ವ್ಯಕ್ತಿಗಳ ಜೈವಿಕ ಮತ್ತು ಸಾಮಾಜಿಕ ಲಕ್ಷಣಗಳಿಗೆ ಅನುಗುಣವಾಗಿ, ಅವರ ಭಾಷಿಕ ವರ್ತನೆಗಳು ರೂಪುಗೊಳ್ಳುತ್ತವೆ. ಗಂಡು-ಹೆಣ್ಣು ಎಂಬ ಲಿಂಗಭಿನ್ನತೆ, ಕಿರಿಯ-ಹಿರಿಯ ಎಂಬ ವಯಸ್ಸಿನ ಭಿನ್ನತೆ. ದಪ್ಪ-ಸಣ್ಣ ಎಂಬ ದೇಹದ ಆಕಾರದಲ್ಲಿನ ಭಿನ್ನತೆ, ಉದ್ದ-ಕುಳ್ಳು ಎಂಬ ಎತ್ತರದಲ್ಲಿನ ಭಿನ್ನತೆ. ಕರಿಯ-ಬಿಳಿಯ-ಕಂದು ಎಂಬ ಮೈಬಣ್ಣದ ಭಿನ್ನತೆಗಳಿಂದ ಕೂಡಿದ ಜೈವಿಕ ಲಕ್ಷಣಗಳು ಮತ್ತು ಜಾತಿ, ಮತ, ಧರ್ಮ, ಪ್ರಾಂತ್ಯ, ಭಾಷೆ, ವಿದ್ಯೆ, ಅಧಿಕಾರ ಹಾಗೂ ಸಂಪತ್ತನ್ನು ಒಳಗೊಂಡ ಸಾಮಾಜಿಕ ಲಕ್ಷಣಗಳು ಮಾತಿನ ಸನ್ನಿವೇಶದಲ್ಲಿ ಭಾಗಿಗಳಾಗುವ ವ್ಯಕ್ತಿಗಳ ನಡುವಣ ಸಾಮಾಜಿಕ ಸಂಬಂಧದ ಸ್ವರೂಪವನ್ನು ನಿರ್ಧರಿಸುವಲ್ಲಿ ಪ್ರಮುಖ ಪ್ರಭಾವವನ್ನು ಬೀರುತ್ತವೆ. ಈ ಎಲ್ಲಾ ಅಂಶಗಳು ಜತೆಗೂಡಿ ಮಾತಿನ ಸನ್ನಿವೇಶದಲ್ಲಿ ಭಾಗಿಗಳಾಗುವವರ ನಡುವೆ ಪರಸ್ಪರ ಬಳಕೆಯಾಗುವ ಮಾತುಗಳು ಯಾವ ರೀತಿಯಲ್ಲಿ ಇರಬೇಕೆಂಬುದನ್ನು ನಿರ್ಧರಿಸುತ್ತವೆ. ಆದುದರಿಂದ ಯಾವುದೇ ವ್ಯಕ್ತಿಯ ಅಥವಾ ಗುಂಪಿನ ಭಾಷಿಕ ವರ್ತನೆಯನ್ನು ಸಮಗ್ರವಾಗಿ ತಿಳಿಯಬೇಕಾದರೆ, ಭಾಷಿಕ ಸಮುದಾಯದಲ್ಲಿ ಆ ವ್ಯಕ್ತಿ ಅಥವಾ ಆ ಗುಂಪು ಪಡೆದಿರುವ ಸಾಮಾಜಿಕ ಸ್ಥಾನ ಯಾವುದು? ಮತ್ತು ಸಾಮಾಜಿಕ ಅಂತಸ್ತಿನ ಸ್ವರೂಪ ಯಾವ ಬಗೆಯಲ್ಲಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಕನ್ನಡ ಭಾಷಿಕ ಸಮುದಾಯದಲ್ಲಿರುವ ದಲಿತರ ಭಾಷಿಕ ವರ್ತನೆಯ ರೀತಿನೀತಿಗಳನ್ನು ತಿಳಿಯಬೇಕಾದರೆ, ದಲಿತರ ಸಾಮಾಜಿಕ ಸ್ಥಾನ ಮತ್ತು ಅಂತಸ್ತಿನ ಸ್ವರೂಪವನ್ನು ಮೊದಲು ವಿಶ್ಲೇಷಿಸಬೇಕು.

ಕನ್ನಡ ಭಾಷಿಕ ಸಮುದಾಯದಲ್ಲಿರುವ ದಲಿತರಲ್ಲಿ ಹೆಚ್ಚಿನವರು ಹಿಂದು ಧರ್ಮಕ್ಕೆ ಸೇರಿದವರಾಗಿದ್ದಾರೆ. ಜಾತಿ ಶ್ರೇಣಿಯಿಂದ ಕೂಡಿದ ಹಿಂದು ಧಾರ್ಮಿಕ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದವರೆಂದು ಪರಿಗಣಿಸಲ್ಪಟ್ಟು, ತಲತಲಾಂತರಗಳಿಂದಲೂ ವಿದ್ಯೆ, ಅಧಿಕಾರ ಮತ್ತು ಸಂಪತ್ತುಗಳಿಂದ ವಂಚಿತರಾಗಿ ಬಡತನ ಮತ್ತು ಅಪಮಾನದ ಬಾಳನ್ನು ನಡೆಸುತ್ತಿದ್ದರು. ಆದರೆ ಕಳೆದ ಐವತ್ತು ವರ್ಷಗಳಲ್ಲಿ ದಲಿತರ ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಪ್ರಗತಿಪರವಾದ ಬದಲಾವಣೆಗಳಾಗುತ್ತಿವೆ. ಇಂತಹ ಬದಲಾವಣೆಗಳಿಗೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಂಭವಿಸಿದ ರಾಜಕೀಯ ಮತ್ತು ಆರ್ಥಿಕ ಘಟನಾವಳಿಗಳು ಕಾರಣವಾಗಿವೆ.

೧೯೫೦ರ ದಶಕದಿಂದ ೨೦೦೬ರವರೆಗೆ ನನ್ನ ಸುತ್ತಮುತ್ತಲಿನ ಪರಿಸರದ ದುಡಿಮೆಯ ನೆಲೆಯಲ್ಲಿ ನಾನು ಕಾಣುತ್ತಾ ಬಂದ ದಲಿತರ, ಅಂದರೆ ಮಂಡ್ಯ ಜಿಲ್ಲೆಯಲ್ಲಿ ಮದ್ದೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ಮತ್ತು ಕನಕಪುರದ ಭೌಗೋಳಿಕ ನೆಲೆಯಲ್ಲಿ ವಾಸಿಸುತ್ತಿರುವ ದಲಿತರ ಸಾಮಾಜಿಕ ಬದುಕಿನ ವಿವರಗಳನ್ನು ಈ ಲೇಖನದಲ್ಲಿ ನಿರೂಪಿಸುತ್ತಾ, ಆ ಮೂಲಕ ಅವರ ಭಾಷಿಕ ವರ್ತನೆಗಳಿಗೆ ಕಾರಣವಾದ ಸಂಗತಿಗಳನ್ನು ವಿಶ್ಲೇಷಣೆ ಮಾಡಲು ಪ್ರಯತ್ನಿಸಿದ್ದೇನೆ.

೧೯೫೦ರ ದಶಕದಲ್ಲಿ ದಲಿತರ ಜೀವನ ಎಲ್ಲಾ ರೀತಿಯಿಂದಲೂ ಅತ್ಯಂತ ಕಷ್ಟಕರವಾಗಿತ್ತು. ದಲಿತರಲ್ಲಿ ಬಹುತೇಕ ಮಂದಿ ಶೂದ್ರವರ್ಗಕ್ಕೆ ಸೇರಿದ ಜಮೀನ್ದಾರರ ಮನೆಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದರು. “ಮದಗಡ”ವೆಂಬ ಒಂದು ಬಗೆಯ ಹಣಕಾಸು ವ್ಯವಹಾರ ಆ ಕಾಲದಲ್ಲಿ ಚಾಲ್ತಿಯಲ್ಲಿತ್ತು.

ಯಾವುದೇ ವ್ಯಕ್ತಿಯು ತಾನು ಪಡೆದ ಸಾಲದ ಮೇಲಣ ವಾರ್ಷಿಕ ಬಡ್ಡಿಯ ತೀರುವಳಿಗಾಗಿ, ಸಾಲಗಾರನ ಮನೆಯಲ್ಲಿ ವರ್ಷವಿಡೀ ದುಡಿಯಬೇಕಿತ್ತು. ಸಾಲದ ಮೂಲಕ ಈ ರೀತಿ ಒತ್ತೆಯಿಟ್ಟುಕೊಂಡ ಸಾಲಗಾರನು ದುಡಿಮೆಯ ಅವಧಿಯಲ್ಲಿ ತನ್ನ ಜೀತದಾಳಿಗೆ ಮನೆಯಲ್ಲೇ ಉಟ ಹಾಕುತ್ತಿದ್ದ ಮತ್ತು ವರ್ಷಕ್ಕೆ ಎರಡು ಜತೆ ಬಟ್ಟೆಯನ್ನು ನೀಡುತ್ತಿದ್ದ. ಜೀತಗಾರನು ತನ್ನ ಕುಟುಂಬದ ಕಷ್ಟಕಾರ್ಪಣ್ಯಗಳ ನಿರ್ವಹಣೆಗೆಂದು ಆಗಾಗ್ಗೆ ಯಜಮಾನನಿಂದ ಮಾಡುತ್ತಿದ್ದ ಕೈಸಾಲದಿಂದ “ಮದಗಡ”ದ ಹೊರೆಯು ಮತ್ತಷ್ಟು ದೊಡ್ಡದಾಗುತ್ತಿತ್ತು. ಈ ರೀತಿ ಬೆಳೆಯುತ್ತಿದ್ದ ಸಾಲದ ಪರಿಣಾಮದಿಂದ ತಾತ-ಅಪ್ಪ-ಮಗ-ಮೊಮ್ಮಗ ಎಲ್ಲರೂ ಜೀತದಾಳುಗಳಾಗಿಯೇ ದುಡಿಯುತ್ತಿದ್ದರು. ದಲಿತ ಕುಟುಂಬದ ಹೆಂಗಸರು ಮತ್ತು ಕೆಲವು ವಯಸ್ಸಾದ ಗಂಡಸರು ದಿನಗೂಲಿಗೆ ಹೋಗಿ, ಅಲ್ಪ ಮೊತ್ತದ ಹಣವನ್ನು ಅಥವಾ ದಿನಸಿಯನ್ನೋ ಗಳಿಸುತ್ತಿದ್ದರು. ಈ ರೀತಿ ಅನ್ನ, ಬಟ್ಟೆ ಮತ್ತು ವಸತಿಗಳೆಲ್ಲಕ್ಕೂ ದಲಿತರು ಮೇಲು ಜಾತಿಯವರನ್ನೇ ಬಹುತೇಕವಾಗಿ ಅವಲಂಬಿಸಿದ್ದರು. ದುಡಿಮೆಯ ನೆಲೆಯಲ್ಲಿ ಅಂದು ನಾನು ಕಾಣುತ್ತಿದ್ದ ದಲಿತರು ತುಂಬಾ ನಿರ್ಗತಿಕರಾಗಿದ್ದರು ಮತ್ತು ದೀನರಾಗಿದ್ದರು. ಸಾಮಾಜಿಕವಾಗಿ ದಲಿತರ ಸ್ಥಾನ ಬಹಳ ಕೆಳದರ್ಜೆಯದಾಗಿತ್ತು. ಸಾಮಾಜಿಕ ಅಂತಸ್ತಿನಲ್ಲಿ ದಲಿತರಿಗೆ ಯಾವೊಂದು ಹಂತವು ಇರಲಿಲ್ಲ. ಆದುದರಿಂದಲೇ ಜಮೀನ್ದಾರರ ಮತ್ತು ಮೇಲುಜಾತಿಯವರ ಜತೆಯಲ್ಲಿ ನಡೆಯುತ್ತಿದ್ದ ಮಾತಿನ ಸನ್ನಿವೇಶಗಳಲ್ಲಿ ಬಹಳ ಕೆಳಧ್ವನಿಯಲ್ಲಿ ಮಾತನಾಡುತ್ತಿದ್ದರು. ಮೇಲುಜಾತಿಯವರ ಅಥವಾ ಮೇಲು ವರ್ಗದವರ ಯಾವುದೇ ವಿಧವಾದ ಅಟ್ಟಹಾಸದ ಅಥವಾ ಅಹಂಕಾರದ ಮಾತುಗಳಿಗೆ ಎದುರಾಗಿ ಏನನ್ನೂ ನುಡಿಯದೆ ಸುಮ್ಮನಾಗುತ್ತಿದ್ದರು. ತಮ್ಮನ್ನು ಕುರಿತು ಬಳಕೆಯಾಗುತ್ತಿದ್ದ ಏಕವಚನದ ಮಾತುಗಳಿಗೆ ಪ್ರತಿಯಾಗಿ ಬಹುವಚನವನ್ನೇ ಮೇಲುಜಾತಿ/ವರ್ಗದವರಿಗೆ ಬಳಸುತ್ತಿದ್ದರು. ಮೇಲುಜಾತಿ/ವರ್ಗಕ್ಕೆ ಸೇರಿದ ಹುಡುಗನು ಕೂಡ, ದಲಿತರ ಗುಂಪಿಗೆ ಸೇರಿದ ಹಿರಿಯ ವಯಸ್ಸಿನ ವ್ಯಕ್ತಿಯನ್ನು ಏಕವಚನದಲ್ಲಿ ಸಂಬೋಧಿಸು‌ತ್ತಿದ್ದನು. ದಲಿತರು ಬಡತನ ಮತ್ತು ಅಪಮಾನದ ಬಾಳನ್ನು ಒಪ್ಪಿಕೊಂಡವರಂತೆ ತಲೆಬಾಗಿ ಬಾಳುತ್ತಿದ್ದರು.

ದೇಶಕ್ಕೆ ಸ್ವಾತಂತ್ರ್ಯ ಬಂದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರಕ್ಕೆ ಬಂದಿದ್ದರೂ, ಊಳಿಗಮಾನ್ಯ ವ್ಯವಸ್ಥೆಯ ಆರ್ಥಿಕ ವ್ಯವಹಾರಗಳಲ್ಲಿ ದಲಿತರ ಬಾಳು ಎಂದಿನಂತೆಯೇ ಸಾಗುತ್ತಿತ್ತು. ದಲಿತರ ಪಾಲಿಗೆ ಸ್ವಾತಂತ್ರ್ಯದ ಫಲ ಯಾವ ರೀತಿಯಿಂದಲೂ ದಕ್ಕುವಂತಿರಲಿಲ್ಲ. ೧೯೫೦-೬೦ರ ದಶಕದಲ್ಲಿ ರಾಜ್ಯ ಸರ್ಕಾರವು ತನ್ನ ವಶದಲ್ಲಿದ್ದ ಸರ್ಕಾರಿ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಅಲ್ಲಲ್ಲಿ ದಲಿತರಿಗೆ ದರಖಾಸ್ತಿನ ಮೂಲಕ ಹಂಚಿಕೊಟ್ಟು, ದಲಿತ ವರ್ಗದಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಮೂಡಿಸಲು ಪ್ರಯತ್ನಿಸಿತು. ಆದರೆ ಮೇಲುಜಾತಿ ಜಮೀನ್ದಾರರ ಕುತಂತ್ರಗಳಿಂದಾಗಿ, ಕೆಲವೇ ವರ್ಷಗಳಲ್ಲಿ ದಲಿತರಿಗೆ ಹಂಚಿಕೊಟ್ಟಿದ್ದ ಸರ್ಕಾರಿ ಭೂಮಿಯು ಶ್ರೀಮಂತ ಜಮೀನ್ದಾರರ ಪಾಲಾಯಿತು.

ತಾಲ್ಲೂಕು ಕೇಂದ್ರದಲ್ಲಿದ್ದ ದಲಿತರಲ್ಲಿ ಕೆಲವರು ಸರ್ಕಾರದ ಕಛೇರಿಗಳಲ್ಲಿ ಸಣ್ಣ-ಪುಟ್ಟ. ಹುದ್ದೆಗಳಲ್ಲಿದ್ದರು. ಇಂತಹವರ ಮಕ್ಕಳು ಮಾತ್ರ ಶಾಲೆಗಳಿಗೆ ಬರುತ್ತಿದ್ದರು. ಸಾರ್ವಜನಿಕ ನೆಲೆಯಲ್ಲಿನ ಖಾಸಗಿ ಉದ್ಯಮಗಳಾದ ವ್ಯಾಪಾರ-ವಹಿವಾಟುಗಳನ್ನು ನಡೆಸುವಷ್ಟು ಆರ್ಥಿಕ ಶಕ್ತಿಯಾಗಲಿ ಅಥವಾ ಅದಕ್ಕೆ ಅವಕಾಶಗಳನ್ನು ಕಲ್ಪಿಸಿಕೊಡುವ ಸಾಮಾಜಿಕ ವ್ಯವಸ್ಥೆಯಾಗಲಿ ದಲಿತರ ಪಾಲಿಗೆ ಇರಲಿಲ್ಲವಾದುದರಿಂದ ದಲಿತರು ಮತ್ತು ಹಿಂದು ಧರ್ಮದ ಇತರ ಜಾತಿಯ ಜನಗಳ ನಡುವೆ ಯಾವುದೇ ಬಗೆಯ ಮಾತಿನ ಸನ್ನಿವೇಶಗಳು ಹೆಚ್ಚಾಗಿ ಸಂಭವಿಸುತ್ತಿರಲಿಲ್ಲ. ದಲಿತರು ವಾಸಿಸುವ ಕೇರಿಗಳು ಮಾತ್ರ ಊರುಗಳ ಹೊರಗಿಲಿಲ್ಲ. ಕನ್ನಡ ಭಾಷಿಕ ಸಮುದಾಯದಲ್ಲಿ ನಡೆಯುತ್ತಿದ್ದ ಪ್ರಮುಖವಾದ ಸಾಮಾಜಿಕ ವ್ಯವಹಾರಗಳಿಂದಲೇ ದಲಿತರು ಹೊರಗಿದ್ದರು.

೧೯೭೨ರಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ಪಡೆದ ಡಿ.ದೇವರಾಜ ಅರಸು ಅವರು ೧೯೭೫ರಲ್ಲಿ ಜಾರಿಗೆ ತಂದ ಋಣ ಪರಿಹಾರ ಮತ್ತು ಜೀತಪದ್ಧತಿ ನಿರ್ಮೂಲನದ ಕಾಯಿದೆಗಳು ಹಾಗೂ ಗರೀಬಿ ಹಠಾವೊ ಬಡಾವಣೆ ನಿರ್ಮಾಣದ ಯೋಜನೆಗಳು ದಲಿತರ ಪಾಲಿಗೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಆತ್ಮಗೌರವವನ್ನು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ತಂದು ಕೊಟ್ಟವು. ಹಳ್ಳಿಗಳಲ್ಲಿ ಬಹು ಹತ್ತಿರದಿಂದ ದಲಿತರ ಬದುಕಿನ ಆಗುಹೋಗುಗಳನ್ನು ನೋಡುತ್ತಿದ್ದವರಿಗೆ ಈ ಕಾಯಿದೆಗಳು ದಲಿತರ ಬದುಕಿನಲ್ಲಿ ಎಂತಹ ಮಹತ್ತರವಾದ ಬದಲಾವಣೆಗಳನ್ನು ಉಂಟುಮಾಡಿದವು ಎಂಬುದು ಸ್ಪಷ್ಟವಾಗಿ ಗೋಚರಿಸಿತು.

“ಮದಗಡ”ವೆಂಬ ಸಾಲದ ಬಲೆಯಲ್ಲಿ ತಲತಲಾಂತರಗಳಿಂದಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಂಧಿತರಾಗಿದ್ದ ದಲಿತರು ಋನ ಪರಿಹಾರ ಕಾಯಿದೆಯ ಫಲವಾಗಿ ಬಿಡುಗಡೆಯನ್ನು ಪಡೆದು ಸ್ವತಂತ್ರರಾದರು. ಜೀತಪದ್ಧತಿ ನಿರ್ಮೂಲನದಿಂದ ದಲಿತರು ಜಮೀನ್ದಾರರ ಮತ್ತು ಶ್ರೀಮಂತರ ಕಪಿಮುಷ್ಟಿಯಿಂದ ಹೊರಬಂದು, ತಮ್ಮ ಇಚ್ಛೆ ಬಂದ ಕಡೆ ದುಡಿದು ಬಾಳುವ ಅವಕಾಶವನ್ನು ಪಡೆದರು. ಗರೀಬಿ ಹಠಾವೊ ಬಡಾವಣೆಗಳಲ್ಲಿ ನಿವೇಶನಗಳನ್ನು ಪಡೆದು, ಸರ್ಕಾರದ ನೆರವಿನಿಂದ ಕಟ್ಟಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸತೊಡಗಿದ ದಲಿತರು. ಮೇಲುಜಾತಿಯ ಇತರ ಜನಗಳಂತೆ ಸಮಾಜದಲ್ಲಿ ಆತ್ಮಗೌರವದಿಂದ ತಲೆಯೆತ್ತಿ ನಡೆಯುವಂತಾದರು. ಇದೇ ಅವಧಿಯಲ್ಲಿ ಸರ್ಕಾರದ ವತಿಯಿಂದ ಕುರಿ-ಕೋಳಿ-ಹಸು-ಎಮ್ಮೆ ಸಾಕಾಣಿಕೆಗಾಗಿ ನೀಡಿದ ಅಲ್ಪಾವಧಿಯ ಸಾಲದ ಯೋಜನೆಗಳು ದಲಿತರ ದೈನಂದಿನ ಜೀವನದಲ್ಲಿ ಆರ್ಥಿಕ ಸ್ವಾವಲಂಬನೆಯನ್ನು ಉಂಟು ಮಾಡಿದವು.

ಇದೆಲ್ಲದರ ಪರಿಣಾಮದಿಂದಾಗಿ ದಲಿತರ ಮಕ್ಕಳು ಜೀತದ ಉರುಳಿನಿಂದ ಪಾರಾಗಿ, ಶಾಲೆಗಳ ಕಡೆಗೆ ಅಡಿಯಿಡತೊಡಗಿದರು. ನಾನು ಹುಡುಗನಾಗಿದ್ದಾಗ ಹಳ್ಳಿಗಳಲ್ಲಿದ್ದ ನನ್ನ ಓರಿಗೆಯ ದಲಿತ ಮಕ್ಕಳು ಜೀತದಾಳುಗಳಾಗಿ ದುಡಿಯುತ್ತಿದ್ದರೆ, ಈಗ ನನ್ನ ಮಗನ ಓರಿಗೆಯ ಬಹುತೇಕ ದಲಿತ ಮಕ್ಕಳು ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ರೀತಿ ದಲಿತರು ೨೦ನೆಯ ಶತಮಾನದ ಅಂತ್ಯಭಾಗದಲ್ಲಿ ಪಡೆದುಕೊಂಡ ಆರ್ಥಿಕ ಸ್ವಾವಲಂಬನೆ ಮತ್ತು ಶಿಕ್ಷಣದ ಸೌಲಭ್ಯದಿಂದ, ದಲಿತರ ಸಾಮಾಜಿಕ ಸ್ಥಾನ ಮತ್ತು ಸಾಮಾಜಿಕ ಅಂತಸ್ತಿನಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳಾಗಿವೆ. ಈಗ ದಲಿತರು ಹಾಕಿಕೊಳ್ಳುತ್ತಿರುವ ಉಡುಗೆ-ತೊಡುಗೆಗಳು ಅವರ ಜೀವನಮಟ್ಟ ಏರುತ್ತಿರುವುದರ ಸಂಕೇತವಾಗಿವೆ. ವಿದ್ಯಾವಂತ ದಲಿತರು ಬಹುಬಗೆಯ ದುಡಿಮೆಯ ಕ್ಷೇತ್ರಗಳನ್ನು ಪ್ರವೇಶಿಸುತ್ತಿದ್ದಾರೆ. ದುಡಿಮೆಯ ನೆಲೆಗಳಲ್ಲಿ ದಲಿತ ವರ್ಗಕ್ಕೆ ಸೇರಿದ ವ್ಯಕ್ತಿಗಳೊಡನೆ ಮೇಲುಜಾತಿಯ ಜನರು ಮೊದಲಿನ ಹಾಗೆ ಅಹಂಕಾರದ ಅಥವಾ ತಿರಸ್ಕಾರದ ನುಡಿಗಳನ್ನು ಬಳಸುವುದಿಲ್ಲ.

ದಲಿತರನ್ನು ಜಾತಿಯ ಹೆಸರಿನಿಂದ ಕರೆದರೆ ಅಥವಾ ನಿಂದಿಸಿದರೆ, ಕಾನೂನಿನ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭಯ ಮೇಲು ಜಾತಿಯವರಲ್ಲಿದ್ದರೆ, ಜಾತಿ ನಿಂದನೆಯ ಮೂಲಕ ತಮ್ಮನ್ನು ಅವಮಾನಿಸಿದರೆ, ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸಬೇಕೆಂಬ ದಿಟ್ಟತನ ದಲಿತರಲ್ಲಿದೆ. ಕಳದೆ ಇಪ್ಪತ್ತೈದು ವರ್ಷಗಳಲ್ಲಿ ದಲಿತರ ಸಾಮಾಜಿಕ ವರ್ತನೆಗಳು ಮತ್ತು ಭಾಷಿಕ ವರ್ತನೆಗಳು ಬಹುಮಟ್ಟಿಗೆ ಎಲ್ಲಾ ರೀತಿಯಿಂದಲು ಸಾಮಾಜಿಕ ವ್ಯವಹಾರಗಳಲ್ಲಿ ಸಮಾನತೆಯನ್ನು ಪಡೆಯುವತ್ತ ತುಡಿಯುತ್ತಿವೆ. ವಿದ್ಯಾವಂತರಾದ ದಲಿತರನ್ನು ಮೇಲುಜಾತಿಯವರು ಬಹುವಚನದಲ್ಲಿ ಸಂಬೋಧಿಸುತ್ತಾರೆ. ಹಳ್ಳಿಗಳಲ್ಲಿ ಅವಿದ್ಯಾವಂತರಾದ ದಲಿತರನ್ನು ಈಗಲೂ ಮೇಲುಜಾತಿಯ ಕೆಲವರು ಏಕವಚನದಲ್ಲಿ ಮಾತನಾಡಿಸದರೂ, ಅದರಲ್ಲಿ ಜಾತಿ ಅಹಂಕಾರದ ಮೇಲರಿಮೆಯ ಭಾವ ಹೆಚ್ಚಾಗಿ ಕಂಡು ಬರುವುದಿಲ್ಲ. ಸಾಮಾಜಿಕ ವ್ಯವಹಾರದ ಅನೇಕ ಬಗೆಯ ಮಾತಿನ ಸನ್ನಿವೇಶಗಳಲ್ಲಿ ದಲಿತರು ಮೇಲು ಜಾತಿಯವರೊಡನೆ ವ್ಯವಹರಿಸುವಾಗ, ಜಾತಿಯ ಕಾರಣದಿಂದ ಉಂಟಾಗುತ್ತಿದ್ದ ಕೀಳರಿಮೆಯ ಭಾವನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಿ, ಸಮಾನವಾದ ನೆಲೆಯಲ್ಲಿ ಭಾಷೆಯನ್ನು ಬಳಸುತ್ತಿದ್ದಾರೆ.

ಇತ್ತೀಚಿಗೆ ನಾನು ನಮ್ಮ ಹಳ್ಳಿಗೆ ಹೋಗಿದ್ದಾಗ ಮೇಲು ಜಾತಿಗೆ ಸೇರಿದ ವ್ಯಕ್ತಿಯೊಬ್ಬರೊಡನೆ ಲೋಕಾಭಿರಾಮನಾಗಿ ಮಾತನಾಡುತ್ತ, ಈಗ ನಮ್ಮೂರಿನ ದಲಿತರ ಜೀವನಮಟ್ಟ ಹೇಗಿದೆ ಎಂದು ಕೇಳಿದಾಗ, ಅವರು ಕೊಟ್ಟ ಉತ್ತರ ಈ ರೀತಿ ಇತ್ತು.

“ಈಗ ಅವರೇನಪ್ಪ ! ಚೆಂದಾಗವ್ರೆ. ಅವರ ಮಕ್ಕು-ಮರಿಯೆಲ್ಲ ಇದ್ಯಾ-ಬುದ್ಧಿ ಕಲಿತುಕೊಂಡು ಸರ್ಕಾರಿ ನೌಕರಿಗೆ ಸೇರ್ಕೊಂಡು ಒಳ್ಳೇ ಅನುಕೂಲವಾಗವ್ರೆ. ಈಗ ಅವರ ಮೊದಲಿನಂಗೆ ಏನ್ಲಾ.. ಬಾರ್ಲ.. ಅಂತ ಮಾತಾಡ್ಸುಕೆ ಆದದೇನಪ್ಪ? ಹಂಗ್ ನೋಡುದ್ರೆ. ಈಗ ಅವರೇ ಗೌಡರು, ನಾವೇ ದಲಿತರು!” – ಈ ಮಾತುಗಳ ಅಂತರಾಳದಲ್ಲಿ ದಲಿತರ ಪ್ರಗತಿಯ ಬಗೆಗಿನ ಅಸೂಯೆಯ ಛಾಯೆ ನೆಲಸಿದ್ದರೂ, ದಲಿತರ ಸಾಮಾಜಿಕ ವರ್ತನೆ ಮತ್ತು ಭಾಷಿಕ ವರ್ತನೆಗಳು ಪ್ರಗತಿಪರವಾದ ರೀತಿಯಲ್ಲಿ ಬದಲಾಗುತ್ತಿರುವುದನ್ನು ಈ ನುಡಿಗಳು ಸೂಚಿಸುತ್ತಿವೆ.