ಭಾಷೆ ಬಿಡಿ ಬಿಡಿ ಪದಗಳಿಂದಾದ ಮಾತುಗಳ ಶಬ್ದಲೋಕ. ಅಕ್ಷರ ಅದರ ಋಜುವಾತು. ಸಾಂಸ್ಕೃತಿಕ ಲೋಕದಲ್ಲಿ ಮಾತುಗಳಿಗೆ ಮಹತ್ವಿರುವಂತೆ ಮೌನಕ್ಕೂ ಇದೆ. ಅಕ್ಷರ ವಂಚಿತವಾದ ಜನಸಮುದಾಯ ಆಂಗೀಕ ಚಲನವಲನ ಸಂವಹನಗಳ ಮೂಲಕ ಶತಶತಮಾನಗಳಿಂದಲೂ ಅಭಿವ್ಯಕ್ತಿಸುತ್ತಾ ಬಂದಿದ್ದಾರೆ. ಭಾರತದಂತಹ ಬಹುಸಂಸ್ಕೃತಿ ದೇಶದಲ್ಲಿ ತಳಸಮುದಾಯದ ದಲಿತವರ್ಗ ಭಾಷಾ ನುಡಿಗಟ್ಟಿಗೆ ಅಪರಿಚಿತರಾಗಿರಲು ಬಹುಮುಖ್ಯ ಕಾರಣ ಶ್ರೇಣೀಕೃತ ಜಾತಿವ್ಯವಸ್ಥೆ. ಒಂದು ಜನಾಂಗವನ್ನೆ ಇಡಿಯಾಗಿ ಸ್ಪರ್ಶದಿಂದಲೆ ವಂಚಿತರಾದುದರಿಂದ ಲೋಕರೂಪಿಯ ಎಲ್ಲಾ ರೀತಿ ರೀವಾಜುಗಳ ಅವಜ್ಞೆಗೆ ಒಳಗಾಗಿ ತಮ್ಮದೆ ಒಳನುಡಿಗಳ ಮೂಖ ವೇದನೆಯಲ್ಲೇ ಬದುಕ ನೂಕಿದೆ. ಸಾಮಾಜಿಕವಾಗಿ ಹಿಂದುಳಿಯುವಿಕೆಗೆ ಆರ್ಥಿಕ ವ್ಯವಸ್ಥೆಯ ಸಮೀಪವು ಹೋಗದಂತೆ ವ್ಯವಸ್ಥಿತವಾಗಿ ನೋಡಿ ಕೊಂಡಿದ್ದರ ಫಲವಾಗಿ ಸಾಮಾಜಿಕವಾಗಿ ಹಿಂದುಳಿಯುವಂತೆ ಹುನ್ನಾರದ ಕುಣಿಕೆ ಹೆಣೆಯಲಾಯಿತು. ಮುಟ್ಟಿಸಿಕೊಳ್ಳುವುದರಿಂದಲೇ ‘ಅಪವಿತ್ರ’ವಾಗುವ ಮೇಲು ಜಾತಿಯ ವರ್ಗ ಅನೇಕ ಸಾಮಾಜಿಕ ನಿಷೇಧಗಳನ್ನು ತಳಸಮುದಾಯಕ್ಕೆ ಕಾನೂನುಬದ್ಧವಾಗಿ, ಆಚಾರ ವಿಚಾರಗಳ ಮೂಲಕ ವಿಧಿಸಿದ್ದರೂ, ಸಾಂಸ್ಕೃತಿಕವಾಗಿ ಆ ಜನಾಂಗ ತನ್ನದೆ ಪರ್ಯಾಯ ಅಭಿವ್ಯಕ್ತಿಗಳ ಮೂಲಕ ಪ್ರತಿರೋಧ ಒಡುತ್ತಲೆ ತನ್ನ ಭಾಷೆಯನ್ನು ರೂಢಿಸಿಕೊಂಡಿರುವುದನ್ನು ಕಾಣಬಹುದು. ಜಾತಿ ಜಾತಿಗಳ ಅಡ್ಡಗೋಡೆಗಳ ಮುಖಾಂತರ ಸೂತಕ ಆಚರಿಸುವ ಮೇಲ್ವರ್ಗಕ್ಕೆ ಪರ್ಯಾಯವಾದ ಸಂವಹನ ಅಭಿವ್ಯಕ್ತಿಗಳನ್ನು ತಮ್ಮ ಹಾವಭಾವಗಳ, ಅಂಗೀಕ ಅಭಿವ್ಯಕ್ತಿಯೇ ದಲಿತರ ಭಾಷೆಯ ಸಂವಹನವಾಗಿ ಕಾರ್ಯನಿರ್ವಹಿಸಿದೆ. ಸಮಾಜದಲ್ಲಿ ಮೇಲು-ಕೀಳು, ಧಣಿ-ಆಳು, ಬಡವ-ಶ್ರೀಮಂತ, ಮೆಲ್‌ಜಾತಿ-ಕೆಳಜಾತಿ ಎಂದೆಲ್ಲಾ ವಿಂಗಡನೆಯಾಗಿರುವ ಸಮಾಜದಲ್ಲಿ ಸಂವಹನ ಪ್ರಕ್ರಿಯೆ ಸಮಾನಾಂತರವಾಗಿರುವುದು ಕನಸಿನಲ್ಲೂ ಸಾಧ್ಯವಾಗದ ಮಾತು. ಮೇಲ್‌ವರ್ಗದ ಜನಾಂಗದ ಅಭಿವ್ಯಕ್ತಿಗೂ ಕೆಳವರ್ಗದ ಅಭಿವ್ಯಕ್ತಿಗೂ ನೆಲಮುಗಿಲಿನ ಅಂತರವಿರುತ್ತದೆ. ಪರಸ್ಪರ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಎದುರು ಬದುರು ಕಂಡಾಗ ಪರಸ್ಪರ ವಿನಿಮಯವಾಗುವ ‘ನಮಸ್ಕಾರ’ ಆಚರಣೆಯನ್ನೆ ಉದಾಹರಣೆ ತೆಗೆದುಕೊಂಡಿರೆ ಆಚರಣೆಯಲ್ಲಿನ ವಿಭಿನ್ನತೆ ಅರಿವಿಗೆ ಬರಬಹುದು.

ಧಣಿ-ಆಳಿನ ಮುಖಾಮುಖಿಯಾದಗಿನ ದೃಶ್ಯ ಕಲ್ಪಿಸಿಕೊಂಡರೆ ಸ್ಪಷ್ಟವಾಗುತ್ತದೆ. ಎದುರಿಗೆ ಧಣಿ ಬರುತ್ತಿದ್ದರೆ ಆಳು ವಿನಯಪೂರ್ವಕವಾಗಿ ಎರಡು ಕೈಗಳನ್ನು ಜೋಡಿಸಿ ನಡುಬಗ್ಗಿಸಿ ಸೌಮ್ಯವಾಗಿ ‘ನಮಸ್ಕಾರ ಧಣಿ’ ಎನ್ನುತ್ತಾರೆ. ಧಣಿ ತನ್ನ ದೇಹವನ್ನೆ ಸೆಟಿಸಿ ಕೊಂಡು ಎದೆಯುಬ್ಬಿಸಿ ಅಹಂಭಾವದಿಂದ ಹ್ಹೂ…ಹ್ಹೂ ಅಂದಷ್ಟೆ ಹೂಂಕರಿಸುತ್ತಾನೆ. ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿರಲಿ ಅದ್ಯಾವುದೋ ಪ್ರಾಣಿಯಂತೆ ತಿರಸ್ಕಾರ ಮನೋಭಾವದಿಂದಲೆ ‌ಪ್ರತಿಕ್ರಿಯಿಸುವುದನ್ನು ಕಾಣುತ್ತೇವೆ. ಮತ್ತೊಂದುಬಗೆಯ ನಮಸ್ಕಾರವೂ ಚಾಲ್ತಿಯಲ್ಲಿದೆ. ಎದುರುಬದುರಾದ ವ್ಯಕ್ತಿಗಳಿಬ್ಬರು ಕೈಗಳನ್ನು ಜೋಡಿಸಿ ನಮಿಸಿ ನಮಸ್ಕಾರಕ್ಕೆ ಪ್ರತಿಯಾಗಿ ಕೈ ಮುಗಿದು ನಮಸ್ಕರಿಸುವ ಪದ್ಧತಿ. ಮತ್ತೊಂದು ರೀತಿ: ದೂರದಿಂದಲೆ ನೆಲಕ್ಕೆ ಮಂಡಿಯೂರಿ ಅಂಗೈ ಎರಡನ್ನು ಭೂಮಿಗೆ ತಾಗಿಸಿ ಹಣೆ ಮುಟ್ಟಿಸಿ ನಮಿಸುವುದು ಅದಕ್ಕೆ ಪ್ರತಿಯಾಗಿ ಹೂಂ ಹೂಂ ಎಂಬ ಹೂಂಕಾರವೆ ಪ್ರತಿ ನಮಸ್ಕಾರದ ಸೂಚನೆ ಆಳು-ಧಣಿಗಳ ನಡುವಿನ ನಮಸ್ಕಾರದ ಸಂವಹನ ಕ್ರಿಯೆಯಾದರೆ ಭಾರತದ ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯಗಳು ನಮಸ್ಕರಿಸುವಾಗ ಅದೇ ರೀತಿ ಪ್ರತಿ ನಮಸ್ಕಾರ ಮಾಡಬೇಕಾಗುತ್ತದೆ. ಅಲ್ಲಿ ಧಣಿ-ಆಳಿನ ಅಂತರವಿರದೆ ನಮಸ್ಕಾರ ಏಕರೂಪವಾಗಿರುತ್ತದೆ. ವಚನ ಚಳುವಳಿಯ ಶರಣರು ಬಸವಣ್ಣನ ನೇತೃತ್ವದಲ್ಲಿ ‘ಶರಣು’ ಹೇಳಿದವರಿಗೆ ‘ಶರಣು ಶರಣಾರ್ಥಿ’ ಎಂಬ ಕಲ್ಪನೆಯನ್ನು ತಂದು ಸಮಾನತೆ ಮೆರೆದ ಪ್ರಸಂಗ ಇತಿಹಾಸದ ಪುಟಗಳಲ್ಲಿ ಘಟಿಸಿದ ಸಂಗತಿಗಳೆ. ಭಾರತಕ್ಕೆ ಮೊಗಲರ ಆಗಮನದ ವರೆಗೆ ವ್ಯಕ್ತಿಗಳು ಪರಸ್ಪರ ಮುಟ್ಟುವ ಸಂಪ್ರದಾಯ ಮಡಿ ಮೈಲಿಗೆಯ ಆಚರಣೆಯೆ ಇನ್ನೊಂದು ಅರ್ಥದಲ್ಲಿ ಅಸ್ಪೃಶ್ಯತೆಯ ಆಚರಣೆಯೂ ನಾಜೂಕಾಗಿ ನಡೆದ ಪದ್ಧತಿ. ಮುಸಲ್ಮಾನ ಸಂಸ್ಕೃತಿ ಆಳಿಂಗನದ ಮೂಲಕ ಪರಸ್ಪರ ಪರಿಚಯಿಸಿಕೊಳ್ಳುವ ಪರಂಪರೆಗೆ ನಾಂದಿ ಹಾಡಿತು. ಬ್ರಿಟಿಷರ ಆಗಮನದ ಮೂಲಕ ಪರಸ್ಪರ ‘ಕೈ ಕುಲಕಿ’ ಮಾತನಾಡಿಸುವ ಸಂಪ್ರದಾಯವು ಭಾರತೀಯ ಸ್ಪೃಶ್ಯ-ಅಸ್ಪೃಶ್ಯ ಸಂಸ್ಕೃತಿಗೆ ವಿಭಿನ್ನವಾದ ಆಚರಣೆಯಾಗಿ ಸಾಮಾನ್ಯ ಜನ ಸ್ಪರ್ಶದ ಸುಖಕ್ಕೆ ಸ್ಪಂದಿಸಿದ್ದನ್ನು ಕಾಣಬಹುದು. ಮುಟ್ಟಿಸಿಕೊಳ್ಳುವುದರಿಂದಲೇ ಮೈಲಿಗೆಯಾಗುತ್ತೇವೆಂಬ ಸಂಪ್ರದಾಯಸ್ತ ಮೇಲುಜಾತಿ ಜನ ದೂರದಿಂದಲೆ ನಮಸ್ಕಾರ ಮಾಡುವ ರೀತಿ ಒಳ್ಳೆಯ ಭಾವನೆಯಿದ್ದರೂ, ಅಂತರಂಗದಲ್ಲಿ ಸ್ಪರ್ಶದಿಂದ ದೂರ ಉಳಿಯುವ ಜಾಣ ತಂತ್ರವಾಗಿ ನೋಡುಗರಿಗೆ ಅಸಭ್ಯತೆಯ ಸಂಸ್ಕೃತಿಯೆ ಆಗಿರುತ್ತದೆ. ಇದನೆಲ್ಲಾ ಇಲ್ಲಿ ಯಾಕೆ ಉದಾಹರಣೆ ನೀಡಬೇಕಾಯಿತೆಂದರೆ ‘ಮುಟ್ಟು ಚಟ್ಟು’ ಮಡಿ ಮೈಲಿಗೆ ಹೃದಯಹೀನ ಸಂಸ್ಕೃತಿಯ ಆಚರಣೆಗಳಿಗೆ ವಿಭಿನ್ನವಾಗಿ ಅವಮಾನಿತ ಜನ ಸಮುದಾಯ ಸಾಂಸ್ಕೃತಿಕ ಆಚರಣೆಗಳನ್ನು ಆಚರಿಸುತ್ತಾರೆ. ‘ನಮಸ್ಕಾರ’ದ ವಿಷಯವೆ ಈ ಮಾದರಿಯಾದರೆ ಇನ್ನು ಒಟ್ಟಿಗೆ ಉಣ್ಣುವ-ಕುಳಿತು ಮಾತನಾಡುವ ಸಂಬಂಧದ ವಿಷಯಗಳ ಬಗ್ಗೆ ಹೇಳುವುದಕ್ಕೆ ಹೊಸದೇನು ಇರುತ್ತದೆ. ಹಾಗಾಗಿ ಬಹು ಸಮಾಜದ ಭಾಷೆ ಮುಖ್ಯವಾಗಿ ಮೌನ. ಶಬ್ದದ ಲಯಕ್ಕೆ ಅವರೇನಾದರೂ ಇಳಿದರೆಂದರೆ ಕಾವ್ಯ-ಕಥನ ಕಾವ್ಯ-ಹಾಡುವುದೆ ಅವರ ಭಾಷೆ ಅಭಿವ್ಯಕ್ತಿಯಾಗುತ್ತದೆ. ಮೌನದಲ್ಲಿ ಹೆಪ್ಪುಗಟ್ಟಿದ ದುಗುಡ ದುಮ್ಮಾನಗಳನ್ನು ಕಾವ್ಯ ಸಂಗೀತದ ಮೂಲಕ ಹೊರಹಾಕುವ ಸೃಜನಶೀಲತೆಯನ್ನು ರೂಪಿಸಿಕೊಂಡಿದ್ದಾರೆ. ಎನಿಸುತ್ತದೆ. ಈ ದೇಶದ ಯಾವುದೆ ಜನಪದ ಕಾವ್ಯ-ಮಹಾಕಾವ್ಯಗಳು ಮೌಖಿಕವಾಗಿ ಉಳಿದು ಬಂದ ಸಂಸ್ಕೃತಿಯ ಸಂಪತ್ತಾಗಿದೆ. ಒಂದು ಬಡಕುಟುಂಬ ಕೂಲಿ ಮಾಡಿ ಬದುಕುವ ದಲಿತ ಕುಟುಂಬ, ದಿನದಲ್ಲಿ ಎಷ್ಟು ‘ಪದಗಳನ್ನು’ ಮಾತಿನ ವಾಕ್ಯಗಳನ್ನು ಆಡಬಹುದು? ಊಹಿಸಿದರೆ ಆಶ್ಚರ್ಯವಾಗುತ್ತದೆ. ನಾಲ್ಕೈದು ಮಾತುಗಳಲ್ಲಿ ದಿನದ ಕಂತೆ ಎಸೆಯುತ್ತಾರೆ. ಆದರೆ ಹೆಂಗಸರು ಬಾಯಿ ತೆರೆದರೆ ಮಾತುಗಳ ಬದಲಿಗೆ ಮಡುಗಟ್ಟಿನ ಮೌನ ರಾತ್ರಿ ಪೂರ ಹಾಡಬಲ್ಲಕಾವ್ಯ ಅವರ ಎದೆಯೊಳಗೆ ಮೌನವಾಗಿ ಬಚ್ಚಿಟ್ಟುಕೊಂಡಿರುತ್ತದಲ್ಲ ಅದು ಅಸಾಮಾನ್ಯವಾಗಿ ಶಬ್ದ ಸಂಪತ್ತು ! ಅಜ್ಜಿಯರ ಒಡಲಾಳದಲ್ಲಿ ಚಿತ್ತಾರದ ಕತೆಗಳ ಕಣಜವೆ ತುಂಬಿರುತ್ತದಲ್ಲ ಅದು ಯಾವ ವಿಶ್ವವಿದ್ಯಾಲಯ ಶಾಲಾ ಕಾಲೇಜುಗಳಲ್ಲಿ ಕಲಿತ ಭಾಷೆ ಸಂಪತ್ತು !?

ಊಳಿಗಮಾನ್ಯ ಪದ್ಧತಿಯ ಸಂಸ್ಕೃತಿಯ ಪಳೆಯುಳಿಕೆಯಾಗಿ ಬೆಳೆದು ಬಂದಿರುವ ಭೂ ಮಾಲೀಕನ ಅಥವಾ ಧಣಿಯೊಬ್ಬನ ಬಾಡಿ ಲ್ಯಾಂಗ್ವೇಜ್ ಏನೆಂದರೆ ತನ್ನ ಸೇವಕನಾದ ಆಳು ಮಗನನ್ನು ಕಣ್ಣಲ್ಲೆ ದುರುಗುಟ್ಟಿ ನೋಡಿದನೆಂದರೆ ಆಳು ತನ್ನ ಕೆಲಸವನ್ನು ತಾನಾಗೆ ಅರಿತುಕೊಳ್ಳಬಲ್ಲ ಚಾಣಾಕ್ಷ. ಧನಿ ಕಣ್‌ಸನ್ನೆ ಕೈಸನ್ನೆ ಆಂ-ಹ್ರೂಂ ಕಾರ ಉದ್ಘಾರಗಳಲ್ಲೆ ಮಾತನಾಡಿದರೆ ಆಳು ಮಗ ಮೌನದಲ್ಲೆ ತಲೆ ಬಗ್ಗಿಸಿ, ನಡುಬಗ್ಗಿಸಿ, ದೀನವಾಗಿ ಪ್ರತಿಕ್ರಿಯಿಸುವ ರೂಪಿಯೂ ಒಂದು ದೈಹಿಕ ಭಾಷೆ ಸಂವಹನವೆ. ಕಣ್ಣಿನಿಂದಾಗದ ಕೆಲಸಗಳಿಗೆ ಕೈ ಕಾಲುಗಳಿಂದ ಧಣಿ ಮಾತಿಗೆ ತೊಡಗುತ್ತಾನೆ. ಸೇವಕ ಧಣಿಯನ್ನು ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಪ್ರಸಂಗ ಕಲ್ಪನೆಗೂ ನಿಲುಕದ ವಿಷಯ. ಹಾಗೇನಾದರೂ ನೋಡಿದನೆಂದರೆ ಶಿಕ್ಷಣಕ್ಕೆ ಒಳಗಾದವ ಅಥವಾ ಮಾತುಬಲ್ಲವನಾದ ಪ್ರಜ್ಞಾನವಂತನಾಗಿ ಪ್ರತಿರೋಧ ಒಡ್ಡಲು ಸಿದ್ಧನಾದವ ಎಂಬ ಅಂಶ ಸ್ಪಷ್ಟವಾಗುತ್ತದೆ. ಕೆಲವು ಸಲ ಹೆಚ್ಚಾಗಿ ಆಳು ಧಣಿಯನ್ನು ತಿರುಗಿ ನೋಡಿದ ಭಾಷೆ ಪ್ರಕ್ರಿಯೆ ಕೊಲೆಯಲ್ಲಿ ಕೇಸು ಅಂತ್ಯವಾಗುತ್ತದೆ. ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರೀತಿಗೆ ಇರಲಿ, ಕೋಪಕ್ಕೆ ಇರಲಿ, ಈ ಭಾಷೆ ಸಂವಹನೆ ಎಷ್ಟು ತೀವ್ರತರವಾದುದು ಎಂಬುದನ್ನೇ ತಿಳಿಸಲು ಹೇಳಬೇಕಾಯಿತು. ಆದಕಾರಣ, ಬೆವರು ಸುರಿಸಿ ದುಡಿವ ಜನ, ದಲಿತ ಜನ ಸಾಮಾನ್ಯವಾಗಿ ಮಾತನಾಡುವವ ಕಲೆಗೆ ಕೈ ಹಾಕುವುದಿಲ್ಲ. ಮಾತಿಗೆ ಮಾತು ಬೆಳೆಸಲು ಹೋಗುವುದಿಲ್ಲ – ಮಾತಿನಿಂದಲೇ ಜಗಳ. ಕೊನೆಗೆ ಕೊಲೆಯಲ್ಲಿ ಅಂತ್ಯವಾಗುವುದರಿಂದ ‘ಬಡವ ನೀನು ಮಡಗಿದಂಗೆ ಇರು’ ಎಂಬ ಗಾದೆ ಮಾತಿಗೆ ಅಂಟು ಕೂತಿದ್ದಾರೆ. ‘ಬಡವನ ಮಾತು ದವಡೆಗೆ ಮೂಲ’ ಮುಂತಾದ ಗಾದೆ ಮಾತುಗಳು ಅಪೇಕ್ಷಿತ ಶಾಸ್ತ್ರ ಶಾಸನಗಳಾಗಿ ಜನರನ್ನು ಹದ್ದುಬಸ್ತಿನಲ್ಲಿಡುವ ಸೂತ್ರಗಳಾಗಿವೆ. ಹಾಗಾಗಿ ಬಡ ಜನತೆ ಮೌನವಾಗಿಯೆ ಎಲ್ಲವನ್ನು ಸಹಿಸಿಕೊಂಡು ಬಹಿರಂಗದಲ್ಲಿ ಮೂಕರಾಗಿ ಅಂತರಂಗದಲ್ಲಿ ಮೌನದ ಮಾತುಗಳಿಗೆ ಕಾವ್ಯರೂಪ ಕೊಟ್ಟು ಹಾಡುತ್ತಾರೆ, ಕುಣಿಯುತ್ತಾರೆ. ದುಃಖದಿಂದ ಆಲಾಪಿಸುತ್ತಾರೆ. ದಮನಿತರ ಕಥನಗಳನ್ನು ರೂಪಕಗಳಂತೆ ತಮ್ಮ ಬದುಕಿಗೆ ಅನ್ವಯಿಸಿಕೊಂಡು ತಮ್ಮ ಕುಲಕಸುಬಿನ ಜೊತೆಗೆ ಬೆಳೆಸುತ್ತಾರೆ. ನೃತ್ಯದ ಲಾಸ್ಯಗಳಿಂದ ದಣಿದ ದೇಹವನ್ನು ತಾಳುಬದ್ಧವಾಗಿ ಕುಣಿಸಿ ನೃತ್ಯವಾಗಿಸುತ್ತಾರೆ.

ದಲಿತರ ಆಡು ಭಾಷೆ ಅಕ್ಷರ ಕಲಿತ ಪಂಡಿತರಿಗೂ ಅರ್ಥವಾಗದ ನುಡಿಗಟ್ಟುಗಳಿಂದ ಕೂಡಿರುತ್ತದೆ. ಆ ಕಾರಣವಾಗಿಯೆ ದೇವನೂರು ಮಹಾದೇವ ನಂಜನಗೂಡು, ಕೊಳ್ಳೆಗಾಲ, ಚಾಮರಾಜನಗರದ ದಲಿತ ಜನರ ಆಡುಭಾಷೆಯಲ್ಲಿ ‘ಕುಸುಮಬಾಲೆ’ ಕಾದಂಬರಿ ಪ್ರಕಟಿಸಿದಾಗ ಕನ್ನಡಕ್ಕೆ ಅನುವಾದಿಸಿ, ಸಂವಹನದ ತೊಡಕಿದೆ ಎಂಬ ಅಭಿಪ್ರಾಯ ವ್ಯಕ್ತವಾದುದು, ಕನ್ನಡ ಸಾರಸ್ವತಲೋಕದ ದಿವಾಳಿತನ ತೋರುತ್ತದೆ. ಜನ ತಮ್ಮ ಉಸಿರಿನೊಟ್ಟಿಗೆ ಆಡುವ ಭಾಷೆಯಲ್ಲಿ ಒಂದು ಕಾದಂಬರಿ, ಕತೆ ಓದಲು, ಸಂವಹನದ ಸಮಸ್ಯೆ ಎದುರಾದುದು ಇದೆ. ಕನ್ನಡ ಭಾಷಾಲೋಕ ಓದುವ ಭಾಷೆ-ಬರೆಯುವ ಭಾಷೆ-ಮಾತನಾಡುವ ಭಾಷೆ, ಚಿಂತಿಸುವ ಭಾಷೆ ಎಂಬ ನಾಲ್ಕು ಬಗೆಯಲ್ಲಿ ನೇಳಿಕೊಂಡು ಚರ್ತುಮುಖ ಬ್ರಹ್ಮನಂತಾಗಿದೆ ಎಂಬ ಅನುಮಾನ ಉಂಟಾಗುತ್ತದೆ.

ಭಾಷೆಯೊಂದಿಗಿನ ದಲಿತರ ಅನುಸಂಧಾನ ಮತ್ತು ಅವರು ಯಾವಾಗಲೂ ಅನುಸರಿಸುತ್ತಾ ಬಂದಿರುವ ಕಥನ ಸಂಪ್ರದಾಯಗಳ ಇತಿಹಾಸವು ತಾತ್ವೀಕರಣಗೊಂಡಿಲ್ಲದ ನೆಲೆಗೆ ಬಂದು ನಿಲ್ಲುತ್ತದೆ. ಬೇರೆಯದೆ ಆದ ದಿಕ್ಕಿನಿಂದ ಭಾಷಾ ವಿಜ್ಞಾನದ ಅರಿವನ್ನು ತಿಳಿಯುವುದರ ಜೊತೆಗೆ ಈಗಿರುವ ಭಾಷಾವಿಜ್ಞಾನ ರೂಪರೇಷೆಗಳನ್ನು ತೀವ್ರ ಮರುಪರಿಶೀಲನೆಗೆ ಒಳಪಡಿಸಬೇಕಾದ ಸಂದರ್ಭ ಉಂಟಾಗಿದೆ. ಭಾಷೆಯೇ ಸ್ವತಃ ವಾಸ್ತವ ಸತ್ಯವನ್ನು ಪೂರ್ವ ನಿರ್ಧರಿಸುತ್ತದೆ ಮತ್ತು ನಿರೂಪಿಸುತ್ತದೆಯಾದರೂ ಎಲ್ಲಾ ಭಾಷೆಯ ಚರಿತ್ರೆಯೂ ಭಾಷಿಕ ಪಠ್ಯೀಯ ನಿರ್ಮಾಣವಾಗಿದೆ. ಜನರಾಡುವ ಭಾಷೆಯ ಬದಲಿಗೆ ಲಿಖಿತ ಭಾಷೆಯ, ಲಿಖಿತ ಭಾಷೆಯ ಶಾಬ್ದಿಕ ಕಥನವೆ ಆಗಿದೆ. ಜನತೆಯ ಭಾಷೆ ಮಾತಿಗಿಂತ ಸಂಜ್ಞೆ, ಆಂಗೀಕ ಚಲನವಲನೆಗಳ ಭಾಷೆಯಾಗಿ ಅಭಿವ್ಯಕ್ತಿಗೊಳ್ಳುವ ಕಲೆಯಾಗಿ ಬೆಳೆದಿದೆ. ನಾಟಕ ಪ್ರಕಾರ ಇದಕ್ಕೆ ಒಳ್ಳೆಯ ಉದಾಹರಣೆ. ಪಾತ್ರಗಳು ತಮ್ಮ ಸಾಂಸ್ಕೃತಿಕ ನೆಲೆಯಲ್ಲೆ ಭಾಷಿಕವಾಗಿ ಅಭಿವ್ಯಕ್ತಿಸುತ್ತಾರೆ, ನೊಟಕರಿಗೂ ಅದು ಸಹಜವಾಗಿ ಸಂವಹನೆ ಸುಲಭವು ಆಗುತ್ತದೆ. ನಾನು ಕಳೆದ ೨೦ ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಂಗಭೂಮಿ ಚಟುವಟಿಕೆಯಲ್ಲಿ ನಿರತನಾದಾಗ ನಾನು ಸಾಮಾನ್ಯರ ಸಂವಹನ ಕ್ರಿಯೆ ಹೇಗಿರಬಹುದೆಂಬ ಅನುಭವವನ್ನು ಮುಂದೆ ಹಂಚಿಕೊಳ್ಳುತ್ತಿದ್ದೇನೆ.

ಸಂವಹನ, ದಲಿತರು ಮತ್ತು ಭಾಷೆಯ ಬಗ್ಗೆ ನನ್ನ ದೃಷ್ಟಿ ಇರುವುದು ಆಂಗೀಕ ಅಭಿನಯವನ್ನು ಒಂದು ಸಂವಹನವಾಗಿ ರಂಗದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನುವುದರ ಬಗ್ಗೆ. ಮೊದಲು ದೆಲ್ಲಿಗೆ ಹೋದಾಗ ಅಲ್ಲಿ ಹೃದಯ ಹೃದಯವನ್ನ ಆಲಿಂಗನ ಮಾಡುವುದನ್ನು ನಾನು ಕಂಡೆ. ಆದ್ರೆ ನನ್ನ ಕಾಲೇಜು ದಿನಗಳಲ್ಲಿ ನಾನು ಆ ಭಾಷೆಯನ್ನು ಕಂಡಿರಲಿಲ್ಲ. ಅಂದ್ರೆ ನಮ್ಮಲ್ಲಿ ದೂರದಿಂದ ನಿಂತು ನಮಸ್ಕಾರ ಅನ್ನುವುದು; ಅಸ್ಪೃಶ್ಯತೆಯನ್ನು ನಾಜೂಕಾಗಿ ಆಚರಣೆ ಮಾಡುತಕ್ಕಂತಹ ಒಂದು ಸಂಸ್ಕೃತಿಯಾಗಿದೆ ಅಂತ ನಾನು ಅಂದ್ಕೊಂಡಿದ್ದೀನಿ. ಅದಕ್ಕೆ ನಾನು ನಟರಿಗೆ ಹೇಳುವುದು ಆಲಿಂಗಿಸಿಕೊಳ್ಳುವುದನ್ನು ಮೊದಲು ಕಲೀಬೇಕು ಅಂತ. ಆಗ ಅಸ್ಪೃಶ್ಯತೆ ಎಲ್ಲಿ ಇರುತ್ತದೆ ನೋಡೋಣ. ರಂಗದಲ್ಲಿ ಆಲಂಗಿಸು ಬೇರೆ. ಆದ್ರೆ ಮಣಿಪುರದ ಹಲವು ಟ್ರೈಬಲ್ ಜನರ ನಮಸ್ಕಾರ ಹೇಗಿರುತ್ತದೆ. ಅಂದ್ರೆ ಮೊದಲು ಭೂಮಿತಾಯಿಗಿರುತ್ತೆ, ಆಮೇಲೆ ಪ್ರೇಕ್ಷಕರಿಗಿರುತ್ತೆ ಕಣ್ಣಿನ ಮೂಲಕ.

ದಲಿತರ ಭಾಷೆ ಅಂದ್ರೆ ಕಾವ್ಯ ಅಂತ ನಾನು ತಿಳಿದುಕೊಂಡಿದ್ದೀನಿ. ದಲಿತರು ಮಾತನ್ನಾಡುವುದಿಲ್ಲ. ಕಾವ್ಯದ ಮೂಲಕ ತಮ್ಮ ಅನುಭವನ್ನ ಹೇಳುತ್ತಾರೆ. ನಟರಿಗೆ ಎಂಬತ್ತು ಪುಟದ ಒಂದು ನಾಟಕವನ್ನು ಕೊಟ್ಟರೆ ಅವರು ಮಾತಾಡೋದಿಕ್ಕೆ ತೊಳಲಾಡುತ್ತಾರೆ. ರಂಗಭೂಮಿಯ ನನ್ನ ಸಂವಹನ ಕ್ರಿಯೆಯಲ್ಲಿ ನಾನು ನಂಬಿರುವ ಭಾಷೆಗೆ ಕಿಲುಬುಕಾಸಿನ ಕಿಮ್ಮತ್ತು ಇಲ್ಲ. ನನಗೆ ಮಣಿಪುರಿಯ ರಂಗಭೂಮಿ ನೋಡಿದ್ದರೂ ಅರ್ಥವಾಗುತ್ತದೆ. ಜಪಾನ್ ದೇಶದ ನಾಟಕ ನೋಡಿದ್ದರೂ ಅರ್ಥವಾಗುತ್ತದೆ. ಪೀಕಿಂಗ್ ಅಪೇರಾ ನೋಡಿದ್ದರೂ ಅರ್ಥವಾಗುತ್ತದೆ. ಯಾಕೆಂದ್ರೆ ಅವೆಲ್ಲ ರಂಗದ ಭಾಷೆ.

ಕೆ.ಬಿ. ಸಿದ್ಧಯ್ಯ ಹೇಳುತ್ತಾ ಇದ್ರು ಒಬ್ಬೊಬ್ರು ತಾವೇ ಮೌನದಲ್ಲಿ ಮಾತನಾಡುತ್ತಾರೆ ಅಂತ. ಈ ದೇಶದಲ್ಲಿ ದಲಿತರು ಶತ ಶತಮಾನದಿಂದ ಮೌನವಾಗಿ ಹಾಡುತ್ತಾ ಬಂದಿದ್ದಾರೆ. ಒಂದು ಕುಟುಂಬದಲ್ಲಿ ಗಂಡ ಹೆಂಡ್ತಿ ಎಷ್ಟು ಮಾತಾಡ್ಬಹುದು – ಕೆಲ್ಸಕ್ಹೋದ್ರಾ, ಅಡಿಗೆ ಆಗಿದೆಯಾ, ಊಟ ಆಯಿತ, ಮಲಗಿಕೊಳ್ಳುವುದು ಆಮೇಲೆ ಏನಿದೆ. ಆದರೆ ಕಿರುತೆರೆಯಲ್ಲಂತೂ ಎದ್ದರೆ ಕೂತರೆ ಮಾತಾಡ್ತಾರೆ ಹೆಣ್ಮಕ್ಕಳು. ಅದು ಭಾರತದ ಯಾವ ಕುಟುಂಬನೋ ನನಗು ಗೊತ್ತಿಲ್ಲ. ಸಿನಿಮಾಗಳಲ್ಲಿ Atleast ದಲಿತ ಸಮುದಾಯದ ಪಾತ್ರಗಳ ಮಾತುಗಳಿರ್ತಿದ್ವು. ಟಿಲಿವಿಷನ್ ಅಂತೂ ಆ ಜನಾಂಗವನ್ನು ನಿಷೇಧಿಸಿಬಿಟ್ಟಿದೆ. ಒಬ್ಬ ಚೋಮ ಕಿರುತೆರೆಯಲ್ಲಿ ಬರುವುದಕ್ಕೆ ಸಾಧ್ಯ ಇಲ್ಲ. ಕಿರುತೆರೆಯ ಇಡೀ ಚಿತ್ರೀಕರಣ ನಡಿಯುವುದೇ ಅಡುಗೆ ಮನೆ, ದೇವರ ಮನೆ, ತೂಗುಮ್ಯಾಲೆ ಮೇಲೆ. ಬೀದಿಗೆ ಪ್ರವೇಶನೇ ಇಲ್ಲ. ಹಾಗಾಗಿ ವಿಜ್ಞಾನದ ಸಂಶೋಧನೆ ಫಲವಾಗಿ ಬೇರೆ ಬೇರೆ ಸಂವಹನ ಸಂಪರ್ಕ ಸಾಧನಗಳು ಆರಂಭವಾದಾಗಲೆಲ್ಲ ಬಿಕ್ಕಟ್ಟು ಜಾಸ್ತಿಯಾಗುತ್ತಿವೆ.

ನಾನು ಉತ್ತರ ಕರ್ನಾಟಕದಲ್ಲಿ ರಂಗಭೂಮಿ ಬಗ್ಗೆ ಅಧ್ಯಯನ ಮಾಡುತ್ತಾ ಇರುವಾಗ ನೋಡಿದ್ದು ಊಳಿಗಮಾನ್ಯ ಪದ್ಧತಿಯ ಮೊದಲನೇ ಲ್ಯಾಂಗ್ವೇಜ್, ಒಬ್ಬ ಧಣಿ ಮುಂದೆ ಬಂದು ಸೇವಕನನ್ನು ದುರುಗುಟ್ಟಿ ನೋಡುತ್ತಾನೆ. ಸೇವಕ ತಲೆಯನ್ನು ಬಗ್ಸಿ, ನಡುವನ್ನು ಬಗ್ಸಿ ದೀನವಾಗಿ ನಿಂತಿರುತ್ತಾನೆ. ಅವನು ಧಣಿಯನ್ನು ನೇರವಾಗಿ ನೋಡಂಗಿಲ್ಲ. ನೋಡ್ದಾ ಅಂದ್ರೆ ನೀನು ನನ್ನನ್ನ ನೋಡುವಷ್ಟರ ಮಟ್ಟಿಗೆ ಬೆಳ್ದಿದ್ದೀಯಾ ಅಂತ ಬೈಗುಳ ಶುರವಾಗ್ಬಹುದು, ಜಗಳ ಶುರುವಾಗ್ಬಹುದು ಇಲ್ಲವೇ ಇದು ಇನ್ನೂ ಮುಂದುವರಿದು ಕೊಲೆಯಲ್ಲಿ ಶಮನಗೊಳ್ಳಬಹುದು. ಹಾಗಾಗಿ ದಲಿತರು ಮಾತನಾಡುವುದಿಲ್ಲ. ಮಾತನಾಡೋದ್ರಿಂದ ಜಗಳ ಆಗುವುದರಿಂದ, ಕೊಲೆಯಾಗೋದ್ರಿಂದ ಅವರು ಮಾತಿನ ಬದಲಿಗೆ ಪದ್ಮವನ್ನು ಕಟ್ಟಿ ಹಾಡುತ್ತಾರೆ. ಇನ್ನೂ ಆ ಪದ್ಧತಿ ಭಾರತದಲ್ಲಿದೆ. ಆದರೆ ಬೇರೆ ಮುಖವಾಡದಲ್ಲಿದೆ ಅದು.

Upper Casteನವರು ದಲಿತರ ಭಾಷೆಯನ್ನು ಮಾತಾಡೋದು ಕಷ್ಟ ಇದೆ. ದಲಿತರು ಮಾತನಾಡುವಾಗ ಗ್ರಾಮ್ಯವಾಗಿರುತ್ತೆ, ಪದ್ಯವಾಗಿ ಹಾಡುವಾಗ ಕಾವ್ಯವಾಗಿ ಬಿಡುತ್ತೆ. ನನ್ನ ಪ್ರಕಾರ ಕೆಳವರ್ಗದ – ಹರಿಜನ, ಗಿರಿಜನ ಅಥವಾ ಯಾವುದೇ ತಳಸಮುದಾಯ ಇಲ್ಲಿ ಅವರು ತಮ್ಮ ಅನುಭವವನ್ನು ಹಾಡಿನ ಮೂಲಕ ವ್ಯಕ್ತಪಡಿಸುತ್ತಾರೆ.

ಕುಸುಮಬಾಲೆಯನ್ನು ಆ ಶೈಲಿಯಲ್ಲಿ ನಾನು ಓದುವುದಕ್ಕೆ ಶುರು ಮಾಡಿದ್ದಾಗ ಎಲ್ಲ ವರ್ಗದವರು ಹಲವು ಬಾರಿ ನೋಡಿದರು. ಇದು ಹೇಗೆ ನಾಟಕಕ್ಕೆ ಮೊದಲೆ ಜನಗಳಿಗೆ ಅರ್ಥ ಆಗ್ತಾ ಇದೆಯಲ್ಲ ಅಂತ, ಅದ್ಕೆ ನಾನು ಹೇಳ್ದೆ ನಾಟಕ ಮಾಡುವಾಗ ಎಪ್ಪತ್ತೇಳು ಪುಟದ ಒಂದು ಅಕ್ಷರವನ್ನೂ ನಾನು ಕತ್ತರಿಸಿಲ್ಲ. ನೀವು ಕುಳಿತುಕೊಂಡು ಚೆಕ್ ಮಾಡ್ಬಹುದು ಅಂತ. ರಂಗಾಯಣದಲ್ಲಿ ನಾಟಕ ಶುರುವಾದಾಗ ಪ್ರತಿ ಮಾತನ್ನು Proof Reading ಮಾಡೋ ರೀತಿ Audience Check ಮಾಡುತ್ತಾ ಇದ್ದರು. ಮೊದಲನೇ ಅರ್ಪಣೆ ನಮ್ಮ ಪೂರ್ವಿಕ ಮಾದಾರ ಮಲೆಮಹದೇಶ್ವರನಿಗೆ ಪದ್ಯದ ಮೂಲಕ ನಟರು Entry ಆಗಿ ಮಾತಾಡುವುದಕ್ಕೆ ಪ್ರಾರಂಭವಾಗುತ್ತದೆ. ಕಾದಂಬರಿ ನಾಟಕ ಜನಕ್ಕೆ ಸುಲಭವಾಗಿ ಅರ್ಥವಾಯಿತು. ಅಂದ್ರೆ ಇಡೀ ನಮ್ಮ ಶಿಕ್ಷಣ ವ್ಯವಸ್ಥೆ ಏನಾಗಿದೆ ಅಂದ್ರೆ ಜನರಿಗೆ ಅರ್ಥವಾಗದ ಭಾಷೆಯಲ್ಲಿ ಶಿಕ್ಷಣ ನೀಡುತ್ತ ವಂಚನೆಯನ್ನೇ ವೃತ್ತಿ ಮಾಡಿಕೊಂಡಿದೆ. ಜನರ ಆಡುಮಾತಿನಲ್ಲಿ ಮಾತನಾಡುವುದಕ್ಕೆ ಶುರು ಮಾಡಿದ್ರೆ ವಿಷಯ ಸ್ಪಷ್ಟಗೊಳ್ಳುತ್ತಾ ಹೋಗುತ್ತದೆ. ಅನ್ಯಾಯವು ಅನಾವರಣಗೊಳ್ಳುತ್ತದೆ.

ಮಾಸ್ ಅಫೀಲ್ ಮಾಡ್ತೀವಿ ಅಂತ ಸಿನಿಮಾದವರು ಹೇಳುತ್ತಾ ಇರುತ್ತಾರೆ. ಯಾವಾಗಲೂ ಮಾಸ್ ಅಂಡ್ ಕ್ಲಾಸ್ ಅಂತಾರೆ. ತುಂಬಾ ಇಂಟರೆಸ್ಟಿಂಗ್ ಅದು. ಈಗ ಕ್ಲಾಸ್ ಸಿನಿಮಾ ಮಾಡಿದ್ರೆ ಅದನ್ನ ರಿಜೆಕ್ಟ್ ಮಾಡೋವ್ರು ಬಡವರೇನೇ. ಆ ಸಿನಿಮಾ ನೋಡಲು ಆಟೋ ಡ್ರೈವರ್ ಹೋಗೊಲ್ಲ, ಕೂಲಿ ಕೆಲಸಗಾರರು ಹೋಗೊಲ್ಲ. ಈ ದೇಶದಲ್ಲಿ ಸಿನಿಮಾ ಒಂದು ದೊಡ್ಡ ಇಂಡಸ್ಟ್ರಿ. ಮನರಂಜನೆ ಮಸಾಲೆ ಸಂವಹನದ ಮೂಲಕ ಅದು ನಿಂತಿರೋದು. ಬಡವರ ಕಾಸಿನಿಂದ ಅದು ನಿಂತಿದೆ. ಬಡವರ ಬೆವರಿನ ಹಣವನ್ನು ನೈಟ್ ಲೂಟಿ ಮಾಡಿಬಿಡುತ್ತೆ. ಸಿನಿಮಾದವರು ಮಾಸ್ ಅಂತ ಹೇಳುತ್ತ ಅವರ ಮೆದುಳಿನಲ್ಲಿ ಬಿತ್ತುತ್ತ ಇರುವ ವಸ್ತುಗಳು ಹಿಂಸೆ ಮತ್ತು ಕಾಮ. ಇದೇ ನಮ್ಮ ದೇಶದಲ್ಲಿ ಸಿನಿಮಾಕ್ಕೆ ಒಂದು ದೊಡ್ಡ ಬಂಡವಾಳ. ಇದನ್ನು ನೋಡುವವರು ನಲವತ್ತು ರೂಪಾಯಿ ಕೊಟ್ಟು ತನ್ನ ತಲೆ ಕೆಡ್ಸಿಕೊಂಡು ನೋಡುವಂತಹದೇನಿದೆ. ಲಾಂಗ್ ತಗೋ, ಮಚ್ಚು ತಗೋ ಅನ್ನುವಂತಹ ಒಂದು ಸಂದೇಶ ಅಮಾಯಕ ಯುವ ಜನಾಂಗವನ್ನು ಕೊಲೆಗೆ ಪೂರಕವಾಗುವಂತಹ ಒಂದು ಸಂಸ್ಕೃತಿಯನ್ನು ನಿರ್ಮಾಣ ಮಾಡುತ್ತದಲ್ಲ ಇದರಿಂದ ಸಮಾಜಕ್ಕಾಗುವ ಉಪಯೋಗವಾದರೂ ಏನು ನನಗಂತೂ ಗೊತ್ತಿಲ್ಲ.

ನಾನು ಮಂಟೇಸ್ವಾಮಿ ಜಾತ್ರೆಯಲ್ಲಿ ನೋಡಿದ್ದೀನಿ. ಈ ಜಾತ್ರೆ ಐದು ದಿನ ನಡೆಯುತ್ತದೆ. ಅಲ್ಲಿ ಅಸಂಖ್ಯಾತ ಜನಸಮುದಾಯ ಲಿಂಗಾಯಿತ, ದಲಿತ, ಒಕ್ಕಲಿಗ, ಸೋಲಿಗ, ಕಾಡು ಕುರುಬ, ಆಚಾರಿ, ಹೀಗೆ ವಿವಿಧ ಜನಾಂಗದ ಸುಮಾರು ಮೂರು-ನಾಲ್ಕು ಲಕ್ಷ ಜನ ಮಂಟೇಸ್ವಾಮಿ ಕಾವ್ಯ ಹಾಡು ಕೇಳುವುದಕ್ಕೆ ಬರುತ್ತಾರೆ. ಕಾವ್ಯವನ್ನ ಹಾಡಿದರೆ ಜನ ಹೆಚ್ಚು ಇಷ್ಟಪಡುತ್ತಾರೆ. ಓದುತ್ತಾರೆ ಅಂದ್ರೆ ಬರೋವ್ರು ಕಡಿಮೆ. ಅಕ್ಷರ ತಿಳಿದವನು ಅಕ್ಷರ ಗೊತ್ತಾದ ತಕ್ಷಣ ಆ ಜಾತಿಯಿಂದ Out Caste ಆಗುತ್ತಾನೆ. ಅವನು ನಾಜೂಕು ಕಲೀತಾನೆ. ಅವನ ಭಾಷೆ, ಶೈಲಿ ತಿದ್ದುಪಡಿಯಾದುದು. ರಂಗಭೂಮಿಯಲ್ಲಿ ಈ ತಕರಾರರು ನನಗೆ ಬಂದಿಲ್ಲ. ಭಾಷೆಯ ಸಮಸ್ಯೆ ಎದುರಾಗಿಲ್ಲ. ಅಂದ್ರೆ ಜನ ಯಾವ ರೀತಿ ಮಾತನಾಡುತ್ತಾರೋ ಆ ರೀತಿ ಮಾತಾಡಿದ್ರೆ ಜನ ಅಲ್ಲಿ ತಮ್ಮನ್ನು ಕಾಣುತ್ತಾರೆ. ಇದು ತುಂಬ ಪ್ರಮುಖವಾಗಿ ನನಗೆ ಕಂಡಿದೆ. ಈ Gesture ನಮ್ಮಲ್ಲಿ ಒಂದು ರೀತಿಯ ಭಾಷೆಯೇ. ದಿನನಿತ್ಯದಲ್ಲಿ ತಳಸಮುದಾಯದವರು ಮಾತನಾಡೊಲ್ಲ, ಅವರು ಕಾವ್ಯವನ್ನು ಕಟ್ಟುತ್ತಾರೆ. ಕಥನಗಳನ್ನು ಕಟ್ಟುತ್ತಾರೆ. ಪುರಾಣ ಪುರುಷರನ್ನು ಸೃಷ್ಟಿ ಮಾಡುತ್ತಾರೆ. ಭಾರತದ ಉದ್ದಗಲಕ್ಕೂ ಇರುವಂತಹ ಸಂಗತಿ ಇದು.

ನೃತ್ಯ ಒಂದು ಭಾಷೆಯನ್ನ ಹೇಳುತ್ತದೆ. ಭರತ ನಾಟ್ಯದ ಬಗ್ಗೆ ಹೇಳೋದಾದ್ರೆ ಮೊದಲು ಪದ್ಯದಲ್ಲಿ ಹಾಡುತ್ತಾರೆ. ಆದರೆ ಅರ್ಥ ಆಗೊಲ್ಲ. ಆಂಗಿಕ ಚಲನೆ ಮತ್ತು ಭಾಷೆಯ ಮೂಲಕ Convert ಮಾಡುತ್ತಾರೆ. ಜೊತೆಗೆ ತಾಳದ ಮೂಲಕ Communicate ಮಾಡುತ್ತಾರೆ. ದೇವದಾಸಿ ಹೆಣ್ಣು ಮಕ್ಕಳು ಶತ ಶತಮಾನಗಳಿಂದ ಮುಖ್ಯವಾಗಿ ದೇವಾಲಯಗಳಲ್ಲಿ ಅದ್ಭುತವಾದ ರೂಪಕದಲ್ಲಿ ಮಾತ್ನಾಡಿದ್ದಾರೆ. ನನಗನಿಸುತ್ತೆ ಇಡೀ ಜಗತ್ತಿನ ತಳಸಮುದಾಯಗಳು ಮಹಾಕವಿಗಳಾಗಿದ್ದಾರೆ. ತಮ್ಮ ಆಡುಭಾಷೆಯನ್ನು ಕಾವ್ಯದ ನೆಲೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆ. ಬಸವಣ್ಣನವರು ೧೨ನೇ ಶತಮಾನದ ವಚನಕಾರರು ಅಲ್ಲಿಂದ ತಗೊಂಡು ಸರಳಗೊಳಿಸಿರಬಹುದೇನೋ. ಮಂಟೇಸ್ವಾಮಿ ಕಾವ್ಯವನ್ನು, ಮಲೆಮಹದೇಶ್ವರ ಕಾವ್ಯವನ್ನು, ತಿಪ್ಪೇರುದ್ರನ ಕಾವ್ಯವನ್ನು ಹಾಡುತಕ್ಕಂತಹ ಜನ ಓದುಬಲ್ಲವರಲ್ಲ. ಆದ್ರೆ ಕಾವ್ಯಮಯವಾಗಿ ಮಾತನಾಡುತ್ತಾರೆ. ಅಂದ್ರೆ ಉಸಿರಿನ ಜೊತೆಗೆ ಅವರ ಪದ್ಯ ಇದೆ. ಅವರು ಹಾಡುತ್ತಾರೆ. ಕೀಳರಿಮೆಯಿಂದಾಗಿ ದಲಿತರಿಗೆ ಸಂವಹನ ಸಾಧ್ಯವಾಗುವುದಿಲ್ಲ ಅಂತ ಒಬ್ಬ ಕಲಾವಿದನಾಗಿ ನನಗಂತೂ ಅನ್ಸಿಲ್ಲ. ಅದರಿಂದ ಬಂಡವಾಳ ಮಾಡ್ಕೊಂಡಿರೋದನ್ನ ನಾನು ನೋಡಿದ್ದೀನಿ. ನನ್ನ ಅನುಭವದ ಪ್ರಕಾರ ಈಗ ಎರಡು ಜಗತ್ತುಗಳು ಕಾಣುತ್ತಿವೆ. ನಗರ ವಾಸಿ ಮನ ತಮ್ಮ ಹಳೆಯ ಕಾಲದ ಬಾಲ್ಯದ ರಮ್ಯವನ್ನು ಹುಡಿಕ್ಕೊಂಡು ಹಳ್ಳಿಗೆ ಹೋಗೋಕೆ ಹೊರ್ಟಿದ್ದಾರೆ. ಮರ, ಗಿಡಗಳು, ನೆಮ್ಮದಿ ಶಾಂತಿ ಅಲ್ಲಿ ಸಿಗುತ್ತದೆ. ನಗರದಲ್ಲಿ ಗೊಂದಲ ಅಂದ್ಕೊಂಡಿದ್ದಾರೆ. ಆದರೆ ಹಳ್ಳಿ ಜನಕ್ಕೆ ಏನಾಗಿದೆ ಅಂದ್ರೆ ಸುಖ ಶಾಂತಿಗಳನ್ನ ನಗರದವರು ಕೊಳ್ಳೆ ಹೊಡೀತಿದ್ದಾರೆ ಅಂತ ಅಂದ್ಕೊಂಡಿದ್ದಾರೆ. ಮಾಧ್ಯಮಗಳಲ್ಲಿ ನಮ್ಮೆಲ್ಲ ಸುಖ, ಖುಷಿಗಳನ್ನ ತಗೊಂಡಿದ್ದಾರೆ ಅನ್ನೋದನ್ನು ಕಾಣುತ್ತಾರೆ. ಈ ಮಧ್ಯದಲ್ಲಿ ಉಂಟಾಗ್ತಕ್ಕಂತಹ ಸಂವಹನ ಪ್ರಕ್ರಿಯೆ ಇದೆಯಲ್ಲ ಆ ನಿಟ್ಟಿನಲ್ಲಿ ಕಾವ್ಯ ಉಳಿಯುತ್ತದೆಯಾ? ಮಾತುಗಳು ಉಳಿಯುತ್ತವೆಯಾ? ಭಾಷೆ ಉಳಿಯುತ್ತದೆಯಾ ಅಂತ ನನಗೆ ಗಾಬರಿ ಆಗುತ್ತಿದೆ. ಆದ್ರೆ ಹಳ್ಳಿಗಳ ಪರಿಸರದಲ್ಲಿ ಈಗ ಎಲ್ಲವೂ ಬದಲಾಗುತ್ತಿದೆ. ನಾವು ಏನೆಲ್ಲ ಚರ್ಚೆ ಮಾಡ್ತೇನಲ್ಲ ಅದು ಯುವಕರಿಗೆ ಅರ್ಥ ಆಗೋದಿಲ್ಲ. ಅವರು ಲ್ಯಾಂಗ್ವೇಜ್ ಬೇರೆ. ತುಂಬ ಸ್ಪೀಡ್ ಇದೆ ಅದು. ಈಗ ಎಲ್ಲ ಭಾಷೆ ಎಸ್.ಎಂ.ಎಸ್.ನಲ್ಲಿದೆ. ಮೌನದಲ್ಲಿ ಸಂವಹನ ನಿಂತಿದೆ. ಈ ನಿಟ್ಟಿನಲ್ಲಿ ದಲಿತರಿಗೆ ಒಂದು ಭಾಷೆ ತಿಳ್ದಿರೋದು ಹಾಡು ಹಾಡಿಕೊಂಡು ಬಂದಿದ್ದಾರೆ. ಓದದೇ ಇರುವವರು ತಮ್ಮ ಅನುಭವವನ್ನು, ತಮ್ಮ ಪುರಾಣ ಪುರುಷರನ್ನು ಕುರಿತು ಕಾವ್ಯ ಕಟ್ಟಿ ಹಾಡೋದರ ಮೂಲಕ ಸಂವಹನ ಮಾಡುತ್ತಾರೆ- ಅಂತ ತಿಳ್ಕೊಂಡಿದ್ದೀನಿ ನಾನು.

ಅಕ್ಷರ ಬಲ್ಲ ನಾವು ಪುಸ್ತಕಗಳಲ್ಲಿ ದಾಖಲಾಗಿರೋದನ್ನಷ್ಟೇ ಮಾತಾಡ್ತೀವಿ. ಆದರೆ ದಲಿತರು ಹುಟ್ಟುತ್ತಾ ಕವಿಗಳು ಅಂತ ತಿಳ್ಕೊಂಡಿದ್ದೀನಿ ನಾನು. ಗದ್ಯ ಇರ್ಲಿ ಅಥವಾ ಪದ್ಯ ಇರ್ಲಿ. ಅದನ್ನೇ ಕುಸುಮಬಾಲೆನಲ್ಲಿ ಎಕ್ಸಿಬಿಟ್ ಮಾಡಿದ್ದು ನಾನು. ಕಂಸಾಳೆ ಹಾಡಿದ್ರೆ ಕಾವ್ಯ ಆಗುತ್ತೆ, ನಾಟಕ ಮಾಡಿದ್ರೆ ನಾಟಕನೂ ಆಗುತ್ತೆ. ದೇವನೂರು ಅವರಿಗೆ, ನೀವು ನಾಟಕ ಬರ್ದಿದೀರ, ಮಹಾಕಾವ್ಯನೂ ಬರ್ದಿದೀರಿ, ಪುರಾಣನೂ ಬರ್ದಿದೀರಿ ಆಮೇಲೆ ಡಿಎಸ್‌ಎಸ್‌ಗೆ ವಿಮರ್ಶೆಗೂ ಬರ್ದಿದೀರಿ ಅಂದೆ ನಾನು. ನಾವೆಲ್ಲ ನಾಟಕದಲ್ಲಿ ಗತಿಸಿರುವವರ ಬಗ್ಗೆ ಮುಗಿದ್ಹೋಗಿರೋ ರಾಜರುಗಳ ಬಗ್ಗೆ, ಸಾಂಸ್ಕೃತಿಕ ನಾಯಕರುಗಳ ಬಗ್ಗೆ ಮಾತಾಡ್ತೀವಿ Contemperary ಬಗ್ಗೆ ಮಾತ್ನಾಡೊಲ್ಲ ನಾವು. ದ್ಯಾವನೂರು ತಿರುಗಾಟಕ್ಕೆ ಮಾಡ್ದೆ. ಎಲ್ಲ ಪಾತ್ರಗಳೂ ಸ್ಟೇಜ್‌ನಲ್ಲೇ ಇದ್ವು. ಅನಂತಮೂರ್ತಿ ಬರುತ್ತಾರೆ, ರಾಜೇಂದ್ರ ಚೆನ್ನಿ, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ, ಜಿ. ರಾಜಶೇಖರ್, ದೇವನೂರು ಬರುತ್ತಾರೆ.

ನಮ್ಮ ಕಾಲಘಟ್ಟದ ದೊಡ್ಡ ಐಕಾನ್‌ಗಳಿದ್ದಾರಲ್ಲ ಅವರು ಪಾತ್ರಧಾರಿಗಳಾಗುತ್ತಾರೆ. ಅವರು ಏನು ಸಂವಹನ ಮಾಡುತ್ತಾರೆ ಅನ್ನುವುದು ಮುಖ್ಯ ಜನರ ಮಧ್ಯೆ ನೇರವಾಗಿ ಬಸವಣ್ಣ ಅಥವಾ ಅಲ್ಲಮನ ಕಾಲದಲ್ಲಿ ಅವರು ಆ ರೀತಿಯ ಸತ್ಯಂಗ ರೀತೀಲಿ ಸಂವಹನ ಮಾಡುತ್ತಿದ್ದರು. ೧೫ನೇ ಶತಮಾನದಲ್ಲಿ ಕಬೀರ್ ಪಂಥದವರು ಬೀದಿಯಲ್ಲಿ ಭಿಕ್ಷುಕರ ಜೊತೆ ಕಾವ್ಯದ ಜೊತೆ ಸಂವಹನ ಮಾಡಿದ್ದಾರೆ. ನಮ್ದೆಲ್ಲ ಏನಾಗಿದೆ ಅಂದ್ರೆ ತರ್ಕ ಕುತರ್ಕ ಪದ ಭಾಷೆಗೆ ಹೊರಟಿದ್ದೀವಿ. ಸಂಸ್ಕೃತಿಯನ್ನ ಕಳ್ಕೊಂಡಿದ್ದೇವೆ. ಅದು ಲೊಳಲೊಟ್ಟೆಯಾಗಿದೆ. ಸುಮ್ನೆ ಡಣ ಡಣ ಶಬ್ದ ಮಾಡುತ್ತೆ. ಅಲ್ಲೇನೂ ಅರ್ಥ ಇರೋದಿಲ್ಲ.

ಆದ್ದರಿಂದ ರಂಗಭೂಮಿಯಲ್ಲಾದರೂ ವರ್ತಮಾನದ ಬದುಕಿಗೆ ಕನ್ನಡಿಯಿಡಿದು ಸತ್ಯ ಅಸತ್ಯಗಳ ಅನಾವರಣಗೊಳಿಸಿದರೆ ಜನರು ನೋಡುತ್ತಾರೆ. ಹಾಗಾಗಿ ವರ್ತಮಾನದ ಬಿಕಟ್ಟುಗಳನ್ನು ರೂಪಕವಾಗಿ ರಂಗದಲ್ಲಿ ಅಭಿವ್ಯಕ್ತಿಸಿದರೆ ಜನರ ಸ್ಪಂದನವೂ ಅಭೂತಪೂರ್ವವಾಗಿರುತ್ತದೆ. ಜನರ ಮಾತಿಗೆ, ಹಾಡಿಗೆ ಅವರ ಕಥೆಗೆ ರಂಗವೇದಿಕೆ ಸ್ಪಂದಿಸಿದರೆ ಅವರ ಬದುಕು ಕಲಾತ್ಮಕವಾಗಿ ಅವರ ಮಾತುಗಳು ಸಂವಹನಕ್ಕೆ ಒಗ್ಗುವಂತವುಗಳೆ ಎಂದು ವಿನಯಪೂರ್ವಕವಾಗಿ ತಿಳಿಸಿ ನನ್ನ ಮಾತು ಮುಗಿಸುತ್ತೇನೆ. ನಮಸ್ಕಾರ.