ಒಂದು ಭಾಷೆಯ ಸಂವಹನದ ಬಗ್ಗೆ ಇಂಡಿಯಾ ದೇಶದ ಸಾಮಾಜಿಕ ಸಂದರ್ಭದಲ್ಲಿ ಮಾತಾಡ್ತಾ ಇದ್ದೇವಿ ಅಂದರೆ ಚರಿತ್ರೆಯ ಬಹಳ ದೊಡ್ಡ ದುರಂತದ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ ನಾವು ತಿಳೀಬೇಕು. ಅದು ಚರಿತ್ರೆಯ ಬಹಳ ದೊಡ್ಡ ದುರಂತ. ಅದು ಅಂಬೇಡ್ಕರ್ ಅವರಿಗೆ ಗೊತ್ತಿತ್ತು, ಲೋಹಿಯಾ ಅವರಿಗೆ ಗೊತ್ತಿತ್ತು, ಗಾಂಧೀಜಿಯವರಿಗೆ ಗೊತ್ತಿತ್ತು. ಅದೇನಂತ ಹೇಳಿದ್ರೆ ನಮ್ಮ ಸಾಮಾಜಿಕ ವ್ಯವಸ್ಥೆಯೊಳಗಡೆ ಬಹಳ ದೊಡ್ಡ ಅನುಭವ ಇರುವ ಬಹುಸಂಖ್ಯಾತರಿಗೆ ಮಾತು ಇರ್ಲಿಲ್ಲ, ಭಾಷೆ ಇರ್ಲಿಲ್ಲ. ಅಥವಾ ಬೇರೆ ಮಾತ್ನಲ್ಲಿ ಹೇಳ್ಬೇಕು ಅಂದ್ರೆ ಅನುಭವ ಇದ್ದವ್ರಿಗೆ ಅಭಿವ್ಯಕ್ತಿ ಇರ್ಲಿಲ್ಲ. ಆದ್ರೆ ಅಭಿವ್ಯಕ್ತಿ ಇದ್ದವ್ರಿಗೆ ಈ ದೇಶದ ಈ ಮಣ್ಣಿನ ಅನುಭವ ಇರ್ಲಿಲ್ಲ. ಇದು ಬಹಳ ಮುಖ್ಯವಾದುದು ಅಂತ ನನಗನಿಸುತ್ತೆ. ಆದ್ದರಿಂದ ಇವತ್ತು ಭಾಷೆಯ ಬಗ್ಗೆ ಸಂವಹನದ ಬಗ್ಗೆ ಮಾತ್ನಾಡ್ತೀವಿ ಅಂದ್ರೆ ಬಹಳ ನಿರಾಳವಾಗಿ ಮಾತ್ನಾಡುವ ಪ್ರಶ್ನೆ ಇರಲ್ಲ. ಬಹಳ ಸುದೀರ್ಘವಾಗಿ ಭಾಷೆ ಬಗ್ಗೆ ವಾದವನ್ನು ಮಂಡಿಸುವ ಸಂದರ್ಭ ಇರಲ್ಲ.

ನಾನು ಅಸ್ಪೃಶ್ಯನಾಗಿ ಹುಟ್ಟಿದ್ದೀನಿ, ದಲಿತರು, ಭಾಷೆ ಮತ್ತು ಸಮಾಜದ ಬಗ್ಗೆ ನಿರಾಳವಾಗಿ ಮಾತಾಡ್ಬೇಕು, ಮಾತಾಡ್ಬಹುದು ಅಂತ ನನಗನಿಸ್ತಾ ಇಲ್ಲ. ಯಾಕಂದ್ರೆ ನನನ್ನೇ ನಾನು ನೋಡ್ಕೊಳ್ಳೋವಾಗ ನನಗೆ ಮೂರು ಭಾಷೆ ಇದೆ ಅಂತ ಅನಿಸುತ್ತೆ. ಒಂದು ಬಾಲ್ಯದಲ್ಲಿ ನಮ್ಮ ಅಪ್ಪ, ಅವ್ವನ ಜೊತೆ ನನ್ನ ಗ್ರಾಮದಲ್ಲಿ ನಾನು ಕಲಿತ ಭಾಷೆ. ಆಮೇಲೆ ನಾನು ಶಾಲೆಯಲ್ಲಿ ಪಾಠದ ಅಧ್ಯಯನದ ಮೂಲಕ ಕಲ್ತ ಭಾಷೆ. ಇವೆರಡೂ ಆದ ನಂತರ ಲೋಕ ವ್ಯವಹಾರಕ್ಕಾಗಿ ನಾನು ಕಲ್ತುಕೊಂಡ ಭಾಷೆ ಒಂದಿದೆ. ಆದ್ರಿಂದ ಒಬ್ಬ ಅಸ್ಪೃಶ್ಯನಿಗೆ ಇವತ್ತು ತನ್ನ ಭಾಷೆ ಯಾವುದು ಅಂತ ತಿಳ್ಕೊಳ್ಳೋದರಲ್ಲಿನೇ ಬಹಳ ದೊಡ್ಡ ಸಂಕಟ ಇರೋದು. ನಾನು ನನ್ನ ಅಪ್ಪ, ಅವ್ವ, ನನ್ನ ಕುಟುಂಬದೊಂದಿಗೆ ನನ್ನ ಬಾಲ್ಯದಲ್ಲಿ ನನ್ನ ಗ್ರಾಮದಲ್ಲಿ ಕಲ್ತ ಭಾಷೆ ಇದೆಯಲ್ಲ ಅದನ್ನ ಕಳ್ಕೊಳ್ಕೋದಕ್ಕೆ ನಾನು ಇಷ್ಟ ಪಡಲ್ಲ. ಆದ್ರೆ ಬಾಲ್ಯದಲ್ಲಿ ಈ ಸಾಮಾಜಿಕ ವ್ಯವಸ್ಥೆಯ ವಲಯದೊಳಗಡೆ ಲಭ್ಯವಾದ ಮೌಲ್ಯಗಳಿದಾವಲ್ಲ ಅವನ್ನ ಕಳ್‌ಕೊಳಕ್ಕೆ ಇಷ್ಟಪಡ್ತೀನಿ. ಅಂದ್ರೆ ಅಸ್ಪೃಶ್ಯತೆ ಆಚರಣೆ ನನ್ನ ಮೇಲೆ ಮಾಡಿದ್ರಲ್ಲ ಆ ಮೌಲ್ಯವನ್ನ ಕಳ್ಕೊಳಕ್ಕೆ ಇಷ್ಟಪಡ್ತೀನಿ. ಈ ವ್ಯವಸ್ಥೆಯಿಂದ ನಾನು ಕೀಳರಿಮೆಯನ್ನ ಅನುಭವಿಸಿದ್ನಲ್ಲ ಅವನ್ನ ಕಳ್ಳೊಳಕ್ಕೆ ಇಷ್ಟಪಡ್ತೀನಿ. ಇದರಿಂದ ಒಂದು ಬದಲಾವಣೆಯನ್ನ ಬಯಸ್ತೀನಿ. ಆದ್ರೆ ನಾನು ಬಾಲ್ಯದಲ್ಲಿ ಕಲ್ತ ಭಾಷೆ ಇದಿಯಲ್ಲ ಅದನ್ನ ಕಳ್ಕೊಳಕ್ಕೆ ಖಂಡಿತವಾಗಿಯೂ ಇಷ್ಟಪಡ್ತಾ ಇಲ್ಲ. ಅಸ್ಪೃಶ್ಯನಿಗೆ ನಿಜವಾಗಿಯೂ ಇಂತಹ ಒಂದು ಸವಾಲು ಇದೆ ಅಂದ್ಕೊಂಡಿದ್ದೀನಿ. ಯಾಕೆಂತೇಳ್ದ್ರೆ ಆ ಭಾಷೆ. ನನ್ನದಲ್ಲದೆ ಅನ್ಯರದ್ದಲ್ಲ. ಆ ಭಾಷೆಯಲ್ಲಿ ಮಾತ್ರವೇ ಸಹಜವಾಗಿ ನನ್ನ ಬಾಲ್ಯದ ಅನುಭವವನ್ನ ಕಟ್ಟಬಹುದು. ನಾನು ಸ್ಕೂಲ್‌ನಲ್ಲಿ ಕಲ್ತ ಭಾಷೆಯಲ್ಲಿ ಸಹಜವಾಗಿ ನನ್ನ ಅನುಭವವನ್ನ ಕಟ್ಟಕ್ಕಾಗ್ತಾ ಇಲ್ಲ ಅಂತ ನನಗನಿಸುತ್ತೆ. ಆದ್ರಿಂದ ಅಸ್ಪೃಶ್ಯನೊಬ್ಬನಿಗೆ ಇರುವ ನಿಜವಾದ ಸಂಕಟ ಎಂದರೆ ತಾನು ವ್ಯವಹಾರಿಕ ಭಾಷೆಯನ್ನ, ಸ್ಕೂಲಿನ ಭಾಷೆಯನ್ನ ಕಲಿಯೋದರ ಮೂಲಕ ಯಾವ ಭಾಷೆಯನ್ನ ಕಳ್ಕೊಳ್ತಾ ಇದ್ದೀನಿ ಅನ್ನೋದು. ಈ ಬಗ್ಗೆ ಅವನು ಬಹಳ ಗಂಭೀರವಾಗಿ ಆಲೋಚ್ನೆ ಮಾಡ್ಬೇಕು.

ನಾನು ಬಕಾಲ ಖಂಡಕಾವ್ಯವನ್ನು ಬರ್ದಾಗ, ಏನಪ್ಪಾ ಬಹಳ ಚೆನ್ನಾಗಿ ಬರ್ದಿದ್ದೀಯ, ನಾನು ಡಿಕ್ಶನರಿ ಎಲ್ಲ ನೋಡ್ದೆ, ಆದ್ರೆ ಎಲ್ಲೂ ಆ ಶಬ್ದ ಇಲ್ವಲ್ಲ. ಅದಕ್ಕೆ ಏನು ಅರ್ಥ ಅಂತ ಅನೇಕರು ನನ್ನನ್ನು ಕೇಳಿದ್ರು. ಅದ್ಕೆ ನಾನು ಹೇಳ್ದೆ. ಡಿಕ್ಷ್ನನರಿಯಲ್ಲಿ ಇರೋ ಶಬ್ದ ಅಲ್ಲ ಅದು. ಡಿಕ್ಶನರಿಗೆ ಸೇರ್ಪಡೆಯಾಗ್ಬೇಕಾಗಿದೆ. ನನ್ನ ತಂದೆ ತಾಯಿ, ನನ್ನ ಸಾಮಾಜಿಕ ವಲಯದೊಳಗಡೆ ಆ ಶಬ್ದ ನನ್ಗೆ ಸಿಗ್ತು. ನಮ್ಮ ಮನೆಗೆ ಒಬ್ರು ಆದಿ ಜಾಂಬವರು ಅಂತ ಒಬ್ರು ಗುರುಗಳು ಬರ್ತಿದ್ರು. ಅವರ ಗುರುಗಳು ಅವರಿಗೆ ಹೇಳಿದ ಶಬ್ದ ಅದು. ನಾನು ಓದಿದ್ದರಿಂದ ಆ ಶಬ್ದ ನನಗೆ ಸಿಕ್ಕಿದ್ದಲ್ಲ. ಆದ್ರಿಂದ ನಮಗೆ ಇರೋ ದೊಡ್ಡ ಸವಾಲು ಏನಪ್ಪ ಅಂದ್ರೆ ನಾವು ಇಂಗ್ಲಿಶ್‌ನ್ನ ಕಲೀಬಹುದು. ಲೋಕ ವ್ಯವಹಾರಕ್ಕಾಗಿ ಜಗತ್ತಿನ ಮಟ್ಟದಲ್ಲಿ ಯಾವುದೇ ಭಾಷೆಯನ್ನು ಕಲ್ತುಕೊಳ್ಬಹುದು. ಆದ್ರೆ ನಮಗೆ ಬೇಕಾದ ಬೇರೆ ಬೇರೆ ಭಾಷೆಗಳನ್ನು ಕಲಿಯುವುದರ ಜೊತೆಗೆ ಯಾವ ಭಾಷೆಯನ್ನ ಕಳ್ಕೊಳ್ತೀವಿ ಅನ್ನೋ ಅರಿವಿಲ್ದೇ ಹೋದ್ರೆ ನಾವು ಒಂದು ದೊಡ್ಡ ಪೊಲಿಟಿಕ್ಸ್ ಅನ್ನ ಕಳ್ಕೊಳ್ತೀವಿ. ಭಾಷೆ ಅಂದ್ರೆ ಸುಮ್ನೆ ಮಾತಲ್ಲ. It is a Political Power, It is a Cultural Power, It is an Economical Power. ಆದ್ರೆ ಇವತ್ತು ಜಾಗತಿಕ ಮಟ್ಟದಲ್ಲಿ ಈ ಎಲ್ಲಾ ಶಕ್ತಿಯೂ ಭಾಷೆಗಿದೆ. ನನ್ನ ಬಾಲ್ಯದ ಭಾಷೆ ನನ್ನನ್ನ ಬದುಕಿಸಿದೆ ಅಂದ್ಕೊಳ್ತೀನಿ. ನನ್ನ ಕಾವ್ಯದಲ್ಲಿ ಬಳಕೆ ಮಾಡಿದ್ದು ಎಲ್ಲವೂ ನನ್ನ ಬಾಲ್ಯದ ಭಾಷೆನೇ. ಆದ್ರಿಂದ ಜಗತ್ತಿನಲ್ಲಿ ಯಾರಿಗಾದರೂ ಅಕ್ಷರ ಸಿಕ್ಕಿದ್ಮೇಲೆ ಏನಾದ್ರೂ ಕಳ್ಕೊಳ್ತೀವೇನೋ ಅಂತ ಅನಿಸಿದ್ರೆ ಅವ್ರು ಮಾತ್ರ ಆ ಭಾಷೆನ ಉಳ್ಸಿಕೊಳ್ಳಕ್ಕೆ ಪ್ರಯತ್ನ ಮಾಡ್ತಾರೆ. ಯಾಕೆಂದ್ರೆ ಆ ಭಾಷೆಗೆ ಬಹಳ ದೊಡ್ಡ ಶಕ್ತಿ ಇದೆ. ನನ್ನ ಭಾಷೆಯನ್ನ ಅಡಿಗರು ಬಳ್ಸಕ್ಕೆ ಸಾಧ್ಯ ಇಲ್ಲ. ಶಿವಪ್ರಕಾಶ್, ಅನಂತಮೂರ್ತಿ ಅವರು ಬಳ್ಸಕ್ಕೆ ಸಾಧ್ಯ ಇಲ್ಲ. ಅದು ನನ್ನ ಭಾಷೆ. ನನ್ನ ತಂದೆ ತಾಯಿಯಿಂದ ನನ್ನ ಕಿವಿಗೆ ನೇರವಾಗಿ ಬಂದದ್ದು. ಅದು ನಾನು ಶಾಲೆಯಲ್ಲಿ ಕಲಿತ ಭಾಷೆಗೆ ಅಥವಾ ಜಾಗತಿಕ ಮಟ್ಟದ ಯಾವುದೇ ಭಾಷೆಗೆ ಸಮನಾದುದು ಅಂತ ನಾನು ತಿಳ್ಕೊಂಡಿದ್ದೀನಿ. ನನ್ನ ಬಾಲ್ಯದ ಭಾಷೆಗೆ ಶಕ್ತಿ ಇದೆ ಅಂತ ನಾನು ತಿಳ್ಕೊಂಡಿದ್ದೀನಿ. ನಮ್ಮ ಅಸ್ತಿತ್ವ, ನಮ್ಮ ಶಕ್ತಿ ಉಳಿದಿರೋದು ನಮ್ಮ ಬಾಲ್ಯದ ಭಾಷೆಯಿಂದ. ಆದರೆ ಇದೆಲ್ಲವೂ ನನ್ನ ಮಗನಿಗೆ ಇಲ್ಲ ಅಂತ ನಾನು ಹೇಳ್ತಾ ಇರೋದು. This is a Tragedy. ನಾವು ತಿಳ್ಕೊಳ್ಬೇಕಾಗಿರೋದು ಇದೇನೇ.

ನನ್ನ ಮಗ ಬೇರೆ ಶಾಲೇಲಿ ಓದಿದ್ದಾರೆ. ಬೇರೆ ಭಾಷೆ ಬರುತ್ತೆ. ನನ್ನ ಮಗನಿಗೋ ಮಗಳಿಗೋ ನಾನು ಹಿಂದೆ ಎಸ್.ಎಸ್.ಎಲ್.ಸಿ.ನಲ್ಲಿ ಓದ್ತಿದ್ದಾಗ ನಮ್ಮ ಅಮ್ಮ ಬೆಳಗಿನ ಜಾವ ನಾಲ್ಕು ಗಂಟೆಗೆ ಎಬ್ಸಿ ಓದುಸ್ತಿದ್ರು, ನಮ್ಮ ಮನೇಲಿ ಕರೆಂಟು ಇರ್ಲಿಲ್ಲ, ನಾವು ದೇವಸ್ಥಾನದ ಒಳಗೆ ಹೋಗಂಗಿರ್ಲಿಲ್ಲ, ಬೇರೆಯವರ ಮನೆಯೊಳಗೆ ಹೋಗಂಗಿರ್ಲಿಲ್ಲ ಅಂದ್ರೆ They don’t believe it. ಸುಮ್ನಿರಣ್ಣ ಅದೆಂಗಾಗ್ತದೆ ಅಂತಾರೆ ಅವ್ರು. ಅಂದ್ರೆ ನನ್ನ ಮಗನ ಭಾಷೆನೇ ಬೇರೆ, ನಾನು ಕಲಿತಾ ಇರ್ತಕ್ಕಂತ ಭಾಷೆಯೇ ಬೇರೆ. ನಾನು ಲೋಕ ವ್ಯವಹಾರಕ್ಕಾಗಿ ಬಳಸ್ತಾ ಇರ್ತಕ್ಕಂತಹ ಭಾಷೆಯೇ ಬೇರೆ. ನಾನು ಸಾಹಿತ್ಯದಲ್ಲಿ ದುಡಿಸಿಕೊಳ್ಳುವ ನನ್ನ ಬಾಲ್ಯದ ಭಾಷೆಗೆ ದೊಡ್ಡ ಶಕ್ತಿ ಇದೆ. ಅದನ್ನೇನಾದ್ರೂ ಕಳ್ಕೊಂಡ್ಬಿಟ್ರಿ We loose Everything. ನಮ್ ಮಕ್ಳು ಅದನ್ನ ಕಳ್ಕೊಂಡಿದ್ದಾರೆ. ಆದ್ರೆ ಇದನ್ನ ಪ್ರತಿಪಾದನೆ ಮಾಡೋವಾಗ ಆ ಎಲ್ಲ ಮೌಲ್ಯಗಳೂ ನಮ್ಮ ಜೊತೆ ಇರ್ಬೇಕು ಅಂತ ನಾನು ಹೇಳ್ತಾ ಇಲ್ಲ. ಭಾಷೆ ಮತ್ತು ಸಮುದಾಯದ ಬಗ್ಗೆ ಯೋಚನೆ ಮಾಡದೆ ನಮ್ಮ ರಾಜಕೀಯ ಅಧಿಕಾರದ ಬಗ್ಗೆ ಯೋಚನೆ ಮಾಡೋದು, ಆರ್ಥಿಕ ಸಮಾನತೆಯ ಬಗ್ಗೆ ಯೋಚನೆ ಮಾಡೋದು ನಮ್ಮ ಎಲ್ಲ ಅವಮಾನಗಳನ್ನ ಕಳ್ಕೊಳ್ಳೋದು ಅಂತ ನಾನು ತಿಳ್ಕೊಂಡಿದ್ದೀನಿ. ಇದನ್ನ ಮಾತ್ರ ನಿಮ್ಜೊತೆ ಹಂಚ್ಕೋಬೇಕು ಅಂತ ನನಗಿದ್ದಿದ್ದು. ಅಂತಿಮವಾಗಿ ನನಗನಿಸೋದು Language is not simple as you speak. ನನ್ನ ದೃಷ್ಟಿಯಲ್ಲಿ ಭಾಷೆ ಅನ್ನೋದು ಕೇವಲ ಮಾತಲ್ಲ. ನನ್ನ ಉಸಿರಾಟವೇ ನನ್ನ ಭಾಷೆ ಅಂತ ನನಗನಿಸಿದೆ. ಯಾಕೆಂದ್ರೆ ನನ್ನ ಉಸಿರಾಟಕ್ಕೆ ವಿಶಿಷ್ಟವಾದ ಅನುಭವಗಳು, ವಿಶಿಷ್ಟವಾದ ಲಯಗಳು, ವಿಶಿಷ್ಟವಾದ ವ್ಯಾಪ್ತಿ ಎಲ್ಲ ಇರುತ್ತೆ. ಅದು ನನಗಲ್ಲದೆ ಇನ್ನೊಬ್ಬರಿಗೆ ತಿಳಿಯಲು ಸಾಧ್ಯವಿಲ್ಲ. ಆದ್ರಿಂದ ಅಸ್ಪೃಶ್ಯರು ನಿಜವಾಗಲೂ ಅಸ್ಪೃಶ್ಯರು, ಹಿಂದುಳಿದವರು. ನಾವು ಮಹಿಳೆಯರ ಭಾಷೆಯ ಬಗ್ಗೆ ಮಾತಾಡುವ ಧೈರ್ಯ ಮಾಡ್ತಾ ಇಲ್ಲ. ಸ್ತ್ರೀಯರ ಭಾಷೆಯ ಬಗ್ಗೆ ನಮ್ಮೆ ಗೌರವ ಇದ್ದಂಗೆ ಕಾಣಲ್ಲ. ಅದ್ರಿಂದ ಸ್ತ್ರೀಯರಿಗೆ, ಅಸ್ಪೃಶ್ಯರಿಗೆ ಈ ದೇಶದಲ್ಲಿ ಭಾಷೆಯ ಶಕ್ತಿ ಇದೆಯಲ್ಲ ಅದೇ ರಾಜಕೀಯ ಶಕ್ತಿನೂ ಹೌದು, ಸಾಂಸ್ಕೃತಿಕ ಶಕ್ತಿನೂ ಹೌದು ಅಂತ ನಾವು ಆಲೋಚನೆ ಮಾಡ್ಬೇಕು ಅಂತ ನನಗನಿಸುತ್ತಿದೆ. ಅಂತ ಹೇಳಿ ನನ್ನ ಮಾತು ಮುಗಿಸ್ತೀನಿ.

(ಅಧ್ಯಕ್ಷೀಯ ಭಾಷಣ)