ಇತ್ತೀಚೆಗೆ ನಡೆದ ‘ದಲಿತರು, ಭಾಷೆ ಮತ್ತು ಸಮಾಜ’ ಎಂಬ ಎರಡು ದಿನಗಳ ವಿಚಾರಸಂಕಿಣರದಲ್ಲಿ ಒಂದು ದಿನದ ಸಂವಾದದಲ್ಲಿ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಲು ನನಗೆ ಅವಕಾಶ ಮಾಡಿಕೊಟ್ಟ ಗೆಳೆಯರದ ಡಾ. ಬಸವರಾಜ ಕಲ್ಗುಡಿ ಹಾಗೂ ಡಾ. ಮಹದೇವಯ್ಯ ಅವರಿಗೆ ನನ್ನ ವಂದೆನಗಳನ್ನು ತಿಳಿಸುತ್ತಾ ನನ್ನ ಒಂದೆರೆಡು ಅನ್ನಿಸಿಕೆಗಳನ್ನು ತಮ್ಮ ಮುಂದೆ ಇಡಲು ಬಯಸುತ್ತೇನೆ. ವಿಷಯದ ಅಗಾಧತೆ ನೋಡಿದಾಗ ನನಗೆ ಮೀಸಲಿಟ್ಟ ಸಮಯದಲ್ಲಿ ಪೂರ್ಣಗೊಳಿಸಲು ಕಷ್ಟವಾದರೂ ಪ್ರಯತ್ನಿಸುತ್ತೇನೆ.

ಸಾಮಾಜಿಕ ಸಂವಹನ ಒಂದು ಸಾರ್ವತ್ರಿಕ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ವ್ಯತ್ಯಯ ಕಂಡು ಬಂದರೆ ಅದು ಸಮಾಜಕ್ಕೆ ಮಾರಕವಾಗಬಹುದು. ಸಾಹಿತ್ಯದಲ್ಲಿ ಹಳೆಗನ್ನಡ, ನವ್ಯ, ನವೋದಯ, ಬಂಡಾಯ ಹಾಗೂ ದಲಿತ ಹೀಗೆ ಕನ್ನಡ ಭಾಷೆಯಲ್ಲಿ ಹತ್ತು ಹಲವು ಮಜಲುಗಳನ್ನು ಈ ಸಾಹಿತ್ಯಗಳ ಮೂಲಕ ಕಾಣುತ್ತೇವೆ. ಸಾಹಿತ್ಯಕ್ಕೆ ಈ ರೀತಿಯ ಬಹುರೂಪಿ ಕನ್ನಡ ಭಾಷೆಯನ್ನು ಒಪ್ಪಿಕೊಳ್ಳುವ, ಜೀರ್ಣಿಸಿಕೊಳ್ಳುವ ಶಕ್ತಿಯಿದೆ. ಭಾಷಾ ಬಳಕೆಯ ದೃಷ್ಟಿಯಿಂದ ನೋಡಿದರೆ ಕುವೆಂಪು ಅಂತಹ ಗಣ್ಯರು ರಾಮಾಯಣದರ್ಶನಂ ಕೃತಿಗಳನ್ನು ಬರೆದು ಜೀರ್ಣಿಸಿಕೊಳ್ಳಬಹುದು. ಮತ್ತೊಂದು ಹಂತದಲ್ಲಿ ದೇವನೂರ ಮಹಾದೇವ ಅಂತಹ ಗಣ್ಯರು ಒಡಲಾಳದಂತಹ ಕೃತಿ ಬರೆದ ಜೀರ್ಣಿಸಿಕೊಳ್ಳಬಹುದು – ಇವೆರೆಡೂ ಕನ್ನಡ ಭಾಷೆಯಲ್ಲಿದ್ದರೂ ಭಾಷೆಯ ಅಳವಡಿಕೆ, ಭಾಷೆಯ ಸ್ವರೂಪ ನೋಡಿ. ಎಷ್ಟು ಭಿನ್ನ ! ಎರಡೂ ಸಾಹಿತ್ಯಗಳನ್ನು ಅವುಗಳ ಮಟ್ಟದಲ್ಲಿ ಮೇರು ಕೃತಿಗಳೆಂದು ಒಪ್ಪಬೇಕಾದದ್ದೆ.

ಆದರೆ ಮಾಧ್ಯಮಗಳ ಮಟ್ಟದಲ್ಲಿ ಈ ರೀತಿಯ ವಿಭಿನ್ನವಾದ ಭಾಷಾ ಅಳವಡಿಕೆ ಸಾಧ್ಯವಾಗುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ದಲಿತ ಭಾಷೆ ಎಂಬುದೊಂದು ಪ್ರಕಾರವಿದೆ ಎನ್ನಿಸುವುದಿಲ್ಲ. ಆದರೆ ಪಟ್ಟಣದ ಭಾಷೆ ಇದೆ, ಹಳ್ಳಿ ಭಾಷೆ ಇದೆ. ಹಾಗೆಯೆ ಕೊಪ್ಪಲಿನ ಭಾಷೆಯಿದೆ ಎಂಬುದು ಸರ್ವವಿಧಿತ. ಈ ಪರಿಸರಗಳಲ್ಲಿ ಬದುಕು ನಡೆಸುವವರಿಗೆ ಆಯಾ ಮಣ್ಣಿನ ಭಾಷೆ ಅವರಿಗೆ ಒಗ್ಗಿ ಹೋಗಿರುತ್ತದೆ. ಯಾಕ್ಲಾ, ಹೊಗ್ಲಾ, ಬಾರ್ಲಾ….ಇತ್ಯಾದಿ ಎಲ್ಲಾ ಹಳ್ಳಿ ಜನರ ಆಡುಭಾಷೆ. ಇದಕ್ಕೆ ದಲಿತ ಹಿಂದುಳಿದ, ಮುಂದುವರೆದ ಎಂಬ ಜನಾಂಗ ಭೇದವಿಲ್ಲ.

ಮನುಷ್ಯನ ಸಹಜ ಗುಣವೆಂದರೆ ತನ್ನ ಬದುಕಿನ, ತನ್ನ ಪರಿಸರದ ಪ್ರತಿಯೊಂದು ಗುಣವನ್ನು ಸ್ವೀಕರಿಸುವುದು. ಹಳ್ಳಿ ಪರಿಸರದಿಂದ ಪಟ್ಟಣ ಪರಿಸರಕ್ಕೆ ಬಂದವರಿಗೆ ಯಾಕ್ಲಾ, ಹೊಗ್ಲಾ, ಬಾರ್ಲಾ ಕ್ರಮೇಣ ಬದಲಾಗಿ ಏಕೆ, ಹೋಗು ಬಾ ಎಂದಾಗಬಹುದು. ಇಲ್ಲಿ ಹಳ್ಳಿಯ ಗುಣ ಕ್ರಮೇಣ ಬದಲಾಗುತ್ತಿದೆಯೇ ಹೊರತು ದಲಿತ, ಹಿಂದುಳಿದ, ಮುಂದುವರೆದ ಜಾತಿಗಳ ಗುಣವಲ್ಲ.

ಪಟ್ಟಣದ ಪರಿಸರ ಹಳ್ಳಿ ಭಾಷೆಗೆ ಕ್ರಮೇಣವಾಗಿ ಭಾಷಾ ಮಡಿವಂತಿಕೆಯ ಲೇವ ಹಾಕಿ ಬಿಡುತ್ತದೆ. ಹಾಗಾಗಿ ನಮ್ಮ ರಾಜ್ಯದ ಯಾವುದೇ ಪತ್ರಿಕೆ, ಯಾವುದೆ ನಿಯತಕಾಲಿಕೆ, ಯಾವುದೆ ಟಿವಿ ವಾಹಿನಿ, ರೇಡಿಯೋ ಮಾಧ್ಯಮ ಈ ಮಡಿವಂತಿಕೆಯ ಭಾಷೆಯನ್ನು ಮಾತ್ರ ಉಪಯೋಗಿಸುತ್ತವೆಯೆ ಹೊರತು ಬೇರೆ ಭಾಷಾ (ದಲಿತ ಭಾಷೆ ಇತ್ಯಾದಿ) ಪ್ರಯೋಗ ಮಾಡುವುದಿಲ್ಲ. ಇಕ್ರಿಲ್ಲಾ, ಹೊಡ್ರೆಯರ್ಲಾ, ಒಡೆಯರರ್ಲಾ….ಒಂದು ಪ್ರಕಾರದ ಸಾಹಿತ್ಯ ಭಾಷೆಗೆ ಸೀಮಿತವಾಗಿ ಹೋಗುವ ಸಾಧ್ಯತೆ ಇರುತ್ತದೆ ಹೊರತು, ಇದು ಮಾಧ್ಯಮದ ತನಕ ಬರುವುದಿಲ್ಲ. ಹೌದು. ಅಲ್ಲಲ್ಲಿ ಕೆಲವು ಪ್ರಯೋಗಗಳಾಗಿರಬಹುದು. ಮಾನ್ಯ ಲಂಕೇಶ್ ಅಂತಹವರು ಈ ಪ್ರಯೋಗದಲ್ಲಿ ಸಫಲರಾಗಿಯೂ ಇರಬಹುದು. ಆದರೆ ಇಂತಹ ದುಃಸಾಹಸಕ್ಕೆ ಲಂಕೇಶ್ ಅವರಂತಹ ಗಟ್ಟಿ ಕುಳಕ್ಕೆ ಮಾತ್ರ ಸಾಧ್ಯ. ದುಃಸಾಹಸ ಎಂದು ಏಕೆ ಹೇಳಬೇಕಾಗುತ್ತದೆ ಅಂದರೆ, ಇಲ್ಲಿಯ ಭಾಷಾ ಬಳಕೆ ಬೇರೆಲ್ಲೂ ಬಳಕೆಯಾಗದಂತಹ ಭಾಷೆ. ನಿಜ, ಇದು ಆಡು ಭಾಷೆ, ಇದು ಮಣ್ಣಿನ ಭಾಷೆ, ಇದು ಹಿತ್ತಲ ಭಾಷೆಯಾಗಿರಬಹುದು. ಆದರೆ ಇದು ಮಾಧ್ಯಮ ಭಾಷೆಯಾಗುವುದಕ್ಕೆ ಸಾಧ್ಯವಾಗುವುದಿಲ್ಲ.

ಪತ್ರಿಕೆ ಇತ್ಯಾದಿ ಮಾಧ್ಯಮಗಳನ್ನು ಪ್ರಾರಂಭಿಸುವವರು ಇದಕ್ಕಾಗಿ ಅಪಾರವಾದ ಹಣ ಹೂಡಿರುತ್ತಾರೆ. ಅವರಿಗೆ ಹೂಡಿದ ಹಣ ವಾಪಸ್ಸು ಬರುತ್ತದೆಯೋ ಎಂಬುದರ ಬಗ್ಗೆ ಮಾತ್ರ ಗಮನವಿರುತ್ತದೆ. ಹಾಗಾಗಿ ಅವರು ಬಳಸುವ ಭಾಷೆ ಬಹುಜನ ಓದುಗರ, ಬಹು ಜನ ನೋಡುಗರ, ಬಹು ಜನ ಕೇಳುಗರ ಭಾಷೆಯೇ ಹೊರತು, ದಲಿತ ಭಾಷೆ, ಹಿಂದುಳಿದವರ ಭಾಷೆ ಎಂಬ ನಿಲುವುಗಳಿಂದ ಕೂಡಿದ ವಾದ ವಿವಾದಗಳ ಬಗ್ಗೆ ಇಲ್ಲ. ಹಾಗಾಗಿ ಇದು ಲಂಕೇಶ್ ಅವರಂತಹ ಮಹನೀಯರು ಮಾಡುವ ದುಃಸಾಹಸವಾಗಿ ಬಿಡುತ್ತದೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಮಾಧ್ಯಮದಲ್ಲಿ ದಲಿತ ಭಾಷೆ ಪ್ರಯೋಗ ಅಸಾಧ್ಯವೆನ್ನುವರಷ್ಟುಮಟ್ಟಿಗೆ ಸತ್ಯ. ಆದರೆ ಪಕ್ಕದ ತಮಿಳುನಾಡಿನಲ್ಲಿ ಇಂತಹ ಭಾಷಾ ಪ್ರಯೋಗ ಸಾಧ್ಯವಿದೆ. ಏಕೆಂದರೆ ನಮ್ಮ ರಾಜ್ಯದಲ್ಲಿರುವಂತಹ ಭಾಷಾ ಮಡಿವಂತಿಕೆ ಆ ರಾಜ್ಯದಲ್ಲಿಲ್ಲ. ಬಹುಶಃ ಸಂಸ್ಕೃತ ಭಾಷೆಯ ಪರಿಣಾಮ ಇಲ್ಲದೆ ಇರುವುದು ಒಂದು ಕಾರಣವಿರಬಹುದು. ನಮ್ಮ ಭಾಷಾ ಬಳಕೆಯಲ್ಲಿ ‘ಅ’ ಕಾರ, ‘ಹ’ಕಾರ ಅಲ್ಪಪ್ರಾಣ, ಮಹಾಪ್ರಾಣಗಳೇನಾದರೂ ಹೆಚ್ಚು ಕಡಿಮೆಯಾದರೆ ಇಲ್ಲಿಯ ಜನ ಹೌಹಾರಿ ಬಿಡುತ್ತಾರೆ. ಎದುರುಗಡೆ ನಿಂತಿರುವವರನ್ನು ಭಾಷೆಯನ್ನು ಕೊಲೆ ಮಾಡುತ್ತಿದ್ದಾನೆಂದು ಆತನನ್ನು ಮೂದಲಿಸಿ ಆತ ಮತ್ತೆಲ್ಲಿಯೂ ಧೈರ್ಯವಾಗಿ ಮಾತನಾಡುವಂತೆ ಭಾಷಾ ಕಟ್ಟಳೆ ವಿಧಿಸಿ ಬಿಡುತ್ತಾರೆ. ಇದು ಬಹುಶಃ ನಮ್ಮ ಭಾಷೆಯ ಮೇಲಿನ ಸಂಸ್ಕೃತ ಭಾಷೆಯ ಹಿಡಿತವಿರಬಹುದು.

ಆದರೆ ತಮಿಳು ಭಾಷೆಗೆ ಇಂತಹ ಕಟ್ಟಳೆ, ಕಡಿವಾಣಗಳಿಲ್ಲ. ಅಲ್ಲಿ ‘ಹ’ಕಾರದ ಸಮಸ್ಯೆಯೇ ಇರುವುದಿಲ್ಲ. ಹಾಗಾಗಿ ಅಲ್ಲಿ ‘ಸಹನಾ’ ಸಗನಾ ಆಗುತ್ತಾಳೆ. ‘ಮೋಹನ್’ ಮೋಗನ್ ಆಗುತ್ತಾನೆ. ‘ಮಹೇಶ್ವರನ್’ ಮಗೇಶ್ವರನ್ ಆಗುತ್ತಾನೆ. ಹಾಗೆಯೇ ‘ಪ’ ಕಾರ ‘ಬ’ ಕಾರವಾಗುತ್ತದೆ. ಹಾಗಾಗಿ ‘ಪದ್ಮಿನಿ’ ಬದ್ಮಿನಿ ಆಗುತ್ತಾಳೆ. ‘ಪಮ್ಮು’ ಬಮ್ಮು ಆಗುತ್ತಾಳೆ. ಇದು ಒಂದು ವರ್ಗಕ್ಕೆ, ಒಂದು ಜಾತಿಗೆ ಸೀಮಿತವಲ್ಲ. ಮೇಲ್ಜಾತಿ ಕೆಳಜಾತಿ ಎನ್ನದೆ ಅಲ್ಲಿ ಪ್ರತಿಯೊಬ್ಬರೂ ಈ ಭಾಷಾ ಪ್ರಯೋಗವನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಅಲ್ಲಿಯ ಮಾಧ್ಯಮಗಳಲ್ಲಿ ಕೂಡ ಭಾಷಾ ಮಡಿವಂತಿಕೆ ಹೆಚ್ಚಾಗಿ ಕಾಣುವುದಿಲ್ಲ. ಅದರಲ್ಲೂ ಸಣ್ಣ ಮತ್ತು ಮಾಧ್ಯಮ ಪತ್ರಿಕೆಗಳಲ್ಲಿ ಈ ರೀತಿಯ ಭಾಷಾ ಪ್ರಯೋಗಗಳೆ ಹೆಚ್ಚಾಗಿರುತ್ತವೆ. ಇದೇ ಕಾರಣದಿಂದ ಈ ಪತ್ರಿಕೆ ಪ್ರಸಾರ ಕೂಡ ಹೆಚ್ಚಾಗಿರುತ್ತವೆ.

ಆದರೆ ಕರ್ನಾಟಕ ಮಟ್ಟದಲ್ಲಿ ಇಲ್ಲಿಯ ಮಾಧ್ಯಮಗಳ ಭಾಷಾ ಬಳಕೆಯಲ್ಲೂ ಕೂಡ ಜಾತಿ ಜಾಡ್ಯ ಅಂಟಿಕೊಂಡಂತಿದೆ. ‘ಹ’ ಕಾರ ‘ಅ’ ಕಾರಗಳು ಸಂಕುಚಿತ ಮನೋಭಾವವನ್ನು ಬೆಳೆಸುತ್ತಿವೆ. ಭಾಷೆಯನ್ನು ಒಂದು ವರ್ಗೀಕೃತ ಅಸ್ತ್ರವವನ್ನಾಗಿ ಉಪಯೋಗಿಸದೆ ಅದನ್ನು ಅಲ್ಲಿಯ ಪರಿಸರಕ್ಕೆ ಅಲ್ಲಿರುವ ವಾತಾವರಣಕ್ಕೆ ಬಿಡುವುದು ಒಳ್ಳೆಯದು. ದಲಿತ ಹಿಂದುಳಿದ ವರ್ಗಗಳ ಮೇಲೆ ಯಾವುದೇ ಭಾಷಾ ಶ್ರೌರ್ಯತೆ ಇರಬಾರದು. ಈ ವರ್ಗಗಳಿಂದ ಬರುವ ಬರಹಗಾರರಿಗೆ (ವರದಿಗಾರರಿಗೆ) ವಿಷಯ ಜ್ಞಾನ ಎಷ್ಟಿದೆ ಎಂಬುದನ್ನು ಮಾತ್ರ ಗಮನಿಸಬೇಕಾಗಿದೆ. ಭಾಷೆಯೇ ಒಂದು ಅವ್ಯಕ್ತ ಭಯವಾಗಬಾರದು.

ಕನ್ನಡ ಭಾಷೆ ದಲಿತ ವರ್ಗಕ್ಕೆ ಅನ್ನದ ಭಾಷೆಯಾಗಬೇಕಿದೆ. ಕನ್ನಡ ಭಾಷೆ ಯಾವುದೇ ಮಡಿವಂತಿಕೆಯನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಳ್ಳದೆ ಎಲ್ಲಾ ವರ್ಗಗಳಿಗೂ ಎಟುಕುವಂತ ಭಾಷೆಯಾಗಬೇಕಾಗಿದೆ. ಮಾಧ್ಯಮಗಳಲ್ಲಿ ಕನ್ನಡ ಭಾಷೆ ಯಾವುದೇ ಹಿಂಜರಿಕೆಯಲ್ಲಿದೆ. ಹೆಚ್ಚು ಹೆಚ್ಚು ಉಪಯೋಗಿಸುವಂತಹ ಭಾಷೆಯಾಗಬೇಕಿದೆ. ಅಂದರೆ ಹೆಚ್ಚು ಜನರಿಗೆ ತಲುಪುವಂತಹ ಭಾಷೆಯಾಗಬೇಕಾಗಿದೆ. ಮಾಧ್ಯಮದ ಭಾಷೆಯನ್ನು ‘ಅವಸರದ ಸಾಹಿತ್ಯ’ ಎಂತಲೂ ಕರೆಯುತ್ತಾರೆ. ಇದು ಹೀಗೆ ಅವಸರದ ಸಾಹಿತ್ಯವಾಗಿರುವುದರಿಂದ ಭಾಷಾ ಮಡಿವಂತಿಕೆ ಇಲ್ಲಿರಬಾರದು ಎಂಬುದು ನನ್ನ ಅನ್ನಿಸಿಕೆ.

ಈ ಅವಕಾಶ ನೀಡಿದ್ದಕ್ಕೆ ಮತ್ತೊಮ್ಮೆ ಈ ಕಾರ್ಯಾಗಾರದ ಗೆಳೆಯರಿಗೆ ವಂದನೆಗಳು.