‘ದಲಿತರು, ಭಾಷೆ ಮತ್ತು ಸಮಾಜಎಂಬ ಗಂಭೀರ ವಿಷಯದ ಬಗ್ಗೆ ಈ ಮೂರರ ನಡುವಿನ ಸಂಬಂಧದ ಬಗ್ಗೆ ಪತ್ರಿಕೋದ್ಯಮ ಅಥವಾ ಸಮೂಹ ಮಾಧ್ಯಮ ಎಂದೂ ಗಂಭೀರವಾಗಿ ಆಲೋಚನೆ ಮಾಡಿಲ್ಲ. ದಲಿತ ಸಂವೇದನೆಯ ದೃಷ್ಟಿಯಿಂದ ಮಾಧ್ಯಮದಲ್ಲಿ ಭಾಷೆಯ ಬಳಕೆಯನ್ನು ಕುರಿತು ನಾವು ಹಲವು ಸ್ತರಗಳಲ್ಲಿ ಆಲೋಚಿಸುವ ಅಗತ್ಯವಿದೆ.

ಸಾಹಿತ್ಯ ಹಾಗೆ ಪತ್ರಿಕೋದ್ಯಮವೂ ಅಕ್ಷರ ವ್ಯವಸಾಯವೇ ಆದರೂ ಸಾಹಿತ್ಯದಲ್ಲಿ ಭಾಷೆಗಿರುವ ಮಹತ್ವ ಪತ್ರಿಕೋದ್ಯಮದಲ್ಲಿ ಕಾಣುವುದಿಲ್ಲ. ಆ ಹೊತ್ತಿನ ವೃತ್ತಾಂತವನ್ನು ಆ ಹೊತ್ತು ಪತ್ರಿಕೆಯನ್ನು ಕೈಗೆತ್ತಿಕೊಳ್ಳುವ ಜನರಿಗೆ ಎಷ್ಟು ಬೇಕೋ ಎಷ್ಟು ಮುಟ್ಟಿಸುವುದೇ ಮುಖ್ಯವಾದ್ದರಿಂದ ಅಕ್ಷರ ಅಥವಾ ಭಾಷೆಯ ಸಾಮಾಜಿಕ ಹಿನ್ನೆಲೆ ಅಲ್ಲಿ ಗಮನಕ್ಕೆ ಬರುವುದಿಲ್ಲ. ಪತ್ರಿಕೆಯದು ಅವಸರದ ಬರವಣಿಗೆ ಆಗಿರುವುದರಿಂದ ಅದರಲ್ಲಿ ಭಾಷೆ ಹೇಗಿರಬೇಕು ಅನ್ನುವುದಕ್ಕಿಂತ ಎಷ್ಟು ಸಾಧ್ಯವೋ ಅಷ್ಟು ವಿವರಗಳನ್ನು, ಮಾಹಿತಿಯನ್ನು ಕಡಿಮೆ ಸ್ಥಳದಲ್ಲಿ ತುಂಬುವುದು ಹೇಗೆ ಅನ್ನುವ ಆತಂಕವೇ ಮೇಲುಗೈ ಪಡೆಯುತ್ತದೆ. ಇದು ಸುದ್ದಿಗಳ ವರದಿಗಳ ಬರವಣಿಗೆಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಪತ್ರಿಕೆಗಳಲ್ಲಿ ಬರು ಲೇಖನಗಳು, ನುಡಿಚಿತ್ರಗಳ ಭಾಷೆಯಲ್ಲಿ ಮಾತ್ರ ನಯನಾಜೂಕು ಮತ್ತು ಪ್ರಜ್ಞಾಪೂರ್ವಕ ಎಚ್ಚರ ಕಾಣುತ್ತದೆ.

ಸುದ್ದಿ ಮತ್ತು ವರದಿಗಳ ಬರವಣಿಗೆಯನ್ನು ಕುರಿತು ಚರ್ಚಿಸುವಾಗ, ಪತ್ರಿಕೆಗಳಲ್ಲಿ ಕಾಣುವುದು ಭಾಷೆಯ ಶಿಷ್ಟರೂಪ ಎಂಬುದನ್ನು ಮರೆಯಬಾರದು. ಪ್ರತಿಯೊಂದು ಪತ್ರಿಕೆಗೂ ಅದರದೇ ಆದ ಬರವಣಿಗೆಯ ಶೈಲಿ ಮತ್ತು ಸುದ್ದಿಯನ್ನು ‘ಪ್ರೆಸೆಂಟ್’ ಮಾಡುವ ಅಂದರೆ ಮುಂದಿಡುವ ವಿಧಾನ ಇದ್ದೇ ಇರುತ್ತದೆ. ಹಿಂದೆ ಒಂದು ಪತ್ರಿಕೆಯಲ್ಲಿ ಕೆಲಸ ಮಾಡುವ ಎಲ್ಲಾ ಪತ್ರಕರ್ತರೂ ಇದನ್ನು ಚಾಚೂ ತಪ್ಪದೆ ಪಾಲಿಸುವ ಪರಿಪಾಠ ಇತ್ತು. ಈಗ ಅದು ಬದಲಾಗುತ್ತಿದೆ. ಕೆಲವರು ಹೀಗಳೆಯುವಂತೆ ಪತ್ರಿಕೆಗಳ ಭಾಷೆ ‘ಕೆಟ್ಟುಕೆರ’ ಹಿಡಿಯುತ್ತಿದೆ. ಆದರೂ ಒಟ್ಟಾರೆ ಪತ್ರಿಕೆಯ ಭಾಷೆಗೆ ಒಂದು ಏಕರೂಪತೆ ಇರುತ್ತದೆ. ಆದ್ದರಿಂದ ಸುದ್ದಿಯಲ್ಲಿ ದಲಿತರೂ ಸೇರಿ ಯಾವುದೇ ಸಾಮಾಜಿಕ ವರ್ಗದ ಸಂವೇದನೆ ಕಾಣುವುದು, ಅವರಿಗೆ ವಿಶಿಷ್ಟವಾದ ಭಾಷೆಯ ಬಳಕೆ ಕಾಣುವುದು ಅಪರೂಪ. ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಕಾಣುವುದು ಪತ್ರಿಕಾ ಶೈಲಿಯ ಪತ್ರಿಕಾ ಭಾಷೆ.

ಪತ್ರಿಕಾ ಭಾಷೆ ಯಾವ ಜನವರ್ಗವನ್ನು ಪ್ರತಿನಿಧಿಸಬೇಕು ಅನ್ನುವುದು ಚರ್ಚಾರ್ಹವಾದ ವಿಚಾರ. ಪತ್ರಿಕೆಗಳ ಮುಂದಿರುವುದು ಓದುಗರು ಮಾತ್ರ. ಅವರು ಯಾವ ಜಾತಿಗೆ, ಯಾವ ಸಾಮಾಜಿಕ ವರ್ಗಕ್ಕೆ ಸೇರಿದವರು ಅನ್ನುವುದು ಮುಖ್ಯವಾಗುವುದಿಲ್ಲ. ಓದುಗರು ನಮ್ಮ ಎಲ್ಲ ನಂಬಿಕೆಗಳನ್ನು ಹಂಚಿಕೊಳ್ಳುವ ಜನ, ಇದರಲ್ಲಿ ದಲಿತರು ಕೂಡಾ ಇರುತ್ತಾರೆ. ಆದ್ದರಿಂದ ಪತ್ರಿಕೆಗಳ ಭಾಷೆ ಯಾವ ವಿಷಯಕ್ಕೆ ಗಮನ ಕೊಡಬೇಕು, ಆ ಭಾಷೆಯ ಮೂಲಕ ಯಾವ ಸಂವೇದನೆಯನ್ನು ಪ್ರತಿಬಿಂಬಿಸಬೇಕು? ಪತ್ರಕರ್ತರ ದೃಷ್ಟಿಯಲ್ಲಿ ನೋಡುವುದಾದರೆ, ಅಲ್ಲಿ ಯಾರ ಭಾಷೆಯೂ ಇರಬೇಕಾಗಿಲ್ಲ, ಅಲ್ಲಿ ಪತ್ರಿಕಾ ಭಾಷೆ ಮಾತ್ರ ಇರಬೇಕು. ಪತ್ರಿಕೆಯಲ್ಲಿ ಸುದ್ದಿ, ವರದಿ ಬರೆಯುವವರಿಗೆ ಮುಖ್ಯವಾಗುವುದು ಅಥವಾ ಮುಖ್ಯವಾಗಬೇಕಾದದ್ದು ಹೇಳುವುದನ್ನು ಎಷ್ಟು ಸರಳವಾಗಿ, ಸಂಕ್ಷಿಪ್ತವಾಗಿ, ಮನಮುಟ್ಟುವ ಹಾಗೆ ಹೇಳಬಹುದು ಎಂಬುದು ಮಾತ್ರ. ಭಾಷೆ ಅಲ್ಲಿ ಸಂವಹನಕ್ಕೆ ಒಂದು ಸಾಧನ, ಭಾಷೆಯ ಸಂವಹನ ಶಕ್ತಿಯ ಬಳಕೆಯ ಬಗ್ಗೆಯೇ ಪತ್ರಕರ್ತರ ಗಮನ.

ಆದರೆ ಒಮ್ಮೆ ಪತ್ರಿಕೆ ಅಚ್ಚಾಗಿ ಕೈ ಸೇರಿದ ಮೇಲೆ ಅದರಲ್ಲಿನ ಸುದ್ದಿಗಳಿಗೆ ಒದಗುವ ಸಾಮಾಜಿಕ ಮಹತ್ವ ಅಷ್ಟಿಷ್ಟಲ್ಲ. ಆದ್ದರಿಂದಲೇ ಸುದ್ದಿಗಳು, ವರದಿಗಳು, ವಿಶ್ಲೇಷಣೆಗಳು, ಲೇಖನಗಳು ಯಾರ ಸಂವೇದನೆಯನ್ನು ಗೌರವಿಸುತ್ತವೆ, ಯಾರ ಹಿತಾಸಕ್ತಿಗಳನ್ನು ಕಾಯುತ್ತವೆ ಎಂಬುದು ಎಲ್ಲಿಲ್ಲದ ಮಹತ್ವವನ್ನು ಪಡೆಯುತ್ತವೆ. ಅವುಗಳ ಭಾಷೆಗಿಂತ ಆಶಯವೇ ಪ್ರಾಮುಖ್ಯ ಗಳಿಸುತ್ತದೆ. ಯಾರ ಭಾಷೆಯಲ್ಲಿ ಬರೆಯಬೇಕು ಅನ್ನುವುದಕ್ಕಿಂತ ಯಾರನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಅನ್ನುವುದೇ ಪತ್ರಿಕೆಯ ಅಥವಾ ಪತ್ರಕರ್ತನ ದೃಷ್ಟಿಕೋನವನ್ನು ತಿಳಿಸುತ್ತದೆ.

ಕನ್ನಡ ಪತ್ರಿಕೋದ್ಯಮಕ್ಕೆ ನೂರ ಅರವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಎಲ್ಲ ಘಟ್ಟಗಳಲ್ಲೂ ಶಿಷ್ಟ ಭಾಷೆಯ ಬಳಕೆಯನ್ನೇ ಅದರಲ್ಲಿ ಕಾಣುತ್ತೇವೆ. ಪತ್ರಿಕೆಗಳಲ್ಲಿ ದಲಿತರ ಭಾಷೆಯಾಗಲೀ ಮುಸ್ಲಿಮರ ಭಾಷೆಯಾಗಲೀ ಬಳಕೆಯಾಗಿಲ್ಲ ಅನ್ನುವುದಕ್ಕೆ, ಇಡೀ ಮಾಧ್ಯಮದಲ್ಲಿ ದಲಿತರ ಅಥವಾ ಮುಸ್ಲಿಮರ ಲೋಕವೇ ಅನಾವರಣವಾಗಿಲ್ಲ ಅನ್ನುವುದೇ ಮುಖ್ಯ ಕಾರಣ. ಕನ್ನಡ ಸಾಹಿತ್ಯಕ್ಕೆ ಯಾವಾಗ ದಲಿತರ ಮತ್ತು ಮುಸ್ಲಿಮರ ಸಂವೇದನೆ ಪ್ರವೇಶ ಮಾಡಿತೋ ಅವರ ಜಗತ್ತಿನ ವಿವರಗಳು ಪರಿಚಯವಾಯಿತೋ ಆಗ ಅವುಗಳ ಜೊತೆಗೆ ಅವರ ಭಾಷೆಯೂ ತಾನಾಗಿಯೇ ಪ್ರವೇಶ ಮಾಡಿತು. ಪತ್ರಿಕೆಗಳಿಗೆ ಈಗಲೂ ದಲಿತರು ಮತ್ತು ಮುಸ್ಲಿಮರು ಸುದ್ದಿಯ ವಿಷಯಗಳು ಮಾತ್ರವಾಗಿ ಉಳಿದಿದ್ದಾರೆ. ದಲಿತರನ್ನು ಮೇಲ್ಜಾತಿಯವರು ಸುಟ್ಟರೆ ಮಾತ್ರ, ಮುಸ್ಲಿಮರು – ಹಿಂದುಗಳು ಹೊಡೆದಾಡಿದರೆ ಮಾತ್ರ ಅವರು ಪತ್ರಿಕೆಗಳಿಗೆ ಸುದ್ಧಿಯಾಗುತ್ತಾರೆ. ಅಷ್ಟು ಬಿಟ್ಟರೆ ಅವರ ಲೋಕವೇ ಬೇರೆ, ಇತರರ ಲೋಕವೇ ಬೇರೆ ಎಂದು ಹೆಚ್ಚು ಕಡಿಮೆ ಎಲ್ಲರೂ ಭಾವಿಸಿರುತ್ತಾರೆ. ಮಾಧ್ಯಮಗಳಲ್ಲಿ ಅವರೇ ಇಲ್ಲದಿದ್ದ ಮೇಲೆ, ಅವರ ಭಾಷೆ, ಸಂವೇದನೆಗೆ ಹೇಗೆ ಬರುತ್ತದೆ?

ಮಾಧ್ಯಮಗಳಲ್ಲಿ ದಲಿತರು ಮುಸ್ಲಿಮರ ಲೋಕದ ವಿಷಯ ಇರಲಿ, ಅವರಾದರೂ ಇದ್ದಾರೆಯೇ? ಮಾಧ್ಯಮಗಳಲ್ಲಿ ದಲಿತರು ಹೇಗೆ ಕೆಲಸ ಮಾಡುತ್ತಿದ್ದಾರೆ, ಅವರು ಯಾಕೆ ಪವರ್‌ಫುಲ್ ಆಗಿ ಬೆಳೆದಿಲ್ಲ ಎಂಬುದನ್ನು ಕುರಿತು ನನ್ನ ಜೊತೆ ಇಲ್ಲಿರುವ ಅನೇಕರು ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗೆ ನೋಡಿದರೆ, ಮಾಧ್ಯಮಗಳ ಸಾಮಾಜಿಕ ಸಂರಚನೆಯನ್ನು ಕುರಿತು ಅಧ್ಯಯನಗಳು ನಡೆಯುವ ಈ ದಿನಗಳಲ್ಲಿ ಈ ವಿಷಯ ವಿಶೇಷ ಗಮನ ಸೆಳೆಯುತ್ತಿದೆ. ಮಾಧ್ಯಮಗಳಲ್ಲಿ ದಲಿತರು ಮತ್ತು ಮುಸ್ಲಿಮರ ಹಿತಾಸಕ್ತಿಗಳ ರಕ್ಷಣೆಗೆ ನಿರ್ಲಕ್ಷ್ಯ ಇರುವುದು, ಅವರ ಸಂವೇದನೆ, ಭಾಷೆ ಕಾಣದಿರುವುದು ಮತ್ತು ಅವರ ಸಂಖ್ಯೆ ಕಡಿಮೆ ಇರುವುದು ಇವೆಲ್ಲಕ್ಕೂ ಅಂತರ್‌ಸಂಬಂಧ ಇದ್ದೇ ಇದೆ. ಕಪ್ಪು ಜನರ ಮನೆಯ ಭಾಷೆ ಮತ್ತು ಶಾಲೆಯ ಭಾಷೆ ನಡುವೆ ಇರುವ ಸಂಘರ್ಷ ದಲಿತರ ಆಡುಭಾಷೆ ಮತ್ತು ಶಿಕ್ಷಣದ ಭಾಷೆಯ ನಡುವೆ ಇರುವುದರಿಂದಲೂ ನಮಗೆ ದಲಿತರ ಪತ್ರಕರ್ತರು ಗಮನಾರ್ಹ ಸಂಖ್ಯೆಯಲ್ಲಿ ಕಾಣದಿರಬಹುದು. ಮುಸ್ಲಿಮರು ಸಾಮಾಜಿಕ ಸನ್ನಿವೇಶದಲ್ಲಿ ಈ ಭಾಷಾ ಸಂಘರ್ಷ ಇನ್ನೂ ಸಂಕೀರ್ಣವಾದದ್ದು. ಆದರೂ ಈಗ ಪತ್ರಿಕೆಗಳಲ್ಲಿ ಇರುವ ದಲಿತರು ಮತ್ತು ಮುಸ್ಲಿಮರು ಪತ್ರಿಕಾ ಭಾಷೆಯಲ್ಲೇ, ಪತ್ರಿಕಾ ಶೈಲಿಯಲ್ಲೇ ಬರೆಯುತ್ತಿದ್ದಾರೆ ಎಂಬುದನ್ನು ಗಮನಿಸಬೇಕು.

ಇವೆಲ್ಲವನ್ನೂ ಹೇಳಿದ ಮೇಲೂ ಹೇಳಲೇಬೇಕಾದದ್ದೆಂದರೆ, ಪತ್ರಿಕೆಯಲ್ಲಿ ಭಾಷೆಗಿಂತ ಅದರ ಮೂಲಕ ಏನು ಹೇಳುತ್ತೀವಿ ಅನ್ನುವುದೇ ಮುಖ್ಯ ಎಂಬ ಸಂಗತಿ. ಕನ್ನಡ ಭಾಷೆಯ ವರದಿಯೋ ಇಂಗ್ಲಿಶ್ ಭಾಷೆಯ ವರದಿಯೋ ಅದು ಏನು ಹೇಳುತ್ತದೆ, ಯಾರ ಪರವಾಗಿ ಇದೆ, ಯಾವ ಆಶಯಗಳನ್ನು ಪ್ರತಿನಿಧಿಸುತ್ತದೆ ಅನ್ನುವುದೇ ಮುಖ್ಯ. ಪತ್ರಕರ್ತರಿಗೆ ಇರಬೇಕಾದ ಸಾಮಾಜಿಕ ದೃಷ್ಟಿಕೋನ ಇದ್ದರೆ, ಅವರ ವರದಿಯಲ್ಲಿ ಮಿಕ್ಕದ್ದೆಲ್ಲಾ ತಾನಾಗಿಯೇ ಇರುತ್ತದೆ.