ಇತ್ತೀಚಿನ ದಿನಗಳಲ್ಲಿ ಇಂಗ್ಲಿಶ್ ಭಾಷೆಯನ್ನು ಪ್ರಾಥಮಿಕ ಶಿಕ್ಷಣದ ಒಂದನೇ ತರಗತಿಯಿಂದಲೇ ಕಲಿಸಬೇಕೆಂಬ ಚರ್ಚೆ ಒತ್ತಾಯ ಒಂದು ಗುಂಪಿನ ಬುದ್ಧಿಜೀವಿಗಳಿಂದ ಬರುತ್ತಿದೆ. ಮತ್ತೊಂದು ಗುಂಪಿನ ಬುದ್ಧಿಜೀವಿಗಳು ಕನ್ನಡದಲ್ಲಿಯೇ ಕಲಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅವರದೇ ಆದ ವಾದ ವಿವಾದ ಚಿಂತನೆಗಳನ್ನು ವಿಚಾರಗಳನ್ನು ಮಂಡಿಸುತ್ತಿದ್ದಾರೆ. ಇಂಗ್ಲಿಶ್ ಬೇಕು ಎನ್ನುವವರು, ಗ್ರಾಮೀಣ ಪ್ರದೇಶದ ರೈತರು, ನಗರಗಳಲ್ಲಿನ ಕೊಳೆಗೇರಿಗಳು, ನಿರ್ಗತಿಕರು, ದಲಿತರು ದೀನ ದುರ್ಬಲರ ಮಕ್ಕಳು. ಇಂತಹವರನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರಿಗೆ ಹಣ ಮತ್ತು ಸೌಕರ್ಯಗಳಿಲ್ಲದಿರುವುದರಿಂದ ಹಾಗೂ ಸರ್ಕಾರಿ ಶಾಲೆಗಳೇ ಅಧಿಕವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವುದರಿಂದ, ಕನ್ನಡ ಕಲಿತು ಇಂದಿನ ಸ್ಪರ್ಧಾತ್ಮಕ ಹಾಗೂ ವೈಜ್ಞಾನಿಕವಾಗಿ ಮುಂದುವರಿದಿರುವ ಈ ಜಗತ್ತಿನಲ್ಲಿ ಮುಂದುವರಿಯಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಐದನೇ ತರಗತಿಯಿಂದ ಇಂಗ್ಲಿಶ್ ಕಲಿಯಲು ಆರಂಭಿಸಿ ಕನ್ನಡ ಮಾಧ್ಯಮದಲ್ಲಿ ಓದುತ್ತಾ ಇಂಗ್ಲಿಶ್‌ನಲ್ಲಿ ಫೇಲಾಗಿ ಕೊನೆಗೆ ಶಾಲೆ ಬಿಡುವಂತಹ ಸ್ಥಿತಿ ಹೆಚ್ಚಿದೆ. ಆದ್ದರಿಂದ ಏಕರೂಪ ಶಿಕ್ಷಣ ಪದ್ಧತಿ ಜಾರಿಗೆ ಬರಲಿ ಇಲ್ಲದೆ ಹೋದರೆ ಇಂಗ್ಲಿಶ್‌ನ್ನು ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆರಂಭಿಸಲಿ ಎಂಬುದು ಅವರ ವಾದ. ಇನ್ನೊಂದು ವರ್ಗದ ಬುದ್ಧಿಜೀವಿಗಳು ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡಬೇಕೆಂದೂ ಬೇಕಾದರೆ ಐದನೇ ತರಗತಿಯಿಂದ ಕಲಿಸಬೇಕೆಂದೂ ಮಹಾತ್ಮಗಾಂಧಿ, ರವೀಂದ್ರನಾಥ ಠಾಕೂರ್, ಕೆಲವು ಭಾಷಾವಿಜ್ಞಾನಿಗಳ ವಿಚಾರಗಳನ್ನ ತಮ್ಮ ವಾದಕ್ಕೆ ಪೂರಕವಾಗಿಟ್ಟುಕೊಂಡು ಒಂದನೆ ತರಗತಿಯಿಂದ ಇಂಗ್ಲಿಶ್ ಬೇಡವೆಂದು ಹೇಳುತ್ತಿದ್ದಾರೆ. ಮೊದಲನೆ ವರ್ಗದವರು ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ದೃಷ್ಟಿಯನ್ನಿಟ್ಟುಕೊಂಡು ಹಾಗೂ ಗ್ರಾಮೀಣ ಪ್ರದೇಶದ ಬಡವರ ; ದಲಿತರ ಸ್ಥಿತಿಗತಿಗಳನ್ನು ಕೊಳೆಗೇರಿ ಮಕ್ಕಳ ಸ್ಥಿತಿಗತಿಗಳನ್ನು ಅವರ ಬದುಕಿನ ವಾಸ್ತವವನ್ನು ಅರಿತುಕೊಂಡು ಇಂಗ್ಲಿಶಿನ ಅಗತ್ಯ ಎಂತಹದ್ದು ಎಂದು ವಾದವನ್ನು ಮಂಡಿಸುತ್ತಿದ್ದಾರೆ. ಎರಡನೇ ವರ್ಗದವರು ಕನ್ನಡ ಎಂದ ಕೂಡಲೇ ಕನ್ನಡ ಜನರ ವಾಸ್ತವ ಅರಿಯದೆ ಭಾವನಾತ್ಮಕವಾಗಿ ಮಾತನಾಡಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ‘ಕನ್ನಡ’ವೇ ಇರಲಿ ಎಂದು ವಾದಿಸುವ ಹಂತವನ್ನು ತಲುಪಿಬಿಡುತ್ತಾರೆ. ಈ ಎರಡನೇ ವರ್ಗದವರ ವಾದ ಈಗ ಪ್ರಸ್ತುತವೂ ಅಲ್ಲ, ಸಮರ್ಥನೀಯವೂ ಅಲ್ಲ.

ಸರ್ಕಾರಿ ಶಾಲೆಗಳಿಗೆ ಸೇರುವವರು ಸಾಮಾನ್ಯವಾಗಿ ಬಡವರು ದಲಿತರ ಮಕ್ಕಳು, ಅದರಲ್ಲೂ ದಲಿತರು ಶತಮಾನಗಳಿಂದಲೂ ಶಿಕ್ಷಣದಿಂದ ವಂಚಿತರಾದವರು. ಹಿಂದೆ ಸಂಸ್ಕೃತದಿಂದ ವಂಚಿತರನ್ನಾಗಿ ಮಾಡುವಾಗ ಎಂತಹ ಹುನ್ನಾರಗಳನ್ನು ಮಾಡಿದ್ದರೋ ಇಂದೂ ಕೂಡಾ ಅದೇ ರೀತಿಯ ಹುನ್ನಾರಗಳು ನಡೆಯುತ್ತಿವೆ. ಬ್ರಿಟಿಷರು ಈ ದೇಶದಲ್ಲಿ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರದೆ ಇದ್ದಿದ್ದರೆ ದಲಿತರು ಆ ಶತಮಾನಗಳ ಹಿಂದೆ ಇದ್ದಂತೆಯೇ ಇರಬೇಕಾಗಿತ್ತು. ಬ್ರಿಟಿಷರು ಇಂಗ್ಲಿಶ್ ವಿದ್ಯಾಭ್ಯಾಸವನ್ನು ಆರಂಭಿಸಿದಾಗ ಅದರ ಪ್ರಯೋಜನವನ್ನು ಪಡೆದವರು ಶ್ರೀಮಂತರು ಮತ್ತು ಮೇಲ್ಜಾತಿಯವರೆ. ವಸಾಹತು ಸಂದರ್ಭದಲ್ಲಿ ಇಂಗ್ಲಿಶಿನ ಅಗತ್ಯ ಎಷ್ಟಿತ್ತೊ ಜಾಗತೀಕರಣದ ಇಂದಿನ ಸಂದರ್ಭದಲ್ಲಿಯೂ ಸಹ ಅದು ಅಷ್ಟೇ ಅಗತ್ಯವಾಗಿದೆ. ವಸಾಹತು ಸಂದರ್ಭದಲ್ಲಿ ಇಂಗ್ಲಿಶ್ ಶಿಕ್ಷನ ಮಹತ್ವದ ಬದಲಾವಣೆಗಳನ್ನು ಭಾರತೀಯ ಸಮಾಜದಲ್ಲಿ ತಂದಿತು. ಹಾಗೆಯೇ ಇಂದು ಜಾಗತೀಕರಣ ಜಗತ್ತನ್ನು ನಾಗಾಲೋಟದಿಂದ ಕ್ರಮಿಸುವಂತೆ ಮಾಡಿದೆ. ಇಂದು ವಸಾಹತು ಸಂದರ್ಭಕ್ಕಿಂತ ಇಂಗ್ಲಿಶಿನ ಅಗತ್ಯ ಇದೆ. ವಸಾಹತು ಸಂದರ್ಭದಲ್ಲಿ ಇಂಗ್ಲಿಶ್ ಶಿಕ್ಷಣ ಪದ್ಧತಿ ಬಂದ ನಂತರ ಉಂಟಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧುನೀಕರಣಗಳನ್ನು ವಿವರಿಸಿ ನಂತರ ಇಂಗ್ಲಿಶ್‌ನ ಅಗತ್ಯ ದಲಿತರಿಗೆ ಏಕೆ ಬೇಕಾಗಿದೆ ಎಂಬುದನ್ನು ಪರಿಶೀಲಿಸಬಹುದು.

೧೮೨೩ರವರೆಗೂ ಭಾರತದಲ್ಲಿ ಸಂಸ್ಕೃತ ಮತ್ತು ಅರೇಬಿಕ್ ಶಾಲೆಗಳಿದ್ದವು. ಉನ್ನತ ಶಿಕ್ಷಣವೂ ಕೂಡಾ ಹೆಚ್ಚು ಕಡಿಮೆ ಸಂಸ್ಕೃತದಲ್ಲಿಯೇ ಇತ್ತು. ಬ್ರಿಟಿಷರು ಬಂದ ಮೇಲೆ ಅಲ್ಲಲ್ಲಿ ಇಂಗ್ಲಿಶ್ ಶಾಲೆಗಳನ್ನು ತೆರೆದಿದ್ದರೂ ಅವುಗಳಲ್ಲಿ ಪ್ರವೇಶ ಪಡೆದು ಇಂಗ್ಲಿಶ್ ಕಲಿಯುತ್ತಿದ್ದವರು ಅಪರೂಪ. ಈ ಅಪರೂಪದ ವ್ಯಕ್ತಿಗಳಲ್ಲಿ ರಾಜಾರಾಮ್‌ಮೋಹನರಾಯ್ ಒಬ್ಬರು. ಇವರು ಯುರೋಪಿಗೆ ಹೋಗಿ ಶಿಕ್ಷಣವನ್ನು ಪಡೆದು ಬಂದಿದ್ದರು. ಈ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರ ಸಂಸ್ಕೃತ ಅಧ್ಯಯನಕ್ಕಾಗಿ ಸರ್ಕಾರಿ ಕಾಲೇಜೊಂದನ್ನು ಆರಂಭಿಸಲು ಸಿದ್ಧತೆ ನಡೆಸಿತ್ತು. ಇದನ್ನು ಪ್ರತಿಭಟಿಸಿ ಮೋಹನ್‌ರಾಯ್ ಲಾರ್ಡ್ ಅಮ್‌ರೆಸ್ಟ್‌ಗೆ ಪತ್ರವೊಂದನ್ನು ಬರೆದರು. ಆ ಪತ್ರದಲ್ಲಿ ರಾಯ್ ಅವರು:

“ಸಂಸ್ಕೃತ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರುವುದು ಬ್ರಿಟಿಷ್ ಸರ್ಕಾರದ ನೀತಿಯಾದರೆ ಈ ದೇಶವನ್ನು ಅಂಧಕಾರದಲ್ಲಿಡುವುದಕ್ಕೆ ಪೂರ್ವಯೋಜಿತ ತಂತ್ರವಾಗುತ್ತದೆ. ದೇಶೀಯ ಜನತೆಯ ಉದ್ಧಾರವಾಗಬೇಕಾದರೆ ಏಳಿಗೆಯಾಗಬೇಕಾದರೆ ಹೆಚ್ಚು ಉದಾರವಾದ ಮತ್ತು ಪ್ರಗತಿಪರ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಬೇಕಾಗುತ್ತದೆ. ಈ ಪದ್ಧತಿಯಲ್ಲಿ ಉಪಯುಕ್ತ ಶಾಸ್ತ್ರಗಳೊಂದಿಗೆ ಗಣಿತ, ಪ್ರಾಕೃತಿಕ ತತ್ವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಅಂಗರಚನಾಶಾಸ್ತ್ರಗಳನ್ನು ಅಧ್ಯಯನ ಮಾಡುವಂತಿರಬೇಕು: ಯುರೋಪಿ ನಲ್ಲಿ ಶಿಕ್ಷಣ ಪಡೆದ ಅಧ್ಯಾಪಕರನ್ನು ಶಾಲೆಗಳಿಗೆ ನೇಮಿಸಬೇಕು”

ಎಂದು ಹೇಳಿದರು. ರಾಜಾರಾಂ ಮೋಹನ್‌ರಾಯ್ ಅವರು ಹೊಸಜ್ಞಾನ ಪದ್ಧತಿಗಳ ಶಕ್ತಿ ಎಷ್ಟೆಂಬುದನ್ನು ಅರಿತು ಅದರಿಂದ ಪ್ರಚೋದಿತರಾಗಿ ಹೊಸಜ್ಞಾನ ಪದ್ಧತಿಗಳನ್ನು ‘ನವ ಸಂಸ್ಕೃತಿಯ ಶಕ್ತಿ’ಯ ಆಗಮನ ಎಂದು ಕರೆದರು. ಅವರು ಭಾರತದಲ್ಲಿ ‘ಯಾಂತ್ರಿಕ ಕಲೆಗಳ’ ಅಭಾವವಿದೆಯೆಂದು ಹೇಳುತ್ತ ಇಂತಹ ಸ್ಥಿತಿ ಭಾರತದಲ್ಲಿರಬಾರದೆಂದು ಇಂಗ್ಲಿಶ್ ಕಲಿತು ಹೊಸಜ್ಞಾನ ಕ್ಷೇತ್ರಗಳಿಗೆ ಪ್ರವೇಶ ಪಡೆಯುವುದು ಅತ್ಯಗತ್ಯವೆಂದು ಒತ್ತಿ ಹೇಳಿದರು. ಜಗತ್ತಿನಲ್ಲಿ ಉಂಟಾದ ಅದರಲ್ಲೂ ಪಶ್ಚಿಮದಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿ, ತಂತ್ರಜ್ಞಾನದ ಮಹತ್ವವನ್ನು ಕುರಿತು ಚಿಂತಿಸಿದವರಲ್ಲಿ ಮೂರನೇ ಜಗತ್ತಿನ ವ್ಯಕ್ತಿಯೆಂದರೆ ರಾಜಾರಾಂ ಮೋಹನ್‌ರಾಯ್ ಒಬ್ಬರೇ. ಇವರೇ ಮೊದಲಿಗರೂ ಕೂಡಾ. ೧೮೩೦ರಲ್ಲಿ ಇಂಗ್ಲೆಂಡಿಗೆ ಹೋಗಿ ಬಂದ ನಂತರ ಜಗತ್ತಿನ ಬಹುಭಾಗಗಳು ಆಳುತ್ತಿರುವ ಇಂಗ್ಲೆಂಡಿನ ನಾಯಕರ ಬುದ್ಧಿವಂತಿಕೆ, ಶಕ್ತಿ ಸಾಮರ್ಥ್ಯಗಳ ಹಿಂದಿನ ಶಕ್ತಿಯನ್ನು ಹಿಂದೆ ಉನ್ನತ ತಂತ್ರಜ್ಞಾನ ಅವರ ಮಾತಿನಲ್ಲಿಯೇ ಹೇಳುವುದಾದರೆ ‘ಯಾಂತ್ರಿಕ ಕಲೆಗಳು’ ಸಾಮರ್ಥ್ಯವಿತ್ತು : ಹೊಸ ಚಿಂತನೆಗಳ ಜಗತ್ತು ಇತ್ತು ; ಎಂಬುದನ್ನು ಅರಿತುಕೊಂಡರು. ಇದನ್ನು ನಮ್ಮವರಿಗೆ ಮನವರಿಕೆ ಮಾಡಿಕೊಡಲು ರಾಯ್ ಅವರು ಅನೇಕ ಲೇಖನಗಳನ್ನು ಬರೆದರು. ಇಂಗ್ಲೆಂಡಿನ ತಂತ್ರಜ್ಞಾನದ ನೈಪುಣ್ಯತೆಯನ್ನು ಅರಿಯಬೇಕಾದರೆ ಆ ಮೂಲಕ ಭಾರತ ಅಭಿವೃದ್ಧಿಯಾಗಬೇಕಾದರೆ ಇಂಗ್ಲಿಶ್ ಶಿಕ್ಷಣ ಹಾಗೂ ಇಂಗ್ಲಿಶ್ ಭಾಷೆ ಅತ್ಯಗತ್ಯವೆಂದು ಹೇಳುತ್ತಾರೆ. ಈ ಶಿಕ್ಷಣವನ್ನು ಐರೋಪ್ಯರಿಂದಲೆ ಕೊಡಿಸಬೇಕೆಂದು ಒತ್ತಾಯಿಸುತ್ತಿದ್ದರು. ಈ ಒತ್ತಾಯದ ಹಿನ್ನೆಲೆಯಲ್ಲಿ ಥಾಮಸ್ ಬಾಬಿಂಗ್‌ಟನ್ ಮೆಕಾಲೆಯಿಂದಾಗಿ ಭಾರತದಲ್ಲಿ ಇಂಗ್ಲಿಶ್ ಶಿಕ್ಷಣ ಪದ್ಧತಿ ಪ್ರಾರಂಭವಾಗುತ್ತದೆ. ಥಾಮಸ್ ಬಾಬಿಂಗ್‌ಟನ್ ಮೆಕಾಲೆಯಿಂದಾಗಿ ಭಾರತದಲ್ಲಿ ಇಂಗ್ಲಿಶ್ ಶಿಕ್ಷಣ ಪ್ರಾರಂಭವಾಗುತ್ತದೆ. ಅವನನ್ನು ಬ್ರಿಟಿಶ್ ಸರ್ಕಾರ ಶಿಕ್ಷಣ ಮಂಡಳಿಗೆ ಅಧ್ಯಕ್ಷನನ್ನಾಗಿ ನೇಮಿಸುತ್ತದೆ. ಅವನು ಭಾರತೀಯ ಸಮಾಜ ಸಂಸ್ಕೃತಿಯನ್ನು ಅಧ್ಯಯನ ಮಾಡಿದ ನಂತರ ವರದಿಯನ್ನು ಸಿದ್ಧಪಡಿಸುತ್ತಾನೆ. ಅದರಲ್ಲಿ ಶಿಕ್ಷಣ ಪದ್ಧತಿಯನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕೆಂಬ ರೂಪರೇಷೆಗಳಿರುತ್ತವೆ. ಇದು “ಮಿನಿಟ್ಸ್ ಆನ್ ಎಜುಕೇಷನ್” ಎಂದೇ ಕರೆಯಲ್ಪಡುತ್ತಿದೆ. ಇದರಲ್ಲಿ ಅವನು ಸ್ಪಷ್ಟವಾಗಿ ಹೇಳುತ್ತಾನೆ.

“ನಾವು ಹಣವನ್ನು ಯಾವ ಭಾಷೆಯನ್ನು ಕಲಿಯುವುದು ಉತ್ತಮವೋ ಅದರ ಬೋಧನೆಗಾಗಿ ವಿನಿಯೋಗಿಸಬೇಕು; ಸಂಸ್ಕೃತ ಅಥವಾ ಅರೇಬಿಕ್ಗಿಂತ ಇಂಗ್ಲಿಶ್ ವಿದ್ವಾಂಸರನ್ನಾಗಿ ಮಾಡುವುದು ಸಾಧ್ಯವಿದೆ; ಈ ಗುರಿಯ ಕಡೆಗೆ ನಮ್ಮ ಪ್ರಯತ್ನವನ್ನು ಕೇಂದ್ರೀಕರಿಸಬೇಕು”.

ಮೆಕಾಲೆಯ ‘ಮಿನಿಟ್ಸ್ ಆನ್ ಎಜುಕೇಷನ್’ನಲ್ಲಿರುವ ಅಂಶಗಳನ್ನು ಸೂಚನೆ ರೂಪರೇಷೆಗಳನ್ನು ಒಪ್ಪಿದ ಭಾರತ ಸರ್ಕಾರ ೧೮೩೫ರಲ್ಲಿ ತನ್ನ ಶಿಕ್ಷಣ ನೀತಿಯ ಮೂಲಭೂತ ಅನುಚ್ಛೇದವನ್ನಾಗಿ ಮಾಡಿಕೊಳ್ಳುತ್ತದೆ. ಇದರ ಪ್ರಕಾರ “ಭಾರತೀಯರಿಗೆ ಯುರೋಪಿನ ಸಾಹಿತ್ಯ ಮತ್ತು ವಿಜ್ಞಾನವನ್ನು ಕಲಿಸುವುದು ಬ್ರಿಟಿಶ್ ಸರ್ಕಾರದ ಮುಖ್ಯ ನಿಲುವಾಗಿರಬೇಕು; ಹಾಗೂ ಶಿಕ್ಷಣಕ್ಕಾಗಿ ಬಳಸುವ ಹಣವನ್ನು ಇಂಗ್ಲಿಶ್ ಶಿಕ್ಷಣಕ್ಕಾಗಿ ಉತ್ತಮ ರೀತಿಯಲ್ಲಿ ಬಳಸಬೇಕು”. ಇಂತಹ ನಿಯಮಗಳೊಂದಿಗೆ ಮೆಕಾಲೆ ಮತ್ತು ಬೆಂಟಿಂಕ್ ಅವರಿಂದ ಇಂಗ್ಲಿಶ್ ಬೋಧನೆಯ ಶಾಲಾ ಕಾಲೇಜುಗಳು ಪ್ರಾರಂಭವಾದವು. ಆ ಸಮಯದಲ್ಲಿ ಸುಮಾರು ೩೦೦ ಮಿಲಿಯನ್‌ಗೂ ಹೆಚ್ಚು ಇದ್ದ ಜನತೆಗೆ ಇಂಗ್ಲಿಶ್ ವಿದ್ಯಾಭ್ಯಾಸ ನೀಡಬೇಕೆಂದು ಕಲಿಸಬೇಕೆಂಬುದಕ್ಕೆ ಹೆಚ್ಚು ಒತ್ತು ನೀಡಿತು. ಮೆಕಾಲೆಗೂ ಸಹ ದೇಶೀಯ ಭಾಷೆಗಳನ್ನ ಕಡೆಗಣಿಸಬೇಕೆಂಬುದಕ್ಕೆ ಹೆಚ್ಚು ಒತ್ತು ನೀಡಿತು. ಮೆಕಾಲೆಗೂ ಸಹ ದೇಶೀಯ ಭಾಷೆಗಳನ್ನು ಕಡೆಗಣಿಸಬೇಕೆಂಬ ಉದ್ದೇಶವಿರಲಿಲ್ಲ. ಆಧುನಿಕ ಜ್ಞಾನ ವಿಜ್ಞಾನಗಳು ತಾಂತ್ರಿಕ ಕೌಶಲ್ಯತೆ ಇಂಗ್ಲಿಶ್‌ನಲ್ಲಿದೆ; ಅದನ್ನು ಕಲಿತು ದೇಶಿ ಭಾಷೆಗಳಿಗೆ ಅದನ್ನು ತಂದು ಆ ಭಾಷೆಗಳನ್ನು ಸಹ ಶ್ರೀಮಂತಗೊಳಿಸುವ ಕೆಲಸ ಆಗಬೇಕೆಂಬುದಕ್ಕೆ ಹೆಚ್ಚು ಒತ್ತು ನೀಡಿತು. ಮೆಕಾಲೆಗೂ ಸಹ ದೇಶೀಯ ಭಾಷೆಗಳನ್ನ ಕಡೆಗಣಿಸಬೇಕೆಂಬ ಉದ್ದೇಶವಿರಲಿಲ್ಲ. ಆಧುನಿಕ ಜ್ಞಾನ ವಿಜ್ಞಾನಗಳು ತಾಂತ್ರಿಕ ಕೌಶಲ್ಯತೆ ಇಂಗ್ಲಿಶ್‌ನಲ್ಲಿದೆ; ಅದನ್ನು ಕಲಿತು ದೇಶಿ ಭಾಷೆಗಳಿಗೆ ಅದನ್ನು ತಂದು ಆ ಭಾಷೆಗಳನ್ನು ಸಹ ಶ್ರೀಮಂತಗೊಳಿಸುವ ಕೆಲಸ ಆಗಬೇಕೆಂಬುದು ಅವನ ಭಾವನೆಯಾಗಿತ್ತು. ಮೆಕಾಲೆಯ ಪ್ರಯತ್ನದಿಂದ ವಸಾಹತು ಸಂದರ್ಭದಲ್ಲಿ ಹಲವಾರು ಇತ್ಯಾತ್ಮಕ ಪರಿಣಾಮಗಳುಂಟಾದವು.

ಇಂಗ್ಲಿಶ್ ಶಿಕ್ಷಣದಿಂದಾಗಿ ಹಿಂದೂ ಚಿಂತನೆಗೆ ಪರ್ಯಾಯವಾದ ಸಾಮಾಜಿಕ ಉದ್ದೇಶಗಳನ್ನು ಹೊಂದಿದ ಒಂದು ವರ್ಗ ಭಾರತದಲ್ಲಿ ಸೃಷ್ಟಿಯಾಯಿತು. ಇದರಿಂದಾಗಿ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗೆ ಅವಕಾಶವಾಯಿತು. ಈ ಕ್ರಾಂತಿಯ ತಳಹದಿಯ ಮೇಲೆಯೇ ಇಂದಿನ ಜೀವನ ರೂಪಿತವಾಗಿದೆ. ಭಾರತೀಯ ಜನತೆಯಲ್ಲಿ ಚೈತನ್ಯವನ್ನು ಉಂಟುಮಾಡಲು; ಪೂರ್ವಾಗ್ರಹಗಳನ್ನು ನಿವಾರಿಸಲು ಅಜ್ಞಾನದ ಪದ್ಧತಿಗಳಿಂದ ಉಂಟಾಗಬಹುದಾದ ಅನಾಹುತಗಳನ್ನು ತಡೆಯಲು ಮೂಢನಂಬಿಕೆಗಳನ್ನು ಹೋಗಲಾಡಿಸಲು ಚಿಂತನೆಯನ್ನು ಉದ್ದೀಪಿಸಲು ಇಂಗ್ಲಿಶ್ ಭಾಷೆ ಸಹಕಾರಿಯಾಯಿತು. ಇಂಗ್ಲಿಶ್ ಭಾಷೆಯ ಮೂಲಕ ಹೊಸಜ್ಞಾನ ಎಚ್ಚರ ಕಾಣಿಸಿಕೊಂಡಿತು.

ಭಾರತೀಯ ಭಾಷೆಗಳ ಮೂಲಕ ಶಿಕ್ಷಣ ಕೊಟ್ಟಿದ್ದರೆ ಯಾವ ಭಾಷೆಯನ್ನು ಬಳಸಲಾಗುತ್ತಿತ್ತೋ ಆ ಭಾಷೆಯ ಬೆಳವಣಿಗೆಯಾಗಬಹುದಿತ್ತು; ಹಿಂದೂ ಧರ್ಮ ಸುಧಾರಣೆಯಾಗಬಹುದಿತ್ತು; ಎಂದು ಕೆಲವರು ಹೇಳಬಹುದು; ಆದರೆ ಅಖಿಲ ಭಾರತ ಮಟ್ಟದಲ್ಲಿ ಸುಧಾರಣೆಗಾಗಿ ಯಾವುದೇ ಯೋಜನೆ ಇರಲಿಲ್ಲ; ಇರುತ್ತಿರಲೂ ಇಲ್ಲ. ಭಾರತೀಯ ರಾಷ್ಟ್ರ ಐಕ್ಯಗೊಳ್ಳುವ ಬದಲು ಎಷ್ಟು ಭಾಷೆಗಳಿವೆಯೋ ಅಷ್ಟೂ ಭಿನ್ನ ಘಟಕಗಳಾಗಿರುತ್ತಿದ್ದವು. ಈ ರೀತಿ ದೇಶ ಚಿಕ್ಕ ಚಿಕ್ಕ ಘಟಕಗಳಾಗಿ ಒಡೆಯುವುದನ್ನು ಮೆಕಾಲೆ ಅನುಷ್ಠಾನಕ್ಕೆ ತಂದ ಇಂಗ್ಲಿಶ್ ಶಿಕ್ಷಣ ಪದ್ಧತಿ ತಡೆಯಿತು.

ಭಾರತದಲ್ಲಿ ಆದ ಪ್ರಮುಖವಾದ ಮಹತ್ವದ ವಿಚಾರವೆಂದರೆ ಭಾರತ ಏಕರಾಷ್ಟ್ರವಾಗಿ ರೂಪುಗೊಂಡಿದ್ದು. ಇಂಗ್ಲಿಶ್ ಭಾಷೆಯ ಮೂಲಕ ಸಮರೂಪದ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದಿದ್ದರಿಂದ ಸಮಾನ ಮನೋಭಾವದ ಬೆಳವಣಿಗೆಗೆ ಸಹಾಯಕವಾಯಿತು. ಇಂಗ್ಲಿಶ್ ಭಾಷೆ ಸಮಾನ ಮನೋಭಾವ ಸೃಷ್ಟಿಸಿದ್ದಲ್ಲದೆ ಭಾರತದ ರಾಜಕೀಯ ಚಿಂತನೆಗೆ ಮತ್ತು ಕ್ರಿಯಾಶೀಲತೆಗೆ ಸಾಮಾನ್ಯ ಭಾಷೆಯಾಗಿಯೂ ಒದಗಿಬಂತು. ಈ ಬಗೆಯ ಮನೋಭಾವ ಚಿಂತನೆ ಮತ್ತು ವಿಚಾರಗಳು ರಾಷ್ಟ್ರೀಯತಾ ಮನೋಭಾವವನ್ನು ರೂಪಿಸಿದವು. ಸಂಸ್ಕೃತದಲ್ಲಿ ಮೈತಳೆದು ಭಾರತೀಯ ಭಾಷೆಗಳಲ್ಲಿ ಈಗಲೂ ವ್ಯಕ್ತವಾಗುತ್ತ. ಜೀವಂತ ಅಂಶವಾಗಿ ಉಳಿದಿರುವ ಮಹಾಪರಂಪರೆ (Great Tradition) ಒಗ್ಗೂಡಿಸುವ ಪ್ರವಾಹದ ಮೂಲಕ ಇಂಗ್ಲಿಶ್ ಶಿಕ್ಷಣವು ಪ್ರಬಲ ವರ್ಗಗಳಲ್ಲಿ ಹರಡಿದ ಹೊಸ ವಿಚಾರಗಳ ಮತ್ತು ಹೊಸ ದೃಷ್ಟಿಯ ಮೂಲಕ ಭಾರತೀಯ ಪ್ರಜ್ಞೆ ಆಧ್ಯತ್ಮಿಕವಾಗಿ ಏಕೀಕೃತವಾಯಿತು. ಆಧ್ಯಾತ್ಮಿಕವಾಗಿ ಏಕೀಕೃತವಾದದ್ರಿಂದಲೆ ರಾಜಕೀಯ ಐಕ್ಯತೆ ಉಂಟಾಗಿ ಏಕ ಜನತೆಯಾಗಿ ವರ್ತಿಸಿ ಹೊಸ ಸಮಾಜ ಕಟ್ಟಲು ಸಾಧ್ಯವಾಯಿತು. ಯುರೋಪಿನಲ್ಲಿ ಪ್ರಾಂತೀಯ ಭಾಷೆಗಳಿಗೆ ಪ್ರಧಾನ್ಯ ನೀಡಿದ್ದರಿಂದ ಯುರೋಪ್ ಬಿಡಿ ಬಿಡಿಯಾಗಿ ಒಡೆದು ಹೋಗಿರುವುದನ್ನು ಗಮನಿಸಬಹುದು. ಇಂಗ್ಲಿಶ್ ಶಿಕ್ಷಣವಿಲ್ಲದಿದ್ದರೆ ಯುರೋಪಿನ ಸ್ಥಿತಿಯಲ್ಲಿ ಭಾರತ ಇರುತ್ತಿತ್ತು.

ಜಗತ್ತಿನ ಇತಿಹಾಸದಲ್ಲಿ ೧೯ನೇ ಶತಮಾನ ಬಹಳ ಪ್ರಾಮುಖ್ಯತೆಯನ್ನು ಗಳಿಸಿದಂತಹ ಕಾಳ, ಅದರಲ್ಲೂ ಯುರೋಪಿನಲ್ಲಿ ವೈಜ್ಞಾನಿಕವಾಗಿ ಹಲವಾರು ಸಂಶೋಧನೆಗಳು ಬೆಳಕಿಗೆ ಬಂದು ಜ್ಞಾನ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಗಳು ಕಾಣಿಸಿಕೊಂಡವು. ವೈಚಾರಿಕವಾಗಿಯೂ ಕ್ರಾಂತಿಕಾರಕವಾದ ಬದಲಾವಣೆಗಳಾದವು. ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವಗಳೆಂಬ ಕಲ್ಪನೆಗಳು ಹುಟ್ಟಿಕೊಂಡವು ಇವು ಇಂಗ್ಲಿಶ್ ಶಿಕ್ಷಣದ ಮೂಲಕ ಭಾರತಕ್ಕೂ ಬಂದು ಎರಡು ರೀತಿಯ ಚಿಂತನಾ ಮಾರ್ಗಗಳು ಹುಟ್ಟಿಕೊಂಡವು. ಒಂದು; ಸಂಪ್ರದಾಯದೊಂದಿಗೆ ಸಂಪರ್ಕವನ್ನು ಕಡಿದುಕೊಂಡು ಪಾಶ್ಚಾತ್ಯ ನಾಗರಿಕತೆಯನ್ನು ಒಪ್ಪಿ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಎರಡು: ತಮ್ಮ ಸಂಸ್ಕೃತಿಯನ್ನು ವಿಸ್ತಾರಗೊಳಿಸುವ ಸುಧಾರಿಸುವ ಮತ್ತು ಆಧುನೀಕರಿಸುವ ಮೂಲಕ ಹೊಸತಿಗೆ ಹಳೆಯದನ್ನು ಅಳವಡಿಸಿಕೊಂಡು ಮುಂದುವರಿಸುವುದು. ಒಟ್ಟಾರೆ ಇಂಗ್ಲಿಶ್ ಶಿಕ್ಷಣದ ಮೂಲಕ ಸಾಂಸ್ಕೃತಿಕ ಆಧುನೀಕರಣ ಉಂಟಾಯಿತು. ಕಾನೂನು ವಿಜ್ಞಾನ ಮತ್ತು ತಂತ್ರಜ್ಞಾನ ನಗರೀಕರಣ, ಕೈಗಾರೀಕರಣ ಸಾಂಸ್ಕೃತಿಕ ಸಂರಚನೆಗೆ ಪೂರಕವಾಗಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ಹಾಗೂ ಹೊಸ ಬಗೆಯ ರಾಜಕೀಯ ವ್ಯವಸ್ಥೆ ಇವೆಲ್ಲವೂ ಸಾಂಸ್ಕೃತಿಕ ಆಧುನೀಕರಣದ ಪ್ರಕ್ರಿಯೆಗಳೇ ಆಗಿವೆ.

ಇಂಗ್ಲಿಶ್ ಕಲಿಕೆಯಿಂದ ಸಾಂಸ್ಕೃತಿಕ ಆಧುನೀಕರಣವಾಗುತ್ತಿದ್ದಾಗ ದಲಿತರು ಇದರೊಂದಿಗೆ ಇದ್ದರೆ ಎಂದರೆ ಇಲ್ಲವೇ ಇಲ್ಲ ಎನ್ನಬೇಕು. ೧೯೨೩ರವರೆಗೂ ದಲಿತರಿಗೆ ಇಂಗ್ಲಿಶ್ ಕಲಿಯುವ ಅವಕಾಶಗಳೇ ಇರಲಿಲ್ಲ. ೧೮೫೫ಕ್ಕೆ ಮೊದಲು ದಲಿತರಿಗೆ ಶಿಕ್ಷಣ ಕೊಡದೆ ಇದ್ದದ್ದು ಹಾಗೂ ಶಾಲೆಗಳನ್ನು ಪ್ರಾರಂಭಿಸದೆ ಇದ್ದದ್ದುನ್ನು ಗಮನಿಸಿದ ಅಂಬೇಡ್ಕರ್ ಬ್ರಿಟಿಷ್‌ರೂ ಕೂಡಾ ಬ್ರಾಹ್ಮಣರಿಗೆ ಮತ್ತು ಮೇಲ್ಜಾತಿಯವರಿಗೆ ಮಾತ್ರ ಶಿಕ್ಷಣವನ್ನು ಸೀಮಿತಗೊಳಿಸಿದರು; ಇದು ಬ್ರಿಟಿಷರ ತಂತ್ರವೆಂದು ಅಂಬೇಡ್ಕರ್ ಗುರುತಿಸುತ್ತಾರೆ. ೧೮೫೪ರ ಜುಲೈ ೧೯ನೇ ದಿನಾಂಕದ ೪೯ನೇ ಸಂಖ್ಯೆಯ ಅಧಿಕೃತ ಪತ್ರ ಕೋರ್ಟ್‌ ಆಫ್ ಡೈರೆಕ್ಟರ್ ಈ ಕೆಳಕಂಡಂತೆ ಹೇಳುತ್ತದೆ;

“ಇದಕ್ಕೂ ಮುಖ್ಯವಾದ ಮತ್ತು ಈವರೆಗೆ ತೀರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ನಾವು ಒಪ್ಪಿಕೊಳ್ಳಬೇಕಾಗಿರುವ ಮತ್ತು ಪರಾಮರ್ಶಿಸಬೇಕಾದ ವಿಚಾರವೊಂದಿದೆ. ಬದುಕಿಗೆ ಯೋಗ್ಯವಾದ ಉಪಯುಕ್ತವಾದ ವ್ಯಾವಹಾರಿಕವಾದ ಶಿಕ್ಷಣವನ್ನು ಬೃಹತ್ ಸಮುದಾಯವಾದ ಜನ ಸಾಮಾನ್ಯರಿಗೆ ಕೊಡಬೇಕು. ಇದನ್ನು ಹೇಗೆ ಯಾವ ರೀತಿ ಕೊಡೆ ಬೇಕೆಂಬುದು ಪ್ರಶ್ನೆ. ಸಾರ್ಥಕ ಶಿಕ್ಷಣವನ್ನು ತಮ್ಮದೇ ಪ್ರಯತ್ನದಿಂದ ಪಡೆಯಲು ಈ ಜನರು ಸಂಪೂರ್ಣವಾಗಿ ಅಸಮರ್ಥರು. ಇನ್ನು ಮುಂದೆ ಕ್ರಿಯಾಶೀಲ ಕ್ರಮಗಳು ಈ ಗುರಿಯ ಸಾಧನೆಯತ್ತ ಹರಿಯಬೇಕು. ಇದಕ್ಕಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುತ್ತೇವೆ”.

ಈ ಅಧಿಕೃತ ಪತ್ರವೇ ದಲಿತರ ವಿದ್ಯಾಭ್ಯಾಸಕ್ಕೆ ನಾಂದಿಯನ್ನು ಹಾಕಿತು. ಇದರ ಅನುಷ್ಠಾನ ಮತ್ತು ಪ್ರಗತಿಯ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಹಂಟರ್ ಆಯೋಗವನ್ನು ನೇಮಿಸಿತು. ಅದರಂತೆ ೧೮೮೧ರಲ್ಲಿ ಕಳೆದು ೨೮ ವರ್ಷಗಳ ಸಾಧನೆಯ ವರದಿಯನ್ನು ಕೊಟ್ಟಿತು. ಆ ಅಂಕಿ ಅಂಶಗಳು ಈ ಕೆಳಕಂಡಂತಿವೆ.

ಪ್ರಾಥಮಿಕ ಶಿಕ್ಷಣ ೧೮೮೧-೮೨

  ಶಾಲೆಯಲ್ಲಿನ ವಿದ್ಯಾರ್ಥಿಗಳು ಒಟ್ಟಿನಲ್ಲಿ ಶೇಕಡಾವಾರು
ಕ್ರಿಶ್ಚಿಯನ್ನರು ೧೫೨೧ ೦.೪೨೧
ಬ್ರಾಹ್ಮಣರು ೬೩, ೦೭೧ ೨೦.೧೭
ಇತರ ಹಿಂದೂಗಳು ೨, ೦೨, ೩೪೫ ೬೪.೬೯
ಮಹಮದೀಯರು ೩೯,೨೩೧ ೧೨.೫೪
ಪಾರ್ಸಿಗಳು ೩, ೫೧೭ ೧.೧೨
ಆದಿವಾಸಿಗಳು ಮತ್ತು    
ಗುಡ್ಡಗಾಡು ಜನರು ೨೭೧೩ ೦.೮೭
ಕೆಳಜಾತಿಯ ಹಿಂದುಗಳು ೨೮೬೨ ೦.೮೭
ಯಹೂದ್ಯರು ಮತ್ತು ಇತರರು ೩೭೩ ೦.೧೨

ಸೆಕೆಂಡರಿ ವಿದ್ಯಾಭ್ಯಾಸ ೧೮೮-೧೯೨

 

  ಮಾಧ್ಯಮಿಕ ಶಾಲೆಗಳು ಪ್ರೌಢ ಶಾಲೆಗಳು
ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾವಾರು ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾವಾರು
ಕ್ರಿಶ್ಚಿಯನ್ನರು ೧೪೨೯ ೧೨.೦೬ ೧೧೧ ೨.೨೬
ಬ್ರಾಹ್ಮಣರು ೩೬೩೯ ೩೦.೭೦ ೧೯೭೮ ೪೦.೨೯
ಕೃಷಿಗಾರರು ೬೭೪ ೫.೨೬ ೧೪೦. ೨.೮೫
ಇತರ ಹಿಂದೂಗಳು ಕೆಳಜಾತಿಯವರು ೧೭ ೦.೧೪    
ಇತರ ಜಾತಿಗಳವರು ೩೮೨೩ ೩೨.೨೫ ೧೫೭೩ ೩೨.೦೪
ಮಹಮದೀಯರು ೬೮೭ ೫.೮೦ ೧೦೦ ೨.೦೪
ಪಾರ್ಸಿಗಳು ೧೫೨೬ ೧೨.೮೭ ೯೬೫ ೧೯.೬೬
ಆದಿನಿವಾಸಿಗಳು ಮತ್ತು ಗುಡ್ಡಗಾಡಿನ ಜನರು ೦.೦೫    
ಇತರರು (ಯಹೂದ್ಯರು ಮೊದಲಾದವರು) ೧೦೩ ೦.೮೭ ೯೨ ೦.೮೬

ಕಾಲೇಜು ವಿದ್ಯಾಭ್ಯಾಸ ೧೮೮೧-೮೨

         

  ವಿದ್ಯಾರ್ಥಿಗಳ ಸಂಖ್ಯೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇಕಡಾವಾರು
ಕ್ರಿಶ್ಚಿಯನ್ನರು ೧೪
ಬ್ರಾಹ್ಮಣರು ೨೪೧ ೫೦
ಕೃಷಿಗಾರರು
ಇತರ ಹಿಂದೂಗಳು    
ಕೆಳಜಾತಿಯವರು
ಇತರ ಜಾತಿಗಳವರು ೧೦೩ ೨೧.೩
ಮಹಮದೀಯರು ೧.೫
ಪಾರ್ಸಿಗಳು ೧೦೮ ೨೧.೫
ಆದಿನಿವಾಸಿಗಳು ಮತ್ತು ಗುಡ್ಡಗಾಡಿನ ಜನರು
ಇತರರು (ಯಹುದ್ಯರು ಮೊದಲಾದವರು) ೦.೪

ಈ ಸಂಖ್ಯೆಗಳು ಸೂಚಿಸುವ ಮುಖ್ಯ ಅಂಶವೆಂದರೆ ದಲಿತರಿಗೆ ಶಿಕ್ಷಣ ದೊರೆಯಬೇಕೆಂಬುದು ಸರ್ಕಾರದ ಧೋರಣೆಯಾಗಿದ್ದರೂ ೧೮೫೪ಕ್ಕೆ ಮೊದಲು ದಲಿತರು ಹೇಗಿದ್ದರೋ ಅದೇ ಸ್ಥಿತಿಯಲ್ಲಿರುವುದು ಕಂಡು ಬರುತ್ತದೆ. ಶಾಲಾ ಕಾಲೇಜುಗಳಲ್ಲಿ ಪ್ರವೇಶ ಮುಕ್ತವಾಗಿರಬೇಕೆಂದು ಹೇಳಿದ್ದರೂ ಸಹ ಮೇಲ್ಜಾತಿಗಳ ಅವಕೃಪೆಗೆ ಪಾತ್ರರಾಗಿ ಎಲ್ಲಿ ಸಂಚು ನಡೆಸುವರೋ ಎಂದು ಹೆದರಿದ ಬ್ರಿಟಿಷರು ಶಾಲಾ ಕಾಲೇಜುಗಳಿಗೆ ಪ್ರವೇಶ ನಿಡುವ ಅಧಿಕಾರವನ್ನು ಸ್ಥಳೀಯ ಶಿಕ್ಷಣದ ಜಿಲ್ಲಾ ಸಮಿತಿಗಳಿಗೆ ಒಪ್ಪಿಸಿ ಬಿಟ್ಟಿದ್ದರು. ಆದ್ದರಿಂದ ಸಕಲರ ಹಿತವನ್ನು ಬಯಸಿ ಪ್ರಾರಂಭಿಸಿದ್ದ ಇಂಗ್ಲಿಶ್ ಶಾಲಾ ಕಾಲೇಜುಗಳಲ್ಲಿ ಪ್ರತಿಷ್ಟಿತ ಜಾತಿಗಳು ಪ್ರವೇಶ ದೊರಕಿಸಿಕೊಂಡವು. ಅಂಬೇಡ್ಕರ್ ಅವರ ಮಾತಿನಲ್ಲಿಯೇ ಹೇಳುವುದಾದರೆ ಸರ್ವರ ಹಿತವನ್ನು ಬಯಸಿ ಹೊತ್ತಿಸಿದ್ದ ಜ್ಞಾನವೆಂಬ ಬೆಳಕಿನ ಬಳಿ ದಲಿತರನ್ನು ಕುಳಿತುಕೊಳ್ಳಲೂ ಬಿಡಲಿಲ್ಲ. ನಂತರ ದಲಿತರಿಗಾಗಿಯೇ ಪ್ರಾಯೋಗಿಕವಾಗಿ ಕೆಲವು ಶಾಲೆಗಳನ್ನು ತೆರೆಯಲಾಯಿತು. ಅಲ್ಲಿಗೆ ನೇಮಕಗೊಂಡ ಅಧ್ಯಾಪಕರು ಅನರ್ಹರಾಗಿದ್ದರು. ಇದನ್ನು ಗಮನಿಸಿದ ಮೌಂಟ್ ಸ್ಟೂಅರ್ಟ್ ಎಲ್ಪಿನ್‌ಸ್ಟನ್ ಎಂಬ ಅಧಿಕಾರಿಯು ಇದನ್ನು ಸರ್ಕಾರಕ್ಕೆ ವರದಿ ಮಾಡಿ ದಲಿತರಿಗೆ ಶಿಕ್ಷಣ ಕೊಡುವ ಕೆಲಸವನ್ನು ಕ್ರೈಸ್ತ ಮಿಷನರಿಗಳಿಗೆ ವಹಿಸಬಹುದೆಂದು ತಿಳಿಸಿದನು. ಅದರಂತೆ ಕ್ರೈಸ್ತ ಮಿಷನರಿಗಳು ಅಂದರೆ ಮತ ಪ್ರಚಾರಕರು ದಲಿತರಿಗೆ ಶಾಲೆಗಳಿಗೆ ಪ್ರವೇಶ ದೊರಕುವಂತೆ ನೋಡಿ ಕೊಂಡರಾದರೂ ಆಗಲೂ ಕೂಡಾ ದಲಿತರು ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶ ಪಡೆಯಲಿಲ್ಲ. ಅಡೆತಡೆಗಳುಂಟಾಗುತ್ತಲೇ ಇದ್ದವು. ೧೯೨೩ರಲ್ಲಿ ದಲಿತರಿಗೆ ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸಲೇಬಾರದು ಎಂದು ಸರ್ಕಾರ ಆದೇಶ ಹೊರಡಿಸಿತು. ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳು ಶಾಲೆಗೆ ಹೋದರು. ಅವರ ಸ್ಥಿತಿ ಎಂತಹದ್ದು ಎಂಬುದನ್ನು ತಿಳಿಯಲು ೧೯೨೮ ಮಾರ್ಚ್ ೨ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಸೌರಾಷ್ಟ್ರ ಪತ್ರಿಕೆ ವರದಿಸಿದ್ದ ವರದಿಯ್ನನು ಪ್ರಕಟಿಸಿತ್ತು. ಆ ವರದಿ ಗಮನಿಸಿ:

ಅಂತ್ಯಜ ಹುಡುಗರನ್ನು ಗುಜರಾತಿ ಶಾಲೆಗಳಿಗೆ ಸೇರಿಸಿಕೊಳ್ಳಬೇಕೆಂಬ ಆಜ್ಞೆ ಕಾಗದದ ಮೇಲಿದೆ ಅಷ್ಟೆ ; ನೂರಕ್ಕೆ ೯೫ ಶಾಲೆಗಳು ಚಳಿ, ಮಳೆ, ಗಾಳಿ, ಬಿಸಿಲು ಯಾವುದೆ ಇರಲಿ ದಲಿತ ಮಕ್ಕಳು ಹೊರಗೆ ಕುಳಿತು ಕೊಳ್ಳಬೇಕು. ಆ ರೀತಿ ನಿಯಮವೇ ಇತ್ತು”.

ಇಂತಹ ಅಸ್ಪೃಶ್ಯ ಸ್ಥಿತಿ ಇದ್ದುದರಿಂದ ದಲಿತ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಜೊತೆಗೆ ಅವರ ಸ್ಥಿತಿಗತಿಗಳೂ ಕೂಡಾ ಶಾಲೆಗೆ ಹೋಗುವಂತಹದ್ದಾಗಿರಲಿಲ್ಲ. ಮೇಲ್ಜಾತಿಯವರು ಇಂಗ್ಲಿಶ್ ಕಲಿತು ಸಾಂಸ್ಕೃತಿಕ ಆಧುನೀಕರಣಕ್ಕೊಳಗಾಗಿ ಸರ್ಕಾರದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿದ್ದಲ್ಲದೆ ಕೈಗಾರಿಕೆ, ವಾಣಿಜ್ಯ, ತಾಂತ್ರಿಕತೆ, ಆರ್ಥಿಕ, ರಾಜಕೀಯ ಇತ್ಯಾದಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದುವರಿದರು. ಇವರು ಇಂದಿಗೂ ಕೂಡಾ ಇಂಗ್ಲಿಶ್‌ನ್ನೇ ತಮ್ಮ ಮಾತೃಭಾಷೆಯೇನೋ ಎಂಬಂತೆ ಬಳಸುತ್ತಿದ್ದಾರೆ. ನಗರೀಕರಣವಾದ ನಂತರವಂತೂ ಮಧ್ಯಮ ವರ್ಗದವರು ತಮ್ಮ ಮನೆ ಮತ್ತು ವ್ಯವಹಾರದಲ್ಲಿ ಇಂಗ್ಲಿಶನ್ನೇ ಬಳಸುತ್ತಾರೆ. ಸಹಜವಾಗಿ ಮಕ್ಕಳಿಗೆ ಕಲಿಸುತ್ತಾರೆ ಮತ್ತು ಅವರಿಗೆ ಹುಟ್ಟಿನಿಂದಲೇ ಆ ಭಾಷೆ ಬರುತ್ತದೆ. ಈ ವರ್ಗದ ಜನರು ಹಣ, ಇಂಗ್ಲಿಶ್ ಅಧಿಕಾರ ಮೂರು ಇದ್ದವರು ಮಾತ್ರ ಇಂಗ್ಲಿಶ್ ಕಲಿಯುವಂತಹ ಪರಿಸ್ಥಿತಿ ನಿರ್ಮಾನ ಮಾಡಿಬಿಟ್ಟರು. ಅಂದರೆ ಖಾಸಗಿ ಶಾಲಾ ಕಾಲೇಜುಗಳಲ್ಲಿ ಪ್ರಾರಂಭ ಮಾಡುತ್ತಾ ದುಬಾರಿ ದೇಣಿಗೆ ಮತ್ತು ಶುಲ್ಕಗಳನ್ನು ವಿಧಿಸುತ್ತಾ ದಲಿತ ವರ್ಗಗಳು ಆ ಕಡೆ ತಲೆ ಹಾಕದಂತೆ ಸರ್ಕಾರಿ ಶಾಲೆಗಳೇ ಅವರಿಗೆ ಅನಿವಾರ್ಯವೆನಿಸುವಂತೆ ಮಾಡಿಬಿಟ್ಟರು. ಇದರಿಂದಾಗಿ ದಲಿತರು ಯಥಾಸ್ಥಿತಿಯಲ್ಲಿ ಉಳಿದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತಿಯ ಅಸಮಾನತೆ ಒಂದು ಕಡೆ ಜ್ಞಾನದ (ಇಂಗ್ಲಿಶ್ ಭಾಷೆಯ) ಅಸಮಾನತೆ ಮತ್ತೊಂದು ಕಡೆಗಿದೆ. ಇದು ಬಂಡವಾಳಶಾಹಿ ಸಮಾಜದಲ್ಲಿ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಯಜಮಾನ್ಯ ಸಂಸ್ಕೃತಿಯಲ್ಲಿ ಸಹಜವೇ ಆಗಿದೆ ಎಂದು ಭಾವಿಸಿದರೆ ಅದರಿಂದ ಪ್ರಯೋಜನವಿಲ್ಲ. ವ್ಯವಸ್ಥೆಯನ್ನು ಬದಲಾವಣೆ ಮಾಡಲು ಪ್ರಯತ್ನಿಸಬೇಕು.

ಆದರೆ ಬುದ್ಧಿಜೀವಿಗಳ ಒಂದು ವರ್ಗ ಇಂಗ್ಲಿಶ್ ಕಲಿಕೆಯನ್ನು ವಿರೋಧಿಸುತ್ತಿವೆ. ಇವರು ಕನ್ನಡ ಭಾಷೆ ಹಾಳಾಗುತ್ತಿದೆ. ಕನ್ನಡ ಸಂಸ್ಕೃತಿ ಅಳಿಯುತ್ತುದೆ ಎಂದು ಭಾವಿಸಿ ಕಲಿಕೆಗೆ ವಿರೊಧ ವ್ಯಕ್ತಪಡಿಸುತ್ತಿದ್ದಾರೆ. ಇವರದು ಭಾವನಾತ್ಮಕ ವಿಚಾರಗಳಿಗೆ ಸಂಬಂಧ ಪಟ್ಟಿದ್ದು, ಇವರಿಗೆ ಬಡವರ ವಾಸ್ತವ ಸ್ಥಿತಿಗತಿಗಳ ಅರಿವಿಲ್ಲದವರು ಎನ್ನಬಹುದು. ಅಂಟೋನಿಯ ಗ್ರಾಮ್ಸಿಯ ಮಾತುಗಳು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತವೆ. ಗ್ರಾಮ್ಸಿ ಬುದ್ಧಿಜೀವಿಗಳನ್ನು ಎರಡು ಗುಂಪನ್ನಾಗಿ ಮಾಡುತ್ತಾನೆ. ಒಂದನೆ ವರ್ಗದವರು ಜೀವಂತ ಬುದ್ಧಿಜೀವಿಗಳು. ಎರಡನೆಯ ವರ್ಗದವರು ಪರಂಪರಾನುಗತ ಬುದ್ಧಿಜೀವಿಗಳು. ‘ಜೀವಂತ ಬುದ್ಧಿಜೀವಿಗಳು’ ಬಂಡವಾಳಶಾಹಿಗೆ ಪೂರಕವಾಗಿರುವಂತಹ ಕೈಗಾರಿಕಾ ತಂತ್ರಜ್ಞರು, ರಾಜಕೀಯ ಅರ್ಥಶಾಸ್ತ್ರಜ್ಞರು ಹೊಸ ಕಾರ್ಯ ವಿಧಾನದ ಸಂಘಟಕರು; ಹೊಸ ನ್ಯಾಯ ಪದ್ಧತಿಯನ್ನು ರೂಪಿಸುವ ಚಾಲಾಕಿತನದವರು ಹೊಸ ಉತ್ಪಾದನಾ ತಂತ್ರಗಳನ್ನು ಪ್ರಚೋದಿಸುವ ಉತ್ಪಾದನೆಗೆ ಬಂಡವಾಳವನ್ನು ಹೂಡಿ ಅಧಿಕ ಉತ್ಪಾದನೆ ಮಾಡುವವರಾಗಿರುತ್ತಾರೆ. ಇವರು ನಾಗರಿಕ ಸೇವೆಗಳಿಂದ ಹಿಡಿದು ಪ್ರಭುತ್ವದವರೆಗೆ ವ್ಯಾಪಕವಾದ ಜ್ಞಾನಶಾಖೆಗಳನ್ನು ಒಂದು ವಲಯದ ಜನರಿಗೆ ದಕ್ಕುವಂತೆ ಮಾಡುತ್ತಾರೆ. ಬೇರೆಯವರಿಗೆ ಅದು ದಕ್ಕದಂತೆ ಮಾಡುವ ಹುನ್ನಾರಗಳನ್ನು ರೂಪಿಸುತ್ತಿರುತ್ತಾರೆ.

ಪರಂಪರಾನುಗತ ಬುದ್ಧಿಜೀವಿಗಳು ಒಂದು ರೀತಿಯಲ್ಲಿ ಪುರೋಹಿತಶಾಹಿಯಿದ್ದಂತೆ. ಶಿಕ್ಷಣ, ಸಂಸ್ಕೃತಿ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಕಲೆ ಸಂಗೀತ ಸಾಹಿತ್ಯಗಳಲ್ಲಿ ಪರಿಣತಿಯನ್ನು ಪಡೆದಿದ್ದೇವೆ ಎಂದು ಹೇಳಿಕೊಂಡು ಅಧಿಕಾರಸ್ಥರ ಆಶ್ರಯ ಪಡೆದು ಊಳಿಗಮಾನ್ಯ ವ್ಯವಸ್ಥೆಯನ್ನು ಪೋಷಿಸುವುದು. ಇದರಲ್ಲಿ ಗ್ರಾಮೀಣ ಪ್ರದೇಶದ ಬುದ್ಧಿಜೀವಿಗಳು ಸೇರುತ್ತಾರೆ. ಇವರು ಅಧಿಕಾರಸ್ಥ ಜನರನ್ನು ಓಲೈಸುತ್ತಾ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮ ಮಾಡಿಕೊಂಡು ಸುಖ ಜೀವನ ನಡೆಸುತ್ತಿರುವುದನ್ನು ಕಂಡು ಮರಿ ಸಾಹಿತಿ ಕಲಾವಿದರು ಇವರನ್ನು ಅನುಕರಿಸಲು ತೊಡಗುತ್ತಾರೆ. ಜೀವಂತ ಬುದ್ಧಿಜೀವಿಗಳಿಗಿಂತ ಪರಂಪರಾನುಗತ ಬುದ್ಧಿಜೀವಿಗಳು ಹೆಚ್ಚು ಅಪಾಯಕಾರಿ. ಜೀವಂತ ಬುದ್ಧಿಜೀವಿಗಳು ಯಾರಿಗೂ ಗೊತ್ತಾಗದಂತೆ ಬಂಡವಾಳಶಾಹಿಯನ್ನು ಪ್ರೋತ್ಸಾಹಿಸಿದರೆ ಪರಂಪರಾನುಗತ ಬುದ್ಧಿಜೀವಿ ನೇರವಾಗಿ ಬೀದಿಗಿಳಿದು ಬಂಡವಾಳಶಾಹಿ ಪರವಾಗಿ ನಿ‌ಲ್ಲುತ್ತಾನೆ. ಘೋಷಣೆಗಳನ್ನು ಕೂಗುತ್ತಾನೆ. ಏಕೆಂದರೆ ಇವನಿಗೆ ಹಳ್ಳಿಗಾಡಿನ ಬುದ್ಧಿಜೀವಿಗಳ ಬೆಂಬಲವಿರುತ್ತದೆ. ಗ್ರಾಮ್ಸಿಯ ಈ ಅಭಿಪ್ರಾಯವನ್ನು ಸ್ಥೂಲವಾಗಿ ಇಲ್ಲಿನ ವಿಚಾರಗಳಿಗೆ ಅನ್ವಯವಾಗುವಂತೆ ಬಳಸಿದ್ದೇನೆ. ಈ ಎರಡೂ ವರ್ಗದ ಬುದ್ಧಿಜೀವಿಗಳ ಜೊತೆಗೆ ನಾನು ಪ್ರಗತಿಪರರಾದಬುದ್ಧಿಜೀವಿಗಳನ್ನು ‘ಚಲನಶೀಲ ಬುದ್ಧಿಜೀವಿಗಳೆಂಬ’ ಮತ್ತೊಂದು ವರ್ಗವನ್ನು ಕರೆಯುತ್ತೇವೆ. ಈ ಚಲನಶೀಲ ಬುದ್ಧಿಜೀವಿಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಗತಿಯ ಕಡೆ ಆಸಕ್ತಿ ಇರುವವರು. ಎಲ್ಲಾ ವರ್ಗದ ಏಳಿಗೆಯನ್ನು ಬಯಸುವವರು. ಇಂತಹ ಚಲನಶೀಲ ಬುದ್ಧಿಜೀವಿಗಳು ಪ್ರಾಥಮಿಕ ಹಂತದಿಂದಲೇ ಇಂಗ್ಲಿಶ್ ಭಾಷೆಯನ್ನು ಈಗಿನ ಜಾಗತೀಕರಣದ ಸಂದರ್ಭದಲ್ಲಿ ಕಲಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಪ್ರಾಥಮಿಕ ಮಟ್ಟದಿಂದ ಪದವಿ ಪೂರ್ವಶಿಕ್ಷಣದವರೆಗೆ ವಿದ್ಯಾರ್ಥಿಗಳ ಸಂಖ್ಯೆ ೧೬೦.೪೦ ಲಕ್ಷ ಎಂದು ವರದಿಯೊಂದು ತಿಳಿಸುತ್ತದೆ. ಇವರೆಲ್ಲಾ ಇಂದಿನ ಅಗತ್ಯವಾದ ಇಂಗ್ಲಿಶ್ ಕಲಿಯುತ್ತಿಲ್ಲ. ಆಧುನೀಕರಣದ ಸಾಂಸ್ಕೃತಿಕ ಪ್ರಕ್ರಿಯೆಯಲ್ಲಿ ದಲಿತರು ಪಾಲ್ಗುಗೊಳ್ಳಬೇಕಾದರೆ ಸ್ವಾಭಿಮಾನದಿಂದ ಬದುಕಬೇಕಾದರೆ ಇಂಗ್ಲಿಶ್ ಕಲಿಯಬೇಕು. ಇಲ್ಲದಿದ್ದರೆ ಪ್ರತ್ಯೇಕ ದ್ವೀಪಗಳಾಗಿ ಉಳಿಯುತ್ತಾರೆ. ಆದ್ದರಿಂದಲೇ ಕುವೆಂಪು ಹೇಳಿದ್ದು; ಇಂಗ್ಲಿಶ್ ಶಿಕ್ಷಣ ಕಲಿಯದಿದ್ದರೆ ಸಗಣಿ ಎತ್ತಬೇಕಾಗುತ್ತಿತ್ತು ಎಂದು-ಬಿ.ಎಂ.ಶ್ರೀಯವರಿಂದ ಹಿಡಿದು ಇಲ್ಲಿಯವರೆಗೆ ಹಲವಾರು ಸಾಹಿತಿಗಳು ಅದರಲ್ಲೂ ಕನ್ನಡ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣಗಳಲ್ಲಿ ಇಂಗ್ಲಿಶಿನ ಅಗತ್ಯ ಒತ್ತಿ ಹೇಳಿರುವ ಭಾಗಗಳನ್ನು ನನ್ನ ಮಾತಿನ ಸಮರ್ಥನೆಗಾಗಿ ಆರಿಸಿಕೊಡುತ್ತಿದ್ದೇನೆ.

“ಒಕ್ಕಡೆ ನಮ್ಮ ಹುಡುಗರಿಗೆ ಓದುವುದಕ್ಕೆ ಸರಿಯಾದ ಪುಸ್ತಕಗಳೆ ಇಲ್ಲವೆಂಬ ದೂರು. ಇದರ ಮೇಲೆ ಇಂಗ್ಲಿಷಿನ ಮೇಲೆ ಮತ್ಸರ. ಮತ್ಸರವಿಲ್ಲದಿದ್ದರೂ ಅಸಮಾಧಾನ ಆಸಡ್ಡೆ; ಹೋಗಲಿ, ಇಂಗ್ಲಿಷನ್ನು ಕಲಿತವನು ಕಾಣಬಹುದಾದ ಹೊಕ್ಕು ಬಳಸಬಹುದಾದ ಸಾಹಿತ್ಯದ ರಮಣೀಯವಾದ ಉದ್ಯಾನವನಗಳನ್ನು ಕನ್ನಡ ಬಲ್ಲವನು ಕಾಣುವಂತೆ ಹೊಕ್ಕು ಬಳಸುವಂತೆ ಮಾಡುತ್ತೀರಾ ? ಇಲ್ಲವಾದರೆ ಬಂಗಾರದ ಬಳೆಯೂ ಇಲ್ಲದೆ ಹಿತ್ತಾಳೆಯ ಕಡಗವೂ ಇಲ್ಲದೆ ಹಾಗೂ ಕೆಟ್ಟಿ ಹೀಗೂ ಕೆಟ್ಟಿ ಎಂಬ ಸ್ಥಿತಿಗೆ ನಮ್ಮ ಮಕ್ಕಳನ್ನು ತಳ್ಳಿದ ಹಾಗೆ ಆಗುವುದಿಲ್ಲವೆ?”
ಬಿ.ಎಂ.ಶ್ರೀ ಶ್ರೀ ಸಾಹಿತ್ಯ, ಪು. ೨೬೮.

“ಈಗ ನಾವು ಸಮಸ್ತ ಭೂಭಾಗದ ಪ್ರಜೆಗಳಾಗಿರುವಲ್ಲಿ ಎಲ್ಲೆಲ್ಲಿಯೂ ಹರಡಿಕೊಂಡಿರುವ ಪ್ರಪಂಚ ಭಾಷೆಯಾದ ಇಂಗ್ಲಿಷನ್ನು ಬಿಟ್ಟರೆ ನಾವು ಹಿಂದುಳಿದವರಾಗಿ ಕೇಡಿಗೀಡಾಗುವೆವು….. ಆಧುನಿಕಶಾಸ್ತ್ರ ವಿಚಾರ ಗಳೆಲ್ಲವೂ ನಮಗೆ ದೊರೆಯುವುದು ಇಂಗ್ಲಿಷ್ನಲ್ಲಿಯೆ. ಇದನ್ನು ಬಿಟ್ಟು ಬೇರೆ ಬೇರೆ ಭಾಷೆ ಕಲಿಯುವುದು ನಷ್ಟವೇ ವಿನಾ ಆದಾಯವಿಲ್ಲ.”
ಬೆಳ್ಳಾವೆ ವೆಂಕಟನಾರಾಯಣಪ್ಪ, ೧೯೩೭.

“…..ನಮ್ಮನ್ನು ನಾವು ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಿದ್ದು ಇಂಗ್ಲಿಷ್, ಸ್ವಹಸ್ತ ಪರಹಸ್ತಗಳಿಂದ ನಮ್ಮ ಕಣಜವನ್ನು ತುಂಬುವ ಸಂಪತ್ತುವುಳ್ಳದ್ದು ಇಂಗ್ಲಿಷ್. ಅದರ ಸಹಾಯದಿಂದ ಇತರ ಪಾಶ್ವಾತ್ಯ ಭಾಷೆಗಳನ್ನು ಸುಲಭವಾಗಿ ಕಲಿತುಕೊಳ್ಳಬಹುದು. ಪಾಶ್ಚಾತ್ಯ ಪ್ರಪಂಚದೊಡನೆ ವಿಶ್ವದೊಡನೆ ವ್ಯವಹಾರ ನಡೆಸಬಹುದು. ಆದ್ದರಿಂದ ಇದನ್ನು ಸದ್ಯಕ್ಕಾದರೂ ತಿರಸ್ಕರಿಸುವುದು ನನಗೆ ಒಪ್ಪಿಗೆಯಾದುದಲ್ಲ.”
ಎ.ಆರ್.ಕೃಷ್ಣಶಾಸ್ತ್ರಿ, ೧೯೪೧.

“ಇಂಗ್ಲಿಷ್ ಭಾಷೆಯು ಪ್ರಪಂಚದ ಭಾಷೆಗಳ ಸಾರವನ್ನೆಲ್ಲಾ ಹೀರಿ ಪರಿಪುಷ್ಪವಾಗಿರುವ ಭಾಷೆ. ಇಂಗ್ಲಿಷ್ ಭಾಷೆಯಿಂದ ನಮಗೆ ಬಹಳ ಪ್ರಯೋಜನವುಂಟೆಂದ ಭರತಖಂಡಕ್ಕೆ ಸ್ವಾತಂತ್ರ್ಯ ಬಂದ ಮೇಲೂ ಇಲ್ಲಿಯ ವಿದ್ಯಾಭ್ಯಾಸ ಕ್ರಮದಲ್ಲಿ ಇಂಗ್ಲಿಷ್ ಭಾಷಾ ವ್ಯಾಸಂಗಕ್ಕೆ ಗಣ್ಯ ವಾದ ಸ್ಥಾನವಿರಬೇಕೆಂದು ಅನೇಕ ಮಂದಿ ವಿದ್ವಾಂಸರು” ಅಭಿಪ್ರಾಯ ಪಟ್ಟಿದ್ದಾರೆ (ಜವಹರಲಾಲ್ ನೆಹರು, ಅಬ್ದುಲ್ ಕಲಾಂ, ಅಜಾನ್ ಇವರ ಮಾತುಗಳನ್ನು ಅನುಮೋದಿಸುತ್ತಾರೆ).
ಸಿ.ಕೆ.ವೆಂಕಟರಾಮಯ್ಯ, ೧೯೪೭.

“ಕಳೆದ ೧೫೦ ವರ್ಷಗಳಿಂದ ಇಂಗ್ಲಿಷ್ ನಮ್ಮಲ್ಲಿ ಬರಿಯ ಆಡಳಿತ ಭಾಷೆಯಾಗಿ ಉಳಿಯದೆ ಅದು ಜಗತ್ತಿನ ಜ್ಞಾನ ಭಂಡಾರದ ಬೀಗದ ಕೈಯಂತಿದೆ. ಪಾಶ್ಚಾತ್ಯರ ಸ್ವತಂತ್ರ ವಿಚಾರಸರಣಿಯ ಪ್ರವಾಹವಾಗಿದೆ. ಭರತಖಂಡದಲ್ಲಿ ಈಗ ಉಂಟಾಗಿರುವ ಜಾಗೃತಿಗೆ ಇಂಗ್ಲಿಷ್ ಭಾಷೆಯು ಬಹುಮಟ್ಟಿಗೆ ಕಾರಣವಾಗಿದೆ. ಈ ಭಾಷೆಯು ಜಗತ್ತಿನ ಎಲ್ಲ ದೇಶ ಗಳಲ್ಲಿಯೂ ಕೆಲಮಟ್ಟಿಗೆ ನೆಲೆಸಿದೆ. ಈ ಭಾಷೆಯನ್ನಾಡುವ ಜನರ ಸಂಖ್ಯೆ ಬಹಳವಾಗಿದೆ. ಎಲ್ಲ ವಿಷಯದ ಮೇಲೆ ಮಹತ್ವದ ಗ್ರಂಥಗಳು ಇಂಗ್ಲಿಷ್ ಭಾಷೆಯಲ್ಲಿ ದೊರೆಯುವವು ಇಷ್ಟು ಉಪಯುಕ್ತವಾದ ಭಾಷೆಯನ್ನು ನಾವು ಕಳೆದುಕೊಳ್ಳುವುದು ವಿಹಿತವಲ್ಲ. ಆದುದರಿಂದ ಈ ಭಾಷೆಗೆ ನಮ್ಮ ಶಾಲೆ ಕಾಲೇಜುಗಳಲ್ಲಿ ಸ್ಥಾನವಿರತಕ್ಕದ್ದು.”
ಎಸ್.ಸಿ.ನಂದಿಮಠ, ೧೯೫೨

“ಇಂಗ್ಲಿಷ್ನ್ನು ಚೆನ್ನಾಗಿ ಕಲಿಸುವ ಏರ್ಪಾಟು ಮಾಡೋಣ, ಕಲಿಯ ಬೇಕಾದುದನ್ನು ಚೆನ್ನಾಗಿ ಕಲಿಯಬೇಕು, ಕಲಿಸಬೇಕು…. ಮುಂದೆ ಯಾವ ಪ್ರಾಂತಕ್ಕಾಗಲಿ ಓದಿನ ಮುಂದುವರಿಕೆಗೆ ವಿದ್ಯಾರ್ಥಿ ಹೋದಲ್ಲಿ ಅವನಿಗೆ ಇಂಗ್ಲಿಷ್… ಬರುತ್ತಿರುವಾಗ ಎಲ್ಲಿಯಾಗಲಿ ಶಿಕ್ಷಣ ಪಡೆಯುವುದೂ ಸಂಚರಿಸಿ ಉದ್ಯೋಗ ಮಾಡುವುದೂ ಶಕ್ಯವಾಗುತ್ತದೆ…. ನಮಗೆ ಎಲ್ಲಿಯವರೆಗೆ ಹೊರದೇಶಗಳ ಸಂಬಂಧ ಇರುತ್ತದೆಯೋ ಆವರೆಗೆ ನಮಗೆ ಅವರ ಎಲ್ಲಾ ಸಂಗತಿಗಳೂ ತಿಳಿಯಬೇಕು: ಪಾಶ್ಚಾತ್ಯವಾಗ ಎಲ್ಲಾ ಕ್ರಿಯಾಮಂಡಲಕ್ಕೂ ಇಂಗ್ಲಿಷ್ ಬಾಯಿ. ಅದರ ಸಹಾಯ ಪಡೆದು ಆ ಸಾರಸ್ವತ ಸಂಪತ್ತು ನಮ್ಮ ಭಾಷೆಗಳಿಗೆ ಬರುವಂತೆ ಮಾಡಿಕೊಂಡಲ್ಲದೆ ಇವೊತ್ತಿನ ಲೋಕಜೀವನ ತಾಳಮೇಳ ಅಗತ್ಯ ನಮಗೆ ತಿಳಿಯವು. ಅವಕ್ಕೆ ನಾವು ಸರಿ ಕೂಗಲು ಶಕ್ಯವಾಗದು. ನಾವು ಉಳಿಯೆವು. ಆದುದರಿಂದ ಇಂಗ್ಲಿಷ್ ಕಲಿಯಲು ಎಷ್ಟು ಜನವೆಂದರೆ ಅಷ್ಟು ಜನ ಇನ್ನೂ ಬಹುಕಾಲ ಸಿದ್ಧರಾಗಬೇಕು”.
ವಿ. ಸೀತಾರಾಮಯ್ಯ, ೧೯೫೨

“ವಿಜ್ಞಾನದ ಮಾತನ್ನಾಡಿದೆ. ಈ ಹೊತ್ತು ಅದರ ಅರಿವಿಗೆ ಇಂಗ್ಲಿಷ್ನಂತಹ ಭಾಷೆಯು ತುಂಬಾ ಸಹಾಯ ಮಾಡಿದೆ.”
ಶಿವರಾಮ ಕಾರಂತ, ೧೯೫೪

“ಇಂಗ್ಲಿಷಾದರೋ ನನ್ನನ್ನು ಬೆಳೆಸಿದ ಭಾಷೆ; ಇನ್ನೂ ಬೆಳೆಸುತ್ತಿರುವ ಭಾಷೆ; ನಾನು ಆ ಭಾಷೆಯನ್ನು ಬಹಳ ವಿಶ್ವಾಸದಿಂದ ಒದಿದ್ತೇನೆ; ಇನ್ನೂ ಓದುತ್ತಿದ್ದೇನೆ. ಅದರ ವಿಷಯದಲ್ಲಿ ನನಗೆ ಬಹಳ ಪ್ರೇಮವುಂಟು. ನಮ್ಮವಳು ಇಂಗ್ಲಿಷ್ನ್ನು ಕಲಿಯಲೇಬೇಕೆಂದೂ ಅದರ ಅತ್ಯುತ್ತಮ ಗ್ರಂಥಗಳನ್ನು ಓದಲೇಬೇಕೆಂದೂ ಇದರಿಂದ ಬರುವ ಸಂಸ್ಕೃತಿಯು ನಮಗೆ ಬರಿಯ ಯಾವ ದೇಶ ಭಾಷೆಯನ್ನು ಓದಿದರೂ ಬದಲಾರದೆಂದು ನನ್ನ ಅಭಿಪ್ರಾಯ. ನವು ಈ ರೀತಿ ಇಂಗ್ಲಿಷ್ನ್ನು ಓದಿ ನಮ್ಮ ತಿಳಿವನ್ನು ಹೆಚ್ಚಿಸಿಕೊಂಡು ಅದರ ಸಹಾಯದಿಂದ ನಾವೂ ಮುಂದುವರಿದು ಜನರನ್ನು ಮುಂದುವರಿಸುವುದಕ್ಕೆ ಪ್ರಯತ್ನ ಮಾಡಬೇಕು…… ನಾನೊಬ್ಬನು ಓದಿ ಜ್ಞಾನಿಯಾದರೆ ನಾನೊಬ್ಬನು ಓದಿ ಸಖಿಯಾದರೆ, ನಾನೊಬ್ಬನು ಓದಿ ಹಿರಿಯನಾದರೆ ಅದರಿಂದ ಬಂದ ಹಿರಿಯ ಫಲವೇನು ಎಂಬ ಖೇದವು ನಮ್ಮೆಲ್ಲರ ಮನಸ್ಸುನ್ನು ಕೊರೆಯುತ್ತಿರಬೇಕು.”
ಮಾಸ್ತಿ, ೩.೧೨.೧೯೫೩

“ಆಂಗ್ಲ ಭಾಷೆಯನ್ನು ಬಿಡಬೇಕೆಂದು ನಾನು ಪ್ರತಿಪಾದಿಸುವುದಿಲ್ಲ. ನೂರೈವತ್ತು ವರ್ಷಗಳ ಸತತ ಪ್ರಯತ್ನದಿಂದ ವಿಶ್ವವ್ಯಾಪ್ತಿಯನ್ನು ಪಡೆದ ಆ ಭಾಷೆ ನಮ್ಮ ದೇಶದಲ್ಲಿ ನೆಲೆನಿಂತಿದೆ. ನಮಗೆ ಸ್ವಾತಂತ್ರ್ಯದ ಮಂತ್ರೋಪದೇಶ ಮಾಡಿದೆ. ಜಗತ್ತಿನ ಜ್ಞಾನಭಂಡಾರದ ಅನೇಕ ದ್ವಾರಗಳನ್ನು ತೆರೆದುಕೊಟ್ಟಿದೆ. ಎಲ್ಲಕ್ಕೂ ಮೇಲಾಗಿ ಆ ಭಾಷೆಯ ಅನೇಕ ವಾಕ್ ಪ್ರೌಢಿಮೆಯನ್ನು ಲೇಖನ ಪ್ರತಿಮೆಯನ್ನು ವಿಶ್ವವೇ ಅಚ್ಚರಿದಳೆವಂತೆ ಹಲವು ಭಾರತೀಯ ಮೇಧಾವಿಗಳು ಪಡೆದು ಕೊಂಡಿದ್ದಾರೆ. ಆದುದರಿಂದ ಇಂತಹ ದೊಡ್ಡ ಭಾಷೆಯನ್ನು ನಾವು ಬಿಡಬೇಕೆಂದು ಹೇಳುವ ಸಾಹಸಕ್ಕೆ ಕೈ ಹಾಕಲಾರೆವು.”
ಕೆ.ಜಿ.ಕುಂದಣಗಾರ, ೧೯೬೧

“ಹೆಚ್ಚು ಕಡಿಮೆ ಇನ್ನೂರ ವರ್ಷಗಳಿಂದಿತ್ತ ಆಂಗ್ಲಭಾಷೆಯು ಪ್ರಚಲಿತವಾಗಿದೆ. ಆಧುನಿಕ ವಿಜ್ಞಾನ ಜಗತ್ತನ್ನು ನಮ್ಮ ಸಾಮೀಪ್ಯಕ್ಕೆ ಬರಿಸಿದೆ. ಆಡಳಿತದ ವ್ಯವಹಾರದಲ್ಲಿಯೂ ಶಿಕ್ಷಣ ಪ್ರಸಾರದಲ್ಲಿಯೂ ಪ್ರಬಲ ಪ್ರಭಾವವನ್ನು ಬೀರಿದೆ. ದೇಶಕ್ಕೆ ರಾಜಕೀಯ ಐಕ್ಯ ವಿಧಿಯನ್ನು ಉಪದೇಶಿಸಿದೆ. ಸ್ವಾತಂತ್ರ್ಯ ಭಾವನೆಯನ್ನು ಬೆಳೆಯಿಸುವುದಕ್ಕೆ ಸಹಾಯಕ ವಾಗಿದೆ. ಒಮ್ಮೆ ಪ್ರಭು ಭಾಷೆಯಾಗಿದ್ದರೂ ಆ ನೆಲೆಯನ್ನು ಬಿಟ್ಟು ವಯಸ್ಸು ಸಂಬಂಧದಲ್ಲಿ ಒಡನಾಡುವುದಕ್ಕೆ ಸಿದ್ಧವಾಗಿದೆ. ಅಭಸ್ತವಾದ ವಿಶ್ವಭಾಷೆಯೊಂದನ್ನು ಕೇವಲ ದ್ವೇಷ ಭಾವನೆಯಿಂದ ಹೊರದೂಡಿದಲ್ಲಿ ಜ್ಞಾನಕ್ಕೆ ಕ್ಷಾಮವಲ್ಲದೆ ಕ್ಷೇಮವಿಲ್ಲ.”
ಕಡೆಂಗೋಡ್ಲು ಶಂಕರಭಟ್ಟ, ೧೯೬೫

ಮೇಲಿನ ಹೇಳಿಕೆಗಳನ್ನು ನೀಡಿರುವವರು ಕನ್ನಡವನ್ನು ಉಳಿಸಿ ಬೆಳೆಸಿದವರು. ಇವರು ಸರ್ವರ ಹಿತವನ್ನು ಬಯಸಿದವರು. ಕರ್ನಾಟಕ ಏಕೀಕರಣವಾಗಿ ಒಂದು ತಿಂಗಳನಲ್ಲಿಯೇ, ಮಾಸ್ತಿಯವರು ಇಂಗ್ಲಿಶಿನ ಅಗತ್ಯದ ಬಗ್ಗೆ ಹೇಳಿ ಪ್ರತಿಯೊಬ್ಬರೂ ಕಲಿಯಬೇಕಾದ ಬಗ್ಗೆ ಹೇಳುತ್ತಾರೆ. ಇವರಿಗೆ ಅಂದರೆ ಮೇಲ್ಕಂಡ ಮಹನೀಯರಿಗೆ ಇಂಗ್ಲಿಶ್ ಭಾಷೆಯ ಮೂಲಕ ತಂತ್ರಜ್ಞಾನ ಕಲಿತು ಆ ಮೂಲಕ ಎಲ್ಲಾ ಜನವರ್ಗಗಳ ಮೂಲಕ ಎಲ್ಲ ಜನವರ್ಗಗಳ ಅಭಿವೃದ್ಧಿಯಾಗಬೇಕೆಂಬ ಆಸೆಯಿತ್ತು. ಕರ್ನಾಟಕದ ಸಮಗ್ರ ಅಭಿವೃದ್ಧಿ ಅವರ ಕನಸಾಗಿತ್ತು.

ಇದು ಜಾಗತೀಕರಣದ ಕಾಲ. ಇಂದು ಹಲವಾರು ಶಿಕ್ಷಣ ಪದ್ಧತಿಗಳು ಚಾಲ್ತಿಯಲ್ಲಿವೆ. ಹೊಸ ಹೊಸ ಪದ್ಧತಿಗಳು ಬರುತ್ತಿವೆ. ಹಲವಾರು ಜ್ಞಾನ ಶಾಖೆಗಳು, ತಂತ್ರವಿಜ್ಞಾನ, ತಾಂತ್ರಿಕ ಕೌಶಲ್ಯ ಬೆಳೆಯುತ್ತಿದೆ. ಪ್ರತಿಯೊಂದು ವಿಷಯದಲ್ಲಿಯೂ ಹಲವು ಬಗೆಯ ಕೌಶಲ್ಯಗಳನ್ನು ಪಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಅನಂತ ಮುಖವಾದ ಶಿಕ್ಷಣ ಪಡೆಯಬೇಕಾದ ವಿಷಯಗಳು ಇಂದು ನಮ್ಮೆದುರಿಗಿವೆ. ವಿವಿಧ ಜ್ಞಾನಶಾಖೆಗಳಿಗೆ ಔಪಯೋಗಿಕ ಲೌಕಿಕ ವ್ಯಾವಹಾರಿಕ ಮೌಲ್ಯ ಹೆಚ್ಚಾಗಿದೆ. ಮುಂದುವರಿದ ರಾಷ್ಟ್ರಗಳು ದಿನೇ ದಿನೇ ಹೊಸ ಹೊಸ ತಾಂತ್ರಿಕ ಕತೆಯನ್ನು ಅನ್ವೇಷಿಸುತ್ತಿದ್ದಾರೆ. ಇವೆಲ್ಲವೂ ಇಂದು ಇಂಗ್ಲಿಶಿನಲ್ಲಿಯೇ ಲಭ್ಯವಾಗುತ್ತಿವೆ. ಇಂಗ್ಲಿಶ್ ಕಲಿಯದಿರುವ ಮಕ್ಕಳು ಇಂದು ಇಂಗ್ಲಿಶ್ ಕಲಿತಿರುವವರ ಎದುರಿಗೆ ಅಜ್ಞಾನಿಗಳಂತೆ ಇರಬೇಕಾಗುತ್ತದೆ. ಇಂಗ್ಲಿಶ್ ವಿದ್ಯಾಭ್ಯಾಸದಿಂದ ವಂಚಿತರಾದವರು, ಸರ್ಕಾರದ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವುದು ಸಾಧ್ಯವಾಗುವುದಿಲ್ಲ; ಸ್ವಯಂ ಉದ್ಯೋಗವನ್ನು ಮಾಡಲು ಸಾಧ್ಯವಾಗುವುದಿಲ್ಲ; ಕೊನೆಗೆ ದಾಸ್ಯತನದಿಂದಲೆ ಬದುಕಬೇಕಾಗುತ್ತದೆ. ಪರಂಪರಾನುಗತ ಬುದ್ಧಿಜೀವಿಗಳು ಕನ್ನಡವನ್ನೆ ಏಕೆ ಕಲಿಸಬೇಕೆನ್ನುತ್ತಾರೆಂದರೆ; ಅವರಿಗೆ ಜಾಗೃತ ಪ್ರಜ್ಞೆಯಲ್ಲಿ ಇದು ಗೊತ್ತಿಲ್ಲದಿರಬಹುದು. ಕನ್ನಡದ ಕಡ್ಡಾಯದ ಕಲಿಕೆ ವಿದ್ಯಾವಂತ ಜನರನ್ನು ಇಂದು ಕಡಿಮೆಗೊಳಿಸುತ್ತದೆ. ಐದನೇ ತರಗತಿಯಿಂದ ಕಲಿತವನು ಸರಿಯಾಗಿ ಕಲಿಯಲಾರದೆ ಫೇಲಾಗಿ ಮನೆಯಲ್ಲಿ ಉಳಿಯುತ್ತಾನೆ. ಸ್ಪರ್ಧೆ ಕಡಿಮೆಯಾಗುತ್ತದೆ. ಉದ್ಯೋಗಗಳಿಗಾಗಿ ಮುತ್ತುವವರು ಕಡಿಮೆಯಾಗುತ್ತಾರೆ. ಇಂಗ್ಲಿಶ್ ಕಲಿತ ಶ್ರೀಮಂತರು, ಹಣವಿರುವವರು ಆ ಉದ್ಯೋಗಗಳನ್ನು ಪಡೆಯಬಹುದು. ಎಲ್ಲಾ ಸವಲತ್ತುಗಳನ್ನು ಉದ್ಯೋಗಗಳು ಇಂಗ್ಲಿಶ್ ಬಲ್ಲವರಿಗೆ ಮಾತ್ರ ಎಂಬಂತಾಗಿದೆ. ಕೃಷಿಯನ್ನೇ ಅವಲಂಬಿಸಿ ಬದುಕುವುದು ಜಾಗತೀಕರಣದಲ್ಲಿ ಸಾಧ್ಯವಾಗುವುದಿಲ್ಲ.

ವಾಣಿಜ್ಯ ಕೈಗಾರಿಕೆಗಳನ್ನು ಕ್ಷೇತ್ರವನ್ನು ಪ್ರವೇಶಿಸುವಂತಿಲ್ಲ. ಇಂತಹ ಸ್ಥಿತಿ ದಲಿತರಿಗೆ ಬಡವರಿಗೆ ಬಂದೊದಗಿದೆ. ಇಂಗ್ಲಿಶ್ ಕಲಿಯುವುದು ಜಾಗತಿಕ ವಿದ್ಯಮಾನವಾಗಿದೆ. ಇಂಗ್ಲಿಶ್ ಇಂದು ಸಾಮಾಜಿಕ ಸಮಾನತೆ ಆರ್ಥಿಕ ಸಬಲೀಕರಣ ಮತ್ತು ಬೌದ್ಧಿಕ ಸಬಲೀಕರಣದ ವಿಷಯವಾಗಿದೆ. ಅಷ್ಟೇ ಅಲ್ಲ ಜೀವನ ಕೌಶಲ ಮೂಲಭೂತ ಕೌಶಲವಾಗಿದ್ದು ಜಾಗತೀಕರಣದ ಸವಾಲುಗಳನ್ನು ದಲಿತರು ಎದುರಿಸುವಂತಹ ಸಾಮರ್ಥ್ಯವನ್ನು ತಂದು ಕೊಡುವಂತಹದ್ದೂ ಆಗಿದೆ. ಆದ್ದರಿಂದ ಇಂಗ್ಲಿಶ್ ದಲಿತರ ಪಾಲಿಗೆ ಅಭಿವೃದ್ಧಿಯ ಮತ್ತು ಕೊಡುವಂತಹದ್ದೂ ಆಗಿದೆ. ಆದ್ದರಿಂದ ಇಂಗ್ಲಿಶ್ ದಲಿತರ ಪಾಲಿಗೆ ಅಭಿವೃದ್ಧಿಯ ಮತ್ತು ಸಮಾಜದ ಮರುಸಂಘಟನೆಯ ಸಾಧನವೂ ಆಗಿದೆ. ಆದ್ದರಿಂದಲೇ ಲೋಹಿಯಾ ಅವರು ಇಂಗ್ಲಿಶ್‌ನ್ನು ವಿರೋಧಿಸಿದರೂ “ಭಾರತದಲ್ಲಿ ನೀವು ಒಂದು ಆಳುವ ವರ್ಗಕ್ಕೆ ಬರಬೇಕಾದರೆ ಮೂರು ಇರಬೆಕು; ಇಂಗ್ಲಿಶ್, ಹಣ, ಜಾತಿ. ಇವು ಮೂರರಲ್ಲಿ ಯಾವುದೇ ಎರಡು ಇದ್ದರೆ ಮತ್ತೊಂದು ಸಿಗುತ್ತೆ. ಮೂರು ಇದ್ದರೆ ಮೇಲೆಯೇ ಇರುತ್ತೀರಿ; ಜಾತಿ ಹಣ ಇದ್ದರೆ ಇಂಗ್ಲಿಶ್ ಸಿಗುತ್ತೆ. ಇಂಗ್ಲಿಶ್ ಹಣ ಇದ್ದರೆ ಜಾತಿ ಸಿಗುತ್ತೆ ಇಂಗ್ಲಿಶ್ ಜಾತಿ ಇದ್ದರೆ ಹಣ ಸಿಗುತ್ತದೆ” ಎಂದು ಹೇಳುತ್ತಾರೆ.

ದಲಿತರು ಇಂದು ಜಾಗತೀಕರಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧವಾಗಿಲ್ಲ. ಕಾರಣ ಈಗಾಗಲೇ ಇಂಗ್ಲಿಶ್ ಕಲಿತು ಭೌತಸಂಸ್ಕೃತಿ ಮತ್ತು ಅಭೌತ ಸಂಸ್ಕೃತಿಯಲ್ಲಿ ಮುಂದುವರಿದಿರುವವರು ವೇಗವಾಗಿ ಆಧುನೀಕ ಸಾಂಸ್ಕೃತೀಕರಣ ಒಳಗಾಗಿ ಉನ್ನತ ಸ್ಥಿತಿಯಲ್ಲಿದ್ದಾರೆ. ದಲಿತರಿಗೆ ಭೌತಿಕ ಮತ್ತು ಅಭೌತಿಕ ಸಂಸ್ಕೃತಿಯ ನಡುವೆ ಅಪಾರವಾದ ಕಂದರವು ಏರ್ಪಟ್ಟಿದೆ. ಇದನ್ನು ‘ಆಗ್‌ಬರ್ನ್‌’ ಎಂಬ ಸಮಾಜಶಾಸ್ತ್ರಜ್ಞ (Cultural Log) ಸಾಂಸ್ಕೃತಿಕ ಹೀಂಬೀಳುವಿಕೆ ಎಂದು ಕರೆದಿದ್ದಾರೆ. ಭೌತ ಸಂಸ್ಕೃತಿ ಮತ್ತು ಅಭೌತ ಸಂಸ್ಕೃತಿಗಳು ವೇಗದಿಂದ ಪರಿವರ್ತಿತವಾಗುವುದರಿಂದ ಒಂದಕ್ಕೂ ಇನ್ನೊಂದಕ್ಕೂಲ ಅಂತರವೇರ್ಪಟ್ಟು ಸಮಸ್ಯೆಗಳು ತಲೆದೋರುತ್ತವೆ. ತಾಂತ್ರಿಕ ಔದ್ಯಮಿಕ ವೈಜ್ಞಾನಿಕ ಕ್ಷೇತ್ರಗಳಲ್ಲಿ ಪರಿವರ್ತನೆಯಾಯಿತು. ಅತೀ ವೇಗದಲ್ಲಿ ರಾಜಕೀಯ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ಕೌಟುಂಬಿಕ ಕ್ಷೇತ್ರಗಳಲ್ಲಿ ಬದಲಾವಣೆಯಾಗಲಿಲ್ಲ. ಇದರಿಂದಾಗಿ ಹಲವಾರು ಸಮಸ್ಯೆಗಳುಂಟಾದವು. ಭಾರತೀಯರ ಬದುಕಿನಲ್ಲಿ ೧೯ನೇ ಶತಮಾನದಲ್ಲಿ ಉಂಟಾದ ಶೈಕ್ಷಣಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿಗೆ ಜಾತಿ ವ್ಯವಸ್ಥೆಯಿಂದಾಗಿ ಸ್ಪಂದಿಸಲು ದಲಿತರಿಗೆ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಶಿಕ್ಷಣ ಇಲ್ಲದಿರುವುದು. ಇದರಿಂದಾಗಿ ದಲಿತರು ಸಾಂಸ್ಕೃತಿಕ ಹಿಂಬೀಳುವಿಕೆಯ ಸ್ಥಿತಿಯಲ್ಲಿ ಉಳಿದರು.

ದಲಿತರ ಅಭಿವೃದ್ಧಿ ಭೌತಿಕ, ತಾಂತ್ರಿಕ, ಆರ್ಥಿಕ, ಸಾಮಾಜಿಕ ಸಾಂಸ್ಕೃತಿಕ ಬದುಕಿನ ನಿರಂತರ ಬದಲಾವಣೆಯಲ್ಲಿ ಆಗಬೇಕಾಗಿದೆ. ದಲಿತರಿಗೆ, ಕಡುಬಡವರಿಗೆ ಏನು ಬೇಕು? ಅವರ ಅಗತ್ಯಗಳೇನು? ಅವರ ವಾಸ್ತವ ಸ್ಥಿತಯೇನು? ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ಪರಂಪರಾನುಗತ ಬುದ್ಧಿಜೀವಿಗಳಿಗೆ ಸಾಂಪ್ರದಾಯಿಕ ಜ್ಞಾನ, ಪ್ರಾಕೃತಿಕ ಸಂಪತ್ತು ದೈವಬಲ ಇಷ್ಟಿದ್ದರೆ ಸಾಕು. ವೈಜ್ಞಾನಿಕ ಚಿಂತನೆಯ ಅಗತ್ಯದ ಬಗ್ಗೆ ಅವರು ಯೋಚಿಸುವುದೇ ಇಲ್ಲ.

ಮನುಷ್ಯನ ಇತಿಹಾಸವನ್ನು ಗಮನಿಸಿದರೆ ಸಂಪನ್ಮೂಲಗಳನ್ನು ನಿಸರ್ಗವು ಒದಗಿಸುತ್ತಿಲ್ಲ; ಎಲ್ಲ ಭೌತಿಕ ಮತ್ತು ಅಭೌತಿಕ ಸಂಸ್ಕೃತಿಯು ಮನುಷ್ಯನ ಮನಸ್ಸಿನಿಂದಲೆ ಹೊರಬಂದಿದೆ ಎಂಬುದು ತಿಳಿಯುತ್ತದೆ. ಅನೇಕ ವಿಚಾರಧಾರೆಗಳಿಂದ ಪ್ರಗತಿ ಉಂಟಾಗುತ್ತದೆ. ಈ ಪ್ರಕ್ರಿಯೆಯು ಶಿಕ್ಷಣದಿಂದ ಉಂಟಾಗುವಂತಹದ್ದು ಹಾಗೂ ತನ್ನಷ್ಟಕ್ಕೆ ತಾನು ಬಲಗೊಳ್ಳುತ್ತದೆ. ಆದುದರಿಂದ ಶಿಕ್ಷಣವು ಎಲ್ಲ ಸಂಪನ್ಮೂಲಗಳಲ್ಲಿ ಅತ್ಯಂತ ಮಹತ್ವವಾದುದು. ಶಿಕ್ಷಣ ಇಂದು ಯಾವುದೇ ಸಮಸ್ಯೆಯನ್ನು ಎದುರಿಸಬಲ್ಲ ಸಮಗ್ರ ಅಭಿವೃದ್ಧಿಯನ್ನು ತರಬಲ್ಲ ಏಕೈಕ ಸಾಧನವಾಗಿದೆ. ಆಧುನಿಕ ಜೀವನ ಇಂದು ಹಿಂದೆಂಗಿಂತಲೂ ಸಂಕೀರ್ಣವಾಗುತ್ತಿದೆ; ಅಣುಯುಗವು ಹೊಸ ಗಂಡಾತರವನ್ನು ತಂದರೆ ತಾಂತ್ರಿಕ ಜ್ಞಾನದ ಮುನ್ನಡೆ, ವಾಣಿಜ್ಯವಾದ ಮನುಷ್ಯನಲ್ಲಿ ಅನೇಕ ಆಸೆ ಆಕಾಂಕ್ಷೆಗಳನ್ನು ಹುಟ್ಟಿಸುತ್ತಿವೆ ಹಾಗೂ ಸಮಸ್ಯೆಗಳನ್ನು ಹುಟ್ಟುಹಾಕುತ್ತಿವೆ. ಇದೆಲ್ಲದರ ಜೊತೆಗೆ ತಂತ್ರಜ್ಞಾನವು ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ರಾಬರ್ಟ್ ಸೋರೋ ಹೇಳಿದ ಹಾಗೆ ಯಾವುದೇ ಒಂದು ದೇಶದ ಆರ್ಥಿಕ ಅಭಿವೃದ್ಧಿಯ ಮಟ್ಟವು ಇವತ್ತು ಆ ದೇಶದ ತಾಂತ್ರಿಕ ಸಾಧನೆಯ ಮೇಲೆ ಅವಲಂಬಿತವಾಗಿದೆ. ತಂತ್ರಜ್ಞಾನದ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ವಿದ್ಯಾವಂತರೆನಿಸಿಕೊಂಡವರಲ್ಲೆ ಅವಿದ್ಯಾವಂತರಿರುವಂತಹ ಸ್ಥಿತಿ ಏರ್ಪಟ್ಟಿದೆ. ಕೆಲವು ವಿದ್ಯಾವಂತರಿಗೆ ಲಾಗ್‌ಟೇಬಲ್ ಉಪಯೋಗ, ಭೌತಿಕ ವಿಜ್ಞಾನದ ಪರಿಕಲ್ಪನೆಗಳು ಎಲೆಕ್ಟ್ರಾನ್ ಮತ್ತು ಎಲೆಕ್ಟ್ರಾನಿಕ್, ಕೋಲಂ ಮತ್ತು ವೋಲ್ಟ್‌ಗಳ ಉಪಯೋಗವೇ ಗೊತ್ತಿಲ್ಲ. ಇದರಿಂದ ವಿದ್ಯಾವಂತರಲ್ಲಿಯೇ ಅವಿದ್ಯಾವಂತರ ವರ್ಗವೊಂದು ಸೃಷ್ಟಿಯಾಗುತ್ತಿದೆ ವ್ಯಕ್ತಿ ಸಮಾಜಗಳ ನಡುವಿನ ಸಂಪರ್ಕ ಸುಧಾರಣೆಯಾಗಬೇಕಾದರೆ ಇಂಗ್ಲಿಶ್ ಭಾಷೆ ಅಗತ್ಯಗತ್ಯ.

ಅಭಿವೃದ್ಧಿ ಚಟುವಟಿಕೆಗಳು ಸಾಮಾಜಿಕ ಮತ್ತು ರಾಜಕೀಯ ನೆಲೆಗಳನ್ನು ಆಧರಿಸಿರುತ್ತದೆ. ತರತಮ ದೃಷ್ಟಿಕೋನವೆ ನಮ್ಮ ಭಾರತೀಯ ಸಾಮಾಜಿಕ ಮತ್ತು ರಾಜಕೀಯ ನೆಲೆಗಳನ್ನು ಇಂದು ನಿರ್ಧರಿಸುವಂತಹ ಸ್ಥಿತಿ ಇದೆ. ಇದಕ್ಕೆ ಸಾಂಸ್ಕೃತಿಕ ಹಿನ್ನೆಲೆಯೂ ಇದೆ. ಸಮಾಜದ ಉನ್ನತ ವರ್ಗಗಳ ಅಥವಾ ಪ್ರತಿಷ್ಠಿತ ವರ್ಗಗಳಿಗೆ ಯಾವುದು ಅನುಕೂಲವಾಗುತ್ತದೋ ಆ ವರ್ಗಗಳ ಹಿತಾಸಕ್ತಿಯನ್ನು ಕಾಯ್ದುಕೊಂಡು ಬರುತ್ತದೋ ಅದಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳು ಕಾರ್ಯಕ್ರಮಗಳು ಕ್ರಿಯಾ ಯೋಜನೆಗಳು ಇಂದಿನ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವವರಿಂದ ರೂಪಿತವಾಗುತ್ತದೆ. ಈ ತರತಮ ವಾದಿ ದೃಷ್ಟಿಕೋನದ ಹಿಂದೆ ಸಂಸ್ಕೃತವನ್ನು ಕಲಿಯಬಾರದು ಹಾಗೂ ವಿದ್ಯೆಯನ್ನೇ ಶೂದ್ರಾತಿ ಶೂದ್ರರು ಕಲಿಯಬಾರದೆಂದು ಹೇಳಿದ್ದವರ ಮನೋಭಾವ ಏನಿತ್ತೊ ಅದೇ ಮನೋಭಾವ ಇಂಗ್ಲಿಶ್ ಬೇಕಾಗಿಲ್ಲ ಎಂದು ಹೇಳುವವರ ಮನೋಭಾವವೂ ಆಗಿದೆ.

ಭಾರತದ ಸಂವಿಧಾನ ಇಂಗ್ಲಿಶ್‌ನಲ್ಲಿದೆ. ಹಿಂದಿಯಲ್ಲಿಯೂ ಇದೆ. ಒಂದು ವಿಚಾರದ ಬಗ್ಗೆ ವಾದ ವಿವಾದಗಳುಂಟಾಗಿ ವ್ಯಾಖ್ಯಾನದ ಬಗ್ಗೆ ಭಿನ್ನಾಭಿಪ್ರಾಯ ಉಂಟಾದಾಗ ಹಿಂದಿಯ ಆವೃತ್ತಿಯನ್ನು ಗಮನಿಸದೆ ಇಂಗ್ಲಿಶ್ ಆವೃತ್ತಿಯನ್ನೇ ನಿರ್ಣಾಯಕವಾಗಿ ಗಮನಿಸಲಾಗುತ್ತದೆ. ಅದನ್ನೇ ಅಧಿಕೃತ ಎಂದು ಭಾವಿಸಲಾಗುತ್ತದೆ. ಉಚ್ಚ ನ್ಯಾಯಾಲಯಗಳಲ್ಲಿ ಇಂಗ್ಲಿಶ್ ಬಳಕೆಯಲ್ಲಿನ ಸರ್ಕಾರದ ಮಹತ್ವದ ಆಜ್ಞೆಗಳು, ಅಧಿಕೃತ ಪ್ರಕಟಣೆಗಳು ಇಂಗ್ಲಿಶ್‌ ನಲ್ಲಿರುತ್ತವೆ.

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅಮೆರಿಕಾ ಬಿಟ್ಟರೆ ಇಂಗ್ಲೆಂಡ್ ಒಳಗೊಂಡಂತೆ ಇತರ ಎಲ್ಲಾ ರಾಷ್ಟ್ರಗಳಿಗಿಂತ ಭಾರತದಲ್ಲಿಯೇ ಇಂಗ್ಲಿಶ್ ಭಾಷೆಯನ್ನು ಓದುವವರ ಮತ್ತು ಮಾತನಾಡುವವರ ಸಂಖ್ಯೆ ಶೇಕಡಾವಾರು ಪ್ರಮಾಣದಲ್ಲಿ ಜಾಸ್ತಿಯಾಗಿಯೇ ಇದೆ. ಭಾರತೀಯ ಭಾಷೆಗಳಲ್ಲಿರುವುದಕ್ಕಿಂತ ಅತ್ಯಂತ ಹೆಚ್ಚು ಪ್ರಸಾರವುಳ್ಳ ಪತ್ರಿಕೆಗಳೂ ಇಂಗ್ಲಿಶ್ ಅಂದರೆ ಅಧಿಕಾರ ಎಂಬ ಸನ್ನಿವೇಶ ಇದೆ. ಈಗಿನ ಸನ್ನಿವೇಶದಲ್ಲಿ ಇಂಗ್ಲಿಶ್ ಗೊತ್ತಿರುವ ಅಲ್ಪಸಂಖ್ಯಾತರು ಮತ್ತು ಇಂಗ್ಲಿಶ್ ಗೊತ್ತಿಲ್ಲದಿರುವ ಬಹುಸಂಖ್ಯಾತರು ಎಂಬ ಎರಡು ವರ್ಗಗಳಿವೆ. ಈ ಬಹುಸಂಖ್ಯಾತರು ರಾಜಕೀಯ ಆರ್ಥಿಕ ಸಾಮಾಜಿಕ ಸಾಹಿತ್ಯ-ಸಂಸ್ಕೃತಿ, ಧರ್ಮ-ಜಾತಿ ಈ ಎಲ್ಲಾ ನೆಲೆಗಳಲ್ಲಿ ಇಂಗ್ಲಿಶ್ ಗೊತ್ತಿರುವವರಿಗಿಂತ ಹಿಂದೆಯೇ ಇದ್ದಾರೆ ಹಾಗೂ ಭಿನ್ನವಾಗಿಯೂ ಇದ್ದಾರೆ. ಭಾರತದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆಗಳು ಆಗದಿರಲು ಕಾರಣ ಜಾತಿ ಪದ್ಧತಿ ಮತ್ತು ಪರಭೌತಿಕ ವಿಚಾರಗಳು. ಪ್ರಸಿದ್ಧ ವಿಜ್ಞಾನಿ ಪಿಸಿರೇ ಮತ್ತು ದೇವಿ ಪ್ರಸಾದ ಚಟ್ಟೋಪಾಧ್ಯಾಯ ಈ ವಿಷಯವನ್ನು ಖಚಿತ ಆಧಾರಗಳಿಂದ ಸಮರ್ಥಿಸಿರುವುದನ್ನು ಗಮನಿಸಬಹುದು.

ದೇಶದಲ್ಲಿ ಈಗ ಇಂಗ್ಲಿಶ್ ಕಲಿಕೆಗೆ ಆಸಕ್ತಿಯನ್ನು ವಿವಿಧ ರಾಜ್ಯಗಳು ತೋರಿಸುತ್ತಿವೆ. ಹರ್ಯಾಣ, ಮಿಜೋರಾಂ, ಮಹಾರಾಷ್ಟ್ರ, ಮಧ್ಯಪ್ರದೇಶ ಒಂದನೇ ತರಗತಿಯಿಂದ ಕಡ್ಡಾಯವಾಗಿ ಇಂಗ್ಲಿಶ್ ಕಲಿಸುತ್ತಿವೆ. ಉತ್ತರ ಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಶ್ ಇದ್ದರೂ ಕಡ್ಡಾಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಶ್ ಇದೆ. ಎಲ್ಲಾ ವರ್ಗಗಳ ಅಭಿಮತವು ಮಕ್ಕಳಿಗೆ ಇಂಗ್ಲಿಶ್ ಕಲಿಸಬೇಕೆಂಬುದಾಗಿದೆ. ಆದರೆ ಪರಂಪರಾನುಗತ ಬುದ್ಧಿಜೀವಿಗಳಿಗಿಲ್ಲ.

ಇಂದು ಇಂಗ್ಲಿಶ್ ಬೇಡವೆನ್ನುವವರು ಗಾಂಧೀಜಿಯ ಮಾತುಗಳನ್ನು ಉಲ್ಲೇಖಿಸಿ ತಮ್ಮ ವಾದವನ್ನು ಮಂಡಿಸುತ್ತಾರೆ. ಮಾತೃಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕೆಂದು ಪ್ರಬಲವಾಗಿ ಗಾಂಧಿ ವಾದಿಸುತ್ತಿದ್ದರು. ಅವರ ಮಾತುಗಳ ಕೆಲವನ್ನು ಗಮನಿಸಿ;

“ಅಂತರರಾಷ್ಟ್ರೀಯ ರಾಜಕೀಯ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಅಂಗ್ಲ ಭಾಷೆ ಅತ್ಯಗತ್ಯ ಎಂದು ನನಗೆ ಗೊತ್ತು. ಆದ್ದರಿಂದ ಅದನ್ನು ಕೆಲವರು ಕಲಿತರೆ ಸಾಕು ಅದು ಉತ್ತಮ ಆಲೋಚನೆಗಳ ಮತ್ತು ಉತ್ತಮ ಸಾಹಿತ್ಯದ ಅಕ್ಷಯ ನಿಧಿಯೂ ಹೌದು. ಹೆಚ್ಚು ಭಾಷೆಗಳನ್ನು ಕಲಿಯಲು ಸಾಮರ್ಥ್ಯ ಮತ್ತು ಅವಕಾಶವಿರುವವರು ಅದನ್ನು ಕಲಿತು ಅದರಲ್ಲಿರುವ ಸಾರಸರ್ವಸ್ವವನ್ನು ದೇಶ ಭಾಷೆಗಳಿಗೆ ಇಳಿಸಲಿ…. ಪರಭಾಷೆಯ ಶಿಕ್ಷಣದಿಂದ ರಾಷ್ಟ್ರಕ್ಕೆ ಆಗುತ್ತಿರುವ ಹಾನಿ ಮತ್ತು ನೈತಿಕ ಅಷ್ಟಿಷ್ಟಲ್ಲ. ಆ ನಷ್ಟವೆಷ್ಟು ಎಂಬುದನ್ನು ಬಹುಶಃ ಮುಂದಿನ ಪೀಳಿಗೆ ಅರಿಯಬಲ್ಲರು…. ಪ್ರತಿ ಯೊಂದು ಸ್ವತಂತ್ರ ದೇಶದಲ್ಲಿಯೂ ಯಾವ ಭಾಷೆ ಹೇಳಿಕೊಡಬೇಕು ಏನನ್ನು ಹೇಳಿಕೊಡಬೇಕು ಎಂಬುದನ್ನು ಆಯಾ ದೇಶದ ಅರಕೆ ಅವಶ್ಯಕತೆಗಳಿಗನುಗುಣವಾಗಿ ಅದನ್ನು ಗೊತ್ತುಪಡಿಸಬೇಕಾಗಿದೆ.”

‘ಕೆಲವರು’ ಇಂಗ್ಲಿಶ್ ಕಲಿಯಲಿ ಎಂದು ಹೇಳುವ ಮಾತುಗಳಲ್ಲಿಯೇ ದಲಿತರನ್ನು ಹೊರಗಿಟ್ಟಂತಾಗಿದೆ. ಸಾಮರ್ಥ್ಯ ಇರುವವರು ಅರ್ಹತೆ ಇರುವವರು ಇಂಗ್ಲಿಶ್ ಕಲಿಯಲಿ ಎಂದು ಗಾಂಧೀಜಿ ಹೇಳಿದ್ದಾರೆ ಎಂಬ ಅರ್ಥ ಬರುತ್ತದೆ. ಆದ್ದರಿಂದಲೇ ಹಣ ಇರುವವರು ಖಾಸಗಿ ಇಂಗ್ಲಿಶ್ ಶಾಲೆಗಳಿಗೆ ಸೇರಿ ವಿದ್ಯಾಭ್ಯಾಸ ಮಾಡಿ ಜ್ಞಾನಗಳಿಸುತ್ತಿದ್ದಾರೆ. ಗಾಂಧೀಜಿಯವರು ‘ಕೆಲವರು’ ಇಂಗ್ಲಿಶ್ ಕಲಿಯಲಿ ಎಂದು ಹೇಳಿದ ಮಾತನ್ನು ಸರಿಯಾಗಿ ಗಮನಿಸದೆ. ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂಬುದನ್ನು ಮಾತ್ರ ಒತ್ತಿ ಹೇಳುತ್ತಾರೆ. ಆದ್ದರಿಂದ ಇಂದು ಗಾಂಧೀಜಿಯವರ ಆಶಯದಂತೆ ಇಂದು ಜ್ಞಾನ ಕೆಲವೇ ಕೆಲವರ ಪಾಲಾಗಿದೆ. ಕೊನೆಯ ಸಾಲುಗಳನ್ನು ನಮ್ಮವರು ಗ್ರಹಿಸಿಯೇ ಇಲ್ಲ. ‘ಆಯಾ ದೇಶದ ಅರಕೆ ಅವಶ್ಯಕತೆಗಳಿಗೆ ಅನುಗುಣವಾಗಿ ಶಿಕ್ಷಣ ನೀಡಲಿ’ ಎಂಬ ಮಾತನ್ನು ಮರೆತು ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂದು ಗಾಂಧಿ ಹೇಳಿದ್ದಾರೆ. ಆದ್ದರಿಂದ ಕನ್ನಡದಲ್ಲಿ ಶಿಕ್ಷಣ ಕೊಡಿ ಎಂದು ವಾದಿಸುತ್ತಾರೆ.

ಇನ್ನು ಇಂಗ್ಲಿಶ್ ಕಲಿಯವುದು ಮಕ್ಕಳಿಗೆ ಭಾರ ಎಂಬ ವಾದ. ಶ್ರೀಮಂತರ ಮಕ್ಕಳು ಎಲ್.ಕೆ.ಜಿ. ಯು.ಕೆ.ಜಿ.ಯಿಂದಲೇ ಇಂಗ್ಲಿಶ್ ಕಲಿಯಬಹುದಾದರೆ ಬಡವರ ಮಕ್ಕಳು ಯಾಕೆ ಕಲಿಯಬಾರದು, ಮತ್ತೆ ಪರಂಪರಾನುಗತ ಬುದ್ಧಿಜೀವಿಗಳು ಏಕೆ ವಿರೋಧಿಸುತ್ತಿದ್ದಾರೆಂಬುದು ಸ್ವಯಂ ವೇದ್ಯವಾಗಿದೆ. ಇಂಗ್ಲಿಶ್‌ಗೆ ಮನಸ್ಸನ್ನು ವಿಸ್ತಾರಗೊಳಿಸುವ ಶಕ್ತಿ ಇದೆ ಎಂಬುದನ್ನು ಚಲನಶೀಲ ಬುದ್ಧಿಜೀವಿಗಳು ಕಂಡುಕೊಂಡಿದ್ದಾರೆ. ವಸಾಹತು ಸಂದರ್ಭದಲ್ಲಿ ಸಾಂಸ್ಕೃತಿಕ ಆಧುನೀಕರಣವುಂಟಾದಂತೆ ಜಾಗತೀಕರಣದ ಸಂದರ್ಭದಲ್ಲಿ ಸಾಂಸ್ಕೃತಿಕ ಆಧುನೀಕರಣವನ್ನು ಇಂಗ್ಲಿಶ್ ಭಾಷೆ ಉಂಟು ಮಾಡುತ್ತಿದೆ. ಉದಾರೀಕರಣ ಮತ್ತು ಜಾಗತೀಕರಣದ ಇಂದಿನ ಸಂದರ್ಭದಲ್ಲಿ ದಲಿತರು ಇಂಗ್ಲಿಶ್ ಕಲಿಯದಿದ್ದರೆ ಶತಮಾನಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಪ್ರಬಲವಾದ ರಾಜಕೀಯ ಇಚ್ಛಾಶಕ್ತಿಯಿಂದ ಇದು ಸಾಧ್ಯ. ಜೀವಂತ ಬುದ್ಧಿಜೀವಿಗಳು, ಪರಂಪರಾನುಗತ ಬುದ್ಧಿಜೀವಿಗಳು ಮತ್ತು ಚಲನಶೀಲ ಬುದ್ಧಿಜೀವಿಗಳು ವಿಚಾರಗಳನ್ನು ಒಟ್ಟುಗೂಡಿಸಿ ಇಂಗ್ಲಿಶ್‌ನಲ್ಲಿ ಪ್ರಾಥಮಿಕ ಶಾಲೆಗಳಿಂದಲೇ ಕಲಿಸುವ ರಾಜಕೀಯ ಇಚ್ಛಾಶಕ್ತಿಯೊಂದಿದ್ದರೆ ದಲಿತರ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ದಲಿತರು ಇಂಗ್ಲಿಶ್ ಕಲಿಯುವುದರಿಂದಾಗುವ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಒಟ್ಟುಗೂಡಿಸಿ ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

  • ಇಂಗ್ಲಿಶ್ ಭಾಷೆಯು ದಲಿತರು ಜ್ಞಾನ ಕ್ರಿಯಾಶೀಲತೆ ಮತ್ತು ಕೌಶಲ್ಯತೆಗಳನ್ನು ಹೆಚ್ಚಿಸಿ ಅವರ ಉತ್ಪಾದನಾ ಸಾಮರ್ಥ್ಯವನ್ನು ಸುಧಾರಿಸುತ್ತದೆ.
  • ಖಾಸಗೀಕರಣ ಉದಾರೀಕರಣದ ಜಾಗತೀಕರಣದಿಂದ ಈ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಮತ್ತು ಆದಾಯವನ್ನು ಗಳಿಸುವ ಅವಕಾಶಗಳನ್ನು ಒದಗಿಸುತ್ತದೆ.
  • ಇಂಗ್ಲಿಶ್ ಭಾಷೆ ಕಲಿಕೆಯುವುದರಿಂದ ಉತ್ತಮ ಜ್ಞಾನಾರ್ಜನೆ ಆ ಮೂಲಕ ದೇಶಕ್ಕೆ ಶ್ರೇಷ್ಠಮಟ್ಟದ ವಿದ್ಯಾವಂತ ನಾಯಕರನ್ನು ಸೃಷ್ಟಿಸುತ್ತದೆ.
  • ಇಂಗ್ಲಿಶ್ ಕಲಿಯುವುದರಿಂದ ಮೂಲಭೂತ ಕೌಶಲ್ಯ ಒದಗಿ ಆಧುನಿಕ ತಾಂತ್ರಿಕತೆ ಮತ್ತು ಸಾಹಸಿ ಪ್ರವೃತ್ತಿಯುಳ್ಳ ಯುವಜನಾಂಗ ದಲಿತರಲ್ಲಿ ಸೃಷ್ಟಿಯಾಗುತ್ತದೆ.
  • ವರಮಾನ ಮತ್ತು ಸಂಪತ್ತಿನ ಅಸಮಾನತೆಯನ್ನು ಇಂಗ್ಲಿಶ್ ಶಿಕ್ಷಣದಿಂದ ಕಡಿಮೆ ಮಾಡಬಹುದು.
  • ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಇವುಗಳನ್ನು ಕಲಿತು ದಲಿತರು ಗ್ರಾಮೀಣಾಭಿವೃದ್ಧಿಯ ನೆರವಿಗೆ ಅನುಕೂಲಕರವಾಗಿ ಪರಿಣಮಿಸುತ್ತರೆ.
  • ಇಂಗ್ಲಿಶ್ ಕಲಿಯುವುದರಿಂದ ಪ್ರಾಪಂಚಿಕ ಮತ್ತು ವೈಚಾರಿಕ ಪ್ರಜ್ಞೆ ಬೆಳೆಯುತ್ತದೆ. ಇಂಗ್ಲಿಶ್ ಕಲಿತ ದಲಿತರ ಜೀವನ ಉನ್ನತವಾಗಿಯೇ ಇರುತ್ತದೆ.
  • ಇಂಗ್ಲಿಶ್ ಇಂದು ದಲಿತರಲ್ಲಿ ಬುದ್ಧಿ ಕೌಶಲ, ನೈಪುಣ್ಯತೆ, ಕಾರ್ಯದಕ್ಷತೆ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅಭಿವೃದ್ಧಿಗೆ ಪೂರಕ ವಾಗುತ್ತದೆ.
  • ಇಂಗ್ಲಿಶ್ ಕಲಿಯುವುದರಿಂದ ದಲಿತರಲ್ಲಿ ಸಾಂಸ್ಕೃತಿಕ ಆಧುನಿಕೀಕರಣದಿಂದಾಗಿ ಮುಖ್ಯ ವಾಹಿನಿಯಲ್ಲಿ ಒಂದಾಗುವತ್ತ ಮುನ್ನಡೆಯುತ್ತಾರೆ.

ಈಗ ಹೇಳಿ; ಈ ರೀತಿಯ ಇತ್ಯಾತ್ಮಕ ಪರಿಣಾಮಗಳನ್ನುಂಟು ಮಾಡುವ ಇಂಗ್ಲಿಶ್‌ನ್ನು ಪ್ರಾಥಮಿಕ ಶಾಲೆಯಿಂದಲೇ ಕಲಿಯಬೇಕೆ; ಬೇಡವೆ? ಮಾಜಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ಭಾರತದ ಗಣರಾಜ್ಯದ ಸುವರ್ಣ ಉತ್ಸವದ ಸಂದರ್ಭ ೨೫.೦೧.೨೦೦೦ರಂದು ಮಾಡಿದ ಭಾಷಣದ ಕೆಲವು ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ. ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳ ಹೆದ್ದಾರಿಯಲ್ಲಿ ಪಾದಚಾರಿಗಳೂ ಹಾದು ಹೋಗಲು ಅವಕಾಶವಿರಲಿ…. ತಾಳ್ಮೆಯಿಂದ ಹಾಗೂ ದೀರ್ಘ ಕಾಲದಿಂದ ಕಷ್ಟ ಅನುಭವಿಸುತ್ತಿರುವ ಜನರರೋಷಾವೇಷದ ಕುರಿತು ಎಚ್ಚರವಿರಲಿ.