ಇವತ್ತಿನ ಈ ವಿಚಾರಸಂಕಿರಣ ಅತ್ಯಂತ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳುತ್ತದೆ. ಅಂತ ನಾನು ಭಾವಿಸಿದ್ದೇನೆ. ದಲಿತರು ಯಾವುದನ್ನು ಪಡೆದುಕೊ‌ಳ್ಳ ಹೊರಟರೂ ಕೂಡ ಅದು ಸುಲಭವಾಗಿ ಅವರಿಗೆ ದಕ್ಕುವುದಿಲ್ಲ. ಒತ್ತಾಯ ಮತ್ತು ಒತ್ತಡಗಳ ಮೂಲಕ ಸಮಾನ ಅವಕಾಶ ಮತ್ತು ಸಮಾನ ಹಕ್ಕುಗಳನ್ನ ಅವರು ಪಡ್ಕೊಬೇಕಾಗುತ್ತದೆ. ಅದಕ್ಕೆ ಅನೇಕ ಉದಾಹರಣೆಗಳನ್ನ ನಾವು ಕೊಡ್ಬಹುದು. ಈ ಹಿಂದೆ ಕನ್ನಡ ಸಾಹಿತ್ಯ ಸಮ್ಮೇಳನ ಧರ್ಮಸ್ಥಳದಲ್ಲಿ ನಡೆದ ಸಂದರ್ಭದಲ್ಲಿ ಸಾಹಿತ್ಯ ಗೋಷ್ಠಿಗಳಲ್ಲಿ ದಲಿತ ಸಾಹಿತ್ಯ ಗೋಷ್ಠಿಯೂ ನಡೀಬೇಕು ಅಂತ ಹೇಳ್ದಾಗ ಆವತ್ತಿನ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹಂ.ಪ.ನಾಗರಾಜಯ್ಯನವರು ‘ಕನ್ನಡ ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಅಂತ ಏನೂ ಇಲ್ಲ. ಎಲ್ಲವೂ ಕೂಡ ಸಾಹಿತ್ಯ ಸಾಹಿತ್ಯವೇ’ ಅಂತ ಹೇಳಿದ್ರು. ಆದ್ರೆ ಕೊನೆಗೆ ಅದು ತೀವ್ರ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಬಂಡಾಯದ ಹುಟ್ಟಿಗೆ ಕಾರಣವಾಯಿತು. ಹಾಗೇ ಮೀಸಲಾತಿಯ ಪ್ರಶ್ನೆ ಕೂಡಿ. ದಲಿತರು ಎತ್ತಿದ ಮೀಸಲಾತಿಯ ಪ್ರಶ್ನೆ ಹಿಂದುಳಿದ ಜಾತಿಗಳಿಗೆ, ಮಹಿಳೆಯರಿಗೆ ಅಲ್ಪಸಂಖ್ಯಾತರಿಗೆ ಕೂಡ ಮುಟ್ಟುವಂತಹ ಬೆಳವಣಿಗೆ ರಾಜ್ಯದಲ್ಲಿ ನಡೆದಿದೆ, ಈ ದೇಶದಲ್ಲಿ ಆ ಬಳೆವಣಿಗೆ ಆಗಿದೆ. ಹೀಗೆ ಅನೇಕ ಘಟನೆಗಳನ್ನು ನಾವು ನೆನೆಯಬಹುದು.

ಭಾಷೆಯ ಪ್ರಶ್ನೆ ಬಂದಾಗ ಕನ್ನಡದ ಪರಿಸರದ ಮೂಲಕ ಈ ಪ್ರಶ್ನೆಯನ್ನ ನಾವು ನೋಡಬೇಕಾಗುತ್ತದೆ. ಕನ್ನಡದ ಪರಿಸರದಲ್ಲಿ ಬದುಕುವಂತಹ ಅಸ್ಪೃಶ್ಯನ ಬದುಕು ಯಾವ ರೀತಿ ಇದೆ, ಅದನ್ನ ಕಂಡುಕೊಂಡ್ರೆ ಮಾತ್ರ ಈ ಪ್ರಶ್ನೆಯನ್ನು ಚರ್ಚಿಸಬಹುದು. ಅದಕ್ಕೇ ದೇವಯ್ಯ ಹರವೆ ಅಥವಾ ಮಾಲಗತ್ತಿಯವರು ಮುಂತಾಗಿ ಅನೇಕರು ಈ ಪ್ರಶ್ನೆಯನ್ನ ಎತ್ತಿದ್ದಾರೆ. ಅಂಬೇಡ್ಕರ್ ಅವರು ತಮ್ಮ ವಿದ್ವತ್ತು, ಅವರು ಪಡ್ಕೊಂಡಿದ್ದಂತಹ ತಾತ್ವಿಕ ದರ್ಶನ ಇದೆಲ್ಲವನ್ನೂ ಅವರು ಪ್ರಾರಂಭ ಮಾಡಿದ್ದು ಮರಾಠಿಯಲ್ಲಿ. ‘ಮೂಕನಾಯಕ’ ಎನ್ನುವ ಪತ್ರಿಕೆಯನ್ನ ಅವರು ಮರಾಠಿಯಲ್ಲಿ ತರ್ತಾರೆ. ಬಹಿಷ್ಕೃತ ಭಾರತ ಎನ್ನುವ ಒಂದು ಮರಾಠಿ ಪತ್ರಿಕೆಯನ್ನ ತರ್ತಾರೆ. ಅದೇ ರೀತಿ ‘ಜನತಾ’ ಎನ್ನುವ ಮರಾಠಿ ಪತ್ರಿಕೆಯನ್ನು ತರ್ತಾರೆ. ಒಟ್ಟು ಅವರ ಬರವಣಿಗೆಯನ್ನು ಮರಾಠಿಯಲ್ಲಿ ಮಾಡಿದರೂ ಕೂಡ ಕೊನೆಗೆ ಅವರು ನೆರಳಿಗೋಸ್ಕೃ ನಿಂತಿದ್ದು ಒಂದು ಅನ್ಯದೇಶಿಯ ಭಾಷೆಯ ಮರದ ಕೆಳಗೆ. ಮನೆ ಇಲ್ಲದೆ ನಿಂತಿದ್ರು ಅವರು. ಅಂದ್ರೆ ಭಾಷೆ ಅವರಿಗೆ ಯಾವ ಆಶ್ರಯವನ್ನು ಕೊಡ್ತು ಎನ್ನುವ ಪ್ರಶ್ನೆಯನ್ನು ನಾವು ನೋಡಬೇಕಾಗುತ್ತೆ. ಇಂಗ್ಲಿಶಿನ ಮೂಲಕ ಅಂಬೇಡ್ಕರ್ ಅವರು ಜಗತ್ತಿನ ಬೇರೆ ಬೇರೆ ಸಂಗತಿಗಳನ್ನು ಕಂಡುಕೊಂಡಿದ್ರು ಮತ್ತು ಅದರ ಮೇಲೆ ಪ್ರಭುತ್ವವನ್ನು ಪಡ್ಕೊಂಡಿದ್ರು. ಆ ಹಿನ್ನೆಲೆಯಲ್ಲಿ ಅವರು ಇಂಗ್ಲೆಂಡಿನಲ್ಲಿ ಇಂಗ್ಲಿಶ್‌ನಲ್ಲಿ ದಲಿತರ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿದ್ದನ್ನ ನೋಡ್ತೇವೆ.

ಇವತ್ತು ಕರ್ನಾಟಕದಲ್ಲಿ ದಲಿತರು ಇಂಗ್ಲಿಶ್ ಬೇಕು ಎನ್ನುವ ಪ್ರಶ್ನೆ ಎತ್ತಿದಾಗ ಅನೇಕರು ಅದರ ಬಗ್ಗೆ ಸಂಶಯವನ್ನು ವ್ಯಕ್ತಪಡಿಸುತ್ತಾರೆ. ದಲಿತರ ಭಾಷೆ ಅವರ ಮಾತೃಭಾಷೆ ಯಾವುದು ಅಂದ್ರೆ ಕನ್ನಡ ಅಂತನೇ ನಾವು ಹೇಳ್ಕೊಳ್ತೀವಿ. ಆದರೆ ಕನ್ನಡದ ಪರಿಸರ ಇವತ್ತು ಅವರನ್ನು ಯಾವ ನೆಲೆಯಲ್ಲಿ ನಡೆಸಿಕೊಳ್ತಾ ಇದೆ ಈ ಮೂಲಕ ಈ ಪ್ರಶ್ನೆಯನ್ನು ನಾವು ಪರಿಶೀಲಿಸಬೇಕು. ಹಿಂದೆ ಅನಂತಮೂರ್ತಿ ಒಮ್ಮೆ ಮಾತಾಡ್ತಾ, ಸಿದ್ಧಲಿಂಗಯ್ಯನವರು ‘ಹೊಲೆಮಾದಿಗರ ಹಾಡು’ ಬರೆದಾಗ ಅದು ಅನೇಕರಿಗೆ ಕಸಿವಿಸಿಯನ್ನ ಉಂಟುಮಾಡ್ತು, ಆದರೆ ಇವತ್ತು ಅದರ ಪ್ರಖರತೆ ಗೊತ್ತಾಗ್ತಾ ಇದೆ ಅಂತ ಹೇಳಿದ್ರು. ಇವತ್ತು ಇಂಗ್ಲಿಶ್ ಭಾಷೆ ಬೇಕು ಎನ್ನುವ ನಿಲುವು ಕೂಡ ಹಾಗೇನೆ. ಇಂಗ್ಲಿಶ್ ಬೇಕು ಅನ್ನುವ ಪ್ರಶ್ನೆಯನ್ನ ದಲಿತರು ಯಾಕೆ ಎತ್ತುತ್ತಾ ಇದ್ದಾರೆ? ಯಾವುದೇ ಒಂದು ಭಾಷೆಗೆ ಅನ್ನ ಗಳಿಸುವ ಸಾಮರ್ಥ್ಯ ಇದೆ ಅಂದ ಮೇಲೆ ಆ ಭಾಷೆ ಸಾಧ್ಯತೆಯನ್ನ ನಾವು ನೋಡ್ಬೇಕಾಗುತ್ತೆ. ಹಾಗಾಗಿ ಇವತ್ತು ಅನೇಕ ಉದಾಹರಣೆಗಳನ್ನು ನಟರಾಜ್ ಹುಳಿಯಾರ್ ಕೊಟ್ಟಿದ್ದಾರೆ. ಸರಕಾರಿ ಶಾಲೆಗಳಲ್ಲಿ ಓದ್ತಾ ಇರ್ತಕ್ಕಂತಹ ದಲಿತರ ಮಕ್ಕಳ ಸ್ಥಿತಿಗತಿ ಹಾಗೂ ಖಾಸಗಿ ಶಾಲೆಗಳಲ್ಲಿ ಕಲಿತಿರುವಂತಹ ದಲಿತರ ಮಕ್ಕಳ ಸ್ಥಿತಿಗತಿ ಏನಾಗಿದೆ ಅಂತ ನಾವು ನೋಡಿದ್ದೇವೆ. ಇಲ್ಲಿ ಕುಳಿತಿರ್ತಕ್ಕಂತಹ ಯೂನಿವರ್ಸಿಟಿಗಳಲ್ಲಿ, ಕಾಲೇಜುಗಳಲ್ಲಿ ಅಧ್ಯಾಪಕರಲ್ಲಿ ಬಹುತೇಕ ಎಲ್ಲರೂ ತಮ್ಮ ಮಕ್ಕಳನ್ನ ಕಾನ್ವೆಂಟ್ ಶಾಲೆಗೆ ಕಳಿಸ್ತಾರೆ. ಅಷ್ಟೇ ಅಲ್ಲ, ದಿನಗೂಲಿ ಮಾಡುವಂತಹ ಒಬ್ಬಳು ಹೆಣ್ಣುಮಗಳು ಕೂಡ ತನ್ನ ಮಗುವನ್ನು ಕಾನ್ವೆಂಟ್‌ಗೆ ಕಳಿಸ್ತಾಳೆ. ಆಕೆಯ ಬದುಕಿನ ಅನಿವಾರ್ಯತೆಯನ್ನು ಈ ಅಂಶ ತಿಳಿಸ್ತದೆ. ತನ್ನ ಕಷ್ಟ ತನ್ನ ಮಗುವಿಗೆ ಬರಬಾರ್ದು ಎನ್ನುವ ಸಾಮಾನ್ಯ ತಿಳುವಳಿಕೆ ಆಕೆಗೆ ಇದೆಯಲ್ಲ, ಅದು ವಿಶ್ವವಿದ್ಯಾಲಯದ ಪಂಡಿತರಿಗೂ ಅರ್ಥ ಆಗ್ಬೇಕು. ಕಳೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸುಮಾರು ೪ ಲಕ್ಷ ಕನ್ನಡ ಮಾಧ್ಯಮದ ಮಕ್ಕಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಅದರಲ್ಲಿ ಸುಮಾರು ೧ ಲಕ್ಷದ ೯೦ ಸಾವಿರ ಮಕ್ಕಳು ಇಂಗ್ಲಿಶಿನಲ್ಲಿ ಫೇಲಾಗಿದ್ದಾರೆ. ಇದರ ಅರ್ಥ ಏನು? ಇಂಗ್ಲಿಶ್ ಬೇಕು ಅಂತ ಕೇಳುವುದೇ ಅನೇಕರಿಗೆ ಕರ್ಕಶವಾಗಿ ಕೇಳಿಸುತ್ತದೆ. ಕೆಲವರಿಗೆ ನಾನು ದೇವಸ್ಥಾನಕ್ಕೆ ಹೋಗ್ಬೇಕು ಅನ್ನೋದೇ ಅವರ ಕನಸಿನಲ್ಲಿ ಹಾಗೂ ಅವರ ಮನಸ್ಸಿನಲ್ಲಿ ಕೂಡ ಭಯವನ್ನ ಉಂಟು ಮಾಡ್ತದೆ. ನಾವು ನೀರು ಬೇಕು ಅಂತ ಕೇಳುವುದೇ ಕೆಲವರಿಗೆ ಭಯ ಉಂಟಾಗುತ್ತೆ. ಇಂತಹ ಅನೇಕ ಸಮಾನ ಹಕ್ಕುಗಳು ಬೇಕು ಎನ್ನುವ ದಲಿತರ ಪ್ರಶ್ನೆ ಬಂದಾಗ ಇಡೀ ಸಮುದಾಯ ಒಂದು ಕಡೆ ನಿಲ್ಲುತ್ತದೆ.

ಕಾ.ವೆಂ. ಅವರು ಕೆಳವರ್ಗದವರು ಎನ್ತಕ್ಕಂತಹ ಮಾತನ್ನ ಹೇಳಿದ್ರು. ಆದ್ರೆ ಅಂಬೇಡ್ಕರ್ ಅವರು ಅದನ್ನ ವಿಸ್ತರಿಸ್ತ ಹೇಳ್ತಾರೆ ಜಾತಿ ಮತ್ತು ವರ್ಗ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹಾಗಾಗಿ ಭಾರತದ ಸಂದರ್ಭದಲ್ಲಿ ಜಾತಿಯ ಕಸುಬುಗಳನ್ನ ಇಟ್ಟುಕೊಂದಂತಹ ಅಗಸ, ಹಜಾಮ, ಕುರುಬ, ಕುಂಬಾರ, ಬಲಿಜ ಇಂತಹ ಅನೇಕ ಜಾತಿಗಳ ಆ ಕಸುಬುಗಳ ಮೂಲಕ ಜನರು ಅಪಮಾನಕ್ಕೆ ಒಳಗಾಗಿರೋದನ್ನು ನಾವು ನೋಡಿದ್ದೇವೆ. ಇವತ್ತು ಬೇವರ್ಸಿ ಅನ್ನುವಂತಹ ಪದವನ್ನು ನಾವು ಕೇಳ್ತೀವಿ. ಹಲಾಲ್‌ಕೋರ ಎನ್ನುವ ಪದವನ್ನು ಕೇಳ್ತೀವಿ. ಭಾರತ ಸರ್ಕಾರ ಸೂಚಿಸಿರುವಂತಹ ಜಾತಿಗಳ ಪಟ್ಟಿಯಲ್ಲಿ ಬೇವರ್ಸಿ ಅನ್ನುವಂತಹ ಪದ ಒಂದು ಎಸ್.ಸಿ. ಜಾತಿಯನ್ನು ಗುರುತಿಸುವಂತಹ ಪದ. ಹಾಗೆ ಹಲಾಲ್‌ಕೋರ ಎನ್ನುವ ಪದವನ್ನು ಕೂಡ ಬಳಸ್ತ ಇರ್ತೇವೆ. ಅಂದ್ರೆ ಅಪಮಾನಿತ ಜಾತಿಗಳು ತಮ್ಮ ಹೆಸರುಗಳಿಂದಲೇ ಬೈಗುಳಕ್ಕೆ ಒಳಗಾಗಿರೋದನ್ನ ನಾವು ನೋಡ್ತೇವೆ.

ಆ ಹಿನ್ನೆಲೆಯಲ್ಲಿ ಇವತ್ತು ಭಾಷೆಯ ಒಳಗಡೆ, ಅದರ ಬಳಕೆಯಲ್ಲಿ ಜಾತಿಗಳನ್ನ ಯಾವ ರೀತಿ ಬಳಸ್ತೀವಿ ಅನ್ನೋದು ಕೂಡ ಇಲ್ಲಿ ಚರ್ಚೆ ಆಗ್ಬೇಕು ಅಂತ ಹೇಳೋದಕ್ಕೆ ನಾನು ಇಷ್ಟಪಡ್ತೇನೆ. ಸಿಜಿಕೆಯವರು ಬದುಕಿದ್ದಾಗ ೧ನೇ ತರಗತಿಯಿಂದ ಇಂಗ್ಲಿಶ್‌ನ್ನ ಕಲಿಸ್ಬೇಕು ಅಂತ ಒಂದು ದೊಡ್ಡ ಧ್ವನಿಯನ್ನು ಎತ್ತಿದ್ರು. ಅದರ ಅರ್ಥ ಕನ್ನಡವನ್ನು ತಿರಸ್ಕಾರ ಮಾಡಿ ಅಂತ ಅಲ್ಲ. ಇಂಗ್ಲಿಶ್‌ನ್ನ ಮಕ್ಕಳಿಗೆ ಕಲಿಸ್ದೆ ಹೋದ್ರೆ ಇವತ್ತಿನ ಜಾಗತಿಕ ಸಂದರ್ಭದಲ್ಲಿ ನಮ್ಮ ಮಕ್ಕಳು ತಮ್ಮ ನೆಲೆಯನ್ನ ಕಳ್ಳೊಳ್ತಾರೆ ಅನ್ನುವುದು ನಮ್ಮ ಆತಂಕ. ಇವತ್ತು ಆರ್ಥಿಕ ಅಸಮಾನತೆ ದೊಡ್ಡ ರೀತಿಯಲ್ಲಿ ಬೆಳೀತಾ ಇರೋದ್ರಿಂದ ನಾವು ಇವತ್ತು ಇಂಗ್ಲಿಶ್ ಬೇಕು ಅನ್ತಾ ಇದ್ದೇವೆ. ಅನೇಕರು ಹೇಳ್ತಾರೆ, ಮಾತೆತ್ತಿದ್ರೆ ನೀವು ಕಾಲ್‌ಸೆಂಟರ್ ಹೆಸರು ಹೇಳ್ತೀರಲ್ರಿ ಅಂತ. ಹೌದು, ಇವತ್ತು ಎಸ್.ಎಸ್.ಎಲ್.ಸಿ. ಪಿಯುಸಿ ಓದಿದ ಹುಡುಗ ಹುಡುಗಿಯರು ಕಾಲ್‌ಸೆಂಟರ್‌ನಲ್ಲಿ ಹತ್ತು ಹದಿನೈದು ಸಾವಿರ ಸಂಬಳ ಪಡಿತಾರೆ. ಡಿಗ್ರಿ ಇಲ್ಲ, ಪಿಎಚ್.ಡಿ.ಇಲ್ಲ; ಕೇವಲ ಇಂಗ್ಲಿಶಿನ ಬಳಕೆಯಿಂದ ಇವತ್ತು ಆರ್ಥಿಕ ಲಾಭವನ್ನು ಪಡೆಯುವ ಪ್ರಯತ್ನ ನಡೀತಾ ಇದೆ. ಈ ದೃಷ್ಟಿಯಲ್ಲಿ ಇವತ್ತು ಭಾಷೆ, ಪರಿಸರ ಮತ್ತು ಸಮಾಜಗಳ ಸಂಬಂಧವನ್ನು ನೋಡುವ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಬೇಕು. ಈ ಸಂದರ್ಭದಲ್ಲಿ ವಿವೇಕ ರೈಯವರು ಹೇಳಿದ ಮಾತನ್ನ ನೆನೆಸಿಕೊಳ್ಳಲು ಇಷ್ಟಪಡ್ತೇನೆ. ಅವರು ದಲಿತ ಕೇಂದ್ರಿತವಾಗಿ ಎಲ್ಲ ಚಿಂತನೆಗಳು ಬರ್ಬೇಕು ಅಂತ ಹೇಳಿದರು. ತಳದಲ್ಲಿರುವ ಮನುಷ್ಯನ ಒಂದು ಚಿಂತನೆಯನ್ನ ಗಮನದಲ್ಲಿ ಇಟ್ಕೊಂಡು ಚರ್ಚೆಗೆ ತೊಡಗಬೇಕು ಎನ್ನುವ ಅವರ ಮಾತನ್ನ ಅನುಮೋದನೆ ಮಾಡ್ತಾ ಇವತ್ತು ದಲಿತರು ಎತ್ತುವ ಅನೇಕ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿಲ್ಲ ಅನ್ನುವುದನ್ನು ನೆನಪಿಸುತ್ತೇನೆ. ಆ ಉತ್ತರಗಳು ಸಿಕ್ಬೇಕಾದ್ರೆ ಆಯಾ ಕಾಲಘಟ್ಟಗಳಲ್ಲಿ ಅವರು ಏನೇನು ಬೇಡಿಕೆಗಳಿಗಳಿಡ್ತಾರೆ. ಆ ಎಲ್ಲ ಬೇಡಿಕೆಗಳು ಸಮಾನಾಕಾಶಗಳಿಗೆ ಪೂರಕವಾಗಿ ಇರ್ತವೆಯೇ ಹೊರತು ಅದಕ್ಕೆ ವಿರುದ್ಧವಾಗಿರೋದಿ‌ಲ್ಲ ಎನ್ನುವುದನ್ನು ಅರಿಯಬೇಕು. ೧ನೇ ತರಗತಿಯಿಂದಲೇ ಇಂಗ್ಲಿಶ್ ಜಾರಿ ಮಾಡುವ ಮೂಲಕ ಸರ್ಕಾರ ಹೆಚ್ಚುತ್ತಿರುವ ಇವತ್ತು ಅಂತರವನ್ನು ಕಡಿಮೆ ಮಾಡ್ಬೇಕು. ಆ ಹಿನ್ನೆಲೆಯಲ್ಲಿ ಇವತ್ತು ಪ್ರಾರಂಭವಾದ ಚರ್ಚೆ ಅರ್ಥ ಪೂರ್ಣವಾಗಲಿ ಅಂತ ಕೇಳಿಕೊಳ್ತಾ ನನ್ನ ಮಾತನ್ನ ಮುಗಿಸ್ತೇನೆ. ನಮಸ್ಕಾರ.