ದಲಿತ ಭಾಷೆ ಎಂಬುದನ್ನು ನಮ್ಮ ಭಾರತೀಯ ಸಂದರ್ಭದಲ್ಲಿ ಪ್ರತ್ಯೇಕ ಅಧ್ಯಯನದ ದೃಷ್ಟಿಯಿಂದಲಾಗಲಿ ಅಥವಾ ವಿಶಿಷ್ಠ ಕುತೂಹಲದಿಂದಾಗಲಿ ನೋಡುವುದು ಅಷ್ಟಾಗಿ ಸಾಧ್ಯವಾಗಿಲ್ಲ. ಕಾರಣ ಸ್ಪಷ್ಟ: ಈ ನೆಲದಲ್ಲಿ ಈ ಜನಸಮುದಾಯವನ್ನು ದೇಶದ ಉದ್ದಗಲಕ್ಕೂ ಆರೋಗ್ಯಕಾರಿಯಲ್ಲದ ಚಾತುರ್ವರ್ಣ ವ್ಯವಸ್ಥೆಯಿಂದಲೂ ಆಚೆಗೆ ಇಡುವ ಜೊತೆಗೆ, ಅಸ್ಪೃಶ್ಯತೆಯ ಕಳಂಕ ಹೊರಿಸಿ ನಿಕೃಷ್ಟವಾಗಿ ಊರಿನಾಚೆ ಇಟ್ಟದ್ದು. ಇಡೀ ದಲಿತ ಜನಸಮೂಹವನ್ನೆ ತಿರಸ್ಕರಿಸಿ, ಅಲಕ್ಷಿಸಿದ ಕಾರಣದಿಂದ ಸಹಜವಾಗಿ ದಲಿತರ ಬದುಕಿನ ಒಳವಿವರಗಳಾದ ಆಚಾರ, ವಿಚಾರ, ಆಹಾರ, ಸಂಪ್ರದಾಯ, ಆರಾಧಿಸುವ ದೈವಗಳು, ಭಾಷೆ… ಹೀಗೆ ಒಟ್ಟು ಸಂಸ್ಕೃತಿಯೇ ಮುಖ್ಯವಾಹಿನಿಯಿಂದ ದೂರವಿರಿಸಲ್ಪಟ್ಟಿತು. ಹೀಗಾಗಿ ಲಿಖಿತ ಇತಿಹಾಸದಲ್ಲಿ ದಲಿತ ಜಗತ್ತು ದಾಖಲೆಗೂ ಅಸ್ಪೃಶ್ಯವಾಗೇ ಉಳಿಯಿತು. ಆದರೆ ಶತಮಾನಗಳ ತಮ್ಮ ಭೀಕರ ಬದುಕಿನ ತಾಕಲಾಟದ ನಡುವೆ ಕಂಗೆಟ್ಟರೂ ಆತ್ಮಹತ್ಯೆ ಮಾಡಿಕೊಳ್ಳದೆ ದಲಿತರು ಇಲ್ಲಿ ಹೇಗೆ ಬದುಕಿದ್ದರು ಎಂಬುದು ಮೌಖಿಕ ಜನಪದ ಸಾಹಿತ್ಯದ ಅಲ್ಲಲ್ಲಿ ಹಾಸುಹೊಕ್ಕಾಗಿದೆ. ಆದರೂ ಕನ್ನಡದ ದಲಿತ ಭಾಷೆಯ ಖಚಿತತೆ ಗೊತ್ತಾಗುವುದು ೧೨ನೇ ಶತಮಾನದಲ್ಲಿ.

ದಲಿತರು ತಮ್ಮದೇ ಭಾಷೆಯ ಮೂಲಕ ಈ ಸಮಾಜದೊಟ್ಟಿಗೆ ಅಭಿವ್ಯಕ್ತಿಸಿದ್ದು ಹಾಗೂ ಮುಖಾಮುಖಿಯಾಗಿದ್ದು ವಚನ ಚಳವಳಿಯ ಸಂದರ್ಭದಲ್ಲಿ. ಬೇರೆ ಬೇರೆಯದೇ ಆದ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದರೂ ತಮ್ಮ ಅನನ್ಯತೆಯನ್ನು ಕಾಯ್ದುಕೊಂಡ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ದುಗ್ಗವ್ವೆ, ಕಾಳವ್ವೆ ಮುಂತಾದವರು ಕಿಂಚಿತ್ತೂ ಕೀಳರಿಮೆ ಇಲ್ಲದೆ ಅಧ್ಯಾತ್ಮ, ಧರ್ಮ ಹಾಗೂ ಈ ಸಮಾಜವನ್ನು ತಮ್ಮದೇಯಾದ ಭಾಷೆಯ ಚಿಂತನೆಯಲ್ಲಿ ವಿಮರ್ಶಿಸುವುದಲ್ಲದೆ ಒಟ್ಟು ಸಮೂಹವನ್ನು ಎಚ್ಚರಿಸ ತೊಡಗಿದರು. ದಲಿತರು ತಮ್ಮದೇ ಭಾಷೆಯ ಮೂಲಕ ಶತಶತಮಾನಗಳಿಂಲೂ ಸಾಧ್ಯವಾಗದ, ಇಂತಹ ಸಾಮಾಜಿಕ ಸಂವಹನ ನಡೆಸಲು ಸಾಧ್ಯವಾಗಿದ್ದು ‘ಅನುಭವ ಮಂಟಪ’ ದಂತಹ ಜಾತ್ಯತೀತ ಮತ್ತು ಲಿಂಗಾತೀತವಾದ ಪರಸ್ಪರ ಬೆರೆಯುವ – ಅರಿಯುವ ಭಾಷಿಕ ಸಂವಾದ ಕೇಂದ್ರದ ಮೂಲಕ.

ದಲಿತ ಪ್ರಜ್ಞೆಯ ಭಾಷೆ ಮತ್ತು ಸಾಮಾಜಿಕ ಸಂವಹನ

ದಲಿತರ ವಿಮೋಚನೆಯನ್ನೆ ಎಡೆಬಿಡದೆ ಧ್ಯಾನಿಸಿದ ಅಂಬೇಡ್ಕರ್ ಅವರು ಮಾನವೀಯ ಕಳಕಳಿಯ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ತಮ್ಮದೇ ಸ್ಫೋಟಕ ಸಂಘರ್ಷ ಭಾಷೆಯಲ್ಲಿ ತಮ್ಮ ಹೋರಾಟ, ಬರಹ, ಚಿಂತನೆಳನ್ನು ನಡೆಸಿದಂತೆಲ್ಲ ಅಸ್ಪೃಶ್ಯರಲ್ಲಿ ಹೊಸ ಬಗೆಯ ಬೆಳಕಿನ ಅರಿವು ಮಂದಗತಿಯಲ್ಲಿ ಕಾಣತೊಡಗಿತು. ಅಲ್ಲದೆ ಅಂಬೇಡ್ಕರ್ ಭಾಷೆಯ ಕಾರಣವಾಗಿ ಈ ಮೊದಲನಿಂದಲೂ ವಸಾಹತುಶಾಹಿಯಿಂದ ಭಾರತದ ವಿಮುಕ್ತಿಗೆ ಪ್ರಾಮಾಣಿಕವಾಗಿ ತವಕಿಸಿದ, ಸಾಮಾಜಿಕ ಕಳಕಳಿಯ ಗಾಂಧೀಜಿ ಅಂತಃಕರಣ ಪೂರಕವಾಗಿ ಇನ್ನಷ್ಟು ಬದಲಾಗಲೂ ಸಾಧ್ಯವಾಯಿತು. ‘ಯಂಗ್ ಇಂಡಿಯಾ’ ಪತ್ರಿಕೆಯ ಸಂಪಾದಕ ಗಾಂಧೀಜಿಗೂ ‘ಹರಿಜನ’ ಪತ್ರಿಕೆಯ ಸಂಪಾದಕ ಗಾಂಧೀಜಿಗೂ ಅತ್ಯಂತ ಮಹತ್ತ್ವದ ಮಾನಸಿಕ ಬದಲಾವಣೆ ಇದೆ. ಮೊದಲಿಗೆ ಅಸ್ಪೃಶ್ಯತೆ, ಚಾತುರ್ವರ್ಣ ಪದ್ಧತಿ, ಜಾತಿಪದ್ಧತಿ ಇಂತಹ ಸಾಂಪ್ರದಾಯಿಕ ಆಚರಣೆಗಳನ್ನು ಅಪಾರ ನಂಬಿಕೊಳ್ಳುವ ಗಾಂಧೀಜಿ, ಅಂಬೇಡ್ಕರ್ ಅವರ ನೇರ ಮುಖಾಮುಖಿ ನಂತರ – ಅದರಲ್ಲೂ ೧೯೩೨ರ ದುಂಡು ಮೇಜಿನ ಸಮ್ಮೇಳನದ ಸಂದರ್ಭದಲ್ಲಿ ಅಂಬೇಡ್ಕರರ ನೇರ ವಾಗ್ದಾಳಿಗೆ ಸಿಲುಕಿದ ಅನಂತರ – ಮಾನಸಿಕ ಬದಲಾವಣೆಗೆ ಒಳಗಾಗುವುದಲ್ಲದೆ ‘ಹರಿಜನ’ ಪತ್ರಿಕೆ, ‘ಹರಿಜನ ಸೇವಕಸಂಘ’, ‘ಅಸ್ಪೃಶ್ಯತಾ ವಿರೋಧಿ ಸಂಘ’ ಇವುಗಳನ್ನು ಹುಟ್ಟು ಹಾಕುತ್ತಾರೆ. ನೊಂದವರ ಅಂತರಂಗದ ತುಡಿತದ ಅಂಬೇಡ್ಕರ್ ಅವರ ದಲಿತ ಪ್ರಜ್ಞೆಯ ಭಾಷೆಯು, ಗಾಂಧೀಜಿ ಅವರಲ್ಲಿ ಪ್ರಮುಖ ಬದಲಾವಣೆಯನ್ನು ತರುವುದಲ್ಲದೆ ಇನ್ನಷ್ಟು ವಿಶಾಲಗೊಳ್ಳಲು ಕಾರಣವಾಯಿತು ಎಂಬುದಿಲ್ಲಿ ಮುಖ್ಯ ಅಂಶ.

ಇದೇ ಅಂಶವನ್ನು ನಾವು ನೇರವಾಗಿ ೧೨ನೇ ಶತಮಾನದ ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಹಾಗೂ ದಲಿತಪರ ಪ್ರಾಮಾಣಿಕ ಕಾಳಜಿಯನ್ನಿಟ್ಟುಕೊಂಡ ಆದರೆ ಸವರ್ಣೀಯ ಹಿನ್ನೆಲೆಯಿಂದ ಬಂದ ಸಂತ ಬಸವಣ್ಣನವರತ್ತ ಕೊಂಡೊಯ್ದರೆ: ‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ’ ಎಂದೂ ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನು’ ಎಂದು ಅನೇಕ ಬಾರಿ ತಾಯಿಮಮತೆಯಿಂದ ಸ್ಮರಿಸುವ ಬಸವಣ್ಣ ತನಗಿಂತ ಹಿರಿಯರೂ ಅಸ್ಪೃಶ್ಯರೂ ಆದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ ಅವರ ವ್ಯಕ್ತಿತ್ವ ಮತ್ತು ಭಾಷೆಗೆ ಶರಣಾದಂತೆ ಕಾಣುತ್ತದೆ. ಅಲ್ಲದೆ ಅತ್ಯಂತ ಕಳಕಳಿಯಿಂದ ಬಸವಣ್ಣ ದಲಿತರೊಟ್ಟಿಗೆ ತನ್ನನ್ನು ಗುರುತಿಸಿಕೊಳ್ಳಲು ಸಂಭ್ರಮಿಸುತ್ತಾನೆ. ಹಾಗೆಯೇ ಅಸ್ಪೃಶ್ಯರೊಟ್ಟಿಗಿನ ತನ್ನ ಸಂಪರ್ಕ ಯಾವ ಬಗೆಯ ಸಾಮಾಜಿಕ ತಲ್ಲಣ ಉಂಟುಮಾಡಬಹುದೆಂಬುದನ್ನೂ ತನ್ನ ಅನೇಕ ವಚನಗಳಲ್ಲಿ ತಿಳಿಸಿದ್ದಾನೆ. ತನ್ನ ಸೀಮಿತ ಪರಿಧಿಯನ್ನು ಮೀರಲು ಬಸವಣ್ಣನಿಗೆ ದಲಿತರ ಒಡನಾಟ ಕಾರಣವಾಗಿದೆ. ಬಸವಣ್ಣನಿಂದ ಅಪ್ಪನೆಂದು ಮತ್ತೆ ಮತ್ತೆ ಕರೆಸಿಕೊಳ್ಳುವ ಮಾದಾರ ಚೆನ್ನಯ್ಯ, ದಲಿತ ಪ್ರಜ್ಞೆಯ ಭಾಷೆಯ ಮೂಲಕ ಸಾಮಾಜಿಕ ಟೊಳ್ಳುಗಳನ್ನು ವಿಮರ್ಶಿಸುವ ಬಗೆ ವಿಭಿನ್ನವಾದುದು:

ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ
ನುಡಿಲೇಸು, ನಡೆಯಧಮವಾದಲ್ಲಿ
ಅದು ಬಿಡುಗಡೆಯಿಲ್ಲದ ಹೊಲೆ
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚರವೆ ಹೊಲೆ
ಇಂತೀ ಉಭಯವ ತಿಳಿದರಿಯಬೇಕು
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮ ರಾಮ ರಾಮನಾ !

ಈ ಇಡೀ ವಚನ ತನ್ನ ಭಾಷೆಯಲ್ಲಿ : ವ್ಯವಸ್ಥೆಯ ನಡೆನುಡಿಯ ಬಗೆಗಿನ ದ್ವಂದ್ವವನ್ನು ದಲಿತಪ್ರಜ್ಞೆಯಲ್ಲಿ ವಿಮರ್ಶಿಸುತ್ತದೆ. ಮಾದಾರ ಚೆನ್ನಯ್ಯನನ್ನು ಪ್ರೀತಿಯ ಭಾವುಕತೆಯಿಂದ ಸ್ಮರಿಸುವ ಬಸವಣ್ಣ ಸಹ ಇದೇ ಹಿನ್ನೆಲೆಯಲ್ಲಿ –

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದೊಡೆ
ಕೂಡಲಸಂಗಮದೇವನೆಂತೂಲಿವನಯ್ಯಾ?

ಎಂಬುದಾಗಿ ಹೇಳುತ್ತಾನೆ. ಬಸವಣ್ಣನಿಗಿಂತಲೂ ಹಿರಿಯನಾದ ಮಾದಾರ ಚೆನ್ನಯ್ಯ, ಬಸವಣ್ಣನ ವ್ಯಕ್ತಿತ್ವ ಮತ್ತು ಭಾಷಾ ಬದಲಾವಣೆಗೆ ಕಾರಣವೂ ಆಗಿರುವುದು ಇಲ್ಲಿ ಸ್ಪಷ್ಟ.

ಇನ್ನು ಆಧುನಿಕ ಸಾಹಿತ್ಯ ಸಂದರ್ಭದಲ್ಲಿ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಕಾದಂಬರಿಯು ತನ್ನ ದಲಿತಪ್ರಜ್ಞೆಯ ಭಾಷೆಯ ಮೂಲಕ ಈಗಲೂ ಸಹ ಹೊಸ ಹೊಸ ಅರ್ಥಶೋಧನೆಯನ್ನು ಬಿಟ್ಟು ಕೊಡುತ್ತಿರುವುದು ಗಮನಾರ್ಹ. ಈ ಕಾದಂಬರಿ ಹೊರಬಂದ ಆರಂಭಕ್ಕೆ ಈ ಕೃತಿಯನ್ನು ‘ಕನ್ನಡದಲ್ಲಿ ಬರೆಯಬೇಕು’ ಎಂದು ಕೆಲವು ವಿದ್ವಾಂಸರು ಹೇಳಿದ್ದಿದೆ. ಇದು ಪರಂಪರಾಗತವಾಗಿ ನಂಬಿದ, ಸಿದ್ಧಮಾದರಿಯ ಭಾಷೆಯನ್ನೇ ಇಷ್ಟಪಡುವ ಆಗ್ರಹಪೂರ್ವ ಮಾತೂ ಆಗಿದೆ. ಸಿದ್ಧಲಿಂಗಯ್ಯ ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಮೊದಲಿಗೆ ಬಂದಾಗ ಇದು ಸಾಹಿತ್ಯವೇ ಅಲ್ಲ ಎಂಬ ಮಾತುಗಳೂ ಸಹ ಬಂದಿರುವುದನ್ನು ಗಮನಿಸಬಹುದು – ಆದರೆ ದಲಿತಪ್ರಜ್ಞೆಯ ಭಾಷೆ ಸಾಹಿತ್ಯಿಕವಾಗಿ ಹೊಸ ತಲ್ಲಣವನ್ನು ಉಂಟು ಮಾಡಿತಲ್ಲದೆ. ವಿಮರ್ಶಕ ಜಿ.ಎಚ್.ನಾಯಕ ಅವರು ‘ಕುಸುಮಬಾಲೆ’ ಕಾದಂಬರಿ ಕುರಿತು: “ಕುಸುಮಬಾಲೆ ಓದುತ್ತಾ ಹೋದಂತೆ ಒಂದು ಕಡೆ ಕಾವ್ಯ ಓಡಿದಂತೆ, ಇನ್ನೊಂದು ಕಡೆ ಚಿತ್ರ ನೋಡಿದಂತೆ, ಮತ್ತೊಂದು ಕಡೆ ಸಂಗೀತ ಆಲಿಸಿದಂತೆ ಅನಿಸಿತು. ಆದರೆ ಕಾದಂಬರಿಯೊಳಗಿನ ವಿವರಗಳನ್ನು ಹಿಡಿದಿಡುವ ಕೇಂದ್ರ ಮೊದಲ ಓದಿಗೆ ಧಕ್ಕಲಿಲ್ಲ ಅಥವಾ ನಮ್ಮ ವಿಮರ್ಶೆಯ ಮಾನದಂಡಗಳನ್ನೇ ಮರು ಪರಿಶೀಲಿಸಬೇಕೋ ಏನೋ” ಎಂದು ಕಾದಂಬರಿಯ ಬೆನ್ನುಡಿಯಲ್ಲಿ ಬರೆದಿರುವುದನ್ನು ಕಾಣಬಹುದು. ಇಂದು ‘ಕುಸುಮಬಾಲೆ’ ಕಾದಂಬರಿಯನ್ನು ಕನ್ನಡ ಸಾಹಿತ್ಯ ಗಂಭೀರವಾಗಿ ಪರಿಗಣಿಸಿರುವುದು ಸತ್ಯ. ಅಲ್ಲದೆ ಡಿ.ಅರ್.ನಾಗರಾಜ್ ಅವರು “ಹೊಲೆಮಾದಿಗರ ಹಾಡು” ಕವನ ಸಂಕಲನದ ‘ಸುಂಟರಗಾಳಿ’ ಕುರಿತು – “ಮೂಳೆ ತುಂಬಿದ ಹಣೆಗೆ ಸೊಟ್ಟ ಸೊಟ್ಟಗೆ ಬಳಿದ ನಾಮ ವಿಭೂತಿಯಲ್ಲಿ ಧರ್ಮವಿಲ್ಲ” ಎಂಬ ಸಾಲುಗಳಲ್ಲಿನ ವ್ಯಂಗ್ಯ “ಕುವೆಂಪುವಿಗೆ ಅಷ್ಟು ಸುಲಭವಾಗಿ ಸಾಧ್ಯವಲ್ಲ” – ಎಂಬುದಾಗಿ ಕುವೆಂಪು ಅವರ ಬಗೆಗೆ ಅಪಾರ ಗೌರವವನ್ನು ಇಟ್ಟುಕೊಂಡೂ ಸಾಂಸ್ಕೃತಿಕ ಭಿನ್ನತೆಯ ಹಿನ್ನೆಲೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನ್ಯ ಸಾಂಸ್ಕೃತಿಕ ಹಿನ್ನೆಲೆಯ ವ್ಯಕ್ತಿಗೆ ದಲಿತ ಪ್ರಜ್ಞೆಯ ಭಾಷೆ ತೊಡಕಾಗಿ ಕಾಣಿಸಿದರೂ ಅದು ಆರಂಭಕ್ಕೇ ಸಾಮಾಜಿಕ ಸಂವಹನದಲ್ಲಿ ಸಂಘರ್ಷಮಯವಾಗಿ ಒಡ ಮೂಡುತ್ತದೆ. ದಲಿತ ಪ್ರಜ್ಞೆಯ ಭಾಷೆಯ ಅಂತರಾಳದಲ್ಲಿ ಮತ್ತೆ ಸಾಮಾಜಿಕ ನ್ಯಾಯದ ಭಾವನೆ ಹಾಗೂ ಮಾನವೀಯತೆ ಅಂತರ್ಗತವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಸಿದ್ಧಲಿಂಗಯ್ಯ ಅವರ – ‘ಒಂದು ಮೂಳೆಯ ಹಾಡು’ ಕವನದ :

“ಕ್ವರುಗ್ತೀನಿ ಕ್ವನೆಗೊಂದ್ಸಲ ಕೂಗ್ತಿನಿ
…………………………………….
…………………………………….
ನಾ ಮೂಳೆ, ನಾ ಇಂಗೇ ಇರಲ್ಲ
ಕೂಗ್ತೀನಿ, ಸಿಡಿತೀನಿ, ಮನುಷ ಆಯ್ತಿನಿ”

-ಎನ್ನುವ ಸಾಲುಗಳು ಇದನ್ನು ‌ಪ್ರತಿನಿಧಿಸುತ್ತವೆ.

ಸಮಾಜದ ಮುಖ್ಯವಾಹಿನಿಯೊಟ್ಟಿಗೆ ದಲಿತ ಭಾಷೆಯ ಮುಖಾಮುಖಿ

ದಲಿತರು ತಮ್ಮ ಪರಿಧಿಯನ್ನು ಮೀರಿ ಈ ಸಮಾಜದ ಮುಖ್ಯವಾಹಿನಿಯೊಟ್ಟಿಗೆ ಮುಖಾಮುಖಿಯಾದ ಕೂಡಲೆ; ಅಸ್ತವ್ಯಸ್ತವಾಗಿರುವ ತಮ್ಮ ಪರಿಸರ, ನಿರಂತರ ಶೋಷಣೆ, ವಿನಾಕಾರಣವಾದ ಹಿಂಸೆ ಇವೇ ಸಹಜವಾಗಿ ಕಾಡಿವೆ. ಹೀಗಾಗಿ ಸಾಮಾಜಿಕವಾಗಿ ಮತ್ತು ಸಾಹಿತ್ಯಿಕವಾಗಿ ಹಿನ್ನೆಡೆಗೆ ಸರಿದಿದ್ದ ದಲಿತ ಭಾಷೆ ಪ್ರತಿಭಟನೆಯಾಗಿಯೇ ಸಾಹಿತ್ಯದಲ್ಲಿ ಕಾಣಿಸಿಕೊಂಡಿತು.

ಅಂಬಿಗರ ಚೌಡಯ್ಯನ :

ಕುರಿಕೋಳಿ ಕಿರುಮೀನ ತಿಂಬವರ
ಊರೊಳಗೆ ಇರು ಎಂಬರು
ಅಮೃತಾನ್ನವ ಕರೆವ ಗೋವ ತಿಂಬವರ
ಊರಿಂದ ಹೊರಗಿರು ಎಂಬರು
ಆ ತನು ಹರಿಗೋಲಾಯಿತ್ತು
ಬೊಕ್ಕಣ, ಸಿದಿಕೆ, ಬಾರುಕೋಲು, ಪಾದರಕ್ಷೆ
ದೇವರ ಮುಂದೆ ಬಾರಿಸುವುದಕ್ಕೆ ಮದ್ದಳೆಯಾಗಿತ್ತು
ಈ ಬುದ್ಧಲಿಕೆಯೊಳಗಣ ತುಪ್ಪವ ಶುದ್ಧ ಮಾಡಿ
ತಿಂಬವರ ಕಂಡದೆ
ಉದ್ದನೆ ಚಮ್ಮಾಳಿಕೆಯ ತೆಕ್ಕೊಂಡು
ಬಾಯಿ ಕೊಯ್ಯುವೆನು ಎಂದಾತ ನಮ್ಮ ಅಂಬಿಗರ ಚೌಡಯ್ಯ

– ಎನ್ನುವ ವಚನ ; ತನ್ನ ಭಾಷೆಯಲ್ಲೆ ಸಮಾಜದಲ್ಲಿ ಮುಖ್ಯವಾಹಿನಿ ಎನಿಸಿಕೊಂಡವರ ಎಡಬಿಡಂಗಿತನವನ್ನು ಕಠೋರ ಭಾಷೆಯಲ್ಲಿ ಖಂಡಿಸುತ್ತದೆ. ವಚನ ಸಾಹಿತ್ಯ ಸಂದರ್ಭದಲ್ಲಿ ಈ ಚೌಡಯ್ಯ ಅತ್ಯುಗ್ರ ಬಂಡಾಯಗಾರನಾಗಿ ಕಾಣಿಸು‌ತ್ತಾನೆ. ಇದೇ ಕಠೋರ ಪರಿಭಾಷೆಯಲ್ಲಿ ಕವಿ ಸಿದ್ಧಲಿಂಗಯ್ಯನವರೂ ವ್ಯವಸ್ಥೆಯನ್ನು ಪ್ರತಿಭಟಿಸಿರುವ ಬಗೆಯನ್ನು ಅವರ ‘ಹೊಲೆ ಮಾದಿಗರ ಹಾಡು’ ಸಂಕಲನದ ‘ಒಂದು ಪದ’ ಕವನವನ್ನು ಕುತೂಹಲಕ್ಕಾಗಿ ಗಮನಿಸಬಹುದು. ಈ ಕವನ ಆರಂಭವಾಗುವುದೇ-

ಇಕ್ರಲಾ ವದೀರ್ಲಾ
ಈ ನನ್ ಮಕ್ಕಳ ಚರ್ಮ ಎಬ್ರಲಾ
…………………………………..

– ಎಂಬುದಾಗಿ. ವ್ಯವಸ್ಥೆ ತನ್ನ ಲಾಭಕ್ಕಾಗಿ ಬಳಸಿಕೊಂಡೂ ತನ್ನನ್ನು ನಿಕೃಷ್ಟತೆಯಿಂದ ಕಾಣುತ್ತಿರುವ ಬಗೆಗಿನ ಅಪರಿಮಿತ ನೈತಿಕ ಸಿಟ್ಟಿನ ಭಾಷೆ ಈ ಕವನದಲ್ಲಿದೆ. ಇಂತಹ ಅನೇಕ ತುಣುಕುಗಳನ್ನು ವಚನ ಚಳವಳಿ ಮತ್ತು ಆಧುನಿಕ ದಲಿತ ಚಳುವಳಿಯ ಸಂದರ್ಭದಲ್ಲಿ ಬಂದ ದಲಿತ ಹಿನ್ನೆಲೆಯ ಸಾಹಿತಿಗಳ ಕೃತಿಗಳಿಂದ ಹೆಕ್ಕಿ ಹೆಕ್ಕಿ ತೆಗೆಯಬಹುದು. ಇವು ಗಳೆಲ್ಲವೂ ತಮ್ಮ ಸಾಂಸ್ಕೃತಿಕ ಹಿನ್ನೆಲೆಯ ಪರಿಭಾಷೆಯಲ್ಲೆ ಹುಸಿಮೌಲ್ಯಗಳನ್ನು ವಿಮರ್ಶಿಸಿ ಮಾನವೀಯ ಕಳಕಳಿಯ ಅಗತ್ಯತೆಯನ್ನು ಎತ್ತಿ ಹಿಡಿಯುತ್ತವೆ. ಸಂತ ಬಸವಣ್ಣ ಸಹ ತನ್ನ ಮೇಲಿರಿಮೆಯನ್ನ ಕಳೆದುಕೊಂಡು ಸಾಂಪ್ರದಾಯಿಕ ಪರಂಪರೆಯನ್ನು ವಿರೋಧಿಸುತ್ತಾನೆ. ಆತನ :

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯ
ಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ

– ಎನ್ನುವ ವಚನ, ಇಡೀ ವೈದಿಕ ಸಾಹಿತ್ಯವನ್ನು ಚಮ್ಮಾರನ ಪರಿಭಾಷೆಯಲ್ಲಿ ತಿರಸ್ಕರಿಸುತ್ತದೆ. ಈ ವಚನ ಜಡ ವ್ಯವಸ್ಥೆಯನ್ನು ವಿರೋಧಿಸುತ್ತಿರುವ ಜೊತೆಗೇ ತಳಸಮುದಾಯದೊಟ್ಟಿಗೆ ಕಟ್ಟಕ್ಕರೆಯಿಂದ ಗುರುತಿಸಿಕೊಂಡು ಆನಂದಿಸುವ ಭಾಷೆಯೂ ಆಗಿದೆ ಎಂಬುದಿಲ್ಲಿ ಮುಖ್ಯ.

ಇಪ್ಪತ್ತನೇ ಶತಮಾನದ ಎಪ್ಪತ್ತರ ದಶಕದಿಂದ ದಲಿತ ಭಾಷೆ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಹೆಚ್ಚು ಬಳಕೆಯಾಗಿದೆ. ಅದರಲ್ಲೂ ಅಂಬೇಡ್ಕರ ಪ್ರಭಾವಿತ ಮನಸ್ಸುಗಳು ತಮ್ಮ ವ್ಯಕ್ತಿತ್ವ, ಬರಹ, ಭಾಷಣಗಳಲ್ಲಿ ಸಮೂಹ ಪ್ರಜ್ಞೆಯನ್ನು ಮೂಡಿಸತೊಡಗಿದ್ದು ಗಮನಾರ್ಹ. ದೇವನೂರ ಮಹಾದೇವ ಅವರು ತಮ್ಮ ದಲಿತ ಪ್ರಜ್ಞೆಯ ವೈಚಾರಿಕ ಲೇಖನಗಳು ಮತ್ತು ಕಥೆ. ಕಾದಂಬರಿಯ ಮೂಲಕ: ಸಿದ್ಧಲಿಂಗಯ್ಯ ಅವರು ತಮ್ಮ ಕವನಗಳು ಹಾಗೂ ಭಾಷಣಗಳ ಮೂಲಕ : ಪ್ರೊ.ಬಿ.ಕೃಷ್ಣಪ್ಪ ಅವರು ತಮ್ಮ ಹೋರಾಟ ಹಾಗೂ ಚಿಂತನೆಗಳ ಮೂಲಕ : ದೇವಯ್ಯ ಹರವೆ ಪುನರ್‌ಮೌಲ್ಯೀಕರಣದ ವಿಮರ್ಶೆಯ ಮೂಲಕ; ಎಚ್.ಗೋವಿಂದಯ್ಯ, ಕೆ.ಬಿ.ಸಿದ್ಧಯ್ಯ ಮೊದಲಾದವರು ತಮ್ಮ ಕವನಗಳ ಮೂಲಕ, ರಾಜಕಾರಣಿಯಾಗಿದ್ದ ಬಿ.ಬಸವಲಿಂಗಪ್ಪ, ದಲಿತ ಚಳವಳಿಯ ನೇತಾರರಲ್ಲಿ ಒಬ್ಬರಾದ ಬಿ.ವಿ. ಚಂದ್ರಪ್ರಸಾದ ತ್ಯಾಗಿ ಅವರು ತಮ್ಮ ವಿಚಾರ ಪ್ರಚೋದಕ ಭಾಷಣ ಹಾಗೂ ಕಾರ್ಯ ಚಟುವಟಿಕೆಗಳ ಮೂಲಕ ಜನತೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದನ್ನು ಗಮನಿಸಬಹುದು.

ಇವರಷ್ಟೇ ಅಲ್ಲದೆ ಮ.ನ.ಜವರಯ್ಯ, ಅರವಿಂದ ಮಾಲಗತ್ತಿ, ಮೊಗಳ್ಳಿ ಗಣೇಶ್, ಕೋಟಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ, ಮೂಡ್ನ ಕೂಡು ಚಿನ್ನಸ್ವಾಮಿ, ಜನ್ನಿ, ಪಿಚ್ಚಳ್ಳಿ ಶ್ರೀನಿವಾಸ. ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಶಂಕನಪುರ ಮಹಾದೇವ ಮುಂತಾದ ಬಗೆ ಬಗೆ ಅನೇಕರು ವಿವಿಧ ನೆಲೆಯಲ್ಲಿ ಕಾವ್ಯ ಕಥೆ, ಕಾದಂಬರಿ, ವಿಮರ್ಶೆ, ಬೀದಿ ನಾಟಕ, ಸಂಶೋಧನೆ, ಚಿಂತನೆ ಹೋರಾಟ, ಹೀಗೆ ತಮ್ಮದೇ ಪರಿಭಾಷೆಗಳಲ್ಲಿ ಸಾಮಾಜಿಕವಾಗಿ ತೊಡಗಿಸಿಕೊಂಡಿರುವುದನ್ನು ಕಾಣಬಹುದು.

ದಲಿತ ಸಂಘರ್ಷ ಸಮಿತಿಯು ತನ್ನ ಚಳವಳಿಗೆ ಪೂರಕವಾಗಿ ಹುಟ್ಟು ಹಾಕಿದ ‘ಪಂಚಮ’ ಪತ್ರಿಕೆಯ ಕೆಲವು ಬರಹಗಳು ದಲಿತ ಭಾಷೆಯ ಅನನ್ಯತೆಯನ್ನೂ ಒಳಗೊಂಡಿರುವುದಲ್ಲದೆ, ವಿಚಾರವನ್ನೂ ಗರ್ಭೀಕರಿಸಿಕೊಂಡಿವೆ. ದಲಿತ ಭಾಷೆಯನ್ನ, ಅದರ ಸಂವಹನವನ್ನು ಅಧ್ಯಯನ ಮಾಡಲು ಇಂತಹವೂ ಸಹ ಪೂರಕ ಸಾಮಗ್ರಿಗಳಾಗುವುದರಲ್ಲಿ ಸಂಶಯವಿಲ್ಲ. ಇದೇ ಪತ್ರಿಕೆಯಲ್ಲಿ ದೇವನೂರ ಮಹಾದೇವ ಅವರು ಬರೆಯುತ್ತಿದ್ದ ‘ಕಿಡಿಗೇಡಿ ಕಣ್ಣೋಟ’ ಮತ್ತು ‘ದೇಮ ಬರೆದ ಬರಹಾ’ ಎಂಬ ಅಂಕಣ ಬರಹಗಳೂ ಅಭಿವ್ಯಕ್ತಿಯಲ್ಲಿ ಕಥೆಯ ಸ್ವರೂಪವನ್ನೂ ಒಟ್ಟಿಗೇ ವಾಸ್ತವ ಸಾಮಾಜಿಕ ಸ್ಥಿತಿಯ ಭೀಕರತೆಯನ್ನು ಪ್ರತಿಮೆಯ ಮಾದರಿಯಲ್ಲಿ ಕಟ್ಟಿಕೊಡುತ್ತವೆ. ಕುತೂಹಲಕ್ಕೆ ‘ಹೆಣ್ಣು ಜಾತಿ ಮತ್ತು ದಲಿತಜಾತಿ’ (ಪಂಚಮ ೧೫.೦೫.೧೯೭೬) ‘ಒಂದು ಗಂಡಭೇರುಂಡ ಪಕ್ಷಿಯ ಕಥೆ’ (‘ಪಂಚಮ’, ಜುಲೈ ೧೯೮೧) ಹಾಗೂ ‘ಬ್ರಾಹ್ಮಣನ ಒಂದು ಹಲ್ಲಿಗೆ ಗೌಡನ ಎರಡು ಹಲ್ಲು’ (‘ಪಂಚಮ’, ಡಿಸೆಂಬರ್ ೧೯೮೧) ಇವುಗಳನ್ನು ಗಮನಿಸಬಹುದು. ಇವುಗಳನ್ನು ಈ ಸಂದರ್ಭದಲ್ಲಿ ಓದಿದರೂ ಪ್ರಸ್ತುತವೆನಿಸುತ್ತವೆ. ಭಾರತದ ಸಾಮಾಜಿಕ ಸಂದರ್ಭದಲ್ಲಿ ಇವು ಸರ್ವಕಾಲಿಕ ಸತ್ಯವನ್ನು ಸಾರುತ್ತಿರುವಂತೆ ಭಾಸವಾಗುತ್ತವೆ. ಈ ಬರಹಗಳು ದಲಿತ ಪ್ರಜ್ಞೆಯ ಭಾಷೆಯಲ್ಲಿ ಬರೆದಿರುವುದರಿಂದ ಈ ಸಮಾಜವನ್ನು ವಿಭಿನ್ನವಾಗಿ ಮುಖಾಮುಖಿಯಾಗುತ್ತವೆ.

ಇನ್ನು ಸಮಾಜದ ವಾಸ್ತವ ಸ್ಥಿತಿಗೆ ಮರಳಿದರೆ ‘ನಾಗರಿಕ’ ಎನಿಸಿಕೊಂಡ ಪರಿಸರದಲ್ಲಿ ಅನೇಕ ದಲಿತರು ತಾವು ಮಾತನಾಡುವ ಭಾಷೆಯ ಬಗೆಗೇ ಕೀಳರಿಮೆಯನ್ನು ಹೊಂದಿರುತ್ತಾರೆ. ಇದಕ್ಕೆ ‘ಸುಸಂಸ್ಕೃತ’ ಎಂದು ಕರೆಸಿಕೊಳ್ಳುವ ಪರಿಸರವು, ದಲಿತನ ಭಾಷೆಯ ಬಗೆಗೇ ಕೀಳರಿಮೆಯನ್ನು ಹೊಂದಿರುತ್ತಾರೆ. ಇದಕ್ಕೆ ‘ಸುಸಂಸ್ಕೃತ’ ಎಂದು ಕರೆಸಿಕೊಳ್ಳುವ ಪರಿಸರವು, ದಲಿತನ ಭಾಷೆಯ ಉಚ್ಛಾರಣೆಯನ್ನೇ ವಿಡಂಬಿಸುವುದು, ವ್ಯಂಗ್ಯಕ್ಕೆ ಗುರಿಪಡಿಸುವುದು ಪ್ರಮುಖ ಕಾರಣವಾಗಿದೆ. ಅದರಲ್ಲೂ ಷ, ಶ,ಸಗಳು ಹಾಗೂ ಅ, ಹ ಇಂತಹ ಅಕ್ಷರಗಳನ್ನು ಮಾತಿನಲ್ಲಿ ಬಳಸುವಾಗ ಪರಸ್ಪರ ವ್ಯತ್ಯಾಸವೇ ಇಲ್ಲದೆ ದಲಿತರು ಬಳಕೆ ಮಾಡುವುದನ್ನು ಗಮನಿಸಬಹುದು ಶೂದ್ರ ಜಾತಿಗಳಲ್ಲೂ ಇಂತಹ ಬಳಕೆ ಕಂಡುಬಂದರೂ ಅಲ್ಲಿ ಗೌಣ ಆಗುವುದೇ ಹೆಚ್ಚು (ದೇಶ-ದೇಸ, ಹಾರ-ಆರ ಮುಂತಾದುವು.). ‘ನಾಗರಿಕ ಸಮಾಜ’ ಗ್ರಾಮೀಣ ಪ್ರದೇಶದ ದಲಿತರು ಬಳಸುವ ಇಂತಹ ಭಾಷೆಯನ್ನೆ ತಿರಸ್ಕರಿಸುತ್ತದೆ. ನಮ್ಮ ಸಮಾಜದ ಸಾಂಪ್ರದಾಯಿಕ ಮನಸ್ಸುಗಳು, ವ್ಯಕ್ತಿ ಮಾತನಾಡುವ ಭಾಷೆಯ ಮೂಲಕವೇ ಜಾತಿಯನ್ನು ಗುರುತಿಸುವುದೂ ಇದೆ. ಮಾರಿಹಬ್ಬದ ಬಗೆಗೆ ಹುಟ್ಟಿಕೊಂಡಿರುವ ಮಿಥ್‌ನಲ್ಲೂ ಈ ಅಂಶ ಅಡಕವಾಗಿರುವುದನ್ನು ಕಾಣಬಹುದು. ಆದರೆ ದಲಿತ ತನ್ನದೇ ಪರಿಸರದಲ್ಲಿ ತನ್ನ ಭಾಷೆಯನ್ನ ಯಾವುದೇ ಹಿಂಜರಿಕೆಯಿಲ್ಲದೆ ಬಳಸುವುದನ್ನು ಕಾಣಲು ಸಾಧ್ಯ. ಅಲ್ಲದೆ ದಲಿತ ಪರಿಸರದಲ್ಲಿ ‘ನಾಗರಿಕ ಭಾಷೆ’ ಅತ್ಯಂತ ಗೇಲಿಗೆ ಒಳಗಾಗುತ್ತದೆ. ತಾನು ಹುಟ್ಟಿ ಬೆಳೆದ ಪರಿಸರದಲ್ಲಿ ‘ನಾಗರಿಕ ಭಾಷೆ’ ಮಾತನಾಡುವ ದಲಿತ ವ್ಯಂಗ್ಯಕ್ಕೆ ಗುರಿಯಾಗುತ್ತಾನೆ. ಪ್ರಜ್ಞಾವಂತ ವ್ಯಕ್ತಿ ತನ್ನ ಪರಿಸರದ ಭಾಷೆಯನ್ನು ಪ್ರತಿಭಟನೆಯಾಗಿ ಹಾಗೂ ತನ್ನ ಅನನ್ಯತೆಯನ್ನು ಕಾಯ್ದುಕೊಳ್ಳಲು ಬಳಸುವುದೂ ಇದೆ. ಆದರೆ ಇಂದಿಗೂ ಸಮೂಹ ಮಾಧ್ಯಮಗಳಲ್ಲಿ ಅದರಲ್ಲೂ ಆಕಾಶವಾಣಿ, ದೂರದರ್ಶನ ಮಾಧ್ಯಮಗಳಲ್ಲಿ ವಾರ್ತೆಗಳನ್ನು ಓದಲೋ, ನಿರೂಪಣೆ ಮಾಡಲೋ ಎಷ್ಟು ಮಂದಿ ದಲಿತರು ಇದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ. ಮುಖ್ಯ ವಾಹಿನಿಯ ಭಾಷಾ ರಾಜಕಾರಣದ ಹುನ್ನಾರ ಇದರಲ್ಲಿದೆ.

ಪಲ್ಲಟಗೊಳ್ಳುವ ವ್ಯಾಕರಣ

ದೊಡ್ಡವರನ್ನು ಬಹುವಚನದಿಂದಲೂ ಚಿಕ್ಕವರನ್ನು ಏಕವಚನದಿಂದಲೂ ಕರೆಯಬೇಕೆಂಬುದು ಭಾರತೀಯ ಸಮಾಜದ ಮೌಖಿಕ ವ್ಯಾಕರಣ. ಆದರೆ ಜಾತಿ ವ್ಯವಸ್ಥೆಯ ಈ ಸಮಾಜದಲ್ಲಿ ಇಂತಹ ವ್ಯಾಕರಣದ ನಿಯಮವು ಉಲ್ಲಂಘನೆಯಾಗುತ್ತದೆ. ಸವರ್ಣೀಯ ಜಾತಿಯ ಸಣ್ಣ ಹುಡುಗನು ಕೆಳಜಾತಿಯ ಅದರಲ್ಲೂ ತನಗಿಂತ ವಯಸ್ಸಾದ ದಲಿತನನ್ನೂ ಏಕವಚನದಲ್ಲಿ ಮಾತನಾಡಿಸುತ್ತಾನೆ. ಹಾಗೆಯೇ ವಯಸ್ಸಾದ ದಲಿತ ಅಜ್ಜನೂ ತನಗಿಂತ ತುಂಬಾ ಕಿರಿಯನಾದ ಮೇಲಿನ ಜಾತಿಯ ಹುಡುಗನನ್ನು ಬಹಳ ದೈನ್ಯತೆಯಿಂದ ಬಹುವಚನದಲ್ಲಿ ಮಾತನಾಡಿಸುತ್ತಾನೆ; ಹೀಗೆ ಮಾತನಾಡಿಸಲೇಬೇಕು. ಇದು ಒಪ್ಪಿತವಾಗಿದೆ. ಆದರೆ ಇದು ಸ್ವಲ್ಪ ಬದಲಾವಣೆಯಾದರೂ, ಅಂದರೆ ದಲಿತ ತನ್ನ ಭಾಷೆಯನ್ನು ಬದಲಾಯಿಸಿಕೊಂಡರೆ ಸಂಪ್ರದಾಯಬದ್ಧ ಸಾಮಾಜಿಕ ವ್ಯವಸ್ಥೆಯಲ್ಲಿ ಸಂಘರ್ಷ, ಘರ್ಷಣೆ ಸುರುವಾಗುತ್ತದೆ. ಕೊನೆಗೆ ಇದು ದಲಿತನಿಗೆ, ದಲಿತ ಕೇರಿಗೆ ಜೀವಕಂಟಕವಾಗಿಯೂ ಪರಿಣಮಿಸಬಹುದು. ಜಾತಿಬದ್ಧವಾದ ಇಂತಹ ಸ್ಥಿತಿ ಇಂದಿಗೂ ಜೀವಂತವಿದೆ. ೧೨ನೇ ಶತಮಾನದಲ್ಲಿ ಬಸವಣ್ಣ ‘ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎಂದು ಹೇಳುವ ಮೂಲಕ ಇಂತಹ ಜಾತಿಯಾಧಾರಿತ ಸಾಮಾಜಿಕ ವ್ಯಾಕರಣವನ್ನು ತಿದ್ದಲು ಯತ್ನಿಸುತ್ತಾನೆ. ಅಂಬೇಡ್ಕರ್ ಅವರಂತೂ ಇಂತಹ ಅನೇಕ ಆತ್ಮಗೌರವ ಕಳೆದುಕೊಳ್ಳುವ ಸ್ಥಿತಿಗಳಿಂದ ಬಿಡುಗಡೆ ಪಡೆಯಲು ಅಸ್ಪೃಶ್ಯರು ಹಳ್ಳಿಗಳನ್ನೆ ನಿರಾಕರಿಸುವಂತೆ ಸಾತ್ವಿಕ ಸಿಟ್ಟಿನಿಂದ ಒತ್ತಾಯಿಸುತ್ತಾರೆ. ಭಾಷೆಯ ಬದಲಾವಣೆಗೂ ಅವಕಾಶವಿಲ್ಲದ ಪ್ರಕ್ಷುಬ್ಧ ಸ್ಥಿತಿ ನಮ್ಮ ಹಳ್ಳಿಗಳದು.

ಆಧುನಿಕ ಶಿಕ್ಷಣ, ಅಂಬೇಡ್ಕರ್ ವಿಚಾರಗಳು ಹೊಸ ತಲೆಮಾರಿಗೆ ಬದಲಾವಣೆಯನ್ನು ತಂದಿವೆ ಎಂಬುದೂ ಸತ್ಯ. ಶಿಕ್ಷಣ ಪಡೆದಿರುವ, ಉದ್ಯೋಗದಲ್ಲಿರುವ ದಲಿತ ಈ ಕಾರಣದಿಂದಲೆ ತನ್ನ ಊರಿನ ಮೇಲಿನ ಜಾತಿಯವರಿಂದ ಹೇಗಾದರೂ ಸರಿ ಗೌರವಿಸಲ್ಪಡುತ್ತಾನೆ. ಅಲ್ಲದೆ ದಲಿತನ ಪರಿಸರ, ಸಂಪ್ರದಾಯ, ಆಚಾರ-ವಿಚಾರಗಳು ಬದಲಾವಣೆಯಾಗುತ್ತಿದ್ದಂತೆಯೇ ಭಾಷೆಯಲ್ಲೂ ಸಹಜವಾಗಿ ಬದಲಾವಣೆ ಕಂಡುಬರುತ್ತದೆ.

ಸಾಮಾಜಿಕ ಸಂವಹನದ ವಿಶಿಷ್ಠ ರೂಪಕ

ದಲಿತರ ಸಾಮಾಜಿಕ ಸಂವಹನದ ನಮ್ಮ ನಡುವಿನ ಅತ್ಯಂತ ವಿಶಿಷ್ಟ ರೂಪಕಗಳೆಂದರೆ ಮಂಟೇಸ್ವಾಮಿ ಹಾಗೂ ಮಾದೇಶ್ವರ. ಪರಿಶಿಷ್ಟ ಹಿನ್ನೆಲೆಯ ಈ ಇಬ್ಬರೂ ಸಂತರು ತಮ್ಮ ನಡೆ-ನುಡಿ ಹಾಗೂ ಅಪಾರ ಜೀವಪರ ಕಳಕಳಿಯ ಬುದ್ಧಪ್ರಜ್ಞೆಯ ಅಧ್ಯಾತ್ಮವನ್ನು ತಮ್ಮದೇ ಪರಿಭಾಷೆಯಲ್ಲಿ ತಿಳಿಹೇಳುವ ಮೂಲಕ, ದಲಿತರನ್ನೂ ಒಳಗೊಂಡ ಅಪಾರ ಸಂಖ್ಯೆಯ ಹಿಂದುಳಿದ ಜನಸಮುದಾಯಗಳು ತಮ್ಮ ಚಿಂತನೆಗಳನ್ನು ಮಮತೆಯಿಂದ ಅನುಸರಿಸಲೂ ಕಾರಣವಾಗಿದ್ದಾರೆ. ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳ ಅಸಂಖ್ಯಾತ ಜನತೆ ಮಂಟೇಸ್ವಾಮಿ ಹಾಗೂ ಮಾದೇಶ್ವರರಿಗೆ ಈ ಕ್ಷಣವೂ ನಡೆದುಕೊಳ್ಳುತ್ತಿದ್ದಾರೆ. ಜನಪದ ಮಹಾಕಾವ್ಯಗಳ ಮೂಲಕ ಇಂದಿಗೂ ಈ ಇಬ್ಬರೂ ಜೀವಂತವಾಗಿದ್ದಾರೆ. ಇದು ಮುಖ್ಯವಾಗಿ ಸಾಧ್ಯವಾಗಿರುವುದೇ ತಮ್ಮ ಪರಿಶಿಷ್ಟ ಭಾಷೆಯಲ್ಲೆ ಪವಿತ್ರ – ಅಪವಿತ್ರವೆಂಬ ಹುಸಿ ಮೌಲ್ಯಗಳನ್ನು ಭಗ್ನಗೊಳಿಸಿರುವ ಕಾರಣದಿಂದ.

ದಲಿತ ಪ್ರಜ್ಞೆಯ ಅನೇಕ ಜನಪದ ಹಾಡುಗಳು, ಕಥೆಗಳು ಪಾವಿತ್ರ್ಯವೆಂಬ ಹುಸಿಕಲ್ಪನೆಗಳನ್ನು ಧ್ವಂಸಗೊಳಿಸುತ್ತವೆ.

ಕ್ವಾಣನ ಕೊರಬಾಡು, ಎಮ್ಮೆಯ ಉರಿಬಾಡು
ಕೊತಕೊತನೆ ಕುದಿವ ಗಂಟ್ ಮೂಳೆ ಪಾಟಿ ಹೆಂಡ
ಬೆಳಗಾನ ನಿದ್ದೆ ಕೊಡದಲ್ಲೊ |

– ಈ ಪದ್ಯ ಶಿಷ್ಟ ಆಹಾರ ಸಂಸ್ಕೃತಿಯನ್ನೆ ಉಲ್ಲಂಘಿಸುತ್ತದೆ.

ದಲಿತಕೇರಿಯ ಚರ್ಮ ವಾದ್ಯಗಳಾದ ತಮಟೆ, ದುಡಿ ಮುಂತಾದವು ದಲಿತರಿಗೆ ಸಾಂಸ್ಕೃತಿಕ ಸಂಭ್ರಮದ, ಪ್ರತಿಭಟನೆಯ, ಬಿಡುಗಡೆಯ ಪರಿಕರಗಳಾಗಿಯೂ ಬಳಕೆಯಾಗುತ್ತವೆ. ಭಾಷೆಗೆ ದಕ್ಕದ ಭಾವಾಭಿವ್ಯಕ್ತಿ ತಮಟೆಯ ಶಬ್ದ ಧ್ವನಿಯಲ್ಲಿ ಇರುತ್ತದೆ.

ದಲಿತ ಪ್ರಜ್ಞಾವಂತ ಮನಸ್ಸು ತನ್ನದೇ ಪರಂಪರೆಯ ಪಳಯುಳಿಕೆಗಳನ್ನು ರೂಪಕಗಳಾಗಿ ಬಳಸಿಕೊಂಡಿರುವುದು ಗಮನಾರ್ಹ. ಅತ್ಯಂತ ಮಾನವಪರ ಕಾಳಜಿಯನ್ನು, ತಾಯಿ ಪ್ರೀತಿಯನ್ನು ಹೊಂದಿರುವ ತಮ್ಮ ಪರಂಪರೆಯೊಟ್ಟಿಗೆ, ವೈಚಾರಿಕ ಭಾಷೆಯಲ್ಲಿ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾದುದ್ನನು ಹೇಳುವ ಭಾಷೆ ವಿಭಿನ್ನವಾದುದೆ ಆಗಿದೆ. ಅಸ್ಪೃಶ್ಯರು ಹಿಂದೂಗಳಲ್ಲ ಎಂಬುದಾಗಿ ಹೇಳುವ ಅಂಬೇಡ್ಕರ್ ಅವರು ಅದಕ್ಕೆ ಪೂರಕವಾಗಿ ಈ ದಲಿತ ಪರಂಪರೆಯ ಸಾಂಸ್ಕೃತಿಕ ಅನನ್ಯತೆಗಳನ್ನು ಎತ್ತಿ ಹಿಡಿಯುತ್ತಾರೆ. ತಮ್ಮ ಸಂಸ್ಕೃತಿಯನ್ನು ವಸ್ತುನಿಷ್ಠವಾಗಿ ನೋಡುತ್ತಲೇ ಅದರ ಮೌಲ್ಯಗಳನ್ನು ಉಳಿಸಿದ ಸಂತರನ್ನೂ ಸ್ವತಃ ಅಂಬೇಡ್ಕರ್ ಅವರೇ ನೆನಪಿಸಿಕೊಳ್ಳುತ್ತಾರೆ. ಮನುಷ್ಯಪರ ಕಳಕಳಿಯ ವೈಚಾರಿಕತೆಯ ತಾರಕವಾಗಿರುವ ಅಂಬೇಡ್ಕರ್ ತಮ್ಮ “ಅಸ್ಪೃಶ್ಯರು ಯಾರು?” ಎನ್ನುವ ಸಂಶೋಧನ ಕೃತಿಯನ್ನು “ಅಸ್ಪೃಶ್ಯರಾಗಿ ಜನಿಸಿ ತಮ್ಮ ವೈಯಕ್ತಿಕ ಶ್ರದ್ಧಾ ಭಕ್ತಿ ಮತ್ತು ಸದ್ಗುಣಗಳಿಂದ ಸರ್ವರ ಗೌರವಕ್ಕೆ ಪಾತ್ರರಾದಂತಹ ಮೂವರು ಸುಪ್ರಸಿದ್ಧ ಸಂತರಾದ ನಂದವೀರ್, ರವಿದಾಸ್, ಜೋಖಾಮೇಳಾ ಇವರ ಪುಣ್ಯಸ್ಮೃತಿಗೆ ಸಮರ್ಪಣೆ” ಮಾಡಿದ್ದಾರೆ. ದೇವನೂರ ಮಹಾದೇವ ಅವರು ತಮ್ಮ ‘ಕುಸುಮಬಾಲೆ’ ಕಾದಂಬರಿಯನ್ನು ದಲಿತ ಸಂತನಾದ ಪೂರ್ವಿಕ ಮಲೆಮಾದೇಶ್ವರನಿಗೆ ಅರ್ಪಿಸಿದ್ದಾರೆ. ಈ ಪ್ರಜ್ಞಾಪೂರ್ವಕ ಅರ್ಪಣೆಗಳ ಹಿಂದೆ ಜನಮನದ ಸ್ಮೃತಿಯಲ್ಲಿ ಉಳಿದಿರುವ ದಲಿತ ಸಂಸ್ಕೃತಿಯನ್ನು ಹೊಸ ಪರಿಭಾಷೆಯಲ್ಲಿ ಪುನರುತ್ಥಾನ ಗೊಳಿಸುವುದಾಗಿದೆ.

ಅಧ್ಯಯನಕ್ಕೆ ಹೆಜ್ಜೆ

ಪ್ರಾದೇಶಿಕ ಹಿನ್ನೆಲೆಯಲ್ಲಿ ಭಾಷಾ ಬಳಕೆ ಭಿನ್ನ ಭಿನ್ನವಾಗಿರುವುದು ತಿಳಿದ ವಿಷಯವೆ. ಆದರೆ ಪ್ರಾದೇಶಿಕವಾಗಿಯೂ ದಲಿತ ಭಾಷೆ ಇನ್ನಿತರ ಸಮುದಾಯಗಳ ಭಾಷೆಗಿಂತ ವಿಭಿನ್ನವಾಗಿರುತ್ತದೆ. ವರ್ಣ, ಜಾತಿಗಳಿಂದ ಬಹಿಷ್ಕರಿಸಲ್ಪಟ್ಟ ಕಠಿಣ ಶ್ರಮಜೀವಿಗಳೂ ಹಾಗೂ ತಮ್ಮದೆಯಾದ ಮಾತೃಪ್ರಧಾನ ಸಂಸ್ಕೃತಿಯ ಹಿನ್ನೆಲೆಯಲ್ಲಿ ಹೊಂದಿರುವ ದಲಿತರು ಈ ಕಾರಣಗಳಿಂದಲೆ ತಮ್ಮ ಭಾಷೆಯಲ್ಲಿ ಸಹಜವಾಗಿ ವ್ಯತ್ಯಾಸ ಹೊಂದಿರುತ್ತಾರೆ. ಸಾಹಿತ್ಯಕವಾಗಿ ಶಿವರಾಮ ಕಾರಂತರ ‘ಚೋಮನ ದುಡಿ’ ಹಾಗೂ ಕುವೆಂಪು ಅವರ ಕಾದಂಬರಿಗಳನ್ನು ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಹಿನ್ನೆಲೆಯಲ್ಲಿ ಗಮನಿಸಬಹುದು. ಅಲ್ಲದೆ ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಪ್ರಸ್ತುತ ಹೊರಬರುತ್ತಿರುವ ಕಥೆ, ಕಾದಂಬರಿಗಳಲ್ಲಿ ಇಂತಹ ದಲಿತ ಭಾಷಾ ವೈಶಿಷ್ಟ್ಯತೆಯನ್ನು ಹಾಗೂ ಆಯಾಮಗಳನ್ನು ಸಂಶೋಧಿಸಬಹುದು. ತನ್ನ ಪರಿಸರದ್ದಲ್ಲದ ಸಮೂಹ ಮತ್ತು ವ್ಯಕ್ತಿಯೊಟ್ಟಿಗೆ ದಲಿತರು ಮುಖಾಮುಖಿಯಾಗುವ ಬಗೆ ಹಾಗೂ ಆ ಸಂದರ್ಭದ ಅವರ ಭಾಷಾ ಬಳಕೆಯ ಬಗೆಗಳನ್ನು ಅಧ್ಯಯನಕ್ಕೆ ಒಳಪಡಿಸಲು ಸಾಧ್ಯ.

ಪೂರಕ ಟಿಪ್ಪಣಿಗಳು

೧. ೧೯೨೧ರ ಸಂದರ್ಭದಲ್ಲಿ ಹಿಂದೂ ಧರ್ಮಶಾಸ್ತ್ರಗಳು ಅಸ್ಪೃಶ್ಯತೆ ಕುರಿತು ಏನನ್ನು ಹೇಳುತ್ತವೆಂಬ ವಿವಾದದಲ್ಲಿ ತಲೆಹಾಕಲು ನಿರಾಕರಿಸಿದ ಗಾಂಧಿ (‘

ಯಂಗ್ ಇಂಡಿಯಾ,’ ೧೯.೦೧.೧೯೨೧) ೧೯೩೩ರ ಸಮಯಕ್ಕೆ ಅಸ್ಪೃಶ್ಯತೆಯನ್ನು ಸಮರ್ಥಿಸುವ ಹಿಂದೂ ಶಾಸ್ತ್ರಗಳನ್ನು ಇಡಿಯಾಗಿ ತಿರಸ್ಕರಿಸಬೇಕುಉ ಎನ್ನುವ ಹಂತಕ್ಕೆ ಹೋಗುತ್ತಾರೆ. (‘ಹರಿಜನ’, ೧೧.೦೨.೧೯೩೩)ಅಲ್ಲದೆ ವರ್ಣಾಶ್ರಮ ಧರ್ಮ ಮತ್ತು ಜಾತಿಪದ್ಧತಿಯನ್ನು ಅದರ್ಶೀಕರಿಸಿ ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಗಾಂಧಿ (‘ಯಂಗ್ ಇಂಡಿಯಾ’, ೨೨.೦೨.೧೯೨೫) ೧೯೪೬ರ ವೇಳೆಗೆ ಅಂತರ್ಜಾತಿ ವಿವಾಹ, ಅಂತರ್‌ಭೋಜನ ಮುಖ್ಯವೆಂದು ಹೇಳುವುದಲ್ಲದೆ ‘ನಾವೆಲ್ಲ ಒಂದು ಎಂಬ ನಿಲುವಿಗೆ ತಲುಪುತ್ತಾರೆ (‘ಹರಿಜನ’, ೦೭.೦೭.೧೯೪೬). ಇದಕ್ಕೆ ಇನ್ನಷ್ಟು ಪೂರಕವಾಗಿ ಡಾ. ಎಸ್.ಚಂದ್ರಶೇಖರ್ ಅವರ ‘ಗಾಂಧಿ ಮತ್ತು ಅಂಬೇಡ್ಕರ್’ ಕೃತಿಯನ್ನು ಗಮನಿಸಬಹುದು.

೨.ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ !
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ವಿತಯ್ಯಾ !
ಅಗಮ ಹೆರತೊಲಗಿ ಅಗಲಿದ್ದಿತಯ್ಯಾ !
ನಮ್ಮ ಕೂಡಲಸಂಗಯ್ಯನು
ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.

. ಇಕ್ರಲಾ ವದೀರ್ಲಾ
ಈ ನನ್ ಮಕ್ಕಳ ಚರ್ಮ ಎಬ್ರಲಾ
ದೇವ್ರು ಒಬ್ನೆ ಅಂತಾರೆ
ಓಣಿಗೊಂದೊಂದ ತರಾ ಗುಡಿ ಕಟ್ಸವ್ರೆ
ಎಲ್ಲಾರು ದೇವ್ರ ಮಕ್ಳು ಅಂತಾರೆ
ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ
ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ್ಸಲ್ವಲ್ರೊ
ನಾವ್ ಬೆಳಿದತ್ ತಿಂತಾರೆ ನಾವ್ ದುಡಿದಿತ್ ತಗತ್ತಾರೆ
ನಾವ್ ಮಾತ್ರ ಬ್ಯಾಡಾ
ಹೊಲೇರು, ಮಾದಿಗ್ರು ಅನ್ನೋ ಬದ್ಲು, ಹರಿಜನಾ
ಅಂತ ಕರ್ದು ನಗ್ತಾರಲ್ಲಪ್ಪೋ
ನಮ್ಯಾಲ್ ಮೀಟಿಂಗ್ ಮಾಡ್ತಾರೆ, ಕಾನೂನ್ ಮಾಡ್ತಾರೆ
ನಮ್ಮ ಯಸ್ರೇಳಿ ಹಾರ ಹಾಕ್ತಾರೆ, ಹಾಕುಸ್ಕತ್ತಾರೆ
ನಮ್ಮುನ್ನ ಉದ್ಧಾರ ಮಾಡ್ತೀವಿ ಅಂತ ಪೇಪ್ರೇಲಿ
ಮೈಕೇಲಿ ಜೋರಾಗಿ ಕೂಗ್ತಾ ಅವ್ರಲ್ಲಪ್ಪೋ
ನಾವ್ ಮಾತ್ರ ಇಸ್ಕೋಲ್
ಗೋಗಾಂಗಿಲ್ಲ ಜೀತಕ್ಕೋಗ್ಬೇಕು
ತಲೆ ಎತ್ತಾಂಗಿಲ್ಲ – ಬಗ್ಗುಸ್ಬೇಕು
ಈ ನನ್
ಮಕ್ಳು ಕಳ್ಳಾಟ ಆಡ್ತಾ ಅವ್ರೆ ಅದಕ್ಕೇನೆ
ಇಕ್ರಲಾ ವದೀರ್ಲಾ ಈ ಸೂಳೇ ಮಕ್ಳ ಮೂಳೇ ಮುರೀರ್ಲಾ.

(‘ಒಂದು ಪದ’ – ಸಿದ್ಧಲಿಂಗಯ್ಯ)
೪. ೧. ಹೆಣ್ಣುಜಾತಿ ಮತ್ತು ದಲಿತಜಾತಿ

ಮುಂದೆ ಹೇಳುವಂಥವುಗಳು ದಿನಕ್ಕೆ ಎಷ್ಟಾಗುತ್ತವೊ ಏನೊ. ಈಗ ಒಂದು ನೆನಪಿಗೆ ಬರುತ್ತಿದೆ. ನಮಗೆ ಪರಿಚಿತ ಹುಡುಗಿಯೊಬ್ಬಳು ಒಂದು ದಿನ ಪ್ಯಾಂಟು ಹಾಕಿಕೊಂಡು ಬಂದಳು. ಇದನ್ನು ಕಂಡಾಗ ನನ್ನ ಗೆಳೆಯರನೇಕರಿಗೆ ಒಳಗೊಳಗೇ ಕಸಿವಿಸಿಯಾಯಿತು. ಒಬ್ಬ ಹೊಟ್ಟೆ ಒಳಗಿನದನ್ನು ಹೊರಕ್ಕೆ ಕಕ್ಕಿದ – “ಬಹಳ ಧಿಮಾಕಿನವಳು” ಅಂದ. ಅನೇಕರು ಆ ಹುಡುಗಿಯನ್ನು ವಕ್ರ ವಕ್ರವಾಗಿ ನೋಡಿದರು. ಆ ಹುಡುಗಿ ಪ್ಯಾಂಟು ಹಾಕಿಕೊಂಡು ಬಂದುದಕ್ಕೆ ಹುಡುಗರು ತಮ್ಮಿಂದ ಏನೊ ಕಳೆದು ಹೋದಂತೆ ವರ್ತಿಸಿದರು. ಏನಿಲ್ಲ ಎತ್ತಿಲ್ಲ ಆ ಹುಡುಗಿ ಪ್ಯಾಂಟು ಹಾಕಿದ್ದಕ್ಕೆ ಯಾಕೆ ಧಿಮಾಕಿನವಳು? ಹುಡುಗರಿಂದ ಏನು ಕಳೆದು ಹೋಯಿತು? ನನಗೆ ಎಷ್ಟು ಹುಡುಕಿದರೂ ಎನೂ ಕಾಣಲಿಲ್ಲ.

ಆ ಹುಡುಗಿ ಪ್ಯಾಂಟು ಹಾಕಿಕೊಂಡದ್ದಕ್ಕೆ ಸಿಕ್ಕಂಥ ಮೂಗೇಟೆ ಅಸ್ಪೃಶ್ಯ ಜಾತಿಯರಿಗೆ ಸ್ವಲ್ಪ ಟಿಪ್‌ಟಾಪ್ ಆಗಿದ್ದರೆ ಸಿಕ್ಕುತ್ತದೆ. ಒಬ್ಬ ಹರಿಜನರವ ಷೋಕಿಯಾಗಿದ್ದರೆ ಅವನಿಗೆ ನೂರೆಂಟು ಕಾಮೆಂಟು ಕಟ್ಟಿಟ್ಟದ್ದು. ಅವನು ಸವರ್ಣೀಯರ ಕಣ್ಣಲ್ಲಿ ಧಿಮಾಕಿನವ ನಾಗುತ್ತಾನೆ. ಅವನು ಒಳ್ಳೆಯ ಫ್ಯಾಷನ್ನು ಬಟ್ಟೆ ಹಾಕಿಕೊಂಡರೇ ಅವನ ಯೋಗ್ಯತೆ ಕೆಟ್ಟದಾಗಿ ಬಿಡುತ್ತದೆ. ಒಬ್ಬ ಹರಿಜನ ವಿದ್ಯಾರ್ಥಿಗೆ ಅವರ ಪ್ರಿನ್ಸಿಪಾಲರು – “ಏನ್ರಿ ಷೆಡ್ಯುಲ್ಡ್ ಕ್ಯಾಸ್ಟ್ ಅಂತೀರಿ! ಇಷ್ಟು ಮಾಡ್ರನ್ ಬಟ್ಟೆ ಹಾಕ್ತಿರಲ್ಲ !” ಎಂದರಂತೆ !! ಒಟ್ನಲ್ಲಿ ಹರಿಜನರು ಯೋಗ್ಯರಾಗಿರಬೇಕಾದರೆ ಅವರು ದೀನರಾಗಿರಬೇಕು. ಹೆಂಗಸೂ ಯೋಗ್ಯಳಾಗಿರಬೇಕಾದರೆ ಅವಳೂ ದೀನಳಾಗಿರಬೇಕು. ಹೆಂಗಸರೂ ದಲಿತರೂ ಸವರ್ಣೀಯರ ನೆರಳಿನ ಅಂಕದಲ್ಲಿ ಚಲಿಸಾಡಬೇಕು. ಕಿತ್ತುಕೊಂಡು ಹೆಂಗಸರೂ ದಲಿತರೂ ಸ್ವತಂತ್ರ ಹೆಜ್ಜೆ ಇಟ್ಟರೆ ಸವರ್ಣೀಯ ಮನಸ್ಸು ತನ್ನದೇನೊ ಕಳೆದು ಹೋದಂತೆ ಪರಿತಪಿಸುತ್ತದೆ. ಪರಿಸ್ಥಿತಿಯಿಂದಾಗಿ, ಬದಲಾವಣೆಯಿಂದಾಗಿ ದಲಿತರು ಹೆಂಗಸರು ಸವರ್ಣೀಯರ ಹಿಡಿತದಿಂದ ತಪ್ಪಿದರೆ ಅದಕ್ಕಾಗಿ ಅವರು ಮುಪ್ಪಾಗಿ ಗೊಣಗುವರು, ಅಸಹಾಯಕರಾಗಿ.

ಈ ಒಂದು ಅನ್ನದ ಅಗುಳನ್ನು ಚಿವುಕಿ ಏನೆಂದು ನೋಡುತ್ತಿರುವೆ. ಹೆಂಗಸರ, ದಲಿತರ ಪ್ರಗತಿಯನ್ನು ಯಾಕೆ ಸವರ್ಣೀಯ ಮನಸ್ಸು ಸಹಿಸುವುದಿಲ್ಲ ಎಂಬುದಕ್ಕೆ ಇತಿಹಾಸವೇ ಇದೆ. ಇರಲಿ, ಆದರೆ ಮೇಲಿನಂಥ ಅಸಹನೆಯ ಭಾವನೆಗಳೂ ಆಂತರಂಗಿಕವಾಗಿ ಪ್ರಗತಿಪರ ವ್ಯಕ್ತಿ, ಪಕ್ಷಗಳಲ್ಲೂ ಇವೆ ಎಂಬ ವಿಷಾದಕ್ಕೆ ಈಗ ಬರೋಣ. ಕೆಲವು ಪ್ರಗತಿಪರ ವ್ಯಕ್ತಿಗಳು, ಪಕ್ಷಗಳು, ಹೆಚ್ಚಾಗಿ ವರ್ಗ ಹೋರಾಟ ಪ್ರತಿಪಾದಿಸುವ ಕಮುನಿಷ್ಟರು ‘ದಲಿತರ ಬಿಡುಗಡೆ ವರ್ಗ ಹೋರಾಟದಲ್ಲೆ’ ಎಂದು ಮಾತಾಡುವರು. ವರ್ಗ ಹೋರಾಟದಲ್ಲಿ ದಲಿತ ಭಾಗವಹಿಸುವಿಕೆ ಇಲ್ಲದಿದ್ದರೆ, ದಲಿತರ ನಾಯಕತ್ವ ಇಲ್ಲದಿದ್ದರೆ ಆ ವರ್ಗ ಹೋರಾಟವೇ ಮುಂದಕ್ಕೆ ನೂಕಲ್ಪಡುತ್ತಾನೆ ಎಂಬ ನಿಜದ ಅರಿವಿಲ್ಲದವರು ಇಂಥ ಮಾತಾಡುವರು. ಇಂಥ ಮಾತನ್ನೇ ಹಿಂದೆ ಚೈನಾದಲ್ಲೂ ಮಾತಾಡಿದ್ದರು. ಮಹಿಳೆಯರ ಬಿಡುಗಡೆಯ ಪ್ರಶ್ನೆ ಬಂದಾಗ ಅಲ್ಲಿನ ಕೆಲವು ಸಂಪ್ರದಾಯವಾದಿ ಕಮುನಿಷ್ಟರು ‘ವರ್ಗ ಹೋರಾಟದೊಡನೆ ಮಹಿಳೆಯರ ಬಿಡುಗಡೆಯೂ ತಂತಾನೆ ಆಗುತ್ತದೆ’ ಎಂದು ವಾದಿಸಿ ಪ್ರತ್ಯೇಕ ಮಹಿಳಾ ಹೋರಾಟದ ಅಗತ್ಯವನ್ನು ನಿರಾಕರಿಸಿದ್ದರು. ಈ ವಾದವನ್ನು ನಿಜವಾದ ಕಮುನಿಷ್ಟರು ಅಲ್ಲೆ ಅಲ್ಲಗಳೆದು ಇಂಥ ದೃಷ್ಟಿಕೋನಕ್ಕೆ ‘ಬಹಿರಂಗವಾಗಿ ಪ್ರಗತಿಪರ ಆಂತರಂಗಿಕವಾಗಿ ಪ್ರಗತಿ ವಿರೋಧಿ’ ಎಂದು ವಿವರಿಸಿ ನಿಜ ಕಾಣಿಸಿದರು. ಚೈನಾದಲ್ಲಿ ಹೆಂಗಸರ ಬಿಡುಗಡೆ ಬಗ್ಗೆ ಸಂಪ್ರದಾಯವಾದಿ ಕಮುನಿಷ್ಟರು ತಳೆದಿದ್ದ ಭಾವನೆಗೂ ಇಲ್ಲಿ ಅಂದರೆ ಇಂಡಿಯಾದಲ್ಲಿ ಕಮುನಿಷ್ಟರು ತಳೆದಿರುವ ‘ದಲಿತರ ಬಿಡುಗಡೆ ವರ್ಗ ಹೋರಾಟದಲ್ಲೆ’ ಎಂಬ ನಿಲುವು ‘ಬಹಿರಂಗವಾಗಿ ಪ್ರಗತಿಪರವಾಗಿದ್ದು ಆಂತರಿಕವಾಗಿ ಪ್ರಗತಿವಿರೋಧಿ’ಯಾಗಿ ಸ್ಪಂದನವಿಲ್ಲದ ‘ಸಾಂಪ್ರದಾಯಕ ಕಮ್ಯುನಿಷ್ಟರ’ ನಿಲುವು ಆಗುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆಯಾಗುತ್ತದೆ. ಚೈನಾದಲ್ಲಿ ಮಹಿಳಾ ಬಿಡುಗಡೆ ಬಗ್ಗೆ ಕಮ್ಯುನಿಸ್ಟರು ಪ್ರಗತಿಪರರಾದರೂ ಗಂಡಸಾದ್ದರಿಂದ ಒಳಗೊಳಗೇ ಸಂಪ್ರದಾಯವಾದಿಗಳಾಗಿ ‘ಆಂತರಿಕವಾಗಿ ಪ್ರಗತಿ ವಿರೋಧಿ’ಗಳಾದಂತ ಇಲ್ಲಿ ದಲಿತರ ಬಗ್ಗೆ ಕಮ್ಯುನಿಸ್ಟ್ ನಾಯಕರು ಪ್ರಗತಿಪರರಾದರೂ ಮೇಲ್ಜಾತಿ ಮೇಲ್ವರ್ಗಕ್ಕೆ ಸೇರಿದವರಾದ್ದರಿಂದ ಸಂಪ್ರದಾಯವಾದಿಗಳಾಗಿ ‘ಆಂತರಿಕವಾಗಿ ಪ್ರಗತಿ ವಿರೋಧಿ’ಗಳಾಗುವುದನ್ನೂ ಅರ್ಥ ಮಾಡಿಕೊಳ್ಳಬಹುದು. ಇದನ್ನು ಈ ಪ್ರಗತಿಪರರ ಒಳಗೊಳಗೇ ಇರುವ ವರ್ಗಾಶಕ್ತಿ ಎನ್ನಬಹುದು. ಆ ಪ್ರಗತಿಪರರು ತಮ್ಮ ಪೊರೆ ಕಳಚಿ ಹೊಸ ಹುಟ್ಟು ಪಡೆಯಬೇಕಾಗಿದೆ. ಯಾರ ಪೊರೆ ಕಳಚಲಿ ಬಿಡಲಿ, ಹೆಣ್ಣು ಜಾತಿಯೂ ದಲಿತ ಜಾತಿಯೂ ಕೈಕೈ ಹಿಡಿದು ತಮ್ಮ ಬಿಡುಗಡೆಗೆ ಮುನ್ನಡೆಯಬೇಕಾಗಿದೆ.

(ಪಂಚಮ ೧೫.೦೫.೧೯೭೬)

. ಒಂದು ಗಂಡಭೇರುಂಡ ಪಕ್ಷಿ ಕಥೆ

ಎಲ್ಲೋ ಎಂದೊ ಓದಿದ ಕತೆಯ ಗಂಡಭೇರುಂಡ ಪಕ್ಷಿಯು ನನ್ನ ತಲೆಯಲ್ಲಿ ಆಗಾಗ ಹಾರಾಡುತ್ತಿರುತ್ತದೆ. ಆ ಗಂಡಭೇರುಂಡ ಪಕ್ಷಿ ಹಾರುತ್ತ ವಿಹರಿಸಿಕೊಂಡು ಬಂದು ಒಂದು ನದೀ ದಡದಲ್ಲಿ ಕೂತು, ಅದರ ಒಂದು ತಲೆ ಒಂದು ಕಡೆ, ಇನ್ನೊಂದು ತಲೆ ಇನ್ನೊಂದು ಕಡೆ ನೋಡುತ್ತ ಆನಂದಿಸುತಿಹದು. ಅಷ್ಟರಲ್ಲಿ ಆ ಹರಿಯೋ ನದೀಲಿ ತೇಲುತ್ತ ಒಂದು ಫಲವು ಆ ಪಕ್ಷಿ ನೋಡಿಯೋ ಎಂಬಂತೆ ದಡದಲ್ಲಿ ಬಂದು ನಿಂತಿತು. ಇದ ಕಂಡ ಆ ಪಕ್ಷಿಯ ಒಂದು ತಲೆಯು ಇನ್ನೇನು ಆ ಫಲವನ್ನು ಕುಕ್ಕಿ ತಿನ್ನಬೇಕು ಆನ್ನುವಷ್ಟರಲ್ಲಿ, ಆ ಪಕ್ಷಿಯ ಇನ್ನೊಂದು ತಲೆ ‘ನಿಲ್ಲಿಸು ತಿನ್ನಬೇಡ’ ಎಂದಿತು. ತೊಗಟೆಗೆ ಕೊಕ್ಕು ಸಿಕ್ಕಿಸಿದ್ದ ತಲೆಯು ಸುರಿಯುವ ಜೊಲ್ಲು ಉಗತು ‘ಯಾಕೆ ತಿನ್ನಬಾರದು?’ ಎಂದು ಕಿಡಿ ಕಿಡಿಯಾಗಿ ಕೇಳಿತು. ಇನ್ನೊಂದು ತಲೆಯು ಇನ್ನಷ್ಟು ಕಿಡಿಯಾಗಿ

‘ಯಾಕೆ ಅಂದರೆ ? ನಾನೂ ತಿನ್ನಬಾರದೆ?’

‘ಮೊದಲು ನೋಡಿದ್ದು ನಾನಲ್ಲವೆ?’

‘ನಮ್ಮ ದೇಹ ಒಂದೇ ಅಲ್ಲವೇ?’

‘ದೇಹ ಒಂದೇ ಆದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೆ?’ – ಹೀಗೆ ವಾಗ್ವಾದವೆ ನಡೆದು ಮೊದಲು ಹಣ್ಣು ಕಂಡ ತಲೆಯೇ ಪೂರ್ತಿ ಹಣ್ಣು ತಿಂದಿತು. ತಿನ್ನದ ತಲೆ ಕಣ್ಣು ಮುಚ್ಚಿಕೊಂಡು ಕಣ್ಣು ತೆರೆದರೆ ಕಂಡದ್ದೇನು? ಇನ್ನೊಂದು ಫಲವು ನದೀಲಿ ತೇಲಿಕೊಂಡು ಬರುತಲಿದೆ. ಮೊದಲ ಹಣ್ಣು ತಿನ್ನದಿದ್ದ ತಲೆಯು ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಇನ್ನೊಂದು ತಲೆಯು ಗಾಬರಿಯಿಂದ ‘ಆಯ್ಯೊಯ್ಯೊ ವಿಷದ ಫಲ ತಿನ್ನಬೇಡ’ ಎಂದಿತು. ಇದರಿಂದ ಮೊದಲ ತಲೆಗೆ ಸಂತೋಷವೇ ಆಗಿ ‘ನನ್ನ ತಲೆ, ನಾನು ತಿಂತೇನೆ ನಿಂಗೇನು?’ ಎಂದಾಗ, ಇನ್ನೊಂದು ತಲೆಯು ‘ನೀನೇ ತಿಂದರೂ ನಮ್ಮ ದೇಹ ಒಂದೇ ಅಲ್ಲವೇ?’ ಆಂದುದಕ್ಕೆ ಈ ತಲೆಯು ದೇಹ ಒಂದಾದರೂ ತಿನ್ನುವ ಬಾಯಿ ಬೇರೆ ಬೇರೆ ಅಲ್ಲವೆ? ಎಂದು ಆ ಹಣ್ಣನ್ನು ತಿಂದೇ ತಿಂದಿತು.

– ಹೀಗೆ ತಿಂದಾದ ಮೇಲೆ ಇಡೀ ದೇಹಕ್ಕೆ ಬೆಂಕಿ ಕೆಂಡವ ಸುರಿದಂತಾಗಿ ಆ ಉರಿಗೆ ದೇಹವಿಡೀ ವಿಲಿವಿಲಿ ಒದ್ದಾಡಿ ಮತ್ತು ಕೊನೆಯದಾಗಿ ಆ ಪಕ್ಷಿಯು ಸತ್ತಿತು.

ಪ್ರೀತಿಯ ಸ್ನೇಹಿತರೇ ಕೇಳಿ, ಅಸ್ಪೃಶ್ಯರಿಗೆ ದೇಹ ಒಂದೇ ಆದರೂ ತಲೆ ನೂರೆಂಟು -ಎಡಗೈ, ಬಲಗೈ, ಎಡಗೈ ಹೆಬ್ಬೆರಳು ಕಿರುಬೆರಳು, ಬಲಗೈ ಹೆಬ್ಬೆರಳು ಕಿರುಬೆರಳು – ಹೀಗೆ ನೂರೆಂಟು, ನರಿ ನಾಯಿಗಳಂತಿರುವ ದಲಿತ ರಾಜಕಾರಣಿಗಳೂ ತಮ್ಮ ಉಳಿವಿಗಾಗಿ ಅಸ್ಪೃಶ್ಯರೊಳಗಿನ ಭಿನ್ನತೆಯನ್ನು ಹೆಚ್ಚಿಸುತ್ತಿರುವರು. ಆದರೆ ನೆನಪಿರಲಿ ಗಂಡ-ಭೇರುಂಡ ಪಕ್ಷಿಯಂತೆ ಸಾಯುವವರು ಒಟ್ಟಿಗೆ ದೇಹವಾದ ನಾವೂ. ನಮ್ಮ ಸಾವಿಗೆ ಸ್ವಲ್ಪ ಕಾಲಾವಕಾಶವಿರುವಾಗಲೇ ಅಸ್ಪೃಶ್ಯ ಮತ್ತಿತರ ಸಣ್ಣ ಪುಟ್ಟ ಜಾತಿಗಳೊಳಗಿನ ಭಿನ್ನತೆಯನ್ನು ಮೊದಲು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು. ಈಗ ಗಂಡಭೇರುಂಡ ಕತೆಯು ನಿಮ್ಮ ತಲೆಯೊಳಗೆ ಹಾರಾಡಲಿ.

(ಪಂಚಮ ಜುಲೈ ೧೯೮೧)

. ಬ್ರಾಹ್ಮಣನ ಒಂದು ಹಲ್ಲಿಗೆ ಗೌಡನ ಎರಡು ಹಲ್ಲು

ಹೀಗೆ ಒಂದೂರಿನ ಒಂದು ಆಫೀಸಿನಲ್ಲಿ ಗೌಡ ಅಧಿಕಾರಿಯೂ ಬ್ರಾಹ್ಮಣ ಗುಮಾಸ್ತನೂ ಇದ್ದರು. ಗೌಡ ಅಧಿಕಾರಿಯು ಆಗತಾನೆ ಕೆಲಸಕ್ಕೆ ಬಂದಂಥವನಾದರೆ ಬ್ರಾಹ್ಮಣ. ಗುಮಾಸ್ತೆಯು ಆ ಆಫೀಸು ಹುಟ್ಟಿದ ಪುರಾತನದಿಂದಲೂ ಅಲ್ಲೆ ಇದ್ದಂತವನು. ಹಾಗಾಗಿ ಬಂದು ಹೋದ ಅಧಿಕಾರಿಗಳೆಲ್ಲರೂ ಗುಮಾಸ್ತಗೆ ಅನುಸರಿಸಿಕೊಂಡು ಹೋಗುವುದಾಗುತ್ತಿತ್ತು. ಆದರೆ ಹೊಸತಾಗಿ ಬಂದ ಗೌಡ ಅಧಿಕಾರಿಯು ಹಳಬ ಬ್ರಾಹ್ಮಣ ಗುಮಾಸ್ತೆಗೆ ಕೇರುಮಾಡುದೆ ನಡೆದನು. ಇದರಿಂದಾಗಿ ಗೌಡ ಅಧಿಕಾರಿಯು ಹೇಳಿದ್ದಕ್ಕೆಲ್ಲ ಬ್ರಾಹ್ಮಣ ಗುಮಾಸ್ತೆಯು ಕ್ವಯರಿ ಆಕುತ್ತ ಎಲ್ಲ ಕೆಲಸವೂ ಅಲ್ಲಲ್ಲಿಗೆ ನಿಂತು ಬಿಡುತ್ತಿತ್ತು.

ಈ ಗೌಡ ಅಧಿಕಾರಿಯು ಆ ಬ್ರಾಹ್ಮಣ ಗುಮಾಸ್ತಗೆ ಒಂದು ಸಲ ಹೇಳಿ ನೋಡಿದನು. ಕ್ವಯರಿ ನಿಲ್ಲಲಿಲ್ಲ. ಎರಡನೆ ಸಲವೂ ಹೇಳಿ ನೋಡಿದನು ಹಾಗೂ ಕ್ವಯರಿ ನಿಲ್ಲಲಿಲ್ಲ. ಕೊನೆಗೆ ತಾಳಲಾರದೆ ಒಂದು ದಿನ ಗೌಡ ಅಧಿಕಾರಿಯು ಬ್ರಾಹ್ಮಣ ಗುಮಾಸ್ತನ ಕಪಾಳಕ್ಕೆ ಹೊಡೆದು ಬಿಟ್ಟ ಪರಿಣಾಮವಾಗಿ ಬ್ರಾಹ್ಮಣ ಗುಮಾಸ್ತನ ಬಾಯಿಂದ ರಕ್ತವೂ ಮತ್ತು ಒಂದು ಹಲ್ಲೂ ಉದುರಿತು. ಬ್ರಾಹ್ಮಣ ಗುಮಾಸ್ತನು ನೋವನ್ನೂ ರಕ್ತವನ್ನೂ ನುಂಗಿಕೊಂಡನು. ತನ್ನ ಉದುರಿದ ಒಂದು ಹಲ್ಲಿಗೆ ಮತ್ತು ಹೋದ ಮಾನಕ್ಕೆ ಬದಲಾಗಿ ಗೌಡ ಅಧಿಕಾರಿಯ ಎರಡು ಹಲ್ಲನ್ನು ತೆಗೆಯುವುದಾಗಿ ಆಗ ಮನದಲ್ಲೆ ಪ್ರತಿಜ್ಞೆ ಮಾಡಿದನು.

ಮನದಲ್ಲೆ ಮಾಡಿದ ಪ್ರತಿಜ್ಞೆಯು ಗುಮಾಸ್ತನ ಮನದಲ್ಲೆ ಉಳಿಯಲಿಲ್ಲ. ಆತ ಒಬ್ಬನಿಗೆ ಹೇಳಿದ್ದು ಇನ್ನೊಬ್ಬನಿಗೆ ತಲುಪಿ ಹೀಗೆ ಸುತ್ತಾಡಿ ಅಧಿಕಾರಿಯ ಕಿವಿಗೂ ಮತ್ತು ಹಲ್ಲಿಗೂ ಸುದ್ದಿ ಹಾಕಿತು. ಇದರಿಂದ ಮಾತ್ರ ಕುಪಿತನಾದ ಆ ಗೌಡ ಅಧಿಕಾರಿಯು ಈ ಬ್ರಾಹ್ಮಣ ಗುಮಾಸ್ತನನ್ನು ನೀರು ನೆರಳಿಲ್ಲದೆಡೆಗೆ ವರ್ಗ ಮಾಡಿ ಆ ಗುಮಾಸ್ತನನ್ನೂ, ಪ್ರಕರಣವನ್ನೂ ಮರೆತು ಬಿಟ್ಟನು.

ವರುಷಗಳು ಉರುಳಿದವು. ಅಧಿಕಾರಿಗೂ ನಿವೃತ್ತಿ ಆಯ್ತು. ಇನ್ನು ಫೆನ್ಷನ್ನು ಮತ್ತೊಂದು ಪಡೆದು ಇಳಿಜೀವನ ಸಾಗಿಸಲು ರಡಿಯಾದನು. ನಿವೃತ್ತ ಅಧಿಕಾರಿಯ ಪೆನ್ಷನ್ನು ಗ್ರಾಜುಯಿಟಿಗೆ ರಿಕಾರ್ಡುಗಳೆಲ್ಲ ಓಡಾಡಿ ಇನ್ನೇನು ಹಣ ಕೈಗೆ ಸಿಕ್ಕಿತು ಎಂಬ ಮಟ್ಟಕ್ಕೆ ಬಂತು. ಇನ್ನೇನು ಹಣ ಚೆಕ್ಕು ಪಡೆಯಲು ಬಂದಾಗ ಈ ನಿವೃತ್ತ ಅಧಿಕಾರಿಗೆ ಒಂದು ಸಮಸ್ಯೆ ಕಾದಿತ್ತು. ಏನೆಂದರೆ ನಿವೃತ್ತ, ಅಧಿಕಾರಿಯ ಚಹರೆಯಲ್ಲಿ ಅಧಿಕಾರಿಗೆ ಮುಂದಿನ ‘ಎರಡು ಹಲ್ಲು ಇಲ್ಲ ಎಂದಿರುವ ಪ್ರಯಕ್ತ ಅನುಮಾನಾಸ್ಪದವಾಗಿ ಫೆನ್ಷನ್ನು ಗ್ರಾಚುಯಿಟಿ ತಡೆಯಿಡಿಯಲಾಗಿತ್ತು. ಬ್ರಾಹ್ಮಣ ಗುಮಾಸ್ತನು ಕಳೆದುಕೊಂಡ ಒಂದು ಹಲ್ಲು ನೆಗಾಡುತಿತ್ತು.

ಅಸಹಾಯಕನಾದ ಅಧಿಕಾರಿಯು ಬಾಯಿ ಮುಚ್ಚಿಕೊಂಡು ಹೊರಬಂದು ದಂತ ವೈದ್ಯರಿಂದ ತನ್ನ ಮುಂದಿನ ಎರಡು ಹಲ್ಲನ್ನು ತೆಗೆಸಿ ಒಂದು ಪೆನ್ಷನ್ನು ಮತ್ತೊಂದು ಪಡೆದನು ಎಂಬಲ್ಲಿಗೆ, ಬ್ರಾಹ್ಮಣ ಗುಮಾಸ್ತೆಯು ಲೆಕ್ಕಣಿಕೆಯಾಡಿಸಿ ತನ್ನ ಪ್ರತಿಜ್ಞೆ ಈಡೇರಿಸಿಕೊಂಡ ಎಂಬಲ್ಲಿಗೆ ಕಥೆ ಸಮಾಪ್ತಿಯಾಯ್ತು.

ಸ್ನೇಹಿತರೇ, ಇದು ಕಥೆಯೂ ಅಲ್ಲ, ಗೌಡ ಬ್ರಾಹ್ಮಣರದ್ದೂ ಅಲ್ಲ, ಇದೇ ಇದುವರೆಗೂ ನಡೆದುಕೊಂಡು ಬರುತ್ತಿರುವ ಬ್ರಾಹ್ಮಣ ಮತ್ತು ಪಾಳೆಗಾರಿ ಸ್ವಭಾವದ ನಡಿಗೆ.

(ಪಂಚಮ ಡಿಸೆಂಬರ್. ೧೯೮೫)