ಭಾಷೆ, ಮಾಧ್ಯಮ ಹಾಗೂ ದಲಿತ ಪ್ರಜ್ಞೆಯ ಸಂಬಂಧಗಳನ್ನು ಅರ್ಥೈಸಲು ಚರ್ಚೆಗಳು ನಡೆಯಬೇಕಿದೆ. ಭಾಷೆ ಎಂಬುದು ಸಂವಹನ ಮಾಧ್ಯಮ. ಅದಕ್ಕೆ ಸಾಮಾಜಿಕ ಸ್ವರೂಪವೂ ಇದೆ. ಹೀಗಾಗಿ ಭಾಷೆಯಲ್ಲಿ ಹಲವು ವೈವಿಧ್ಯಗಳನ್ನು ಗುರುತಿಸಬಹುದು. ಪತ್ರಿಕಾ ಭಾಷೆ, ರಾಜಕೀಯ ಭಾಷೆ, ಸಾಹಿತ್ಯಕ ಭಾಷೆ, ದಲಿತ ಸಂವೇದನೆಯನ್ನು ಸೂಚಿಸುವಂತಹ ಭಾಷೆ, ಮಹಿಳಾ ಸಂವೇದನೆಯನ್ನು ಸೂಚಿಸುವಂತಹ ಭಾಷೆ – ವಿಭಿನ್ನ ಮಾದರಿಗಳನ್ನು ನಾವು ನೋಡುತ್ತೇವೆ.

ಪತ್ರಿಕೆ ಎಂದಾಗ ಅದರ ಓದುಗರು ವಿಭಿನ್ನ ನೆಲೆಗಳವರಾಗಿರುತ್ತಾರೆ. ಹಾಗಾಗಿ ಪತ್ರಿಕೆ ಎಂಬುದು ಒಂದು ಹೋಲ್ಡಾಲ್ ರೀತಿ. ಎಲ್ಲ ಬಗೆಯ ವಿಭಿನ್ನ ಜನರನ್ನು ಅದು ಪ್ರತಿನಿಧಿಸುತ್ತದೆ; ಪ್ರತಿಬಿಂಬಿಸುತ್ತದೆ. ಹೀಗಾಗಿ ಪತ್ರಿಕಾ ಭಾಷೆ ತನ್ನದೇ ಆದ ಸಿದ್ಧ ಮಾದರಿ ಅಥವಾ ಸ್ಟಾಂಡರ್ಡೈಸೇಷನ್ ಕಾಪಾಡಿಕೊಂಡು ಬಂದಿದೆ. ಜತೆಗೆಯೇ ಬೇರೆ ಬೇರೆ ಭಾಷೆಗಳಲ್ಲಿನ ಪತ್ರಿಕೆಗಳಲ್ಲಿ ವಿಷಯಗಳ ನಿರೂಪಣೆ, ಪ್ರಸ್ತುತಿಯಲ್ಲಿ ವ್ಯತ್ಯಾಸಗಳಾಗುವುದನ್ನೂ ಕಾಣುತ್ತೇವೆ. ಆಯಾಯ ಪತ್ರಿಕೆಗಳ ಸಂಪಾದಕರು ಅಥವಾ ಸಂಪಾದಕ ಮಂಡಲೀಯ ನೀತಿಗಳ ಅನ್ವಯ ಇಂತಹ ವ್ಯತ್ಯಾಸಗಳಿರುತ್ತವೆ.

ಮಾಧ್ಯಮ ಕ್ಷೆತ್ರ ತೀವ್ರ ಸ್ಪರ್ಧಾತ್ಮಕತೆಯನ್ನು ಎದುರಿಸುತ್ತಿರುವಂತಹ ಕಾಲಘಟ್ಟವಿದು. ವಿಚಾರಗಳನ್ನು ಅತಿರಂಜಿತಗೊಳಿಸುವಂತಹ ಸೆನ್ಸೇಷನಲೈಸೇಷನ್ ಅಥವಾ ಟ್ಯಾಬ್ಲಾಯ್ಟೈ ಸೇಷನ್ ಶೈಲಿ ಪ್ರಾಧಾನ್ಯ ಪಡೆದಿರುವ ಕಾಲ ಇದು. ಜಾಗತೀಕರಣದ ಈ ಕಾಲದಲ್ಲಿ ಮಾರುಕಟ್ಟೆಯ ಪ್ರಾಬಲ್ಯದ ಸುಳಿಯಲ್ಲಿ ಪತ್ರಿಕೆಗಳ ಆದ್ಯತೆ ಹಾಗೂ ಮೌಲ್ಯಗಳು ಕೂಡಾ ಬದಲಾಗುತ್ತಾ ಇವೆ. ಅಂದ್ರೆ ನಮ್ಮ ಪತ್ರಿಕೆಗಳಲ್ಲಿ ಮೊದಲು ಸುದ್ಧಿ ಕೊಡೋದೇ ಮುಖ್ಯ ಆಗಿರುತ್ತಿತ್ತು. ಆದರೆ ಈಗ ಎಲೆಕ್ಟ್ರಾನಿಕ್ ಮಾಧ್ಯಮದ ಜೊತೆ ಸ್ಪರ್ಧಿಸಬೇಕಾಗಿ ಬಂದಿರುವುದರಿಂದ ಬೇರೆ ಬೇರೆ ರೀತಿಯ ವಿಚಾರಗಳು, ಮಾಹಿತಿಗಳೂ ಪತ್ರಿಕೆಗಳಲ್ಲಿ ಜಾಗವನ್ನು ಆಕ್ರಮಿಸಿಕೊಳ್ಳುತ್ತಿವೆ. ಹೀಗಾಗಿಯೇ ಫ್ಯಾಷನ್, ಬಿಸಿನೆಸ್, ಲೈಫ್‌ಸ್ಟೈಲ್, ಸೆಲೆಬ್ರಿಟಿ ಲೈಫ್, ಮನರಂಜನೆ ಇತ್ಯಾದಿ ವಿಚಾರಗಳು ಪ್ರಾಧಾನ್ಯಗಳಿಸಿಕೊಳ್ಳುತ್ತಿವೆ. ಮುಖ್ಯವಾಹಿನಿ ಪತ್ರಿಕೆಗಳಲ್ಲೂ ‘ಕೇಟರಿಂಗ್ ಟು ದಿ ನೀಡ್ಸ್’ ಎಂದರೆ ಜನ ಏನು ಬಯಸ್ತಾರೋ ಅದನ್ನು ಒದಗಿಸುವುದು ಎಂಬ ಪರಿಕಲ್ಪನೆ ಮೇಲ್ಮೈ ಸಾಧಿಸಿದೆ. ಸಿನಿಮಾ, ಗಾಸಿಪ್, ಸಹಾಯ ಹಸ್ತಗಳು, ರೈಲು ವೇಳಾಪಟ್ಟಿ, ಆಸ್ಪತ್ರೆ ದೂರವಾಣಿ ಸಂಖ್ಯೆಗಳು, ಗ್ರಾಹಕರ ಮೇಳಗಳ ಮಾಹಿತಿ ಹೀಗೆ ನಗರ ಕೇಂದ್ರಿತ ವಿಚಾರಗಳು, ಅರ್ಬನ್ ಓರಿಯೆಂಟೇಷನ್ ಆದ್ಯತೆಗಳನ್ನು ಗಳಿಸಿಕೊಳ್ಳುತ್ತಿವೆ. ಹೀಗಾದಾಗ ಪತ್ರಿಕೆಗಳಲ್ಲಿ ಸನಾತನ ಅನ್ನೋದಾಗಲಿ, ದಲಿತ ಪ್ರಜ್ಞೆ ಅನ್ನೋದಾಗಲಿ ಅನಾವರಣಗೊಳ್ಳುವುದು ಕಡಿಮೆ. ಆದರೆ ಮಾನವ ಹಕ್ಕುಗಳು ಉಲ್ಲಂಘನೆ ಪ್ರಕರಣಗಳು ತಕ್ಕಮಟ್ಟಿಗೆ ಅನಾವರಣಗೊಳ್ಳುತ್ತವೆ. ರಾಜಶೇಖರ್ ಹೇಳಿದ ಹಾಗೆ ಇಂತಹವನ್ನು ಸೆನ್ಸೇಷನಲೈಸ್ ಮಾಡಿದರೆ ಪ್ರೆಸೆಂಟೇಶನ್‌ನಲ್ಲಿ ವ್ಯತ್ಯಾಸ ಆಗುತ್ತದೆ.

ನಿಮಗೆಲ್ಲಾ ಗೊತ್ತಿರೋ ಹಾಗೆ ಪತ್ರಕರ್ತರು ಶಬ್ದಬ್ರಹ್ಮರು. ಮದ್ಯಾಭಿಷೇಕ ಎಂಬ ಪದವನ್ನು ಅವರು ಸೃಷ್ಟಿಸಿರುವುದನ್ನು ನೀವು ಗಮನಿಸಿರಬಹುದು. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದಂತಹ ಪ್ರಕರಣವನ್ನು ಶಿಷ್ಟ ಮನಸ್ಸುಗಳು ಮದ್ಯಾಭಿಷೇಕ ಮಾಡಿದರು ಎಂದು ಮದ್ಯಾಭಿಷೇಕ ಎಂಬ ಪದವನ್ನು ಸೃಷ್ಟಿಸಿ ಅದು ವಿಮರ್ಶಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗುರಿಯಾಗಿದ್ದು ನಿಮಗೆ ನೆನಪಿದೆ. ಆದರೆ ಈ ತರಹದ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ಸಹಾನೂಭೂತಿ ನೆಲೆಯಲ್ಲೋ, ಅನುಕಂಪದ ನೆಲೆಯ್ಲಲೋ ಪ್ರೆಸೆಂಟ್ ಆಗೋದಂತೂ ಮುಂದುವರಿತಾ ಇದೆ. ದಲಿತರಿಗೆ ಕ್ಷೌರ ಮಾಡದಂತಹ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ಇಂದಿನ ದಿನಗಳಲ್ಲೂ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಸವರ್ಣೀಯರು ಹಾಗೂ ದಲಿತರ ನಡುವೆ ನಡೆದ ಸಂಘರ್ಷದ ಬದನವಾಳು ಘಟನೆ ಇರಬಹುದು – ಇಂತಹ ಕಡೆ ಕೆಲವೊಮ್ಮೆ ಪೂರ್ವಗ್ರಹಗಳು ವ್ಯಕ್ತವಾಗಬಹುದು. ಆದರೆ ದಲಿತರು ಕಾಳಜಿಗಳು ಮುನ್ನೆಲೆಗೆ ಬರೋದಕ್ಕೆ ಇಂತಹ ಸಂದರ್ಭಗಳಲ್ಲಿ ಪತ್ರಿಕೆಗಳು ಕಾರಣವಾದದ್ದು ಇದೆ.

ಒಬ್ಬ ಮಹಿಳೆ ರಾಜಕೀಯಕ್ಕೆ ಬರೋದನ್ನೇ ತಪ್ಪಿಸಿದ್ರು. ಅದು ಪತ್ರಿಕೆಗಳಲ್ಲಿ ಸರಿಯಾಗಿ ಅನಾವರಣಗೊಳ್ಳಲಿಲ್ಲ ಅಂತ ರಾಜಶೇಖರ್ ಮಾತನಾಡುತ್ತಾ ಹೇಳಿದರು. ಬಹುಶಃ ಸಾಮಾಜಿಕ ಕಾಳಜಿ ಇರುವಂತಹ ಪತ್ರಕರ್ತ ಆ ಸೂಕ್ಷ್ಮಗಳನ್ನು ತಮಗಿರುವ ಮಿತಿಯಲ್ಲೇ ಅನಾವರಣಗೊಳಿಸಲು ಅಥವಾ ಸಾರ್ವಜನಿಕ ಅಭಿಪ್ರಾಯ ಸೃಷ್ಟಿಸಲು ಇರುವಂತಹ ಸಾಧ್ಯತೆಗಳನ್ನು ನಾವು ಹುಡುಕಿಕೊಳ್ಳಬೇಕಾಗಿದೆಯೇನೊ. ಆ ಮೂಲಕ ದಲಿತ ಸಂವೇದನೆ ಮಾಧ್ಯಮಗಳಲ್ಲಿ ಸೃಷ್ಟಿ ಆಗಲು ಪ್ರಯತ್ನ ಪಡಬಹುದು ಎನಿಸುತ್ತೆ.

ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎನ್ನುವಂತಹ ಪದವನ್ನು ನಾವು ಬಳಸುತ್ತಾ ಇದ್ದೇವೆ. ಭಾಷೆ ಎನ್ನುವುದು ಅಸಮಾನವಾದ ಒಂದು ಸಂಸ್ಕೃತಿಯನ್ನು ಕೂಡಾ ಪ್ರತಿಬಿಂಬಿಸುವಂತಹದ್ದು. ಯಾಕೆ ಎಂದರೆ ನಾವು ಲೋಕ ಗ್ರಹಿಕೆ ಮಾಡುವಂತಹದನ್ನೂ ಸಂಸ್ಕೃತಿ ನಿಯಂತ್ರಿಸುತ್ತಿರುತ್ತದೆ. ಅದು ಭಾಷೆಯಲ್ಲಿ ವ್ಯಕ್ತವಾಗ್ತಾ ಇರುತ್ತೆ. ಹಾಗಾಗಿ ಇಂಗ್ಲಿಶ್‌ನಲ್ಲಿ ಕೆಲವು ಪದಗಳ ಪ್ರಯೋಗ ಇದೆ. ಉದಾಹರಣೆಗೆ ಚೇರ್ಮನ್, ನ್ಯೂಸ್‌ಮೆನ್, ಮ್ಯಾನ್‌ಕೈಂಡ್. ಇವೆಲ್ಲಾ ಪದಗಳನ್ನು ಸೆಕ್ಸಿಸ್ಟ್ ಭಾಷೆ ಎಂದು ಹೇಳುವಂತಹದು. ಅಂದ್ರೆ ಲಿಂಗ ತಾರತಮ್ಯವನ್ನು ಗ್ರಹಿಸುವಂತಹ ಭಾಷೆ ಅಂತ. ಲಿಂಗ ತಾರತಮ್ಯದ ಜೊತೆಗೆ ಜಾತಿ ತಾರತಮ್ಯ ಕೂಡಾ ವ್ಯಕ್ತವಾಗುವ ಭಾಷೆ ಬಳಕೆ ಬಗ್ಗೆ ಸಂವೇದನಾಶೀಲತೆ ಮೂಡಬೇಕಾಗಿದೆ ಅನಿಸುತ್ತೆ.

ಇಂಗ್ಲಿಶ್ ಮಾಧ್ಯಮ ಕ್ಷೇತ್ರವನ್ನು ಪರಿಗಣಿಸಿದರೆ, ಪತ್ರಿಕಾ ರಂಗಕ್ಕೆ ಹೆಚ್ಚು ಹೆಚ್ಚು ಮಹಿಳೆಯರು ಬಂದ ನಂತರ ಈ ತರಹದ ಸೆಕ್ಸಿಸ್ಟ್ ಭಾಷೆ ಬಗ್ಗೆ ಸಾಕಷ್ಟು ಅರಿವನ್ನು ಮೂಡಿಸಲಾಗಿದೆ. ಚೇರ್ಮನ್ ಅನ್ನೋದು ಚೇರಪರ್ಸನ್, ನ್ಯೂಸ್‌ಮನ್ ಅನ್ನೋದು ನ್ಯೂಸ್‌ಪರ್ಸನ್ – ಈ ತರಹದ ಚಿಂತನೆಯ ಧಾಟಿ ಮುಖ್ಯವಾಹಿನಿಗೆ ಬರುತ್ತಾ ಇದೆ. ನರ್ಸ್ ಅಂದರೆ ಯಾಕೆ ನಾವು ಮಹಿಳೆ ಅಂತಲೇ ತಿಳಿದುಕೊಳ್ಳಬೇಕು? ಇಂತಹ ಪ್ರಜ್ಞೆಯನ್ನು ನಾವು ಮೂಡಿಸಬೇಕಿದೆ. ಈ ರೀತಿಯ ಸಂವೇದನಾಶೀಲತನೆಯನ್ನು ಮೂಡಿಸುವ ನಿಟ್ಟಿನಲ್ಲಿ ಭಾಷೆಯನ್ನು ಬಳಸುವುದರಲ್ಲಿ ಬಹುಶಃ ಮಾಧ್ಯಮಗಳಲ್ಲಿ ಇರುವಂತಹವರು ಕೆಲಸಗಳನ್ನು ಮಾಡಬಹುದು ಎನಿಸುತ್ತದೆ.

ಮ್ಯಾಗ್‌ಜೀನ್‌ಗಳ ಸೃಜನಾತ್ಮಕ ನೆಲೆಯಲ್ಲಿ ದಲಿತ ಸಂವೇದನೆಯನ್ನು ಮೂಡಿಸುವಂತಹ ಕೃತಿಗಳು ಬರುತ್ತಾ ಇರೋದನ್ನ ನಾವು ಪರಿಗಣಿಸಬೇಕು ಅನಿಸುತ್ತೆ. ಏಕೆಂದರೆ ಮ್ಯಾಗ್‌ಜೀನ್‌ಗಳಲ್ಲಿ ಬರುತ್ತಿರುವ ಅನೇಕ ಕಥೆ, ಕವನಗಳಲ್ಲಿ ದಲಿತ ಪ್ರಜ್ಞೆ ಸೃಜನಾತ್ಮಕ ನೆಲೆಯಲ್ಲಿ ವ್ಯಕ್ತವಾಗುತ್ತಾ ಇದೆ. ಅವು ದಲಿತ ಸಂವೇದನೆಯನ್ನು ಮೂಡಿಸುವಂತಹವುಗಳಾಗಿರುತ್ತವೆ. ಹನೀಫ್ ಅವರು ಮಾತನಾಡುತ್ತಾ ಹೇಳಿದರು : ಸಿನಿಮಾ ರಂಗದಲ್ಲಿ ದಲಿತ ಸಂವೇದನೆ ಮೂಡಿಲ್ಲ ಅಂತ. ಆಗ ನನಗೆ ತಕ್ಷಣ ನೆನಪಾದದ್ದು ‘ಚೋಮನ ದುಡಿ’ ಚಿತ್ರ. ಅದು ದಲಿತ ಭಾಷೆಯಲ್ಲಿ ಮೂಡಿಲ್ಲದೇ ಇದ್ದರೂ ದಲಿತ ಬದುಕನ್ನು ಮೂಡಿಸುವಂತಹ ಒಂದು ಪ್ರಯತ್ನವಾಗಿ ಕನ್ನಡದಲ್ಲಿ ಬಿಂದಿದೆ. ರಂಗಭೂಮಿಯನ್ನು ಪರಿಗಣಿಸುವುದಾದರೆ ದೇವನೂರ ಮಹಾದೇವರ ‘ಒಡನಾಳ’ ರಂಗಭೂಮಿ ಪರಿಭಾಷೆಗೆ ಹೊಸದೊಂದು ವ್ಯಾಖ್ಯಾನವನ್ನೇ ನೀಡಿತು.

ನಮ್ಮ ದೇಶದಲ್ಲಿ ನೂರು ಕೋಟಿ ಜನರಿದ್ದಾರೆ. ಆದರೂ ಏಕೆ ದಲಿತ ಭಾಷೆ, ದಲಿತ ಸಂವೇದನೆ ಅನ್ನೋದು ಮೂಡ್ತಿಲ್ಲ ಅನ್ನುವ ವಿಚಾರ ಪ್ರಸ್ತಾಪವಾಯಿತು. ಬಹುಶಃ ಇದಕ್ಕೆ ಕಾರಣ ಬಡತನ, ನಿರಕ್ಷತೆ. ದಲಿತ ಭಾಷೆ, ದಲಿತ ಸಂವೇದನೆ ಮಾಧ್ಯಮಗಳಲ್ಲಿ ಮೂಡದೇ ಇರುವುದಕ್ಕೆ ಇವು ಕಾರಣವಾಗಿರಬಹುದು. ಎಲೆಕ್ಟ್ರಾನಿಕ್ ಮಾಧ್ಯಮ ಪೂರ್ತಿ ಅರ್ಬನ್ ಓರಿಯೆಂಟೆಡ್, ನಗರ ಕೇಂದ್ರಿತವಾಗಿವೆ. ಅವು ಜಾಹಿರಾತುಗಳ ನಿಯಂತ್ರಣದಲ್ಲಿರು‌ತ್ತವೆ. ಅದರ ಜೊತೆಗೆ ಮುದ್ರಣ ಮಾಧ್ಯಮ ಸ್ಪರ್ಧಿಸಬೇಕಾಗಿರುವುದರಿಂದ ಈ ಸ್ಪರ್ಧಾತ್ಮಕ ಯುಗದಲ್ಲಿ ಇಂತಹದೊಂದು ಪರಿಸ್ಥಿತಿ ಸೃಷ್ಟಿಯಾಗಿದೆ. ಇಂತಹ ಸಂದರ್ಭದಲ್ಲೂ ಪತ್ರಕರ್ತ ಪಿ.ಸಾಯಿನಾಥ್ ಅಂತಹವು ‘ದಿ ಹಿಂದೂ’ ಪತ್ರಿಕೆಯಲ್ಲಿ ಸಾಕಷ್ಟು ದಲಿತ ಸಂಬಂಧಿ ರಿಪೋರ್ಟ್‌‌ಗಳನ್ನು ಮಾಡುತ್ತಾ ಇದ್ದಾರೆ. ಕನ್ನಡದಲ್ಲೂ ಈ ರೀತಿಯ ಸಂವೇದನಾಶೀಲ ಬರಹಗಳು ಬರಬೇಕಿದೆ. ಎಲ್ಲೋ ಕೆಲವರಾದರು ದಲಿತರು ಮಾಧ್ಯಮ ಸಂಸ್ಥೆಗಳಲ್ಲಿ ನಿರ್ಧಾರ ಕೈಗೊಳ್ಳುವಂತಹ ಹುದ್ದೆಗಳಿಗೆ ಬಂದರೆ ನಾಯಕತ್ವವನ್ನು ತೆಗೆದುಕೊಂಡು ಆ ಸಂವೇದನಾಶೀಲ ಬರಹಗಳು ಬರಬೇಕಿವೆ. ಎಲ್ಲೋ ಕೆಲವರಾದರು ದಲಿತರು ಮಾಧ್ಯಮ ಸಂಸ್ಥೆಗಳಲ್ಲಿ ನಿರ್ಧಾರ ಕೈಗೊಳ್ಳುವಂತಹ ಹುದ್ದೆಗಳಿಗೆ ಬಂದರೆ ನಾಯಕತ್ವವನ್ನು ತೆಗೆದುಕೊಂಡು ಆ ಸಂವೇದನಾಶೀಲತೆಯನ್ನು ಮೂಡಿಸಲು ನೆರವಾಗಬೇಕು. ಬಹುಶಃ ಈ ನಿಟ್ಟಿನಲ್ಲಿ ಕೆಲಸಗಳಾಗಬೇಕಿವೆ. ಪಿ.ಸಾಯಿನಾಥ್ ಅವರು ಒಂದೆಡೆ ಹೇಳುತ್ತಾರೆ: ‘ಈಗೇನಾಗಿದೆ ಪರಿಸ್ಥಿತಿ ಅಂದರೆ ‘ಈಟಿಂಗ್ ಔಟ್ ಜರ್ನಲಿಸ್ಟ್’ ಸಹ ಬಂದಿದ್ದಾರೆ. ಈಗ ನಗರ ಕೇಂದ್ರಿತ ಸಪ್ಲಿಮೆಂಟ್‌ಗಳು ಬರುತ್ತಾ ಇರುವುದರಿಂದ ಯಾವ ಹೋಟೆಲ್‌ನಲ್ಲಿ ಯಾವ ತಿನಿಸು ಚೆನ್ನಾಗಿರ್ತದೆ ಎಂದು ಬರೆಯೋದು ಕೂಡ ಮುಖ್ಯವಾಗಿರುತ್ತದೆ ನಗರ ಓದುಗರಿಗೆ. ಹೀಗಾಗಿಯೇ ಅದರಲ್ಲೇ ಸ್ಪೆಷಲೈಸೇಷನ್ ಇರುವವರು ಈಟಿಂಗ್ ಔಟ್ ಜರ್ನಲಿಸ್ಟ್ ಅಂತ ಆಗುತ್ತಾರೆ. ಆಮೇಲೆ ಫ್ಯಾಷನ್ ಜರ್ನಲಿಷ್ಟ್ಸ್ ಎನ್ನುವ ಹೊಸ ಪತ್ರಕರ್ತರ ದಂಡೂ ಇದೆ. ಈ ರೀತಿ ಈಗ ನಮ್ಮ ಆದ್ಯತೆಗಳು ಬದಲಾಗಿವೆ.

ಈ ಎಲ್ಲಾ ಒತ್ತಡಗಳ ನಡುವೆ ಭಾರಿ ಜನಸಮುದಾಯವನ್ನು ಹೊಂದಿರುವ ಈ ದಲಿತ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಕಷ್ಟು ಪ್ರಯತ್ನಗಳು ಆಗಬೇಕಾಗಿದೆ ಮತ್ತು ಶಾಸ್ತ್ರೀಯ ಅಧ್ಯಯನಗಳೂ ಆಗಬೇಕಾಗಿದೆ.