ವಿಜ್ಞಾನದ ಆವಿಷ್ಕಾರಗಳ ಜತೆಗೆ ಶರವೇಗದಲ್ಲಿ ಬೆಳೆಯುತ್ತಿರುವ ಮುದ್ರಣ ಹಾಗೂ ವಿದ್ಮುನ್ಮಾನ ಮಾಧ್ಯಮಗಳಲ್ಲಿಯೂ ಸಮಾಜದ ಇತರ ವರ್ಗಗಳಿಗೆ ಹೋಲಿಸಿದರೆ ದಲಿತರ ಪಾಲ್ಗೊಳ್ಳುವಿಕೆ ತೀರಾ ಗೌಣ. ಮುದ್ರಣ ಮಾಧ್ಯಮದಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಹುಟ್ಟಿನಿಂದ ದಲಿತರು ಕಾಣಸಿಗುತ್ತಾರೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಅವಕಾಶ ಗಿಟ್ಟಿಸುವುದು ಇತರ ಹಿಂದುಳಿದ ವರ್ಗಗಳಂತೆ ದಲಿತರಿಗೆ ಕಷ್ಟಸಾಧ್ಯದ ಕೆಲಸ. ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಉಪಗ್ರಹವಾಹಿನಿಯೊಂದರಲ್ಲಿ ೨೭ ಜಿಲ್ಲಾ ವರದಿಗಾರರ ಪೈಕಿ ದಲಿತರ ಸಂಖ್ಯೆ ಮೂರನ್ನೂ ಮೀರುವುದಿಲ್ಲ. ಈ ಪ್ರಮಾಣ ಬಹುಶಃ ಬೇರೆಲ್ಲಾ ವಾಹಿನಿಗಳು ಹಾಗೂ ಪತ್ರಿಕೆಗಳಿಗೂ ಅನ್ವಯವಾಗುತ್ತದೆ ಎನ್ನುವುದು ವಾಸ್ತವ.

ಸರ್ಕಾರಿ ಹುದ್ದೆಗಳಲ್ಲೇ ಬ್ಯಾಕ್‌ಲಾಗ್ ಪೋಷಿಸಿಕೊಂಡು ಬರುತ್ತಿರುವ ಸಾಮಾಜಿಕ ಸನ್ನಿವೇಶ ನಮ್ಮೆದುರಿಗಿದೆ. ಪ್ರತಿಭಾನ್ವಿತ ದಲಿತ ವಿದ್ಯಾವಂತರು ಇತರರಿಗೆ ಹೋಲಿಸಿದರೆ ವೃತ್ತಿಪರ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಜೀವನ ಭದ್ರತೆಯ ಉದ್ಯೋಗ ಅರಸಿಕೊಂಡು ಹೋಗುವುದು ಸಹಜ. ದುರ್ಬಲ ಆರ್ಥಿಕತೆ ಹಿನ್ನೆಲೆಯಲ್ಲಿ ಬೆಳೆದುಬಂದ ಬುದ್ಧಿವಂತ ದಲಿತರು ಪ್ರಜ್ಞಾಪೂರ್ವಕವಾಗಿ ಮಾಧ್ಯಮಗಳನ್ನು ಪ್ರವೇಶ ಮಾಡುವುದು ತೀರಾ ವಿರಳ. ಬಹುಶಃ ಈ ಆರ್ಥಿಕ ಕಾರಣ ಮತ್ತು ವೃತ್ತಿ ಭದ್ರತೆ ಸರ್ಕಾರಿ ಕೆಲಸ ಹಾಗೂ ಆಕರ್ಷಕ ಖಾಸಗಿ ರಂಗಗಳತ್ತ ದಲಿತರನ್ನು ಆಕರ್ಷಿಸುವುದು ಸಹಜ. ಇದರ ಪರಿಣಾಮವಾಗಿ ಶ್ರಮಿಕ ವರ್ಗದ ಪ್ರತಿನಿಧಿಗಳು ಮಾಧ್ಯಮದಿಂದ ದೂರ ಉಳಿಯುವಂತಾಗಿದೆ. ಇದರಿಂದಾಗಿ ನೊಂದವರೆ ದನಿಗಳು ಸಮರ್ಥವಾಗಿ ಮಾಧ್ಯಮಗಳಲ್ಲಿ ಪ್ರತಿಧ್ವನಿಸಲು ಅವಕಾಶವಾಗುತ್ತಿಲ್ಲ.

ಈ ಎಲ್ಲಾ ಕಾರಣಗಳಿಂದ ಮಾಧ್ಯಮ ಪ್ರವೇಶ ಮಾಡಿರುವ ದಲಿತರು ಹಾಗೂ ಅವರ ಭಾಷೆಯು ವಿಶ್ಲೇಷಣೆಗೆ ಒಳಗಾಗುವಷ್ಟು ಪ್ರಮಾಣದಲ್ಲಿ ಇಲ್ಲಿ ಬಳಕೆ ಆಗುತ್ತಿಲ್ಲ ಎನ್ನುವುದೇ ನನ್ನ ತಮ್ರ ಅಭಿಪ್ರಾಯ. ಆದ್ದರಿಂದ ವಿಷಯವನ್ನು ದಲಿತರು ಹಾಗೂ ಮಾಧ್ಯಮಕ್ಕೆ ಸೀಮಿತಗೊಳಿಸಿ, ನನ್ನ ಕೆಲವು ಅಭಿಪ್ರಾಯಗಳನ್ನು ಮಂಡಿಸಲು ಪ್ರಯತ್ನಿಸುತ್ತೇನೆ.

ದಲಿತರ ನೋವು, ಸಂಕಟಗಳು ಹುಟ್ಟಿನಿಂದ ದಲಿತರಾದವರ ಗ್ರಹಿಕೆಗೆ ನಿಲುಕುವಷ್ಟು ಮೇಲ್ಜಾತಿಯ ಅಥವಾ ದಲಿತರ ಪರ ಸಹಾನುಭೂತಿ ಹೊಂದಿದ ಬೇರಾವ ಜಾತಿಯ ವ್ಯಕ್ತಿಗಳಿಗೂ ಸಿಗುವುದಿಲ್ಲ. ಅದರ ತೀವ್ರತೆಯನ್ನು ಅನುಭವಿಸಿದವರು ಮಾತ್ರ ಅದನ್ನು ಬಿಂಬಿಸಬಲ್ಲರು. ಈ ಕಾರಣದಿಂದಾಗಿ ಇಂದು ಮಾಧ್ಯಮಗಳಲ್ಲಿ ಸಮಾಜದ ಉಪೇಕ್ಷಿತ ಜನಸಮುದಾಯದ ದುಃಖ ದುಮ್ಮಾನಗಳು ವಿಕೃತವಾಗಿಯೋ, ಉತ್ಪ್ರೇಕ್ಷಿತವಾಗಿಯೋ ಬಿಂಬಿತವಾಗುವ ಅಪಾಯವೇ ಹೆಚ್ಚು. ವಾಸ್ತವ ವಸ್ತುನಿಷ್ಠ ಚಿತ್ರಣ ಹೊರಬರುವುದೇ ಇಲ್ಲ. ಇದಕ್ಕೆ ಉತ್ತಮ ಉದಾಹರಣೆ ಮೂರು ವರ್ಷಗಳ ಹಿಂದೆ ದಸರಾ ಹಬ್ಬದ ದಿನ ಹರ್ಯಾಣದ ಜಜ್ಜರ್ ನಗರದ ಸಮೀಪದ ದುಲೀನ ಪೊಲೀಸ್ ಠಾಣೆ ಬಳಿ ಅಧಿಕಾರಿಗಳ ಎದುರೇ ಐವರು ದಲಿತರನ್ನು ಕೊಚ್ಚಿ ಕೊಂದ ಘಟನೆ. ಅಲ್ಲಿನ ದಲಿತ ಕುಟುಂಬ ಸೊಹ್ನಾ ಪಂಚಾಯ್ತಿಗೆ ೩೫೦೦೦ ರೂ. ಹಣ ಕಟ್ಟಿ ಅಧಿಕೃತ ಪರವಾನಗಿ ಪಡೆದು ಚರ್ಮೋದ್ಯಮ ನಡೆಸುತ್ತಿತ್ತು. ಆ ಕುಟುಂಬದ ಐವರು ದಲಿತರು ಸತ್ತ ಹಸುಗಳ ಚರ್ಮ ಸುಲಿದು ಸಂತೆಗೆ ಸಾಗಣೆ ಮಾಡುತ್ತಿದ್ದಾಗ, ದಾರಿಯಲ್ಲಿ ಹಣ ಕೀಳಲು ಅವರನ್ನು ಅಡ್ಡಗಟ್ಟಿ ಪೊಲೀಸರು ಠಾಣೆಗೆ ತಂದರು. ನಂತರ ‘ಜೀವಂತ ಹಸುಗಳನ್ನು ಕೊಂದಿದ್ದಾರೆ’ ಎಂದು ವದಂತಿ ಹಬ್ಬಿಸಿದ ಮೂಲಭೂತವಾದಿ ಹಿಂದುತ್ವ ಪ್ರಚೋದಿತ ಗುಂಪೊಂದು ನಂತರ ಭಾರಿ ಪ್ರಮಾಣದಲ್ಲಿ ಠಾಣೆಗೆ ಮುತ್ತಿಗೆ ಹಾಕಿ ಐವರು ದಲಿತರನ್ನು ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ೧೦೦ಕ್ಕೂ ಹೆಚ್ಚಿದ್ದ ಪೊಲೀಸರ ಎದುರೇ ಬರ್ಬರವಾಗಿ ಕೊಂದಿತು. ಅಲ್ಲಿ ಗೋಲಿಬಾರ್, ಅಶ್ರುವಾಯು ಇರಲಿ ಲಾಠಿ ಪ್ರಹಾರ ಕೂಡ ನಡೆಯಲಿಲ್ಲ. ಈ ಘಟನೆ ಬಗ್ಗೆ ಮಾಧ್ಯಮಗಳು ಗೋಹತ್ಯೆ ಸಹಿಸದ ಜನಸಮುದಾಯ ಗೋ ಹಂತಕರನ್ನು ಸದೆ ಬಡಿದರು ಎಂದೇ ಬಿಂಬಿಸಿದವು. ಆದರೆ ವಾಸ್ತವವಾಗಿ ಅವರು ಸತ್ತ ಹಸುವಿನ ಚರ್ಮ ತೆಗೆಯಲು ಸರ್ಕಾರಕ್ಕೆ ಹಣ ಕಟ್ಟಿ ಪರವಾನಗಿ ಪಡೆದಿದ್ದವರು ಎಂಬ ಸತ್ಯ ಹೊರಬರಲೇ ಇಲ್ಲ. ಜತೆಗೆ ಅವರ ಶವ ಪರೀಕ್ಷೆಯ ನಂತರ ಶವಗಳನ್ನು ಬೆತ್ತಲಾಗಿ ಅವರ ಕುಟುಂಬದವರಿಗೆ ಒಪ್ಪಿಸಲಾಯಿತು. ಶವಗಳನ್ನು ಕನಿಷ್ಠ ಬಟ್ಟೆಯಲ್ಲಿ ಮುಚ್ಚುವ ಸಭ್ಯತೆಯನ್ನೂ ಜಿಲ್ಲಾಡಳಿತ ತೋರದೆ, ಬೆತ್ತಲೆ ಶವಗಳನ್ನು ನೀಡಿದ ಮೇಲ್ಜಾತಿ ಮನಸ್ಸುಗಳ ಕ್ರೌರ್ಯ ಮಾಧ್ಯಮಗಳಲ್ಲಿ ಬಿಂಬಿತವಾಗಲೇ ಇಲ್ಲ. ಈ ಘಟನೆ ದಲಿತರನ್ನು ಪಶುಪಕ್ಷಿಗಳಂತೆ ಕೊಲ್ಲಬಹುದು, ಸಾವಿನ ನಂತರವೂ ದಲಿತರನ್ನು ಅಪಮಾನಿಸಬಹುದೆಂಬ ಸಂದೇಶವನ್ನು ಜಗತ್ತಿಗೆ ಸಾರಿತು. ಗೋಮಾತೆ ಹೆಸರಿನಲ್ಲಿ ದಲಿತರ ಜೀವಗಳಿಗೆ ಬೆಲೆಯೇ ಇಲ್ಲದಂತಾಯಿತು. ಮನುಷ್ಯನ ಜೀವಕ್ಕಿಂತ ಹಸುವಿನ ಜೀವ ಪವಿತ್ರವಾದುದು ಎಂಬುದು ಘಟನೆಯನ್ನು ಸಮರ್ಥಿಸಿಕೊಂಡ ವಿಶ್ವಹಿಂದೂ ಪರಿಷತ್ ವಾದ. ಈ ಘಟನೆಯ ಸತ್ಯಾಂಶಗಳನ್ನು ನಂತರ ಅಲ್ಲಿಗೆ ಭೇಟಿ ನೀಡಿ ಎಲ್ಲರಿಂದ ಸಮಗ್ರ ಮಾಹಿತಿ ಸಂಗ್ರಹಿಸಿದ ಹರಿಯಾಣದ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಿ.ಆರ್.ಚೌಧುರಿ ಹೊರ ಹಾಕಿದರು. ಆದರೆ ಮಾಧ್ಯಮಗಳು ಬೇರೆಯದೇ ಚಿತ್ರಣ ನೀಡಿದ್ದವು.

ಇಂತಹ ಘಟನೆಗಳ ಜತೆಗೆ ದಲಿತರ ಮೇಲಿನ ಅತ್ಯಾಚಾರಗಳು, ಬೆತ್ತಲೆ ಶಿಕ್ಷೆಯಂತಹ ಅಮಾನುಷ ಆಚರಣೆಗಳು ಇಂದಿಗೂ ಜೀವಂತವಾಗಿವೆ. ಬಹುತೇಕ ಹಳ್ಳಿಗಳಲ್ಲಿ ದಲಿತರಿಗೆ ಹೋಟೆಲ್‌ಗಳಲ್ಲಿ ಇಂದಿಗೂ ಪ್ರವೇಶ ನೀಡದೆ ಅಸ್ಪೃಶ್ಯತೆ ಆಚರಿಸುತ್ತಿರುವುದು ಬಹಿರಂಗವಾಗಿಯೇ ನಡೆಯುತ್ತಿದೆ. ಇಂತಹ ಅಪಮಾನಗಳಿಗೆ ಗುರಿಯಾಗದ ಮೇಲ್ಜಾತಿಯ ಮನಸ್ಸುಗಳಿಗೆ ಇವು ಸುದ್ಧಿಗಳೂ ಆಗುವುದಿಲ್ಲ. ಜತೆಗೆ ತನ್ನ ಜಾತಿಯವರು ಆಚರಿಸುವ ಇಂತಹ ಕ್ರೂರ ಪದ್ಧತಿಗಳನ್ನು ಪ್ರಶ್ನಿಸಲಾಗದ ಅಸಹಾಯಕ ಸ್ಥಿತಿಯೂ ಇರಬಹುದು. ಕನಿಷ್ಠ ಅವುಗಳ ಸುಧಾರಣೆಯತ್ತ, ಜಾತಿ ಕಾರಣಕ್ಕೆ ನಡೆಯುವ ದಲಿತರ ಮೇಲಿನ ದೌರ್ಜನ್ಯ ಹಾಗೂ ಅವುಗಳ ಬರ್ಬರತೆಯತ್ತ ಬೆಳಕು ಚೆಲ್ಲುವ ಕಾಳಜಿಯೂ ಕಂಡು ಬರುವುದಿಲ್ಲ. ಇನ್ನು ಕೆಲವೆಡೆ ಘಟನೆಗಳನ್ನು ತಿರುಚಿ ಇತರ ಜಾತಿಗಳ ಅನುಕೂಲಕ್ಕೆ ತಕ್ಕಂತೆ ಬಿಂಬಿಸುವುದು ಕೂಡ ನಡೆಯುತ್ತಿದೆ.

ಇದಕ್ಕೊಂದು ಉದಾಹರಣೆ ಹೀಗಿದೆ. ಉತ್ತರಪ್ರದೇಶದ ಮಹೋಬಾ ಎಂಬಲ್ಲಿ. ೫೬ ವರ್ಷದ ದಲಿತ ಮಹಿಳೆಯೊಬ್ಬಳು ತನ್ನ ಗಂಡನ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಬಗ್ಗೆ ಒಂದೊಂದು ಪತ್ರಿಕೆ ಒಂದೊಂದು ರೀತಿ ವರದಿ ಮಾಡಿದವು. ಸತಿಪದ್ಧತಿಯಲ್ಲಿ ನಂಬಿಕೆಯಿದ್ದ ಮೇಲ್ಜಾತಿಯ ಕೆಲವರು ಅದನ್ನು ‘ಸತಿ’ ಎಂದು ಬಣ್ಣಿಸಿದವು. ಇನ್ನು ಕೆಲವು ಗಂಡನ ಜತೆಗಿದ್ದ ಅನ್ಯೋನ್ಯತೆಯಿಂದಾಗಿ ಆಕೆ ಮಾನಸಿಕ ಆಘಾತಕ್ಕೊಳಗಾಗಿ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು ಎಂದು ವರದಿ ಮಾಡಿದವು. ಜಿಲ್ಲೆಯ ಅಧಿಕಾರಿಗಳು ಅದನ್ನು ಆತ್ಮಹತ್ಯೆ ಎಂದರೆ, ಕೆಲವು ಸ್ಥಳೀಯ ರಾಜಕೀಯ ಮುಖಂಡರು ಅದನ್ನು ಸತಿ ಎಂದು ಬಣ್ಣಿಸಿ, ಆ ಸ್ಥಳದ ಪೂಜೆಗೆ ಮುಂದಾದ ವರದಿಯೂ ಇದೆ. ಎಲ್ಲಾ ವರದಿಗಳಲ್ಲೂ ಕ್ಷಯ ರೋಗದಿಂದ ವರ್ಷಾನುಗಟ್ಟಲೆ ನರಳಿದ ಪತಿಗೆ ನಿರಂತರ ಸೇವೆಗೈದ ಮಹಿಳೆ ಸಾವಿನ ಆಘಾತ ತಡೆದುಕೊಳ್ಳಲಿಲ್ಲ ಎಂಬ ಅಂಶ ಬಿಂಬಿತವಾಗಿದೆ. ಆಕೆ ನವವಧುವಿನಂತೆ ಸಿಂಗರಿಸಿಕೊಂಡು ಎಲ್ಲರೆದುರು ಉರಿಯುತ್ತಿದ್ದ ಚಿತೆಯ ಸುತ್ತ ಪ್ರದಕ್ಷಿಣೆ ಮಾಡಿ ಚಿತೆಗೆ ಹಾರಿದಳು. ಮಹಿಳೆಯ ಗಂಡನ ಮನೆಯವರೇ ಇದಕ್ಕೆ ಕುಮ್ಮಕ್ಕು ನೀಡಿದ್ದರು ಎಂಬುದು ಕೆಲವು ಗ್ರಾಮಸ್ಥರ ವಾದ. ಯಾವುದು ಸತ್ಯ?

ರಾಜ್ಯದಲ್ಲಿ ಬೆಂಗಳೂರಿನಿಂದ ತಾಲ್ಲೂಕುಗಳವರೆಗೆ ಸುಮಾರು ೨೦೦೦ ಪತ್ರಿಕೆಗಳು ಪ್ರಕಟಗೊಳ್ಳುತ್ತಿವೆ. ಇವುಗಳಲ್ಲಿ ೧೩ ರಾಜ್ಯ ಮಟ್ಟದ ಪತ್ರಿಕೆಗಳು ಹಾಗೂ ಉಳಿದವು ಸಣ್ಣ ಮತ್ತು ಮಧ್ಯಮ ವರ್ಗೀಕರಣಕ್ಕೆ ಸೆರಿದ ಪ್ರತಿಕೆಗಳಿವೆ. ಜಾಹೀರಾತು ನೀಡುವ ಉದ್ದೇಶದಿಂದ ವಾರ್ತಾ ಇಲಾಖೆ ಮಾನ್ಯ ಮಾಡಿರುವ ಪಟ್ಟಿಯಲ್ಲಿ ೨೬೫ ಪತ್ರಿಕೆಗಳು ಸೇರಿವೆ. ೧೫೦ ನಿಯತಕಾಲಿಕೆಗಳು ಸೇರಿವೆ. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪತ್ರಿಕೆಗಳ ಸಂಖ್ಯೆ ೪೦ ಮೀರುವುದಿಲ್ಲ. ಅಂದರೆ ರಾಜ್ಯದಲ್ಲಿ ಇವುಗಳ ಆರು ಪಟ್ಟು ಇತರ ಜಾತಿಯವರು ನಡೆಸುವ ಪತ್ರಿಕೆಗಳು ಮಾಧ್ಯಮ ಪಟ್ಟಿಯಲ್ಲಿ ಆ ಪಟ್ಟಿ ಬಿಟ್ಟು ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳ ಜತೆ ಹೋಲಿಸಿದರೆ ೫೦ ಪಟ್ಟು ದಲಿತೇತರ ಪತ್ರಿಕೆಗಳಿವೆ. ಬಹುತೇಕ ಪತ್ರಿಕೆಗಳು ಜಿಲ್ಲಾ ಮಟ್ಟದಿಂದ ಪ್ರಕಟಗೊಳ್ಳುತ್ತಿದ್ದು, ವಾಸ್ತವವಾಗಿ ಜಿಲ್ಲಾ ಕೇಂದ್ರಗಳಲ್ಲಿ ನಿಯಮಿತವಾಗಿ ಪ್ರಕಟಗೊಳ್ಳುವ ಸ್ಥಳೀಯ ಪತ್ರಿಕೆಗಳ ಸಂಖ್ಯೆ ಜಿಲ್ಲೆಗೆ ಐದನ್ನು ದಾಟುವುದೇ ವಿರಳ. ಉಳಿದ ಪತ್ರಿಕೆಗಳೆಲ್ಲಾ ಜಾಹಿರಾತು ಮತ್ತಿತರ ಕಾರಣಗಳಿಗಾಗಿಯೇ ಉಸಿರಾಡುತ್ತಿರುವುದು ವಾಸ್ತವ. ಆದರೆ ಹುಟ್ಟಿನಿಂದ ದಲಿತರೇ ನಡೆಸುತ್ತಿರುವ ಪತ್ರಿಕೆಗಳೂ ಕೂಡ ಇತರ ಪತ್ರಿಕೆಗಳಿಗಿಂತ ಭಿನ್ನವಾಗಿಯೇನೂ ಇಲ್ಲ. ದಲಿತರ ಸಮಸ್ಯೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಬಿಂಬಿಸುವ ಅಥವಾ ದಲಿತರ ಹಕ್ಕುಗಳ ಪರವಾಗಿ ಸತತ ಹೋರಾಡುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಜಾತಿ, ಧರ್ಮ, ಮಠ-ಮಾನ್ಯಗಳ ಬಗೆಗಿನ ಶ್ರದ್ಧೆ ಇನ್ನು ಆಳವಾಗಿ ಬೇರೂರಿರುವ ಗ್ರಾಮೀಣ ಪ್ರದೇಶದಲ್ಲಿ ಅಂತಹ ಪತ್ರಿಕೆಗಳು ಓದುಗರನ್ನು ಗಳಿಸಿಕೊಳ್ಳುವುದೂ ಸುಲಭವಿಲ್ಲ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಕಟವಾಗುವ ಈ ಪತ್ರಿಕೆಗಳಿಗೆ ಸರ್ಕಾರ, ಸ್ಥಳೀಯ ಉದ್ಯಮಿಗಳು, ರಾಜಕಾರಣಿಗಳು ನೀಡುವ ಜಾಹೀರಾತೇ ಜೀವನಾಧಾರ. ಅದರಲ್ಲೂ ದರ ಸಮರದ ಇಂದಿನ ಅನಾರೋಗ್ಯಕರ ವಾತಾವರಣದಲ್ಲಿ ತಮ್ಮ ಪ್ರಸರಣ ಸಂಖ್ಯೆಯಿಂದಲೇ ಬದುಕುವ ಪತ್ರಿಕೆಗಳು ತೀರಾ ವಿರಳ. ಜತೆಗೆ ಅದು ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಯಾವುದೇ ಪತ್ರಿಕೆ ಸಂದರ್ಭದ ಜತೆ ರಾಜಿ ಮಾಡಿಕೊಂಡು ಬದುಕಬೇಕಾದ ಅನಿವಾರ್ಯತೆ ಎದುರಿಸುತ್ತಿವೆ.

ಉದಾಹರಣೆಗೆ, ದಾವಣಗೆರೆಯಲ್ಲಿ ದಲಿತರೇ ನಡೆಸುವ ನಾಲ್ಕು ಪತ್ರಿಕೆಗಳಿವೆ. ಎರಡೂವರೆ ವರ್ಷದ ಅವಧಿಯ ನಗರಸಭೆ ಅಧ್ಯಕ್ಷ ಸ್ಥಾನ ದಲಿತ ಮಹಿಳೆಗೆ ಮೀಸಲಿತ್ತು. ಆದರೆ ಅಧಿಕಾರ ಹಂಚಿಕೆ ಕಾಂಗ್ರೆಸ್ ತತ್ವದಿಂದಾಗಿ ಆ ಮಹಿಳೆಯನ್ನು ಹತ್ತು ತಿಂಗಳಲ್ಲೇ ರಾಜೀನಾಮೆ ಕೊಡಿಸಲಾಯಿತು. ಸರ್ಕಾರ ಎರಡೂವರೆ ವರ್ಷಕ್ಕೆ ಅಧ್ಯಕ್ಷ ಪದವಿಯನ್ನು ದಲಿತರಿಗೆ ಮೀಸಲು ಮಾಡಿತ್ತು. ಆ ಮೀಸಲಾತಿ ವರ್ಗದಲ್ಲಿದ್ದ ಏಕೈಕ ಮಹಿಳೆ ಅವರಾಗಿದ್ದರಿಂದ ಬೇರಾರೂ ಅಧ್ಯಕ್ಷರಾಗುವ ಸಾಧ್ಯತೆ ಇರಲಿಲ್ಲ. ಆಕೆಯ ಮೇಲೆ ಒತ್ತಡ ತಂದು ರಾಜೀನಾಮೆ ಕೊಡಿಸಿ ನಂತರ ಚುನಾವಣೆಯಲ್ಲಿ ಆಕೆ ಮತ್ತು ಅರ್ಜಿ ಸಲ್ಲಿಸದಂತೆ ನೋಡಿಕೊಂಡ ಕಾಂಗ್ರೆಸ್ ಪಕ್ಷವು ಚುನಾವಣೆ ನಡೆಯದಂತೆ ಕ್ರಿಮನಲ್ ಮಾರ್ಗ ಅನುಸರಿಸಿತು. ಉಪಾಧ್ಯಕ್ಷ ಪದವಿಯಲ್ಲಿದ್ದವರಿಗೆ ಪ್ರಭಾರಿ ಅಧಿಕಾರ ನೀಡಿ ದಲಿತ ಮಹಿಳೆಗೆ ವಂಚನೆ ಮಾಡಿತು. ಈ ಬಗ್ಗೆ ಜಿಲ್ಲೆಯ ನಾಲ್ಕು ದಲಿತರ ಪತ್ರಿಕೆಗಳೂ ಇತರ ಪತ್ರಿಕೆಗಳಂತೆ ಸೊಲ್ಲೆತ್ತಲು ಸಾಧ್ಯವೇ ಆಗಲಿಲ್ಲ. ಅಲ್ಲೊಂದು ಇಲ್ಲೊಂದು ಕೇಳಿ ಬಂದ ಕ್ಷೀಣ ಸ್ವರದ ಆಕ್ಷೇಪಗಳು ದಪ್ಪ ಚರ್ಮದ ಕಾಂಗ್ರೆಸ್ ಧಣಿಗಳನ್ನು ವಿಚಲಿತಗೊಳಿಸಲಿಲ್ಲ. ಮೀಸಲಾತಿ ಮೂಲಕ ದಲಿತರು, ಹಿಂದುಳಿದವರು, ದಮನಿತರಿಗೆ ಅಧಿಕಾರ ನೀಡಿದ್ದೇವೆ ಎಂದು ಬುರುಡೆ ಬಿಡುವ ಎಲ್ಲ ರಾಜಕೀಯ ಪಕ್ಷಗಳೂ ಇಂತಹ ಅನ್ಯಾಯದಲ್ಲಿ ಪ್ರತ್ಯಕ್ಷ ಪಾಲುದಾರರು ಇಲ್ಲವೇ ಅದರ ವಿರುದ್ಧ ಚಕಾರ ಎತ್ತದ ಪರೋಕ್ಷ ಪಾಲುದಾರಿಕೆ ನಡೆಸುತ್ತಿವೆ. ಇನ್ನು ಹೆಸರಿಗೆ ಮಾತ್ರ ದಲಿತರನ್ನು ಗದ್ದುಗೆಯಲ್ಲಿ ಕೂರಿಸಿ, ಎಲ್ಲ ಅಧಿಕಾರ ತಮ್ಮ ಹತೋಟಿಗೆ ತೆಗೆದುಕೊಂಡು ಖಜಾನೆಗೆ ಕನ್ನ ಹಾಕುವವರಿಗೇನೂ ಕೊರತೆ ಇಲ್ಲ. ಇಂತಹ ಸಂವಿಧಾನಕ್ಕೆ ಅಪಚಾರ ಎಸಗುವ ಕೃತ್ಯಗಳ ವಿರುದ್ಧ ದಲಿತೇತರರೇ ತುಂಬಿ ಹೋಗಿರುವ ಮಾಧ್ಯಮಗಳಿಂದ ದಲಿತರಿಗೆ ಎಷ್ಟರಮಟ್ಟಿಗೆ ನ್ಯಾಯ ಸಿಗಲು ಸಾಧ್ಯ?

ಇನ್ನು ಪ್ರತಿಕೋದ್ಯಮವೂ ಇತರ ರಂಗಗಳಂತೆ ಉದ್ಯಮವಾಗಿರುವುದರಿಂದ ದಲಿತರ ಹಕ್ಕುಗಳನ್ನು ಸಂರಕ್ಷಿಸುವ, ಸಂಪೂರ್ಣ ದಲಿತ ಪರ ನಿಲ್ಲುವ ನಿಲುವನ್ನು ಯಾವುದೇ ಪತ್ರಿಕೆ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುವುದೂ ದುಬಾರಿಯಾದುದು. ಆದರೆ ಎಲ್ಲಾ ಪತ್ರಿಕೆಗಳು ದಲಿತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಆಗಾಗ ಲೇಖನ, ಆ‌ಗ್ರ ಲೇಖನ, ದಲಿತರ ಮೇಲೆ ನಡೆದ ದೌರ್ಜನ್ಯ ಘಟನೆಗಳನ್ನು ಅತಿರಂಜಿತಗೊಳಿಸಿದರೆ, ಕೆಲವು ಉಪೇಕ್ಷಿತ ದೃಷ್ಟಿಕೋನದಿಂದ ನೋಡಿದವುಗಳಾಗಿರುತ್ತವೆ.

ಉದಾಹರಣೆಗೆ ದಲಿತ ಮಹಿಳೆ ಮೇಲೆ ಅತ್ಯಾಚಾರ, ದಲಿತ ಬಾಲಕಿ ಮೇಲೆ ಅತ್ಯಾಚಾರ ಎನ್ನುವ ಶೀರ್ಷಿಕೆಗಳು ಯಾವುದೇ ಪತ್ರಿಕೆಯನ್ನು ತೆಗೆದರೂ ಕಾಣಸಿಗುತ್ತವೆ. ಅತ್ಯಾಚಾರ ಎನ್ನುವುದೇ ಅಮಾನುಷವಾದುದು. ಅದು ಯಾವ ಜಾತಿಯ ಮಹಿಳೆ ಮೇಲೆ ನಡೆದರೂ ಖಂಡನೀಯ. ಪತ್ರಿಕೆಗಳು ತಮಗರಿವಿಲ್ಲದೇ ನೊಂದ ಮಹಿಳೆಯನ್ನು ಜಾತಿ ಕಾರಣಕ್ಕೂ ಮತ್ತಷ್ಟು ಅಪಮಾನಕ್ಕೆ ಗುರಿ ಮಾಡುತ್ತಿವೆ. ಯಾವುದೇ ಪತ್ರಿಕೆ ಬ್ರಾಹ್ಮಣ ಮಹಿಳೆ ಮೇಲೆ ಅತ್ಯಾಚಾರ, ಒಕ್ಕಲಿಗ ಮಹಿಳೆ ಮೇಲೆ ಅತ್ಯಾಚಾರ, ಲಿಂಗಾಯಿತ ಮಹಿಳೆ ಮೇಲೆ ಅತ್ಯಾಚಾರ ಎಂಬ ಶೀರ್ಷಿಕೆಯನ್ನು ಅಪ್ಪಿತಪ್ಪಿಯೂ ನೀಡುವುದಿಲ್ಲ ಏಕೆ?

ಇದು ದಲಿತರ ಮೇಲಿನ ಅತಿಯಾದ ಕಾಳಜಿ ಮೂಲದಿಂದಲೂ ಆಗಿರುವ ಪ್ರಮಾದ ಇರಬಹುದು ಅಥವಾ ದಲಿತ ಮಹಿಳೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂಬುದನ್ನು ಬಿಂಬಿಸುವ ಮೂಲಕ ಆರೋಪಿಗಳ ಮೇಲೆ ಶೀಘ್ರ ಕ್ರಮ ಜರುಗಲಿ ಎಂಬ ಕಳಕಳಿಯೂ ಇರಬಹುದು. ಆದರೆ ಆರ್ಥಿಕವಾಗಿ ದುರ್ಬಲವಾದ ದಲಿತ ಮಹಿಳೆಯರೇ ಹೆಚ್ಚು ಅತ್ಯಾಚಾರಕ್ಕೆ ಒಳಗಾಗುವರು ಎಂಬುದನ್ನು ಜಾಹೀರುಪಡಿಸಲು ಹೊರಟಿರುವುದು ಎಷ್ಟು ಸಮಂಜಸ? ಈ ಮೂಲಕ ಅಪಮಾನಕ್ಕೊಳಗಾದ ಮಹಿಳೆಯರನ್ನು ಮತ್ತಷ್ಟು ಜರ್ಜರಿತ ಸ್ಥಿತಿಗೆ ದೂಡಿದಂತಾಗುವುದಿಲ್ಲವೇ?

ಮಾಧ್ಯಮಗಳು ದಲಿತರ ಮೇಲಿನ ದೌರ್ಜನ್ಯಗಳನ್ನು ಬಿಂಬಿಸುವಷ್ಟು ದಲಿತರ ಅಭ್ಯುದಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೆಚ್ಚು ಗಮನಹರಿಸುವುದು ತೀರಾ ಕಡಿಮೆ. ಕೊಲೆ, ಸುಲಿಗೆ, ದೌರ್ಜನ್ಯದಂತಹ ಭಾವಪ್ರಚೋದಕ ವಿಷಯಗಳನ್ನು ಪತ್ರಿಕೆಗಳು ತಮ್ಮ ಓದುಗರನ್ನು ಸೆಳೆಯುವ ಭಾಗವಾಗಿಯೂ ಬಳಸಿಕೊಳ್ಳುತ್ತಿರುವುದು ಕೂಡ ವಾಸ್ತವ. ಅಲ್ಲೊಂದು ಇಲ್ಲೊಂದು ಲೇಖನಗಳಲ್ಲಿ ಯೋಜನೆಗಳ ಅಸಮರ್ಪಕ ಅನುಷ್ಠಾನ, ಫಲಾನುಭವಿಗಳಿಗೆ ವಂಚನೆ ಇಂತಹ ಪ್ರಕರಣಗಳು ವರದಿಯಾಗುವುದು ಬಿಟ್ಟರೆ ದಲಿತರಿಗೇ ಮೀಸಲಾದ ಯೋಜನೆಗಳ ಅನುಷ್ಠಾನದ ಬಗ್ಗೆ ಸತತ ವಿಶ್ಲೇಷಣೆ, ತನಿಖೆ ಮಾಡುವ ಪ್ರವೃತ್ತಿ ಕಾಣುತ್ತಿಲ್ಲ. ಸ್ವಾತಂತ್ಯ್ರಾನಂತರ ಇಲ್ಲಿಯವರೆಗೂ ದಲಿತರ ಅಭ್ಯುದಯಕ್ಕೆಂದೇ ಮೀಸಲಾದ ಶೇ. ೧೮ರ ಹಣವನ್ನು ಸಂಸತ್ತಿನಿಂದ ಪಂಚಾಯ್ತಿವರೆಗೆ ಯಾವುದೇ ಸಂಸ್ಥೆ ನಿಯಮಿತವಾಗಿ ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿಲ್ಲ. ಯೋಜನೆಗಳ ಲಾಭ ಪೂರ್ಣ ಪ್ರಮಾಣದಲ್ಲಿ ಉದ್ದೇಶಿತ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ. ಇತರ ವರ್ಗಗಳಿಗಿಂತ ಅನಕ್ಷರತೆ ಬಡತನದಿಂದ ಕೂಲಿನಾಲಿಯನ್ನೇ ನಂಬಿ ಬದುಕುವ ದಲಿತರನ್ನು ವಂಚಿಸುವುದು ಸುಲಭ. ಇದು ಮಧ್ಯವರ್ತಿಗಳನ್ನು ಕೊಬ್ಬಿಸುತ್ತಿದೆ. ಪರಿಶಿಷ್ಟರಿಗೆ ಮೀಸಲಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ಲಪಟಾಯಿಸುವ ವ್ಯಕ್ತಿಗಳು ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಈ ಬಗ್ಗೆ ಮಾಧ್ಯಮಗಳು ಕೂಡ ಸಾಕಷ್ಟು ಗಮನಹರಿಸುತ್ತಿಲ್ಲ. ಜಾರಿಗೆ ತರಲಾಗದ ಯೋಜನೆಗಳು ಕೆಲವು ಸಂದರ್ಭಗಳಲ್ಲಿ ಇದಕ್ಕೆ ಕಾರಣವಾದರೆ, ಬಹುತೇಕ ಸಂದರ್ಭಗಳಲ್ಲಿ ಅನುಷ್ಠಾನಗೊಳಿಸುವ ಮೇಲ್ಜಾತಿಯ ಮನಸ್ಸುಗಳು ಇದಕ್ಕೆ ಅಡ್ಡವಾಗಿರುತ್ತವೆ. ಸ್ವತಂತ್ರ ಬಂದು ೫೮ ವರ್ಷ ಕಳೆದರೂ ದಲಿತರಿಗೆ ಮೀಸಲಾದ ಸರ್ಕಾರಿ ಹುದ್ದೆಗಳನ್ನು ತುಂಬಲಾಗದ ಸರ್ಕಾರಗಳದ್ದೂ ಇದರಲ್ಲಿ ಲೋಪವಿದೆ.

ದಲಿತ ವರ್ಗದಿಂದ ಬಂದ ಅಧಿಕಾರಿಗಳು, ರಾಜಕಾರಣಿಗಳು ಈ ಬಗ್ಗೆ ಇತರರಿಗಿಂತ ಹೆಚ್ಚು ಕಾಳಜಿ ಹೊಂದಿದವರಾಗಿರಬೇಕೆಂದು ನಿರೀಕ್ಷಿಸುವುದು ಸಹಜ. ಆದರೆ ಅವರಿಂದಲೂ ನಿರೀಕ್ಷಿತ ಕಾಳಜಿ ವ್ಯಕ್ತವಾಗುತ್ತಿಲ್ಲ. ದಿನ ಬೆಳಗಾದರೆ ಸಾಮಾಜಿಕ ನ್ಯಾಯದ ಜಾಗಟೆ ಬಾರಿಸುವ ಎಲ್ಲಾ ಪಕ್ಷಗಳ ಮುಖಂಡರು ದಲಿತರನ್ನು ಕೇವಲ ಮತಬ್ಯಾಂಕ್‌ಗಳನ್ನಾಗಿ ನಿರ್ವಹಿಸಿಕೊಂಡು ಬರುತ್ತಿರುವ ಬಾಸ್ತವವೇ ಇದಕ್ಕೆ ಕಾರಣವೂ ಇರಬಹುದು. ಪಕ್ಷ ರಾಜಕಾರಣದ ಅನಿವಾರ್ಯತೆಯೊ ಅಥವಾ ಪರಿಶಿಷ್ಟ ಸಮುದಾಯದ ಜನಪ್ರತಿನಿಧಿಗಳ ಧ್ವನಿ ಬಲಾರ್ಢ್ಯ ಕೋಮಿನ ನೇತಾರರ ಅಬ್ಬರದ ನಡುವೆ ನಲುಗಿ ಹೋಗಿವೆಯೋ? ಒಟ್ಟಾರೆಯಾಗಿ ದಲಿತರ ಅಮೂಲಾಗ್ರ ಅಭಿವೃದ್ಧಿಯ ಕಾಳಜಿ ಸರ್ಕಾರದಲ್ಲಾಗಲೀ, ಮಾಧ್ಯಮದಲ್ಲಾಗಲೀ ಕಾಣುತ್ತಿಲ್ಲ ಎನ್ನುವುದು ದೊಡ್ಡ ದುರಂತ.

ಕಳೆದ ಎರಡು ದಶಕಗಳ ನನ್ನ ಪತ್ರಿಕೋದ್ಯಮದ ಒಡನಾಟದಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ವಸ್ತುನಿಷ್ಠವಾಗಿ ಗ್ರಹಿಸಲು ಹಾಗೂ ಸಮಸ್ಯೆಯ ಮೂಲಗಳನ್ನು ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಮೂವರು ದಲಿತರನ್ನು ಅಮಾನುಷವಾಗಿ ಕೊಂದ ಘಟನೆಯ ತನಿಖೆಗೆ ಹೊರಟಾಗ ನಮ್ಮ ಪೊಲೀಸ್ ವ್ಯವಸ್ಥೆ ಜಾತಿಗಳ ನಡುವಿನ ಸಂಬಂಧಗಳು ವಿಷಮಯವಾಗಲು ಹೇಗೆ ಕಾರಣವಾಗುತ್ತದೆ ಎಂಬುದನ್ನು ಅರಿತಿದ್ದೇನೆ. ಕ್ರಮಕೈಗೊಳ್ಳಬೇಕಾದ ಒತ್ತಡಕ್ಕೆ ಮಣಿದು ಮೌನವಹಿಸುವುದು ನಂತರ, ಅತಿಯಾದ ದೌರ್ಜನಲ್ಯಕ್ಕೆ ಪೊಲೀಸರು ಮುಂದಾಗುವ ಮೂಲಕ ಎರಡು ಜಾತಿಗಳ ನಡುವಿನ ಸಂಬಂಧ ಶಾಶ್ವತ ವಿರಸಕ್ಕೆ ತಿರುಗಿ ವ್ಯಕ್ತಿಗತ ಲೋಪಗಳು ಸಾರ್ವತ್ರಿಕ ಸಾಮಾಜಿಕ ಬಹಿಷ್ಕಾರದಂತಹ ಕ್ರಮಗಳಿಗೆ ಎಡೆಮಾಡಿಕೊಟ್ಟಿದ್ದೂ ಅಳುಕೂ ಕೂಡ ದೀರ್ಘಾವಧಿಯಲ್ಲಿ ದಲಿತರ ಅಭ್ಯುದಯಕ್ಕೆ ಮಾರಕವೇ ಆಗುತ್ತದೆ. ಒಟ್ಟಾರೆಯಾಗಿ ಮಾಧ್ಯಮಗಳು ದಲಿತರಿಗೆ ಇನ್ನೂ ಅಸ್ಪೃಶ್ಯವಾಗಿಯೇ ಉಳಿದಿವೆ ಎನ್ನುವುದು ವಿಷಾದದ ಸಂಗತಿ.