ಕವಿ ಎ.ಕೆ. ರಾಮಾನುಜನ್ ಅವರು ತಾವು ನಾಲ್ಕು ಭಾಷೆಗಳನ್ನು ಎಳವೆಯಲ್ಲೇ ಹೇಗೆ ಕಲಿತರೆಂಬುದನ್ನು ಕುರಿತು ಒಂದೆಡೆ ಹೇಳುತ್ತಾರೆ: ‘ತಾಯಿಯ ಜೊತೆ ಅಡಿಗೆ ಮನೆಯಲ್ಲಿ ತಮಿಳು, ಅಟ್ಟದ ಮೇಲೆ ತಂದೆಯ ಜೊತೆ ಸಂಸ್ಕೃತ, ಬೀದಿಯಲ್ಲಿ ಕನ್ನಡ ಹಾಗೂ ಶಾಲೆಯಲ್ಲಿ ಇಂಗ್ಲಿಶ್’.

ನಮ್ಮ ಸರ್ಕಾರಿ ಶಾಲೆಗಳ ಮಕ್ಕಳು ಒಂದನೇ ತರಗತಿಯಿಂದ ಕನ್ನಡದ ಜೊತೆಗೇ ಇಂಗ್ಲಿಶ್‌ನ್ನೂ ಕಲಿಸಬೇಕೆಂಬುದನ್ನು ವಿರೋಧಿಸುತ್ತಿರುವ ಭಾಷಾ ಸಂಪ್ರದಾಯವಾದಿಗಳು ರಾಮಾನುಜನ್ನರ ಅನುಭವದ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು. ಇದು ಕೇವಲ ರಾಮಾನುಜನ್ನರ ಅನುಭವದ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು. ಇದು ಕೇವಲ ರಾಮಾನುಜನ್ನರ ಅನುಭವ ಮಾತ್ರ ಅಲ್ಲ. ತೆಲುಗು ಹಾಗೂ ಕನ್ನಡ ಈ ಎರಡೂ ಭಾಷೆಗಳಿರುವ ಕೋಲಾರದಲ್ಲಿ ಅಥವಾ ಬಳ್ಳಾರಿಯಲ್ಲಿ ಮಕ್ಕಳು ಬಾಲ್ಯದಿಂದಲೇ ಎರಡು ಭಾಷೆ ಕಲಿಯುತ್ತಾರೆ. ವಾಸ್ತವ ಹೀಗಿರುವಾಗ, ಈ ಮಕ್ಕಳಿಗೆ ಈ ಕಾಲದ ಅನಿವಾರ್ಯ ಭಾಷೆಯಾದ ಇಂಗ್ಲಿಶ್‌ನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೆ ಅಡ್ಡಿ ಏನಿದೆ?

ಗ್ರಾಮ ಹಾಗೂ ನಗರಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಮಾನ ಶಿಕ್ಷಣದ ಅವಕಾಶ ಕಡಿಮೆಯಾಗುತ್ತಿರುವ ಈ ಕಾಲ ಭಯಾನಕವಾದ ಅಸಮಾನತೆಯನ್ನು ಸೃಷ್ಟಿಸುತ್ತಿದೆ. ಈ ಅಸಮಾನತೆಗೆ ಇಂಗ್ಲಿಶ್ ಭಾಷಾ ಕಲಿಕೆಯಲ್ಲಿರುವ ವಯಸ್ಸಿನ ತಾರತಮ್ಯವೂ ಒಂದು ಕಾರಣವಾಗಿದೆ. ಆದ್ದರಿಂದಲೇ, ನಮ್ಮ ಗ್ರಾಮಗಳಲ್ಲೇ ಹೆಚ್ಚಿಗೆ ಇರುವ ಹಾಗೂ ದಲಿತ, ಹಿಂದುಳಿದ ವರ್ಗಗಳ ಮಕ್ಕಳೇ ಹೆಚ್ಚು ಕಲಿಯುತ್ತಿರುವೆ. ಸರ್ಕಾರಿ ಶಾಲೆಗಳಲ್ಲೂ ಒಂದನೇ ತರಗತಿಯಿಂದ ಇಂಗ್ಲಿಶ್‌ನ್ನು ಒಂದು ಭಾಷೆಯಾಗಿ ಕಲಿಸಬೇಕೆನ್ನುವ ಚರ್ಚೆ ಕನ್ನಡ ಸಂಸ್ಕೃತಿಯ ಕೇಂದ್ರರಂಗಕ್ಕೆ ಬಂದಿದೆ.

ಭಾಷಾಕಲಿಕೆ ಕುರಿತಂತೆ, ಈಗಾಗಲೇ ಸವಕಲಾಗಿರುವ ಭಾಷಾಶಾಸ್ತ್ರಜ್ಞರ ಹಳೆಯ ವಾದಗಳನ್ನು ಕೆಲವರು ಮಂಡಿಸುತ್ತಿದ್ದಾರೆ. ಈ ವಾದದ ಪ್ರಕಾರ, ಮಕ್ಕಳು ಹತ್ತು ವರ್ಷದವರೆಗೂ ಮಾತೃಭಾಷೆಯನ್ನಷ್ಟೇ ಕಲಿಯಬೇಕಂತೆ. ಮಾತೃಭಾಷೆಯೇ ಕಲಿಕೆಯ ಮಾಧ್ಯಮವಾಗಬೇಕೆಂಬ ಬಗ್ಗೆ ಯಾರದೂ ತಕರಾರಿಲ್ಲ. ಆದರೆ ಅದು ಸಮಾನವಾಗಿ ಎಲ್ಲ ಮಕ್ಕಳಿಗೂ ಅನ್ವಯವಾದಾಗ ಮಾತ್ರ ಅದಕ್ಕೆ ಹೆಚ್ಚಿನ ಅರ್ಥವಿದೆ. ಅಷ್ಟೇ ಅಲ್ಲದೆ ಮಕ್ಕಳು ಎಳವೆಯಲ್ಲಿ ಮಾತೃಭಾಷೆಯೊಂದನ್ನಷ್ಟೇ ಕಲಿಯಬಲ್ಲರು ಎಂಬ ಹಳೆಯ ವಾದ ಈಗ ಬಿದ್ದು ಹೋಗಿದೆ. ರಮೈನ್, ಡ್ರೈಡನ್ ಮತ್ತು ಜೀನೆಟ್‌ವೋಸ್ ಮುಂತಾದ ಭಾಷಾ ಶಾಸ್ತ್ರಜ್ಞರು ತೋರಿಸಿರುವಂತೆ, ಏಳು ವಯಸ್ಸಿನ ಒಳಗೆ ಮಕ್ಕಳು ಮೂರು-ನಾಲ್ಕು ಭಾಷೆಗಳನ್ನು ಹೀರಿಕೊಳ್ಳಬಲ್ಲರು. ಕಾರಣ, ಈ ಎಳೆಯ ವಯಸ್ಸಿನಲ್ಲಿ ‘ಲಿಂಗ್ವಿಸ್ಟಿಕ್ ಪ್ಲಾಸ್ಟಿಸಿಟಿ’, ಅಂದರೆ ತಮಗೆ ಬೇಕಾದಂತೆ ಭಾಷಾ ಆಕೃತಿಗಳನ್ನು ನಿರ್ಮಾಣ ಮಾಡಿ ಕೊಳ್ಳಬಲ್ಲ ಶಕ್ತಿ, ಮಕ್ಕಳಿಗೆ ಹೆಚ್ಚು ಇರುತ್ತದೆ : ಜೊತೆಗೆ, ಹೊಸ ಕಾಲದ ಮಕ್ಕಳನ್ನು ಕುರಿತ ಅಧ್ಯಯನಗಳು ತೋರಿಸಿರುವಂತೆ ಎರಡು, ಮೂರು ಭಾಷೆಗಳನ್ನು ಕಲಿತ ಮಕ್ಕಳಲ್ಲಿ ಇತರ ವಿಷಯಗಳನ್ನು ಕಲಿಯುವ ಸಾಮರ್ಥ್ಯವೂ ಹೆಚ್ಚಿರುತ್ತದೆ: ಗಣಿತ ಹಾಗೂ ವಿಜ್ಞಾನಗಳನ್ನು ಕಲಿಯುವಾಗ, ಸಮಸ್ಯೆಗಳನ್ನು ಬಿಡಿಸುವ ಕುಶಲತೆ ಹೆಚ್ಚು ಬೆಳೆದಿರುತ್ತದೆ.

ಖ್ಯಾತ ಭಾಷಾವಿಜ್ಞಾನಿ ನೋಮ್‌ಚಾಮ್‌ಸ್ಕಿಯವರ ವಿಶ್ವಾತ್ಮಕ ವ್ಯಾಕರಣದ ಪ್ರಕಾರ, ಒಂದೇ ವಸ್ತುವನ್ನು ವಿವಿಧ ಭಾಷೆಗಳ ಮಕ್ಕಳು ಆಯಾ ಭಾಷೆಗಳ ಶಬ್ದಗಳ ಮೂಲಕ ಗ್ರಹಿಸುತ್ತಾರೆ. ಇಂಗ್ಲಿಶ್ ಮಗು ಯಾವುದನ್ನು ‘ಸ್ಕೈ’ ಎಂದು ಗುರುತಿಸುತ್ತದೋ ಅದನ್ನೇ ಕನ್ನಡ ಮಗು ‘ಅಕಾಶ’ ಎಂದು ಗುರುತಿಸುತ್ತದೆ. ಹೀಗಾಗಿ, ಒಂದು ವಸ್ತುವನ್ನು ಎರಡು, ಮೂರು ಭಾಷೆಗಳಲ್ಲಿ ಗುರುತಿಸಿ ಕಲಿಯುವ ಕೆಲಸ ಮಕ್ಕಳಿಗೆ ಸುಲಭ ತಾನೆ? ಚಾಮ್‌ಸ್ಕಿಯವರೇ ತೋರಿಸುವಂತೆ ‘ಐದನೆಯ ವಯಸ್ಸಿನ ಹೊತ್ತಿಗೆ ಒಂದು ಮಗು ಆವರೆಗೆ ಎದುರಾಗಿರುವ ಅಸಂಖ್ಯಾತ ನುಡಿಗಳನ್ನು ಪುನರುತ್ಪಾದಿಸುತ್ತಿರುತ್ತದೆ. ಅಲ್ಲದೆ, ಮಗುವಿನ ಮೊದಲ ಆರು ವರ್ಷಗಳ ಕಲಿಕೆ ಅದರ ಮುಂದಿನ ಆರು ವರ್ಷಗಳ ಕಲಿಕೆಗೆ ಬುನಾದಿಯಾಗುತ್ತದೆ’. ಜೊತೆಗೆ, ಚಾಮ್‌ಸ್ಕಿಯವರ ಪ್ರಕಾರ ‘ಮಗು ಭಾಷೆಯನ್ನು ಕಲಿಯುವುದಿಲ್ಲ’; ಬದಲಿಗೆ, ‘ಭಾಷೆ ಮಗುವಿನಲ್ಲಿ ಬೆಳೆಯುತ್ತದೆ’. ಈ ಹಿನ್ನೆಲೆಯಲ್ಲಿ ನೋಡಿದಾಗ, ಸಂಪ್ರದಾಯವಾದಿ ಭಾಷಾವಿಜ್ಞಾನಿಗಳು ಯಾವ ವಯಸ್ಸಿನಲ್ಲಾದರೂ ಯಾವ ಭಾಷೆಯನ್ನಾದರೂ ಕಲಿಯಬಹುದು ಎಂದು ಹೇಳುವುದು ಅರ್ಧಸತ್ಯ ಮಾತ್ರ. ಯಾಕೆಂದರೆ, ಭಾಷಾ ಕಲಿಕೆಯಲ್ಲಿ ಅನುಕರಣೆಯ ಪಾತ್ರವೂ ದೊಡ್ಡದು. ಹಿಂಜರಿಕೆಯಲ್ಲದ ಅನುಕರಣೆಯ ಸಾಮರ್ಥ್ಯ ಮಗುವಿಗೆ ಹೆಚ್ಚು ಇರುವುದರಿಂದ ಅದು ಹೆಚ್ಚು ಭಾಷೆಗಳನ್ನು ವೇಗವಾಗಿ ಅನುಕರಿಸುತ್ತದೆ. ನಾವೇ ನಮ್ಮ ಅನುಭವದಿಂದ ಹೇಳಬಹುದಾದರೆ, ದೊಡ್ಡವರಾಗುತ್ತಾ, ಆಗುತ್ತಾ ಇತರ ಭಾಷೆಗಳನ್ನು ಕಲಿಯಲು, ಅನುಕರಿಸಲು ನಮ್ಮೊಳಗೇ ಒಂದು ಥರದ ಹಿಂಜರಿಕೆಯಿರುತ್ತದೆ. ಗ್ರಾಮೀಣ ಪ್ರದೇಶಗಳಿಂದ ಬಂದ, ಬುದ್ಧಿವಂತರಾದ ಇಂಗ್ಲಿಶ್ ಮೇಷ್ಟ್ರರುಗಳು ಕೂಡ ಸಹಜವಾಗಿ ಇಂಗ್ಲಿಶ್ ಭಾಷೆಯನ್ನು ಬಳಸಲು ಹಿಂಜರಿಯುವುದಕ್ಕೆ ಅವರು ತಡವಾಗಿ ಇಂಗ್ಲಿಶ್ ಕಲಿತಿರುವುದೂ ಮುಖ್ಯ ಕಾರಣವಾಗಿದೆ.

ನ್ಯೂರೋಬಯಾಲಜಿಸ್ಟರ ಪ್ರಕಾರ, ಎಳೆಯ ಮಕ್ಕಳ ಮನಸ್ಸು ಕಾರ್ಯಕ್ರಮಕ್ಕಾಗಿ (ಪ್ರೋಗ್ರಾಮಿಂಗ್) ಕಾಯುತ್ತಿರುವ ಕಂಪ್ಯೂಟರಿನಂತೆ ಅನೇಕ ಅಂಶಗಳನ್ನು ಕಲಿಯಲು ಸಿದ್ಧವಾಗಿರುತ್ತದೆ. ಆ ಘಟ್ಟದಲ್ಲಿ ಮಕ್ಕಳು ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನ ಕೇಳಿ, ನೋಡಿ, ಅನುಕರಿಸಿ, ಅಥವಾ ಹಲವು ಮಟ್ಟಗಳಲ್ಲಿ ಅವನ್ನು ಬಳಸಿ ಕಲಿಯತೊಡಗುತ್ತಾರೆ. ಈ ಸರಳ ಸತ್ಯ ನಮ್ಮ ಕಣ್ಣ ಮುಂದಿರುವ ಪಟ್ಟಣ ಹಾಗೂ ನಗರಗಳ ಪುಟ್ಟ ಪುಟ್ಟ ಮಕ್ಕಳನ್ನು ನೋಡಿದರೂ ತಿಳಿಯುತ್ತದೆ. ಈ ಮಕ್ಕಳು ಮನೆಯಲ್ಲಿ ಕನ್ನಡ ಅಥವಾ ತೆಲುಗನ್ನು ಕಲಿಯುತ್ತಾ, ಟೆಲಿವಿಷನ್ ಮೂಲಕ ಹಿಂದಿಯನ್ನೂ, ಶಾಲೆಯಲ್ಲಿ ಇಂಗ್ಲಿಶ್‌ನ್ನೂ ಕಲಿಯುತ್ತಾರೆ. ದ್ವಿಭಾಷಿಕ ಪ್ರದೇಶಗಳಲ್ಲಿ ಶಾಲೆಗೆ ಹೋಗುವ ಮುನ್ನವೇ ಮಕ್ಕಳು ಎರಡು ಭಾಷೆಗಳನ್ನು ಕಲಿಯು‌ತ್ತಾರೆ.

ಈ ಸಾಧ್ಯತೆಯನ್ನು ಸರಿಯಾಗಿ ಅಧ್ಯಯನ ಮಾಡದೆ, ಗ್ರಾಮಗಳ ಹಾಗೂ ಪಟ್ಟಣಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಾತ್ರ ನಾವು ಹತ್ತನೆಯ ವಯಸ್ಸಿಗೆ ಇಂಗ್ಲಿಶ್ ಭಾಷೆ ಪರಿಚಯಿಸುತ್ತಿದ್ದೇವೆ. ಆದರೆ ನಗರಗಳ ಕಾನ್ವೆಂಟ್ ಹಾಗೂ ಖಾಸಗಿ ಶಾಲಾ ಮಕ್ಕಳು ನರ್ಸರಿ ಪೂರ್ವದಿಂದ ಹಿಡಿದು ಮೂರನೆಯ ವಯಸ್ಸಿಗೇ ಇಂಗ್ಲಿಶ್ ಕಲಿಯಲಾರಂಭಿಸುತ್ತಾರೆ. ಹೀಗಾಗಿ ಗ್ರಾಮೀಣ ಸರ್ಕಾರಿ ಹಾಗೂ ಪಟ್ಟಣಗಳ ಖಾಸಗಿ ಶಾಲೆಗಳ ಮಕ್ಕಳ ಇಂಗ್ಲಿಶ್ ಕಲಿಕೆಯಲ್ಲಿ ಏಳು ವರ್ಷಗಳ ಅಂತರ ಸೃಷ್ಟಿಯಾಗುತ್ತದೆ. ಹತ್ತನೆಯ ವಯಸ್ಸಿನ ಹೊತ್ತಿಗೆ ಹೊಸ ಭಾಷೆಯನ್ನು ಹೀರಿಕೊಳ್ಳುವ ಶಕ್ತಿ ಮಕ್ಕಳಲ್ಲಿ ಕಡಿಮೆಯಾಗುವುದರಿಂದ, ಗ್ರಾಮಗಳ ಮಕ್ಕಳ ಇಂಗ್ಲಿಷ್ ಭಾಷಾ ಕಲಿಕೆ ಮಂದವಾಗತೊಡಗುತ್ತದೆ. ಖಾಸಗಿ ಕಾನ್ವೆಂಟ್‌ನಲ್ಲಿ ನರ್ಸರಿ ಕಲಿಯುವ ಮಗು ಪಿ.ಯು.ಸಿ.ಗೆ ಬರುವ ಹೊತ್ತಿಗೆ ೧೨ ವರ್ಷ ಇಂಗ್ಲಿಶ್ ಕಲಿಸಿರುತ್ತದೆ. ಆದರೆ ಸರ್ಕಾರಿ ಶಾಲೆಯ ಮಗು ೬ ವರ್ಷ ಇಂಗ್ಲಿಶ್ ಕಲಿತಿರುತ್ತದೆ. ಹೀಗಾಗಿ, ಎಸ್ಸೆಸ್ಸೆಲ್ಸಿ, ಪಿ.ಯು.ಸಿ. ಹಾಗೂ ಡಿಗ್ರಿ ಪರೀಕ್ಷೆಗಳಲ್ಲಿ ಫೇಲಾಗುವ ಗ್ರಾಮೀಣ ಮಕ್ಕಳಲ್ಲಿ ಶೇಕಡಾ ೯೦ರಷ್ಟು ಮಂದಿ ಇಂಗ್ಲಿಶಿನಲ್ಲೇ ಫೇಲಾಗುತ್ತಿದ್ದಾರೆ. ಕಳೆದ ವರ್ಷ ಎಸ್ಸೆಸ್ಸೆಲ್ಲಿ ಪರೀಕ್ಷೆ ಬರೆದ ೪ ಲಕ್ಷ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಲ್ಲಿ ೧.೯೦ ಲಕ್ಷ ಜನ ಕೇವಲ ಇಂಗ್ಲಿಶಿನಲ್ಲೇ ಫೇಲಾಗಿದ್ದಾರೆ. ಜೊತೆಗೆ ಪಿ.ಯು.ಸಿ. ಮಟ್ಟದಲ್ಲಿ ವಿಜ್ಞಾನ, ವಾಣಿಜ್ಯಶಾಸ್ತ್ರ ಕಲಿಯುವವರಿಗೂ ಇಂಗ್ಲಿಶ್ ಭಾಷೆಯೇ ತೊಡಕಾಗಿ ಇಂಗ್ಲಿಶಿನಲ್ಲಿ ನಡೆಯುವ ಸಿ.ಇ.ಟಿ. ಪರೀಕ್ಷೆಗಳಲ್ಲಿ ಈ ಮಕ್ಕಳು ಹಿಂದೆ ಬೀಳತೊಡಗಿದ್ದಾರೆ. ಇದು ಇಂಗ್ಲಿಶಿನ ಬಗೆಗೆ ಈ ಮಕ್ಕಳಿಗಿರುವ ಭಯ ಹಾಗೂ ಕೀಳರಿಮೆಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸ್ಪರ್ಧಾ ಪರೀಕ್ಷೆ, ಕಂಪ್ಯೂಟರ್, ವೈದ್ಯಕೀಯ, ಇಂಜಿನಿಯರಿಂಗ್ ಕ್ಷೇತ್ರಗಳ ಬಾಗಿಲುಗಳು ಈ ಮಕ್ಕಳಿಗೆ ಮುಚ್ಚಿಕೊಳ್ಳಲಾರಂಭಿಸಿವೆ.

ಇವತ್ತು ನಮ್ಮ ಗ್ರಾಮಗಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು ೩೦ ಲಕ್ಷ ಮಕ್ಕಳು ಕಲಿಯುತ್ತಿದ್ದಾರೆ. ಆದರೆ ನರ್ಸರಿ ಪೂರ್ವದಿಂದ ಲೆಕ್ಕ ತೆಗೆದುಕೊಂಡರೆ ೨೫ ಲಕ್ಷ ಮಕ್ಕಳು ಖಾಸಗಿ ಹಾಗೂ ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಈ ೨೫ ಲಕ್ಷ ಮಕ್ಕಳ ಜೊತೆಗೆ ನಮ್ಮ ಗ್ರಾಮಗಳ ಮಕ್ಕಳು ಸ್ಪರ್ಧಿಸಲಾರದಂಥ ಸ್ಥಿತಿ ನಿರ್ಮಾಣವಾಗಿದೆ. ಇಪ್ಪತ್ತು ವರ್ಷಗಳ ಹಿಂದೆ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ನಡುವೆ ಸಣ್ಣ ಮಟ್ಟದಲ್ಲಿ ಆರಂಭವಾದ ಕಂದರ ಈಗ ಆಳವಾಗತೊಡಗಿದೆ.

ಹೀಗಾಗಿ ಕರ್ನಾಟಕದ ಖಾಸಗಿ ವಲಯದಲ್ಲಿ ಪ್ರತಿವರ್ಷ ಸೃಷ್ಟಿಯಾಗುತ್ತಿರುವ ಸುಮಾರು ೭೫೦೦೦ ಹುದ್ದೆಗಳಲ್ಲಿ ನಮ್ಮ ಗ್ರಾಮಗಳ ಮಕ್ಕಳು ಸ್ಪರ್ಧಿಸಲಾರದಂಥ ಸ್ಥಿತಿ ನಿರ್ಮಾಣವಾಗಿದೆ. ಈ ಹುದ್ದೆಗಳಲ್ಲಿ ಕೊರಿಯರ್ ಹುಡುಗರು, ರಿಸೆಪ್ಷನಿಸ್ಟ್, ಸೇಲ್ಸ್ಮನ್ ಮುಂತಾದವುಗಳಿಂದ ಹಿಡಿದು ಕಂಪ್ಯೂಟರ್ ತಜ್ಞರು ಹಾಗೂ ಮ್ಯಾನೇಜ್‌ಮೆಂಟ್ ಉದ್ಯೋಗಗಳೂ ಸೇರಿವೆ.

ಈ ಹುದ್ದೆಗಳಲ್ಲಿ, ಸುಮಾರು ೭೦೦೦೦ ಹುದ್ದೆಗಳಿಗೆ ಇಂಗ್ಲಿಶ್ ಭಾಷಾ ಬಳಕೆಯ ಕೌಶಲ್ಯ ಅಗತ್ಯ ಎಂದು ಈ ಉದ್ಯೋಗಗಳ ಜಾಹಿರಾತುಗಳು ಹೇಳುತ್ತವೆ; ಅಥವಾ ಈ ಉದ್ಯೋಗಗಳ ಸಂದರ್ಶನದ ಸಮಯದಲ್ಲಿ ಈ ಮಾತನ್ನು ಹೇಳಲಾಗುತ್ತದೆ. ಜೊತೆಗೆ ಲಕ್ಷಾಂತರ ಕಾಲ್‌ಸೆಂಟರ್ ಉದ್ಯೋಗಗಳು ಇಂಗ್ಲಿಶ್ ಬಲ್ಲವರಿಗೆ ಮಾತ್ರ ಸಿಗುತ್ತಿವೆ. ಸರ್ಕಾರವು ಉದ್ಯೋಗಗಳನ್ನು ಸೃಷ್ಟಿಸಲು ಅಸಮರ್ಥವಾಗಿರುವ ಈ ಖಾಸಗೀಕರಣದ ಕಾಲದಲ್ಲಿ ಖಾಸಗಿ ವಲಯಗಳ ಇಂಗ್ಲಿಶ್ ಬೇಲಿಯನ್ನು ದಾಟುವ ಸಂಪರ್ಕ ಭಾಷೆಯನ್ನು ಹಳ್ಳಿಯ ಮಕ್ಕಳಿಗೂ ಕಲಿಸುವುದು ಅನಿವಾರ್ಯವಾಗಿದೆ. ಈ ಹಿಂದೆ ಹಳ್ಳಿ ಮಕ್ಕಳ ಕೈ ಬಲಪಡಿಸಲು ಉದ್ಯೋಗದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ನೀಡಲಾರಂಭಿಸಿದ್ದ ಗ್ರಾಮೀಣ ಕೃಪಾಂಕವನ್ನು ಕೂಡ ನಮ್ಮ ಕೋರ್ಟುಗಳು ಕಿತ್ತುಕೊಂಡಿವೆ. ಹೀಗಾಗಿ ಈ ಕಾಲದಲ್ಲಿ ನಮ್ಮ ದಲಿತ, ಹಿಂದುಳಿದ, ರೈತಾಪಿ ವರ್ಗಗಳ ಹಳ್ಳಿ ಮಕ್ಕಳ ಸಾಮಾಜಿಕಲ ಚಲನೆಗಾಗಿಯೂ ಈ ಇಂಗ್ಲಿಶ್ ಕಲಿಕೆ ಅಗತ್ಯವಾಗಿ ಬಿಟ್ಟಿದೆ. ಆದ್ದರಿಂದಲೇ, ವೇಗವಾಗಿ ಬದಲಾಗುತ್ತಿರುವ ಈ ಆಧುನಿಕೋತ್ತರ ಕಾಲದಲ್ಲಿ ಇಂಗ್ಲಿಶ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಗ್ರಾಮೀಣ ಮಕ್ಕಳಿಗೂ ಕಲಿಸುವ ಪ್ರಯತ್ನ ಆಗಬೇಕಾಗಿದೆ.

ನಮ್ಮ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ದೂರುತ್ತಾ, ಈ ಇಂಗ್ಲಿಶ್ ಕಲಿಕೆಯ ಪ್ರಯತ್ನವನ್ನು ಮುಂದೂಡುವುದು ಚರಿತ್ರೆಯ ಚಕ್ರವನ್ನು ಇನ್ನಷ್ಟು ಹಿಂದಕ್ಕೆ ತಿರುಗಿಸಿದಂತಾಗುತ್ತದೆ. ಈಗ ನಮ್ಮ ಟಿ.ಸಿ.ಎಚ್, ಡಿ.ಎಡ್., ಶಿಕ್ಷಣ ಪಡೆದ ಶಿಕ್ಷಕ-ಶಿಕ್ಷಕಿಯರು ಐದನೇ ತರಗತಿಯಿಂದ ಇಂಗ್ಲಿಶ್ ಭಾಷೆಯನ್ನು ಕಲಿಸಬಲ್ಲ ಸಾಮರ್ಥ್ಯ ಉಳ್ಳವರಾದರೆ, ಅವರೇ ಒಂದನೇ ತರಗತಿಯಿಂದ ಯಾಕೆ ಇಂಗ್ಲಿಶ್ ಕಲಿಸಲಾರರು? ‘ಅವರು ಕಲಿಸಲಾರರು’ ಅಥವಾ ‘ಈ ಮಕ್ಕಳು ಕಲಿಯಬಾರದು’ ಎಂಬ ವಾದ ಗ್ರಾಮೀಣ ಪ್ರತಿಭೆಗಳಿಗೆ ಅವಮಾನ ಮಾಡಿದಂತೆ. ಗ್ರಾಮಗಳ ಮಕ್ಕಳು ಇಂಗ್ಲಿಶ್ ಕಲಿಯಲಾರರು ಎನ್ನುವವರು ಸ್ಲಮ್ಮುಗಳ ಮಕ್ಕಳು ಹೇಗೆ ಇಂಗ್ಲಿಶ್ ಕಲಿಯುತ್ತಿದ್ದಾರೆ ಎಂಬುದನ್ನು ಸರಿಯಾಗಿ ನೋಡಿದಂತಿ‌ಲ್ಲ. ಆದ್ದರಿಂದ, ಗ್ರಾಮದ ಪರಿಸರಕ್ಕೆ ಹೊಂದುವ ಹಾಗೆ ಸರಳವಾಗಿ ಇಂಗ್ಲಿಶ್ ಕಲಿಸಲು ಈಗಿರುವ ನಮ್ಮ ಶಿಕ್ಷಕ, ಶಿಕ್ಷಕಿಯರನ್ನು ನಮ್ಮ ವಿಶ್ವವಿದ್ಯಾಲಯಗಳು ಕೇವಲ ಆ ತಿಂಗಳಲ್ಲಿ ಅಣಿಗೊಳಿಸಬಲ್ಲವು. ಈ ಕೆಲಸಕ್ಕೆ ಹೊಸದಾಗಿ ಯಾರನ್ನೂ ನೇಮಕ ಮಾಡಿಕೊಳ್ಳಬೇಕಾದ ಅಗತ್ಯವೇ ಇಲ್ಲ.

ಈ ಚರ್ಚೆಯಲ್ಲಿ ಇಂಗ್ಲಿಶ್ ಭಾಷೆಯ ಕಲಿಕೆಯು ಪ್ರಶ್ನೆಯನ್ನೂ ಇಂಗ್ಲಿಶ್ ಮಾಧ್ಯಮದ ಪ್ರಶ್ನೆಯನ್ನೂ ಬೆರೆಸಿ ದಾರಿ ತಪ್ಪಿಸಕೂಡದು. ನಮ್ಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಎಲ್ಲೂ ಇಂಗ್ಲಿಶ್ ಮಾಧ್ಯಮವೇ ಇಲ್ಲ. ಅಲ್ಲಿರುವುದು ಕನ್ನಡ ಮಾಧ್ಯಮ ಮಾತ್ರ. ಇಂಗ್ಲಿಶ್ ಮಾಧ್ಯಮದ ಪ್ರಶ್ನೆ ಎತ್ತಬೇಕಾಗಿರುವುದು ಖಾಸಗಿ ಶಾಲೆಗಳ ಸಂದರ್ಭದಲ್ಲಿ ಮಾತ್ರ. ಗಣಿತ, ಚರಿತ್ರೆ, ಮಗ್ಗಿ ಎಲ್ಲವನ್ನೂ ಕನ್ನಡದಲ್ಲೇ ಕಲಿಯುವ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕನ್ನಡ ಭಾಷೆಯ ಜೊತೆಗೇ ಇಂಗ್ಲಿಶ್ ಭಾಷೆಯನ್ನೂ ಕಲಿಸುವುದರಲ್ಲಿ ಸಾಮಾಜಿಕ ನ್ಯಾಯ, ಸಬಲೀಕರಣ ಹಾಗೂ ಸಾಮಾಜಿಕ ಸಮಾನತೆಗಳ ಪ್ರಶ್ನೆಯೂ ಅಡಗಿದೆ. ಆದ್ದರಿಂದ, ಭಾಷಾ ಕಲಿಕೆ ಕುರಿತ ನಮ್ಮ ಪ್ರಾಚೀನ ಗೊಂದಲಗಳಿಂದಾಗಿ ಸರ್ಕಾರಿ ಶಾಲೆಗಳನ್ನು ಪ್ರಯೋಗ ಶಾಲೆಗಳನ್ನಾಗಿಸಿ, ನಮ್ಮ ಗ್ರಾಮಗಳ ಬಡಮಕ್ಕಳನ್ನು ಈ ಪ್ರಯೋಗಗಳ ಬಲಿಪಶುಗಳನ್ನಾಗಿ ಮಾಡುವುದನ್ನು ಕೈಬಿಟ್ಟು ಒಂದನೇ ತರಗತಿಯಿಂದಲೇ ಸರಳವಾಗಿ ಇಂಗ್ಲಿಶ್ ಕಲಿಸುವ ಪ್ರಯತ್ನ ಮಾಡಬೇಕಾಗಿದೆ.

ಕನ್ನಡ ಭಾಷೆಯ ಉಳಿವಿನ ಬಗ್ಗೆ ನಮ್ಮ ಕೆಲವಾದರು ಕನ್ನಡ ಹೋರಾಟಗಾರರು, ಸಾಹಿತಿಗಳಿಗಿರುವ ಕಾಳಜಿ ಪ್ರಾಮಾಣಿಕವಾದದ್ದು, ನಿಜ. ಆದರೆ ಇದನ್ನು ಆತ್ಮಸಾಕ್ಷಿಯ ಪ್ರಶ್ನೆಯನ್ನಾಗಿಯೂ ನಾವು ನೋಡಬೇಕು. ನಮ್ಮ ಸಾಹಿತಿಗಳು ಹಾಗೂ ಕನ್ನಡ ಹೋರಾಟಗಾರರಲ್ಲಿ ಬಹುತೇಕರು ತಮ್ಮ ಮಕ್ಕಳು, ಮನೆಮಕ್ಕಳು, ಮೊಮ್ಮಕ್ಕಳನ್ನು ಎಳವೆಯಿಂದಲೇ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದಿಸುತ್ತಾ, ಗ್ರಾಮಗಳ ಬಡಮಕ್ಕಳಿಗೆ ಮಾತ್ರ ಕೊನೇ ಪಕ್ಷ ಇಂಗ್ಲಿಶ್ ಭಾಷಾ ಕಲಿಕೆಯ ಸವಲತ್ತು ಕೂಡ ಬೇಡ ಎನ್ನುವುದು ಅತ್ಯಂತ ಅನೈತಿಕವಾಗಿದೆ ಹಾಗು ನೀಚ ಕುತಂತ್ರವಾಗಿದೆ. ಕೇವಲ ಇಂಗ್ಲಿಶಿನಿಂದಲೇ ಎಲ್ಲವೂ ಆಗುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಆದರೆ ಇಂಗ್ಲಿಶ್ ತೆರೆಯುವ ಸಣ್ಣ ಸಾಧ್ಯತೆಯಿಂದ ನಮ್ಮ ಹಳ್ಳಿಮಕ್ಕಳನ್ನು ವಂಚಿಸುವುದು ಬೇಡ. ಆದ್ದರಿಂದ ಎಲ್ಲ ಗೊಂದಲ ಬಿಟ್ಟು, ಹಳ್ಳಿಯ ಪರಿಸರಕ್ಕೆ ಬೇಕಾದ ಇಂಗ್ಲಿಶಿನ ಸ್ವರೂಪ ಹಾಗೂ ಆ ಶಾಲೆಗಳಲ್ಲಿ ಇಂಗ್ಲಿಶ್ ಕಲಿಸುವ ಶಿಕ್ಷಕ-ಶಿಕ್ಷಕಿಯರಿಗೆ ಸರಿಯಾದ ತರಬೇತಿ ಮುಂತಾದ ಅಂಶಗಳ ಬಗ್ಗೆ ನಾವೀಗ ಚಿಂತಿಸಬೇಕಾಗಿದೆ.

ಹಳ್ಳಿಮಕ್ಕಳಿಗೆ ಹಾಗೂ ಒಟ್ಟಾರೆಯಾಗಿ ಸರ್ಕಾರಿ ಶಾಲೆಗಳ ಬಡಮಕ್ಕಳಿಗೆ ಇಂಗ್ಲಿಶ್‌ನ್ನೂ ಕಲಿಸಿ ಎಂಬ ಪ್ರಶ್ನೆ ಎದ್ದ ನಂತರ, ಕನ್ನಡ ಸಾಹಿತ್ಯ ಪರಿಷತ್ ಪ್ರಾಯೋಜಿಸಲು ಯತ್ನಿಸಿರುವ ಮಾತೃಭಾಷಾ ಮಾಧ್ಯಮದ ಆಂದೋಲನದ ಚರ್ಚೆ ಆರಂಭವಾಗಿದೆ. ಸುಮಾರು ಇಪ್ಪತ್ತು ವರ್ಷಗ ಕೆಳಗೇ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ನಡುವೆ ಸಮಾನತೆ ತರುವಂಥ ಮಾತೃಭಾಷಾ ಮಾಧ್ಯಮ ಆಂದೋಲನ ಆರಂಭಗೊಂಡಿದ್ದರೆ, ಇವತ್ತು ನಾವು ವಿದ್ಯಾರ್ಥಿಗಳ ನಡುವೆ ಕಾಣುತ್ತಿರುವ, ತಲ್ಲಣಗೊಳಿಸುವ ಅಸಮಾನತೆ ಅರ್ಧದಷ್ಟಾದರೂ ಕಡಿಮೆ ಯಾಗಿರುತ್ತಿತ್ತೇನೋ. ಆದರೆ, ಹಳ್ಳಿ ಮತ್ತು ನಗರಗಳ ಮಕ್ಕಳ ನಡುವೆ ಒಂದು ಮಟ್ಟದ ಸಮಾನತೆಯನ್ನಾದರೂ ಸಾಧಿಸಲು ಸರ್ಕಾರಿ ಶಾಲೆಗಳಲ್ಲೂ ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿಸಬೇಕೆಂಬ ಬೇಡಿಕೆ ಎದ್ದಿರುವ ಸಂದರ್ಭದಲ್ಲೇ ಮಾತೃಭಾಷಾ ಆಂದೋಲನ ಆರಂಭವಾಗಿದೆ. ಈ ಅಂಶ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಹಾಗೂ ಕೆಲವು ಸ್ಪಷ್ಟನೆಗಳನ್ನು ಬೇಡುತ್ತದೆ. ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಅಥವಾ ಮಾತೃಭಾಷಾ ಮಾಧ್ಯಮ ಈಗಾಗಲೇ ಇರುವುದರಿಂದ, ಅಲ್ಲಿ ಒಂದನೇ ತರಗತಿಯಿಂದ ಕನ್ನಡದ ಜೊತೆಗೆ ಇಂಗ್ಲಿಶ್ ಭಾಷೆಯನ್ನು ಕಲಿಸುವುದಕ್ಕೆ ಈ ಆಂದೋಲನ ಅಡ್ಡಿಯಾಗಬಾರದು.

ಈ ನಡುವೆ “ಮಾತೃಭಾಷಾ ಮಾಧ್ಯಮದ ಪ್ರಶ್ನೆಯ ಬಗ್ಗೆ ಕೋರ್ಟು ತೀರ್ಪು ಬರುವವರೆಗೂ ಕಾಯಿರಿ: ನಂತರ ಖಾಸಗಿ-ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ನಡುವೆ ಸಮಾನತೆ ಬಂದೇ ಬರುತ್ತದೆ” ಎಂದು ತಾವೇ ಕೋರ್ಟಿನ ತೀರ್ಪುನ್ನು ಬರೆಯುವವರಂತೆ ಕೆಲವು ‘ವಿದ್ವಾಂಸರು’ ನಮ್ಮ ಗ್ರಾಮೀಣರಿಗೆ ಕಳೆದ ಎರಡು ವರ್ಷಗಳಿಂದ ಬುದ್ಧಿವಾದ ಹೇಳುತ್ತಿದ್ದಾರೆ. ಆದರೆ, ೧೯೯೪ ರಿಂದೀಚೆಗೆ ಕನ್ನಡ ಮಾಧ್ಯಮ ಮಾತ್ರವೇ ಇರಬೇಕು ಎಂಬ ಸ್ಪಷ್ಟ ಆಜ್ಞೆ ಇದ್ದರೂ ಶೇ.೯೯ ಖಾಸಗಿ ಶಾಲೆಗಳಲ್ಲಿ ಇಂಗ್ಲಿಶ್ ಮಾಧ್ಯಮವೇ ಇದೆ, ಹಾಗೂ ಯಾವ ಕನ್ನಡ ಪ್ರಾಧಿಕಾರವಾಗಲೀ, ಸಾಹಿತಿಗಳಾಗಲೀ, ಸರ್ಕಾರವಾಗಲೀ, ಚಳವಳಿಗಾರರಾಗಲೀ ಇದನ್ನು ಈವರೆಗೆ ತಪ್ಪಿಸಲಾಗಿಲ್ಲ. ೧೯೯೪ಕ್ಕಿಂತ ಹಿಂದಿನಿಂದಲೂ, ಅಂದರೆ, ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ, ಈ ಅಸಮಾನತೆಯನ್ನು ಬೆಟ್ಟದಂತೆ ಬೆಳೆಯಲು ಬಿಟ್ಟು ಇದೀಗ ಕೋರ್ಟಿನ ತೀರ್ಪಿಗಾಗಿ ಗ್ರಾಮೀಣ ಮಕ್ಕಳ ಕಾಯಬೇಕೆನ್ನುವುದು ಸಂಪೂರ್ಣವಾಗಿ ಹಾದಿ ತಪ್ಪಿಸುವ ನಯವಂಚನೆಯ ವಾದವಾಗಿದೆ.

ಒಂದಾನೊಂದು ಕಾಲದಲ್ಲಿ ಇಂಗ್ಲಿಶ್‌ನ್ನು ತಡವಾಗಿ ಕಲಿತವರು ಕುಡ ಏನೆಲ್ಲಾ ಸಾಧಿಸಿದ್ದಾರೆ ಎಂಬ ಬಗ್ಗೆ ಕೆಲವರ ವ್ಯಕ್ತಿಗತ ಬಿಡಿ ಬಿಡಿ ಉದಾಹರಣೆಗಳನ್ನು ಕರ್ನಾಟಕದ ಭಾಷಾ ಸಂಪ್ರದಾಯವಾದಿಗಳು ಕೊಡುತ್ತಿದ್ದಾರೆ. ಆದರೆ ಆ ಉದಾಹರಣೆಗಳನ್ನು ತಾವೇ ನಂಬದೆ, ತಮ್ಮ ಮನೆ ಮಕ್ಕಳನ್ನು ಮೂರನೇ ವಯಸ್ಸಿಗೆ ಇಂಗ್ಲಿಶ್ ಮಾಧ್ಯಮದ ಶಾಲೆಗಳಿಗೆ ಕಳಿಸುತ್ತಿದ್ದಾರೆ ! ಪರಿಸ್ಥಿತಿ ಹೀಗಿರುವಾಗ, ಈ ವೇಗದ ಯುಗದಲ್ಲಿ ಬದಲಾಗುತ್ತಿರುವ ಗ್ರಾಮೀಣ ಮಕ್ಕಳ ಕಷ್ಟ, ಕೀಳರಿಮೆ ಹಾಗೂ ಅಗತ್ಯಗಳನ್ನು ಅರಿಯದೆ ಕೆಲವೇ ಕೆಲವು ವ್ಯಕ್ತಿಗಳ ಉದಾಹರಣೆಗಳನ್ನು ನೀಡಿ ದಾರಿ ತಪ್ಪಿಸುವುದು ಅತ್ಯಂತ ಅವೈಜ್ಞಾನಿಕವಾಗಿದೆ. ನಾವು ಕನ್ನಡ ಭಾಷೆಯ ಅಭಿವೃದ್ಧಿಯ ಬಗ್ಗೆ ಚರ್ಚೆ ಆರಂಭಿಸಿ ನೂರು ವರ್ಷವಾದರೂ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇನ್ನಿತರ ಅನೇಕ ಉನ್ನತ ವಿಜ್ಞಾನಗಳನ್ನು ಇವತ್ತಿಗೂ ಕನ್ನಡದಲ್ಲಿ ಬೋಧಿಸುತ್ತಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಆರಂಭಗೊಂಡಿರುವ ನೂರಾರು ಹೊಸ ಸ್ನಾತಕ-ಸ್ನಾತಕೋತ್ತರ ಕೋರ್ಸುಗಳನ್ನು ಕನ್ನಡದಲ್ಲಿ ಬೋಧಿಸುತ್ತಿಲ್ಲ. ಹೀಗಾಗಿ ತಡವಾಗಿ ಇಂಗ್ಲಿಶ್ ಕಲಿತ ಹಳ್ಳಿ ಮಕ್ಕಳು ಕಲಿಕೆಯ ಹೊಸ ಕ್ಷೇತ್ರಗಳಿಗೆ ಹಾಗೂ ಈ ಕಾಲದಲ್ಲಿ ಉದ್ಯೋಗ ತರುವ ಹೊಸ ಕೋರ್ಸುಗಳಿಗೆ ಪ್ರವೇಶಿಸದಂಥ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ತುಮಕೂರಿನ ಇಂಜಿನಿಯರಿಂಗ್ ಕಾಲೇಜೊಂದನ್ನು ಸೇರಿರುವ ನೂರು ವಿದ್ಯಾರ್ಥಿಗಳನ್ನು ಸಂದರ್ಶಿಸಿ ಪಡೆದಿರುವ ಅಂಕಿ-ಅಂಶಗಳ ಪ್ರಕಾರ, ಈ ನೂರು ವಿದ್ಯಾರ್ಥಿಗಳಲ್ಲಿ ಕೇವಲ ೫ ಜನ ಮಾತ್ರ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದಿ ೧೦ನೇ ವಯಸ್ಸಿನಿಂದ ಇಂಗ್ಲಿಶ್ ಕಲಿತವರಾಗಿದ್ದಾರೆ. ಇನ್ನುಳಿದ ೯೫ ಜನ ೩ನೇ ವಯಸ್ಸಿಗೇ ಇಂಗ್ಲಿಶ್ ಕಲಿತಿದ್ದಾರೆ. ಆದ್ದರಿಂದ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿ ವೃತ್ತ ಶಿಕ್ಷಣ, ಉನ್ನತ ಶಿಕ್ಷಣ ಹಾಗೂ ಉದ್ಯೋಗ ತರುವ ಹೊಸ ಕಾಲದ ಶಿಕ್ಷಣಗಳನ್ನು ಪ್ರವೇಶಿಸಲು ಕನ್ನಡ ಮಾಧ್ಯಮದ ಮಕ್ಕಳಿಗೂ ಬಾಲ್ಯದಲ್ಲೇ ಇಂಗ್ಲಿಶ್ ಕಲಿಸಬೇಕು. ಇದೊಂದು ಆರ್ಥಿಕ ಪ್ರಶ್ನೆಯಾದ್ದರಿಂದ ಇದನ್ನು ಒಣ ಪ್ರತಿಷ್ಠೆಯ ಭಾವುಕ ಪ್ರಶ್ನೆಯನ್ನಾಗಿ ಮಾಡಬಾರದು. ಕನ್ನಡ ಮಾಧ್ಯಮದಲ್ಲಿ ಓದಿರುವ ವಿದ್ಯಾರ್ಥಿಗಳಿಗೆ ನಮ್ಮ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಮತ್ತು ಎಲ್ಲಾ ಬಗೆಯ ಉನ್ನತ ಶಿಕ್ಷಣದಲ್ಲಿ ಈ ವಿದ್ಯಾರ್ಥಿಗಳ ಬೃಹತ್ ಸಂಖ್ಯೆಗನುಗುಣವಾಗಿ ಶೇ.೫೦ ಮೀಸಲಾತಿ ಇದ್ದಿದ್ದರೆ ಅಥವಾ ಕನ್ನಡ ಭಾಷೆ ಆಧುನಿಕ ಮಾರುಕಟ್ಟೆಯ ನಿಯಂತ್ರಕ ಭಾಷೆಯಾಗಿದ್ದರೆ ಇವತ್ತು ಯಾರೂ ಇಂಗ್ಲಿಷಿಗೆ ದುಂಬಾಲು ಬೀಳುತ್ತಿರಲಿಲ್ಲ.

ಬದಲಾದ ಇಂಥ ಪರಿಸ್ಥಿತಿಯಲ್ಲಿ, ಖ್ಯಾತ ಶಿಕ್ಷಣ ತಜ್ಞ ರೋಹಿಡೇಕರ್ ಅವರೇ ಈ ಹೊಸ ವಾಸ್ತವವನ್ನು ಅರಿತು ಈಗ ತಮ್ಮ ಹಳೆಯ ನಿಲುವನ್ನು ಬದಲಿಸಿಕೊಂಡು, ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಕಲಿಸಬೇಕೆಂದು ಹೇಳುತ್ತಿದ್ದಾರೆ. ಕನ್ನಡದ ಮುಖ್ಯ ಸಂಶೋಧಕರೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಮಾಜಿ ನಿರ್ದೇಶಕರೂ ಆದ ಡಾ. ಎಂ.ಚಿದಾನಂದಮೂರ್ತಿಯವರೇ ಸುಮಾರು ಮೂವತ್ತು ವರ್ಷಗಳ ಹಿಂದೆಯೇ ತಮ್ಮ ಮಕ್ಕಳು ಸ್ಪರ್ಧೆಯಲ್ಲಿ ಹಿಂದೆ ಬೀಳಬಾರದೆಂದು ಅವರನ್ನು ಇಂಗ್ಲಿಶ್ ಮಾಧ್ಯಮದ ಶಾಲೆಗೇ ಕಳಿಸಿದ್ದಾರೆ. ಮಾತೃಭಾಷೆಯ ಅಗತ್ಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಧಾರಾಳವಾಗಿ ಉಪನ್ಯಾಸ ಕೊಡುತ್ತಿರುವ ‘ಮನೋವಿಜ್ಞಾನಿ’ ಶ್ರೀಧರ್ ಅವರೇ ತಮ್ಮ ಮಗನನ್ನು ಪ್ರತಿಷ್ಠಿತ ಕುಮಾರನ್ಸ್ ಇಂಗ್ಲಿಶ್ ಮಾಧ್ಯಮ ಶಾಲೆಯಲ್ಲಿ ಓದಿಸಿದ್ದಾರೆ. ನಮ್ಮ ಜ್ಞಾನಪೀಠ ಪ್ರಶಸ್ತಿ ವಿಜೇತರ ಮನೆಮಕ್ಕಳು ಈಗ ಇಂಗ್ಲಿಶ್ ಮಾಧ್ಯಮಗಳಲ್ಲೇ ಕಲಿಯುತ್ತಿದ್ದಾರೆ. ನಮ್ಮ ೨೨೪ ಜನ ಶಾಸಕರಲ್ಲಿ ಬಹುತೇಕರ ಮಕ್ಕಳು, ಮೊಮ್ಮಕ್ಕಳು ಕೂಡ ಇಂಗ್ಲಿಶ್ ಮೀಡಿಯಂ ಶಾಲೆಗಳನ್ನೇ ಕಲಿಯುತ್ತಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಈಗ ಎಲ್ಲ ವಿಶ್ವವಿದ್ಯಾಲಯಗಳ, ಹೈಸ್ಕೂಲುಗಳು ಹಾಗೂ ಕಾಲೇಜುಗಳ ಶೇ.೯೯ರಷ್ಟು ಅಧ್ಯಾಪಕ, ಅಧ್ಯಾಪಕಿಯರು ತಮ್ಮ ಮಕ್ಕಳನ್ನು ಇಂಗ್ಲಿಶ್ ಮಾಧ್ಯಮದ ಶಾಲೆಗೇ ಕಳಿಸುತ್ತಿದ್ದಾರೆ. ಅಷ್ಟೇ ಯಾಕೆ, ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಗಳ ಬಹುತೇಕ ಶಿಕ್ಷಕ, ಶಿಕ್ಷಕಿಯರೇ ತಮ್ಮ ಮಕ್ಕಳನ್ನು ಇಂಗ್ಲಿಶ್ ಮೀಡಿಯಂ ಶಾಲೆಗಳಿಗೆ ಕಳಿಸಿ, ತಾವು ತಂತಮ್ಮ ಸರ್ಕಾರಿ ಸ್ಕೂಲುಗಳಿಗೆ ಪಾಠ ಮಾಡಲು ಹೋಗುತ್ತಿದ್ದಾರೆ. ಈ ಮಹನೀಯರು ಮತ್ತು ಮಹಿಳೆಯರ ಮಾದರಿಯನ್ನು ನಮ್ಮ ಗ್ರಾಮೀಣ ಮಕ್ಕಳು ಯಾಕೆ ಅನುಸರಿಸಬಾರದು?

ಇಂಗ್ಲಿಶಿನ ಯಜಮಾನಿಕೆಯಿರುವ ಪಶ್ಚಿಮದಲ್ಲೇ ಈಚಿನ ವರ್ಷಗಳಲ್ಲಿ ತಮ್ಮ ಮಕ್ಕಳಿಗೆ ಎಳವೆಯಲ್ಲೇ ಇತರ ಮೂರು ಭಾಷೆಗಳನ್ನು ಕಲಿಸಲು ಪೋಷಕರು ಹಾತೊರೆಯುತ್ತಿದ್ದಾರೆ. ಎರಡು, ಮೂರು ಭಾಷೆ ಕಲಿಯಲು ಮಕ್ಕಳ ಮನೋಲೋಕದಲ್ಲಿ ಯಾವ ತಡೆಯೂ ಇಲ್ಲ ಎಂದು ಮನೋವಿಜ್ಞಾನದ ಪ್ರಾಧ್ಯಾಪಕರಾದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್.ತಿಮ್ಮಪ್ಪನವರೇ ಈಚೆಗೆ ಆಧಾರ ಸಮೇತ ಹೇಳಿದ್ದಾರೆ. ಭಾಷಾಕಲಿಕೆ ಹಾಗೂ ಭಾಷಾವಿಜ್ಞಾನದ ನಿಯಮಗಳು ಹೊಸಕಾಲದ ಅಗತ್ಯಗಳ ಹಿನ್ನೆಲೆಯಲ್ಲಿ ಬದಲಾಗುತ್ತಿರುತ್ತವೆ ಎಂಬ ಸತ್ಯ ನಾವು ಕಳೆದ ಹತ್ತು ವರ್ಷಗಳಲ್ಲಿ ಮಕ್ಕಳ ಕಲಿಕೆಯ ವೇಗವನ್ನು ಗಮನಿಸಿದರೂ ಅರಿವಾಗುತ್ತದೆ. ಅದರಲ್ಲೂ, ಐದು-ಆರನೆಯ ವಯಸ್ಸಿಗೇ ಕಂಪ್ಯೂಟರ್ ಭಾಷೆಯನ್ನು ಕಲಿಯುತ್ತಿರುವ ನಗರ, ಪಟ್ಟಣಳ ಮಕ್ಕಳ ಕಲಿಕೆಯ ಪ್ರಚಂಡ ವೇಗವನ್ನು ಗಮನಿಸಿದರೆ, ಭಾಷಾಕಲಿಕೆ ಕುರಿತ ನಮ್ಮ ಹಳೆಯ, ತುಕ್ಕು ಹಿಡಿದ ಸಿದ್ಧಾಂತಗಳು ತಲೆಕೆಳಗಾಗಿರುವುದು ಗೊತ್ತಾಗುತ್ತದೆ. ಆದ್ದರಿಂದ ಹಳ್ಳಿ ಮಕ್ಕಳಿಗೆ ಈ ಬಗೆಯ ಕಲಿಕೆಯ ಶಕ್ತಿ ಇಲ್ಲ ಎಂದು ತೀರ್ಮಾನಿಸುವುದು ಶುದ್ಧ ಅವಾಸ್ತವವಾಗುತ್ತದೆ.

ಈ ಹಿನ್ನೆಲೆಯಲ್ಲಿ, ಮಾತೃಭಾಷಾ ಆಂದೋಲನವು ಈಗಾಗಲೇ ಕನ್ನಡ ಕಲಿಯುತ್ತಿರುವ ಗ್ರಾಮೀಣ ದಲಿತ, ಶೂದ್ರ ಮಕ್ಕಳು ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿಯುವುದಕ್ಕೆ ಅಡ್ಡಿಯಾಗಬಾರದು. ಬದಲಿಗೆ, ಕನ್ನಡ ಕಲಿಸದಿರುವ ಇಂಗ್ಲಿಶ್ ಶಾಲೆಗಳಲ್ಲಿ ಕನ್ನಡ ಕಲಿಸುವುದರ ಬಗ್ಗೆ ಹೋರಾಟ ಮಾಡಬೇಕು. ಪ್ರಾಥಮಿಕ ಹಂತದಿಂದಲೇ ಕನ್ನಡದ ಬದಲಿಗೆ ಇಂಗ್ಲಿಶ್-ಸಂಸ್ಕೃತ-ಹಿಂದಿಗಳನ್ನು ಕಲಿಸುತ್ತಿರುವ ಸಾವಿರಾರು ಖಾಸಗಿ ಶಾಲೆಗಳ ಕನ್ನಡ ವಿರೋಧಿ ನೀತಿಯನ್ನು ಬಯಲಿಗೆಳೆಯಬೇಕು. ಮನೆಯಲ್ಲಿ ಕನ್ನಡ ಮಾತಾಡುವ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಕನ್ನಡದ ಬದಲಿಗೆ ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡು ಕನ್ನಡವನ್ನು ಮೂಲೆಗುಂಪಾಗಿಸುತ್ತಿದ್ದಾರೆ. ಇದರಿಂದ ಕನ್ನಡಕ್ಕೆ ಒದಗಿರುವ ಅಪಾಯದ ಬಗ್ಗೆ ಮಾತೃಭಾಷಾ ಆಂದೋಲನ ಮೌನವಾಗಿರುವುದು ಆಶ್ಚರ್ಯಕರವಾಗಿದೆ.

ಈ ಗುರಿಯನ್ನು ಬಿಟ್ಟು, ಮಾತೃಭಾಷಾ ಮಾಧ್ಯಮದಲ್ಲೇ ಕಲಿತು, ಮಾತೃಭಾಷೆಯನ್ನು ಉಳಿಸಿ, ಬಳಸಿ, ಬೆಳೆಸುತ್ತಿರುವ ಬಡ ದಲಿತ, ಹಿಂದುಳಿದ, ರೈತಾಪಿ ಹಾಗೂ ಎಲ್ಲ ಜಾತಿಗಳ ನಿರ್ಗತಿಕ ಮಕ್ಕಳಿಗೆ ಇಂಗ್ಲಿಶ್ ಪರಿಚಯಿಸುವುದಕ್ಕೆ ಈ ಆಂದೋಲನವು ಅಡ್ಡಿಯಾದರೆ, ಗ್ರಾಮಗಳ ಮಕ್ಕಳು ಆರ್ಥಿಕ ಚೈತನ್ಯಕ್ಕಾಗಿ ಮಂಡಿಸಿರುವ ಹೊಸ ಹಕ್ಕಿನ ಬೇಡಿಕೆಯನ್ನು ಸಂಪೂರ್ಣವಾಗಿ ಹಾದಿ ತಪ್ಪಿಸಿದಂತಾಗುತ್ತದೆ. ಕನ್ನಡ ಮಾಧ್ಯಮದ ಜಾರಿ ಹಾಗೂ ಇಂಗ್ಲಿಶ್ ಭಾಷಾಕಲಿಕೆಯ ಪ್ರಶ್ನೆಗಳು ಇಂಗ್ಲಿಶ್ ಮಾಧ್ಯಮದ ಪ್ರಶ್ನೆಯ ಜೊತೆಗೆ ಬೆರೆಸುವುದು ಯೋಜಿತ ವಿತಂಡವಾದ ಮಾತ್ರ ಆಗುತ್ತದೆ. ಆರ್ಥಿಕ ಸಮಸ್ಯೆಯನ್ನು ಅತಿ ಭಾವುಕ ಸಮಸ್ಯೆಯನ್ನಾಗಿ ಮಾಡುವ ಈ ವಿತಂಡವಾದಕ್ಕೆ ಗ್ರಾಮೀಣ ಬಡಮಕ್ಕಳು ಇನ್ನೂ ಎಷ್ಟು ವರ್ಷ ಬಲಿಯಾಗುತ್ತಿರಬೇಕು?

ಮೇಲಿನ ಎರಡು ಭಾಗಗಳಲ್ಲಿ ಚರ್ಚಿಸಿರುವ ವಾಸ್ತವ ಸಂಗತಿಗಳ ಹಿನ್ನೆಲೆಯಲ್ಲಿ ೨೦೦೫ ರಿಂದ ೨೦೦೬ರವರೆಗೆ ಸುಮಾರು ಎರಡು ವರ್ಷಗಳ ಕಾಲ ಕರ್ನಾಟಕದಲ್ಲಿ ಇಂಗ್ಲಿಶ್ ಕಲಿಕೆ ಕುರಿತು ನಡೆದ ಚಳುವಳಿಯನ್ನು ಗಮನಿಸಬೇಕು. ಈ ಚಳುವಳಿಯಲ್ಲಿ ಕರ್ನಾಟಕದ ಎಲ್ಲ ಮುಂಚೂಣಿ ದಲಿತ ಸಂಘಟನೆಗಳು ಸೇರಿದ್ದವು ಹಾಗೂ ಚಳುವಳಿಯ ನಾಯಕತ್ವ ವಹಿಸಿದ್ದವು. ಈ ಸಂಘಟನೆಗಳ ಜೊತೆಗೆ ರೈತಸಂಘದ ಎರಡು ಬಣಗಳು ಸೇರಿದ್ದವು. ಇದರ ಜೊತೆಗೆ ಕರ್ನಾಟಕದ ಅಸಂಖ್ಯಾತ ಪ್ರಗತಿಪರರು ಹಾಗೂ ಪೋಷಕರು ದನಿಗೂಡಿಸಿದರು. ದಲಿತ ಹಾಗೂ ಗ್ರಾಮೀಣ ಮಕ್ಕಳ ಸಬಲೀಕರಣದ ಪ್ರಶ್ನೆಯ ಭಾಗವಾಗಿ ಕೂಡ ಇಂಗ್ಲಿಶ್ ಕಲಿಕೆಯ ಪ್ರಶ್ನೆಯನ್ನು ಇವೆರಲ್ಲ ಗ್ರಹಿಸಲೆತ್ನಿಸಿದರು. ಹಿಂದೆ, ಸಂಸ್ಕೃತ ಭಾಷೆಯನ್ನು ದಲಿತರಿಂದ, ಶೂದ್ರರಿಂದ ದೂರವಿಟ್ಟ ಯಜಮಾನಿ ಶಕ್ತಿಗಳು ಹಾಗೂ ಮೇಲುಜಾತಿಯ ಮನಸ್ಸುಗಳು ಈಗಲೂ ಅದೇ ರೀತಿ ಕಾಕ್ಯಪ್ರವೃತ್ತವಾಗಿರುವುದನ್ನು ಅನೇಕ ದಲಿತ ನಾಯಕರ ಗುರುತಿಸಿದರು.

ಅಖಿಲ ಭಾರತ ಮಟ್ಟದಲ್ಲಿ ದಲಿತ ಚಿಂತನೆಯನ್ನು ವಿಸ್ತರಿಸುತ ಇರುವ ಚಂದ್ರಭಾನ್ ಪ್ರಸಾದ್, ಕಾಂಚಾ ಐಲಯ್ಯನವರಂಥ ದಲಿತ ಪರಚಿಂತಕರು ಇಂಗ್ಲಿಶ್ ಭಾಷೆಯ ಮೇಲೆ ದಲಿತ ವರ್ಗಗಳು ಸಂಪೂರ್ಣ ಪ್ರಭೂತ್ವ ಸಾಧಿಸುವುದು. ಈ ಕಾಲದ ದಲಿತ ಸಬಲೀಕರಣದ ಮುಖ್ಯ ಮಾರ್ಗಗಳಲ್ಲಿ ಒಂದು ಎಂಬುದನ್ನು ಸಾಧಾರವಾಗಿ ವಿವರಿಸತೊಡಗಿದ್ದಾರೆ. ಕರ್ನಾಟಕದ ಅನೇಕ ದಲಿತ, ಶೂದ್ರ ಚಿಂತಕರು ಈ ಬಗೆಯ ವಾದವನ್ನು ಸಮರ್ಥಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಶ್ ಕಲಿಕೆ ಆರಂಭಿಸುವ ಆದೇಶ ಹೊರಡಿಸಿದೆ.

ಆದರೆ ಕೇವಲ ಸರ್ಕಾರಿ ಆಜ್ಞೆಯಿಂದ ಎಲ್ಲವೂ ಸಾಧಿತವಾಗಲಾರದು. ಶೇಕಡ ಎಪ್ಪತ್ತೈದು ಭಾಗ ದಲಿತ ಮಕ್ಕಳೇ ಇರುವ ಸರ್ಕಾರಿ ಶಾಲೆಗಳನ್ನ ದಕ್ಷಗೊಳಿಸುವುದರ ಮೂಲಕವೇ ಇಂಗ್ಲಿಶ್ ಕಲಿಕೆ ಕಲಿತ ಕುರಿತ ಚಳುವಳಿಯನ್ನು ಅರ್ಥಪೂರ್ಣವಾಗಿಸಬೇಕಾಗಿದೆ. ಅಕಾಡೆಮಿಕ್ ತರ್ಕಗಳು, ಕೂದಲು ಸೀಳುವ ವಿಶ್ಲೇಷಣೆಗಳ ಮೂಲಕ ಈ ಶಾಲೆಗಳು ಉತ್ತಮಗೊಳ್ಳುವುದಿಲ್ಲ. ಬದಲಿಗೆ, ಶಿಕ್ಷಣ ಪರಿಸರದ ಆಧುನೀಕರಣದ ಮೂಲಕ ಮಾತ್ರ ಈ ಶಾಲೆಗಳ ಸ್ತಿತಿ ಬದಲಾಗಬಲ್ಲದು. ಪ್ರತಿಷ್ಠಿತ ಖಾಸಗಿ ಶಾಲೆಗಳ ಎಲ್ಲ ಬಗೆಯ ದಕ್ಷತೆ ಹಾಗೂ ಕಲಿಕೆಯ ಹೊಸ ಕ್ರಮಗಳು ದಲಿತ, ಶೂದ್ರ ಮಕ್ಕಳಿಗೂ ದಕ್ಕುವಂತಾದಾಗ ಮಾತ್ರ ಈ ವರ್ಗಗಳ ಬಿಡುಗಡೆಯ ಹಾದಿಯಿ ಒಂದು ತೆರೆಯುತ್ತದೆ. ಇಂಗ್ಲಿಶ್ ಕಲಿಕೆಯನ್ನು ಒತ್ತಾಯಿಸಲು ಒಂದುಗೂಡಿದ ದಲಿತ ಚಳುವಳಿ ಪ್ರಾಥರ್ಮಿಕ ಶಿಕ್ಷಣವನ್ನು ದಕ್ಷಗೊಳಿಸುವ ನಿಟ್ಟಿನಲ್ಲೂ ಚಳುವಳಿ ರೂಪಿಸುವುದು ಇಂದು ಅನಿವಾರ್ಯವಾಗಿದೆ.