ಬೆಳಿಗ್ಗೆಯಿಂದ ನಡೆದಿರುವ ಚರ್ಚೆಯಲ್ಲಿ ಪಾಲ್ಗೊಂಡು ಕೆಲವು ಮಾತುಗಳನ್ನು ಹೇಳ್ಲಿಕ್ಕೆ ಇಷ್ಟಪಡ್ತೇನೆ. ನಮ್ಮ ದೇಶದಲ್ಲಿ ಶಿಕ್ಷಣ ಇನ್ನೂ ಒಂದು ಮೂಲಭೂತ ಹಂಬಲವಾಗಿ ಇರುವಂತಹದು ಮತ್ತು ಒಂದು ಹಂತದಲ್ಲಿ ಅದೊಂದು ಲಕ್ಸುರಿ ಮತ್ತು ಇನ್ನೊಂದು ಹಂತದಲ್ಲಿ ಅದೊಂದು ಸ್ಟೇಟಸ್. ಗ್ರಾಮಾಂತರ ಪ್ರದೇಶದ ಕಾಲೇಜೊಂದರಲ್ಲಿ ಅಧ್ಯಾಪಕನಾಗಿರುವ ನನ್ನಂತಹವರಿಗೆ ಸಾಮಾನ್ಯವಾಗಿ ಅಡ್ಮಿಶನ್ ಸಮಯದಲ್ಲಿ ಎದುರಾಗುವಂತಹ ಬಹಳಷ್ಟು ಸಮಸ್ಯೆಗಳು ಏನೂಂತಂದ್ರೆ ಏನಾದರೂ ಮಾಡಿ ನಮ್ಮ ಹುಡುಗರಿಗೆ ನಿಮ್ಮ ಕಾಲೇಜಿನಲ್ಲಿ ಸೇರಿಸ್ಕೊಳ್ಳಿ. ಫೀಸು ಕಡಿಮೆ ಮಾಡ್ಕೊಳ್ಳಿ. ನಮ್ಮ ಮಕ್ಕಳೂ ನಾಲ್ಕು ಅಕ್ಷರ ಕಲ್ತು ಪಾಸಾಗ್ತವೆ’. ಈ ತರದ ಮಾತುಗಳನ್ನೆ ಪೋಷಕರು ಹೇಳ್ತಿರ್ತಾರೆ. ಅಂದ್ರೆ ಈ ಮಾತುಗಳ ಹಿಂದೆ ಕಾಣುವಂತಹದು ‘ನಮ್ಮ ಮಕ್ಕಳು ಎಲ್ಲರ ಮಕ್ಕಳ ಹಾಗೆ ಕಲೀಬೇಕು’ ಅನ್ನೊ ಹಂಬಲ. ಸಮೂಹ ಶಿಕ್ಷಣದ ಮೂಲಕ ಸಾಮಾಜಿಕ ನೆಮ್ಮದಿ, ಸಮಾನತೆಯನ್ನು ಕಂಡುಕೊಳ್ಳಲಿಕ್ಕೆ ಸಾಧ್ಯ ಎನ್ನುವ ಆಸೆ ಇರುತ್ತದೆ. ಇದನ್ನು ನಾವು ಈ ಶಿಕ್ಷಣ, ಸಂಸ್ಕೃತಿ ಕುರಿತು ಚರ್ಚಿಸುವಾಗ ಗಮನಿಸಬೇಕಾಗುತ್ತದೆ. ಇದು ಬಹಳ ದೊಡ್ಡ ಹಸಿವು ಅಂತ ನನಗನ್ನಿಸುತ್ತೆ. ನಾನು ಎಷ್ಟು ಬೆಳಗ್ಗೆ ಯಾವುದೋ ಹಳ್ಳಿಯಿಂದ ಮಕ್ಕಳನ್ನು ಸೈಕಲ್ ಮೇಲೆ ಕೂರಿಸಿಕೊಂಡು ಬಂದು ಶಾಲೆಗೆ ಬಿಟ್ಟು ಹೋಗ್ತಕ್ಕಂತ ಸಣ್ಣಪುಟ್ಟ ಉದ್ಯೋಗ ಮಾಡುವ ತಂದೆ-ಪೋಷಕರನ್ನು ನೋಡ್ತಿರ್ತೇನೆ. ಹಾಗೆಯೇ ವಿದ್ಯೆಯಿಂದ ಅಧಿಕಾರ ಬರುತ್ತೆ, ಅತ್ಯುತ್ತಮವಾದ ಸ್ಥಾನಮಾನ ಬರುತ್ತೆ. ಲಕ್ಸುರಿ ಅನ್ನೋದು ಬರುತ್ತೆ ಅಂತ ಜನ ತಿಳಿದಿದ್ದಾರೆ. ಯಾಕೆ ನಮ್ಮಲ್ಲಿ ವಿದ್ಯೆ ಇನ್ನೂ ಲಕ್ಸುರಿಯಾಗಿಯೇ ಉಳಿದಿದೆ ಅಂದ್ರೆ ನಮ್ಮಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಯುವ ವೇಳೆಗೆ ಎಷ್ಟೋ ಮಕ್ಕಳು ಡ್ರಾಪ್ ಔಟ್ ಆಗಬೇಕಾದ ಅನಿವಾರ್ಯ ಪರಿಸ್ಥಿತಿ ಇರುವುದು ಕಾರಣವಾಗಿದೆ. ಈ ಅಂಕಿ ಅಂಶಗಳನ್ನು ನಮ್ಮ ಸರ್ಕಾರವೇ ಹೇಳುತ್ತಿದೆ. ಆ ಅಂಕಿ ಅಂಶಗಳನ್ನೆಲ್ಲ ನಿಮಗೆ ನೆನಪಿಸಬೇಕಾದ ಅಗತ್ಯವಿಲ್ಲ. ಒಂದನೇ ತರಗತಿಗೆ ಐವತ್ತು ವಿದ್ಯಾರ್ಥಿಗಳು ಸೇರಿಕೊಂಡ್ರೆ ಅವರಲ್ಲಿ ಉನ್ನತ ಶಿಕ್ಷಣಕ್ಕೆ ಬರುವವರೆಷ್ಟು? ಇವತ್ತು ಕೂಡ ಉನ್ನತ ಶಿಕ್ಷಣ ಎಲ್ಲರಿಗೂ ಸಿಗ್ತಾ ಇಲ್ಲ. ಆದ್ದರಿಂದ ಅದೊಂದು ಲಕ್ಸುರಿ. ಆರ್ಥಿಕವಾಗಿ ಉತ್ತಮವಾಗಿರುವವರಿಗೆ ಅದು ಸಿಕ್ತದೆ; ಗಂಡು ಮಕ್ಕಳಿಗೆ ಅದು ಸಾಧ್ಯ. ಹೆಣ್ಣು ಮಕ್ಕಳಿಗೆ ಇಲ್ಲ. ಆದರೆ ಈಚಿನ ಬೆಳವಣಿಗೆಯೆಂದರೆ ಉನ್ನತ ಶಿಕ್ಷಣಕ್ಕೆ ಗಂಡು ಮಕ್ಕಳು, ಹೆಣ್ಣು ಮಕ್ಕಳು ಸಮ ಸಮನಾಗಿ ಬರ್ತಾ ಇದ್ದಾರೆ. ಬಿ.ಎ., ಬಿ.ಎಸ್ಸಿ., ಬಿ.ಕಾಂ. ತರಗತಿಗಳಲ್ಲಿ ಹುಡುಗಿಯರು ಹುಡುಗರಿಗಿಂತ ಹೆಚ್ಚು ಏಕಾಗ್ರತೆಯಿಂದ ಪಾಠ ಕೇಳೋದನ್ನ ಎಲ್ಲ ಬಡವರ – ಸಾಮಾನ್ಯವಾಗಿ ಇವರೆಲ್ಲ ಮೊದಲ ತಲೆಮಾರಿನ ಪದವಿ ವಿದ್ಯಾರ್ಥಿಗಳು – ಮಕ್ಕಳು ಹಾಗೆ ಪಾಠ ಕೇಳೋದನ್ನ ನಾನು ಗಮನಿಸಿದ್ದೇನೆ.

ತುಮಕೂರು ವಿಶ್ವವಿದ್ಯಾಲಯ ಪ್ರಾರಂಭವಾದಾಗ ನಾವು ಕೆಲವರು ಅದನ್ನು ವಿರೋಧಿಸಿದವು. ಯಾಕಂದ್ರೆ ಕೋಲಾರದಿಂದ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ತುಮಕೂರಿಗೆ ಹೋಗಿ ಎಂ.ಎ., ಎಂ.ಎಸ್ಸಿ. ತರಗತಿಗಳಿಗೆ ಸೇರೋಕೆ ಸಾಧ್ಯ ಆಗ್ತಾ ಇರ್ಲಿಲ್ಲ. ಅದರ ಬದಲು ಬಸ್‌ಪಾಸ್ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗಿತ್ತು, ಸಾಧ್ಯವಾಗುತ್ತಿತ್ತು. ಅದ್ದರಿಂದ ನಾವು ಅದನ್ನು ವಿರೋಧಿಸಬೇಕಾಯ್ತು. ಉನ್ನತ ಶಿಕ್ಷಣವನ್ನು ಲಕ್ಸುರಿಯನ್ನಾಗಿ ಮಾಡ್ತಾ ಹೋಗುವುದರಿಂದ ಕೆಳಹಂತದಲ್ಲಿ ಬದುಕ್ತಾ ಇರುವಂತಹ ಶಿಕ್ಷಣದಿಂದ ವಂಚಿತರಾಗ್ತಾರೆ ಎಂಬ ಆತಂಕ ಸುರುವಾಗಿತ್ತು.

ಕಾ.ವೆಂ. ಶ್ರೀನಿವಾಸಮೂರ್ತಿಯವರು ಶಾಲೆಯಲ್ಲಿ ಓದುತ್ತಿರುವ ದಲಿತ ಮಕ್ಕಳ ಅಂಕಿ ಅಂಶಗಳನ್ನು ಅಗಲೆ ಕೊ‌ಟ್ರು. ಅದರ ಮುಂದುವರಿದ ಭಾಗವಾಗಿ ಈಗ ನಾನು ಮಾತಾಡ್ತಾ ಇದ್ದೇನೆ. ಕಳೆದ ವರ್ಷ ನಾನು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಒಂದು ಹಳ್ಳಿಯಲ್ಲಿ ಎನ್.ಎಸ್.ಎಸ್.ಕ್ಯಾಂಪ್ ಮಾಡಿದ್ದೆ. ಅದು ಸುಮಾರು ೮೦ ಮನೆಗಳಿರುವ ಊರು. ಅಲ್ಲೊಂದು ಪ್ರಾಥಮಿಕ ಶಾಲೆಯಿದೆ. ಅಲ್ಲಿ ೧ನೇ ತರಗತಿಯಿಂದ ೪ನೇ ತರಗತಿವರೆಗೆ ಓದ್ತಾ ಇದ್ದಂತಹ ಮಕ್ಕಳ ಸಂಖ್ಯೆ ಬರಿ ಹದಿನೇಳು. ಆ ಊರಲ್ಲಿ ಮಕ್ಕಳೇ ಇಲ್ವ ಅಂದ್ರೆ, ಇದ್ದಾರೆ. ಆದ್ರೆ ಹೆಚ್ಚಿನ ಮಕ್ಕಳೆಲ್ಲ ಒಂದೂವರೆ ಕಿ.ಮೀ. ದೂರದಲ್ಲಿರುವ ಆದಿಚುಂಚನಗಿರಿ ಇಂಗ್ಲಿಶ್ ಸ್ಕೂಲಿಗೆ ಓದಕ್ಕೆ ಹೋಗ್ತಾರೆ. ಉಳಿದವರು, ಹೊಲ ಮನೆಯಿಲ್ಲದಂತ ತೀರ ನಿರ್ಗತಿಕರಾಗಿರುವಂತ ದಲಿತರ, ಒಕ್ಕಲಿಗರ ಮಕ್ಳು ಅದೇ ಊರಿನ ಸ್ಕೂಲಿಗೆ ಹೋಗ್ತಾರೆ. ವಿಚಿತ್ರ ನೋಡಿ ಉಳ್ಳವರಿಗೆ ಒಳ್ಳೆಯ ಶಿಕ್ಷಣ – ಇಂಗ್ಲಿಶ್ ಶಿಕ್ಷಣ. ಇದೆಲ್ಲ ನಿಮಗೆ ಗೊತ್ತಿದೆ. ಆದರೆ ಈ ತರದ ವಾಸ್ತವಗಳನ್ನು ಮರೆಯಬಾರದು ಅಷ್ಟೆ. ಇನ್ನು ದಲಿತರಿಗೆ ಪ್ರತ್ಯೇಕವಾದ ಭಾಷಿಕ ವ್ಯವಸ್ಥೆ ವಿಚಾರ. ಅದೊಂದು ದೊಡ್ಡ ಆಶಯ. ಶ್ರೀನಿವಾಸಮೂರ್ತಿ ಹೇಳಿದ್ರು ಹಿಂದುಳಿದ ವರ್ಗಗಳ ಭಾಷೆ ಕೂಡ ಒಂದು ರೀತಿ ಅಲಕ್ಷಿತ ಭಾಷೆ ಅಂತ. ಆದ್ರೆ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳನ್ನು ನೋಡಿದ್ರೆ ಹಳೆ ಮೈಸೂರಿನ ಪಂಡಿತ ಭಾಷೆಯಲ್ಲಿಯೇ ಇಡೀ ಪಠ್ಯಪುಸ್ತಕಗಳನ್ನೆಲ್ಲ ರೂಪಿಸಿರುತ್ತಾರೆ. ಉತ್ತರ ಕರ್ನಾಟಕದ ಯಾವ ಮಕ್ಕಳು ಈ ಭಾಷೆನ ಮಾತಾಡ್ತಾರೆ. ದಲಿತ ಮಕ್ಕಳಿಗೆ ಪಾಠವನ್ನ ಕಲಿಯೋದಕ್ಕೆ ಈಗಿರುವ ಪಠ್ಯದ ಭಾಷೆ ಅಡ್ಡಿಯಾಗೋದಾದ್ರೆ ಅದು ಉತ್ತರ ಕರ್ನಾಟಕದ ಎಲ್ಲ ಮಕ್ಕಳಿಗೂ ಅಡ್ಡಿಯಾಗ್ತಿದೆ. ಎಲ್ಲ ಹಿಂದುಳಿದ ಮಕ್ಕಳಿಗೂ ಅಡ್ಡಿಯಾಗ್ತ ಇರ್ತದೆ. ನಾನು ಎಂ.ಎ. ಮಾಡ್ತ ಇದ್ದಾಗ ನನ್ನ ಜೊತೆಯಲ್ಲಿ ಒಬ್ಬ ದಲಿತ, ಮತ್ತೊಬ್ಬ ಒಕ್ಕಲಿಕಗೆ ಸ್ನೇಹಿತರಿದ್ರು. ಅವರಿಬ್ರು ಮಂಡ್ಯದವರು. ಹುಲ್ಲುಕೆರೆ ಮಹದೇವ ಮತ್ತು ಅಪ್ಪಾಜಿಗೌಡ ಅಂತ. ಇಬ್ರು ಒಂದೇ ಭಾಷೇಲಿ ಮಾತಾಡೋದು. ನಾನು ನಾಯಕದ ಹಾಸ್ಟೆಲು, ಲಿಂಗಾಯ್ತರ ಮಠಗಳಲ್ಲಿ ಅಲ್ಲಿ ಇಲ್ಲಿ ಇದ್ದು ಓದಿಕೊಂಡು ಹೋಗಿದ್ದರಿಂದ ನನ್ನ ಭಾಷೆ ಬೇರೆ ಇತ್ತು. ಆದ್ರೆ ಅವ್ರು ‘ಹೋಲಾ’, ‘ಬಾಲಾ’, ‘ಬಡ್ಡೆತ್ತದೆ’ ಅಂತ ಮಾತಾಡೋರು. ನಾನೂ ಅದೇ ಪರಿಸರದವನಾದ್ರೂ ನಾನು ಓದಿದ ವಾತಾವರಣದಿಂದಾಗಿ ನನಗೆ ಅವರ ಭಾಷೆ ಭಿನ್ನವಾಗಿ ಕಾಣೋದು. ಪಂಚತಂತ್ರದ ಒಂದು ಕಥೆ ಇಲ್ಲಿ ನೆನಪಾಗ್ತಾ ಇದೆ. ಎರಡು ಗಿಳಿಗಳ ಕಥೆ ಆ ತರದ ಸ್ಥಿತಿ ನನಗನಿಸ್ತಿತ್ತು- ಹೀಗಿರುವಾಗ ದಲಿತರಿಗೆ ಮಾತ್ರ ಈಗಿರುವ ಒಂದು ಕನ್ನಡ ಅಧಿಕಾರದ ಭಾಷೆಯಾಗಿ, ದಲಿತರಿಗೆ ಇರುವ ಪ್ರತ್ಯೇಕವಾದ ಭಾಷೆಯ ಅನನ್ಯತೆಗೆ ಅದು ಅಡ್ಡಿಯಾಗಿದೆ ಅನ್ತಕ್ಕಂತಹ ಅಭಿಪ್ರಾಯ ಅಷ್ಟಾಗಿ ನನಗೆ ಸರಿಯಂತ ಅನಿಸ್ತಾ ಇಲ್ಲ. ನನ್ನ ಅಭಿಪ್ರಾಯ ತಪ್ಪಿರಬಹುದು. ಇನ್ನೊಂದು, ಸ್ಟೇಟಸ್‌ನ ಮಾತು ಹೇಳ್ತಾರೆ. ನನಗೇನನಿಸುತ್ತದೆ ಅಂದ್ರೆ ಬದಲಾವಣೆಯ ಗುರಿ ಸುಖ ಒಂದೇ ಅನ್ನಿಸ್ತಿದೆ. ನನ್ನ ಮಗ ವಿದ್ಯೆ ಕಲೀಲಿ ಅನ್ತಕ್ಕಂತಹ ಅಸೆಯ ಹಿಂದೆ ಒಂದು ಸುಖದ ಬಯಕೆಯಿದೆ. ಹೀಗಾಗಿ ಇದನ್ನ ನಾವು ನಿರಾಕರಿಸಕ್ಕೆ ಅಗೋದಿಲ್ಲ. ಇನ್ನೊಂದು ಅಂಶ ಯಾವುದಂದ್ರೆ ಯಾವುದೇ ಜಾತಿಯ ಶಿಕ್ಷಿತ ಇಲ್ಲವೆ ಉದ್ಯೋಗಸ್ಥ ಮನುಷ್ಯ ಇಂದು ತನ್ನ ಕೇರಿಯಲ್ಲಿ ಬದುಕಕ್ಕೆ ಇಷ್ಟಪಡೋದಿಲ್ಲ. ಹಳ್ಳಿಯಿಂದ ಬಂದ ಪ್ರಾಥಮಿಕ ಶಾಲಾ ಶಿಕ್ಷಣ ಕೂಡ ಶಾಲೆ ಹಳ್ಳಿಯಲ್ಲಿದ್ದರೂ ಪಟ್ಟಣದಲ್ಲಿ ಮನೆ ಮಾಡಿಕೊಂಡು ಅಲ್ಲಿಂದ ಕೆಲ್ಸಕ್ಕೆ ಹೋಗ್ತಾನೆ. ತನ್ನ ಮಕ್ಕಳನ್ನ ಇಂಗ್ಲಿಶ್ ಶಾಲೆಗೆ ಕಳಿಸ್ತಾನೆ. ಹಳ್ಳಿಯಲ್ಲಿರೋದಕ್ಕೆ ಅವನು ಇಷ್ಟಪಡೋದಿಲ್ಲ. ಶೈಕ್ಷಣೀಕವಾಗಿ, ಆರ್ಥಿಕವಾಗಿ ಒಂದು ಭದ್ರತೆ ಲಭಿಸಿದ ತಕ್ಷಣ ನಮ್ಮ ಮನಸ್ಸಿನಲ್ಲಿ ಆಗ್ತಕ್ಕಂತಹ, ನಮ್ಮ ಧೋರಣೆಯಲ್ಲಾಗ್ತಕ್ಕಂತಹ ಈ ಬದಲಾವಣೆಗಳಿದ್ದಾವಲ್ಲ ಇದನ್ನ ಯಾವ ರಾಜಕೀಯ ಪರಿಭಾಷೆಯಲ್ಲಿ ಅರ್ಥೈಸಿಕೊಳ್ಬೇಕು? ಹಾಗೆಯೇ ಇನ್ನೊಂದು ಮಾತು ಇಲ್ಲಿ ಬರ್ತಾ ಇತ್ತು. ಅದು ಇಂಗ್ಲಿಶ್ ಕಲಿಸೋದರ ಬಗ್ಗೆ. ನಾನು ‘ಉಂಡುಟ್ಟವರ ಕನ್ನಡ ಪ್ರೇಮ’ ಅಂತ ಒಂದು ಲೇಖ್ನ ಬರ್ದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಶ್ ಕಲ್ಸಬೇಕು ಅಂತ. ಆದರೆ ಬೇರೆ ಒಂದು ವಾದವನ್ನು ಗೆಳೆಯ ಕೆ.ಬಿ. ಸಿದ್ಧಯ್ಯ ಮುಂತಾದವರು ಮಂಡಿಸಿದ್ರು. ಜಾಗತಿಕ ಮಟ್ಟದಲ್ಲಿ ಕೆಲವು ಆಫ್ರಿಕನ್ ರೈಟರ್ಸ್ ಇಂಗ್ಲಿಶ್ ಕಲ್ತು, ಇಂಗ್ಲಿಶ್ ಬೋಧನೆ ಮಾಡ್ತಿದ್ದಂತಹವರು ಇಂಗ್ಲಿಶ್‌ನಲ್ಲಿ ಬರೆಯೋದನ್ನು ನಿಲ್ಲಿಸಿ, ಬೋಧಿಸೋದನ್ನ ನಿಲ್ಸಿ ತಮ್ಮ ಮಾತೃಭಾಷೆಯಲ್ಲಿ ಬರೆಯೋದಕ್ಕೆ ಶುರು ಮಾಡಿದರಲ್ಲ. ನಮ್ಮವರೆ ಆದ, ಹರೀಶ್ ದ್ವಿವೇದಿ ಅವರು ಇಂಗ್ಲಿಶ್ ಅಧ್ಯಾಪಕರಾಗಿದ್ದೂ ಹಿಂದಿಯಲ್ಲಿ ಬರಿತಾ,ಇರ್ತಾರೆ. ಯಾಕಾಗಿ ಈ ಒಂದು ಬೆಳವಣಿಗೆಗಳು ನಮ್ಮಲ್ಲಿ ಆಗ್ತಾ ಇವೆ? ಒಂದು, ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆ ಮತ್ತು ಇನ್ನೊಂದು ಆರ್ಥಿಕ ಬೆಳವಣಿಗೆಯ ಪ್ರಶ್ನೆ. ಇಂಗ್ಲಿಶ್ ಕಲೀಬೇಕು ಅನ್ನೋದು ನಿರಾಕರಿಸುವ ವಿಚಾರ ಅಲ್ಲ. ಆದ್ರೆ ಅದರ ಹಿಂದೆ ಕೆಲ್ಸ ಮಾಡ್ತಕ್ಕಂತಹ ಒತ್ತಡ ಮಾತ್ರ ಆರ್ಥಿಕವಾಗಿ ಲಾಭ ಮಾಡ್ಕೊಳ್ತಕ್ಕಂತಹ ಅವಕಾಶದ ಬಾಗಿಲನ್ನ ಇಂಗ್ಲಿಶ್ ತೆರೆಯುತ್ತೆ ಅಂತಕ್ಕಂತಹದ್ದು. ಅದಕ್ಕಿಂತ ಮಹತ್ತಾದ ಉದ್ದೇಶ ಏನಾದರೂ ಇಂಗ್ಲಿಶ್ ಕಲಿಕೆಯ ಹಿಂದೆ ಇದೆ ಅಂತ ನನಗೆ ಅನ್ಸಲ್ಲ. ಆದರೆ ಇದು ಮುಖ್ಯವಾದ ಸಂಗತಿ ಅನ್ನೋದನ್ನ ನಾನೂ ಒಪ್ತೇನೆ. ಆದರೆ ಒಂದು ಆತಂಕದ ಪ್ರಶ್ನೆ ಬೇರೆಯವರಲ್ಲಿ ಇರ್ತದೆ. ಅದಂದ್ರೆ ಇಂಗ್ಲಿಶ್ ಕಲಿಕೆ ನಮ್ಮ ಸಂಸ್ಕೃತಿಯ ಅನನ್ಯತೆಯನ್ನ ನಾಶ ಮಾಡ್ತದೆ ಅನ್ತಕ್ಕಂತಹದ್ದು. ಎರಡು ಕೂಡ ನಿಜವೇ. ಸಾಂಸ್ಕೃತಿಕ ಅನನ್ಯತೆ ಅಂದ್ರೆ ಸ್ಥಳೀಯವಾಗಿದ್ದೆ ವಿಶ್ವಾತ್ಮಕವಾದದ್ದನ್ನ ಹೇಗೆ ನಾವು ಗಳಿಸಿಕೊಳ್ಳುವುದು ಅಥವಾ ವಿಶ್ವಾತ್ಮಕವಾದುದರಿಂದ ಸ್ಥಳೀಯತೆಗೆ ಅಪಾಯ ಇದೆ ಅನ್ನೋದಾದ್ರೆ ಈ ಸೂಕ್ಷ್ಮಗಳನ್ನ ನಾವು ಇನ್ನೂ ಹೆಚ್ಚು ವ್ಯಾಪಕವಾದ ವೇದಿಕೆಯಲ್ಲಿ ಇನ್ನೂ ವಿಸ್ತಾರವಾದ ಸಾಮಾಜಿಕ ನೆಲೆಯಲ್ಲಿಟ್ಟು ಈ ವಿಚಾರವನ್ನು – ಭಾಷೆ ಮತ್ತು ಸಮಾಜದ ವಿಚಾರಚವನ್ನು – ಅಧ್ಯಯನ ಮಾಡ್ಬೇಕಾಗುತ್ತದೆ, ಚರ್ಚಿಸಬೇಕಾಗುತ್ತೆ ಅನ್ಸಿದೆ.

ಆಮೇಲೆ ಇನ್ನೊಂದು ಪ್ರಶ್ನೆ ಬಂತು. ಸರಿಯಾದ ಕನ್ನಡ ಮತ್ತು ಶುದ್ಧವಾದ ಭಾಷೆ ಎನ್ನುವ ಪ್ರಶ್ನೆ ಬಂತು. ಡಾ. ಕೆ.ವಿ.ನಾರಾಯಣ ಅವರು ಅನೇಕ ಸಾರಿ ಇದನ್ನ ಕುರಿತು ಮಾತಾಡಿದ್ದನ್ನ ನಾನು ಕೇಳಿದ್ದೀನಿ. ಬೆಳಿಗ್ಗೆ ಅವರ ಭಾಷಣ ಕೇಳಿದಾಗ ನನಗೆ ಅನಿಸ್ತಾ ಇತ್ತು – ‘ಭಾಷೆ’ ಎನ್ನೋದನ್ನ

‘ಬಾಸೆ’ ಅಂದ್ರೆ ತಪ್ಪೇಕಾಗಬೇಕು? ಹೌದು, ನಾವು ಆಡುಮಾತಿನಲ್ಲಿ ಸ್ನೇಹಿತರ ಜೊತೆ, ಅಲ್ಲಿ ಇಲ್ಲಿ ಮಾತಾಡ್ತೇವಲ್ಲ, ಆ ಭಾಷೆಯಲ್ಲೆ ಈ ವೇದಿಕೆಯಲ್ಲಿ ಮಾತಾಡಕ್ಕೆ ಯಾಕೆ ಆಗಲ್ಲ? ಅದ್ನ ಒಪ್ಪೋಕ್ಕೊಳ್ಳಕಾಗುತ್ತಾ? ನಾವೆ ಅದನ್ನ ಯಾಕೆ ಮಾಡಲ್ಲ ? ಇಲ್ಲಿ ವೇದಿಕೆಗೆ ಬಂದ ತಕ್ಷಣ ಬಹಳ ಘನ ಗಂಭೀರವಾದಂತಹ ಒಂದು ವಿದ್ವತ್ ಭಾಷೆಯಲ್ಲಿಯೇ ಯಾಕೆ ಭಾಷಣ ಸುರು ಹಚ್ಕೊತೀವಿ? ಅಂದ್ರೆ ಆಡುಮಾತಿನಲ್ಲಿ ಬರವಣಿಗೆ ಮಾಡೋದೇನಿದೆ ಅದು ಸೃಜನಾತ್ಮಕವಾದುದರಲ್ಲಿ ಮಾತ್ರ ಆಡುಮಾತು ಇರುತ್ತೆ. ಶಾಸ್ತ್ರ ವಿಚಾರಗಳನ್ನು ವೈಚಾರಿಕ ವಿಚಾರಗಳನ್ನ ಮಾತ್ನಾಡುವಾಗ ಯಾಕೆ ಅದು ತಕ್ಕ ಗ್ರಾಂಥಿಕ ಭಾಷೆಗೆ ತಿರುಗುತ್ತೆ ಅಂದ್ರೆ ನಮ್ಮ ವಿದ್ವತ್‌ವಲಯಗಳು, ವಿಶ್ವವಿದ್ಯಾಲಯಗಳು ಯಾಕೆ ಇನ್ನೂ ಫ್ಯೂಡಲ್ ಆದಂತ ಭಾಷೆಯಲ್ಲಿಯೇ ಮಾತಾಡ್ತಿವೆ? ಇದು ತಪ್ಪಿರಬಹುದು. ಚರ್ಚೆ ಆಗ್ಲಿ ಅನ್ನೋ ಕಾರಣಕ್ಕೆ ಹೇಳ್ತಾ ಇದ್ದೀನಿ. ಒರಟು ಮಾತಿನಲ್ಲೆ ಹೇಳ್ದೆ ಅಂತ ಕಾಣುತ್ತೆ. ಬೇಸರ ಆದ್ರೆ ಕ್ಷಮಿಸಿ.

ಎರಡನೆಯದು ಶ, ಷ, ಸ ವಿಚಾರ. ‘ಹಾರ್ದಿಕ ಶುಭಾಶಯಗಳು’ ಅಂತ ಬೆಂಗಳೂರಿನ ತುಂಬ ರಾಜಕಾರಣಿಗಳು, ಪುಢಾರಿಗಳು ಸಂಕ್ರಾಂತಿ, ಗೌರಿ-ಗಣೇಶದ ಹಬ್ಬಗಳಲ್ಲಿ ದೊಡ್ಡ ದೊಡ್ಡ ಕಟಾಟ್‌ಗಳು, ಬ್ಯಾನರ್‌ಗಳನ್ನು ಕಟ್ಟಿಸಿರ್ತಾಕೆ. ಅದನ್ನ – ‘ಹಾರ್ಧಿಕ’, ‘ಶು-ಭಾಷೆ’ ಅನ್ನೋದನ್ನ ನೋಡಿದಾಗ ಕಿರಿಕಿರಯಾಗುತ್ತದೆ. ಯಾಕಿಂಗಾಗ್ತಾ ಇದೆ? ಈ ವೇದಿಕೆಯಲ್ಲಿ ‘ದಲಿತರು – ಭಾಷೆ’ ಅನ್ನೋದು ಕುರಿತು ಮಾತಾಡುವಾಗ Soft Corner ನಲ್ಲಿ ಮಾತಾಡೋದು, ಅಲ್ಲಿ ಹೊರಗಡೆ ಯಾರೋ ತಪ್ಪ ತಪ್ಪು ಕನ್ನಡದಲ್ಲಿ ಬರ್ದಿರೋದನ್ನ ನೋಡಿದಾಗ ಕಿರಿಕಿರಿ ಆಗೋದು ಯಾಕೆ? ಈ ತರದ ಗೊಂದಲಗಳು ನಮ್ಮಲ್ಲಿ ಕಡಿಮೆ ಆದ್ರೆ ಪರವಾಗಿಲ್ಲ ಅನ್ಸುತ್ತೆ. ಗ್ರಾಮ್ಯ ಭಾಷೆ ಅಥವಾ ಸಾಮಾನ್ಯರು ಆಡುವ ಭಾಷೆ ಅಥವಾ ದಲಿತರು ಆಡುವ ಭಾಷೆಯನ್ನ ಅಧ್ಯಯನ ಹಾಗೂ ಬೋಧನೆ ಮಾಡುವ ಸಂದರ್ಭದಲ್ಲಿ ಬಹಳಷ್ಟು ಅಧ್ಯಾಪಕ್ರು ಗೊಣಗುವುದನ್ನು ನಾನು ಕೇಳಿದ್ದೇನೆ. ‘ನಿಸರ್ಗ’ ಕಾದಂಬರಿ ಪಠ್ಯಪುಸ್ತಕವಾಗಿದ್ದಾಗ ‘ಏನ್ರಿ ಅದು ಅರ್ಥವೇ ಆಗೋದಿಲ್ಲ’ ಅಂತ ಬಹಳಷ್ಟು ಕನ್ನಡ ಮೇಷ್ಟ್ರುಗಳು ಹೇಳ್ತಾ ಇದ್ರು. ‘ಕುಸುಮ ಬಾಲೆ’ಯನ್ನೆ ಪಠ್ಯವಾಗಿಟ್ಟು ಬಿಟ್ರೆ ಇನ್ನು ಹೆಂಗಾಡ್ತಾರೆ ಅಂತ. ನಮ್ಮ ಚಂದ್ರಶೇಖರ ಪಾಟೀಲ್ರೆ ಹೇಳಿದ್ರಲ್ಲ, ಅದನ್ನ ಕನ್ನಡಕ್ಕೆ ಅನುವಾದಿಸ್ಬೇಕಾಗಿದೆ ಅಂತ. ಇಂತ ಅತಿರೇಕಗಳೂ ಇರ್ತಾವೆ. ಹೀಗಿರುವಾಗ ಕನ್ನಡದ ವಿಷಯವನ್ನ ತೀರ ಸರಳಗೊಳಿಸಿ, ‘ದಲಿತರು – ಭಾಷೆ’ ಅಂತ ಚರ್ಚೆ ಎಷ್ಟು ದೂರ ಸಾಗುತ್ತೆ. ಯಾಕಂದ್ರೆ ಇನ್ನೊಂದು ಕಡೆ

‘‌ನಿಸರ್ಗ’ ಕಾದಂಬರಿಯಂತಹ ದಲಿತರಲ್ಲದು ಏಕ ಭಾಷೆಯೂ ಒಂದು ಇದೆಯಲ್ಲ. ನಮ್ಮ ಗೊಣಗಾಟ ಇಷ್ಟೇ ಅಲ್ಲ, ಇಲ್ಲಿಗೆ ನಿಲ್ಲೋದಿಲ್ಲ. ಹೀಗಾಗಿ ಯಾವ್ಯಾವ ಸ್ಥರಗಳ ಭಾಷಿಕ ವ್ಯಾಪಾರಗಳು ಕೆಲ್ಸ ಮಾಡ್ತಾವೆ ಅನ್ನುವುದರ ಬಗ್ಗೆ ಇನ್ನೂ ಹೆಚ್ಚು ವ್ಯಾಪಕವಾಗಿ ಚರ್ಚೆ ಮಾಡ್ಬೇಕೇನೋ ಅನ್ಸುತ್ತೆ. ನಮಸ್ಕಾರ