ಭಾಷೆ ಮತ್ತು ಸಮಾಜ ಬೇರೆ ಬೇರೆಯಲ್ಲ. ಸಮಾಜದ ತಳಹದಿ ಭಾಷೆ. ಮನುಷ್ಯರ ಆಲೋಚನೆಗಳು ವ್ಯಕ್ತರೂಪ ಪಡೆಯುವುದು ಭಾಷೆಯಿಂದಲೇ. ಸಮಾಜದ ನಂಬಿಕೆಗಳನ್ನು ಆಧರಿಸಿಯೆ ಭಾಷೆಯು ಅರ್ಥ ಪಡೆಯುವುದು. ಅರ್ಥದ ಸ್ತರಗಳು ಬಹುರೂಪಿಯಾದವು. ಕನ್ನಡ ಭಾಷೆಯು ಒಂದೇ ಆಗಿದ್ದರೂ ಆ ಭಾಷೆಯ ಅರ್ಥ ವಲಯಗಳು ಅನೇಕ ಬಗೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕವಾದ ಪರಿಸರದಿಂದ ವಿಭಿನ್ನಗೊಳ್ಳುತ್ತವೆ. ಕನ್ನಡ ಭಾಷೆಯು ದಲಿತ ಸಮುದಾಯಗಳ ಬದುಕಿನ ಸಂಬಂಧಗಳ ನೆಲೆಯಲ್ಲಿ ಅನೇಕ ಬಗೆಯ ಅಂತರಗಳನ್ನು ಅರ್ಥ ಸೂತಕದ ಕ್ರಮಗಳನ್ನು ಮತ್ತು ತಾರತಮ್ಯಗಳನ್ನು ಅನುಸರಿಸಿಕೊಂಡು ಬಂದಿದೆ. ಅದರ ಸಾಮಾಜಿಕ ಸಂವಹನದಲ್ಲಿ ಜಾತಿಸೂತಕವು ಅಂತರ್ಗತವಾಗಿ ಬೆಸುಗೆಯಾಗಿದೆ. ಜಾತಿ ಹಾಗೂ ಲಿಂಗ ತಾರತಮ್ಯಗಳು ಯಾವ ಬಗೆಯ ಸಂವಹನ ಹಾಗೂ ಶ್ರೇಣೀಕೃತ ಅರ್ಥಗಳನ್ನು ಹಾಗೂ ಸಾಮಾಜಿಕ ಅಧಿಕಾರ ಕೇಂದ್ರಗಳನ್ನು ಅಳವಡಿಸಿಕೊಂಡಿವೆ ಎಂಬುದನ್ನು ಇಲ್ಲಿ ವಿಶೇಷವಾಗಿ ಪರಿಶೀಲಿಸಬಹುದು.

ಭಾಷೆಗೆ ಜಾತಿ ಇಲ್ಲವಾದರು ಆ ಭಾಷೆಯ ಅರ್ಥ ಕ್ರಿಯೆಗೆ, ಅರ್ಥದ ಎಲ್ಲೆಗೆ, ಅರ್ಥದ ಪರಿಣಾಮಕ್ಕೆ ಹಾಗು ಅರ್ಥದ ಸಂವಹನಕ್ಕೆ ಜಾತಿಯ ಗುಣವಿದೆ. ಜಾತಿಬದ್ಧವಾದ ಸಮಾಜದಲ್ಲಿ ಜಾತ್ಯತೀತವಾದ ಸಂವಹನ ಇರಲು ಸಾಧ್ಯವಿಲ್ಲ. ಭಾಷೆಯ ಒಂದೇ ಸೂಚನೆಯನ್ನು ಒಂದೇ ಸಂದರ್ಭದಲ್ಲಿ ಹಲವು ಜಾತಿಗಳು ತಮ್ಮ ತಮ್ಮ ಚೌಕಟ್ಟಿನಲ್ಲಿ ಅರ್ಥವಿಸಿಕೊಳ್ಳುತ್ತವೆ. ಅವರವರ ಅರ್ಥವು ಅವರವರ ಅನುಭವ ಮತ್ತು ಗ್ರಹಿಕೆಯ ಮೇಲೆ ನಿರ್ಧಾರವಾಗುತ್ತದೆ. ಮಾತಿನ ಸೂತಕ ಮತ್ತು ಮಾತಿನ ಅಧಿಕಾರ ಈ ಎರಡೂ ಕ್ರಿಯೆಗಳು ಏಕಕಾಲದಲ್ಲಿಯೆ ಘಟಿಸುತ್ತವೆ. ಯಾವ ಯಾವ ಜಾತಿಯ ಶ್ರೇಣೀಯು ಮೇಲಿರುತ್ತದೊ ಅದರ ಅರ್ಥವು ಅಧಿಕಾರ ಬದ್ಧವಾಗಿರುತ್ತದೆ. ಹಾಗೆಯೆ ಯಾವ ಜಾತಿಯು ಕೆಳಗಿರುತ್ತದೊ ಅದರ ಅರ್ಥವು ಸೂತಕದ ಅರ್ಥಸ್ತರದಲ್ಲಿ ಹಾಗೂ ನಿಷೇದಿತ ಅರ್ಥಾವರಣದಲ್ಲಿ ಮಾತ್ರ ಬಳಕೆಯಾಗಿ ಅಸ್ತಿತ್ವವನ್ನು ಸಾಮಾಜಿಕವಾಗಿ ಕಳೆದುಕೊಂಡಿರುತ್ತದೆ. ಸಂವಹನದ ಅಸ್ಪೃಶ್ಯತೆಯೂ ಇಲ್ಲಿಯೆ ಹುಟ್ಟಿಕೊಂಡು ದಲಿತರ ಅರ್ಥವು ಅನರ್ಥವಾಗಿ ಬಿಡುವುದು ಮತ್ತು ಅವರ ಭಾಷೆಯು ಪ್ರತಿಷ್ಠಿತ ಕನ್ನಡದ ಮುಂದೆ ಸೇವಕ ಪರಿಭಾಷೆಯಲ್ಲಿ ಕಾಣಿಸಿಕೊಳ್ಳುವುದು. ಮೇಲು ಜಾತಿಗಳು ಬಳಸುವ ಕನ್ನಡವು ಕೆಳಜಾತಿಗಳ ಮೇಲೆ ತಮ್ಮ ಅರ್ಥಗಳ ದಿಗ್ವಿಜಯವನ್ನು ಸಾಧಿಸಿಕೊಂಡಿವೆ. ಊರಗೌಡರು ಲಿಂಗಾಯಿತರು ದಲಿತರನ್ನು ಯಾವ ಬಗೆಯ ಅರ್ಥಸೂಚಿಗಳಲ್ಲಿ ಸಂವಹನ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೆ. ಅಸ್ಪೃಶ್ಯತೆಯಲ್ಲೇ ದಲಿತರನ್ನು ಅರ್ಥೈಸುವ ಊಳಿಗಮಾನ್ಯ ಕನ್ನಡವಾಗಲಿ, ಪುರೋಹಿತಶಾಹಿ ಕನ್ನಡವಾಗಲಿ ಮಹಿಳೆಯರನ್ನು ಯಕಶ್ಚಿತ್ ಎಂದು ಪರಿಭಾವಿಸುವ ಪುರುಷಾಧಿಪತ್ಯದ ಕನ್ನಡವಾಗಲಿ ಇಲ್ಲವೇ ಹೊಸಕಾಲದ ತಂತ್ರಜ್ಞಾನ ಮತ್ತು ನಗರೀಕರಣದ ಭಾಷೆಯಾಗಲಿ ಇವೆಲ್ಲವೂ ಆಳುವ ಮತ್ತು ಪ್ರಭುತ್ವದ ಮೌಲ್ಯಗಳನ್ನೇ ತನ್ನ ಕೆಳಗಿನವರ ಮೇಲೆ ನಿರ್ದೇಶಿಸುತ್ತಿರುತ್ತವೆ.

ಮುಕ್ತ ಸಮಾಜದಲ್ಲಿ ಸಂವಹನಕ್ಕೆ ಸಮಾನ ಅರ್ಥಗಳಿರುತ್ತವೆ. ಜಾತಿ ಪ್ರಭುತ್ವದ ಸಮಾಜದಲ್ಲಿ ನಿಜವಾದ ಸಂವಹನದ ಬಾಗಿಲುಗಳೆ ಮುಚ್ಚಿಕೊಂಡಿರುತ್ತವೆ. ತಮ್ಮ ತಮ್ಮ ಜಾತಿಯ ಕಿಂಡಿಗಳಿಂದಲೇ ಅರ್ಥವು ಹೊರಡುವುದು. ಸಂವಹನದ ಸಾಧ್ಯತೆಯ ಜಾತಿಗಳಿಗೆ ಕಿರಿದಾಗಿದ್ದು ಅರ್ಥದ ಕೋಟೆಗಳನ್ನು ಅವು ನಿರ್ಮಿಸಿಕೊಂಡಿರುತ್ತವೆ. ಇಂತಲ್ಲಿ ಅರ್ಥದ ಬಿಂಬ ಪ್ರತಿಬಿಂಬಗಳು ಮೇಲುಜಾತಿಗಳ ಸಂದರ್ಭದಲ್ಲಿ ನಿರಂಕುಶವಾಗಿರುತ್ತವೆ. ಜಾತಿ ಸಮಾಜವೂ ನಿರಂಕುಶ ಅರ್ಥಗಳಿಂದಲೆ ತಮ್ಮ ಅಸ್ತಿತ್ವವನ್ನು ಸಂವಹನ ಮಾಡುವುದು. ಹಾಗೆಯೆ ದಲಿತ ಸಮಾಜದ ಅರ್ಥಗಳನ್ನು ನಿರಾಕರಿಸುವುದು. ಇಂತಹ ಸಂದರ್ಭದಲ್ಲಿ ಭಾಷೆಯ ಅರ್ಥಕ್ಕೂ ಅದರ ಆರ್ಥಿಕ ಹಾಗೂ ಧಾರ್ಮಿಕ ಅಧಿಕಾರಗಳಿಗೂ ತಂತಾನೆ ಅಧಿಕೃತತೆಯು ಬಂದುಬಿಡುತ್ತದೆ.

ಜಾತಿ ವ್ಯವಸ್ಥೆಯು ನಿರ್ಮಿಸಿರುವ ಅರ್ಥ ಸಂವಹನವೆ ಭಾಷೆಯ ವಿನ್ಯಾಸವನ್ನು ರೂಪಿಸಿರುತ್ತದೆ. ಆಯಾಯ ಜಾತಿಗಳಿಗೆ ಇರುವ ಸಾಮಾಜಿಕ ಸ್ಥಾನಮಾನದಂತೆಯೆ ಆಯಾಯ ಸಮುದಾಯಗಳ ಅಭಿವ್ಯಕ್ತಿಗೆ ವ್ಯಾಪ್ತಿಯು ತೀರ್ಮಾನವಾಗಿರುತ್ತದೆ. ಹೀಗಾಗಿಯೆ ದಲಿತರ ಕೇರಿಯಲ್ಲಿ ಆಡಲ್ಪಡುವ ಮಾತಿನ ಅರ್ಥಕ್ಕೂ ಊಳಿಗಮಾನ್ಯ ಜಾತಿಗಳ ಕೇರಿಗಳಲ್ಲಿ ಅವರು ಆಡಿಕೊಳ್ಳುವ ಮಾತಿನ ಕ್ರಮಗಳಿಗು ಸಂಬಂಧ ಬೇರೆ ಬೇರೆಯಾಗುವುದು. ಭಾಷೆಯ ರಚನೆ ಒಂದೇ ಆಗಿದ್ದರೂ ಆ ಭಾಷಿಕ ರಚನೆಯ ಅರ್ಥ ಸಂಬಂಧಗಳು ಸಂವಹನವನ್ನು ದೂರ ದೂರದಿಂದಲೆ ವೈರುಧ್ಯದಿಂದಲೆ ನಿರಾಕರಣೆಗಳಿಂದಲೆ ಹಾಗೆಯೆ ಒಪ್ಪಂದಗಳ ಮೂಲಕವೆ ಮಾಡಿಕೊಳ್ಳುತ್ತವೆ.

ಜೀತಗಾರನ ಮಾತಿಗೂ ಒಡೆಯನ ಮಾತಿಗೂ ಸ್ಥಾನದ ಅಂತರವಿರುವಂತೆಯೆ ಅರ್ಥದ ಸಮಾನತೆಯೂ ಅನ್ಯಾಯದ ಒಪ್ಪಂದವೂ ಜೊತೆಯಾಗಿಯೆ ಸಾಮಾಜಿಕವಾದ ರೂಢಿಗಳನ್ನು ಆಡಿಕೊಳ್ಳುತ್ತಿರುತ್ತವೆ. ಹೀಗಾಗಿಯೆ ದಲಿತ ಸಮಾಜದ ಸಂವಹನವು ತನ್ನ ವರ್ತಮಾನದ ಹಿಂಸೆಯನ್ನು ಮೀರಿಕೊಳ್ಳಲು ಪ್ಯಾಂಟಸಿಯ ಮೂಲಕ ರಮ್ಯ ಮಾಂತ್ರಿಕ ರೂಪಕ ಕಥನಗಳ ಮೂಲಕ ವಿಶ್ವಾತ್ಮಕವಾದ ನಿರೂಪಣೆಗಳ ಕಡೆಗೆ ವಿಶೇಷವಾಗಿ ತೊಡಗಿ ಮೌಖಿಕ ಪರಂಪರೆಯ ಮೂಲಕ ಮತ್ತೊಂದು ಸಂವಹನ ಲೋಕವನ್ನು ಕಂಡುಕೊಂಡಿದ್ದು. ಜನಪದ ಮಹಾಕಾವ್ಯ ಕಥನಗಳಲ್ಲಿ ರೂಢಿಗತ ಸಮಾಜದ ಅರ್ಥಗಳಿಗೆ ಮಹತ್ವವಿಲ್ಲ. ದಲಿತ ಸಮಾಜದ ಒಳಗೆ ಅರ್ಥದ ವಿರುದ್ಧವಾದ ಇನ್ನೊಂದು ಅರ್ಥದ ವಲಯವಿದೆ. ಇದು ಎಲ್ಲ ತಳ ಸಮುದಾಯಗಳ ಮಹಿಳೆಯರ ಒಳಗಿನ ಅಭಿವ್ಯಕ್ತಿಯಲ್ಲಿ ಮತ್ತೊಂದು ಬಗೆಯಾಗಿ ಅರ್ಥ ವಿಸ್ತಾರವಾಗುವುದಿದೆ.

ಕನ್ನಡದ ಒಂದೇ ನುಡಿಯು ಒಂದೇ ನಾಡಿನಲ್ಲಿ ಅವರವರ ಹಿತಾಸಕ್ತಿಗೆ ಅನುಗುಣವಾಗಿ ಬಳಕೆಯಾಗುವುದು ಮೂಲತಃ ಭಾಷೆಯ ರಾಚನಿಕೆ ಮಿತಿಯಿಂದಲ್ಲ. ಭಾಷೆ ಮತ್ತು ಮನಸ್ಸು ಜೊತೆಯಾಗಿಯೆ ಅಭಿವ್ಯಕ್ತಿಗೆ ಒಳಗಾಗುತ್ತಿರುತ್ತವೆ. ಮನಸ್ಸಿನ ಸ್ತರಕ್ಕನುಸಾರವಾಗಿ ಅರ್ಥದ ಭಿತ್ತಿಯ ಅನಾವರಣಗೊಳ್ಳುತ್ತದೆ.

ಭಾಷೆಯ ಮನಸ್ಸು ಮತ್ತು ಗ್ರಹಿಕೆಯ ಪೂರ್ವಾಗ್ರಹ

ಪ್ರತಿಯೊಂದು ಭಾಷೆಯು ನಮ್ಮ ಮನಸ್ಸಿನ ಪ್ರತಿಬಿಂಬ. ಮನಸ್ಸು ಆಲೋಚನೆಯ ಸಂಕೇತಗಳನ್ನು ರೂಪಿಸಿರುತ್ತದೆ. ಅದರಿಂದಲೇ ಅರ್ಥಗಳು ಸಂವಹನವಾಗುವುದು. ಭಾಷೆಯ ಪ್ರತಿ ಪದವೂ ಅದರ ಎಲ್ಲ ರೀತಿನೀತಿಗಳು ವ್ಯಕ್ತಿಯ ಮನಸ್ಸುಮತ್ತು ಸಮಾಜದ ಮನಸ್ಸುಗಳ ಅಳತೆಗಳಿಗೆ ಅನುಗುಣವಾಗಿಯೆ ವಿಕಾಸವಾಗಿರುವುದು. ಜಾತಿ ಮತ್ತು ಲಿಂಗ ತಾರತಮ್ಯ ಪ್ರಜ್ಞೆಯು ಮನಸ್ಸಿನ ತಳದಲ್ಲಿ ಕ್ರಿಯಾಶೀಲವಾಗಿರುತ್ತದೆ. ಅದರಿಂದಲೆ ಅರ್ಥ ಮತ್ತು ಆ ಅರ್ಥದ ಗ್ರಹಿಕೆಯು ಪೂರ್ವಾಗ್ರಹದಿಂದಲೆ ಸಂವಹನ ಮಾಡುವುದು. ಸಂವಹನದ ವೇಳೆ ಯಾವ ವ್ಯಕ್ತಿ ಯಾವ ವಸ್ತು ವಿಷಯದ ಬಗ್ಗೆ ಅಭಿವ್ಯಕ್ತಿಯನ್ನು ಹೇಗೆ ಆನುಸಂಧಾನ ಮಾಡುತ್ತಿದ್ದಾನೆ ಎಂಬುದು ಮುಖ್ಯವೆ ವಿನಃ ಆ ಭಾಷೆಯ ಭೌತಿಕ ರಚನೆಯೆ ಎಲ್ಲವೂ ಅಲ್ಲ. ಭಾಷೆಯ ಒಟ್ಟು ರಚನೆಯಲ್ಲಿ ಅರ್ಥ ಸಂವಹನವಾಗುವುದು ಅವರವರ ಅಸ್ತಿತ್ವದ ಕಾರಣವಾಗಿಯೆ. ಭಾಷೆಯ ಗ್ರಹಿಕೆಯಲ್ಲಿ ಪೂರ್ವಾಗ್ರಹವಿದ್ದಾಗ ಅರ್ಥವೂ ಪೂರ್ವಾಗ್ರಹದ ಪ್ರತೀಕವೆ ಆಗಿರುತ್ತದೆ. ಯಾವ ವಸ್ತುವನ್ನು ನಮ್ಮ ಮನಸ್ಸು ಹೇಗೆ ಗ್ರಹಿಸಿದೆ ಎಂಬುದರ ಮೂಲಕ ಅರ್ಥದ ಅಧಿಕಾರವು ಸ್ಥಾಪಿತವಾಗುತ್ತದೆ. ಹಾಗೆಯೆ ಅರ್ಥದ ಹಲವು ಸ್ತರಗಳ ಮೇಲೆ ತನ್ನ ಅರ್ಥ ಪ್ರಭುತ್ವವನ್ನು ಹೇರುತ್ತಲೇ ಸಂವಹನದ ಏಕ ಮಾದರಿಗಳನ್ನು ನಿರ್ಮಿಸುತ್ತಿರುತ್ತದೆ.

ಇದರಿಂದಲೆ ಅರ್ಥವು ಪೂರ್ವಾಗ್ರಹದಿಂದ ಕೂಡಿದ್ದಾಗ ಮನುಷ್ಯ ಸಂಬಂಧಗಳು ಕೂಡ ಅಪಾರ್ಥಗಳಿಂದ ಗಡಿಗಳನ್ನು ಬಲಪಡಿಸಿಕೊಳ್ಳುತ್ತಿರುತ್ತವೆ. ದಲಿತ ಸಮಾಜವನ್ನು ನಿಯಂತ್ರಿಸುವಂತೆ ಮೇಲುಜಾತಿಗಳು ಅರ್ಥದ ಗಡಿಗಳನ್ನು ಜಾರಿಗೊಳಿಸಿರುತ್ತವೆ. ಎಷ್ಟೋ ಉಪಭಾಷೆಗಳು ಕೇರಿಗೆ ಸೀಮಿತವಾದಂತೆ ಉಳಿದುಕೊಳ್ಳಲು ಕೂಡ ಇಂತಹ ಸಂವಹನದ ಗಡಿಗಳು ಕಾರಣವಾಗಿರುತ್ತವೆ. ಅಗ್ರಹಾರದ ಕನ್ನಡಕ್ಕೂ ಹೊಲಗೇರಿಯ ಕನ್ನಡಕ್ಕೂ ಆದಿವಾಸಿ ಹಾಗೂ ಅಲೆಮಾರಿಗಳ ಕನ್ನಡಕ್ಕೂ ವೈವಿಧ್ಯತೆ ಇದೆ ಎಂದು ಹೇಳಿದರೆ ಯಾವ ವಿಶೇಷತೆಯು ಇಲ್ಲ. ಇಂತಹ ಬಗೆಗಳನ್ನು ಬಹುರೂಪಿ ಕನ್ನಡ ಎಂದು ಭಾವಿಸುವುದು ಸರಿಯಷ್ಟೆ. ಆದರೆ ಹೀಗೆ ಬಹುರೂಪಿಯಾಗಿದ್ದುಕೊಂಡೇ ಅರ್ಥ ಸಂವಹನದ ಗಡಿಗಳು ದಲಿತ ಸಮಾಜವನ್ನು ನಿಷೇಧಿಸಲ್ಪಡುತ್ತಿರುತ್ತದೆ ಎಂಬುದರ ಕಡೆಗೆ ನಮ್ಮ ನೈತಿಕ ಕಾಳಜಿ ವಿಶೇಷವಾಗಿ ಆಗಬೇಕಿರುತ್ತದೆ. ಪೂರ್ವಾಗ್ರಹದಿಂದ ಕೂಡಿದ ಅರ್ಥವು ಮನುಷ್ಯ ವಿರೋಧಿಯಾದ ನೀತಿಯನ್ನು ಪ್ರತಿನಿಧಿಸುತ್ತಲೆ ಬಂದಿರುವುದನ್ನು ಸಾಮಾಜಿಕ ವಾಸ್ತವದಲ್ಲಿ ಗಮನಿಸಬಹುದು. ಜಾತಿಯ ಮನಸ್ಸು ಅರ್ಥದ ಯಾಜಮಾನ್ಯವನ್ನು ರೂಪಿಸುತ್ತಲೆ ಇರುತ್ತದೆ. ಇಂತಹ ಯಾಜಮಾನ್ಯದಿಂದಾಗಿಯೆ ದಲಿತ ಸಮಾಜವು ಲೌಖಿಕದ ಭಾಷಿಕ ಸ್ವಾತಂತ್ರ್ಯವನ್ನು ಕಳೆದುಕೊಂಡದ್ದು. ಪ್ರಶ್ನಿಸುವ ಅವಕಾಶದಿಂದ ವಂಚಿತವಾದ ದಲಿತ ಸಮುದಾಯಗಳು ಪ್ಯಾಂಟಸಿಯೇ ಕಳೆದು ಹೋಗಿರುವ ಅರ್ಥಗಳನ್ನು ಹುಡುಕಿಕೊಳ್ಳುತ್ತವೆ. ವಿಷಾದವೆಂದರೆ ವರ್ತಮಾನದಲ್ಲಿ ಈ ಬಗೆಯ ರಮ್ಯಾದ್ಭುತ ಅರ್ಥಗಳಿಗೆ ನಿರ್ಣಾಯಕವಾದ ಯಾವ ಅರ್ಥದ ಅಧಿಕಾರವೂ ಇರುವುದಿಲ್ಲ. ಮಂಟೇಸ್ವಾಮಿ, ಮಲೆಮಾದೇಶ್ವರರನ್ನು ಕುರಿತು ಹಾಡಿ ಆನಂದಿಸಿ ಮೈಮರೆಯಾದ ದಲಿತರು ಪವಾಡಗಳಿಂದ ಅರ್ಥದ ಯಾಜಮಾನ್ಯವನ್ನು ಮೀರಲು ಯತ್ನಿಸುವುದು ರಮ್ಯವಿಶ್ವಾಸವೇ ಸರಿ. ಇಂತಹ ರಮ್ಯಾರ್ಥಗಳು ಕೂಡ ಅರಣ್ಯರೋಧಕವಾಗಿ ವರ್ತಮಾನದ ಮುಖಾಮುಖಿಯಿಂದಲೇ ಪಲಾಯನವನ್ನು ಮಾಡುತ್ತಿರುತ್ತವೆ. ದಲಿತ ಸಮಾಜದ ಮಾಂತ್ರಿಕ ವಿಧಿಯಾಚರಣೆಗಳೆಲ್ಲವೂ ಬೇರೊಂದು ಅಸ್ತಿತ್ವದ ಜೊತೆ ಸಂವಹನ ಮಾಡುವಂತೆ ಕಾಣುವುದು ಇಂತಹ ತೊಡಕುಗಳಿಂದಲೇ.

ಸಾಮಾಜಿಕ ಸಂವಹನ ಮತ್ತು ಸಂಬಂಧ

ದಲಿತ ಸಮಾಜದ ಗ್ರಹಿಕೆಯಲ್ಲಿ ವಸ್ತು ಪ್ರಧಾನವಲ್ಲ. ಭಾಷೆಯು ವಸ್ತು ಸ್ವರೂಪವನ್ನು ಆಧರಿಸಿಯೆ ಅರ್ಥವನ್ನು ಬಿಂಬಿಸುತ್ತದೆ ಎಂಬುದು ಸರಿಯಷ್ಟೆ. ವತರ್ಗಮಾನದ ಭೌತಿಕ ನೆಲೆಯ ಮೇಲೆ ದಿಗ್ವಿಜಯ ಸಾಧಿಸಿದ ಸಮುದಾಯಗಳು ಯಾವತ್ತೂ ಅದರ ಸಂರಕ್ಷಣೆಯಲ್ಲೇ ಅದರ ಲಾಭ ನಷ್ಟದ ತರ್ಕದಲ್ಲೆ ಅದಕ್ಕೆ ಅಪರೂಪವಾದ ಅಧಿಕಾರದ ವಿಸ್ತರಣೆಯಲ್ಲೇ ತೊಡಗಿರುತ್ತವೆ. ಸಂವೇದನೆ ಮತ್ತು ಸಂವಹನದ ನಿಷೇದಿತ ಆವರಣದಲ್ಲಿ ಬದುಕುವ ದಲಿತ ಸಮುದಾಯಗಳು ಪರರ ಅರ್ಥಗಳನ್ನೆ ತನ್ನ ಅರ್ಥವೆಂದು ಒಪ್ಪಿಕೊಳ್ಳಬೇಕಾದ ಸ್ಥಿತಿಯಲ್ಲಿರುತ್ತವೆ. ದಲಿತರು ಭಾಷೆಯ ಮೂಲಕ ಕಂಡುಕೊಳ್ಳುವುದು ಸಂಬಂಧಗಳನ್ನೆ ಹೊರತು ಕೇವಲ ಅರ್ಥಗಳನ್ನಲ್ಲ. ಮಾತಿನ ಅರ್ಥಕ್ಕಿಂತಲೂ ಆ ಮಾತು ಯಾವ ಬಗೆಯ ಸಂಬಂಧವನ್ನು ಸ್ಥಾಪಿಸುತ್ತದೆ ಹಾಗೂ ಅದರಿಂದ ತನ್ನ ಬದುಕಿನ ಯಾವ ರೀತಿಯ ಅಸ್ತಿತ್ವ ಸಾಧ್ಯವಾಗುತ್ತದೆ ಎಂಬುದು ದಲಿತರ ಗ್ರಹಿಕೆಯ ರೀತಿ ನೀತಿಯಾಗಿರುತ್ತದೆ.

ಒಂದು ಉದಾಹರಣೆಯಿಂದ ಈ ಮಾತಿನ ಸಂಬಂಧವನ್ನು ಪರಿಶೀಲಿಸಬಹುದು.

‘ಅನ್ನ’ ಎಂಬ ಪದಕ್ಕೆ ಅರ್ಥಕೋಶದಲ್ಲಿ ಸಿದ್ಧವಾದ ಅರ್ಥವಿದೆ. ಭಾಷಾ ವಿಜ್ಞಾನಿಯು ಈ ಪದದ ಅರ್ಥವನ್ನು ಗ್ರಹಿಸುವುದು ಈಗಾಗಲೆ ತೀರ್ಮಾನಿಸಲ್ಪಟ್ಟಿರುವ ಭಾಷಿಕ ನಂಬಿಕೆಗಳಿಂದಲೆ. ಅನ್ನ ಎಂಬ ಒಂದೇ ಶಬ್ದವು ಅರ್ಥ ಪ್ರಭೇದಗಳನ್ನು ನಿರ್ಮಿಸುವುದಿದ್ದರೂ ಇಲ್ಲಿ ಅರ್ಥವನ್ನು ವಸ್ತುವಿನ ಆಕೃತಿಯ ಮೂಲಕವೆ ಭಾವಿಸುವುದಿದೆ. ಅನ್ನ ಎಂದ ಕೂಡಲೆ ದಲಿತ ಕುಟುಂಬಗಳಲ್ಲಿ ಅನೇಕ ಬಗೆಯ ಭಾವನೆಗಳನ್ನು ಉಂಟುಮಾಡುತ್ತದೆ. ಬದುಕಿನ ನೆನಪುಗಳನ್ನು ತೆರೆಯುತ್ತದೆ. ಅನ್ನದ ಜೊತೆಗಿನ ಸಂಬಂಧಗಳನ್ನು ಬೆಸೆಯುತ್ತದೆ. ಅನ್ನದ ಅರ್ಥ ಹೊಟ್ಟೆ ತುಂಬಿದ ಸಮಾಜದ ಭಾವನೆಗಳಿಗೆ ಕಂಡ ರೀತಿಯಂತೆಯೆ ಹಸಿದ ಹೊಟ್ಟೆಯ ದಲಿತರಿಗೆ ಕಾಣಲು ಸಾಧ್ಯವಿಲ್ಲ. ಅನ್ನಪೂರ್ಣೆ, ಅನ್ನದಾತ ಎಂಬ ಅರ್ಥಗಳು ಹೊಳೆಯುವುದಕ್ಕಿಂತಲೂ ಅನ್ನದ ಹಸಿವು ಅಪಮಾನ ಹತಾಸೆ ಸಂಕಟ ಹಾಗೂ ಕನಸುಗಳು ಧುತ್ತೆಂದು ಎದ್ದು ನಿಲ್ಲುತ್ತವೆ. ‘ಇಗೋ ಕನ್ನಡ’ದ ಅರ್ಥಕ್ಕೂ ಹಸಿದವರ ಅಂತರಾರ್ಥದ ಅರ್ಥಕ್ಕೂ ಇಲ್ಲಿ ಸಂಬಂಧವಿಲ್ಲ. ಭಾಷೆಯಲ್ಲಿ ಅರ್ಥವನ್ನು ವಸ್ತುವಿನಿಂದ ಗ್ರಹಿಸಿ ವಿವರಿಸಲಾಗುತ್ತದೆ. ದಲಿತರಿಗೆ ಅರ್ಥವು ವಸ್ತುವಿನಿಂದ ದತ್ತಕವಾಗುವುದಿಲ್ಲ. ಅರ್ಥವೂ ಕೂಡ ದಲಿತ ಸಮಾಜಕ್ಕೆ ಮುಖ್ಯವಲ್ಲ. ಅರ್ಥವನ್ನು ಮೀರಿದ ಅಸ್ತಿತ್ವ ಬಹಳ ಮುಖ್ಯವಾಗುವುದರಿಂದ ಅನ್ನದ ಅಸ್ತಿತ್ವ ದೊಡ್ಡದು. ಇದರಿಂದಲೇ ಕನ್ನಡ ಭಾಷೆಯೊಂದನ್ನೆ ಬಹುನೆಲೆಗಳಿಂದ ಕಾಣಲು ಸಾಧ್ಯವಾಗುವುದು.

‘ಅನ್ನ’ ಶಬ್ದಕ್ಕೆ ನಾವು ಹೀಗೂ ಸಂಬಂಧವನ್ನು ನಿರೂಪಿಸಬಹುದು.

ಅನ್ನ : ದೊಡ್ಡವರ ಮನೆಯಲ್ಲಿ ಯಥೇಚ್ಛವಾಗಿ ಬಳಕೆಯಾಗುವ ಆಹಾರ.

ಅನ್ನ : ಉಳ್ಳವರ ಮನೆಯ ಹಬ್ಬ ಮದುವೆ ತಿಥಿ ಹಾಗೂ ಇನ್ನಿತರೆ ವಿಶೇಷ ದಿನಗಳಲ್ಲಿ ನಮಗೂ ಒಂದಿಷ್ಟು ಸಿಗುವ ಆಹಾರ.

ಅನ್ನ : ಮನೆಯಲ್ಲಿ ಮಕ್ಕಳಿಗೆ ಜ್ವರ ಬಂದಾಗ ಉಣಿಸುವ ಬೋನ.

ಅನ್ನ : ಮುದ್ದೆ ತಿಂದ ಮೇಲೆ ಅಪರೂಪಕ್ಕೆ ಯಾರಾದರೂ ನೆಂಟರು ಬಂದಾಗ ಆಕಸ್ಮಿಕವಾಗಿ ದೊಡ್ಡವರಿಗೂ ಸಿಗುವ ಆಹಾರ.

ಅನ್ನ : ದೊಡ್ಡವರ ಮನೆಯಲ್ಲಿ ಹಳಸಿದ್ದು ಬಿಸಾಡುವಂತಿದ್ದಾಗ ಅದನ್ನು ಪಡೆದು ತಂದು ನೀರಲ್ಲಿ ತೊಳೆದು ತಿನ್ನುವ ಆಹಾರ.

ಅನ್ನ : ಭಿಕ್ಷೆಯ ರೂಪದಲ್ಲೂ ಅನ್ನದಾನಿಗಳಿಂದ ಒದಗಿ ಬರುವ ಅದೃಷ್ಟ.

ಅನ್ನ : ನ್ಯಾಯ ಬೆಲೆ ಅಂಗಡಿಯಲ್ಲಿ ಮುಗ್ಗಲಿಡಿಹುಳುಗಳ ಸಹಿತ, ಕಡಿಮೆ ಬೆಲೆಗೆ ಸಿಗುವ ಹಾಗು ಅವುಗಳ ಸಹಿತ ತಯಾರಿಸಲ್ಪಟ್ಟ ಆಹಾರ.

ಅನ್ನ : ಹಸಿದು ಹತಾಶೆಯಲ್ಲಿ ಮಲಗಿರುವಾಗ ಆಗೀಗ ಕನಸಿಗೆ ಬರುವ ಆಹಾರ.

ಅನ್ನ : ತನಗೂ ಅನ್ನವಿಕ್ಕಿಲ್ಲ ಎಂದು ಆಗಾಗ ಜಗಳವನ್ನು ತಂದಿಡುವ ಮತ್ತು ಅದರಿಂದಲೆ ಅತ್ತೆ ಸೊಸೆಯರ ಮಧ್ಯೆ ಸಂಬಂಧ ಕೆಡುವ ಪರಿಸ್ಥಿತಿಯ ಒಂದು ಕಾರಣ.

ಅನ್ನ : ಬದುಕಿನ ಋಣಾನುಸಂಬಂಧ.

ಅನ್ನ ಎನ್ನುವ ಈ ಶಬ್ದದ ಸಂಬಂಧ ಮತ್ತು ಅಸ್ತಿತ್ವಗಳನ್ನು ಮತ್ತು ವಿವಿಧ ಸಂದರ್ಭಗಳಿಂದ ವಿಸ್ತರಿಸಬಹುದು. ಅನ್ನ ಎಂಬ ಇದೇ ಶಬ್ದವನ್ನು ದಲಿತ ಮಹಿಳೆ ಇನ್ನೂ ವಿಭಿನ್ನವಾಗಿ ನಿರೂಪಿಸಲು ಸಾಧ್ಯವಿದೆ. ಇದೇ ಪದವು ಮತ್ತೆ ಆದಿವಾಸಿಗಳಿಗೆ ಬೇರೆಯದೆ ಸಂಬಂಧಗಳನ್ನು ಸೂಚಿಸುತ್ತದೆ. ಅಂತಹ ನೆಲೆಗಳನ್ನು ನಾವಿನ್ನೂ ಹುಡುಕಿಕೊಂಡೇ ಇಲ್ಲ. ಆಹಾರವು ನಿಸರ್ಗದತ್ತವಾದ ಒಂದು ಜೈವಿಕ ವ್ಯವಸ್ಥೆ. ಆಹಾರವನ್ನು ಬೇರೊಬ್ಬರು ಕಸಿದುಕೊಂಡಾಗ ಮತ್ತು ನೈಸರ್ಗಿಕ ಸಂಪತ್ತಿನ ಒಡೆತನವನ್ನು ಊಳಿಗಮಾನ್ಯ ಶಕ್ತಿಗಳು ವಶಪಡಿಸಿಕೊಂಡಾಗ ಅರ್ಥ ಸಂಕೇತಗಳು ಪ್ರತಿಮೆ ರೂಪಕ ಗ್ರಹಿಕೆಗಳು ಕೂಡ ಗೆದ್ದವರ ಮುಖವಾಣಿಯಾಗಿಯೆ ಭಾಷೆಯ ಬಿಟ್ಟು ರಚನೆಯಲ್ಲಿ ಅಧಿಕಾರವನ್ನು ಸ್ಥಾಪಿಸಿಕೊಳ್ಳುತ್ತವೆ. ಆದ್ದರಿಂದಲೆ ಅನ್ನದ ಅರ್ಥವು ಏಕಮುಖವಾಗಿ ಉಳ್ಳವರನ್ನು ಪ್ರತಿನಿಧಿಸಲು ಸಾಧ್ಯವಾಗುವುದು.

‘ನನ್ನ ಮನೆ ಅನ್ನ ತಿಂದು ನನ್ ಮನೆಗೆ ಕಲ್ಲಾಕ್ತಿಯೇನೊ’, ‘ನನ್ ಮನೆ ಎಂಜುಲ್ ತಿನ್ನ ಬಿದ್ದಿದ್ದೋನ್ಗೆ ಇವತ್ತು ಯಂತಾ ಕಾಲ ಬಂತಪ್ಪಾ’, ‘ಲೇಯ್, ನನ್ ಮನೆ ಅನ್ನುದ್ ಋಣಾ ನಿನ್‌ ಮ್ಯಾಲದೆ ಅನ್ನುದಾ ಮರೀ ಬ್ಯಾಡಕಲಾ’, ‘ಅನ್ನಾ ಹಾಕಿದ ಮನೆಗೆ ಕನ್ನಾ ಹಾಕ್ತಿಯೇನೊ’- ಹೀಗೆ ಹತ್ತಾರು ಬಗೆಯ ನುಡಿಗಟ್ಟುಗಳನ್ನು ಅನ್ನದ ಸಂಬಂಧದಲ್ಲಿ ಗಮನಿಸಬಹುದು. ಈ ಮಾತುಗಳ ಅರ್ಥವು ಯಜಮಾನನ ನೆಲೆಯಲ್ಲಿ ಬೇರೆಯಾದರೆ ಇದೇ ಮಾತುಗಳ ಸಂಬಂಧವು ಜೀತಗಾರನ ಸಂದರ್ಭದಲ್ಲಿ ಬೇರೆಯಾಗುತ್ತವೆ.

ಅರ್ಥ ಪಾವಿತ್ರ್ಯ ಮತ್ತು ಭಾಷೆಯ ಅಸ್ಪೃಶ್ಯತೆ

ಭಾಷೆಯ ಒಳಗಿನ ಮೇಲುಕೀಳಿನ ಭಾವನೆಗಳಿಂದಲೆ ಅರ್ಥದ ಪಾವಿತ್ರ್ಯದ ಕಲ್ಪನೆಯು ಬೆಳೆದಿರುವುದು. ಶಿಷ್ಟ ಕನ್ನಡವು ಯಾಜಮಾನ್ಯವಾಗಿ ಪ್ರಭುತ್ವದ ನುಡಿಯೂ ಆಗುವುದು ಈ ದಾರಿಯಿಂದಲೇ. ಆ ಸ್ಥಾನದ ಪಂಡಿತ ಪಾಮರರ ಸಂಸ್ಕೃತ ಭೂಯಿಷ್ಠ ಕನ್ನಡವು ತಳಜಾತಿಗಳ ಆಡುನುಡಿಯನ್ನು ಸೃಶ್ಯ ಅಸ್ಪೃಶ್ಯ ನೆಲೆಯಿಂದಲೆ ಕಂಡಿದ್ದರಿಂದ ಈಗಲೂ ವ್ಯವಸ್ಥಿತ ಏಕ ಮಾದರಿಯ ಆಡಳಿತ ಕನ್ನಡವು ದಲಿತರ ಜೊತೆ ಸಂವಹನವನ್ನಾಗಲಿ ಸಂಬಂಧವನ್ನಾಗಲಿ ಮಾಡಲಾರದು. ದೊಡ್ಡವರು ಬಡವರ ಜೊತೆ ಮಾತನಾಡುವುದನ್ನು ನಿರಾಕರಿಸುವುದು ಕೂಡ ಇಂತಹ ಅಂತರದಿಂದಲೆ. ಖುದ್ದಾಗಿ ಮುಖ್ಯಮಂತ್ರಿಗಳೆ ಅಥವಾ ಸಂಬಂಧಪಟ್ಟವರೇ ನೇರವಾಗಿ ಧರಣಿಗೆ ಕುಳಿತವರ ಮುಂದೆ ಬಂದು ಸಮಸ್ಯೆಗೆ ಸಂಬಂಧಿಸಿದಂತೆ ನ್ಯಾಯಯುತವಾಗಿ ಸ್ಪಂದಿಸಬೇಕೆಂದು ಸಂಬಂಧಗಳ ಒತ್ತಾಯವನ್ನು ದಲಿತರು ಮಾಡುವುದು ಅರ್ಥದ ವಿರುದ್ಧ ಅಸ್ತಿತ್ವದ ಸಂಬಂಧವನ್ನು ಒತ್ತಾಯವನ್ನು ದಲಿತರು ಮಾಡುವುದು ಅರ್ಥದ ವಿರುದ್ಧ ಅಸ್ತಿತ್ವದ ಸಂಬಂಧವನ್ನು ಕಂಡುಕೊಳ್ಳುವುದರ ಸಲುವಾಗಿ. ಹಿಂದಿನ ಕಾಲದಲ್ಲಿ ದಲಿತರು ಬಹಿರಂಗವಾಗಿ ಮಾತನಾಡುವಂತಿರಲಿಲ್ಲ. ರಾಜ ಮಹಾರಾಜರು ಅವರ ಜೊತೆ ಮಾತನಾಡುವುದು ಸಾಧ್ಯವೇ ಇರಲಿಲ್ಲ. ಆದರೆ ಅದೆ ದಲಿತರು, ಅಲಕ್ಷಿತ ಜನಪದರು ‘ಒಂದೂರಲ್ಲಿ ಒಬ್ಬ ರಾಜ ಇದ್ನಂತೆ’ ಎಂದು ಅವನ ಚಹರೆಯು ಕತೆ ಹೇಳಿಕೊಂಡು ಅವನ ವ್ಯಕ್ತಿತ್ವವನ್ನು ತಮ್ಮ ಸಂಬಂಧಗಳಿಂದ ಅರ್ಥೈಸಿಕೊಳ್ಳುತ್ತಿದ್ದರು.

ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಭಾಷೆಯು ರೂಢಿಸಿಕೊಂಡ ಅಸ್ಪೃಶ್ಯತೆಯ ಕಾರಣವಾಗಿಯೆ ಪವಿತ್ರ ಎಂಬ ಎಲ್ಲ ಬಗೆಯ ಅರ್ಥಗಳಿಗು ವಿರುದ್ಧ ಪದಗಳು ಬೆಳೆದು ಬಂದಿರುವುದು. ಶ್ರೇಷ್ಠ ಎಂಬುದಕ್ಕೆ ಕೆಳಗಿನವರ ಅರ್ಥವನ್ನು ಸಮಾಜವು ಒಪ್ಪಿಕೊಂಡಿರುವುದಿಲ್ಲ. ಶ್ರೇಷ್ಠರ ನೆಲೆಯಲ್ಲಿ ನೀಚರ ಬಗ್ಗೆ ನಿರ್ಣಾಯಕವಾದ ಅರ್ಥಗಳು ಅನುಶಾಸನದಂತೆ ಜಾರಿಗೊಂಡಿರುತ್ತವೆ. ಮೇಲು ಜಾತಿಯವರ ಮಾತು ಯಾವತ್ತೂ ಸತ್ಯದ ಪರವಾಗಿರುತ್ತದೆಂದಾಗ, ಕೆಳಜಾತಿಯವರು ಮಾತ್ರ ಸುಳ್ಳನ್ನು ಆಡುವವರು ಎಂಬ ಧ್ವನಿತಾರ್ಥವು ವ್ಯಕ್ತವಾಗುತ್ತಿರುತ್ತದೆ. ಕೀಳು ಜನ ಅನೀತಿಯನ್ನಾಡುವವರು ಎಂದು ಮೊದಲೆ ಪೂರ್ವಾಗ್ರಹ ಮೇಲುಜಾತಿಯ ಮನಸ್ಸಿನಲ್ಲಿ ನೆಲೆಸಿರುವುದರಿಂದ ದಲಿತರ ಮಾತು ವಿಶ್ವಾಸಕ್ಕೆ ಅರ್ಹವಲ್ಲ ಎಂಬ ಮೌಲ್ಯವು ಈಗಲೂ ಸಮಾಜದಲ್ಲಿ ಬಲವಾಗಿದೆ. ಇದರಿಂದಲೆ ಮೇಲು ಜಾತಿಗಳು ದಲಿತರ ಜೊತೆ ವಿಶ್ವಾಸದ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ. ಬಹಿಷ್ಕೃತರನ್ನು ಸ್ವೀಕೃತರನ್ನಾಗಿಸಿಕೊಳ್ಳಲು ಭಾಷೆಯು ಯಾವ ಬಗೆಯ ನುಡಿಗಳನ್ನು ಅನುಸರಿಸಬೇಕು ಎಂಬುದಕ್ಕೆ ಯತ್ನಗಳ ಆಗದಿರುವುದರಿಂದ ಬಿರುಕುಗೊಂಡ ಸಂಬಂಧಗಳೇ ಉಳಿದುಕೊಂಡಿವೆ. ಇಂತಲ್ಲಿ ಅರ್ಥವು ಸ್ವಯಂ ಸ್ವತಂತ್ರವಲ್ಲ. ಮೇಲು ಜಾತಿಯ ಅರ್ಥಗಳು ಮಾತ್ರ ಅಧಿಕಾರವನ್ನು ಚಲಾಯಿಸುತ್ತಲೆ ಶುದ್ಧ ಅಶುದ್ಧ, ನೀತಿ ಅನೀತಿ, ಪಾಪ ಪುಣ್ಯ, ಸ್ವರ್ಗ ನರಕ, ಧರ್ಮ ಅಧರ್ಮ ಬಗೆಯ ದ್ವಂದ್ವ ವೈರುಧ್ಯಗಳು ಬೆಳೆದು ಭಾಷೆಯ ರಚನೆಯಲ್ಲಿ ಅಸ್ಪೃಶ್ಯತೆಯು ತಂತಾನೆ ಜಾರಿಗೆ ಬರುವಂತೆ ಮಾಡುತ್ತವೆ.

‘ವಲೀನ್ ಮಾತೂ ನೆಲ್ಲುಲ್ ಬೆಂಕಿನೂ ಒಂದೆ’, ‘ದನಾ ತಿನ್ನೋನ್ಗೆ ಗೊಬ್ಬುರುದಾಣೆ’, ‘ಹೀನ ಸುಳಿ ಬೋಳಿಸಿದ್ರೂ ಹೋಗೋದಿಲ್ಲ’, ‘ಕರೀ ನಾಯಿನಾ ಬಿಳೀ ನಾಯಿ ಮಾಡೋಕಾಗುತ್ಯೆ’ ಮುಂತಾದ ಗಾದೆಮಾತುಗಳು ಸಾರ್ವಜನಿಕವಾಗಿಯೆ ಅಸ್ಪೃಶ್ಯತೆಯನ್ನು ಆಚರಿಸುತ್ತಿರುತ್ತವೆ. ವ್ಯಕ್ತಿಯ ಚಾರಿತ್ರ್ಯವನ್ನು ಗುರುತಿಸುವಾಗ ಅವನು ಹುಟ್ಟಿಬಂದ ಜಾತಿಯ ಹಿನ್ನೆಲೆಯನ್ನು ಗಮನಿಸುವುದು ಇಂತಹ ಭಾವನೆಗಳಿಂದಲೆ, ಪಾವಿತ್ರ್ಯ ಮತ್ತು ಸತ್ಯಶೀಲತೆಯನ್ನು ಮಾತನಾಡುವವರು ವಾಗ್ದೇವಿಯ ಪುತ್ರರು ಎನಿಸಿಕೊಳ್ಳುತ್ತಾರೆ. ಭಾಷೆಯ ಸಂಸ್ಕಾರವಿಲ್ಲದವರು ಅನಾಗರೀಕ ಎಂದು ಈಗಲೂ ಕರೆಯುವುದಿದೆ. ಅವನ ಮಾತು ಅವನ ಜಾತಿಯನ್ನು ತಿಳಿಸುತ್ತದೆ ಎಂದು ಹೇಳಲಾಗುತ್ತದೆ. ಅಪವಿತ್ರವಾದ ಮಾತುಗಳೆ ಕೆಳಜಾತಿಗಳಿಗೆ ಮಾತ್ರ ಮೀಸಲು ಎಂಬುದನ್ನು ನಾಗರೀಕರು ಆಗಾಗ ಸೂಚಿಸುವುದೂ ಉಂಟು. ಮಾತು ಸೂತಕವಾದಾಗ ಅದರ ಅರ್ಥ ಮೈಲಿಗೆಯನ್ನು ಬಿಂಬಿಸಿದಾಗ ಅಸ್ಪೃಶ್ಯತೆಯು ಘಟಿಸುತ್ತದೆ. ಗ್ರಾಮಭಾರತದ ಉದ್ದಕ್ಕೂ ಪ್ರಾದೇಶಿಕವಾದ ಎಲ್ಲ ಭಾಷೆಗಳಲ್ಲು ಇಂತಹ ಭೇದವು ಈಗಲೂ ಸಾಂಗವಾಗಿಯೆ ಸಾಗಿದೆ. ದಲಿತ ಸಾಹಿತ್ಯ ಎಂದು ದಲಿತರು ಘನತೆಯಿಂದ ಕರೆದುಕೊಂಡಾಗಲೂ ಆ ಮಾತನ್ನು ಗ್ರಹಿಸುವ ಸಮಾಜವು ವಿಶಾಲವಾಗಿ ಅರ್ಥೈಸಿಕೊಳ್ಳುವುದಿಲ್ಲ ‘ದಲಿತ’ ಎನ್ನುವುದು ಒಂದು ಆಲೋಚನೆಯ ಕ್ರಮ. ಅದು ಒಂದು ಬದುಕಿನ ರೀತಿ. ಹಾಗೆಯೆ ಬೌದ್ಧಿಕವಾದ ಅವಕಾಶವೆಂತಲೂ ದಲಿತ ಪದದ ವ್ಯಾಪ್ತಿಯನ್ನು ವೈಚಾರಿಕವಾಗಿ ರಾಜಕೀಯವಾಗಿ ವಿಸ್ತರಿಸಿಕೊಳ್ಳಬಹುದು. ಆದರೆ ದಲಿತ ಎಂದ ಕೂಡಲೆ ಮೇಲುಜಾತಿಗಳು ಹೊಲೆಮಾದಿಗರು ಎಂದು ಭಾವಿಸುತ್ತದೆ. ಹೆಚ್ಚೆಂದರೆ, ಕಲಿತು ಮೇಲೆ ಬಂದು ತಮ್ಮ ಹಕ್ಕುಗಳಿಗೆ ಹೋರಾಟ ಮಾಡುವವರು ಎಂತಲೂ ಕೆಲವರಾದರು ತಿಳಿಯಬಲ್ಲರು ಜಾತಿಯ ಹಂಗನ್ನು ಕಳಚಿಕೊಂಡು ಮಾತನ್ನ ಆಲಿಸುವುದು ಬೆಳೆದೇ ಇಲ್ಲ. ಪಂಚೇಂದ್ರಿಯಗಳು ಜಾತಿಯ ಸಂಕೇತಗಳಿಂದಲೆ ಅರ್ಥವನ್ನು ಕಂಡುಕೊಳ್ಳುವುದು. ಅವರವರ ಕಣ್ಣು ಕಿವಿ ನಾಲಿಗೆಯ ಜೊತೆಗೆ ಅವರವರ ಧ್ವನಿ ಪೆಟ್ಟಿಗೆಯು ಜಾತಿಯು ಪ್ರತಿಫಲಿಸಿದ ಅರ್ಥಗಳಿಗೆ ತಕ್ಕಂತೆ ಪ್ರತಿಕ್ರಿಯಿಸುತ್ತವೆ. ಹೀಗಾಗಿಯೇ ಒಂದೇ ವಸ್ತುವನ್ನು ನೋಡುವ ಕಣ್ಣಿಗೆ ಅದರ ಬಗ್ಗೆ ಗ್ರಹಿಸುವ ಮನಸ್ಸಿಗೆ, ಅದನ್ನು ಕೇಳಿಸಿಕೊಳ್ಳುವ ಕಿವಿಗೆ, ಅದನ್ನು ಆಡುವ ನಾಲಿಗೆಗೆ ಅರ್ಥಾಂತರಗಳು ಬೇರೆ ಬೇರೆ.

ಇನ್ನೊಂದು ಉದಾಹರಣೆಯಿಂದ ಮೇಲಿನ ಅಂಶಗಳನ್ನು ಪರಿಶೀಲಿಸುವ.

ದೇವಾಲಯ ಈ ಒಂದೇ ಪದವು ಭಾಷೆಯ ಸಾಮಾಜಿಕ ನೆಲೆಗಳು ಹೇಗೆ ಬಹುಸ್ತರದಲ್ಲಿ ಘಟಿಸುತ್ತವೆ ಎಂಬುದನ್ನು ತೋರಬಲ್ಲದು. ಹಾಗೆಯೇ ಹೇಗೆ ಭಾಷೆ ಮತ್ತು ಜಾತಿ, ಜಾತಿ ಮತ್ತು ಧರ್ಮ, ಧರ್ಮ ಮತ್ತು ಸಮಾಜಗಳ ಅಂತರ್ ಸಂಬಂಧಗಳು ಒಂದನ್ನೊಂದು ಮುಟ್ಟಲಾರದೆ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಸಮಾಜದ ತಳದಿಂದ ದೇವಾಲಯದ ಅರ್ಥ ಬೇರೊಂದು ಸತ್ಯವನ್ನು ಬಿಂಬಿಸುತ್ತದೆ.

ದೇವಾಲಯ : ನಮ್ಮ ಜನರನ್ನು ಪಾಪಿಗಳೆಂದು ತೀರ್ಮಾನಿಸಿ ಆಚೆಗೆ ಎಸೆದಿರುವ ಒಂದು ಅಮಾನವೀಯ ಸ್ಥಳ.

ದೇವಾಲಯ : ದೇವರ ಹೆಸರಲ್ಲಿ ಅನಾಚಾರವನ್ನು ಎಸಗುವ ಕೇಂದ್ರ.

ದೇವಾಲಯ : ಕಲ್ಲಾಗಿ ಕುಳಿತಿರುವ ದೇವರ ಮೃತ ಮಂದಿರ.

ದೇವಾಲಯ : ಪುರೋಹಿತರ ಹೊಟ್ಟೆಪಾಡಿನ ನೆಲೆ.

ದೇವಾಲಯ : ಧಾರ್ಮಿಕ ಮೌಢ್ಯಗಳನ್ನು ಆಚರಿಸುವ ಸ್ಥಾನ.

ದೇವಾಲಯ : ನಮ್ಮನ್ನು ಒಳಗೆ ಬಾ ಎಂದು ಕರೆದುಕೊಳ್ಳಲು ವಿಶಾಲ ಅಂತಃ ಕರಣವಿಲ್ಲದ ಹಾಗೂ ನಮ್ಮ ಭಕ್ತಿಯನ್ನು ಅರಿಯಲು ಅನರ್ಹವಾಗಿರುವ ತಾಣ.

ಸ್ವಾರ್ಥವಾದ ಅರ್ಥಗಳು ತುಂಬಿದ್ದ ಸಮಾಜದಲ್ಲಿ ಬಸವಣ್ಣನಿಗೆ ದೇವಾಲಯವು ಕೇಡಿನಂತೆ ಕಂಡಿದ್ದರಿಂದಲೆ ಆತ ವೈದಿಕ ಪರಿಭಾಷೆಗಳನ್ನು ನಿರಾಕರಿಸಿ ಎನ್ನ ದೇಹವೇ ದೇವಾಲಯ ಎಂದು ಭಾವಿಸಿದ್ದು. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕಳಿವಿಲ್ಲ ಎಂದದ್ದು ಕೂಡ ಇಂತಹ ಅನುಭವಗಳಿಂದಲೆ. ಬಯಲು ಆಲಯವೆ ಮುಕ್ತಿ ಎಂದು ಅಲ್ಲಮನಿಗೆ ಅನಿಸಿದ್ದೂ ಈ ದಾರಿಯ ಗ್ರಹಿಕೆಯಿಂದಲೇ. ಸಂತ ಶಿಶುನಾಳ ಶರೀಫ ಆತ್ಮದ ನಿರಾಕಾರ ಗುಡಿಯನ್ನು ನೋಡಿ ಎಂದು ಹಾಡಿದ್ದು ದೇವಾಲಯದ ಅರ್ಥಸೂತಕದಿಂದಲೇ. ಕುವೆಂಪು ಅವರ ಜಲಗಾರ ನಾಟಕದ ಜಲಗಾರನು ಕೂಡ ಗುಡಿ ಚರ್ಚು ಮಸೀದಿಗಳನ್ನು ನಂಬಿದವನಲ್ಲ. ಎಲ್ಲ ತತ್ವಪದಕಾರರು ದೇಹದ ಒಳಗಿನ ಆತ್ಮವನ್ನು ಲಿಂಗ ಸತಿ ಶರಣ ಸತಿ ಎಂದು ಭಾವಿಸಿದವರೇ ಆಗಿದ್ದರು. ಕನಕದಾಸರು ಉಡುಪಿಯಲ್ಲಿ ದೇವಾಲಯದ ಸೂತಕ ನೀತಿಯಿಂದ ಬೇರೊಂದು ಧ್ವನಿಯನ್ನು ಹೊರಡಿಸಿದರು.

ಇಲ್ಲಿ ಗಮನಿಸಬೇಕಾದ್ದು ಇಷ್ಟು.

ಯಾವುದು ಪವಿತ್ರವೆಂದು ತೀರ್ಮಾನಿಸಲ್ಪಟ್ಟಿರುತ್ತದೊ ಅದರ ಅರ್ಥಕ್ಕೆ ವಿರುದ್ಧವಾದ ಇನ್ನೊಂದು ಅರ್ಥವು ಬಚ್ಚಿಟ್ಟುಕೊಂಡಿರುತ್ತದೆ. ಹೀಗೆ ಗುಪ್ತವಾಗಿರುವ ಅರ್ಥವು ನಿರಂತರವಾಗಿ ಬೇರೆ ಬೇರ ಅರ್ಥ ಸಾಧ್ಯತೆಗಳನ್ನು ಹುಡುಕುತ್ತಲೇ ಇರುತ್ತದೆ. ಆದರೆ ಪ್ರತಿಷ್ಠಿತವಾದ ಅರ್ಥವು ಮತ್ತೆ ಮತ್ತೆ ಜಡಗೊಳ್ಳುತ್ತ ಕುತಂತ್ರಗಳನ್ನು ಮಾತ್ರವೇ ಅನುಸಂಧಾನ ಮಾಡುತ್ತಿರುತ್ತದೆ. ಹೀಗಾಗಿಯೆ ಕನಕಗೋಪುರದ ವಿವಾದವು ಈ ಕಾಲದಲ್ಲು ಹೊಸ ಬಗೆಯ ಇಕ್ಕಟ್ಟುಗಳನ್ನು ಉಂಟು ಮಾಡುವುದು. ಮತ್ತು ಅರ್ಥವನ್ನು ತಿರುಚಿ ಧಾರ್ಮಿಕವಾದ ಹಿತಾಶಕ್ತಿಗಳಿಗಾಗಿ ಚರಿತ್ರೆಯನ್ನು ವಿರೂಪಗೊಳಿಸುವುದು. ಪವಿತ್ರವಾದ ನೆಲೆಗಳನ್ನು ಮತೀಯವಾಗಿಯೂ ಕಂಡು ಕೋಮು ದ್ವೇಷ ಮತ್ತು ಮೂಲಭೂತವಾದ ಭಾವನೆಗಳು ಬೆಳೆಯಲು ಅನುವಾಗುವಂತೆ ಇಂದು ದೇವಾಲಯಗಳನ್ನು ಬಳಸಿಕೊಳ್ಳುತ್ತಿರುವುದನ್ನು ಭಾಷೆ ಮತ್ತು ಧರ್ಮದ ವ್ಯಾಪ್ತಿಯಲ್ಲಿ ಗಮನಿಸಬಹುದಾಗಿದೆ.

ದಲಿತರ ಹಕ್ಕೊತ್ತಾಯ ಮತ್ತು ಭಾಷೆಯ ಅಂತಃಕರಣ

ಮೂಕನಿಗೆ ಮಾತು ಬಂದಾಗ ಆತ ಆ ತನಕ ಆಡಲಾಗದಿದ್ದ ಎಲ್ಲ ಮಾತುಗಳು ಒಂದೇ ಉಸಿರಿಗೆ ಗಂಟಲು ತುಂಬಿಕೊಂಡು ಬರುವುದರಿಂದ, ಸಹಜವಾಗಿಯೆ ಹಕ್ಕೊತ್ತಾಯದ ಹಾಗು ಆಕ್ರಂಧನದ ದನಿಯು ಜೊತೆಗೂಡಿ ಅಭಿವ್ಯಕ್ತಿಯನ್ನು ಪಡೆದುಕೊಂಡಿರುತ್ತದೆ. ವಾಕ್ ಸ್ವಾತಂತ್ರ್ಯದ ಫಲವಿದು. ತನ್ನ ಅಸ್ತಿತ್ವವನ್ನು ಹೀಗೆಯೆ ನುಡಿದು ಗುರುತಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಹೌದು. ದಲಿತರಿಗೆ ಅಸ್ತಿತ್ವವೆ ಮುಖ್ಯಗುರಿಯಾದ್ದರಿಂದ ಆಧುನಿಕ ಜಗತ್ತಿನಲ್ಲಿ ಅವರು ತಮ್ಮ ಪಾಲನ್ನು ಕೇಳುವ ಧಾಟಿಯಲ್ಲಿ ಹಾಗು ಎಲ್ಲ ತೀರ್ಮಾನಗಳನ್ನು ಪ್ರಶ್ನಿಸುವ ಧಾಟಿಯಲ್ಲಿ ಮತ್ತು ಎಲ್ಲ ಬಗೆಯ ಅಸಮಾನತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಆಲೋಚಿಸುವುದರಿಂದ ಅವರ ಭಾಷೆಗು ಅದೇ ರೀತಿಯ ವಿನ್ಯಾಸಗಳು ಹುಟ್ಟಿಕೊಳ್ಳುತ್ತವೆ. ಬಿಡುಗಡೆ ಎಂಬ ಶಬ್ದವು ಮೂಲ ಮಂತ್ರವಾಗಿ ದಲಿತರಿಗೆ ಕಂಡಿರುವುದು ಈ ಬಗೆಯಿಂದಲೇ. ದಲಿತ ಬಂಡಾಯದ ಎಲ್ಲ ಲೇಖಕರ ಭಾಷೆಯಲ್ಲು ಮುಕ್ತಿಯ ಧ್ಯಾನವಿರುವಂತೆಯೆ ಎಲ್ಲ ಪೂರ್ವಾಗ್ರಹಗಳನ್ನು ಭಗ್ನಪಡಿಸುವ ಪರಿಯಿದೆ. ಕನ್ನಡ ಭಾಷೆಯ ಒಳಗೆಯೇ ಇದ್ದ ದಲಿತ ಭಾಷೆಯು ದಲಿತ ಸಾಹಿತ್ಯದಿಂದ ಅನಾವರಣಗೊಂಡಿದ್ದನ್ನು ಗಮನಿಸಿದರೆ; ಅವರ ಭಾಷೆಯ ಅಂತಃಕರಣವು ಯಾವ ಸ್ವರೂಪದ್ದೆಂಬುದು ತಿಳಿಯುತ್ತದೆ.

ಸಿದ್ಧಲಿಂಗಯ್ಯನವರ ಈ ಸಾಲನ್ನು ಗಮನಿಸಿ.

‘ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತ್ವಾರಣ’

ಇಡೀ ಈ ವಾಕ್ಯವೇ ದಲಿತ ಸಮಾಜದ ಬಹುದೊಡ್ಡ ರೂಪಕ ಆಕ್ರಂಧನ. ಹಾಗೆಯೆ ದಲಿತ ಭಾಷೆಯ ಪ್ರಾತಿನಿಧಿಕ ಅಭಿವ್ಯಕ್ತಿಯೂ ಹೌದು.

ಅಂತೆಯೆ ಅರವಿಂದ ಮಾಲಗತ್ತಿಯವರ ಈ ಸಾಲನ್ನು ಗಮನಿಸಿ.

‘ಬರ್ತಾವೂ ಬರ್ತಾವೂ, ನಾವೆ ವೊಲೆದ ಕಾಲ್ಮರಿ ನಮ್ಮ ಕೆರ್ಯಾಕ ಬರ್ತಾವು’

ದಟ್ಟವಾದ ರಾತ್ರಿಯಲ್ಲಿ ದಲಿತ ಕೇರಿಗೆ ಜರಕೆ ಜೋಡು ಮೆಟ್ಟಿಕೊಂಡು ಆನಂದಪಡಲು ಬರುವ ಊರ ಸಾಹುಕಾರನ ಕ್ರೌರ್ಯವನ್ನು ಇಷ್ಟೊಂದು ತಣ್ಣನೆ ಹೆಪ್ಪುಗಟ್ಟಿದ ನೆತ್ತರ ಮೌನದಲ್ಲಿ ಪ್ರತಿಬಿಂಬಿಸುವುದೆಂದರೆ ಸಾಮಾನ್ಯ ಸಂಗತಿಯಲ್ಲ. ಅಂತಃಕರಣವನ್ನು ಕಲಕಿ ತಮ್ಮ ಅಸ್ತಿತ್ವದ ಪಾಡನ್ನು ನಿವೇದಿಸುವಲ್ಲಿ ದಲಿತ ಭಾಷೆಯು ಅಸಾಧಾರಣವಾದ ಸಾಧ್ಯತೆಯನ್ನು ಕಂಡುಕೊಳ್ಳುತ್ತಲೆ ಬಂದಿದೆ.

ದೇವನೂರು ಮಹದೇವ ಅವರ ಕುಸುಮಬಾಲೆಯ ಕಾದಂಬರಿಯಲ್ಲಿ ಬರುವ ಕೊನೆಯ ಮಾತು ‘ಸಂಬಂಜ ಅನ್ನು ದೊಡ್ಡು ಕನಾ’ ಕೊನೆಗೂ ಎಲ್ಲ ಮಾನವೀಯ ಭಾಷೆಗಳು ಹುಡುಕಿಕೊಳ್ಳುವುದು ಆ ಸಮಾಜದಲ್ಲಿ ತನ್ನ ಸಂಬಂಧವನ್ನೇ ಹೊರತು ಅರ್ಥಗಳನ್ನಲ್ಲ. ಅರ್ಥಗಳು ಬದಲಾಗಬಲ್ಲವು. ಹಾಗೆಯೆ ಕಳೆದೇ ಹೋಗಬಲ್ಲವು. ಆದರೆ ಸಂಬಂಧವೇ ಕಡಿದು ಹೋದರೆ ಮತ್ತಿನ್ಯಾವ ಅರ್ಥವಿರುತ್ತದೆ? ದಲಿತ ಭಾಷೆಯು ಅಂತಃಕರಣದ ಅಂತರಾರ್ಥಗಳಿಂದ ಸಂವಹನ ಮಾಡಲು ಆತ್ಯಂತಕವಾಗಿ ಅಭಿವ್ಯಕ್ತಿಯನ್ನು ಒಂದು ನಿಷ್ಠೆಯ ಕಾಯಕ ಎಂಬಂತೆ ಮಾಡುತ್ತಿರುತ್ತದೆ.

ಹಾಗೆಯೆ ಜಡ್ಡುಗಟ್ಟಿದ ಸಮಾಜದಲ್ಲಿ ಎಲ್ಲ ಅರ್ಥಗಳ ವಿರುದ್ಧವಾಗಿಯು ದಲಿತ ಲೇಖಕರಾದವರು ಹೋರಾಟವನ್ನು ಮಾಡುತ್ತಿರಬೇಕಾಗುತ್ತವೆ. ಇಂತಲ್ಲಿ ಹಿಂಸೆಯ ರೂಪಕಗಳು ತಂತಾನೆ ಮುಗಿಬಿದ್ದು ಬರಬಲ್ಲವು. ಪ್ರತಿರೋಧದ ಕಿಡಿನುಡಿಗಳು ಅಂತಃ ಕರಣದವಿಲ್ಲದೆ ನರಳಿದ ತಬ್ಬಲಿತನದಿಂಗಾಯು ಹುಟ್ಟಿಕೊಳ್ಳುತ್ತವೆ. ದಲಿತ ಸಾಹಿತ್ಯದ ಅಭಿವ್ಯಕ್ತಿಯ ಸ್ವರೂಗಳ ಕುರಿತಂತೆ ಸಾಹಿತ್ಯ ವಿಮರ್ಶೆಯಲ್ಲು ಸೂಕ್ಷ್ಮವಾದ ಅಸ್ಪೃಶ್ಯತೆಯು ಉಂಟಾಗಿದ್ದಿದೆ. ಕುಸುಮಬಾಲೆ ಕಾದಂಬರಿಯು ತಮಗೆ ಒದಲು ಆಗದು ಎಂದು ಸ್ವತಃ ಸಾಹಿತಿಗಳೇ ಮಾತನಾಡಿದ್ದಿದೆ.

ಮುಖ್ಯವಾಗಿ, ದಲಿತ ಭಾಷೆಯು ಮಾತೃ ಪ್ರಧಾನ ಸಂವೇದನೆಯನ್ನು ಅಭಿವ್ಯಕ್ತಿಸುತ್ತದೆ. ಅಂತಃಕರಣದ ಭಾವುಕ ಸಂಬಂಧಗಳು ದಲಿತ ಭಾಷೆಯಲ್ಲಿ ಹೇರಳವಾಗಿವೆ. ಒಡನಾಳದ ಸಾಕವ್ವ ಈ ಅಂಶಗಳನ್ನು ಗಾಢವಾಗಿ ಪ್ರತಿನಿಧಿಸುತ್ತಾಳೆ. ಬಹುಪಾಲು ಎಲ್ಲ ದಲಿತ ಲೇಖಕರು ತಮ್ಮ ಸೃಜನಶೀಲ ಬರಹಗಳಲ್ಲಿ ಮಾತೃರೂಪಕ ಪ್ರತಿಮೆ ಸಂಕೇತಗಳನ್ನು ಆ ಬಗೆಯ ತಾಯ್ತನವನ್ನು ಆರ್ದ್ರವಾಗಿ ನಿರೂಪಿಸಬಲ್ಲರು. ಆದರೆ ಗದ್ಯವನ್ನು ರೂಪಿಸುವಾಗ ಮಾತ್ರ ಅವರು ವ್ಯವಸ್ಥೆಯ ಎಲ್ಲ ಕುರೂಪದ ವಿರುದ್ಧ ಸೆಟೆದು ನಿಂತ ತಂದೆಯ ಹಾಗೆ ಬರಹವನ್ನು ಮಾಡುತ್ತಾರೆ. ಏಕಕಾಲಕ್ಕೆ ತಾಯ ಅಂತಃಕರಣವನ್ನು. ತಂದೆಯ ಪ್ರತಿರೋಧವನ್ನು ಅಳವಡಿಸಿಕೊಂಡು ಬರೆಯುವ ದಲಿತ ಲೇಖಕರು ಆ ಮಟ್ಟಿಗೆ ಬರಹದ ವ್ಯಕ್ತಿ ಭಾಷೆಯನ್ನು ಗಾಢವಾಗಿ ವಿಸ್ತರಿಸಿದ್ದು ಅಂಬೇಡ್ಕರ್ ಅವರ ವೈಚಾರಿಕ ಪ್ರತಿರೋಧ ಕೂಡ ದಲಿತ ಗದ್ಯದ ಮೇಲೆ ದಟ್ಟ ಪ್ರಭಾವ ಬೀರಿದೆ. ಸೃಜನಶೀಲವಾದ ಕಾವ್ಯ ಕಥೆಕಾದಂಬರಿಗಳಲ್ಲಿ ದಲಿತ ಲೇಖಕರು ಮುಖ್ಯವಾಗಿ ಸಂವಹನ ಮಾಡಲು ಬಯಸುವುದು ಅಂತಃಕರಣವನ್ನೇ. ಆದರೆ ಅವರ ಗದ್ಯವು ಭಗ್ನತೆಯಲ್ಲಿ ಮತ್ತು ನಿರಾಕರಣೆಯಲ್ಲಿ ಸಮಾಜದ ಅಸಮಾನ ಅರ್ಥಗಳ ಜೊತೆ ವಾಗ್ವಾದಕ್ಕೂ ಹೋರಾಟಕ್ಕೂ ಇಳಿಯುತ್ತಿರುತ್ತದೆ. ಒಪ್ಪಿದ ಮೌಲ್ಯಗಳನ್ನು ತಿರಸ್ಕರಿಸುವಲ್ಲಿ ದಲಿತರ ಗದ್ಯದ ಅಹಂ ನಿಷ್ಠವೂ ಆಗಿರುವಂತೆಯೆ ಸಮಷ್ಟಿ ನಿಷ್ಟವೂ ವ್ಯಕ್ತಿ ವಿಶಿಷ್ಟವೂ ಆಗಿರುತ್ತದೆ. ಆದ್ದರಿಂದಲೆ ಬಸವಲಿಂಗಪ್ಪನವರು ಹೇಳಿದ ಬೂಸಾ ಸಾಹಿತ್ಯದ ಮಾತು ವ್ಯವಸ್ಥೆಯ ಬುಡವನ್ನೆ ಅಲುಗಾಡಿಸಿದ್ದು.

ದಲಿತ ಗದ್ಯವು ಎಷ್ಟೋ ಬಾರಿ ಆದೇಶವನ್ನು ಹೊರಡಿಸುವಂತೆಯು ಇರುತ್ತದೆ. ಅಂಬೇಡ್ಕರ್ ಅವರ ಒಟ್ಟು ಗದ್ಯದ ಚಿಂತನೆಯು ಇಂತಾದ್ದೇ. ಈ ಸಮಾಜದ ಲೋಪವನ್ನು ಎತ್ತಿ ಆಡುವಾಗ ದಲಿತರ ಪರಿಕಲ್ಪನೆಗಳು ಭಾರತೀಯ ತತ್ವಶಾಸ್ತ್ರದ ಕ್ರಮದಲ್ಲೊ ಕಾವ್ಯಮೀಮಾಂಸೆಯ ರೀತಿಯಲ್ಲೊ ಇರಲು ಸಾಧ್ಯವಿಲ್ಲ. ಸಂಘರ್ಷಾತ್ಮಕವಾದ ವೈಚಾರಿಕ ಪರಿಕಲ್ಪನೆಗಳಿಂದ ವರ್ತಮಾನದ ಮೂಲಕವೆ ಗತಕಾಲದ ಕೇಡನ್ನು ತನ್ನ ಮೇಲಾದ ಶೋಷಣೆಯನ್ನು ಒತ್ತಾಯದಲ್ಲೂ ಆಕ್ರೋಶದಲ್ಲೂ ಆಕ್ರಂಧನದಲ್ಲೂ ದಲಿತ ಗದ್ಯವು ಮೇಲು ಸಮಾಜದ ಜೊತೆ ಮುಖಾಮುಖಿಗೆ ಇಳಿಯುತ್ತದೆ. ಕಾವ್ಯ ಮತ್ತು ಕಥೆಯಲ್ಲಿ ಹಿತವಾಗುವ ದಲಿತಾನುಭವವು ವೈಚಾರಿಕವಾಗಿ ವಿಮರ್ಶೆಯಿಂದ ಮಾತನಾಡಲು ತೊಡಗಿದ ಕೂಡಲೆ ಆ ಅರ್ಥ ಮತ್ತು ಪ್ರಶ್ನೆಗಳನ್ನು ಕೇಳಿಸಿಕೊಳ್ಳುವ ಓದುವ ಅನ್ಯ ಸಮಾಜವು ಅಸಂತೋಷಗೊಳ್ಳುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವಿಷ್ಟೆ.

ರಸಾನುಭವದ ನೆಲೆಯಲ್ಲಿ ದಲಿತಾನುಭವವನ್ನು ಮೇಲು ಜಾತಿಯ ಸಮಾಜವು ಕಲಾತ್ಮಕವಾಗಿ ಅಭಿವ್ಯಕ್ತಿಸಬೇಕು ಎಂಬುದನ್ನು ಬಯಸುತ್ತದೆ. ಹಾಗೆ ವ್ಯಕ್ತವಾದದ್ದನ್ನು ಒಪ್ಪಿ ಕೃತಿನಿಷ್ಠವಾಗಿ ಹಾಗು ಲೇಖಕ ನಿಷ್ಠವಾಗಿ ತನ್ನ ಪಾಪ ಪ್ರಜ್ಞೆಯನ್ನು ಕಳೆದುಕೊಳ್ಳುತ್ತದೆ. ಆದರೆ ಅಂತಹ ಅನುಭಾವದ ಕೇಂದ್ರವಾದ ಹಾಗು ಕಾರಣವಾದ ದಲಿತ ಸಮಾಜದ ವರ್ತಮಾನದ ಬಗ್ಗೆ ದೂರದ ಸಂಬಂಧವನ್ನು ಮಾತ್ರ ಉಳಿಸಿಕೊಳ್ಳುತ್ತದೆ. ಹೆಚ್ಚೆಂದರೆ ಒಂದಿಷ್ಟು ಅನುಕಂಪವನ್ನು ತೋರುತ್ತದೆ. ಇದು ಮೂಲತಃ ಮನುಷ್ಯ ಸಂಬಂಧಗಳ ಕೊರತೆಯಿಂದಾದ ನಡವಳಿಕೆ. ಹಕ್ಕೊತ್ತಾಯದ ದನಿಯು ದಲಿತರ ಭಾಷಿಕ ವಿನ್ಯಾಸಗಳನ್ನು ಜೀವಂತವಾಗಿರಿಸಿದೆ. ಸಂಘರ್ಷದ ಅಭಿವ್ಯಕ್ತಿಯಿಂದ ದಲಿತರ ಭಾಷೆಯು ಒರಟಾಗಿದ್ದರೂ ಅವರ ಸಂವೇದನೆಯು ಅಪ್ರಮಾಣಿಕವಾದುದಲ್ಲ. ಅಂತಃಕರಣವಿರುವ ಭಾಷೆಯೆ ಯಾವ ಕಾಲದಲ್ಲು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬಲ್ಲದು.

ದಲಿತ ಭಾಷೆಯ ಸಂಬಂಧ ಕೋಶ ಮತ್ತು ವರ್ತಮಾನ

ದಲಿತ ಭಾಷೆಯು ಸಂಬಂಧಗಳ ಭಾಷೆ. ಅರ್ಥಕ್ಕಿಂತಲೂ ಕ್ರಿಯೆಯು ಇಲ್ಲಿ ಮುಖ್ಯ. ಅರ್ಥಕೋಶಗಳು ಕೆಲವರ ಅರ್ಥಗಳನ್ನು ಮಾತ್ರ ಹೇಳುತ್ತವೆ. ದಲಿತರ ಬದುಕಿನ ರೀತಿನೀತಿಗಳಿಗು ಅರ್ಥಕೋಶಗಳ ಅರ್ಥಗಳಿಗು ಯಾವ ಸಂಬಂಧವೂ ಇಲ್ಲ. ಭಾಷೆಯ ಜೊತೆಗಿನ ಸಂಬಂಧವೇ ಎಲ್ಲ ಬಗೆಯ ಸಂವಹನಕ್ಕು ದಾರಿಯಾಗಿರುತ್ತದೆ. ಮೂಡ್ನಾಕೂಡು ಚಿನ್ನಸ್ವಾಮಿಯವರ ‘ಚಪ್ಪಲಿ ಮತ್ತು ನಾನು’ ಎಂಬ ಕವಿತೆಯನ್ನು ಇಲ್ಲಿ ಗಮನಿಸಬೇಕು. ಚಪ್ಪಲಿ ಎಂಬ ರೂಪಕವು ನಿಷೇಧಿತ ರೂಪಕವಾಗಿ ಅನೇಕರಿಗೆ ಅನಿಸಿದ್ದರೆ ಸ್ವತಃ ದಲಿತ ಸಮಾಜದ ಕವಿಗೆ ಚಪ್ಪಲಿಯು ಚಹರೆಯೂ ಆಗಬಲ್ಲದು. ಹಾಗೆಯೆ ತನ್ನ ಪ್ರತಿಭಟನೆಯ ಸಂಕೇತವೂ ಆಗಬಲ್ಲದು. ಬೇರೆಯವರಿಗೆ ಚಪ್ಪಲಿಯು ಚಹರೆಯೂ ಆಗಬಲ್ಲದು. ಹಾಗೆಯೆ ತನ್ನ ಪ್ರತಿಭಟನೆಯು ಸಂಕೇತವೂ ಆಗಬಲ್ಲದು. ಬೇರೆಯವರಿಗೆ ಚಪ್ಪಲಿಯು ಕೀಳು ರೂಪಕವಾದರೆ ದಲಿತರಿಗೆ ಅದು ಪವಿತ್ರ ರೂಪಕವೂ ಆಗಬಲ್ಲದು. ಮಚಗಾರನಿಗೆ ಚರ್ಮ ಹದ ಮಾಡುವ ಎಲ್ಲ ಪರಿಕರಗಳು ಹೇಗೆ ಪವಿತ್ರವೂ ಹಾಗೆಯೆ ಅವನ ಸಂಬಂಧಗಳೂ ಪವಿತ್ರವಾದ ಕಾಯದ ಆವರಣವನ್ನು ಸೃಷ್ಟಿಸಿಕೊಂಡಿರುತ್ತವೆ. ಹರಳಯ್ಯನ ಉರಿಚಮ್ಮಾಳಿಗೆಯು ದಲಿತ ಭಾಷೆಯ ರೂಪಕ. ಬಸವಣ್ಣನೇ ಸ್ವತಃ ಆ ಉರಿಚಮ್ಮಾಳಿಗೆಯನ್ನು ತೊಡಲಾರ. ಹರಳಯ್ಯನ ಉರಿಚಮ್ಮಾಳಿಗೆಯು ಬಸವಣ್ಣನ ಗದ್ದುಗೆಗಿಂತಲು ಹಿರಿದು. ಹೀಗೆ ದಲಿತ ಸಮಾಜದ ಒಳಗಿನ ಒಂದೊಂದು ನುಡಿಗಟ್ಟಿಗೂ ವಿಭಿನ್ನವಾದ ಸಾಂಸ್ಕೃತಿವಕಾದ ಸಂಬಂಧವಿರುತ್ತದೆ. ಈ ಬಗೆಯ ಸಂಬಂಧಗಳಿಂದ ದಲಿತ ಭಾಷೆಯ ಸಂಬಂಧಕೋಶವನ್ನು ರಚಿಸಬೇಕು. ಅರ್ಥವನ್ನು ತಳ ಸಮಾಜದಿಂದ ತಿಳಿಯುವ ಕ್ರಮವು ಆಗ ಸಾಧ್ಯವಾಗುತ್ತದೆ. ಇದರಿಂದ ಭಾಷೆಯ ಒಳಗಿನ ಪೂರ್ವಾಗ್ರಹವೂ ಕಳಚಿ ಬೀಳಬಹುದು. ಅರ್ಥ ಸೂತಕವಿಲ್ಲದೆ ಭಾಷೆಯು ಮಾನವ ಸಂಬಂಧಿಗಳನ್ನು ಬೆಳೆಸುತ್ತದೆ. ಆಗ ನಿಜವಾಗಿಯು ಅರ್ಥಗಳಿಗೆ ಸ್ವಾತಂತ್ಯ ಸಿಗುತ್ತದೆ. ಸ್ವಾತಂತ್ರ್ಯವನ್ನೆ ನೀಡದ ಸಮಾಜದ ಭಾಷೆಯನ್ನು ಕೂಡ ಖಾಸಗೀಕರಣಗೊಳಿಸಿರುತ್ತದೆ. ಇದರಿಂದಲೆ ಊಳಿಗಮಾನ್ಯ ಜಾತಿಗಳು ದಲಿತರನ್ನು ಕೀಳಾದ ಭಾವನೆಗಳಿಂದಲೇ ಮಾತನಾಡಿಸುವುದು.

ದಲಿತ ಸಮುದಾಯಗಳು ತಮ್ಮ ಚಳುವಳಿಗಳಲ್ಲಿ ಅಳವಡಿಸಿಕೊಳ್ಳುವ ನುಡಿಗಟ್ಟು ಗಳೆಲ್ಲವೂ ಘನವಾದ ಸಂದೇಶವನ್ನು ಕೂಡ ಸಾರುತ್ತಿರುತ್ತವೆ. ‘ಜಾತಿ ಬಿಡಿ, ಧರ್ಮ ಬಿಡಿ ಮಾನವತೆಗೆ ಜೀವ ಕೊಡಿ’, ‘ಬುದ್ಧ ಭಾರತ ನಮ್ಮ ಕನಸಾಗಲಿ’ ಎಂಬ ಆಶಯಗಳು ಸಮಾಜದ ಎಲ್ಲರನ್ನೂ ಸ್ಪರ್ಶಿಸುವಂತಿವೆ. ದಲಿತ ಚಳುವಳಿಯ ಘೋಷಣೆಗಳು ಕರಪತ್ರಗಳು ಅವರ ಗೋಡೆ ಬರಹಗಳು ಮತ್ತು ನಿರ್ಣಯಗಳು ಗಾಢವಾದ ಮಾನವೀಯತೆಯ ಒತ್ತಾಯವನ್ನು ಅಖಂಡವಾಗಿ ನಿವೇದಿಸುತ್ತವೆ. ದಲಿತ ಪ್ರಜ್ಞೆಯ ಕನ್ನಡವೆ ಬೇರೆಯಿದೆ. ಅದು ಭುವನೇಶ್ವರಿಯ ಮಾದರಿಯನ್ನು ಕಾಣುವುದಿಲ್ಲ. ಜಾತ್ಯತೀತವಾದ ಭಾವದಲ್ಲಿ ದಲಿತ ಭಾಷೆಯು ವ್ಯವಹರಿಸುತ್ತದೆ. ದಲಿತರಿಗೆ ಇರುವ ಭಾಷೆಯ ಸಾಧ್ಯತೆಯು ಉಳಿದವರಿಗೆ ಇಲ್ಲವೇನೊ ಎಂಬಷ್ಟು ಗಾಢವಾಗಿದೆ. ಹೊರಗಿನ ಬಹು ಸಮಾಜಗಳ ಎಲ್ಲ ಅರ್ಥ ಸಂಬಂಧವನ್ನು ಬಹಳ ಕಾಲದಿಂದ ಮೌನದಲ್ಲಿ ಆಲಿಸಿ ದಿವ್ಯ ರಮ್ಯತೆಯಲ್ಲಿ ಹಾಡಿ ಲೌಖಿಕದ ಭಾಷಿಕ ಗಡಿಗಳನ್ನು ಮೀರುವಲ್ಲಿ ದಲಿತ ಪರಂಪರೆಗಳು ವಿಶೇಷ ಅನುಭವಗಳನ್ನು ಪಡೆದಿದೆ. ಈ ಅನುಭವದಿಂದ ಮಾಗಿ ಈ ಹೊತ್ತಿನ ಆಧುನಿಕ ಜಗತ್ತಿನ ತಲ್ಲಣಗಳಲ್ಲಿ ನಿಂತು ದಲಿತ ಭಾಷೆಯು ವಿಶ್ವಾತ್ಮಕವಾದ ಅರ್ಥ ಸಂಬಂಧಗಳನ್ನು ಪಡೆಯಲು ಸಿದ್ಧವಾಗಬೇಕಿದೆ. ನನ್ನ ಕವಿ ಮಿತ್ರ ಸುಬ್ಬು ಹೊಲೆಯಾರ್ ಈ ಹಿಂದೆ ಹೇಳಿದಂತೆ ದಲಿತರ ಭಾಷೆಯು ಮಾರಮ್ಮನ ಮೂಲಕವೂ ತನ್ನ ಚಹರೆಯನ್ನು ರೂಪಿಸಿಕೊಳ್ಳಬಹುದು. ಮಾರಮ್ಮ ಒಂದು ರೀತಿಯಲ್ಲಿ ಅನಕ್ಷರಸ್ಥೆ. ಮೌಖಿಕ ಪರಂಪರೆಯಲ್ಲಿ ಮಾತ್ರ ಅವಳ ಅಸ್ಮಿತೆಯು ಗೋಚರವಾಗಬಲ್ಲದು. ಶಕ್ತಿಶಾರದೆಯೊ ಭುವನೇಶ್ವರಿಯೊ ಬ್ರಹ್ಮಲಿಪಿಯೊ ದೇವಭಾಷೆಯೊ ಮಾರಮ್ಮನ ಮಕ್ಕಳ ಆಯ್ಕೆಯಲ್ಲ. ಅರ್ಥದ ಅರ್ಥ, ಭಾಷೆಯ ಭಾಷೆ, ಅಭಿವ್ಯಕ್ತಿಯ ಅಭಿವ್ಯಕ್ತಿ ಎಂಬ ಇನ್ನೊಂದು ಅವ್ಯಕ್ತ ಲೋಕ ಇನ್ನೂ ಕತ್ತಲಲ್ಲೆ ಇದೆ. ಅದರ ಶೋಧದ ಕಡೆಗೆ ನಮ್ಮ ಪಂಚೇಂದ್ರಿಯಗಳು ಸ್ಪಂದಿಸಬೇಕಾಗಿದೆ. ಹಾಗೆ ಸ್ಪಂದಿಸದೇ ಹೋದರೆ ಸಾಮಾಜಿಕ ಸಂವಹನವು ಮತ್ತೆ ಮತ್ತೆ ತುಂಡಾಗಿ ಅಪವ್ಯಾಖ್ಯಾನಗಳ ನರಕದಲ್ಲಿ ಜಾರಿ ಹೋಗುತ್ತದೆ. ದಲಿತ ಭಾಷೆಯ ಮೌನವು ಅಸಾಧಾರಣವಾದುದು ಎಂದೊ ಮಾಡಬೇಕಿದ್ದ ಬಾಂಧವ್ಯದ ಸಂವಹನವು ಸಕಾಲದಲ್ಲಿ ಆಗದೇ ಹೋಗಿರುವುದರಿಂದ ಅನೇಕ ಬಗೆಯ ಕೊರತೆಗಳು ಅರ್ಥ ದೂರಗಳು ಬಲಗೊಂಡಿವೆ.

ಯಾವುದೆ ಸಮುದಾಯದ ಅಸ್ತಿತ್ವಕ್ಕೂ ಅದರ ಭಾಷೆಗೂ ನೇರ ಸಂಬಂಧವಿರುತ್ತದೆ. ಆ ಭಾಷೆಯು ಕಂಡುಕೊಳ್ಳುವ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾದ ಬೇರುಗಳೆ ಆ ಸಮಾಜದ ನಾಳೆಯನ್ನು ನಿರ್ಧರಿಸುತ್ತವೆ. ದಲಿತರ ಭಾಷೆಯು ಈ ಹಿನ್ನೆಲೆಯಿಂದಲೆ ಜಗತ್ತಿನ ಬೇರೆ ಬೇರೆ ಸಂವಹನದ ಕ್ರಮಗಳ ಜೊತೆಗೂ ಹದವಾಗಬೇಕಾದುದಿದೆ. ಬಹುಜನರ ಕನ್ನಡ ಭಾಷೆಯ ಅನರ್ಥಗಳನ್ನು ಶುದ್ಧೀಗೊಳಿಸುವಲ್ಲಿ ದಲಿತ ಭಾಷೆಯು ವಿಸ್ತರಿಸಿಕೊಳ್ಳಬೇಕಾದ್ದಿಲ್ಲ. ಮುಖ್ಯವಾಗಿ ಸಂಬಂಧಗಳ ಸಂಯೋಗಕ್ಕಾಗಿ ಭಾಷೆಯು ವಿಕಾಸವಾಗಬೇಕು. ಆ ದಾರಿಯಲ್ಲೆ ಭಾಷೆಯು ಗಾಂಧಿ ಮತ್ತು ಅಂಬೇಡ್ಕರ್ ಎರಡು ಭಾವಗಳನ್ನು ವಿಸ್ತರಿಸಿಕೊಂಡು ಆಧುನಿಕೋತ್ತರ ಜಗತ್ತಿನ ಸವಾಲುಗಳ ಜೊತೆ ಸಮಷ್ಠಿಯಾಗಿ ಪುನರ್‌ಸೃಷ್ಟಿಗೊಳ್ಳಬೇಕು. ಅಖಂಡವಾದ ಸಂವಹನವನ್ನು ಎಲ್ಲ ಸಮಾಜಗಳು ತಮ್ಮ ಅಸ್ತಿತ್ವಕ್ಕಾಗಿ ರೂಪಿಸಿಕೊಂಡಾಗಲೆ ಸುಂದರವಾದ ಭವಿಷ್ಯ ಸಾಧ್ಯ.

ಭಾಷೆಯಲ್ಲಿ ಭಾವನೆಗಳಿಗೆ ಹೆಚ್ಚು ಸ್ವಾತಂತ್ರ್ಯವಿರಬೇಕೆ ಹೊರತು, ಆ ಭಾಷೆಯ ತರ್ಕಗಳಿಗಲ್ಲ ಅಥವಾ ಆ ಭಾಷೆಯ ವ್ಯಾಕರಣಕ್ಕಲ್ಲ. ಭಾಷೆಯು ಧರ್ಮ ಮತ್ತು ಜಾತಿಗಳ ಅಳತೆಗನುಗುಣವಾಗಿ ಸಾಗಬೇಕಾದ್ದಿಲ್ಲ. ಹಾಗೆ ನಡೆದಿದ್ದರಿಂದಲೆ ಸಂಸ್ಕೃತ ಭಾಷೆಯು ಮೃತವಾದುದು. ಭಾಷೆಯ ಹೊರ ಮೈ ಮಾತ್ರ ನಾಗರೀಕವಾಗಿದ್ದರೆ ಸಾಲದು, ಅದರ ಅಂತರಂಗವು ಶುದ್ಧಿಯಿಂದಿರಬೇಕು. ಮಾಹಿತಿ ತಂತ್ರಜ್ಞಾನದ ಈ ಕಾಲದಲ್ಲಿ ಕನ್ನಡ ತಂತ್ರಾಂಶದ ಬಗ್ಗೆ ಸಂಶೋಧನೆಗಳು ಮಾರುಕಟ್ಟೆಯ ಸಂಹಿತೆಯಂತೆ ರೂಪುಗೊಳ್ಳುತ್ತಿರುವಲ್ಲಿ ನಾವು ಈಗ ತಾನೆ ದಲಿತ ಕನ್ನಡದ ಬಗ್ಗೆ ದಲಿತರ ಸಂವಹನದ ಸಾಧ್ಯತೆಯ ಬಗ್ಗೆ ಆಲೋಚಿಸುತ್ತಿದ್ದೇವೆ. ಹೀಗಿದ್ದರೂ ಕನ್ನಡವು ಉಳಿಯಬೇಕಿರುವುದು ಹಳ್ಳಿಗರಿಂದ ಮತ್ತು ದಲಿತರಿಂದ ಮಾತ್ರ ಸಾಧ್ಯ ಎಂದು ನಿತ್ಯವೂ ಹೇಳಲಾಗುತ್ತಿದ್ದು ಬಳಸಿ ಬಿಸಾಡಿದ ಮೇಲೆ ಎಲ್ಲವನ್ನೂ ದಲಿತರ ಕಡೆಗೆ ಎಸೆವಂತೆ ಕನ್ನಡವನ್ನೂ ದಲಿತರ ಮಡಿಲಿಗೆ ಹಾಕಲಾಗುತ್ತಿದೆ. ಇಂತಹ ಅನುಭವ ದಲಿತರಿಗೆ ಹೊರೆಯಲ್ಲ. ಅನುಭವದ ಪಾಠ ಯಾವತ್ತೂ ಮುಖ್ಯವೆ. ಈ ಬಗೆಯ ಸಂಬಂಧದಿಂದಲೇ ದಲಿತ ಭಾಷೆಯು ಉಳಿದಿರುವುದು ಕೂಡ. ಇಪ್ಪತ್ತೊಂದನೆ ಶತಮಾನವು ದಲಿತ ಕನ್ನಡದ ಕಾಲವಾಗುವುದಾದರೆ ಅದು ಕಂಪನಿಗೂ ಹೆಮ್ಮೆ. ಕವಿರಾಜ ಮಾರ್ಗಕಾರನಿಗೂ ಅಭಿಮಾನ. ಅಂತಹ ದಿಕ್ಕು ದಲಿತರಿಗೂ ಅವರು ಬದುಕಿರುವ ಒಟ್ಟು ಸಮುದಾಯಗಳ ಪರಿಸರಕ್ಕೂ ಸಾಧ್ಯವಾಗಲಿ ಎಂಬುದೇ ಈ ಹೊತ್ತಿನ ನಮ್ಮೆಲ್ಲರ ಕನಸಾಗಲಿ.