ಕನ್ನಡ ಭಾಷೆಯಲ್ಲಿರುವಷ್ಟು ಸಂಸ್ಕೃತ ಪದಗಳು ಇನ್ನೂ ಯಾವ ಭಾಷೆಯಲ್ಲಿಯೂ ಇಲ್ಲ. ಹಿಂದಿ ಭಾಷೆಯಲ್ಲಿವೆ. ಸಂಸ್ಕೃತ ಪದಗಳು ಎಷ್ಟು ಜನಕ್ಕೆ ಗೊತ್ತಾಗುತ್ತವೆ? ಕನ್ನಡ ಭಾಷೆಯ ಅರಿವೇ ನಮಗಿಲ್ಲದಿರುವಾಗ ಸಂಸ್ಕೃತ ಭಾಷೆ ಹೇಗೆ ಬರುತ್ತದೆ? ನಾನು ಸಂಸ್ಕೃತದಲ್ಲಿ ಒಬ್ಬ ಕಲಿತಿದ್ದೇನೆ. ನನಗೆ ಓದಲಿಕ್ಕೆ, ಬರೆಯಲ್ಲಿಕ್ಕೆ ಬರಬಹುದು. ಏನು ಸಂಸ್ಕೃತ ಭಾಷೆ ಇದೆ. ಅದನ್ನೆಲ್ಲ ತಿಳಿದುಕೊಳ್ಳುವುದಕ್ಕೆ ನಮಗೆ ಶಕ್ತಿ ಇಲ್ಲ. ಆದುದರಿಂದ ಸಾಮಾನ್ಯರಿಗೆ ಈ ಸಂಸ್ಕೃತ ಭಾಷೆ ಎಂದರೆ ಅದು ಅರ್ಥವಾಗುವುದಿಲ್ಲ. ನಮ್ಮ ಹಿರಿಯರು ಏನು ಮಾಡಿದ್ದಾರೆ?ಈ ಕನ್ನಡ ಭಾಷೆಯಲ್ಲಿ ಸಂಸ್ಕೃತ ಶಬ್ದಗಳನ್ನು ನೂರಕ್ಕೆ ಎಪ್ಪತ್ತೈದು ಭಾಗದಷ್ಟು ಉಪಯೋಗಿಸಿ ನಮಗೆ ಅರ್ಥವೇ ತಿಳಿಯದ ರೀತಿಯಲ್ಲಿ ಇಟ್ಟು ಬಿಟ್ಟಿದ್ದಾರೆ. ಶ್ರೀಮಾನ್ ತೇಜಸ್ವಿಯವರು ಮಾತನಾಡಿದರು. ಅವರು ಆಡಿದ ಭಾಷೆ ನನಗೆ ತುಂಬ ಪ್ರಿಯವಾಯಿತು. ನಮ್ಮ ತಂದೆ-ತಾಯಿಗಳು ಮಾತನಾಡುವ ಭಾಷೆ. ನಮ್ಮ ತಂದೆ-ತಾಯಿಗಳು ಹಳ್ಳಿಗಳಲ್ಲಿ ಮಾತನಾಡುವಂತಹ ಭಾಷೆಯನ್ನು ಸಾಹಿತ್ಯದಲ್ಲಿ ಬಳಸುವ ಕಾಲ ಸನ್ನಿಹಿತವಾಗಿದೆ. ಸಂಸ್ಕೃತದಲ್ಲಿ ಮಾತನಾಡಿ, ಸಂಸ್ಕೃತವನ್ನು ಬಳಸಿ ಜನಗಳನ್ನು ಮೋಸ ಮಾಡಿ ಹೊಟ್ಟಿ ಹೊರೆದುಕೊಳ್ಳುವಂತಹ ಕಾಲ ದೂರವಾಯಿತು. ರಾಮಸ್ವಾಮಿ ನಾಯ್ಕರ್ ಅವರು ತಮಿಳು ಭಾಷೆಯನ್ನು ‘ಕಾಟ್ಟುಮಿರಾಂಡು’ ಭಾಷೆ ಎಂದು ಕರೆದರು. ‘ಕಾಟ್ಟು ಮಿರಾಂಡು’ ಅಂದರೆ ಕಾಡು ಜನಗಳ ಭಾಷೆ ಎಂದು ಅರ್ಥ. ಕಾಟ್ಟು ಮಿರಾಂಡ ಭಾಷೆಯಲ್ಲಿ ಒಂದೂ ಸಂಸ್ಕೃತ ಪದಗಳನ್ನು ಸೇರಿಸುವುದಿಲ್ಲ. ನೀವು ಸೇರಿಸಿ ಅಂತ ಕೇಳಿದರೂ ಅವರು ಸೇರಿಸುವುದಿಲ್ಲ. ಆದುದರಿಂದ ಈ ಹೊತ್ತು ತಮಿಳು ಭಾಷೆಯನ್ನು ಆಡುವ ಜನ ಸ್ವತಂತ್ರರಾಗಿದ್ದಾರೆ. ಅವರು ನಿಲುವು ತಾಳಿದ್ದಾರೆ. ೪೦-೫೦ ವರ್ಷಗಳಿಂದ ಈ ಮಡಿವಂತಿಕೆಯ ವಿರುದ್ದ ಹೋರಾಟ ನಡೆಸಿದ್ದಾರೆ. ಯಶಸ್ವಿಯಾಗಿದ್ದಾರೆ.

ಈ ಸಂಸ್ಕೃತ ಶಬ್ದಗಳನ್ನು ನಾವು ಕನ್ನಡದಲ್ಲಿ ಬಳಸಿ ನಾವು ಜನಗಳಿಗೆ ಮೋಸ ಮಾಡಿದ್ದೇವೆ – ನಾವು ಬರೆಯುವುದೇ ಅರ್ಥವಾಗುವುದಿಲ್ಲ ಅವರಿಗೆ. ಅದಕ್ಕೆ ನಾನು ಬಳಸುವಂತಹ ಭಾಷೆ ಏನಿದೆ ಈ ಹೊತ್ತು? ಸಾಹಿತ್ಯ ಭಾಷೆಯನ್ನು ಬಳಸಲು ಹೋಗುವುದೇ ಇಲ್ಲ ನಾನು. ಸಾಮಾನ್ಯ ಜನರು ಆಡುವಂತಹ ಭಾಷೆಯನ್ನೇ ಉಪಯೋಗಿಸಬೇಕು. ಅದನ್ನೇ ಸಾಹಿತ್ಯ ರೂಪದಲ್ಲಿ ಬರೆಯಬೇಕು. ವಿಷಯಗಳನ್ನು ನಾವು ನಿರೂಪಣೆ ಮಾಡಬೇಕು. ಅವನ್ನು ಪ್ರಚಾರ ಮಾಡಬೇಕು ಅನ್ನುವಂತಹದು ನನ್ನ ಸ್ಪಷ್ಟ ಅಭಿಪ್ರಾಯ. ಹಾಗೆ ಮಾಡಿದರೆ ಯಶಸ್ವಿಯಾಗಿ ನಮ್ಮ ಕಾರ್ಯ ಕಲಾಪಗಳನ್ನು ಮುಂದುವರಿಸಿಕೊಂಡು ಹೋಗಬಹುದು.

ಒಂದು ಉದಾಹರಣೆಯನ್ನು ನಿಮಗೆ ಹೇಳಬೇಕು. ಈ ಹೇಲು-ಉಚ್ಚಿ ಹೊರುವಂಥಹುದನ್ನು ನಾನು ನಿಲ್ಲಿಸಿದೆ. ಪತ್ರಿಕೆಗಳಲ್ಲೆಲ್ಲ ಮಲ-ಮೂತ್ರ ಹೊರುವುದನ್ನು ನಿಲ್ಲಿಸಲು ಬಸವಲಿಂಗಪ್ಪ ಪ್ರಯತ್ನ ಮಾಡುತ್ತಿದ್ದಾನೆ ಎಂದು ಬರೆದರೇ ಹೊರತು ಹೇಲು-ಉಚ್ಚಿ ಅಂತ ಒಬ್ಬರೂ ಬರೆಯಲಿಲ್ಲ. ನಾನು ಹೇಳಿದ್ದೆಲ್ಲ ಹೇಲು-ಉಚ್ಚಿ ಅಂತಲೇ. ಏಕೆಂದರೆ ಎಲ್ಲರಿಗೂ ತಿಳುವಳಿಕೆಯಾಗುತ್ತದೆ. ಮಲನೂ ಸಂಸ್ಕೃತ ಮೂತ್ರನೂ ಸಂಸ್ಕೃತ. ಯಾರಿಗೆ ಅರ್ಥವಾಗುತ್ತದೆ? ನಾನು ವೇದಿಕೆಯಿಂದ ಹೇಲು-ಉಚ್ಚಿ ಅಂತ ಹೇಳಿದರೆ ‘ಅಸಿಸಿಸೀ’ ಅಂತ ಹೇಳುತ್ತಿದ್ದರು. ಹೇಳಿದ್ದನ್ನು ಕೇಳಿಯೇ ‘ಅಸಿಸೀ’ ಅಂದರೆ, ಹೊರುವಂತಹ ವ್ಯಕ್ತಿಗೆ ಅದು ಹೇಗಿರಬೇಕು? ಆದುದರಿಂದ ನಾವು ಸಮಾಜ ಬದಲಾವಣೆ ಮಾಡಬೇಕು. ಸಮಾಜದ ವಿಚಾರ ಶಕ್ತಿಯನ್ನು ಬದಲಾವಣೆ ಮಾಡಬೇಕು.

ಸಾಹಿತ್ಯದಲ್ಲಿ ನಾವು ಎಂತಹ ಭಾಷೆಯನ್ನು ಬಳಸಬೇಕು ಎಂಬುದಕ್ಕೆ ಬಿ.ಬಸವಲಿಂಗಪ್ಪನವರು ಈ ರೀತಿ ಅಭಿಪ್ರಾಯ ಪಡುತ್ತಾರೆ.

ಬಸವೇಶ್ವರರು ಎಲ್ಲರಿಗೂ ತಿಳಿಯುವಂತೆ ವಚನಗಳನ್ನು ಬರೆದು ಕ್ರಾಂತಿ ಮಾಡಿದ್ದಾರೆ. ಸರ್ವಜ್ಞಮೂರ್ತಿ ಜನರು ಆಡುವ ಮಾತಿನಲ್ಲಿಯೇ ಬರೆದು ಕ್ರಾಂತಿ ಮಾಡಿದ್ದಾರೆ. ಆಗ ಕ್ರಾಂತಿಯಾಗಿದೆ. ಆದರೆ ನೂರಕ್ಕೆ ತೊಂಭತ್ತೈದು ಭಾಗ ಜನ ಮೂರ್ಖರಾಗಿ, ದಡ್ಡರಾಗಿ, ಅವಿವೇಕಿಗಳಾಗಿ ಜೀವನ ಮಾಡುತ್ತಿರುದ್ದುದರಿಂದ ಆ ಕ್ರಾಂತಿಯ ಜ್ವಾಲೆ ನಮಗೆ ತಟ್ಟಲಿಲ್ಲ.

“ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಮುನಿಯಬೇಡ ಇದೇ ಅಂತರಂಗದ ಶುದ್ಧಿ ಇದೇ ಬಹಿರಂಗ ಶುದ್ಧಿ”

ಯಾರಿಗೆ ಅರ್ಥವಾಗುವುದಿಲ್ಲ ? ಬಸವೇಶ್ವರರು ಹ ಹೇಳಿರೋದು. ಯಾರಿಗೂ ಅರ್ಥವಾಗುವುದಿಲ್ಲವೋ ದಯವಿಟ್ಟು ಹೇಳಿ.

ಹಣಕ್ಕಾಗಿ ಪೂಜೆಯ ಮಾಡಿ, ದಕ್ಷಿಣಗಾಗಿ ಜನರ ಕಾಡಿ,
ಮಡಿಯನುಟ್ಟು ನಗೆನಗೆದಾಡು
ಪೂಜಾರಿಯ ಚಾಲು ನೋಡ!

ಯಾರಿಗೆ ಅರ್ಥವಾಗುವುದಿಲ್ಲ? ಈ ಭಾಷೆಯಲ್ಲಿ ಸಾಹಿತ್ಯ ಸೃಷ್ಟಿ ಮಾಡಿ ಅಂತ ಹೇಳುತ್ತಿದ್ದೇನೆ.

“ಮೂರ್ಖನೊಬ್ಬ ಆರು ಬೆಟ್ಟವನು ಹಾರಿಯಾನೆಂದರೆ
ಹಾರಬಹುದು ಎನಬೇಕು | ಮೂರ್ಖರೊಡನೆ
ಹೋರಾಟ ಸಲ್ಲದು ಸರ್ವಜ್ಞ”

ದಯವಿಟ್ಟು ಹೇಳಿ ಸ್ವಾಮಿ ಯಾರಿಗೆ ಅರ್ಥವಾಗಲಿಲ್ಲ? “ಆಶೀತ ಶೇಷ ನವಭಕ್ಷ್ಯ ಶಾಸನ ಪಾಕಶಾಸನ ಇವಾಪರಃ” ಹೇಳಿ ಯಾರಿಗೆ ಅರ್ಥವಾಗುತ್ತದೆ ನೋಡೋಣ? ಒಳ್ಳೆ ಬಾಣ ಬರೆದಿರುವಂತಹ ಸಂಸ್ಕೃತ ಅದು. ಯಾರಿಗೆ ಅರ್ಥವಾಯಿತು ಹೇಳಿ.

ಹೀಗೆ ಅರ್ಥವಾಗದಿರುವಂತಹ ಯಾವ ಭಾಷೆಯೇ ಆಗಲಿ ಅದು ಬೇಕಾಗಿಲ್ಲರೀ ನಮಗೆ ಬೇಕಾಗಿಲ್ಲ. ನಿಷೇಧ ಮಾಡಬೇಕು ಈ ದೇಶದಿಂದ. ನಾವು ಛಲವಂತರಾದರೆ ನಮಗೆ ತಿಳಿಯದಿರುವಂತಹ ಭಾಷೆಯನ್ನು ನಾವು ನಿಷೇಧ ಮಾಡಬೇಕಾಗುತ್ತದೆ. ಯಾವ ಭಾಷೆ ನಮಗೆ ಪೌರುಷವನ್ನು ಕೊಡತ್ತುವೆ. ಶೂರರನ್ನಾಗಿ ಮಾಡುತ್ತದೆ. ಸಾಹಿತಿಗಳನ್ನಾಗಿ ಮಾಡುತ್ತದೆ. ಅಂತಹ ಭಾಷೆಯಲ್ಲಿಯೇ ನಾವು ವ್ಯವಹಾರ ಮಾಡಬೇಕು.

—-
* (ದಲಿತ ಚಿಂತನೆ, ೨೦೦೨, ಸಂ: ಮೊಗಳ್ಳಿ ಗಣೇಶ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ‘ಮಾನವೀಯತೆಯ ಕ್ರಾಂತಿ ಆಗಬೇಕು’ ಲೇಖನದಿಂದ ಕೆಲವು ಭಾಗಗಳನ್ನು ಆಯ್ದು ಕೊಳ್ಳಲಾಗಿದೆ.)