ್ಪಿತ ತೀರ್ಮಾನಗಳಿಂದ ಇಲ್ಲಿ ಇವುಗಳನ್ನು ದೋಷಗಳೆಂದು ಪರಿಗಣಿಸಲಾಗುತ್ತಿದೆ.

ಇದು ದಲಿತರ ಭಾಷೆ ಮತ್ತು ಭಾಷಾ ಶಿ‌ಕ್ಷಣಕ್ಕೆ ಸಂಬಂಧಿಸಿದ ವಿಷಯವಾದರೆ ದಲಿತರು ಮತ್ತು ಭಾಷೆ ಹಾಗೂ ಶಿಕ್ಷಣದ ಭಾಷೆ ಎಂಬ ವಿಷಯಕ್ಕೆ ಸಂಬಂಧಿಸಿದ ಮಾತು.

ದಲಿತರು ತಮ್ಮ ಸಾಮಾಜಿಕ ಸಾಂಸ್ಕೃತಿಕ ಅಸ್ತಿತ್ವಕ್ಕಾಗಿ ತಮ್ಮ ಭಾಷಿಕ ಚಹರೆಗಳನ್ನು ಕಳೆದುಕೊಳ್ಳುವ ಅನಿವಾರ್ಯ ಸಂದರ್ಭ ಈಗ ಸೃಷ್ಟಿಯಾಗಿರುವುದು ಈ ಹಿಂದಿನ ವಿಚಾರಗಳಲ್ಲಿ ಗಮನಿಸಿದ್ದೇವೆ. ಈ ಹೊತ್ತಿನ ಆರ್ಥಿಕ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ತಮ್ಮ ಪಾಲಿನ ಅವಕಾಶಗಳನ್ನು ಪಡೆಯಲು ಅಥವಾ ಸೃಷ್ಟಿಸಿಕೊಳ್ಳಲು “ಶಿಕ್ಷಣ” ಇಂದು ಅನಿವಾರ್ಯ ಅಸ್ತ್ರವಾಗಿದೆ. ದಲಿತರ ಈ ಸಂದರ್ಭದ ಯಾವುದೇ ಅಭಿವೃದ್ಧಿ ಚಟುವಟಿಕೆಗಳೂ ಔಪಚಾರಿಕ ಶಿಕ್ಷಣದ ಮೂಲಕ ಮಾತ್ರವೇ ಸ್ಥಾಪಿತವಾಗಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಈ ಸಂಕಿರ್ಣ ಹೊತ್ತಿನಲ್ಲಿ ದಲಿತರು ಶಿಕ್ಷಣವನ್ನು ಬಿಕರಿ ಮಾಡುವ ಖಾಸಗಿ ಸಂಸ್ಥೆಗಳಿಂದ ಕೊಂಡುಕೊಳ್ಳುವ ಆರ್ಥಿಕ ಬಲವುಳ್ಳವರಾಗಲೀ ‘ಭಾಷಿಕ ಸಾಂಸ್ಕೃತಿಕ ಸಂಪನ್ನ’ ಸಾಮಾಜಿಕರು ಹುಟ್ಟಿನಿಂದ ಹೊಂದಿರುವ ಭಾಷಿಕ ಬೌದ್ಧಿಕ ಸಾಮರ್ಥ್ಯಗಳನ್ನಾಗಲೀ ಹೊಂದಿರದೇ, ಸರ್ಕಾರಿ ಪೋಷಿತ ಸಂಸ್ಥೆಗಳ ಮೂಲಕ ನೀಡುವ ಶಿಕ್ಷನ ಪಡೆದು ಅನಂತರ ಅವುಗಳ ಫಲಿತಾಂಶದ ಆಧಾರದಿಂದ ಸಾಮಾಜಿಕ ಕ್ಷೇತ್ರದ ಇತರ ವಲಯಗಳಲ್ಲಿ ತಮ್ಮ ಸ್ಥಾನಮಾನ ಕಂಡುಕೊಳ್ಳಬೇಕಾಗಿದೆ. ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಇಂದು ಇಂಗ್ಲಿಶ್, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಭಾವಶಾಲೀ ಭಾಷೆಯಾಗಿದ್ದು (ಭಾಷಿಕ ಸಾಮರ್ಥ್ಯದ ದೃಷ್ಟಿಯಿಂದ ಎಲ್ಲ ಭಾಷೆಗಳೂ ಸಮಾನವೇ. ಆದರೆ ರಾಜಕೀಯ ಮತ್ತು ಸಾಮಾಜಿಕ ಸಾಮರ್ಥ್ಯವನ್ನಾಧರಿಸಿ ಕೆಲವು ಭಾಷೆಗಳಿಗೆ ಶೈಕ್ಷಣಿಕ ಔದ್ಯೋಗಿಕ ಕ್ಷೇತ್ರಗಳಲ್ಲಿ ಪ್ರಾಬಲ್ಯ ಒತ್ತಾಸೆ ಬೇಡಿಕೆಗಳು ಹೆಚ್ಚಾಗಿರುತ್ತವೆ). ಉಳ್ಳವರಿಗೆ ಸಾಮಾಜಿಕ, ಆರ್ಥಿಕವಾಗಿ ಪ್ರಬಲರಾದವರಿಗೇ ಮಾತ್ರ ದಕ್ಕುವ ಐಷಾರಾಮೀ ವಸ್ತುಗಳಂತೆ ಇಂಗ್ಲಿಶ್ ಭಾಷೆಯಾಗಿದೆ.

ಕನ್ನಡದಂತಹ ಭಾಷೆಗಳೂ ಸಾಮಾಜಿಕ, ಔದ್ಯೋಗಿಕ ನೆಲೆಯ ಜಾಗತಿಕ ಸಾಮರ್ಥ್ಯವನ್ನು ಪಡೆಯದೇ ಕನ್ನಡದಂತಹ ಭಾಷೆಯಲ್ಲಿ ಶಿಕ್ಷಣ ಪಡೆದವರು ಇಂಗ್ಲಿಶ್‌ನಲ್ಲಿ ಶಿಕ್ಷಣ ಪಡೆದವರೊಡನೆ ಇಂಗ್ಲಿಶ್‌ಮಯ ವಾತಾವರಣದಲ್ಲಿ ಔದ್ಯೋಗಿಕ ಸಾಮಾಜಿಕ ಸ್ಪರ್ಧೆಗಳಲ್ಲಿ ಏಗುವುದು ಅಸಾಧ್ಯವಾದುದು. ಆದ್ದರಿಂದ ಈ ಹೊತ್ತಿನಲ್ಲಿ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿಯಬೇಕೆನ್ನುವ ಆಶ ಕನ್ನಡದೆಡೆಗಿನ ಅಸಡ್ಡೆಯಿಂದಾಗಲೀ ಆಧುನಿಕತೆಯೆಡೆಗಿನ ತುಡಿತದಿಂದಾಗಲೀ ಹುಟ್ಟಿದ್ದಲ್ಲ. ದಲಿತರಿಗೆ ಇಂದು ಶಿಕ್ಷಣೇತರ ಔದ್ಯೋಗಿಕ ಕ್ಷೇತ್ರಗಳಲ್ಲಿ ಭಾಷೆಯೂ ಅವರ ಕಾರ್ಯನಿರ್ವಹಣಾ ಸಾಮರ್ಥ್ಯದ ಭಾಗವಾಗಿ ಪರಿಗಣಿಸಲ್ಪಡುವುದರಿಂದ ಶಿಕ್ಷಣದ ಮೂಲಕ ಇಂಗ್ಲಿಶ್ ಪಡೆಯುವ ಅನಿವಾರ್ಯತೆ ಹುಟ್ಟಿದೆ. ದಲಿತರು, ಭಾಷೆ ಮತ್ತು ಶಿಕ್ಷಣ ಒಂದಕ್ಕೊಂದು ಬೆಸೆದುಕೊಂಡಿರುವ ಪೂರಕ ವಿಷಯಗಳಾದ್ದರಿಂದ ದಲಿತರ ಇಂಗ್ಲಿಶ್ ಬೇಡಿಕೆಯನ್ನು ಕನ್ನಡದ ಭಾವುಕ ಕಣ್ಣುಗಳಿಂದ ನೋಡದೇ ದಲಿತರ ಅನ್ನ, ಅವಕಾಶಗಳ ನೆಲೆಯಿಂದ ನೋಡುವ ಅಗತ್ಯವಿದೆ.

ಈ ಟಿಪ್ಪಣಿಯಲ್ಲಿ ನಾನು ಗಮನಸೆಳೆಯಲು ಪ್ರಯತ್ನಿಸುತ್ತಿರುವ ಅಂಶವೆಂದರೆ ಭಾಷಾ ಶಿಕ್ಷಣದಲ್ಲಿ ದಲಿತರ ಭಾಷೆಯನ್ನು ಪರೋಕ್ಷವಾಗಿ ನಿರಾಕರಿಸಲಾಗುತ್ತಿದೆ. ತಮ್ಮ ಭಾಷಿಕ ಚಹರೆಗಳನ್ನು ಅನನ್ಯತೆಗಳನ್ನು ಕಳೆದುಕೊಂಡರೆ ಮಾತ್ರ ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಮಾನ್ಯತೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದು ಉದಾಹರಣೆ ಎಂದರೆ ನೀವು ಸಂಸ್ಕೃತ ಮಂತ್ರ, ಪೂಜಾ ವಿಧಾನಗಳಲ್ಲಿ ಪರಿಣಿತರಾದರೆ ನಿಮ್ಮನ್ನು ಪೂಜಾರಿಗಳನ್ನಾಗಿ ಒಪ್ಪಿಕೊಳ್ಳುತ್ತೇವೆ ಎಂಬಂತಾಯಿತು. ಭಾಷೆಯ ಕಲಿಕೆಯಲ್ಲಿ ತಪ್ಪು, ದೋಷಗಳೆಂದು ಗುರುತಿಸುತ್ತಿರುವುದೆಲ್ಲವೂ ನಿಜವಾದ ದೋಷಗಳಲ್ಲ ಸರಿಯಾದ ಕನ್ನಡ ಕಲಿಯ ಬೇಕಾಗಿರುವುದು ಮತ್ತು ಕನ್ನಡದ ಎಲ್ಲಾ ವೈವಿಧ್ಯಗಳ ಅರಿವು ಇರಬೇಕಾಗಿರುವುದು ಬೋಧಕರಿಗೆ ಮತ್ತು ಶಿಕ್ಷಣ ನೀತಿ, ಭಾಷಾ ನೀತಿಗಳನ್ನು ರೂಪಿಸುವವರಿಗೆ ದಲಿತರ ಕನ್ನಡವನ್ನು ಇತರರು ಅರಿಯಬೇಕು. ಅದನ್ನು ವೈಶಿಷ್ಟ್ಯ ವೈವಿಧ್ಯವೆಂದು ಪರಿಗಣಿಸಬೇಕು. ಆಗ ಮಾತ್ರ ಇಂತಹ ಭಾಷೆಯ, ಭಾಷಾ ಕಲಿಕೆಯ ಬಗೆಗಿನ ತಪ್ಪು ಕಲ್ಪನೆಗಳನ್ನು ನಿವಾರಿಸಲು ಸಾಧ್ಯ. ಈ ಹೊತ್ತಿನ ಅಗತ್ಯವೇನೆಂದರೆ ಸಾಮಾಜಿಕ ನ್ಯಾಯದ ಮಾದರಿಯಲ್ಲಿ ಭಾಷಿಕ ನ್ಯಾಯ, ಭಾಷಿಕ ಸಮಾನತೆ ಎಂಬ ಹೊಸ ಪರಿಭಾಷೆಗಳನ್ನು ರೂಪಿಸಿಕೊಳ್ಳುವ ಅಗತ್ಯವಿದೆ. ದಲಿತ ಪದಕ್ಕೆ ಸಾಮಾಜಿಕ, ರಾಜಕೀಯ ವ್ಯಾಖ್ಯಾನಕ್ಕಿಂತ ಭಿನ್ನವಾಗಿ ‘ಭಾಷಿಕ ದಲಿತರು’ ಎಂಬ ಹೊಸ ಪರಿಭಾಷೆಯನ್ನೂ ರೂಪಿಸಿಕೊಳ್ಳುವ ಅಗತ್ಯವಿದೆ. ಯಾಕೆಂದರೆ ಸಾಮಾಜಿಕವಾಗಿ ವ್ಯತ್ಯಾಸ ಏರುಪೇರುಗಳಿದ್ದರೂ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶದ ಎಲ್ಲಾ ಮಕ್ಕಳೂ ಭಾಷಿಕ ದಲಿತರ ವ್ಯಾಪ್ತಿಯಲ್ಲೇ ಬರುತ್ತಾರೆ.