ಶಿಕ್ಷಣ, ದಲಿತರು ಮತ್ತು ಭಾಷೆ ಎಂಬ ವಿಷಯಕ್ಕೆ ಸಂಬಂಧಿಸಿ ಇತ್ತೀಚಿನ ಕಾವೇರಿದ ಚರ್ಚೆ ಮತ್ತು ಹೋರಾಟಗಳು ಒಟ್ಟೊಟ್ಟಿಗೆ ನಡೆಯುತ್ತಿವೆ. ಈ ವಿಷಯದ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ನಿರಂತರವಾಗಿ ಆವರ್ತನೆಗೊಳ್ಳುತ್ತಿವೆ. ಅವುಗಳು ಇಂತಿವೆ.

೧. ದಲಿತರ ಸ್ವಂತಿಕೆಯ ಭಾಷೆ ಒಂದು. ತಾವು ಕಲಿಯಲೆತ್ನಿಸುತ್ತಿರುವ ಭಾಷೆ ಇನ್ನೊಂದು ಮತ್ತು ಅದು ಪರಕೀಯರದು. ಆದ್ದರಿಂದ ತಮ್ಮದಲ್ಲದ ಭಾಷೆಯ ಪಠ್ಯಕ್ರಮ ಮತ್ತು ಬೋಧನೆಗಳ ಎದುರು ಕಲಿಕೆಗೆ ಅನೇಕ ತೊಡಕುಗಳುಂಟಾಗಿದೆ. ಆದ್ದರಿಂದ ದಲಿತೀಯ ಭಾಷೆಯಲ್ಲಿಯೇ ಶಿಕ್ಷಣವನ್ನು ನೀಡಿದರೆ ಶೈಕ್ಷಣಿಕ ಪ್ರಗತಿ ಸುಗಮವಾಗುತ್ತದೆ.

೨. ದಲಿತರು ಸರ್ಕಾರಿ ಶಾಲೆಗಳಲ್ಲಿ ಮತ್ತು ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ. ಇವರಿಗೆ ಇಂಗ್ಲಿಶ್ ಪ್ರವೇಶಗೊಳ್ಳುವುದು ಐದನೆಯ ತರಗತಿಯಿಂದ ಮಾತ್ರ. ಬೆಳೆದ ವಯಸ್ಸಿನಲ್ಲಿ ಪ್ರವೇಶವಾಗುವ ಇಂಗ್ಲಿಶ್ ಮತ್ತು ಅದರ ಕಲಿಕೆ ಕಷ್ಟಸಾಧ್ಯವಾಗಿ ಇವತ್ತಿನ ವೃತ್ತಿಶಿ‌ಕ್ಷಣ ಮತ್ತು ಖಾಸಗಿ ಉದ್ಯಮಗಳಲ್ಲಿ ಔದ್ಯೋಗಿಕ ಸಮಸ್ಯೆಯನ್ನು ಇವರು ಎದುರಿಸುವಂತಾಗಿದೆ. ಆದ್ದರಿಂದ ಇವರ ಇಂಗ್ಲಿಶ್ ಕಲಿಕೆ ಪ್ರಾಥಮಿಕ ಹಂತದ ಒಂದನೆಯ ತರಗತಿಯಿಂದಲೇ ಆರಂಭಗೊಳ್ಳಬೇಕು. ಹಾಗಾದಾಗ ಮಾತೃಭಾಷಾ ಮಾಧ್ಯಮವನ್ನು ಗಟ್ಟಿಗೊಳಿಸಿದಂತಾಗುತ್ತಲ್ಲದೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರಮಾಣವನ್ನೂ ಹೆಚ್ಚಿಸಿದಂತಾಗುತ್ತದೆ.

ಮೇಲ್ಕಂಡ ಪ್ರಶ್ನೆಗಳನ್ನು ಎತ್ತುವವರು ಇಟ್ಟುಕೊಂಡಿರುವ ದಲಿತಪರ ಕಾಳಜಿ ಪ್ರಶ್ನಾತೀತ ಎಂಬುದು ತನ್ನ ಅನುಭವ ಮೂಲದ ದೃಢ ನಿಲುವು. ಹಾಗೆಯೇ ಇದಕ್ಕೆ ಪರ್ಯಾಯ ಚಿಂತನೆಗಳನ್ನು ಮಂಡಿಸುತ್ತಿರುವ ವಲಯದ ಕಾಳಜಿ ಕೂಡ. ಈ ಎರಡೂ ವಲಯಗಳು ದಲಿತಪರ ಮತ್ತು ಕನ್ನಡಪರವಾದ ಕೇವಲ ಭಾವನಾತ್ಮಕ ನೆಲೆಗಳನ್ನು ಬಿಟ್ಟು ಹೊರಬಂದಾಗ ಮಾತ್ರ ಅರ್ಥಪೂರ್ಣ ಚರ್ಚೆ ಸಾಧ್ಯವಾಗುತ್ತದೆ.

ದಲಿತರ ಭಾಷೆಯ ಸ್ವರೂಪ ವಿಶಿಷ್ಟವಾದುದು. ಅದಕ್ಕೆ ತನ್ನದೇ ಆದ ರಾಚನಿಕ ವಿನ್ಯಾಸವಿದೆ ಎಂದು ಹಲವು ವಿದ್ವಾಂಸರು ಹೇಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ಮೂರ್ನಾಲ್ಕು ಕನ್ನಡ ನಿಬಂಧಗಳೂ ರಚನೆಯಾಗಿವೆ. ಆದರೆ ನನ್ನ ಅನುಭವಕ್ಕೆ ಬಂದಂತೆ ಯಾವುದೇ ಜಾತಿಯಲ್ಲಿ ಕೆಲವು ಪಾರಿಭಾಷಿಕಗಳು ಪುನರಾವರ್ತನೆಗೊಳ್ಳುತ್ತಿರುತ್ತವೆ ಎಂಬುದು ನಿಜವಾದರೂ ಅಷ್ಟರಿಂದಲೇ ಅದೊಂದು ಸಾಮಾಜಿಕ ಉಪಭಾಷೆ ಎಂದು ಗುರುತಿಸುವುದು ಶಕ್ಯವೇ? ಎಂಬ ಪ್ರಶ್ನೆ. ಉದಾಹರಣೆಗೆ, ದಲಿತ ಸಂಸ್ಕೃತಿಯಲ್ಲಿ ಡಾ. ಸಿದ್ಧಲಿಂಗಯ್ಯ ಅವರು ಪ್ರಸ್ತಾಪಿಸಿದಂತಹ ‘ಕೋಣನ ಕರಿಕಾಲು’ ಅಂತಹ ಪಾರಿಭಾಷಿಕಗಳಲ್ಲಿ ಒಂದು, ಇಂತಹ ಪಾರಿಭಾಷಿಕಗಳು ಬೆರಳೆಣಿಕೆಯಷ್ಟು ಮಾತ್ರ ಇರಲು ಸಾಧ್ಯ ಎಂದು ಅನುಭವದಿಂದ ತಿಳಿದಿದ್ದೇನೆ. ಉಳಿದಂತೆ ಒಂದು ಗ್ರಾಮದಲ್ಲಿರುವ ಬ್ರಾಹ್ಮಣ, ಮುಸ್ಲಿಂ ಮುಂತಾದ ಕೆಲ ಕೋಮುಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲ ಜಾತಿಗಳ ಜನರೂ ಸಾಮಾನ್ಯ ಸ್ತರದಲ್ಲಿ ಒಂದೇ ಭಾಷೆಯನ್ನು ಬಳಸುತ್ತಾರೆ. ಅಂತಹ ಮೂರ್ನಾಲ್ಕು ಜಾತಿಗಳ ವಕ್ತೃಗಳನ್ನು ಅವರಾಡುವ ಭಾಷೆಯ ಮೂಲಕವೇ ಅವರವರ ಜಾತಿಯನ್ನು ಅಥವ ದಲಿತನೊಬ್ಬನ ಜಾತಿಯನ್ನು ಗುರುತಿಸುವುದು ಅಸಾಧ್ಯವೆಂದು ಭಾವಿಸಿದ್ದೇನೆ. ಆದ್ದರಿಂದ ಮುಸ್ಲಿಂ ಕನ್ನಡ, ಬ್ರಾಹ್ಮಣರ ಕನ್ನಡ, ಮಹಿಳೆಯರ ಕನ್ನಡ ಮುಂತಾದ ಕೆಲವು ಭಾಷಾ ಪ್ರಭೇದಗಳನ್ನು ಕೊಂಚ ನಿಚ್ಚಳವಾಗಿ ಕಾಣಬಹುದೇ ಹೊರತು ದಲಿತರ ಭಾಷೆಯನ್ನಲ್ಲ. ಹಾಗೊಮ್ಮೆ ಒಂದು ನಿರ್ದಿಷ್ಟ ಭಾಷೆಯನ್ನು ದಲಿತೀಯ ಭಾಷೆ ಎಂದು ಕರೆದರೆ ಅದು ತನಗೆ ಸಂವಾದಿಯಾಗಿರುವ ಸಮಾನ ಆರ್ಥಿಕ ಅಂತಸ್ತನ್ನು ಪಡೆದ ಇನ್ನೊಂದು ಜಾತಿಯ ಭಾಷೆಯೂ ಆಗಿರುತ್ತದೆ ಎಂಬುದನ್ನು ನೋಡಬೇಕು. ಅಲ್ಲದೆ ಇಂತಹ ದಲಿತೀಯ ಭಾಷೆ ಅಥವಾ ಕೆಳವರ್ಗದ ಅಥವಾ ಮೇಲ್ವರ್ಗದ ನಿರ್ದಿಷ್ಟ ಭಾಷಾ, ಪ್ರಭೇದವು ಪ್ರಾದೇಶಿಕವಾಗಿಯೂ ವ್ಯತ್ಯಸ್ತಗೊಳ್ಳುತ್ತದೆ ಎಂಬುದನ್ನು ಒಪ್ಪಬೇಕು. ಉದಾಹರಣೆಗೆ, ಉತ್ತರ ಕರ್ನಾಟಕದ ದಲಿತರ ಭಾಷೆಗೂ ಮೈಸೂರು ಕರ್ನಾಟಕದ ದಲಿತರ ಭಾಷೆಗೂ ಮಂಗಳೂರು ದಲಿತರ ಭಾಷೆಗೂ ಇರುವ ವ್ಯತ್ಯಾಸವನ್ನು ಪ್ರಾದೇಶಿಕ ಉಪಭಾಷೆಗಳ ಹಿನ್ನೆಲೆಯಲ್ಲಿ ಲಕ್ಷಿಸಬಹುದು. ಆದ್ದರಿಂದ ದಲಿತರಿಗೆ ತಮ್ಮದೇ ಆದ ಭಾಷೆಯೊಂದಿದೆ ಎಂಬುದು ಬಹುತೇಕ ಅವಾಸ್ತವವೆನ್ನಿಸುತ್ತದೆ.

ದಲಿತರು ತಾವು ಬಳಸುತ್ತಿರುವ ಮತ್ತು ಔಪಚಾರಿಕ ವಲಯದಲ್ಲಿ (ಶಿಕ್ಷಣವನ್ನೂ ಸೇರಿ)ಎದುರಿಸುತ್ತಿರುವ ಸಮಸ್ಯೆ ಮತ್ತು ಭಾಷಿಕ ಸ್ವರೂಪಗಳು ಭಿನ್ನವಾಗಿವೆ. ಆದ್ದರಿಂದ ಕಲಿಕೆ ಮತ್ತು ಸಂವಹನದಲ್ಲಿ ಅನೇಕ ತೊಡಕುಗಳುಂಟಾಗುತ್ತಿವೆ. ಅಲ್ಲದೇ ತಮ್ಮದಲ್ಲದ ಅನ್ಯರ ಭಾಷಾ ಹೇರಿಕೆ ತಮ್ಮ ಮೇಲಾಗುತ್ತಿದೆ ಎಂಬ ಅಳಲೂ ಇಲ್ಲಿ ಕಾಣುತ್ತಿದೆ.

ದಲಿತರು ಬಳಸುವ ಭಾಷೆಯನ್ನೇ ದಲಿತೀಯ ಭಾಷೆ ಎಂದು ಪ್ರಮೇಯಕ್ಕಾಗಿ ಇಲ್ಲಿ ಒಪ್ಪಿದ್ದೇನೆ ಎಂದು ಇಟ್ಟುಕೊಳ್ಳೋಣ. ಆಗ ತಮ್ಮ ಎದುರಿಗೆ ಕಾಣುವ ಭಾಷೆ ಅನ್ಯರದ್ದೆಂದು ಹೇಳುವ ಆ ಭಾಷೆ ಯಾರದು? ಎಂಬ ಪ್ರಶ್ನೆ ಉದಿಸುತ್ತದೆ. ಆ ಪ್ರಶ್ನೆಗೆ ಉತ್ತರ ಎಲ್ಲಿದೆ? ಇದೇ ಪ್ರಶ್ನೆಯನ್ನು ಕರ್ನಾಟಕದ, ಭಾರತದ ಎಲ್ಲ ಜಾತಿಗಳೂ ಎತ್ತಬಹುದಲ್ಲವೇ? ಹೀಗಿರುವಾಗ ಅವರ ಎದುಗಿರುವ ಪ್ರಮಾಣ ಭಾಷೆ ಯಾರದು ಎಂದು ಅದನ್ನು ಕೊರಳಿಗೆ ಹಾಕುವುದು? ನನ್ನ ಉತ್ತರವೆಂದರೆ : ಇಂತಹ ಪ್ರಮಾಣ ಭಾಷೆಯ ನಿರ್ಮಾಣದಲ್ಲಿ ಎಲ್ಲ ಜಾತಿಗಳ ಮೇಲ್ವರ್ಗಗಳು ಪಾಲುದಾರರಾಗಿವೆ ಎಂಬುದು.

ದಲಿತ ಸಂಸ್ಕೃತಿಯನ್ನೂ ಒಳಗೊಂಡು ಎಲ್ಲ ಜಾತಿಗಳ ಕೆಳವರ್ಗದ ಸಂಸ್ಕೃತಿಗಳು ದೇಸೀ ಸ್ವರೂಪದ ಭಾಷೆಯನ್ನು ಉಳಿಸಿಕೊಂಡಿವೆ. ಇದರ ಸೊಗಡು ಸೌಂದರ್ಯ ಬೇರೆಯೇ ಆಗಿದೆ. ಇದರ ಸೃಜನಶೀಲ ಸಾಧ್ಯತೆಳು ಸಾಹಿತ್ಯದ ಅನೇಕ ಪ್ರಕಾರಗಳನ್ನು ಈಗಾಗಲೇ ಶ್ರೀಮಂತಗೊಳಿಸಿವೆ. ಇದು ಸ್ವಾಗತಾರ್ಹವಾದ ವಿಚಾರವೇ ಸರಿ. ಹಾಗೆಂದು ಇದರ ಭಾಷಿಕ ಸ್ವರೂಪದಲ್ಲಿ ಔಪಚಾರಿಕ ವಲಯದ ಭಾಷಿಕ ವ್ಯಾಪಾರ ಇರಬೇಕೆಂದು ಪ್ರತಿಪಾದಿಸುವುದು ಚರ್ಚಾರ್ಹ ವಿಚಾರವೆನ್ನಿಸುತ್ತದೆ. ಅಲ್ಲದೆ ಇದನ್ನು ಪ್ರತಿಪಾದಿಸುವವರೇ ತಮ್ಮ ಜೀವನದಲ್ಲಿ ಇದನ್ನು ಸಾಕಾರಗೊಳಿಸಿಕೊಂಡಿರುವರೇ? ಎಂಬ ಪ್ರಶ್ನೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಸೃಜನೇತರ ಚಟುವಟಿಕೆಗಳಾದ ಶಿಕ್ಷಣ, ಪತ್ರಿಕೆ, ಆಡಳಿತ, ನ್ಯಾಯಾಂಗ ಮೊದಲಾದ ರಂಗಗಳಲ್ಲಿ ಕೆಳವರ್ಗದ ಬದ್ಧತೆಯನ್ನುಳಿಸಿಕೊಂಡೇ ಪ್ರಮಾಣಬದ್ಧ ಭಾಷೆಯನ್ನು ಬಳಸುವುದು (ಈಗಾಗಲೇ ಬಳಸುತ್ತಿರುವಂತೆ)ಸೂಕ್ತ ಮತ್ತು ಪರಿಣಾಮಕಾರಿ ಎನ್ನಿಸುತ್ತದೆ. ಕಾರಣ, ಇಲ್ಲಿ ಸಂವಹನ ಮತ್ತು ಪರಿಣಾಮ ಮುಖ್ಯವೇ ಹೊರತು ಸೃಜನಶೀಲತೆ ಅಲ್ಲ.

ದಲಿತ ಮತ್ತು ಹಿಂದುಳಿದವರೇ ಹೆಚ್ಚು ಓದುತ್ತಿರುವ ಮಾತೃಭಾಷಾ ಮಾಧ್ಯಮದ ಶಿಕ್ಷಣದಲ್ಲಿ ಪ್ರಾಥಮಿಕ ಒಂದನೆಯ ತರಗತಿಯಿಂದ ಇಂಗ್ಲಿಶ್ ಕಲಿಕೆ ಸಾಧ್ಯವಾಗಬೇಕು ಎಂಬುದು ಇತ್ತೀಚಿನ ದೊಡ್ಡ ವಾದ (ಈಗಾಗಲೇ ಪ್ರಸ್ತಾಪಿಸಿರುವಂತೆ). ಇವರು ಇದಕ್ಕೆ ಕೊಡುತ್ತಿರುವ ಕಾರಣ ಮೀಮಾಂಸೆಯೆಂದರೆ ಬೆಳೆದ ಮಕ್ಕಳಿಗಿಂತ ಸಣ್ಣ ಮಕ್ಕಳಿಗೆ ಭಾಷೆಯ ಗ್ರಹಣ ಶಕ್ತಿ ಹೆಚ್ಚು ಇರುತ್ತದೆ. ಆದ್ದರಿಂದ ಎರಡನೆಯಾದ ಮತ್ತು ಇವತ್ತು ಹೆಚ್ಚು ಮಾರುಕಟ್ಟೆಯ ಮೌಲ್ಯವನ್ನು ಪಡೆದಿರುವ ಇಂಗ್ಲಿಶಿನ ಕಲಿಕೆ ಒಂದನೆಯ ತರಗತಿಯಿಂದ ಸಾಧ್ಯವಾದರೆ ಅದು ಪರಿಣಾಮಕಾರಿಯಾಗಿರುತ್ತದೆ. ಆಗ ಇಂಗ್ಲಿಶ್ ಸಮಸ್ಯೆ ದೂರವಾಗಿ ಕಾಲ್‌ಸೆಂಟರ್ ಮೊದಲಾದ ನೂತನ ಖಾಸಗಿ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದರಿಂದ ದಲಿತರು ಮತ್ತು ಹಿಂದುಳಿದವರಿಗೆ ಲಾಭವುಂಟಾಗಿ, ಮೇಲ್ಜಾತಿಗಳ ಎದುರಿಗೆ ಸ್ಪರ್ಧೆ ಸುಲಭವಾಗುತ್ತದೆ ಎಂಬುದು. ಹೀಗೆ ಹೇಳುತ್ತಲೇ ತಾವು ಸಹ ಮಾತೃಭಾಷಾ ಮಾಧ್ಯಮದ ಪರವಾಗಿಯೇ ಇದ್ದೇವೆ ಎಂದು ಹೇಳುತ್ತಾರೆ.

ವಿಪರ್ಯಾಸವೆಂದರೆ ಇಂಗ್ಲಿಶ್ ಕಲಿಕೆಯ ವಿಚಾರದಲ್ಲಿ ಇವತ್ತು ಆಗುತ್ತಿರುವ ಹೋರಾಟ ಮಾತೃಭಾಷಾ ಮಾಧ್ಯಮದ ವಿಚಾರದಲ್ಲಿ ಎಂಬುದು. ಒಂದನೆಯ ತರಗತಿಯಿಂದ ಇಂಗ್ಲಿಶ್‌ನ್ನು ಬೋಧಿಸಬೇಕೆಂದು ವಾದಿಸುತ್ತಿರುವ ಬಹುತೇಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಕಳುಹಿಸುತ್ತಿರುವುದನ್ನು ಅನುಭವದಿಂದ ತಿಳಿಯಬೇಕು. ತಮ್ಮ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವಾಗ ಬಡವರ್ಗದ ಮಕ್ಕಳು ಕಡೆಯ ಪಕ್ಷ ಇಂಗ್ಲಿಶ್‌ನ್ನು ಒಂದು ಪತ್ರಿಕೆಯ ರೂಪದಲ್ಲಾದರೂ ಕಲಿಯಲಿ ಎಂಬುದು ಇವರ ಔದಾರ್ಯ! ಒಟ್ಟಾರೆ ಇಂಗ್ಲಿಶ್ ಕಲಿಕೆಯ ವಿಚಾರದಲ್ಲಿ ಹೋರಾಟಗಳು ನಡೆದಿವೆಯೇ ಹೊರತು ಮಾತೃಭಾಷಾ ಮಾಧ್ಯಮ ಮುಖ್ಯವಾದ ವಿಚಾರದಲ್ಲಿ ಅಲ್ಲ ಎಂಬುದು ಕನ್ನಡ ಭಾಷೆಯ ಆಧಾರದ ಮೇಲೆ ಏಕೀಕೃತಗೊಂಡ ಕರ್ನಾಟಕದ ದೊಡ್ಡ ವ್ಯಂಗ್ಯ.

ಭಾರತದ ಸ್ವಾತಂತ್ಯ್ರಾನಂತರ, ಕರ್ನಾಟಕ ಏಕೀಕರಣದ ಅನಂತರ ಇಂಗ್ಲಿಶ್ ಮಾಧ್ಯಮದ ಶಾಲೆಗಳ ಸಂಖ್ಯೆ ನಿರಂತರವಾಗಿ ವಿಕಾಸಗತಿಯಲ್ಲಿ ಸಾಗಿದೆ. ರಾಜ್ಯೋತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಜನತೆ ಮತ್ತು ಸರ್ಕಾರ ಇದಕ್ಕೆ ಎಂದೂ ಪ್ರತಿರೋಧವನ್ನು ಒಡ್ಡದಿರುವುದು ಸ್ವಾತಂತ್ಯ್ರಾನಂತರದ ಬೌದ್ಧಿಕ ಇಂಗ್ಲಿಶ್ ಗುಲಾಮಗಿರಿಯ ಸಂಕೇತವೆನ್ನಿಸಿದೆ. ಹೊಸ ಭಾರತವು ಪರಿಸರದ ಭಾಷೆಗಳಿಂದಲೇ ಬೌದ್ಧಿಕ ಮತ್ತು ಭೌತಿಕ ಪ್ರಗತಿಯನ್ನು ಸಾಧಿಸಿಕೊಂಡ ಜಪಾನ್, ಜರ್ಮನ್, ಚೈನಾ, ರಷ್ಯಾ ಮುಂತಾದ ರಾಷ್ಟ್ರಗಳನ್ನು ಮಾದರಿಯನ್ನಾಗಿ ಇಟ್ಟುಕೊಳ್ಳಲಿಲ್ಲ. ಕಾರಣ, ತನ್ನ ಇತಿಹಾಸವೇ ಬೇರೆ. ಇವತ್ತಾದರೂ ಅದು ಬೇರೆ ಆಗಬೇಕು ಎಂಬುದು ಅನೇಕರ ಅಪೇಕ್ಷೆ.

ಒಂದನೆಯ ತರಗತಿಯಿಂದಲೇ ಇಂಗ್ಲಿಶ್ ಬೇಡ. ಯಾಕೆಂದರೆ ಒಂದನೆಯ ತರಗತಿಯಲ್ಲಿ ಕನ್ನಡ ಪತ್ರಿಕೆಯನ್ನಷ್ಟೇ ಕಲಿಸಿದರೆ ಅದು ಕನ್ನಡ ಮಾಧ್ಯಮ. ಇದರೊಂದಿಗೆ ಇಂಗ್ಲಿಶ್‌ನ್ನು ಎರಡನೆಯ ಮತ್ತು ಅಂತಿಮವಾದ ಪತ್ರಿಕೆಯನ್ನಾಗಿ ಸೇರಿಸಿದರೆ ಅದು ಯಾವ ಮಾಧ್ಯಮವಾಗುತ್ತದೆ? ಇಲ್ಲಿ ಎರಡು ಭಾಷೆಗಳು ಒಟ್ಟಿಗೆ ಸೇರಿ ಅದು ಚೌಚೌ ಮಾಧ್ಯಮ ಎನ್ನಿಸುವುದಿಲ್ಲವೇ? ಮಗು ಏಕಕಾಲಕ್ಕೆ ಎರಡು ಭಾಷೆಗಳ ಅಕ್ಷರ ಮತ್ತು ಪದ ಜ್ಞಾನವನ್ನು ಪಡೆಯುವುದು ದುಸ್ತರವೆನ್ನಿಸುವುದಿಲ್ಲವೆ? ಆದ್ದರಿಂದ ಪ್ರಾಥಮಿಕ ಹಂತದ ಮೊದಲ ಎರಡು ತರಗತಿಗಳಲ್ಲಿ ಮಾತೃಭಾಷೆಯ ಅರಿವು ಪರಿಸರದ ಭಾಷೆಯೊಂದರ ಕಲಿಕೆ ಮಾತ್ರ ಸಮರ್ಥವಾಗಿ ಸಾಧ್ಯ ಎಂಬುದು ನನ್ನ ಗ್ರಹಿಕೆ. ಎರಡು ವರ್ಷಗಳಾದ ನಂತರ, ಅಂದರೆ ಮೂರನೆಯ ತರಗತಿಯಿಂದ ಎರಡನೆಯ ಭಾಷೆಯನ್ನು ಪ್ರವೇಶಗೊಳಿಸಿದರೆ ಕಲಿಯುವ ಮಗುವಿಗೆ ಹೆಚ್ಚಿನ ಹೊರೆ ಉಂಟಾಗುವುದಿಲ್ಲ ಎಂದು ಭಾವಿಸಿದ್ದೇನೆ. ಆದರೆ ಪರಿಸರದ ಭಾಷೆಯ ಕಲಿಕೆ ಮತ್ತು ಬೋಧನೆಯ ವಿಧಾನಕ್ಕೂ ಅನ್ಯಮೂಲದ ಮತ್ತು ವಿಭಿನ್ನವಾದ ರಾಚನಿಕ ಸ್ವರೂಪವನ್ನು ಹೊಂದಿರುವ ಎರಡನೆಯ ಭಾಷೆಯ ಕಲಿಕೆ ಮತ್ತು ಬೋಧನೆಗೂ ಅಜಗಜಾಂತರ ವ್ಯತ್ಯಾಸವಿದೆ. ಇದನ್ನು ತಿಳಿದ ಮತ್ತು ನುರಿತ ಅಧ್ಯಾಪಕ ಮಾತ್ರ ಇಂತಹ ಕಲಿಕೆಯನ್ನು ಮಕ್ಕಳಿಗೆ ಸುಲಭ ಸಾಧ್ಯವಾಗಿಸುತ್ತಾನೆ. ಅಂತಹ ಅಧ್ಯಾಪಕನಿಗೆ ಪೂರಕ ಕಲಿಕಾ ಸಾಮಗ್ರಿ, ನಿಯಮಿತ ಸಂಖ್ಯೆಯ ವಿದ್ಯಾರ್ಥಿಗಳು ಮುಂತಾದ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು. ಇಲ್ಲವಾದಲ್ಲಿ ಮೊದಲನೆಯ ತರಗತಿಯಿಂದ ಆಗುವ ಇಂಗ್ಲಿಶ್ ಕಲಿಕೆ ನಿಷ್ಫಲವಾಗುತ್ತದೆ. ಒಂದನೆಯ ತರಗತಿಯಿಂದ ಕನ್ನಡ ಎಂ.ಎ.ವರೆಗೂ ಕಲಿತವರು ಮಾಡುವ ಕಾಗುಣಿತ ದೋಷಗಳನ್ನು (ನಗರದ ಹಿನ್ನೆಲೆಯಲ್ಲಿ ಬಂದ ಮೇಲ್ವರ್ಗದ ವಿದ್ಯಾರ್ಥಿಗಳ) ಮತ್ತು ಕನ್ನಡ ಮಾಧ್ಯಮದ ಐದನೆಯ ತರಗತಿಯಿಂದ ಇಂಗ್ಲಿಶ್‌ನ್ನು ಕಲಿತವರು ಇಂಗ್ಲಿಶ್ ಪ್ರಾಧ್ಯಾಪಕರಾಗಿವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು.

ದಲಿತರು ಮಾತ್ರ ಕನ್ನಡ ಮಾಧ್ಯಮ ಮತ್ತು ಸರ್ಕಾರಿ ವಿದ್ಯಾರ್ಥಿಗಳಲ್ಲ ! ಪ್ರಸಕ್ತ ವಿಚಾರದ ಪರಿಶೀಲನೆಗಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ತಲಾ ಎರಡು ಶಾಲೆಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದೇನೆ. ಈ ಎರಡೆರಡು ಶಾಲೆಗಳಲ್ಲಿ ತಲಾ ಒಂದು ಸರ್ಕಾರಿ ಮತ್ತು ಖಾಸಗಿ ಶಾಲೆಯಿದೆ. ಸರ್ಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮ; ಅಂತೆಯೇ ಖಾಸಗಿ ಶಾಲೆ ಮತ್ತು ಇಂಗ್ಲಿಶ್ ಮಾಧ್ಯಮ ಇಲ್ಲಿ ಸಮೀಕರಣಗೊಂಡಿವೆ. ಎರಡೂ ಮಾದರಿ ಶಾಲೆಗಳಲ್ಲಿ ಒಂದರಿಂದ ಎಂಟನೆಯ ತರಗತಿಯವರೆಗಿನ ವಿದ್ಯಾರ್ಥಿಗಳನ್ನು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಕನ್ನಡ ಮಾಧ್ಯಮದ ನಗರ ಮತ್ತು ಗ್ರಾಮೀಣ ಶಾಲೆಗಳಲ್ಲಿ ದಲಿತರ ಸರಾಸರಿ ಪ್ರಮಾಣ ಹೆಚ್ಚಾಗಿದ್ದರೆ ಖಾಸಗಿ ಮತ್ತು ಇಂಗ್ಲಿಶ್ ಮಾಧ್ಯಮದ ಶಾಲೆಗಳಲ್ಲಿ ಇವರ ಸರಾಸರಿ ಪ್ರಮಾಣ ಕಡಿಮೆಯಿದೆ. ಇದಕ್ಕೆ ವಿರುದ್ಧವಾದ ಚಿತ್ರ ದಲಿತೇತರದ್ದು. ಉದಾಹರಣೆಗೆ ಭಾರತದಲ್ಲಿ ಶೇಕಡ ೨೫ರಷ್ಟಿರುವ ದಲಿತರು ನಗರದ ಸರ್ಕಾರಿ ಶಾಲೆಯಲ್ಲಿ ಶೇ. ೫೧ರಷ್ಟಿದ್ದರೆ, ಅದೇ ಶಾಲೆಯ ಪಕ್ಕದಲ್ಲಿರುವ ಖಾಸಗಿ ಶಾಲೆಯಲ್ಲಿ ಶೇ. ೨೫ರಷ್ಟಿದ್ದಾರೆ. ಅಂತೆಯೇ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಇವರ ಪ್ರಮಾಣ ಶೇ.೬೪ರಷ್ಟಿದ್ದರೆ, ಖಾಸಗಿ ಶಾಲೆಯಲ್ಲಿ ಶೇ.೨೧ರಷ್ಟಿದೆ. ಇದರಿಂದ ತಿಳಿಯುವುದೇನೆಂದರೆ ಗ್ರಾಮೀಣ ಪ್ರದೇಶದ ದಲಿತರಿಗಿಂತ ನಗರ ಪ್ರದೇಶದ ದಲಿತರು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಮತ್ತು ಇಂಗ್ಲಿಶ್ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂಬುದು. ಅಂತೆಯೇ ಅದು ನಗರ ಇರಲಿ, ಗ್ರಾಮ ಇರಲಿ-ಎಲ್ಲೆಡೆಯೂ ದಲಿತರ ಸರಾಸರಿ ಪ್ರಮಾಣ ಸರ್ಕಾರಿ ಮತ್ತು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಹಾಗೂ ದಲಿತೇತರರ ಸರಾಸರಿ ಪ್ರಮಾಣ ಖಾಸಗಿ ಮತ್ತು ಇಂಗ್ಲಿಶ್ ಮಾಧ್ಯಮದ ಶಾಲೆಗಳಲ್ಲಿ ಹೆಚ್ಚು ಎಂಬುದು.

ಇಲ್ಲಿ ದಲಿತರು ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವುದಕ್ಕೆ ಕನ್ನಡಾಭಿಮಾನ ಕಾರಣವೆಂದಾಗಲೀ ದಲಿತೇತರರು ಹೆಚ್ಚು ಪ್ರಮಾಣದಲ್ಲಿ ಇಂಗ್ಲಿಶ್ ಮಾಧ್ಯಮದಲ್ಲಿ ಕಲಿಯುತ್ತಿರುವುದಕ್ಕೆ ಅವರಲ್ಲಿರುವ ಕನ್ನಡದ ಬಗೆಗಿನ ನಿರಭಿಮಾನ ಕಾರಣ ಎಂದಾಗಲೀ ನಾನು ತಿಳಿಯುವುದಿಲ್ಲ. ಇವರ ಈ ವರ್ತನೆಗಳಿಗೆ ಮುಖ್ಯ ಕಾರಣ ಆರ್ಥಿಕ ಬೆನ್ನೆಲುಬು. ಇದು ಸದೃಢವಾಗಿದ್ದರೆ ಇಂಗ್ಲಿಶ್ ಶಾಲೆಗೆ, ದುರ್ಬಲವಾಗಿದ್ದರೆ ಕನ್ನಡ ಶಾಲೆ – ಇದು ಎಲ್ಲಿಂದೆಲ್ಲಿಗೂ ವಾಸ್ತವ.

ಹೀಗೆ ದಲಿತರ ಸಾಮಾಜಿಕ ಹಿಂದುಳಿದಿರುವಿಕೆಯೊಂದಿಗೆ ಆರ್ಥಿಕ ಹಿಂದುಳಿದಿರುವಿಕೆ ಸಹ ಸಮೀಕರಣಗೊಂಡಿರುವುದನ್ನು ಇಲ್ಲಿ ಗಮನಿಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಬಹು ಪ್ರಮಾಣದ ದಲಿತರೂ ಇಂಗ್ಲಿಶ್ ಮಾಧ್ಯಮದ ವಿದ್ಯಾರ್ಥಿಗಳಾಗಬೇಕೆಂದು ನಾನು ಬಯಸುವುದಿಲ್ಲ. ಬದಲಿಗೆ ಖಾಸಗಿ ಶಾಲೆಗಳ ಬಹು ಪ್ರಮಾಣ ದಲಿತೇತರರು ಮಾತೃಭಾಷಾ ಮಾಧ್ಯಮದ ವಿದ್ಯಾರ್ಥಿಗಳಾಗಬೇಕೆಂದು ಬಯಸುತ್ತೇನೆ.

ಇಂಗ್ಲಿಶ್ ಇಲ್ಲಿ ಯಾರ ಮಾತೃಭಾಷೆಯೂ ಅಲ್ಲ. ಅಂತಹ ಭಾಷೆಯಲ್ಲಿನ ಕಲಿಕೆ ನಮ್ಮ ಪರಿಸರವನ್ನು, ನಮ್ಮ ದೇಶದ ಸಾಮಾಜಿಕ ಚರಿತ್ರೆಯನ್ನು ತನ್ನ ಮೂಲ ಸಂವೇದನೆಗಳೊಂದಿಗೆ ತಿಳಿಸುವುದಿಲ್ಲ. ಅದನ್ನು ತಿಳಿಯದ ಹೊರತು ಸಮಕಾಲೀನ ಸಾಮಾಜಿಕ ವಿಮೋಚನೆಯ ಆಶಯಗಳು ಮಾರು ದೂರವೇ ಸರಿ. ಹಾಗಾಗಿ ಪಂಪನ ಕನ್ನಡ, ಬಸವಣ್ಣನ ಕನ್ನಡ ನಮಗೆ ಮಾದರಿಯಾಗಿ ನಮ್ಮ ಭಾಷೆಗಿರುವ ಸೃಜನಶೀಲತೆಯ ಸಾಧ್ಯತೆಗಳನ್ನು ಶೋಧಿಸಿಕೊಳ್ಳುವಂತಾಗಬೇಕು. ಸಾಮಾಜಿಕ ವಿಮೋಚನೆಗೆ ದೇವನೂರರಲ್ಲಿ ಸಾಧ್ಯವಾದಂತೆ ಭಾಷೆಯೂ ಒಂದು ವಿಮೋಚನೆಯ ಅಸ್ತ್ರವಾಗಬೇಕು. ಈ ನಿಟ್ಟಿನಲ್ಲಿ ದಲಿತರ ವಿಮೋಚನೆ ಮತ್ತು ಭಾರತೀಯರೆಲ್ಲರ ಸಾಮಾಜಿಕ ಸಮಾನತೆ ಸಾಧ್ಯಗೊಳ್ಳುವ ಹೆದ್ದಾರಿಯಲ್ಲ ಭಾಷೆ ಮತ್ತು ಶಿಕ್ಷಣದ ಕಿರುದಾರಿಗಳು ಕೂಡಬೇಕೆಂದು ಆಶಿಸುತ್ತೇನೆ.

ಕೋಷ್ಠಕ ೧ – ಬೆಂಗಳೂರು ನಗರ ಸರ್ಕಾರಿ ಶಾಲೆ : ಕನ್ನಡ ಮಾಧ್ಯಮ ತರಗತಿ : ಒಂದರಿಂದ ಎರಡು
ಸರ್ಕಾರಿ ಮಾದರಿ ಪಾಠಶಾಲೆ, ಕಾವಲು ಬೈರಸಂದ್ರ

ದಲಿತರು ದಲಿತೇತರರು ಒಟ್ಟುಸಂಖ್ಯೆ
ಪ್ರಮಾಣ ಸರಾಸರಿ ಪ್ರಮಾಣ ಸರಾಸರಿ
೨೬೧ ೫೧% ೨೫೫ ೪೯% ೫೧೬

 

ಕೋಷ್ಠಕ ೨ – ಬೆಂಗಳೂರು ನಗರ
ಖಾಸಗಿ ಶಾಲೆ : ಆಂಗ್ಲ ಮಾಧ್ಯಮ
ಕರ್ನಾಟಕ ಬಿಳಿಗುಲಾಬಿ ಪಾಠಶಾಲೆ, ಕಾವಲು ಬೈರಸಂದ್ರ

ದಲಿತರು ದಲಿತೇತರರು ಒಟ್ಟು ಸಂಖ್ಯೆ
ಪ್ರಮಾಣ ಸರಾಸರಿ ಪ್ರಮಾಣ ಸರಾಸರಿ
೮೭ ೨೫% ೨೬೯ ೭೫೫ ೩೫೬

 

ಕೋಷ್ಠಕ – ೩
ಬೆಂಗಳೂರು ಗ್ರಾಮಾಂತರ
ಸರ್ಕಾರಿ ಶಾಲೆ : ಕನ್ನಡ ಮಾಧ್ಯಮ
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಸೊಣಪನಹಳ್ಳಿ

ದಲಿತರು ದಲಿತೇತರರು  
ಪ್ರಮಾಣ ಸರಾಸರಿ ಪ್ರಮಾಣ ಸರಾಸರಿ ಒಟ್ಟು ಸಂಖ್ಯೆ
೨೦೭ ೬೪% ೧೧೭ ೩೬% ೩೨೪

 

ಕೋಷ್ಠಕ – ೪
ಬೆಂಗಳೂರು ಗ್ರಾಮಾಂತರ
ಖಾಸಗಿ ಶಾಲೆ : ಆಂಗ್ಲ ಮಾಧ್ಯಮ
ಆರ್ಕ್ಸ್‌‌ಫಡ್ ಶಾಲೆ, ಸೊಣಪನಹಳ್ಳಿ

ದಲಿತರು ದಲಿತೇತರರು  
ಪ್ರಮಾಣ ಸರಾಸರಿ ಪ್ರಮಾಣ ಸರಾಸರಿ ಒಟ್ಟುಸಂಖ್ಯೆ
೭೯ ೨೧% ೨೯೦ ೭೯% ೩೬೯

ಟಿಪ್ಪಣಿ : ಭಾರತದಲ್ಲಿ ದಲಿತರ ಪ್ರಮಾಣ ಸುಮಾರು ಶೇ. ೨೫ರಷ್ಟಿದೆ. ಆದರೆ ಇವರ ಪ್ರಮಾಣ ಬೆಂಗಳೂರು ನಗರದ ಸರ್ಕಾರಿ ಶಾಲೆ, ಕನ್ನಡ ಮಾಧ್ಯಮದಲ್ಲಿ ಶೇ.೫೧ರಷ್ಟಿದ್ದರೆ, ಅದೇ ಪ್ರದೇಶದ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಯಲ್ಲಿ ಶೇ.೨೫ರಷ್ಟಿದೆ. ಅಂತೆಯೇ ಬೆಂಗಳೂರು ಗ್ರಾಮಾಂತರದ ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಯಲ್ಲಿ ಶೇ.೬೪ರಷ್ಟಿದ್ದರೆ, ಅದೇ ಪ್ರದೇಶದ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಯಲ್ಲಿ ಶೇ.೬೪ರಷ್ಟಿದ್ದರೆ, ಅದೇ ಪ್ರದೇಶದ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಯಲ್ಲಿ ಇವರ ಪ್ರಮಾಣ ಶೇ.೨೧ರಷ್ಟಿದೆ. ಇದರ ಸಾರವೆಂದರೆ ನಗರ ಮತ್ತು ಗ್ರಾಮಾಂತರ ಎರಡೂ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಮತ್ತು ಸರ್ಕಾರಿ ಶಾಲೆಯಲ್ಲಿ ದಲಿತರ ಸರಾಸರಿ ಪ್ರಮಾಣ ಅಧಿಕವಾಗಿದ್ದರೆ, ದಲಿತೇತರ ಪ್ರಮಾಣ ಇದೇ ಶಾಲೆಗಳಲ್ಲಿ ಸರಾಸರಿ ಪ್ರಮಾಣ ಕಡಿಮೆ ಇದೆ. ದಲಿತೇತರರ ಪ್ರಮಾಣವು ಅವರ ಸರಾಸರಿ ಪ್ರಮಾಣಕ್ಕಿಂತ ಅಧಿಕವಾಗಿ ಖಾಸಗಿ ಶಾಲೆಯಲ್ಲಿರುವುದು, ಅಂತೆಯೇ ಈ ಸರಾಸರಿಗಿಂತ ಕಡಿಮೆ ಪ್ರಮಾಣ ಸರ್ಕಾರಿ ಶಾಲೆಯಲ್ಲಿರುವುದು ಇದರ ಆರ್ಥಿಕ ಮುಂದುವರಿಕೆಯನ್ನು ತೋರುತ್ತದೆ. ಈ ಹಿನ್ನೆಲೆಯಲ್ಲಿ ದಲಿತರ ಸಾಮಾಜಿಕ ಹಿಂದುಳಿದಿರುವಿಕೆಯು ಆರ್ಥಿಕ ಹಿಂದುಳಿದಿರುವಿಕೆಯೂ ಮತ್ತು ದಲಿತೇತರರ ಸಾಮಾಜಿಕ ಮುಂದುವರಿಕೆಯು ಆರ್ಥಿಕ ಮುಂದುವರಿಕೆಯೂ ಆಗಿರುವುದು ಇಲ್ಲಿ ಸೂಚಿತವಾಗುತ್ತದೆ. ಆದರೂ ಮಾತೃಭಾಷಾ ಮಾಧ್ಯಮವೇ ವೈಜ್ಞಾನಿಕ ವಿಚಾರವಾದುದರಿಂದ ದಲಿತೇತರರು ದಲಿತರಿಗೆ ಮಾದರಿಯಾಗಬೇಕಿಲ್ಲ. ಇವರ ಶಿಕ್ಷಣ ಸ್ವರೂಪವೇ ದಲಿತೇತರರಿಗೆ ಮಾದರಿಯಾಗಬೇಕು.